IMPORTANT NOTICE

New official website is designed for Karada Community. Please visit www.karadavishwa.com for more details.

Sunday, 31 May 2015

ಇದು ಯಾರು ಬರೆದ ‘ವಿಧಿ’ಯೋ?



ಈ ದೇಶದಲ್ಲಿ ಕೆಲವು ವಿಷಯಗಳ ಬಗ್ಗೆ ಮಾತಾಡಲೇಬಾರದು, ಪ್ರಶ್ನಿಸಕೂಡದು. ಅಂಥ ವಿಷಯವನ್ನು ಪ್ರಸ್ತಾಪಿಸಿದರೆ ಸಾಕು; ಎಲ್ಲರೂ ನಿಮ್ಮ ಮೇಲೆ ಎಗರಿ ಬಂದು ಮುಗಿಬೀಳುತ್ತಾರೆ. ಅಲ್ಲಿಗೆ ಬಾಯಿ ಮುಚ್ಚಬೇಕು. ಅಷ್ಟಾಗಿಯೂ ನೀವು ಸುಮ್ಮನಾಗದಿದ್ದರೆ ಬಾಯಿ ಮುಚ್ಚಿಸುವ ಇತರ ತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. ಇಲ್ಲಸಲ್ಲದ ಹಣೆಪಟ್ಟಿಯನ್ನು ಅಂಟಿಸಲಾಗುತ್ತದೆ.
ಮೊನ್ನೆ ಜಮ್ಮುದಲ್ಲಿ ನಡೆದ ರ್ಯಾಲಿಯಲ್ಲಿ ಭಾರತೀಯ ಜನತಾಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಸ್ತಾಪಿಸಿದ್ದೇ ತಡ, ಎಲ್ಲ ಪಕ್ಷಗಳ ನಾಯಕರು ಮುರಕೊಂಡು ಬಿದ್ದವರಂತೆ ವರ್ತಿಸಿದರು. ಅಷ್ಟಕ್ಕೂ ಅಂದು ಮೋದಿ ಹೇಳಿದ್ದೇನು?
‘ಸಂವಿಧಾನದ 370ನೇ ವಿಧಿ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯವಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದರಿಂದ ಪ್ರಯೋಜನವಾಗಿದೆಯೇ, ರಾಜ್ಯಕ್ಕೆ ಅದರಿಂದ ಲಾಭವಾಗಿದೆಯೇ ಎಂಬುದನ್ನು ಚರ್ಚಿಸುವ ಅಗತ್ಯವಿದೆ. ಒಂದು ವೇಳೆ ಇದರಿಂದ ಏನೂ ಪ್ರಯೋಜನ ಆಗಿಲ್ಲವೆಂಬುದು ಮನವರಿಕೆಯಾದರೆ, ಈ ವಿಧಿಯನ್ನು ಮುಂದುವರಿಸಬೇಕೆಂಬ ಆಗ್ರಹವನ್ನು ಕೈ ಬಿಡಬೇಕು’ ಎಂದು ಮೋದಿ ಅಂದು ಹೇಳಿದರು.
ಅದೇ ರ್ಯಾಲಿಯಲ್ಲಿ ಮೋದಿ ಹೇಳಿದ ಇನ್ನೊಂದು ಸಂಗತಿಯೇನೆಂದರೆ-’ಜಮ್ಮು-ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರದ ಹೊರಗಿನ ಯುವತಿಯನ್ನು ಮದುವೆಯಾದರೆ, ರಾಜ್ಯದ ನಾಗರಿಕನಾಗುವ ಹಕ್ಕನ್ನು ಅವರು ಹಾಗೆಯೇ ಉಳಿಸಿಕೊಳ್ಳುತ್ತಾರೆ. ಆದರೆ ಒಮರ್ ಸಹೋದರಿ ಸಾರಾ ಕಾಶ್ಮೀರಿಯಲ್ಲದವರನ್ನು ಮದುವೆಯಾದರೆ ಅವರು ಆ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡುತ್ತಿರುವ ತಾರತಮ್ಯ.’
