Monday, 15 June 2015

ಮಕ್ಕಳ ಮೋಹದ ಮುಂದೆ ಯಾವ ಆಸ್ತಿಯೂ ದೊಡ್ಡದಲ್ಲ…!


ಮಕ್ಕಳ ಮೇಲೆ ತಾಯ್ತಂದೆಯರು ಹೊಂದಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ, ಮಕ್ಕಳ ಹೊರತಾಗಿ ಪೋಷಕರಿಗೆ ಬೇರೊಂದು ಜಗತ್ತೇ ಇರುವುದಿಲ್ಲ. ಒಬ್ಬ ವ್ಯಕ್ತಿ ದಿನಕ್ಕೆ ಕೋಟಿ ಕೋಟಿ ದುಡಿಯುವವನಾಗಿರಬಹುದು. ಅಥವಾ ಭಿಕ್ಷೆ ಯಾಚಿಸುತ್ತಾ ಹೊಟ್ಟೆ ಹೊರೆಯುವವನೇ ಆಗಿರಬಹುದು. ಈ ಎರಡೂ ವರ್ಗಕ್ಕೆ ಸೇರಿದ ಜನರಿಗೆ ಅಷ್ಟೈಶ್ವರ್ಯ ಕಂಡಾಗ ಆಗುತ್ತದಲ್ಲ, ಅದಕ್ಕಿಂತ ಹೆಚ್ಚಿನ ಖುಷಿ ಮಕ್ಕಳನ್ನು ಕಂಡಾಗ ಆಗುತ್ತದೆ. ಪ್ರತಿಯೊಬ್ಬ ಪೋಷಕರ ಕನಸು ಹಾಗೂ ಭವಿಷ್ಯದ ಲೆಕ್ಕಾಚಾರದಲ್ಲಿ ಮಕ್ಕಳೇ ಇರುತ್ತಾರೆ. ಮಕ್ಕಳು ತಮ್ಮ ಕೊನೆಗಾಲದಲ್ಲಿ ಹೇಗೆಲ್ಲಾ ಆಸರೆಯಾಗಬಹುದು ಎಂದು ಕನಸು ಕಾಣದ ಪೋಷಕರೇ ಇಲ್ಲ ಎನ್ನಬಹುದು. ಆದರೆ ಕಂಡ ಕನಸುಗಳೆಲ್ಲ ನನಸಾಗುವುದಿಲ್ಲ. ಒಂದೊಂದು ಸಂದರ್ಭದಲ್ಲಿ ಪೋಷಕರನ್ನು ಅವರ ಕಡೆಗಾಲದಲ್ಲಿ ಪ್ರೀತಿಯಿಂದ ಜೋಪಾನ ಮಾಡಬೇಕು ಎಂದು ಮಕ್ಕಳೂ ಆಸೆಪಟ್ಟಿರುತ್ತಾರೆ. ಆದರೆ ಅದಕ್ಕೆ ವಿಧಿ ಎಂಬುದು ಅವಕಾಶ ಮಾಡಿಕೊಡುವುದಿಲ್ಲ. ಇಂಥ ಸಂದರ್ಭದಲ್ಲಿ ಪೋಷಕರಿಗೆ ಉಂಟಾಗುವ ಆಘಾತ ಹಾಗೂ ಮಕ್ಕಳ ವಿಷಯದಲ್ಲಿ ಅವರು ಹೊಂದಿದ ಆದಮ್ಯ ಪ್ರೀತಿಗೆ ಸಾಕ್ಷಿ ಹೇಳುವ ಕಥೆಯೊಂದು ಇಲ್ಲಿದೆ:
>>>>>>>
