Showing posts with label ರವಿ ಸಜಂಗದ್ದೆ. Show all posts
Showing posts with label ರವಿ ಸಜಂಗದ್ದೆ. Show all posts

Sunday, 21 July 2024

ಜಗನ್ನಾಥ ಟ್ರಂಪ್‌ಕಾರ್ಡ್‌ ಬಳಸಿ ಜೀವ ಉಳಿಸಿದ ಕತೆ!

1976 ಇಸವಿ. ಇಸ್ಕಾನ್ ಸಂಸ್ಥೆ ಸ್ಥಾಪನೆಯಾಗಿ ದಶಕದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಜಗನ್ನಾಥ ರಥಯಾತ್ರೆಯನ್ನು ನ್ಯೂಯಾರ್ಕ್ ಪ್ರದೇಶದ ಸುಪ್ರಸಿದ್ಧ ಫಿಫ್ ಅಮೆನ್ಯೂ ರಸ್ತೆಯಲ್ಲಿ ಮಾಡಿ ಸಂಭ್ರಮಿಸಲು ನಿರ್ಧರಿಸಿದರು. ಮೊದಲಿಗೆ ಸ್ಥಳೀಯಾಡಳಿತ ಮತ್ತು ಪೋಲೀಸ್ ಇಲಾಖೆಯಿಂದ ಅನುಮತಿ ಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಛೇರಿಗಳಿಗೆ ಅನುಮತಿ ಕೋರಿ ವಿನಂತಿ ಪತ್ರ ನಿಡುವ ಜವಾಬ್ದಾರಿ ಹರೇಕೃಷ್ಣ ಚಳವಳಿ ಸಮಿತಿಯು ತೋಷ ಕೃಷ್ಣ ದಾಸ್ ಅವರಿಗೆ ವಹಿಸಿತ್ತು. ಪೋಲಿಸ್ಇಲಾಖೆ ಅನುಮತಿ ನೀಡಿದರೂ ನ್ಯೂಯಾರ್ಕ್ ಮೇಯರ್ ಅಥವಾ ಮ್ಯಾನ್ಹಾಟನ್ ಜಿಲ್ಲಾಡಳಿತದ ಅನುಮತಿ ಇನ್ನೂ ಸಿಗದ ಕಾರಣ ಸ್ಥಳೀಯ ಪೋಲಿಸ್ ಅನುಮತಿಗೆ ಮಾನ್ಯತೆಯಿರಲಿಲ್ಲ. 1963ರಲ್ಲಿ ಇಂಥಾ ಯಾವುದೇ ಯಾತ್ರೆ, ಮೆರವಣಿಗೆಗಳಿಗೆ ಅನುಮತಿ ನಿಡಲು ಸ್ಪಷ್ಟ ಸಕಾರಣಗಳು ಬೇಕೆಂದು ಆದೇಶವಾಗಿತ್ತು. ಎಲ್ಲ ಅಡೆತಡೆಗಳನ್ನು ಮೀರಿ ಅನುಮತಿ ಸಿಗುವುದು ಅನುಮಾನವಾಗಿತ್ತು. ಕೊನೆಯ ಪ್ರಯತ್ನವಾಗಿ ಮ್ಯಾನ್ಹಾಟನ್ ಜಿಲ್ಲಾಡಳಿತದ ಮುಖ್ಯಸ್ಥರನ್ನು ಭೇಟಿಯಾಗಿ ವಿನಂತಿ ಪತ್ರ ನೀಡಿದೆವು. ಅದನ್ನು ಎರೆಡೆರಡು ಸಲ ಓದಿ, ರಥಯಾತ್ರೆ ನಡೆಸಲು ಪರತ್ತುಬದ್ಧ ಅನುಮತಿ ನೀಡಿದ್ದು ಅಚ್ಚರಿ ಮತ್ತು ಜಗನ್ನಾಥನ ಪ್ರಭಾವ ಎಂದಿದ್ದಾರೆ ತೋಜಿನ್ಕೃಷ್ಣ ದಾಸ್,

