IMPORTANT NOTICE

New official website is designed for Karada Community. Please visit www.karadavishwa.com for more details.

Thursday, 9 July 2015

ಪುರಾಣಗಳೆಂದು ಜರಿಯದಿರಿ!

ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ.
ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿಮಾಲಯದುದ್ದಕ್ಕೂ ಹರಡಿರುವ ಪರ್ವತ ಶ್ರೇಣಿಗಳು ಬೃಹತ್ತಾದ ಶಿವ ಲಿಂಗದ್ದೇ ನೆನಪು ತರುತ್ತವೆ. ಹೀಗಾಗಿಯೇ ಲಿಂಗ ಪೂಜೆಯ ಪರಿಕಲ್ಪನೆ ಭಾರತದಲ್ಲಿ ಅವತೀರ್ಣಗೊಂಡಿರಬಹುದು ಅನ್ನುತ್ತಾರೆ ಬಹುತೇಕ ವಿದ್ವಾಂಸರು. ಆದರೆ ಕ್ರಿಸ್ತಾನುಯಾಯಿ ಪಂಡಿತರನೇಕರು ಈ ಲಿಂಗ ಪೂಜೆಯನ್ನು ಶಿಶ್ನ ಪೂಜೆಯೆಂದು ಲೇವಡಿ ಮಾಡುತ್ತಾರೆ. ಅಷ್ಟೇ ಅಲ್ಲ, ಪೀಠವನ್ನು ಯೋನಿಯ ಸಂಕೇತವೆಂದು ಕರೆದು, ಲಿಂಗಪೂಜೆಯನ್ನು ಲೈಂಗಿಕ ಕ್ರಿಯೆಯ ಪ್ರತೀಕ ಎಂದುಬಿಡುತ್ತಾರೆ. ಒಂದು ಸಂಸ್ಕøತಿಯು ನಂಬಿಕೊಂಡು ಬಂದಿರುವ ಆಚರಣೆಯನ್ನು ಅವಹೇಳನ ಮಾಡುವಲ್ಲಿ ಅವರೆಂದಿಗೂ ಹಿಂದುಮುಂದು ನೋಡುವುದಿಲ್ಲ. ಆದರೆ ಭಾರತದ ಯಾವೊಬ್ಬ ಚಳವಳಿಕಾರನೂ ಶಿಲುಬೆಯೇರಿದ ಏಸುಕ್ರಿಸ್ತನನ್ನು ನಮಸ್ಕರಿಸುವ ಜನರಿಗೆ ಶವ ನಮಸ್ಕಾರ ಮಾಡುವಿರೇಕೆ ಎಂದು ಪ್ರಶ್ನಿಸುವುದಿಲ್ಲ, ಅಲ್ಲವೆ? ಅದು ಮತ್ತೆ ನಮ್ಮ ಪರಂಪರೆಯ ಪಾಠ. ಪರಮಾತ್ಮ ತತ್ತ್ವ ಎಲ್ಲೆಡೆಯೂ ಇರುವುದರಿಂದ ಎಲ್ಲ ಮಾರ್ಗಗಳೂ ಅವನನ್ನೇ ಸೇರುತ್ತವೆ ಅಂತ!
