IMPORTANT NOTICE

New official website is designed for Karada Community. Please visit www.karadavishwa.com for more details.

Saturday, 11 July 2015

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ ಪ್ರತಿಯೊಬ್ಬನಿಗೂ ಸೂರ್ಯನೇ ನಮಗೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರವಾದಿಗಳು ಅದನ್ನು ಹೇಳಿ ದೃಢಪಡಿಸಿ ಹೋದರು.  ಈಗಲೂ ಈ ವಾಕ್ಯಗಳನ್ನು ದೃಢವಾಗಿ ನಂಬಿರುವ ಅನೇಕರು “ಭೂಮಿ ತಿರುಗುವುದೇ ನಿಜವಾದರೆ ಮೇಲಕ್ಕೆಸೆದ ಚೆಂಡು ಕೆಳಗೆ ಬೀಳುವಾಗ ನಮ್ಮ ಕೈಗೇ ಬೀಳುವುದು ಹೇಗೆ? ಅದು ಪಕ್ಕದಲ್ಲೆಲ್ಲೋ ಹೋಗಿ ಬೀಳಬೇಕಲ್ಲವೆ? “ ಎಂದು ಬಾಲಿಶವಾಗಿ ಪ್ರಶ್ನಿಸುತ್ತಾರೆ. ಪಾಪ. ಇಂತಹವರ ವಿರುದ್ಧ ಅನೇಕ ಶತಮಾನಗಳ ಕಾಲ ವಿಜ್ಞಾನಿಗಳೂ ದನಿಯೆತ್ತಲಾಗದೆ ಕೊರಗಿದ್ದರು. ಕೋಪರ್ನಿಕಸ್, ಗೆಲಿಲಿಯೋರಂಥವರೆಲ್ಲ ಅದೇ ಸಾಲಿಗೆ ಸೇರಿದವರು.
su
ಆದರೆ ಈ ದೇಶ ಹಾಗಲ್ಲ. ಕಣ್ಣಿಗೆ ಕಾಣುವ ಈ ವಿಶ್ವದ ಕೇಂದ್ರ ಸೂರ್ಯನೇ ಎಂಬ ಅರಿವು ಇಲ್ಲಿನವರಿಗೆ ಇತ್ತು. ಸಕಲ ಚರಾಚರಗಳ ಪ್ರೇರಕ ಶಕ್ತಿಯೂ ಅವನೇ ಎಂಬುದೂ ಸ್ಪಷ್ಟವಾಗಿ ಗೊತ್ತಿತ್ತು. ಅದೂ ಒಂದೆರಡು ಸಾವಿರ ವರ್ಷಗಳ ಹಿಂದಲ್ಲ; ಋಗ್ವೇದ ಕಾಲದಿಂದಲೂ ಕೂಡ!
ಸಾಯಣರು ತಮ್ಮ ಋಗ್ವೇದ ಭಾಷ್ಯದಲ್ಲಿ `ಸೂರ್ಯ’ ಪದಕ್ಕೆ ಶ್ರೇಷ್ಠ, ಒಡೆಯ, ಸರ್ವಾಂತರ್ಯಾಮಿ, ಸರ್ವಪ್ರೇರಕ ಎಂಬೆಲ್ಲ ಅರ್ಥ ಹೇಳಿದರೆ; ಯಾಸ್ಕರು ತಮ್ಮ ನಿರುಕ್ತದಲ್ಲಿ ಸಂಚರಿಸುವವ, ಸೃಷ್ಟಿಸುವವ, ಪ್ರೇರೇಪಿಸುವವ ಎಂದೆಲ್ಲ ಗುಣಗಾನ ಮಾಡುತ್ತಾರೆ. ಅಲ್ಲಿಗೆ ಇಂದಿನ ವಿಜ್ಞಾನ ಸೂರ್ಯನ ಕುರಿತಂತೆ ನಡೆಸಿದ ಎಲ್ಲ ಸಂಶೋದನೆಗಳೂ ಇದರೊಳಗೆ ಸೇರಿಕೊಂಡಂತಾಯ್ತು. ನಮ್ಮ ಋಷಿಗಳು ಇಲ್ಲಿಗೇ ನಿಲ್ಲದೆ, ಸ್ಥಾವರ ಮತ್ತು ಜಂಗಮಾತ್ಮಕವಾದ ಪ್ರತಿಯೊಂದಕ್ಕೂ ಸೂರ್ಯನೇ ಅಂತರಾತ್ಮವೆಂದೂ ಬಣ್ಣಿಸಿ ಕೃತಾರ್ಥರಾಗಿದ್ದಾರೆ.
