IMPORTANT NOTICE

New official website designed for Karada Community. Please visit www.karadavishwa.com for more details.

Saturday, 10 February 2018

ಮಹಾಮಹೋಪಾಧ್ಯಾಯ ಬ್ರಹ್ಮಶ್ರೀ ಬಳ್ಳಪದವು ಮಾಧವ ಉಪಾಧ್ಯಾಯರು.


ಭಾರತೀಯ ಪ್ರಾಚೀನ ಭವ್ಯಪರಂಪರೆಗೆ ಆಧಾರಭೂತವಾದ ಶಾಸ್ತ್ರಗಳನ್ನು ರಕ್ಷಿಸುವಲ್ಲಿ ಇಲ್ಲಿಯ ತನಕ ಬಂದ ವಿದ್ವಾಂಸರ ಪಾಲು ಅತ್ಯಧಿಕವಾಗಿದೆ. ಒಂದು ಜನ್ಮದಲ್ಲಿ ಒಂದೇ ಶಾಸ್ತ್ರ ಎಂಬತಿರುವ ಕಲಿಯುಗದಲ್ಲಿ ಕೇರಳ ಪ್ರಾಂತ್ಯದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದ ವಿದ್ವಾನ್ | ಬಳ್ಳಪದವು ಮಾಧವ ಉಪಾಧ್ಯಾಯರು ಹಲವಾರು ಶಾಸ್ತ್ರಗಳಲ್ಲಿ ಪ್ರೌಢಿಮೆಯನ್ನು ಹೊಂದಿದ್ದಾರೆ. ಶಾಸ್ತ್ರದಲ್ಲಿ ಇವರ ಗತಿಯನ್ನು ಗುರುತಿಸಿದ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು ಇಂದು “ಮಹಾಮಹೋಪಾಧ್ಯಾಯ” ಎಂಬ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಕರಾಡ ಸಮಾಜ ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಇವರು ಒರ್ವರಾಗಿದ್ದು ಜೀವನದಲ್ಲಿ ಬಹುಪಾಲು ಅಧ್ಯಯನಕ್ಕೆ ಮೀಸಲಿರಿಸಿ ಸಮಾಜದಲ್ಲಿ ಭೀಷ್ಮತುಲ್ಯರಾಗಿದ್ದಾರೆ.
ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ಉಪಾಧ್ಯಾಯ ಮತ್ತು ಶ್ರೀಮತೀ ದುರ್ಗಾಂಬಾ ಇವರಿಗೆ 14-01-1928 ರಲ್ಲಿ ಅಗಲ್ಪಾಡಿ ಸಮೀಪದ ಬಳ್ಳಪದವು(ಉಬ್ರಂಗಳ) ಕುಟುಂಬದಲ್ಲಿ ಜನಿಸಿದ ಇವರು ಅಗಲ್ಪಾಡಿಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ಅಧ್ಯಯನವನ್ನು ಮೆದ್ರಾಸ್ ಸಂಸ್ಕೃತ ವಿದ್ಯಾಲಯದಲ್ಲಿ ಮುಂದುವರೆಸಿದರು. ಅಲ್ಲಿ ಸಾಹಿತ್ಯಶಿರೋಮಣಿಯನ್ನು ಪಡೆದರು. ಋಗ್ವೇದ ಕ್ರಮಾಂತವನ್ನು ಧಾಳಿ ಶ್ರೀ ಭೀಮಭಟ್ಟ ಘನಪಾಠಿಗಳಲ್ಲಿ ಅಧ್ಯಯನ ಮಾಡಿ ತದನಂತರ ಬೆಂಗಳೂರಿನ ವಿದ್ಯಾಭಿವರ್ಧಿನೀ ಪಾಠಶಾಲೆಯಲ್ಲಿ ಪಂಡಿತಪ್ರಕಾಂಡ ಬ್ರಹ್ಮಶ್ರೀ ರಾಮಚಂದ್ರಶಾಸ್ತ್ರಿಗಳಲ್ಲಿ ಸಂಪೂರ್ಣ ವೇದಾಂತವನ್ನು ಅಧ್ಯಯನ ಮಾಡಿದರು. ಮೀಮಾಂಸಾ ಶಾಸ್ತ್ರವನ್ನು ಶ್ರೀ ಬೋಲೂರು ರಾಮಭಟ್ಟರಲ್ಲಿ ಕಲಿತು ತದನಂತರ ಕೇರಳದ ಪ್ರಸಿದ್ಧ ಆಗಮ ಶಾಸ್ತ್ರಜ್ಞರಾದ ದಿವಾಕರನ್ ನಂಬೂದಿರಿ ಇವರಲ್ಲಿ ಆಗಮಶಾಸ್ತ್ರವನ್ನು ಕಲಿತರು. ಎಂ.