IMPORTANT NOTICE

New official website is launched for Karada Community. Please visit www.karadavishwa.com for more details.

Saturday, 1 August 2026

ನಾಕದೆಡೆಗೆ ಸೇತುವೆ ದಾಟಿದ 'ಪದ್ಮಶ್ರೀ', 'ಸೇತುಬಂಧು' ಶ್ರೀ ಗಿರೀಶ್ ಭಾರದ್ವಾಜ್ : ರವೀ ಸಜಂಗದ್ದೆ

 ಅಕ್ಷರ ನಮನ

ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಯ ಹರಿಕಾರ, 'ಸೇತುಬಂಧು' (bridge man) ಎಂದೇ ಜಗತ್ಪ್ರಸಿದ್ಧರಾಗಿದ್ದ ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ್ ಅವರು ಇಂದು ನಿಧನರಾಗಿದ್ದಾರೆ. ಸಮಾಜಮುಖಿ ಚಿಂತನೆಯ, ಸರಳತೆಯ ಮತ್ತು ನಿಸ್ವಾರ್ಥ ಸೇವೆಯ ಒಂದು ಯುಗದ ಅಂತ್ಯವಾಗಿದೆ. ನದಿ, ತೊರೆಗಳಿಂದ ಕೂಡಿದ ಹಳ್ಳಿಗಾಡಿನ ಪ್ರದೇಶಗಳನ್ನು, ನೂರಾರು ಹಳ್ಳಿಗಳನ್ನು ತಮ್ಮ ತೂಗು ಸೇತುವೆಗಳ ಮೂಲಕ ಬೆಸೆದ ಆ ಮಹಾನ್ ಚೇತನ ಇಂದು ಇಹಲೋಕ ತ್ಯಜಿಸಿದೆ. ಅವರ ಬದುಕು, ಸಾಧನೆ, ಸಮಾಜಸೇವೆ ಮತ್ತು ಅವರು ಸಮಾಜಕ್ಕೆ ನೀಡಿದ ಅಪ್ರತಿಮ ಕೊಡುಗೆಗಳ ಒಂದು ಸಣ್ಣ ನೆನಪಿನ ಬುತ್ತಿ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಗದ್ವಿಖ್ಯಾತ ಎಂಜಿನಿಯರ್ ಆಗಿದ್ದ ಗಿರೀಶ್ ಭಾರದ್ವಾಜ್ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಗ್ರಾಮೀಣ ಪರಿಸರದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಅವರು ಪಟ್ಟಣದ ಐಷಾರಾಮಿ ಬದುಕನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಅವರ ಮನಸ್ಸು ತುಡಿದದ್ದು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸಲು! ಮಳೆಗಾಲ ಬಂತೆಂದರೆ ಹಳ್ಳಿಗಳ ಜನರು, ಶಾಲಾ ಮಕ್ಕಳು ನದಿ ದಾಟಲು ಪಡುವ ಪಾಡನ್ನು ಅವರು ಕಣ್ಣಾರೆ ಕಂಡಿದ್ದರು. ಆಧುನಿಕ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನವನ್ನು ಕೇವಲ ಕಾಗದದ ಮೇಲಷ್ಟೇ ಇಡದೆ, ಅದನ್ನು ತಳಮಟ್ಟದ ಜನರ ಬದುಕನ್ನು ಸುಗಮಗೊಳಿಸಲು ಬಳಸಬೇಕೆಂದು ಅವರು ನಿರ್ಧರಿಸಿದರು. ಇದೇ ಅವರ ಬದುಕಿನ ಮಹತ್ತರ ತಿರುವಿಗೆ ಕಾರಣವಾಯಿತು.

ಗಿರೀಶ್ ಭಾರದ್ವಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ತೂಗುಸೇತುವೆಗಳು. ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯೋಜನೆಗಳಿಗೆ ಪರ್ಯಾಯವಾಗಿ, ಅತ್ಯಂತ ಕಡಿಮೆ ವೆಚ್ಚದಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ ವಿನ್ಯಾಸವನ್ನು ಅವರು ರೂಪಿಸಿದರು.

ಮೊದಲ ಹೆಜ್ಜೆ: 1989ರಲ್ಲಿ ಸುಳ್ಯದ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮೊದಲ ತೂಗುಸೇತುವೆ ಇವರ ಯಶಸ್ಸಿನ ಪಯಣಕ್ಕೆ ಮುನ್ನುಡಿ ಬರೆಯಿತು.

ಸಾಧನೆಯ ಶಿಖರ: ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಭಾರತದಾದ್ಯಂತ ಸುಮಾರು 150ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ಯಶಸ್ವಿಯಾಗಿ ನಿರ್ಮಿಸಿದ್ದಾರೆ.

ಸಂಪರ್ಕ ಕ್ರಾಂತಿ: ಇವರು ನಿರ್ಮಿಸಿದ ಸೇತುವೆಗಳು ಹರಿಯುವ ನೀರಿನ‌ ನದಿ ತಟದ ಎರಡು ದಂಡೆಗಳ ನಡುವಿನ ಜನರ ಭಾವನಾತ್ಮಕ ಬೆಸುಗೆಯ ಬಂಧಗಳಾಗಿದ್ದವು. ಶಿಕ್ಷಣ, ವೈದ್ಯಕೀಯ ನೆರವು ಮತ್ತು ವ್ಯಾಪಾರಕ್ಕಾಗಿ ಹತ್ತಿರದ ಪಟ್ಟಣಗಳನ್ನು ಸೇರಲು ಈ ಸೇತುವೆಗಳು ಲಕ್ಷಾಂತರ ಜನರಿಗೆ ಆಸರೆಯಾದವು.

ಸರ್ಕಾರದ ನೆರವಿಗಾಗಿ ಕಾಯುತ್ತಾ ಕೂರದೆ, ಜನರ ಸಹಭಾಗಿತ್ವದೊಂದಿಗೆ ಕೆಲಸ ಮಾಡಿದರೆ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಗಿರೀಶ್ ಭಾರದ್ವಾಜ್ ಅವರು ನಿರೂಪಿಸಿದ್ದರು. ಅಪ್ರತಿಮ ಸಾಧನೆ ಮಾಡಿದರೂ ಗಿರೀಶ್ ಭಾರದ್ವಾಜ್ ಅವರು ಎಂದಿಗೂ ಅಹಂಕಾರ ಪಟ್ಟವರಲ್ಲ - ತುಂಬಿದ ಕೊಡ ತುಳುಕದು! ಅವರ ಸರಳತೆ, ಸೌಮ್ಯ ಸ್ವಭಾವ ಮತ್ತು ಸದಾ ನಗುವ ಮುಖ ಎಲ್ಲರನ್ನೂ ಆಕರ್ಷಿಸುತ್ತಿತ್ತು. ತಮಗೆ ಸಿಕ್ಕ ಪ್ರಚಾರ ಅಥವಾ ಪ್ರಶಸ್ತಿಗಳಿಗಿಂತಲೂ ಜನರ ಮುಖದಲ್ಲಿ ಮೂಡುವ ಸಂತಸವೇ ತಮಗೆ ಸಾವಿರ ಪಾಲು ದೊಡ್ಡ ಬಹುಮಾನ ಎಂದು ಅವರು ನಂಬಿದ್ದರು.

ಸೇತುವೆ ನಿರ್ಮಾಣದ ಜಾಗದಲ್ಲಿ ಅವರು ಸ್ಥಳೀಯ ಕಾರ್ಮಿಕರ ಜೊತೆ ಕುಳಿತು ಊಟ ಮಾಡುತ್ತಿದ್ದರು, ಅವರಲ್ಲೊಬ್ಬರಾಗಿ ಶ್ರಮಿಸುತ್ತಿದ್ದರು. ಯಾವುದೇ ಹಳ್ಳಿಗೆ ಹೋದರೂ ಅಲ್ಲಿನ ಜನರ ಪ್ರೀತಿಯ 'ಗಿರೀಶಣ್ಣ' ಆಗಿಬಿಡುತ್ತಿದ್ದರು! ಕಳಂಕ ರಹಿತ, ಪ್ರಾಮಾಣಿಕ ಮತ್ತು ಉತ್ಕೃಷ್ಟ ಕೆಲಸಕ್ಕೆ ಅವರು ಹೆಸರಾಗಿದ್ದರು. ಹಣ ಗಳಿಸುವುದು ಅವರ ಉದ್ದೇಶ ಆಗಿರದೆ, ಜನರ ಕಣ್ಣೀರನ್ನು ಒರೆಸುವ ಮತ್ತು ಹಳ್ಳಿಗಾಡಿನ ಜನರ ಅಗತ್ಯವಾದ ಸಂಪರ್ಕ ಕೊಂಡಿಗಳನ್ನು ನಿರ್ಮಿಸುವುದೇ ಅವರ ಪರಮ ಧೇಯವಾಗಿತ್ತು.

ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರವು 2017ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪ್ರಶಸ್ತಿ ಬಂದಾಗಲೂ ಅವರು, 'ಇದು ನನ್ನೊಬ್ಬನ ಸಾಧನೆಯಲ್ಲ, ನನ್ನ ಜೊತೆ ಶ್ರಮಿಸಿದ ಕಾರ್ಮಿಕರು ಮತ್ತು ಗ್ರಾಮಸ್ಥರ ಶ್ರಮಕ್ಕೆ ಸಂದ ಗೌರವ' ಎಂದು ಹೇಳುವ ಮೂಲಕ ತಮ್ಮ ವಿನಮ್ರತೆಯನ್ನು, ಬದುಕಿನ ಸಾರ್ಥಕತೆಯನ್ನು ಮೆರೆದಿದ್ದರು. ಜನರು ಪ್ರೀತ್ಯಾದರಗಳಿಂದ ಇವರನ್ನು ಭಾರತದ ಸೇತುವೆಗಳ ಸರದಾರ (Bridge Man of India) ಎಂದು ಕರೆಯುತ್ತಾರೆ.

ನನಗಿನ್ನೂ ನೆನಪಿದೆ! ಶ್ರೀಯುತರಿಗೆ ಪದ್ಮ ಪ್ರಶಸ್ತಿ ಘೋಷಣೆಯಾದಾಗ ಅಭಿನಂದನೆ ಸಲ್ಲಿಸಲು ಸಾಯಂಕಾಲ ಏಳೂವರೆ ಅಂದಾಜು ಫೋನಾಯಿಸಿದ್ದೆ. ತುಂಬಾ ವಿನಮ್ರತೆಯಿಂದ ನನ್ನ ಅಭಿನಂದನೆ ಸ್ವೀಕರಿಸಿದರು ಮತ್ತು ತಾನು ಅಲ್ಲೆಲ್ಲೊ ಹಳ್ಳಿಯ ಕಾಡಿನ ಮಧ್ಯೆ ಒಂದು ತೂಗು ಸೇತುವೆಯ ಕಾರ್ಯದಲ್ಲಿ ನಿರತರಾಗಿದ್ದೇನೆ ಮತ್ತು ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಕ್ಷಮಿಸಿ ಎಂದು ಸರಳತೆ ಮೆರೆದಿದ್ದರು. ಅವರ ಕೆಲಸ ಮತ್ತು ಸಾಧನೆ ಮಾತನಾಡುತ್ತಿತ್ತು! ಸಂದ ಬಿರುದು ಸನ್ಮಾನಗಳನ್ನು ಸ್ವೀಕರಿಸಿ, ಇನ್ನಷ್ಟು ಮತ್ತಷ್ಟು ಹುರುಪಿನಿಂದ ಜನಸೇವೆಗೆ ಅಣಿಯಾಗುತ್ತಿದ್ದ ಅಪರೂಪದ ವ್ಯಕ್ತಿ-ವ್ಯಕ್ತಿತ್ವ!

ಇತ್ತೀಚೆಗೆ ಬಂಧು ಮಿತ್ರರೊಡನೆ ಸೇರಿ ಉತ್ತರಭಾರತದ ಪ್ರವಾಸ ಮುಗಿಸಿ ವಾಪಸಾಗಿದ್ದರು. ಹಠಾತ್ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾದರು. ಗಿರೀಶ್ ಭಾರದ್ವಾಜ್ ಅವರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ನಿರ್ಮಿಸಿದ ನೂರಾರು ಸೇತುವೆಗಳು, ಅವುಗಳ ಮೇಲೆ ಪ್ರತಿದಿನ ನಡೆದಾಡುವ-ಓಡಾಡುವ ಲಕ್ಷಾಂತರ ಜನರ ಹೆಜ್ಜೆಗುರುತುಗಳು ಮತ್ತು ಕೃತಜ್ಞತಾ ಭಾವಗಳು ಅವರನ್ನು ಸದಾ ಜೀವಂತವಾಗಿಡುತ್ತವೆ. ನದಿ ದಾಟಲು ದೋಣಿಯನ್ನೋ, ತೆಪ್ಪವನ್ನೋ ಕಾಯುತ್ತಿದ್ದ, ಸದಾ ಭೀತಿಯಿಂದ ನೀರಿನ ತೊರೆಗಳನ್ನು ದಾಟುತ್ತಿದ್ದ ಹಳ್ಳಿಯ ಜನರಿಗೆ ಧೈರ್ಯ ಮತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾಶಿಲ್ಪಿ.

ಗಿರೀಶಣ್ಣನವರ ನಿಸ್ವಾರ್ಥ ಬದುಕು ಯುವ ಎಂಜಿನಿಯರ್‌ಗಳಿಗೆ ಮತ್ತು ಇಡೀ ಸಮಾಜಕ್ಕೆ ಒಂದು ದಾರಿದೀಪ. ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದ ಆ ಮಹಾ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಗಳು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.

ಶ್ರೇಷ್ಠ ಜನಸೇವಾ ಪರಂಪರೆಯನ್ನು ಹಾಕಿಕೊಟ್ಟ ದಾರ್ಶನಿಕರು ನೀವು. ಸಮಾಜ ಸದಾಕಾಲ ನಿಮ್ಮ ನೆನಪನ್ನು ಇಡಲಿದೆ. ನೀವು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವೆವು. ಹೋಗಿ ಬನ್ನಿ.

ಓಂ ಶಾಂತಿ ಶಾಂತಿ ಶಾಂತಿಃ 🙏🏻

--ರವೀ ಸಜಂಗದ್ದೆ
(ಕರಾಡ ವಿಶ್ವ )

Source : https://www.karadavishwa.com/pages/pb0m53-k4mc2a-cx3cjg

Friday, 31 July 2026

ಯಶಸ್ಸಿನ ಮೌಲ್ಯ: ಸೆಕೆಂಡುಗಳ ಸಾಧನೆಯ ಹಿಂದೆ ಇರುತ್ತದೆ ವರ್ಷಗಳ ಪರಿಶ್ರಮ! : ಎಸ್. ಎನ್. ಭಟ್ ಸೈಪಂಗಲ್ಲು

 (ತೆರೆಯ ಮರೆಯ ತಪಸ್ವಿ, ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ)

ನಾವು ಜೀವನದಲ್ಲಿ ಯಾರಾದರೂ ಮಹಾನ್ ಸಾಧಕರನ್ನು ನೋಡಿದಾಗ ಅಥವಾ ಸಮಾಜದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ ವ್ಯಕ್ತಿಗಳ ಯಶಸ್ಸನ್ನು ಕಣ್ಣುಂಬಿಕೊಂಡಾಗ, ಅತ್ಯಂತ ಸರಳವಾಗಿ "ಅಬ್ಬಾ! ಇವರಿಗೆ ಎಷ್ಟು ಸುಲಭವಾಗಿ ಕೀರ್ತಿ ಒಲಿಯಿತು, ಎಂತಹ ಅದೃಷ್ಟವಂತರು" ಎಂದು ಉದ್ಗರಿಸಿಬಿಡುತ್ತೇವೆ. ಆದರೆ, ಸಮಾಜದ ಮುಂಚೂಣಿಗೆ ಬಂದು ದೇಶವೇ ಗೌರವಿಸುವಂತಹ ಉನ್ನತ ಪದ್ಮ ಪ್ರಶಸ್ತಿಗೆ ಅವರು ಭಾಜನರಾಗುವ ಹಿಂದೆ, ದಶಕಗಳ ಕಾಲ ಪಟ್ಟ ಕಷ್ಟ, ಅನುಭವಿಸಿದ ಅಪಮಾನಗಳು ಮತ್ತು ಸದ್ದಿಲ್ಲದೆ ನಡೆಸಿದ ನಿರಂತರ ಪರಿಶ್ರಮ ಯಾರಿಗೂ ಸುಲಭವಾಗಿ ಕಾಣಿಸುವುದಿಲ್ಲ.