ಹಾಗಂತ ಈ ಲೇಖನ ಮಾಲೆಯುದ್ದಕ್ಕೂ ಬಣ್ಣಿಸಿದ ಸೃಷ್ಟಿಯ ಆದಿಪುರುಷ ಪರಬ್ರಹ್ಮ ಈ ಸೂರ್ಯನಲ್ಲವೆಂಬ ಜ್ಞಾನ ಋಷಿಗಳಿಗಿತ್ತು. ಭಗವದ್ಗೀತೆಯಂತೂ ಆ ಪರಮಾತ್ಮನೆದುರಿಗೆ ಈ ಸೂರ್ಯ ಕಳಾಹೀನವೆಂದು ಹೇಳಿದೆ. ಒಂದಂತೂ ಸ್ಪಷ್ಟ. ನಮ್ಮ ಕಣ್ಣೆದುರಿಗೆ ಕಾಣುವ ಗ್ರಹ – ಉಪಗ್ರಹಗಳ ಈ ಲೋಕಕ್ಕೆ ಸೂರ್ಯನೇ ಅಧಿಪತಿ. ಹೀಗೆ ಅನೇಕ ಲೋಕಗಳು ಸೇರಿ ನಿರ್ಮಾಣಗೊಂಡ ಮಹಾವಿಶ್ವದ ಅಧಿಪತಿ ಮಹಾಸೂರ್ಯ ಪರಮಾತ್ಮ ಎಂದಾಯ್ತು.
ಆ ವಿಶಿಷ್ಟ ಶಕ್ತಿಯಿಂದ ಪ್ರೇರಣೆ ಪಡೆದ ಈ ವಿಶ್ವ ಅದೆಷ್ಟು ಸರಳವಾಗಿದೆ ನೋಡಿ. ಪರಮಾತ್ಮ ತತ್ತ್ವದ ಸುತ್ತ ಸುತ್ತುವ ಇಡಿಯ ವಿಶ್ವ. ಅದರ ಮಿನಿಯೇಚರ್ ನಮ್ಮ ಸೌರ ಮಂಡಲ. ಇಲ್ಲಿ ಸೂರ್ಯನೇ ಪರಮಾತ್ಮ. ನೀವು ಅಣುವಿನ ಮಟ್ಟಕ್ಕೆ ಬಂದರೂ ಹಾಗೆಯೇ. ಪ್ರತಿಯೊಂದು ಪರಮಾಣುವಿನಲ್ಲೂ ಬಲಾಢ್ಯವಾದ ನ್ಯೂಕ್ಲಿಯಸ್ ಎಂಬ ಕೇಂದ್ರ, ಅದರ ಸುತ್ತಲೂ ಗಿರಗಿಟ್ಟಲೆಯಂತೆ ಸುತ್ತುವ ಎಲೆಕ್ಟ್ರಾನುಗಳು! ಇನ್ನು ನಮ್ಮ ವಿಚಾರಕ್ಕೆ ಬಂದರೆ, ಜೀವಕೋಶಗಳೂ ಹಾಗೆಯೇ. ಕೋಶಕ್ಕೊಂದು ಕೇಂದ್ರ, ಅದರ ಸುತ್ತಲೂ ರಚನೆಯಾಗಿರುವ ಜೀವ ಹಂದರ. ಪರಮಾತ್ಮ ತನ್ನಿರುವನ್ನು ಅಣುವಿನಿಂದ ಮಹತ್ತಿನವರೆಗೂ ಏಕಪ್ರಕಾರವಾಗಿ ತೊರಿಸಿಕೊಂಡಿದ್ದಾನೆ. ಹೀಗಾಗಿ “ಅಣೋರಣೀಯಾನ್ ಮಹತೋ ಮಹೀಯಾನ್” ಎಂದಾಗ ಇವೆಲ್ಲವೂ ಹಾದುಹೋಗುವುದು.
