IMPORTANT NOTICE

New official website is designed for Karada Community. Please visit www.karadavishwa.com for more details.

Tuesday, 16 June 2015

ಜಗತ್ತನ್ನೇ ಜಯಿಸಿದವ ಅವನ ಮುಂದೆ ಸಣ್ಣವನಾಗಿದ್ದ!


ಕಳೆದ ಕೆಲ ದಿನಗಳಿಂದ ಈ ಪ್ರಸಂಗ ಬಿಟ್ಟೂ ಬಿಡದೇ ನೆನಪಾಗುತ್ತಿದೆ. ಅಲೆಕ್ಸಾಂಡರ್್ನ ಜೀವನದಲ್ಲಿ ನಡೆದ ಘಟನೆಯಿದು. ಅದ್ಯಾಕೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ?
ಅಲೆಕ್ಸಾಂಡರ್ ನಿಧನನಾಗಿದ್ದ. ಆತನ ಪಾರ್ಥಿವ ಶರೀರವನ್ನು ಶವದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇಡೀ ಜಗತನ್ನು ಜಯಿಸುವೆ ಎಂದು ಬೀಗುತ್ತಿದ್ದ ಮತ್ತು ಆ ದಿಸೆಯಲ್ಲಿ ತುಸು ಯಶಸ್ವಿಯೂ ಆದ ಪರಮ ಪರಾಕ್ರಮಿಯ ತಣ್ಣನೆಯ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲೆಕ್ಸಾಂಡರ್ ಅಂದ್ರೆ ಭೌತಿಕ ಉಪಭೋಗದ ಸಂಕೇತ. ಅತ್ಯುತ್ತಮವಾದುದು ಏನೇ ಕಾಣಲಿ, ಅದು ತನಗಿರಲಿ ಎಂದು ಹಪಹಪಿಸುವ ಮನಸ್ಸು ಅವನದು. ಅವನ ಆ ದಾಹಕ್ಕೆ ಅಂತ್ಯವೇ ಇರಲಿಲ್ಲ. ಪ್ರದೇಶ, ದೇಶ, ಉಪಖಂಡ, ಖಂಡಗಳನ್ನು ಒಂದಾದ ನಂತರ ಒಂದರಂತೆ ಗೆಲ್ಲುತ್ತಾ ಹೋದರೂ ಅವನ ಈ ಗೆಲ್ಲುವ, ಸಮರ ಸಾರುವ, ದೇಶವನ್ನು ಕೊಳ್ಳೆ ಹೊಡೆಯುವ ಹುಚ್ಚು ಕೋಡಿ ಮಾತ್ರ ಭೋರ್ಗರೆಯುತ್ತ ಹರಿಯುತ್ತಲೇ ಇತ್ತು. ಜಗತ್ತನ್ನೇ ಜಯಿಸಲು ಹೊರಟವನಿಗೆ ದೇಶ, ಖಂಡಗಳೆಲ್ಲ ಯಾವ ಲೆಕ್ಕ?
ಅಲೆಕ್ಸಾಂಡರ್್ನ ಶವ ತಣ್ಣಗೆ ಮಲಗಿತ್ತು…!
ಬಹಳ ವರ್ಷಗಳ ಕಾಲ ಅವನ ಸಹಾಯಕನಾಗಿದ್ದವ ಪಾರ್ಥೀವ ಶರೀರದ ಹತ್ತಿರ ಬಂದವನೇ ಶವದ ಪೆಟ್ಟಿಗೆಯನ್ನು ತಬ್ಬಿಕೊಂಡು ರೋಧಿಸಲಾರಂಭಿಸಿದ. ಅವನ ಸುತ್ತಲಿದ್ದವರು ಸಹ ಆ ಕರುಣಾಜನಕ ದೃಶ್ಯಕ್ಕೆ ಮೂಕಸಾಕ್ಷಿಗಳಾಗುತ್ತಾ ಕಣ್ಣೀರು ಸುರಿಸಿದರು. ಇನ್ನೇನು ಪಾರ್ಥೀವ ಶರೀರವನ್ನಿಟ್ಟ ಪೆಟ್ಟಿಗೆಯನ್ನು ಮೇಲೆತ್ತಿಕೊಂಡು ಅಂತ್ಯ ಸಂಸ್ಕಾರಕ್ಕೆ ಅಣಿಯಾಗಬೇಕೆಂದು ಎಲ್ಲರೂ ಸಿದ್ಧತೆ ಮಾಡುವಾಗ ಅಲೆಕ್ಸಾಂಡರ್್ನ ಸಹಾಯಕ ಪಕ್ಕದಲ್ಲಿದ್ದ ಜನರಲ್್ಗೆ ಹೇಳಿದ- “ದಯವಿಟ್ಟು ಅಲೆಕ್ಸಾಂಡರ್್ನ ಕೊನೆ ಆಸೆಯನ್ನು ಈಡೇರಿಸಬೇಕು. ಆತ ಸಾಯುವ ಕೆಲ ದಿನಗಳ ಮೊದಲು ಅದೇನು ಎಂಬುದನ್ನು ನನ್ನ ಮುಂದೆ ಅವರು ನಿವೇದಿಸಿಕೊಂಡಿದ್ದರು.”