ಪ್ರಸಿದ್ಧ ಪ್ರೇರಕ ಭಾಷಣಕಾರರು ನಮ್ಮ ಇಂದಿನ ತಲೆಮಾರಿಗೆ ನೆನಪಿಸುವ ಜಗತ್ತಿನ ಶ್ರೇಷ್ಠ ಚಿತ್ರಕಲಾವಿದ ಪ್ಯಾಬ್ಲೋ ಪಿಕಾಸೊ ಅವರ ಜೀವನದ ಆ ಮಾರ್ಮಿಕ ಘಟನೆ ಇಲ್ಲಿ ನೆನಪಾಗುತ್ತದೆ. ಒಮ್ಮೆ ಮಹಿಳೆಯೊಬ್ಬಳು ಪಿಕಾಸೊ ಅವರನ್ನು ಗುರುತಿಸಿ, ಅವರಿಂದ ಒಂದು ಸಣ್ಣ ರೇಖಾಚಿತ್ರ ಬಿಡಿಸಿಕೊಡುವಂತೆ ವಿನಂತಿಸುತ್ತಾಳೆ. ಪಿಕಾಸೊ ಕೇವಲ 30 ಸೆಕೆಂಡುಗಳಲ್ಲಿ ಅತ್ಯಂತ ಸುಂದರವಾದ ಚಿತ್ರವೊಂದನ್ನು ಬಿಡಿಸಿ, "ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳು" ಎನ್ನುತ್ತಾರೆ. "ಕೇವಲ 30 ಸೆಕೆಂಡುಗಳ ಚಿತ್ರಕ್ಕೆ ಅಷ್ಟೊಂದು ಬೆಲೆಯೇ?" ಎಂದು ಆಕೆ ಆಶ್ಚರ್ಯಪಟ್ಟಾಗ, ಪಿಕಾಸೊ ನಸುನಗುತ್ತಾ ಹೇಳುತ್ತಾರೆ: "ಅಮ್ಮಾ, ಈ ಚಿತ್ರವನ್ನು ಕೇವಲ 30 ಸೆಕೆಂಡುಗಳಲ್ಲಿ ಬಿಡಿಸುವ ಸಾಮರ್ಥ್ಯ ಗಳಿಸಿಕೊಳ್ಳಲು ನಾನು ನನ್ನ ಜೀವನದ 30 ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಿದ್ದೇನೆ!"

ವೇದಿಕೆಯ ಮೇಲಿನ ಕೆಲವೇ ಕ್ಷಣಗಳ ಜಾದೂವಿನ ಹಿಂದೆ ಇಡೀ ಜೀವನದ ತಪಸ್ಸಿರುತ್ತದೆ ಎಂಬ ಈ ಸತ್ಯ, ಇತ್ತೀಚೆಗೆ ನಮ್ಮನ್ನಗಲಿದ ಕರಾವಳಿಯ ಹೆಮ್ಮೆಯ ಸಾಧಕ, ಭಾರತದ "ಸೇತುಬಂಧು" (Bridge Man of India) ಎಂದೇ ಜಗತ್ಪ್ರಸಿದ್ಧರಾದ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಗ್ರಾಮೀಣ ಭಾಗದ ನದಿ, ಹಳ್ಳ-ಕೊಳ್ಳಗಳಿಗೆ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ, ಕತ್ತಲಲ್ಲಿದ್ದ ಲಕ್ಷಾಂತರ ಜನರ ಬದುಕನ್ನು ನಾಗರಿಕ ಜಗತ್ತಿನೊಂದಿಗೆ ಬೆಸೆದ ಗಿರೀಶ್ ಭಾರದ್ವಾಜ್ ಅವರ ಸಾಧನೆಯ ಪಯಣ ಇಂದಿನ ತಲೆಮಾರಿನ ಪ್ರತಿಯೊಬ್ಬರಿಗೂ ದಾರಿದೀಪ. ಅವರ ಬದುಕು ಮತ್ತು ತೆರೆಯ ಮರೆಯ ಶ್ರಮ ಇಂದಿನ 'ಇನ್‌ಸ್ಟಂಟ್' ಯುಗದ ಯುವಜನತೆಗೆ ಕಲಿಸುವ 5 ಅತ್ಯಂತ ಪ್ರಮುಖ ಪಾಠಗಳು ಇಲ್ಲಿವೆ:

ಪಿಕಾಸೊ ಅವರ ಕೈಗಳು 30 ಸೆಕೆಂಡುಗಳಲ್ಲಿ ರೇಖಾಚಿತ್ರದ ಜಾದೂ ಮಾಡಲು ಕಾರಣ ಕಲೆಯ ಮೇಲಿನ ಅವರ ಸಂಪೂರ್ಣ ಹಿಡಿತ. ಅದೇ ರೀತಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಭಾರದ್ವಾಜ್ ಅವರು ತಮ್ಮ ಜ್ಞಾನವನ್ನು ಕೇವಲ ಕಚೇರಿಯ ನಾಲ್ಕು ಗೋಡೆಗಳಿಗೆ ಅಥವಾ ಕಾರ್ಪೊರೇಟ್ ಕಂಪನಿಯ ಸಂಬಳದ ಚೌಕಟ್ಟಿಗೆ ಸೀಮಿತಗೊಳಿಸಲಿಲ್ಲ. ಗ್ರಾಮೀಣ ಭಾಗಕ್ಕೆ ಹೊಂದುವಂತಹ, ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ ವಿಶಿಷ್ಟ ತಂತ್ರಜ್ಞಾನದ ಮೇಲೆ ಅವರು ಸಂಪೂರ್ಣ ಮಾಸ್ಟರಿ ಅಥವಾ ಪರಿಣತಿಯನ್ನು ಸಾಧಿಸಿದರು. ಯಾವುದೇ ರಂಗದಲ್ಲಿದ್ದರೂ ನಮ್ಮ ಕೌಶಲ್ಯವು ಕೇವಲ ಮೇಲೋಟದ ಪಠ್ಯಪುಸ್ತಕದ ಜ್ಞಾನವಾಗಿರದೆ, ರಕ್ತಗತವಾಗಿರಬೇಕು ಎಂಬುದಕ್ಕೆ ಅವರ ಇಂಜಿನಿಯರಿಂಗ್ ಚಾತುರ್ಯವೇ ಸಾಕ್ಷಿ.

