Tuesday 21 July 2015

ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

'ಅಧ್ಯಾತ್ಮ ಚರ್ಚೆ’ ಅಂತೇನಾದರೂ ಅಂದರೆ ಅನೇಕರು ಆಗಿಂದಾಗ್ಯೆ ಕಿವಿ ಕಣ್ಣುಗಳನ್ನು ಮುಚ್ಚಿಕೊಂಡು ಜಾಗ ಖಾಲಿ ಮಾಡಿಬಿಡುತ್ತಾರೆ. ಆದರೆ ಚರ್ಚೆ ಮಾಡಲಿ, ಬಿಡಲಿ.. ಆತ್ಮದಿಂದಲೇ ಜಗತ್ತು ವ್ಯಾಪ್ತಗೊಂಡಿರುವುದನ್ನು ಮರೆತೇಬಿಡುತ್ತಾರೆ. ಒಂದೇ ಒಂದು ನಿಮಿಷ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಾನು ಹೇಳುವ ವಿಚಾರಗಳ ಕುರಿತಂತೆ ಆಲೋಚಿಸಿ. ನೀವು ಖಂಡಿತ ಅಚ್ಚರಿಗೊಳಗಾಗುವಿರಿ.
ನಮ್ಮ ಸುತ್ತಲೂ ನಡೆಯುವ ಅನೇಕ ಸಂಗತಿಗಳನ್ನು ವಿಜ್ಞಾನ ಆಕಸ್ಮಿಕವೆಂದು ಕರೆದು ಬದಿಗಿಟ್ಟುಬಿಟ್ಟಿದೆ. ಉದಾಹರಣೆಗೆ, ಭೂಮಿಯೇ ಮೊದಲಾದ ಗ್ರಹಗಳು ಸೂರ್ಯನ ಸುತ್ತ ಸುತ್ತುವುದಲ್ಲ ಹಾಗೆ ಎಲ್ಲ ಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡು ತನ್ನ ಸುತ್ತ ಸುತ್ತಿಸಿಕೊಳ್ತಿರುವ ವಿಶ್ವ ಪ್ರಜ್ಞೆಯನ್ನು ಸೂರ್ಯನಿಗೆ ಅದಾರು ಕೊಟ್ಟರು? ‘ಆಕಸ್ಮಿಕ’. ಬೀಜವೊಂದು ಮೊಳಕೆಯೊಡೆದು ಸಸಿಯಾಗುವ ಹಂತವೆಲ್ಲ ನಮಗೆ ಗೊತ್ತು. ಆದರೆ ಆ ಬೀಜಕ್ಕೆ ಮೊಳಕೆಯೊಡೆಯಬೇಕೆಂಬ ಪ್ರಜ್ಞೆ ಎಲ್ಲಿಂದ ಬಂತು? ಆಕಸ್ಮಿಕ. ಒಂದೆರಡು ವರ್ಷದ ಮಗುವನ್ನು ನೀರಿಗೆ ತಳ್ಳಿದರೆ ಉಸಿರು ಬಿಗಿ ಹಿಡಿಯಬೇಕೆಂಬ ಸಹಜ ಸಿದ್ಧಾಂತ ಅದರೊಳಗೆ ಕೂಡಲೇ ಜಾಗೃತವಾಗುತ್ತದೆ. ಹೇಳಿಕೊಟ್ಟಿದ್ದು ಯಾರು? ‘ಆಕಸ್ಮಿಕ. ಹುಟ್ಟಿದಾಕ್ಷಣ ಮಗು ತಾಯಿಯ ಮೊಲೆಯನ್ನು ಚೀಪಿ ಹಾಲು ಕುಡಿಯುತ್ತದಲ್ಲ, ತರಬೇತಿ ಕೊಟ್ಟ ಗುರು ಯಾರು? ‘ಆಕಸ್ಮಿಕ’!
ನಾನಂತೂ ಇಂತಹ ನೂರಾರು ವಿಸಮ್ಯಗಳನ್ನು ದಾಖಲಿಸಬಲ್ಲೆ. ಇಷ್ಟೊಂದು ಸಂಗತಿಗಳು ಆಕಸ್ಮಿಕವಾದರೂ ಹೇಗೆ? ನಾನು ಉಲ್ಲೇಖಿಸಿರುವ ಘಟನೆಗಳಲ್ಲೆಲ್ಲಾ ಸೂಕ್ಷ್ಮವಾದ ವಸ್ತುವೊಂದು ತನ್ನಿಚ್ಛೆಗೆ ತಕ್ಕಂತೆ ಎಲ್ಲವನ್ನೂ ನಿಯಂತ್ರಿಸುತ್ತದೆ ಅಂತ ನಿಮಗೆ ಅನಿಸುತ್ತಿಲ್ಲವೆ?
ಹೋಗಲಿ. ಯಾರಾದರೂ ತೀರಿಕೊಂಡಾಗ ನಾವೇನೆನ್ನುತ್ತೇವೆ ಹೇಳಿ. ಜೀವ ಹೋಯ್ತು ಅಂತ ತಾನೆ? ಅದು ಆಡು ಭಾಷೆಯಾಯ್ತು. ವೈದ್ಯಕೀಯ ಭಾಷೆಯಲ್ಲಿ ಜೀವ ಹೋಗೋದು ಅಂದರೆ ಉಸಿರು ನಿಲ್ಲೋದು, ಹೃದಯ ಸ್ತಬ್ಧವಾಗೋದು ಮತ್ತು ಮೆದುಳು ನಿಷ್ಕ್ರಿಯವಾಗೋದು ಅಂತ! ಇವನ್ನೇ ಆಧಾರವಾಗಿಟ್ಟುಕೊಂಡು `ಮರವೊಂದು ಸತ್ತಿದೆ’ ಎನ್ನುವುದನ್ನು ಹೇಗೆ ಹೇಳಬಹುದು? ಯೋಚಿಸಿ ನೋಡೋಣ. ಅಲ್ಲಿ ಹೃದಯವಿಲ್ಲ, ಮೆದುಳಿಲ್ಲ. ನಾವೆಂದುಕೊಂಡಂತಹ ಉಸಿರಾಟವೂ ನಡೆದಿಲ್ಲ. ಮತ್ತೆ ಸತ್ತಾಗ ಆದದ್ದಾದರೂ ಏನು? 12
ಮನುಷ್ಯರ ವಿಚಾರದಲ್ಲಿಯೂ ಹಾಗೆಯೇ. ಆತ ಸತ್ತು ಆರು ಗಂಟೆಗಳ ವರೆಗೆ ಕಣ್ಣು ದಾನಕ್ಕೆ ಯೋಗ್ಯವಾಗಿರುತ್ತದೆ; ಜಠರ ಕೆಲಸ ಮಾಡುತ್ತಿರುತ್ತದೆ. ಅದರರ್ಥ ಜೀವ ಹೋಯಿತೆಂದು ನಾವು ಉದ್ದೇಶಿಸಿದ ನಂತರವೂ ದೇಹದ ಅನೇಕ ಅಂಗಗಳು ಜೀವಂತವಾಗಿರುತ್ತದೆ. ಹಾಗಿದ್ದರೆ ನಿಜವಾಗಿಯೂ ಹೋದದ್ದೇನು? ಅದನ್ನೇ `ಆತ್ಮ’ ಎಂದರು ನಮ್ಮವರು. ಕೆಲವರು ಪ್ರಾಣಶಕ್ತಿ ಅಂತ ಕರೆದಿದ್ದೂ ಅದನ್ನೇ! ಇದೇ ಆತ್ಮ ಶಕ್ತಿ ಎಲ್ಲರೊಳಗಿದ್ದುಕೊಂಡು ವಿಶ್ವದ ನಿಯತಿಗೆ ಕಾರಣವಾಗಿದೆಯಲ್ಲ, ಇದನ್ನು ಅರಿಯುವ ಪ್ರಯತ್ನವನ್ನೆ ಅಧ್ಯಾತ್ಮ ಎಂದು ಕರೆದದ್ದು. ಇದೇ ಆತ್ಮಶಕ್ತಿ ನಮ್ಮೊಳಗಿದ್ದುಕೊಂಡು ಹೃದಯ ಬಡಿಯಲು ಪ್ರೇರಣೆ ಕೊಟ್ಟರೆ, ಇದೇ ಆತ್ಮಶಕ್ತಿಸೂರ್ಯನ ಸುತ್ತ ಇಷ್ಟೇ ವೇಗದಲ್ಲಿ ಸುತ್ತಬೇಕೆಂದು ಭೂಮಿಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ತತ್ತ್ವಶಾಸ್ತ್ರ ತನ್ನ ತಾನರಿತರೆ ಜಗವನ್ನೇ ಅರಿತಂತೆ ಎಂದು ಹೇಳಿರುವುದು.
ಛಾಂದೋಗ್ಯ ಉಪನಿಷತ್ತಿನಲ್ಲಿ ಶ್ವೇತಕೇತು ಮತ್ತು ಅವನ ತಂದೆ ಉದ್ಧಾಲಕನ ನಡುವಿನ ಸಂವಾದದ ಸಾರವೇ ಇದು. ‘ಯಾವುದನ್ನು ಅರಿತ ಮೇಲೆ ಜಗತ್ತಿನಲ್ಲಿ ಮತ್ತೇನನ್ನೂ ತಿಳಿಯುವ ಅಗತ್ಯವಿಲ್ಲವೋ ಅದಾವುದು?’ ಎಂಬ ಪ್ರಶ್ನೆಗೆ ತಂದೆಯ ಉತ್ತರ `ತತ್ತ್ವಮಸಿ’ ಅಂತ. ಅದರರ್ಥ ‘ಅದು ನೀನೇ ಆಗಿರುವೆ’. ‘ನಿನ್ನ ನೀನು ಅರಿತರೆ ಜಗತ್ತಿನ ಎಲ್ಲವೂ ನಿನ್ನ ಪದತಲದಲ್ಲಿ’ ಎಂದಿದ್ದ ಉದ್ಧಾಲಕ. ಮತ್ತು ಇದನ್ನು ಅರಿಯಲು ಇರುವ ಏಕೈಕ ಮಾರ್ಗ ಕಣ್ಣು ಮುಚ್ಚುವುದು ಮಾತ್ರ. ವಿಜ್ಞಾನದ ಮಿತಿ ಇರೋದು ಇಲ್ಲೇ. ಅದು ತನ್ನಿಂದ ಹೊರಗಿರುವ ಎಲ್ಲವನ್ನೂ ಅಧ್ಯಯನ ಮಾಡಬಲ್ಲದು. ಚಂದ್ರನ ಮೇಲಿನ ಕಲ್ಲುಗಳು, ಭೂಮಿಯ ಕೆಳಪದರದಲ್ಲಿರುವ ಹಳೆಯ ಕಟ್ಟಡಗಳು, ಪಶು – ಪ್ರಾಣಿ – ಕ್ರಿಮಿ ಕೀಟ ಎಲ್ಲವನ್ನೂ ವಿಜ್ಞಾನಿ ಅಧ್ಯಯನ ಮಾಡಬಲ್ಲ. ಅವನಿಗೆ ತನ್ನ ಹೃದಯದ ಬಗ್ಗೆ ತಿಳಿಯಬೇಕೆಂದರೂ ಸತ್ತ ವ್ಯಕ್ತಿಯ ದೇಹವನ್ನು ಕತ್ತರಿಸಿಯೇ ನೋಡಬೇಕು.
ಒಟ್ಟಿನಲ್ಲಿ, ತನ್ನಿಂದ ಹೊರಗಿರುವ ಎಲ್ಲವನ್ನೂ ಪ್ರಯೋಗಕ್ಕೆ ಒಳಪಡಿಸುವುದನ್ನು ಭೌತಿಕ ವಿಜ್ಞಾನ ಎನ್ನಬಹುದಾದರೆ, ತನ್ನ ತಾನು ಅರಿತುಕೊಳ್ಳುವುದನ್ನು ಆಧ್ಯಾತ್ಮಿಕ ಅಥವಾ ಆತ್ಮವಿಜ್ಞಾನ ಎನ್ನಬಹುದು ಅಷ್ಟೆ. ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು ಸಂಪೂರ್ಣ ತೊಡಗಿಸಿಕೊಂಡು ಮುಳುಗಿಬಿಟ್ಟರೆ ಮತ್ತೊಂದು ಹಿಂಬಾಲಿಸಿಯೇ ಹಿಂಬಾಲಿಸುತ್ತದೆ, ಅನುಮಾನವಿಲ್ಲ. ನಮ್ಮ ಋಷಿಗಳು ಆತ್ಮವಿಜ್ಞಾನದಲ್ಲಿ ಆಳಕ್ಕಿಳಿದರು, ಭೌತಿಕ ವಿಜ್ಞಾನ ಅವರನ್ನು ಬಾಯ ಮೇಲೆ ಬೆರಳಿಟ್ಟುಕೊಂಡು ಅನುಸರಿಸಿತು. ಹೀಗಾಗಿಯೇ ಇಂದಿನ ವಿಜ್ಞಾನಿಯೂ ಗಾಬರಿಗೊಳಗಾಗುವಂತಹ ಖಗೋಳ, ಭೂಗೋಳ, ಗಣಿತ, ರಸಾಯನ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಸಾಧ್ಯವಾಗಿದ್ದು. ಅದೇ ಸಮಯಕ್ಕೆ ಐನ್‍ಸ್ಟೀನ್, ಹೀಸನ್‍ಬರ್ಗ್‍ರಂತಹ ವಿಜ್ಞಾನಿಗಳು ಭೌತವಿಜ್ಞಾನದಲ್ಲಿ ಸಾಧನೆ ಮಾಡ ಮಾಡುತ್ತಲೇ ಆತ್ಮತತ್ತ್ವದ ಅರಿವು ಬೆಳೆಸಿಕೊಂಡುಬಿಟ್ಟರು. ಸ್ಟೀಫನ್ ಹಾಕಿಂಗ್ ಮಾತನ್ನು ಕೇಳುವಾಗ ಆತ ಆತ್ಮವೆಂಬ ಪದವೊಂದನ್ನು ಬಳಸುವುದಿಲ್ಲ ಬಿಟ್ಟರೆ, ಉಳಿದವೆಲ್ಲ ಋಷಿವಾಕ್ಯಗಳ ಪುನರ್‍ಸ್ಮರಣೆಯೇ!
ಆತ್ಮ ಜೀವದೊಂದಿಗೆ ಬೆಸೆದುಕೊಂಡಿರುವವರೆಗೂ ಈ ದೇಹ ಜೀವಂತ. ಆತ್ಮ ದೇಹವನ್ನು ಬಿಡಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ ದೇಹದ ಕತೆ ಮುಗಿದಂತೆಯೇ. ಅದಕ್ಕೇ ಅವತ್ತು ಸಿದ್ಧಾರ್ಥನು ವೃದ್ಧಾಪ್ಯಕ್ಕೆ ಒಳಗಾದವರನ್ನೂ, ಅನಾರೋಗ್ಯಕ್ಕೆ ಒಳಗಾದವರನ್ನೂ, ಮೃತರನ್ನೂ ಕಂಡು ಶಾಶ್ವತ ವಸ್ತುವನ್ನು ಅರಸಿ ಹೊರಟಿದ್ದು. ಆತ್ಮಬೋಧೆಯಾದ ಮೇಲೆ ಬುದ್ಧನಾಗಿ ಮರಳಿದ್ದು. ದೇಹ ಸಾಯುವುದಕ್ಕೆ ಅಣಿಯಾಯಿತೆಂದರೆ ಆಗುವ ಪ್ರಕ್ರಿಎಯ ಗಮನಿಸಿ. ಅದುವರೆಗೂ ರುಚಿಸುತ್ತಿದ್ದುದು ಈಗ ಇಷ್ಟವಾಗುವುದಿಲ್ಲ. ಅದುವರೆಗೂ ಯಾವ ವಿಚಾರಗಳು ಪ್ರಚೋದಿಸುತ್ತಿದ್ದವೋ ಈಗ ಅವು ನಮ್ಮ ಗಮನಕ್ಕೂ ಬರುವುದಿಲ್ಲ. ಕೊನೆಗೆ ಔಷಧಗಳೂ ದೇಹದ ನರಗಳನ್ನು ಉದ್ದೀಪಿಸುವಲ್ಲಿ ಸೋಲುತ್ತವೆ. ಅಲ್ಲಿಗೆ ಆತ್ಮವೆಂಬುದು ಹೊರಡುವ ಸಿದ್ಧತೆ ಮಾಡಿಕೊಂಡಿದೆ ಎಂಬುದು ಖಾತ್ರಿ. ಈ ಆಥ್ಮ ಸುಮ್ಮನೆ ಹೋಗಿಬಿಡುವುದಿಲ್ಲ. ಈ ದೇಹವನ್ನು ಬಿಟ್ಟು ಮತ್ತೊಂದು ಹೊಸ ದೇಹದ ಅನ್ವೇಷಣೆ ಶುರು ಮಾಡುತ್ತದೆ ಅಷ್ಟೇ.
ಐತರೇಯ ಉಪನಿಷತ್ತು ಇದನ್ನು ಬಹಳ ಸುಂದರವಾಗಿ ವರ್ಣಿಸುತ್ತದೆ. ಆತ್ಮಧಾರಣೆ ಮಾಡಿದ ಪುರುಷನ ರೇತಸ್ಸು ಅಂಡಾಣುವನ್ನು ಹೊಕ್ಕುವುದು ಮೊದಲನೆ ಜನ್ಮವಂತೆ. ಈ ಆತ್ಮರೂಪವನ್ನು ತನ್ನ ಗರ್ಭದೊಳಗೆ ಪಾಳಿಸಿದ ಸ್ತ್ರೀ ಒಂಭತ್ತು ತಿಂಗಳ ನಂತರ ಭುವಿಗೆ ತರುವಳಲ್ಲ, ಅದು ಎರಡನೇ ಜನ್ಮ. ಇನ್ನು ಜರಾಜೀರ್ಣವಾಗಿ ದೇಹ ಬಿಟ್ಟೊಡನೆ ಆತ್ಮ ಪಡೆಯುವ ಹೊಸ ದೇಹ ಮೂರನೆ ಜನ್ಮವಂತೆ! ಈ ಮೂರನೆಯ ಜನ್ಮವನ್ನು ನಾವು ಪುನರ್ಜನ್ಮ ಅಂತ ಕರೆಯುತ್ತೇವೆ. ಹೊಸ ದೇಹಕ್ಕೆ ಹೋಲಿಸಿಕೊಂಡಾಗ ಈ ಹಳೆಯ ಜನ್ಮಗಳು ಪೂರ್ವಜನ್ಮ ಎನ್ನಿಸಿಕೊಳ್ಳುತ್ತವೆ.
ಪಶ್ಚಿಮದ ಮತಗಳಿಗೂ ಹಿಂದೂ ಧರ್ಮಕ್ಕೂ ವ್ಯತ್ಯಾಸ ಇಲ್ಲಿಯೇ. ಅವರ ಪ್ರಕಾರ ಹುಟ್ಟುವುದೂ ಒಮ್ಮೆ, ಸಾಯುವುದೂ ಒಮ್ಮೆಯೇ. ಸತ್ತಮೇಲೆ ಭಗವಂತ ಎಲ್ಲರನ್ನೂ ಅದೊಂದು ದಿನ ಎಬ್ಬಿಸಿ ಅವರವರ ಬದುಕಿಗೆ ತಕ್ಕಂತೆ ಸ್ವರ್ಗ ನರಕಗಳನ್ನು ದಯಪಾಲಿಸುತ್ತಾನೆ. ಪ್ರವಾದಿ ಮೆಚ್ಚುವಂತಹ ಕೆಲಸ ಮಾಡಿದವರು ಸ್ವರ್ಗಕ್ಕೆ, ಉಳಿದವರು ನರಕಕ್ಕೆ. ಮತ್ತು ಈ ಸ್ವರ್ಗ – ನರಕಗಳು ಶಾಶ್ವತವಾದವುಗಳು. ಅಲ್ಲಿ ತಿದ್ದಿಕೊಳ್ಳಲು ಅವಕಾಶವೇ ಇಲ್ಲ. ಆದರೆ ಸನಾತನ ಧರ್ಮ ಹಾಗಲ್ಲ. ಆತ್ಮ ಹಿಂದಿನ ಜನ್ಮದ ಕರ್ಮಗಳಿಗೆ ತಕ್ಕಂತೆ ಹೊಸದಾದ ದೇಹ ಪಡೆಯುತ್ತದೆ. ಅನುಭವಿಸಬೇಕಾದ್ದನ್ನು ಅನುಭವಿಸುತ್ತದೆ. ಮುಂದಿನ ಜನ್ಮಕ್ಕೆ ಅಣಿಯಾಗುತ್ತದೆ. ನಮ್ಮದು ಚಕ್ರೀಯ ಗತಿ. ಹುಟ್ಟು, ಸಆವು ಮತ್ತು ಮರು ಹುಟ್ಟು ಒಂದನ್ನೊಂದು ಹಿಂಬಾಲಿಸುತ್ತಲೇ ಇರುತ್ತವೆ. ಒಮ್ಮೆ ಆತ್ಮತತ್ತ್ವ ಎಲ್ಲದರೊಳಗೂ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರಿತರೆ, ಈ ಚಕ್ರದಿಂದ ಮುಕ್ತಿ ಎಂಬುದು ನಮ್ಮ ಚಿಂತನೆ.
ಬಿಡಿ. ಅದನ್ನು ಮತ್ತೊಮ್ಮೆ ಯಾವಾಗಲಾದರೂ ದೀರ್ಘವಾಗಿ ಚರ್ಚಿಸೋಣ. ಪುನರ್ಜನ್ಮವನ್ನು ಒಪ್ಪಿಕೊಂಡ ಮೇಲೆ ಆತ್ಮ ಮರುಹುಟ್ಟಿಗೆ ದೇಹವನ್ನು ಆಯ್ದುಕೊಳ್ಳುವ ಪರಿಯನ್ನೂ ಆಲೋಚಿಸಲೇಬೇಕಲ್ಲವೆ? ಇದೊಂದು ಬಗೆಯ ಸ್ವಯಂವರದಂತೆ ನಡೆಯುವ ಪ್ರಕ್ರಿಯೆ. ಹಳೆಯ ಜನ್ಮದ ಕರ್ಮಗಳನ್ನು ಅನುಸರಿಸಿ ಸೂಕ್ತ ತಂದೆ ತಾಯಿಯರನ್ನು ಆಯ್ದುಕೊಳ್ಳುವ ಅಪರೂಪದ ವಿಧಾನ. ಹೀಗಾಗಿ ಎಲ್ಲಿ – ಯಾವಾಗ – ಯಾರಿಗೆ ಹುಟ್ಟಬೇಕೆಂಬುದಕ್ಕೆ ಸ್ಪಷ್ಟ ನಿಯಮಗಳೇ ಇವೆ. ಇವುಗಳನ್ನೇ ನಮ್ಮ ಹಿರಿಯರು ಕರ್ಮಸಿದ್ಧಾಂತ ಎಂದಿದ್ದು. ನೀವು ಒಪ್ಪಿ – ಬಿಡಿ. ಏನಾದರೂ ಅವಘಡ ಸಂಭವಿಸಿದೊಡನೆ ಅಯಾಚಿತವಾಗಿ ‘ಎಲ್ಲಾ ನನ್ನ ಕರ್ಮ’ ಎಂದುಬಿಡುತ್ತೇವಲ್ಲ; ಅದು ಇದೇ ಸಿದ್ಧಾಂತದ ಪ್ರತಿಫಲ.
ಮೂರು ಬಗೆಯ ಕರ್ಮಗಳಿವೆ. ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮ ಅಂತ. ಹಿಂದಿನ ಜನ್ಮದಲ್ಲಿ ಮಾಡಿದ ಒಳಿತುಕೆಡುಕುಗಳ ಕಂತೆ ಸಂಚಿತವಾಗಿ ಮುಂದಿನ ಜನ್ಮಕ್ಕೆ ವರ್ಗಾವಣೆಯಾಗುತ್ತದೆ; ಥೇಟು ಬ್ಯಾಂಕ್ ಬ್ಯಾಲೆನ್ಸಿನಂತೆ. ಇನ್ನು ಪ್ರಾರಬ್ಧ ಕರ್ಮ ಈ ಜನ್ಮದಲ್ಲಿ ನಾವು ಮಾಡಿದ ಸತ್ಕರ್ಮ – ದುಷ್ಕರ್ಮಗಳ ಲೆಕ್ಕಾಚಾರ. ಇದು ಹಳೆಯದನ್ನು ಕೆಲವೊಮ್ಮೆ ಮೀರಿ ನಿಂತು ಫಲ ಕೊಡಬಹುದು. ಈ ಪ್ರಾರಬ್ಧದಲ್ಲಿ ಕೆಲವು ಕರ್ಮಗಳು ಮುಂದಿನ ಜನ್ಮಕ್ಕೆ ಮೀಸಲಾಗಿಡಬಹುದು. ಆಗ ಅದು ಆಗಾಮಿಯಾಗುತ್ತದೆ, ಅಷ್ಟೇ.
ಹಳೆಯ ಜನ್ಮದಲ್ಲಿ ಸಂಗೀತಗಾರನಾಬೇಕೆಂದು ಪ್ರಯತ್ನಪಟ್ಟು, ಸಾಧನೆ ಮಾಡಿ ಕೀರ್ತಿ ಪಡೆಯುವ ಮುನ್ನ ದೇಹ ಬಿಟ್ಟ ಆತ್ಮವು ಈ ಜನ್ಮದಲ್ಲಿ ಸಂಗೀತದ ವಾತಾವರಣವಿರುವ ಮನೆಯಲ್ಲಿ ಹುಟ್ಟುತ್ತದೆ. ಬಾಲ್ಯದಲ್ಲಿಯೇ ಶ್ರೇಷ್ಠ ಸಂಗೀತಗಾರನೆಂಬ ಕೀರ್ತಿಯನ್ನು ಪಡೆದುಬಿಡುತ್ತದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನು ಇದನ್ನು ಅನುಮೋದಿಸುತ್ತಾನೆ ಕೂಡ. ಯೋಗಭ್ರಷ್ಟನಾದ ಸಾಧಕನಿಗೆ ಮರುಜನ್ಮದಲ್ಲಿ ಸೂಕ್ತ ಪರಿಸರ ಒದಗಿಸಿಕೊಡುವ ಭರವಸೆಯನ್ನು ಕೊಡುತ್ತಾನೆ. ಅದಕ್ಕೇ ಸನಾತನ ಧರ್ಮ ತನ್ನ ಪ್ರತಿಯೊಂದು ಸಾಹಿತ್ಯದಲ್ಲೂ ನೈತಿಕ ಚೌಕಟ್ಟಿನ ನಿಯಮಗಳನ್ನು ರಾಶಿರಾಶಿಯಾಗಿ ಹೇರುತ್ತದೆ. ಇಲ್ಲಿ – ಈಗ ಮಾಡುವ ಸಣ್ಣ ತಪ್ಪೂ ಮುಂದಿನ ಜನ್ಮದಲ್ಲಾದರೂ ಫಲವುಣ್ಣುವಂತೆ ಮಾಡದೆ ಬಿಡುವುದಿಲ್ಲಎಂದೂ ಎಚ್ಚರಿಸುತ್ತದೆ.
ಹಾಗಿದ್ದ ಮೇಲೆ ನಮ್ಮ ಪೂರ್ವಜನ್ಮವನ್ನು ನಾವು ಇಣುಕಿ ನೋಡುವುದು ಸಾಧ್ಯವೆ? ಖಂಡಿತ ಸಾಧ್ಯ ಎನ್ನುತ್ತದೆ ಭಾರತೀಯ ಯೋಗಶಾಸ್ತ್ರ. ಸ್ವಾಮಿ ಅಭೇದಾನಂದರು ತಮ್ಮ ಪುನರ್ಜನ್ಮವೆಂಬ ಕೃತಿಯಲ್ಲಿ ಸುಂದರವಾದ ಉಲ್ಲೇಖವೊಂದನ್ನು ಕೊಡುತ್ತಾರೆ. ಕತ್ತಲ ಕೋಣೆಯಲ್ಲಿ ಸಿನೆಮಾ ಪರದೆಯ ಮೇಲೆ ಪ್ರೊಜೆಕ್ಟರ್ ಮೂಲಕ ಚಿತ್ರವೊಂದು ಮೂಡಿಬರುತ್ತಿದೆಯೆಂದು ಭಾವಿಸಿ. ಈಗ ಕೋಣೆಯ ಎಲ್ಲ ಬಾಗಿಲುಗಳನ್ನು ತೆರೆದುಬಿಡಿ. ಒಂದು ಕ್ಷಣ ಪರದೆಯ ಮೇಲೆ ಚಿತ್ರ ಮೂಡುವುದು ನಿಂತಿದೆ ಎನ್ನಿಸುತ್ತದೆ. ಆದರೆ ಹಾಗಾಗಿಲ್ಲ. ಕೋಣೆಯಲ್ಲಿ ಬೆಳಕು ಹೆಚ್ಚಾಗಿದೆ ಅಷ್ಟೇ. ಹಾಗೆಯೇ ಹೊಸ ಬದುಕಿನಲ್ಲಿ ಬಲವಾಗಿ ಮೈಮರೆತ ನಮಗೆ ಹಳೆಯ ಜನ್ಮ ಮರೆತುಹೋಗಿದೆ. ಇಂದ್ರಿಯಗಳನ್ನು ಹೊಸ ಬದುಕಿನಿಂದ ಒಳಗೆಳೆದುಕೊಂಡು ಮನಸ್ಸಿನ ಲೋಕವನ್ನು ಪದರಪದರವಾಗಿ ತೆರೆಯಲು ಶುರು ಮಾಡಿದರೆ ಹಳೆಯದೆಲ್ಲ ಉಮ್ಮಳಿಸಿ ಬರಲಾರಂಭಿಸುತ್ತದೆ.
ನಮ್ಮ ಋಷಿ ಮುನಿಗಳು ಇವುಗಳೆಲ್ಲದರ ಅಧ್ಯಯನಕ್ಕೆಂದೇ ವಿಸ್ತಾರವಾದ ವಿಜ್ಞಾನವನ್ನು ಅಭಿವೃದ್ಧಿಪಡಿಸಿದರು. ವೇದಗಳಲ್ಲಿ ಹೇಳಿರುವ ಆತ್ಮ ತತ್ತ್ವವನ್ನು ಉಪನಿಷತ್ತು ಸುದೀರ್ಘವಾಗಿ ಚರ್ಚಿಸಿತು. ಪುರಾಣಗಳು ಸಾಮಾನ್ಯ ಜನರಿಗೆ ಇವುಗಳನ್ನು ಕಥಾ ರೂಪದಲ್ಲಿ ತಲುಪಿಸಿದವು. ಈ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಜಿಜ್ಞಾಸೆ ಇದ್ದವರಿಗಾಗಿ ಅನೇಕ ಹೊಸಹೊಸ ಮಾರ್ಗಗಳು ಅನ್ವೇಷಣೆಗೊಂಡವು. ಯೋಗ ಅಂತಹುದೇ ಒಂದು ರಾಜಪಥ.
ಯೋಗವೆಂದಾಗ ದೇಹ ಕರಗಿಸುವ, ಆರೋಗ್ಯ ಹೆಚ್ಚಿಸುವ ನಾಲ್ಕೈದು ಆಸನಗಳಷ್ಟೇ ಎಂದು ಭಾವಿಸಬೇಡಿ. ಯೋಗ ಆತ್ಮತತ್ತ್ವವನ್ನು ಅರಿಯುತ್ತ ವಿಶ್ವಪ್ರಜ್ಞೆಯೊಂದಿಗೆ ನಮ್ಮ ಪ್ರಜ್ಞೆಯನ್ನು ಆತ್ಮಸಾತ್ ಮಾಡಿಕೊಳ್ಳುವ ಪ್ರಯತ್ನ. ಜೂನ್ 21ಕ್ಕೆ ಜಗತ್ತು ಯೋಗ ಮಾಡಿದೆ ಎಂದರೆ ಋಷಿಗಳ ಆ ಎಲ್ಲ ಪ್ರಯೋಗಗಳನ್ನು ಅನುಸರಿಸಲು ವಿಶ್ವಸಿದ್ಧವಾಯಿತೆಂದೇ ಅರ್ಥ. ವಿಶ್ವಕುಟುಂಬವಾಗುವುದು ಹೀಗೆಯೇ.

