IMPORTANT NOTICE

New official website is designed for Karada Community. Please visit www.karadavishwa.com for more details.

Friday, 5 June 2015

ದೇವರ ಮೇಲೆ ನಂಬಿಕೆ ಇದ್ದರೆ ತರ್ಕವನ್ನು ಗೌರವಿಸಬಾರದಾ?


ಬಾಳಿಗೊಂದು ನಂಬಿಕೆ ಇರಬೇಕು ಖರೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆದರೆ ನಾವು ಭಾರತೀಯರ ಮೇಲೆ ಒಂದು ಆರೋಪವಿದೆ. ಅದೆಂದರೆ, ನಮಗೆ ವೈಜ್ಞಾನಿಕ ಮನೋಭಾವ ಇಲ್ಲ ಅನ್ನೋದು. ಅಂದರೆ ನಾವೇನೋ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಿಂದುಳಿದುಬಿಟ್ಟಿದ್ದೇವೆ, ತಂತ್ರಜ್ಞಾನದಲ್ಲಿ ನಾವು ಗ್ರೇಸ್್ಮಾರ್ಕ್ ಪಡೆಯುವುದಕ್ಕೂ ತಡಬಡಾಯಿಸುತ್ತಿದ್ದೇವೆ ಎಂಬ ಚಿಂತನೆಯ ಮುನ್ನುಡಿಯೇನೂ ಇದಲ್ಲ. ಬದಲಿಗೆ ನಮ್ಮ ನಿತ್ಯಜೀವನದಲ್ಲಿ ನಾವು ವರ್ತಿಸುತ್ತಿರುವ ರೀತಿ-ನೀತಿ ಎಂಥಾದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಕಮ್ಮಿ ಇದೆ ಎಂಬುದನ್ನು ಬಡಪೆಟ್ಟಿಗೆ ತಳ್ಳಿಹಾಕಲಿಕ್ಕಾಗುವುದಿಲ್ಲ.
ನಾವು ಕರಾರುವಾಕ್ಕಾಗಿ ಒಂದು ಯೋಚನಾ ಧಾಟಿಯನ್ನು ರೂಢಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದವರು. ಸಾವಿರಾರು ವರ್ಷಗಳಿಂದ ಯಾವುದನ್ನೋ ಮಾಡಿಕೊಂಡು ಬರಲಾಗುತ್ತಿದೆ ಎಂಬ ಕಾರಣಕ್ಕೆ ಅದನ್ನೇ ಮುಂದುವರಿಸಿಕೊಂಡು ಹೋಗುವ ನಮಗೆ ಅದರ ಕಾರಣವನ್ನು ಕೆದಕುವ, ಪ್ರಸ್ತುತತೆ ಇದೆಯಾ ಎಂದು ತರ್ಕಿಸುವ ಗುಣಗಳೇ ಇಲ್ಲ. ನಮ್ಮ ದೇಶ ವೈವಿಧ್ಯದ ಗೂಡು ಹಾಗೂ ಶ್ರೇಷ್ಠತೆಯ ನೆಲ. ತನ್ನಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹಿಡಿದಿಟ್ಟುಕೊಂಡಿರುವ ರಾಷ್ಟ್ರವಿದು. ಇದನ್ನು ನಾವು ಸರಿಯಾಗಿ ಬಳಸಿಕೊಂಡಿದ್ದೇ ಆದರೆ ನಮ್ಮ ಜೀವನದ ಗುಣಮಟ್ಟ ಹಾಗೂ ಬದುಕಿನ ಎಲ್ಲ ಆಯಾಮಗಳಲ್ಲಿ ಉತ್ಪಾದಕತೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆದರೆ ಇವೆಲ್ಲ ಸಾಕಾರವಾಗಬೇಕು ಎಂದಾದರೆ ಮೂಲಭೂತವಾಗಿ ನಮ್ಮಲ್ಲಿ ಬೇಕಾಗಿರುವುದು ವೈಜ್ಞಾನಿಕ ದೃಷ್ಟಿಕೋನ. ನಂಬಿಕೆ ಮತ್ತು ತರ್ಕಗಳ ಪ್ರಶ್ನೆ ಬಂದಾಗ ನಾವು ಯಾವತ್ತೂ ಇಡಿ ಇಡಿಯಾಗಿ ನಂಬಿಕೆಯ ದಡಕ್ಕೆ ಆತುಕೊಳ್ಳುತ್ತ ಬಂದವರು. ಅದು ಸರ್ವನಾಶಕ್ಕೆ ಕಾರಣವಾಗಹೊರಟಿದೆ ಎಂಬ ಸೂಚನೆ ಸಿಕ್ಕರೂ ಅದನ್ನು ನಾವು ಬಿಡಲೊಲ್ಲೆವು. ನಂಬಿಕೆ ಹಾಗೂ ತರ್ಕಗಳೆರಡರ ಹದ ಮಿಳಿತ ಬೇಕು ಬದುಕಿಗೆ. ಯಾವುದಕ್ಕೆ ಅತಿಯಾಗಿ ತಗುಲಿಕೊಂಡರೂ ಅಪಸವ್ಯಗಳೇ ಎದುರಾಗುತ್ತವೆ. ತರ್ಕ ಹಾಗೂ ನಂಬಿಕೆಗಳ ವಿಷಯದಲ್ಲಿ ಹೀಗೊಂದು ಸಮತೂಕ ಸಾಧಿಸಿದಾಗಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ.ಸಮುದ್ರ ಮಧ್ಯದಲ್ಲಿ ಹಡಗೊಂದು ಮುರಿದುಹೋಯಿತು. ಎಲ್ಲರೂ ಬಚಾವಾಗುವುದಕ್ಕೆ ತಮ್ಮ ಹಾದಿ ಹುಡುಕತೊಡಗಿದರು. ಆ ಹಡಗಿನಲ್ಲಿ ಆಸ್ತಿಕನೊಬ್ಬನಿದ್ದ. ಆತ ಯಾವ ಗಾಬರಿಗೂ ಒಳಗಾಗದೇ ‘ದೇವರೇ, ನನ್ನನ್ನು ಕಾಪಾಡು’ ಎಂದು ಪ್ರಾರ್ಥನೆಯಲ್ಲಿ ತೊಡಗಿಕೊಂಡ. ಅಷ್ಟರಲ್ಲಿ ಮತ್ತೊಂದು ದೊಡ್ಡ ಹಡಗು ಸಾಗಿ ಬಂತು. ಹಡಗಿನ ಕ್ಯಾಪ್ಟನ್ ಇವನನ್ನು ಗುರುತಿಸಿ ಇವನತ್ತ ರಕ್ಷಣೆಯ ಹಗ್ಗ ಎಸೆದು ಹೇಳಿದ- ‘ಈ ಹಡಗಿಗೆ ಹತ್ತಿಕೋ..’ ಅದಕ್ಕೆ ಈ ಕಟ್ಟರ್ ಆಸ್ತಿಕ ಉತ್ತರಿಸಿದ- ‘ಇಲ್ಲ, ಇಲ್ಲ ನೀವು ಹೊರಡಿ. ನನಗೆ ದೇವರಲ್ಲಿ ಅಸೀಮ ನಂಬಿಕೆ. ಆತನೇ ಕಾಪಾಡುತ್ತಾನೆ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.’ ಆ ಹಡಗು ಮುಂದೆ ಹೋಯಿತು.
ನಂತರ ಮೀನುಗಾರರ ಸಣ್ಣ ದೋಣಿಯೊಂದು ಸಮೀಪ ಹೋಯಿತು. ಅಲ್ಲಿನವರೂ ಈ ವ್ಯಕ್ತಿಯನ್ನು ತಮ್ಮ ದೋಣೆಗೆ ದಾಟಿ ಬರುವಂತೆ ಹೇಳಿ ಸಹಾಯಕ್ಕೆ ಮುಂದಾದರು. ಇವನದು ಮತ್ತದೇ ಅಚಲ ಉತ್ತರ- ‘ದೇವರು ನನ್ನನ್ನು ಕಾಪಾಡುತ್ತಾನೆ.’ ಅವರೂ ಮುಂದೆ ಸಾಗಿದರು. ಹಡಗು ಮತ್ತಷ್ಟು ಮುಳುಗುತ್ತಾ ಬಂತು. ಆ ಸಮಯಕ್ಕೆ ಆಕಾಶದಲ್ಲಿ ಹೆಲಿಕಾಫ್ಟರ್ ಒಂದು ಗಿರ್ಕಿ ಹೊಡೆಯಿತು. ಅವರೂ ಮುಳುಗುತ್ತಿರುವ ಈತನಿಗೆ ಏಣಿ ಇಳಿಬಿಟ್ಟು ರಕ್ಷಿಸುವುದಕ್ಕೆ ಮುಂದಾದರು. ಈತನ ಉತ್ತರ – ‘ನೀವು ಹೊರಡಬಹುದು. ನನಗೆ ದೇವರಲ್ಲಿ ಅಚಲ ನಂಬಿಕೆ ಇದೆ. ಆತ ಕಾಪಾಡಿಯೇ ಕಾಪಾಡುತ್ತಾನೆ.’ ಬೇರೆ ದಾರಿಯಿಲ್ಲದೇ ಹೆಲಿಕಾಪ್ಟರ್ ಕೂಡ ದೂರವಾಯಿತು.
