ಹೆಸರು: ಸರ್ವಾನಂದ ಕೌಲ್
ಸ್ಥಳ: ಶಾಲಿ, ಅನಂತ್‌ನಾಗ್ ಜಿಲ್ಲೆಯ ಒಂದು ಗ್ರಾಮ
ವೃತ್ತಿ: ನಿವೃತ್ತ ಶಿಕ್ಷಕ ಹಾಗೂ ಕಾಶ್ಮೀರಿ ಕವಿ
ಸರ್ವಾನಂದ್ ಕೌಲ್ ಅವರು "ಪ್ರೇಮಿ"ಯೆಂದೇ ಪ್ರಚಲಿತರಾಗಿದ್ದರು. ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದ ಅವರದ್ದು ಕಾಶ್ಮೀರಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕವಯತ್ರಿ ರೂಪಾ ಭವಾನಿಯವರ ಜೀವನಗಾಥೆ ಬರೆದಿದ್ದರು, ಸಂತ ಮಿರ್ಜಾ ಕಕ್ರ ಅವರ ಜೀವನಚರಿತ್ರೆ ರಚಿಸಿದ್ದರು. ಶ್ರೀಮದ್ ಭಗವದ್‌ಗೀತೆಯನ್ನು ಕಾಶ್ಮೀರಿಗೆ ಹಾಗೂ ಉರ್ದುಗೆ ಭಾಷಾಂತರ ಮಾಡಿದ ಹೆಗ್ಗಳಿಕೆ ಹೊಂದಿದ್ದರು. 1924ರಲ್ಲಿ ಜನಿಸಿದ್ದ ಅವರು ಮಹಾತ್ಮ ಗಾಂಧಿಯಿಂದ ಪ್ರಭಾವಿತರಾಗಿದ್ದರು ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾದರೂ ಜಾತ್ಯತೀತತೆಯಲ್ಲಿ ಅಚಲ ನಂಬಿಕೆ ಹೊಂದಿದ್ದರು. ಅದಕ್ಕೆ ಉದಾಹರಣೆಯೆಂಬಂತೆ 1953ರಲ್ಲಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದಾಗ, 1963ರಲ್ಲಿ ಹಜರತ್ ಬಾಲ್ ಮಸೀದಿಯಿಂದ ಪ್ರವಾದಿ ಮೊಹಮ್ಮದರ ಪವಿತ್ರ ಕುರುಹು ಕಣ್ಮರೆಯಾದಾಗ, 1965ರಲ್ಲಿ ಪಾಕ್ ಆಕ್ರಮಣ ಮಾಡಿದಾಗ, 1967ರ ಪಂಡಿತರ ಪ್ರತಿಭಟನೆ ಸಂದರ್ಭದಲ್ಲಿ, 1968ರ ಅನಂತ್‌ನಾಗ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಪ್ರೇಮಿ ಲೇಖನಿಯನ್ನು ಖಡ್ಗದಂತೆ ಝಳಪಿಸಿ ಪ್ರತಿಭಟಿಸಿದ್ದರು.