ರಥಯಾತ್ರೆಗೆ ಅನುಮತಿಯೇನೋ ಸಿಕ್ಕಿತು. ಈಗ ಅದಕ್ಕಿಂತ ದೊಡ್ಡ ಸವಾಲು ಎದುರಾಯಿತು! ಜನನಿಬಿಡ ನ್ಯೂಯಾರ್ಕ್ ಪ್ರದೇಶದಲ್ಲಿ ಎರಡು-ಮೂರು ದಿನಗಳ ಮಟ್ಟಿಗೆ ಮರದ ಕಟ್ಟಿಗೆ ಮತ್ತಿತರ ವಸ್ತುಗಳನ್ನು ಬಳಸಿ ದೊಡ್ಡ ರಥ ತಯಾರಿಸಲು ಸ್ಥಳಾವಕಾಶ ಬೇಕಿತ್ತು. ಜಾಗಕ್ಕಾಗಿ ಸ್ಥಳೀಯ ಉದ್ಯಮಿಗಳನ್ನು ಪ್ರಭಾವಿ ವ್ಯಕ್ತಿ-ಸಂಸ್ಥೆ ಗಳನ್ನು ಸಂಪರ್ಕಿಸಲಾಯಿತು. ಹೆಚ್ಚಿನವರು ವಿಷಯದ ಕುರಿತು ಅರಿವು, ಆಸಕ್ತಿ ಇಲ್ಲದಿದುದರಿಂದ ನಯವಾಗಿ ನುಣುಚಿಕೊಂಡರು. ಬೇರೆಡೆ ರಥ ತಯಾರಿಸಿ ಇಲ್ಲಿಗೆ ತರಲೂ ಅಸಾಧ್ಯವಾದ ಮತ್ತು ರಥ ತಯಾರಿಸಲು ಫಿಫ್ ಅವೆನ್ಯೂ ರಸ್ತೆಯಲ್ಲಿ ಜಾಗ ಸಿಗದ ವಿಷಣ್ಣ ಪರಿಸ್ಥಿತಿ.

ಹೀಗೆ ದಿಕ್ಕು ತೋಚದಿರುವಾಗ ಅದೇ ರಸ್ತೆಯಲ್ಲಿ ಇರುವ ಹಳೆಯ ರೈಲು ಪ್ರಾಂಗಣದ ಜಾಗವನ್ನು ಅಮೆರಿಕದ ರಿಯಲ್ ಎಸ್ಟೇಟ್ ಸಂಸ್ಥೆ "ದಿ ಟ್ರಂಪ್ಆರ್ಗನೈಸೇಷನ್' ಆಗಷ್ಟೇ ಖರೀದಿಸಿದ ಸುದ್ದಿ ತೋಷನ್ ಕೃಷ್ಣ ದಾಸ್ ಗಮನಕ್ಕೆ ಬಂತು. ಕೂಡಲೇ ವಿನಂತಿ ಪತ್ರ ಸಿದ್ಧಪಡಿಸಿ ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಡಬ್ಬದಲ್ಲಿ ಅಂದಿನ ಪ್ರಸಾದ ತುಂಬಿಕೊಂಡು ಇಸ್ಕಾನ್ ದೇವಾಲಯದಿಂದ ನಾಲ್ಕು ಮೈಲಿ ದೂರದಲ್ಲಿರುವ ಟ್ರಂಪ್ ಟವರ್ಗೆ ತಂಡದೊಂದಿಗೆ ತೆರಳಿದರು. 'ದಿ ಟ್ರಂಪ್ ಆರ್ಗನೈಸೇಷನ್' ಮುಖ್ಯಸ್ಥ, ಉದ್ಯಮಿ ಡೊನಲ್ ಟ್ರಂಪ್ ಅವರನ್ನು ಸಂಪರ್ಕಿಸಿ, ಜಗನ್ನಾಥ ರಥಯಾತ್ರೆಗೆ ರಥ ತಯಾರಿಸಲು ಅವರು ಇತ್ತೀಚೆಗೆ ಖರೀದಿಸಿದ ರೈಲು ಪ್ರಾಂಗಣವನ್ನು ಒಂದೆರಡು ದಿನಗಳಿಗೆ ನೀಡುವಂತೆ ಮನವಿ ಸಲ್ಲಿಸುವ ಇರಾದೆ ಅವರದಾಗಿತ್ತು.

