IMPORTANT NOTICE

New official website is designed for Karada Community. Please visit www.karadavishwa.com for more details.

Monday, 1 June 2015

ಎಲ್ಲ ಸಮಸ್ಯೆಗಳಿಗೂ ಪರಿಹಾರದ ಪಾಠ ಹೇಳುತ್ತದೆ ಪ್ರಕೃತಿ!

Go back to nature!
ಹಾಗಂತ ಹೇಳಿದವನು ಆಪಲ್ ಕಂಪ್ಯೂಟರ್ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್. ಸ್ಟೀವ್ ಜಾಬ್ಸ್‌ಗೆ ಬ್ಲಾಗರ್‌ನೊಬ್ಬ ‘ಜಗತ್ತಿನೆಲ್ಲೆಡೆ ನಿಮ್ಮ ಕಂಪನಿಯ ಕಂಪ್ಯೂಟರ್, ಐಫೋನ್, ಐಪಾಡ್, ಐಪಾಡ್ ಟಚ್ ಮುಂತಾದ ಉಪಕರಣಗಳೆಲ್ಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಇವೆಲ್ಲವುಗಳನ್ನು ತಯಾರಿಸುವುದರಿಂದ ಪ್ರಕೃತಿ ಮೇಲೆ ಎಂಥ ಪರಿಣಾಮವಾಗಬಹುದು? ಈ ಉಪಕರಣಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಎಷ್ಟು ಕರೆಂಟು ಬೇಕು? ಪರಿಸರದ ಮೇಲೆ ನೀವು ಎಂಥ ಆಕ್ರಮಣ ಮಾಡುತ್ತಿದ್ದೀರಿ ಎಂಬುದರ ಕಲ್ಪನೆ ನಿಮಗಿದೆಯಾ?’ ಎಂದು ಕೇಳಿದ್ದಕ್ಕೆ ಆತ ಸರಳವಾಗಿ, ನಿರುದ್ವಿಗ್ನನಾಗಿ ಹೇಳಿದ್ದು: Please go back to nature. And nature will find solutions”. ಪ್ರಾಯಶಃ ಇದಕ್ಕಿಂತ ಚುಟುಕಾದ, ಸಮರ್ಪಕ ಉತ್ತರ ಇದ್ದಿರಲಾರದು.
‘ನಮ್ಮ ಎಲ್ಲ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಉತ್ತರವಿದೆ’. ಹಾಗೆಂದು ಕಾಲಕಾಲಕ್ಕೆ ತತ್ತ್ವಜ್ಞಾನಿಗಳು, ದಾರ್ಶನಿಕರು, ಸಾಧು-ಸಂತರು, ಆರ್ಥಿಕ ತಜ್ಞರು, ತಂತ್ರಜ್ಞಾನಿಗಳು, ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಓಶೋ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ‘ನೀವು ಹೊಸದೇನನ್ನೂ ಆವಿಷ್ಕಾರ ಮಾಡಬೇಕಿಲ್ಲ. ಎಲ್ಲವೂ ಪ್ರಕೃತಿಯಲ್ಲಿಯೇ ಇದೆ. ನೀವೇನಾದರೂ ಮಾಡಬಹುದಾದ್ದು ಇದ್ದರೆ ಅದನ್ನು ನಕಲು ಮಾಡುವುದು ಅಷ್ಟೇ’ ಎಂದಿದ್ದು ಗೊತ್ತಿರಬಹುದು. ಟಾಟಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಆರ್. ಗೋಪಾಲಕೃಷ್ಣ ತಮ್ಮ The Case of the Bonsai Manager ಪುಸ್ತಕದಲ್ಲೂ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪ್ರಕೃತಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪ್ರಾಯಶಃ ಸ್ಟೀವ್ ಜಾಬ್ಸ್ ಹೇಳಿದ್ದು ಸಹ ಇದೇ ಅರ್ಥದಲ್ಲಿರಬೇಕು. ಪ್ರತಿಯೊಂದು ಸಮಸ್ಯೆಗೂ ಪ್ರಕೃತಿಯಲ್ಲಿ ಮದ್ದಿದೆ, ಉಪಾಯವಿದೆ. ನಮಗೆ ಜೀವನ ಅರ್ಥವಾಗಿಲ್ಲ ಅಂದ್ರೆ ಪ್ರಕೃತಿ ಅರ್ಥವಾಗಿಲ್ಲ, ಅರ್ಥ ಮಾಡಿಕೊಂಡಿಲ್ಲ ಎಂದರ್ಥ. ಅದೆಂಥ ಅಬ್ಬರ, ಉಬ್ಬರವೇ ಇರಬಹುದು, ಅದನ್ನು ಒಂದು ಹದಕ್ಕೆ, ಪಾತಳಿಗೆ ತರುವುದು ಹೇಗೆಂಬುದು ಪ್ರಕೃತಿಗೆ ಗೊತ್ತು. ಹೀಗಾಗಿ ಅದೆಂಥ ಸ್ಥಿತ್ಯಂತರಗಳಾಗಲಿ, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಪ್ರಕೃತಿ ಮುಸುಕೆಳೆದುಕೊಂಡು ತನ್ನ ಕೆಲಸ ಮಾಡುತ್ತಿರುತ್ತದೆ.
ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ‘ಪ್ರಕೃತಿ ಪಾಠ’ ಮಾಡುತ್ತಿರುವುದರ ಕುರಿತಾದ ಚಿತ್ರವದು. ಪಾಠ ಮಾಡುತ್ತಿದ್ದ ಮೇಷ್ಟ್ರು ಹೇಳುತ್ತಿದ್ದರು-’ನೀವು ಕೆಲಸ ಮಾಡುವ ಕಂಪನಿ ಅದೆಷ್ಟೇ ದೊಡ್ಡದಾಗಿರಬಹುದು, ಚಿಕ್ಕದಾಗಿರಬಹುದು, ಬಹುರಾಷ್ಟ್ರೀಯ ಕಂಪನಿಯೇ ಆಗಿರಬಹುದು. ಅದೆಂಥ ಬಿಕ್ಕಟ್ಟಿನ ಪ್ರಸಂಗವೇ ಎದುರಾಗಲೀ, ಪ್ರಕೃತಿ ಆ ಸ್ಥಿತಿಯಲ್ಲಿ ಇದ್ದರೆ ಹೇಗೆrespond ಮಾಡಬಹುದು ಎಂಬುದನ್ನು ಯೋಚಿಸಿ.
ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿ, ಜಲಚರ, ಕೋಟ್ಯಂತರ ಕ್ರಿಮಿ, ಕೀಟ, ಜಂತು ಹಾಗೂ ಸಸ್ಯರಾಶಿಗಳು ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮಷ್ಟಕ್ಕೆ ತಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತವೆ. ಅವುಗಳ ರಕ್ಷಣೆ, ಸಹಾಯಕ್ಕೆ ಯಾರೂ ಮುಂದಾಗುವುದಿಲ್ಲ. ಪ್ರಕೃತಿಯಲ್ಲಿಯೇ ಅವು ತಮ್ಮ ಸಮಸ್ಯೆಗಳಿಗೆ, ಅಂದರೆ ಮ್ಯಾನೇಜ್‌ಮೆಂಟ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪ್ರಾಣಿ-ಪಕ್ಷಿಗಳಿಂದ, ಸುತ್ತಲಿನ ಪರಿಸರದಿಂದ ಕಲಿಯುವಂಥದ್ದು ಬಹಳಷ್ಟಿರುತ್ತವೆ.’
ಬಹುರಾಷ್ಟ್ರೀಯ ಕಂಪನಿಯೊಂದು ನೌಕರರಿಗೆ ಎಲ್ಲ ರೀತಿಯ ಸೌಲಭ್ಯ-ಸುವಿಧಾಗಳನ್ನು ನೀಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅವರು ದುಡಿಯುತ್ತಿರಲಿಲ್ಲ. ಬಹುತೇಕ ಕೆಲಸಗಾರರಿಗೆ ಯಾರ ಹೆದರಿಕೆಯೂ ಇರದಿರುವುದೇ ಇದಕ್ಕೆ ಕಾರಣವೆಂದು ತಿಳಿಯಿತು. ಹೊಸದಾಗಿ ಬಂದ ಬಾಸ್ಗೆ ಈ ಸಮಸ್ಯೆ ಬಗೆಹರಿಸಲು ಪ್ರೇರಣೆ ನೀಡಿದ್ದು ಒಂದು ಮೀನಿನ ಪ್ರಸಂಗ.

ಜಪಾನಿಯರಿಗೆ ಮೀನು ಅಂದ್ರೆ ಪಂಚಪ್ರಾಣ. ಅದರಲ್ಲೂ ಅವರಿಗೆ ಮೀನು ಬಹಳ ಫ್ರೆಶ್ ಆಗಿರಬೇಕು. ಒಮ್ಮೆ ಎಂಥ ಸ್ಥಿತಿ ಬಂತೆಂದರೆ ಜಪಾನಿನ ಸುತ್ತಮುತ್ತ ಮೀನುಗಳೇ ಇಲ್ಲವಾದವು. ಸಮುದ್ರತೀರದಿಂದ 400-500 ಕಿಮೀ ದೂರ ಕ್ರಮಿಸಿದರೆ ಮಾತ್ರ ಮೀನುಗಳು ಬಲೆಗೆ ಬೀಳುತ್ತಿದ್ದವು. ಮೀನು ಹಿಡಿಯಲು ದೂರದೂರ ಸಾಗಿದಂತೆ, ಅದನ್ನು ತರಲು ಹೆಚ್ಚು ಸಮಯ ತಗುಲುತ್ತಿತ್ತು. ಇದರಿಂದ ಮೀನುಗಳು ಫ್ರೆಶ್ ಆಗಿ ಇರುತ್ತಿರಲಿಲ್ಲ. ಕೆಲವೊಮ್ಮೆ ಬೋಟ್, ಹಡಗು ವಾಪಸ್ ಬರಲು ನಾಲ್ಕೈದು ದಿನಗಳಾಗುತ್ತಿದ್ದವು. ಹೀಗೆ ಹಿಡಿದು ತಂದ ಮೀನುಗಳನ್ನು ಜಪಾನಿಯರು ಇಷ್ಟಪಡುತ್ತಿರಲಿಲ್ಲ.
ಈ ಸಮಸ್ಯೆಯನ್ನು ಬಗೆಹರಿಸಲು ಫಿಶಿಂಗ್ ಕಂಪನಿಗಳು ಬೋಟಿನಲ್ಲಿಯೇ ಬೃಹತ್ ಫ್ರೀಜರ್ (ಶೈತ್ಯಾಗಾರ) ಅಳವಡಿಸಲು ನಿರ್ಧರಿಸಿದವು. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿಡಲಾರಂಭಿಸಿದವು. ಜಪಾನಿಯರು ಅದೆಂಥ ಶಾಣ್ಯಾರೆಂದರೆ ಅವರಿಗೆ ಗೊತ್ತಾಗಿಬಿಡುತ್ತಿತ್ತು ಈ ಮೀನು ಫ್ರೆಶ್ ಅಲ್ಲವೆಂದು. ಫ್ರೆಶ್ ಫಿಶ್‌ಗೂ ಫ್ರೋಜನ್ ಫಿಶ್‌ಗೂ ನಡುವಿನ ವ್ಯತ್ಯಾಸವನ್ನು ತಕ್ಷಣ ಪತ್ತೆ ಮಾಡುತ್ತಿದ್ದರು. ಹೀಗಾಗಿ ಫ್ರೋಜನ್ ಫಿಶ್‌ಗೆ ಬೇಡಿಕೆ ಇಲ್ಲದಂತಾಯಿತು.
ಇದಕ್ಕೆ ಪರಿಹಾರ ಕಂಡುಕೊಳ್ಳಲು ಫಿಶಿಂಗ್ ಕಂಪನಿಗಳು ಹಡಗುಗಳಲ್ಲಿಯೇ ದೊಡ್ಡ ಫಿಶ್ ಟ್ಯಾಂಕ್‌ಗಳನ್ನು ನಿರ್ಮಿಸಲು ನಿರ್ಧರಿಸಿದವು. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ತಟ್ಟನೆ ಟ್ಯಾಂಕಿನಲ್ಲಿ ಹಾಕುತ್ತಿದ್ದವು. ಆ ಮೀನುಗಳನ್ನು ದಡಕ್ಕೆ ತಂದು, ಫ್ರೆಶ್ ಪಿಶ್ ಎಂದು ಮಾರಾಟ ಮಾಡಲು ಆರಂಭಿಸಿದವು.
