ಭಾರತದ ಇತಿಹಾಸ ಅಂದರೆ ಅದು ಬರಿಯ ಜನಜೀವನ ಅಷ್ಟೇ ಅಲ್ಲ, ಅದು ರೋಚಕ ಕಥಾನಕಗಳ ಆಗರ. ಅಲ್ಲಿ ಅಧ್ಯಾತ್ಮವಿದೆ, ಪುರಾಣವಿದೆ, ಶಾಂತಿಮಂತ್ರಗಳಿವೆ, ಕ್ರಾಂತಿ ಬೀಜಗಳೂ ಇವೆ. ಹೆಣ್ಣು – ಗಂಡು ಸಮಸಮವಾಗಿ ಇಲ್ಲಿ ಬೀಗಿದ್ದಾರೆ. ನದಿ ಬೆಟ್ಟ ಮರುಭೂಮಿಗಳೂ ತಮ್ಮ ಕೊಡುಗೆ ನೀಡಿವೆ. ಹಿಮಾಲಯ – ಸಾಗರವೂ ಇಲ್ಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅಸಂಖ್ಯ ಸಂತರು; ಲೆಕ್ಕವಿಲ್ಲದಷ್ಟು ಋಷಿಮುನಿಗಳು ಪರಣಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವೆಲ್ಲವನ್ನೂ ನಾಶಗೈಯುವ ಷಡ್ಯಂತ್ರಗಳೂ ಆಗಿವೆ. ಮಿಡತೆಯ ಹಿಂಡಿನಂತೆ ಅನ್ಯರ ಆಕ್ರಮಣಗಳೂ ಆಗಿವೆ!
‘ಮ್ಯಾಕ್ಸ್ ಮುಲ್ಲರ್’!
ಕೆಲವರಿಗೆ ಭಾರತದ ಇತಿಹಾಸ ೧೨ನೇ ಶತಮಾನದಿಂದ ಆರಂಭವಾದರೆ, ಇನ್ನು ಕೆಲವರಿಗೆ
ಶಂಕರರ ಹುಟ್ಟಿನೊಂದಿಗೆ. ಕೆಲವರು ಬುದ್ಧನ ಜನನದಿಂದಲೇ ಭಾರತದ ಇತಿಹಾಸ ಗಣನೆ ಶುರು
ಮಾಡಿದರೆ, ಇನ್ನೂ ಕೆಲವರು ರಾಮ – ಕೃಷ್ಣ – ಉಪನಿಷತ್ತು ಎನ್ನುತ್ತಾರೆ. ಆದರೆ ಈ ದೇಶದ
ಮತ್ತು ಜಗತ್ತಿನ ಕೆಲವು ‘ಪಂಡಿತೋತ್ತಮರಿಗೆ’ ಭಾರತದ ಇತಿಹಾಸವೆಂದರೆ ಅದು ಮ್ಯಾಕ್ಸ್
ಮುಲ್ಲರ್ ಮಾತ್ರ. ಅವನ ಹೇಳಿಕೆಗಳು, ಬರಹಗಳು, ಪತ್ರಗಳೇ ಭಾರತವನ್ನು ನೋಡುವ ದೃಷ್ಟಿಕೋನ
ಅವರಿಗೆ. ಅನೇಕರ ಪಾಲಿಗೆ ಆತ ಋಷಿ, ಯೋಗಿ, ಸಂಸ್ಕೃತ ಪಂಡಿತ ಎಲ್ಲವೂ ಕೂಡ.
ಆದರೆ ವಾಸ್ತವವಾಗಿ ಆತ ಭಾರತದ ಕುರಿತಂತೆ ಅನೇಕ ಗೊಂದಲಗಳಿಗೆ ಕಾರಣನಾದ ವ್ಯಕ್ತಿ.
