IMPORTANT NOTICE

New official website is launched for Karada Community. Please visit www.karadavishwa.com for more details.
Showing posts with label ರವೀ ಸಜಂಗದ್ದೆ. Show all posts
Showing posts with label ರವೀ ಸಜಂಗದ್ದೆ. Show all posts

Saturday, 12 July 2025

'ಆಕಾಶ ದೀಪ'ವು ನೀನು, ನಿನ್ನ ಕಂಡಾಗ ಸಂತೋಷವೇನು... : ರವೀ ಸಜಂಗದ್ದೆ

 ಅದು ಇಂಗ್ಲೆಂಡಿನ ಎಡ್ಜ್'ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣ. ಭಾರತ-ಇಂಗ್ಲೆಂಡ್ ಎರಡನೆಯ ಟೆಸ್ಟ್ ಪಂದ್ಯದ ಕೊನೆಯ ದಿನ. ಭಾರತ ಗೆಲ್ಲುವ ಹುಮ್ಮಸ್ಸಿನಿಂದ ಅಂಗಣಕ್ಕಿಳಿಯಿತು. ಆ ದಿನದ ಕೊನೆಯ ಸೆಶ್ಶನ್. ಭಾರತ ಗೆಲುವಿನ ದಡದಲ್ಲಿತ್ತು. ಇಂಗ್ಲೆಂಡಿನ ಆಕಾಶದಲ್ಲಿ ಸೂರ್ಯ ಮುಳುಗಲು ಒಂದೆರಡು ಗಂಟೆಗಳು ಬಾಕಿ ಇದ್ದರೆ ಭಾರತೀಯ ಕಾಲಮಾನ ರಾತ್ರಿ 9.40. ಇಲ್ಲಿ ಸೂರ್ಯ ಮುಳುಗಿ ರಾತ್ರಿಯು ತನ್ನ ಎರಡನೆಯ ಪಾಳಿಯೆಡೆಗೆ ನಿಧಾನವಾಗಿ ಹೊರಳುತ್ತಿತ್ತು. ಬೌಲರ್ ಎಸೆದ‌ ಎಸೆತವನ್ನು ಜೋರಾಗಿ ಹೊಡೆಯಲು ಬ್ಯಾಟ್ಸ್ಮನ್ ಯತ್ನಿಸಿದಾಗ ಚೆಂಡು ಆಕಾಶದೆತ್ತರಕ್ಕೆ ಚಿಮ್ಮಿತು. ಅದನ್ನು ಹಿಡಿದು ಪಂದ್ಯ ಗೆಲ್ಲಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದವನು ಮೊದಲ ಇನ್ನಿಂಗ್ಸಿನಲ್ಲಿ ದ್ವಿಶತಕ, ಎರಡನೆಯ ಇನ್ನಿಂಗ್ಸಿನಲ್ಲಿ ಶತಕ ಗಳಿಸಿದ ಯುವ ಕಪ್ತಾನ ಶುಭ್ಮನ್ ಗಿಲ್. ಕ್ಯಾಚ್ ಹಿಡಿದು ಥೇಟ್ ಸಿಂಹದಂತೆ ಘರ್ಜಿಸಿ ಸಂಭ್ರಮಿಸಿದನು. ಪಂದ್ಯ ಗೆದ್ದು ಭಾರತದ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದಲ್ಲಿ ಹತ್ತನೆಯ ವಿಕೆಟ್ ಪಡೆದ ಆ ಪೋರನೇ ಆಕಾಶ್ ದೀಪ್! ಜೀವನದ ಏರಿಳಿತಗ ನಡುವೆ, ತನ್ನ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದ ಅಂದಿನ ಕ್ಷಣದಲ್ಲಿ ಕಟ್ಟೆಯೊಡೆದ ಕಣ್ಣೀರನ್ನು ನಿಯಂತ್ರಿಸಿ ಗೆಲುವಿನ ರೂವಾರಿ ಎನಿಸಿ ನಗೆ ಬೀರಿ, ಆದಿತ್ಯವಾರದ ರಾತ್ರಿಯಲ್ಲಿ ಭಾರತದ ಪಾಲಿನ ಕ್ರಿಕೆಟ್ 'ಆಕಾಶದೀಪ'ವಾಗಿ ಪ್ರಜ್ವಲಿಸಿ ಹೊಸ ಇತಿಹಾಸ ರಚಿಸಿಯೇ ಬಿಟ್ಟನಲ್ಲ!

ಆಕಾಶ ದೀಪ್ ಮೂಲತಃ ಬಿಹಾರ ರಾಜ್ಯದ ವಾಯುವ್ಯದಲ್ಲಿರುವ ಸಾಸರಾಮ್ ಪ್ರದೇಶದ 'ಬಡ್ಡಿ' ಹೆಸರಿನ ಸಣ್ಣ ಹಳ್ಳಿಯ ಬಡ ಕುಟುಂಬದ ಹುಡುಗ. ಇತರ ತನ್ನ ವಯಸ್ಸಿನ ಹುಡುಗರಂತೆ ಇವನಿಗೂ ವಿಪರೀತ ಕ್ರಿಕೆಟ್ ಹುಚ್ಚು. ಮಹಮ್ಮದ್ ಶಮಿ ಮತ್ತು ಆಶಿಶ್ ನೆಹ್ರಾ ಬೌಲಿಂಗ್ ಶೈಲಿ ಈತನಿಗೆ ಅಚ್ಚುಮೆಚ್ಚು. ಕ್ರಿಕೆಟ್ ಎನ್ನುವ ಶಬ್ದ ಕೇಳಿದರೆ ಅಪ್ಪ ಕೆಂಡಾಮಂಡಲ! ಆಕಾಶನಿಗೆ ಅದುವೇ ಉಸಿರು. 'ಕ್ರಿಕೆಟ್ ಆಟ ನಮ್ಮಂಥ ಬಡವರಿಗೆ ಹೇಳಿದ್ದಲ್ಲಾ, ಅದೇನಿದ್ದರೂ ಶ್ರೀಮಂತರಿಗೆ. ಕ್ರಿಕೆಟ್ ಆಡಿ ಉದ್ಧಾರ ಆದವರು ತೀರಾ ಕಡಿಮೆ. ನೀನು ಕ್ರಿಕೆಟ್ ಆಡಿ ನಮ್ಮನ್ನು-ನಮ್ಮೂರನ್ನು ಉದ್ಧಾರ ಮಾಡಬೇಕಿಲ್ಲ. ಮೊದಲು ಒಂದಷ್ಟು ಕಲಿತು, ಅನಂತರ ಒಂದು ಕೆಲಸ ಹುಡುಕಿಕೊಂಡು ನಿನ್ನ ಜೀವನ ನೋಡಿಕೋ. ಕ್ರಿಕೆಟ್ ನಮಗೆ ಅನ್ನ ಹಾಕಲಾರದು' ಎಂದು ತಂದೆಯವರ ಖಡಕ್ ಆಜ್ಞೆ.

ಮನೆಯವರು ಮತ್ತು ತಂದೆಯ ಬುದ್ಧಿಮಾತಿಗೆ ಕ್ಯಾರೇ ಎನ್ನದೆ,‌ ಅವರ ವಿರೋಧದ ನಡುವೆ ಕ್ರಿಕೆಟಿನಲ್ಲಿಯೇ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸಿ ತನ್ನೂರು ಬಡ್ಡಿಯನ್ನು ತೊರೆದು ದೂರದ ಬಂಗಾಳದ ದುರ್ಗಾಪುರಕ್ಕೆ ರೈಲಿನಲ್ಲಿ ಬಂದಿಳಿದ. ಕಿಸೆ ಖಾಲಿಯಿದ್ದರೂ ತಲೆ ತುಂಬಾ ಕ್ರಿಕೆಟ್ ತುಂಬಿತ್ತು! ಅಲ್ಲಿ ಸಣ್ಣ ಕೆಲಸ ಹುಡುಕಿಕೊಂಡು, ಬಿಡುವು ಮಾಡಿಕೊಂಡು ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಾ ಜೀವನ ಸಾಗುತ್ತಿತ್ತು. ಕಂಗಳಲ್ಲಿ ದೇಶಕ್ಕಾಗಿ ಆಡಬೇಕೆನ್ನುವ ತವಕ ಜಾಸ್ತಿಯಾಗುತ್ತಿತ್ತು.