ವಿ ವೇಂಕಟೇಶಯ್ಯ ಮತ್ತು ಶೃಂಗೇರಿ ಲಕ್ಷ್ಮಣ ಶಾಸ್ತ್ರೀ ಇವರಲ್ಲಿ ಕರ್ನಾಟಕ ಸಂಗೀತ ಮತ್ತು ವೀಣಾವಾದನ್ನು ಅಭ್ಯಾಸ ಮಾಡಿ ಶ್ರೌತಭಾಸ್ಕರ, ಶ್ರೌತವಿಜ್ಞಾನಾಲಂಕಾರ, ವೇದರತ್ನ ಇತ್ಯಾದಿ ಬಿರುದು ಪಡೆದ ವೇದಬ್ರಹ್ಮ ಶ್ರೀ ಖರೆ ಗಣಪತಿ ಶಾಸ್ತ್ರಿಗಳಲ್ಲಿ ಶ್ರೌತ-ಸ್ಮಾರ್ತ ಅಧ್ಯಯನವನ್ನು ಮಾಡಿ ಡಾ.ಜಿ.ಎನ್ ಭಿಡೆ ಇವರಲ್ಲಿ ಆಯುರ್ವೇದಶಾಸ್ತ್ರವನ್ನು ಮಾಡಿದ್ದಾರೆ. ಹಲವಾರು ಶಾಸ್ತ್ರಗಳಲ್ಲಿ ಪ್ರವೃತ್ತಿಯನ್ನು ಹೊಂದಿರುವ ಇವರು ಅಧ್ಯಾಪನವೃತ್ತಿಯಲ್ಲಿ ತಮ್ಮ ಶಿಷ್ಯರುಗಳಿಗೆ ಅವುಗಳನ್ನು ಧಾರೆ ಎರೆದಿದ್ದಾರೆ. ವೇದ, ವೇದಾಂತ, ಮೀಮಾಂಸಾ, ಸಾಹಿತ್ಯ, ಆಗಮ, ಸಂಗೀತ ಹೀಗೆ ಎಲ್ಲಾ ವಿಭಾಗಗಳಲ್ಲೂ ಶಿಷ್ಯರನ್ನು ಹೊಂದಿದ್ದಾರೆ. ಮಹಾಗಣಪತಿ ಸ್ತುತಿ, ಗೋಪಾಲಕೃಷ್ಣ ಸ್ತುತಿ ಇತ್ಯಾದಿ 35ಕ್ಕೂ ಅಧಿಕ ಸ್ತುತಿಗಳನ್ನು ರಚಿಸಿದ್ದಾರೆ.
ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಅಭಿನವವಿದ್ಯಾತೀರ್ಥ ಮಹಾಸ್ವಾಮಿಗಳಿಂದ “ಪಂಡಿತಪ್ರವರ” ಎನ್ನುವ ಬಿರುದನ್ನು 1957ರಲ್ಲಿ ಪಡೆದಿರುತ್ತಾರೆ. ಹಲವಾರು ಯತಿಗಳಿಂದ ಅದೇ ರೀತಿ ನಾನಾ ಸಂಸ್ಥೆಗಳಿಂದ 30ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿದ್ದಾರೆ. ತಮ್ಮ ಇಳಿಯವಯಸ್ಸಿನಲ್ಲಿ ಅಧ್ಯಯನ-ಅಧ್ಯಾಪನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
“ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ” ಎಂಬುದು ಶಾಸ್ತ್ರವಚನ. ಇವರ ವಿದ್ವತ್ ಪಾಂಡಿತ್ಯವನ್ನು ಗಮನಿಸಿದ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠ, ತಿರುಪತಿಯ ಕುಲಪತಿಗಳು ಹಾಗು ವಿದ್ವಾಂಸರುಗಳು “ಮಹಾಮಹೋಪಾಧ್ಯಾಯ” ಎಂಬ ಗೌರವವನ್ನು ನೀಡುತ್ತಿರುವುದು ಸಂಸ್ಕೃತ ಕ್ಷೇತ್ರಕ್ಕೆ ಅದೇ ರೀತಿ ಕರಾಡ ಸಮಾಜಕ್ಕೆ ಹೆಮ್ಮೆಯ ವಿಚಾರ.
#ಆರ್.ಕೆ_ಭಟ್
#ವಿದ್ವಾನ್_ಸರ್ವತ್ರ_ಪೂಜ್ಯತೇ_||


No comments:

Post a Comment