ಆರ‍್ಯರ ಆಕ್ರಮಣ ವಾದದಿಂದ ಹಿಡಿದು ಕಾಲ ಗಣನೆಯವರೆಗೆ ಆತ ಮಾಡಿದ ಊಹೆಗಳು ಇಂದು ಸಾಕಷ್ಟು
ಕಿರಿಕಿರಿಗೆ ಕಾರಣವಾಗಿವೆ. ಕ್ರಿಶ್ಚಿಯನ್ ಮಿಷನರಿಗಳ ಆಕಾಂಕ್ಷೆ ಪೂರೈಸಲು
ತನ್ನಿಚ್ಛೆಗೂ ವಿರುದ್ಧವಾಗಿ, ವೈಚಾರಿಕ ತಳಹದಿಯೇ ಇಲ್ಲದ ಸಿದ್ಧಾಂತಗಳನ್ನು
ಒಂದಾದಮೇಲೊಂದರಂತೆ ಹರಿಬಿಟ್ಟವ ಮ್ಯಾಕ್ಸ್ ಮುಲ್ಲರ್. ಹೌದು. ಹಣ ಕೊಟ್ಟವರ ಮನಸ್ಸಿನ
ಆಕಾಂಕ್ಷೆ ಪೂರೈಕೆಗೆ ಆತ ಋಗ್ವೇದದ ಸಾಹಿತ್ಯವನ್ನೇ ವಿರೂಪಗೊಳಿಸಿಬಿಟ್ಟ.
ಕ್ರಿಶ್ಚಿಯನ್ ಮಿಷನರಿಗಳೇ ಹಾಗೆ. ಚೀನಾಕ್ಕೆ ಹೋದ ಮ್ಯಾಥ್ಯೂರಿಕ್ಕಿ ಬುದ್ಧಿಸಮ್
ಮತ್ತು ಕನ್‌ಫ್ಯೂಷಿಯನಿಸಮ್ ನಡುವೆ ಇರುವ ಗಲಾಟೆ ಗಮನಿಸಿ ಕನ್‌ಫ್ಯೂಷಿಯನಿಸಮ್ ಪರವಾಗಿ
ನಿಂತು ಬುದ್ಧನ ಅನುಯಾಯಿಗಳನ್ನು ಹಳಿದ. ಕ್ರಿಸ್ತ ತತ್ತ್ವಗಳಿಗೆ ಕನ್‌ಫ್ಯೂಷಿಯನಿಸಮ್
ಹತ್ತಿರವಾಗಿದೆ ಎಂದು ನಂಬಿಸಿ ಅವರನ್ನು ತನ್ನತ್ತ ಸೆಳೆದ. ಈ ಕುಟಿಲ ನೀತಿಯನ್ನೇ ಬಳಸಿ
ಇಟಲಿಯ ಯಹೋವಾ ಮತಪ್ರಚಾರಕ ರಾಬರ್ಟ್ ನೋಬಿಲಿ ೧೬೦೬ರಲ್ಲಿ ಮಧುರೈಗೆ ಬಂದು ಹಿಂದೂಗಳಂತೆ
ಬಟ್ಟೆ ಧರಿಸಿದ. ಶಿಖೆ ಬಿಟ್ಟ. ಜನಿವಾರವನ್ನೂ ಧರಿಸಿ, ತುದಿಗೆ ಶಿಲುಬೆ ಸಿಕ್ಕಿಸಿಕೊಂಡ.
ಅಗತ್ಯ ಬಿದ್ದೆಡೆ ವೇದಗಳನ್ನು ತಿರುಚಿ ಜನರ ಮುಂದಿಟ್ಟ. ಮಧುರೈನ ಕೆಲವರನ್ನು
ಮತಾಂತರಿಸುವಲ್ಲಿ ಆತ ಯಶಸ್ವಿಯೂ ಆದ. ಅವನ ಹಿಂದೆ ಅಬ್ಬೆ ಡುಬೋಯಿಸ್ ಮತಾಂತರಿಯಾಗಿ
ಕಾಲಿಟ್ಟ. ಅವನ ಕೆಲಸ ಅಂದುಕೊಂಡಷ್ಟು ಸಲೀಸಾಗಿರಲಿಲ್ಲ. ಕರ್ನಾಟಕ ಅವನ
ಕ್ಷೇತ್ರವಾಗಿತ್ತು. ಸಾಮೂಹಿಕ ಮತಾಂತರ ಮಾಡುವಲ್ಲಿ ಆತ ಸೋತುಹೋದ. ಬ್ಯಾಪ್ಟಿಸ್ಟರು
ಬಂಗಾಳಕ್ಕೆ ೧೭೯೩ರಲ್ಲಿ ಕಾಲಿಟ್ಟರು. ಅಲ್ಲಿ ಬ್ರಹ್ಮ ಸಮಾಜದ ತೀವ್ರ ವಿರೋಧದಿಂದ
ವಿಲಿಯಮ್ ಕ್ಯಾರೆಯ ಯತ್ನ ಕೈಗೂಡಲಿಲ್ಲ.