Wednesday 15 July 2015

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ.
sun3
ನಾವು ಬ್ರಾಹ್ಮೀ ಮುಹೂರ್ತವೊಂದರ ಬಗ್ಗೆ ಬಹುವಾಗಿ ಚರ್ಚಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನಿನ ಸಮಯವದು. ಮನು ತನ್ನ ಸ್ಮøತಿಗ್ರಂಥದಲ್ಲಿ ಸ್ಪಷ್ಟಪಡಿಸುತ್ತಾನೆ, “ನಕ್ಷತ್ರಗಳು ಕಾಣುತ್ತಿರುವಾಗಲೇಎದ್ದು ಸೂರ್ಯ ನಮನಗೈಯುವುದು ಉತ್ತಮ. ನಕ್ಷತ್ರಗಳು ಅಸ್ತಮಿಸಿ ಸ್ವಲ್ಪವಷ್ಟೆ ಬೆಳಕು ಕಾಣುವಾಗಿನ ಉಪಾಸನೆ ಮಧ್ಯಮ. ಇನ್ನು ಸೂರ್ಯೋದಯವಾದ ಮೇಲೆ ಎದ್ದುಆತನಿಗೆಅಭಿವಂದಿಸುವುದುಅಧಮ”.
ಬ್ರಾಹ್ಮೀ ಮುಹೂರ್ತಅಂತರ್ಮುಖಿಯಾಗಿ ಬ್ರಹ್ಮನನ್ನುಅರಿಯಲುಅತ್ಯಂತ ಸೂಕ್ತ ಸಮಯ. ಇದನ್ನೇ ಉಷಃ ಕಾಲ ಅಂತಲೂಕರೆಯುತ್ತಾರೆ. ಉಷೆ ಸೂರ್ಯನ ಪತ್ನಿಯಂತೆ. ಸೂರ್ಯ ಬೆಳಗ್ಗೆ ಎದ್ದುಆಕೆಯನ್ನೇ ಹಿಂಬಾಲಿಸಿ ಬರುತ್ತಾನಂತೆ! ಹಾಗಂತ ಪುರಾಣಗಳು ಬಣ್ಣಿಸುತ್ತವೆ. ಇಷ್ಟಕ್ಕೂ ರಾತ್ರಿ ಕಳೆದು ಹಗಲಾಗುವಾಗ ಮತ್ತು ಹಗಲು ಮುಗಿದುರಾತ್ರಿಆರಂಭವಾಗುವಾಗಿನ ಈ ಸಂಧಿ ಕಾಲವನ್ನು ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂಜಗತ್ತಿನಲ್ಲಿಯಾರಿಗೂಇರಲಿಲ್ಲ. ಭಾರತ ಈ ಸಂಧ್ಯಾಕಾಲಗಳನ್ನು ಗುರುತಿಸಿ ಉಪಾಸನೆಗೆ ಅವನ್ನು ಸೂಕ್ತ ಸಮಯವೆಂದು ನಿರ್ಧಾರ ಮಾಡಿತು. ಈ ಹೊತ್ತಿನಲ್ಲಿಯೇ ಸಾವಿರಾರುಜನ ನದಿ ದಂಡೆಯಲ್ಲಿ ನಿಂತು ಸೂರ್ಯನಿಗೆಅಘ್ರ್ಯ ನೀಡುತ್ತಿದ್ದುದಲ್ಲದೇಗಾಯತ್ರೀ ಮಂತ್ರೋಪಾಸನೆಯನ್ನೂ ಮಾಡುತ್ತಿದ್ದರು. ಸೂರ್ಯನ ಬೆಳಕಿನಲ್ಲಿರುವ ಶಖ್ತಿಯಅರಿವುಅವರಿಗೆಖಂಡಿತವಾಗಿಯೂಇತ್ತು. ಬೆಳಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿದರೆಇಡಿಯ ದಿನಕ್ಕೆ ಬೇಕಾದ ಶಕ್ತಿ ಸಂಗ್ರಹವಾಗುವುದರಕುರಿತುಅವರು ತಿಳಿದೇ ಇದ್ದರು.
ಆಧುನಿಕ ವಿಜ್ಞಾನದ ಪ್ರಕಾರ ನಮ್ಮ ನಿದ್ದೆಮತ್ತುಎಚ್ಚರದಚಕ್ರಜಾಗೃತವಾಗಿರೋದೇ ಸೂರ್ಯನಿಂದ. ಸೂರ್ಯನ ಕಿರಣಗಳು ನಮ್ಮ ಮಿದುಳಿನ ಬೆಳಕನ್ನು ಗ್ರಹಿಸುವ ನರದ(ಆಪ್ಟಿಕ್ ನರ್ವ್)ಮೇಲೆ ಬಿದ್ದೊಡನೆ ಮಿದುಳು ನಿದ್ದೆತರುವ ಮೆಲಟೋನಿನ್ ಹಾರ್ಮೋನು ಸ್ರವಿಸುವುದನ್ನು ನಿಲ್ಲಿಸಿಬಿಡುತ್ತದೆ. ಅದರೊಟ್ಟಿಗೇ ಸೆರಿಟೋನಿನ್ ಎಂಬ ದ್ರವ ಹೆಚ್ಚು ಸ್ರವಿಸಲಾರಂಭಿಸಿ ಜಾಗೃತಾವಸ್ಥೆಯಲ್ಲಿ ನಮ್ಮನ್ನುಇಡುವುದಲ್ಲದೆ, ಸಂತೋಷವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮವರು ಮುಂಜಾವಿನ ಸೂರ್ಯನೆದುರು ಕುಳಿತಿರುತ್ತಿದ್ದುದು. ಸುಮ್ಮನೆ ಕುಳಿತಿರುವುದು ಬೇಡವೆಂದೇಧರ್ಮದಚೌಕಟ್ಟು ಜೋಡಿಸಿ ಸೂರ್ಯಶಕ್ತಿಯನ್ನು ಪ್ರಚೋದಕ ಶಕ್ತಿಯಾಗಿಸುವಉಪಾಯ ತೋರಿಸಿಕೊಟ್ಟಿದ್ದು.
ನಾವು ಬಹಳ ದೂರ ಬಂದಿದ್ದೇವೆ. ರಾತ್ರಿಯಕಣ್ಣುಕೋರೈಸುವ ಬೆಳಕು ನಮ್ಮ ಬೆಳಕನ್ನು ಗ್ರಹಿಸುವ ನರಗಳಲ್ಲಿ ಗೊಂದಲವೆಬ್ಬಿಸಿಬಿಡುತ್ತದೆ. ಅದಕ್ಕೆಯಾವುದು ಬೆಳಗು –ರಾತ್ರಿ ಎಂಬುದರ ಅರಿವಾಗದೇ ದೇಹದೊಳಗಿನ ಗಡಿಯಾರ ಏರುಪೇರಾಗಿಬಿಡುತ್ತದೆ. ಜೀವಕೋಶಗಳು ಬಲುಬೇಗ ಸ್ವಾಸ್ಥ್ಯ ಕಳೆದುಕೊಂಡುಬಿಡುತ್ತವೆ. ಹೀಗಾಗಿಯೇ ನಾವು ಸದಾರೋಗಿಷ್ಠರು. ಅದಕ್ಕೆಂದೇ ವೈದ್ಯರು ಬೆಳಗಾಗೆದ್ದು ಸೂರ್ಯನ ಕಿರಣಗಳಿಗೆ ಮೈಯೊಡ್ಡಿಅಂತ ಹೇಳಿದ್ದು. ದೇಹಜರ್ಝರಿತವಾದ ಮೇಲೆ ವೈದ್ಯರ ಮಾತು ಕೇಳಲು ಹಿಂದೆ ಮುಂದೆ ನೋಡದ ನಾವು, ಬಾಲ್ಯದಲ್ಲಿಯೇ ಋಷಿಗಳ ಮಾತು ಪಾಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅಲ್ಲವೇ?
ವಿಜ್ಞಾನದ ಅಮಲಿನಲ್ಲಿರುವಅಮೆರಿಕನ್ನರಿಗೂಇದರಅರಿವಾಗಿದೆ. ಸೂರ್ಯಕಾಣದ ಚಳಿಗಾಲದ ಹೊತ್ತಲ್ಲಿಅಮೆರಿಕದ ಶೇಕಡಾ 10ರಷ್ಟು ಜನಮಿದುಳಿನಲ್ಲಿ ಆಗುವ ರಾಸಾಯನಿಕಗಳ ಬದಲಾವಣೆಯಿಂದ ತೊಂದರೆಗೊಳಗಾಗುತ್ತಾರೆ. ಕೆಲಸ ಮಾಡಲಾಗದೆ ತೊಳಲಾಡುತ್ತಾರೆ. ಆಗೆಲ್ಲ ಸಊರ್ಯನಂತೆ ಭಾಸವಾಗುವದೊಡ್ಡದೊಡ್ಡ ಬಲ್ಬುಗಳನ್ನು ಅವರಎದುರಿಗಿಟ್ಟು ಸೆರಿಟೊನಿನ್ ಸ್ರವಿಸುವಂತೆ ಮಾಡಲಾಗುತ್ತದೆ. ಅನೇಕ ಬಾರಿ ಈ ಪ್ರಯೋಗಕೈಕೊಟ್ಟುಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ಹುಚ್ಚರೂಆಗಿಬಿಡುತ್ತಾರೆ!
ಸೂರ್ಯನನ್ನು ನಮ್ಮವರು ಗತಿಶೀಲ ಎಂದದ್ದು ಅದಕ್ಕೇ. ಆತತಾನಷ್ಟೆ ಚಲಿಸುವುದಿಲ್ಲ; ಎಲ್ಲರೊಳಗೂ ತಾನೇ ಹೊಕ್ಕು ಚಲಿಸುವಂತೆ ಮಾಡುತ್ತಾನೆ. ಬೆಳಗಾಗುವುದರೊಂದಿಗೆ ಉತ್ಸಾಹ ಮೂಡುವುದುಇದರಿಂದಲೇ. ಸಂಜೆಯಾಗುತ್ತದಣಿದದೇಹ ಮಲಗಿಕೊಳ್ಳಲು ಕಾತರಿಸುವುದುಇದಕ್ಕೇ. ದೇಹದಣಿಯಲು ಕೆಲಸ ಮಾಡಲೇಬೇಕೆಂದಿಲ್ಲ, ಸೂರ್ಯ ಅಸ್ತಮಿಸಿದರೆ ಸಾಕು! ಹೀಗಿದೆ ಸೂರ್ಯ ಮತ್ತು ನಮ್ಮದೇಹದ ಸಂಬಂಧ.
ಹೌದು.‘ಆರೋಗ್ಯ ಮತ್ತು ಸೂರ್ಯ’ ಈ ಕುರಿತಂತೆಯಾರಿಗೂ ಅನುಮಾನವೇಇಲ್ಲ. ಆದರೆ ಭಾರತೀಯರುಒಂದು ಹೆಜ್ಜೆ ಮುಂದೆಹೋಗಿ, ಅವನನ್ನು ಬುದ್ಧಿಶಕ್ತಿಯ ಪ್ರಚೋದಕ ಎಂತಲೂ ಭಾವಿಸಿ ಆರಾಧಿಸುತ್ತಾರೆ. ಒಟ್ಟಾರೆ ಗಾಯತ್ರಿ ಮಂತ್ರದ ಅರ್ಥವೇ ಧೀಶಕ್ತಿಯನ್ನು ಪ್ರಚೋದಿಸುವುದು ಅಂತ. ಭಗವದ್ಗೀತೆಯ ನಾಲ್ಕನೆ ಅಧ್ಯಾಯ ಶುರುವಾಗುವುದೇ ಕೃಷ್ಣನ ಅಚ್ಚರಿಯ ಮಾತುಗಳಿಂದ, “ನಾನು ಅವಿನಾಶಿಯಾದ ಈ ಯೋಗವನ್ನುಕಲ್ಪದಆದಿಯಲ್ಲಿ ಸೂರ್ಯನಿಗೆ ಹೇಳಿದೆ. ಸೂರ್ಯ ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದ”–ಎಂದು ಮುಂದುವರೆಯುತ್ತದೆ. ತೈತ್ತಿರೀಯ ಬ್ರಾಹ್ಮಣವೂ“ಸೂರ್ಯ ಮುಂಜಾನೆಋಗ್ವೇದದೊಂದಿಗೆ ಉದಯಿಸಿದರೆ, ಯಜುರ್ವೇದದೊಂದಿಗೆ ಮಧ್ಯೆ ನಿಂತಿರುತ್ತಾನೆ. ಅಸ್ತಂಗತನಾಗುವ ವೇಳೆಗೆ ಸಾಮವೇದದಿಂದ ಪರಿಪುಷ್ಟವಾಗಿರುತ್ತಾನೆ”ಎಂದುಅಭಿಪ್ರಾಯಪಡುತ್ತದೆ.
ಶ್ರೇಷ್ಠ ಋಷಿ ಯಾಜ್ಞವಲ್ಕ್ಯರಂತೂ ಸೂರ್ಯನ ಶಿಷ್ಯರೇ! ಆಕತೆಯೇ ಸ್ವಾರಸ್ಯಕರ. ವೈಶಂಪಾಯನರ ಶಿಷ್ಯರಾಗಿದ್ದ ಯಾಜ್ಞ್ಯವಲ್ಕ್ಯರು ಸಣ್ಣ ವಿಚಾರವೊಂದಕ್ಕೆ ಗುರುಗಳೊಂದಿಗೆ ಜಿದ್ದಿಗೆ ಬಿದ್ದರು. ಕೋಪದಿಂದ ಗುರುಗಳು ತಾವುಕೊಟ್ಟ ವಿದ್ಯೆ ಮರಳಿ ಕೊಡಲು ಆಗ್ರಹಿಸಿದರು. ಯಾಜ್ಞವಲ್ಕ್ಯರೇನೂಕಡಿಮೆ ಸಾಧ್ಯತೆಯವರಲ್ಲ. ಅಲ್ಲಿಯೇ ಇದ್ದ ತಿತ್ತಿರಿಯೇ ಮೊದಲಾದ ಋಷಿಗಳೆದುರಿಗೆ ಇಷ್ಟೂ ದಿನ ಕಲಿತಿದ್ದನ್ನು ಹಾಗು ಹಾಗೆಯೇ ಒಪ್ಪಿಸಿಯೂಬಿಟ್ಟರು. ಹೀಗೆ ಪಡೆದುಕೊಂಡಿದ್ದನ್ನು ಆ ಋಷಿಗಳು ಮುಂದಿನ ಪೀಳಿಗೆಗೆ ಮುಟ್ಟಿಸಿದರು.ಅದು ಕೃಷ್ಣ ಯಜುರ್ವೇದವೆನಿಸಿತು. ಇತ್ತ ಯಾಜ್ಞವಲ್ಕ್ಯರು ಸೂರ್ಯನನ್ನೆ ಆರಾಧಿಸಿ ತಪಗೈದು ಒಲಿಸಿಕೊಂಡರು. ಅವರ ಜ್ಞಾನದ್ವಾರಗಳು ತೆರೆದುಕೊಂಡವು. ನಾರಾಯಣಪ್ರಣೀತವಾದಯಜುರ್ವೇದಅವರೆದುರಿಗೆಅನಾವರಣಗೊಂಡಿತು. ಅದು ಶುಕ್ಲಯಜುರ್ವೇದವಾಯ್ತು. ಹಾಗೆಂದು ವೇದಕಥೆಗಳು ಹೇಳುತ್ತವೆ.
