Monday, 16 November 2020

ದಿನದ ಸೂಕ್ತಿ: ಬಲಿಪಾಡ್ಯಮಿ

 


ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ।
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ।।

ಇದರ ತಾತ್ಪರ್ಯ ಹೀಗೆ:

‘ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರು ಏಳು ಜನರು ಚಿರಂಜೀವಿಗಳು.’

ಚಿರಂಜೀವಿಗಳು ಎಂದರೆ ಸಾವೇ ಇಲ್ಲದವರು. ಸಾವನ್ನು ಗೆಲ್ಲುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವಷ್ಟೆ! ಹುಟ್ಟು ಇದ್ದಮೇಲೆ ಸಾವು ಇರಲೇಬೇಕು. ಆದರೆ ಏಳು ಜನರು ಸಾವನ್ನು ಗೆದ್ದಿದ್ದಾರೆ; ಅವರಿಗೆ ಸಾವೇ ಇಲ್ಲ – ಎನ್ನುವುದು ಪರಂಪರೆಯ ನಂಬಿಕೆ. ಈ ಏಳು ಜನರು ಯಾರೆಂಬುದನ್ನು ಮೇಲಿನ ಶ್ಲೋಕ ಪಟ್ಟಿಮಾಡಿ ಹೇಳಿದೆ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರೇ ಆ ಏಳು ಚಿರಂಜೀವಿಗಳು.

ಚಿರಂಜೀವಿಗಳೆಂದು ಗುರುತಿಸಲ್ಪಟ್ಟಿರುವ ಏಳು ಜನರೂ ಪುರಾಣವ್ಯಕ್ತಿಗಳು; ಬಲಿಯನ್ನು ಹೊರತು ಪಡಿಸಿದರೆ, ಉಳಿದ ಅಷ್ಟು ಮಂದಿಯೂ ರಾಮಾಯಣ ಮತ್ತು ಮಹಾಭಾರತಗಳಲ್ಲಿರುವ ಪ್ರಮುಖ ಪಾತ್ರಗಳು ಎನ್ನಬಹುದು; ಬಲಿಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದ್ದರೂ ಬೇರೆ ಪುರಾಣಗಳಲ್ಲಿಯೇ ಹೆಚ್ಚಿನ ವಿವರಗಳು ಸಿಗುವುದು. ಈ ಏಳು ಜನರಿಗೆ ಚಿರಂಜೀವತ್ವ ಹೇಗೆ ದೊರೆಯಿತು ಎನ್ನುವುದು ಕೂಡ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಮಗೆ ಇಲ್ಲಿ ಪ್ರಸ್ತುತ ವ್ಯಕ್ತಿ ಎಂದರೆ ಬಲಿ. 

ಬಲಿಯು ಪ್ರಹ್ಲಾದನ ಮೊಮ್ಮಗ; ವಿರೋಚನನ ಮಗ. ಇವನು ರಾಕ್ಷಸರಾಜ. ಇವನ ದಾನಬುದ್ಧಿ ಎಲ್ಲ ಲೋಕಗಳಲ್ಲೂ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಅವನಿಗೆ ತನ್ನ ದಾನಶೀಲತೆಯ ಬಗ್ಗೆ ತುಂಬ ಹೆಮ್ಮೆಯೂ ಇತ್ತು. ಇವನ ಅಹಂಕಾರವನ್ನು ತಗ್ಗಿಸಲೆಂದೇ ಮಹಾವಿಷ್ಣು ಇವನಲ್ಲಿಗೆ ಬಂದ; ಆದರೆ ವಾಮನರೂಪದಲ್ಲಿ ಬಂದ; ಬಂದು ದಾನವನ್ನು ಬೇಡಿದ. ಪುಟ್ಟ ಆಕೃತಿಯ ಈ ಬಾಲಕ ಏನನ್ನು ತಾನೆ ಕೇಳಿಯಾನು – ಎಂಬ ಎಣಿಕೆ ಬಲಿಚಕ್ರವರ್ತಿಯದ್ದು. ಮೇಲ್ನೋಟಕ್ಕೆ ಸಣ್ಣ ಕೋರಿಕೆಯಾಗಿಯೇ ಕಾಣುವಂಥ ದಾನವನ್ನೇ ಕೇಳಿದ ವಾಮನ; ಮೂರು ಹೆಜ್ಜೆಗಳಷ್ಟು ಭೂಮಿ ಅವನು ಕೇಳಿದ ದಾನ. ಹುಚ್ಚ, ಇಷ್ಟೇ ಸಾಕೇ, ಬೇರೆ ಏನನ್ನಾದರೂ ಕೇಳಿಕೋ – ಎಂದ ಬಲಿ. ಆದರೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನೇ ಅವನು ಕೊಡಲು ಸಾಧ್ಯವಾಗಲಿಲ್ಲ. ವಾಮನ ತ್ರಿವಿಕ್ರಮನಾಗಿ ಬೆಳೆದು, ಒಂದು ಹೆಜ್ಜೆಯಿಂದ ಭೂಮಿಯನ್ನೂ, ಮತ್ತೊಂದರಿಂದ ಆಗಸವನ್ನೂ ಅಳೆದುಬಿಟ್ಟ! ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ಸ್ಥಾನವಾಯಿತು. ವಿಷ್ಣು ಅವನನ್ನು ಮೆಟ್ಟಿ, ಪಾತಾಳಕ್ಕೆ ತಳ್ಳಿದ. ಆದರೂ ಅವನ ದಾನಬುದ್ಧಿಯಿಂದ ಪ್ರಸನ್ನನಾಗಿ ಅವನಿಗೆ ಚಿರಂಜೀವಿಯಾಗಿರು ಎಂದು ಹರಸಿದ; ಮಾತ್ರವಲ್ಲ, ವರ್ಷಕ್ಕೊಮ್ಮೆ ಅವನು ತನ್ನ ರಾಜ್ಯವಾದ ಈ ಭೂಲೋಕಕ್ಕೆ ಬಂದುಹೋಗುವ ಅವಕಾಶವನ್ನೂ ಒದಗಿಸಿದ.