ನಮ್ಮ ಕಾಲ ಗಣನೆಯ ಕೇಂದ್ರ ಸೂರ್ಯ. ನಾವು ಹಗಲು ರಾತ್ರಿಗಳ ಲೆಕ್ಕಾಚಾರದಿಂದ ಶುರು ಮಾಡಿ ನಮ್ಮ ಆಯಸ್ಸು, ಭೂಮಿಯ ಆಯು, ವಿಶ್ವದ ಜೀವಾವಧಿಗಳನ್ನೆಲ್ಲ ಲೆಕ್ಕ ಹಾಕುತ್ತೇವಲ್ಲ, ಅದು ಸೂರ್ಯನ ಕಾರಣದಿಂದಲೇ. ಅವನಿಲ್ಲದ ಜಗತ್ತಿನ ಕಲ್ಪನೆ ಅಸಾಧ್ಯ. ನಮಗೆ ಹಗಲಿನ ಬೆಳಕೂ ಅವನದ್ದೇ; ರಾತ್ರಿ ಚಂದ್ರ ಪ್ರತಿಫಲಿಸುವ ಬೆಳಕೂ ಅವನದ್ದೇ! ರಾತ್ರಿಯ ವೇಳೆಗೆ ಮರತಪ್ರಾಯವಾಗುವ ಈ ಜಗತ್ತು ಬೆಳಕಾಗುವ ವೇಳೆಗೆ ಚೇತನವನ್ನು ಆವಾಹಿಸಿಕೊಂಡು ಜಾಗೃತವಾಗಲು ಆತನೇ ಕಾರಣ. ಭೂಮಿಯನ್ನು ಆತ ಆಕರ್ಷಿಸದೆ ಹೋಗಿದ್ದರೆ ಭೂಮಿ ಅದನ್ನು ಪ್ರತಿಭಟಿಸುವ ಜಗನ್ನಾಟಕ ನಡೆಯದೆ ಹೋಗಿದ್ದರೆ ಭೂಮಿಯ ಮೇಲೆ ಜೀವರಾಶಿಗಳು ಇರುತ್ತಲೇ ಇರಲಿಲ್ಲ. ಅರ್ಥವಾಗಲಿಲ್ಲವೆ? ವಿವರಿಸುತ್ತೇನೆ ಇರಿ.
ಭೂಮಿಯನ್ನು ಆದಿಶೇಷ ತಲೆಯ ಮೇಲೆ ಹೊತ್ತುಕೊಂಡಿದ್ದಾನೆ; ಅವನು ಅಲುಗಾಡಿದರೆ ಭೂಮಿಯ ನಾಶವೇ ಸರಿ ಅಂತ ಪುರಾಣಗಳಲ್ಲಿ ಹೇಳಿರುವುದನ್ನು ಕೇಳಿದ್ದು ನೆನಪಿದೆಯಾ? ನಾವೆಲ್ಲ ಇದನ್ನು ಆಡಿಕೊಂಡು ನಕ್ಕವರೇ. ಆದರೆ ವಿಜ್ಞಾನ ಅಧ್ಯಯನ ಹೆಚ್ಚಾದಂತೆ ಈ ಆದಿಶೇಷ ನಮ್ಮೆದುರು ಹೊಸತಾಗಿ ಅನಾವರಣಗೊಂಡ. ಭಾರತದಲ್ಲಿ ದೇವ ದಏವಿಯರ ಪರಿಕಲ್ಪನೆಗಳೆಲ್ಲವೂ ತಾತ್ತ್ವಿಕ ಹಿನ್ನೆಲೆಯುಳ್ಳವೇ ಎಂಬುದು ಅರಿವಾದರೆ, ಈ ಎಲ್ಲ ವೈಜ್ಞಾನಿಕ ಸತ್ಯಗಳ ಸುರುಳಿ ಬಿಚ್ಚುವುದು ಸುಲಭ.