ಸೂರ್ಯನಿಗೆ ನಮ್ಮ ಬುದ್ಧಿಯನ್ನು ಪ್ರಚೋದಿಸುವ ಶಕ್ತಿ ಇದೆಯೇ? ಈ ಪ್ರಶ್ನೆಕಾಡುವಂಥದ್ದೇ. ಇದನ್ನರಿಯಲು ಸ್ವಲ್ಪ ಮೆದುಳಿನ ಸಂರಚನೆ ತಿಳಿಯಬೇಕಾದ್ದು ಅನಿವಾರ್ಯ. ನಮ್ಮ ಮೆದುಳನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು. ಮುಂಭಾಗ, ಮಧ್ಯಭಾಗ ಮತ್ತು ಹಿಂಭಾಗ. ಮೆದುಳಿನ ಹಿಂಭಾಗ ಬೆನ್ನ ಹುರಿಗೆ ಹೊಂದಿಕೊಂಡಂತೆಇದೆ. ಇದುಎಲ್ಲಕಶೇರುಕ (ಬೆನ್ನ ಹುರಿಇರುವ ಪ್ರಾಣಿ)ಗಳಲ್ಲಿ ಇರುವಂಥದ್ದು. ನಾವು ತಲೆ ಹಾಕುವ ಅಗತ್ಯವೇಇಲ್ಲದ ಉಸಿರಾಟ, ಹೃದಯ ಬಡಿತದಂಥ ಕೆಲಸವನ್ನೆಲ್ಲಇದೇ ಮಾಡಿಸುತ್ತದೆ. ಇದಕ್ಕೆ ಸೇರಿಕೊಂಡ ಮೇಲ್ಭಾಗವೇ ಮೆದುಳಿನ ಮಧ್ಯಭಾಗ. ಇದು ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ನಡೆಸುತ್ತದೆ. ನೊಣ ಬಂದೊಡನೆಕಣ್ಮುಚ್ಚುತ್ತೇವಲ್ಲ, ಹಗ್ಗ ಕಂಡೊಡನೆ ಹಾವೆಂದು ಸರಕ್ಕನೆ ಹಿಂದೆ ಸರಿದುಬಿಡುತ್ತೇವಲ್ಲ, ಅಷ್ಟು ವೇಗದ ಪ್ರತಿಕ್ರಿಯೆ ಮೆದುಳಿನ ಮದ್ಯಭಾಗದಕೊಡುಗೆ. ಇನ್ನು, ಮಾನವ ಮೆದುಳಿನ ಅತ್ಯಂತ ಮುಂದುವರೆದ ಭಾಗವೇ ಮೆದುಳಿನ ಮುಂಭಾಗ. ಮೆದುಳು ಅಂತ ನಾವು ನೋಡೋದುಇದೇ ಭಾಗವನ್ನೆ. ಈ ಭಾಗ ಕ್ರಿಯಾಶೀಲವಾಗಿದ್ದಷ್ಟೂ ನಮ್ಮ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಯೋಜನೆರೂಪಿಸುವ ಕ್ಷಮತೆ ಬಲಿಯುತ್ತದೆ. ಕಲ್ಪನೆಯ ಶಕ್ತಿ, ಆಲೋಚನಾ ಶಕ್ತಿ ಹೆಚ್ಚುವುದಕ್ಕೂ ಮೆದುಳಿನ ಈ ಭಾಗದಕೊಡುಗೆಯೇದೊಡ್ಡದು! ಮೆದುಳಿನ ಈ ಭಾಗಜೀವಂತಿಕೆಯಿಂದಕೂಡಿದ್ದಷ್ಟೂ ಮನುಷ್ಯ ಹೆಚ್ಚು ಕಲೆಗಾರನಾಗುತ್ತಾನೆ, ವಿಜ್ಞಾನಿಯಾಗುತ್ತಾನೆ, ಋಷಿಯೂಆಗುತ್ತಾನೆ! ಇದರ ಸಾಮರ್ಥ್ಯ ಕಡಿಮೆಯಾದಂತೆಲ್ಲ ಆತ ಪಶುವಿನಂತಾಗುತ್ತಾನೆ. ಕೋಪ – ದರ್ಪಗಳು ಹೆಚ್ಚಾಗುತ್ತವೆ. ಹಾಗಂತ ಹೇಳಿರೋದು, ಪುರಾಣಕಾರರಲ್ಲ, ಸ್ಮೃತಿಕಾರರೂ ಅಲ್ಲ, ಅಮೆರಿಕಾದ ನರರೋಗಅಧ್ಯಯನ ಸಂಸ್ಥೆಯ ವಿಜ್ಞಾನಿಗಳು!
ಇದರ ಪರಿಪೂರ್ಣಜ್ಞಾನದಿಂದಾಗಿಯೇ ನಮ್ಮವರು ಮೆದುಳಿನ ಭಾಗಕ್ಕೆ ಶಕ್ತಿ ತುಂಬಲೆಂದು ಸೂರ್ಯನಿಗೆ ನಮಸ್ಕರಿಸುವ ಪದ್ಧತಿ ಅಭಿವೃದ್ಧಿಪಡಿಸಿದರು. ಸೂರ್ಯ ಶಕ್ತಿಯ ಕ್ರೋಢೀಕರಣಕ್ಕೆ ಛಂದಸ್ಸುಗಳು ಹುಟ್ಟಿಕೊಂಡವು. ಮಂತ್ರಗಳ ರಚನೆಯಾಯ್ತು. ಸೂರ್ಯ ರಶ್ಮಿಗಳನ್ನು ವಿದ್ಯುತ್ ಆಗಿ ಪರಿವರ್ತಿಸಲು ಮಾಳಿಗೆಯ ಮೇಲೆ ಫೋಟೋವೋಲ್ಟಾಯಿಕ್ ಸೆಲ್‍ಗಳ ಪ್ಯಾನೆಲ್‍ಜೋಡಿಸುವುದಿಲ್ಲವೆ? ಮಂತ್ರಗಳೂ ಅದೇ ಕೆಲಸವನ್ನು ದೇಹದೊಳಗೆ ಮಾಡುತ್ತವೆ, ಬೌದ್ಧಿಕ ಶಕ್ತಿಯನ್ನು ಪ್ರಚೋದಿಸುತ್ತವೆ. ಮಂತ್ರಗಳು – ಛಂದಸ್ಸುಗಳು ನರಗಳ ಮೇಲೆ ಬೀರುವ ಪ್ರಭಾವಗಳ ಅಧ್ಯಯನಕ್ಕೆ ಸೂಕ್ತಯಂತ್ರಗಳನ್ನು ಕಂಡುಹಿಡಿದರೆ, ಈ ಸತ್ಯ ಅನಾವರಣಗೊಳ್ಳಬಹುದು. ಅದನ್ನು ಅರ್ಥೈಸಿಕೊಳ್ಲಬಲ್ಲಷ್ಟು ವಿಜ್ಞಾನವೇ ಬೆಳೆಸಿಲ್ಲದಿರುವಾಗ ಅರೆಬರೆಜ್ಞಾನದಿಂದ ಮಂತ್ರದೊಳಗೆ ಶಕ್ತಿಯಿಲ್ಲವೆನ್ನುವುದು ಸರಿಯಾ?
ಗಾಯತ್ರಿ ಮಂತ್ರವನ್ನುಕಂಡವರು ವಿಶ್ವಾಮಿತ್ರರಂತೆ. ತಪಸ್ಸಿಗೆ ಕುಳಿತು ಮೇನಕೆಯಿಂದಾಗಿ ವ್ರತಭಂಗವಾಗಿ ಮತ್ತೆ ಹಠದಿಂದ ಬ್ರಹ್ಮಬಲ ಸಆಕ್ಷಾತ್ಕರಿಸಿಕೊಂಡ ವಿಶ್ವಾಮಿತ್ರರು ವಸಿಷ್ಠರ ಪಾದಗಳಿಗೆ ಎರಗಿದಾಗ ಹೊರಬಂದ ಶ್ರೇಷ್ಠ ಮಂತ್ರವಂತೆಇದು. ಸಂಧ್ಯಾ ಕಾಲದಲ್ಲಿ ಇದನ್ನು ಉಚ್ಚರಿಸುವಾಗ ಮೆದುಳಿನ ಮುಂಭಾಗದ ಮೇಲೆ ವಿಶೇಷ ಪರಿಣಾಮ ಉಂಟು ಮಾಡುತ್ತದೆಎಂಬುದನ್ನು ನಮ್ಮವರುಒಪ್ಪಿದ್ದರು, ಸಿದ್ಧಪಡಿಸಿಕೊಂಡಿದ್ದರು. ಆಧುನಿಕ ವಿಜ್ಞಾನ ಇದನ್ನೇ ಬೇರೆ ಬೇರೆ ಮಾರ್ಗಗಳಿಂದ ಸಾಧಿಸಿಕೊಳ್ಳಲು ಯತ್ನಿಸುತ್ತಿದೆ. 1910ರಲ್ಲಿ ಲಂಡನ್ನಿನ ಕೆಲವು ವಿಜ್ಞಾನಿಗಳು ತಲೆಯ ಹೊರಭಾಗಕ್ಕೆಕೊಟ್ಟ ವಿದ್ಯುತ್ ಶಾಕ್‍ನಿಂದ ನರಗಳು ಪ್ರಭಾವಕ್ಕೆ ಒಳಗಾಗುವುದನ್ನು ಗುರುತಿಸಿದರು. 1985ರಲ್ಲಿ ಇನ್ನಷ್ಟು ವಿಜ್ಞಾನಿಗಳು ಪ್ರಯೋಗ ಮಾಡಿ ನೇರ ವಿದ್ಯುತ್ ಬಳಕೆಯ ಬದಲುಕಾಂತೀಯ ವಿದ್ಯುತ್(ಎಲೆಕ್ಟ್ರೋ ಮ್ಯಾಗ್ನೆಟ್) ಅನ್ನು ಬಳಸಿ ಬೇಕಾದ ನರಗಳನ್ನು ಚುರುಕುಗೊಳಿಸುವ ಪದ್ಧತಿ ಹುಡುಕಿದರು. ಇದನ್ನೇಇಂದು ವೈದ್ಯಕೀಯ ವಿಭಾಗದಲ್ಲಿಟ್ರಾನ್ಸ್‍ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ ಅನ್ನೋದು. ಮಾನಸಿಕ ಖಿನ್ನತೆ, ಸ್ಕಿಜೋಫ್ರೇನಿಯಾದಂತಹ ರೋಗಗಳಿಗೆ ಸೂಕ್ತ ಪರಿಹಾರಇದೆಂದು ವೈದ್ಯರು ಹೇಳುತ್ತಾರೆ. ಪ್ರಯೋಗದಲ್ಲಿ ಸ್ವಲ್ಪಎಡವಟ್ಟಾದರೂವ್ಯಕ್ತಿ ಮೂರ್ಛೆ ಹೋಗುವ ಅಥವಾ ಮೆದುಳು ಸ್ವಾಧೀನ ಕಳೆದುಕೊಳ್ಳುವ ಸಥಿತಿಗೂತಲುಪಬಹುದೆಂದುಎಚ್ಚರಿಕೆಯನ್ನೂಕೊಡುತ್ತಾರೆ.
ಈಗ ಸಊರ್ಯನತ್ತ ಮರಳಿ ಬನ್ನಿ. ವಿದ್ಯುತ್ತನ್ನುಕೊಟ್ಟು ನರಗಳನ್ನು ಉದ್ದೀಪಿಸುವ ಪ್ರಯತ್ನಇಂದು ವಿಜ್ಞಾನಿಗಳು ಮಾಡುತ್ತಿದ್ದಾರೆ; ವಿದ್ಯುತ್ತಿನ ಮೂಲಸ್ರೋತವಾದ ಸೂರ್ಯನೆದುರಿಗೆ ನಿಂತು ನರಗಳನ್ನು ಪ್ರದೀಪ್ತಗೊಳಿಸುವ ಶ್ರೇಷ್ಠ ಪದ್ಧತಿಯನ್ನು ನಮ್ಮವರುಅಂದೇ ವಿಕಾಸಗೊಳಿಸಿದ್ದರು. ನಮ್ಮ ಉಪಾಸನೆ ಪರಿಸರಕ್ಕೆಅದೆಷ್ಟು ಪೂರಕವೆಂದರೆ, ಅಲ್ಲಿ ದುಷ್ಪರಿಣಾಮಗಳಾಗುವ ಹೆದರಿಕೆಯೇಇಲ್ಲ!
ಅಂದಹಾಗೆಗೀತೆಯಲ್ಲಿ ಶ್ರೀಕೃಷ್ಣತಾನು ವೈಶ್ವಾನರನಾಗಿಜಠರದಲ್ಲಿ ಕುಳಿತಿರುತ್ತೇನೆ ಅಂದಿರೋದನ್ನು ಕೇಳಿದ್ದೀರಲ್ಲಾ! ವೈದ್ಯಕೀಯಜಗತ್ತು ಹೊಟ್ಟೆಯನ್ನು ಸೆಕೆಂಡ್ ಬ್ರೈನ್ (ಎರಡನೇ ಮೆದುಳು) ಎನ್ನುತ್ತವೆ. ಮೆದುಳಿನಲ್ಲಿ ಉ0ಟಾಗುವ ಎಲ್ಲ ಬಗೆಯರಾಸಯನಿಕ ಪ್ರಕ್ರಿಯೆಗಳು ಹೊಟ್ಟೆಯಲ್ಲಾಗುತ್ತವೆ0ನ್ದರ್ಥ . ಅದ್ದಕ್ಕೆ ಹೊಟ್ಟೆ ಸರಿಯಾಗಿದ್ದರೆಆರೋಗ್ಯ ಎ0ದು ಹೇಳಿ ನಮ್ಮವರುಅದರರಕ್ಷಣೆಗೂ ಅಷ್ಟೆ ಗಮನ ಕೊಟ್ಟಿದ್ದರು.
ಹೌದು. ಭಾರತದ ವಿಶ್ವಗುರುತ್ವದ ಹಿಂದಿನ ಶಕ್ತಿಯೇಅದು. ನಾವು ಪ್ರಕೃತಿಯ ರಹಸ್ಯಗಳನ್ನು ಭೇದಿಸಿದರೆï,ಜಗತ್ತಿನಜನರೆಲ್ಲ ಸುತ್ತಣ ಪ್ರಕೃತಿ ನಮ್ಮ ಅಡಿಯಾಳೆಂಬಂತೆ ಶೋಷಿಸಿ ಪ್ರಭುತ್ವ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ. ಭಾರತ ಪ್ರಕೃತಿಯನ್ನು ಪ್ರೀತಿಸಿ ಅದನ್ನು ಒಲಿಸಿಕೊಂಡೇ ಬದುಕು ನಡೆಸುವುದನ್ನು ಹೇಳಿಕೊಟ್ಟಿದೆ. ಹೀಗಾಗಿಯೇಇಲ್ಲಿದೇಹದಿಂದ ಹಿಡಿದು ವಿಶ್ವದವರೆಗೆಒಂದು ಸೂಕ್ಷ್ಮವಾದಅನುಬಂಧವಿದೆ. ದೇಹದ ಪ್ರತಿಯೊಂದುಜೀವಕೋಶವೂ ವಿಶ್ವದ ಮಹತ್ತಿನೊಂದಿಗೆ ಯಾರಿಗೂ ಕೇಳದ ಸೂಕ್ಷ್ಮ ಭಾಷೆಯಲ್ಲಿ ಸಂವಾದಿಸುತ್ತಇರುತ್ತದೆ. ಈ ಸೂಕ್ಷ್ಮ ಸಂವಾದದಿಂದಾಗಿಯೇ ಪ್ರಕೃತಿಯೂತನ್ನನ್ನುತಾನು ಅನಾವರಣಗೊಳಿಸಿಕೊಳ್ಳೋದು. ಅದಕ್ಕೇ ಇಲ್ಲಿಯಾವ ಋಷಿಯೂ ಮಂತ್ರವನ್ನು‘ಕಂಡುಹಿಡಿದ’ಅನ್ನುವುದಿಲ್ಲ. ಬದಲಿಗೆದರ್ಶನ ಮಾಡಿಕೊಂಡಎನ್ನಲಾಗುತ್ತದೆ. ಪ್ರಕೃತಿಯ ಸತ್ಯಅವನೆದುರಿಗೆಗೋಚರವಾದ ರೀತಿ ಅದು. ಇದರಿಂದಾಗಿಯೇ ಸಾವಿರಾರು ವರ್ಷಗಳ ಹಿಂದೆಅವರು ಹೇಳಿರುವುದನ್ನು ಇಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸುವುದಷ್ಟೆ ನಮ್ಮ ಕೆಲಸ. ಅಷ್ಟೇ ಅಲ್ಲ, ಅವರು ಹಾಕಿಕೊಟ್ಟರಾಜಮಾರ್ಗದಿಂದದೂರ ಸರಿದಷ್ಟೂಅದೆಷ್ಟು ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದೇವೆಂಬ ಅರಿವೂ ನಮಗಾಗುತ್ತದೆ. ಪ್ರಪಂಚ ಮಾರ್ಗ ಸಾಕು, ಮುಕ್ತಿಯ ಯೋಗ ಮಾರ್ಗ ಬೇಕೆಂದುಜಗತ್ತಿಗೆ ಅನ್ನಿಸಿರೋದೂ ಅದ್ಕಕಾಗಿಯೇ.
ಮತ್ತೆ, ಈ ರೀತಿಯ ಬುದ್ಧಿ ಪ್ರಚೋದನೆಗೂ ಆ ಸೂರ್ಯದೇವನೇಕಾರಣ. ನಮಸ್ಕಾರ ಮಾಡೋರು ಮುಜುಗರವೆನ್ನಿಸಿದರೆ ಕೊನೆಪಕ್ಷ ಸಂಧ್ಯಾಕಾಲದಲ್ಲಿ ಸೂರ್ಯನೆದುರಿಗೆ ನಿಂತು ಬುದ್ಧಿ ಪ್ರಚೋದಕ ನರಗಳನ್ನು ಹುರಿಗೊಳಿಸಿ ಹೊಸೆದುಕೊಳ್ಳೋಣ. ಏನಂತೀರಿ?