ಇಷ್ಟೂ ಹೇಳಬೇಕಾಗಿಬಂದ ಅಗತ್ಯವೆಂದರೆ, ಕ್ರಿಶ್ಚಿಯನ್ನರ ಆಕ್ರಮಣ ಶೈಲಿಯನ್ನು
ಮನದಟ್ಟು ಮಾಡುವುದು. ಹೊಸ ಭೂಪ್ರದೇಶಕ್ಕೆ ಮೊದಲು ಸೈನ್ಯ ನುಗ್ಗುತ್ತದೆ. ಅದರ
ಹಿಂದುಹಿಂದೆಯೇ ಮಿಷನರಿಗಳ ದಂಡು. ಸೈನ್ಯದ ಮೂಲಕ ಸಂಪತ್ತಿನ ಲೂಟಿಯಾದರೆ, ಮಿಷನರಿಗಳು
ಪರಂಪರೆಯನ್ನು ಸೂರೆಗೈದುಬಿಡುತ್ತಾರೆ. ಆಕ್ರಮಣಕ್ಕೊಳಗಾದವರು ಹಳೆಯ ನೆನಪನ್ನು ಕಳಕೊಂಡು
ಹೊಸ ಮತವನ್ನು ಒತ್ತಾಯವಾಗಿಯಾದರೂ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆ! ಅಮೆರಿಕಾ,
ಆಸ್ಟ್ರೇಲಿಯಾ, ನ್ಯೂಜಿಲೆಂಡುಗಳಲ್ಲೆಲ್ಲ ಆಗಿದ್ದು ಇದೇ. ಇಂದು ಆಸ್ಟ್ರೇಲಿಯನ್ನರಿಗೆ
ತಮ್ಮ ಪರಂಪರೆ ನೆನಪಿರೋದು ಅನುಮಾನವೇ. ಅದಾಗಲೇ ಲೂಟಿಯಾಗಿಬಿಟ್ಟಿದೆ. ಅಮೆರಿಕದ ರೆಡ್
ಇಂಡಿಯನ್ನರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ.
ಹೀಗೇಕೆ? ಇದನ್ನು ತಿಳಿಯಲು ಯುರೋಪಿನ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು.
ಹದಿನಾಲ್ಕು – ಹದಿನೈದನೇ ಶತಮಾನದ ವೇಳೆಗೆ ಯುರೋಪಿನ ದೇಶಗಳು ಜಗತ್ತಿನುದ್ದಗಲ
ಸಮುದ್ರಯಾನ ಮಾಡಲು ಉಪಕ್ರಮಿಸಿದರಲ್ಲ, ಆಗತಾನೇ ಅಲ್ಲಿ ಕ್ರಿಶ್ಚಿಯನ್ ಪುನರುತ್ಥಾನದ
ಕಲ್ಪನೆ ಟಿಸಿಲೊಡೆದಿತ್ತು. ಬೈಬಲ್ಲಿನ ಹಳೆಯ ಒಡಂಬಡಿಕೆಗೆ ಮೆತ್ತಿರುವ ಯಹೂದ್ಯರ
ಲೇಪವನ್ನು ತೊಳೆದುಕೊಳ್ಳಲು ಹೊಸ ಒಡಂಬಡಿಕೆಗೆ ಸೂಕ್ತ ಹಿನ್ನೆಲೆಗೆ ಹುಡುಕಾಟ
ನಡೆದಿತ್ತು. ಈ ಹುಡುಕಾಟದ ಕೊನೆ ಪೂರ್ವ ದಿಕ್ಕು ಆಗಿರಬೇಕೆಂಬ ನಿಶ್ಚಯವೂ
ಕ್ರಿಶ್ಚಿಯನ್ನರಿಗಿತ್ತು.