ಮೋದಿ ಇಷ್ಟು ಹೇಳಿದ್ದೇ ತಡ, ರಾಜಕೀಯ ಪಕ್ಷಗಳ ನಾಯಕರೆಲ್ಲ ಬೊಬ್ಬೆ ಹೊಡೆಯಲಾರಂಭಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್, ‘ಸಂವಿಧಾನದ 370ನೇ ವಿಧಿ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿರುವ ಮೋದಿ ಈ ವಿಷಯವನ್ನು ಮೊದಲು ಸಂಘ ಪರಿವಾರ ಹಾಗೂ ಬಿಜೆಪಿ ವೇದಿಕೆಗಳಲ್ಲಿ ಚರ್ಚಿಸಲಿ’ ಎನ್ನುವ ಮೂಲಕ ಅದನ್ನು ಮುಕ್ತವಾಗಿ ಚರ್ಚಿಸುವ ಅಗತ್ಯವೇ ಇಲ್ಲ ಎಂಬ ಅಪ್ಪಣೆ ಕೊಟ್ಟುಬಿಟ್ಟರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ. ಫಾರೂಕ್ ಅಬ್ದುಲ್ಲಾ, ‘ಮೋದಿಯೇ ಪ್ರಧಾನಿಯಾಗಿ ಹತ್ತು ಸಲ ಆಯ್ಕೆಯಾಗಿ ಬಂದರೂ 370ನೇ ವಿಧಿಯನ್ನು ರದ್ದುಪಡಿಸುವುದಿರಲಿ, ಅವರಿಂದ ಅದನ್ನು ಮುಟ್ಟಲು ಸಹ ಆಗದು’ ಎಂದು ಸವಾಲೆಸೆದರು.


ಕಾಶ್ಮೀರದ ಪಿಡಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್, ‘ಬಿಜೆಪಿ ಯ ಪ್ರಧಾನಿ ಅಭ್ಯರ್ಥಿಗೆ ಸಂವಿಧಾನದ ಬಗ್ಗೆ ತಿಳಿವಳಿಕೆಯೇ ಇಲ್ಲ. ಅವರ ಹೇಳಿಕೆಯಿಂದ ಸಮಾಜದಲ್ಲಿ ಬಿರುಕು ಮೂಡುತ್ತದೆ. ಜನರ ಮನಸ್ಸು ಛಿದ್ರವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 370ನೇ ವಿಧಿಯಿಂದ ಯಾರಿಗೆ ಲಾಭವಾಗಿದೆ ಎಂಬ ಮೋದಿ ಮಾತಿನ ಬಗ್ಗೆ ಮುಗುಮ್ಮಾದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ಅಂಶವನ್ನೇ ಪ್ರಸ್ತಾಪಿಸಿ, ಮೋದಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಅಥವಾ ಅವರೇ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
370ನೇ ವಿಧಿ ಬಗ್ಗೆ ಮೋದಿಯವರ ಅನಿಸಿಕೆ ಪುನಃ ವಿವಾದ ಸೃಷ್ಟಿಸಿದೆ. ಇದು ಮೊದಲಲ್ಲ. ಈ ವಿಧಿಯ ಬಗ್ಗೆ ಪ್ರಸ್ತಾಪಿಸಿದರೆ ಸಾಕು, ಇದರ ಬಗ್ಗೆ ಚರ್ಚೆಯಾಗಬೇಕು ಅಂದರೆ ಸಾಕು, ಏನೋ ದೊಡ್ಡ ಅನಾಹುತವಾಗುತ್ತದೆಂದು ಕಾಂಗ್ರೆಸ್ ಹಾಗೂ ಜಮ್ಮು-ಕಾಶ್ಮೀರ ನಾಯಕರು ಬೊಬ್ಬೆ ಹಾಕುತ್ತಾರೆ. ಆಕಾಶ ಕಳಚಿ ಬೀಳುತ್ತದೆ ಎಂದು ಗಂಟಲು ಹರಿದುಕೊಳ್ಳುತ್ತಾರೆ.