ಊರು ಬಿಟ್ಟ‌ ಕೆಲ ತಿಂಗಳಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ಒಳಗಾದ ತಂದೆಯವರ ಆರೋಗ್ಯ ಕ್ಷೀಣಿಸಿ ಇಹಲೋಕ ತ್ಯಜಿಸಿದ ಸುದ್ದಿ ಬೌನ್ಸರಿನಂತೆ ಬಂತು. ಈ ದುಃಖದಲ್ಲಿದ್ದಾಗಲೇ ಮನೆಯ ಆಧಾರಸ್ತಂಭವಾಗಿದ್ದ ಅಣ್ಣನೂ ಹಠಾತ್ ತೀರಿಕೊಂಡ ಮತ್ತೊಂದು ಡೆಡ್ಲಿ ಬೌನ್ಸರ್! ಆಕಾಶನಿಗೆ ಆಕಾಶವೇ ತಲೆಯ ಮೇಲೆ ಬಿದ್ದ, ಭೂಮಿ ಬಾಯ್ತೆರೆದ ಅನುಭವ. ಬದುಕು ಯಾಕೋ ತುಂಬಾ ಕಷ್ಟ ಕೊಡುತ್ತಿದೆ, ಏನೇನನ್ನೋ ಕಲಿಸುತ್ತಿದೆ. ಇದರ ಜೊತೆಗೆ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನನ್ನೊಳಗೆ ತುಂಬುತ್ತಿದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡನು. ಅಪ್ಪ, ಅಣ್ಣ ತೀರಿಕೊಂಡ ಪರಿಣಾಮ ಮನೆಯಲ್ಲಿ ಒಂಟಿ ತಾಯಿ. ಅವಳಿಗೋಸ್ಕರ ಎಲ್ಲ ಬಿಟ್ಟು ಊರಿಗೆ ವಾಪಸಾದ. ಮೂರು ವರ್ಷ ಕ್ರಿಕೆಟ್ ಆಟವು ಅವನ ಬದುಕಿನಿಂದ 'ರಿಟೈರ್ಡ್ ಹರ್ಟ್' ಆಗಿತ್ತು!

ಹೊಂಡಗಳೇ ತುಂಬಿರುವ ರಸ್ತೆಯಲ್ಲಿ ಬ್ರೇಕಿಲ್ಲದ ವಾಹನದಂತಾಗಿದ್ದ ಬದುಕನ್ನು ಮತ್ತೆ ಹಳಿಗೆ ತರುವ ನಿರಂತರ ಪ್ರಯತ್ನ ನಡೆಯುತ್ತಿತ್ತು. ಜೀವನದ ಪ್ರಮುಖ ಗುರಿಯಾದ ಕ್ರಿಕೆಟಿನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಕನಸು ಆಗೀಗ ಕಣ್ಣಮುಂದೆ ಬಂದು ಹೋಗುತ್ತಿತ್ತು. ಅದನ್ನು ನನಸಾಗಿಸಲು ದೃಢ ನಿರ್ಧಾರ‌ ಮಾಡಿಯೇ ಬಿಟ್ಟ!

'ವರುಷಗಳು ಕಳೆದು ಜೀವನ ಒಂದಷ್ಟು ಸುಧಾರಿಸಿದೆ, ಅಮ್ಮ ತನ್ನನ್ನು ತಾನು ನಿಭಾಯಿಸುವಷ್ಟು ಗಟ್ಟಿಯಾಗಿದ್ದಾಳೆ' ಎಂದೆನಿಸಿದಾಗ, ಒಂದು ಮುಂಜಾನೆ ಆಕೆಯ ಕಾಲಿಗೆರಗಿ 'ನನ್ನನ್ನು ನೀನು ಮುಂದೊಂದು ದಿನ ಟೀವಿಯಲ್ಲಿ ಕಾಣುವಿಯಂತೆ, ಆಗ ನಿನಗೊಂದು ಹೊಸತೊಂದು ಟೀವಿ ತಂದು ಕೊಡುವೆ. ಆಶೀರ್ವಾದ ಮಾಡು' ಎಂದು ಹೇಳಿ ಅಮ್ಮನ ಉತ್ತರಕ್ಕೂ ಕಾಯದೆ ಬಡ್ಡಿಯಿಂದ ದುರ್ಗಾಪುರ ನಗರಕ್ಕೆ ಬಂದನು. ತನ್ನ 'ರೋಲ್ ಮಾಡೆಲ್' ಮಹಮ್ಮದ್ ಶಮಿ ಉತ್ತರ ಪ್ರದೇಶದ ಅಮ್ರೋಹಾದಿಂದ ಕೋಲ್ಕತ್ತಾಗೆ ಬಂದಿದ್ದು ನೆನಪು ಮಾಡಿಕೊಳ್ಳುತ್ತಾ ತಾನೂ ಮಯೂರಾಕ್ಷಿ ಎಕ್ಸ್'ಪ್ರೆಸ್ ರೈಲನ್ನೇರಿ ದುರ್ಗಾಪುರದಿಂದ ಕೊಲ್ಕತ್ತಾದಲ್ಲಿ ಬಂದಿಳಿದಾಗ ಕೆಲವೇ ನೂರರ ನೋಟುಗಳು ಮತ್ತು ಕ್ರಿಕೆಟ್ ಆಟದ ಮಹತ್ವಾಕಾಂಕ್ಷೆ ಮಾತ್ರ ಆಕಾಶನಲ್ಲಿತ್ತು. ಅಲ್ಲಿ ಜೀವನದ ಅತಿ ಕಷ್ಟಗಳನ್ನು ಎದುರಿಸುತ್ತಾ, ಜೀವನ ತುಂಬಾ ಕ್ಲಿಷ್ಟಕರವಾಗಿ ಸಾಗುತ್ತಿತ್ತು. ಇದೆಲ್ಲ ಬಿಟ್ಟು ಊರಿಗೆ ವಾಪಸಾಗುವ‌ ಯೋಚನೆ ಬಂದಾಗೆಲ್ಲ 'ಅದು ಏನಾದರೂ ಆಗಲಿ. ವಾಪಸಾಗುವ ಮಾತೇ ಇಲ್ಲ, ಇಲ್ಲೇ ಬದುಕು ಮತ್ತು ಕ್ರಿಕೆಟ್ ಕನಸು ನನಸಾಗಿಸುವೆ' ಎಂದು ಪ್ರತಿದಿನ ತನಗೆ ತಾನೇ ಹೇಳಿಕೊಂಡು ಆತ್ಮವಿಶ್ವಾಸ ಗಟ್ಟಿ ಮಾಡುತ್ತಿದ್ದನು. ಅಲ್ಲೇ ಒಂದು ಸಣ್ಣ ರೂಮು ಬಾಡಿಗೆಗೆ ಪಡೆದು ಒಂದಷ್ಟು ಕೆಲಸ ಮಾಡಿಕೊಂಡು, ಟೆನಿಸ್ ಬಾಲ್ ಪಂದ್ಯಾವಳಿಗಳಲ್ಲಿ ಆಡಿ ಒಂದಷ್ಟು ದುಡ್ಡು ಸಂಪಾದಿಸಿ ಜೀವನ ಕುಂಟುತ್ತಾ ಸಾಗುತ್ತಿತ್ತು.‌ ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ದಿನವೂ ಬೌಲಿಂಗ್ ಪ್ರಾಕ್ಟೀಸ್ ಜಾರಿಯಲ್ಲಿಟ್ಟು ಹಗಲು ರಾತ್ರಿ ಶ್ರಮ ಪಡುತ್ತಿದ್ದನು.