ಇಂದು ಬಲಿಪಾಡ್ಯಮಿ. ನಾವೆಲ್ಲರೂ ಬಲಿಯನ್ನು ಸ್ವಾಗತಿಸುವ ದಿನ. ಜೊತೆಗೆ ಅವನಿಂದ ಪಾಠವನ್ನು ಕಲಿಯುವ ಸಮಯ ಕೂಡ. ನಮ್ಮ ಗುಣಗಳ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಅಹಂಕಾರ ನಮ್ಮನ್ನು ಸವಾರಿಮಾಡತೊಡಗಿದರೆ ನಮ್ಮ ಗುಣಗಳೇ ನಮ್ಮ ಶತ್ರುಗಳೂ ಆಗಬಹುದು. ಎಲ್ಲ ಗುಣಗಳಲ್ಲೂ ಮಹಾಗುಣ ಎಂದರೆ ವಿನಯವೇ. ಇದನ್ನು ನಾವು ಮರೆಯಬಾರದು.

content copy right: https://www.prajavani.net/community/religion/balipadyami-deepavali-festival-religion-god-spiritual-morality-779481.html

ದಿನದ ಸೂಕ್ತಿ: ಲಕ್ಷ್ಮೀಪೂಜೆ

ಪರಸ್ಪರವಿರೋಧಿನ್ಯೋರೇಕಸಂಶ್ರಯದುರ್ಲಭಮ್‌

ಸಂಗತಂ ಶ್ರೀಸರಸ್ವತ್ಯೋರ್ಭೂತಯೇsಸ್ತು ಸದಾ ಸತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಲಕ್ಷ್ಮಿಯೂ ಸರಸ್ವತಿಯೂ ಒಂದು ಕಡೆ ಇರುವುದು ವಿರಳ. ಅವರಿಬ್ಬರೂ ವಿರೋಧವಿಲ್ಲದೆ ಯಾವಾಗಲೂ ಸಜ್ಜನರಲ್ಲಿ ಇರಲಿ ಎಂದು ಆಶಿಸುತ್ತೇನೆ.’

ಇಂದು ದೀಪಾವಳಿಯ ಎರಡನೆಯ ದಿನ; ಲಕ್ಷ್ಮಿಯನ್ನು ಪೂಜಿಸುವ ದಿನ. ಈ ಸಂದರ್ಭದಲ್ಲಿ  ಕಾಳಿದಾಸ ಮಹಾಕವಿಯ ಈ ಶ್ಲೋಕದ ಅನುಸಂಧಾನ ಅರ್ಥಪೂರ್ಣವಾಗುತ್ತದೆ.