ಇತ್ತ ಹಡಗು ಮುಳುಗಿಹೋಗಿ ಈ ಆಸ್ತಿಕ ಸ್ವರ್ಗದಲ್ಲಿ ಕಣ್ಣು ತೆರೆದ. ಇವನೆದುರು ದೇವರು ಸಿಂಹಾಸನದಲ್ಲಿ ಪವಡಿಸಿದ್ದ. ಈತ ಕೇಳಿದ, ‘ದೇವರೇ, ನಾನು ಎಲ್ಲ ರೀತಿಯಲ್ಲೂ ನಿನ್ನ ಮೇಲೆ ನಂಬಿಕೆ ಇರಿಸಿದ್ದೆ. ಅದೇಕೆ ನೀನು ಕಾಪಾಡಲಿಲ್ಲ?’
ದೇವರು ಉತ್ತರಿಸಿದ- ‘ಅಲ್ಲಯ್ಯಾ, ನಿನ್ನನ್ನು ಕಾಪಾಡುವುದಕ್ಕೋಸ್ಕರ ನಾನು ಒಮ್ಮೆ ಹಡಗು, ಇನ್ನೊಮ್ಮೆ ಮೀನುಗಾರರ ದೋಣಿ, ಮತ್ತೊಮ್ಮೆ ಹೆಲಿಕಾಪ್ಟರ್ ಕಳುಹಿಸಿದೆ. ನನ್ನಿಂದ ಇನ್ನೂ ಏನು ನಿರೀಕ್ಷೆ ಮಾಡ್ತೀಯಾ?’
>>>
ಬಹುತೇಕ ನಾವೆಲ್ಲ ಈ ಕಟ್ಟರ್ ಆಸ್ತಿಕನಂತೆಯೇ ಬದುಕುತ್ತಿದ್ದೇವೆ. ದಿನನಿತ್ಯದ ಜೀವನದಲ್ಲಿ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ನಾವು ಭಾರಿ ದೈವಭೀರುಗಳು, ದೇವರಿಗೆ ಹೆದರುವವರು ಎಂದು ತೋರಿಸಿಕೊಳ್ಳುತ್ತೇವೆ. ಎಲ್ಲವನ್ನೂ ನಂಬಿಕೆಯ ಮೇಲೆ ಹೇರುತ್ತೇವೆ. ಆದರೆ ಕಾನೂನು- ನಿಯಮಗಳನ್ನು ಪಾಲಿಸುವ ವಿಷಯ ಬಂದಾಗ ನಮ್ಮದು ಘೋರ ಅಸಡ್ಡೆ. ನಮ್ಮನ್ನು ಸುರಕ್ಷಿತವಾಗಿ, ಕ್ಷೇಮವಾಗಿ ಇಡಪ್ಪಾ ಎಂದು ದೇವರನ್ನು ಅನುಕ್ಷಣವೂ ಬೇಡಿಕೊಳ್ಳುತ್ತೇವೆಯೇ ಸಿವಾಯ್, ಆ ನಿಯಮಗಳೂ ನಮ್ಮ ಸುರಕ್ಷತೆಗೆ ಇರುವುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.