ಅವನ ಪೂರ್ತಿ ಹೆಸರು ಗಣಾಚಾರಿ. ಜನ ಅವನನ್ನು ‘ಆಚಾರ್ರೇ’ ಎಂದು ಕರೆಯುತ್ತಿದ್ದರು. ಈ ಗಣಾಚಾರಿ, ಶಿಲ್ಪ ಕಲಾವಿದ. ಬಗೆಬಗೆಯ ಮೂರ್ತಿಗಳನ್ನು ಕೆತ್ತುವುದು, ಹಳೆಯ ವಿಗ್ರಹಗಳನ್ನು ಸಂಗ್ರಹಿಸಿ ಮಾರುವುದು ಅವನ ಕಸುಬಾಗಿತ್ತು. ಇದರಲ್ಲಿ ಒಳ್ಳೆಯ ಲಾಭವೂ ಇತ್ತು. ಜೀವನದಲ್ಲಿ ಸೆಟಲ್ ಆಗುವ ವೇಳೆಗೆ ಗಣಾಚಾರಿಗೂ ನಲವತ್ತು ದಾಟಿತ್ತು. ಹೀಗಿರುವಾಗಲೇ ಆಗಬಾರದ್ದು ಆಗಿಹೋಯ್ತು. ಮದುವೆಯ ಹತ್ತನೇ ವಾರ್ಷಿಕೋತ್ಸವ ನಡೆದ ಕೆಲವೇ ದಿನಗಳಲ್ಲಿ ಗಣಾಚಾರಿಯ ಪತ್ನಿ ಕಾಯಿಲೆಯ ಕಾರಣದಿಂದ ತೀರಿಹೋದಳು. ಈ ವೇಳೆಗೆ ಗಣಾಚಾರಿಗೆ ಒಬ್ಬ ಮಗನಿದ್ದ.
ಮುದ್ದಿನ ಮಗನಿಗೆ ಮಲತಾಯಿಯ ಕಾಟ ಶುರುವಾಗಬಹುದು ಎಂಬ ಚಿಂತೆಯಿಂದ ಗಣಾಚಾರಿ ಎರಡನೇ ಮದುವೆಯಾಗಲಿಲ್ಲ. ತನಗೆ ಗೊತ್ತಿದ್ದ ಎಲ್ಲವನ್ನೂ ಮಗನಿಗೆ ಹೇಳಿಕೊಟ್ಟ. ಚೆನ್ನಾಗಿ ಓದಿಸಿದ. ಡಿಗ್ರಿ ಮುಗಿಸಿದ ಮಗ ಮಿಲಿಟರಿಗೆ ಸೇರುವೆನೆಂದಾಗ ಒಲ್ಲದ ಮನಸ್ಸಿಂದ ಒಪ್ಪಿಗೆ ಕೊಟ್ಟ. ವರ್ಷದ ಕೊನೆಯಲ್ಲಿ ರಜೆಗೆಂದು ಬಂದಾಗ, ಅಪ್ಪನೊಂದಿಗೆ ಮಗನೂ ಶಿಲ್ಪಗಳ ತಯಾರಿಗೆ ಮುಂದಾಗುತ್ತಿದ್ದ. ವ್ಯಾಪಾರ ವ್ಯವಹಾರದಲ್ಲಿ ಮುಳುಗಿ ಹೋಗುತ್ತಿದ್ದ. ಪರಿಣಾಮವಾಗಿ ಅವನ ಮನೆ ಎಂಬುದು ಮಿನಿ ಸಂಗ್ರಹಾಲಯವೇ ಆಗಿಹೋಯಿತು. ದೇಶ ವಿದೇಶಗಳ ಹೆಸರಾಂತ ಚಿತ್ರಕಲಾವಿದರ ಕಲಾಕೃತಿಗಳು ಈ ಅಪ್ಪ-ಮಗನ ಸಂಗ್ರಹದಲ್ಲಿದ್ದವು.