Cosmic womb
ಇರಲಿ. ಈಗ ಪ್ರಶ್ನೆ ಇರೋದು ಮಹಾಕಾಲ ಶಿವನದ್ದು. ವಿಜ್ಞಾನಿಗಳನೇಕರಿಗೆ ದೀರ್ಘಕಾಲ ಕಾಡಿದ ಮತ್ತು ಕಾಡುತ್ತಲೇ ಇರುವ ಎರಡು ಸಂಗತಿಗಳು: ಒಂದು – ಆಕಾಶ, ಮತ್ತೊಂದು- ಕಾಲ. ಭಾರತದಲ್ಲಿ ಇವೆರಡಕ್ಕೂ ಶಿವನೇ ಉತ್ತರ. ಒಂದೆಡೆ ಚಿದಂಬರದ ನಟರಾಜ ಆಕಾಶ ತತ್ತ್ವದ ಪ್ರತೀಕವಾಗಿ ನಿಂತರೆ, ಮತ್ತೊಂದೆಡೆ ಉಜ್ಜಯಿನಿಯ ಮಹಾಕಾಲ. ಜ್ಯೋತಿರ್ಲಿಂಗವೊಂದಕ್ಕೆ ಮಹಾಕಾಲವೆಂದು ಹೆಸರಿಡುವುದೇ ರೋಮಾಂಚಕಾರಿ. ಅದರಲ್ಲೂ ಅದನ್ನು ನೆಲೆಗೊಳಿಸಲಾಗಿರುವ ಉಜ್ಜಯಿನಿಗೂ ಕಾಲಕ್ಕೂ ಇರುವ ಸಂಬಂಧ ಖಗೋಳದ ದೃಷ್ಟಿಯಿಂದ ವಿಶಿಷ್ಟ. ಹೀಗಾಗಿ ಆಕಾಶ ಕಾಯಗಳ ಕುರಿತಂತೆ ಆರ್ಯಭಟ ನಡೆಸಿದ ಅಧ್ಯಯನಕ್ಕೆ ಉಜ್ಜಯಿನಿಯೇ ಕೇಂದ್ರವಾಗಿತ್ತು. ಪ್ರಾಚೀನ ಭಾರತದಲ್ಲಿ ಕಾಲ ಗಣನೆಯ ಕೇಂದ್ರವಾಗಿದ್ದೂ ಉಜ್ಜಯಿನಿಯೇ. ಇಂದು ನಾವು ನಮ್ಮ ಮೊಬೈಲುಗಳಲ್ಲಿ ಗಡಿಯಾರ ಹೊಂದಿಸುವಾಗ ಆರಂಭದಲ್ಲಿ ಕೋಲ್ಕೊತ್ತಾಕ್ಕೋ ದೆಹಲಿಗೋ ಐಎಸ್‍ಟಿ ಹೊಂದಾಣಿಕೆ ಮಾಡುವುದಿಲ್ಲವಾ? ಹಾಗೆ ಇಡಿಯ ಭರತ ವರ್ಷದ ಕಾಲ ನಿರ್ಣಯ ಉಜ್ಜಯಿನಿಯ ಸಮಯಕ್ಕೆ ಹೊಂದಾಣಿಕೆಯಾಗಿರುತ್ತಿತ್ತಂತೆ. ಹೀಗಾಗಿ ಆತ ಮಹಾಕಾಲ!
ಹೀಗೆ ಅಕ್ಷಾಂಶ – ರೇಖಾಂಶಗಳಿಗೆ ಅನುಗುಣವಾಗಿ ಸಮಯ ಬೇರೆಬೇರೆ ಇರುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ಯಾವಾಗಲೋ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕಾಲ ನಾವು ನಿರ್ಧರಿಸಿದಂತೆ ಎಲ್ಲೆಡೆ ಅನ್ವಯವಾಗುವುದಿಲ್ಲ, ಬೇರೆ ಬೇರೆ ಗ್ರಹಗಳಲ್ಲಿ ಕಾಲಗತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದನ್ನೂ ನಮ್ಮವರು ಅರಿತಿದ್ದರು. ಸ್ವಲ್ಪ ಗೊಂದಲವೆನ್ನಿಸುತ್ತಿದೆಯೇ? ವಿವರಿಸುತ್ತೇನೆ ಇರಿ.
ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ಹಗಲು, ಉಳಿದದ್ದು ರಾತ್ರಿ ತಾನೆ? ಹಾಗೆ ಬೇರೆಬೇರೆ ಗ್ರಹಗಳು ತನ್ನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಧಿ ಬೇರೆಬೇರೆ. ಅಲ್ಲಿ ನಾವು ಕೈಗೆ ಕಟ್ಟಿಕೊಂಡ ಗಡಿಯಾರ ಉಪಯೋಗಕ್ಕೆ ಬರುವುದಿಲ್ಲ. ಬುಧ ತನ್ನ ಕಕ್ಷೆಯ ಮೇಲೆ ವೇಗವಾಗಿ ತಿರುಗಿದರೆ, ಶನಿ, ಯುರೇನಸ್, ನೆಪ್ಚೂನ್‍ಗಳೆಲ್ಲ ಬಲು ನಿಧಾನವಾಗಿ ಸುತ್ತುತ್ತವೆ. ಭೂಮಿಯ ಮೇಲೆ ನಿಮಗೆ 35 ವರ್ಷ ಅಂತ ಭಾವಿಸಿ. ನಿಮ್ಮೊಡನೆ ಶುಕ್ರನ ಮೇಲೆ ಹುಟ್ಟಿದವನಿಗೆ 57 ವರ್ಷವಾಗಿರುತ್ತದೆ. ಆಥ ನೀವು ಇಲ್ಲಿ ಹುಟ್ಟಿದಾಗ ಬುಧನ ಮೇಲೆ ಹುಟ್ಟಿದರೆ ಅವನ ಈಗಿನ ಆಯಸ್ಸು 145 ವರ್ಷಗಳು! ಚಕಿತಗೊಳಿಸುವ ಸಂಗತಿಯೆಂದರೆ, ಯುರೇನಸ್, ನೆಪ್ಚೂನ್, ಫ್ಲೂಟೋಗಳ ಮೇಲೆ ಅವನಿಗಿನ್ನೂ ಒಂದು ವರ್ಷವೂ ತುಂಬಿರುವುದಿಲ್ಲ! ಸೂರ್ಯನನ್ನು ಗ್ರಹಗಳು ಸುತ್ತುವ ಕಾಲವನ್ನು ವರ್ಷವೆಂದು ಕರೆದರೆ, ಪಾಫ, ಅತ್ಯಂತ ದೂರದಲ್ಲಿರುವ ಈ ಗ್ರಹಗಳು ಒಂದು ಸುತ್ತು ಬರುವುದರೊಳಗೆ ಅದೆಷ್ಟೋ ಭೂ ವರ್ಷಗಳು ಕಳೆದು ಬಿಟ್ಟಿರುತ್ತವೆ!
ಇನ್ನು, ಊಹಿಸಿಯೇ ರೋಮಾಂಚನಗೊಳ್ಳುವಂಥ ಸಂಗತಿಯೊಂದಿದೆ. ಅದೇನು ಗೊತ್ತಾ? ನೀವು ಹುಟ್ಟಿದಾಕ್ಷಣ ಹೇಗೋ ಯುರೇನಸ್ ತಲುಪಿಕೊಂಡುಬಿಟ್ಟರೆ, ನಿಮಗೆ ಎರಡು ವರ್ಷ ತುಂಬಿ ಮರಳಿದಾಗ ನಿಮ್ಮೊಡನೆ ಹುಟ್ಟಿದವರಿಗೆ ಇಲ್ಲಿ 70 ವರ್ಷವಾದರೂ ಆಗಿರುತ್ತದೆ. ಅಂದರೆ, ಅವರ 70 ವರ್ಷ ನಿಮ್ಮ ಎರಡು ವರ್ಷಕ್ಕೆ ಸಮ!
ಭಾರತೀಯ ಶಾಸ್ತ್ರಗಳು ಬಲು ಹಿಂದೆಯೇ ಇದನ್ನು ಅರಗಿಸಿಕೊಂಡು ಸಮರ್ಥವಾಗಿ ಪ್ರತಿಪಾದಿಸಿದ್ದವು. ಕೆಲವೊಂದು ಮತಗಳು ಭೂಮಿಯ ಹುಟ್ಟಿನ ನಿಖರ ದಿನಾಂಕ ಹೇಳಿ ಅಪಹಾಸ್ಯಕ್ಕೀಡಾದರೆ, ಇನ್ನೂ ಕೆಲವು ಕೊನೆಗಾಲ ಬಂತೆಂದು ಬೊಬ್ಬೆ ಹೊಡೆದು ಲೇವಡಿಗೊಳಗಾಗಿವೆ. ಆದರೆ ಸನಾತನ ಧರ್ಮ ಮಾತ್ರ ಮಹಾಕಾಲದ ಕಲ್ಪನೆಯನ್ನು ಬಲು ಚುರುಕಾಗಿ ಕಟ್ಟಿಕೊಟ್ಟಿದೆ.