ರಸ್ತೆ ಮೇಲೆ ಸುಮ್ಮನೇ ಕಣ್ಣು ಹಾಯಿಸಿ. ಬೈಕು ಒಂದು ಹೋಗುತ್ತಿರುತ್ತದೆ. ಅದನ್ನು ಚಲಾಯಿಸುತ್ತಿರುವ ಅಪ್ಪನ ತಲೆಯಲ್ಲಿ ಹೆಲ್ಮೆಟ್ ಇದೆ. ಏಕಿದೆ ಅಂದರೆ, ಹಾಗಂತ ನಿಯಮವಿದೆ; ಪೊಲೀಸರು ನೋಡಿ ದಂಡ ಹಾಕಬಾರದಲ್ಲಾ ಎಂಬ ಒಂದೇ ಕಾರಣಕ್ಕೆ. ಆದರೆ ಹಿಂದೆ ಮಗುವನ್ನು ಹಿಡಿದು ಕುಳಿತ ಅಮ್ಮನ ತಲೆಗೆ ಶಿರಸ್ತ್ರಾಣವಿಲ್ಲ. ಅದಕ್ಕೂ ಕಾರಣ ಬಹಳ ಸುಲಭದ್ದು. ಹಿಂದೆ ಕುಳಿತವರು ಹೆಲ್ಮೆಟ್ ಧರಿಸಿರಬೇಕು ಎಂಬುದು ಕಾನೂನಿನಲ್ಲಿ ಕಡ್ಡಾಯ ಮಾಡಿಲ್ಲವಲ್ಲ! ಅಲ್ಲೇ ಬೈಕ್್ನ ನಡುಭಾಗದಲ್ಲಿ ಪೋರನೊಬ್ಬ ತೂರಿಕೊಂಡು ಕುಳಿತಿದ್ದಾನೆ. ಇನ್ನೊಬ್ಬನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇವರಿಬ್ಬರಿಗೂ ಹೆಲ್ಮೆಟ್ ಇಲ್ಲ. ಅವರ ಸುರಕ್ಷತೆಯ ಕತೆಯೇನು? ಕ್ಷಮಿಸಿ, ಹಾಗೆಲ್ಲ ಕೇಳಲೇಬಾರದು. ಅವರಿಗೆಲ್ಲ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವಿಲ್ಲ.
ಕಾಯಿದೆಯ ಬಿಗಿ ಇಲ್ಲ ಎಂದಾದರೆ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡುವವರ ಸಂಖ್ಯೆ ಶೇ. 20ರಷ್ಟೂ ಇರುವುದಿಲ್ಲ. ಬಹುಶಃ ಜಗತ್ತಿನಲ್ಲಿ ಹೆಲ್ಮೆಟ್ ಬಗ್ಗೆ ಇಷ್ಟು ಉಡಾಫೆ ಇಟ್ಟುಕೊಂಡಿರುವ ಮಂದಿ ನಾವು ಮಾತ್ರ ಆಗಿದ್ದಿರಬಹುದು.
ಬೈಕ್ ಹಿಂದೆ ಕುಳಿತವರಿಗೂ ಹೆಲ್ಮಟ್ ಕಡ್ಡಾಯ ಎಂಬ ನಿಯಮ ತರುವುದಕ್ಕೆ ಮುಂದಾದಾಗಲೆಲ್ಲ, ನಾವು ಸರ್ಕಾರದ ಆ ನಡೆಯ ವಿರುದ್ಧ ಭಾರಿ ಒಗ್ಗಟ್ಟಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದೇವೆ! ನೋಡಿ, ನಮ್ಮ ಸ್ಥಳೀಯ ಆಡಳಿತ ಬಲವಂತವಾಗಿ ನಮ್ಮ ಮೇಲೆ ಹೆಲ್ಮೆಟ್ ಹೇರುತ್ತಿದೆ ಎಂದು ಆಕ್ಷೇಪಿಸುತ್ತ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡಿದ್ದೇವೆ. ಇಂಥ ಪ್ರತಿರೋಧಗಳಿಗೆ ಪೆಚ್ಚಾಗಿ ಕಾನೂನೇ ಹಿಂದೆ ಸರಿದಿದೆ. ಇದರ ಪರಿಣಾಮ ಆಗುತ್ತಿರುವುದೆಲ್ಲಿ? ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ತುರ್ತುಚಿಕಿತ್ಸೆಯ ಖರ್ಚುಗಳನ್ನು ಭರಿಸುವುದಕ್ಕೆ ಅಪಘಾತಕ್ಕೆ ಒಳಗಾದವನಿಗೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿ ಆಸ್ಪತ್ರೆಗಳು ಅಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಕ್ಕೇ ಹಿಂದೆ-ಮುಂದೆ ನೋಡುತ್ತಿವೆ. ಅಪಘಾತಕ್ಕೀಡಾದವನು ಅರ್ಜಿ ತುಂಬುವ ಸ್ಥಿತಿಯಲ್ಲಿದ್ದಿರುವುದಿಲ್ಲ. ಕೆಲವೇ ಸಂವೇದನಾಶೀಲ ಅಧಿಕಾರಿಗಳು ಮಾತ್ರವೇ ಈ ಕಾಯಿದೆ ಚೌಕಟ್ಟನ್ನು ಮಾನವೀಯ ನೆಲೆಯಲ್ಲಿ ಪಕ್ಕ ಸರಿಸಿ, ಅಗತ್ಯ ಕ್ರಮಕ್ಕೆ ದಾರಿ ಮಾಡಿಕೊಡುತ್ತಾರೆ.