ಜಗತ್ತು ಕೇವಲ ರಾಷ್ಟ್ರಪತಿ ಭವನದಲ್ಲಿ ಗಿರೀಶ್ ಭಾರದ್ವಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಆ ಭವ್ಯ ಕ್ಷಣವನ್ನು ಮಾತ್ರ ನೋಡಿತು. ಆದರೆ ಆ ಪ್ರಶಸ್ತಿಯ ಹೊಳಪಿನ ಹಿಂದೆ, ಕಡಿದಾದ ಕಾಡು-ಮೇಡುಗಳ ಮಧ್ಯೆ, ಹರಿಯುವ ರಭಸದ ನದಿಗಳ ತಟದಲ್ಲಿ, ನಡುಹಗಲಿನ ಪ್ರಖರ ಬಿಸಿಲಿನಲ್ಲಿ, ಯಾವುದೇ ಆಧುನಿಕ ಸುಖ-ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಅವರು ಸದ್ದಿಲ್ಲದೆ ನಡೆಸಿದ ದಶಕಗಳ ಕಾಲದ ಭಗೀರಥ ಸಿದ್ಧತೆ ಇತ್ತು. ಯಾವುದೇ ಪ್ರಚಾರದ ಗೀಳಿಲ್ಲದೆ, ಮಾಧ್ಯಮಗಳ ಹಪಹಪಿತನವಿಲ್ಲದೆ ಅವರು ನಡೆಸಿದ ಈ ಕಾಯಕವೇ ನಿಜವಾದ ದೇಶಸೇವೆ. ತೆರೆಯ ಮರೆಯ ಈ ತಪಸ್ಸೇ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಇತಿಹಾಸದ ಪುಟಗಳಲ್ಲಿ ಅಮರನನ್ನಾಗಿ ಮಾಡುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಯುವ ಪೀಳಿಗೆಗೆ ಎಲ್ಲವೂ ತಕ್ಷಣವೇ ಬೇಕಾಗಿದೆ—ತಕ್ಷಣದ ಉದ್ಯೋಗ, ತಕ್ಷಣದ ಹಣ, ತಕ್ಷಣದ ಕೀರ್ತಿ (Instant Gratification). ಆದರೆ ಗಿರೀಶ್ ಭಾರದ್ವಾಜ್ ಅವರ ಸಾಧನೆ ಒಂದೇ ರಾತ್ರಿಯಲ್ಲಿ ಸಂಭವಿಸಿದ ಪವಾಡವಲ್ಲ. ಅವರು ನಿರ್ಮಿಸಿದ ಪ್ರತಿಯೊಂದು ಸೇತುವೆಯೂ ಅವರ ವರ್ಷಗಳ ಯೋಚನೆ, ಸೂಕ್ಷ್ಮ ಯೋಜನೆ ಮತ್ತು ತಳಮಟ್ಟದ ನಿರಂತರ ಶ್ರಮದ ಫಲವಾಗಿತ್ತು. ತಕ್ಷಣಕ್ಕೆ ಸಿಗುವ ಯಶಸ್ಸು ಮರಳಿನ ಮನೆಯಂತೆ ಬೇಗನೇ ಕುಸಿದು ಬೀಳುತ್ತದೆ; ಬೇರುಗಳು ಎಷ್ಟು ಆಳವಾಗಿ ಮಣ್ಣಿನೊಳಗೆ ಇಳಿದಿರುತ್ತವೆಯೋ, ಮರವು ಬಿರುಗಾಳಿಗೆ ಸಿಲುಕಿದರೂ ಅಷ್ಟು ಗಟ್ಟಿಯಾಗಿ ನಿಲ್ಲುತ್ತದೆ ಎಂಬುದನ್ನು ಅವರ ಬದುಕು ಇಂದಿನ ಯುವಕರಿಗೆ ನೆನಪಿಸುತ್ತದೆ.

ಆರಂಭದ ದಿನಗಳಲ್ಲಿ ಸರಳವಾದ ಕಬ್ಬಿಣದ ಹಗ್ಗಗಳು ಹಾಗೂ ಮರದ ಹಲಗೆಗಳನ್ನು ಬಳಸಿ ನಿರ್ಮಿಸುವ ಇಂತಹ ತೂಗುಸೇತುವೆಗಳ ಸುರಕ್ಷತೆಯ ಬಗ್ಗೆ ಅಂದಿನ ವ್ಯವಸ್ಥೆ ಹಾಗೂ ಹಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದರು, ಅಪಹಾಸ್ಯ ಮಾಡಿದ್ದರು. ಕರಾವಳಿ ಮತ್ತು ಮಲೆನಾಡಿನ ಕಠಿಣ ಭೌಗೋಳಿಕ ಪರಿಸ್ಥಿತಿ, ಆರ್ಥಿಕ ಮುಗ್ಗಟ್ಟು ಹಾಗೂ ಈ ಟೀಕೆಗಳಿಗೆ ಅವರು ಎಂದಿಗೂ ಧೃತಿಗೆಡಲಿಲ್ಲ. ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸಿ, ಅವರು ನಿರ್ಮಿಸಿದ ಸೇತುವೆಗಳು ಪ್ರಕೃತಿಯ ವಿಕೋಪಗಳನ್ನೂ ಮೀರಿ ಗಟ್ಟಿಯಾಗಿ ನಿಂತಾಗ ವಿಮರ್ಶಕರಿಗೆ ತಂತಾನೇ ಉತ್ತರವೊಲಿಯಿತು. ಸೋಲು ಮತ್ತು ವಿರೋಧಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಸಾಧಕನಿಗೆ ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟರು.

ಗಿರೀಶ್ ಭಾರದ್ವಾಜ್ ಅವರು ಮನಸ್ಸು ಮಾಡಿದ್ದರೆ ತಮ್ಮ ಇಂಜಿನಿಯರಿಂಗ್ ಪದವಿಯ ಬಲದಿಂದ ವಿದೇಶಗಳಲ್ಲೋ ಅಥವಾ ಭಾರತದ ದೊಡ್ಡ ನಗರಗಳಲ್ಲೋ ಐಷಾರಾಮಿ ಉದ್ಯೋಗ ಹಿಡಿದು ಕೋಟ್ಯಂತರ ರೂಪಾಯಿ ಸಂಪಾದಿಸಬಹುದಿತ್ತು. ಆದರೆ ಅವರು ತಮ್ಮ ಅಮೂಲ್ಯ ಸಮಯ, ಶ್ರಮ ಮತ್ತು ಅಪಾರ ತಾಳ್ಮೆಯನ್ನು ಹಳ್ಳಿಗರ ಕಣ್ಣೀರು ಒರೆಸಲು ಮೀಸಲಿಟ್ಟರು. ಮಳೆಗಾಲದಲ್ಲಿ ಶಾಲೆಗೆ ಹೋಗಲಾಗದೆ, ಆಸ್ಪತ್ರೆಗೆ ತಲುಪಲಾಗದೆ ಪರದಾಡುತ್ತಿದ್ದ ಗ್ರಾಮೀಣ ಜನತೆಗೆ ಪೇಟೆಯ ಸಂಪರ್ಕ ಕಲ್ಪಿಸುವ ಮೂಲಕ ಅವರು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಭದ್ರ ಬುನಾದಿ ಹಾಕಿದರು. ಸಮಾಜಕ್ಕೆ ಮರಳಿ ಕೊಡುವ ಇಂತಹ ನಿಸ್ವಾರ್ಥ ಬುದ್ಧಿಯೇ ಒಬ್ಬ ಸಾಮಾನ್ಯ ವ್ಯಕ್ತಿಯನ್ನು 'ಮಹಾನ್ ಚೇತನ'ವನ್ನಾಗಿ ಮಾಡುತ್ತದೆ.

