Tuesday, 1 September 2015

ಹಾದಿ ತಪ್ಪಾದರೆ ಎದ್ದ ಕುಂಡಲಿನಿಯೇ ಬೀಳಿಸಬಹುದು!!

1996 ರ ವಿಶ್ವಕಪ್ ಕ್ರಿಕೆಟ್ ನೆನಪಿದೆಯಾ? ಕ್ವಾರ್ಟ್‍ರ್ ಫೈನಲ್ ಪಂದ್ಯ. ಪಾಕಿಸ್ತಾನದೊಂದಿಗೆ ಭಾರತದ್ದು. ಬೆಂಗಳೂರಿನಲ್ಲಿ ನಡೆದಿತ್ತು. ಅಮೀರ್ ಸೋಹೈಲ್ ವೆಂಕಟೇಶ್ ಪ್ರಸಾದರ ಚೆಂಡನ್ನು ಬೌಂಡರಿಗಟ್ಟಿ ‘ ಹೇಗಿದೆ?’ ಎಂದು ವಿಕೃತ ನಗೆ ನಕ್ಕಿದ್ದರು. ಅದು ವೆಂಕಟೇಶ ಪ್ರಸಾದರನ್ನು ಅದ್ಯಾವ ಪರಿ ಕೆಣಕಿತ್ತೆಂದರೆ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಆತ ಎಸೆದ ಮರು ಚೆಂಡು ವಿಕೇಟನ್ನು ಉರುಳಿಸಿ ಅಮೀರ್ ಸೋಹೈಲ್‍ರನ್ನು ಪೆವಿಲಿಯನ್‍ಗಟ್ಟಿತ್ತು. ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮಿಂಚು ಹರಿದಿತ್ತು. ಅದು ವೆಂಕಿ ಜೀವನದ ‘ಬೆಸ್ಟ್ ಬಾಲ್’.
ಈ ರೀತಿಯ ಅನುಭವ ನಿಮಗೂ ಆಗಿಲ್ವಾ? ಯಾರೋ ಕೆಣಕಿದರು ಅಂತ ನಿಮ್ಮೊಳಗಿನ ಶಕ್ತಿ ಇದ್ದಕ್ಕಿದ್ದಂತೆ ಜಾಗೃತವಾಗಿ ಸೂಕ್ತ ಉತ್ತರ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು! ಆಗಿರಲೇಬೇಕು. ಆಕ್ರೋಶ ಬಂದಾಗ ಏಕಮುಖವಾಗಿ ಆಲೋಚಿಸಲು ಶುರು ಮಾಡುತ್ತೇವಾದ್ದರಿಂದ ಇದ್ದಕ್ಕಿದ್ದಂತೆ ಕುಂಡಲಿನಿ ಜಾಗೃತವಾಗಿ ಸುಷುಮ್ನಾ ನಾಡಿಯ ಮೂಲಕ ಹರಿಯಲಾರಂಭಿಸುತ್ತದೆ. ಅಪಾರವಾದ ಶಕ್ತಿಯ ಉತ್ಪಾದನೆಯಾಗುತ್ತದೆ. ಅದೊಂದು ರೀತಿ ದೇಹದೊಳಗೆ ದೆವ್ವ ಹೊಕ್ಕಿದ ಅನುಭವ. ಕೋಪದಿಂದ ಪ್ರೇರೇಪಿತರಾಗಿದ್ದರಿಂದ ಸಹಜವಾಗಿಯೇ ಈ ಶಕ್ತಿಯ ಬಳಕೆ ಋಣಾತ್ಮಕ ಮಾರ್ಗದಲ್ಲಿಯೇ ಆಗುತ್ತದೆ. ಸ್ವಲ್ಪ ಹೊತ್ತು ಕಳೆದ ಮೇಲೆ ಕುಂಡಲಿನಿ ಸಹಜ ಸ್ಥಿತಿಗೆ ಮರುಳುತ್ತದೆ. ನಾವು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತಿರುತ್ತೇವೆ ಅಷ್ಟೇ. ಸೊಳ್ಳೆ ಬಡಿಯಲೂ ತಾಕತ್ತಿಲ್ಲದವ ಎದುರಿಗಿನ ಧಢೂತಿ ಆಸಾಮಿಯನ್ನು ಬಡಿದಟ್ಟಿಬಿಡುತ್ತಾನೆ. ಅದೆಲ್ಲಾ ಕುಂಡಲಿನಿಯ ಶಕ್ತಿಯೇ.