ಸೂರ್ಯನ ಆಕರ್ಷಣ ಶಕ್ತಿ ಅದೆಷ್ಟೆಂದರೆ ಆತ ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳನ್ನು ತನ್ನೊಡಲೊಳಗೆ ಸೆಳೆದುಕೊಂಡುಬಿಡಲು ಸಿದ್ಧನಾಗಿಯೇ ಇರುತ್ತಾನೆ. ಅದಕ್ಕೇ ಅವನನ್ನು ಮಾರ್ತಾಂಡ ಎನ್ನೋದು. ಗೋಬಲ ಮಹರ್ಷಿಗಳ ಪ್ರಕಾರ ಮಾರ್ತಾಂಡ ಎಂದರೆ ಪ್ರಪಂಚದ ವಿಧ್ವಂಸಕ್ಕೆ ಕಾರಣನಾಗುವ ಪ್ರಳಯಕಾರಿ ಎಂದರ್ಥ. ಆತ ಸದಾ ಕಾಲ ಮಾರ್ತಾಂಡರೂಪೀ ಬಲವೊಂದನ್ನು ಭೂಮಿಯ ಮೇಲೆ ಹಾಕುತ್ತಲೇ ಇರುತ್ತಾನೆ. ಇತ್ತ ಭೂಮಿಯೂ ತನ್ನೊಡಲ ಸಾಮಥ್ರ್ಯವಷ್ಟನ್ನೂ ಬಗೆದು ಪ್ರಳಯವಾಗುವುದನ್ನು ತಡೆಗಟ್ಟುತ್ತಾಳೆ. ಸೂರ್ಯ ಭೂಮಿಯ ಮೇಲೆ ಹಾಕುವ ಬಲದಲ್ಲಿ ಭೂಮಿ ಸೂರ್ಯನ ಮೇಲೆ ಹಾಕುವ ಬಲವನ್ನು ಕಳೆದರೆ ಉಳಿಯುವ ಶೇಷವಿದೆಯಲ್ಲ. ಅದನ್ನೇ ನಮ್ಮವರು ಅತ್ಯಂತ ಪ್ರಾಚೀನವಾದ ‘ಆದಿಶೇಷ’ ಎಂದು ಕರೆದದ್ದು! ಈ ಆದಿಶೇಷವೇ ಭೂಮಿಯನ್ನು ಸೂಕ್ತ ಸ್ಥಾನದಲ್ಲಿ ಹಿಡಿದು ನಿಲ್ಲಿಸಿರೋದು. ಈ ಆದಿಶೇಷ ಏರುಪೇರಾದರೆ ಒಂದೋ ಭೂಮಿ ಸೂರ್ಯನೊಳಗೆ ಸೇರಿ ಹೋಗುತ್ತದೆ ಇಲ್ಲವೇ ಕಕ್ಷೆ ಬದಲಾಯಿಸಿಬಿಡುತ್ತದೆ. ಹೇಗಾದರೂ ಪ್ರಳಯ ಖಾತ್ರಿ. ಯಾವ ಜೀವಿಯೂ ಜೀವಿಸಲು ಭೂಮಿ ಯೋಗ್ಯವಾಗಿ ಉಳಿಯೋದಿಲ್ಲ.