ಹೀಗೇ, ಇಪ್ಪತ್ತು ವರ್ಷಗಳು ಕಳೆದು ಹೋದವು. ಅದೊಮ್ಮೆ ಅಲ್ಪಾವಧಿ ರಜೆ ಹಾಕಿ ಮನೆಗೆ ಬಂದ ಮಗ ತಂದೆಗೆ ಹೇಳಿದ. ‘ಇನ್ನು ನಾಲ್ಕು ತಿಂಗಳು ಕೆಲಸ ಮಾಡಿದರೆ ನಂತರ ನಿವೃತ್ತಿ ಸಿಗುತ್ತದೆ. ಮುಂದೆ ಶಾಶ್ವತವಾಗಿ ನಿನ್ನೊಂದಿಗೇ ಇದ್ದು ಬಿಡುತ್ತೇನೆ.’ ಹೀಗೆ ಹೇಳಿದ್ದು ಮಾತ್ರವಲ್ಲ, ಮನೆಯಲ್ಲಿದ್ದ ಎಲ್ಲ ಕಲಾಕೃತಿಗಳನ್ನು ಒಪ್ಪವಾಗಿ ಜೋಡಿಸಿಟ್ಟು ಹೋದ ಮಗನನ್ನು ಕಂಡು ಗಣಾಚಾರಿಗೆ ತುಂಬ ಖುಷಿಯಾಯಿತು. ನಾಲ್ಕು ತಿಂಗಳ ನಂತರ ಮಗನ ಆರೈಕೆಯ ಮಧ್ಯೆ ತಾನು ಹೇಗೆಲ್ಲಾ ಸಂಭ್ರಮಿಸಬಹುದು ಎಂದು ಊಹಿಸಿಕೊಳ್ಳುತ್ತಾ ಗಣಾಚಾರಿ ಮೇಲಿಂದ ಮೇಲೆ ಖುಷಿಪಡುತ್ತಿದ್ದ.
ಆದರೆ, ಆನಂತರದಲ್ಲಿ ಯಾರೂ ಊಹಿಸದ ಘಟನೆಗಳು ನಡೆದು ಹೋದವು. ನೆರೆಯ ರಾಷ್ಟ್ರ ದಿಢೀರನೆ ಯುದ್ಧ ಸಾರಿತು. ಪತ್ರಿಕೆ ಹಾಗೂ ಟಿ.ವಿ.ಗಳಲ್ಲಿ ದಿನವೂ ಯುದ್ಧದ ಸುದ್ದಿಗಳೇ ಕೇಳಿ ಬರತೊಡಗಿದವು . ಗಣಾಚಾರಿ, ಜೀವವನ್ನು ಕೈಲಿ ಹಿಡಿದುಕೊಂಡು ದಿನಕ್ಕೆ ಹತ್ತು ಬಾರಿ ದೇವರ ಮುಂದೆ ಕೂತು ಪ್ರಾರ್ಥಿಸುತ್ತಿದ್ದ: ‘ದೇವರೇ, ನನ್ನ ಮಗನಿಗೆ ಯಾವುದೇ ತೊಂದರೆ ಬಾರದಿರಲಿ. ಅವನೊಂದಿಗೆ ಬದುಕಿನ ಕೊನೆಯ ದಿನಗಳನ್ನು ಕಳೆಯಬೇಕು ಅಂದುಕೊಂಡಿರುವ ನನ್ನ ಆಸೆ ಕನಸಾಗಿಯೇ ಉಳಿಯದಿರಲಿ…’
ಗಣಾಚಾರಿಯ ಪ್ರಾರ್ಥನೆ ದೇವರಿಗೆ ಕೇಳಲಿಲ್ಲವೋ ಅಥವಾ ಅವನ ಮಗನ ಅದೃಷ್ಟವೇ ಖೊಟ್ಟಿಯಿತ್ತೋ ಗೊತ್ತಿಲ್ಲ. ಅದೊಂದು ಮಧ್ಯಾಹ್ನ ಗಣಾಚಾರಿಗೆ ಒಂದು ಟೆಲಿಗ್ರಾಂ ಬಂತು. ಹೌದು. ಅವನ ಒಬ್ಬನೇ ಮಗ ಸತ್ತುಹೋಗಿದ್ದ. ಶತ್ರುಗಳ ಗುಂಡೇಟಿಗೆ ಬಲಿಯಾಗುವ ಮುನ್ನ ಹನ್ನೆರಡು ಮಂದಿ ಸೈನಿಕರ ಜೀವ ಉಳಿಸಿ ಆತ ಹುತಾತ್ಮನಾಗಿದ್ದ. ಎರಡು ದಿನಗಳ ನಂತರ ಮೃತ ಯೋಧನ ಶವವಿದ್ದ ಕಾಫಿನ್ ಬಂತು. ಆಗಲೂ ಸೇನೆಯ ಹಿರಿಯ ಅಧಿಕಾರಿಗಳು ಗಣಾಚಾರಿಯ ಮಗನ ಶೌರ್ಯವನ್ನು ಬಗೆಬಗೆಯಲ್ಲಿ ಬಣ್ಣಿಸಿದರು.