ಇಲ್ಲಿಗೆ ಈ ಸಮಸ್ಯೆ ಮುಗಿಯಬೇಕಿತ್ತು ತಾನೆ. ಆದರೆ ಹಾಗೆ ಆಗಲಿಲ್ಲ. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ಹಡಗಿನಲ್ಲಿನ ಟ್ಯಾಂಕಿನೊಳಗೆ ಹಾಕುತ್ತಿದ್ದಂತೆ, ಅವುಗಳಿಗೆ ಒಳ್ಳೆಯ ಆಹಾರ ಪೂರೈಸುತ್ತಿದ್ದಂತೆ, ಅವು ತಿಂದುಂಡು ಆಲಸಿಗಳಾದವು. ತಿರುಗಾಟ ಕಡಿಮೆ ಮಾಡಿದವು. ಇದ್ದಕ್ಕಿದ್ದಂತೆ ಡಲ್ ಆದವು. ಜೀವವಿದೆಯೆಂಬುದನ್ನು ಬಿಟ್ಟರೆ ಅವುಗಳಲ್ಲಿ ಯಾವುದೇ ಲವಲವಿಕೆ ಕಾಣುತ್ತಿರಲಿಲ್ಲ.
ವಿಚಿತ್ರವೆಂದರೆ ಜಪಾನಿಯರು ಈ ಹಡಗಿನ ಟ್ಯಾಂಕಿನಲ್ಲಿ ಹಿಡಿದು ತಂದ ಮೀನುಗಳಲ್ಲೂ ತುಸು ವ್ಯತ್ಯಾಸ ಕಾಣಲಾರಂಭಿಸಿದರು. ಅವರು ಫ್ರೆಶ್ ಫಿಶ್ ಅನ್ನು ಬಯಸಿದರೇ ಹೊರತು ಈ ಸೊರಗಿದ ಮೀನುಗಳಲ್ಲ! ಹಾಗೆಂದು ಈ ಸಮಸ್ಯೆಗೆ ಒಂದು ಉಪಾಯವನ್ನು ಹುಡುಕಲೇಬೇಕಿತ್ತು. ಕಾರಣ ಈ ಮತ್ಸ್ಯೋದ್ಯಮದಲ್ಲಿ ಸಾವಿರಾರು ಕೋಟಿ ರು. ವಹಿವಾಟಿತ್ತು. ಫಿಶ್ ಮಾರಾಟದಲ್ಲಿ ಭಾರಿ ಪೈಪೋಟಿಯಿತ್ತು.
ಹಡಗಿನ ಫಿಶ್ ಟ್ಯಾಂಕಿನಲ್ಲಿ ಒಂದು ಪುಟ್ಟ ಶಾರ್ಕ್ ಬಿಟ್ಟರೆ ಹೇಗೆ? ಯಾರಿಗೋ ಈ ಐಡಿಯಾ ಹೊಳೆಯಿತು. ಶಾರ್ಕ್ ಕೆಲವು ಮೀನುಗಳನ್ನು ತಿಂದುಹಾಕಬಹುದು. ಆದರೆ ಮೀನುಗಳಿಗೆ ಆಲಸಿಯಾಗಿ, ಜಡವಾಗಲು ಬಿಡುವುದಿಲ್ಲ. ಇದರಿಂದ ಟ್ಯಾಂಕಿನಲ್ಲಿರುವ ಮೀನುಗಳು ಕ್ರಿಯಾಶೀಲವಾದುವಲ್ಲದೇ, ಸಮುದ್ರದಲ್ಲಿರುವ ಮೀನುಗಳಿಗೂ ಇವುಗಳಿಗೂ ವ್ಯತ್ಯಾಸವಿಲ್ಲದಂತಾದವು. ಇದರಿಂದ ಜಪಾನಿಯರಿಗೆ ಎಂದಿನಂತೆ ಫ್ರೆಶ್ ಫಿಶ್‌ಗಳು ಸಿಗಲಾರಂಭಿಸಿದವು. ಪ್ರಕೃತಿಯಲ್ಲಿನ ಪರಿಹಾರವೇ ಸಮಸ್ಯೆಗೆ ಉತ್ತರವಾಗಿತ್ತು. ಯಾವುದೇ ಕಂಪನಿಯಲ್ಲಿ, ಸಂಸ್ಥೆಯಲ್ಲಿ ಮೇಲೊಬ್ಬರು ಬಡಿಗೆ, ಬೆತ್ತ ಹಿಡಿದು ಕೊಂಡವರು ಇಲ್ಲದಿದ್ದರೆ ಆಲಸ್ಯ ಮನೆಮಾಡುತ್ತದೆ.
