ಇಸ್ ದೇಶ್ ಕೋ ಹಮೇಶಾ ಏಕ್ ಗಿಲಾಶಿಕ್ಷಾ ರಹೇಗಾ. ಹರ್ ಹಿಂದುಸ್ಥಾನಿ ಕೆ ದಿಲ್ ಮೇ ಏಕ್ ದರ್ದ್ ರಹೇಗಾ. ಕಾಶ್ ಸರ್ದಾರ್ ಸಾಬ್, ಹಮಾರೆ ಪೆಹ್ಲೆ ಪ್ರಧಾನ್ ಮಂತ್ರಿ ಹೋತೇ ತೋ ಆಜ್ ದೇಶ್ ಕಿ ತಕ್ದಿರ್ ಭೀ ಅಲಗ್ ಹೋತಿ, ದೇಶ್ ಕಿ ತಸ್ವೀರ್ ಭೀ ಅಲಗ್ ಹೋತಿ! ಅಂದರೆ ಈ ದೇಶಕ್ಕೆ ಶಾಶ್ವತವಾಗಿ ಒಂದು ವಿಷಾದವಿರಲಿದೆ. ಪ್ರತಿ ಭಾರತೀಯನಿಗೂ ಅವನ ಹೃದಯದಲ್ಲಿ ಒಂದು ನೋವು ಇರಲಿದೆ. ಒಂದು ವೇಳೆ, ಸರ್ದಾರ್ ಪಟೇಲ್‌ರು ಮೊದಲ ಪ್ರಧಾನಿಯಾಗಿರುತ್ತಿದ್ದರೆ ಈ ದೇಶದ ಚಹರೆಯೂ ಬದಲಾಗಿರುತಿತ್ತು, ಹಣೆಬರಹವೂ ಭಿನ್ನವಾಗಿರುತ್ತಿತ್ತು!
ಹಾಗಂತ ಕಳೆದ ಅಕ್ಟೋಬರ್ 29ರಂದು “ಕಾಂಗ್ರೆಸ್” ಪ್ರಧಾನಿ ಮನಮೋಹನ್ ಸಮ್ಮುಖದಲ್ಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಬಿಟ್ಟರು!
ಪ್ರಧಾನಿ ಸಿಡಿಮಿಡಿಗೊಂಡರು. “ಸರ್ದಾರ್ ಪಟೇಲ್ ಒಬ್ಬ ಜಾತ್ಯತೀತ ನಾಯಕ” ಎನ್ನುವ ಮೂಲಕ ಕೋಮುವಾದಿ ಬಿಜೆಪಿಗೆ ಸರ್ದಾರ್ ಪಟೇಲ್ ಹೆಸರೆತ್ತುವ ಅರ್ಹತೆ ಇಲ್ಲ ಎಂದು ಪರೋಕ್ಷವಾಗಿ ಚುಚ್ಚಿದರು. ಸರ್ದಾರ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಇಡೀ ದೇಶದ ನಾಯಕರೇ ಹೊರತು, ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದವರಲ್ಲ. ಇದೇನೇ ಇರಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕೋಮುವಾದಿ ಸೂತ್ರವನ್ನಿಟ್ಟುಕೊಂಡು ಚುಚ್ಚಲು ಸಾಧ್ಯವಾಯಿತೇ ಹೊರತು, ನರೇಂದ್ರ ಮೋದಿ ಹೇಳಿದ್ದನ್ನು ಅಲ್ಲಗಳೆಯಲು ಸಾಧ್ಯವಾಗಲಿಲ್ಲ.
ಹಾಗಾದರೆ ಸರ್ದಾರ್ ಪಟೇಲ್ ನಿಜಕ್ಕೂ ದೇಶದ ಮೊದಲ ಪ್ರಧಾನಿಯಾಗಬೇಕಿತ್ತೆ?