ಭಾರತ ಮತ್ತು ಚೀನಾ – ಈ ಎರಡು ನಾಗರಿಕತೆಗಳಲ್ಲಿ ಅವರು ಆರಿಸಿಕೊಂಡಿದ್ದು
ಭಾರತವನ್ನು. ಲೇಕಕ ಜಿಮ್ ಶೆಫರ್ ಅಭಿಪ್ರಾಯದಂತೆ ‘ಕ್ಯಾಂಟ್ ಹರ್ಡರ್‌ನಂತಹ ಪಂಡಿತರೂ
ಪುರಾತನ ಭಾರತ ಮತ್ತು ಪಶ್ಚಿಮದ ಪುರಾಣಕತೆಗಳಲ್ಲಿ ಸಾಮ್ಯವನ್ನು ಗುರುತಿಸಿ ಯಹೂದ್ಯ
ಪರಂಪರೆಯಿಂದ ಪಶ್ಚಿಮ ಯುರೋಪ್ ಸಂಸ್ಕೃತಿಯನ್ನು ಬೇರ್ಪಡಿಸಿದರು; ಪ್ರಾಚೀನ ಭಾರತದಲ್ಲಿ
ಅದರ ಕುರುಹುಗಳನ್ನು ಶೋಧಿಸಲಾರಂಭಿಸಿದರು’.
ಯುರೋಪಿನ ಈ ಕ್ರಿಶ್ಚಿಯನ್ನರಿಗೆ ತಾವು ಜಗತ್ತನ್ನು ಲೂಟಿಗೈಯ್ಯಲು ಸೈದ್ಧಾಂತಿಕ
ಪರವಾನಗಯೊಂದು ಬೇಕಿತ್ತು. ಆಗ ಅವರ ನಡುವೆ ವ್ಯಾಪಕವಾಗಿ ಚಾಲ್ತಿಗೆ ಬಂದಿದ್ದು ಜನಾಂಗಗಳ
ಕಲ್ಪನೆ. ಬಿಳಿಯರ ಜನಾಂಗ ಅತ್ಯಂತ ಶ್ರೇಷ್ಠವಾದದ್ದು, ಹೀಗಾಗಿ ಅವರಿಗೆ ಜಗತ್ತನ್ನು
ಉದ್ಧಾರ ಮಾಡುವ ಪರವಾನಗಿಯನ್ನು ಭಗವಂತ ಅದಾಗಲೇ ಕೊಟ್ಟುಬಿಟ್ಟಿದ್ದಾನೆಂದು ಅವರು
ನಂಬಿಸಿಬಿಟ್ಟಿದ್ದರು!
ಅವರ ಪ್ರಕಾರ, ‘ಯುರೋಪಿನ ಬಿಳಿಯರು ಜನಾಂಗ ಸ್ತರದಲ್ಲಿ ಮೇಲ್ದರ್ಜೆಯವರಾದರೆ,
ಆಫ್ರಿಕಾದ ಕರಿಯರು ಕೆಳ ದರ್ಜೆಯವರು. ಉಳಿದೆಲ್ಲ ಜನಾಂಗಗಳು ಇವೆರಡರ ನಡುವೆ ಅಲ್ಲಲ್ಲಿ
ಹರಡಿಕೊಂಡಿವೆ’.
ತಮಗಿಂತ ಕೆಳಗಿರುವವರನ್ನು ಮೇಲತ್ತೆಲೆಂದೇ ಭಗವಂತ ನಮ್ಮನ್ನು ಕಳಿಸಿದ್ದಾನೆಂದು
ಅವರು ಸ್ವತಃ ನಂಬಿಬಿಟ್ಟಿದ್ದರು, ಇತರರನ್ನೂ ನಂಬಿಸಿದ್ದರು. ಭಾರತದ ಬುದ್ಧಿವಂತರೂ
ಬ್ರಿಟಿಷರು ದೇವರೇ ಕಳಿಸಿದ ದೂತರೆಂದು ಅನೇಕ ಕಡೆ ಉಲ್ಲೇಖ ಮಾಡುತ್ತಾರಲ್ಲ, ಅದರ ಹಿಂದಿನ
ಸಿದ್ಧಾಂತವೇ ಇದು. ತಮ್ಮ ಈ ಸಿದ್ಧಾಂತಕ್ಕೆ ಪೂರಕವಾಗುವ ಎಲ್ಲವನ್ನೂ ಅವರು ಸಮರ್ಥವಾಗಿ
ಬಳಸಿಕೊಂಡರು. ‘ಆಳುವವರು ಸಹಜವಾಗಿಯೇ ನಾಗರಿಕರು. ಆಳಿಸಿಕೊಳ್ಳುವವರು ಅನಾಗರಿಕರು’ ಎಂಬ
ಪ್ಲೇಟೋ ಮಾತುಗಳು ಅವರಿಗೆ ಪೂರಕವಾದವು.
