ಪರಸ್ಪರವಿರೋಧಿನ್ಯೋರೇಕಸಂಶ್ರಯದುರ್ಲಭಮ್
ಸಂಗತಂ ಶ್ರೀಸರಸ್ವತ್ಯೋರ್ಭೂತಯೇsಸ್ತು ಸದಾ ಸತಾಮ್ ।।
ಇದರ ತಾತ್ಪರ್ಯ ಹೀಗೆ:
‘ಲಕ್ಷ್ಮಿಯೂ ಸರಸ್ವತಿಯೂ ಒಂದು ಕಡೆ ಇರುವುದು ವಿರಳ. ಅವರಿಬ್ಬರೂ ವಿರೋಧವಿಲ್ಲದೆ ಯಾವಾಗಲೂ ಸಜ್ಜನರಲ್ಲಿ ಇರಲಿ ಎಂದು ಆಶಿಸುತ್ತೇನೆ.’
ಇಂದು ದೀಪಾವಳಿಯ ಎರಡನೆಯ ದಿನ; ಲಕ್ಷ್ಮಿಯನ್ನು ಪೂಜಿಸುವ ದಿನ. ಈ ಸಂದರ್ಭದಲ್ಲಿ ಕಾಳಿದಾಸ ಮಹಾಕವಿಯ ಈ ಶ್ಲೋಕದ ಅನುಸಂಧಾನ ಅರ್ಥಪೂರ್ಣವಾಗುತ್ತದೆ.
ನಮ್ಮ ಸಮಾಜದಲ್ಲಿ ಇರುವ ನಂಬಿಕೆಯೊಂದನ್ನೇ ಮಹಾಕವಿ ಇಲ್ಲಿ ಹೇಳುತ್ತಿರುವುದು ಸ್ಪಷ್ಟ. ಲಕ್ಷ್ಮಿ ಮತ್ತು ಸರಸ್ವತಿ – ಈ ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆಯಷ್ಟೆ. ಎಂದರೆ ದುಡ್ಡು ಮತ್ತು ವಿದ್ಯೆ – ಇವೆರಡೂ ಒಂದು ಸ್ಥಳದಲ್ಲಿ ಅಥವಾ ಒಬ್ಬ ವ್ಯಕ್ತಿಯಲ್ಲಿ ಇರುವುದಿಲ್ಲ ಎಂಬುದು ಇದರ ತಾತ್ಪರ್ಯ. ಈ ನಂಬಿಕೆ ದಿಟವೋ ಸಟೆಯೋ – ಅದು ಬೇರೆ ಮಾತು. ಅದರೆ ಇಂಥದೊಂದು ನಂಬಿಕೆ ಜನರಲ್ಲಿ ಇದೆ ಎನ್ನುವುದಂತೂ ನಿಜ. ಇಂಥದೊಂದು ನಂಬಿಕೆಗೆ ಕಾರಣವಾದರೂ ಏನು – ಎಂಬ ಪ್ರಶ್ನೆ ಬರದೇ ಇರದು. ಕಾರಣ ಏನಾದರೂ ಇರಲಿ; ಒಂದನ್ನಂತೂ ಊಹಿಸಬಹುದು. ಅದೆಂದರೆ, ದುಡ್ಡನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ, ವಿದ್ಯೆಯನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ. ದುಡ್ಡಿನಲ್ಲಿಯೇ ಸಂತೋಷ ಇದೆ ಎಂದುಕೊಳ್ಳುವವರು ವಿದ್ಯೆಯ ಕಡೆಗೆ ಮುಖಮಾಡುವುದು ಕಡಿಮೆ; ಹೀಗೆಯೇ ಕಲಿಕೆಯಲ್ಲಿಯೇ ಸಂತೋಷವನ್ನು ಕಂಡುಕೊಂಡವರು ದುಡ್ಡಿನ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವುದು ಕಡಿಮೆ.
ಲಕ್ಷ್ಮಿ ಮತ್ತು ಸರಸ್ವತಿಗಳ ಈ ವಿಮುಖತೆಗೆ ಇನ್ನೂ ಹಲವು ಕಾರಣಗಳು ಇವೆಯೆನ್ನಿ! ಆದರೆ ಇವರಿಬ್ಬರೂ ಒಂದೆಡೆ ಇರಲೇ ಬಾರದು ಎಂದೇನೂ ಇಲ್ಲವಷ್ಟೆ. ಮಹಾಕವಿ ಅಂಥ ಸಂಗಮ ಸಾಧ್ಯವಾಗಲಿ ಎಂದು ಆಶಿಸುತ್ತಿದ್ದಾನೆ; ಆದರೆ ಸಜ್ಜನರಲ್ಲಿ ಅಂಥ ಸಮಾಗಮವಾಗಲಿ ಎಂದು ಹಾರೈಸುತ್ತಿದ್ದಾನೆ. ಏಕೆಂದರೆ ವಿದ್ಯೆ ಅಥವಾ ದುಡ್ಡು – ಇವೆರಡರಲ್ಲಿ ಯಾವುದಾದರೂ ಒಂದೇ ಇದ್ದರೂ ಸಾಕು, ಆ ವ್ಯಕ್ತಿಯ ತಲೆ ಕೆಡಿಸಲು; ಇನ್ನು ಎರಡೂ ಇದ್ದರೆ ಏನು ಹೇಳುವುದು? ಹೀಗಾಗಿಯೇ ಇವೆರಡೂ ಸಜ್ಜನರಲ್ಲಿ ಮಾತ್ರವೇ ಒಂದಾಗಿ ನೆಲಸಲಿ ಎಂದು ಕವಿ ಆಶಿಸಿರುವುದು.
ಆದರೆ ಇಲ್ಲಿ ಇನ್ನೊಂದು ವಿಷಯವನ್ನು ಕೂಡ ಗಮನಿಸಬೇಕು. ನಾವು ಲಕ್ಷ್ಮಿ ಮತ್ತು ಸರಸ್ವತಿಯನ್ನು ಬೇರೆ ಬೇರೆ ಎಂದು ಗ್ರಹಿಸುತ್ತಿರುವುದರಲ್ಲಿಯೇ ಸಮಸ್ಯೆ ಇದೆ. ಲಕ್ಷ್ಮಿ ಎಂದರೆ ವಿದ್ಯೆಯೂ ಹೌದು, ಸರಸ್ವತಿ ಎಂದರೆ ಸಂಪತ್ತೂ ಹೌದು. ಇದನ್ನು ಮನಗಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದೇ ನಿಜವಾದ ಲಕ್ಷ್ಮೀಪೂಜೆ.
Content From: https://www.prajavani.net/community/motivation/laxmi-pooja-a-religious-performance-during-deepavali-festival-779252.html