“ಅದೇನು ಬೇಡಿಕೆ? ಹೇಳು, ಖಂಡಿತಾ ನೆರವೇರಿಸೋಣ” ಎಂದರು.
“ಅದೇನು ಅಂಥ ಮಹಾನ್ ಬೇಡಿಕೆಯೇನಲ್ಲ. ಈಗಲೇ ಈಡೇರಿಸುವಂಥದ್ದು” ಅಂದ.
ಅದಕ್ಕೆ ಜನರಲ್್ಗಳು “ಹೇಳು ಹೇಳು, ಪರವಾಗಿಲ್ಲ. ಜಗತ್ತನ್ನೇ ಗೆದ್ದವನ ಆಸೆಯನ್ನು ಈಡೇರಿಸದೇ ಇರುವುದುಂಟಾ?” ಎಂದರು.
“ಅಲೆಕ್ಸಾಂಡರ್ ಸಾಯುವುದಕ್ಕೆ ಕೆಲ ದಿನಗಳ ಮೊದಲು ಹೀಗೆ ಹೇಳಿದಾಗ ನನಗೂ ನಂಬಲಾಗಲಿಲ್ಲ. ಇದೆಂಥ ಬೇಡಿಕೆ ಎಂದು ನಾನೂ ಉದ್ಗಾರ ತೆಗೆದೆ. ಆದರೆ ಅದಕ್ಕೆ ಅಲೆಕ್ಸಾಂಡರ್ ಕೇಳಲಿಲ್ಲ. ಈಡೇರಿಸಲೇಬೇಕು ಅಂದ.” ಇಷ್ಟು ಹೇಳಿ ಸಹಾಯಕ ಅಲೆಕ್ಸಾಂಡರ್್ನ ಪಾರ್ಥೀವ ಶರೀರವನ್ನೇ ದಿಟ್ಟಿಸಿದ. ಆಗ ಯಾರೂ ಮಾತಾಡಲಿಲ್ಲ.
ತುಸು ಸಾವರಿಸಿಕೊಂಡ ಸಹಾಯಕ ಕೇಳಿದ- “ನಾನು ಸತ್ತಾಗ ನನ್ನ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿಟ್ಟು ಹೋಗುತ್ತೀರಲ್ಲಾ, ಆಗ ನನ್ನ ಎರಡೂ ಕೈಗಳು ಶವಪೆಟ್ಟಿಗೆ ಹೊರಗೆ ಚಾಚಿರಲಿ. ಯಾವುದೇ ಕಾರಣಕ್ಕೂ ಇಲ್ಲ ಎನ್ನಬೇಡಿ ಎಂದು ಅಲೆಕ್ಸಾಂಡರ್ ಹೇಳಿದ್ದಾನೆ. ದಯವಿಟ್ಟು ಇದನ್ನು ನೆರವೇರಿಸಬೇಕು.”