2004 ಅಕ್ಟೋಬರ್ 25ರ ‘ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಥಾಯ್ಲೆಂಡ್‌ನಿಂದ ಚೀನಾಕ್ಕೆ ಮೊಸಳೆಗಳನ್ನು ಆಮದು ಮಾಡಿಕೊಂಡ ಕುರಿತ ವರದಿಯದು. ಚೀನಾದಲ್ಲಿ ಮೊಸಳೆ ಮಾಂಸಕ್ಕೆ ಅಪಾರ ಬೇಡಿಕೆ. ಆದರೆ ಅದು ಎಲ್ಲೆಡೆ ಸಿಗುತ್ತಿರಲಿಲ್ಲ. ಮೊಸಳೆ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಚೀನಾ ಸರಕಾರ ಸ್ವತಃ ತಾನೇ ಮೊಸಳೆಗಳನ್ನು ಸಾಕಲು ನಿರ್ಧರಿಸಿತು. 1997-98ರಲ್ಲಿ ಚೀನಾ ಸರಕಾರ ಸುಮಾರು 40 ಸಾವಿರ ಮೊಸಳೆಗಳನ್ನು ಥಾಯ್ಲೆಂಡ್‌ನಿಂದ ತರಿಸಿಕೊಂಡಿತು. ಗುವಾಂಗ್ಜುವಾ ಪ್ರದೇಶದಲ್ಲಿ ಕ್ರೋಕೊ ಪಾರ್ಕ್ (ಮೊಸಳೆ ಉದ್ಯಾನ) ಸ್ಥಾಪಿಸಿತು. ಐದು ಬೋಯಿಂಗ್ 747 ಕಾರ್ಗೋ ವಿಮಾನದಲ್ಲಿ ಮೊಸಳೆಗಳು ಚೀನಾಕ್ಕೆ ಬಂದವು. ಚೀನಾದ ದೃಷ್ಟಿಯಿಂದ ಇದೊಂದು ಲಾಭದಾಯಕ ಡೀಲ್ ಆಗಿತ್ತು.
ಚೀನಾದ ಈ ಕ್ರಮದಿಂದ ಮೊಸಳೆ ಉದ್ಯಮದಲ್ಲಿ ಕ್ರಾಂತಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಗುವಾಂಗ್ಜುವಾ ಪ್ರಾಂತದ ರಸ್ತೆ, ಸೇತುವೆ, ಕಟ್ಟಡಗಳು ಅಭಿವೃದ್ಧಿಗೊಂಡವು. ಮೂಲಸೌಕರ್ಯಗಳು ಸುಧಾರಿಸಿದವು. ಮೊಸಳೆ ಮಾಂಸ, ಚರ್ಮಕ್ಕೆ ಬೇಡಿಕೆ ಬರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಮೊಸಳೆಗಳ ಬಗ್ಗೆ ಎಲ್ಲಿಲ್ಲದ ಮೋಹ ತಾಳಿದ ಚೀನಾದವರು ಅವುಗಳಿಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ನೀಡಿ, ದಷ್ಟಪುಷ್ಟಗೊಳಿಸಿದರು.