ಅವರು ಪ್ರಧಾನಿಯಾಗಿದ್ದರೆ ನಮ್ಮ ದೇಶದ ರೂಪ, ಭವಿಷ್ಯಗಳೆರಡೂ ಬದಲಾಗುತ್ತಿದ್ದವೆ? ಆ ಕಾಲದಲ್ಲಿ ದೇಶ ಕೂಡ ಸರ್ದಾರ್ ಪಟೇಲರ ನೇತೃತ್ವವನ್ನು ಬಯಸಿತ್ತೆ? ಅದನ್ನು ತಿಳಿದುಕೊಳ್ಳುವ ಮೊದಲು ಉಪಪ್ರಧಾನಿಯಾಗಿ ಸರ್ದಾರ್ ಪಟೇಲ್ ಮಾಡಿದ್ದೇನು, ಅವರ ಸಾಧನೆಯೇನು ಎಂಬುದನ್ನು ಕೇಳಿ. ಭಾರತವನ್ನು ಬಿಟ್ಟು ತೊಲಗುವಾಗಲೂ ಬ್ರಿಟಿಷರು ತಮ್ಮ ಕಿಡಿಗೇಡಿ ಬುದ್ಧಿಯನ್ನು ಬಿಡಲಿಲ್ಲ. ತಮ್ಮ ನಿಯಂತ್ರಣದಲ್ಲಿದ್ದ ಪ್ರದೇಶಗಳು ಮಾತ್ರವಲ್ಲ, ತಮ್ಮ ಅಧೀನದಲ್ಲಿದ್ದ, ಡಚ್ಚರು, ಪೋರ್ಚುಗೀಸರ ಕೈಯಲಿದ್ದ ರಾಜ್ಯಗಳೂ “ಇನ್ನು ಸ್ವತಂತ್ರ” ಎಂದು ಹೊರಟುಹೋದರು. ಅಂದರೆ ಅವಿಭಜಿತ ಭಾರತ 625 ಸಣ್ಣ, ದೊಡ್ಡ ರಾಜ್ಯಗಳಾಗಿ ಹೋಯಿತು. ಅವುಗಳಲ್ಲಿ 554 ಪ್ರಾಂತ್ಯಗಳು ಪಾಕ್‌ನಿಂದ ಪ್ರತ್ಯೇಕಗೊಂಡ ಭಾರತದಲ್ಲಿದ್ದವು! ಇವುಗಳನ್ನೆಲ್ಲ ಭಾರತದ ಒಕ್ಕೂಟದೊಳಗೆ ಸೇರ್ಪಡೆ ಮಾಡುವುದು, ಒಬ್ಬೊಬ್ಬ ರಾಜನನ್ನೇ ಮನವೊಲಿಸುವುದು ಸಾಮಾನ್ಯ ಕೆಲಸವೇ? ಒಂದು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು 17 ವರ್ಷ ದೇಶವಾಳಿದ ನೆಹರುಗೆ ಆಗಲಿಲ್ಲ. ಆನಂತರ 49 ವರ್ಷ ದೇಶವಾಳಿದ ಇನ್ನುಳಿದವರಿಗೂ ಆಗಿಲ್ಲ, ಹಾಗಿರುವಾಗ ಕೇವಲ ಮೂರು ವರ್ಷ ಉಪಪ್ರಧಾನಿಯಾಗಿದ್ದ ಒಬ್ಬ ವ್ಯಕ್ತಿ 554 ರಾಜ್ಯ, ರಾಜರುಗಳನ್ನು ಹೇಗೆ ಮನವೊಲಿಸಿರಬೇಕು, ಬೆದರಿಸಿ ಬಗ್ಗಿಸಿರಬೇಕು, ಇಲ್ಲವೆ ಬಗ್ಗುಬಡಿದು ದಾರಿಗೆ ತಂದಿರಬೇಕು ಯೋಚಿಸಿ?! ಅವತ್ತಿದ್ದ ಪರಿಸ್ಥಿತಿಯನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾ? ಒರಿಸ್ಸಾ ಒಂದೇ ರಾಜ್ಯದಲ್ಲಿ 26 ಸಣ್ಣ ರಾಜ್ಯಗಳಿದ್ದವು. ಈಗಿನ ಛತ್ತೀಸ್‌ಗಢದಲ್ಲಿ 15, ಸೌರಾಷ್ಟ್ರದಲ್ಲಿ 14 ಜನ ಆಳುತ್ತಿದ್ದರು. ಈ ಪುಡಿ ಪಾಳೇಗಾರರ ಮಾತು ಹಾಗಿರಲಿ, 500 ಪ್ರಿನ್ಸ್ಲಿ ಸ್ಟೇಟ್(ಅಧೀನ ಸಂಸ್ಥಾನ)ಗಳಿದ್ದವು. ಅವೆಲ್ಲವುಗಳಿಗಿಂತಲೂ ಮಹತ್ತರವಾದುದು ಹೈದರಾಬಾದ್ ನಿಜಾಮನನ್ನು ಬಗ್ಗುಬಡಿಯಲು ಪಟೇಲ್ ರೂಪಿಸಿದ “ಆಪರೇಷನ್ ಪೋಲೋ”!