ಗಿರೀಶ್ ಭಾರದ್ವಾಜ್ ಅವರು ಇಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ದೇಶದ ಮೂಲೆ ಮೂಲೆಗಳಲ್ಲಿ ನಿರ್ಮಿಸಿದ ನ್ನೂರಕ್ಕೂ ಹೆಚ್ಚು ತೂಗುಸೇತುವೆಗಳು ಹಾಗೂ ವೈಚಾರಿಕವಾಗಿ ಸಮಾಜಕ್ಕೆ ಬಿಟ್ಟುಹೋದ ಆದರ್ಶಗಳು ಎಂದಿಗೂ ಜೀವಂತ. ನಿನ್ನೆಗಳ ಕಠಿಣ ಶ್ರಮವೇ ಇಂದಿನ ಜಾಣ್ಮೆಯಾಗಿ ಬದಲಾಗುತ್ತದೆ. ನಮ್ಮ ಜೀವನದ ಸಾಧನೆಗೂ ಜಗತ್ತು ಮತ್ತು ಕಾಲ ಮೌಲ್ಯ ನೀಡಬೇಕಾದರೆ, ನಾವು ಇಂದು ನಮ್ಮ ಸಮಯವನ್ನು ನಿರಂತರ ಕಲಿಕೆ, ಶಿಸ್ತು ಮತ್ತು ಶ್ರಮಕ್ಕೆ ವಿನಿಯೋಗಿಸಬೇಕು ಎಂಬುದನ್ನು ಅವರ ಜೀವನ ನಮಗೆ ಸಾರುತ್ತದೆ. ಕತ್ತಲೆಯಲ್ಲಿ ಸದ್ದಿಲ್ಲದೆ ಅವರು ಪಟ್ಟ ಪರಿಶ್ರಮವೇ ಅವರನ್ನು ಇತಿಹಾಸದ ಬೆಳಕಿನಲ್ಲಿ ತಂದು ನಿಲ್ಲಿಸಿದೆ.

ಭಾರತದ ನದಿಗಳನ್ನಷ್ಟೇ ಅಲ್ಲದೆ, ಪ್ರೀತಿಯ ಮೂಲಕ ಜನರ ಮನಸ್ಸುಗಳನ್ನು ಬೆಸೆದ ಆ ಮಹಾನ್ ಮಾನವತಾವಾದಿ, ತೆರೆಯ ಮರೆಯ ತಪಸ್ವಿ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ನಮ್ಮ ಭಾವಪೂರ್ಣ ನಮನಗಳು.

ಎಸ್. ಎನ್. ಭಟ್ ಸೈಪಂಗಲ್ಲು 

Source : https://www.karadavishwa.com/pages/xmjsrf-g8g6w1-qqz2gd

Sunday, 12 April 2026

ಅವತರಣ 2026 : ಆಮಂತ್ರಣ!

 ಕರ್ಹಾಡ ಬಾಂಧವರಿಗೆ ಆತ್ಮೀಯ ಆಮಂತ್ರಣ! 🎉

ನಮಸ್ಕಾರ ಎಲ್ಲರಿಗೂ! 🙏

ಕರ್ಹಾಡ ಬ್ರಾಹ್ಮಣ ಸಮಾಜ (ರಿ.) ಮಂಗಳೂರು ಮತ್ತು ಯೂತ್ ಕರ್ಹಾಡ ಮಂಗಳೂರು ಇವರು ಆಯೋಜಿಸುವ ಅತ್ಯಂತ ವಿಶೇಷ ಕ್ರೀಡಾ ಮಹೋತ್ಸವ…

🏆 “ಅವತರಣ 2026” 🏆

ONE ARENA • ONE COMMUNITY • ENDLESS EXCITEMENT


📅 ದಿನಾಂಕ: ಏಪ್ರಿಲ್ 18 ಮತ್ತು 19, 2026

📍 ಸ್ಥಳ: ಸರಕಾರಿ ಶಾಲಾ ಮೈದಾನ, ನಾಲ್ಯಪದವು , ಶಕ್ತಿನಗರ, ಮಂಗಳೂರು

ಈ ಕ್ರೀಡಾ ಮಹೋತ್ಸವವು ಕುಟುಂಬದ ಎಲ್ಲಾ ವಯೋಮಾನದವರಿಗೂ ಸ್ಪರ್ಧೆಗಳನ್ನು ಹೊಂದಿದೆ! 🌟


🏅 ಪುರುಷರ ವಿಭಾಗ:

🏏 ಕ್ರಿಕೆಟ್ | 🏐 ವಾಲಿಬಾಲ್ | 🎯 ಲಗೋರಿ | 💪 ಹಗ್ಗ ಜಗ್ಗಾಟ

👩 ಮಹಿಳೆಯರ ವಿಭಾಗ:

🏐 ತ್ರೋಬಾಲ್ | 🎯 ಲಗೋರಿ | 🎱 ಡಾಜ್‌ಬಾಲ್ | 🎨 ರಂಗೋಲಿ | 🥄 ಲಿಂಬೆ ಚಮಚ

👶 ಮಕ್ಕಳಿಗೆ (LKG to 1st Std):

🪣 ಬಕೆಟ್ ಚೆಂಡು | 🎨 ಕಲರಿಂಗ್ | 🏃 50 ಮೀಟರ್ ಓಟ

🧒 ಮಕ್ಕಳಿಗೆ (2nd to 5th Std):

🏃 100 ಮೀಟರ್ ಓಟ | 🥄 ಲಿಂಬೆ ಚಮಚ | 🎨 ಡ್ರಾಯಿಂಗ್

🧑 ಮಕ್ಕಳಿಗೆ (6th to 10th Std):

🎨 ಡ್ರಾಯಿಂಗ್ | 🎯 ಲಗೋರಿ | 🪙 ಮೈದಾ ಕೊಯಿನ್

👴👵 ಹಿರಿಯ ನಾಗರಿಕರಿಗೆ:

🚶 ವೇಗ ನಡಿಗೆ | 📝 ಪದಬಂಧ

🎊 ಇತರ ವಿಭಾಗ (ಎಲ್ಲರಿಗೂ):

🔥 ಬೆಂಕಿ ಇಲ್ಲದ ಅಡುಗೆ | 🌸 Housi Housie (Tambola) | 🗺️ Treasure Hunt ಮತ್ತು ಇತರ ಆಟಗಳು


✨ ಈ ಪಂದ್ಯಾಟವು ವಲಯಗಳ ನಡುವಿನ ಸ್ಪರ್ಧೆಯಾಗಿರುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದ ವಲಯವನ್ನು “ಅವತರಣ ಸಮಗ್ರ ಚಾಂಪಿಯನ್ಸ್ 2026” ಎಂದು ಘೋಷಿಸಲಾಗುವುದು! 🏆


📲 *ನೋಂದಣಿ ಮಾಡಿಕೊಳ್ಳಿ:

👉 [ಇಲ್ಲಿ ಕ್ಲಿಕ್ ಮಾಡಿ ನೋಂದಾಯಿಸಿ] * https://avatarana.vercel.app/


📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

👤 ಶ್ರೀವತ್ಸ ಗುಂಪೆ: 9482974619

👤 ಯಂ. ಶ್ರೀನಿಧಿ ಭಾರದ್ವಾಜ್: 8147817705


🤝 ಎಲ್ಲಾ ಕರ್ಹಾಡ ಬಾಂಧವರಿಗೂ ಆದರದ ಸ್ವಾಗತ!

ಕುಟುಂಬ ಸಮೇತ ಬನ್ನಿ, ಭಾಗವಹಿಸಿ, ಸಂಭ್ರಮಿಸಿ! 🎉🙏

ಸರ್ವರಿಗೂ ಆದರದ ಸ್ವಾಗತ 🌺

ಶತ ಚಂಡಿಕಾ ಯಾಗ ಹಾಗೂ ಲಕ್ಷಾರ್ಚನಾ ಕಲಶಾಭಿಷೇಖ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ಮಲ್ಲ (08 MAY 2026 - 13 MAY 2026)





ಪತ್ತಾ ಇಡಾಂಟು ಫುಲ್ಲಂ - ಸಂಚಿಕೆ 18 | ಕರಾಡ ಮಹಿಳಾ ಸಂಪದ । Vidya - Divya sisters with Sujatha G Bhat

 


Monday, 9 February 2026

The Spice Box Chronicles : S N Bhat, Saipangallu

In the quiet corners of Kasargod, there is a philosophy that transcends the simple act of cooking: "Kitchen Zindagi Deti Hai"—the kitchen gives life. This is the guiding light for Avani Sharma, a food stylist and artist whose journey to the prestigious stage of MasterChef India Season 10 has become a masterclass in how the four walls of a kitchen can serve as a bridge between centuries. To Avani, the steam rising from a pot is not just about satisfying hunger; it is the breath of a culture being passed from one generation to the next, ensuring that the wisdom of the past does not evaporate in the heat of the modern world.

The heartbeat of Avani’s story lies in her roots within the Karada Brahmin community, a tiny group of barely 15,000 people with a history as rich as the spices they use. Six centuries ago, her ancestors migrated from the Karad region of Maharashtra to the verdant coastlines of the South. Over time, their culinary identity transformed into a rare and beautiful hybrid, blending the structured heritage of Maharashtra with the soulful, coconut-infused flavors of the coast. For years, this unique fusion remained a hidden treasure, tucked away in family recipe books. Recognizing that this heritage was on the brink of fading, Avani launched the "Karada Spice Box," a digital sanctuary dedicated to giving these ancient flavors a modern voice.

Through her artful eyes, traditional dishes like Tambuli, a medicinal yogurt-based delicacy, and Paathrode a fragrant steamed cake, are no longer just "old-fashioned" meals; they are vibrant expressions of identity. Avani approaches the kitchen as a laboratory of creativity, using her background as an Art Director to prove that local, Ayurvedic ingredients can stand proudly on a global stage. Her work serves as a vital reminder to a generation often captivated by Western trends that the most profound innovation often lies in the spice boxes of our own grandmothers.

What has truly captured the nation’s heart, however, is the presence of Avani’s father, Venu Sharma, by her side. A management consultant by profession, Venu has stepped into the spotlight not as a traditional patriarch, but as a pillar of support and a student of his daughter’s craft. Their partnership on MasterChef is a poignant rebuttal to the idea of a generation gap. When Venu speaks of gaining a "new identity" through his daughter’s talent, he highlights a beautiful evolution of family dynamics, where tradition is not forced upon the young, but shared through mutual respect and a shared love for their soil.

Beyond the technicalities of flavor profiles and plating, Avani has emerged as a symbol of quiet confidence. As a representative of the South on a national platform, her fluent and articulate Hindi has shattered linguistic stereotypes, proving that passion is the only language one truly needs to master. Amidst the high-pressure environment of a televised competition, she and her father have remained defined by their "Smita-vadana"—their constant, gentle smiles. They have shown the world that success is not merely about winning a trophy; it is about the grace with which one carries their culture and the joy found in the process of creation.

As Avani Sharma continues to advance, she carries more than just ingredients; she carries the pride of a 600-year-old journey. Her story is a testament to the fact that when we respect our traditions, the world begins to respect us. She is a reminder that the hands that stir the pot are capable of stirring the soul of a nation. In her kitchen, history is not a relic of the past, but a living, breathing, and delicious part of the present, proving once and for all that those who feed the stomach can also nourish the spirit of a civilization.

Tuesday, 3 February 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ” ಕರಾಡ ಜ್ಞಾನರತ್ನ” ಬಿರುದು ಪ್ರದಾನ

 

ಕಾಸರಗೋಡು : ಉಬ್ರಂಗಳದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಲ್ಲಿ ವಸಂತ ಪಂಚಮಿಯ ಶುಭ ಸಂದರ್ಭದಂದು (ಜನವರಿ 23, 2026) ಹಿರಿಯ ವೈದಿಕ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಬಳ್ಳಪದವು ಶ್ರೀ ಮಾಧವ ಉಪಾಧ್ಯಾಯ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

​ದೀರ್ಘಕಾಲ ದೇವಸ್ಥಾನದಲ್ಲಿ ತಂತ್ರಿಗಳಾಗಿ ಅಮೂಲ್ಯ ಸೇವೆ ಸಲ್ಲಿಸಿದ ಅವರಿಗೆ, ಶೃಂಗೇರಿ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ” ಕರಾಡ ಜ್ಞಾನರತ್ನ” ಎಂಬ ಬಿರುದು ನೀಡಿ ಗೌರವಿಸಲಾಯಿತು.

​ಕಾರ್ಯಕ್ರಮದ ಮುಖ್ಯಾಂಶಗಳು :

​ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ ದೇವಿಗೆ ವಿಶೇಷ ಸೇವೆ, ಪವಮಾನ ಅಭಿಷೇಕ ಹಾಗೂ ಧನ್ವಂತರಿ ಹೋಮಗಳು ನೆರವೇರಿದವು. ಸಭಾ ಕಾರ್ಯಕ್ರಮ: ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸರಿಗೆ ಸನ್ಮಾನ ಮತ್ತು ಆಶೀರ್ವಚನಗಳು ನಡೆದವು.

ಪುಸ್ತಕ ಬಿಡುಗಡೆ : ಇದೇ ಸಂದರ್ಭದಲ್ಲಿ “ಬಳ್ಳಪದವು ಮಹಾಮಹೋಪಾಧ್ಯಾಯ” ಎಂಬ ಸ್ಮರಣ ಸಂಚಿಕೆ ಅಥವಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ​ಸಾಂಸ್ಕೃತಿಕ ಕಾರ್ಯಕ್ರಮ: ಸಮಾರಂಭದ ಕೊನೆಯಲ್ಲಿ ಮಣಿಪಾಲದ ವಿಪಂಚಿ ಬಳಗದವರಿಂದ ‘ವೀಣಾವಾದನ’ ಕಚೇರಿ ಪ್ರದರ್ಶನಗೊಂಡಿತು.

ಈ ಕಾರ್ಯಕ್ರಮದಲ್ಲಿ ಬಳ್ಳಪದವು ಮಾಧವ ಉಪಾಧ್ಯಾಯ ಅಭಿನಂದನಾ ಸಮಿತಿ ಹಾಗೂ ಅಗಲ್ಪಾಡಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Monday, 5 January 2026

ಕನಸುಗಳನ್ನು ನನಸಾಗಿಸಿದ ನಿಟ್ಟೆಯ ವಿನಯವಂತ! : ರವೀ ಸಜಂಗದ್ದೆ

 


ಕರಾವಳಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ, ಕ್ರಾಂತಿಕಾರಿ ಬದಲಾವಣೆಗಳ ಹರಿಕಾರ,‌ ಶಿಕ್ಷಣ ತಜ್ಞ ಡಾ. ಎನ್. ವಿನಯ ಹೆಗ್ಡೆ ಜನವರಿ 1ರ ಮುಂಜಾನೆ ಇಹದ ಯಾತ್ರೆ ಮುಗಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಶ್ರೀಯುತರು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಬದುಕು ಕಟ್ಟಿಕೊಟ್ಟ, ಕರಾವಳಿಯ ಶ್ರೇಷ್ಠ ಶಿಕ್ಷಣ ತಜ್ಞರ ಸಾಲಿನಲ್ಲಿ ಅಗ್ರಜರಾಗಿ ನಿಲ್ಲುತ್ತಾರೆ. ಶ್ರೀಯುತರಿಗೆ ಕಂಬನಿಪೂರ್ಣ ನುಡಿ ನಮನವಿದು.