ಬಂದಿರುವ ಕಾರಣವನ್ನು ಟ್ರಂಪ್ ಕ್ಯಾಬಿನ್ ಹೊರಗಿರುವ ಆಪ್ತ ಸಹಾಯಕಿಗೆ ವಿವರಿಸಿ, ವಿನಂತಿ ಪತ್ರದ ಜೊತೆಗೆ ಇಸ್ಕಾನ್ಪ್ರಸಾದದ ಡಬ್ಬಿ ಕೊಟ್ಟರು. ಆಕೆ ವಿವರ ತಿಳಿದು, ಮುಗುಲ್ನಕ್ಕು, 'ವಿವರ ಅವರ ಮುಂದಿಡುವೆ. ಇಂಥಾ ವಿಷಯಗಳಿಗೆಲ್ಲ ಟ್ರಂಪ್ ಅನುಮತಿ ಕೊಡುವುದಿಲ್ಲ, ಹೆಚ್ಚಿನ ಆಸೆ ಬೇಡ' ಎಂದರು. ಇದನ್ನು ಕೇಳಿಸಿಕೊಂಡ ದಾಸ್ ಮತ್ತು ತಂಡಕ್ಕೆ ಭರವಸೆ ಉಳಿದದ್ದು ಜಗನ್ನಾಥನ ಮಹಿಮೆಯ ಮೇಲೆ ಮಾತ್ರ.

ಇದಾದ ಮೂರನೇ ದಿನಕ್ಕೆ, ಇಸ್ಕಾನ್ ಕಚೇರಿಯಲ್ಲಿ ರಿಂಗಣಿಸಿದ ಫೋನ್ ಎತ್ತಿಕೊಂಡು ದಾಸ್ ಅವರು ಇತ್ತ ಕಡೆಯಿಂದ 'ಹರೇಕೃಷ್ಣ' ಎಂದಾಗ ಆಕಡೆಯ ಹೆಣ್ಣು ಧ್ವನಿ 'ಜಂಟಲ್ ಮ್ಯಾನ್, ಏನಾಯಿತು, ಹೇಗಾಯಿತು ಗೊತ್ತಿಲ್ಲ! ಟ್ರಂಪ್ ನಿಮ್ಮ ಪತ್ರ ಓದಿ, ನೀವು ಕೊಟ್ಟ ಆಹಾರ (ಪ್ರಸಾದ) ರುಚಿ ನೋಡಿದರು. ಕೂಡಲೇ ಯಾಕಾಗಬಾರದು? ಅವರಿಗೆ ರಥ ತಯಾರಿಸಲು ಜಾಗ ನೀಡಿ ಎಂದಿದ್ದಾರೆ. ಅವರ ಸಹಿಯಿರುವ ಅನುಮತಿ ಪತ್ರ ತಯಾರಿದೆ, ಬಂದು ಸ್ವೀಕರಿಸಿ. ಎಟಟಛ ಛಂಢ!' ಎಂದು ಹೇಳಿ ಫೋನಿಟ್ಟಳು.

48 ವರ್ಷಗಳ ಹಿಂದೆ, ಅಂದರೆ 1976ರಲ್ಲಿ ನ್ಯೂಯಾರ್ಕ್ ಫಿಫ್ ಅವೆನ್ಯೂ ರಸ್ತೆಯಲ್ಲಿ ಜಗನ್ನಾಥನ ಪ್ರಥಮ ರಥಯಾತ್ರೆಯ ಹಾದಿ ಎಲ್ಲ ಅಡೆತಡೆಗಳನ್ನು ಮೀರಿ, ಟ್ರಂಪ್ ಸಹಕಾರದೊಂದಿಗೆ ಸುಗಮವಾಯಿತು, ಸಂಪನ್ನವಾಯಿತು!

ಅಂದು ತನ್ನ ಭವ್ಯ ರಥ ತಯಾರಿಸಲು ಜಾಗ ನೀಡಿದ್ದ ಡೊನಲ್ ಟ್ರಂಪ್ನನ್ನು ಇಂದು ಹತ್ಯಾ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಅದೇ ಸರ್ವೋತ್ತಮ ಜಗನ್ನಾಥ ಭಿಕ್ಷೆ ಮತ್ತು ಅನುಗ್ರಹದ ರೂಪದಲ್ಲಿ ಪಾರು ಮಾಡಿದ್ದಾನೆ ಎಂದೆನಿಸುತ್ತಿದೆ.

ಟ್ರಂಪ್ ಬಗೆಗಿನ ಇತರ ಹಲವು ವಿಚಾರಗಳಲ್ಲಿ ಅನೇಕರಿಗೆ ಸಹಮತ ಇಲ್ಲದಿರಬಹುದು. ಆತನ ನಿರ್ಧಾರ, ಹೇಳಿಕೆ, ನಡವಳಿಕೆಗಳ ಬಗ್ಗೆ ಶಕರಾರು ಎಲ್ಲೆಡೆ ಇದೆ. ಹಾಗಿದ್ದೂ ಅಂದು ರಥಯಾತ್ರೆಗೆ ಅನುಕೂಲ ಮಾಡಿಕೊಟ್ಟ ಪ್ರತಿಫಲವಾಗಿ ಇಂದು ವಯ್ಯನ ಪ್ರಾಣ ಉಳಿದಿರುವುದು ಅಲ್ಲಗಳೆಯಲಾಗದು. 'ನಂಬಿದವರನ್ನು, ಸಲಹುವವರನ್ನು ಇಂಬುಗೊಟ್ಟು ಕಾಪಾಡುವ ಶಕ್ತಿ'ಯನ್ನು ಅನೇಕ ರೂಪಗಳಲ್ಲಿ ಪೂಜಿಸಿ ಆರಾಧಿಸುವ ನಂಬಿಕೆ ಮತ್ತು ಜನರಿರುವ ದೇಶ ನಮ್ಮದು. ಪ್ರತಿ ಬಾರಿ ಇಂಥಾ ಅಪಘಾತಗಳಿಂದ ಪಾರಾದಾಗ ದೇವರಿಗೆ ಧನ್ಯವಾದ ಹೇಳಿ ಕಾಲಿಗೆರಗುವುದು ನಮ್ಮ ಸನಾತನ ಸಂಸ್ಕೃತಿಯ ಶ್ರೇಷ್ಠತೆ, ಟ್ರಂಪ್ಗೂ ಇದೇ ಅನುಭವ ಆಗಿರಬಹುದು. ಹತ್ಯಾ ಪ್ರಯತ್ನದಿಂದ ಪಾರಾದ ಕ್ಷಣದಲ್ಲಿ ತಾನು ನಂಬಿದ ಶಕ್ತಿಯ ನೆನಪನ್ನು ಅವರು ಖಂಡಿತಾ ಮಾಡಿರುತ್ತಾರೆ. ಶಕ್ತಿಯ ರೂಪ ಜಗದೊಡೆಯ ಜಗನ್ನಾಥನದ್ದೇ ಯಾಕಾಗಿರಬಾರದು?! ಜಗನ್ನಾಥ್ ಕೀ ಜೈ.

ರವಿ ಸಜಂಗದ್ದೆ

(ಲೇಖಕರು ಸಾಫ್ಟ್ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರರು)

Saturday, 13 July 2024

QR Code!: ಬಿಟ್ಟೇನೆಂದರೆ ಬಿಡದು, ಈ ಕ್ಯುಆರ್‌ ಕೋಡ್‌!

ಐದಾರು ವರ್ಷಗಳಿಂದ ನಮ್ಮ ದೈನಂದಿನ ಜೀವನದ ಪ್ರಯಾಣ ಮತ್ತು ವ್ಯವಹಾರಗಳಲ್ಲಿ ನುಸುಳಿಕೊಂಡ ಕ್ಯುಆರ್‌ ಕೋಡ್‌ ಗೊತ್ತಿ¨ªೋ, ಗೊತ್ತಿಲ್ಲದೆಯೋ ಎಲ್ಲ ಸ್ತರಗಳಲ್ಲೂ ಅವಿಭಾಜ್ಯ ಅಂಗವಾಗಿ ಸ್ಥಾಪಿತ ಗೊಂಡಿದೆ. ಕ್ಯುಆರ್‌ ಕೋಡ್‌ ಆಧಾರಿತ ವ್ಯವಸ್ಥೆ, ವ್ಯಾಪಾರ, ವ್ಯವಹಾರ ನಮ್ಮೆಲ್ಲರ ಬಾಳಿನಲ್ಲಿ ಅನೇಕ ಬಾರಿ ಉಪಯೋಗಕ್ಕೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಸಾಧನ-ಸಾಧನೆ ಎನ್ನಲಡ್ಡಿಯಿಲ್ಲ. ಬ್ಯಾಂಕ್‌ ಖಾತೆಯಲ್ಲಿ ಹಣ ಮತ್ತು ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇದ್ದರೆ ದೈನಂದಿನ ವ್ಯವಹಾರ, ಪ್ರಯಾಣ, ಪ್ರವಾಸ, ಖರ್ಚು-ವೆಚ್ಚ ಎಲ್ಲವೂ ಚಿಟಿಕೆ ಹೊಡೆದಷ್ಟು ಸಲೀಸು. ವ್ಯವಹಾರಕ್ಕೆ ಚಿಲ್ಲರೆ ಹುಡುಕುವ ಪ್ರಮೇಯವಿಲ್ಲ. ಜನನಿಬಿಡ ಪ್ರದೇಶದಲ್ಲಿ ಪರ್ಸ್‌, ದುಡ್ಡು ಕಳೆದುಕೊಳ್ಳುವ ಆತಂಕವೂ ಇಲ್ಲ.