ಮನುಷ್ಯನ ದಿನಮಾನಕ್ಕಿಂತಲೂ ದೀರ್ಘ ದೇವತೆಗಳ ದಿನಮಾನಗಳು. ಅವಕ್ಕಿಂತಲೂ ದೀರ್ಘ ಬ್ರಹ್ಮನ ದಿನ – ರಾತ್ರಿಗಳು. ಬ್ರಹ್ಮನಿಗೆ ನೂರು ವರ್ಷಗಳಾದಾಗ ಪ್ರಳಯವಂತೆ. ಅಲ್ಲಿಗೆ ಎಲ್ಲವೂ ಸ್ತಬ್ಧ. ಆದರೆ ಮಹಾಕಾಲನ ಚಟುವಟಿಕೆ ನಡೆದೇ ಇರುತ್ತದೆ. ಆತನ ಕಾರಣದಿಂದಾಗಿ ನಟರಾಜ ಜಾಗೃತವಾಗಿ ಢಮರು ನಿನಾದವಾಗುತ್ತದೆ. ಪರಬ್ರಹ್ಮ ತತ್ತ್ವ ಸೃಷ್ಟಿಕಾರ್ಯಕ್ಕೆ ಅಣಿಯಾಘುತ್ತದೆ! ಒಟ್ಟೂ ಸೃಷ್ಟಿ ರಹಸ್ಯದ ಅಸ್ಥಿಪಂಜರವಿದು.
ಈಗ ಕಾಲಗಣನೆಯತ್ತ ಹೊರಳೋಣ. ವಿಷ್ಣು ಪುರಾಣದ ಪ್ರಕಾರ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟು ಸಮಯವನ್ನು ನಿಮೇಷ ಎನ್ನಲಾಗುತ್ತದೆ. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಂದ ಒಂದು ಕಾಲ. 30 ಕಾಲಗಳಿಂದ ಒಂದು ಮುಹೂರ್ತ. ಇಂತಹ 30 ಮುಹೂರ್ತಗಳಿಂದ ಒಂದು ದಿನ. ಅಂದರೆ ಒಟ್ಟಾರೆ ಹಗಲು ರಾತ್ರಿ. ಆಮೇಲಿನದ್ದು ನಾವಂದುಕೊಂಡಂತೆ 30 ದಿನಗಳಿಗೆ ಒಂದು ಮಾಸ, ಆರು ಮಾಸಗಳಿಗೊಂದು ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ). ಈ ರೀತಿಯ ಎರಡೂ ಅಯನಗಳು ಸೇರಿ ನಮ್ಮ ಒಂದು ವರ್ಷ!
ನಮಗೆ ಒಂದು ವರ್ಷ , ದೇವತೆಗಳಿಗೆ ಒಂದು ದಿನ. ಉತ್ತರಾಯಣ ದೇವತೆಗಳ ಹಗಲು, ದಕ್ಷಿಣಾಯನ ಅವರ ರಾತ್ರಿ. ನಮಗೆ 360 ವರ್ಷಗಳಾದಾಗ ದೇವತೆಗಳಿಗೆ ಒಂದು ವರ್ಷ! ಅದನ್ನು ದಿವ್ಯ ವರ್ಷವೆಂದು ಕರೆಯಲಾಗಿದೆ.
