IMPORTANT NOTICE

New official website is launched for Karada Community. Please visit www.karadavishwa.com for more details.

Tuesday, 5 May 2015

ದೀಪವು ನಿನ್ನದೇ, ಗಾಳಿಯು ನಿನ್ನದೇ / Deepavu ninnade Galiyu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.
ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
                                              - ಕೆ. ಎಸ್. ನರಸಿಂಹ ಸ್ವಾಮಿ

Friday, 1 May 2015

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.../ Hendathiyobbalu maneyolagiddare...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನದದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ ||

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿಲ್ಲದ ಕೋಪ
ಕೈ ಹಿಡಿದವಳು ಕೈ ಬಿಡದವಳು ಮಾಡಿದ ಅಡಿಗೆಯೇ ಚಂದ
ನಾಗರ ಕುಚ್ಚಿನ ನಿಲು ಜಡೆಯವಳು ಈಕೆ ಬಂದುದೆಲ್ಲಿಂದ ?

ಕಬ್ಬಿಗನೂರಿನ ಅರಮನೆಯಿಂದ ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೇ ಸಿಗಬೇಕು
ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೋಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ ?
ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

- ಕೆ.ಎಸ್. ನರಸಿಂಹಸ್ವಾಮಿ

Video link:
http://www.youtube.com/watch?v=nJPQ86Xnaow 

Thursday, 30 April 2015

ರೆಕ್ಕೆ ಇದ್ದರೆ ಸಾಕೆ... / Rekke iddare sake..

ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು 
ಬಯಲಲಿ ತೇಲುತ ತಾನು  ಮ್ಯಾಲೆ ಹಾರೋಕೆ।।
ಕಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು 
ಗಾಳಿಯ ಮೇಲೆ ತಾನು  ಜಿಗಿದು ಓಡೋಕೆ 

ಹೂ ಒಂದಿದ್ದರೆ ಸಾಕೆ, ಬ್ಯಾಡವೆ ಗಾಳಿ?
ನೀವೆ ಹೇಳಿ ಕಂಪ ಬೀರೋಕೆ 
ಮುಖ ಒಂದಿದ್ದರೆ ಸಾಕೆ, ದುಂಬಿಯ ತಾವ 
ಬ್ಯಾಡವೆ ಹೂವ? ಜೇನ ಹೀರೋಕೆ 

ನೀರೊಂದಿದ್ದರೆ ಸಾಕೆ, ಬ್ಯಾಡವೆ ಹಳ್ಳ 
ಬಲ್ಲವ ಬಲ್ಲ ತೊರೆಯು ಹರಿಯೋಕೆ 
ಮೋಡ ಇದ್ದರೆ  ಸಾಕೆ, ಬ್ಯಾಡವೆ ಭೂಮಿ?
ಹೇಳಿ ಸ್ವಾಮಿ ಮಳೆಯು ಸುರಿಯೋಕೆ 

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ?
ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು?
ಎಲ್ಲರ ಜೋಡಿ ಕೂಡಿ ಹಾಡೋಕೆ 


- ಎಚ್. ಎಸ್. ವೆಂಕಟೇಶಮೂರ್ತಿ