Saturday 11 July 2015

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ ಪ್ರತಿಯೊಬ್ಬನಿಗೂ ಸೂರ್ಯನೇ ನಮಗೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರವಾದಿಗಳು ಅದನ್ನು ಹೇಳಿ ದೃಢಪಡಿಸಿ ಹೋದರು.  ಈಗಲೂ ಈ ವಾಕ್ಯಗಳನ್ನು ದೃಢವಾಗಿ ನಂಬಿರುವ ಅನೇಕರು “ಭೂಮಿ ತಿರುಗುವುದೇ ನಿಜವಾದರೆ ಮೇಲಕ್ಕೆಸೆದ ಚೆಂಡು ಕೆಳಗೆ ಬೀಳುವಾಗ ನಮ್ಮ ಕೈಗೇ ಬೀಳುವುದು ಹೇಗೆ? ಅದು ಪಕ್ಕದಲ್ಲೆಲ್ಲೋ ಹೋಗಿ ಬೀಳಬೇಕಲ್ಲವೆ? “ ಎಂದು ಬಾಲಿಶವಾಗಿ ಪ್ರಶ್ನಿಸುತ್ತಾರೆ. ಪಾಪ. ಇಂತಹವರ ವಿರುದ್ಧ ಅನೇಕ ಶತಮಾನಗಳ ಕಾಲ ವಿಜ್ಞಾನಿಗಳೂ ದನಿಯೆತ್ತಲಾಗದೆ ಕೊರಗಿದ್ದರು. ಕೋಪರ್ನಿಕಸ್, ಗೆಲಿಲಿಯೋರಂಥವರೆಲ್ಲ ಅದೇ ಸಾಲಿಗೆ ಸೇರಿದವರು.
su
ಆದರೆ ಈ ದೇಶ ಹಾಗಲ್ಲ. ಕಣ್ಣಿಗೆ ಕಾಣುವ ಈ ವಿಶ್ವದ ಕೇಂದ್ರ ಸೂರ್ಯನೇ ಎಂಬ ಅರಿವು ಇಲ್ಲಿನವರಿಗೆ ಇತ್ತು. ಸಕಲ ಚರಾಚರಗಳ ಪ್ರೇರಕ ಶಕ್ತಿಯೂ ಅವನೇ ಎಂಬುದೂ ಸ್ಪಷ್ಟವಾಗಿ ಗೊತ್ತಿತ್ತು. ಅದೂ ಒಂದೆರಡು ಸಾವಿರ ವರ್ಷಗಳ ಹಿಂದಲ್ಲ; ಋಗ್ವೇದ ಕಾಲದಿಂದಲೂ ಕೂಡ!
ಸಾಯಣರು ತಮ್ಮ ಋಗ್ವೇದ ಭಾಷ್ಯದಲ್ಲಿ `ಸೂರ್ಯ’ ಪದಕ್ಕೆ ಶ್ರೇಷ್ಠ, ಒಡೆಯ, ಸರ್ವಾಂತರ್ಯಾಮಿ, ಸರ್ವಪ್ರೇರಕ ಎಂಬೆಲ್ಲ ಅರ್ಥ ಹೇಳಿದರೆ; ಯಾಸ್ಕರು ತಮ್ಮ ನಿರುಕ್ತದಲ್ಲಿ ಸಂಚರಿಸುವವ, ಸೃಷ್ಟಿಸುವವ, ಪ್ರೇರೇಪಿಸುವವ ಎಂದೆಲ್ಲ ಗುಣಗಾನ ಮಾಡುತ್ತಾರೆ. ಅಲ್ಲಿಗೆ ಇಂದಿನ ವಿಜ್ಞಾನ ಸೂರ್ಯನ ಕುರಿತಂತೆ ನಡೆಸಿದ ಎಲ್ಲ ಸಂಶೋದನೆಗಳೂ ಇದರೊಳಗೆ ಸೇರಿಕೊಂಡಂತಾಯ್ತು. ನಮ್ಮ ಋಷಿಗಳು ಇಲ್ಲಿಗೇ ನಿಲ್ಲದೆ, ಸ್ಥಾವರ ಮತ್ತು ಜಂಗಮಾತ್ಮಕವಾದ ಪ್ರತಿಯೊಂದಕ್ಕೂ ಸೂರ್ಯನೇ ಅಂತರಾತ್ಮವೆಂದೂ ಬಣ್ಣಿಸಿ ಕೃತಾರ್ಥರಾಗಿದ್ದಾರೆ.
ಹಾಗಂತ ಈ ಲೇಖನ ಮಾಲೆಯುದ್ದಕ್ಕೂ ಬಣ್ಣಿಸಿದ ಸೃಷ್ಟಿಯ ಆದಿಪುರುಷ ಪರಬ್ರಹ್ಮ ಈ ಸೂರ್ಯನಲ್ಲವೆಂಬ ಜ್ಞಾನ ಋಷಿಗಳಿಗಿತ್ತು. ಭಗವದ್ಗೀತೆಯಂತೂ ಆ ಪರಮಾತ್ಮನೆದುರಿಗೆ ಈ ಸೂರ್ಯ ಕಳಾಹೀನವೆಂದು ಹೇಳಿದೆ. ಒಂದಂತೂ ಸ್ಪಷ್ಟ. ನಮ್ಮ ಕಣ್ಣೆದುರಿಗೆ ಕಾಣುವ ಗ್ರಹ – ಉಪಗ್ರಹಗಳ ಈ ಲೋಕಕ್ಕೆ ಸೂರ್ಯನೇ ಅಧಿಪತಿ. ಹೀಗೆ ಅನೇಕ ಲೋಕಗಳು ಸೇರಿ ನಿರ್ಮಾಣಗೊಂಡ ಮಹಾವಿಶ್ವದ ಅಧಿಪತಿ ಮಹಾಸೂರ್ಯ ಪರಮಾತ್ಮ ಎಂದಾಯ್ತು.
ಆ ವಿಶಿಷ್ಟ ಶಕ್ತಿಯಿಂದ ಪ್ರೇರಣೆ ಪಡೆದ ಈ ವಿಶ್ವ ಅದೆಷ್ಟು ಸರಳವಾಗಿದೆ ನೋಡಿ. ಪರಮಾತ್ಮ ತತ್ತ್ವದ ಸುತ್ತ ಸುತ್ತುವ ಇಡಿಯ ವಿಶ್ವ. ಅದರ ಮಿನಿಯೇಚರ್ ನಮ್ಮ ಸೌರ ಮಂಡಲ. ಇಲ್ಲಿ ಸೂರ್ಯನೇ ಪರಮಾತ್ಮ. ನೀವು ಅಣುವಿನ ಮಟ್ಟಕ್ಕೆ ಬಂದರೂ ಹಾಗೆಯೇ. ಪ್ರತಿಯೊಂದು ಪರಮಾಣುವಿನಲ್ಲೂ ಬಲಾಢ್ಯವಾದ ನ್ಯೂಕ್ಲಿಯಸ್ ಎಂಬ ಕೇಂದ್ರ, ಅದರ ಸುತ್ತಲೂ ಗಿರಗಿಟ್ಟಲೆಯಂತೆ ಸುತ್ತುವ ಎಲೆಕ್ಟ್ರಾನುಗಳು! ಇನ್ನು ನಮ್ಮ ವಿಚಾರಕ್ಕೆ ಬಂದರೆ, ಜೀವಕೋಶಗಳೂ ಹಾಗೆಯೇ. ಕೋಶಕ್ಕೊಂದು ಕೇಂದ್ರ, ಅದರ ಸುತ್ತಲೂ ರಚನೆಯಾಗಿರುವ ಜೀವ ಹಂದರ. ಪರಮಾತ್ಮ ತನ್ನಿರುವನ್ನು ಅಣುವಿನಿಂದ ಮಹತ್ತಿನವರೆಗೂ ಏಕಪ್ರಕಾರವಾಗಿ ತೊರಿಸಿಕೊಂಡಿದ್ದಾನೆ. ಹೀಗಾಗಿ “ಅಣೋರಣೀಯಾನ್ ಮಹತೋ ಮಹೀಯಾನ್” ಎಂದಾಗ ಇವೆಲ್ಲವೂ ಹಾದುಹೋಗುವುದು.
ನಮ್ಮ ಕಾಲ ಗಣನೆಯ ಕೇಂದ್ರ ಸೂರ್ಯ. ನಾವು ಹಗಲು ರಾತ್ರಿಗಳ ಲೆಕ್ಕಾಚಾರದಿಂದ ಶುರು ಮಾಡಿ ನಮ್ಮ ಆಯಸ್ಸು, ಭೂಮಿಯ ಆಯು, ವಿಶ್ವದ ಜೀವಾವಧಿಗಳನ್ನೆಲ್ಲ ಲೆಕ್ಕ ಹಾಕುತ್ತೇವಲ್ಲ, ಅದು ಸೂರ್ಯನ ಕಾರಣದಿಂದಲೇ. ಅವನಿಲ್ಲದ ಜಗತ್ತಿನ ಕಲ್ಪನೆ ಅಸಾಧ್ಯ. ನಮಗೆ ಹಗಲಿನ ಬೆಳಕೂ ಅವನದ್ದೇ; ರಾತ್ರಿ ಚಂದ್ರ ಪ್ರತಿಫಲಿಸುವ ಬೆಳಕೂ ಅವನದ್ದೇ! ರಾತ್ರಿಯ ವೇಳೆಗೆ ಮರತಪ್ರಾಯವಾಗುವ ಈ ಜಗತ್ತು ಬೆಳಕಾಗುವ ವೇಳೆಗೆ ಚೇತನವನ್ನು ಆವಾಹಿಸಿಕೊಂಡು ಜಾಗೃತವಾಗಲು ಆತನೇ ಕಾರಣ. ಭೂಮಿಯನ್ನು ಆತ ಆಕರ್ಷಿಸದೆ ಹೋಗಿದ್ದರೆ ಭೂಮಿ ಅದನ್ನು ಪ್ರತಿಭಟಿಸುವ ಜಗನ್ನಾಟಕ ನಡೆಯದೆ ಹೋಗಿದ್ದರೆ ಭೂಮಿಯ ಮೇಲೆ ಜೀವರಾಶಿಗಳು ಇರುತ್ತಲೇ ಇರಲಿಲ್ಲ. ಅರ್ಥವಾಗಲಿಲ್ಲವೆ? ವಿವರಿಸುತ್ತೇನೆ ಇರಿ.
ಭೂಮಿಯನ್ನು ಆದಿಶೇಷ ತಲೆಯ ಮೇಲೆ ಹೊತ್ತುಕೊಂಡಿದ್ದಾನೆ; ಅವನು ಅಲುಗಾಡಿದರೆ ಭೂಮಿಯ ನಾಶವೇ ಸರಿ ಅಂತ ಪುರಾಣಗಳಲ್ಲಿ ಹೇಳಿರುವುದನ್ನು ಕೇಳಿದ್ದು ನೆನಪಿದೆಯಾ? ನಾವೆಲ್ಲ ಇದನ್ನು ಆಡಿಕೊಂಡು ನಕ್ಕವರೇ. ಆದರೆ ವಿಜ್ಞಾನ ಅಧ್ಯಯನ ಹೆಚ್ಚಾದಂತೆ ಈ ಆದಿಶೇಷ ನಮ್ಮೆದುರು ಹೊಸತಾಗಿ ಅನಾವರಣಗೊಂಡ. ಭಾರತದಲ್ಲಿ ದೇವ ದಏವಿಯರ ಪರಿಕಲ್ಪನೆಗಳೆಲ್ಲವೂ ತಾತ್ತ್ವಿಕ ಹಿನ್ನೆಲೆಯುಳ್ಳವೇ ಎಂಬುದು ಅರಿವಾದರೆ, ಈ ಎಲ್ಲ ವೈಜ್ಞಾನಿಕ ಸತ್ಯಗಳ ಸುರುಳಿ ಬಿಚ್ಚುವುದು ಸುಲಭ.
ಸೂರ್ಯನ ಆಕರ್ಷಣ ಶಕ್ತಿ ಅದೆಷ್ಟೆಂದರೆ ಆತ ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳನ್ನು ತನ್ನೊಡಲೊಳಗೆ ಸೆಳೆದುಕೊಂಡುಬಿಡಲು ಸಿದ್ಧನಾಗಿಯೇ ಇರುತ್ತಾನೆ. ಅದಕ್ಕೇ ಅವನನ್ನು ಮಾರ್ತಾಂಡ ಎನ್ನೋದು. ಗೋಬಲ ಮಹರ್ಷಿಗಳ ಪ್ರಕಾರ ಮಾರ್ತಾಂಡ ಎಂದರೆ ಪ್ರಪಂಚದ ವಿಧ್ವಂಸಕ್ಕೆ ಕಾರಣನಾಗುವ ಪ್ರಳಯಕಾರಿ ಎಂದರ್ಥ. ಆತ ಸದಾ ಕಾಲ ಮಾರ್ತಾಂಡರೂಪೀ ಬಲವೊಂದನ್ನು ಭೂಮಿಯ ಮೇಲೆ ಹಾಕುತ್ತಲೇ ಇರುತ್ತಾನೆ. ಇತ್ತ ಭೂಮಿಯೂ ತನ್ನೊಡಲ ಸಾಮಥ್ರ್ಯವಷ್ಟನ್ನೂ ಬಗೆದು ಪ್ರಳಯವಾಗುವುದನ್ನು ತಡೆಗಟ್ಟುತ್ತಾಳೆ. ಸೂರ್ಯ ಭೂಮಿಯ ಮೇಲೆ ಹಾಕುವ ಬಲದಲ್ಲಿ ಭೂಮಿ ಸೂರ್ಯನ ಮೇಲೆ ಹಾಕುವ ಬಲವನ್ನು ಕಳೆದರೆ ಉಳಿಯುವ ಶೇಷವಿದೆಯಲ್ಲ. ಅದನ್ನೇ ನಮ್ಮವರು ಅತ್ಯಂತ ಪ್ರಾಚೀನವಾದ ‘ಆದಿಶೇಷ’ ಎಂದು ಕರೆದದ್ದು! ಈ ಆದಿಶೇಷವೇ ಭೂಮಿಯನ್ನು ಸೂಕ್ತ ಸ್ಥಾನದಲ್ಲಿ ಹಿಡಿದು ನಿಲ್ಲಿಸಿರೋದು. ಈ ಆದಿಶೇಷ ಏರುಪೇರಾದರೆ ಒಂದೋ ಭೂಮಿ ಸೂರ್ಯನೊಳಗೆ ಸೇರಿ ಹೋಗುತ್ತದೆ ಇಲ್ಲವೇ ಕಕ್ಷೆ ಬದಲಾಯಿಸಿಬಿಡುತ್ತದೆ. ಹೇಗಾದರೂ ಪ್ರಳಯ ಖಾತ್ರಿ. ಯಾವ ಜೀವಿಯೂ ಜೀವಿಸಲು ಭೂಮಿ ಯೋಗ್ಯವಾಗಿ ಉಳಿಯೋದಿಲ್ಲ.
ರಾಕ್ಷಸರ ಉಪಟಳ ಹೆಚ್ಚಾದಾಗ ಭೂದೇವಿ ಭಾರದಿಂದ ನಲುಗಿ ವಿಷ್ಣುವಿನ ಬಳಿ ಸಾಗಿ ಕಣ್ಣೀರ್ಗರೆಯುತ್ತಾಲೆಂಬುದನ್ನು ಎಲ್ಲ ಪುರಾಣಗಳಲ್ಲಿಯೂ ನೋಡುತ್ತೇವಲ್ಲ, ಅದು ಇದೇ ಆದಿಶೇಷ ಅಲುಗಾಡುವ ಪ್ರಸಂಗ. ಆಗಲೇ ಅವತಾರಗಳುದಿಸಿ ಕೆಡುಕನ್ನು ಕಡಿಮೆ ಮಾಡಿ ಭೂಮಿಯ ಶಕ್ತಿ ಹೆಚ್ಚಿಸುತ್ತಾರೆ. ರಾಮ ಕಾಡಿನಲ್ಲಿ ರಾಕ್ಷಸರ ಸಂಹಾರ ಮಾಡಿದನೆಂದರೆ ಕಾಡುಗಳ್ಳರ, ಮರ ಕಡಿಯುವವರ, ಪ್ರಾಣಿ ಹಿಂಸಕರನ್ನು ನಾಶ ಮಾಡಿದ ಎಂಬ ಅರ್ಥವೇ ಇರಬೇಕು; ಕೃಷ್ಣ ಯಮುನೆಯಲ್ಲಿ ಕಾಳಿಂಗನ ಮರ್ದಿಸಿದನೆಂದರೆ ನದಿಗೆ ವಿಷ ಕಕ್ಕುತ್ತಿದ್ದ ಜನರನ್ನು ನಾಶಗೈದಿರಬೇಕು. ಭೂಮಿಯನ್ನು ತಣಿಸಿ ಆಕೆಗೆ ಶಕ್ತಿಯನ್ನೇನೋ ಈ ರೀತಿ ತುಂಬಿಸಿದ್ದಾಯ್ತು. ಸೂರ್ಯನ ಮಾರ್ತಾಂಡರೂಪೀ ಬಲವನ್ನು ತಣಿಸುವುದು ಹೇಗೆ?
ಅದಕ್ಕೇ ಭಾರತದ ಋಷಿಗಳು ಉದಯಿಸುವ ಮತ್ತು ಅಸ್ತಮಿಸುವ ಸೂರ್ಯನಿಗೆ ಅಘ್ರ್ಯ ನೀಡುವ ಪರಂಪರೆ ತಂದರು. ಇದನ್ನೆ ಸಂಧ್ಯಾವಂದನೆ, ಸಂಧ್ಯಾ ಉಪಾಸನೆ ಎಂದು ಕರೆದರು. ತೈತ್ತಿರೀಯ ಆರಣ್ಯಕದ ಪ್ರಕಾರ ರಾಕ್ಷಸರು ಭಗವಂತನ ಕುರಿತು ತಪಸ್ಸು ಮಾಡಿ ಸೂರ್ಯನೊಡನೆ ಸದಾಕಾಲ ಕಾದಾಡುವ ವರ ಪಡೆದುಕೊಂಡರಂತೆ. ರಾಕ್ಷಸರನ್ನು ಕತ್ತಲಿಗೆ ಹೋಲಿಸುವುದಾದರೆ, ಕತ್ತಲು – ಬೆಳಕುಗಳ ಕದನವನ್ನೆ ಹಗಲು – ರಾತ್ರಿ ಎಂದು ಕರೆಯಬಹುದು ತಾನೆ? ಸಂಧ್ಯಾವಂದನೆ ಮಾಡುವಾಗ ನೀರನ್ನು ಅಭಿಮಂತ್ರಿಸಿ ತನ್ನೊಳಗಿನ ಪಾಪಪುರುಷನನ್ನು ನಾಶ ಮಾಡಿ ಪವಿತ್ರವಾಗುವ ವ್ಯಕ್ತಿ ಗಾಯತ್ರಿ ಮಂತ್ರದ ಉಚ್ಚಾರಣೆಯಿಂದಿಗೆ ಸೂರ್ಯನಿಗೆ ಅಘ್ರ್ಯ ಸಮರ್ಪಿಸುತ್ತಾನೆ. ಹೀಗೆ ಸಮರ್ಪಿಸಿದ ಅಘ್ರ್ಯವೇ ಸೂರ್ಯನಿಗೆ ವಜ್ರಕವಚದಂತೆ. ಅದರ ಮೂಲಕವೇ ಆತ ರಾಕ್ಷಸರೊಂದಿಗೆ ಕಾದಾಡಿ ಜಯಶೀಲನಾಗುತ್ತಾನಂತೆ. ಆತನ ಗೆಲುವು ನಮಗೆ ಬೆಳಕು!
ಹೌದು. ನನಗೆ ಗೊತ್ತು. ಇಷ್ಟನ್ನೂ ಕೇಳುವಾಗ ನಿಮಗೆ ನಗು ಬರುತ್ತಿರಬಹುದು. ನಾವು ಅಘ್ರ್ಯ ನೀಡದಿದ್ದರೆ ಬೆಳಕೇ ಆಗುವುದಿಲ್ಲವೇನೋ ಎಂದೂ ಕೇಳಬಹುದು. ನಾನು ಕೊಡುವ ಯಾವ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾರದು. ಆದರೆ ಒಂದಂತೂ ಸತ್ಯ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಖರ ಸೂರ್ಯ ರಷ್ಮಿಯಿಂದ ಬೆಂದು ಹೋಗಿವೆ. ಅಲ್ಲೆಲ್ಲ ಕುಡಿಯುವ ನೀರಿಗಿಂತ ಪೆಟ್ರೋಲೇ ಅಗ್ಗ. ಇನ್ನೂ ಕೆಲವು ದೇಶಗಳಲ್ಲಿ ಆತನ ಕಿರಣಗಳು ಅದೆಷ್ಟು ಕೋಮಲವೆಂದರೆ ಕುಡಿಯುವ ನೀರು ದ್ರವರೂಪದಲ್ಲಿರದೇ ಮಂಜುಗಡ್ಡೆಯಾಗಿಬಿಟ್ಟಿದೆ. ನೀರು ಬೇಕೆಂದರೆ ಮಂಜು ಕರಗಿಸಿ ಕುಡಿಯಬೇಕು.
ಭಾರತದ ಕಥೆಯೇ ಬೇರೆ. ಇಲ್ಲಿ ನದಿಗಳಿಗೆ ಕೊರತೆಯಿಲ್ಲ. ಫಲವತ್ತಾದ ಭೂಮಿಯ ಕೊರತೆಯಿಲ್ಲ. ಇಳುವರಿಯಂತೂ ಜಗತ್ತಿನ ಇತರ ಭಾಗಗಳಿಗಿಂತ ಹೆಚ್ಚು. ಏಕೆ ಹೀಗೆ? ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ನದಿಗಳು ಬತ್ತುತ್ತಿವೆ. ಭೂಮಿ ಬರಡಾಗುತ್ತಿದೆ. ಬೆಳೆಯ ಪ್ರಮಾಣ ನಿರೀಕ್ಷೆಯಷ್ಟಿಲ್ಲ. ಸೆಕೆ ತಡೆಯಲಾಗದಷ್ಟು ಹೆಚ್ಚುತ್ತಿದೆ. ಹೀಗೇಕೆ?
ವೈಜ್ಞಾನಿಕ ಬುದ್ಧಿಮತ್ತೆಯ ನೆಪದಲ್ಲಿ ಸೂರ್ಯನಿಗೆ ನಮಿಸುವ, ಭೂಮಿಯನ್ನು ತಣಿಸುವ ಆಚರಣೆಗಳನ್ನೆಲ್ಲ ಬಿಟ್ಟಿದ್ದೇ ಕಾರಣ ಇರಬಹುದಾ? ಹೌದೆಂದು ನಾನು ಹೇಳುತ್ತಿಲ್ಲ. ಪ್ರಶ್ನೆ ಕೇಳಿಕೊಂಡೆ ಅಷ್ಟೆ. ಹಾಗಂತ ಸೂರ್ಯನಿಗೆ ನಮಿಸುವ ಈ ಪರಂಪರೆ ಮೇಲ್ವರ್ಗದ ಜನರು ಹುಟ್ಟುಹಾಕಿದ್ದೆಂದು ಭಾವಿಸಬೇಡಿ. ಪ್ರಾಯಶಃ ಜಗತ್ತಿನ ಎಲ್ಲ ಬುಡಕಟ್ಟು ಜನಾಂಗಗಳೂ ಸೂರ್ಯನನ್ನು ಆರಾಧಿಸಿಯೇ ಆರಾಧಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಈಗಲೂ ಮತಾಂತರಗೊಳ್ಳದ ಜನ ಪೂಜಿಸುವುದು ‘ಡೋನ್ಯೋ – ಪೋಲೋ’ ಎಂಬ ಸೂರ್ಯ – ಚಂದ್ರರ ಕಲ್ಪನೆಯನ್ನೇ. ಆ ಸೂರ್ಯನನ್ನು ಅವರು ಹಾಡಿ ಹೊಗಳುತ್ತಾರೆ. ಅವನಿಗಾಗಿ ಹಬ್ಬ ಆಚರಿಸುತ್ತಾರೆ. ಬಲಿ ಕೊಡುತ್ತಾರೆ ಎಲ್ಲವೂ! ಹಾಗೆ ಮಾಡದ ಕೆಲವರು ಇತ್ತೀಚೆಗೆ “ನಾವು ಪರಮಾತ್ಮನಿಗೆ ಮಾತ್ರ ನಮಿಸುತ್ತೇವೆ, ಸೂರ್ಯನಿಗಲ್ಲ” ಎಂದು ಹೊಸ ವಾದ ಹುಟ್ಟುಹಾಕಿದ್ದಾರೆ. ಟಾಟಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುವವ “ನಾನು ನನ್ನ ಮ್ಯಾನೇಜರ್‍ಗೆ ಗೌರವ ಕೊಡಲಾರೆ, ರತನ್ ಟಾಟಾ ಮಾತು ಮಾತ್ರ ಕೇಳುತ್ತೇನೆ” ಎಂದರೆ ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನದ ವಾದ ಇದು. ಅಂತಹ ಕೆಲಸಗಾರನನ್ನು ರತನ್ ಟಾಟಾ ಕೂಡ ಕಂಪನಿಯಿಂದ ಕಿತ್ತೆಸೆಯುವುದರಲ್ಲಿ ಅನುಮಾಣವೇ ಇಲ್ಲ. ಏನಂತೀರಿ?
ಸೂರ್ಯನನ್ನು ಅವಜ್ಞೆ ಮಾಡುವ ಪ್ರಮೇಯವೇ ಇಲ್ಲ. ಪರಿಸರಕ್ಕೆ ಪೂರಕವಾಗಿ ಬದುಕುವುದು ಎಂದರೆ ಸೂರ್ಯನ ಗಡಿಯಾರಕ್ಕೆ ಹೊಂದಿಕೊಳ್ಳುವುದೆಂದೇ ಅರ್ಥ. ಆತ ಅಸ್ತಂಗತನಾಗುವಾಗ ಇಡಿಯ ಪ್ರಕೃತಿಯೇ ಚೈತನ್ಯಶೂನ್ಯವಾಗುತ್ತದೆ. ಪಕ್ಷಿಗಳು ಗೂಡು ಸೇರುತ್ತವೆ, ಕ್ರಿಯಾಶೀಲವಾಗಿದ್ದ ಕೀಟ – ಭ್ರಮರಗಳು ಸದ್ದು ನಿಲ್ಲಿಸುತ್ತವೆ. ಗವ್ವೆನ್ನುವ ನೀರವತೆ. ಬೆಳಗಾಗುವ ಒಂದು ತಾಸು ಮುನ್ನ ಕಾಡಿನ ಬಳಿ ಇರುವ ಯಾವುದಾದರೂ ಗುಡ್ಡವನ್ನೇರಿ ಕುಳಿತುಬಿಡಿ. ಬೆಳಗಾಗುವ ಆ ಇಡಿಯ ಪ್ರಕ್ರಿಯೆ ನೋಡಿ ನೀವು ದಂಗಾಗದಿದ್ದರೆ ಕೇಳಿ. ಆದಿತ್ಯನ ಆಗಮನದ ಮುನ್ಸೂಚನೆ ಮೊದಲು ಕೀಟಗಳಿಗೆ ದೊರೆಯುತ್ತದೆ. ಅವುಗಳ ಸದ್ದು ನಿಧಾನವಾಗಿ ಇಡಿಯ ಕಾಡನ್ನು ವ್ಯಾಪಿಸಿ ಕಾಡನ್ನು ಜುಯ್ಯೆನ್ನಿಸಿಬಿಡುತ್ತದೆ. ಒಂದೊಂದೇ ಜಾತಿಯ ಪಕ್ಷಿಗಳು ಅನುಕ್ರಮವಾಗಿ ಚಿಂವ್‍ಗುಡಲಾರಂಭಿಸುತ್ತವೆ. ರೆಕ್ಕೆ ಝಾಡಿಸಿ ಮೈಕೊಡವಿಕೊಂಡು ಆಹಾರ ಅರಸಿ ಹೊರಟೇಬಿಡುತ್ತವೆ. ಈ ಎಲ್ಲ ಪಕ್ಷಿಗಳಲ್ಲಿ ಅತ್ಯಂತ ಕೊನೆಗೆ ಕೂಗುವುದು ಕೋಳಿ. ಮನುಷ್ಯರಾದ ನಾವು ಕೋಳಿ ಕೂಗಿದ ಮೇಲೆ ಬೆಳಗಾಯ್ತು ಎನ್ನುತ್ತೇವೆ!
ಸೂರ್ಯ ಸಣ್ಣ ಕೀಟದಿಂದ ಹಿಡಿದು ಮನುಷ್ಯನವರೆಗಿನ ಪ್ರತಿಯೊಂದನ್ನೂ ತನ್ನ ಶಕ್ತಿಯಿಂದ ಪ್ರಚೋದಿಸುತ್ತಾನೆ. ನಮ್ಮೊಳಗಿನ ಪ್ರತಿಯೊಂದು ಜೀವಕೋಶಗಳೂ ಆತನಿಂದ ಪುಷ್ಟಿಗೊಳ್ಳುತ್ತವೆ. ಸೂರ್ಯನ ಬೆಳಕು – ಶಾಖದಲ್ಲಿ ಆಗುವ ಸಣ್ಣ ಏರುಪೇರುಗಳೂ ನಮ್ಮಲ್ಲಿ ಅನೇಕ ರೋಗಗಳನ್ನು ಹುಟ್ಟುಹಾಕಬಹುದು. ಋಗ್ವೇದದ ಮಂತ್ರವೊಂದು ಸೂರ್ಯನನ್ನು ಶರೀರಗತ ಬಾಹ್ಯರೋಗವನ್ನೂ ಹೃದಯದ ಅಂತರ ರೋಗವನ್ನೂ ನಾಶಗೊಳಿಸೆಂದು ಪ್ರಾರ್ಥಿಸುತ್ತದೆ. ಪ್ರಸ್ಕಣ್ವ ಋಷಿಯು ಈ ಮಂತ್ರದ ಮೂಲಕ ಚರ್ಮಸಂಬಂಧಿ ಕಾಯಿಲೆಯಿಂದ ಮುಕ್ತಗೊಂಡರಂತೆ. ಸೂರ್ಯಕಿರಣಗಳ ಕೊರತೆಯಿಂದ ವಿಟಮಿನ್ ಡಿ ನಷ್ಟವಾಗಿ ರಿಕೆಟ್ಸ್ ಕಾಯಿಲೆ ಬರುವುದೆಂದು ಪ್ರಾಥಮಿಕ ಶಾಲೆಯಲ್ಲೇ ಓದಿದ್ದೇವಲ್ಲ!
ಸೂರ್ಯ ಕಥನ ಮುಗಿಯುವಂಥದ್ದಲ್ಲ. ಯಾರು ಏನಾದರೂ ಮಾಡಿಕೊಳ್ಳಲಿ, ನಾವು ಸೂರ್ಯನಮಸ್ಕಾರಕ್ಕೆ ಅಣಿಯಾಗೋಣ, ಶತ್ರುಂಜಯರಾಗೋಣ!

Thursday 9 July 2015

ಪುರಾಣಗಳೆಂದು ಜರಿಯದಿರಿ!

ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ.
ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿಮಾಲಯದುದ್ದಕ್ಕೂ ಹರಡಿರುವ ಪರ್ವತ ಶ್ರೇಣಿಗಳು ಬೃಹತ್ತಾದ ಶಿವ ಲಿಂಗದ್ದೇ ನೆನಪು ತರುತ್ತವೆ. ಹೀಗಾಗಿಯೇ ಲಿಂಗ ಪೂಜೆಯ ಪರಿಕಲ್ಪನೆ ಭಾರತದಲ್ಲಿ ಅವತೀರ್ಣಗೊಂಡಿರಬಹುದು ಅನ್ನುತ್ತಾರೆ ಬಹುತೇಕ ವಿದ್ವಾಂಸರು. ಆದರೆ ಕ್ರಿಸ್ತಾನುಯಾಯಿ ಪಂಡಿತರನೇಕರು ಈ ಲಿಂಗ ಪೂಜೆಯನ್ನು ಶಿಶ್ನ ಪೂಜೆಯೆಂದು ಲೇವಡಿ ಮಾಡುತ್ತಾರೆ. ಅಷ್ಟೇ ಅಲ್ಲ, ಪೀಠವನ್ನು ಯೋನಿಯ ಸಂಕೇತವೆಂದು ಕರೆದು, ಲಿಂಗಪೂಜೆಯನ್ನು ಲೈಂಗಿಕ ಕ್ರಿಯೆಯ ಪ್ರತೀಕ ಎಂದುಬಿಡುತ್ತಾರೆ. ಒಂದು ಸಂಸ್ಕøತಿಯು ನಂಬಿಕೊಂಡು ಬಂದಿರುವ ಆಚರಣೆಯನ್ನು ಅವಹೇಳನ ಮಾಡುವಲ್ಲಿ ಅವರೆಂದಿಗೂ ಹಿಂದುಮುಂದು ನೋಡುವುದಿಲ್ಲ. ಆದರೆ ಭಾರತದ ಯಾವೊಬ್ಬ ಚಳವಳಿಕಾರನೂ ಶಿಲುಬೆಯೇರಿದ ಏಸುಕ್ರಿಸ್ತನನ್ನು ನಮಸ್ಕರಿಸುವ ಜನರಿಗೆ ಶವ ನಮಸ್ಕಾರ ಮಾಡುವಿರೇಕೆ ಎಂದು ಪ್ರಶ್ನಿಸುವುದಿಲ್ಲ, ಅಲ್ಲವೆ? ಅದು ಮತ್ತೆ ನಮ್ಮ ಪರಂಪರೆಯ ಪಾಠ. ಪರಮಾತ್ಮ ತತ್ತ್ವ ಎಲ್ಲೆಡೆಯೂ ಇರುವುದರಿಂದ ಎಲ್ಲ ಮಾರ್ಗಗಳೂ ಅವನನ್ನೇ ಸೇರುತ್ತವೆ ಅಂತ!
Cosmic womb
ಇರಲಿ. ಈಗ ಪ್ರಶ್ನೆ ಇರೋದು ಮಹಾಕಾಲ ಶಿವನದ್ದು. ವಿಜ್ಞಾನಿಗಳನೇಕರಿಗೆ ದೀರ್ಘಕಾಲ ಕಾಡಿದ ಮತ್ತು ಕಾಡುತ್ತಲೇ ಇರುವ ಎರಡು ಸಂಗತಿಗಳು: ಒಂದು – ಆಕಾಶ, ಮತ್ತೊಂದು- ಕಾಲ. ಭಾರತದಲ್ಲಿ ಇವೆರಡಕ್ಕೂ ಶಿವನೇ ಉತ್ತರ. ಒಂದೆಡೆ ಚಿದಂಬರದ ನಟರಾಜ ಆಕಾಶ ತತ್ತ್ವದ ಪ್ರತೀಕವಾಗಿ ನಿಂತರೆ, ಮತ್ತೊಂದೆಡೆ ಉಜ್ಜಯಿನಿಯ ಮಹಾಕಾಲ. ಜ್ಯೋತಿರ್ಲಿಂಗವೊಂದಕ್ಕೆ ಮಹಾಕಾಲವೆಂದು ಹೆಸರಿಡುವುದೇ ರೋಮಾಂಚಕಾರಿ. ಅದರಲ್ಲೂ ಅದನ್ನು ನೆಲೆಗೊಳಿಸಲಾಗಿರುವ ಉಜ್ಜಯಿನಿಗೂ ಕಾಲಕ್ಕೂ ಇರುವ ಸಂಬಂಧ ಖಗೋಳದ ದೃಷ್ಟಿಯಿಂದ ವಿಶಿಷ್ಟ. ಹೀಗಾಗಿ ಆಕಾಶ ಕಾಯಗಳ ಕುರಿತಂತೆ ಆರ್ಯಭಟ ನಡೆಸಿದ ಅಧ್ಯಯನಕ್ಕೆ ಉಜ್ಜಯಿನಿಯೇ ಕೇಂದ್ರವಾಗಿತ್ತು. ಪ್ರಾಚೀನ ಭಾರತದಲ್ಲಿ ಕಾಲ ಗಣನೆಯ ಕೇಂದ್ರವಾಗಿದ್ದೂ ಉಜ್ಜಯಿನಿಯೇ. ಇಂದು ನಾವು ನಮ್ಮ ಮೊಬೈಲುಗಳಲ್ಲಿ ಗಡಿಯಾರ ಹೊಂದಿಸುವಾಗ ಆರಂಭದಲ್ಲಿ ಕೋಲ್ಕೊತ್ತಾಕ್ಕೋ ದೆಹಲಿಗೋ ಐಎಸ್‍ಟಿ ಹೊಂದಾಣಿಕೆ ಮಾಡುವುದಿಲ್ಲವಾ? ಹಾಗೆ ಇಡಿಯ ಭರತ ವರ್ಷದ ಕಾಲ ನಿರ್ಣಯ ಉಜ್ಜಯಿನಿಯ ಸಮಯಕ್ಕೆ ಹೊಂದಾಣಿಕೆಯಾಗಿರುತ್ತಿತ್ತಂತೆ. ಹೀಗಾಗಿ ಆತ ಮಹಾಕಾಲ!
ಹೀಗೆ ಅಕ್ಷಾಂಶ – ರೇಖಾಂಶಗಳಿಗೆ ಅನುಗುಣವಾಗಿ ಸಮಯ ಬೇರೆಬೇರೆ ಇರುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ಯಾವಾಗಲೋ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕಾಲ ನಾವು ನಿರ್ಧರಿಸಿದಂತೆ ಎಲ್ಲೆಡೆ ಅನ್ವಯವಾಗುವುದಿಲ್ಲ, ಬೇರೆ ಬೇರೆ ಗ್ರಹಗಳಲ್ಲಿ ಕಾಲಗತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದನ್ನೂ ನಮ್ಮವರು ಅರಿತಿದ್ದರು. ಸ್ವಲ್ಪ ಗೊಂದಲವೆನ್ನಿಸುತ್ತಿದೆಯೇ? ವಿವರಿಸುತ್ತೇನೆ ಇರಿ.
ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ಹಗಲು, ಉಳಿದದ್ದು ರಾತ್ರಿ ತಾನೆ? ಹಾಗೆ ಬೇರೆಬೇರೆ ಗ್ರಹಗಳು ತನ್ನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಧಿ ಬೇರೆಬೇರೆ. ಅಲ್ಲಿ ನಾವು ಕೈಗೆ ಕಟ್ಟಿಕೊಂಡ ಗಡಿಯಾರ ಉಪಯೋಗಕ್ಕೆ ಬರುವುದಿಲ್ಲ. ಬುಧ ತನ್ನ ಕಕ್ಷೆಯ ಮೇಲೆ ವೇಗವಾಗಿ ತಿರುಗಿದರೆ, ಶನಿ, ಯುರೇನಸ್, ನೆಪ್ಚೂನ್‍ಗಳೆಲ್ಲ ಬಲು ನಿಧಾನವಾಗಿ ಸುತ್ತುತ್ತವೆ. ಭೂಮಿಯ ಮೇಲೆ ನಿಮಗೆ 35 ವರ್ಷ ಅಂತ ಭಾವಿಸಿ. ನಿಮ್ಮೊಡನೆ ಶುಕ್ರನ ಮೇಲೆ ಹುಟ್ಟಿದವನಿಗೆ 57 ವರ್ಷವಾಗಿರುತ್ತದೆ. ಆಥ ನೀವು ಇಲ್ಲಿ ಹುಟ್ಟಿದಾಗ ಬುಧನ ಮೇಲೆ ಹುಟ್ಟಿದರೆ ಅವನ ಈಗಿನ ಆಯಸ್ಸು 145 ವರ್ಷಗಳು! ಚಕಿತಗೊಳಿಸುವ ಸಂಗತಿಯೆಂದರೆ, ಯುರೇನಸ್, ನೆಪ್ಚೂನ್, ಫ್ಲೂಟೋಗಳ ಮೇಲೆ ಅವನಿಗಿನ್ನೂ ಒಂದು ವರ್ಷವೂ ತುಂಬಿರುವುದಿಲ್ಲ! ಸೂರ್ಯನನ್ನು ಗ್ರಹಗಳು ಸುತ್ತುವ ಕಾಲವನ್ನು ವರ್ಷವೆಂದು ಕರೆದರೆ, ಪಾಫ, ಅತ್ಯಂತ ದೂರದಲ್ಲಿರುವ ಈ ಗ್ರಹಗಳು ಒಂದು ಸುತ್ತು ಬರುವುದರೊಳಗೆ ಅದೆಷ್ಟೋ ಭೂ ವರ್ಷಗಳು ಕಳೆದು ಬಿಟ್ಟಿರುತ್ತವೆ!
ಇನ್ನು, ಊಹಿಸಿಯೇ ರೋಮಾಂಚನಗೊಳ್ಳುವಂಥ ಸಂಗತಿಯೊಂದಿದೆ. ಅದೇನು ಗೊತ್ತಾ? ನೀವು ಹುಟ್ಟಿದಾಕ್ಷಣ ಹೇಗೋ ಯುರೇನಸ್ ತಲುಪಿಕೊಂಡುಬಿಟ್ಟರೆ, ನಿಮಗೆ ಎರಡು ವರ್ಷ ತುಂಬಿ ಮರಳಿದಾಗ ನಿಮ್ಮೊಡನೆ ಹುಟ್ಟಿದವರಿಗೆ ಇಲ್ಲಿ 70 ವರ್ಷವಾದರೂ ಆಗಿರುತ್ತದೆ. ಅಂದರೆ, ಅವರ 70 ವರ್ಷ ನಿಮ್ಮ ಎರಡು ವರ್ಷಕ್ಕೆ ಸಮ!
ಭಾರತೀಯ ಶಾಸ್ತ್ರಗಳು ಬಲು ಹಿಂದೆಯೇ ಇದನ್ನು ಅರಗಿಸಿಕೊಂಡು ಸಮರ್ಥವಾಗಿ ಪ್ರತಿಪಾದಿಸಿದ್ದವು. ಕೆಲವೊಂದು ಮತಗಳು ಭೂಮಿಯ ಹುಟ್ಟಿನ ನಿಖರ ದಿನಾಂಕ ಹೇಳಿ ಅಪಹಾಸ್ಯಕ್ಕೀಡಾದರೆ, ಇನ್ನೂ ಕೆಲವು ಕೊನೆಗಾಲ ಬಂತೆಂದು ಬೊಬ್ಬೆ ಹೊಡೆದು ಲೇವಡಿಗೊಳಗಾಗಿವೆ. ಆದರೆ ಸನಾತನ ಧರ್ಮ ಮಾತ್ರ ಮಹಾಕಾಲದ ಕಲ್ಪನೆಯನ್ನು ಬಲು ಚುರುಕಾಗಿ ಕಟ್ಟಿಕೊಟ್ಟಿದೆ.
ಮನುಷ್ಯನ ದಿನಮಾನಕ್ಕಿಂತಲೂ ದೀರ್ಘ ದೇವತೆಗಳ ದಿನಮಾನಗಳು. ಅವಕ್ಕಿಂತಲೂ ದೀರ್ಘ ಬ್ರಹ್ಮನ ದಿನ – ರಾತ್ರಿಗಳು. ಬ್ರಹ್ಮನಿಗೆ ನೂರು ವರ್ಷಗಳಾದಾಗ ಪ್ರಳಯವಂತೆ. ಅಲ್ಲಿಗೆ ಎಲ್ಲವೂ ಸ್ತಬ್ಧ. ಆದರೆ ಮಹಾಕಾಲನ ಚಟುವಟಿಕೆ ನಡೆದೇ ಇರುತ್ತದೆ. ಆತನ ಕಾರಣದಿಂದಾಗಿ ನಟರಾಜ ಜಾಗೃತವಾಗಿ ಢಮರು ನಿನಾದವಾಗುತ್ತದೆ. ಪರಬ್ರಹ್ಮ ತತ್ತ್ವ ಸೃಷ್ಟಿಕಾರ್ಯಕ್ಕೆ ಅಣಿಯಾಘುತ್ತದೆ! ಒಟ್ಟೂ ಸೃಷ್ಟಿ ರಹಸ್ಯದ ಅಸ್ಥಿಪಂಜರವಿದು.
ಈಗ ಕಾಲಗಣನೆಯತ್ತ ಹೊರಳೋಣ. ವಿಷ್ಣು ಪುರಾಣದ ಪ್ರಕಾರ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟು ಸಮಯವನ್ನು ನಿಮೇಷ ಎನ್ನಲಾಗುತ್ತದೆ. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಂದ ಒಂದು ಕಾಲ. 30 ಕಾಲಗಳಿಂದ ಒಂದು ಮುಹೂರ್ತ. ಇಂತಹ 30 ಮುಹೂರ್ತಗಳಿಂದ ಒಂದು ದಿನ. ಅಂದರೆ ಒಟ್ಟಾರೆ ಹಗಲು ರಾತ್ರಿ. ಆಮೇಲಿನದ್ದು ನಾವಂದುಕೊಂಡಂತೆ 30 ದಿನಗಳಿಗೆ ಒಂದು ಮಾಸ, ಆರು ಮಾಸಗಳಿಗೊಂದು ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ). ಈ ರೀತಿಯ ಎರಡೂ ಅಯನಗಳು ಸೇರಿ ನಮ್ಮ ಒಂದು ವರ್ಷ!
ನಮಗೆ ಒಂದು ವರ್ಷ , ದೇವತೆಗಳಿಗೆ ಒಂದು ದಿನ. ಉತ್ತರಾಯಣ ದೇವತೆಗಳ ಹಗಲು, ದಕ್ಷಿಣಾಯನ ಅವರ ರಾತ್ರಿ. ನಮಗೆ 360 ವರ್ಷಗಳಾದಾಗ ದೇವತೆಗಳಿಗೆ ಒಂದು ವರ್ಷ! ಅದನ್ನು ದಿವ್ಯ ವರ್ಷವೆಂದು ಕರೆಯಲಾಗಿದೆ.
ನನಗೆ ಗೊತ್ತು. ಅನೇಕರು ಅದಾಗಲೇ ಲೆಕ್ಕಾಚಾರ ಬಿಡುವ ಹಂತದಲ್ಲಿದ್ದಾರೆ. ಈ ಲೆಕ್ಕಗಳು ಸುಲಭವಾಗಲೆಂದೇ ದಿವ್ಯವರ್ಷ ಬಳಸಿದ್ದು. ನಾವು ನಾಲ್ಕು ಯುಗಗಳನ್ನು ಗುರುತಿಸುತ್ತೇವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಕೃತಯುಗದ ಅವಧಿ ನಾಲ್ಕು ಸಾವಿರ ದಿವ್ಯ ವರ್ಷಗಳು. ಅದಕ್ಕೆ ಪೂರ್ವ ಸಂಧ್ಯೆ ಹಾಗೂ ಸಾಯಂ ಸಂಧ್ಯೆಗಳು ತಲಾ 400 ವರ್ಷಗಳದ್ದು. ಒಟ್ಟಾರೆ 4,800 ದಿವ್ಯ ವರ್ಷಗಳು. ಒಂದೊಂದು ಯುಗಕ್ಕೂ ಈ ಸಂಖ್ಯೆ ಕಡಿಮೆಯಾಗುತ್ತ ಬಂದು, ಕಲಿಯುಗಕ್ಕೆ ಈ ಪ್ರಮಾಣ ಒಂದು ಸಾವಿರ ದಿವ್ಯ ವರ್ಷಗಳು, ಜೊತೆಗೆ ನೂರು – ನೂರು ವರ್ಷಗಳ ಪೂರ್ವ ಹಾಗೂ ಸಾಯಂ ಸಂಧ್ಯೆಗಳು ಸೇರಿದರೆ ಒಟ್ಟಾರೆ 1,200 ದಿವ್ಯ ವರ್ಷಗಳು. ಬರೋಬ್ಬರಿ ನಮ್ಮ ಲೆಕ್ಕದ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು!! ಇವುಗಳಲ್ಲಿ ನಾವಿನ್ನೂ ಐದು ಸಾವಿರ ವರ್ಷ ದಾಟಿರಬಹುದಷ್ಟೇ. ಕಲಿಯುಗದ ದೀರ್ಘ ಪಯಣಬಾಕಿ ಇದೆ. ಸದ್ಯಕ್ಕಂತೂ ಪ್ರಳಯದ ಮುನ್ಸೂಚನೆ ಇಲ್ಲ!
ಹಾ! ಮತ್ತೆ ಲೆಕ್ಕಾಚಾರಕ್ಕೆ ಬನ್ನಿ. ನಾಲ್ಕು ಯುಗಗಳ ಒಂದು ಚಕ್ರ, 12 ಸಾವಿರ ದಿವ್ಯ ವರ್ಷಗಳದ್ದಲ್ಲವೆ? ಇದು ಸಾವಿರ ಬಾರಿ ತಿರುಗಿ ಬಂದರೆ ಬ್ರಹ್ಮನ ಒಂದು ಹಗಲು. ಎರಡು ಸಾವಿರ ಬಾರಿ ಆದರೆ ಆತನ ಒಟ್ಟಾರೆ ಒಂದು ದಿನ. ಇಂತಹ ದಿನಗಳು, ಮಾಸಗಳು, ವರ್ಷಗಳು ಕಳೆಯಬೇಕು. ಬ್ರಹ್ಮನಿಗೆ ಹೀಗೆ ನೂರು ವರ್ಷಗಳಾದಾಗ ಅದು ಪರಮಾಯಸ್ಸಂತೆ. ಮತ್ತೊಂದು ಹೊಸ ಸಋಷ್ಟಿಗೆ ಮುನ್ನದ ಮಹಾ ಪ್ರಳಯ ಕಾಲ ಅದು.
ಒಟ್ಟಾರೆ ಲೆಕ್ಕಾಚಾರ 8.64 ಟ್ರಿಲಿಯನ್ ವರ್ಷ ಭೂಮಿಯ ಆಯಸ್ಸು ಎಂದಾದರೆ, ಅದರಲ್ಲಿ ಈಗಾಗಲೇ ಪರಾರ್ಧವೆಂಬ ಬ್ರಹ್ಮನ ಅರ್ಧ ಆಯಸ್ಸು ಮುಗಿದಿದೆ. ಅಲ್ಲಿಗೆ, 4.32 ಅರಿಲಿಯನ್ ವರ್ಷಗಳು ಕಳೆದುಹೋಗಿವೆ. ನನಗೆ ಗೊತ್ತು. ಈ ಸಂಖ್ಯೆಯನ್ನು ನಮ್ಮಲ್ಲಿ ಕೆಲವರು ಗಾಬರಿಯಿಂದ ಗಮನಿಸುತ್ತಾರೆ. ಕೆಲವರು ಇದನ್ನು ಪುರಾಣವೆಂದು ತಳ್ಳಿ ಹಾಕಿದರೆ, ಇನ್ನೂ ಕೆಲವರು ಈ ಸಂಖ್ಯೆಯನ್ನು ಊಹಿಸಿಕೊಳ್ಳಲಾಗದೆ ಹೆಣಗುತ್ತಾರೆ.
ಇಷ್ಟೆಲ್ಲ ಓದಿಕೊಂಡ ಮೇಲೂ 2ಜಿ ಹಗರಣದ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇಂದಿನ ದಿನಮಾನದಲ್ಲೆ ಹೆಣಗಾಡುತ್ತಿರುವಾಗ, ಋಷಿಗಳ ಕಾಲದಲ್ಲಿ ಅಷ್ಟು ದೊಡ್ಡ ಸಂಖ್ಯೆಯನ್ನು ಲೀಲಾಜಾಲವಾಗಿ ಬಳಕೆ ಮಾಡಿ ಕಾಲ ಗಣನೆ ಮಾಡುತ್ತಿದ್ದರಲ್ಲ, ಆ ಸಾಮಥ್ರ್ಯದ ಕುರಿತು ಒಮ್ಮೆ ಆಲೋಚಿಸಿ. \
ಆಧುನಿಕ ವಿಜ್ಞಾನ ಇದಕ್ಕೆ ಹೊರತಾಗಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ವಿಲಿಯಂ ಥಾಮ್ಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ, ಭೂಮಿ ಹುಟ್ಟಿ 20ರಿಂದ 400 ದಶಲಕ್ಷ ವರ್ಷಗಳಾಗಿರಬಹುದು ಎಂದು ಅಂದಾಜಿಸಿದ. ಬಹುಶಃ ಆಗಿನ ಕಾಲಕ್ಕೆ ಇದೇ ದೊಡ್ಡ ಗಣನೆಯಾಗಿರಲಿಕ್ಕೆ ಸಾಕು. ಭೂಗರ್ಭ ಶಾಸ್ತ್ರಜ್ಞ ಚಾಲ್ರ್ಸ ಲಿಲ್ ಇದನ್ನೊಪ್ಪಲು ಸಿದ್ಧವಿರಲಿಲ್ಲ. ಜೀವ ವಿಜ್ಞಾನಿಗಳಿಗಂತೂ ಇಷ್ಟು ಕಡಿಮೆ ಅವಧಿಯಲ್ಲಿ ಜೀವ ವಿಕಾಸ ಪ್ರಕ್ರಿಯೆ ನಡೆದಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ಭೂಮಿಯ ಉಗಮದ ಕಲ್ಪನೆಯೂ ವಿಸ್ತಾರವಾಯಿತು. ವಿಕಿರಣ ಶಾಸ್ತ್ರದ ಅನ್ವಯಗಳಿಂದ ಭೂಮಿಯ ಹುಟ್ಟಿನ ಅಧ್ಯಯನ ಮಾಡಲಾಯ್ತು. ಆರ್ಥರ್ ಹೋಮ್ಸ್, ಪ್ರಾಚೀನವೆನ್ನುವ ಒಂದಷ್ಟು ಕಲ್ಲುಗಳ ಅಧ್ಯಯನ ನಡೆಸಿ, ಭೂಮಿ ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದ. ಮತ್ತೆ ಸಾಕಷ್ಟು ಸಂಶೋಧನೆಗಳು, ಚರ್ಚೆಗಳು ನಡೆದು ಆಧುನಿಕ ರೇಡಿಯೋ ಮೆಟ್ರಿಕ್ ವಿಧಾನದಿಂದ ಹಳೆಯ ಪರ್ವತ ಶ್ರೇಣಿಗಳ ಅಧ್ಯಯನ ನಡೆಸಿದಾಗ ನಾಲ್ಕೂವರೆ ಬಿಲಿಯನ್ ವರ್ಷಗಳೆಂದು ಅಂದಾಜಿಸಲಾಯ್ತು. ವಿಜ್ಞಾನದ ಹೊಸ ಶಾಖೆ ಅಧ್ಯಯನಕ್ಕೆ ಅತ್ಯಾಧುನಿಕ ಮಾರ್ಗ ತೋರುವವರೆಗೂ ಅವರೆಲ್ಲ ಇದನ್ನು ನಂಬುತ್ತಾರೆ.
ಹಾ! ಅಂದಹಾಗೆ ನಾವು ಪುರಾಣಗಳಲ್ಲಿ ಯಾವುದನ್ನು ಬ್ರಹ್ಮನ ಒಂದು ದಿನವೆಂದು ಕರೆದೆವೋ ಅದು ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ತನ್ನ ಅಕ್ಷದ ಸುತ್ತ ತಾನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಕಾಲವೆಂದು ವಿಜ್ಞಾನದ ಲೆಕ್ಕಾಚಾರವಂತೆ. ಹೀಗೇ ಅದು ವಿಶ್ವದ ಕೇಂದ್ರವಾದ ಪರಬ್ರಹ್ಮನನ್ನು ಒಂದು ಸುತ್ತು ಬಂದರೆ ಒಂದು ವರ್ಷ ಇರಬಹುದು. ಈ ರೀತಿಯ ನೂರು ವರ್ಷಗಳು ವಿಶ್ವದ ಆಯಸ್ಸೆಂಬುದು ನಮ್ಮ ಅಂದಾಜಾ? ಗೊತ್ತಿಲ್ಲ.
ವಿಜ್ಞಾನಕ್ಕೆ ಎಲ್ಲ ಗೊತ್ತಿದೆ. ಅದು ಹೇಳಿದ್ದು ಮಾತ್ರ ಸತ್ಯವೆಂದು ನಂಬುತ್ತೇವಲ್ಲ; ಮೂಢ ನಂಬಿಕೆಗಳಲ್ಲಿ ಅದೂ ದೊಡ್ಡದ್ದೇ. ವಿಜ್ಞಾನ ಅನೇಕ ವಿಚಾರಗಳಲ್ಲಿ ಕೈಚೆಲ್ಲಿ ಸುಮ್ಮನಾಗುತ್ತದೆಯಷ್ಟೇ ಅಲ್ಲ, ತಾನೇ ಹಿಂದೆ ಸಾಬೀತುಪಡಿಸಿ ಸತ್ಯವೆಂದು ಸಾರಿದ್ದನ್ನು ಅಲ್ಲಗಳೆದು ಗೊಂದಲವೆಬ್ಬಿಸಿಬಿಡುತ್ತದೆ.
ಅದಕ್ಕೇ ಹಳೆಯದನ್ನೆಲ್ಲ ಪುರಾಣವೆಂದು ಜರಿಯಬೇಡಿ. ಹೊಸತು ವಿಜ್ಞಾನವೆಂದು ಹಿಗ್ಗಿಬಿಡಬೇಡಿ. ಮಧ್ಯೆ ನಿಂತು ಹಂಸದಂತೆ ಹಾಲಿನಿಂದ ನೀರು ಬೇರೆ ಮಾಡಿ ಹಾಲನ್ನು ಸೇವಿಸಿ, ಅಷ್ಟೇ. ಭಾರತ ಅದನ್ನು ಹೇಳಿದ್ದಲ್ಲದೆ, ಆಚರಿಸಿತು ಕೂಡ. ಹೀಗಾಗಿಯೇ ಅದು ವಿಶ್ವಗುರು!

Tuesday 7 July 2015

ನಟರಾಜ ನರ್ತನದ ಚಿದಂಬರ ರಹಸ್ಯ!

‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” ಎಂದು. ಅದಕ್ಕೇ ಇಂದ್ರಿಯಗಳನ್ನು ನಿಗ್ರಹಿಸಿ, ಬುದ್ಧಿಯಡಿ ಮನಸ್ಸನ್ನು ತಂದು ಸಾಧನೆಗೆ ಅಣಿಯಾಗುವ ಮಾರ್ಗಗಳನ್ನು ಅವರು ಸಂಶೋಧಿಸಿದ್ದು. ಈ ಹುಡುಕಾಟದ ಹಿಂದೆ ಬಿದ್ದುದರಿಂದಲೇ ಸೃಷ್ಟಿಯ ಅಪರೂಪದ ಸತ್ಯಗಳು ಅವರೆದುರಿಗೆ ತೆರೆದುಕೊಂಡವು. ಈ ಸತ್ಯಗಳನ್ನು ಜಗದೆದುರಿಗೆ ಒಪ್ಪಿಸುವ ಪದಕೋಶಗಳೇ ಇರಲಿಲ್ಲ. ಹೇಳಿದರೆ ಅರ್ಥೈಸಿಕೊಳ್ಳುವವರೂ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಆ ಪರಮ ಸತ್ಯ ಗೋಚರವಾದೊಡನೆ ಅದರಲ್ಲಿ ಲೀನವಾದ ಪ್ರತಿಯೊಬ್ಬ ಋಷಿಯೂ ಮೌನಿಯಾಗಿಬಿಟ್ಟ. ಹಾಗೆಂದೇ ಅದನ್ನು ವಿವರಿಸಲಾಗದು; ಅನುಭವಿಸಬೇಕು ಎನ್ನಲಾಯ್ತು. ಕೇನೋಪನಿಷತ್ತು ಮುಂದುವರಿದು, “ಮಾತಿನಿಂದ ವಿವರಿಸಲಾಗದ್ದು, ಯಾವುದರಿಂದ ಮಾತು ಹುಟ್ಟಿತೋ ಅದು; ಯಾವುದನ್ನು ಮನಸ್ಸಿನಿಂದ ತಿಳಿಯಲಾಗದೋ, ಯಾವುದು ಮನಸ್ಸನ್ನೇ ಅರಿತುಕೊಂಡಿದೆಯೋ ಅದು ಬ್ರಹ್ಮ” ಎಂದಿತು.
ಸೃಷ್ಟಿಯ ಈ ರಹಸ್ಯವನ್ನು ಜನ ಸಾಮಾನ್ಯರೆದುರಿಗೆ ಮುಟ್ಟಿಸಬೇಕೆಂಬ ಪ್ರಯತ್ನಕ್ಕೇ ಭಾಷೆ ಹುಟ್ಟಿತು, ಪರಿಷ್ಕರಣಗೊಂಡಿತು. ಕಲೆ ಭಿನ್ನ ವಿಭಿನ್ನ ರೂಪ ಪಡಕೊಂಡಿತು. ಆಚರಣೆಗಳು ರೂಪುಗೊಂಡವು. ಮಂತ್ರಗಳು, ಅರ್ಥಗಳು, ವ್ಯಾಖ್ಯಾನಗಳು, ಆಚಾರ್ಯರು, ಗುರುಗಳು, ಮಂದಿರಗಳು, ಯೋಗ – ಪ್ರಾಣಾಯಾಮ ಮೊದಲಾದವೆಲ್ಲವೂ ಆ ಸೃಷ್ಟಿ ರಹಸ್ಯವನ್ನು, ಪರಬ್ರಹ್ಮ ತತ್ತ್ವವನ್ನೂ ಅರಿಯುವ ಮಹಾ ಪ್ರಯಾಸಕ್ಕಾಗಿ ರೂಪುಗೊಂಡಂಥವೇ.
ವಿಜ್ಞಾನಿಗಳು ದೊಡ್ಡ ದೊಡ್ಡ ಪ್ರಯೋಗ ಶಾಲೆಗಳನ್ನು ಕಟ್ಟಿದರು.  ಋಷಿಗಳು ಮನಸ್ಸನ್ನೆ ಪ್ರಯೋಗಶಾಲೆಯನ್ನಾಗಿಸಿ ಹುಡುಕಾಟ ನಡೆಸಿದರು. ವಿಜ್ಞಾನಿಗಳು ಇಂದ್ರಿಯಗಳ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಂತ್ರಗಳ ಆವಿಷ್ಕಾರ ಮಾಡಿದರು. ಋಷಿಗಳು ಇಂದ್ರಿಯಗಳನ್ನೇ ಹಿಡಿತಕ್ಕೆ ತಂದುಕೊಂಡು ಅಗೋಚರ ಸತ್ಯಗಳ ದರ್ಶನ ಮಾಡಿಕೊಂಡರು. ಹೀಗಾಗಿಯೇ ಭಾರತದ ವಿಚಾರ ಬಂದೊಡನೆ ಜಗತ್ತಿನ ಅನೇಕರು ನಿಬ್ಬೆರಗಾಗಿ ಕರಗಿ ಹೋಗುವುದು! cern-nataraja
ಪ್ರಯೋಗಾಲಯವೊಂದರಲ್ಲಿ ಆಕಾಶಕಾಯಗಳ ವೀಕ್ಷಣೆಗೆ ಬಳಸುವ ದೂರದರ್ಶಕವೊಂದರ ನಿರ್ಮಾಣಕ್ಕೆ, ಮಸೂರಗಳ ಜೋಡಣೆಗೆ ಎಷ್ಟು ಎಚ್ಚರಿಕೆ ವಹಿಸುತ್ತಾರೆ ಗೊತ್ತೆ? ಅತಿ ಸೂಕ್ಷ್ಮ ಬದಲಾವಣೆಯೂ ಲೆಕ್ಕಾಚಾರದಲ್ಲಿ ಬಲುದೊಡ್ಡ ಏರುಪೇರು ಉಂಟು ಮಾಡಬಲ್ಲದು. ಅದು ಬಿಡಿ. ಮನೆಯ ಮೇಲೆ ಬಗೆಬಗೆಯ ಚಾನೆಲ್ ವೀಕ್ಷಣೆಗೆಂದು ಕೂರಿಸಿರುವ ಡಿಶ್ – ಆಂಟೆನಾ ಒಂದು ಡಿಗ್ರಿಯಷ್ಟು ತಿರುಗಿದರೂ ಉಪಗ್ರಹ ಸಂದೇಶ ಸ್ವೀಕರಿಸಲಾರದು. ಅಂದಮೇಲೆ, ಋಷಿಗಳ ಪ್ರಯೋಗಶಾಲೆಯಾದ ಮನಸ್ಸೂ ಹಾಗೇ ತಾನೆ? ಅದಕ್ಕಾಗಿ ಅವರು ಒಂದಿನಿತೂ ವಿಚಲಿತವಾಗದಂತೆ ಮನಸ್ಸನ್ನು ರೂಪುಗೊಳಿಸುವ ಸಾಹಿತ್ಯ ರಚಿಸಿದರು. ಹಳಿ ತಪ್ಪಿದ್ದನ್ನು ಸರಿ ದಾರಿಗೆ ತರುವ ಮಾರ್ಗ ಹಾಕಿಕೊಟ್ಟರು. ಹೀಗಾಗಿಯೇ ಇಲ್ಲಿನ ಸಾಹಿತ್ಯಗಳಲ್ಲಿ ಜಗತ್ತಿನ ಬೇರೆಲ್ಲ ಮತಗ್ರಂಥಗಳಿಗಿಂತ ಹೆಚ್ಚು ನೈತಿಕ ಸಂಗತಿಗಳು ರಾರಾಜಿಸೋದು.
ಸುಮ್ಮನೆ ವಿಷ್ಣುಪುರಾಣದ ಏಳನೆ ಅಧ್ಯಾಯ ನೋಡಿ. ಧರ್ಮವನ್ನು ವರಿಸಿದ ಶ್ರದ್ಧೆಗೆ ಕಾಮವು ಸಂತಾನವಂತೆ; ಧರ್ಮವನ್ನು ಮದುವೆಯಾದ ಲಕ್ಷ್ಮಿಗೆ ದರ್ಪವು ಪುತ್ರನಂತೆ! ಅರ್ಥ ಬಲು ಸ್ಪಷ್ಟ. ಧರ್ಮ ಮಾರ್ಗದಲ್ಲಿ ನಡೆಯುವ ಶ್ರದ್ಧಾವಂತನ ಕಾಮನೆಗಳು ಪೂರ್ಣಗೊಳ್ಳುತ್ತವೆ. ಹಾಗೆಯೇ ಲಕ್ಷ್ಮಿ, ಧರ್ಮ ಮಾರ್ಗದಲ್ಲಿರುವವರಿಗೂ ದರ್ಪ ತರಿಸುತ್ತಾಳೆ. ಆದ್ದರಿಂದ ಎಚ್ಚರವಾಗಿರಬೇಕು ಎಂದು. ಧರ್ಮಕ್ಕೆ, ಶ್ರದ್ಧೆಗೆಲ್ಲ ಇಲ್ಲಿ ರೂಪವನ್ನು ಆರೋಪಿಸಿರುವುದು ಕೇಳುಗರಿಗೆ ಸದಾ ನೆನಪಿರಲಿ ಮತ್ತು ಅರ್ಥೈಸಿಕೊಳ್ಳಲು ಸುಲಭವಿರಲಿ ಎಂಬ ಕಾರಣದಿಂದಷ್ಟೇ. ಮುಂದೆ ಕಲೆಗಾರರು ಇದಕ್ಕೆ ಚಿತ್ರ ಬರೆದು, ಹಾಡುಗಾರ ಹಾಡು ಕಟ್ಟಿ ಹಾಡಿಬಿಟ್ಟರೆ ಮತ್ತೊಬ್ಬ ದೇವರು ಸೃಷ್ಟಿಯಾದಂತೆ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ದೇವರೂ ಇಂತಹದೇ ತತ್ತ್ವವೊಂದರ ವ್ಯಕ್ತ ರೂಪ. ಜ್ಞಾನ ಅನ್ನೋದಕ್ಕೆ ಸರಸ್ವತಿಯ ರೂಪ ಕೊಟ್ಟರು. ಆಕೆಯ ಕೈಲಿ ಜಪಮಣಿ, ಪುಸ್ತಕವಿಟ್ಟು ಬಂಡೆಗಲ್ಲಿನ ಮೇಲೆ ಕೂರಿಸಿದರು. ಜ್ಞಾನ ಸಂಪಾದನೆಗೆ ದೇಹ ಸುಖ ತ್ಯಾಗ ಮಾಡಬೇಕೆಂಬ ಕಲ್ಪನೆ ಅದು. ಎಲ್ಲ ಸೃಷ್ಟಿಯ ಮೂಲ ಸತ್ವಕ್ಕೆ ನಾರಾಯಣನ ರೂಪ ಕೊಟ್ಟರು. ಸೃಷ್ಟಿಯೇ ಅವನದ್ದಿರುವಾಗ ಇನ್ನು ಸಂಪತ್ತು – ಕೀರ್ತಿ ಎಲ್ಲವೂ ಅವನ ಕಾಲಬುಡದಲ್ಲಿಯೇ ತಾನೆ? ಅದಕ್ಕೆಂದೇ ಲಕ್ಷ್ಮಿಗೆ ನಾರಾಯಣನ ಪಾದಗಳ ಬಳಿ ಜಾಗವಾಯ್ತು.
ನಾವು ಕಲಾವಿದ ಚಿತ್ರಿಸಿದ ರೂಪವನ್ನು ಬಿಗಿಯಾಗಿ ಹಿಡಿದುಕೊಂಡೆವು; ವೇದಗಳು ಹೇಳಿದ ಸೃಷ್ಟಿ ತತ್ತ್ವವನ್ನು ನಮಗೆ ಅರ್ಥ ಮಾಡಿಸಲು ಹೆಣೆಯಲಾದ ಲೌಕಿಕ ಕಥೆಗಳನ್ನು ನೆಚ್ಚಿಕೊಂಡೆವು. ಮೂಲ ತತ್ತ್ವವನ್ನೆ ಮರೆತುಬಿಟ್ಟೆವು. ಹೀಗಾಗಿಯೇ ಅನೇಕ ಗೊಂದಲಗಳು ಸೃಷ್ಟಿಯಾದವು. ಈ ಗೊಂದಲಗಳ ಲಾಭವನ್ನು ಆಕ್ರಮಣಕಾರರಾಗಿ ಬಂದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರು ಅಷ್ಟೇ. ಆದರೆ ಈಗಲೂ ಸೃಷ್ಟಿ ರಚನೆಯ ವಿಜ್ಞಾನ ಅರಿಯಲು ಪ್ರಯತ್ನಿಸುವ ಪ್ರತಿಯೊಬ್ಬ ವಿಜ್ಞಾನಿಯೂ ಭಾರತೀಯ ಸಾಹಿತ್ಯಗಳಲ್ಲಿ ಹುದುಗಿ, ಹಾಸುಹೊಕ್ಕಾಗಿರುವ ತತ್ತ್ವಸಾರವನ್ನು ಗ್ರಹಿಸಿ ಹುಬ್ಬೇರಿಸುತ್ತಾನೆ.
ಯಾವುದನ್ನೂ ಆಧಾರವಿಲ್ಲದೆ ಹೇಳುತ್ತಲೇ ಇಲ್ಲ. ಕೆಲವು ವರ್ಷಗಳ ಹಿಂದೆ ದೇವಕಣದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆದಿದ್ದು ನಿಮಗೆಲ್ಲ ನೆನಪಿರಬೇಕಲ್ಲ? ಅದಕ್ಕೆ ಪೂರಕವಾದ ಪ್ರಯೋಗ ನಡೆದ ಸ್ಥಳ ಸಿಇಆರ್‍ಎನ್ (ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ ಹೊರಗೆ 2003 – 2004ರಲ್ಲಿ ಭಾರತ ಸರ್ಕಾರ ಕೊಡುಗೆಯಾಗಿ ಕೊಟ್ಟ ಎರಡು ಮೀಟರ್ ಎತ್ತರದ ನಟರಾಜ ವಿಗ್ರಹ ಇಡಲಾಗಿದೆ. ನಮಗೆ ನಟರಾಜನ ಆ ವಿಗ್ರಹ ಬೇರೆಲ್ಲ ಮೂರ್ತಿಗಳಂತೆ ಸಾಮಾನ್ಯ. ಆದರೆ ವಿಜ್ಞಾನಿಗಳು ಅದರ ಹಿಂದಿನ ತತ್ತ್ವವನ್ನು ಅರಿತು ಅಚ್ಚರಿಯಿಂದ ದಿಟ್ಟಿಸುತ್ತಾರೆ.
ಫ್ರಿಟ್ಜೋ ಕಾಪ್ರಾ ಎನ್ನುವ ಭೌತ ವಿಜ್ಞಾನಿಯಂತೂ ತನ್ನ `ತಾವೋ ಆಫ್ ಫಿಸಿಕ್ಸ್’ ಕರತಿಯ ಒಂದಿಡೀ ಅಧ್ಯಾಯವನ್ನು ನಟರಾಜನ ನೃತ್ಯಕ್ಕೆ ಮೀಸಲಾಗಿಟ್ಟಿದ್ದಾನೆ. ಕ್ವಾಂಟಂ ಫಿಸಿಕ್ಸ್ ಶಾಖೆ ಬೆಳೆದಂತೆಲ್ಲ ವಿಜ್ಞಾನ ಅಣುವಿನೊಳಗೆ ಭಿನ್ನಭಿನ್ನ  ಕಣಗಳು ಪ್ರತಿಕ್ಷಣವೂ ನರ್ತಿಸುವುದನ್ನು ಗಮನಿಸಿದವು. ಭೌತ ವಿಜ್ಞಾನಿಗಳು ಇದನ್ನು ನರ್ತನಕ್ಕೆ ಹೋಲಿಸಿ ಭಾರತೀಯರು ಇದನ್ನೇ ನಟರಾಜನ ನರ್ತನದ ರೂಪದಲ್ಲಿ ಚಿತ್ರಿಸಿರುವುದನ್ನು ಗುರುತಿಸಿದರು.
ಅದಕ್ಕೂ ಹಿಂದೆಯೇ ಭೂಗರ್ಭ ಶಾಸ್ತ್ರಜ್ಞ ಮತ್ತು ಭಾರತೀಯ ದರ್ಶನಗಳ ಮೇಲೆ ವಿಸ್ತøತ ಪ್ರಬಂಧ ಬರೆದ ಆನಂದ ಕುಮಾರಸ್ವಾಮಿ ನಟರಾಜನ ಕುರಿತು ಸಂಶೋಧನಾ ಲೇಖನ ಬರೆದಿದ್ದರು. ಅವರು ಶಿವನ ಮೂರು ಬಗೆಯ ನೃತ್ಯಗಳ ಉಲ್ಲೇಖ ಮಾಡಿದ್ದರು – “ಶೂಲಪಾಣಿಯಾಗಿ ಸರಸ್ವತಿಯ ವೀಣೆಗೆ, ಇಂದ್ರನ ಕೊಳಲಿಗೆ, ಲಕ್ಷ್ಮಿಯ ಹಾಡಿಗೆ ದೇವ –ದೇವಿ – ಅಪ್ಸರೆಯರ ಮುಂದೆ ಕೈಲಾಸದಲ್ಲಿ ನಡೆಯುವ ನೃತ್ಯ ಒಂದಾದರೆ, ನಾಶದ ಮುನ್ಸೂಚನೆ ಕೊಟ್ಟು ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ತಾಂಡವ ನೃತ್ಯ ಮತ್ತೊಂದು. ಮೂರನೆಯದು – ತಮಿಳುನಾಡಿನ ಚಿದಂಬರಂನಲ್ಲಿ ಆತ ನಡೆಸುವ ನಟರಾಜ ನರ್ತನ”
ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರವೆನ್ನುತ್ತದೆ. ಈ ಮಾಹಿತಿಯನ್ನು ಮೂರ್ಖತನದ ಕಲ್ಪನೆಯೆಂದು ಜರೆಯೋಣವೆಂದರೆ, ಈ ದೇಶದ ಇನ್ಯಾವ ಮಂದಿರದ ಐತಿಹ್ಯವೂ ತಮ್ಮ ಸ್ಥಳವನ್ನು ಹೀಗೆ ಕರೆದುಕೊಳ್ಳುವುದಿಲ್ಲ. ಅಂದಮೇಲೆ, ಹೀಗೆ ಹೇಳುವಲ್ಲಿ ಒಂದಷ್ಟಾದರೂ ಸತ್ಯವಿರಲೇಬೇಕಲ್ಲ!
ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ಈ ಸ್ಥಳದ ಮೂಲಕ ಹಾಯುತ್ತದೆ ಎಂಬುದನ್ನು ಸಿದ್ಧಪಡಿಸಿ ತೋರಲಾಗಿದೆ. ಹೀಗಾಗಿಯೇ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. “ಈ ನೃತ್ಯ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ. ಢಮರುವಿನಿಂದ ಸೃಷ್ಟಿಯಾಗುತ್ತದೆ. ಅಭಯ ಮುದ್ರೆಯಿಂದ ರಕ್ಷಣೆ; ಉರಿವ ಬೆಂಕಿಯಿಂದ ನಾಶ. ಮೇಲೆತ್ತಿ ನಿಂತ ಕಾಲು ನೆಮ್ಮದಿಯ ಸಂಕೇತವಾದರೆ, ಕೆಳಮುಖವಾಗಿರುವ ಕೈ ಆತ್ಮ ಮೋಕ್ಷದ ದ್ಯೋತಕ” – ಹಾಗೆಂದು ಕುಮಾರಸ್ವಾಮಿ ಅಭಿಪ್ರಾಯ ಪಡುತ್ತಾರೆ.
ನಮ್ಮ ವಾಸ್ತವ ಕಲ್ಪನೆಯೂ ಹಾಗೆಯೇ. ಬ್ರಹ್ಮನ ಹಗಲು ಕಳೆದು ರಾತ್ರಿಯಾದಾಗ ಬ್ರಹ್ಮ ನಿದ್ರೆಗೆ ಜಾರುತ್ತಾನಲ್ಲ, ಆಗ ಸೃಷ್ಟಿ ಜಡತ್ವಕ್ಕೆ ಹೋಗಿಬಿಡುತ್ತದೆ. ಆಗ ಡಮರು ನಿನಾದದಿಂದ ಮತ್ತೆ ಜಗತ್ತನ್ನು ಜಾಗೃತಾವಸ್ಥೆಗೆ ತಂದು ಸೃಷ್ಟಿ ಕಾರ್ಯಕ್ಕೆ ಪ್ರೇರಣೆ ಕೊಡುವವ ಶಿವನಂತೆ. ಹಾಗೆಂದು ಪುರಾಣಗಳ ಅಭಿಮತ. ಆತನ ನರ್ತನ ಶುರುವಾಗುತ್ತಿದ್ದಂತೆ ಜಗವೆಲ್ಲ ನರ್ತಿಸಲು ಶುರು ಮಾಡುತ್ತದೆಂಬುದು ನಮಗೆ ನಗು ತರಿಸುವ ಕಥೆಯೆನಿಸಿದರರೆ, ಭೌತ ವಿಜ್ಞಾನಿಗಳಿಗೆ ಅದು ಪರಮಾಣುಗಳಲ್ಲಿ ನಡೆಯುತ್ತಿರುವ ಎಲೆಕ್ಟ್ರಾನುಗಳ ಚಲನೆಯ ರುದ್ರ ನರ್ತನ!
ಫ್ರಿಟ್ಜೋ ಕಾಪ್ರಾನಂತೂ ನಟರಾಜನ ಸಮತೂಕದ ಭಂಗಿಯನ್ನು ಸೃಷ್ಟಿ ಮತ್ತು ಲಯದ ಸಮತೋಲನವೆಂದು ಕರೆದಿದ್ದಲ್ಲದೆ, ಮುಖ ಭಾವದ ಶಾಂತತೆಯನ್ನು ಸೃಷ್ಟಿ – ಲಯ ಮೀರಿದ ಅವಸ್ಥೆ ಎಂದಿದ್ದಾನೆ.
ಆಧುನಿಕ ಭೌತ ವಿಜ್ಞಾನದ ಪ್ರಕಾರ ಹುಟ್ಟು – ಸಾವುಗಳು ಜೀವ ಇರುವವುಗಳಿಗಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇವೆ. ಪ್ರತಿಯೊಂದು ಪರಮಾಣುವೂ ಗುರುತಿಗೆ ನಿಲುಕದ ಒಂದಷ್ಟು ಕಣಗಳ ಹುಟ್ಟು ಸಾವಿನೊಂದಿಗೇ ಇತರ ಪರಮಾಣುವಿನೊಂದಿಗೆ ಬೆಸೆದುಕೊಂಡಿವೆ. ಪ್ರತಿಯೊಂದು ಅಣುವಿನೊಳಗಿನ ಈ ಸೃಷ್ಟಿ ಲಯದ ನಿರಂತರ ಕ್ರಿಯೆಯೇ ನಟರಾಜನ ನಾಟ್ಯ ಎಂದು ಕಾಪ್ರಾ ಸ್ಪಷ್ಟವಾಗಿ ದಾಖಲಿಸುತ್ತಾನೆ. ಹೀಗಾಗಿ ಆತ ಇದನ್ನು ನಟರಾಜನ ನೃತ್ಯವೆಂದು ಕರೆಯದೆ ವಿಶ್ವಚೇತನದ ನೃತ್ಯವೆಂದು ಸಂಬೋಧಿಸುತ್ತಾನೆ.
ನಟರಾಜನಿಗೆ ಸಂಬಂಧಪಟ್ಟ ಈ ವಿವರಣೆಗಳೆಲ್ಲವನ್ನೂ ಸಿಇಆರ್‍ಎನ್‍ನ ಪ್ರಯೋಗಶಾಲೆಯ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ. ನಮಗೆ ಅದು ಬರಿಯ ವಿಗ್ರಹವಾಗಿರಬಹುದು; ದೇವ ಕಣದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ಅದರೊಳಗೆ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಫೋಟಾನುಗಳೆಲ್ಲ ಆಕರ್ಷಣೆಗೊಳಗಾಗಿ ನರ್ತಿಸುವುದು ಕಾಣುತ್ತದೆ. ಹಾಗೆ ನೋಡಿದರೆ ಆ ಮೂರ್ತಿಯನ್ನು ಅನುಸರಿಸಿ ಋಗ್ವೇದದ ಆಳಕ್ಕೆ ಹೋದವರು ಆ ವಿಜ್ಞಾನಿಗಳೇ, ನಾವಲ್ಲ. ನಾವಿಲ್ಲಿ ಶಿವ – ವಿಷ್ಣು ಇಬ್ಬರಲ್ಲಿ ಯಾರು ದೊಡ್ಡವರೆಂದು ಕಿತ್ತಾಡುತ್ತಾ ಕುಳಿತಿದ್ದೇವೆ.
ನನಗೆ ವಿಷಯದ ಆಳಕ್ಕೆ ಇಳಿದಂತೆಲ್ಲ ಅಚ್ಚರಿಯೂ, ಬೇಸರವೂ ಜೊತೆಜೊತೆಗೇ ಆಗುತ್ತದೆ. ಸಂಕೇತ ಭಾಷೆಯನ್ನು ಹುಟ್ಟುಹಾಕಿ ಸತ್ಯವನ್ನು ಕವಚದೊಳಗೆ ಹುದುಗಿಸಿಡುವಲ್ಲಿ ನಿಸ್ಸೀಮರಾಗಿದ್ದ ನಾವೇ ಕವಚ ಭೇದಿಸುವಲ್ಲಿ ಸೋತು ಹೋದೆವಲ್ಲ! ನಮ್ಮ ಹಿರಿಯರ ವೈಜ್ಞಾನಿಕ ಮನೋಭಾವನೆಯನ್ನು ಅರಿಯಲಾಗದೆ ತೊಳಲಾಡುತ್ತಿದ್ದೇವಲ್ಲ, ಛೇ!
ನಮ್ಮ ಸಾಹಿತ್ಯಗಳ ಪ್ರಕಾರ ಪಂಚಭೂತಗಳ ಶಕ್ತಿ ಆವಾಹನೆಗೆ ಐದು ದೇವಸ್ಥಾನಗಳು. ಜಲ ತತ್ತ್ವಕ್ಕೆ ತಿರುವಣ್ಣೈ ಕೋಯಲ್, ಅಗ್ನಿಗೆ ತಿರುವಣ್ಣಾಮಲೈ, ವಾಯುವಿಗೆ ಕಾಳಹಸ್ತಿ, ಪೃಥ್ವಿಗೆ ಕಾಂಚೀಪುರಂ ಮತ್ತು ಆಕಾಶಕ್ಕೆ ಚಿದಂಬರ. ಇಷ್ಟಕ್ಕೂ ಚಿದಂಬರ ಎಂದರೆ ಚಿತ್ತದ ಆಕಾಶ ಎಂದೇ ಅರ್ಥ. ಚಿತ್ತ ಎನ್ನುವುದು ಮನಸ್ಸಿಗಿಂತಲೂ ಆಳದ, ವಿಶ್ವದ ಎಲ್ಲ ಆಗುಹೋಗುಗಳನ್ನೂ ದಾಖಲಿಸುವ ನಮ್ಮೊಳಗಿನ ಕಾಲ್ಪನಿಕ ವಸ್ತು. ಅದನ್ನು ಪಂಚಭೂತಗಳಿಂದ ಸಾಕ್ಷಾತ್ಕರಿಸಿಕೊಳ್ಳಲಾಗದು. ಆದರೆ ಅನುಭವಿಸಬಹುದು, ಅಷ್ಟೇ. ದ್ವಂದ್ವ, ಏಳುಬೀಳುಗಳಿಲ್ಲದ ಈ ಚಿತ್ತಾಕಾಶದಲ್ಲಿ ನಟರಾಜ ನರ್ತಿಸಲಾರಂಭಿಸಿದರೆ ಅದು ಪರಮಾನಂದವೇ. ಅದರ ಸಂಕೇತವೇ ಚಿದಂಬರಂ ಮಂದಿರ. ಅಂದಹಾಗೆ, ಹುಬ್ಬೇರಿಸುವಂಥ ಮತ್ತೊಂದು ವಿಷಯ ಏನು ಗೊತ್ತಾ? ಕಾಂಚೀಪುರ, ಕಾಳಹಸ್ತಿ, ಚಿದಂಬರ – ಈ ಮೂರೂ ಮಂದಿರಗಳೂ ಆಯಸ್ಕಾಂತೀಯ ಸಮಭಾಜಕ ರೇಖೆಯ ಮೇಲೇ ನಿರ್ಮಾಣಗೊಂಡಿರೋದು!
ಹೌದು. ವಿಜ್ಞಾನಕ್ಕೂ ನಿಲುಕದ ಇನ್ನೂ ಯಾವುದೋ ಸಂಗತಿ ನಿಗೂಢವಾಗಿ ಅಡಗಿ ಕುಳಿತಿದೆ. ಅದೇ ಚಿದಂಬರ ರಹಸ್ಯ.

Friday 3 July 2015

ಆಡಮ್ ವೇದಗಳಿಗೆ ತಲೆ ಬಾಗಿದ್ದು ಯಾಕೆ ಗೊತ್ತಾ?