ಇವೆಲ್ಲವನ್ನೂ ಹೊತ್ತುಕೊಂಡೇ ಮಿಷನರಿಗಳು ಭಾರತಕ್ಕೆ ಕಾಲಿಟ್ಟಿದ್ದರು. ಆದರೆ
ನಿರಂತರ ಆಕ್ರಮಣಗಳಿಗೆ ಒಳಗಾಗಿ ಭಾರತೀಯ ಸಮುದಾಯಗಳು ತಮ್ಮ ಹೊರಪದರವನ್ನು ಅದೆಷ್ಟು
ಗಟ್ಟಿಗೊಳಿಸಿಕೊಂಡಿದ್ದವೆಂದರೆ, ಅದನ್ನು ಮುರಿದು ಒಳಗೆ ಹೋಗುವುದು ಕ್ರಿಶ್ಚಿಯನ್ನರಿಗೆ
ಸುಲಭದ ಮಾತಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಾರತ ಅವರ ಪಾಲಿಗೆ ಸಲೀಸಾದ
ತುತ್ತಾಗಲಿಲ್ಲ.
ಬಂಗಾಳದಲ್ಲಿ ಬಲವಾಗಿ ಬೇರೂರುವ ಪ್ರಯತ್ನ ನಡೆಸಿದ ಮಿಷನರಿಗಳು ಅದಾಗಲೇ ಬ್ರಹ್ಮ
ಸಮಾಜದ ಮೂಲಕ ಸಾಕಷ್ಟು ಹೆಸರಾಗಿದ್ದ ರಾಜಾ ರಾಮ್‌ಮೋಹನ್ ರಾಯ್ ರನ್ನು ಸಂಧಿಸಿದರು.
ಬುದ್ಧಿವಂತ, ಮೇಲ್ವರ್ಗಕ್ಕೆ ಸೇರಿದ ರಾಮ್‌ಮೋಹನರನ್ನು ಕ್ರಿಸ್ತನ ಬುಡಕ್ಕೆಳೆತಂದರೆ
ಹಿಂದೂಗಳಿಗೊಂದು ಬಲವಾದ ಪೆಟ್ಟು ಕೊಟ್ಟಂತೆ ಆಗುವುದೆಂದು ಚರ್ಚು ಚಿಂತಿಸಿತ್ತು. ೧೮೧೮ರ
ಮಾರ್ಚ್ ತಿಂಗಳಲ್ಲಿ ವಿಲಿಯಂ ಆಡಮ್ ಬಂಗಾಳಕ್ಕೆ ಬಂದ. ರಾಜಾರಾಮರನ್ನು ಮತಾಂತರಿಸುವ ಹೊಣೆ
ಅವರದಾಗಿತ್ತು. ಸಂಪರ್ಕ ಬಲವಾಯ್ತು. ಬೈಬಲ್ ಮೇಲಿನ ಚರ್ಚೆಗಳೂ ಜೋರಾದವು. ರಾಜಾ
ರಾಮ್‌ಮೋಹನ್ ರಾಯರು ಬೈಬಲ್ಲನ್ನು ಅರೆದು ಕುಡಿದದ್ದಷ್ಟೇ ಅಲ್ಲ, ವೇದಗಳ ಮೇಲೂ ಚೆನ್ನಾದ
ಹಿಡಿತ ಹೊಂದಿದ್ದರು. ಇವರೆದುರು ವಿಲಿಯಂ ಆಡಮ್ ಕುರಿಯಂತಾಗಿದ್ದ.
