ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ.ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ.ಭಾರತೀಯರು ಅನಾಗರಿಕರು,ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.’ಇಲ್ಲಿ ಕೆಲಸ ಮಾಡುವುದರ ಲಾಭ ಸಾಕಷ್ಟಿದೆ. ಗೌರವವೂ ಹೆಚ್ಚಿದೆ. ಸಂಬಳವೂ ವಾರ್ಷಿಕ ಹತ್ತು ಸಾವಿರ ಪೌಂಡುಗಳಷ್ಟು. ವರ್ಷಕ್ಕೆ ೫ ಸಾವಿರ ಪೌಂಡುಗಳಷ್ಟು ಖರ್ಚು ಮಾಡಿದರೆ ಇಲ್ಲಿ ರಾಜನಂತೆ ಬದುಕಬಹುದು. ಉಳಿದಷ್ಟನ್ನೂ ಉಳಿಸಿ ಬಡ್ಡಿಯನ್ನೂ ಗಳಿಸಬಹುದು. ನನಗೆ 39 ವರ್ಷಗಳಾಗುವಾಗ ನಾನು ೩೦ ಸಾವಿರ ಪೌಂಡುಗಳೊಂದಿಗೆ ಉತ್ಸಾಹಿತನಾಗಿ ಮರಳುತ್ತೇನೆ’.
ಹೀಗೊಂದು ಪತ್ರವನ್ನು ಯಾರು ಬರೆದಿರಬಹುದೆಂಬ ಪ್ರಶ್ನೆ ನಿಮ್ಮನ್ನು ಕೇಳಿದರೆ ಉತ್ತರ ಅದೇನು ಬರಬಹುದು ಹೇಳಿ ! ಹಳ್ಳಿಯಿಂದ ಹೊರಟ ಬಡ ಭಾರತದ ಉದ್ಯೋಗಿ ಶ್ರೀಮಂತ ಅಮೇರಿಕದಿಂದಲೋ -ಯೂರೋಪಿನಿಂದಲೋ ಬರೆದಿರಬೇಕೆಂದು ಊಹಿಸುತ್ತೀರಿ ತಾನೇ ? ನಿಮ್ಮ ಊಹೆ ಅಕ್ಷರಶಃ ಸುಳ್ಳು.
ಇದು ಮೆಕಾಲೆ 1833 ರಲ್ಲಿ ತನ್ನ ಸೋದರಿ ಹನ್ನಾಹ್ ಳಿಗೆ ಬರೆದ ಪತ್ರ.ತಾನು ಭಾರತಕ್ಕೆ ಹೊರಟು ನಿಂತಾಗ! ಬಡ ಇಂಗ್ಲೇಂಡಿನಿಂದ ಶ್ರೀಮಂತ ಭಾರತಕ್ಕೆ ಹೊರಟಾಗ!!.
ಮೆಕಾಲೆ. ಹೌದು ಅಕ್ಷರಶಃ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆಯೇ. ಜಾಕರಿ ಮೆಕಾಲೆ ಮತ್ತು ಸೆಲಿನಾ ಮಿಲ್ಟ್ ರ ಮಗನಾಗಿ 1800 ರಲ್ಲಿ ಜನಿಸಿದವ. ಚಿಕ್ಕಂದಿನಿಂದಲೂ ಕ್ರಿಶ್ಚಿಯಾನಿಟಿಯ ಮೇಲೆ ಅಖಂಡ ಭಕ್ತಿ ಅವನಿಗೆ, ತಾತ ಪ್ರೆಸ್ಟಿಟೇರಿಯನ್ ಚರ್ಚ್ ಗೆ ಸೇರಿದವರು. ತಂದೆ-ತಾಯಿಯರೂ ಸಾಕಷ್ಟು ಮತೀಯ ಭಾವನೆಗಳಿದ್ದವರೇ. ಲಂಡನ್ ನ ಹೌಸ್ ಆಫ಼್ ಕಾಮನ್ಸ್ ನಲ್ಲಿ ಇವ್ಯಾಂಜಲಿಕಲ್ ಪಕ್ಷದ ನಾಯಕನಾಗಿದ್ದ ಕಟ್ಟರ್ ಪಂಥಿಯಾಗಿದ್ದ ವಿಲಿಯಂ ವಿಲ್ಟರ್ ಫೋರ್ಸ್ ತಂದೆಗೆ ಆಪ್ತನಾಗಿದ್ದರಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮೆಕಾಲೆಗೆ ಬಾಲ್ಯದಿಂದಲೂ ಮತದ ವಿಷಪ್ರಾಶನ ಜೋರಾಗಿಯೇ ಆಗುತ್ತಿತ್ತು. ಹೀಗಾಗಿಯೇ ಆತ ಕ್ರಿಸ್ತಮತವೇ ಶ್ರೇಷ್ಟ ಎಂಬ ನಿಷ್ಕರ್ಷೆಗೆ ಬಂದು ಬಿಟ್ಟಿದ್ದ. ಅದು ತಪ್ಪಲ್ಲ, ಆದರೆ ಭುವಿಯ ಮೇಲೆ ಕ್ರೈಸ್ತರಲ್ಲದವರು ಬದುಕಲು ಅಯೋಗ್ಯರೆಂಬ ನಿರ್ಣಯವನ್ನೂ ಮಾಡಿಯಾಗಿತ್ತು. ಯೌವ್ವನದಲ್ಲಿ ಕೆಲಸಕ್ಕೆ ಪರದಾಡಿದ, ಕೈತುಂಬಾ ಸಂಬಳ ಸಿಗುವ ಕೆಲಸ ಅನುಮಾನವಾಗಿತ್ತು. ಬಡತನವೂ ಸಾಕಷ್ಟಿತ್ತು.
1833 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ನವೀಕರಿಸುವ ವಿಚಾರ ಸಂಸತ್ತಿನಲ್ಲಿ ಚರ್ಚೆಗೆ ಬಂತು. ಭಾರತದಲ್ಲಿ ಕಾನೂನು ರೂಪಿಸುವ ಸರ್ವೋಚ್ಚ ಸಮಿತಿಯೊಂದಕ್ಕೆ ಮೆಕಾಲೆಯನ್ನು ಹೆಸರಿಸಲಾಯ್ತು, ಇಂತಹ ಸಮಿತಿಗಳ ಕಿರಿಕಿರಿಗಳಿಂದ ನಲುಗಿಹೋಗಿದ್ದ ಕಂಪನಿ ಈಗ ಹೊಸ ಸದಸ್ಯ ಮೆಕಾಲೆಯನ್ನು ವಿರೋಧಿಸಿತು, ಇನ್ನೂ ಮೂವತ್ಮೂರರ ಹರೆಯದ ಮೆಕಾಲೆ ಅದೆಂತಹ ನಿರ್ಣಯ ಕೈಗೊಳ್ಳಬಲ್ಲ ಎಂಬ ಸಹಜ ವಾದ ಅವರದ್ದು. ಸಂಸತ್ತಿನ ಸದಸ್ಯರನೇಕರು ವಿರೋಧ ಮಾಡಿದರು. ವಿರೋಧಕ್ಕೆ ಕಾರಣವೂ ಇತ್ತು. ಮೆಕಾಲೆಗೆ ಕಾನೂನಿನ ಜ್ಞಾನ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇಕಾದಷ್ಟು ಇರಲಿಲ್ಲ.ಅತ್ತ ಅವನಿಗೆ ಕಾನೂನು ರೂಪಿಸುವಷ್ಟು ಭಾರತದ ಪರಿಚಯವೂ ಇರಲಿಲ್ಲ. ಅವನಿಗೆ ಇದ್ದ ಒಂದೇ ಒಂದು ’ಸದ್ಗುಣ’ ಆತ ಮಿಶನರಿಗಳಿಗೆ ಪೂರಕನಾಗಿದ್ದು ಮತ್ತು ಅವರ ಚಿಂತನೆಗಳನ್ನು ಭಾರತದಲ್ಲಿ ಚಾಲ್ತಿಗೆ ತರಲು ಸಮರ್ಥನಿದ್ದ ಎಂಬುದು ಮಾತ್ರ! ಮಿಶನರಿಗಳನೇಕರು ಸರ್ಕಾರದ ಮೇಲೆ ಒತ್ತಡ ತಂದರು. ಮೆಕಾಲೆಯ ಪಕ್ಷ ಗೆದ್ದಿತು. ಆತ 1834 ರ ಜೂನ್ 10 ಕ್ಕೆ ಮದ್ರಾಸಿಗೆ ಬಂದಿಳಿದ.
ಹಾಗೆ ಭಾರತಕ್ಕೆ ಹೊರಡುವ ಮುನ್ನ ತನ್ನ ಆಪ್ತರನ್ನೆಲ್ಲಾ ಸೇರಿಸಿ ಮಾಡಿದ ಭಾಷಣದಲ್ಲಿ ’ನನ್ನನ್ನು ಮಾಡಿದವರ ಘನತೆಯನ್ನು ನನ್ನೊಂದಿಗೆ ಒಯ್ಯುತ್ತಿದ್ದೇನೆ. ಅಷ್ಟೇ ಅಲ್ಲ ಹೊಸ ಜವಾಬ್ದಾರಿ ನಿರ್ವಹಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ.ಯೂರೋಪಿನಲ್ಲಿ ಕೆಲಸ ಮಾಡುವಾಗ ಇದ್ದಂತೆಯೇ ಏಷಿಯಾದಲ್ಲಿಯೂ ನೀವು ಹೇಳಿದ ಆದರ್ಶಗಳು ನನ್ನ ಮನಸಿನೊಳಗೆ ಇದ್ದೇ ಇರುತ್ತವೆ. ನಮ್ಮ ಸಂವಿಧಾನದ ಚೌಕಟ್ಟಿಗೆ ಸುಲಭಕ್ಕೆ ತರಲಾಗದ, ನಮ್ಮ ಮತದ ಮಹತ್ವವನ್ನು ಅರಿಯದ, ನಮ್ಮ ದಾಸ್ಯದಲ್ಲಿರುವ ಜನರ ನಡುವೆ ನಾನು ಕೆಲಸ ಮಾಡಬೇಕಿದೆ. ಹೀಗೆ ಮಾಡುವಾಗ ನಾನು,ಒತ್ತಡ ಹೇರದ, ಭ್ರಷ್ಟರಲ್ಲದ, ಜ್ಞಾನಿಗಳೂ, ಶ್ರೇಷ್ಟರೂ ಆದ ಕ್ರಿಶ್ಚನ್ನರು ನನ್ನನ್ನು ಕಾನೂನು ರೂಪಿಸಲು ಆರಿಸಿದ್ದಾರೆ ಎಂಬುದನ್ನು ಮರೆಯಲಾರೆ’ ಎಂದಿದ್ದ.
ಹ್ಞಾಂ, ಮುಂದಕ್ಕೆ ಸಾಗುವ ಮುನ್ನ ಒಮ್ಮೆ ಮೆಕಾಲೆಯ ಮೇಲೆ ಬಾಲ್ಯದಿಂದಲೂ ಪ್ರಭಾವ ಬೀರಿದ್ದ ವಿಲ್ಬರ್ ಫೋರ್ಸ್ ನ ಬಗ್ಗೆ ತಿಳಿಯುವುದೊಳಿತು. ಆತ 1793 ರಲ್ಲಿಯೇ ಭಾರತದಲ್ಲಿ ಕ್ರೈಸ್ತ ಮತ ಪ್ರಚಾರ ತೀವ್ರಗೊಳ್ಳಬೇಕೆಂಬ ಠರಾವು ಮಂಡಿಸಿದ್ದ. ಜೊತೆಯಲ್ಲಿದ್ದವರು ಅದಕ್ಕೆ ತೀವ್ರ ಗಮನ ಕೊಟ್ಟಿರಲಿಲ್ಲ. ಹಠ ಬಿಡದಂತೆ ಆತ ಸತತ ಪ್ರಯತ್ನಗಳ ನಂತರ 1813 ರಲ್ಲಿ ಹೌಸ್ ಆಫ಼್ ಕಾಮನ್ಸ್ ನಲ್ಲಿ ಮತ್ತೆ ಈ ಪ್ರಶ್ನೆ ಎತ್ತಿದ. ಈ ಬಾರಿ ಜೊತೆಗಾರರನೇಕರಿಗೆ ಮೊದಲೇ ಪತ್ರ ಬರೆದು ತನ್ನ ಪರವಾಗಿರುವಂತೆ ಕೇಳಿಕೊಂಡಿದ್ದ. ಈ ಪ್ರಶ್ನೆಯ ಕುರಿತಂತೆ ಬಲು ಜೋರಾದ ಚರ್ಚೆಯೇ ನಡೆಯಿತು. ಅನೇಕ ಸಜ್ಜನರೂ ಅಲ್ಲಿದ್ದರು. ಭಾರತದಲ್ಲಿ 20 ವರ್ಷ ಅಧಿಕಾರಿಯಾಗಿದ್ದ ಸರ್ ಥಾಮಸ್ ಹೆನ್ರಿ ಮಾಂಟೆಗೊಮೆರಿ ತಾನು ಕೆಲಸ ಮಾಡಿದ ದಕ್ಷಿಣ ಭಾರತಕ್ಕಿಂತ ಲಂಡನ್ ಒಂದರಲ್ಲಿ ೧೫೦-೨೦೦ ಪಟ್ಟು ಹೆಚ್ಚು ಅಪರಾಧಗಳು ನಡೆಯುತ್ತವೆ ಎಂದಿದ್ದ. ಮೂರೆ, ಭಾರತೀಯರಿಗಿಂತ ಬುದ್ದಿವಂತರೂ, ಪರಿಶುದ್ದರೂ ಮತ್ಯಾರಿಲ್ಲ ಎಂದಿದ್ದ. ಲುಷಿಂಗ್ಟನ್ ನಂತೂ ಭಾರತ ಸಾಹಿತ್ಯ, ನೀತಿಗಳ ಆಗರ, ನೀತಿವಾಕ್ಯಗಳು ಪದೇ ಪದೇ ಇಣುಕುತ್ತವೆ, ಇಲ್ಲಿ ಕುನೀತಿ ಬೋದನೆಯ ಪುಸ್ತಕವನ್ನು ನಾನು ನೋಡಿಯೇ ಇಲ್ಲವೆಂದಲ್ಲ ಹೇಳಿದ್ದ.
ಆದರೆ ವಿಲ್ಬರ್ ಫೋರ್ಸ್ ತನ್ನ ನಿರ್ಧಾರಕ್ಕೆ ಕಟಿಬದ್ದನಾಗಿದ್ದ .ಆತ ಲಂಡನ್ನಿನಲ್ಲಿ ಕುಳಿತೇ ಭಾರತವನ್ನು ಅಧ್ಯಯನ ಮಾಡಿಬಿಟ್ಟಿದ್ದ ! ಸುದೀರ್ಘವಾದ ಭಾಷಣ ಮಾಡಿದ. ಮಾತಿನುದ್ದಕ್ಕೂ ಈ ದೇಶವನ್ನು-ಹಿಂದೂಗಳನ್ನು ಹಳಿದ. ನೀತಿಗೆಟ್ಟವರು, ಮೂಡನಂಬಿಕೆಗಳ ದಾಸರು, ಅಜ್ಞಾನಿಗಳು ಎಂದೆಲ್ಲಾ ಜರಿದ. ಜಗನ್ನಾಥನ ರಥದ ಚಕ್ರಕ್ಕೆ ತಲೆ ಕೊಡುವ, ಗಂಡ ಸತ್ತರೆ ಆತನೊಂದಿಗೆ ಹೆಂಡತಿಯನ್ನು ಸುಡುವ, ಭ್ರೂಣ ಹತ್ಯೆ ಮಾಡುವ ಜನ ಎಂಬೆಲ್ಲಾ ಅಂಶಗಳನ್ನು ಇಟ್ಟುಕೊಡು ಬಲವಾದ ವಾದ ಮಂಡಿಸಿದ, ಚರ್ಚೆ ತೀವ್ರವಾಯಿತು.