ಥಾಯ್ಲೆಂಡ್‌ನ ಮೊಸಳೆಗಳಿಗೆ ಚೀನಾದಲ್ಲಿ ತಿನ್ನುವುದನ್ನು ಬಿಟ್ಟರೆ ಬೇರೆ ಕೆಲಸಗಳೇ ಇರಲಿಲ್ಲ. ಈ ಮೊಸಳೆಗಳಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕೂ ಪುರುಸೊತ್ತು ಸಿಗದಷ್ಟು ಆಹಾರಗಳ ಪೂರೈಕೆಯಾಗುತ್ತಿತ್ತು. ಇದರ ಪರಿಣಾಮವಾಗಿ ಆ ಮೊಸಳೆಗಳು ವಿಚಿತ್ರವಾಗಿ ಕೊಬ್ಬಿ ಬೆಳೆದವು. ಲೈಂಗಿಕ ಆಸಕ್ತಿ ಕುಂದಲು ಇದೂ ಕಾರಣವಾಯಿತು. ಚೀನಾದ ಹವಾಮಾನ ಹೇಗಿತ್ತೆಂದರೆ ಎಷ್ಟು ತಿಂದರೂ ಬೇಕೆನಿಸುತ್ತಿತ್ತು. ಇದು ಥಾಯ್ಲೆಂಡ್‌ಗೆ ಹೋಲಿಸಿದರೆ ವ್ಯತಿರಿಕ್ತವಾಗಿತ್ತು. ಕೇವಲ ಏಳು ವರ್ಷಗಳಲ್ಲಿ ಮೊಸಳೆಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಯಿತು. ನಿರೀಕ್ಷಿಸಿದ ಮಟ್ಟಕ್ಕೆ ಸಂತಾನೋತ್ಪತ್ತಿ ಆಗಲಿಲ್ಲ. ಚೀನಾದ ಮೊಸಳೆ ಕನಸು ಈಡೇರಲೇ ಇಲ್ಲ. ಯಾವುದೇ ಕಂಪನಿಯಿರಬಹುದು ಅಲ್ಲಿನ ಸಿಬ್ಬಂದಿಯನ್ನು ಚೀನಾದ ಮೊಸಳೆ ಗಳಂತೆ ಠಛಟಠಜ್ಠ ಮಾಡಿದರೆ ಪರಿಣಾಮ ಹೀಗೇ ಆಗುತ್ತದೆ!
ಯಾವುದೇ ಸಂಸ್ಥೆಯಿರಬಹುದು, ಬಹುರಾಷ್ಟ್ರೀಯ ಕಂಪನಿಯಿರಬಹುದು, ಅಲ್ಲಿ ಕೆಲವೇ ಕೆಲವು ಜನರು ಐಡಿಯಾಕ್ಕೆ ಕಾವು ಕೊಡುತ್ತಾರೆ. ಹೊಸ ಯೋಜನೆ, ಯೋಚನೆಯನ್ನು ಹುಟ್ಟುಹಾಕುತ್ತಾರೆ. ಅದನ್ನು ತಮ್ಮ ಸಹೋದ್ಯೋಗಿಗಳ ಜತೆಗೆ ಹಂಚಿಕೊಳ್ಳುತ್ತಾರೆ ಹಾಗೂ ಅನಂತರ ಉಳಿದವರೆಲ್ಲರೂ ಅದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಾರೆ. ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕ ಹಾಗೆ ಸವಾಲುಗಳನ್ನು ಎದುರಿಸುತ್ತಾ ಮುನ್ನಡೆಯುತ್ತಾರೆ. ಇದು ಎಲ್ಲೆಡೆ ಇರುವ ಸಾಮಾನ್ಯ ನಿಯಮ ತಾನೆ. ಈ ಅಂಶವನ್ನು ಪ್ರಕೃತಿ ಯಲ್ಲಿರುವ ಪಕ್ಷಿಗಳು ಎಷ್ಟೊಂದು ಸೊಗಸಾಗಿ ಮೈಗೂಡಿಸಿಕೊಂಡಿವೆಯೆಂಬುದನ್ನು ಗಮನಿಸಬಹುದು. ಇಂಗ್ಲೆಂಡ್‌ನಲ್ಲಿರುವ ರಾಬಿನ್ ಹಾಗೂ ಬ್ಲೂ ಟಿಟ್ ಪಕ್ಷಿಗಳು ಸನ್ನಿವೇಶವೊಂದನ್ನು ಹೇಗೆ ನಿಭಾಯಿಸಿದವು ಎಂಬುದು ನಮಗೆ ಪಾಠವಾಗಬೇಕು.