ಸಂಧ್ಯಾ ಕಾಲದಲ್ಲಿ ಆಸರೆಯಾಗುವನೆಂದು ಭಾವಿಸಿದ್ದ ಮಗನ ದಿಢೀರ್ ಅಗಲಿಕೆ ಗಣಾಚಾರಿಗೆ ಚೇತರಿಸಿಕೊಳ್ಳಲಾಗದಂಥ ಪೆಟ್ಟು ನೀಡಿತು. ಆತ ಮಗನ ಕನವರಿಕೆಯಲ್ಲಿ ಊಟ ಮರೆತ. ನಿದ್ರೆ ಮರೆತ. ಒಂದರ್ಥದಲ್ಲಿ ಅರಳುಮರಳಿಗೆ ಒಳಗಾದವನಂತೆ ಬದುಕಲು ಆರಂಭಿಸಿದ. ಪರಿಣಾಮವಾಗಿ, ಮನೆಯೊಳಗಿನ ಕಲಾಕೃತಿಗಳಿಗೆ ಧೂಳು ಮೆತ್ತಿಕೊಂಡಿತು. ನಂತರದ ಕೆಲವೇ ದಿನಗಳಲ್ಲಿ ಜೇಡವೂ ಅಲ್ಲಿ ಬಲೆ ಹೆಣೆಯಿತು. ಇಷ್ಟಾದರೂ ಗಣಾಚಾರಿ ಯಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಮುತ್ತಿನಂಥ ಮಗನೇ ಹೋದ ಮೇಲೆ ಈ ಆಸ್ತಿಯ ಮೋಹವೇಕೆ ಎಂದುಕೊಂಡು ಸುಮ್ಮನೆ ಉಳಿದು ಬಿಟ್ಟ. ಆತ ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ಆರಂಭದ ಒಂದೆರಡು ತಿಂಗಳು ಅಯ್ಯೋ ಪಾಪ ಎಂದು ಅನುಕಂಪ ತೋರಿಸಿದ ಜನ ನಂತರದ ದಿನಗಳಲ್ಲಿ ಅವನನ್ನು ಮರೆತವರಂತೆ ಉಳಿದುಬಿಟ್ಟರು.
ಈ ಮಧ್ಯೆಯೇ ಕಣ್ಮರೆಯಾಗಿದ್ದ ಮಗನ ಹುಟ್ಟುಹಬ್ಬದ ದಿನ ಬಂತು. ಅವತ್ತು ಗಣಾಚಾರಿ ತುಂಬ ಉತ್ಸಾಹದಿಂದ ಎದ್ದು ಕೂತ. ಮಗನ ಭಾವಚಿತ್ರವನ್ನು ಒರೆಸಿದ. ಅದಕ್ಕೆ ಹೂವಿನ ಹಾರ ಹಾಕಿದ. ಆ ಭಾವಚಿತ್ರದ ಮುಂದೆ ನಿಂತು ಮಾತಾಡಿದ. ಹಳೆಯದೆಲ್ಲಾ ನೆನಪಾಗಿ ಕಣ್ತುಂಬಿಕೊಂಡ. ಹೀಗಿರುವಾಗಲೇ ಯಾರೋ ಬಾಗಿಲು ಬಡಿದಂತಾಯಿತು. ಹಿಂದೆಯೇ -ಸ್ವಾಮೀ, ಬಾಗಿಲು ತೆಗೀತೀರಾ ಎಂಬ ದನಿಯೂ ಕೇಳಿಬಂತು. ಗಣಾಚಾರಿ, ಅನುಮಾನಿಸುತ್ತಲೇ ಬಂದು ಬಾಗಿಲು ತೆರೆದ. ಎದುರಿಗೆ ಅಪರಿಚಿತ ಯುವಕನನ್ನು ಕಂಡು, ನೀವು ಯಾರು, ನನ್ನಿಂದ ಏನಾಗಬೇಕಿತ್ತು ಎಂದು ಪ್ರಶ್ನಿಸಿದ.
‘ಯಜಮಾನರೇ ನಾನೊಬ್ಬ ಯೋಧ. ನಿಮ್ಮ ಮಗನಿಂದಾಗಿ ಜೀವ ಉಳಿಸಿಕೊಂಡವ ನಾನು. ನನ್ನಂಥ ಹನ್ನೆರಡು ಮಂದಿಯ ಜೀವ ಉಳಿಸಿದ ಧೀರ ನಿಮ್ಮ ಮಗ. ಅವನ ಅಗಲಿಕೆ ನಿಮಗೆ ಎಂಥ ನೋವು ಕೊಟ್ಟಿದೆ ಎಂದು ನಾನು ಅಂದಾಜು ಮಾಡಿಕೊಳ್ಳಬಲ್ಲೆ. ಇವತ್ತು ಅವನ ಹುಟ್ಟುಹಬ್ಬದ ದಿನ ಎಂಬುದನ್ನೂ ನಾನು ಬಲ್ಲೆ. ಮತ್ತೊಂದು ಮುಖ್ಯ ವಿಷಯ. ಏನೆಂದರೆ, ನಾನೂ ಒಬ್ಬ ಚಿತ್ರ ಕಲಾವಿದ. ಈ ಸಂಗತಿ ನಿಮ್ಮ ಮಗನಿಗೂ ಗೊತ್ತಿತ್ತು. ನನ್ನದೊಂದು ಚಿತ್ರ ಬರೆದಿಡು. ನನ್ನ ಹುಟ್ಟುಹಬ್ಬದ ದಿನ ನಿನ್ನನ್ನು ಊರಿಗೆ ಕರೆದೊಯ್ಯುತ್ತೇನೆ. ಹುಟ್ಟುಹಬ್ಬದ ನೆಪದಲ್ಲಿ ನನಗೆ ಈ ಕಾಣಿಕೆ ಕೊಡು. ಹಾಗೆ ಮಾಡಿದರೆ, ಹಳ್ಳಿಯಲ್ಲಿರುವ ನಮ್ಮ ತಂದೆಯ ಕಂಗಳಲ್ಲಿ ಸಾವಿರ ಮಿಂಚು ಕೊರೈಸಿದಾಗ ಕಾಣುವಂಥ ಸಂತೋಷ ಕಾಣಿಸುತ್ತದೆ. ನಮ್ಮ ತಂದೆ ಕೂಡ ಹೆಸರಾಂತ ಶಿಲ್ಪಿ. ನಮ್ಮ ಮನೆಯೆಂಬುದು ಕಲಾಕೃತಿಗಳ ಸಂಗ್ರಹಾಲಯದಂತಿದೆ’ ಎಂದೆಲ್ಲ ನಿಮ್ಮ ಮಗನೇ ಹೇಳಿದ್ದ. ಅವನ ಅಭಿಲಾಷೆಯಂತೆಯೇ ಚಿತ್ರ ಬರೆದು ತಂದಿದ್ದೇನೆ. ನೀವು ಕೃಪೆ ಮಾಡಿ ಸ್ವೀಕರಿಸಬೇಕು ಎಂದವನೇ ಆಳೆತ್ತರದ ಕಲಾಕೃತಿಯೊಂದನ್ನು ನೀಡಿದ.