ಒಂದು ಹಂತದಲ್ಲಿ ವಿಲ್ಬರ್ ಫೋರ್ಸ್, ಭಾರತೀಯರು ಧರ್ಮದ ವಿಷಯದಲ್ಲಿ ಅದೆಷ್ಟು ಸಹನಶೀಲರೆಂದರೆ ನಮ್ಮಿಂದಾದ ತೀವ್ರ ಅಚಾತುರ್ಯವೂ ಅವರನ್ನು ರೊಚ್ಚಿಗೆಬ್ಬಿಸದು ಎನ್ನುತ್ತಾ ತನ್ನ ವಾದವನ್ನು ಮುಂದುವರೆಸಿದ. ಎಂತಹ ಪುಸ್ತಕಗಳು ಪ್ರಕಾಶನಗೊಳ್ಳಬೇಕು? ಅದನ್ನು ಯಾರು ಗಮನಿಸಬೇಕು ಎಂಬೆಲ್ಲಾ ನೀಲಿ ನಕಾಶೆಯನ್ನು ಮುಂದಿಟ್ಟ. ಕೊನೆಗೆ ಭಾರತೀಯರ ಪೂರ್ವಾಗ್ರಹಿಕೆಗಳನ್ನು ಮುಟ್ಟದೇ ಅವರನ್ನು ಜ್ಞಾನವಂತರನ್ನಾಗಿಸಬೇಕೆಂಬ ತನ್ನ ಹಂಬಲ ತೋಡಿಕೊಂಡ. ಅವನ ದ್ರಷ್ಟಿಯಲ್ಲಿ ಜ್ಞಾನವಂತರನ್ನಾಗಿಸುವುದೆಂದರೆ ಪಶ್ಚಿಮದ ರೀತಿ ರಿವಾಜುಗಳ ಶಿಕ್ಷಣ ಕೊಡುವುದಾಗಿತ್ತು. ಈ ಶಿಕ್ಷಣ ಪಡೆದ ಹಿಂದೂ ತನ್ನ ರಾಕ್ಷಸೀಯ ವ್ಯವಸ್ಥೆಯನ್ನು ತೊರೆದು ಕ್ರಿಸ್ತನನ್ನು ಅಪ್ಪಿಕೊಂಡುಬಿಡುತ್ತಾನೆ ಎಂಬ ದೃಢ ವಿಶ್ವಾಸ ಅವನದಾಗಿತ್ತು.
ವಿಲ್ಬರ್ ಫೋರ್ಸ್ ನ ಕುರಿತಂತೆ ಇಷ್ಟು ತಿಳಿದ ಮೇಲೆ( ಸದ್ಯಕ್ಕಿಷ್ಟು ಮಾತ್ರ) ಮೆಕಾಲೆಯ ಹೇಳಿಕೆಗಳನ್ನು ಮತ್ತೊಮ್ಮೆ ಓದಿ ನೋಡಿ ’ನೀವು ಹೇಳಿದ ಆದರ್ಶವನ್ನು ಏಷಿಯಾದಲ್ಲಿ ಪಾಲಿಸುತ್ತೇನೆ ಎಂದಿದ್ದ. ಯಾವುವು ಆ ಆದರ್ಶಗಳು ಬಹುಶಃ ಈಗ ಅನುಮಾನಕ್ಕೆಡೆಯಿರಲಿಕ್ಕಿಲ್ಲ. ಅಷ್ಟೇ ಅಲ್ಲ ನನ್ನನ್ನು ಕಳುಹಿಸಿರುವವರು ಶ್ರೇಷ್ಠ ಕ್ರಿಶ್ಚನ್ನರು ಎಂಬುದನ್ನು ಮರೆಯಲಾರೆ ಎಂದಿದ್ದ. ಅದರರ್ಥ ,ಆತ ಭಾರತೀಯತೆಯ ನಾಶದ ತಯಾರಿಯನ್ನು ಚೆನ್ನಾಗಿ ಮಾಡಿಕೊಂಡಿದ್ದ.
ಸೆಪ್ಟೆಂಬರ್ ನಲ್ಲಿ ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ. ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಕೊರೆಯುತ್ತಿದ್ದವು. ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ. ಹೀಗಾಗಿಯೇ ಅವನ ಮೊದಲ ಆಕ್ರೋಶ ತಿರುಗಿದ್ದು ಬಂಗಾಳದ ಬ್ರಾಹ್ಮಣರ ಮೇಲೆ. ಪರಂಪರೆಯನ್ನು, ಧರ್ಮವನ್ನು ಉಳಿಸುವುದರಲ್ಲಿ ಅವರ ಪಾತ್ರ ಬಲು ದೊಡ್ಡದೆಂದು ಅವನಿಗೆ ಖಂಡಿತಾ ಗೊತ್ತಿತ್ತು. ಅದರೊಟ್ಟಿಗೆ ಅವರಾಡುವ ಸಂಸ್ಕೃತ ಭಾಷೆಯ ಮೇಲೆ ಅವನ ಆಕ್ರೋಶ, ಇನ್ನು ಸಹಜವಾಗಿಯೇ, ಸಹಜತೆಗೆ ಹತ್ತಿರವಾಗಿದ್ದ ಗುರುಕುಲಗಳನ್ನು ಕಂಡರೆ ಕೆಂಡಾಮಂಡಲನಾಗುತ್ತಿದ್ದ. ಭಾರತೀಯರು ಅನಾಗರೀಕರು, ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.