ರಾಕ್ಷಸರ ಉಪಟಳ ಹೆಚ್ಚಾದಾಗ ಭೂದೇವಿ ಭಾರದಿಂದ ನಲುಗಿ ವಿಷ್ಣುವಿನ ಬಳಿ ಸಾಗಿ ಕಣ್ಣೀರ್ಗರೆಯುತ್ತಾಲೆಂಬುದನ್ನು ಎಲ್ಲ ಪುರಾಣಗಳಲ್ಲಿಯೂ ನೋಡುತ್ತೇವಲ್ಲ, ಅದು ಇದೇ ಆದಿಶೇಷ ಅಲುಗಾಡುವ ಪ್ರಸಂಗ. ಆಗಲೇ ಅವತಾರಗಳುದಿಸಿ ಕೆಡುಕನ್ನು ಕಡಿಮೆ ಮಾಡಿ ಭೂಮಿಯ ಶಕ್ತಿ ಹೆಚ್ಚಿಸುತ್ತಾರೆ. ರಾಮ ಕಾಡಿನಲ್ಲಿ ರಾಕ್ಷಸರ ಸಂಹಾರ ಮಾಡಿದನೆಂದರೆ ಕಾಡುಗಳ್ಳರ, ಮರ ಕಡಿಯುವವರ, ಪ್ರಾಣಿ ಹಿಂಸಕರನ್ನು ನಾಶ ಮಾಡಿದ ಎಂಬ ಅರ್ಥವೇ ಇರಬೇಕು; ಕೃಷ್ಣ ಯಮುನೆಯಲ್ಲಿ ಕಾಳಿಂಗನ ಮರ್ದಿಸಿದನೆಂದರೆ ನದಿಗೆ ವಿಷ ಕಕ್ಕುತ್ತಿದ್ದ ಜನರನ್ನು ನಾಶಗೈದಿರಬೇಕು. ಭೂಮಿಯನ್ನು ತಣಿಸಿ ಆಕೆಗೆ ಶಕ್ತಿಯನ್ನೇನೋ ಈ ರೀತಿ ತುಂಬಿಸಿದ್ದಾಯ್ತು. ಸೂರ್ಯನ ಮಾರ್ತಾಂಡರೂಪೀ ಬಲವನ್ನು ತಣಿಸುವುದು ಹೇಗೆ?
ಅದಕ್ಕೇ ಭಾರತದ ಋಷಿಗಳು ಉದಯಿಸುವ ಮತ್ತು ಅಸ್ತಮಿಸುವ ಸೂರ್ಯನಿಗೆ ಅಘ್ರ್ಯ ನೀಡುವ ಪರಂಪರೆ ತಂದರು. ಇದನ್ನೆ ಸಂಧ್ಯಾವಂದನೆ, ಸಂಧ್ಯಾ ಉಪಾಸನೆ ಎಂದು ಕರೆದರು. ತೈತ್ತಿರೀಯ ಆರಣ್ಯಕದ ಪ್ರಕಾರ ರಾಕ್ಷಸರು ಭಗವಂತನ ಕುರಿತು ತಪಸ್ಸು ಮಾಡಿ ಸೂರ್ಯನೊಡನೆ ಸದಾಕಾಲ ಕಾದಾಡುವ ವರ ಪಡೆದುಕೊಂಡರಂತೆ. ರಾಕ್ಷಸರನ್ನು ಕತ್ತಲಿಗೆ ಹೋಲಿಸುವುದಾದರೆ, ಕತ್ತಲು – ಬೆಳಕುಗಳ ಕದನವನ್ನೆ ಹಗಲು – ರಾತ್ರಿ ಎಂದು ಕರೆಯಬಹುದು ತಾನೆ? ಸಂಧ್ಯಾವಂದನೆ ಮಾಡುವಾಗ ನೀರನ್ನು ಅಭಿಮಂತ್ರಿಸಿ ತನ್ನೊಳಗಿನ ಪಾಪಪುರುಷನನ್ನು ನಾಶ ಮಾಡಿ ಪವಿತ್ರವಾಗುವ ವ್ಯಕ್ತಿ ಗಾಯತ್ರಿ ಮಂತ್ರದ ಉಚ್ಚಾರಣೆಯಿಂದಿಗೆ ಸೂರ್ಯನಿಗೆ ಅಘ್ರ್ಯ ಸಮರ್ಪಿಸುತ್ತಾನೆ. ಹೀಗೆ ಸಮರ್ಪಿಸಿದ ಅಘ್ರ್ಯವೇ ಸೂರ್ಯನಿಗೆ ವಜ್ರಕವಚದಂತೆ. ಅದರ ಮೂಲಕವೇ ಆತ ರಾಕ್ಷಸರೊಂದಿಗೆ ಕಾದಾಡಿ ಜಯಶೀಲನಾಗುತ್ತಾನಂತೆ. ಆತನ ಗೆಲುವು ನಮಗೆ ಬೆಳಕು!