ಕ್ಯುಆರ್‌ ಕೋಡ್‌ ಬಗೆಗಿನ ಒಂದಷ್ಟು ವಿವರಗಳನ್ನು ನೋಡೋಣ. ಇದು ಕ್ವಿಕ್‌ ರೆಸ್ಪಾನ್ಸ್‌ ಕೋಡ್‌ ಪದದ ಸಂಕ್ಷಿಪ್ತ ರೂಪ. ಆಟೊಮೋಟಿವ್‌ ಕೈಗಾರಿಕ ವಿಭಾಗದ ಅಗತ್ಯತೆ ಪೂರೈಸುವ ಉದ್ದೇಶದಿಂದ ಜಪಾನಿನ ಡೆನ್ಸೊ ವೇವ್‌ ಹೆಸರಿನ ಸಂಸ್ಥೆ 1994ರಲ್ಲಿ ಈ ತಂತ್ರಜ್ಞಾನ ಸಂಶೋಧಿಸಿ ಬಳಸಲು ಆರಂಭ ಮಾಡಿತು.

2015ರ ಅನಂತರ ಎಲ್ಲೆಡೆ ಮೊಬೈಲ್‌ ನೆಟ್‌ವರ್ಕ್‌ ವೃದ್ಧಿಸಿ, ಸ್ಮಾರ್ಟ್‌ ಫೋನ್‌ ಮತ್ತು ಆನ್‌ಲೈನ್‌ ವ್ಯವಹಾರಕ್ಕೆ ಇಡೀ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಈ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಬಹಳ ವೇಗವಾಗಿ ಪಸರಿಸಿತು. ಹಲವಾರು ವ್ಯವಹಾರಗಳು, ವಿವಿಧ ಕ್ಷೇತ್ರಗಳ ಅಗತ್ಯತೆ ಮತ್ತು ಜೀವನವನ್ನು ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಉಪಯುಕ್ತವಾದ ಭಾರೀ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಕೇಂದ್ರ ಸರಕಾರದ ನೀತಿಗಳು ಮತ್ತು ದೇಶದೆಲ್ಲೆಡೆ ಆನ್‌ಲೈನ್‌ ವ್ಯವಹಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ, ಉತ್ತೇಜನದ ಮೂಲಕ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಕ್ಯುಆರ್‌ ಕೋಡ್‌ ಕೇಂದ್ರಿತ ವ್ಯವಹಾರ ಹೆಚ್ಚು ಚಾಲ್ತಿಯಲ್ಲಿದೆ. ಮತ್ತದು ಬದುಕಿನ ದಿನಚರಿಯ ಅವಿಚ್ಛಿನ್ನ ಅಂಗವಾಗಿದೆ.