ಇತ್ತ 1965 ಹಾಗೂ 1971 ಸೋಲಿನ ನಂತರ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಮುಂದಾಯಿತು. ಸ್ವಾತಂತ್ರ್ಯಾನಂತರ ಇಸ್ಲಾಮಿಕ್ ಮೂಲಭೂತವಾದದ ಮೊದಲ ಪ್ರಯೋಗ ಕಾಶ್ಮೀರದಲ್ಲಿ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿನ ಹಿಂದುಗಳನ್ನು ಹೆಕ್ಕಿ ಕೊಲ್ಲಲು ಆರಂಭಿಸಿದರು. ಇಡೀ ಕಾಶ್ಮೀರದಾದ್ಯಂತ ಹಿಂದುಗಳು ಭಯಭೀತರಾದರು. ಬದುಕುಳಿಯಬೇಕೆಂದರೆ ಕಣಿವೆಯಿಂದ ಖಾಲಿ ಮಾಡಬೇಕು ಎಂಬಂತಾಯಿತು. 1990, ಜನವರಿ 19ರಂದು ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಯ ಮೈಕುಗಳಿಂದ ಮೊಳಗಿತು. ಆದರೂ ಪ್ರೇಮಿಯವರ ಜಾತ್ಯತೀತ ಮನಸ್ಸು ನೆರೆಹೊರೆಯ ಮುಸ್ಲಿಮರು ತಮ್ಮನ್ನು ರಕ್ಷಿಸುತ್ತಾರೆಂಬ ಭದ್ರತಾ ಭಾವನೆಯ ಮೊರೆಹೋಯಿತು. ಅದು 1990, ಏಪ್ರಿಲ್ 29. ಮೂವರು ಮುಸುಕುಧಾರಿ ಭಯೋತ್ಪಾದಕರು ಪ್ರೇಮಿಯವರ ಮನೆಯ ಕದ ಒಡೆದು ಒಳಬಂದರು. ಮನೆ ಮಂದಿಯೆಲ್ಲ ಒಂದು ರೂಮಿನೊಳಗೆ ಸೇರಿ ಎಂದು ಸೂಚಿಸಿದರು. ಮನೆಯೊಳಗಿರುವ, ಮೈಮೇಲಿರುವ ಎಲ್ಲ ಅಮೂಲ್ಯ ವಸ್ತುಗಳನ್ನು, ಚಿನ್ನ, ಆಭರಣಗಳನ್ನು, ಹಣ, ಸೀರೆ, ಶಾಲುಗಳನ್ನು ಕಲೆಹಾಕಿ ಎಂದರು. ಮೈಮೇಲಿದ್ದ ಆಭರಣಗಳನ್ನೂ ಬಿಡಲಿಲ್ಲ. ಎಲ್ಲವನ್ನೂ ಸೂಟ್‌ಕೇಸ್‌ಗೆ ತುಂಬಿಸಿ, ಅದನ್ನು ಹೊತ್ತು ನಮ್ಮನ್ನು ಹಿಂಬಾಲಿಸು ಎಂದು ಪ್ರೇಮಿಗೆ ಸೂಚಿಸಿದರು. ಮನೆಯವರು ಆತಂಕಕ್ಕೊಳಗಾದರು. ಅವರನ್ನುದ್ದೇಶಿಸಿ, "ಆತನಿಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ, ಸದ್ಯದಲ್ಲೇ ವಾಪಸ್ ಕಳುಹಿಸುತ್ತೇವೆ" ಎಂದರು ಭಯೋತ್ಪಾದಕರು. ಅದನ್ನು ಕೇಳಿದ ಪ್ರೇಮಿಯವರ 27 ವರ್ಷದ ಮಗ ಪಂಡಿತ್ ವೀರೇಂದರ್ ಕೌಲ್ ತಾನೂ ಕೂಡ ಬರುವುದಾಗಿ ಹೊರಟ. ಎರಡು ದಿನ ಕಳೆದರೂ ಅಪ್ಪ ಮಗ ಇಬ್ಬರೂ ವಾಪಸ್ಸಾಗಲಿಲ್ಲ.
ಎರಡು ದಿನಗಳ ನಂತರ ಹೃದಯವಿದ್ರಾವಕ ಸ್ಥಿತಿಯಲ್ಲಿದ್ದ ಎರಡು ಶವಗಳು ಸಿಕ್ಕವು!
ಪ್ರೇಮಿ ಪ್ರತಿ ದಿನ ಬೆಳಗ್ಗೆ ಎದ್ದು ದೇವರಿಗೆ ವಂದಿಸುವಾಗ ಹಣೆಗೆ ಗಂಧ ಹಚ್ಚಿಕೊಳ್ಳುತ್ತಿದ್ದರು. ಭಯೋತ್ಪಾದಕರು ಆ ಜಾಗವನ್ನು ರಾಡಿನಿಂದ ಸೀಳಿದ್ದರು. ಇಡೀ ದೇಹದ ಭಾಗಗಳನ್ನೂ ಸಿಗರೇಟಿನಿಂದ ಸುಟ್ಟಿದ್ದರು. ಅಪ್ಪ ಮಗ ಇಬ್ಬರ ಕಣ್ಣುಗಳನ್ನೂ ಕಿತ್ತಿದ್ದರು. ಕೈಕಾಲುಗಳನ್ನು ಮುರಿದುಹಾಕಿದ್ದರು. ಈ ಮನುಕುಲ ಕಂಡ ಮಹಾನ್ ರಕ್ಕಸ ಹಿಟ್ಲರ್‌ನ ಪಡೆಗಳಿಗಿಂತಲೂ ಪೈಶಾಚಿಕವಾಗಿ ಪ್ರೇಮಿ ಹಾಗೂ ಅವರ ಪುತ್ರನನ್ನು ಕೊಲೆಗೈದಿದ್ದರು.