ಹಿಂದೂಗಳ ಬಹುದೇವತಾವಾದದ ಚರ್ಚೆ ನಡೆಯುವಾಗ ರಾಜಾ ರಾಮ್‌ಮೋಹನ ರಾಯರು ವೇದಗಳ ಏಕ
ದೇವತಾವಾದವನ್ನು ಎತ್ತಿ ಹಿಡಿದುದಷ್ಟೇ ಅಲ್ಲ, ಬೈಬಲ್ಲಿನ ತ್ರಿದೇವತಾ (ಭಗವಂತ ತಂದೆ,
ಭಗವಂತನ ಮಗ ಏಸು ಕ್ರಿಸ್ತ ಮತ್ತು ಪವಿತ್ರ ಸೈತಾನ – ಟ್ರಿನಿಟಿ) ವಾದವನ್ನು ಅಪಹಾಸ್ಯ
ಮಾಡಿದರು. ಮೂರು ದೇವರನ್ನು ನಂಬುವವರಿಗೆ ನೂರು ದೇವರಿಂದ ತೊಂದರೆ ಏಕಾಗಬೇಕೆಂದು
ಪ್ರಶ್ನಿಸಿದರು. ವಿಲಿಯಂ ಆಡಮ್‌ನ ನಂಬಿಕೆಗಳಿಗೆ ತೀವ್ರತರ ಆಘಾತ ಉಂಟಾಯ್ತು. ಆತ ಬೈಬಲ್
ಮೇಲೆ, ತನ್ನ ಆರಾಧ್ಯ ದೈವ ಏಸುಕ್ರಿಸ್ತನ ಕುರಿತಂತೆ ಅನೇಕ ಪ್ರಶ್ನೆಗಳನ್ನೆತ್ತಿದ. ತನ್ನ
ಪ್ರಿಯಮಿತ್ರನಿಗೆ ಬರೆದ ಪತ್ರದಲ್ಲಿ, ‘ಕಳೆದ ಕೆಲವಾರು ತಿಂಗಳಿಂದ ಕ್ರಿಸ್ತನ ಬಗ್ಗೆ
ಒಂದಷ್ಟು ಪ್ರಶ್ನೆಗಳು ನನ್ನೊಳಗೆ ತಲೆ ಎತ್ತುತ್ತಿವೆ. ರಾಮ್‌ಮೋಹನ ರಾಯ್‌ರನ್ನು
ಕ್ರಿಸ್ತಾನುಯಾಯಿಯಾಗಿಸುವ ಪ್ರಯತ್ನದಲ್ಲಿ ಅವರೊಂದಿಗೆ ನಡೆಸಿದ ಚರ್ಚೆ ನನ್ನ
ಸಿದ್ಧಾಂತದಲ್ಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿದೆ. ಸಿದ್ಧಾಂತದ ಪರವಿರುವ
ವಿಚಾರಗಳು ಗುಡ್ಡದಷ್ಟಿದ್ದರೆ, ಅದಕ್ಕೆ ವಿರುದ್ಧವಾದ ಅಂಶಗಳು ಮಹಾಪರ್ವತದಷ್ಟಿದೆ
ಎಂಬುದನ್ನು ನಾನು ನಿಸ್ಸಂಶಯವಾಗಿ ಒಪ್ಪಿಕೊಳ್ತೇನೆ’ ಎಂದಿದ್ದರು.
ಆಡಮ್‌ನ ತಲೆ ಎಷ್ಟು ಕೆಟ್ಟಿತ್ತೆಂದರೆ, ಮೂರು ವರ್ಷಗಳ ಕಾಲ ವೇದ ಮತ್ತು
ಬೈಬಲ್ಲುಗಳ ಅಧ್ಯಯನ ಮಾಡುತ್ತ, ತುಲನೆ ಮಾಡುತ್ತ ಕೊನೆಗೊಮ್ಮೆ ವೇದಧರ್ಮವೇ
ಶ್ರೇಷ್ಟವೆಂದು ಗ್ರಹಿಸಿದ. ತಾನು ಮತಾಂತರಗೊಂಡ! ರಾಜಾ ರಾಮಮೋಹನ ರಾಯ್‌ರನ್ನು ತನ್ನ
ಮತಕ್ಕೆ ಸೆಳೆಯಲು ಹೋಗಿ ತಾನೇ ವೇದಧರ್ಮಕ್ಕೆ ಶರಣಾಗಿಬಿಟ್ಟ. ಇದು ಚರ್ಚನ್ನು
ಕೆಂಡಾಮಂಡಲವಾಗಿಸಿತು. ಚರ್ಚು ವಿಲಿಯಮ್ ಆಡಮ್‌ಗೆ ಧರ್ಮದ್ರೋಹಿಯ ಪಟ್ಟ ಕಟ್ಟಿತು. ಲಂಡನ್
ಮತ್ತು ಅಮೆರಿಕಾದ ಮಿಷನರಿ ವಲಯಗಳಲ್ಲಿ ತುಮುಲವೇರ್ಪಟ್ಟಿತು. ಅನೇಕ ದಿನಗಳ ಕಾಲ ಅಲ್ಲಿ
ಮೌನ ಸಾಮ್ರಾಜ್ಯ. ಚರ್ಚು ಮಾನಸಿಕವಾಗಿ ಕುಗ್ಗಿಹೋಗಿತ್ತು.