ಈ ಕ್ಯುಆರ್‌ ಕೋಡ್‌ಗಳನ್ನು ನಮಗರಿವಿರದ ಹಲವು ರೀತಿಗಳಲ್ಲಿ ಬಳಸಲಾಗುತ್ತದೆ. ಕೋರ್ಟ್‌ಗ ಳಲ್ಲಿ ನಡೆಯುವ ಪ್ರಕರಣಗಳಲ್ಲಿ, ವಿವಿಧ ಕೋರ್ಟ್‌ ಗಳ ಇ-ಕೋರ್ಟ್‌ ಜಾಲತಾಣಗಳಲ್ಲಿ ಕ್ಯುಆರ್‌ ಕೋಡ್‌ ಬಳಸಿ ಪ್ರಕರಣದ ಎಲ್ಲ ವಿವರಗಳನ್ನು ಪಡೆಯಬಹುದು. ಅಲ್ಲಿ ಪ್ರತಿಯೊಂದು ಪ್ರಕರಣಕ್ಕೂ ವಿಶಿಷ್ಟ ಕ್ಯುಆರ್‌ ಕೋಡ್‌ ಲಭ್ಯವಿದೆ. “ಎಲ್ ಪಿಜಿ ಸಿಲಿಂಡರ್‌ ನಿರ್ವಹಣೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮತ್ತೂ ಜನಸ್ನೇಹಿಯಾಗಿ ಸಲು ಇದೇ ಕ್ಯುಆರ್‌ ಕೋಡ್‌ ತಂತ್ರಜ್ಞಾನವನ್ನು ದೇಶದಾದ್ಯಂತ ಹಂತ ಹಂತವಾಗಿ ಬಳಸುವ ಮಾತುಕತೆಗಳು ಅಂತಿಮ ಹಂತದಲ್ಲಿವೆ.

ತಿಂಗಳ ಹಿಂದೆ ಸಂಪನ್ನಗೊಂಡ ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆ ಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 99 ಕೋಟಿ ಮತದಾರರಿಗೆ ಕ್ಯುಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ಗ್ಳನ್ನು ವಿತರಿಸಲಾಯಿತು. ಇದರ ಮುಖಾಂತರ ಮತದಾರರು ತಮ್ಮ ಮತಗಟ್ಟೆಯ ವಿಳಾಸ ಮತ್ತಿತರ ಎಲ್ಲ ವಿವರಗಳನ್ನು ಒಂದು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಲು ಮಾಡಿದ ಚೆಂದದ ವ್ಯವಸ್ಥೆ ಇದು. ಸಾರ್ವಜನಿಕ ಮತ್ತು ಸರಕಾರಿ ವಲಯದಲ್ಲಿ ಇಷ್ಟು ದೊಡ್ಡ ಯೋಜನೆ ಸಾಧ್ಯವಾಗಿಸಿ ಯಶಸ್ವಿಯಾದದ್ದು ದೊಡ್ಡ ಗರಿಮೆಯೇ ಸರಿ.

ಕಳೆದ ದೀಪಾವಳಿ ಸಮಯದಿಂದ ದೇಶದ ಹಲವಾರು ರಾಜ್ಯಗಳು ಕೇವಲ ಹಸುರು ಪಟಾಕಿ ಉತ್ಪಾದಿಸಿ ಮಾರಾಟ ಮತ್ತು ಸಿಡಿಸಲು ಅನುಮತಿ ನೀಡಿದ್ದು ಬಹಳ ದೊಡ್ಡ ವಿವಾದ ಮತ್ತು ಸುದ್ದಿಯಾಗಿತ್ತು. “ಯಾವ್ಯಾವ ಪಟಾಕಿ ಪೆಟ್ಟಿಗೆಗಳು ಹಸುರು ಪಟಾಕಿ ಪ್ರಭೇದಗಳು ಎಂದು ಹೇಗೆ ದೃಢೀಕರಿಸುವುದು?’ ಎಂದು ಚಿಂತೆಯಲ್ಲಿ ಇದ್ದ ಅಧಿಕಾರಿಗಳಿಗೆ ಹೊಳೆದದ್ದು ಮತ್ತು ನೆರವಾದದ್ದು ಇದೇ ಕ್ಯುಆರ್‌ ಕೋಡ್‌! ಸರಕಾರ ಹಸುರು ಪಟಾಕಿ ಎಂದು ತಿಳಿಯಲು ಮತ್ತು ಪತ್ತೆ ಹಚ್ಚಲು ಪಟಾಕಿ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ತನ್ನ ಪೋರ್ಟಲ್‌ನಲ್ಲಿ ಕಡ್ಡಾಯ ನೋಂದಣಿ ಮಾಡುವಂತೆ ಆದೇಶ ಹೊರಡಿಸಿತು. ಎಲ್ಲ ಅಧಿಕೃತ ನೋಂದಣಿದಾರರಿಗೆ ವಿಶಿಷ್ಟ ಕ್ಯುಆರ್‌ ಕೋಡ್‌ಗಳನ್ನು ನೀಡಿ ಪಟಾಕಿ ಪೆಟ್ಟಿಗೆಗಳ ಮೇಲೆ ಕಡ್ಡಾಯವಾಗಿ ಮುದ್ರಿಸುವಂತೆ ಫ‌ರ್ಮಾನು ಹೊರಡಿಸಿತು. ನಕಲಿ, ಅನಧಿಕೃತ ಮತ್ತು ಪರಿಸರಕ್ಕೆ ಹೆಚ್ಚು ಮಾರಕ ಪಟಾಕಿಗಳನ್ನು ಸುಲಭದಲ್ಲಿ ಪತ್ತೆಹಚ್ಚಲು ಇದು ಸಹಕಾರಿಯಾಯಿತು. ಖರೀದಿಸಲು ಬಯಸಿದ ಪಟಾಕಿ ಪೆಟ್ಟಿಗೆಯ ಮೇಲಿನ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಜನಸಾಮಾನ್ಯರಿಗೆ ನಕಲಿ-ಅಸಲಿ ಪಟಾಕಿಯ ಮಾಹಿತಿ ದೃಢೀಕರಿಸುವಲ್ಲಿ ಈ ತಂತ್ರಜ್ಞಾನ ನೆರವಾಯಿತು.

