Saturday, 27 June 2015

ಯೋಜನೆಯ ಪಾಠವನ್ನು ನಾವೇ ಕಲಿಸಬೇಕು!

`ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ರಸ್ತೆ ಚೆನ್ನಾಗಿದೆ. ಆದರೆ ಅಲ್ಲಲ್ಲಿ ರಸ್ತೆ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ’. ಹಾಗಂತ ಕಳೆದ ಏಳೆಂಟು ವರ್ಷಗಳಿಂದ ಹೆಳ್ತಿರೋದನ್ನು ಕೇಳಿದ್ದೇವೆ.ಬೆಂಗಳೂರು ಮೆಟ್ರೋ ಅಂತೂ ಮುಗಿಯುತ್ತಲೇಇಲ್ಲ.ಗುಲ್ಬರ್ಗಾದ ಅನೇಕ ರಸ್ತೆಗಳು ಜಲ್ಲಿಗಳ ಗುಡ್ಡೆಗಳಿಂದ ತುಂಬಿವೆಯೇ ಹೊರತು ರಸ್ತೆಯಾಗಿ ಮಾರ್ಪಟ್ಟಿಯೇ ಇಲ್ಲ. ಹೀಗೇಕೆ?
ಫ್ರಾನ್ಸಿಗೆ ಹೋಗಿ ಬಂದ ಅಂಕಣಕಾರ ಅಶೋಕ್ ದೇಸಾಯಿ ಅಲ್ಲಿನ ಕಂಪೆನಿಯೊಂದರ ಕೆಲಸ ಮಾಡುವ ರೀತಿನೀತಿಗಳನ್ನು ನೀಟಾಗಿ ವಿವರಿಸಿ ಬರೆದಿದ್ದಾರೆ. ಅಲ್ಲಿನ ಯಾವುದೇ ಕೆಲಸದ ಶುರು ಮಾಡುವ ಮುಂಚೆ ಮೊದಲ ಆದ್ಯತೆ ಪರಿಸ್ಠಿತಿ ಅಧ್ಯಯನಕ್ಕೆ ಎನ್ನುವುದನ್ನು ನಿರೂಪಿಸಿದ್ದಾರೆ. ಯಾವುದೇ ಕಾರ್ಯವನ್ನು ವಹಿಸಿಕೊಳ್ಳುವ ಕಂಪೆನಿ, ಅದರ ಅಧ್ಯಯನ ನಡೆಸಿ ಶ್ರೇಣಿ ನೀಡಿಕೊಳ್ಳುತ್ತದೆ. ಯೋಜನೆಯ ವ್ಯಾಪ್ತಿ, ತಾಂತ್ರಿಕ ಸಂಕೀರ್ಣತೆ, ಸಂಗ್ರಹ ಸೌಲಭ್ಯ ಮತ್ತು ಸ್ಥಳೀಯ ಅಗತ್ಯಗಳೆಂಬ ಆಧಾರದ ಮೇಲೆ ಒಂದರಿಂದ ಐದರವರೆಗೆ ಅಂಕ ನೀಡಿ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತದೆ.
ಉದಾಹರಣೆಗೆ, ನೀರು ಮತ್ತು ವಿದ್ಯುತ್ ಸರಬರಾಜಿಗೆ ಮೂಲಸೌಕರ್ಯ ಭಾರಿಯಾಗಿಯೇ ಬೇಕಾಗುತ್ತದೆ. ಹೀಗಾಗಿ ಇದರ ವ್ಯಾಪ್ತಿ ಬಲು ದೊಡ್ಡದು. ದೂರಸಂಪರ್ಕ ಮತ್ತು ಆರೋಗ್ಯ ಉಸ್ತುವಾರಿಗೆ ಸಂಬಂಧಪಟ್ಟ ಯೋಜನೆಯಾದರೆ,ಅಲ್ಲಿ ತಂತ್ರಿಕತೆಗೆ ಮಹತ್ವ ಹೆಚ್ಚು. ಜಿಲ್ಲಾಡಳಿತ ಕಟ್ಟಡಗಳಿಗೆ,ಆರಕ್ಷಕ ಠಾಣೆಗಳಿಗೆ ಜನರಿಂದ ಹಣ ಸಂಗ್ರಹಿಸಲಾಗುವುದಿಲ್ಲ. ರಸ್ತೆಗಳಿಗಾದರೆ ಸಂಗ್ರಹಿಸಬಹುದು. ಹಾಗೆಯೇ ಸೈನ್ಯಕ್ಕೆ ಸಂಬಂಧಪಟ್ಟ ಯೋಜನೆಗಳು ರಾಷ್ಟ್ರೀಯ ಹೊಣೆಯಾದರೆ, ಬೀದಿ ದೀಪ ಪೂರೈಕೆ ಪಕ್ಕಾ ಪ್ರಾದೇಶಿಕವಾದದ್ದು. ಇಂತಹ ಲೆಕ್ಕಾಚಾರ ಮಾಡಿ, ಬೇಕಾದ್ದು- ಬೇಡವಾದ್ದನ್ನೆಲ್ಲ ವಿಂಗಡಿಸಿಯೇ ಮುಂದಿನ ಹೆಜ್ಜೆ. ಆಯಾ ವಿಂಗಡಣೆಯ ಶ್ರೇಣಿಗೆ ತಕ್ಕಂತೆ, ಆಯಾ ಯೋಗ್ಯತೆ ಹೊಂದಿರುವ ಕಂಪೆನಿಗಳಿಗೆ ಕೆಲಸ ವಹಿಸಿಕೊಡಲಾಗುತ್ತದೆ. ಹೀಗಾಗಿ ಫ್ರಾನ್ಸಿನಕಂಪೆನಿಗಳು ಜಗತ್ತಿನ ಎಲ್ಲೆಡೆ ಸೇವೆ ಸಲ್ಲಿಸುವ ಮಟ್ಟಕ್ಕೆ ಬೆಳೆದಿವೆ. ನಾವಾದರೋ ಯಾವುದೋ ಕೆಲಸವನ್ನು ಯಾರದೋ ಕೈಗೆ ಕೊಟ್ಟು ಫಲಿತಾಂಶಕ್ಕೆ ಕಾಯುತ್ತ ಕೂರುತ್ತೇವೆ.
ಈ ನಿಟ್ಟಿನಲ್ಲಿ ಗುಜರಾತ್ ಸರ್ಕಾರದ ಕೆಲಸ ಅಪರೂಪದ್ದು. ಯೋಜನೆಗಳಿಗೆ ಟೆಂಡರ್ ಕರೆದು, ಪಡಕೊಂಡವರಿಗೆ ನಿಯಮ ಹಾಕಲಾಗುತ್ತದೆ, ‘ಗುಣಮಟ್ಟ ಕಾಯ್ದುಕೊಂಡು, ನಿಗದಿತ ಸಮಯದಲ್ಲಿ ಪೂರೈಸದಿದ್ದರೆ ದಿನಕ್ಕೆ ಇಷ್ಟು ಭಾಗದಷ್ಟು ದಂಡ ತೆರಬೇಕು. ಯೋಜನೆಯನ್ನು ಬೇಗ ಪೂರೈಸಿದರೆ,ದಿನಕ್ಕೆ ಇಂತಿಷ್ಟು ಬಹುಮಾನ ನೀಡಲಾಗುವುದು’ ಎಂದು! ಹೀಗಾಗಿಯೇ ಅಲ್ಲಿ ಯಾವ ಯೋಜನೆಯೂ ಆಮೆ ಗತಿಯಲ್ಲಿ ನಡೆಯುವುದಿಲ್ಲ. ನಿಯಮ ವ್ಯಾಪಕವಾಗಿಬಿಟ್ಟಿರುವುದರಿಂದ ಟೇಬಲ್ ಕೆಳಗಿನ ವ್ಯವಹಾರಕ್ಕೂ ಆಸ್ಪದವಿರುವುದಿಲ್ಲ. ವ್ಯಕ್ತಿಯೊಬ್ಬ ಸಮರ್ಥನಾದರೆ ವ್ಯವಸ್ಥೆಗಳೂ ನೆಟ್ಟಗಾಗಿಬಿಡುತ್ತವೆ ಎನ್ನುವುದಕ್ಕೆ ಮೋದಿ ಉತ್ತಮ ಉದಾಹರಣೆ.
ವರ್ಷಗಟ್ಟಲೆ ನಡೆಯುವ ರಸ್ತೆ ಕಾಮಗಾರಿಗಳು,ಅಭಿವೃದ್ಧಿ ಯೋಜನೆಗಳು ಜನ ಸಾಮಾನ್ಯರ ಸಾಮಾನ್ಯ ಬದುಕಿಗೂ ಹೊಡೆತವೇ. ಏನಾದರೂ ಮಾಡಿ, ಯೋಜನಾಬದ್ಧವಾಗಿ ಮಾಡಿ ಎಂಬುದನ್ನು ನಾವೀಗ ಗಟ್ಟಿದನಿಯಿಂದ ಸಂಬಂಧಿತರ ಕಿವಿ ಮುಟ್ಟಿಸಬೇಕಿದೆ.

No comments:

Post a Comment