ಜನರಲ್್ಗಳು ಕಕ್ಕಾಬಿಕ್ಕಿಯಾದರು. ಇದೆಂಥ ಬೇಡಿಕೆ? ಶವ ಪೆಟ್ಟಿಗೆ ಹೊರಗೆ ಎರಡೂ ಕೈಗಳು ಚಾಚಬೇಕಂತೆ? ಇದನ್ನು ಈಡೇರಿಸುವುದಾದರೂ ಹೇಗೆ? ಎಂಬ ಪೀಕಲಾಟಕ್ಕೆ ಬಿದ್ದ ಜನರಲ್್ಗಳು ಧರ್ಮಗುರುಗಳನ್ನು ಸಂಪರ್ಕಿಸಿದರು. “ಇದು ಸಾಧ್ಯವೇ ಇಲ್ಲ, ಇದು ಸಂಪ್ರದಾಯ ವಿರೋಧಿ, ಧರ್ಮ ವಿರೋಧಿ. ಅದಕ್ಕಿಂತ ಹೆಚ್ಚಾಗಿ ಶವಕ್ಕೆ ಅವಮರ್ಯಾದೆ ಮಾಡಿದ ಹಾಗೆ. ಹಾಗೆ ಮಾಡಲು ಸಾಧ್ಯವಿಲ್ಲ” ಎಂದಾಗ ನಿಜಕ್ಕೂ ಧರ್ಮಸಂಕಟ ಎದುರಾಯಿತು.
ಅಲೆಕ್ಸಾಂಡರ್ ನ ಶವದ ಮುಂದೆ ಪಂಚಾಯತಿ!
ಆಗ ಅಲೆಕ್ಸಾಂಡರ್ ನ ಸಹಾಯಕ ಹೇಳಿದ- “ಈ ಎಲ್ಲ ಪ್ರಶ್ನೆಗಳು ಎದುರಾಗಬಹುದು ಎಂದು ಅಲೆಕ್ಸಾಂಡರ್ ಗೂ ಗೊತ್ತಿತ್ತು. ಅದಕ್ಕೆ ಅವನೇ ಸಮಜಾಯಿಷಿಯನ್ನೂ ಕೊಟ್ಟಿದ್ದಾನೆ. ಆದ್ದರಿಂದ ಅವನ ಬೇಡಿಕೆಯಂತೆ ಕೈಗಳನ್ನು ಹೊರಗಿಡುವುದು ಪಾರ್ಥೀವ ಶರೀರಕ್ಕೆ ಮಾಡುವ ಅವಮಾನವಲ್ಲ. ಅವನ ದೃಷ್ಟಿಯಿಂದಲೂ ಯೋಚಿಸಿ. ಈ ಅಲೆಕ್ಸಾಂಡರ್ ಇದ್ದಾನಲ್ಲ ಆತ ಕೊನೆಗೆ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲ ಎಂಬುದನ್ನು ಜನ ಕಣ್ಣಾರೆ ನೋಡಲಿ. ನಾನು ಬರುವಾಗ ಖಾಲಿ ಕೈಯಲ್ಲಿ ಬಂದೆ. ಹೋಗುವಾಗಲೂ ಹಾಗೇ ಹೋಗಲು ಬಯಸುತ್ತೇನೆ. ನಾನು ಬಂದಿದ್ದನ್ನು ಜನ ನೋಡಲಿಲ್ಲ. ಖಾಲಿ ಕೈಯಲ್ಲಿ ಹೋಗಿದ್ದನ್ನಾದರೂ ನೋಡಲಿ ಎಂಬುದು ಅವನ ಆಶಯವಾಗಿತ್ತು.
ಅನಂತರ ಅಲೆಕ್ಸಾಂಡರ್ ನ ಕೋರಿಕೆಯಂತೆ ಅವನ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗಿಟ್ಟೇ ಅಂತ್ಯಸಂಸ್ಕಾರ ಮಾಡಲಾಯಿತು!
ಅಲೆಕ್ಸಾಂಡರನಿಗೆ ಅಂಥ ಜರೂರೇನಿತ್ತು?