ಪ್ರಕಟಿತ ಮಾಹಿತಿಗಳ ಪ್ರಕಾರ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆ ಮತ್ತು ಪೇಮೆಂಟ್‌ ಬ್ಯಾಂಕ್‌ ಖಾತೆಗಳ ಮತ್ತು ಇತರ ಎಲ್ಲ ವ್ಯವಹಾರಗಳ ಕ್ಯುಆರ್‌ ಕೋಡ್‌ ಸೇರಿದಂತೆ ದೇಶದಲ್ಲಿ ಉಪಯೋಗದಲ್ಲಿ (ಚಲಾವಣೆಯಲ್ಲಿ!) ಇರುವ ಒಟ್ಟು ಕ್ಯುಆರ್‌ ಕೋಡ್‌ಗಳ ಸಂಖ್ಯೆ ಅಂದಾಜು 400 ಕೋಟಿಗಳಿಗೂ ಹೆಚ್ಚು! ಇವೆಲ್ಲವೂ ನೋಡಲು ಒಂದೇ ರೀತಿ ಕಂಡರೂ ಇದರಲ್ಲಿ ಪ್ರತಿಯೊಂದು ಕ್ಯುಆರ್‌ ಕೋಡ್‌ ಕೂಡ ಅನನ್ಯ-ವಿಶಿಷ್ಟ (ಯುನಿಕ್‌)! ಅಬ್ಟಾ ಈ ತಂತ್ರಜ್ಞಾನ ಸಂಶೋಧಿಸಿ, ಈ ಮಟ್ಟಕ್ಕೆ ಬೆಳೆದು ನಿಂತು, ಜನರಿಗೆ ಈ ವ್ಯಾಪ್ತಿಯಲ್ಲಿ ಉಚಿತ ಸೇವೆ ಒದಗಿಸುವ ಪರಿ ನಿಜಕ್ಕೂ ಅಚ್ಚರಿ.