ಹೆಲ್ಮೆಟ್ ಧರಿಸುವುದರಿಂದ ಸುರಕ್ಷತೆ ಹೆಚ್ಚು ಎಂದು ನಿರೂಪಿಸುವ ಅಂಕಿ-ಅಂಶ, ಮಾಹಿತಿಗಳನ್ನೆಲ್ಲ ಎಷ್ಟೇ ಎದುರಿಗಿಟ್ಟರೂ ಆ ಮೂಲಕ ಜನರು ಹೆಲ್ಮೆಟ್ ಹಾಕಿಕೊಳ್ಳುವಂತೆ ಮಾಡಲಿಕ್ಕಾಗುವುದಿಲ್ಲ. ಕಾಯಿದೆ ಇರಲಿ, ಇಲ್ಲದಿರಲಿ ನೀವು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿರಲೇ ಬೇಕು ಎಂದು ಕೆಲವೇ ಸಂಸ್ಥೆಗಳಷ್ಟೇ ತಮ್ಮ ಉದ್ಯೋಗಿಗಳಿಗೆ ಷರತ್ತು ವಿಧಿಸಿವೆ. ಜಗತ್ತಿನಾದ್ಯಂತ, ನಾಗರಿಕವಾಗಿ ಮುಂದುವರಿದಿವೆ ಎಂಬ ರಾಷ್ಟ್ರಗಳಲ್ಲೆಲ್ಲ ಹೆಲ್ಮೆಟ್ ಧಾರಣೆ ಕಡ್ಡಾಯವಾಗಿದೆ. ಅಲ್ಲೆಲ್ಲ ರಸ್ತೆಗಳು ಉತ್ತಮವಾಗಿವೆ, ಸಂಚಾರ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ. ಹಾಗಿದ್ದೂ ಅವರು ಬೈಕ್್ಗಳಿಗಷ್ಟೇ ಅಲ್ಲ, ಬೈಸಿಕಲ್ ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ ಮಾಡಿಕೊಂಡಿದ್ದಾರೆ. ಕೇವಲ ಚಾಲಕನಿಗೆ ಮಾತ್ರವಲ್ಲದೇ ಸವಾರನಿಗೂ ಹೆಲ್ಮೆಟ್ ಧಾರಣೆ ಕಡ್ಡಾಯ. ಅದು ತಮ್ಮ ಲಾಭಕ್ಕಾಗಿಯೇ ಎಂದು ಅರ್ಥ ಮಾಡಿಕೊಂಡಿರುವ ಅಲ್ಲಿನ ಜನರೆಲ್ಲ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ನಿಯಮವನ್ನು ಪಾಲಿಸುತ್ತಾರೆ.