ನನಗೆ ಗೊತ್ತು. ಅನೇಕರು ಅದಾಗಲೇ ಲೆಕ್ಕಾಚಾರ ಬಿಡುವ ಹಂತದಲ್ಲಿದ್ದಾರೆ. ಈ ಲೆಕ್ಕಗಳು ಸುಲಭವಾಗಲೆಂದೇ ದಿವ್ಯವರ್ಷ ಬಳಸಿದ್ದು. ನಾವು ನಾಲ್ಕು ಯುಗಗಳನ್ನು ಗುರುತಿಸುತ್ತೇವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಕೃತಯುಗದ ಅವಧಿ ನಾಲ್ಕು ಸಾವಿರ ದಿವ್ಯ ವರ್ಷಗಳು. ಅದಕ್ಕೆ ಪೂರ್ವ ಸಂಧ್ಯೆ ಹಾಗೂ ಸಾಯಂ ಸಂಧ್ಯೆಗಳು ತಲಾ 400 ವರ್ಷಗಳದ್ದು. ಒಟ್ಟಾರೆ 4,800 ದಿವ್ಯ ವರ್ಷಗಳು. ಒಂದೊಂದು ಯುಗಕ್ಕೂ ಈ ಸಂಖ್ಯೆ ಕಡಿಮೆಯಾಗುತ್ತ ಬಂದು, ಕಲಿಯುಗಕ್ಕೆ ಈ ಪ್ರಮಾಣ ಒಂದು ಸಾವಿರ ದಿವ್ಯ ವರ್ಷಗಳು, ಜೊತೆಗೆ ನೂರು – ನೂರು ವರ್ಷಗಳ ಪೂರ್ವ ಹಾಗೂ ಸಾಯಂ ಸಂಧ್ಯೆಗಳು ಸೇರಿದರೆ ಒಟ್ಟಾರೆ 1,200 ದಿವ್ಯ ವರ್ಷಗಳು. ಬರೋಬ್ಬರಿ ನಮ್ಮ ಲೆಕ್ಕದ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು!! ಇವುಗಳಲ್ಲಿ ನಾವಿನ್ನೂ ಐದು ಸಾವಿರ ವರ್ಷ ದಾಟಿರಬಹುದಷ್ಟೇ. ಕಲಿಯುಗದ ದೀರ್ಘ ಪಯಣಬಾಕಿ ಇದೆ. ಸದ್ಯಕ್ಕಂತೂ ಪ್ರಳಯದ ಮುನ್ಸೂಚನೆ ಇಲ್ಲ!
ಹಾ! ಮತ್ತೆ ಲೆಕ್ಕಾಚಾರಕ್ಕೆ ಬನ್ನಿ. ನಾಲ್ಕು ಯುಗಗಳ ಒಂದು ಚಕ್ರ, 12 ಸಾವಿರ ದಿವ್ಯ ವರ್ಷಗಳದ್ದಲ್ಲವೆ? ಇದು ಸಾವಿರ ಬಾರಿ ತಿರುಗಿ ಬಂದರೆ ಬ್ರಹ್ಮನ ಒಂದು ಹಗಲು. ಎರಡು ಸಾವಿರ ಬಾರಿ ಆದರೆ ಆತನ ಒಟ್ಟಾರೆ ಒಂದು ದಿನ. ಇಂತಹ ದಿನಗಳು, ಮಾಸಗಳು, ವರ್ಷಗಳು ಕಳೆಯಬೇಕು. ಬ್ರಹ್ಮನಿಗೆ ಹೀಗೆ ನೂರು ವರ್ಷಗಳಾದಾಗ ಅದು ಪರಮಾಯಸ್ಸಂತೆ. ಮತ್ತೊಂದು ಹೊಸ ಸಋಷ್ಟಿಗೆ ಮುನ್ನದ ಮಹಾ ಪ್ರಳಯ ಕಾಲ ಅದು.