ಆ ಸಂದರ್ಭದಲ್ಲಿ ಹೈದರಾಬಾದಿನ ನಿಜಾಮನಿಗಿಂತ ಮೊದಲು ಪ್ರಧಾನಿ ನೆಹರು ಅವರನ್ನು ಮಟ್ಟಹಾಕಬೇಕಾದ ದುರ್ಗತಿ ಈ ದೇಶ ಹಾಗೂ ಸರ್ದಾರ್ ಪಟೇಲ್‌ಗೆ ಎದುರಾಗಿತ್ತು ಎಂದರೆ ನಂಬುತ್ತೀರಾ!?
“ಬ್ರಿಟಿಷರು ಸದ್ಯದಲ್ಲೇ ಭಾರತವನ್ನು ತೊರೆಯುವುದರ ಅರ್ಥವೇನೆಂದರೆ ನಾನು ಸ್ವತಂತ್ರ ಸಾರ್ವಭೌಮ ರಾಜ್ಯವನ್ನು ಘೋಷಣೆ ಮಾಡಿಕೊಳ್ಳುವ ಹಕ್ಕುಹೊಂದಿದ್ದೇನೆಂದು”. ಹಾಗಂತ 1947, ಜೂನ್ 12ರಂದೇ, ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ಹೈದರಾಬಾದ್ ನಿಜಾಮ ಹೇಳಿಕೆ ನೀಡಿದ. ಆ ಮೂಲಕ ಹೈದರಾಬಾದಿನಲ್ಲಿ ಸ್ವಂತ ಸಾಮ್ರಾಜ್ಯ ಕಟ್ಟುವ, ಭಾರತದ ಒಕ್ಕೂಟಕ್ಕೆ ಸೇರದೇ ಇರುವ ಸಂಕೇತ ನೀಡಿದ. ಅಷ್ಟೇ ಅಲ್ಲ, ತನ್ನ ರಾಜ್ಯದ ಭವಿಷ್ಯದ ಬಳಕೆಗಾಗಿ ಗೋವಾದ ಬಂದರೊಂದನ್ನು ಪಡೆದುಕೊಳ್ಳಲು ಆಗ ಗೋವಾವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಪೋರ್ಚುಗೀಸರ ಜತೆ ಸಂಧಾನ ಆರಂಭಿಸಿದ! 1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ಮಾತ್ರ ಪ್ರತ್ಯೇಕವಾಗಿಯೇ ಇತ್ತು. ಎಷ್ಟೇ ಸಂಧಾನ ಮಾತುಕತೆ ನಡೆಸಿದರೂ ನಿಜಾಮ ಬಗ್ಗಲಿಲ್ಲ. ಒಂದೆಡೆ ಭಾರತ ಸರ್ಕಾರದ ಪ್ರತಿನಿಧಿಯಾಗಿ ಕೆ.ಎಂ. ಮುನ್ಷಿ ನಿಜಾಮನ ಪ್ರಧಾನಿಯಾಗಿದ್ದ ಲೈಕ್ ಅಲಿ ಜತೆ ಮಾತುಕತೆ ನಡೆಸುತ್ತಿದ್ದರಾದರೂ ಗೃಹ ಸಚಿವ ಸರ್ದಾರ್ ಪಟೇಲ್ ಹಾಗೂ ರಾಜ್ಯ ಕಾರ್ಯದರ್ಶಿ ವಿ.