ಹೌದು. ನನಗೆ ಗೊತ್ತು. ಇಷ್ಟನ್ನೂ ಕೇಳುವಾಗ ನಿಮಗೆ ನಗು ಬರುತ್ತಿರಬಹುದು. ನಾವು ಅಘ್ರ್ಯ ನೀಡದಿದ್ದರೆ ಬೆಳಕೇ ಆಗುವುದಿಲ್ಲವೇನೋ ಎಂದೂ ಕೇಳಬಹುದು. ನಾನು ಕೊಡುವ ಯಾವ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾರದು. ಆದರೆ ಒಂದಂತೂ ಸತ್ಯ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಖರ ಸೂರ್ಯ ರಷ್ಮಿಯಿಂದ ಬೆಂದು ಹೋಗಿವೆ. ಅಲ್ಲೆಲ್ಲ ಕುಡಿಯುವ ನೀರಿಗಿಂತ ಪೆಟ್ರೋಲೇ ಅಗ್ಗ. ಇನ್ನೂ ಕೆಲವು ದೇಶಗಳಲ್ಲಿ ಆತನ ಕಿರಣಗಳು ಅದೆಷ್ಟು ಕೋಮಲವೆಂದರೆ ಕುಡಿಯುವ ನೀರು ದ್ರವರೂಪದಲ್ಲಿರದೇ ಮಂಜುಗಡ್ಡೆಯಾಗಿಬಿಟ್ಟಿದೆ. ನೀರು ಬೇಕೆಂದರೆ ಮಂಜು ಕರಗಿಸಿ ಕುಡಿಯಬೇಕು.
ಭಾರತದ ಕಥೆಯೇ ಬೇರೆ. ಇಲ್ಲಿ ನದಿಗಳಿಗೆ ಕೊರತೆಯಿಲ್ಲ. ಫಲವತ್ತಾದ ಭೂಮಿಯ ಕೊರತೆಯಿಲ್ಲ. ಇಳುವರಿಯಂತೂ ಜಗತ್ತಿನ ಇತರ ಭಾಗಗಳಿಗಿಂತ ಹೆಚ್ಚು. ಏಕೆ ಹೀಗೆ? ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ನದಿಗಳು ಬತ್ತುತ್ತಿವೆ. ಭೂಮಿ ಬರಡಾಗುತ್ತಿದೆ. ಬೆಳೆಯ ಪ್ರಮಾಣ ನಿರೀಕ್ಷೆಯಷ್ಟಿಲ್ಲ. ಸೆಕೆ ತಡೆಯಲಾಗದಷ್ಟು ಹೆಚ್ಚುತ್ತಿದೆ. ಹೀಗೇಕೆ?