ಒಟ್ಟಾರೆ ಲೆಕ್ಕಾಚಾರ 8.64 ಟ್ರಿಲಿಯನ್ ವರ್ಷ ಭೂಮಿಯ ಆಯಸ್ಸು ಎಂದಾದರೆ, ಅದರಲ್ಲಿ ಈಗಾಗಲೇ ಪರಾರ್ಧವೆಂಬ ಬ್ರಹ್ಮನ ಅರ್ಧ ಆಯಸ್ಸು ಮುಗಿದಿದೆ. ಅಲ್ಲಿಗೆ, 4.32 ಅರಿಲಿಯನ್ ವರ್ಷಗಳು ಕಳೆದುಹೋಗಿವೆ. ನನಗೆ ಗೊತ್ತು. ಈ ಸಂಖ್ಯೆಯನ್ನು ನಮ್ಮಲ್ಲಿ ಕೆಲವರು ಗಾಬರಿಯಿಂದ ಗಮನಿಸುತ್ತಾರೆ. ಕೆಲವರು ಇದನ್ನು ಪುರಾಣವೆಂದು ತಳ್ಳಿ ಹಾಕಿದರೆ, ಇನ್ನೂ ಕೆಲವರು ಈ ಸಂಖ್ಯೆಯನ್ನು ಊಹಿಸಿಕೊಳ್ಳಲಾಗದೆ ಹೆಣಗುತ್ತಾರೆ.
ಇಷ್ಟೆಲ್ಲ ಓದಿಕೊಂಡ ಮೇಲೂ 2ಜಿ ಹಗರಣದ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇಂದಿನ ದಿನಮಾನದಲ್ಲೆ ಹೆಣಗಾಡುತ್ತಿರುವಾಗ, ಋಷಿಗಳ ಕಾಲದಲ್ಲಿ ಅಷ್ಟು ದೊಡ್ಡ ಸಂಖ್ಯೆಯನ್ನು ಲೀಲಾಜಾಲವಾಗಿ ಬಳಕೆ ಮಾಡಿ ಕಾಲ ಗಣನೆ ಮಾಡುತ್ತಿದ್ದರಲ್ಲ, ಆ ಸಾಮಥ್ರ್ಯದ ಕುರಿತು ಒಮ್ಮೆ ಆಲೋಚಿಸಿ. \
ಆಧುನಿಕ ವಿಜ್ಞಾನ ಇದಕ್ಕೆ ಹೊರತಾಗಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ವಿಲಿಯಂ ಥಾಮ್ಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ, ಭೂಮಿ ಹುಟ್ಟಿ 20ರಿಂದ 400 ದಶಲಕ್ಷ ವರ್ಷಗಳಾಗಿರಬಹುದು ಎಂದು ಅಂದಾಜಿಸಿದ. ಬಹುಶಃ ಆಗಿನ ಕಾಲಕ್ಕೆ ಇದೇ ದೊಡ್ಡ ಗಣನೆಯಾಗಿರಲಿಕ್ಕೆ ಸಾಕು. ಭೂಗರ್ಭ ಶಾಸ್ತ್ರಜ್ಞ ಚಾಲ್ರ್ಸ ಲಿಲ್ ಇದನ್ನೊಪ್ಪಲು ಸಿದ್ಧವಿರಲಿಲ್ಲ. ಜೀವ ವಿಜ್ಞಾನಿಗಳಿಗಂತೂ ಇಷ್ಟು ಕಡಿಮೆ ಅವಧಿಯಲ್ಲಿ ಜೀವ ವಿಕಾಸ ಪ್ರಕ್ರಿಯೆ ನಡೆದಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ಭೂಮಿಯ ಉಗಮದ ಕಲ್ಪನೆಯೂ ವಿಸ್ತಾರವಾಯಿತು. ವಿಕಿರಣ ಶಾಸ್ತ್ರದ ಅನ್ವಯಗಳಿಂದ ಭೂಮಿಯ ಹುಟ್ಟಿನ ಅಧ್ಯಯನ ಮಾಡಲಾಯ್ತು. ಆರ್ಥರ್ ಹೋಮ್ಸ್, ಪ್ರಾಚೀನವೆನ್ನುವ ಒಂದಷ್ಟು ಕಲ್ಲುಗಳ ಅಧ್ಯಯನ ನಡೆಸಿ, ಭೂಮಿ ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದ. ಮತ್ತೆ ಸಾಕಷ್ಟು ಸಂಶೋಧನೆಗಳು, ಚರ್ಚೆಗಳು ನಡೆದು ಆಧುನಿಕ ರೇಡಿಯೋ ಮೆಟ್ರಿಕ್ ವಿಧಾನದಿಂದ ಹಳೆಯ ಪರ್ವತ ಶ್ರೇಣಿಗಳ ಅಧ್ಯಯನ ನಡೆಸಿದಾಗ ನಾಲ್ಕೂವರೆ ಬಿಲಿಯನ್ ವರ್ಷಗಳೆಂದು ಅಂದಾಜಿಸಲಾಯ್ತು. ವಿಜ್ಞಾನದ ಹೊಸ ಶಾಖೆ ಅಧ್ಯಯನಕ್ಕೆ ಅತ್ಯಾಧುನಿಕ ಮಾರ್ಗ ತೋರುವವರೆಗೂ ಅವರೆಲ್ಲ ಇದನ್ನು ನಂಬುತ್ತಾರೆ.