ಪಿ. ಮೆನನ್ ಮತ್ತೊಂದು ಮಾರ್ಗದಲ್ಲಿ ನಿಜಾಮನನ್ನು ಬಗ್ಗಿಸಲು ಪ್ರಯತ್ನಿಸುತ್ತಿದ್ದರು. ನಿಜಾಮನ ಮೊಂಡುತನದಿಂದ ಕುಪಿತಗೊಂಡ ಪಟೇಲ್, “ಭಾರತದ ಸಹನೆ ವೇಗವಾಗಿ ಕರಗುತ್ತಿದೆ” ಎಂಬ ಸಂದೇಶವನ್ನು ಮೆನನ್ ಮೂಲಕ ಮುಟ್ಟಿಸಿದರು. ಈ ವಿಷಯ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾಗೆ ಮಸ್ಕಾ ಹಾಕುತ್ತಿದ್ದ ಹಾಗೂ ಹೈದರಾಬಾದ್ ನಿಜಾಮನ ವಿಷಯದಲ್ಲೂ ಅದೇ ಧೋರಣೆ ತಳೆಯಬೇಕಿಂದಿದ್ದ ಪ್ರಧಾನಿ ನೆಹರು ಕಿವಿಗೆ ಬಿದ್ದು ಕೆಂಡಾಮಂಡಲವಾದರು. ಪಟೇಲ್ ಹಾಗೂ ಮೆನನ್ ಅವರನ್ನೇ ಬದಲಾಯಿಸುವ ಮಟ್ಟಕ್ಕೆ ಹೋದರು. ಆದರೆ ಪಟೇಲ್ ಮಾತ್ರ ಹೈದರಾಬಾದನ್ನು ವಶಪಡಿಸಿಕೊಳ್ಳುವ “ಆಪರೇಷನ್ ಪೋಲೋ”ಗೆ ಸಕಲ ಸಿದ್ಧತೆ ಮಾಡಿಕೊಂಡರು. ಕಾರ್ಯಾಚರಣೆಗೆ ಒಂದು ದಿನ ಮೊದಲು ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್‌ನ ಭದ್ರತಾ ಸಮಿತಿ, ಮೂರು ಸೇನಾ ಪಡೆಗಳ ಮುಖ್ಯಸ್ಥರು ಹಾಗೂ ಗೃಹ ಸಚಿವ ಪಟೇಲ್, ರಾಜ್ಯ ಕಾರ್ಯದರ್ಶಿ ಮೆನನ್ ಹಾಗೂ ಮೌಲಾನಾ ಆಝಾದ್ ಒಳಗೊಂಡ ಸಭೆ ನಡೆಯಿತು. ಅದು ಸಭೆಯಾಗಲಿಲ್ಲ, ಬದಲಿಗೆ ಸರ್ದಾರ್ ಪಟೇಲ್ ಮೇಲಿನ ತಮ್ಮ ದ್ವೇಷ, ಮತ್ಸರ, ಹತಾಶೆ ಕಾರುವ ವೇದಿಕೆಯನ್ನಾಗಿ ಪರಿವರ್ತಿಸಿದರು ನೆಹರು. ಹೀಗೆ ಅವರು ಎಲ್ಲವನ್ನೂ ಕಕ್ಕಿದ ನಂತರ ಪಟೇಲ್ ಮರು ಮಾತನಾಡದೇ ಎದ್ದುಹೋದರು. ನೆಹರು ತೊಡೆ ನಡುಗಿತು. ಬಾಯಿ ಮುಚ್ಚಿಕೊಂಡರು.
1948, ಸೆಪ್ಟೆಂಬರ್ 13ರಂದು ಆಪರೇಷನ್ ಪೋಲೋ ಆರಂಭವಾಯಿತು.