ಕಲ್ಕತ್ತಾಗೆ ಬಂದ ನಾಲ್ಕೇ ತಿಂಗಳಲ್ಲಿ ಅವನು ತನ್ನ ಸಮಿತಿಗೆ ಬರೆದ ಪತ್ರದಲ್ಲಿ ತನ್ನ ಅಭಿಪ್ರಾಯಗಳನ್ನು ವಿಸ್ತಾರವಾಗಿ ಮಂಡಿಸಿದ. ’ಭಾರತೀಯರು ಮಾತನಾಡುವ ಭಾಷೆಯಲ್ಲಿ ಸಾಹಿತ್ಯವಾಗಲೀ, ವೈಜ್ಞಾನಿಕ ಅಂಶಗಳಾಗಲೀ ಇಲ್ಲ. ಈ ಭಾಷೆಗಳು ಅದೆಷ್ಟು ಬಡಕಲು ಮತ್ತು ಒರಟೆಂದರೆ ಅದನ್ನು ಯಾವುದಾದರೂ ರೂಪದಲ್ಲಿ ಶ್ರೀಮಂತಗೊಳಿಸದಿದ್ದರೆ ಶ್ರೇಷ್ಠ ಸಾಹಿತ್ಯಗಳನ್ನು ಈ ನೆಲದ ಭಾಷೆಗಳಿಗೆ ಅನುವಾದ ಮಾಡಿಸುವುದೂ ಸಾಧ್ಯವಿಲ್ಲ’. ಎಂಬುದು ಇಲ್ಲಿನ ಭಾಷೆಗಳನ್ನು ಕುರಿತ ಅವನ ಅಭಿಪ್ರಾಯವಾಗಿತ್ತು. ನಿಸ್ಸಂಶಯವಾಗಿ ಅವನು ಸಂಸ್ಕೃತವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಥವಾ ಹೆಚ್ಚೆಂದರೆ ನಾಲ್ಕು ತಿಂಗಳಲ್ಲಿ ಆತ ಬಂಗಾಳಿ ಭಾಷಿಗರನ್ನು ಕಂಡಿರಬಹುದು ಅಷ್ಟೇ. ಎರಡೂ ಭಾಷೆಗಳ ಕುರಿತಂತೆ ಅವನಾಡಿರುವ ಮಾತುಗಳು ಅಕ್ಷರಶಃ ಅಪದ್ಧ. ಅಮೇರಿಕಾದ ಪಂಡಿತ ಹ್ಯೂಸ್ಟನ್ ಋಗ್ವೇದ ಸಾಹಿತ್ಯ ಮತ್ತು ಅಂದಿನ ಸಂಸ್ಕ್ರತ ಭಾಷೆಯ ಕುರಿತಂತೆ ’ನಮ್ಮ ಆಧುನಿಕ ಭಾಷೆಗಳಿಗಿಂತ ಸೂಕ್ಷ್ಮಾಭಿರುಚಿಯುಳ್ಳದ್ದಾಗಿದೆ, ಪ್ರಾಚೀನ ಕಾಲದಲ್ಲಿಯೇ ಇಷ್ಟು ಶುದ್ಧವಾದ ಭಾಷೆಯ ನಿರ್ಮಾಣ ಹೇಗೆ ಸಾಧ್ಯವಾಯಿತು?’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಮೆಕಾಲೆ ತನ್ನ ಹೇಳಿಕೆಗಳಿಗೆ ಯಾವ ಆಧಾರಗಳನ್ನೂ ಒದಗಿಸಲಿಲ್ಲ. ಅವನದು ಆಳುವವರಿಗಿರುವ ಸಹಜ ಪಿತ್ಥವಾಗಿತ್ತು ಅಷ್ಟೇ. ಆಳುವವರು ಆಳಿಸಿಕೊಳ್ಳುವವರಿಗಿಂತ ಶ್ರೇಷ್ಠರಾಗಿರಲೇಬೇಕೆಂಬ ನಂಬಿಕೆ!