1900ರ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಮನೆ ಬಾಗಿಲಿಗೆ ಹಾಲನ್ನು ಬಾಟಲಿಯಲ್ಲಿ ತುಂಬಿ ಸಣ್ಣ ಟ್ರಕ್‌ಗಳ ಮೂಲಕ ತಲುಪಿಸುವ ರೂಢಿಯಿತ್ತು. ಈ ಬಾಟಲಿಗಳಿಗೆ ಕ್ಯಾಪ್ ಇರುತ್ತಿರಲಿಲ್ಲ. ಹಾಲಿನ ಕೆನೆ (ಕ್ರೀಮ್)ಬಾಟಲಿಯ ತುದಿಯಲ್ಲಿ ಶೇಖರಗೊಳ್ಳುತ್ತಿತ್ತು. ಬೆಳಗ್ಗೆ ಬೆಳಗ್ಗೆ ರಾಬಿನ್ ಹಾಗೂ ಬ್ಲೂ ಟಿಟ್ ಮನೆಯ ಮುಂದೆ ಇಟ್ಟಿರುತ್ತಿದ್ದ ಈ ಹಾಲಿನ ಬಾಟಲಿಗಳಲ್ಲಿನ ಕೆನೆಯನ್ನು ಮಾಲೀಕ ಬರುವುದಕ್ಕಿಂತ ಮೊದಲೇ ತಮ್ಮ ಕೊಕ್ಕಿನಿಂದ ಹೀರಿ ಕುಡಿಯುತ್ತಿದ್ದವು. ಉಳಿದ ಆಹಾರಕ್ಕಿಂತ ಈ ಹಾಲಿನ ಕೆನೆ ಪೌಷ್ಟಿಕವಾಗಿರುತ್ತಿದ್ದುದರಿಂದ ಈ ಹಕ್ಕಿಗಳು ದಷ್ಟಪುಷ್ಟವಾಗಿ ಬೆಳೆಯಲಾರಂಭಿಸಿದವು.
1940 ಹೊತ್ತಿಗೆ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ಪರಿಣಾಮ ಈ ಹಾಲಿನ ಬಾಟಲಿಯ ಸ್ವರೂಪ ಬದಲಾಯಿತು. ಬಾಟಲಿ ಬಾಯಿಗೆ ಅಲ್ಯುಮಿನಿಯಮ್ ಸೀಲ್ ಬಿತ್ತು. ಇದರಿಂದ ಹಾಲಿನ ಕೆನೆ ಹೀರುವುದು ಈ ಪಕ್ಷಿಗಳಿಗೆ ಅಸಾಧ್ಯವಾಯಿತು. ಅವುಗಳ ಮೇಲೆ ಇದರ ಪರಿಣಾಮ ಭಿನ್ನವಾಗಿತ್ತು.
ಕೆಲವು ತಿಂಗಳುಗಳ ಅವಧಿಯಲ್ಲಿ ಬ್ಲೂ ಟಿಟ್ ಪಕ್ಷಿಯಿದೆಯಲ್ಲಾ, ಅದು ಅಲ್ಯುಮಿನಿಯಮ್ ಸೀಲನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ತೂತು ಮಾಡಿ ಕೆನೆ ಹೀರುವ ಕಲೆಯನ್ನು ಕರಗತ ಮಾಡಿಕೊಂಡಿತು. ಇದರಿಂದ ಬ್ಲೂ ಟಿಟ್, ರಾಬಿನ್ ಪಕ್ಷಿಗಿಂತ ದೈಹಿಕವಾಗಿ ದಷ್ಟಪುಷ್ಟವಾಯಿತಲ್ಲದೇ ಬದುಕುವ ದಾರಿಯನ್ನು ರೂಢಿಸಿಕೊಂಡಿತು. ಆದರೆ ಇದು ರಾಬಿನ್‌ಗೆ ಸಾಧ್ಯವಾಗದೇ ಸೊರಗಲಾರಂಭಿಸಿತು. ಆಗೊಮ್ಮೆ ಈಗೊಮ್ಮೆ ಒಂದೊಂದು ರಾಬಿನ್ ಸೀಲು ತೂತು ಮಾಡಿ ಕೆನೆ ಹೀರುತ್ತಿತ್ತು. ಆದರೆ ಈ ಗುಟ್ಟು ಎಲ್ಲ ರಾಬಿನ್‌ಗಳಿಗೂ ಗೊತ್ತಾಗಲೇ ಇಲ್ಲ.