ಈ ಘಟನೆಯನ್ನು ಮುಂದೆ ಎಂದಿಗೂ ನೆನೆಸಿಕೊಳ್ಳಬಾರದೆಂದು ನಿಶ್ಚಯಿಸಿದ ಮಿಷನರಿ ಪಡೆ
ಸಾವರಿಸಿಕೊಂಡು ಮುಂದಡಿಯಿಡತೊಡಗಿತು. ಅವರ ವಾರ್ಷಿಕ ವರದಿಯಲ್ಲಿ ‘ಈ ಹಿಂದಿನ ಒಬ್ಬ
ಸದಸ್ಯ ವಿಲಿಯಮ್ ಆಡಮ್ ಕ್ರಿಸ್ತನ ವಿರುದ್ಧವಾಗಿರುವ ಸಂದೇಶಗಳನ್ನು ಒಪ್ಪಿಕೊಂಡು
ಕ್ರಿಸ್ತನ ದೈವಿಕತೆಯನ್ನು ಧಿಕ್ಕರಿಸಿದ್ದರಿಂದ ಸೆರಾಮ್‌ಪೋರ್ ಮಿಷನ್‌ಗೂ ಆತನಿಗೂ ಇದ್ದ
ಸಂಬಂಧ ಕಡಿಯಲಾಗಿದೆ’ ಎಂದಷ್ಟೇ ಬರೆದು ಸುಮ್ಮನಾದರು. ಮಿಷನರಿಗಳ ಇತಿಹಾಸವುಳ್ಳ
ಪುಸ್ತಕದಲ್ಲಿ ಆಡಮನಿಗೆ ಸ್ಥಾನ ನಿರಾಕರಿಸಲಾಯ್ತು. ಅವರಿಗೆ ಇದು ಒಗ್ಗಿ ಬಂದ ಚಾಳಿ.
ತಾವು ಮಾಡಿದ ಕಾರ್ಯಗಳ, ತಮಗಾದ ಆಘಾತಗಳ ಪಡಿಯಚ್ಚನ್ನು ಅಳಿಸುವುದು ಅವರಿಗೆ ಹೊಸತಲ್ಲ.
ಮಿಷನರಿಗಳು ಈಗ ಎಚ್ಚೆತ್ತುಕೊಂಡರು. ವೇದಗಳಲ್ಲಿರುವ ಸಾರವನ್ನು ತಮಗೆ ಬೇಕಾದ
ರೀತಿಯಲ್ಲಿ ಅರ್ಥೈಸಿ ಭಾರತೀಯರಿಗೆ ಉಣಿಸುವುದು ಈಗ ಅವರಿಗೆ ಅನಿವಾರ್ಯವಾಯ್ತು. ಅವರು
ಚಡಪಡಿಸಲಾರಂಭಿಸಿದರು.