ತೇಜ್ ಕೃಷ್ಣನ್ ರಾಜ್ದಾನ್
ಅಶೋಕ್ ಕುಮಾರ್ ಖಾಜಿ
ನವೀನ್ ಸಪ್ರೂ
ಪಿ.ಎನ್. ಕೌಲ್
ಬಿ.ಕೆ. ಗಂಜೂ
ದೀಪಕ್ ಗಂಜೂ
ಭೂಷಣ್ ಲಾಲ್ ರೈನಾ
ರಮೇಶ್ ಕುಮಾರ್ ರೈನಾ
ದೀನನಾಥ್ ಮುಜೂ
ಗಿರಿಜಾ ಟಿಕೂ
ಅಶೋಕ್ ಸೂರಿ
ಪ್ರೊ. ಕೆ.ಎಲ್. ಗಂಜೂ
ಚುನಿ ಲಾಲ್ ಶಲ್ಲಾ
ಇಂಥ ಒಬ್ಬೊಬ್ಬರ ಸಾವೂ ಒಂದೊಂದು ಕರುಣಾಜನಕ ಕಥೆಯನ್ನು ಹೇಳುತ್ತವೆ. ಬಾಲಿವುಡ್ ನಟ ಸಂಜಯ್ ಸೂರಿ ಗೊತ್ತಲ್ಲವೆ? ಆತ ಕೂಡಾ ಕಾಶ್ಮೀರಿಯೇ. ತನ್ನ ತಂದೆಯ ಹತ್ಯೆ ತನ್ನೆದುರೇ ನಡೆದಿದ್ದನ್ನು ಆತ ತೋಡಿಕೊಂಡ ಸಂದರ್ಶನವನ್ನು ಓದಿದರೇ ಮನಸ್ಸು ಭಾರವಾಗುತ್ತದೆ. ಕಾಶ್ಮೀರದಿಂದ ಬಲಾತ್ಕಾರವಾಗಿ ಹೊರದಬ್ಬಿಸಿಕೊಂಡವರ, ಹೆದರಿ ಕಾಲ್ಕಿತ್ತವರ ಸಂಖ್ಯೆ ಸರಿಸುಮಾರು 6 ಲಕ್ಷವಾದರೆ, ಕೊಲೆಯಾದವರ, ಅತ್ಯಾಚಾರಕ್ಕೊಳಗಾದವರ, ಹೆದರಿ ಮತಾಂತರಗೊಂಡವರ ಸಂಖ್ಯೆ ಅದೆಷ್ಟೋ! ಕಾಶ್ಮೀರದಲ್ಲಿ ಕೊಲೆಯಾದ ಪಂಡಿತರ ಸಂಖ್ಯೆ ಕೊಡಿ ಎಂದು ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನೇ ಜಮ್ಮು-ಕಾಶ್ಮೀರ ಸರ್ಕಾರ ತಿರಸ್ಕಾರ ಮಾಡಿಬಿಟ್ಟಿತು. ಇಂಥದ್ದೊಂದು ತಿರಸ್ಕಾರದ ಹಿಂದಿರುವ ಭಯ ಏನೆಂದುಕೊಂಡಿರಿ? ಲೆಕ್ಕ ಕೊಟ್ಟರೆ ಮುಸ್ಲಿಂ ಮೂಲಭೂತವಾದಕ್ಕೆ ಸಿಕ್ಕಿ ಸತ್ತ ಅಗಣಿತ ಹಿಂದುಗಳ ದುಸ್ಥಿತಿ ಜಗತ್ತಿಗೆ ಗೊತ್ತಾಗುತ್ತದೆ ಎಂಬ ಭಯವೇ ಅಲ್ಲವೆ? 790 ಮುಸಲ್ಮಾನರನ್ನು ಬಲಿತೆಗೆದುಕೊಂಡ ಗುಜರಾತ್ ಹಿಂಸಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ಕಲ್ಪನೆಗೂ ಮೀರಿದಷ್ಟು, ಲೆಕ್ಕಕ್ಕೂ ಬಾರದಷ್ಟು ಪಂಡಿತರ, ಹಿಂದುಗಳ ಜೀವವನ್ನು ಬಲಿತೆಗೆದುಕೊಂಡ ಕಾಶ್ಮೀರಿ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಎಷ್ಟು ಜನ ಮಾತನಾಡುತ್ತಾರೆ ಹೇಳಿ? ಗುಜರಾತ್ ಹಿಂಸಾಚಾರದ ಬಗ್ಗೆ ಜಗತ್ತಿನ ಗಮನ ಸೆಳೆಯುವ, ಹಿಂದುಗಳೆಂಥ ಕ್ರೂರಿಗಳೆಂದು ಚಿತ್ರಿಸುವ ಸಲುವಾಗಿಯೇ "ಫೈನಲ್ ಸಲ್ಯೂಷನ್", "ಫಿರಾಕ್", "ಪರ್ಝಾನಿಯಾ"ದಂಥ ಇಂಗ್ಲಿಷ್, ಹಿಂದಿ ಚಿತ್ರಗಳು, ಅವುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದವು. ಮಲೆಯಾಳದಲ್ಲಿ "ಕಥಾವಶೇಷನ್", "ವಿಲಪಾಂಗಳಕ್ಕಪುರಂ", "ಭೂಮಿಯುಡೆ ಅವಕಾಶಿಕುಲ್" ಮುಂತಾದ ಚಿತ್ರಗಳು ಬಂದವು. ಚೇತನ್ ಭಗತ್ ಅವರ "ತ್ರೀ ಸ್ಟೇಟ್ಸ್" ಆಧರಿಸಿ ಬಂದ ಹಿಂದಿ ಚಿತ್ರ "ಕಾಯ್ ಪೋ ಚೆ"ನಲ್ಲೂ ಅನಗತ್ಯವಾಗಿ ಗುಜರಾತ್ ಘಟನೆಯನ್ನು ಎಳೆದುತಂದರು. ಆದರೆ ಕಾಶ್ಮೀರಿ ಪಂಡಿತರ ಬಗ್ಗೆ ಹೊರಗಿನ ಯಾರು ಒಂದು ಚಿತ್ರ ತಯಾರಿಸಿದ್ದಾರೆ, ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ ಹೇಳಿ? ಅಷ್ಟೇಕೆ, ಕಾಶ್ಮೀರಿಯೇ ಆದ ಪತ್ರಕರ್ತ ರಾಹುಲ್ ಪಂಡಿತ ಕಳೆದ ವರ್ಷ ಬರೆದ "ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್" ಪುಸ್ತಕದ ಬಗ್ಗೆ ಒಂದು ಸಣ್ಣ ಟೀವಿ ಚರ್ಚೆಯೂ ನಡೆಯಲಿಲ್ಲ! ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಸುಮಾರು 600 ಜನರಿಗೆ ಶಿಕ್ಷೆಯಾಗಿದೆ. ಆದರೆ ಕಾಶ್ಮೀರಿ ಪಂಡಿತರ ರಕ್ತಹೀರಿದವರ ವಿರುದ್ಧ ಒಂದೇ ಒಂದು ಎಫ್‌ಐಆರ್ ಕೂಡಾ ದಾಖಲಾಗಿಲ್ಲ ಎಂದರೆ ನಂಬುತ್ತೀರಾ?! ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮೋದಿಗೆ ಅಮೆರಿಕ ವೀಸಾ ನಿರಾಕರಿಸುವಂತೆ ಮಾಡಿದರು. ಆದರೆ 6 ಲಕ್ಷ ಕಾಶ್ಮೀರಿ ಪಂಡಿತರು ತಾಯ್ನೆಲದಲ್ಲೇ ನಿರಾಶ್ರಿತರಾಗಲು ಅವಕಾಶ ಮಾಡಿಕೊಟ್ಟ, ಸಾವಿರಾರು ಕಾಶ್ಮೀರಿ ಪಂಡಿತ ಕೊಲೆ ನಡೆಯುವಾಗ ಕಣ್ಣುಮುಚ್ಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಗ್ಗೆ ಧ್ವನಿಯೆತ್ತಿದ ಒಬ್ಬ ನರನನ್ನು ತೋರಿಸಿ ನೋಡೋಣ? ಮೂರೂವರೆ ಸಾವಿರ ಸಿಖ್ಖರ ಹತ್ಯಾಕಾಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಹಾಗೂ ಕಾಶ್ಮೀರಿಗರ ದುಸ್ಥಿತಿಗೆ ಕಾರಣರಾದ ಆಗಿನ ಪ್ರಧಾನಿ ರಾಜೀವ್ ಗಾಂಧಿಯನ್ನು ಯಾರಾದರೂ ದೂರಿದ್ದನ್ನು ನೋಡಿದ್ದೀರಾ? ರಾಜೀವ್ ಗಾಂಧಿ ಮಾಡಿದ್ದೇನು ಸಾಮಾನ್ಯ ಅಪಚಾರವೇ?