b50534_2995ee4cb379336bc1e591315d4be2ee_srz_1000_1500_85_22_050_120_0ಇದೇನು ಅರ್ಥೈಸಿಕೊಳ್ಳಲು ಅಸಾಧ್ಯವಾದ ಪ್ರಕ್ರಿಯೆಯಲ್ಲ. ಅಣುವೊಂದರೊಳಗಿನ ಪ್ರೋಟಾನು, ನ್ಯೂಟ್ರಾನು, ಎಲೆಕ್ಟ್ರಾನುಗಳು ತಂತಮ್ಮ ಪಾಡಿಗೆ ಇದ್ದರೆ ಅದು ಸಹಜವಾಗಿಯೇ ಇದ್ದುಬಿಡುತ್ತವೆ. ಸ್ವಲ್ಪ ಶಕ್ತಿ ಹರಿಸಿ ಅವುಗಳನ್ನು ಬೇರ್ಪಡಿಸಿದರೆ ಮುಗಿಯಿತು. ಅವುಗಳು ಅಪಾರ ಶಕ್ತಿಯ ಗಣಿಗಳಾಗಿಬಿಡುತ್ತವೆ. ಅನೇಕ ಅಣುಗಳ ಬೇರ್ಪಡಿಸಿದ ಎಲೆಕ್ಟ್ರಾನುಗಳನ್ನು ಏಕಮುಖವಾಗಿ ಸಂಚರಿಸುವಂತೆ ಮಾಡಿದರೆ ಅದೇ ವಿದ್ಯುತ್ತು, ಅದೇ ಲೇಸರ್ ಕೂಡ. ಸಾಮಾನ್ಯವಾದ ಅಣುವಿನೊಳಗೆ ಅದೆಂತಹ ಬ್ರಹ್ಮಾಂಡ ಶಕ್ತಿ.
ಅಕ್ಷರಶಃ ಹಾಗೆಯೇ ನಮ್ಮ ದೇಹದೊಳಗೂ ಕೂಡ. ಅಣುವಿನೊಳಗಿನ ಬಂಧನವನ್ನು ಕಳಚಿದರೆ ಹೇಗೆ ಅದು ಶಕ್ತಿಯ ಕಣಜವಾಗುತ್ತದೋ ಹಾಗೆಯೇ ಮನಸ್ಸು ಹೊರಗಿನ ವಸ್ತುಗಳಲ್ಲಿ ಆಸಕ್ತಿ ಕಳೆದುಕೊಂಡರೆ ಕುಂಡಲಿನಿ ಮೇಲ್ಮುಖ ಓಟಕ್ಕೆ ಸಿದ್ಧವಾಗುತ್ತದೆ. ಈ ಬಂಧನ ಕಳಚುವ ಮಾರ್ಗ ಯಾವುದೆಂಬುದರ ಆಧಾರದ ಮೇಲೆ ಕುಂಡಲಿನಿಯ ಶಕ್ತಿ ಬಳಕೆಯಾಗುತ್ತದೆ. ಕೋಪದಿಂದ ಏಕಾಗ್ರಗೊಂಡ ಮನಸ್ಸು ಕ್ಷಣಾರ್ಧದಲ್ಲಿ ಮಾಡಬಾರದ್ದನ್ನು ಮಾಡಿಬಿಡುತ್ತದೆ. ಆಮೇಲೆ ಪಶ್ಚಾತ್ತಾಪ ಪಡುವುದಷ್ಟೇ ಕೆಲಸ. ಈ ಬಗೆಯ ಉದ್ದೀಪನ ಅತ್ಯಂತ ಕೆಳಮಟ್ಟದ್ದು. ಅದಕ್ಕೇ ನಮ್ಮಲ್ಲಿ ಕೋಪವನ್ನು ನಿಯಂತ್ರಿಸಬೇಕು ಎನ್ನುವುದು. ಇನ್ನು ಆಟ ಆಡುವಾಗ, ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರಿಸುವಾಗ ಸರಕ್ಕನೆ ಏಕಾಗ್ರಗೊಳ್ಳುವ ಮನಸ್ಸು ಅದ್ಭುತವಾದುದನ್ನು ಸಾಧಿಸಿಬಿಡುತ್ತಲ್ಲ ಅದು ಕುಂಡಲಿನಿ ಜಾಗೃತವಾಗುವ ಕಾರಣದಿಂದಲೇ. ‘ಅಯ್ಯೋ ಅದೆಲ್ಲಿಂದ ಉತ್ತರ ಹೊಳೀತೋ, ಗೊತ್ತಾಗಲೇ ಇಲ್ಲ’ ಅಂತ ಕೆಲವೊಮ್ಮೆ ಉದ್ಗರಿಸುತ್ತೇವಲ್ಲ ಅವೆಲ್ಲ ಈ ಮಹಾಶಕ್ತಿಯ ಹರಿವಿನದ್ದೇ ಪ್ರಭಾವ. ಇದು ಮಧ್ಯಮ ದಾರಿ. ಅತ್ಯಂತ ಶ್ರೇಷ್ಠವಾದದ್ದು ಯೋಗ ಮಾರ್ಗವೇ. ಕುಂಡಲಿನಿಯನ್ನು ಬಡಿ- ಬಡಿದು ಎಬ್ಬಿಸಿ ಒಂದೊಂದು ಚಕ್ರದಲ್ಲೂ ನಿಲ್ಲಿಸಿ ಉತ್ಪತ್ತಿಯಾದ ಅಷ್ಟೂ ಶಕ್ತಿಯನ್ನು ಒಳಗೇ ಕ್ರೋಢೀಕರಿಸುವ ಪ್ರಯತ್ನ. ಈ ಪ್ರಯಾಸದಲ್ಲಿ ಶಕ್ತಿ ವ್ಯಯ ಆಗುವುದಿಲ್ಲವಾದ್ದರಿಂದ ಕುಂಡಲಿನಿ ಕೆಳಗಿಳಿಯುವ ಪ್ರಮೇಯವೇ ಇಲ್ಲ. ಅದೀಗ ಮುಂದಿನ ಚಕ್ರದೆಡೆಗೆ ಮುಖಮಾಡಿ ನಿಲ್ಲುತ್ತದೆ. ಇನ್ನಷ್ಟು ಪ್ರಯತ್ನ ಹಾಕಿ ಕುಂಡಲಿನಿಯನ್ನು ಮೇಲಕ್ಕೆ ತಳ್ಳುತ್ತಾ ಹೋದಂತೆ ಬಗೆ ಬಗೆಯ ಆಧ್ಯಾತ್ಮಿಕ ಅನುಭೂತಿಗಳು ಒದಗಲಾರಂಭಿಸುತ್ತವೆ. ಕೊನೆಗೊಮ್ಮೆ ಈ ಕುಂಡಲಿನಿ ಸಹಸ್ರಾರವನ್ನು ಮುಟ್ಟಿದೊಡನೆ ಸಾವಿರ ಸೂರ್ಯರು ಬೆಳಗಿದ ಅನುಭವ.
ಈ ಮಾರ್ಗದುದ್ದಕ್ಕೂ ತನ್ನ ಶಕ್ತಿಯನ್ನು ವ್ಯಕ್ತಿ ಹ್ರಾಸಗೊಳಿಸಿಕೊಂಡಿಲ್ಲವಾದ್ದರಿಂದ ಆತನೀಗ ಅನಂತ ಶಕ್ತಿಯ ಆಗರ. ಇಡಿಯ ವಿಶ್ವವನ್ನೇ ಕೈ ಬೆರಳ ತುದಿಯಲ್ಲಿ ಆಡಿಸಬಲ್ಲ. ತನ್ನ ಇಚ್ಛಾ ಮಾತ್ರದಿಂದಲೇ ವೈಶ್ವಿಕ ನಿಯಮಗಳನ್ನು ಏರುಪೇರುಮಾಡಬಲ್ಲ.
ವಿಶ್ವಾಮಿತ್ರರನ್ನು ನೆನಪಿಸಿಕೊಳ್ಳಿ. ಅವರೊಳಗಿನ ಶಕ್ತಿಯಷ್ಟೂ ಹೇಗೆ ಘನೀಭೂತವಾಗಿತ್ತೆಂದರೆ ತ್ರಿಶಂಕುವಿಗೆ ಸ್ವರ್ಗವನ್ನೇ ನಿರ್ಮಿಸಿಕೊಡಲು ಹೊರಟಿದ್ದರು. ಋಷಿಗಳು ಕುಪಿತರಾಗಿ ಶಪಿಸುತ್ತಿದ್ದರಲ್ಲ ಆಗೆಲ್ಲ ಆ ಶಾಪಗಳು ಸತ್ಯವಾಗಿಬಿಡುತ್ತಿದ್ದುದಕ್ಕೂ ಇದೇ ಕಾರಣ.