ದಕ್ಷಿಣದ ದಖನ್ ಪ್ರಸ್ಥಭೂಮಿಯಲ್ಲಿ ಗೋವು, ಗೋಟ್‌ಗಳ ಪುಷ್ಕಳ ಭೋಜನ ಮಾಡಿಕೊಂಡಿದ್ದ ಹೈದರಾಬಾದ್‌ನ ನವಾಬ್ ಮೀರ್ ಉಸ್ಮಾನ್ ಅಲಿಖಾನ್ ಹಾಗೂ ಆತನ ಬೆಂಗಾವಲಿಗೆ ನಿಂತಿದ್ದ ಕಾಸಿಂ ರಿಝ್ವಿ ನೇತೃತ್ವದ ರಝಾಕರ್‌ಗಳು ಕಾಲುಕೆರೆದುಕೊಂಡು ಸಂಘರ್ಷಕ್ಕೆ ಬಂದರು. ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಮುಸ್ಲಿಂ ಅಧಿಪತ್ಯಕ್ಕೊಳಗಾಗಿದ್ದ ರಾಜ್ಯ ಹೈದರಾಬಾದಾಗಿತ್ತು. ಅರಬ್, ರೋಹಿಲ್ಲಾ, ಉತ್ತರ ಪ್ರದೇಶದ ಮುಸ್ಲಿಮರು ಹಾಗೂ ಪಠಾಣರನ್ನು ಸೇರಿಸಿಕೊಂಡು 22 ಸಾವಿರ ಸಂಖ್ಯೆಯ ಬಂದೂಕುಧಾರಿ ಸೇನೆ ಯುದ್ಧಕ್ಕೆ ನಿಂತಿತ್ತು. ಇನ್ನು ಸುಮಾರು ಒಂದೂವರೆ ಲಕ್ಷ ಮುಸಲ್ಮಾನರು ಕತ್ತಿ, ಖಡ್ಗ ಹಿಡಿದುಕೊಂಡು ಸಿದ್ಧರಾಗಿದ್ದರು. ಆಗ ಮೇಜರ್ ಜನರಲ್ ಚೌಧರಿಯವರ ನೇತೃತ್ವದಲ್ಲಿ ಸೇನಾ ತುಕಡಿಯನ್ನು ಕಳುಹಿಸಿದ ಪಟೇಲರು, ನಿಜಾಮ ಹಾಗೂ ಅವನ ಬೆಂಬಲಿಗರನ್ನು ಮಟ್ಟಹಾಕಿ, ಹೈದರಾಬಾದನ್ನು ಭಾರತದೊಂದಿಗೆ ವಿಲೀನ ಮಾಡಿದರು. ಅದೂ ಕೇವಲ ನಾಲ್ಕೇ ದಿನಗಳಲ್ಲಿ! ಪಟೇಲ್ ಸಾಧನೆ ಇಷ್ಟು ಮಾತ್ರವಲ್ಲ, 1947ರ ಸೆಪ್ಟೆಂಬರ್ 25ರಂದು ಕಾಶ್ಮೀರದ ರಾಜ ಹರಿಸಿಂಗ್ ಬಳಿಗೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಜತೆ ವಿ.ಪಿ. ಮೆನನ್‌ರನ್ನು ಕಳುಹಿಸಿ ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿದ ಪತ್ರವನ್ನು ತರಿಸಿಕೊಂಡು ಕಾಶ್ಮೀರ ಪಾಕಿಸ್ತಾನದ ಪಾಲಾಗದಂತೆ ತಡೆದವರೂ ಪಟೇಲರೇ. ಇಂತಹ ಸಾಧನೆ, ಪ್ರಯತ್ನ, ಎದೆಗಾರಿಕೆಯನ್ನು ಕಂಡ ಡಾ. ರಾಜೇಂದ್ರ ಪ್ರಸಾದ್ ಪಟೇಲರನ್ನು ಶ್ಲಾಘಿಸುತ್ತಾ – “ಇಂಥದ್ದೊಂದು ಉದಾಹರಣೆ ನಮ್ಮ ದೇಶದ ಇತಿಹಾಸದಲ್ಲೇ ಇಲ್ಲ, ಅಷ್ಟೇಕೆ ಮಗದೊಂದು ದೇಶದಲ್ಲೂ ಇಂತಹ ಉದಾಹರಣೆಯನ್ನು ಕಾಣಲು ಸಾಧ್ಯವಿಲ್ಲ” ಎಂದಿದ್ದರು! ಸಾಯುವ ಮೊದಲೂ ಅಂದರೆ 1950, ನವೆಂಬರ್ 7ರಂದು ಪ್ರಧಾನಿ ನೆಹರುಗೆ ಪತ್ರ ಬರೆದು ಚೀನಾದ ಅಪಾಯದ ಬಗ್ಗೆ ಎಚ್ಚರಿಸಿದ್ದರು. ಭಾರತ ಎಂತಹ ಪರಿಸ್ಥಿತಿಗೂ ಸಿದ್ಧವಾಗಿರಬೇಕು ಎಂದು ಸಲಹೆ ನೀಡಿದ್ದರು.