ಈ ನಡುವೆ ಈತನ ಪ್ರತಿಭೆ ನೋಡಿದ ಅದ್ಯಾರೋ ಮಹಾನುಭಾವರು, 23 ವರ್ಷಕ್ಕಿಂತ ಕಿರಿಯರ ಬಂಗಾಳ ತಂಡದಲ್ಲಿ ಆಡಲು ಅವಕಾಶ ಕೊಟ್ಟರು, ಭಾಗ್ಯದ ಮೊದಲ ಬಾಗಿಲು ನಿಧಾನವಾಗಿ ತೆರೆಯಿತು! ಅಂದೇ ಸಾಲ ಮಾಡಿ, ಗೆಳೆಯರಲ್ಲಿ ಹೇಳಿ ಸಣ್ಣದೊಂದು ಟೀವಿಯನ್ನು ಊರಿನ ಮನೆಯಲ್ಲಿ ಅಮ್ಮನಿಗಾಗಿ ಖರೀದಿ ಮಾಡಿದ. ಮಗನನ್ನು ಟೀವಿಯಲ್ಲಿ ನೋಡಿ ಅಮ್ಮನ ಕಣ್ಣು-ಹೃದಯ ತುಂಬಿ ಬಂತು! ಕಠಿಣ ಪರಿಶ್ರಮ ಮತ್ತು ಒಳ್ಳೆಯ ಪ್ರದರ್ಶನದ ಫಲವಾಗಿ ಬಂಗಾಳ ರಣಜಿ ತಂಡದಲ್ಲಿ ಸ್ಥಾನ ದೊರಕಿತು. ಒಂದೆರಡು ಸ್ಥಿರ ಪ್ರದರ್ಶನಗಳ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಆಟಗಾರನಾಗಿ ಭಡ್ತಿ ಸಿಕ್ಕಿತು. ಮನೆಯಲ್ಲೀಗ ದೊಡ್ಡ ಪರದೆಯ ಎಲ್ಇಡಿ ಟೀವಿ ಬಂತು! ದೇಶಕ್ಕೆ ಆಡುವ ತುಡಿತ ಮತ್ತೂ ಜಾಸ್ತಿಯಾಯಿತು.

ಆ ದಿನ ಅದೃಷ್ಟದ ಬಾಗಿಲು ತೆರೆದೇ ಬಿಟ್ಟಿತು ನೋಡಿ! 2024ರಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತದ ಕ್ಯಾಪ್ ಧರಿಸಿ ಆಕಾಶ್ ದೀಪ್ ಮೈದಾನಕ್ಕಿಳಿದ. ವಿಐಪಿ ಗ್ಯಾಲರಿಯಲ್ಲಿ ಕುಳಿತು ಜಗನ್ನಾಥನನ್ನು ಸ್ಮರಿಸುತ್ತಾ ಆತನ ತಾಯಿ ಮಗನ ಆಟ ನೋಡುತ್ತಾ ಆನಂದದಿಂದ ಕಣ್ಣೀರಾದರು. ಒಂದು ಪಕ್ವ ಅವಕಾಶಕ್ಕಾಗಿ ಕಾದು ಕುಳಿತಿದ್ದವನು ಅವಕಾಶ ಸಿಕ್ಕಾಕ್ಷಣ ಹಸಿದ ಹೆಬ್ಬುಲಿಯಂತಾಗಿ ಉತ್ತಮ ಪ್ರದರ್ಶನ ನೀಡತೊಡಗಿದನು. ಟೆನಿಸ್ ಬಾಲ್ ಆಡುತ್ತಿದ್ದ ಆಕಾಶ್ ದೀಪ್ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡನು. ಇದಲ್ಲವೇ ಸಾಧನೆ!?

ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಜಾಗ ಸಿಗದೇ ಬೆಂಚು ಬಿಸಿ ಮಾಡಿದನು. ಎರಡನೆಯ ಟೆಸ್ಟ್ ಪಂದ್ಯದಿಂದ ಭುಮ್ರಾ ಹೊರಗುಳಿದ ಹಿನ್ನೆಲೆಯಲ್ಲಿ ಛಾನ್ಸ್ ಸಿಕ್ಕಿತು. ಎದುರಾಳಿ ತಂಡದ ಬ್ಯಾಟಿಂಗ್ ಬುಡವನ್ನು ಎರಡೂ ಇನ್ನಿಂಗ್ಸ್ ಗಳಲ್ಲಿ ಅಲುಗಾಡಿಸಿ, ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಗಳಿಸಿ ಪಂದ್ಯದ ಗೆಲುವಿನ ರೂವಾರಿ ಬೌಲರ್ ಎನಿಸಿಕೊಂಡನು. 'ಎಡ್ಜ್'ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ ಗೆದ್ದ ಏಪ್ಯಾದ ಮೊದಲ ತಂಡ' ಎನ್ನುವ ಗರಿಮೆಗೆ ಭಾರತ ಪ್ರಾಪ್ತವಾಗುವುದರಲ್ಲಿ ಬಹುಪಾಲು ಕೊಡುಗೆ ನೀಡಿದವನು ಈ ಆಕಾಶ್ ದೀಪ್. ಪಂದ್ಯ ಗೆದ್ದ ಸ್ಮರಣಾರ್ಥವಾಗಿ ಒಂದು ವಿಕೆಟ್ ಮತ್ತು ಬಾಲನ್ನು ಕೈಯಲ್ಲಿ ಹಿಡಿದುಕೊಂಡು ಮೈದಾನದಿಂದ ಪೆವಿಲಿಯನ್'ನತ್ತ ಸಾಗುವಾಗ ಒಬ್ಬ ಶ್ರೇಷ್ಠ ಬೌಲರ್, ಹೋರಾಟಗಾರ ಕಾಣುತ್ತಿದ್ದ. What a journey!

ತಾನು ಪಡೆದ ಹತ್ತು ವಿಕೆಟ್ ಗೊಂಚಲಿನ ಸಾಧನೆಯನ್ನು ಕ್ಯಾನ್ಸರಿನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಅರ್ಪಿಸುವುದರ ಮೂಲಕ ಮತ್ತೂ‌ ಹೆಚ್ಚಿನ ಗೌರವ, ಅಭಿಮಾನ ಸಂಪಾದಿಸಿಕೊಂಡನು. ಮಗನ ಈ ಸಾಧನೆ ನೋಡಿ, 'ಕ್ರಿಕೆಟ್ ಆಡಬೇಡ' ಎಂದು ಅಂದು ಸಿಟ್ಟಾಗಿದ್ದ ಅಪ್ಪ ಖಂಡಿತಾ ಅವರಿರುವಲ್ಲಿಂದಲೇ ಹರಸಿ ಸಂತಸ ಪಡುತ್ತಿರಬಹುದು. 'ಮಹಮ್ಮದ್ ಶಮಿ, ಭುಮ್ರಾ ನಂತರ ಭಾರತದ‌‌ ವಿಶ್ವಾಸಾರ್ಹ,‌ ಯಾವುದೇ ಸಂದರ್ಭದಲ್ಲೂ ವಿಕೆಟ್ ತೆಗೆಯುವ ಸಾಮರ್ಥ್ಯ ಇರುವ ವೇಗದ ಬೌಲರ್ ಯಾರು?' ಎನ್ನುವ ಪ್ರಶ್ನೆಗಳಿಗೆ ತನ್ನ ಸ್ಥಿರ ಪ್ರದರ್ಶನದ‌ ಮೂಲಕ ಉತ್ತರ ಕೊಟ್ಟಿದ್ದಾನೆ ಆಕಾಶ್ ದೀಪ್. ಈ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದು ಆತ ಉತ್ತಮ ಪ್ರದರ್ಶನ ನೀಡಿ ಭಾರತ ಟೆಸ್ಟ್ ಸರಣಿ ಗೆಲ್ಲಲಿ. ಮುಂದಿನ ಕನಿಷ್ಠ ಒಂದು ದಶಕ ಆಕಾಶ್ ದೀಪ್ ತನ್ನ ಸಾಮರ್ಥ್ಯ ಮತ್ತು ಶ್ರೇಷ್ಠ ಪ್ರದರ್ಶನದಿಂದ ಮತ್ತೂ ಉತ್ತುಂಗಕ್ಕೇರಲಿ. ಭಾರತದ ಟೆಸ್ಟ್ ಕ್ರಿಕೆಟಿನಲ್ಲಿ 'ಭರವಸೆಯ ನಾಳೆಗಳು ನಮದೆನಿಸಿವೆ'.