ಬೇರೆ ಬೇರೆ ಚಕ್ರಗಳಲ್ಲಿ ನೆಲೆನಿಂತ ಕುಂಡಲಿನಿ ಶಕ್ತಿ ಹೊರಹಾಕಿ ಕೆಳಗಿಳಿದುಬಿಡುತ್ತದೆ. ಥೇಟು ಅಣುವಿನ ಸುತ್ತ ಸುತ್ತುವ ಎಲೆಕ್ಟ್ರಾನಿನಂತೆ. ಅಣುವೊಂದಕ್ಕೆ ಶಕ್ತಿ ತುಂಬಿದಾಗ ಎಲೆಕ್ಟ್ರಾನು ಮೇಲಿನ ಪರಿಧಿಗೆ ನೆಗೆಯುತ್ತದೆ. ಕೆಲವು ಕಾಲದಲ್ಲಿ ಶಕ್ತಿಯನ್ನು ಹೊರಹಾಕಿ ತಾನು ತನ್ನ ಹಳೆಯ ಪರಿಧಿಗೆ ಬಂದು ನೆಮ್ಮದಿಯಿಂದ ಕೇಂದ್ರವನ್ನು ಸುತ್ತುತ್ತಿರುತ್ತದೆ. ಹಾಗೆಯೇ ಕುಂಡಲಿನಿಯೂ. ಮೇಲಿನ ಚಕ್ರಗಳಿಗೆ ನೆಗೆಯುತ್ತದೆ: ಉತ್ಪತ್ತಿಯಾದ ಶಕ್ತಿಯನ್ನು ಹೊರದಬ್ಬಿ ಮತ್ತೆ ಮೂಲಾಧಾರಕ್ಕೆ ಮರಳುತ್ತದೆ. ಮತ್ತೆ ಅದನ್ನು ಎಬ್ಬಿಸಬೇಕು: ಮೇಲ್ಮುಖವಾಗಿ ಏರಿಸಬೇಕು. ಹೀಗಾಗಿಯೇ ಋಷಿಗಳು ಯಾರಿಗಾದರೂ ಶಾಪ ಕೊಟ್ಟ ಮೇಲೆ ಮತ್ತೆ ತಪಸ್ಸಿಗೆ ಮರಳುತ್ತಿದ್ದುದು.
ಇದನ್ನು ಅರ್ಥೈಸಿಕೊಂಡರೆ ದೇವತೆಗಳೇಕೆ ಕೆಲವರ ತಪಸ್ಸು ಭಂಗ ಮಾಡಲೆತ್ನಿಸುತ್ತಿದ್ದರೆಂಬುದೂ ಸ್ಪಷ್ಟವಾಗುತ್ತದೆ. ಅಪಾರ ಶಕ್ತಿಯನ್ನು ಪಡಕೊಂಡವ ಅದನ್ನು ಸೂಕ್ತ ದಿಕ್ಕಿನಲ್ಲಿ ಬಳಸಲಿಲ್ಲವೆಂದರೆ ಆತ ಸಮಾಜ ಘಾತುಕನೇ ಸರಿ. ಅಂತಹವನಿಗೆ ಶಕ್ತಿ ಸಂಚಯಕ್ಕೇ ಅವಕಾಶ ಕೊಡಬಾರದು. ಅಣುವಿನ ಸಾಮಥ್ರ್ಯ ಗುರುತಿಸಿ ಒಬ್ಬ ವಿದ್ಯುತ್ ಉತ್ಪಾದಿಸಿದರೆ, ಮತ್ತೊಬ್ಬ ಬಾಂಬು ತಯಾರಿಸುತ್ತಾನೆ. ಮನುಕುಲಕ್ಕೆ ಕಂಟಕವಾಗಿರುವ ಈ ಬಾಂಬುಗಳನ್ನು ತಯಾರಿಸಲು ಬಿಡದೇ ಇರುವುದೇ ಶ್ರೇಷ್ಠ ಪ್ರಕ್ರಿಯೆ. ಅದಕ್ಕೆಂದೇ ಮೇನಕೆ ವಿಶ್ವಾಮಿತ್ರರ ತಪಸ್ಸು ಕೆಡಿಸಿ ಅವರನ್ನು ಸಂಸಾರಕ್ಕೆಳೆದು ಅವರ ಶಕ್ತಿ ಹ್ರಾಸಗೊಳಿಸಿದ್ದು. ಆದರೆ ಒಮ್ಮೆ ಅವರ ಮನಸ್ಸು ತಿಳಿಯಾಗಿ ವಶಿಷ್ಟರ ಮೇಲಿನ ಕೋಪ ಇಳಿದು ಅವರು ಬದಲಾದ ಮೇಲೆ ಅವರ ತಪೋಭಂಗದ ಪ್ರಯತ್ನ ನಮಗೆ ಕಂಡು ಬರುವುದೇ ಇಲ್ಲ. ಇದರರ್ಥ ಬಲು ಸ್ಪಷ್ಟ. ಕುಂಡಲಿನಿ ಜಾಗೃತಿಗೆ ಬಳಸುವ ಮಾರ್ಗ ಮತ್ತು ಹಿಂದಿನ ಉದ್ದೇಶ ಎರಡೂ ಬಲು ಮುಖ್ಯದ್ದು. ಅರಬ್ ರಾಷ್ಟ್ರಗಳಲ್ಲಿ ಕುಂಡಲಿನಿ ಜಾಗೃತಿಗೆ ಅನ್ಯರ ಮೇಲಿನ ದ್ವೇಷವನ್ನೇ ಆಯುಧವನ್ನಾಗಿಸಿಕೊಳ್ಳಲಾಯಿತು. ಯುದ್ಧೋನ್ಮಾದವೇ ಅವರಿಗೆ ಶಕ್ತಿ ಸಂಗ್ರಹದ ಮಾರ್ಗ. ಸುಷುಮ್ನಾದ ಮೂಲಕ ಏರಿದ ಕುಂಡಲಿನಿ ಶಕ್ತಿಯೇ ಅವರಲ್ಲಿ ಕೊಲೆಗಡುಕತನದ ಕ್ರೌರ್ಯ ತುಂಬೋದು.
ಕುಂಡಲಿನಿಯ ಸುಷುಮ್ನ ನಾಡಿಯ ಮೂಲಕ ಮೇಲೇರಿಸುವುದು ಅಸಾಧ್ಯವೆಂದಲ್ಲವಾದ ಮೇಲೆ ಮುಂದಿನ ಪ್ರಶ್ನೆ, ಅದನ್ನು ಸೂಕ್ತ ಮಾರ್ಗಗಳ ಮೂಲಕ ಸಾಧಿಸಿಕೊಳ್ಳೋದು ಹೇಗೆ ಅಂತ. ಪ್ರಾಣಶಕ್ತಿಯ ನಿಗ್ರಹದ ಮೂಲಕ.
ಹೌದು. ಇಡಿಯ ವಿಶ್ವವನ್ನು ಹಿಡಿದು ನಿಂತಿರುವ ಶಕ್ತಿ ಪ್ರಾಣವೇ. ಅನೇಕ ಬಾರಿ ಮೂಗಿನಿಂದ ಒಳಗೆಳೆದುಕೊಳ್ಳುವ ಉಸಿರೇ ಪ್ರಾಣ ಅಂತ ಕರೆದು ಬಿಡುತ್ತೇವೆ ಅದು ಇಂಗ್ಲೀಷಿನ ಅನುವಾದದ ಪ್ರಬಾವ. ವಾಸ್ತವವಾಗಿ ಉಸಿರಾಟ ಪ್ರಾಣಶಕ್ತಿಯ ಅರಿವು ಮೂಡಿಸುವ ಸ್ಥೂಲ ರೂಪ ಮಾತ್ರ.