ನಿಜಕ್ಕೂ ಆ ಚಿತ್ರ ಅದ್ಭುತವಾಗಿತ್ತು. ಅದನ್ನು ನೋಡಿ ಆನಂದಪರವಶನಾದ ಗಣಾಚಾರಿ, ಕಂದಾ, ಮಗೂ, ದೊರೇ ಎಂದು ಚೀರುತ್ತಾ, ಕಣ್ಣೀರಾಗಿ ಹೋದ. ನಂತರ ಚೇತರಿಸಿಕೊಂಡು ಮಗನ ಗೆಳೆಯನನ್ನು ಆದರಿಸಿದ. ಹೊಗಳಿದ. ಪ್ರೀತಿಯಿಂದ ಮಾತಾಡಿಸಿದ. ತನ್ನ ಸಂಗ್ರಹದಲ್ಲಿದ್ದ ಅಪರೂಪದ ಕಲಾಕೃತಿಯೊಂದನ್ನು ನೀಡಿ, ಇದು ನನ್ನ ಹಾಗೂ ಮಗನ ನೆನಪಾಗಿ ನಿಮ್ಮಲ್ಲಿರಲಿ ಎಂದು ಬೀಳ್ಕೊಟ್ಟ. ಈ ಸೈನಿಕ ಬರೆದುಕೊಂಡು ಬಂದಿದ್ದನಲ್ಲ, ಆ ಚಿತ್ರದಲ್ಲಿದ್ದ ಯೋಧ ಹೆಗಲ ಮೇಲೆ ಇಬ್ಬಿಬ್ಬರನ್ನು ಹೊತ್ತೊಯ್ಯುತ್ತಿದ್ದ. ಗುಂಡೇಟಿನ ಕಾರಣದಿಂದ ಅವನ ಮೈಯಿಂದ ರಕ್ತ ಹರಿಯುತ್ತಿತ್ತು. ಮುಖ ವಿಕಾರವಾಗಿತ್ತು. ಶತ್ರುಗಳಿಂದ ತಪ್ಪಿಸಿಕೊಂಡು ಬರುವ ಸಂದರ್ಭದಲ್ಲಿ ನಡೆದ ಹೊಡೆದಾಟದಲ್ಲಿ ಮುಂದಿನ ಹಲ್ಲುಗಳೇ ಉದುರಿ ಹೋಗಿದ್ದವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಕಲಾಕೃತಿಯಲ್ಲಿದ್ದ ಯೋಧ ಭಯ ಹುಟ್ಟಿಸುವಂತಿದ್ದ. ಊಹುಂ, ಒಂದೇ ಒಂದು ಕ್ಷಣಕ್ಕೂ ಗಣಾಚಾರಿಗೆ ಇಂಥ ಭಾವನೆ ಬರಲಿಲ್ಲ. ಆಕಸ್ಮಿಕವಾಗಿ ಆಗೊಮ್ಮೆ ಈಗೊಮ್ಮೆ ಮನೆಗೆ ಬಂದವರು ಆ ಚಿತ್ರವನ್ನು ಕಂಡು ಬೆಚ್ಚುತ್ತಿದ್ದರು. ಇದನ್ನು ನೋಡಿದ್ರೆ ಹೆದರಿಕೆ ಆಗುತ್ತೆ. ಅದನ್ನು ಎತ್ತಿ ಬೇರೊಂದು ಕಡೆಯಲ್ಲಿಡಿ ಎಂದು ಸಲಹೆ ಮಾಡಿದರು. ಗಣಾಚಾರಿ ಯಾರ ಮಾತೂ ತನಗೆ ಕೇಳಿಸಲೇ ಇಲ್ಲ ಎಂಬಂತೆ ಉಳಿದುಬಿಟ್ಟ. ಹೆಚ್ಚಿನ ಸಂದರ್ಭದಲ್ಲಿ ಮಗನ ಚಿತ್ರವನ್ನೇ ತದೇಕಚಿತ್ತದಿಂದ ನೋಡುತ್ತಾ ಕೂತು ಬಿಡುತ್ತಿದ್ದ. ಹೀಗೇ ಆರೇಳು ತಿಂಗಳು ಕಳೆದವು. ಅದೊಂದು ಸಂಜೆ, ಮಗನ ಕಲಾಕೃತಿಯ ಮುಂದೆ ಕುಳಿತೇ ಗಣಾಚಾರಿ ಸತ್ತುಹೋದ.
ಒಂದು ರೀತಿಯಲ್ಲಿ ಅನಾಥನಂತೆ ಸತ್ತು ಹೋದ ಈ ಪ್ರಖ್ಯಾತ ಕಲಾವಿದನ ಮನೆಗೆ, ಅಂತ್ಯಸಂಸ್ಕಾರದ ನೆಪದಲ್ಲಿ ಬಂದವರಿಗೆ ಅಚ್ಚರಿಯೊಂದು ಕಾದಿತ್ತು. ಸಾಯುವ ಮುನ್ನ ಗಣಾಚಾರಿ ಒಂದು ಪತ್ರ ಬರೆದಿಟ್ಟಿದ್ದ. ಅದರಲ್ಲಿ ತನ್ನ ಮನೆಯಲ್ಲಿರುವ ಎಲ್ಲ ಕಲಾಕೃತಿಗಳನ್ನೂ ಹರಾಜು ಹಾಕಬೇಕೆಂಬ ವಿನಂತಿಯಿತ್ತು. ಮತ್ತೊಂದು ವಿಶೇಷವೆಂದರೆ, ಹರಾಜು ಪ್ರಕ್ರಿಯೆ ಹೇಗೆ ನಡೆಯಬೇಕೆಂದೂ ಆತ ವಿಲ್ ಬರೆದು ಇಟ್ಟಿದ್ದ.