ಹೆಚ್ಚಿನವರ ಬಾಯಿಯಲ್ಲಿ ವಿನಯಣ್ಣ ಎಂದೇ ಪ್ರೀತ್ಯಾದರಗಳಿಂದ ಕರೆಸಿಕೊಳ್ಳುವ ಶ್ರೀಯುತರು ಐವತ್ತು ವರ್ಷಗಳ ಹಿಂದೆ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,‌ ಹುಟ್ಟೂರು ನಿಟ್ಟೆಯನ್ನು ಶಿಕ್ಷಣ ಕಾಶಿ ಮತ್ತು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೈ ಎನಿಸಿಕೊಂಡಿದ್ದಾರೆ. ಬಿಎಸ್‌ಸಿ ಪದವಿ ಪೂರೈಸಿದ ಅನಂತರ 'ಊರಿನವರಿಗಾಗಿ ಹುಟ್ಟೂರಿನಲ್ಲಿಯೇ ಏನಾದರೊಂದು ಮಾಡಿ-ಸಾಧಿಸಿ ತೋರಿಸಬೇಕು' ಎನ್ನುವ ಮಹದಾಸೆಯಿಂದ 1975ರಲ್ಲಿ 'ಲಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಅಟೋಮೊಬೈಲ್‌ನ ವಿವಿಧ ಬಿಡಿಭಾಗಗಳ ತಯಾರಿಕಾ ಸಂಸ್ಥೆ ಆರಂಭಿಸಿದರು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರು ಗಳಿಸಿದ್ದು ISO 9001:2008 ಪ್ರಮಾಣೀಕೃತವಾಗಿದೆ. ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಗಮನ ಹರಿಸುವ ಈ ಸಂಸ್ಥೆ ಯುರೋಪ್ ಸೇರಿದಂತೆ ಪ್ರಪಂಚದ ಅನೇಕ‌ ಭಾಗಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಾರ್ಷಿಕ ಅಂದಾಜು ನೂರೈವತ್ತು ಕೋಟಿ ವ್ಯವಹಾರ ನಡೆಸುವ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ.

ತಂದೆಯವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ದಿ. ಜಸ್ಪಿಸ್ ಕೆ. ಎಸ್. ಹೆಗ್ಡೆಯವರ 'ತನ್ನ ಊರಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸ್ಥಳೀಯವಾಗಿ ದೊರಕುವಂತಾಗಬೇಕು' ಎನ್ನುವ ಶ್ರೇಷ್ಠ ಆಶಯದಂತೆ, 1979ರಲ್ಲಿ ಹುಟ್ಟೂರು ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ವಿನಯ ಹೆಗ್ಡೆ ಸ್ಥಾಪಿಸಿದರು. 'ನಿಟ್ಟೆ ಎಜ್ಯುಕೇಶನ್ ಟ್ರಸ್ಟ್' (ಎನ್ಇಟಿ) ಹೆಸರಿನ ಸೇವಾಸಂಸ್ಥೆ ಸ್ಥಾಪಿಸಿ, ಕೆಲವೇ ವಿದ್ಯಾರ್ಥಿಗಳು ಮತ್ತು ಸಣ್ಣ ಕಟ್ಟಡದೊಂದಿಗೆ ಆರಂಭವಾದ ಈ ಶಿಕ್ಷಣ ಕ್ರಾಂತಿ ಕಳೆದ ನಾಲ್ಕೂವರೆ ದಶಕಗಳಿಂದ ಬೆಳೆದು ನಿಂತ ಪರಿ, ವ್ಯಾಪಿಸಿದ ಪ್ರದೇಶ ನೋಡಿದರೆ ನಿಜಕ್ಕೂ ಅಚ್ಚರಿ!

ಎನ್ಇಟಿ ಅಡಿಯಲ್ಲಿ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಸ್ತುತ ನಲುವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ! ಎಲ್‌ಕೆಜಿಯಿಂದ ತೊಡಗಿ ಉನ್ನತ ಶಿಕ್ಷಣದವರೆಗಿನ ಶಿಕ್ಷಣವು ಈ‌ ವಿವಿಧ ಸಂ‌ಸ್ಥೆಗಳಲ್ಲಿ ಲಭ್ಯವಿದೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್,‌‌ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಫಾರ್ಮಸಿ,‌ ನರ್ಸಿಂಗ್, ಹೊಟೆಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುವ‌ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ದೇಶದ ಮುಂದಿನ, ಜವಾಬ್ದಾರಿಯುತ, ಸುಶಿಕ್ಷಿತ ಜನಾಂಗವನ್ನು ರೂಪಿಸುವ ಕೈಂಕರ್ಯದಲ್ಲಿ ನಿರತವಾಗಿವೆ. ಐದು ಸಾವಿರಕ್ಕೂ ಹೆಚ್ಚು ಪಾಠ ಮತ್ತು ಪಾಠೇತರ ಸಿಬ್ಬಂದಿಗಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ತನ್ಮೂಲಕ ಆತ ಸಮಾಜದ ಆಸ್ತಿಯಾಗಬೇಕು' ಎನ್ನುವ ತನ್ನದೇ ಕನಸನ್ನು ಸಾಕಾರಗೊಳಿಸಿದರು. ತೀರ್ಥರೂಪರಾದ ಕೆ. ಎಸ್. ಹೆಗ್ಡೆಯವರ ಹೆಸರಿನ ಸುಸಜ್ಜಿತ,‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಮೆಡಿಕಲ್ ಕಾಲೇಜುಗಳ ಮೂಲಕ  ಹುಟ್ಟೂರಿನವರಿಗೆ ಉನ್ನತ ಶಿಕ್ಷಣ ಮತ್ತು ಕಡಿಮೆ ದರದಲ್ಲಿ ಆರೋಗ್ಯ ಸೇವೆಗಳನ್ನು ನಿರಂತರ ನೀಡಿಕೊಂಡು ಬಂದ‌ ಹೆಗ್ಗಳಿಕೆ ವಿನಯ ಹೆಗ್ಡೆ ಅವರದ್ದು. 86ರ ಇಳಿ ವಯಸ್ಸಿನಲ್ಲೂ ತನ್ನ‌ ಕನಸಿನ ಕೂಸಾದ ವಿವಿಧ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾ ಇತ್ತೀಚಿನವರೆಗೂ ಸದಾ ಲವಲವಿಕೆಯಿಂದಲೇ ಇದ್ದರು. ಆರೋಗ್ಯದ ವಿಚಾರದಲ್ಲಿ ಮತ್ತು ಆಹಾರದ ವಿಷಯದಲ್ಲಿ ಅಪರಿಮಿತ ಶಿಸ್ತು ಬೆಳೆಸಿಕೊಂಡಿದ್ದರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿಗಳಾಗಿದ್ದರು. ಶಿಕ್ಷಣವನ್ನು ವ್ಯವಹಾರವಾಗಿ ನೋಡಿದೆ, 'ಸೇವೆ'ಯಾಗಿ ಸ್ವೀಕರಿಸಿದ ದೊಡ್ಡ ಗುಣ ಅವರನ್ನು ಜನನಾಯಕರನ್ನಾಗಿ ರೂಪಿಸಿತು ಎಂದರೆ ತಪ್ಪಾಗಲಾರದು. ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 

ಸಹಾಯ ಅಪೇಕ್ಷಿಸಿ ತನ್ನನ್ನು ಸಂಪರ್ಕಿಸಿದ ಪ್ರತಿಯೊಬ್ಬರಿಗೂ‌‌ ಕೈಲಾದ ಸಹಾಯ-ಸಹಕಾರ ನೀಡಿ ಜನಾನುರಾಗಿ ಎನಿಸಿಕೊಂಡ ಶ್ರೇಯಸ್ಸು ವಿನಯ ಹೆಗ್ಡೆಯವರಿಗೆ ಸಲ್ಲುತ್ತದೆ. ರಾಜ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಲಹೆ,‌ ಸೂಚನೆ, ಮಾರ್ಗದರ್ಶನ ನೀಡುತ್ತಿದ್ದರು. ದಶಕಗಳ ಹಿಂದೆ ಸಣ್ಣ ಗ್ರಾಮೀಣ ಪ್ರದೇಶವಾಗಿದ್ದ 'ನಿಟ್ಟೆ'ಯ ಹೆಸರು‌ ಮತ್ತು ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕೆ-ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದ ಅನನ್ಯ ಸಾಧಕರು ವಿನಯ ಹೆಗ್ಡೆ. ಧಾರ್ಮಿಕ,‌ ಸಾಂಸ್ಕೃತಿಕ  ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ‌ ಗುರುತಿಸಿಕೊಂಡು‌, ತನ್ನ ಕೊಡುಗೆಯನ್ನು ಆ ಕ್ಷೇತ್ರಗಳಿಗೂ ವಿಸ್ತರಿಸಿದ ಮಹಾನುಭಾವರು. ಕ್ರಿಕೆಟ್ ಮತ್ತಿತರ ಆಟಗಳ ಬಗ್ಗೆಯೂ ಶ್ರೀಯುತರಿಗೆ ವಿಶೇಷ ಆಸಕ್ತಿಯಿತ್ತು. ಅದರ ಭಾಗವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮೂಲತಃ ಕರಾವಳಿಯವರಾದ ಬಿ. ಸಿ. ಆಳ್ವರ ಹೆಸರಿನಲ್ಲಿ ಕ್ರೀಡಾಂಗಣವೊಂದನ್ನು ನಿರ್ಮಿಸಿ, ಪ್ರತಿವರ್ಷ ಕ್ರೀಡಾ ಕೂಟಗಳನ್ನು ಆಯೋಜಿಸಿ ಪಾಠೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.