ಗ್ರಹಗಳು ತಮ್ಮ ತಮ್ಮ ಸ್ಥಾನದಲ್ಲಿ ನಿಂತಿರಲು; ಸೂರ್ಯನ ಸುತ್ತ ಭೂಮಿ ಸುತ್ತಲೂ ಪ್ರಾಣವೇ ಕಾರಣ. ಅಷ್ಟೇ ಅಲ್ಲ. ಅಣು- ಅಣುವಿನ ನಡುವಿನ ಬಂಧಕ್ಕೂ; ಎಲೆಕ್ಟ್ರಾನುಗಳ ಭ್ರಮಣೆಗೂ ಈ ಪ್ರಾಣವೇ ಕಾರಣ. ವಿವೇಕಾನಂದರಂತೂ ಸೃಷ್ಟಿಯ ಉಗಮದ ಹೊತ್ತಲ್ಲಿ ಪ್ರಾಣದ ಕಂಪನದಿಂದಲೇ ಆಕಾಶ ಉತ್ಪಾದನೆಯಾದದ್ದು ಅಂತಾರೆ. ಆಕಾಶ ಮತ್ತು ಪ್ರಾಣಗಳ ಸಂಯೋಗದಿಂದಲೇ ವಾಯುವಿನ ಜನನ. ಆನಂತರ ಅಗ್ನಿ, ನೀರು, ಮಣ್ಣು ಇವೆಲ್ಲದರ ಉತ್ಪಾದನೆಗೂ ಪ್ರಾಣವೇ ಮೂಲವಸ್ತು. ಇಷ್ಡೆಲ್ಲಾ ಪ್ರಾಣ ಎಲ್ಲೆಡೆ ವ್ಯಾಪ್ತಗೊಂಡಿದೆ ಎಂದ ಮೇಲೆ ಪಂಚಭೂತಗಳಿಂದಲೇ ನಿರ್ಮಾಣಗೊಂಡ ಶರೀರ ಪ್ರಾಣಶಕ್ತಿಯಿಂದಲೇ ತುಂಬಿಹೋಗಿದೆಯೆಂಬುದಕ್ಕೆ ಅತಿಯಾದ ಚರ್ಚೆ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಪ್ರಾಣದ ಸ್ವಾಧೀನವೇ ರಾಜಯೋಗದ ಪ್ರಕಾರ ಕುಂಡಲಿನಿ ಶಕ್ತಿಯನ್ನು ವಶಪಡಿಸಿಕೊಳ್ಳುವುದರ ಸೂಕ್ತ ಅರ್ಥ.
ಪ್ರಾಣಾಯಾಮ ಈ ಕಾರಣಕ್ಕಾಗಿಯೇ ಯೋಗದ ಒಂದು ಬಹುಮುಖ್ಯ ಹೆಜ್ಜೆ. ಅನೇಕ ಬಾರಿ ನಾವು ಪ್ರಾಣಾಯಾಮವೆಂದರೆ ಲಯಬದ್ಧ ಉಸಿರಾಟವೆಂದಷ್ಟೇ ಭಾವಿಸುತ್ತೇವೆ. ಆದರೆ ವಾಸ್ತವವಾಗಿ ಯಾವುದರಿಂದ ಉಸಿರಾಟ ನಡೆಯುತ್ತಿದೆಯೋ ಅದು ಪ್ರಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ಪ್ರಯತ್ನ ಹಾಕದೆಯೇ ಮೂಗಿನ ಹೊಳ್ಳೆಗಳಿಂದ ಉಸಿರು ಒಳನುಗ್ಗೋದು, ಹೊರ ಧಾವಿಸೋದು ನಡೆಯುತ್ತಿದೆಯಲ್ಲ; ಅದಕ್ಕೆ ಕಾರಣ ಪ್ರಾಣ. ಈ ಪ್ರಾಣ ಶ್ವಾಸಕೋಶವನ್ನು ಹಿಗ್ಗಿಸುವುದರಿಂದ ಮೂಗು ವಾತಾವರಣದಿಂದ ಗಾಳಿಯನ್ನು ಒಳಗೆಳೆದುಕೊಳ್ಳುತ್ತದೆ. ಪ್ರಾಣ ಶ್ವಾಸಕೋಶವನ್ನು ಕುಗ್ಗಿಸಿದೊಡನೆ ಅಲ್ಲಿರುವ ಅಷ್ಟೂ ಗಾಳಿಯನ್ನು ಮೂಗು ಹೊರಹಾಕುತ್ತದೆ. ಹಾಗಂತ ಇಲ್ಲಿ ಮೂಗಿನ ಪಾತ್ರವೂ ಶೂನ್ಯ. ಎಲ್ಲರೂ ಪ್ರಾಣದ ಮಾತನ್ನು ಕೇಳುವ ಗುಲಾಮರು ಅಷ್ಟೇ!
ಉಸಿರು ಪ್ರಾಣವಲ್ಲದಿದ್ದರೂ ಪ್ರಾಣ ಶಕ್ತಿಯ ನೇರ ಅನುಭವ ಉಸಿರಿನ ಮೂಲಕವೇ ಆಗೋದು. ಅದಕ್ಕೇ ಈ ಉಸಿರನ್ನೇ ನಿಯಂತ್ರಿಸಿದರೆ ಪ್ರಾಣ ನಾವು ಹೇಳಿದಂತೆ ಕೇಳಬೇಕಲ್ಲ ಎಂಬ ರಿವರ್ಸ್ ಇಂಜಿನಿಯರಿಂಗ್ ನಮ್ಮ ಋಷಿಗಳ ತಲೆ ಹೊಕ್ಕಿತು. ವಾಸ್ತವವಾಗಿ ಇದು ಜಿರಳೆ ರಂಧ್ರದೊಳಕ್ಕೆ ತನ್ನ ಮೀಸೆಯನ್ನು ಮೊದಲು ಒಳಹಾಕಿ ಆಮೇಲೆ ಇಡಿಯ ದೇಹವನ್ನು ಒಳತೂರಿಸುವುದಲ್ಲಾ ಅಂತಹುದೇ ಪ್ರಕ್ರಿಯೆ. ಇದರ ಆಧಾರದ ಮೇಲೇಯೇ ಉಸಿರಾಟವನ್ನು ಲಯಬದ್ಧಗೊಳಿಸಿ ಪ್ರಾಣದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಶುರು ಮಾಡಿದರು.