ರಾಜಾ ರವಿವರ್ಮರು ಬರೆದದ್ದೂ ಸೇರಿದಂತೆ, ದೇಶ ವಿದೇಶಗಳ ಖ್ಯಾತ ಕಲಾವಿದರ ಕಲಾಕೃತಿಗಳೇ ಅಲ್ಲಿದ್ದವು. ಗಣಾಚಾರಿಯ ಆಸೆಯಂತೆ ಅವುಗಳನ್ನು ಹರಾಜು ಹಾಕಲು ಪ್ರಕಟಣೆ ಹೊರಡಿಸಿದ್ದಾಯ್ತು. ಒಂದು ದಿನಾಂಕವನ್ನೂ ನಿಗದಿ ಮಾಡಿದ್ದಾಯ್ತು. ಅಪರೂಪದ ಕಲಾಕೃತಿಗಳನ್ನು ಖರೀದಿಸಲು ಶ್ರೀಮಂತರೆಲ್ಲ ನುಗ್ಗಿ ಬಂದರು. ಸರ್ಕಾರದ ಕಡೆಯಿಂದ ಹರಾಜು ಪ್ರಕ್ರಿಯೆ ನಡೆಸಲು ಬಂದಿದ್ದ ಅಧಿಕಾರಿ, ವಿಕಾರವಾಗಿ ಕಾಣುತ್ತಿದ್ದ. ಗಣಾಚಾರಿಯ ಮಗನ ಕಲಾಕೃತಿಯನ್ನು ಮುಂದಿಟ್ಟು ಹೇಳಿದ: ಈ ಚಿತ್ರಕ್ಕೆ 10 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ. ಇಷ್ಟವಿರುವವರು 10 ಲಕ್ಷದಿಂದ ಆರಂಭಿಸಿ ಬೆಲೆ ಕೂಗಬಹುದು ಅಂದ. ಶ್ರೀಮಂತರೆಲ್ಲ ಒಕ್ಕೊರಲಿನಿಂದ ಅದು ಭಯ ಹುಟ್ಟಿಸುವಂತಿದೆ. ನಮಗಂತೂ ಅದು ಬೇಕಿಲ್ಲ. ಇಲ್ಲಿ ನೂರಾರು ಕಲಾಕೃತಿಗಳಿವೆ. ಅವುಗಳನ್ನು ಹರಾಜು ಹಾಕಲು ಮುಂದಾಗು ಎಂದು ಒತ್ತಾಯಿಸಿದರು. ಈ ಅಧಿಕಾರಿ ಒಪ್ಪಲಿಲ್ಲ. ಈ ಕಲಾಕೃತಿಯ ಮಾರಾಟದ ನಂತರವೇ ಮುಂದಿನ ಮಾತು ಎಂದು ಪಟ್ಟುಹಿಡಿದ. ಆದರೆ, ವಿಕಾರ ಮುಖದ, ರಕ್ತ ಸುರಿಯುತ್ತಿದ್ದಂಥ ದೇಹದ, ಮುಂದಿನ ಹಲ್ಲುಗಳೇ ಇಲ್ಲದಿದ್ದ ಸೈನಿಕನ ಚಿತ್ರದ ಮೇಲೆ ಯಾರೂ ಆಸಕ್ತಿ ತೋರಲಿಲ್ಲ. ಕಡೆಗೂ ಒಬ್ಬ ಮುಂದೆ ಬಂದು 8.50 ಲಕ್ಷ ರೂ. ಎಂದ. ಇದಾಗಿ ಇಪ್ಪತ್ತು ನಿಮಿಷ ಕಳೆದರೂ ಯಾರೊಬ್ಬರೂ ಮಾತಾಡಲಿಲ್ಲ. ಹಾಗಾಗಿ, ಅದೇ ಬೆಲೆಗೆ ಮಾರಾಟ ಮಾಡಿದ್ದಾಯಿತು. ಎರಡು ನಿಮಿಷ ಸುಮ್ಮನಿದ್ದ ಅಧಿಕಾರಿ, ನಂತರ ಗಂಭೀರವಾಗಿ ಹೇಳಿದ: ‘ಹರಾಜು ಪ್ರಕ್ರಿಯೆ ಮುಗಿದಿದೆ. ಮೊದಲ ಕಲಾಕೃತಿಯನ್ನು ಕೊಂಡವರಿಗೇ ಉಳಿದೆಲ್ಲ ಕಲಾಕೃತಿಗಳೂ ಸೇರುತ್ತವೆ…’