ವೈಜ್ಞಾನಿಕ ಬುದ್ಧಿಮತ್ತೆಯ ನೆಪದಲ್ಲಿ ಸೂರ್ಯನಿಗೆ ನಮಿಸುವ, ಭೂಮಿಯನ್ನು ತಣಿಸುವ ಆಚರಣೆಗಳನ್ನೆಲ್ಲ ಬಿಟ್ಟಿದ್ದೇ ಕಾರಣ ಇರಬಹುದಾ? ಹೌದೆಂದು ನಾನು ಹೇಳುತ್ತಿಲ್ಲ. ಪ್ರಶ್ನೆ ಕೇಳಿಕೊಂಡೆ ಅಷ್ಟೆ. ಹಾಗಂತ ಸೂರ್ಯನಿಗೆ ನಮಿಸುವ ಈ ಪರಂಪರೆ ಮೇಲ್ವರ್ಗದ ಜನರು ಹುಟ್ಟುಹಾಕಿದ್ದೆಂದು ಭಾವಿಸಬೇಡಿ. ಪ್ರಾಯಶಃ ಜಗತ್ತಿನ ಎಲ್ಲ ಬುಡಕಟ್ಟು ಜನಾಂಗಗಳೂ ಸೂರ್ಯನನ್ನು ಆರಾಧಿಸಿಯೇ ಆರಾಧಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಈಗಲೂ ಮತಾಂತರಗೊಳ್ಳದ ಜನ ಪೂಜಿಸುವುದು ‘ಡೋನ್ಯೋ – ಪೋಲೋ’ ಎಂಬ ಸೂರ್ಯ – ಚಂದ್ರರ ಕಲ್ಪನೆಯನ್ನೇ. ಆ ಸೂರ್ಯನನ್ನು ಅವರು ಹಾಡಿ ಹೊಗಳುತ್ತಾರೆ. ಅವನಿಗಾಗಿ ಹಬ್ಬ ಆಚರಿಸುತ್ತಾರೆ. ಬಲಿ ಕೊಡುತ್ತಾರೆ ಎಲ್ಲವೂ! ಹಾಗೆ ಮಾಡದ ಕೆಲವರು ಇತ್ತೀಚೆಗೆ “ನಾವು ಪರಮಾತ್ಮನಿಗೆ ಮಾತ್ರ ನಮಿಸುತ್ತೇವೆ, ಸೂರ್ಯನಿಗಲ್ಲ” ಎಂದು ಹೊಸ ವಾದ ಹುಟ್ಟುಹಾಕಿದ್ದಾರೆ. ಟಾಟಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುವವ “ನಾನು ನನ್ನ ಮ್ಯಾನೇಜರ್‍ಗೆ ಗೌರವ ಕೊಡಲಾರೆ, ರತನ್ ಟಾಟಾ ಮಾತು ಮಾತ್ರ ಕೇಳುತ್ತೇನೆ” ಎಂದರೆ ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನದ ವಾದ ಇದು. ಅಂತಹ ಕೆಲಸಗಾರನನ್ನು ರತನ್ ಟಾಟಾ ಕೂಡ ಕಂಪನಿಯಿಂದ ಕಿತ್ತೆಸೆಯುವುದರಲ್ಲಿ ಅನುಮಾಣವೇ ಇಲ್ಲ. ಏನಂತೀರಿ?
ಸೂರ್ಯನನ್ನು ಅವಜ್ಞೆ ಮಾಡುವ ಪ್ರಮೇಯವೇ ಇಲ್ಲ. ಪರಿಸರಕ್ಕೆ ಪೂರಕವಾಗಿ ಬದುಕುವುದು ಎಂದರೆ ಸೂರ್ಯನ ಗಡಿಯಾರಕ್ಕೆ ಹೊಂದಿಕೊಳ್ಳುವುದೆಂದೇ ಅರ್ಥ. ಆತ ಅಸ್ತಂಗತನಾಗುವಾಗ ಇಡಿಯ ಪ್ರಕೃತಿಯೇ ಚೈತನ್ಯಶೂನ್ಯವಾಗುತ್ತದೆ. ಪಕ್ಷಿಗಳು ಗೂಡು ಸೇರುತ್ತವೆ, ಕ್ರಿಯಾಶೀಲವಾಗಿದ್ದ ಕೀಟ – ಭ್ರಮರಗಳು