ನೀವು ಯಾರದ್ದಾದರೂ ಮನೆಗೆ ಹೋದಾಗ ದೊಡ್ಡವರೊಡನೆ ಹೆಚ್ಚು ಮಾತನಾಡಬೇಡಿ; ಅಲ್ಲಿರುವ ಚಿಕ್ಕ ಮಕ್ಕಳೊಡನೆ ಆಟವಾಡಿ, ಅವರೊಡನೆ ನಲಿದಾಡಿ. ಸಹಜವಾಗಿಯೇ ದೊಡ್ಡವರಿಗೂ ನೀವು ಪ್ರೀತಿಪಾತ್ರರೇ ಆಗಿಬಿಡುತ್ತೀರಿ. ಇದು ಮನೆಯವರನ್ನು ಒಲಿಸಿಕೊಳ್ಳುವ ಅತ್ಯಂತ ಸೂಕ್ತ ಮಾರ್ಗ. ಹಾಗೆಯೇ ಉಸಿರಿನ ಮೇಲೆ ಹಿಡಿತ ಸಾಧೀಸುವ ಮೂಲಕ ಶ್ವಾಸಕೋಶದ ಸ್ನಾಯುಗಳನ್ನು ಗೆದ್ದಂತೆಯೇ. ಈಗ ಪ್ರಾಣ ಹೇಳಿದಂತೆ ನಿಮ್ಮ ಶ್ವಾಸಕೋಶಗಳು ಕೇಳುತ್ತಿಲ್ಲ; ನಿಮ್ಮ ಉಸಿರಿಗೆ ತಕ್ಕಂತೆ ಅದು ಮಾರ್ಪಟ್ಟಿದೆ. ನೀವು ಅದನ್ನು ಹೇಳಿದಂತೆ ಕೇಳುವ ಹಂತಕ್ಕೆ ತಂದಿದ್ದೀರಿ.
ಒಮ್ಮೆ ಈ ಪ್ರಾಣಶಕ್ತಿ ನಿಮ್ಮ ತೆಕ್ಕೆಗೆ ಬಂದೊಡನೆ ಪ್ರಯತ್ನಪೂರ್ವಕವಾಗಿ ಅದನ್ನು ನರನಾಡಿಗಳಲ್ಲಿ ಹರಿಸಿದರಾಯ್ತು. ಎಲ್ಲ ಮಾಂಸಖಂಡಗಳೂ, ಸ್ನಾಯುಗಳೂ ಉಜ್ಜೀವನಗೊಳ್ಳುತ್ತವೆ. ಕುಂಡಲಿನಿ ಸುಷುಮ್ನದ ಮೂಲಕ ಮೇಲೇರಲು ಆರಂಭಿಸುತ್ತದೆ.
ಈ ಪ್ರಯತ್ನದ ಮೂಲಕ ಕುಂಡಲಿನಿ ಜಾಗೃತಿಗೆ ಯತ್ನಿಸುವ ಯೋಗಿ ದಿನ ಕಳೆದಂತೆ ಶಾಂತನಾಗುತ್ತಾನೆ, ಮಂದಸ್ಮಿತನಾಗುತ್ತಾನೆ. ಕಾಲಕ್ರಮೇಣ ಕೋಪ- ತಾಪಗಳು, ದ್ವೇಷ- ಅಸೂಯೆಗಳು ಕಡಿಮೆಯಾಗುತ್ತದೆ. ಹೀಗಾಗಿ ಈಗ ಸಂಗ್ರಹವಾಗುತ್ತಿರುವ ಶಕ್ತಿ ಅನವಶ್ಯಕವಾಗಿ ಪೋಲಾಗದೇ ಕುಂಡಲಿನಿಯನ್ನು ಕೆಳಗಿಳಿಯದಂತೆ ತಡೆಯುತ್ತದೆ. ಆಗಲೇ ಯೋಗದ ಮುಂದಿನ ಹಂತ ಪ್ರತ್ಯಾಹಾರ. ಮನಸ್ಸನ್ನು ಬೇಕಾದಲ್ಲಿ ಕೇಂದ್ರೀಕರಿಸುವ ಪ್ರಯತ್ನ.
