ಸಾಮಾನ್ಯ ವಿಷಯವೊಂದರ ಸುತ್ತು ಘಟನೆಗಳನ್ನು ಪೋಣಿಸುತ್ತ ಅದಕ್ಕೊಪ್ಪುವ ಪಾತ್ರಗಳು, ಸಹಜ ಸಂಭಾಷಣೆಗಳನ್ನು ಹೆಣೆದು, ಪೂರಕವಾಗಿ ಭಾವೋದ್ದೀಪನಕ್ಕಾಗಿ ಹಾಡುಗಳನ್ನು ಸಮ್ಮಿಳಿತಗೊಳಿಸಿ ವೇದಿಕೆಯಲ್ಲಿ ಅದನ್ನು ಅಭಿವ್ಯಕ್ತಗೊಳಿಸಿದಾಗ ಅದೊಂದು ವಿಶೇಷ ರೀತಿಯ ನಾಟಕದ ರೂಪ ಪಡೆಯುತ್ತದೆ ಎಂಬುದಕ್ಕೆ ಒಂದು ನಿದರ್ಶನ “ಆಚಾರು ಸುಕ್ಕಲ್ಲೆ ಗ್ರಾಚಾರು” ಎಂಬ ನಾಟಕ, ಕರಾಡ ಮಹಿಳೆಯರೇ ನಿರ್ದೇಶಿಸಿ, ನಟಿಸಿದ ತಂಡದ ಟೀಮ್ ವರ್ಕ್ ನಿಜಕ್ಕೂ ಪ್ರಶಂಸಾರ್ಹ.
ಗ್ರಾಮೀಣ ಕರಾಡ ಕೃಷಿ ಕುಟುಂಬದಲ್ಲಿನ ಘಟನೆಗಳೇ ಕಥಾ ವಸ್ತು. ಅವಿಭಾಜ್ಯ ಕುಟುಂಬದಲ್ಲಿ ತಾಯಿಯೊಂದಿಗೆ ಬದುಕುತ್ತಿರುವ ಇಬ್ಬರು ಗಂಡು ಮಕ್ಕಳ ಮತ್ತವರ ಕುಟುಂಬದ ಚಿತ್ರಣವೊಂದರ ಸುತ್ತ ಹೆಣೆದಿರುವ ಸಾಮಾನ್ಯ ಕಥಾವಸ್ತು. ಕೂಡು ಕುಟುಂಬದ ಇಬ್ಬರು ಸೊಸೆಯಂದಿರ ಅನ್ನೋನ್ಯತೆ, ಮಕ್ಕಳ ಆರೈಕೆ, ಅವರೊಂದಿಗೆ ಬಾಂಧವ್ಯದ ಚಿತ್ರಣ ಶ್ರೀ ಸಿದ್ಧಿವಿನಾಯಕ ಸುಪ್ರಭಾತದಿಂದ ನಾಂದಿಯಾಗುವ ನಾಟಕದಲ್ಲಿನ ಸಂಭಾಷಣೆ ಸಹಜ ಮತ್ತು ಸ್ವಾಭಾವಿಕವಾದುದು. ಆಂಗಿಕ ಭಾವಾಭಿನಯಕ್ಕೆ ಜೊತೆ ಕೊಡುವ ಸಂಭಾಷಣೆಯ ಪರಿ ಎಲ್ಲ ಪ್ರೇಕ್ಷಕರನ್ನು ನಾಟಕದತ್ತ ಕೊಂಡೊಯ್ಯುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಾಲೆ, ಸತ್ಸಂಗಗಳ ಪ್ರಭಾವವನ್ನು ಪರೋಕ್ಷವಾಗಿ ನಾಟಕ ಸಾರಿದೆ. ಬೆಳೆಯುತ್ತಿರುವ ಮಕ್ಕಳು ಮೊಬೈಲ್ ಚಟಕ್ಕೆ ಅಂಟುವುದು, ಮಕ್ಕಳೊಂದಿಗೆ ಹಿರಿಯರು ಮೌಲ್ಯಯುತವಾದ ಸಮಯವನ್ನು ಕಳೆಯದೆ, ಟಿ.ವಿ ವೀಕ್ಷಣೆಯಲ್ಲಿ ಮಗ್ನವಾಗಿರುವ ಚಿತ್ರಣ.... ನಮ್ಮ ಇಂದಿನ ಬದಲಾಗುತ್ತಿರುವ ಬದುಕಿನ ಬಿಂಬದಂತಿದೆ. ನಾಟಕದಲ್ಲಿನ ತಿರುವು ತರುವುದೇ ಬೆಳೆದ ಮಕ್ಕಳ ಪಿಕ್ನಿಕ್ನಲ್ಲಾದ ಅನಾಹುತದಿಂದಾಗಿ ಒಟ್ಟಿಗೆ ಇದ್ದಿದ್ದ ಕುಟುಂಬಗಳೆರಡೂ ಇಬ್ಬಾಗವಾಗುವ ದುರಂತ ದೃಶ್ಯ ಪ್ರೇಕ್ಷಕನನ್ನು ಇದೇ ವೇಳೆಯಲ್ಲಿ ತಟ್ಟುವುದು 'ಉದ್ಘಾಣು ನಾ ಹಂಗ... ಉದ್ಘಾಣು ನಾ' ಎಂಬ ಹಾಡು. ಅಂತೂ ಮಕ್ಕಳು, ಮನೆಯವರೊಳಗಿನ ಸುಮಧುರ ಬಾಂಧವ್ಯ ಒಮ್ಮಿಂದೊಮ್ಮೆಲೇ ತುಂಡಾದಾಗ ಪ್ರೀತಿ, ಸ್ನೇಹ, ಸಂಬಂಧವನ್ನು ಬಯಸುವ ಕುಟುಂಬಸ್ಥರಿಗೆ ಭಾಸವಾಗುವುದೇ ಅಂಧಕಾರ, ಈ ಅನುಭವವನ್ನು ದಾರುಣವಾಗಿ ಚಿತ್ರಿಸುವಲ್ಲಿಇಲ್ಲಿನ ಪಾತ್ರಗಳು ಗೆದ್ದಿವೆ. ಮುಂದೆ ಮಕ್ಕಳನ್ನು ಹೊರದೇಶಕ್ಕೆ ಕಳುಹಿಸಿ ಒಬ್ಬಂಟಿಯಾಗುವ ವಯೋವೃದ್ಧ ಮಹಿಳೆ, ಅವಳನ್ನು ವೃದ್ಧಾಶ್ರಮಕ್ಕೆ ದೂಡಲು ಮಕ್ಕಳು ಮಾಡಿದ ವ್ಯವಸ್ಥೆ ಇದೇ ವೆಳೆಯಲ್ಲಿ ಚಿಕ್ಕಮ್ಮನನ್ನು ತನ್ನ ಮನೆಗೆ ಕರೆದೊಯ್ದು ಅವಳನ್ನು ಹೆತ್ತ ತಾಯಿಯಂತೆ ಆದರಿಸುವ (ಅಕ್ಕನ ಮಗ) ಮಗ..... ಮತ್ತೆ ಕುಟುಂಬಗಳ ಸಮಾಗಮವಾಗುವಲ್ಲಿ ಕಾರಣರಾಗುತ್ತಾರೆ. ಜೇನು ಗೂಡಿನಂತೆ ನಾವು “ವೋವಾ ಗೂಡು ಅಮ್ಮಿ..... ಔಂಚ ಸಂಗತ ತುಮ್ಮಿ" ಎಂಬ ನಿಜ ಚಿತ್ರಣವನ್ನು ನೀಡಲಾಗುತ್ತದೆ. ನಾಟಕದ ಬಗ್ಗೆ ಅಂತ್ಯದಲ್ಲಿ ತಿಳಿಸಿದಂತೆ, ಇದೊಂದು “ಥೀಮ್” ಆಧರಿತ ನಾಟಕ ವಸ್ತು. ಕವನ ಒಂದರ ಸಾಲುಗಳ ಸುತ್ತಲೂ ಗೂಡುಕಟ್ಟಿದ ಕಥಾನಕ ವಿಶೇಷವೆಂದರೆ ಇಲ್ಲಿ ಹಾಡೊಂದರಿಂದ ನಾಟಕ ಹುಟ್ಟಿಹುದು. ಸಾಮಾನ್ಯವಾಗಿ ನಾಟಕಗಳನ್ನು ಬಲಯುತಗೊಳಿಸಲು ಅವರ ಲಿಖಿತ Script ಹಾಡುಗಳನ್ನು ಹೆಣೆಯುವುದು). ಯಾವುದೇ ಇಲ್ಲದೆ, ತಮ್ಮದೇ ಆದ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿದ ನಾಟಕ ಪ್ರೇಕ್ಷಕರ ಮನದೊಂದಿಗೆ ಮಾತನಾಡಿದೆ. ನಾಟಕ ಕಳೆದು ರಾತ್ರಿ ಸಮಯದಲ್ಲಿ 'ಸದನ'ದ ಹೊರ ಬಂದಾಗ ಸುತ್ತಲೂ ಬೆಳಕಿದ್ದರೂ “ಉದ್ಘಾಡು ನಾ ಹಂಗ ಉದ್ಘಾ ನಾ...” ಮನದ ಮೂಲೆಯಿಂದ ಗುಂಜಿಸುವಂತಾಯಿತು.
- SN ಭಟ್, ಸೈಪಂಗಲ್ಲು
Click here to watch : ಆಚಾರು ಸುಕ್ಕಲ್ಲೆ ಗ್ರಾಚಾರು