ಅಂದರೆ ಅದರ ಬಗ್ಗೆ ಯಾರೂ ಮಾತಾಡಲೇಬಾರದೇನು? ಚರ್ಚಿಸಬಾರದೇನು? ಕೇವಲ ಅಲ್ಪ ಅವಧಿಗೆಂದು ಜಾರಿಗೊಳಿಸಿದ ಸಂವಿಧಾನದ 370ನೇ ವಿಧಿ ಆಚರಣೆಗೆ ಬಂದು ಆರೂವರೆ ದಶಕಗಳಾಗಿವೆ. ಈ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅಗತ್ಯವಿಲ್ಲವೇ? ಚರ್ಚೆಯೇ ಬೇಡ, ಸುಮ್ಮನಿರಿ ಅಂದ್ರೆ ಅದರ ಮರ್ಮವೇನು? ಅದರ ಬಗ್ಗೆ ಪ್ರಸ್ತಾಪಿಸಿದರೆ ಸಮಾಜದಲ್ಲಿ ಒಡಕು ಉಂಟಾಗುತ್ತದೆ ಅಂದ್ರೆ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆ ಶಾಸನ ಇಷ್ಟು ವರ್ಷ ಸಾಧಿಸಿದ್ದಾದರೂ ಏನು? ಅದರಿಂದ ಆ ರಾಜ್ಯದ ಜನರಿಗೆ ಲಾಭವಾಗಿಲ್ಲ ಅಂದ್ರೆ ಅದನ್ನು ಮುಂದುವರಿಸುವ ಬಗ್ಗೆ ಪರಾಮರ್ಶೆ ನಡೆಯಲಿ ಅಂದ್ರೆ ತಪ್ಪೇನು? ಅದರ ಬಗ್ಗೆ ಮಾತೇ ಆಡಬೇಡಿ ಅಂದ್ರೆ ಅದನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಈಗ ಮೋದಿಯವರು ಹೇಳಿದ್ದಾದರೂ ಏನು? 370ನೇ ವಿಧಿ ಬಗ್ಗೆ ಚರ್ಚೆಯಾಗಲಿ ಅಂತ ಹೇಳಿದ ಮಾತ್ರಕ್ಕೆ ಸಂಘ ಪರಿವಾರದಲ್ಲಿ ಅಥವಾ ಬಿಜೆಪಿ ವೇದಿಕೆಯಲ್ಲಿ ಚರ್ಚೆ ಮಾಡಿಕೊಳ್ಳಿ ಅಂತಾರಲ್ಲ ಅದನ್ನು ಏನೆಂದು ಭಾವಿಸಬೇಕು?
ಇಡೀ ಭಾರತಕ್ಕೆ ಒಂದು ಕಾನೂನಿದ್ದರೆ, ದೇಶದ ಒಂದು ಭಾಗವೇ ಆಗಿರುವ ಜಮ್ಮು-ಕಾಶ್ಮೀರಕ್ಕೆ ಮತ್ತೊಂದು ಕಾನೂನು. ಇಡೀ ಭಾರತಕ್ಕೆ ಒಂದು ಸಂವಿಧಾನವಿದ್ದರೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ. ಭಾರತದ ಯಾವ ಕಾನೂನುಗಳೂ ಅಲ್ಲಿ ಲಾಗೂ ಆಗುವುದಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವ ಪರಿ ಎಂಥ ಪರಾಕಾಷ್ಠೆಯನ್ನು ತಲುಪಿದೆಯೆಂದರೆ, ನಮ್ಮ ದೇಶದೊಳಗೆ ಕಾಶ್ಮೀರವನ್ನು ಸೇರಿಸಿಕೊಳ್ಳುವ ಬದಲು ಅದಕ್ಕೆ ವಿಶೇಷ ಸ್ಥಾನಮಾನ ಹಾಗೂ ಪರಮಾಧಿಕಾರ ನೀಡಿ ಪ್ರತ್ಯೇಕತೆಯನ್ನು ಶಾಶ್ವತವಾಗಿ ಸ್ಥಾಪಿಸಿ ಬಿಟ್ಟಿದ್ದೇವೆ. ಯಾರೇ ಬರಲಿ, ಕಾಶ್ಮೀರಕ್ಕೆ ನೀಡಿದ ಆ ಸ್ಥಾನಮಾನವನ್ನು ಹಿಂದಕ್ಕೆ ಪಡೆಯದಂಥ ವಾತಾವರಣ ಸೃಷ್ಟಿಸಿ ಬಿಟ್ಟಿದ್ದೇವೆ. ಈ ಧಾರ್ಷ್ಟ್ಯವೇ ಡಾ. ಫಾರೂಕ್ ಅಬ್ದುಲ್ಲಾ ಬಾಯಿಂದ ಆ ಸೊಕ್ಕಿನ ಮಾತನ್ನು (ಮೋದಿಯೇ ಹತ್ತು ಸಲ ಪ್ರಧಾನಿಯಾದರೂ, 370ನೇ ವಿಧಿಯನ್ನು ಮುಟ್ಟಲು ಸಾಧ್ಯವಿಲ್ಲ) ಹೇಳಿಸಿದೆ. ಜಮ್ಮು-ಕಾಶ್ಮೀರ ಭಾರತದ ಅಂಗವಾಗಿರಬಹುದು, ಆದರೆ ಈ ನೆಲದ ಕಾನೂನುಗಳು ಅಲ್ಲಿಗೆ ಅನ್ವಯವಾಗುವುದಿಲ್ಲ. ಇದಕ್ಕಿಂತ ಹೆಚ್ಚಿನ ದುರ್ದೈವದ, ನಾಚಿಕೆಗೇಡಿನ ಸಂಗತಿ ಇನ್ನೊಂದಿದೆಯಾ? ಹಾಗೆಂದು ಉಳಿದೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಸ್ಥಾನಮಾನ, ಸವಲತ್ತು ಜಮ್ಮು-ಕಾಶ್ಮೀರಕ್ಕೆ. ಕೇಂದ್ರ ಸರ್ಕಾರ ನೀಡುವ ಎಲ್ಲ ಸವಲತ್ತು-ಸೌಲಭ್ಯಗಳನ್ನು ನಿರಂತರ ಪಡೆಯುತ್ತಾ, ಅದರ ಕಾನೂನಿಗೆ ಒಳಪಡದೇ ಇರುವ ಪರಮ ಅಧಿಕಾರ, ಜವಾಬ್ದಾರಿಯಿಲ್ಲದ ಸುಖವನ್ನು ಅದು ಅನುಭವಿಸುತ್ತಾ ಬಂದಿದೆ. ಇಂಥ ಕಾನೂನು ಜಗತ್ತಿನ ಯಾವ ದೇಶದಲ್ಲೂ ಇರಲ್ಲಿಕ್ಕಿಲ್ಲ. ಚೀನಾ ತನ್ನ ಅಕ್ಕಪಕ್ಕ ಚಾಚಿಕೊಂಡ ಮಕಾನ್, ಹಾಂಗ್ಕಾಂಗ್, ಅರುಣಾಚಲಪ್ರದೇಶದ ಕೆಲ ಪ್ರದೇಶಗಳೆಲ್ಲ ತನ್ನದೇ ಎಂದು ಬಾಚಿಕೊಳ್ಳುತ್ತಿದೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವೇ ಆಗಿರುವ ಜಮ್ಮು-ಕಾಶ್ಮೀರದ ಮೇಲೆ ನಮಗೆ ಯಾವುದೇ ಹಿಡಿತವೇ ಇಲ್ಲ. ಇದೊಂಥರ ‘ಅವಳು ಮಗನ ಹೆಂಡತಿ ಹೌದು. ಆದರೆ ಸೊಸೆ ಅಲ್ಲ’ ಎಂದು ಹೇಳಿದಂತಿದೆ. ಇಂಥ ಕ್ರೂರ ಅಣಕವನ್ನು ಕಳೆದ ಆರೂವರೆ ದಶಕಗಳಿಂದ ನೋಡುತ್ತಿದ್ದೇವೆ. ಇವೆಲ್ಲ ಚರ್ಚೆಗೆ ಬಂದು ಬಿಡಬಹುದೆಂಬ ಕಾರಣಕ್ಕೆ ಈ ವಿಷಯದ ಪ್ರಸ್ತಾಪವೇ ಬೇಡ ಎಂದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಬೊಬ್ಬಿಟ್ಟಿರುವುದು.