ಸದ್ದು ನಿಲ್ಲಿಸುತ್ತವೆ. ಗವ್ವೆನ್ನುವ ನೀರವತೆ. ಬೆಳಗಾಗುವ ಒಂದು ತಾಸು ಮುನ್ನ ಕಾಡಿನ ಬಳಿ ಇರುವ ಯಾವುದಾದರೂ ಗುಡ್ಡವನ್ನೇರಿ ಕುಳಿತುಬಿಡಿ. ಬೆಳಗಾಗುವ ಆ ಇಡಿಯ ಪ್ರಕ್ರಿಯೆ ನೋಡಿ ನೀವು ದಂಗಾಗದಿದ್ದರೆ ಕೇಳಿ. ಆದಿತ್ಯನ ಆಗಮನದ ಮುನ್ಸೂಚನೆ ಮೊದಲು ಕೀಟಗಳಿಗೆ ದೊರೆಯುತ್ತದೆ. ಅವುಗಳ ಸದ್ದು ನಿಧಾನವಾಗಿ ಇಡಿಯ ಕಾಡನ್ನು ವ್ಯಾಪಿಸಿ ಕಾಡನ್ನು ಜುಯ್ಯೆನ್ನಿಸಿಬಿಡುತ್ತದೆ. ಒಂದೊಂದೇ ಜಾತಿಯ ಪಕ್ಷಿಗಳು ಅನುಕ್ರಮವಾಗಿ ಚಿಂವ್‍ಗುಡಲಾರಂಭಿಸುತ್ತವೆ. ರೆಕ್ಕೆ ಝಾಡಿಸಿ ಮೈಕೊಡವಿಕೊಂಡು ಆಹಾರ ಅರಸಿ ಹೊರಟೇಬಿಡುತ್ತವೆ. ಈ ಎಲ್ಲ ಪಕ್ಷಿಗಳಲ್ಲಿ ಅತ್ಯಂತ ಕೊನೆಗೆ ಕೂಗುವುದು ಕೋಳಿ. ಮನುಷ್ಯರಾದ ನಾವು ಕೋಳಿ ಕೂಗಿದ ಮೇಲೆ ಬೆಳಗಾಯ್ತು ಎನ್ನುತ್ತೇವೆ!
ಸೂರ್ಯ ಸಣ್ಣ ಕೀಟದಿಂದ ಹಿಡಿದು ಮನುಷ್ಯನವರೆಗಿನ ಪ್ರತಿಯೊಂದನ್ನೂ ತನ್ನ ಶಕ್ತಿಯಿಂದ ಪ್ರಚೋದಿಸುತ್ತಾನೆ. ನಮ್ಮೊಳಗಿನ ಪ್ರತಿಯೊಂದು ಜೀವಕೋಶಗಳೂ ಆತನಿಂದ ಪುಷ್ಟಿಗೊಳ್ಳುತ್ತವೆ. ಸೂರ್ಯನ ಬೆಳಕು – ಶಾಖದಲ್ಲಿ ಆಗುವ ಸಣ್ಣ ಏರುಪೇರುಗಳೂ ನಮ್ಮಲ್ಲಿ ಅನೇಕ ರೋಗಗಳನ್ನು ಹುಟ್ಟುಹಾಕಬಹುದು. ಋಗ್ವೇದದ ಮಂತ್ರವೊಂದು ಸೂರ್ಯನನ್ನು ಶರೀರಗತ ಬಾಹ್ಯರೋಗವನ್ನೂ ಹೃದಯದ ಅಂತರ ರೋಗವನ್ನೂ ನಾಶಗೊಳಿಸೆಂದು ಪ್ರಾರ್ಥಿಸುತ್ತದೆ. ಪ್ರಸ್ಕಣ್ವ ಋಷಿಯು ಈ ಮಂತ್ರದ ಮೂಲಕ ಚರ್ಮಸಂಬಂಧಿ ಕಾಯಿಲೆಯಿಂದ ಮುಕ್ತಗೊಂಡರಂತೆ. ಸೂರ್ಯಕಿರಣಗಳ ಕೊರತೆಯಿಂದ ವಿಟಮಿನ್ ಡಿ ನಷ್ಟವಾಗಿ ರಿಕೆಟ್ಸ್ ಕಾಯಿಲೆ ಬರುವುದೆಂದು ಪ್ರಾಥಮಿಕ ಶಾಲೆಯಲ್ಲೇ ಓದಿದ್ದೇವಲ್ಲ!
ಸೂರ್ಯ ಕಥನ ಮುಗಿಯುವಂಥದ್ದಲ್ಲ. ಯಾರು ಏನಾದರೂ ಮಾಡಿಕೊಳ್ಳಲಿ, ನಾವು ಸೂರ್ಯನಮಸ್ಕಾರಕ್ಕೆ ಅಣಿಯಾಗೋಣ, ಶತ್ರುಂಜಯರಾಗೋಣ!

No comments:

Post a Comment