ಜಗತ್ತನ್ನೇ ಜಯಿಸ ಹೊರಟವನಿಗೆ ಎಲ್ಲವೂ ನಶ್ವರವಾಗಿತ್ತು, ಖಾಲಿಖಾಲಿಯಾಗಿತ್ತು. ತಾನು ಗಳಿಸಿದ್ದೆಲ್ಲ ನಿರರ್ಥಕ, ನಿಷ್ಪ್ರಯೋಜಕ ಎಂಬ ತೀರ್ಮಾನಕ್ಕೆ ಆತ ಬಂದಿದ್ದ. ಆತನಿಗೆ ಅದೆಂಥ ಅಪರಾಧ (Guilt) ಭಾವ ಕಾಡುತ್ತಿದ್ದೀರಬಹುದು? ಆತನಿಗೆ ತಾನು ಜೀವನವಿಡೀ ಸಾಧಿಸಿದ್ದಕ್ಕಿಂತ, ಪಡೆದುದಕ್ಕಿಂತ ಖಾಲಿಯಾಗಿರುವುದರಲ್ಲಿಯೇ ಅಂತಿಮ ಆನಂದ ಕಂಡಿದ್ದ. ತಾನು ಗಳಿಸಿದ್ದೆಲ್ಲವೂ ಶೂನ್ಯ ಎಂದು ಅವನಿಗೆ ಅನಿಸಿತ್ತು. ಶೂನ್ಯವೇ ಹಿತವೆನಿಸಿತ್ತು. ಅದನ್ನು ಇಡೀ ಜಗತ್ತಿನ ಜನ ನೋಡಲಿ ಎಂಬುದು ಆವನ ಆಶಯವಾಗಿತ್ತು.
ಸಾಯುವುದಕ್ಕಿಂತ ಕೆಲ ದಿನಗಳ ಮೊದಲು ತನ್ನ ಪರಮಾಪ್ತ ಜನರಲ್್ನನ್ನು ಕರೆದ ಅಲೆಕ್ಸಾಂಡರ್, “ನಾನು ದೇಶಗಳನ್ನು ಗೆಲ್ಲುವ ಭರದಲ್ಲಿ ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅದೇ ಮಹಾನ್ ಸಾಧನೆ ಎಂದುಕೊಂಡು ಬಿಟ್ಟೆ. ಈಗ ಅನಿಸುತ್ತಿದೆ ನಾನು ನನ್ನ ಇಡೀ ಬದುಕನ್ನೇ ವೃಥಾ ವ್ಯರ್ಥಗೊಳಿಸಿಕೊಂಡು ಬಿಟ್ಟೆ. ದೇಶದೇಶಗಳನ್ನು ಜಯಿಸಿ ನಾನಾದರೂ ಈಗ ಏನು ಮಾಡಲಿ? ನನ್ನ ಅಹಂಕಾರಕ್ಕೆ ನಾನೇ ಬಲಿಯಾಗಿ ಬಿಟ್ಟೆನಾ ಎಂಬ ಭಯಂಕರ ಭಯ ನನ್ನನ್ನು ಕಾಡುತ್ತಿದೆ. ನನ್ನ ಬದುಕನ್ನು ಈ ಭಯ ಸುಡುತ್ತಿದೆ. ನಾನು ಸಾವರಿಸಿಕೊಳ್ಳಲಾಗದಷ್ಟು ಜರ್ಝರಿತನಾಗಿ ಬಿಟ್ಟಿದ್ದೇನೆ” ಎಂದು ತನ್ನ ಮನದಾಳದಲ್ಲಿ ಹೊತ್ತಿ ಉರಿಯುತ್ತಿದ್ದ ಭುಗಿಲನ್ನು ತೋಡಿಕೊಂಡಿದ್ದ.
ಅಲೆಕ್ಸಾಂಡರ್ ಕೊನೆ ಕೊನೆಗೆ ತನ್ನ ಸಾಧನೆಯನ್ನು ನೆನೆನೆನೆದು ಸಣ್ಣವನಾಗುತ್ತಿದ್ದ. ತನ್ನ ಆಪ್ತರ ಮುಂದೆ ಈ ನೋವನ್ನು ಹಂಚಿಕೊಳ್ಳುತ್ತಿದ್ದ. ಇದರಿಂದ ಹೊರಬರುವ ಮಾರ್ಗಗಳ ಬಗ್ಗೆ ಗಾಢವಾಗಿ ಚಿಂತಿಸುತ್ತಿದ್ದ.      ಎಂಥ ವಿಚಿತ್ರ ಅಂದ್ರೆ ಅಲೆಕ್ಸಾಂಡರನಿಗೆ ಸಮಯ ಸಿಕ್ಕಾಗಲೆಲ್ಲ ಡಿಯೋಜಿನಸ್ ಎಂಬ ಭಿಕ್ಷುಕನ ಜತೆ ಕಾಲ ಕಳೆಯಲು ಬಯಸುತ್ತಿದ್ದ. ಡಿಯೋಜಿನಸ್ ಅಲೆಕ್ಸಾಂಡರ್ ನ ವಾರಿಗೆಯವ. ಆತನಿಗೆ ಅವನದ್ದು ಎಂಬುದು ಏನೂ ಇರಲಿಲ್ಲ. ಆತ ಎಲ್ಲವನ್ನೂ ಬಿಟ್ಟಿದ್ದ. ಅವನ ಬಳಿ ಭಿಕ್ಷೆ ಬೇಡಲು ಒಂದು ಭಿಕ್ಷಾ ಪಾತ್ರೆಯಿತ್ತು. ಕೈಗಳಿರುವಾಗ ಆ ಪಾತ್ರೆಯೇಕೆ ಎಂದು ಅದನ್ನು ಬಿಸಾಡಿಬಿಟ್ಟ. ನೀರು ಕುಡಿಯಲು ಅವನ ಬಳಿ ಒಂದು ಪುಟ್ಟ ಲೋಟ ಇತ್ತು. ಒಂದು ದಿನ ಡಿಯೋಜಿನಸ್ ನದಿಯಲ್ಲಿ ನಾಯಿಯೊಂದು ನೀರು ಕುಡಿಯುವುದನ್ನು ನೋಡಿದ. ನಾಯಿಗೆ ನೀರು ಕುಡಿಯಲು ಲೋಟವಾಗಲಿ, ಪಾತ್ರೆಯಾಗಲಿ ಬೇಡ ಎಂತಾದರೆ ನನಗೇಕೆ ಬೇಕು ಎಂದು ತನ್ನ ಕೈಯಲ್ಲಿದ್ದ ಲೋಟವನ್ನು ಸಹ ಬಿಸಾಡಿ ಬಿಟ್ಟ. ಆಗ ಅವನ ಬಳಿ ಏನೇನೂ ಇರಲಿಲ್ಲ. ಅದು ತನ್ನ ಅತ್ಯಂತ ಸಂಭ್ರಮದ ಕ್ಷಣ ಅಂತ ಆತ ಹೇಳಿಕೊಂಡಿದ್ದ.
ಡಿಯೋಜಿನಸ್ ಬಗ್ಗೆ ಅಲೆಕ್ಸಾಂಡರ್ ಕಾಲಕಾಲಕ್ಕೆ ಸುದ್ದಿ ಬರುತ್ತಿದ್ದವು. ಅವನ ಬಗ್ಗೆ ತರೇಹವಾರಿ ಕತೆಗಳನ್ನು ಜನ ಹೇಳುತ್ತಿದ್ದರು. ಡಿಯೋಜಿನಸ್್ನನ್ನು ಒಮ್ಮೆ ಭೇಟಿಯಾಗಲೇಬೇಕು ಎಂದು ಅಲೆಕ್ಸಾಂಡರ್್ಗೆ ಅನಿಸಿತು. ಆದರೆ ಡಿಯೋಜಿನಸ್ ಅಲೆಗ್ಸಾಂಡರ್ ನನ್ನು ಭೇಟಿಯಾಗಲು ಅಂಥ ಆಸಕ್ತಿ ತೋರಲಿಲ್ಲ. ಇದರಿಂದ ಅಲೆಕ್ಸಾಂಡರ್ ಗೆ ಆತನಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿತು. ಇಡೀ ಜಗತ್ತನ್ನೇ ಜಯಿಸಿದವನು ತನ್ನನ್ನು ಕಾಣಲು ಮುಂದೆ ಬಂದರೆ, ನಿರ್ಲಕ್ಷಿಸುತ್ತಿದ್ದಾನಲ್ಲ ಎಂದು ಅವನಲ್ಲಿ ಬೆರಗು ಹುಟ್ಟಿತು. ಬಿಡಲಿಲ್ಲ ಕೊನೆಗೆ ಅಲೆಕ್ಸಾಂಡರ್ ಡಿಯೋಜಿನಸ್್ನನ್ನು ಭೇಟಿಯಾದ.
