Saturday, 18 April 2015

ಓ ನನ್ನ ಚೇತನ / O nanna Chetana

ಓ ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ ||

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು ||

                                           - ಕುವೆಂಪು

Friday, 17 April 2015

ತೆರೆದಿದೆ ಮನ ಓ/ Teredide mana oo...

ತೆರೆದಿದೆ ಮನ ಓ ಬಾ ಅತಿಥಿ
ಹೊಸಬೆಳಕಿನ ಹೊಸ ಗಾಳಿಯಾ
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ

ಆವ ವೇಷದೊಳು ನಿಂದರು ಸರಿಯೇ
ನೀಸೆರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ ||

ಇಂತಾದರು ಬಾ ಅಂತಾದರೂ ಬಾ

ಎಂತಾದರು ಬಾ ಬಾ ಬಾ
ಬೇಸರ ವಿದನು ರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ||

ಕಡಲಾಗಿ ಬಾ ಬಾನಾಗಿ ಬಾ

ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ ||

ಮೂಡಲ ಮನೆಯಾ ಮುತ್ತಿನ ನೀರಿನ/ Moodala maneya muttina neerina


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         
                                                      - ಅಂಬಿಕಾತನಯದತ್ತ (ದ. ರಾ. ಬೇಂದ್ರೆ)