ಇಂತಹ ವ್ಯಕ್ತಿಯೇ ದೇಶದ ಮೊದಲ ಪ್ರಧಾನಿ ಆಗಬೇಕೆಂದು ಆಗಿನ ಕಾಂಗ್ರೆಸ್ ಕೂಡ ಸರ್ವಾನುಮತದಿಂದ ಒಪ್ಪಿದ್ದನ್ನು ಈಗ ತಳ್ಳಿಹಾಕಲು ಸಾಧ್ಯವೇ?
ಅದು 1946. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಾಡಾಗಿತ್ತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವುದೂ ಖಾತ್ರಿಯಾಗಿತ್ತು. ಹಾಗಾಗಿ ಯಾರು ಆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಅವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುತ್ತಾರೆ ಎಂದಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 16ರಲ್ಲಿ 13 ರಾಜ್ಯಗಳು ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ಸೂಚಿಸಿದವು. ಇನ್ನೇನು ಪಟೇಲ್ ಅಧ್ಯಕ್ಷರಾಗುತ್ತಾರೆ, ಮೊದಲ ಪ್ರಧಾನಿಯೂ ಅವರೇ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ ಪಟೇಲರನ್ನು ಕರೆಸಿಕೊಂಡ “ಮಹಾತ್ಮ” ಗಾಂಧೀಜಿ, “ಚುನಾವಣೆಗೆ ನಿಲ್ಲಬೇಡ, ಬದಲಿಗೆ ಜವಾಹರಲಾಲ ನೆಹರು ಉಮೇದುವಾರಿಕೆಗೆ ಬೆಂಬಲ ನೀಡು” ಎಂದು ಮನವಿ ಮಾಡಿಕೊಂಡರು. ಅಂದು ಗಾಂಧೀಜಿಯವರ ಸಣ್ಣತನಕ್ಕೆ ಪ್ರತಿಯಾಗಿ ಪಟೇಲ್ ಅದೇ ತೆರನಾದ ಸಣ್ಣತನ ತೋರಲಿಲ್ಲ, ಮರುಮಾತನಾಡದೇ, ಮರುಯೋಚನೆ ಮಾಡದೆ ನಿಜವಾದ ಮಹಾತ್ಮನಂತೆ ಗಾಂಧೀಜಿ ಮನವಿಗೆ ಓಗೊಟ್ಟರು. ಹಾಗಂತ ಸರ್ದಾರ್ ಪಟೇಲ್ ನೆಹರು ಅವರಂತೆ ಸ್ವಾರ್ಥಿ, ಅಧಿಕಾರ ಲಾಲಸಿಯಾಗಿರಲಿಲ್ಲ, ಗಾಂಧೀಜಿಯವರಂತೆ ನಾನು, ನಾನು ಹೇಳಿದ್ದೇ ನಡೆಯಬೇಕು ಎಂಬ ಹಠವಾದಿಯೂ ಆಗಿರಲಿಲ್ಲ. ಅವರಿಗೆ ಮುಖ್ಯವಾಗಿದ್ದಿದ್ದು ದೇಶದ ಹಿತ ಮಾತ್ರ. ಅದಕ್ಕೆ ಯಾರೇ ವಿರುದ್ಧವಾಗಿದ್ದರೂ ಸಹಿಸುತ್ತಿರಲಿಲ್ಲ. 1942ರಲ್ಲಿ ಕ್ವಿಟ್ ಇಂಡಿಯಾ ಅಥವಾ ಚಲೇ ಜಾವ್ ಅಥವಾ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದಾಗ ಬ್ರಿಟಿಷರು ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರನ್ನೂ ಬಂಧಿಸಿ ಜೈಲಿಗೆ ತಳ್ಳಿದರು. ಅವರು ಮತ್ತೆ ಬಿಡುಗಡೆಯಾಗಿದ್ದು 3 ವರ್ಷಗಳ ನಂತರ. ಹಾಗೆ ಹೊರಬರುವ ಮುನ್ನ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿ ಮುಸ್ಲಿಂ ಲೀಗ್‌ನ ನಾಯಕರು ಭಾರತ ಸ್ವತಂತ್ರಗೊಳ್ಳುವುದಕ್ಕೇ ಅಡ್ಡಿಯಾದರು. ಆಗ ಮುಸಲ್ಮಾನರ ವಿರುದ್ಧ, We shall fight all those who came in the way of India’s freedom, ಭಾರತ ಸ್ವತಂತ್ರಗೊಳ್ಳುವುದಕ್ಕೆ ಯಾರೇ ಅಡ್ಡಿಯಾದರೂ ಅವರನ್ನು ಮೆಟ್ಟಿ ಗುರಿ ಮುಟ್ಟುತ್ತೇವೆ ಎಂದು ಗುಡುಗಿದ ಏಕಮಾತ್ರ ಕಾಂಗ್ರೆಸಿಗ ಪಟೇಲ್!
ಇಂತಹ ಸರ್ದಾರ್ ಪಟೇಲ್, ಮೊದಲ ಪ್ರಧಾನಿಯಾಗಿದ್ದರೆ ನಮ್ಮ ದೇಶದ ಭವಿಷ್ಯವೇ ಬದಲಾಗುತ್ತಿತ್ತು ಎಂದು ಹೇಳಿದರೆ ಅತಿಶಯೋಕ್ತಿಯೆನಿಸುತ್ತದೆಯೇ ಹೇಳಿ? ನಾಡಿದ್ದು ಭಾನುವಾರ ಸರ್ದಾರ್ ಪಟೇಲ್ ಸ್ವರ್ಗಸ್ಥರಾಗಿ 63 ವರ್ಷಗಳಾಗುತ್ತವೆ. ವಿಶ್ವದಲ್ಲೆಯೇ ಅತಿ ಎತ್ತರದ ಪಟೇಲ್ ಪ್ರತಿಮೆ ನಿರ್ಧಾರಕ್ಕೆ ನರೇಂದ್ರ ಮೋದಿ ಮುಂದಾಗಿದ್ದು, ಅದಕ್ಕಾಗಿ ಭಾನುವಾರ “ಏಕತೆಗಾಗಿ ಓಟ” ಎಂಬ ಮ್ಯಾರಾಥಾನ್ ನಡೆಯಲಿದೆ. ಇದೊಂದು ಆಂದೋಲನವಾಗಿದ್ದು 2014, ಜನವರಿ 26ರಂದು ಪೂರ್ಣಗೊಳ್ಳಲಿದೆ. ಒಟ್ಟು 700 ಕಡೆ ನಡೆಯುವ ಈ ಮ್ಯಾರಾಥಾನ್‌ನಲ್ಲಿ ಪಾಲ್ಗೊಳ್ಳುವುದು ನಾವು ಅವರಿಗೆ ತೋರುವ ಗೌರವವೆಂದರೆ ತಪ್ಪಾಗದು. ಭಾನುವಾರ ಗುಜರಾತ್‌ನ ವಡೋದರಾದಲ್ಲಿ ಉದ್ಘಾಟನೆಯಾಗುವ ಈ ಮ್ಯಾರಾಥಾನ್‌ಗೆ ಈವರೆಗೂ 1.85 ಲಕ್ಷ ಜನರ ಹೆಸರು ನೊಂದಾಯಿಸಿಕೊಂಡಿದ್ದಾರೆಂದರೆ ಈ ದೇಶವಾಸಿಗಳ ಹೃದಯದಲ್ಲಿ ಸರ್ದಾರ್ ಪಟೇಲ್‌ಗೆ ಎಂಥ ಸ್ಥಾನವಿದೆ ಎಂಬುದನ್ನು ಸೂಚಿಸುವುದಿಲ್ಲವೆ?!