8-7-2025ರ ವಿಶ್ವವಾಣಿಯಲ್ಲಿ ರವೀ ಸಜಂಗದ್ದೆ ಅಂಕಣ ಬರಹ

https://epaper.vishwavani.news/share/a7e374cb-6fb5-427d-8f04-ccdc1c7f84fd


Friday, 23 August 2024

ಮುಜರಾಯಿ ದೇಗುಲಗಳು ಭಕ್ತಸ್ನೇಹಿ ಆಗುವುದೆಂದು!? - ರವೀ ಸಜಂಗದ್ದೆ

ದೇವಸ್ಥಾನದ ಪರಿಸರವು ಆಹ್ಲಾದಕರವಾಗಿದ್ದು ಭಕ್ತರ ಶ್ರದ್ಧಾಭಕ್ತಿಯನ್ನು ಇಮ್ಮಡಿ ಗೊಳಿಸುವಂತಿರಬೇಕು, ದೇವರು ಕಣ್ಣೆದುರು ಬಂದು ಹರಸಿ, ಇಷ್ಟಾರ್ಥಗಳನ್ನು ನೆರವೇರಿ ಸುವನು ಎನ್ನುವಷ್ಟು ಭರವಸೆಯನ್ನು ಅದು ಕೊಡುವಂತಿರಬೇಕು. ಹಾಗಾದಾಗ ದೇವಸ್ಥಾನಕ್ಕೆ ಹೋಗಿಬರುವ ಭಕ್ತವೃಂದಕ್ಕೆ ನೆಮ್ಮದಿಯ ಅನುಭವ, ಸಮಾಧಾನ ಸಿಗುತ್ತವೆ.

ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಶ್ರೇಣಿಯ, ಸಾವಿರಾರು ಕೋಟಿ ರು. ಆದಾಯ ತ೦ದಿಡುವ ಬಹುತೇಕ ದೇವಾಲಯಗಳ ಮತ್ತು ಅವುಗಳ ಪರಿಸರದ ಪರಿಸ್ಥಿತಿ ನೋಡಿದರೆ ದೇವರೇ ಕಾಪಾಡಬೇಕು ಎನಿಸುತ್ತದೆ! ಕಾರಣ, ಪ್ರಾಂಜಲ ಮನಸ್ಸಿನಿಂದ ಹೋಗುವ ಭಕ್ತವೃಂದಕ್ಕೆ ನರಕದರ್ಶನ ಮಾಡಿಸುವ ತಾಣಗಳಾಗಿ ಅವು ಮಾರ್ಪಟ್ಟಿವೆ. ಅಪರೂಪಕ್ಕೆಂಬಂತೆ, ಇದಕ್ಕೆ ತದ್ವಿರುದ್ಧವಾಗಿರುವ, ಚೊಕ್ಕ ವ್ಯವಸ್ಥೆಯ ಒಂದೆರಡು ದೇಗುಲಗಳೂ ಇರಬಹುದು,

ಅವ್ಯವಸ್ಥೆ, ದುರ್ವಾಸನೆ, ದುರ್ವತ್ರನೆ, ಸ್ಥಳೀಯ ವ್ಯಾಪಾರಿಗಳ ಆಡಚಣೆ, ಸ್ಥಳೀಯ ಆಡಳಿತ ಮಂಡಳಿಗಳ ದುಡ್ಡಿನ ದಾಹ, ಅಹಂಕಾರ ಇವು ಬಹಳಷ್ಟು ದೇಗುಲ- ಪರಿಸರಗಳಲ್ಲಿ ಕಣ್ಣಿಗೆ ರಾಚುವಂತಿವೆ. ಇವನ್ನೆಲ್ಲ ದಾಟಿ, ಕಸರತ್ತು ಮಾಡಿ ದೇವರ ದರ್ಶನ ಮಾಡಿ ಹೊರಬರುವಾಗ ನೆಮ್ಮದಿಗಿಂತಲೂ ಹೆಚ್ಚಾಗಿ ಇಡೀ ವ್ಯವಸ್ಥೆಯ ಬಗ್ಗೆ ಬೇಸರ, ರೇಜಿಗೆ ಉಂಟಾಗದಿದ್ದರೆ ಕೇಳಿ, ಹೀಗಾಗಿ ಆಸ್ತಿಕರು ಇಂಥ ದೇಗುಲಗಳಿಗೆ ಹೋಗಿ ಬರುವುದರೊಳಗೆ ನಾಸ್ತಿಕರಾಗಿ ಬದಲಾಗುವ ಸಂಭವವೇ ಹೆಚ್ಚು! ಹೆಚ್ಚಿನ ಆದಾಯ ತಂದುಕೊಡುವ ಇಂಥ ದೇವಸ್ಥಾನಗಳು ತಮ್ಮ ಪರಿಸರದ ನಿರ್ವಹಣೆ, ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದು ವಾಸ್ತವ ಮತ್ತು ದುರಂತ. ಶೀಘ್ರದರ್ಶನ, ವಿವಿಧ ಸೇವೆ, ಅಡ್ಡು ಪ್ರಸಾದ, ವಾಹನ ನಿಲುಗಡೆ ಮತ್ತು ಚಪ್ಪಲಿ ಸ್ಟ್ಯಾಂಡ್ ಮತ್ತಿತರ ಹೆಸರಿನಲ್ಲಿ ಭಕ್ತರಿಂದ ದುಡ್ಡನ್ನೇನೋ ಪೀಕಿಸಲಾಗುತ್ತದೆ; ಆದರೆ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆ ಏನೇನೂ ಸಾಲದು.

ನಾಡದೇವತೆ, ಶಕ್ತಿಸ್ವರೂಪಿಣಿ  ಎನಿಸಿಕೊಂಡಿರುವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇಗುಲಕ್ಕೆ ಇತ್ತೀಚೆಗೆ ಕುಟುಂಬ ಸಮೇತ ಭೇಟಿನೀಡಿದಾಗ ಅಲ್ಲಿನ ಕರಾಳ ವ್ಯವಸ್ಥೆಯ ದರ್ಶನವಾಯಿತು. ವಾಹನ ನಿಲುಗಡೆ ವ್ಯವಸ್ಥೆಗೆ ಜಾಗವಿದ್ದರೂ ಅಚ್ಚುಕಟ್ಟುತನ ಇರಲಿಲ್ಲ. ಪ್ರವೇಶದ್ವಾರದಲ್ಲಿ ದುಡ್ಡು ತೆಗೆದುಕೊಳ್ಳಲು ಒಂದಿಬ್ಬರು ಇದ್ದುದು ಬಿಟ್ಟರೆ, ವಾಹನಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಲು ಅಲ್ಲಿ ಯಾರೂ ಇರಲಿಲ್ಲ, ಬಹುಮಹಡಿ ಪಾರ್ಕಿಂಗ್ ತಾಣದ ಮೆಟ್ಟಿಲು ಮತ್ತದರ ಪರಿಸರ ಗಲೀಜಾಗಿತ್ತು, ಬೀದಿನಾಯಿಗಳ ನೆಲೆಯಾಗಿತ್ತು. ಅಲ್ಲಿಂದ ದೇವಸ್ಥಾನಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಹೂವು-ಹಣ್ಣು-ಕಾಯಿ, ಫ್ಯಾನ್ಸಿ ವಸ್ತುಗಳನ್ನು ಮಾರುವವರ ಕಿರುಚಾಟ-ಕಿರಿಕಿರಿ. ಅವನ್ನು ತಮ್ಮಿಂದಲೇ ತೆಗೆದುಕೊಳ್ಳುವಂತೆ ಪ್ರತಿಯೊಬ್ಬರಿಂದ ಒತ್ತಡ, ಅಲ್ಲಲ್ಲಿ ಸಿಗುವ ಮಂಗಳಮುಖಿಯರು ವರ್ತಿಸುವ ಪರಿಯಂತೂ ಭಕ್ತರನ್ನು ಮುಜುಗರಕ್ಕೆ ಈಡುಮಾಡದಿರದು. ಶುದ್ಧ ಅಸಹ್ಯ! 