"ಆತ್ಮೀಯ ಶ್ರೀ ರಾಜೀವ್ ಗಾಂಧಿ,
ನಾನು ನಿಮಗೆ ನೆನಪಿಸಿಕೊಡಬೇಕಾ ಹೇಳಿ? ಕಾಶ್ಮೀರದಲ್ಲಿ ಬಿರುಗಾಳಿಯೊಂದು ಸೃಷ್ಟಿಯಾಗುತ್ತಿರುವುದರ ಬಗ್ಗೆ 1988ರ ಆರಂಭದಿಂದಲೇ ನಿಮಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಲಾರಂಭಿಸಿದ್ದೆ. ಆದರೆ ನಿಮಗಾಗಲಿ ಅಥವಾ ನಿಮ್ಮ ಸುತ್ತ ಅಧಿಕಾರವನ್ನು ಝಳಪಿಸುತ್ತಿರುವ ಭಟ್ಟಂಗಿಗಳಿಗಾಗಲಿ ಆ ಸಂದೇಶಗಳನ್ನು ನೋಡುವುದಕ್ಕೆ ಸಮಯವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದೆಂದರೆ ಐಸಿಹಾಸಿಕ ಪಾಪ ಮಾಡಿದಂತೆ ಎಂಬ ಸೂಚನೆ ಅಲ್ಲಿತ್ತು. ಭಯಾನಕ ಶಸ್ತ್ರಾಸ್ತ್ರಗಳು ಆಗಮಿಸಿವೆ ಹಾಗೂ ಹೆಚ್ಚಿನವು ಆಗಮಿಸುತ್ತಿವೆ ಎಂದು ತಿಳಿಸಿದ್ದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮತ್ತೆಂದೂ ಹಿಂದಿರುಗಲಾಗದ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು 1989 ಏಪ್ರಿಲ್‌ನಲ್ಲಿ ನಿಮಗೆ ಬರೆದಿದ್ದೆ. ಆದರೆ ನಿಮ್ಮ ನಿರಾಸಕ್ತಿ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತದೆ. ಆಶ್ಚರ್ಯವೆಂದರೆ ಇಂದು ಕಾಶ್ಮೀರದ ಸ್ಥಿತಿಗೆ ನಾನೇ ಕಾರಣವೆಂದು ನಿಮ್ಮ ಭಟ್ಟಂಗಿಗಳಾದ ಮಣಿಶಂಕರ್ ಅಯ್ಯರ್, ಎನ್ಕೆಪಿ ಸಾಳ್ವೆ, ಶಿವಶಂಕರ್ ತುತ್ತೂರಿ ಊದುತ್ತಿದ್ದಾರೆ. ನಿಮ್ಮ ಮತ್ತೊಬ್ಬ ಶಿಷ್ಯ ಫಾರೂಕ್ ಅಬ್ದುಲ್ಲಾ ಬಿಡುಗಡೆ ಮಾಡಿದ 70 ಕುಖ್ಯಾತ ಭಯೋತ್ಪದಕರೇ ಇಷ್ಟೆಲ್ಲಾ ಅವಾಂತರ ಸೃಷ್ಟಿಸುತ್ತಿದ್ದು ಅದಕ್ಕೂ ರಾಜ್ಯಪಾಲನಾದ ನಾನೇ ಕಾರಣ ಎನ್ನುತ್ತೀರಾ? 