ಸಂವಿಧಾನದ 370ನೇ ವಿಧಿಯ ಹಕೀಕತ್ತು ಏನು, ಅದು ಜಾರಿಯಾಗಿದ್ದರ ಹಿನ್ನೆಲೆ ಏನು? ಆ ವಿಧಿಯ ಉದ್ದೇಶ ಏನಿತ್ತು. ಅಷ್ಟಕ್ಕೂ ಆ ವಿಧಿಯಲ್ಲಿ ಏನಿವೆ ಎಂಬುದನ್ನು ತಿಳಿದರೆ ಅದರ ಕರಾಳ ಮುಖದ ಅನಾವರಣವಾಗುತ್ತದೆ.


1947ರ ಆರಂಭದಲ್ಲಿ ಭಾರತದ ಸ್ವಾತಂತ್ರ್ಯ ಶಾಸನವನ್ನು ಬ್ರಿಟನ್ ಸಂಸತ್ತು ಅಂಗೀಕರಿಸಿತ್ತು. ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರ ಹಸ್ತಾಂತರಿಸಿದ ಬಳಿಕ ಉಭಯ ದೇಶಗಳಿಗೆ ಸೇರಿದ 560 ರಾಜಪ್ರಭುತ್ವಗಳಿಗೆ ಎರಡೂ ದೇಶಗಳ ಪೈಕಿ ತಮಗೆ ಸರಿ ತೋರಿದ ದೇಶದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಕಲ್ಪಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರು ದೇಶವನ್ನು ಭೌಗೋಳಿಕವಾಗಿ ಒಂದುಗೂಡಿಸಿದ ಸಂದರ್ಭದಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡು ಹೈದರಾಬಾದಿನ ನಿಜಾಮರು ಆಡಿದ ಆಟಗಳಿಗೆ ಕೊನೆ ಹೇಳಿದರು. ಇದರ ಪರಿಣಾಮ ಹೈದರಾಬಾದ್ ಬೇಷರತ್ ಆಗಿ ಭಾರತ ಒಕ್ಕೂಟ ರಾಜ್ಯದಲ್ಲಿ ವಿಲೀನಗೊಂಡಿತು. ಕಾಶ್ಮೀರದ ವಿಷಯದಲ್ಲಿ ಇದೇ ನೀತಿಯನ್ನು ಅನುಸರಿಸಿದ್ದರೆ, ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ನೆಹರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಜಮ್ಮು-ಕಾಶ್ಮೀರದ ಜವಾಬ್ದಾರಿಯನ್ನು ತಾವೇ ನಿಭಾಯಿಸುವುದಾಗಿ ಹೇಳಿ, ಪಟೇಲ್ರನ್ನು ಪಕ್ಕಕ್ಕೆ ಸರಿಸಿದರು. ಕಾಶ್ಮೀರದ ಮಹಾರಾಜ ಹರಿಸಿಂಗ್ನ ಆಳ್ವಿಕೆಯನ್ನು ಕೊನೆಗೊಳಿಸಲು ಹೊಂಚು ಹಾಕುತ್ತಿದ್ದ ಷೇಕ್ ಅಬ್ದುಲ್ಲಾ, ಲಾರ್ಡ್ ಮೌಂಟ್ಬ್ಯಾಟನ್ ಮೂಲಕ ನೆಹರು ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ. ಇದು ಸಮಸ್ಯೆಯು ಸುಲಭ ಇತ್ಯರ್ಥವಾಗುವುದಕ್ಕೆ ಅಡ್ಡಿಯಾಯಿತು. ರಾಜದ್ರೋಹದ ಆಪಾದನೆ ಮೇರೆಗೆ ಮಹಾರಾಜ ಹರಿಸಿಂಗ್ 1947ರಲ್ಲಿ ಷೇಕ್ ಅಬ್ದುಲ್ಲಾನನ್ನು ಬಂಧಿಸಿದಾಗ ನೆಹರು ಅವನ ಪರ ವಕಾಲತ್ತು ವಹಿಸಿದ್ದರು. ಷೇಕ್ ಅಬ್ದುಲ್ಲಾ ಜತೆಗೆ ಅವರ ಸಂಬಂಧ ಕುದುರಿತ್ತು. ಯಾವಾಗ ಲಾರ್ಡ್ ಮೌಂಟ್ಬ್ಯಾಟನ್ ಒತ್ತಡ ಹೇರಿದರೋ, ನೆಹರು ಸುಲಭವಾಗಿ ಅದಕ್ಕೆ ಮಣಿದರು. 1948ರ ಜನವರಿ 1ರಂದು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಒಪ್ಪಿಸಿಬಿಟ್ಟರು. ಇದು ಇಡೀ ಸಮಸ್ಯೆಯನ್ನು ಜಟಿಲಗೊಳಿಸಿತು. ಜಮ್ಮು-ಕಾಶ್ಮೀರವನ್ನು ಹರಿಸಿಂಗ್ ಅನುಮತಿಯೊಂದಿಗೆ ಸಂಪೂರ್ಣವಾಗಿ ಭಾರತದೊಳಗೆ ವಿಲೀನಗೊಳಿಸಿ ಸಮಸ್ಯೆಯನ್ನು ಕಾಯಂ ಆಗಿ ಕೊನೆಗೊಳಿಸಬಹುದಿತ್ತು. ಆದರೆ ಷೇಕ್ ಅಬ್ದುಲ್ಲಾನ ಬೆದರಿಕೆ ತಂತ್ರ, ಪುಸಲಾವಣೆ, ಬಣ್ಣದ ಮಾತುಗಳಿಗೆ ನೆಹರು ಮಣಿದರು. ತನ್ನನ್ನು ಸ್ವತಂತ್ರ ಕಾಶ್ಮೀರದ ಪ್ರಧಾನಿಯನ್ನಾಗಿ ಘೋಷಿಸದಿದ್ದರೆ ಒಂದು ಕೋಮಿನ ಮುನಿಸಿಗೆ ತುತ್ತಾಗುವ ಅಪಾಯವಿದೆಯೆಂದು ಬೆದರಿಸಿದರು. ಜಮ್ಮು-ಕಾಶ್ಮೀರದ ಮೂರನೆ ಒಂದು ಭಾಗವನ್ನು ಪಾಕ್ ಆಕ್ರಮಿಸಿಕೊಂಡಿರುವುದರಿಂದ ತಮ್ಮ ಮನವಿಯನ್ನು ಪುರಸ್ಕರಿಸುವುದು ಅನಿವಾರ್ಯ ಎಂದು ಷೇಕ್ ಅಬ್ದುಲ್ಲಾ ನೆಹರುಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಕಾಶ್ಮೀರವನ್ನು ಆಳುವ ಹುಮ್ಮಸ್ಸಿನಲ್ಲಿದ್ದ ಅಬ್ದುಲ್ಲಾ ತನ್ನ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ನೆಹರು ಮುಂದೆ ಹಠ ಹಿಡಿದರು.
ಆಗ ಹುಟ್ಟಿಕೊಂಡಿದ್ದೇ ಸಂವಿಧಾನದ 370ನೇ ವಿಧಿ.