ಹಾ! ಅಂದಹಾಗೆ ನಾವು ಪುರಾಣಗಳಲ್ಲಿ ಯಾವುದನ್ನು ಬ್ರಹ್ಮನ ಒಂದು ದಿನವೆಂದು ಕರೆದೆವೋ ಅದು ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ತನ್ನ ಅಕ್ಷದ ಸುತ್ತ ತಾನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಕಾಲವೆಂದು ವಿಜ್ಞಾನದ ಲೆಕ್ಕಾಚಾರವಂತೆ. ಹೀಗೇ ಅದು ವಿಶ್ವದ ಕೇಂದ್ರವಾದ ಪರಬ್ರಹ್ಮನನ್ನು ಒಂದು ಸುತ್ತು ಬಂದರೆ ಒಂದು ವರ್ಷ ಇರಬಹುದು. ಈ ರೀತಿಯ ನೂರು ವರ್ಷಗಳು ವಿಶ್ವದ ಆಯಸ್ಸೆಂಬುದು ನಮ್ಮ ಅಂದಾಜಾ? ಗೊತ್ತಿಲ್ಲ.
ವಿಜ್ಞಾನಕ್ಕೆ ಎಲ್ಲ ಗೊತ್ತಿದೆ. ಅದು ಹೇಳಿದ್ದು ಮಾತ್ರ ಸತ್ಯವೆಂದು ನಂಬುತ್ತೇವಲ್ಲ; ಮೂಢ ನಂಬಿಕೆಗಳಲ್ಲಿ ಅದೂ ದೊಡ್ಡದ್ದೇ. ವಿಜ್ಞಾನ ಅನೇಕ ವಿಚಾರಗಳಲ್ಲಿ ಕೈಚೆಲ್ಲಿ ಸುಮ್ಮನಾಗುತ್ತದೆಯಷ್ಟೇ ಅಲ್ಲ, ತಾನೇ ಹಿಂದೆ ಸಾಬೀತುಪಡಿಸಿ ಸತ್ಯವೆಂದು ಸಾರಿದ್ದನ್ನು ಅಲ್ಲಗಳೆದು ಗೊಂದಲವೆಬ್ಬಿಸಿಬಿಡುತ್ತದೆ.
ಅದಕ್ಕೇ ಹಳೆಯದನ್ನೆಲ್ಲ ಪುರಾಣವೆಂದು ಜರಿಯಬೇಡಿ. ಹೊಸತು ವಿಜ್ಞಾನವೆಂದು ಹಿಗ್ಗಿಬಿಡಬೇಡಿ. ಮಧ್ಯೆ ನಿಂತು ಹಂಸದಂತೆ ಹಾಲಿನಿಂದ ನೀರು ಬೇರೆ ಮಾಡಿ ಹಾಲನ್ನು ಸೇವಿಸಿ, ಅಷ್ಟೇ. ಭಾರತ ಅದನ್ನು ಹೇಳಿದ್ದಲ್ಲದೆ, ಆಚರಿಸಿತು ಕೂಡ. ಹೀಗಾಗಿಯೇ ಅದು ವಿಶ್ವಗುರು!

No comments:

Post a Comment