ಮೆಕಾಲೆ ಇಲ್ಲಿಗೇ ನಿಲ್ಲಲಿಲ್ಲ.ನಾಲ್ಕು ತಿಂಗಳ ತನ್ನ ಅನುಭವವನ್ನು ಹೆಮ್ಮೆಯಿಂದ ಹಂಚಿಕೊಂಡ.’ಒಂದು ಒಳ್ಳೆಯ ಯೂರೋಪಿಯನ್ ಗ್ರಂಥಾಲಯದ ಒಂದು ಸಾಲು ಪುಸ್ತಕಗಳಿಗೆ, ಭಾರತ ಮತ್ತು ಅರೇಬಿಯಾದ ಅಷ್ಟೂ ಸಾಹಿತ್ಯ ಸರಿಸಾಟಿಯಾಗಲಾರದು’ ಎಂದಿದ್ದ. ಭಾರತದ ಅಷ್ಟೂ ಸಾಹಿತ್ಯವೆಂದಾಗ ವೇದ, ವೇದಾಂತ, ಸ್ಮೃತಿ ,ಶ್ರುತಿ ವಾಕ್ಯಗಳು,ರಾಮಾಯಣ -ಮಹಾಭಾರತದಂತಹ ಪುರಾಣ ಗ್ರಂಥಗಳು,ಭಗವದ್ಗೀತೆ,ಭಾಗವತ,ಅಲ್ಲದೇ ಬುದ್ಧ,ಶಂಕರ,ರಾಮಾನುಜ,ಮಧ್ವರ ಸಾಹಿತ್ಯಗಳು ಎಲ್ಲಾ ಅಂದರೆ ಎಲ್ಲವೂ ಸೇರಿತ್ತು.
ಬಹಳ ಉಲ್ಲೇಖ ಬೇಡ, ಜಗತ್ತಿನ ಇತಿಹಾಸವನ್ನು ಕುರಿತಂತೆ ಬಲು ನಿರ್ಧಾರದಿಂದ ಮಾತಾಡಬಲ್ಲ ವಿಲ್ ಡ್ಯುರೆಂಟ್ ’ದ ಸ್ಟೋರಿ ಆಫ಼್ ಸಿವಿಲೈಸೇಷನ್’ ಗೂ ಮುನ್ನ ಬರೆದ ’ದ ಕೇಸ್ ಫ಼ಾರ್ ಇಂಡಿಯಾ ದಲ್ಲಿ ’ ಮರೆಯಬೇಡಿ ,ಭಾರತ ನಮ್ಮ ಜನಾಂಗದ ತವರೂರು, ಸಂಸ್ಕೃತ ಯೂರೋಪಿನ ಭಾಷೆಗಳ ಜನನಿ,ಆಕೆ ನಮ್ಮ ತತ್ವ ಶಾಸ್ತ್ರಗಳ ಜನನಿ, ಅರಬ್ಬರ ಮೂಲಕ ನಮ್ಮ ಬಹುಪಾಲು ಗಣಿತದ ತಾಯಿ ಆಕೆ. ಕ್ರೈಸ್ತ ಮತದಲ್ಲಿ ಹುದುಗಿರುವ ಆದರ್ಶಗಳಿಗೆ ಬುದ್ಧನ ಮೂಲಕ ನಮ್ಮಮ್ಮ ಅವಳು. ಹಳ್ಳಿಗಳ ಸಮುದಾಯ, ಸ್ವಯಂ ಸರಕಾರ, ಪ್ರಜಾಪ್ರಭುತ್ವಗಳ ಮೂಲಕ ಅವಳೇ ಅಮ್ಮ. ನೆನಪಿಡಿ, ತಾಯಿ ಭಾರತಿ ಅನೇಕ ಬಗೆಯಲ್ಲಿ ನಮ್ಮೆಲ್ಲರಿಗೂ ತಾಯಿಯೇ’ ಎಂದು ಬಲು ಸುಂದರವಾಗಿ ಭಾರತವನ್ನು ಚಿತ್ರಿಸಿದ್ದಾರೆ. ಒಂದೊಂದು ಸಾಲು ಓದುತ್ತಾ ಹೋದಂತೆಯೂ ರೊಮಾಂಚನಕಾರಿ ಅನುಭವವಾಗುವುದು.