ಹೆಸರಿಗೆ ಒಪ್ಪುವಂತೆ ವಿನಯವಂತ ವ್ಯಕ್ತಿ. ಗಟ್ಟಿಯಾದ-ದೃಢ ಮನಸ್ಥಿತಿಯುಳ್ಳ ವ್ಯಕ್ತಿತ್ವ. ಉತ್ತಮ ಯೋಜನೆಗಳನ್ನು ಹಾಕಿಕೊಂಡು, ಸ್ಪಷ್ಟತೆಯಿಂದ ನಿಖರವಾದ ಹೆಜ್ಜೆಗಳನ್ನು ಇಡಬಲ್ಲ, ಇಟ್ಟು ಯಶಸ್ವಿಯಾದ ದಾರ್ಶನಿಕ ಜೀವ. ಸ್ಥಳೀಯರಿಗೆ ಉದ್ಯೋಗ ಕೊಟ್ಟು, ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ, ನಿಟ್ಟೆಯ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದವರು. ಜೀವನಪರ್ಯಂತ ಮೌಲ್ಯಾಧಾರಿತ ಬದುಕು ಬಾಳಿದವರು.

ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಇವರ ಮುಡಿಗೇರಿ ತಂತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ! ಬದುಕಿನಲ್ಲಿ ಶ್ವಾಸ ನಿಂತಾಗ ನಮ್ಮ ಅಸ್ತಿತ್ವ ಕೊನೆಯಾಗುತ್ತದೆ; ಓರ್ವ ಮಹಾನ್ ವ್ಯಕ್ತಿ ಜೀವಮಾನದ ಸಾಧನೆಗಾಗಿ ಗಳಿಸಿದ ವಿಶ್ವಾಸ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿದ ಅನೇಕ ಕೊಡುಗೆಗಳು ಅಂಥವರನ್ನು ಚಿರಂಜೀವಿಯಾಗಿಸುತ್ತವೆ. ಹಲವಾರು ಸಾವಿರ ಮಂದಿಗೆ ಉದ್ಯೋಗ ನೀಡಿ, ಆ ಎಲ್ಲಾ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾದ, ಬಡವರ, ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ನೋವುಗಳಿಗೆ ಪೂರಕವಾಗಿ ಮಿಡಿದು, ಹುಟ್ಟೂರು ಮತ್ತು ಸಮಾಜದ ಏಳಿಗೆಗೆ ದುಡಿದ ವಿನಯ ಹೆಗ್ಡೆಯವರಂಥಾ ಮಹಾನುಭಾವರು ಎಂದೆಂದಿಗೂ ಸ್ಪೂರ್ತಿ ಚಿಲುಮೆ! 

ಕೈಗಾರಿಕೋದ್ಯಮಿ, ವಿದ್ಯಾರ್ಜನೆಯ ದೇಗುಲಗಳ ಸಾರಥಿ, ಶಿಕ್ಷಣ ಭೀಷ್ಮ ಇಂದು ದೈಹಿಕವಾಗಿ ನಮ್ಮನ್ನಗಲಿದ್ದರೂ ಅವರು ಹಚ್ಚಿಹೋದ ಜ್ಞಾನ ದೀವಿಗೆ ಲಕ್ಷಾಂತರ ಮನೆ-ಮನಗಳಲ್ಲಿ ಸದಾ ಶುಭ್ರವಾಗಿ, ಕಾಂತಿಯುತವಾಗಿ ಬೆಳಗುತ್ತಿರುತ್ತದೆ. ಓರ್ವ ವ್ಯಕ್ತಿ 'ಎಷ್ಟು ವರುಷ ಬದುಕಿದ್ದರು‌‌?' ಎನ್ನುವುದಕ್ಕಿಂತ 'ಎಷ್ಟು ಜನರ‌ ಬದುಕಿಗೆ ನೆರವಾದರು-ಬೆಳಕಾದರು?' ಎನ್ನುವುದು ಬಹುಮುಖ್ಯ. ಆ ದೃಷ್ಟಿಯಿಂದ ಡಾ. ಎನ್. ವಿನಯ ಹೆಗ್ಡೆಯವರು ಸಾರ್ಥಕ ಜೀವನವನ್ನು ಬಾಳಿ ತೋರಿಸಿದರು. ಅವರು ಸೃಷ್ಟಿಸಿದ ವಿದ್ಯಾ ದೇಗುಲಗಳು, ನೀರೆರೆದು ಪೋಷಿಸಿದ ಸಂಬಂಧಗಳು, ಗಳಿಸಿದ ಪ್ರೀತಿ,‌ ವಿಶ್ವಾಸ, ಗೌರವ, ಅಭಿಮಾನ ಚಿರಾಯು!

ಅವರ ನಿಧನ ಒಂದು ಯುಗ ಅಂತ್ಯವಾದ ಸಂಕೇತವಾಗಿ ಕಾಣಿಸುತ್ತದೆ. ಹೆಗ್ಡೆಯವರ ನಾಯಕತ್ವ, ನಮ್ರತೆ, ದೂರದೃಷ್ಟಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು, ಅತುಲ್ಯ, ಶಾಶ್ವತ ಮತ್ತು ಚಿರಸ್ಮರಣೀಯ. 'ಯೋಗೇನಾಂತೇ ತನುತ್ಯಜಾಮ್...' ಎನ್ನುವ ಗೀತೆಯ ಸಾರದಂತೆ ಸರ್ವವಂದ್ಯ ತನ್ನ ಪಾಲಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ. 'ಕಾಯಕವೇ ಕೈಲಾಸ' ಎಂದು ನಂಬಿ ಬದುಕಿದ ಧೀಮಂತ-ಶ್ರೀಮಂತ ವ್ಯಕ್ತಿ-ವ್ಯಕ್ತಿತ್ವಕ್ಕೆ ಕೋಟಿ ನಮನಗಳು. ಅವರು ಹಾಕಿಕೊಟ್ಟ ಆದರ್ಶ-ಸನ್ಮಾರ್ಗದಲ್ಲಿ ಸಾಗುವುದರ ಮೂಲಕ ಅವರಿಗೆ ನಿಜಾರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 

'ನಿಟ್ಟೆ' ಒಂದು ಬೃಹತ್ ಬ್ರ್ಯಾಂಡ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ನಿಮ್ಮ ದೃಷ್ಟಾಲ ಕಾರಣ. ಪ್ರಿಯ ವಿನಯಣ್ಣಾ, ಹೋಗಿ ಬನ್ನಿ. ನೀವು ಶಾಶ್ವತವಾಗಿ ನಮ್ಮೆಲ್ಲರ ಹೃದಯವಾಸಿ. ಪ್ರಣಾಮಂ.

✒️ ರವೀ ಸಜಂಗದ್ದೆ

(02/01/2026ರಂದು ವಿಶ್ವವಾಣಿ ದಿನಪತ್ರಿಕೆ‌ಯಲ್ಲಿ ಪ್ರಕಟವಾದ ನುಡಿನಮನ ಬರಹ)