1990, ಜನವರಿ 19ರಂದು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೊದಲೇ ಮಾನಸಿಕವಾಗಿ ಭಾರತ ಶರಣಾಗಿತ್ತು. 1600 ಹಿಂಸಾಕೃತ್ಯಗಳು ನಡೆದಿದ್ದವು. 351 ಬಾಂಬ್ ಸ್ಫೋಟಗಳು ಸಂಭವಿಸಿದ್ದವು, 72 ದೊಂಬಿಗಳು ನಡೆದಿದ್ದವು. ಆದರೆ ನೀವು ಯಾವತ್ತೂ ತಲೆಕೆಡಿಸಿಕೊಳ್ಳಲೇ ಇಲ್ಲ.
ಜಗಮೋಹನ್
1990, ಏಪ್ರಿಲ್ 21"
ಎರಡು ಬಾರಿ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಆಗ ನಡೆದ ಘಟನೆಗಳು, ಸೃಷ್ಟಿಯಾಗಿದ್ದ ಪರಿಸ್ಥಿತಿಯನ್ನು ತಮ್ಮ "ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್"ನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇಷ್ಟಾಗಿಯೂ ಅಂದು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿಯನ್ನಾಗಲಿ, ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾರನ್ನಾಗಲಿ, ಕಾಶ್ಮೀರಿ ಪಂಡಿತರನ್ನು ಹೊರದಬ್ಬಿದ ಮೂಲಭೂತವಾಗಿ ಮನಸ್ಸುಗಳನ್ನಾಗಲಿ ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಇನ್ನೊಂದು ಗಮನಾರ್ಹ ಅಂಶ ನೋಡಿ: ಹಿಂದುಗಳು ಬಹುಸಂಖ್ಯಾತರಾಗಿರುವ ಜಮ್ಮು ಗಾತ್ರದಲ್ಲಿ ಕಾಶ್ಮೀರಕ್ಕಿಂತ ದೊಡ್ಡದು. ಆದರೆ ವಿಧಾನಸಭೆ ಕ್ಷೇತ್ರಗಳು ಹೆಚ್ಚಿರುವುದು ಕಾಶ್ಮೀರದಲ್ಲಿ. ಏಕೆ ವಿಷಯ ಎತ್ತಲಾಗುತ್ತಿದೆಯೆಂದರೆ, ಭಾರತ ಪ್ರಜಾತಾಂತ್ರಿಕ ರಾಷ್ಟ್ರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರಲ್ಲಾ ಕಾಶ್ಮೀರಕ್ಕೆ ಒಬ್ಬ ಹಿಂದುವನ್ನು ಮುಖ್ಯಮಂತ್ರಿಯಾಗಿ ಮಾಡಿ ನೋಡಿ?! ಮಹಾನ್ ರಾಷ್ಟ್ರವಾದಿ ಹಾಗೂ ಹಿಂದು ರಕ್ಷಕ ಶಿವಾಜಿ ಮಹಾರಾಜನ ಮಹಾರಾಷ್ಟ್ರಕ್ಕೆ ಅಬ್ದುರ್ ರೆಹಮಾನ್ ಅಂಟುಳೆ ಎಂಬ ಮುಸ್ಲಿಂ ಮುಖ್ಯಮಂತ್ರಿಯಾಗಬಲ್ಲ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕೇರಳದಲ್ಲಿ ಆ್ಯಂಟನಿ, ಚಾಂಡಿಗಳೆಂಬ ಕ್ರೈಸ್ತರು ಮುಖ್ಯಮಂತ್ರಿಯಾದರೆ ಯಾರೂ ಬೇಸರಿಸಿಕೊಳ್ಳುವುದಿಲ್ಲ, ಹಿಂದುಗಳಿಂದ ತುಂಬಿರುವ ಆಂಧ್ರಪ್ರದೇಶ ಕ್ರೈಸ್ತರಾದ ಯೇಸುಪದ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುತ್ತದೆ ಹಾಗೂ ಅವರ ಪುತ್ರ ಜಗನ್ಮೋಹನ್‌ನನ್ನು ಅತ್ಯಂತ ಜನಪ್ರಿಯ ನಾಯಕನನ್ನಾಗಿ ಮಾಡುತ್ತದೆ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಮುಸ್ಲಿಮರು ಶಾಸಕ, ಸಂಸದರಾಗಿ ಆಯ್ಕೆಯಾಗುತ್ತಾರೆ. ಆದರೆ ಕಾಶ್ಮೀರಕ್ಕೆ ಒಬ್ಬ ಹಿಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ! ಇಂತಹ ಮನಸ್ಥಿತಿಯೇ ನಮ್ಮ ಪಂಡಿತರು ಕಗ್ಗೊಲೆಯಾಗಲು, ಸ್ವಂತ ನಾಡಿನಲ್ಲೇ ನಿರಾಶ್ರಿತರಾಗಿ ಬದುಕಬೇಕಾದ ಸ್ಥಿತಿ ಬಂದಿದೆ. ಬಹಳ ಆಶ್ಚರ್ಯ ಹುಟ್ಟಿಸುವ ಸಂಗತಿಯೆಂದರೆ ಕಳೆದ 4 ತಿಂಗಳಿಂದ ಗ್ರಾಮ ಬಿಟ್ಟಿರುವ ಉತ್ತರ ಪ್ರದೇಶದ ಮುಜಫ್ಫರ್‌ನಗರದ ಆರು ಸಾವಿರ ನಿರಾಶ್ರಿತರ ಬಗ್ಗೆ ನಮ್ಮ ಟಿ.ವಿ. ಚಾನೆಲ್‌ಗಳು ನಿತ್ಯವೂ ಬೊಬ್ಬೆ ಹಾಕುತ್ತಿವೆ. ಅಲ್ಲಿನ ಜನ ಹಾಗೂ ಮಕ್ಕಳು ಅನುಭವಿಸುತ್ತಿರುವ ಕರುಣಾಜನಕ ಸ್ಥಿತಿಯ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಖಂಡಿತ ತಪ್ಪಲ್ಲ. ಆದರೆ ಕಳೆದ 25 ವರ್ಷಗಳಿಂದ ದಿಲ್ಲಿ ಹಾಗೂ ಜಮ್ಮು ಬಳಿಯ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಬದುಕು ದೂಡುತ್ತಿರುವ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಪರಿಸ್ಥಿತಿ ನಮ್ಮ ಸಾಕ್ಷೀಪ್ರಜ್ಞೆಯನ್ನೇಕೆ ತಿವಿಯುವುದಿಲ್ಲ? ನಮ್ಮ ಮಾಧ್ಯಮಗಳ ಕರುಣಾಳು ಹೃದಯ ಕಾಶ್ಮೀರಿ ಪಂಡಿತರಿಗೇಕೆ ಮಿಡಿಯುವುದಿಲ್ಲ? ಈ ಮಧ್ಯೆ ಪ್ರಶಾಂತ್ ಭೂಷಣನೆಂಬ ಮಹಾಶಯ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು, ಅರ್ಥಾತ್ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ. ಅದನ್ನು