ಮುಂದೆ ಚಪ್ಪಲಿ ಬಿಡುವ ಜಾಗ ಮತ್ತು ಹತ್ತಿರದಲ್ಲೆಲ್ಲೂ ಕೈಕಾಲು ತೊಳೆಯಲು ವ್ಯವಸ್ಥೆ ಇದ್ದಂತಿರಲಿಲ್ಲ. ಇದ್ದರೂ ಅಂಥ ಕಡೆ ಹೋಗಿ ಕೈಕಾಲು ಮುಖ ತೊಳೆಯಲಾಗದಷ್ಟು ಮಲಿನ. ಇಂಥ ಅವ್ಯವಸ್ಥೆಯಲ್ಲಿ ಭಕ್ತರ ಪಾಲೂ ಇದೆಯೆನ್ನಿ,  ಜನಸಂದಣಿ ಹೆಚ್ಚಿದ್ದುದರಿಂದ ತಲೆಗೆ ನೂರು ರುಪಾಯಿ ಗಾಬರಿ 'ಶೀಘ್ರ ದರ್ಶನ' ಟಿಕೆಟ್ ಪಡೆದು ದರ್ಶನದ ಸಾಲಿನಲ್ಲಿ ನಿಂತೆವು. ದೇಗುಲದ ಒಳಗೆ ಆಯಕಟ್ಟಿನ ಜಾಗದಲ್ಲಿ ಭಿಕ್ಷೆ ಬೇಡುವ ಕೆಲವರು ಕುಳಿತಿದ್ದರು, ಅವರ ಕಿರಿಕಿರಿ ಬೇರೆ (ದುಡ್ಡಿನ ಬಲದಿಂದ ಹೀಗೆ ದೇವರ ಶೀಘ್ರದರ್ಶನ ಮಾಡುವ ಪದ್ಧತಿ ನನ್ನ ವಿರೋಧವಿದೆ; ಏಕೆಂದರೆ ದೇವರು ಬೆಲೆಕೊಡುವುದು ಪರಿಶುದ ಭಕ್ತಿಗೇ ವಿನಾ ದುಡ್ಡಿಗಲ್ಲ). ಅಲ್ಲಿನ ಹೆಚ್ಚಿನ ಸಿಬ್ಬಂದಿ ಮೈಮೇಲೆ ದೆವ್ವ ಬ೦ದವರಂತೆ ವರ್ತಿಸುತ್ತಿದ್ದುದು ಹುಟ್ಟಿಸುವಂತಿತ್ತು. ಅವರು ಬಳಸುವ ಪದಗಳು, ಮಾತಿನ ಧಾಟಿ ಎಲ್ಲದರಲ್ಲೂ ದರ್ಪ, ಧಾರ್ಷ್ಟ್ಯ, ಸಿಡುಕು ಎದ್ದುಕಾಣುತ್ತಿತ್ತು. ದೇವಿ ಮೂರ್ತಿಯ ಎದುರು ನಿಂತಿದ್ದ ಅರ್ಚಕ ವೃಂದವಂತೂ ಏರುದನಿಯಲ್ಲಿ ತಮ್ಮದೇ ಕುಶಲೋಪರಿ ಮಾತನಾಡುತ್ತಾ, ನಗೆಯಾಡುತ್ತಾ ತಟ್ಟೆಕಾಸು ಎಣಿಸುವುದರಲ್ಲಿ ತಲ್ಲೀನವಾಗಿತ್ತು. ಒಟ್ಟಾರೆ ಹೇಳುವುದಾದರೆ, ಚಾಮುಂಡಿಗಿಂತ ಹೆಚ್ಚು ತಾವೇ ಇಲ್ಲಿನ ವಾರಸುದಾರರು, ಅವತಾರಪುರುಷರು ಎಂಬಂತಿತ್ತು ಮೇಲೆ ಉಲ್ಲೇಖಿಸಿದ ವಿವಿಧ ಸ್ತರದ ಮಂದಿಯ ವರ್ತನೆ. ಪ್ರಶಾಂತತೆಯ ನೆಲೆಯಾಗಿರಬೇಕಿದ್ದ ಗರ್ಭಗುಡಿಯ ಪರಿಸರದಲ್ಲಿ ಗಲಾಟೆ-ಗೋಜಲು-ಗೊಂದಲಗಳದ್ದೇ ಸಾಮ್ರಾಜ್ಯವಿತ್ತು, ಪ್ರಶಾಂತವಾಗಿ ಕುಳಿತಿದ್ದ ತಾಯಿ ಚಾಮುಂಡಿಯ ಸುತ್ತಲೂ ಇಂಥವರೇ ಮತ್ತು ಅವರ ನಕಾರಾತ್ಮಕ ಶಕ್ತಿಯೇ ತುಂಬಿಕೊಂಡಿದ್ದು ನೋಡಿ ಬೇಸರವಾಯಿತು.

ಹಣ್ಣು-ಕಾಯಿ ತೆಗೆದುಕೊಂಡು ಹೋದವರಿಗೆ ಮತ್ತೊಂದು ತೆರನಾದ ಕಿರಿಕಿರಿ, ತೆಂಗಿನಕಾಯಿ ಒಡೆದುಕೊಡಲು ಹಿರಿಯ ಮಹಿಳೆಯೊಬ್ಬರು ಪ್ರಾಂಗಣದಲ್ಲಿ ನಿಂತಿದ್ದರು. ಅಲ್ಲೇ ಇರುವ ಕಲ್ಲಿಗೆ ತೆಂಗಿನಕಾಯಿಯನ್ನು ಅಪ್ಪಳಿಸಿ, ಒಡೆದ ಕಾಯಿಯನ್ನು ವಾಪಸ್ ಮಾಡುವಾಗ ತಮ್ಮ ಸೇವೆಗೆ ಆಕೆ ಲಜ್ಜೆಯಿಲ್ಲದೆ ದುಡ್ಡು ಡಿಮ್ಯಾಂಡ್ ಮಾಡುತ್ತಿದ್ದರು, ಸರಕಾರಿ ಕಚೇರಿಗಳಲ್ಲಿ ಮಾತ್ರವೇ ಇಂಥ ಪರಿಪಾಠವನ್ನು ಕಂಡಿದ್ದ ನನಗೆ, ದೇಗುಲದಲ್ಲೂ ಅದೇ ಕಂಡು ಷಾಕ್ ಆಯಿತು! ಬಹುಶಃ ಅಲ್ಲಿ ಕೆಲಸಕ್ಕೆಂದು ನಿಯೋಜಿಸಲ್ಪಡಲು ಆಕೆ ಖಂಡಿತಾ ಪ್ರಭಾವ ಬೀರಿ ಸಂಬಂಧಪಟ್ಟವರಿಗೆ ಂದಷ್ಟು ಪಾವತಿಸಿರಬೇಕು ಅಥವಾ ದಿನದ ಲೆಕ್ಕದಲ್ಲಿ ಕಪ್ಪ ಸಂದಾಯ ಮಾಡುತ್ತಿರಬೇಕು! ದುಡ್ಡು-ಕಾಸಿನ ದಂಧೆ ಮಟ್ಟದವರೆಗೂ ಬಂದಿದೆಯಾ? ಚಾಮು೦ಡಿಯ ಸನ್ನಿಧಿಯ ಏಳೆಂಟು ಮೀಟರ್ ದೂರದಲ್ಲೇ ದುಡ್ಡಿಗೆ ಬೇಡಿಕೆ, ಭ್ರಷ್ಟಾಚಾರ! ಮಾತ್ರವಲ್ಲದೆ, ದೇವಸ್ಥಾನದ ಹೊರಗೆ ಗೋಪುರಕ್ಕೆ ಲಗತ್ತಿಸಲಾಗಿರುವ 'ಚಾಮುಂಡೇಶ್ವರಿ ಅಮ್ಮನವರು' ಎಂಬ ನಾಮಫಲಕದ ಮೇಲೆ ತೂಗುಬಿಟ್ಟಿದ್ದ ಹೂಗಳು ಕರಚಿಹೋಗಿ, cates ಗೋಪುರದ ಮೆರುಗನ್ನು ಘಾಸಿಗೊಳಿಸಿದ್ದವು. ಕೋಟಿಗಳಲ್ಲಿ ಆದಾಯ ಇರುವ ದೇವರಿಗೆ ಇಂಥಾ ದುರವಸ್ತ್ರ. ಾಮುಂಡೇಶ್ವರಿ ಅಮ್ಮನವರು ವಿಧಿಯೇ!