ಈ ಮಾತು ಕೇಳಿ, ಬಂದಿದ್ದ ಶ್ರೀಮಂತರೆಲ್ಲ ಗಲಾಟೆ ಆರಂಭಿಸಿದರು. ಇದು ಮೋಸ ಎಂದು ವಾಗ್ವಾದಕ್ಕೆ ನಿಂತರು. ಆಗ, ಕಲಾವಿದ ಗಣಾಚಾರಿ ಬರೆದಿದ್ದ ವಿಲ್್ನ ಪ್ರತಿಯನ್ನು ಅಧಿಕಾರಿಗಳು ಎಲ್ಲರ ಎದುರಿಗಿಟ್ಟರು. ಅದರಲ್ಲಿ ಹೀಗಿತ್ತು: ‘ಬದುಕಲ್ಲಿ ನನಗೆ ಮಗನೇ ಸರ್ವಸ್ವವಾಗಿದ್ದ. ಅವನಲ್ಲದೆ ನನಗೆ ಬೇರೊಂದು ಜಗತ್ತೇ ಇರಲಿಲ್ಲ, ಆತ ಸತ್ತುಹೋದ ನಂತರವೂ ಈ ಭಾವಚಿತ್ರ ಹಲವರಿಗೆ ಭಯ ಹುಟ್ಟಿಸುವಂತಿರಬಹುದು. ಆದರೆ, ಇದರಲ್ಲಿ ನನಗೆ ಮಗ ಕಾಣಿಸುತ್ತಾನೆ. ಆತನ ಕಣ್ಣು ಮಾತಾಡುತ್ತವೆ. ಸುರಿಯುತ್ತಿರುವ ರಕ್ತ ಕತೆ ಹೇಳುತ್ತದೆ. ಯಾರಾದರೂ ಈ ಚಿತ್ರವನ್ನು ಜೋಪಾನವಾಗಿ ಇಡಲು ಮುಂದಾದರೆ ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ಚಿತ್ರವನ್ನು ಕೊಂಡವರಿಗೇ ಉಳಿದೆಲ್ಲ ಚಿತ್ರಗಳ ಹಕ್ಕನ್ನೂ ಬಿಟ್ಟು ಕೊಡುತ್ತೇನೆ. ಏಕೆಂದರೆ, ನನ್ನ ಪಾಲಿಗೆ ಮಗನ ಚಿತ್ರಕ್ಕಿರುವ ಬೆಲೆ ಇನ್ಯಾವ ಕಲಾಕೃತಿಗೂ ಇಲ್ಲ. ಹೌದಲ್ಲವಾ? ಮಕ್ಕಳ ಮಮತೆಯ ಮುಂದೆ, ಮಕ್ಕಳ ಸ್ಮರಣೆಯ ಮುಂದೆ ಬೇರಾವ ಆಸ್ತಿಗೂ ಬೆಲೆ ಇರುವುದಿಲ್ಲ…’
ಇದನ್ನು ಓದುತ್ತಿದ್ದಂತೆ ಅಲ್ಲಿದ್ದ ಶ್ರೀಮಂತರೆಲ್ಲ ಮಾತು ಹೊರಡದೆ ನಿಂತುಬಿಟ್ಟರು…

No comments:

Post a Comment