ಭಾರತದ ಇತಿಹಾಸ ಅಂದರೆ ಅದು ಬರಿಯ ಜನಜೀವನ ಅಷ್ಟೇ ಅಲ್ಲ, ಅದು ರೋಚಕ ಕಥಾನಕಗಳ ಆಗರ. ಅಲ್ಲಿ ಅಧ್ಯಾತ್ಮವಿದೆ, ಪುರಾಣವಿದೆ, ಶಾಂತಿಮಂತ್ರಗಳಿವೆ, ಕ್ರಾಂತಿ ಬೀಜಗಳೂ ಇವೆ. ಹೆಣ್ಣು – ಗಂಡು ಸಮಸಮವಾಗಿ ಇಲ್ಲಿ ಬೀಗಿದ್ದಾರೆ. ನದಿ ಬೆಟ್ಟ ಮರುಭೂಮಿಗಳೂ ತಮ್ಮ ಕೊಡುಗೆ ನೀಡಿವೆ. ಹಿಮಾಲಯ – ಸಾಗರವೂ ಇಲ್ಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅಸಂಖ್ಯ ಸಂತರು; ಲೆಕ್ಕವಿಲ್ಲದಷ್ಟು ಋಷಿಮುನಿಗಳು ಪರಣಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವೆಲ್ಲವನ್ನೂ ನಾಶಗೈಯುವ ಷಡ್ಯಂತ್ರಗಳೂ ಆಗಿವೆ. ಮಿಡತೆಯ ಹಿಂಡಿನಂತೆ ಅನ್ಯರ ಆಕ್ರಮಣಗಳೂ ಆಗಿವೆ!
‘ಮ್ಯಾಕ್ಸ್ ಮುಲ್ಲರ್’!
ಕೆಲವರಿಗೆ ಭಾರತದ ಇತಿಹಾಸ ೧೨ನೇ ಶತಮಾನದಿಂದ ಆರಂಭವಾದರೆ, ಇನ್ನು ಕೆಲವರಿಗೆ ಶಂಕರರ ಹುಟ್ಟಿನೊಂದಿಗೆ. ಕೆಲವರು ಬುದ್ಧನ ಜನನದಿಂದಲೇ ಭಾರತದ ಇತಿಹಾಸ ಗಣನೆ ಶುರು ಮಾಡಿದರೆ, ಇನ್ನೂ ಕೆಲವರು ರಾಮ – ಕೃಷ್ಣ – ಉಪನಿಷತ್ತು ಎನ್ನುತ್ತಾರೆ. ಆದರೆ ಈ ದೇಶದ ಮತ್ತು ಜಗತ್ತಿನ ಕೆಲವು ‘ಪಂಡಿತೋತ್ತಮರಿಗೆ’ ಭಾರತದ ಇತಿಹಾಸವೆಂದರೆ ಅದು ಮ್ಯಾಕ್ಸ್ ಮುಲ್ಲರ್ ಮಾತ್ರ. ಅವನ ಹೇಳಿಕೆಗಳು, ಬರಹಗಳು, ಪತ್ರಗಳೇ ಭಾರತವನ್ನು ನೋಡುವ ದೃಷ್ಟಿಕೋನ ಅವರಿಗೆ. ಅನೇಕರ ಪಾಲಿಗೆ ಆತ ಋಷಿ, ಯೋಗಿ, ಸಂಸ್ಕೃತ ಪಂಡಿತ ಎಲ್ಲವೂ ಕೂಡ.Friedrich_Max-Müller_by_George_Frederic_Watts
ಆದರೆ ವಾಸ್ತವವಾಗಿ ಆತ ಭಾರತದ ಕುರಿತಂತೆ ಅನೇಕ ಗೊಂದಲಗಳಿಗೆ ಕಾರಣನಾದ ವ್ಯಕ್ತಿ. ಆರ‍್ಯರ ಆಕ್ರಮಣ ವಾದದಿಂದ ಹಿಡಿದು ಕಾಲ ಗಣನೆಯವರೆಗೆ ಆತ ಮಾಡಿದ ಊಹೆಗಳು ಇಂದು ಸಾಕಷ್ಟು ಕಿರಿಕಿರಿಗೆ ಕಾರಣವಾಗಿವೆ. ಕ್ರಿಶ್ಚಿಯನ್ ಮಿಷನರಿಗಳ ಆಕಾಂಕ್ಷೆ ಪೂರೈಸಲು ತನ್ನಿಚ್ಛೆಗೂ ವಿರುದ್ಧವಾಗಿ, ವೈಚಾರಿಕ ತಳಹದಿಯೇ ಇಲ್ಲದ ಸಿದ್ಧಾಂತಗಳನ್ನು ಒಂದಾದಮೇಲೊಂದರಂತೆ ಹರಿಬಿಟ್ಟವ ಮ್ಯಾಕ್ಸ್ ಮುಲ್ಲರ್. ಹೌದು. ಹಣ ಕೊಟ್ಟವರ ಮನಸ್ಸಿನ ಆಕಾಂಕ್ಷೆ ಪೂರೈಕೆಗೆ ಆತ ಋಗ್ವೇದದ ಸಾಹಿತ್ಯವನ್ನೇ ವಿರೂಪಗೊಳಿಸಿಬಿಟ್ಟ.
ಕ್ರಿಶ್ಚಿಯನ್ ಮಿಷನರಿಗಳೇ ಹಾಗೆ. ಚೀನಾಕ್ಕೆ ಹೋದ ಮ್ಯಾಥ್ಯೂರಿಕ್ಕಿ ಬುದ್ಧಿಸಮ್ ಮತ್ತು ಕನ್‌ಫ್ಯೂಷಿಯನಿಸಮ್ ನಡುವೆ ಇರುವ ಗಲಾಟೆ ಗಮನಿಸಿ ಕನ್‌ಫ್ಯೂಷಿಯನಿಸಮ್ ಪರವಾಗಿ ನಿಂತು ಬುದ್ಧನ ಅನುಯಾಯಿಗಳನ್ನು ಹಳಿದ. ಕ್ರಿಸ್ತ ತತ್ತ್ವಗಳಿಗೆ ಕನ್‌ಫ್ಯೂಷಿಯನಿಸಮ್ ಹತ್ತಿರವಾಗಿದೆ ಎಂದು ನಂಬಿಸಿ ಅವರನ್ನು ತನ್ನತ್ತ ಸೆಳೆದ. ಈ ಕುಟಿಲ ನೀತಿಯನ್ನೇ ಬಳಸಿ ಇಟಲಿಯ ಯಹೋವಾ ಮತಪ್ರಚಾರಕ ರಾಬರ್ಟ್ ನೋಬಿಲಿ ೧೬೦೬ರಲ್ಲಿ ಮಧುರೈಗೆ ಬಂದು ಹಿಂದೂಗಳಂತೆ ಬಟ್ಟೆ ಧರಿಸಿದ. ಶಿಖೆ ಬಿಟ್ಟ. ಜನಿವಾರವನ್ನೂ ಧರಿಸಿ, ತುದಿಗೆ ಶಿಲುಬೆ ಸಿಕ್ಕಿಸಿಕೊಂಡ. ಅಗತ್ಯ ಬಿದ್ದೆಡೆ ವೇದಗಳನ್ನು ತಿರುಚಿ ಜನರ ಮುಂದಿಟ್ಟ. ಮಧುರೈನ ಕೆಲವರನ್ನು ಮತಾಂತರಿಸುವಲ್ಲಿ ಆತ ಯಶಸ್ವಿಯೂ ಆದ. ಅವನ ಹಿಂದೆ ಅಬ್ಬೆ ಡುಬೋಯಿಸ್ ಮತಾಂತರಿಯಾಗಿ ಕಾಲಿಟ್ಟ. ಅವನ ಕೆಲಸ ಅಂದುಕೊಂಡಷ್ಟು ಸಲೀಸಾಗಿರಲಿಲ್ಲ. ಕರ್ನಾಟಕ ಅವನ ಕ್ಷೇತ್ರವಾಗಿತ್ತು. ಸಾಮೂಹಿಕ ಮತಾಂತರ ಮಾಡುವಲ್ಲಿ ಆತ ಸೋತುಹೋದ. ಬ್ಯಾಪ್ಟಿಸ್ಟರು ಬಂಗಾಳಕ್ಕೆ ೧೭೯೩ರಲ್ಲಿ ಕಾಲಿಟ್ಟರು. ಅಲ್ಲಿ ಬ್ರಹ್ಮ ಸಮಾಜದ ತೀವ್ರ ವಿರೋಧದಿಂದ ವಿಲಿಯಮ್ ಕ್ಯಾರೆಯ ಯತ್ನ ಕೈಗೂಡಲಿಲ್ಲ.
ಇಷ್ಟೂ ಹೇಳಬೇಕಾಗಿಬಂದ ಅಗತ್ಯವೆಂದರೆ, ಕ್ರಿಶ್ಚಿಯನ್ನರ ಆಕ್ರಮಣ ಶೈಲಿಯನ್ನು ಮನದಟ್ಟು ಮಾಡುವುದು. ಹೊಸ ಭೂಪ್ರದೇಶಕ್ಕೆ ಮೊದಲು ಸೈನ್ಯ ನುಗ್ಗುತ್ತದೆ.  ಅದರ ಹಿಂದುಹಿಂದೆಯೇ ಮಿಷನರಿಗಳ ದಂಡು. ಸೈನ್ಯದ ಮೂಲಕ ಸಂಪತ್ತಿನ ಲೂಟಿಯಾದರೆ, ಮಿಷನರಿಗಳು ಪರಂಪರೆಯನ್ನು ಸೂರೆಗೈದುಬಿಡುತ್ತಾರೆ. ಆಕ್ರಮಣಕ್ಕೊಳಗಾದವರು ಹಳೆಯ ನೆನಪನ್ನು ಕಳಕೊಂಡು ಹೊಸ ಮತವನ್ನು ಒತ್ತಾಯವಾಗಿಯಾದರೂ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆ! ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡುಗಳಲ್ಲೆಲ್ಲ ಆಗಿದ್ದು ಇದೇ. ಇಂದು ಆಸ್ಟ್ರೇಲಿಯನ್ನರಿಗೆ ತಮ್ಮ ಪರಂಪರೆ ನೆನಪಿರೋದು ಅನುಮಾನವೇ. ಅದಾಗಲೇ ಲೂಟಿಯಾಗಿಬಿಟ್ಟಿದೆ. ಅಮೆರಿಕದ ರೆಡ್ ಇಂಡಿಯನ್ನರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ.
ಹೀಗೇಕೆ? ಇದನ್ನು ತಿಳಿಯಲು ಯುರೋಪಿನ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಹದಿನಾಲ್ಕು – ಹದಿನೈದನೇ ಶತಮಾನದ ವೇಳೆಗೆ ಯುರೋಪಿನ ದೇಶಗಳು ಜಗತ್ತಿನುದ್ದಗಲ ಸಮುದ್ರಯಾನ ಮಾಡಲು ಉಪಕ್ರಮಿಸಿದರಲ್ಲ, ಆಗತಾನೇ ಅಲ್ಲಿ ಕ್ರಿಶ್ಚಿಯನ್ ಪುನರುತ್ಥಾನದ ಕಲ್ಪನೆ ಟಿಸಿಲೊಡೆದಿತ್ತು. ಬೈಬಲ್ಲಿನ ಹಳೆಯ ಒಡಂಬಡಿಕೆಗೆ ಮೆತ್ತಿರುವ ಯಹೂದ್ಯರ ಲೇಪವನ್ನು ತೊಳೆದುಕೊಳ್ಳಲು ಹೊಸ ಒಡಂಬಡಿಕೆಗೆ ಸೂಕ್ತ ಹಿನ್ನೆಲೆಗೆ ಹುಡುಕಾಟ ನಡೆದಿತ್ತು. ಈ ಹುಡುಕಾಟದ ಕೊನೆ ಪೂರ್ವ ದಿಕ್ಕು ಆಗಿರಬೇಕೆಂಬ ನಿಶ್ಚಯವೂ ಕ್ರಿಶ್ಚಿಯನ್ನರಿಗಿತ್ತು.
ಭಾರತ ಮತ್ತು ಚೀನಾ – ಈ ಎರಡು ನಾಗರಿಕತೆಗಳಲ್ಲಿ ಅವರು ಆರಿಸಿಕೊಂಡಿದ್ದು ಭಾರತವನ್ನು. ಲೇಕಕ ಜಿಮ್ ಶೆಫರ್ ಅಭಿಪ್ರಾಯದಂತೆ ‘ಕ್ಯಾಂಟ್ ಹರ್ಡರ್‌ನಂತಹ ಪಂಡಿತರೂ ಪುರಾತನ ಭಾರತ ಮತ್ತು ಪಶ್ಚಿಮದ ಪುರಾಣಕತೆಗಳಲ್ಲಿ ಸಾಮ್ಯವನ್ನು ಗುರುತಿಸಿ ಯಹೂದ್ಯ ಪರಂಪರೆಯಿಂದ ಪಶ್ಚಿಮ ಯುರೋಪ್ ಸಂಸ್ಕೃತಿಯನ್ನು ಬೇರ್ಪಡಿಸಿದರು; ಪ್ರಾಚೀನ ಭಾರತದಲ್ಲಿ ಅದರ ಕುರುಹುಗಳನ್ನು ಶೋಧಿಸಲಾರಂಭಿಸಿದರು’.
ಯುರೋಪಿನ ಈ ಕ್ರಿಶ್ಚಿಯನ್ನರಿಗೆ ತಾವು ಜಗತ್ತನ್ನು ಲೂಟಿಗೈಯ್ಯಲು ಸೈದ್ಧಾಂತಿಕ ಪರವಾನಗಯೊಂದು ಬೇಕಿತ್ತು. ಆಗ ಅವರ ನಡುವೆ ವ್ಯಾಪಕವಾಗಿ ಚಾಲ್ತಿಗೆ ಬಂದಿದ್ದು ಜನಾಂಗಗಳ ಕಲ್ಪನೆ. ಬಿಳಿಯರ ಜನಾಂಗ ಅತ್ಯಂತ ಶ್ರೇಷ್ಠವಾದದ್ದು, ಹೀಗಾಗಿ ಅವರಿಗೆ ಜಗತ್ತನ್ನು ಉದ್ಧಾರ ಮಾಡುವ ಪರವಾನಗಿಯನ್ನು ಭಗವಂತ ಅದಾಗಲೇ ಕೊಟ್ಟುಬಿಟ್ಟಿದ್ದಾನೆಂದು ಅವರು ನಂಬಿಸಿಬಿಟ್ಟಿದ್ದರು!
ಅವರ ಪ್ರಕಾರ, ‘ಯುರೋಪಿನ ಬಿಳಿಯರು ಜನಾಂಗ ಸ್ತರದಲ್ಲಿ ಮೇಲ್ದರ್ಜೆಯವರಾದರೆ, ಆಫ್ರಿಕಾದ ಕರಿಯರು ಕೆಳ ದರ್ಜೆಯವರು. ಉಳಿದೆಲ್ಲ ಜನಾಂಗಗಳು ಇವೆರಡರ ನಡುವೆ ಅಲ್ಲಲ್ಲಿ ಹರಡಿಕೊಂಡಿವೆ’.
ತಮಗಿಂತ ಕೆಳಗಿರುವವರನ್ನು ಮೇಲತ್ತೆಲೆಂದೇ ಭಗವಂತ ನಮ್ಮನ್ನು ಕಳಿಸಿದ್ದಾನೆಂದು ಅವರು ಸ್ವತಃ ನಂಬಿಬಿಟ್ಟಿದ್ದರು, ಇತರರನ್ನೂ ನಂಬಿಸಿದ್ದರು. ಭಾರತದ ಬುದ್ಧಿವಂತರೂ ಬ್ರಿಟಿಷರು ದೇವರೇ ಕಳಿಸಿದ ದೂತರೆಂದು ಅನೇಕ ಕಡೆ ಉಲ್ಲೇಖ ಮಾಡುತ್ತಾರಲ್ಲ, ಅದರ ಹಿಂದಿನ ಸಿದ್ಧಾಂತವೇ ಇದು. ತಮ್ಮ ಈ ಸಿದ್ಧಾಂತಕ್ಕೆ ಪೂರಕವಾಗುವ ಎಲ್ಲವನ್ನೂ ಅವರು ಸಮರ್ಥವಾಗಿ ಬಳಸಿಕೊಂಡರು. ‘ಆಳುವವರು ಸಹಜವಾಗಿಯೇ ನಾಗರಿಕರು. ಆಳಿಸಿಕೊಳ್ಳುವವರು ಅನಾಗರಿಕರು’ ಎಂಬ ಪ್ಲೇಟೋ ಮಾತುಗಳು ಅವರಿಗೆ ಪೂರಕವಾದವು.
ಇವೆಲ್ಲವನ್ನೂ ಹೊತ್ತುಕೊಂಡೇ ಮಿಷನರಿಗಳು ಭಾರತಕ್ಕೆ ಕಾಲಿಟ್ಟಿದ್ದರು. ಆದರೆ ನಿರಂತರ ಆಕ್ರಮಣಗಳಿಗೆ ಒಳಗಾಗಿ ಭಾರತೀಯ ಸಮುದಾಯಗಳು ತಮ್ಮ ಹೊರಪದರವನ್ನು ಅದೆಷ್ಟು ಗಟ್ಟಿಗೊಳಿಸಿಕೊಂಡಿದ್ದವೆಂದರೆ, ಅದನ್ನು ಮುರಿದು ಒಳಗೆ ಹೋಗುವುದು ಕ್ರಿಶ್ಚಿಯನ್ನರಿಗೆ ಸುಲಭದ ಮಾತಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಾರತ ಅವರ ಪಾಲಿಗೆ ಸಲೀಸಾದ ತುತ್ತಾಗಲಿಲ್ಲ.
ಬಂಗಾಳದಲ್ಲಿ ಬಲವಾಗಿ ಬೇರೂರುವ ಪ್ರಯತ್ನ ನಡೆಸಿದ ಮಿಷನರಿಗಳು ಅದಾಗಲೇ ಬ್ರಹ್ಮ ಸಮಾಜದ ಮೂಲಕ ಸಾಕಷ್ಟು ಹೆಸರಾಗಿದ್ದ ರಾಜಾ ರಾಮ್‌ಮೋಹನ್ ರಾಯ್ ರನ್ನು ಸಂಧಿಸಿದರು. ಬುದ್ಧಿವಂತ, ಮೇಲ್ವರ್ಗಕ್ಕೆ ಸೇರಿದ ರಾಮ್‌ಮೋಹನರನ್ನು ಕ್ರಿಸ್ತನ ಬುಡಕ್ಕೆಳೆತಂದರೆ ಹಿಂದೂಗಳಿಗೊಂದು ಬಲವಾದ ಪೆಟ್ಟು ಕೊಟ್ಟಂತೆ ಆಗುವುದೆಂದು ಚರ್ಚು ಚಿಂತಿಸಿತ್ತು. ೧೮೧೮ರ ಮಾರ್ಚ್ ತಿಂಗಳಲ್ಲಿ ವಿಲಿಯಂ ಆಡಮ್ ಬಂಗಾಳಕ್ಕೆ ಬಂದ. ರಾಜಾರಾಮರನ್ನು ಮತಾಂತರಿಸುವ ಹೊಣೆ ಅವರದಾಗಿತ್ತು. ಸಂಪರ್ಕ ಬಲವಾಯ್ತು. ಬೈಬಲ್ ಮೇಲಿನ ಚರ್ಚೆಗಳೂ ಜೋರಾದವು. ರಾಜಾ ರಾಮ್‌ಮೋಹನ್ ರಾಯರು ಬೈಬಲ್ಲನ್ನು ಅರೆದು ಕುಡಿದದ್ದಷ್ಟೇ ಅಲ್ಲ, ವೇದಗಳ ಮೇಲೂ ಚೆನ್ನಾದ ಹಿಡಿತ ಹೊಂದಿದ್ದರು. ಇವರೆದುರು ವಿಲಿಯಂ ಆಡಮ್ ಕುರಿಯಂತಾಗಿದ್ದ.
ಹಿಂದೂಗಳ ಬಹುದೇವತಾವಾದದ ಚರ್ಚೆ ನಡೆಯುವಾಗ ರಾಜಾ ರಾಮ್‌ಮೋಹನ ರಾಯರು ವೇದಗಳ ಏಕ ದೇವತಾವಾದವನ್ನು ಎತ್ತಿ ಹಿಡಿದುದಷ್ಟೇ ಅಲ್ಲ, ಬೈಬಲ್ಲಿನ ತ್ರಿದೇವತಾ (ಭಗವಂತ ತಂದೆ, ಭಗವಂತನ ಮಗ ಏಸು ಕ್ರಿಸ್ತ ಮತ್ತು ಪವಿತ್ರ ಸೈತಾನ – ಟ್ರಿನಿಟಿ) ವಾದವನ್ನು ಅಪಹಾಸ್ಯ ಮಾಡಿದರು. ಮೂರು ದೇವರನ್ನು ನಂಬುವವರಿಗೆ ನೂರು ದೇವರಿಂದ ತೊಂದರೆ ಏಕಾಗಬೇಕೆಂದು ಪ್ರಶ್ನಿಸಿದರು. ವಿಲಿಯಂ ಆಡಮ್‌ನ ನಂಬಿಕೆಗಳಿಗೆ ತೀವ್ರತರ ಆಘಾತ ಉಂಟಾಯ್ತು. ಆತ ಬೈಬಲ್ ಮೇಲೆ, ತನ್ನ ಆರಾಧ್ಯ ದೈವ ಏಸುಕ್ರಿಸ್ತನ ಕುರಿತಂತೆ ಅನೇಕ ಪ್ರಶ್ನೆಗಳನ್ನೆತ್ತಿದ. ತನ್ನ ಪ್ರಿಯಮಿತ್ರನಿಗೆ  ಬರೆದ ಪತ್ರದಲ್ಲಿ, ‘ಕಳೆದ ಕೆಲವಾರು ತಿಂಗಳಿಂದ ಕ್ರಿಸ್ತನ ಬಗ್ಗೆ ಒಂದಷ್ಟು ಪ್ರಶ್ನೆಗಳು ನನ್ನೊಳಗೆ ತಲೆ ಎತ್ತುತ್ತಿವೆ. ರಾಮ್‌ಮೋಹನ ರಾಯ್‌ರನ್ನು ಕ್ರಿಸ್ತಾನುಯಾಯಿಯಾಗಿಸುವ ಪ್ರಯತ್ನದಲ್ಲಿ ಅವರೊಂದಿಗೆ ನಡೆಸಿದ ಚರ್ಚೆ ನನ್ನ ಸಿದ್ಧಾಂತದಲ್ಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿದೆ. ಸಿದ್ಧಾಂತದ ಪರವಿರುವ ವಿಚಾರಗಳು ಗುಡ್ಡದಷ್ಟಿದ್ದರೆ, ಅದಕ್ಕೆ ವಿರುದ್ಧವಾದ ಅಂಶಗಳು ಮಹಾಪರ್ವತದಷ್ಟಿದೆ ಎಂಬುದನ್ನು ನಾನು ನಿಸ್ಸಂಶಯವಾಗಿ ಒಪ್ಪಿಕೊಳ್ತೇನೆ’ ಎಂದಿದ್ದರು.
ಆಡಮ್‌ನ ತಲೆ ಎಷ್ಟು ಕೆಟ್ಟಿತ್ತೆಂದರೆ, ಮೂರು ವರ್ಷಗಳ ಕಾಲ ವೇದ ಮತ್ತು ಬೈಬಲ್ಲುಗಳ ಅಧ್ಯಯನ ಮಾಡುತ್ತ, ತುಲನೆ ಮಾಡುತ್ತ ಕೊನೆಗೊಮ್ಮೆ ವೇದಧರ್ಮವೇ ಶ್ರೇಷ್ಟವೆಂದು ಗ್ರಹಿಸಿದ. ತಾನು ಮತಾಂತರಗೊಂಡ! ರಾಜಾ ರಾಮಮೋಹನ ರಾಯ್‌ರನ್ನು ತನ್ನ ಮತಕ್ಕೆ ಸೆಳೆಯಲು ಹೋಗಿ ತಾನೇ ವೇದಧರ್ಮಕ್ಕೆ ಶರಣಾಗಿಬಿಟ್ಟ. ಇದು ಚರ್ಚನ್ನು ಕೆಂಡಾಮಂಡಲವಾಗಿಸಿತು. ಚರ್ಚು ವಿಲಿಯಮ್ ಆಡಮ್‌ಗೆ ಧರ್ಮದ್ರೋಹಿಯ ಪಟ್ಟ ಕಟ್ಟಿತು. ಲಂಡನ್ ಮತ್ತು ಅಮೆರಿಕಾದ ಮಿಷನರಿ ವಲಯಗಳಲ್ಲಿ ತುಮುಲವೇರ್ಪಟ್ಟಿತು. ಅನೇಕ ದಿನಗಳ ಕಾಲ ಅಲ್ಲಿ ಮೌನ ಸಾಮ್ರಾಜ್ಯ. ಚರ್ಚು ಮಾನಸಿಕವಾಗಿ ಕುಗ್ಗಿಹೋಗಿತ್ತು.
ಈ ಘಟನೆಯನ್ನು ಮುಂದೆ ಎಂದಿಗೂ ನೆನೆಸಿಕೊಳ್ಳಬಾರದೆಂದು ನಿಶ್ಚಯಿಸಿದ ಮಿಷನರಿ ಪಡೆ ಸಾವರಿಸಿಕೊಂಡು ಮುಂದಡಿಯಿಡತೊಡಗಿತು.  ಅವರ ವಾರ್ಷಿಕ ವರದಿಯಲ್ಲಿ ‘ಈ ಹಿಂದಿನ ಒಬ್ಬ ಸದಸ್ಯ ವಿಲಿಯಮ್ ಆಡಮ್ ಕ್ರಿಸ್ತನ ವಿರುದ್ಧವಾಗಿರುವ ಸಂದೇಶಗಳನ್ನು ಒಪ್ಪಿಕೊಂಡು ಕ್ರಿಸ್ತನ ದೈವಿಕತೆಯನ್ನು ಧಿಕ್ಕರಿಸಿದ್ದರಿಂದ ಸೆರಾಮ್‌ಪೋರ್ ಮಿಷನ್‌ಗೂ ಆತನಿಗೂ ಇದ್ದ ಸಂಬಂಧ ಕಡಿಯಲಾಗಿದೆ’ ಎಂದಷ್ಟೇ ಬರೆದು ಸುಮ್ಮನಾದರು. ಮಿಷನರಿಗಳ ಇತಿಹಾಸವುಳ್ಳ ಪುಸ್ತಕದಲ್ಲಿ ಆಡಮನಿಗೆ ಸ್ಥಾನ ನಿರಾಕರಿಸಲಾಯ್ತು. ಅವರಿಗೆ ಇದು ಒಗ್ಗಿ ಬಂದ ಚಾಳಿ. ತಾವು ಮಾಡಿದ ಕಾರ್ಯಗಳ, ತಮಗಾದ ಆಘಾತಗಳ ಪಡಿಯಚ್ಚನ್ನು ಅಳಿಸುವುದು ಅವರಿಗೆ ಹೊಸತಲ್ಲ.
ಮಿಷನರಿಗಳು ಈಗ ಎಚ್ಚೆತ್ತುಕೊಂಡರು. ವೇದಗಳಲ್ಲಿರುವ ಸಾರವನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿ ಭಾರತೀಯರಿಗೆ ಉಣಿಸುವುದು ಈಗ ಅವರಿಗೆ ಅನಿವಾರ್ಯವಾಯ್ತು. ಅವರು ಚಡಪಡಿಸಲಾರಂಭಿಸಿದರು.
ಅತ್ತ ಅಬೆ ಡುಬೋಯಿಸ್ ಮಿಷನರಿಯಾಗಿ ಭಾರತದಲ್ಲಿ ಪೂರಾ ಸೋತರೂ ಇಲ್ಲಿ ನೆಲೆ ನಿಂತು ಇಲ್ಲಿನ ಜನರನ್ನು ಅರ್ಥೈಸಿಕೊಂಡಿದ್ದ. ಇಲ್ಲಿನ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ ಪಾಲ್ಗೊಂಡಿದ್ದ. ಮದುವೆ ಮುಂಜಿಗಳನ್ನು ಗಮನಿಸಿದ್ದ. ಜಾತಿ ಜಾತಿಗಳ ನಡುವಣ ಗೊಂದಲ ಕಣ್ಣು ಕುಕ್ಕಿತ್ತು. ತಾನು ಸೋತರೇನು, ಮುಂದೆ ಬರುವ ಮಿಷನರಿಗಳಿಗೆ ತನ್ನ ಅನುಭವ ಲಾಭದಾಯಕವಾಗಲೆಂದು ‘ಹಿಂದೂ ಮಮೆರಿ, ಕಸ್ಟಮ್ಸ್ ಅಂಡ್ ಸೆರಮನೀಸ್’ ಎಂಬ ಪುಸ್ತಕ ಬರೆದು ತರುಣ ಮಿಷನರಿಗಳ ಕೈಗಿಟ್ಟ. ಇಂದಿಗೂ ಭಾರತಕ್ಕೆ ಹೊರಡುವ ಪ್ರತಿಯೊಬ್ಬ ಮಿಷನರಿಗೂ ಇದು ವೇದವೇ ಸರಿ!
ಅಬೆ ಮಿಷನರಿಗಳಿಗೆಲ್ಲ ಒಂದು ಕಿವಿಮಾತು ಹೇಳಿದ, ೧ಹಿಂದೂಗಳ ಬಹುದೇವತಾ ವಾದ ಮತ್ತು ಮೂರ್ತಿಪೂಜೆಗಳೇ ಅವರನ್ನು ಕ್ರಿಸ್ತ ಮತದತ್ತ ಸೆಳೆಯಲು ನಮಗೆ ಶ್ರೇಷ್ಟ ಅಸ್ತ್ರ’.
ಚರ್ಚ್‌ನ ಚಡಪಡಿಕೆ ತೀವ್ರವಾಗುತ್ತಿತ್ತು. ಭಾರತ ಕೈತಪ್ಪಿಹೋಗುವ ಪ್ರಮೇಯ ಬಿಡಿ, ವೇದ ಧರ್ಮಕ್ಕೆ ಒಣಗಿದ ಎಲೆಗಳಂತೆ ತಾನೇ ಉದುರಿಹೋಗುವ ಭಯವೂ ಅವರನ್ನು ಕಾಡಲಾರಂಭಿಸಿತು. ವೇದಗಳ ಏಕದೇವತಾವಾದವನ್ನು ಧಿಕ್ಕರಿಸಿ ಅದರೊಳಗೆ ಬಹುದೇವತಾವಾದದ ಎಳೆಯನ್ನು ಹುಡುಕಬಲ್ಲ ಒಬ್ಬ ಸಂಸ್ಕೃತ ವಿದ್ವಾಂಸನನ್ನು ಅರಸಲಾರಂಭಿಸಿದರು. ಆತ ಇಂಗ್ಲೆಂಡಿಗೆ ಹೊರಗಿನವನಾಗಿದ್ದರೆ ಒಳಿತೆಂಬ ಅಭಿಪ್ರಾಯವೂ ಇತ್ತು. ಆ ಒಬ್ಬ ವ್ಯಕ್ತಿ ಹಿಂದೂ ಧರ್ಮದ ಬುಡವನ್ನೇ ಅಲುಗಾಡಿಸಿ ಕ್ರಿಸ್ತನ ಸಂದೇಶ ಹರಡಿಸಲು ರಾಜಮಾರ್ಗ ನಿರ್ಮಿಸಿಕೊಡುವನೆಂಬ  ನಿರೀಕ್ಷೆ ಚರ್ಚಿಗಿತ್ತು.
ಹೌದು. ಆ ‘ಒಬ್ಬ’ ಅವರಿಗೀಗ ಬೇಕೇಬೇಕಾಗಿತ್ತು.
ಆಗ ಅವರಿಗೆ ಸಿಕ್ಕವನೇ ಫ್ರೆಡ್ರಿಕ್ ಮಾಕ್ಸ್‌ಮಿಲಿಯನ್ ಮುಲ್ಲರ್’ ಅಥವಾ ನಮ್ಮೆಲ್ಲರ ಪಠ್ಯಪುಸ್ತಕಗಳನ್ನು, ಬುದ್ಧಿಜೀವಿಗಳ ತಲೆಯನ್ನೂ ಅಲಂಕರಿಸಿದ ‘ಮ್ಯಾಕ್ಸ್ ಮುಲ್ಲರ್’.

Wednesday 1 July 2015

ಭಾರತಕ್ಕೆ ಹೊರಡುವ ಮುನ್ನ ಮೆಕಾಲೆ ಹೇಳಿದ್ದೇನು ಗೊತ್ತಾ?

ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ.ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ.ಭಾರತೀಯರು ಅನಾಗರಿಕರು,ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.
’ಇಲ್ಲಿ ಕೆಲಸ ಮಾಡುವುದರ ಲಾಭ ಸಾಕಷ್ಟಿದೆ. ಗೌರವವೂ ಹೆಚ್ಚಿದೆ. ಸಂಬಳವೂ ವಾರ್ಷಿಕ ಹತ್ತು ಸಾವಿರ ಪೌಂಡುಗಳಷ್ಟು. ವರ್ಷಕ್ಕೆ ೫ ಸಾವಿರ ಪೌಂಡುಗಳಷ್ಟು ಖರ್ಚು ಮಾಡಿದರೆ ಇಲ್ಲಿ ರಾಜನಂತೆ ಬದುಕಬಹುದು. ಉಳಿದಷ್ಟನ್ನೂ ಉಳಿಸಿ ಬಡ್ಡಿಯನ್ನೂ ಗಳಿಸಬಹುದು. ನನಗೆ 39 ವರ್ಷಗಳಾಗುವಾಗ ನಾನು ೩೦ ಸಾವಿರ ಪೌಂಡುಗಳೊಂದಿಗೆ ಉತ್ಸಾಹಿತನಾಗಿ ಮರಳುತ್ತೇನೆ’.
ಹೀಗೊಂದು ಪತ್ರವನ್ನು ಯಾರು ಬರೆದಿರಬಹುದೆಂಬ ಪ್ರಶ್ನೆ ನಿಮ್ಮನ್ನು ಕೇಳಿದರೆ ಉತ್ತರ ಅದೇನು ಬರಬಹುದು ಹೇಳಿ ! ಹಳ್ಳಿಯಿಂದ ಹೊರಟ ಬಡ ಭಾರತದ ಉದ್ಯೋಗಿ ಶ್ರೀಮಂತ ಅಮೇರಿಕದಿಂದಲೋ -ಯೂರೋಪಿನಿಂದಲೋ ಬರೆದಿರಬೇಕೆಂದು ಊಹಿಸುತ್ತೀರಿ ತಾನೇ ? ನಿಮ್ಮ ಊಹೆ ಅಕ್ಷರಶಃ ಸುಳ್ಳು.
ಇದು ಮೆಕಾಲೆ 1833 ರಲ್ಲಿ ತನ್ನ ಸೋದರಿ ಹನ್ನಾಹ್ ಳಿಗೆ ಬರೆದ ಪತ್ರ.ತಾನು ಭಾರತಕ್ಕೆ ಹೊರಟು ನಿಂತಾಗ! ಬಡ ಇಂಗ್ಲೇಂಡಿನಿಂದ ಶ್ರೀಮಂತ ಭಾರತಕ್ಕೆ ಹೊರಟಾಗ!!.
ಮೆಕಾಲೆ. ಹೌದು ಅಕ್ಷರಶಃ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆಯೇ. ಜಾಕರಿ ಮೆಕಾಲೆ ಮತ್ತು ಸೆಲಿನಾ ಮಿಲ್ಟ್ ರ ಮಗನಾಗಿ 1800 ರಲ್ಲಿ ಜನಿಸಿದವ. ಚಿಕ್ಕಂದಿನಿಂದಲೂ ಕ್ರಿಶ್ಚಿಯಾನಿಟಿಯ ಮೇಲೆ ಅಖಂಡ ಭಕ್ತಿ ಅವನಿಗೆ, ತಾತ ಪ್ರೆಸ್ಟಿಟೇರಿಯನ್ ಚರ್ಚ್ ಗೆ ಸೇರಿದವರು. ತಂದೆ-ತಾಯಿಯರೂ ಸಾಕಷ್ಟು ಮತೀಯ ಭಾವನೆಗಳಿದ್ದವರೇ. ಲಂಡನ್ ನ ಹೌಸ್ ಆಫ಼್ ಕಾಮನ್ಸ್ ನಲ್ಲಿ ಇವ್ಯಾಂಜಲಿಕಲ್ ಪಕ್ಷದ ನಾಯಕನಾಗಿದ್ದ ಕಟ್ಟರ್ ಪಂಥಿಯಾಗಿದ್ದ ವಿಲಿಯಂ ವಿಲ್ಟರ್ ಫೋರ್ಸ್ ತಂದೆಗೆ ಆಪ್ತನಾಗಿದ್ದರಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮೆಕಾಲೆಗೆ ಬಾಲ್ಯದಿಂದಲೂ ಮತದ ವಿಷಪ್ರಾಶನ ಜೋರಾಗಿಯೇ ಆಗುತ್ತಿತ್ತು. ಹೀಗಾಗಿಯೇ ಆತ ಕ್ರಿಸ್ತಮತವೇ ಶ್ರೇಷ್ಟ ಎಂಬ ನಿಷ್ಕರ್ಷೆಗೆ ಬಂದು ಬಿಟ್ಟಿದ್ದ. ಅದು ತಪ್ಪಲ್ಲ, ಆದರೆ ಭುವಿಯ ಮೇಲೆ ಕ್ರೈಸ್ತರಲ್ಲದವರು ಬದುಕಲು ಅಯೋಗ್ಯರೆಂಬ ನಿರ್ಣಯವನ್ನೂ ಮಾಡಿಯಾಗಿತ್ತು. ಯೌವ್ವನದಲ್ಲಿ ಕೆಲಸಕ್ಕೆ ಪರದಾಡಿದ, ಕೈತುಂಬಾ ಸಂಬಳ ಸಿಗುವ ಕೆಲಸ ಅನುಮಾನವಾಗಿತ್ತು. ಬಡತನವೂ ಸಾಕಷ್ಟಿತ್ತು.
1833 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ನವೀಕರಿಸುವ ವಿಚಾರ ಸಂಸತ್ತಿನಲ್ಲಿ ಚರ್ಚೆಗೆ ಬಂತು. ಭಾರತದಲ್ಲಿ ಕಾನೂನು ರೂಪಿಸುವ ಸರ್ವೋಚ್ಚ ಸಮಿತಿಯೊಂದಕ್ಕೆ ಮೆಕಾಲೆಯನ್ನು ಹೆಸರಿಸಲಾಯ್ತು, ಇಂತಹ ಸಮಿತಿಗಳ ಕಿರಿಕಿರಿಗಳಿಂದ ನಲುಗಿಹೋಗಿದ್ದ ಕಂಪನಿ ಈಗ ಹೊಸ ಸದಸ್ಯ ಮೆಕಾಲೆಯನ್ನು ವಿರೋಧಿಸಿತು, ಇನ್ನೂ ಮೂವತ್ಮೂರರ ಹರೆಯದ ಮೆಕಾಲೆ ಅದೆಂತಹ ನಿರ್ಣಯ ಕೈಗೊಳ್ಳಬಲ್ಲ ಎಂಬ ಸಹಜ ವಾದ ಅವರದ್ದು. ಸಂಸತ್ತಿನ ಸದಸ್ಯರನೇಕರು ವಿರೋಧ ಮಾಡಿದರು. ವಿರೋಧಕ್ಕೆ ಕಾರಣವೂ ಇತ್ತು. ಮೆಕಾಲೆಗೆ ಕಾನೂನಿನ ಜ್ಞಾನ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇಕಾದಷ್ಟು ಇರಲಿಲ್ಲ.ಅತ್ತ ಅವನಿಗೆ ಕಾನೂನು ರೂಪಿಸುವಷ್ಟು ಭಾರತದ ಪರಿಚಯವೂ ಇರಲಿಲ್ಲ. ಅವನಿಗೆ ಇದ್ದ ಒಂದೇ ಒಂದು ’ಸದ್ಗುಣ’ ಆತ ಮಿಶನರಿಗಳಿಗೆ ಪೂರಕನಾಗಿದ್ದು ಮತ್ತು ಅವರ ಚಿಂತನೆಗಳನ್ನು ಭಾರತದಲ್ಲಿ ಚಾಲ್ತಿಗೆ ತರಲು ಸಮರ್ಥನಿದ್ದ ಎಂಬುದು ಮಾತ್ರ! ಮಿಶನರಿಗಳನೇಕರು ಸರ್ಕಾರದ ಮೇಲೆ ಒತ್ತಡ ತಂದರು. ಮೆಕಾಲೆಯ ಪಕ್ಷ ಗೆದ್ದಿತು. ಆತ 1834 ರ ಜೂನ್ 10 ಕ್ಕೆ ಮದ್ರಾಸಿಗೆ ಬಂದಿಳಿದ.
Thomas_Babington_Macaulay,_Baron_Macaulay_by_Sir_Francis_Grant
ಹಾಗೆ ಭಾರತಕ್ಕೆ ಹೊರಡುವ ಮುನ್ನ ತನ್ನ ಆಪ್ತರನ್ನೆಲ್ಲಾ ಸೇರಿಸಿ ಮಾಡಿದ ಭಾಷಣದಲ್ಲಿ ’ನನ್ನನ್ನು ಮಾಡಿದವರ ಘನತೆಯನ್ನು ನನ್ನೊಂದಿಗೆ ಒಯ್ಯುತ್ತಿದ್ದೇನೆ. ಅಷ್ಟೇ ಅಲ್ಲ ಹೊಸ ಜವಾಬ್ದಾರಿ ನಿರ್ವಹಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ.ಯೂರೋಪಿನಲ್ಲಿ ಕೆಲಸ ಮಾಡುವಾಗ ಇದ್ದಂತೆಯೇ ಏಷಿಯಾದಲ್ಲಿಯೂ ನೀವು ಹೇಳಿದ ಆದರ್ಶಗಳು ನನ್ನ ಮನಸಿನೊಳಗೆ ಇದ್ದೇ ಇರುತ್ತವೆ. ನಮ್ಮ ಸಂವಿಧಾನದ ಚೌಕಟ್ಟಿಗೆ ಸುಲಭಕ್ಕೆ ತರಲಾಗದ, ನಮ್ಮ ಮತದ ಮಹತ್ವವನ್ನು ಅರಿಯದ, ನಮ್ಮ ದಾಸ್ಯದಲ್ಲಿರುವ ಜನರ ನಡುವೆ ನಾನು ಕೆಲಸ ಮಾಡಬೇಕಿದೆ. ಹೀಗೆ ಮಾಡುವಾಗ ನಾನು,ಒತ್ತಡ ಹೇರದ, ಭ್ರಷ್ಟರಲ್ಲದ, ಜ್ಞಾನಿಗಳೂ, ಶ್ರೇಷ್ಟರೂ ಆದ ಕ್ರಿಶ್ಚನ್ನರು ನನ್ನನ್ನು ಕಾನೂನು ರೂಪಿಸಲು ಆರಿಸಿದ್ದಾರೆ ಎಂಬುದನ್ನು ಮರೆಯಲಾರೆ’ ಎಂದಿದ್ದ.
ಹ್ಞಾಂ, ಮುಂದಕ್ಕೆ ಸಾಗುವ ಮುನ್ನ ಒಮ್ಮೆ ಮೆಕಾಲೆಯ ಮೇಲೆ ಬಾಲ್ಯದಿಂದಲೂ ಪ್ರಭಾವ ಬೀರಿದ್ದ ವಿಲ್ಬರ್ ಫೋರ್ಸ್ ನ  ಬಗ್ಗೆ ತಿಳಿಯುವುದೊಳಿತು. ಆತ 1793 ರಲ್ಲಿಯೇ ಭಾರತದಲ್ಲಿ ಕ್ರೈಸ್ತ ಮತ ಪ್ರಚಾರ ತೀವ್ರಗೊಳ್ಳಬೇಕೆಂಬ ಠರಾವು ಮಂಡಿಸಿದ್ದ. ಜೊತೆಯಲ್ಲಿದ್ದವರು ಅದಕ್ಕೆ ತೀವ್ರ ಗಮನ ಕೊಟ್ಟಿರಲಿಲ್ಲ. ಹಠ ಬಿಡದಂತೆ ಆತ ಸತತ ಪ್ರಯತ್ನಗಳ ನಂತರ 1813 ರಲ್ಲಿ ಹೌಸ್ ಆಫ಼್ ಕಾಮನ್ಸ್ ನಲ್ಲಿ ಮತ್ತೆ ಈ ಪ್ರಶ್ನೆ ಎತ್ತಿದ. ಈ ಬಾರಿ ಜೊತೆಗಾರರನೇಕರಿಗೆ ಮೊದಲೇ ಪತ್ರ ಬರೆದು ತನ್ನ ಪರವಾಗಿರುವಂತೆ ಕೇಳಿಕೊಂಡಿದ್ದ. ಈ ಪ್ರಶ್ನೆಯ ಕುರಿತಂತೆ ಬಲು ಜೋರಾದ ಚರ್ಚೆಯೇ ನಡೆಯಿತು. ಅನೇಕ ಸಜ್ಜನರೂ ಅಲ್ಲಿದ್ದರು. ಭಾರತದಲ್ಲಿ 20 ವರ್ಷ ಅಧಿಕಾರಿಯಾಗಿದ್ದ ಸರ್ ಥಾಮಸ್ ಹೆನ್ರಿ ಮಾಂಟೆಗೊಮೆರಿ ತಾನು ಕೆಲಸ ಮಾಡಿದ ದಕ್ಷಿಣ ಭಾರತಕ್ಕಿಂತ ಲಂಡನ್ ಒಂದರಲ್ಲಿ ೧೫೦-೨೦೦ ಪಟ್ಟು ಹೆಚ್ಚು ಅಪರಾಧಗಳು ನಡೆಯುತ್ತವೆ ಎಂದಿದ್ದ. ಮೂರೆ, ಭಾರತೀಯರಿಗಿಂತ ಬುದ್ದಿವಂತರೂ, ಪರಿಶುದ್ದರೂ ಮತ್ಯಾರಿಲ್ಲ ಎಂದಿದ್ದ. ಲುಷಿಂಗ್ಟನ್ ನಂತೂ ಭಾರತ ಸಾಹಿತ್ಯ, ನೀತಿಗಳ ಆಗರ, ನೀತಿವಾಕ್ಯಗಳು ಪದೇ ಪದೇ ಇಣುಕುತ್ತವೆ, ಇಲ್ಲಿ ಕುನೀತಿ ಬೋದನೆಯ ಪುಸ್ತಕವನ್ನು ನಾನು ನೋಡಿಯೇ ಇಲ್ಲವೆಂದಲ್ಲ ಹೇಳಿದ್ದ.
ಆದರೆ ವಿಲ್ಬರ್ ಫೋರ್ಸ್ ತನ್ನ ನಿರ್ಧಾರಕ್ಕೆ ಕಟಿಬದ್ದನಾಗಿದ್ದ .ಆತ ಲಂಡನ್ನಿನಲ್ಲಿ ಕುಳಿತೇ ಭಾರತವನ್ನು ಅಧ್ಯಯನ ಮಾಡಿಬಿಟ್ಟಿದ್ದ ! ಸುದೀರ್ಘವಾದ ಭಾಷಣ ಮಾಡಿದ. ಮಾತಿನುದ್ದಕ್ಕೂ ಈ ದೇಶವನ್ನು-ಹಿಂದೂಗಳನ್ನು ಹಳಿದ. ನೀತಿಗೆಟ್ಟವರು, ಮೂಡನಂಬಿಕೆಗಳ ದಾಸರು, ಅಜ್ಞಾನಿಗಳು ಎಂದೆಲ್ಲಾ ಜರಿದ. ಜಗನ್ನಾಥನ ರಥದ ಚಕ್ರಕ್ಕೆ ತಲೆ ಕೊಡುವ, ಗಂಡ ಸತ್ತರೆ ಆತನೊಂದಿಗೆ ಹೆಂಡತಿಯನ್ನು ಸುಡುವ, ಭ್ರೂಣ ಹತ್ಯೆ ಮಾಡುವ ಜನ ಎಂಬೆಲ್ಲಾ ಅಂಶಗಳನ್ನು ಇಟ್ಟುಕೊಡು ಬಲವಾದ ವಾದ ಮಂಡಿಸಿದ, ಚರ್ಚೆ ತೀವ್ರವಾಯಿತು.
ಒಂದು ಹಂತದಲ್ಲಿ ವಿಲ್ಬರ್ ಫೋರ್ಸ್, ಭಾರತೀಯರು ಧರ್ಮದ ವಿಷಯದಲ್ಲಿ ಅದೆಷ್ಟು ಸಹನಶೀಲರೆಂದರೆ ನಮ್ಮಿಂದಾದ ತೀವ್ರ ಅಚಾತುರ್ಯವೂ ಅವರನ್ನು ರೊಚ್ಚಿಗೆಬ್ಬಿಸದು ಎನ್ನುತ್ತಾ ತನ್ನ ವಾದವನ್ನು ಮುಂದುವರೆಸಿದ. ಎಂತಹ ಪುಸ್ತಕಗಳು ಪ್ರಕಾಶನಗೊಳ್ಳಬೇಕು? ಅದನ್ನು ಯಾರು ಗಮನಿಸಬೇಕು ಎಂಬೆಲ್ಲಾ ನೀಲಿ ನಕಾಶೆಯನ್ನು ಮುಂದಿಟ್ಟ. ಕೊನೆಗೆ ಭಾರತೀಯರ ಪೂರ್ವಾಗ್ರಹಿಕೆಗಳನ್ನು ಮುಟ್ಟದೇ ಅವರನ್ನು ಜ್ಞಾನವಂತರನ್ನಾಗಿಸಬೇಕೆಂಬ ತನ್ನ ಹಂಬಲ ತೋಡಿಕೊಂಡ. ಅವನ ದ್ರಷ್ಟಿಯಲ್ಲಿ ಜ್ಞಾನವಂತರನ್ನಾಗಿಸುವುದೆಂದರೆ ಪಶ್ಚಿಮದ ರೀತಿ ರಿವಾಜುಗಳ ಶಿಕ್ಷಣ ಕೊಡುವುದಾಗಿತ್ತು. ಈ ಶಿಕ್ಷಣ ಪಡೆದ ಹಿಂದೂ ತನ್ನ ರಾಕ್ಷಸೀಯ  ವ್ಯವಸ್ಥೆಯನ್ನು ತೊರೆದು ಕ್ರಿಸ್ತನನ್ನು ಅಪ್ಪಿಕೊಂಡುಬಿಡುತ್ತಾನೆ ಎಂಬ ದೃಢ ವಿಶ್ವಾಸ ಅವನದಾಗಿತ್ತು.
ವಿಲ್ಬರ್ ಫೋರ್ಸ್ ನ ಕುರಿತಂತೆ ಇಷ್ಟು ತಿಳಿದ ಮೇಲೆ( ಸದ್ಯಕ್ಕಿಷ್ಟು ಮಾತ್ರ) ಮೆಕಾಲೆಯ ಹೇಳಿಕೆಗಳನ್ನು ಮತ್ತೊಮ್ಮೆ ಓದಿ ನೋಡಿ ’ನೀವು ಹೇಳಿದ ಆದರ್ಶವನ್ನು ಏಷಿಯಾದಲ್ಲಿ ಪಾಲಿಸುತ್ತೇನೆ ಎಂದಿದ್ದ. ಯಾವುವು ಆ ಆದರ್ಶಗಳು ಬಹುಶಃ ಈಗ ಅನುಮಾನಕ್ಕೆಡೆಯಿರಲಿಕ್ಕಿಲ್ಲ. ಅಷ್ಟೇ ಅಲ್ಲ ನನ್ನನ್ನು ಕಳುಹಿಸಿರುವವರು ಶ್ರೇಷ್ಠ ಕ್ರಿಶ್ಚನ್ನರು ಎಂಬುದನ್ನು ಮರೆಯಲಾರೆ ಎಂದಿದ್ದ. ಅದರರ್ಥ ,ಆತ ಭಾರತೀಯತೆಯ ನಾಶದ ತಯಾರಿಯನ್ನು ಚೆನ್ನಾಗಿ ಮಾಡಿಕೊಂಡಿದ್ದ.
ಸೆಪ್ಟೆಂಬರ್ ನಲ್ಲಿ ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ. ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಕೊರೆಯುತ್ತಿದ್ದವು. ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ. ಹೀಗಾಗಿಯೇ ಅವನ ಮೊದಲ ಆಕ್ರೋಶ ತಿರುಗಿದ್ದು ಬಂಗಾಳದ ಬ್ರಾಹ್ಮಣರ ಮೇಲೆ. ಪರಂಪರೆಯನ್ನು, ಧರ್ಮವನ್ನು ಉಳಿಸುವುದರಲ್ಲಿ ಅವರ ಪಾತ್ರ ಬಲು ದೊಡ್ಡದೆಂದು ಅವನಿಗೆ ಖಂಡಿತಾ ಗೊತ್ತಿತ್ತು. ಅದರೊಟ್ಟಿಗೆ ಅವರಾಡುವ ಸಂಸ್ಕೃತ ಭಾಷೆಯ ಮೇಲೆ ಅವನ ಆಕ್ರೋಶ, ಇನ್ನು ಸಹಜವಾಗಿಯೇ, ಸಹಜತೆಗೆ ಹತ್ತಿರವಾಗಿದ್ದ ಗುರುಕುಲಗಳನ್ನು ಕಂಡರೆ ಕೆಂಡಾಮಂಡಲನಾಗುತ್ತಿದ್ದ. ಭಾರತೀಯರು ಅನಾಗರೀಕರು, ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.
ಕಲ್ಕತ್ತಾಗೆ ಬಂದ ನಾಲ್ಕೇ ತಿಂಗಳಲ್ಲಿ ಅವನು ತನ್ನ ಸಮಿತಿಗೆ ಬರೆದ ಪತ್ರದಲ್ಲಿ ತನ್ನ ಅಭಿಪ್ರಾಯಗಳನ್ನು ವಿಸ್ತಾರವಾಗಿ ಮಂಡಿಸಿದ. ’ಭಾರತೀಯರು ಮಾತನಾಡುವ ಭಾಷೆಯಲ್ಲಿ ಸಾಹಿತ್ಯವಾಗಲೀ, ವೈಜ್ಞಾನಿಕ ಅಂಶಗಳಾಗಲೀ ಇಲ್ಲ. ಈ ಭಾಷೆಗಳು ಅದೆಷ್ಟು ಬಡಕಲು ಮತ್ತು ಒರಟೆಂದರೆ ಅದನ್ನು ಯಾವುದಾದರೂ ರೂಪದಲ್ಲಿ ಶ್ರೀಮಂತಗೊಳಿಸದಿದ್ದರೆ ಶ್ರೇಷ್ಠ ಸಾಹಿತ್ಯಗಳನ್ನು ಈ ನೆಲದ ಭಾಷೆಗಳಿಗೆ ಅನುವಾದ ಮಾಡಿಸುವುದೂ ಸಾಧ್ಯವಿಲ್ಲ’. ಎಂಬುದು ಇಲ್ಲಿನ ಭಾಷೆಗಳನ್ನು ಕುರಿತ ಅವನ ಅಭಿಪ್ರಾಯವಾಗಿತ್ತು. ನಿಸ್ಸಂಶಯವಾಗಿ ಅವನು ಸಂಸ್ಕೃತವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಥವಾ ಹೆಚ್ಚೆಂದರೆ ನಾಲ್ಕು ತಿಂಗಳಲ್ಲಿ ಆತ ಬಂಗಾಳಿ ಭಾಷಿಗರನ್ನು ಕಂಡಿರಬಹುದು ಅಷ್ಟೇ. ಎರಡೂ ಭಾಷೆಗಳ ಕುರಿತಂತೆ ಅವನಾಡಿರುವ ಮಾತುಗಳು ಅಕ್ಷರಶಃ ಅಪದ್ಧ. ಅಮೇರಿಕಾದ ಪಂಡಿತ ಹ್ಯೂಸ್ಟನ್ ಋಗ್ವೇದ ಸಾಹಿತ್ಯ ಮತ್ತು ಅಂದಿನ ಸಂಸ್ಕ್ರತ ಭಾಷೆಯ ಕುರಿತಂತೆ ’ನಮ್ಮ ಆಧುನಿಕ ಭಾಷೆಗಳಿಗಿಂತ ಸೂಕ್ಷ್ಮಾಭಿರುಚಿಯುಳ್ಳದ್ದಾಗಿದೆ, ಪ್ರಾಚೀನ ಕಾಲದಲ್ಲಿಯೇ ಇಷ್ಟು ಶುದ್ಧವಾದ ಭಾಷೆಯ ನಿರ್ಮಾಣ ಹೇಗೆ ಸಾಧ್ಯವಾಯಿತು?’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಮೆಕಾಲೆ ತನ್ನ ಹೇಳಿಕೆಗಳಿಗೆ ಯಾವ ಆಧಾರಗಳನ್ನೂ ಒದಗಿಸಲಿಲ್ಲ. ಅವನದು ಆಳುವವರಿಗಿರುವ ಸಹಜ ಪಿತ್ಥವಾಗಿತ್ತು ಅಷ್ಟೇ. ಆಳುವವರು ಆಳಿಸಿಕೊಳ್ಳುವವರಿಗಿಂತ ಶ್ರೇಷ್ಠರಾಗಿರಲೇಬೇಕೆಂಬ ನಂಬಿಕೆ!
ಮೆಕಾಲೆ ಇಲ್ಲಿಗೇ ನಿಲ್ಲಲಿಲ್ಲ.ನಾಲ್ಕು ತಿಂಗಳ ತನ್ನ ಅನುಭವವನ್ನು ಹೆಮ್ಮೆಯಿಂದ ಹಂಚಿಕೊಂಡ.’ಒಂದು ಒಳ್ಳೆಯ ಯೂರೋಪಿಯನ್ ಗ್ರಂಥಾಲಯದ ಒಂದು ಸಾಲು ಪುಸ್ತಕಗಳಿಗೆ, ಭಾರತ ಮತ್ತು ಅರೇಬಿಯಾದ ಅಷ್ಟೂ ಸಾಹಿತ್ಯ ಸರಿಸಾಟಿಯಾಗಲಾರದು’ ಎಂದಿದ್ದ. ಭಾರತದ ಅಷ್ಟೂ ಸಾಹಿತ್ಯವೆಂದಾಗ ವೇದ, ವೇದಾಂತ, ಸ್ಮೃತಿ ,ಶ್ರುತಿ ವಾಕ್ಯಗಳು,ರಾಮಾಯಣ -ಮಹಾಭಾರತದಂತಹ ಪುರಾಣ ಗ್ರಂಥಗಳು,ಭಗವದ್ಗೀತೆ,ಭಾಗವತ,ಅಲ್ಲದೇ ಬುದ್ಧ,ಶಂಕರ,ರಾಮಾನುಜ,ಮಧ್ವರ ಸಾಹಿತ್ಯಗಳು ಎಲ್ಲಾ ಅಂದರೆ ಎಲ್ಲವೂ ಸೇರಿತ್ತು.
ಬಹಳ ಉಲ್ಲೇಖ ಬೇಡ, ಜಗತ್ತಿನ ಇತಿಹಾಸವನ್ನು ಕುರಿತಂತೆ ಬಲು ನಿರ್ಧಾರದಿಂದ ಮಾತಾಡಬಲ್ಲ  ವಿಲ್ ಡ್ಯುರೆಂಟ್ ’ದ ಸ್ಟೋರಿ ಆಫ಼್ ಸಿವಿಲೈಸೇಷನ್’ ಗೂ ಮುನ್ನ ಬರೆದ ’ದ ಕೇಸ್ ಫ಼ಾರ್ ಇಂಡಿಯಾ ದಲ್ಲಿ ’ ಮರೆಯಬೇಡಿ ,ಭಾರತ ನಮ್ಮ ಜನಾಂಗದ ತವರೂರು, ಸಂಸ್ಕೃತ ಯೂರೋಪಿನ ಭಾಷೆಗಳ ಜನನಿ,ಆಕೆ ನಮ್ಮ ತತ್ವ ಶಾಸ್ತ್ರಗಳ ಜನನಿ, ಅರಬ್ಬರ ಮೂಲಕ ನಮ್ಮ ಬಹುಪಾಲು ಗಣಿತದ ತಾಯಿ ಆಕೆ. ಕ್ರೈಸ್ತ ಮತದಲ್ಲಿ ಹುದುಗಿರುವ ಆದರ್ಶಗಳಿಗೆ ಬುದ್ಧನ ಮೂಲಕ ನಮ್ಮಮ್ಮ ಅವಳು. ಹಳ್ಳಿಗಳ ಸಮುದಾಯ, ಸ್ವಯಂ ಸರಕಾರ, ಪ್ರಜಾಪ್ರಭುತ್ವಗಳ ಮೂಲಕ ಅವಳೇ ಅಮ್ಮ. ನೆನಪಿಡಿ, ತಾಯಿ ಭಾರತಿ ಅನೇಕ ಬಗೆಯಲ್ಲಿ ನಮ್ಮೆಲ್ಲರಿಗೂ ತಾಯಿಯೇ’ ಎಂದು ಬಲು ಸುಂದರವಾಗಿ ಭಾರತವನ್ನು ಚಿತ್ರಿಸಿದ್ದಾರೆ. ಒಂದೊಂದು ಸಾಲು ಓದುತ್ತಾ ಹೋದಂತೆಯೂ ರೊಮಾಂಚನಕಾರಿ ಅನುಭವವಾಗುವುದು.