ಅಬ್ಬಾ, ಇಷ್ಟೆಲ್ಲಾ ಅವ್ಯವಹಾರ ಅವತಾರಗಳನ್ನು ಜೀರ್ಣಿಸಿಕೊಂಡು ತಾಯಿ ಚಾಮುಂಡಿಯ ದರ್ಶನ ಮುಗಿಸಿ ಹೊರಬಂದೆವು. ನಂತರದ್ದು ಲಡ್ಡು ಪ್ರಸಾದ ಸ್ವೀಕರಿಸುವ ಕಸರತ್ತು! ಅದನ್ನು ವಿತರಿಸುವ ಕೌಂಟರ್ ಅನ್ನು ಮುಚ್ಚಲಾಗಿತ್ತು. ನೂರು ರುಪಾಯಿಗಳ ಶೀಘ್ರದರ್ಶನದ ಟಿಕೆಟ್ ಪಡೆದವರಿಗೆ ಪ್ರಸಾದ ರೂಪದಲ್ಲಿ ಒಂದು ಲಡ್ಡು ಸಿಗುತ್ತದೆ ಎಂದು ನಮೂದಿಸಲಾಗಿತ್ತು. ಕುರಿತು ವಿಚಾರಿಸಲಾಗಿ ನಮಗೆ ಸಿಕ್ಕಿದ್ದು 'ಲಡ್ಡು ಸ್ಟಾಕ್ ಇಲ್ಲ' ಎಂಬ ಉತ್ತರ 'ಲಡ್ಡು ಸ್ಟಾಕ್ ಇಲ್ಲದಿದ್ದರೆ ನಮ್ಮ 15 ರುಪಾಯಿ ವಾಪಸ್ ಕೊಡಿ' ಎಂದು - ಮನವಿ ಮಾಡಿದ್ದೇ ತಡ, ಅಲ್ಲಿನ ಉಸ್ತುವಾರಿಯೊಬ್ಬ ಹೌಹಾರಿ ಮಾತನಾಡಿ, ನಾವೇನೋ ಕ್ರಿಮಿನಲ್ಗಳೆಂಬಂತೆ ವಾದ ಮಂಡಿಸಿದೆ. ಇನ್ನೂ ಒಂದಿಬ್ಬರು ಸಿಬ್ಬಂದಿಯನ್ನು ವಿಚಾರಿಸಿದಾಗಲೂ ಇದೇ ಅನುಭವ. ಒಟ್ಟಿನಲ್ಲಿ, 'ಲಡ್ಡು ಬಂದು ಬಾಯಿಗೆ ಬಿತ್ತಾ' ಎಂಬ ಅನುಭವಕ್ಕೆ ಬದಲಾಗಿ, 'ನಮ್ಮ ಹಕ್ಕಿನ ಲಡ್ಡುಗಾಗಿ ಅವರ ಬಾಯಿಗೆ ಬಿದ್ದು ನರಳಾಡಿದ ಅನುಭವವಾಯಿತು! ರುಪಾಯಿಗಳು. 

ಅಲ್ಲೇ ನಮೂದಿಸಿದಂತೆ ಒಂದು ಲಡ್ಡುವಿನ ದರ 15 ರುಪಾಯಿಗಳು. ದಿನಕ್ಕೆ ಅಂದಾಜು 4,000 ಮಂದಿ ಶೀಘ್ರದರ್ಶನ ಪಡೆದರೆ, 'ಲಡ್ಡು ತಯಾರಿಕೆ ಮತ್ತು ವಿತರಣಾ ಮ೦ಡಳಿ'ಯು ಜೇಬಿಗಿಳಿಸುವ ಮೊತ್ತ ಬರೋಬ್ಬರಿ 60,000 ದೇಗುಲದೊಳಗೆ ತೆಂಗಿನಕಾಯಿ ಒಡೆದುಕೊಡಲು ಪುಣ್ಯಾತ್ತಿ ಬಾಯಿಬಿಟ್ಟು ಕೇಳುತ್ತಿದ್ದ ಮೊಬಲಗು 20 ರುಪಾಯಿ. ದಿನಕ್ಕೆ ಆಕೆ 1,000 ಕಾಯಿ ಒಡೆದರೆ, ಸಂಜೆಯ ವೇಳೆಗೆ ಕೈಯಲ್ಲಿ ಒಟ್ಟಾಗುವ ಮೊತ್ತ 20,000 ರುಪಾಯಿ. ಆಕೆಯ ತಿಂಗಳ ಸಂಬಳವೂ ಅಷ್ಟಿರಲಿಕ್ಕಿಲ್ಲವೇನೋ?! ಇವೆಲ್ಲ ಒಂದೆರಡು ಸ್ಯಾಂಪಲ್ ಅಷ್ಟೇ ಅಥವಾ ಒಂದಿಡೀ ಅವ್ಯವಸ್ಥೆಯ ಸಿನಿಮಾದ ಟೀಸರ್ ಅಷ್ಟೇ! ಇಂಥ ನಗದು ಸಂಗ್ರಹದ ದಂಧೆ ಮತ್ತು ಅವ್ಯವಹಾರಗಳು ಹೆಚ್ಚಿನ ಮುಜರಾಯಿ ದೇವಸ್ಥಾನಗಳಲ್ಲಿ ಹಾಸುಹೊಕ್ಕಾದಂತೆ ಭಾಸವಾಗುತ್ತಿದೆ ಮತ್ತು ಅದು ಓಪನ್ ಸೀಕ್ರೆಟ್' ಎಂದೆನಿಸುತ್ತಿದೆ. ದುಡ್ಡಿನ ಸಂಗ್ರಹ ಎಲ್ಲಿಯವರೆಗೆ ಹೋಗಿ ಯಾರಿಗೆಲ್ಲ ಅದರ ಪಾಲು ಸೇರುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ, ಇಂಥ ಅಪಸವ್ಯವನ್ನು ಮಾನ್ಯ ಮುಜರಾಯಿ ಮಂತ್ರಿಗಳ ಗಮನಕ್ಕೆ ತರುವ ಪುಟ್ಟ ಪ್ರಯತ್ನವಿದು ಅಷ್ಟೇ. 

ದೇವರಂತೂ ದುಡ್ಡನ್ನು ಮುಟ್ಟುವುದಿಲ್ಲ. ಇದು ದೇವರ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಜೇಬಿಗಿಳಿಸುವವರ ವ್ಯವಸ್ಥಿತ ಲಾಬಿ, ಕನಿಷ್ಠಪಕ್ಷ ದೇವಸ್ಥಾನ ಗಳಂಥ ನಮ್ಮ ಶ್ರದ್ಧಾಭಕ್ತಿಯ ಕೇಂದ್ರಗಳನ್ನು ದುಡ್ಡು ಬಾಚುವ ದಂಧೆ ಯಿಂದ ಹೊರಗಿಡಬೇಕಿದೆ. ಮುಜ ರಾಯಿ ಮಂತ್ರಿಗಳು ನಿಟ್ಟಿನಲ್ಲಿ ಸ್ವತಃ ಫೀಲ್ಡಿಗಿಳಿದು ತಮ್ಮ ಇಲಾಖೆಯನ್ನು ಹಾಗೂ ದೇವಸ್ಥಾನಗಳನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಬೇಕು. ಮುಜರಾಯಿ ಇಲಾಖೆಯ ಆಡಳಿತ ಕ್ಕೊಳಪಡುವ ರಾಜ್ಯದೆಲ್ಲೆಡೆಯ ದೇಗುಲಗಳನ್ನು ಸ್ಥಳೀಯರು ಅವಲೋಕಿಸಿ, ಸಚಿವರ ಗಮನಕ್ಕೆ ತಂದು ವ್ಯವಸ್ಥೆಯನ್ನು ಸರಿಪಡಿಸಬೇಕು. ದುಡ್ಡು ಮಾಡಲೆಂದು ದೇಗುಲದ ವ್ಯವಸ್ಥೆ ಯೊಳಗೆ ತೂರಿಕೊಂಡವರಿಗೆ, ಅವರಷ್ಟೇ ಪ್ರಭಾವಶಾಲಿಯಾಗಿರಲಿ, ಅವರಿರಬೇಕಾದ ಜಾಗವನ್ನು ತೋರಿಸಬೇಕು, ದೇವರ ಹೆಸರಿನಲ್ಲಿ ದಂಧೆ, ಅವ್ಯವಹಾರ ಮಾಡುವವರನ್ನು ಮಟ್ಟಹಾಕಿ, ದೇಗುಲಗಳ ಪರಿಸರವನ್ನು ಸ್ವಚ್ಛಗೊಳಿಸುವ, ಅಭಿವೃದ್ಧಿಪಡಿಸುವ ಕೆಲಸ ಆಗಲೇಬೇಕು. ಆಗ ಮಾತ್ರ, ಜನರ ನಿಜಭಕ್ತಿ ಅನಾವರಣ ಗೊಂಡು, ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸ ಮತ್ತು ಪ್ರಸಿದ್ಧಿಯಿರುವ ಕರ್ನಾಟಕದ ವಿವಿಧ ದೇಗುಲಗಳ ಪರಿಸರ, ಪಾವಿತ್ರ್ಯ, ಶ್ರೇಷ್ಠತೆ ಮತ್ತು ಶಕ್ತಿಯ ಮರುಸ್ಥಾಪನೆಯಾದೀತು.