ಒಮ್ಮೆ ದೇಹದೊಳಗೆ ಉತ್ಪಾದನೆಯಾಗಿರುವ ಅಷ್ಟೂ ಶಕ್ತಿಯನ್ನು ಮನಸ್ಸಿನ ಏಕಾಗ್ರತೆಗೆ ಧಾರೆಯೆರೆಯುತ್ತಾ ಹೋದಂತೆ ಅದು ಧಾರಣೆಗೆ ಅಣಿಯಾಗುತ್ತದೆ. ಯೋಗದ ಮುಂದಿನ ಹಂತವಿದು. ಈ ವೇಳೆಗೆ ಕುಂಡಲಿನಿ ಸುಷುಮ್ನದ ಮೂಲಕ ಮೇಲು- ಮೇಲಕ್ಕೆ ನುಗ್ಗುತ್ತಿರುತ್ತದೆ. ಆಗಲೇ ಸಿದ್ಧಿಯಾಗೋದು ಧ್ಯಾನ! ಈ ವೇಳೆಗಾಗಲೇ ಆಜ್ಞಾ ಚಕ್ರದಲ್ಲಿ ಸ್ಥಿತಗೊಂಡಿರುವ ಕುಂಡಲಿನಿ ಮನಸ್ಸು ಧ್ಯಾನದ ಆಳಕ್ಕೆ ಮುಳುಗುತ್ತಿದ್ದಂತೆ ಮೇಲೇರುತ್ತಾ ಏರುತ್ತಾ ಸಹಸ್ರಾರವನ್ನು ಸೇರಿ ಬಿಡುತ್ತದೆ. ಅಲ್ಲಿಗೆ ಭಾವನೆಗಳೆಲ್ಲ ಶೂನ್ಯವಾಗಿ ಭಾವಸಮಾಧಿ ಸಿದ್ಧಸಿಬಿಡುತ್ತದೆ. ಇದುವೇ ನಿಜವಾದ ಶಿವ-ಶಿವೆಯರ ಮಿಲನ. ಮತ್ತು ಇದುವೇ ನಿಜವಾದ ಕುಂಡಲಿನಿ ಜಾಗೃತಿಯ ಮಾರ್ಗ.
ಕುಂಡಲಿನಿಯನ್ನು ಜಾಗೃತಗೊಳಿಸುವುದು ಕಷ್ಟದ ಕೆಲಸ ಅಲ್ಲವೇ ಅಲ್ಲ. ವಿದ್ಯುತ್ ಉತ್ಪಾದನೆಗಿಂತ ಅದನ್ನು ಸಂಗ್ರಹಿಸುವ ಕೆಲಸ ಹೇಗೆ ಕಠಿಣವೋ, ಹಾಗೇ ಉತ್ಪಾದಿತ ಶಕ್ತಿಯನ್ನು ಹಿಡಿದಿಡಲು ಸಾಧನೆ ಬೇಕು. ಅದಕ್ಕೇ ಯೋಗದಲ್ಲಿ ಮೊದಲು ಯಮ-ನಿಯಮಗಳಿಗೇ ಪ್ರಾಶಸ್ತ್ಯ. ಇದನ್ನು ಸಿದ್ಧಸಿಕೊಳ್ಳಲಾಗದವ, ಕುಂಡಲಿನಿಯನ್ನು ಜಾಗೃತಗೊಳಿಸಿಕೊಂಡರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.
ಹೀಗಾಗಿಯೇ ಸನಾತನ ಧರ್ಮದ ಸಾಹಿತ್ಯಗಳು ನೈತಿಕ ಚೌಕಟ್ಟಿನ ಆಗರ. ಅದಕ್ಕೇ ಇಲ್ಲಿ ಅಲ್ಕೈದಾ, ಐಸಿಸ್‍ಗಳು ಕಾಣಿಸಿಕೊಳ್ಳಲಾರವು, ಲಾಡೆನ್, ಮುಲ್ಲಾ ಒಮರ್‍ಗಳು ಹುಟ್ಟಲಾರರು!!

No comments:

Post a Comment