ಅತ್ತ ಅಬೆ ಡುಬೋಯಿಸ್ ಮಿಷನರಿಯಾಗಿ ಭಾರತದಲ್ಲಿ ಪೂರಾ ಸೋತರೂ ಇಲ್ಲಿ ನೆಲೆ ನಿಂತು
ಇಲ್ಲಿನ ಜನರನ್ನು ಅರ್ಥೈಸಿಕೊಂಡಿದ್ದ. ಇಲ್ಲಿನ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ
ಪಾಲ್ಗೊಂಡಿದ್ದ. ಮದುವೆ ಮುಂಜಿಗಳನ್ನು ಗಮನಿಸಿದ್ದ. ಜಾತಿ ಜಾತಿಗಳ ನಡುವಣ ಗೊಂದಲ ಕಣ್ಣು
ಕುಕ್ಕಿತ್ತು. ತಾನು ಸೋತರೇನು, ಮುಂದೆ ಬರುವ ಮಿಷನರಿಗಳಿಗೆ ತನ್ನ ಅನುಭವ
ಲಾಭದಾಯಕವಾಗಲೆಂದು ‘ಹಿಂದೂ ಮಮೆರಿ, ಕಸ್ಟಮ್ಸ್ ಅಂಡ್ ಸೆರಮನೀಸ್’ ಎಂಬ ಪುಸ್ತಕ ಬರೆದು
ತರುಣ ಮಿಷನರಿಗಳ ಕೈಗಿಟ್ಟ. ಇಂದಿಗೂ ಭಾರತಕ್ಕೆ ಹೊರಡುವ ಪ್ರತಿಯೊಬ್ಬ ಮಿಷನರಿಗೂ ಇದು
ವೇದವೇ ಸರಿ!
ಅಬೆ ಮಿಷನರಿಗಳಿಗೆಲ್ಲ ಒಂದು ಕಿವಿಮಾತು ಹೇಳಿದ, ೧ಹಿಂದೂಗಳ ಬಹುದೇವತಾ ವಾದ ಮತ್ತು
ಮೂರ್ತಿಪೂಜೆಗಳೇ ಅವರನ್ನು ಕ್ರಿಸ್ತ ಮತದತ್ತ ಸೆಳೆಯಲು ನಮಗೆ ಶ್ರೇಷ್ಟ ಅಸ್ತ್ರ’.
ಚರ್ಚ್‌ನ ಚಡಪಡಿಕೆ ತೀವ್ರವಾಗುತ್ತಿತ್ತು. ಭಾರತ ಕೈತಪ್ಪಿಹೋಗುವ ಪ್ರಮೇಯ ಬಿಡಿ,
ವೇದ ಧರ್ಮಕ್ಕೆ ಒಣಗಿದ ಎಲೆಗಳಂತೆ ತಾನೇ ಉದುರಿಹೋಗುವ ಭಯವೂ ಅವರನ್ನು ಕಾಡಲಾರಂಭಿಸಿತು.
ವೇದಗಳ ಏಕದೇವತಾವಾದವನ್ನು ಧಿಕ್ಕರಿಸಿ ಅದರೊಳಗೆ ಬಹುದೇವತಾವಾದದ ಎಳೆಯನ್ನು ಹುಡುಕಬಲ್ಲ
ಒಬ್ಬ ಸಂಸ್ಕೃತ ವಿದ್ವಾಂಸನನ್ನು ಅರಸಲಾರಂಭಿಸಿದರು. ಆತ ಇಂಗ್ಲೆಂಡಿಗೆ
ಹೊರಗಿನವನಾಗಿದ್ದರೆ ಒಳಿತೆಂಬ ಅಭಿಪ್ರಾಯವೂ ಇತ್ತು. ಆ ಒಬ್ಬ ವ್ಯಕ್ತಿ ಹಿಂದೂ ಧರ್ಮದ
ಬುಡವನ್ನೇ ಅಲುಗಾಡಿಸಿ ಕ್ರಿಸ್ತನ ಸಂದೇಶ ಹರಡಿಸಲು ರಾಜಮಾರ್ಗ ನಿರ್ಮಿಸಿಕೊಡುವನೆಂಬ
ನಿರೀಕ್ಷೆ ಚರ್ಚಿಗಿತ್ತು.
ಹೌದು. ಆ ‘ಒಬ್ಬ’ ಅವರಿಗೀಗ ಬೇಕೇಬೇಕಾಗಿತ್ತು.
ಆಗ ಅವರಿಗೆ ಸಿಕ್ಕವನೇ ಫ್ರೆಡ್ರಿಕ್ ಮಾಕ್ಸ್‌ಮಿಲಿಯನ್ ಮುಲ್ಲರ್’ ಅಥವಾ
ನಮ್ಮೆಲ್ಲರ ಪಠ್ಯಪುಸ್ತಕಗಳನ್ನು, ಬುದ್ಧಿಜೀವಿಗಳ ತಲೆಯನ್ನೂ ಅಲಂಕರಿಸಿದ ‘ಮ್ಯಾಕ್ಸ್
ಮುಲ್ಲರ್’.