 

-ರವೀ ಸಜಂಗದ್ದೆ

(ಲೇಖಕರು ಸಾಫ್ಟ್ವೇರ್ ಉದ್ಯೋಗಿ)

Friday, 9 August 2024

ನಾಗರ ಪಂಚಮಿ ನಾಡಿಗೆ ದೊಡ್ಡದು - ರವೀ ಸಜಂಗದ್ದೆ

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಭಯ, ಭಕ್ತಿ, ಶ್ರದ್ಧೆಯಿಂದ ಆಚರಿಸಲ್ಪಡುವ ನಾಗರ ಪಂಚಮಿ, ಯುಗಾದಿಯಂದು ಹೊಸ ವರ್ಷ ಶುರುವಾದ ನಂತರದ ಪ್ರತಿ ಋತುವಿನಲ್ಲಿ ಬರುವ ಮೊದಲ ಹಿಂದೂ ಹಬ್ಬವಿದು.

ಜನಮೇಜಯ ಹೆಸರಿನ ರಾಜ ತನ್ನ ತಂದೆಯ ಸಾವಿಗೆ ಸರ್ಪವೊಂದು ಕಾರಣ ಎಂದು ತಿಳಿದು ಭೂಲೋಕದ ಸರ್ಪ ಸಂಕುಲವನ್ನು ನಿರ್ನಾಮ ಗೊಳಿಸಲು ಸರ್ಪಯಜ್ಞ ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಸಂಬಂಧಿ ಆಸ್ತಿಕ ಋಷಿ ಸರ್ಪಯಜ್ಞ ಮಾಡುತ್ತಿರುವ ಜನಮೇಜಯ ನನ್ನು ಪ್ರಸನ್ನಗೊಳಿಸುತ್ತಾನೆ. ರಾಜನು ನಿನಗೆ ಬೇಕಾದ ವರ ಕೇಳು ಎಂದಾಗ, 'ಪ್ರಾಣಿಹಿಂಸೆ ಮಹಾಪಾಪ, ನಿನ್ನ ಸರ್ಪಯಜ್ಞ ಸರ್ಪಗಳ ನಾಶಕ್ಕೆ ಕಾರಣವಾಗುತ್ತದೆ. ಪ್ರಯತ್ನ ಬಿಟ್ಟುಬಿಡು ಎನ್ನುವ ವರ  ಕೇಳುತ್ತಾನೆ. ಜನಮೇಜಯ ರಾಜ ಆಸ್ತಿಕ ಋಷಿಯ ಮಾತಿಗೆ ಬೆಲೆ ಕೊಟ್ಟು ಸರ್ಪಯಜ್ಞ ನಿಲ್ಲಿಸಿದ ದಿನ ಇದೇ ಪಂಚಮಿ, ನಾಗರ ಪಂಚಮಿ, ಪುರಾಣದ ಇನ್ನೊಂದು ಕತೆಯ ಪ್ರಕಾರ, ಹಾವು ಕಚ್ಚಿ ಮಡಿದ  ಸಹೋದರನನ್ನು ಸಹೋದರಿಯೊಬ್ಬಳು ಅದೇ ಹಾವನ್ನು ಭಕ್ತಿಭಾವದಿಂದ ಪೂಜಿಸಿ, ಪ್ರಾರ್ಥಿಸಿ ಬದುಕಿಸಿಕೊಂಡ ದಿನವು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು.

ನಾಗರ ಪಂಚಮಿ ಜತೆಗೆ ಈ ದಿನವನ್ನು ಭ್ರಾತೃತ್ವದ ಹಲವೆಡೆ ಆಚರಿಸಲಾಗುತ್ತದೆ. ಅದಲ್ಲದೆ ಸತ್ಯೇಶ್ವರಿ ಹೆಸರಿನ ದೇವತೆಯೊಬ್ಬಳು ನಾಗರ ಪಂಚಮಿಯ ಹಿಂದಿನ ದಿನ ಮೃತನಾದ ತನ್ನ ಸಹೋದರನನ್ನು ನನದು ನಾಗರ ಪಂಚಮಿ ದಿನ ಅನ್ನ-ನೀರು ತ್ಯಜಿಸಿ ಉಪವಾಸ ಮಾಡುತ್ತಾಳೆ. ಇಂದಿಗೂ ಹಬ್ಬದ ದಿನದಂದು ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.

ಜನರು ತಮ್ಮ ತಮ್ಮ ಪರಿಸರದ ನಾಗನಕಟ್ಟೆ, ನಾಗಬನ, ಸುಬ್ರಹ್ಮಣ್ಯ, ಶಾಸ್ತಾರ ದೇವಸ್ಥಾನಗಳಿಗೆ ತೆರಳಿ ನಾಗದೇವತೆಗೆ ಶ್ರದ್ಧಾಭಕ್ತಿಯಿಂದ ತನಿ ಎರೆದು, ಪಾಲು-ಸೀಯಾಳ, ಹಿಂಗಾರ-ಕೇದಗೆ ಹೂವು ಸಮರ್ಪಿಸಿ, ಪಂಚಾಮೃತ ಅಭಿಷೇಕ ನೆರವೇರಿಸಿ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ,  ಕಾಸರಗೋಡು ಭಾಗಗಳಲ್ಲಿ ಕುಟುಂಬ, ಭೌಗೋಳಿಕ ಪ್ರದೇಶಕ್ಕೆ ಒಂದರಂತೆ ನಾಗನ ಕಟ್ಟೆ ಅಥವಾ ನಾಗಬನ ಇದೆ. ಪರಿಸರದ ರಕ್ಷಣೆ ಮತ್ತು ಜನರ ಯೋಗಕ್ಷೇಮವನ್ನು ನಾಗರಾಜ ನೋಡಿಕೊಳ್ಳುತ್ತಾನೆ, ಎಲ್ಲ ದುಷ್ಟಶಕ್ತಿಗಳಿಂದ ಸರ್ಪವಂದ್ಯ ನಾಗರಾಜ ರಕ್ಷಿಸಿ ಸಲಹುತ್ತಾನೆ ಎನ್ನುವ ನಂಬಿಕೆಗೆ ತಲೆತಲಾಂತರದ ಭವ್ಯ ಇತಿಹಾಸವಿದೆ. ಅಂದು ನಾಗನನ್ನು ಪೂಜಿಸುವುದರಿ೦ದ ಜೀವನದಲ್ಲಿನ ಎಲ್ಲ ಸಂಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಸಿ ಅಪೇಕ್ಷಿತ ಫಲ ಸಿಗುತ್ತದೆ ಎನ್ನುವುದು ನಂಬಿಕೆ.

ಸಮೃದ್ಧ ಮಳೆಗಾಲದ ಸಮಯದಲ್ಲೇ ನಾಗರ ಪಂಚಮಿ ಹಬ್ಬ ಬರುತ್ತದೆ. ಇದರ ಹಿಂದಿನ ಕಾರಣ ಹುಡುಕುತ್ತಾ ಹೋದರೆ, ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶ ಎದ್ದು ಕಾಣುತ್ತದೆ. ಹಾವಿಗೆ ಹಾಲೆರೆದು ಪೂಜಿಸುವ ಮೂಲಕ 'ಯಾವುದೇ ರೀತಿಯಲ್ಲಿ ಮನುಕುಲ ಮತ್ತು ಸಾಕುಪ್ರಾಣಿಗಳಿಗೆ ಅಪಾಯ ಮಾಡದಿರು ತಾರದಿರು ನಾಗಣ್ಣಾ' ಎಂದು ಬೇಡಿಕೊಳ್ಳುವ ಸಾಧ್ಯತೆ ಇರುವುದು ದಿಟ. ದೈವಿಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯ ಮೇಲೆ  ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ವಿಶೇಷ. ನಾಗದೇವರು ಕರಾವಳಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಶ್ರೀಕೃಷ್ಣ ದಿನ ಕಾಳಿಂಗ ಸರ್ಪವನ್ನು ಕಾರಣಕ್ಕಾಗಿ ನಾಗಾರಾಧನೆಯನ್ನು  ಮಾಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬವು 'ರೊಟ್ಟಿ ಪಂಚಮಿ ಹೆಸರಿನ ಬಹುದೊಡ್ಡ ಹಬ್ಬ, ಮದುವೆಯಾಗಿ ಗಂಡನ ಮನೆಯಲ್ಲಿ ಇರುವ ಹೆಣ್ಣು ಮಗಳನ್ನು ನಾಗರ ಪಂಚಮಿ ಹಬ್ಬಕ್ಕೆ ತವರಿಗೆ ಕರೆದುಕೊಂಡು ಬರುವ ಪದತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.