ಡಿಯೋಜಿನಸ್ ನನ್ನು ಭೇಟಿಯಾದಾಗ ಅವನ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ. ಅವನದೆಂಬುದು ಏನೂ ಇರಲಿಲ್ಲ. ಆದರೆ ಅವನ ಮುಖದಲ್ಲಿ ಅದ್ಭುತ ಕಾಂತಿ, ಸಮಾಧಾನದ ಮುದ್ರೆ ನೆಲೆಸಿತ್ತು. ನೆಮ್ಮದಿ ಅವನ ಮನಸ್ಸಿನಲ್ಲಿ ಜೋಕಾಲಿಯಾಡುತ್ತಿದೆಯೆಂದು ಯಾರು ಬೇಕಾದರೂ ಹೇಳಬಹುದಿತ್ತು.
ಡಿಯೋಜಿನಸ್್ನನ್ನು ಭೇಟಿಯಾದ ಮರುಗಳಿಗೆಯಲ್ಲೇ ಅಲೆಕ್ಸಾಂಡರ್ ಗೆ ಅನಿಸಿತು, ನನ್ನಲ್ಲಿ ಯಾವುದು ಇಲ್ಲವೋ ಅವೆಲ್ಲವೂ ಇವನಲ್ಲಿದೆ. ಯಾಕೆಂದರೆ ನನ್ನಲ್ಲಿ ಇರುವ ಯಾವ ಸಂಗತಿಯೂ ಇವನಲ್ಲಿ ಇಲ್ಲ. ಹೀಗಾಗಿ ಈತ ಇಷ್ಟೊಂದು ನಿಶ್ಚಿಂತೆಯಿಂದ ಇದ್ದಾನೆ. ಅಲೆಕ್ಸಾಂಡರ್ ಬಂದ ಕೂಡಲೇ ಡಿಯೋಜಿನಸ್್ನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಕಾರಣ ಅವನಿಗೆ ಅಲೆಕ್ಸಾಂಡರ್್ನಿಂದ ಆಗುವುದೇನೂ ಇರಲಿಲ್ಲ. ಹೀಗಾಗಿ ಆತ ಬರುತ್ತಿದ್ದಂತೆ ಡಿಯೋಜಿನಸ್ ತನ್ನ ಪಾಡಿಗೆ ನೆಲದ ಮೇಲೆ ಮಲಗಿಬಿಟ್ಟ. ತುಸು ಹೊತ್ತು ನಿದ್ದೆ ಹೋದ. ಅಲೆಕ್ಸಾಂಡರ್ ಅವನ ಪಕ್ಕದಲ್ಲಿಯೇ ಸುಮ್ಮನೆ ಕುಳಿತಿದ್ದ. ಅದಾದ ನಂತರ ಡಿಯೋಜಿನಸ್ ಪಕ್ಕದ ನದಿಗೆ ಹೋಗಿ ಬೊಗಸೆ ತುಂಬಾ ನೀರು ಕುಡಿದ. ಅಲ್ಲಿಯೇ ಸ್ನಾನ ಮಾಡಿದ. ಆನಂತರ ಅದೇ ನದಿ ತಟದ ಮರಳು ಹಾಸಿನ ಮೇಲೇ ಮಲಗಿ ಸೂರ್ಯನ ಶಾಖಕ್ಕೆ ಮೈಯೊಡ್ಡಿದ. ಆತನ ಮುಖದಲ್ಲಿ ಸಂತೃಪ್ತಿಯ ಭಾವ ಹಾಸಿತ್ತು.
ಇದನ್ನು ಕಂಡ ಅಲೆಕ್ಸಾಂಡರ್,”ಡಿಯೋಜಿನಸ್, ನಾನು ಅಲೆಕ್ಸಾಂಡರ್. ನಿನ್ನನ್ನು ನೋಡಲೆಂದೇ ಬಂದಿದ್ದೇನೆ. ಹೆಚ್ಚು ಕಮ್ಮಿ ಇಡೀ ಜಗತ್ತನ್ನೇ ಜಯಿಸಿದವನು ನಾನು. ನಿನಗೆ ನನ್ನಿಂದ ಏನಾಗಬೇಕು ಹೇಳು, ಈಗಲೇ ನಿನಗೆ ಎಲ್ಲವನ್ನೂ ಕರುಣಿಸುತ್ತೇನೆ’ ಎಂದ. ಅದಕ್ಕೆ ಡಿಯೋಜಿನಸ್ ಶಾಂತವಾಗಿ ಹೇಳಿದ-”ನಾನು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದೇನೆ. ದಯವಿಟ್ಟು ನನ್ನ ಹಾಗೂ ಸೂರ್ಯನ ಮಧ್ಯೆ ನಿಲ್ಲದಿದ್ದರೆ ಅದೇ ನನಗೆ ನೀನು ಮಾಡುವ ಮಹದುಪಕಾರ’ ಎಂದವನೇ ಮಗ್ಗಲು ಬದಲಿಸಿ ಆ ಉಸುಕು ಹಾಸಿನ ಮೇಲೆ ಮಲಗಿಬಿಟ್ಟ.