ಒಬ್ಬ ರಾಷ್ಟ್ರವಾದಿಯಾದವನು ಖಂಡಿಸಬೇಕು. ಆದರೆ ನಮ್ಮ ಕೇಜ್ರೀವಾಲ್ ಸಾಹೇಬರು ಅದು ಆತನ ವೈಯಕ್ತಿಕ ಅಭಿಪ್ರಾಯ ಎಂದು ನುಣುಚಿಕೊಳ್ಳುವ ಕಿಲಾಡಿತನ ತೋರಿಸುತ್ತಿದ್ದಾರೆ. ಇನ್ನು ಆರು ವರ್ಷಗಳ ಆಡಳಿತದಲ್ಲಿ ಬಿಜೆಪಿಯ ಬೊಗಳೆ ನಾಯಕರು ಮಾಡಿದ್ದೂ ಅಷ್ಟರಲ್ಲೇ ಇದೆ. ಇಂಥವರು ನಮ್ಮನ್ನಾಳುತ್ತಿರುವಾಗ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಲು ಸಾಧ್ಯವೇ? ಜನಾಭಿಪ್ರಾಯವೆಂದರೆ ಆರು ಲಕ್ಷ ಕಾಶ್ಮೀರಿ ಪಂಡಿತರ ಅಭಿಪ್ರಾಯವನ್ನೂ ಪಡೆಯಬೇಕು ಎಂಬುದು ಪ್ರಶಾಂತ್ ಭೂಷಣ್‌ನಂಥವರಿಗೆ ಅರ್ಥವಾಗುತ್ತದೆಯೇ? ಭಾರತದ ಅತ್ಯಂತ ಪ್ರತಿಷ್ಠಿತ ಗೂಢಚರ ಸಂಸ್ಥೆ "ರಾ" ಸ್ಥಾಪಿಸಿದ್ದು ಆರ್.ಎನ್. ಕಾವೋ ಎಂಬ ಕಾಶ್ಮೀರಿ ಪಂಡಿತ. ಅವರು 2002ರಲ್ಲಿ ತೀರಿಕೊಳ್ಳುವವರೆಗೂ ಪಂಡಿತರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದರು. ಆದರೆ ಸಂವೇದನೆಯನ್ನೇ ಕಳೆದುಕೊಂಡ ನಾಯಕರೇ ನಮ್ಮನ್ನಾಳುತ್ತಿರುವಾಗ ಏನನ್ನು ಮಾಡಲು ತಾನೇ ಸಾಧ್ಯ?
ಏಕೆ ವಿಷಯವನ್ನೀಗ ಪ್ರಸ್ತಾಪಿಸಲಾಗುತ್ತಿದೆಯೆಂದರೆ ಹಿಂದುಗಳೇ ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಗಳ ಮೈಕಿನಿಂದ ಮೊಳಗಿದ್ದು 1990, ಜನವರಿ 19ರಂದು. ನಾಳೆ ಆ ಘಟನೆಗೆ 24 ವರ್ಷಗಳು ತುಂಬಿ 25ಕ್ಕೆ ಕಾಲಿಡಲಿದೆ. ಪ್ರತಿವರ್ಷ ಆ ದಿನವನ್ನು "ಕಾಶ್ಮೀರಿ ಗುಳೇ ದಿನ" ಅಥವಾ "ಸಾಮೂಹಿಕ ಹತ್ಯಾಕಾಂಡ" ದಿನವಾಗಿ ಆಚರಿಸಲಾಗುತ್ತದೆ. ಇಪ್ಪತ್ನಾಲ್ಕು ವರ್ಷ ಕಳೆದರೂ ಪಂಡಿತರಿಗೆ ನ್ಯಾಯ ಕೊಡಲಾಗಿಲ್ಲದಿರುವುದು, ಇಂಥದ್ದೊಂದು ದಿನವನ್ನು ಆಚರಿಸಲಾಗುತ್ತಿರುವುದು ಈ ದೇಶದ ದುರಂತ ಹಾಗೂ ಹಿಂದುಗಳ ಷಂಡತನದ ಸಂಕೇತವಲ್ಲದೆ ಮತ್ತೇನು ಹೇಳಿ?
No comments:
Post a Comment