ಮುಂಗಾರು ಬೆಳೆ ಬೆಳೆಯುವ ಸಂದರ್ಭದಲ್ಲಿ ಈ ಹಬ್ಬ ಬರುವುದರಿಂದ ರೈತರೂ ಸಂಭ್ರಮದಿಂದ ಹುತ್ತಕ್ಕೆ ಹಾಲೆರೆಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಹಾವುಗಳು ಕೃಷಿ ಸ್ನೇಹಿಗಳು, ಭೂಮಿಯ ಲಿರುವ ಹಲವಾರು ಕ್ರಿಮಿಕೀಟಗಳನ್ನು ಆಹಾರವಾಗಿ ತಿಂದು ಹಾವುಗಳು ರೈತನ ಬೆಳೆಗಳಿಗೆ ಪೂರಕವಾಗಿ ಸಹಕರಿಸುತ್ತವೆ. ಇದಕ್ಕೆ thanks giving ಎನ್ನುವಂತೆ ರೈತರು ನಾಗರ ಪಂಚಮಿಯ ದಿನ ಹಾವುಗಳಿಗೆ ಹಾಲೆರೆದು ಪೂಜಿಸುತ್ತಾರೆ. ಪಡೆದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವ ದ್ಯೋತಕ ಹೊಂದಿರುವ ವಿಶಿಷ್ಟ ಹಬ್ಬವಿದು. ನಾಗರಹಾವು ನಿಜವಾದ ನಾಗನಾದರೆ, ನಾಗನಕಲ್ಲು ನಿಜನಾಗನ ಸಂಕೇತ  ಎನ್ನಲಡ್ಡಿಯಿಲ್ಲವೇನೋ?

'ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ...' ಎನ್ನುವ ಬಸವಣ್ಣನವರ ವಚನ ಮಾನವನ ನಿಜಬಣ್ಣವನ್ನುಸ್ಪಷ್ಟವಾಗಿ ಹೇಳಿದೆ. ಗುಣಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸುವ ಮನುಷ್ಯನ ಆತ್ಮವಂಚನೆಯ ವರ್ತನೆಗೆ ಕನ್ನಡಿ ಹಿಡಿದಂತಿದೆ ವಚನ ಪ್ರಕೃತಿಯು ಸಮೃದ್ಧ ಫಲ-ಫಸಲನ್ನು ಕೊಡಲು ಮೊದಲ್ಗೊಂಡು, ಗರ್ಭಾಂಕುರವಾಗುವ  ಕಾಲಮಾನ ಶ್ರಾವಣದ ತಿಂಗಳು. ಉತ್ತಮ ಮಳೆಯಾಗಿ, ಸಸ್ಯ ಶ್ಯಾಮಲೆ ಪ್ರಕೃತಿಮಾತೆ ಹಸಿರಿನಿಂದ ಮೈದುಂಬಿ ಕೊಂಡು ಕಂಗೊಳಿಸುವ ಕಾಲವಿದು. ಶ್ರಾವಣ ಮಾಸದ ಶುಕ್ಲಪಕ್ಷದ ನಾಗರ ಪಂಚಮಿಯಿಂದ ತೊಡಗಿ ಮುಂದೆ ಹಬ್ಬ ಹರಿದಿನಗಳು ಸಾಲುಗಟ್ಟಿ ಬರುತ್ತವೆ. ಇಂದು ನಾಗರ ಪಂಚಮಿ, ನಂತರ ವರಮಹಾಲಕ್ಷ್ಮಿ ಹಬ್ಬ. ಮತ್ತೆ ಕೃಷ್ಣ ಜನ್ಮಾಷ್ಟಮಿ. ತದನಂತರ ಗಣೇಶ ಚತುರ್ಥಿ, ಹಾಗೇ ಮುಂದು ವರಿದು ನವರಾತ್ರಿ, ದಸರಾ, ದೀಪಾವಳಿ, ಮುಂದಿನ ಮೂರು ತಿಂಗಳು ಸಾಲು ಸಾಲು ಹಬ್ಬಗಳ ಹಬ್ಬ ಕಣ್ಣುಗಳ ಮೂಲಕವೇ ಕಿವಿಯ ಕೆಲಸವನ್ನೂ ಮಾಡುವುದು ಸರ್ಪಗಳ ಜಾಣೆ, ಅದರಂತೆ ಚಕ್ಷು ಮತ್ತು ಶ್ರವಣ ಹೀಗೆ ಎರಡೂ ಇ೦ದ್ರಿಯಗಳನ್ನು ಸರಿಯಾಗಿ ಮತ್ತು ಸಮರ್ಥವಾಗಿ ನಿರ್ವಹಿಸಿ ವಿನಿಯೋಗಿಸುವ ಜಾಡು ಮತ್ತು ಜಾಣ್ನೆ ನಮ್ಮದಾಗಬೇಕಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ರಭಸದಿಂದ ಹರಿಯುವ ಹಾವಿನ ಸ್ವಭಾವ ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಿ ಕ್ರಿ ಯಾ ಶೀಲರಾಗಲು ಪ್ರೇರಕವಾಗಿದೆ. ಒಂದೇ ಹುತ್ತದಲ್ಲಿ ಹಲವು ಸರ್ಪಗಳು ನೆಲೆಸಿ ಸಾರುವ ಅನ್ನೋನ್ಯತೆ, ಒಗ್ಗಟ್ಟು, ಸಹೋದರ ಭಾವ ಮಾನವ ಬದುಕಿಗೆ ಆದರ್ಶ, ಮೂಳೆಗಳಿಲ್ಲದಿದ್ದರೂ ನರಗಳ ಸಹಾಯದಿಂದ ಎಲ್ಲೆಡೆ ಹರಿದಾಡುವ ಉರಗಗಳು ನಮ್ಮೆಲ್ಲರ ನರನಾಡಿಗಳನ್ನು ಚೆನ್ನಾಗಿಡಲಿ.

'ಸಹಸ್ರಶೀರ್ಷಂ ಜಗದೇಕ ಕು೦ಡಲಿ ಪೀತಾಂಬರಂ ಧಮ್ರಸಹಸ್ರಲೋಚನಂ। ಉದಾರವೀರ್ಯ ವಿಷದಂಷ್ಟ್ರಕಾನನಂ ನಮಾಮ್ಯನಂತಂ ಜಗದೇಕನಾಥಂ।।'- ಸಾವಿರ ಹೆಡೆಗಳುಳ್ಳ ಜಗದೇಕ ಕುಂಡಲನಾಗಿರುವ, ಪೀತಾಂಬರಧಾರಿಯಾಗಿರುವ ಹೊಗೆ ಕಾರುವ ಕಣ್ಣುಗಳಿರುವ, ಅಪರಿಮಿತ ಪರಾ ಕ್ರಮಿಯಾದ, ವಿಷಪೂರಿತ ಕೋರೆ ಹಲ್ಲುಗಳಿರುವ, ಜಗದೊಡೆಯ ಅನಂತ ಮೂರ್ತರೂಪನಿಗೆ ಪ್ರಣಾಮಗಳು. ನಾಗರ ಪಂಚಮಿ ಸರ್ವರಿಗೂ ಶುಭ ತರಲಿ, ಮಳೆ-ಬೆಳೆ ಸಾಕಷ್ಟು ಆಗಿ ಜಗಕೆ ಸಮೃದ್ಧಿ ಉಂಟಾಗಲಿ. ನಾಗರಾಜ ನಾಡಿನೆಲ್ಲಡೆ ಒಳಿತು ಮಾಡಲಿ. ಆತನ ಶ್ರೀರಕ್ಷೆ ಮನುಕುಲ ಮತ್ತು ಜಗತ್ತಿನೆಲ್ಲೆಡೆ  ಸದಾ ಇರಲಿ, ಓಂ ಸರ್ಪರಾಜಾಯ ತೇ ನಮಃ

 

ರವೀ ಸಜಂಗದ್ದೆ 

(ಲೇಖಕರು ಸಾಫ್ಟ್ವೇರ್ ಉದ್ಯೋಗಿ)