ಆ ದಿನವಿಡೀ ಅಲೆಕ್ಸಾಂಡರ್ ಡಿಯೋಜಿನಸ್ ಪಕ್ಕದಲ್ಲೇ ಕುಳಿತು ಅವನ ಚಲನವಲನಗಳನ್ನೆಲ್ಲ ದಿಟ್ಟಿಸುತ್ತಿದ್ದ. ಒಂದು ಇರುವೆ, ಹುಳ ಹೋದರೆ ಹೇಗೆ ಗೊತ್ತಾಗುವುದಿಲ್ಲವೋ, ಅಲೆಕ್ಸಾಂಡರ್ ಸುತ್ತಮುತ್ತ ಸುಳಿದಾಡುತ್ತಿದ್ದುದು ಕೂಡ ಡಿಯೋಜಿನಸ್ ಗೆ ಗೊತ್ತಾಗಲಿಲ್ಲ. ಆತ ಒಮ್ಮೆಯೂ ಅಲೆಕ್ಸಾಂಡರ್ ನ ಕಡೆಗೆ ಗಮನವನ್ನು ಹರಿಸಲಿಲ್ಲ.
ಅಲೆಕ್ಸಾಂಡರ್ ಗೆ ಆ ಫಕೀರನ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿತು. ಅವನ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿ, ಕೊನೆಗೆ ಇನ್ನು ಪರೀಕ್ಷಿಸಿ ಫಲವಿಲ್ಲವೆಂದು ಭಾವಿಸಿದ. ಡಿಯೋಜಿನಸ್ ನ ಸಾಚಾತನ ಅವನಲ್ಲಿ ಅಸಾಧಾರಣ ಪರಿವರ್ತನೆಯನ್ನು ತಂದಿತು. ಜಗತ್ತಿನಲ್ಲಿ ಹೀಗೂ ಸಮಾಧಾನ, ಸಾರ್ಥಕ್ಯವಾಗಲು ಸಾಧ್ಯವಾ ಎಂದೆನಿಸಿತು.
ಡಿಯೋಜಿನಸ್್ನ ಮುಂದೆ ತಲೆಬಾಗಿ,”ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ, ದೇವರೇ, ನನ್ನನ್ನು ಪುನಃ ಅಲೆಗ್ಸಾಂಡರ್ ನನ್ನಾಗಿ ಹುಟ್ಟಿಸಬೇಡ. ಡಿಯೋಜಿನಸ್್ನಾಗಿ ಹುಟ್ಟಿಸು ಎಂದು ಪ್ರಾರ್ಥಿಸುತ್ತೇನೆ’ ಎಂದು ವಿನಮ್ರನಾಗಿ ನುಡಿದ.
ಆಗ ಡಿಯೋಜಿನಸ್ ಜೋರಾಗಿ ನಕ್ಕು ಬಿಟ್ಟ.”ಅಲೆಕ್ಸಾಂಡರ್, ನಿನ್ನ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಿನ ಜನ್ಮದವರೆಗೆ ಕಾಯಬೇಕಿಲ್ಲ. ಈಗಲೇ, ನಿಂತಲ್ಲೇ ಡಿಯೋಜಿನಸ್ ಆಗಬಹುದು. ಅಲೆಕ್ಸಾಂಡರ್ ಆಗುವುದು ಕಷ್ಟ. ಡಿಯೋಜಿನಸ್ ಆಗುವುದು ಭಲೇ ಸುಲಭ. ನೀನ್ಯಾಕೆ ಈ ಪಾಟಿ ಸಂಘರ್ಷಕ್ಕೆ ಬಿದ್ದಿದ್ದೀಯಾ?  ಈ ಹೋರಾಟ ಯಾರಿಗಾಗಿ ಎಂದು ಕೇಳಿದ. ಅದಕ್ಕೆ ಅಲೆಕ್ಸಾಂಡರ್ ಹೇಳಿದ- ಮೊದಲು ನಾನು ಮಧ್ಯ ಏಷ್ಯಾವನ್ನು ಗೆದ್ದೆ. ಆನಂತರ ಭಾರತವನ್ನು ಗೆದ್ದೆ. ಬಳಿಕ ಪೂರ್ವ ದೇಶಗಳು….’