ಬ್ಯಾಂಕ್‌ಗಳ ಒಕ್ಕೂಟದ ಮಾಹಿತಿಯ ಪ್ರಕಾರ ದೇಶದಾದ್ಯಂತ ಇರುವ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂಗಳಿಗೆ ಹೋಲಿಸಿದರೆ ಕೊರೊನಾ ಕಾಲಘಟ್ಟದ ಅನಂತರದ ಕಾಲದಲ್ಲಿ ಜನರು ವರ್ಷದಿಂದ ವರ್ಷಕ್ಕೆ (Year on Year) ವ್ಯವಹಾರಕ್ಕೆ ನಗದು ಬಳಸುವ ಪ್ರಮಾಣ ಅಂದಾಜು ಶೇ.4-ಶೇ.5 ಕಡಿಮೆಯಾಗುತ್ತಿದೆ. ಜನರ ಖರ್ಚಿನ ಅಭ್ಯಾಸ (spending habit) ದಿನೇದಿನೆ ಜಾಸ್ತಿಯಾಗುತ್ತಿರುವ ಪರಿಣಾಮ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಸೇರಿದಂತೆ ಆನ್‌ಲೈನ್‌ ವಹಿವಾಟಿನ ಸಂಖ್ಯೆ (ಮೊತ್ತ ಅಲ್ಲ) ವರ್ಷದಿಂದ ವರ್ಷಕ್ಕೆ ಸುಮಾರು ಶೇ. 5.5- ಶೇ.6 ವೃದ್ಧಿಸುತ್ತಿದೆ. ದೇಶದಾದ್ಯಂತ ನಡೆಯುವ ಐದು ವಹಿವಾಟುಗಳಲ್ಲಿ ಮೂರು ವಹಿವಾಟು ಆನ್‌ಲೈನ್‌ ಮೂಲಕ ಮತ್ತು ಆ ಮೂರರಲ್ಲಿ ಎರಡು ಕ್ಯುಆರ್‌ ಕೋಡ್‌ ಆಧಾರಿತ! ಅಂದರೆ ದೇಶದ ಒಟ್ಟು ವ್ಯವಹಾರಗಳ ಸಂಖ್ಯೆಯ (ಮೊತ್ತ ಅಲ್ಲ) ಅಂದಾಜು ಶೇ.40 ವ್ಯವಹಾರಗಳು ಕ್ಯುಆರ್‌ ಕೋಡ್‌ ಬಳಸಿ ಆಗುತ್ತಿವೆ. ಇದಕ್ಕೆ ಬಳಸಲ್ಪಡುವ ತಂತ್ರಜ್ಞಾನ, ಸರ್ವರ್‌, ಅಂತರ್ಜಾಲ, 24/7 ಆವರ್ತನದಲ್ಲಿ ಬೆಂಬಲಿಸುವ ತಂಡ… ಹೀಗೆ ಅಬ್ಟಾ ಇದೊಂದು ಯಾರೂ ಇನ್ನೂ ಸರಿಯಾಗಿ ಊಹಿಸದ, ಶೋಧಿಸದ, ಖನನ ಮಾಡಿರದ ದೊಡ್ಡ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಕಲಿಯುತ್ತಿರುವವರಿಗೆ ಈ ಕ್ಷೇತ್ರ ಸಂಶೋಧನೆಗೆ ತೆರೆದಿಟ್ಟ ಅವಕಾಶಗಳು ಆಗಸದಷ್ಟು. ಪೇಮೆಂಟ್‌ ಬ್ಯಾಂಕ್‌ಗಳು ಪ್ರವರ್ಧಮಾನಕ್ಕೆ ಬಂದುದರ ನೇರ, ಗುರುತರ ಮತ್ತು ಧನಾತ್ಮಕ ಪರಿಣಾಮವಿದು.

 ಕಲಿಯುಗದ ತಂತ್ರಜ್ಞಾನ, ಇಂಟರ್‌ನೆಟ್‌ ಆಧಾರಿತ ಬದುಕಿನ “ಜಾಲತಾಣ ಪಯಣ’ದಲ್ಲಿ “ಬಿಟ್ಟೇನೆಂದರೂ ನಮ್ಮನ್ನು ಬಿಡದು ನೋಡು ಈ ಮಾಯೆ; ಕ್ಯುಆರ್‌ ಕೋಡ್‌ ಎಂಬ ತಂತ್ರಾಂಶ-ತಂತ್ರಜ್ಞಾನದ ಛಾಯೆ’. ಜಗದ ನಾಳೆಗಳ ವಿದ್ಯಮಾನಗಳ ಕುರಿತ ಭವಿಷ್ಯದ ಊಹನೆ ಕಷ್ಟಸಾಧ್ಯ; ಆದರೆ ಕ್ಯುಆರ್‌ ಕೋಡ್‌ ತಂತ್ರಜ್ಞಾನದ ನಾಳೆಗಳ ಭವಿಷ್ಯ ಮತ್ತಷ್ಟು ವಿಸ್ತರಿಸಲಿದೆ ಮತ್ತು ಉಜ್ವಲವಾಗಿರಲಿದೆ!

- ರವಿ ಸಜಂಗದ್ದೆ 

From: UDAYAVAANI News Paper