ಆದರೆ ನಮ್ಮಲ್ಲಿ? ರಸ್ತೆಯಲ್ಲಿ ಅಡ್ಡಡ್ಡ ಕಾರು ನಿಲ್ಲಿಸಿ ಕರ್ಕಶವಾಗಿ ಹಾರನ್ ಬಜಾಯಿಸುತ್ತಾರೆ. ಸಂಚಾರ ನಿಯಮಗಳು ಲೆಕ್ಕಕ್ಕೇ ಇಲ್ಲ. ಸಂಚಾರಸೂಚಿಯ ದೀಪಗಳಲ್ಲೂ ಅಸ್ತವ್ಯಸ್ತತೆ, ರಸ್ತೆಯಲ್ಲಿ ಯಮಪುರಿಯ ದಾರಿ ತೋರಿಸುವ ಹೊಂಡಗಳು, ಇವೆಲ್ಲದರ ನಡುವೆಯೇ ಹೆಲ್ಮೆಟ್್ರಹಿತ ಬೈಕ್ ಚಾಲನೆ. ಆಸ್ಟ್ರೇಲಿಯಾದಂಥ ರಾಷ್ಟ್ರ 1961ರಿಂದಲೇ ಹೆಲ್ಮೆಟ್ ಕಡ್ಡಾಯ ನೀತಿ ಅನುಸರಿಸಿಕೊಂಡು ಬಂದಿದೆ ಎಂಬುದು ಗೊತ್ತೇನು? ‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜನರಿಗೇ ಹೆಲ್ಮೆಟ್ ಬೇಡ ಎಂದಿರುವಾಗ ಅದನ್ನು ಹೇರುವುದಕ್ಕೆ ಯಾವ ಸರ್ಕಾರಕ್ಕೆ ಅಧಿಕಾರವಿದೆ?’ ಎಂದೇ ನಾವು ಅಬ್ಬರಿಸುತ್ತೇವೆ!?
ಹಾಗಾದರೆ ನಮಗೆ ನಮ್ಮ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲವೇಉಹುಂ. ಹಾಗೆ ಅಂದುಕೊಳ್ಳುವಂತೆಯೇ ಇಲ್ಲ! ಏಕೆಂದರೆ ವಾಹನ ಖರೀದಿಸುವಾಗಲೇ ನಮ್ಮ ಅದೃಷ್ಟ ಸಂಖ್ಯೆಯ ಲೆಕ್ಕಾಚಾರಗಳು ಶುರು. ಇದೇ ನಂಬರಿನಿಂದ ಶುರುವಾದರೆ, ಕೂಡಿಸಿ- ಕಳೆದರೆ ಇಂತಿಷ್ಟೇ ಸಂಖ್ಯೆ ಉತ್ತರವಾಗಿ ಬಂದರೆ ಆಯುಷ್ಯ ಪೂರ್ತಿ ಅದರಲ್ಲಿ ಆರಾಮ ಪ್ರಯಾಣ ಎಂದು ನಂಬುವವರು ನಾವು. ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಆದ ನಂತರವೇ ವಾಹನದ ಬಳಕೆ. ಯಾವತ್ತೂ ಅಪಘಾತಕ್ಕೆ ಈಡಾಗದಿರಲಿ ದೇವರೇ ಎಂಬ ಪ್ರಾರ್ಥನೆ. ಕಾರಿನ ಡ್ಯಾಶ್್ಬೋರ್ಡ್ ಮೇಲೆ ಗಣಪ. ಬೈಕ್್ನ ಮೂತಿಗೆ ಇಂಥಾ ದೇವರ ಆಶೀರ್ವಾದ ಎಂಬ ಒಕ್ಕಣೆ. ಎಲ್ಲವೂ ಸರಿ. ಆದರೆ ನಂತರ ಗಾಡಿಯ ಇನ್ಷೂರೆನ್ಸ್ ಕಂತನ್ನೇ ಕಟ್ಟುವುದಿಲ್ಲ. ನಿಯಮವಿದೆಯಲ್ಲಾ ಎಂಬ ಕಾರಣಕ್ಕೆ ವಿಮೆ ಮಾಡಿಸುವವರೇ ಅಧಿಕ. ಅವಘಡದ ಸಂದರ್ಭದಲ್ಲಿ ನಮಗೆ, ನಮ್ಮ ಕುಟುಂಬದವರಿಗೆ ರಕ್ಷಣೆಗೆ ಬರುವಂಥದ್ದು ಇದೇ ಎಂಬ ಸುರಕ್ಷತೆಯ ಅರಿವೇಕೆ ನಮ್ಮಲ್ಲಿ ಒಡಮೂಡುವುದಿಲ್ಲ? ನಮಗೆ ಸುರಕ್ಷತೆ ಬೇಕು. ಆದರೆ ನಾವು ಸುರಕ್ಷತೆಯ ಭಾರವನ್ನೆಲ್ಲಾ ದೇವರ ಮೇಲೆ ಹಾಕಿ ಹೆಲ್ಮೆಟ್ ಪಕ್ಕಕ್ಕೆ ಸರಿಸುತ್ತೇವೆ! ಹೆಲ್ಮೆಟ್ ಧರಿಸಿಯೂ ಅಪಘಾತದಲ್ಲಿ ಸತ್ತ ವ್ಯಕ್ತಿಯ ಯಾವುದಾದರೂ ಒಂದು ಉದಾಹರಣೆ ಇಟ್ಟುಕೊಂಡು, ‘ಹೆಲ್ಮೆಟ್ ಹಾಕಿದ ಮಾತ್ರಕ್ಕೆ ಬದುಕುಳಿಯುತ್ತೇವೆ ಅನ್ನೋದಕ್ಕೆ ಗ್ಯಾರಂಟಿ ಏನು? ಎಲ್ಲ ಆ ದೇವರಿಚ್ಛೆ’ ಎಂಬ ಅಸಡ್ಡಾಳ ವಾದ ನಮ್ಮದು.
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್್ಬೆಲ್ಟ್ ಕಟ್ಟಿಕೊಳ್ಳುವುದರ ಬಗ್ಗೆಯೂ ನಮ್ಮ ನಿರ್ಲಕ್ಷ್ಯ ಕಣ್ಣಿಗೆ ರಾಚುವಂಥದ್ದೇ. ಕ್ಯಾಬ್್ಡ್ರೈವರ್್ಗಳು ಸೀಟ್್ಬೆಲ್ಟ್ ಧರಿಸಿ ಚಾಲನೆ ಮಾಡುವ ದೃಶ್ಯ ಕಾಣಸಿಗುವುದೇ ಅಪರೂಪ. ‘ನಿಯಮದ ಪ್ರಕಾರ ಅದೇನೂ ಕಟ್ಟುನಿಟ್ಟು ಅಲ್ಲ ಬಿಡಿ. ಇಷ್ಟಕ್ಕೂ ಅದನ್ನೆಲ್ಲ ಯಾರು ಗಮನಿಸುತ್ತಾರೆ?’ ಎಂಬ ಸಮಜಾಯಿಷಿ ನಮ್ಮ ಬಳಿ ಯಾವತ್ತೂ ಸಿದ್ಧ. ಡ್ಯಾಶ್್ಬೋರ್ಡ್ ಮೇಲೆ ಗಣಪತಿ ಇದ್ದ ಮೇಲೆ ಸೀಟ್್ಬೆಲ್ಟ್್ನ ಹರಕತ್ತೇನು ಎಂಬ ಲಹರಿ ನಮ್ಮದು.
ಇಷ್ಟೆಲ್ಲ ನ್ಯೂನತೆಗಳಿದ್ದೂ ಅವನ್ನು ಯಾರಾದರೂ ತೋರಿಸಿ, ನಿಮ್ಮ ನಡತೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಒಗ್ಗುವಂಥದ್ದಲ್ಲ ಎಂದರೆ ಸಿಡಿಸಿಡಿಯಾಗುತ್ತೇವೆ. ಸುಳ್ಳೇ ನಮ್ಮಲ್ಲೊಂದು ಸ್ವಾಭಿಮಾನ ಹೆಡೆ ಎತ್ತಿ ಬುಸುಗುಡುತ್ತದೆ. ಈಗ ಹೇಳಿ, ಮುಳುಗುತ್ತಿರುವ ಹಡಗಿನಲ್ಲಿ ಎಲ್ಲರ ಸಹಾಯಹಸ್ತಗಳನ್ನು ದೂರತಳ್ಳಿ ಭಜನೆ ಮಾಡುತ್ತಾ ಕುಳಿತು ನೆಗೆದುಬಿದ್ದ ಆ ಅಸಾಮಿ ನಮ್ಮದೇ ಪ್ರತಿನಿಧಿಯಂತೆ ಭಾಸವಾಗುತ್ತಿಲ್ಲವೇ?

No comments:

Post a Comment