‘ಅದಾದ ಬಳಿಕ ಮುಂದೇನು ಮಾಡ್ತೀಯಾ?’ ಎಂದು ಡಿಯೋಜಿನಸ್ ಕೇಳಿದ್ದಕ್ಕೆ ಅಲೆಕ್ಸಾಂಡರ್”ಇಡೀ ಜಗತ್ತನ್ನು ಗೆದ್ದು ವಿರಮಿಸಬೇಕೆಂದಿದ್ದೇನೆ’ ಎಂದ. ಅವನ ಮಾತಿಗೆ ಜೋರಾಗಿ ನಕ್ಕ ಡಿಯೋಜಿನಸ್”ಮುಠ್ಠಾಳ, ನನ್ನನ್ನು ನೋಡು, ನಾನು ಜಗತ್ತನ್ನು ಗೆಲ್ಲದೇ ಸುಖವಾಗಿ ವಿರಮಿಸುತ್ತಿದ್ದೇನೆ. ಬಾ, ನನ್ನ ಪಕ್ಕದಲ್ಲಿ ಬಂದು ಮಲಗು. ನದಿ ತಟ ಬಹಳ ವಿಶಾಲವಾಗಿದೆ. ಇಲ್ಲಿ ಯಾರೂ ಯಾರಿಗೆ ಉಪದ್ರವ ಕೊಡುವುದಿಲ್ಲ. ಇಲ್ಲಿ ಮಲಗಿ ನೋಡು. ನಿನಗೆ ಜಗತ್ತನ್ನೇ ಗೆಲ್ಲಬೇಕೆಂದು ಅನಿಸುವುದಿಲ್ಲ. ಮೈ ಚೆಲ್ಲಿದರೆ ಸುಖ ನಿದ್ದೆ ಆವರಿಸುತ್ತದೆ’ ಎಂದವನೇ ಎರಡೂ ಕೈಗಳನ್ನು ತಲೆದಿಂಬಾಗಿಸಿಕೊಂಡು ಮಲಗಿ ಬಿಟ್ಟ!
 
ಅಲೆಕ್ಸಾಂಡರ್ ಆತನೆದುರು ಸಣ್ಣವನಾಗಿಬಿಟ್ಟ.
ಅಲ್ಲಿಂದ ಹೊರಡುವ ಮುನ್ನ ಅಲೆಕ್ಸಾಂಡರ್ ಹೇಳಿದ-”ನೀನು ಹೇಳೋದು ಸತ್ಯ. ನಾನು ಮುಠ್ಠಾಳನೇ. ಆದರೆ ನಾನು ಜಗತ್ತನ್ನು ಗೆಲ್ಲಬೇಕು. ಗೆದ್ದು ಬಂದು ನಿನ್ನ ಪಕ್ಕ ಮಲಗುತ್ತೇನೆ.’
ಅದಕ್ಕೆ ಡಿಯೋಜಿನಸ್ ಹೇಳಿದ-”ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ವಾಪಸ್ ಬರಲಾರೆ. ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ಇಲ್ಲಿಂದ ಕದಲುತ್ತಿರಲಿಲ್ಲ. ನೀನಂತೂ ಇಲ್ಲಿಗೆ ಪುನಃ ಬರುವುದಿಲ್ಲವೆಂಬುದು ನನಗೆ ಖಾತ್ರಿಯಾಗಿದೆ.’
ಅಲೆಕ್ಸಾಂಡರ್ ವಾಪಸ್ ಬರಲಿಲ್ಲ. ಮನೆ ತಲುಪುವ ಮೊದಲೇ ನಿಧನನಾದ.

No comments:

Post a Comment