ನಮ್ಮ ಸಮಾಜದಲ್ಲಿ ಇರುವ ನಂಬಿಕೆಯೊಂದನ್ನೇ ಮಹಾಕವಿ ಇಲ್ಲಿ ಹೇಳುತ್ತಿರುವುದು ಸ್ಪಷ್ಟ. ಲಕ್ಷ್ಮಿ ಮತ್ತು ಸರಸ್ವತಿ – ಈ ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆಯಷ್ಟೆ. ಎಂದರೆ ದುಡ್ಡು ಮತ್ತು ವಿದ್ಯೆ – ಇವೆರಡೂ ಒಂದು ಸ್ಥಳದಲ್ಲಿ ಅಥವಾ ಒಬ್ಬ ವ್ಯಕ್ತಿಯಲ್ಲಿ ಇರುವುದಿಲ್ಲ ಎಂಬುದು ಇದರ ತಾತ್ಪರ್ಯ. ಈ ನಂಬಿಕೆ ದಿಟವೋ ಸಟೆಯೋ – ಅದು ಬೇರೆ ಮಾತು. ಅದರೆ ಇಂಥದೊಂದು ನಂಬಿಕೆ ಜನರಲ್ಲಿ ಇದೆ ಎನ್ನುವುದಂತೂ ನಿಜ. ಇಂಥದೊಂದು ನಂಬಿಕೆಗೆ ಕಾರಣವಾದರೂ ಏನು – ಎಂಬ ಪ್ರಶ್ನೆ ಬರದೇ ಇರದು. ಕಾರಣ ಏನಾದರೂ ಇರಲಿ; ಒಂದನ್ನಂತೂ ಊಹಿಸಬಹುದು. ಅದೆಂದರೆ, ದುಡ್ಡನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ, ವಿದ್ಯೆಯನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ. ದುಡ್ಡಿನಲ್ಲಿಯೇ ಸಂತೋಷ ಇದೆ ಎಂದುಕೊಳ್ಳುವವರು ವಿದ್ಯೆಯ ಕಡೆಗೆ ಮುಖಮಾಡುವುದು ಕಡಿಮೆ; ಹೀಗೆಯೇ ಕಲಿಕೆಯಲ್ಲಿಯೇ ಸಂತೋಷವನ್ನು ಕಂಡುಕೊಂಡವರು ದುಡ್ಡಿನ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವುದು ಕಡಿಮೆ.

ಲಕ್ಷ್ಮಿ ಮತ್ತು ಸರಸ್ವತಿಗಳ ಈ ವಿಮುಖತೆಗೆ ಇನ್ನೂ ಹಲವು ಕಾರಣಗಳು ಇವೆಯೆನ್ನಿ! ಆದರೆ ಇವರಿಬ್ಬರೂ ಒಂದೆಡೆ ಇರಲೇ ಬಾರದು ಎಂದೇನೂ ಇಲ್ಲವಷ್ಟೆ. ಮಹಾಕವಿ ಅಂಥ ಸಂಗಮ ಸಾಧ್ಯವಾಗಲಿ ಎಂದು ಆಶಿಸುತ್ತಿದ್ದಾನೆ; ಆದರೆ ಸಜ್ಜನರಲ್ಲಿ ಅಂಥ ಸಮಾಗಮವಾಗಲಿ ಎಂದು ಹಾರೈಸುತ್ತಿದ್ದಾನೆ. ಏಕೆಂದರೆ ವಿದ್ಯೆ ಅಥವಾ ದುಡ್ಡು – ಇವೆರಡರಲ್ಲಿ ಯಾವುದಾದರೂ ಒಂದೇ ಇದ್ದರೂ ಸಾಕು, ಆ ವ್ಯಕ್ತಿಯ ತಲೆ ಕೆಡಿಸಲು; ಇನ್ನು ಎರಡೂ ಇದ್ದರೆ ಏನು ಹೇಳುವುದು? ಹೀಗಾಗಿಯೇ ಇವೆರಡೂ ಸಜ್ಜನರಲ್ಲಿ ಮಾತ್ರವೇ ಒಂದಾಗಿ ನೆಲಸಲಿ ಎಂದು ಕವಿ ಆಶಿಸಿರುವುದು.

ಆದರೆ ಇಲ್ಲಿ ಇನ್ನೊಂದು ವಿಷಯವನ್ನು ಕೂಡ ಗಮನಿಸಬೇಕು. ನಾವು ಲಕ್ಷ್ಮಿ ಮತ್ತು ಸರಸ್ವತಿಯನ್ನು ಬೇರೆ ಬೇರೆ ಎಂದು ಗ್ರಹಿಸುತ್ತಿರುವುದರಲ್ಲಿಯೇ ಸಮಸ್ಯೆ ಇದೆ. ಲಕ್ಷ್ಮಿ ಎಂದರೆ ವಿದ್ಯೆಯೂ ಹೌದು, ಸರಸ್ವತಿ ಎಂದರೆ ಸಂಪತ್ತೂ ಹೌದು. ಇದನ್ನು ಮನಗಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದೇ ನಿಜವಾದ ಲಕ್ಷ್ಮೀಪೂಜೆ.

Content From: https://www.prajavani.net/community/motivation/laxmi-pooja-a-religious-performance-during-deepavali-festival-779252.html