ಆದರೆ ಈ ಟ್ರಿಕ್ ಎಲ್ಲ ಬ್ಲೂ ಟಿಟ್‌ಗಳಿಗೆ ಗೊತ್ತಾಯಿತು, ಅದೇ ಎಲ್ಲ ರಾಬಿನ್ಗಳಿಗೆ ಗೊತ್ತಾಗಲಿಲ್ಲ, ಹೇಗೆ? ಇದಕ್ಕೆ ಕಾರಣವೇನು?
ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಅಲನ್ ವಿಲ್ಸನ್ ಎಂಬಾತ ಅತ್ಯಂತ ಕುತೂಹಲ ಹುಟ್ಟಿಸುವ ಈ ಎರಡು ಪಕ್ಷಿಗಳ ವರ್ತನೆ ಬಗ್ಗೆ ಸಂಶೋಧನೆ ಮಾಡಿದ. ಅದರಿಂದ ತಿಳಿದು ಬಂದಿದ್ದೇನೆಂದರೆ-ವಸಂತ ಕಾಲದಲ್ಲಿ ಗಂಡು -ಹೆಣ್ಣು ಬ್ಲೂಟಿಟ್ ಜತೆಜತೆಯಾಗಿ ಇರುತ್ತವೆ. ಒಂದು ಹೆಣ್ಣು ಹಕ್ಕಿಯ ಸುತ್ತ ಹತ್ತಾರು ಗಂಡುಗಳು ರೌಂಡ್ ಹೊಡೆಯುತ್ತಿರುತ್ತವೆ. ಹೆಣ್ಣು ಹಕ್ಕಿ ಹಾರಿದರೆ ಅದರ ಹಿಂದೆ ಬುರ್ರ್ ಎಂದು ಹತ್ತಾರು ಗಂಡುಗಳು ಹಾರುತ್ತವೆ. ಅಂದರೆ ಬ್ಲೂಟಿಟ್ ಎಂದಿಗೂ ಏಕಾಂಗಿಯಲ್ಲ. ಮರಿ ಹಾಕಿದರೆ ಬ್ಲೂಟಿಟ್ ಜಗತ್ತಿಗೆಲ್ಲ ಸಂಭ್ರಮ. ಅಂದರೆ ಅವು ಸಂಘ ಜೀವಿ. ಸದಾ ಹಿಂಡಿನಲ್ಲೇ ಇರುತ್ತವೆ.
ಅದೇ ರಾಬಿನ್ ಹಾಗಲ್ಲ. ಬಹಳ reserved. ಒಂದು ಹೆಣ್ಣಿನ ಸುತ್ತ ಒಂದೇ ಗಂಡು. ಮತ್ತೊಂದು ಗಂಡು ಸುಳಿಯುವಂತಿಲ್ಲ. ಒಂದರ ಗಡಿಯೊಳಗೆ ಮತ್ತೊಂದು ಪ್ರವೇಶಿಸುವಂತಿಲ್ಲ. ಎರಡು ರಾಬಿನ್‌ಗಳ ಮಧ್ಯೆ ಎಂದಿಗೂ ದೀರ್ಘ ಸಂಬಂಧ ಅಸಾಧ್ಯ. ಹಾಲಿನ ಕೆನೆ ಕುಡಿಯುವುದನ್ನು ಒಂದೆರಡು ರಾಬಿನ್ ಕಲಿತರೂ ತನ್ನ ಇಡೀ ಸಮೂಹಕ್ಕೆ ಕಲಿಸಲು ಆಗಲೇ ಇಲ್ಲ. social propagation ಅವುಗಳಿಂದ ಸಾಧ್ಯ ವಾಗಲೇ ಇಲ್ಲ.
ನಾವು ಪ್ರಕೃತಿಯಿಂದ ಕಲಿಯುವುದು, ಪ್ರಕೃತಿಯನ್ನು ಅರ್ಥಮಾಡಿಕೊಕೊಳ್ಳುವುದು ಬೇಕಾದಷ್ಟಿದೆ ಎಂದು ಅನಿಸುವುದಿಲ್ಲವೇ?

No comments:

Post a Comment