ಭಾರತದೊಡನೆ ಕಾಶ್ಮೀರದ ವಿಲೀನವನ್ನು ಜಮ್ಮು-ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಕೆಲವು ಅವಕಾಶಗಳನ್ನು ಒಳಗೊಂಡ 370ನೇ ವಿಧಿಯನ್ನು ಸಂವಿಧಾನದಲ್ಲಿ ತಾತ್ಕಾಲಿಕ ಕ್ರಮವಾಗಿ ಸೇರಿಸಲಾಯಿತು. ಸಂವಿಧಾನದ 21ನೇ ಪರಿಚ್ಛೇದದಲ್ಲಿ ಈ ವಿಧಿಯ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ 370ನೇ ವಿಧಿ ಎಂಬುದು ತಾತ್ಕಾಲಿಕ, ಪರಿವರ್ತನೆಯ ಅಧಿಕಾರವೇ ಹೊರತು, ಅದು ಶಾಶ್ವತ ಅಧಿಕಾರ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ವಿಚಿತ್ರ ಅಂದರೆ ಇದು ಭಾರತದ ಉಳಿದ ಎಲ್ಲ ರಾಜ್ಯಗಳಿಗೆ ಅನ್ವಯವಾಗುತ್ತದೆ. ಆದರೆ ಜಮ್ಮು-ಕಾಶ್ಮೀರಕ್ಕೆ ಅಲ್ಲ. 370ನೇ ವಿಧಿಯನ್ನು ತಾತ್ಕಾಲಿಕ ಕ್ರಮ ಎಂದು ಹೇಳಿದ್ದಕ್ಕೂ ಷೇಕ್ ಅಬ್ದುಲ್ಲಾ ತಕರಾರು ತೆಗೆದಿದ್ದರು. ಅಲ್ಲದೇ ತಮ್ಮನ್ನು ಜಮ್ಮು-ಕಾಶ್ಮೀರದ ಪ್ರಧಾನಿ ಎಂದು ಘೋಷಿಸಿಕೊಂಡಿದ್ದರು. ಈ ದೇಶದಲ್ಲಿ ಎಂಥೆಂಥ ಅನಾಹುತಗಳಾಗಿವೆಯೆಂಬುದಕ್ಕೆ ಇದಕ್ಕಿಂತ ಹೆಚ್ಚಿನ ಹುಡುಗಾಟಿಕೆ ಬೇಕಾ? 1965ರವರೆಗೂ ಜಮ್ಮು-ಕಾಶ್ಮೀರದಲ್ಲಿ ಮುಖ್ಯಮಂತ್ರಿ ಬದಲಾಗಿ ಪ್ರಧಾನಮಂತ್ರಿ ಮತ್ತು ರಾಜ್ಯಪಾಲರ ಬದಲು ‘ಸದರ-ಇ- ರಿಯಾಸತ್’ ಎಂದು ಕರೆಯಲಾಗುತ್ತಿತ್ತು. ಲಾರ್ಡ್ ಮೌಂಟ್ಬ್ಯಾಟನ್ನರ ಪ್ರಭಾವಕ್ಕೆ ಸಿಲುಕಿ ನೆಹರು ಮಾಡಿದ ಇನ್ನೊಂದು ಘೋರ ತಪ್ಪೆಂದರೆ ಭಾರತಕ್ಕೆ ಸೇರ್ಪಡೆಯಾಗುವ ಅಂತಿಮ ನಿರ್ಧಾರವನ್ನು ಜಮ್ಮು-ಕಾಶ್ಮೀರದ ವಿಧಾನಸಭೆಗೆ ಬಿಟ್ಟಿದ್ದು. ಇಂಥ ಅವಕಾಶ ಭಾರತದ ಬೇರಾವುದೇ ರಾಜ್ಯಗಳಿಗೂ ಇಲ್ಲ. ಹಾಗೆ ಹೇಳುವುದಾದರೆ ಭಾರತಕ್ಕೊಂದೇ ಸಂವಿಧಾನ ತಾನೇ? ಯಾವ ರಾಜ್ಯಕ್ಕೂ ತನ್ನದೇ ಪ್ರತ್ಯೇಕ ಸಂವಿಧಾನ ಹೊಂದುವ ಅವಕಾಶವಿಲ್ಲ. ಆದರೆ ಜಮ್ಮು-ಕಾಶ್ಮೀರಕ್ಕೆ ಇಲ್ಲೂ ವಿನಾಯತಿ. ಊರಿಗೊಂದು ದಾರಿಯಾದರೆ ಪೋರನಿಗೆ ಇನ್ನೊಂದು ದಾರಿ!
ಸಂವಿಧಾನದ 370ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತು, ಉಪಕ್ರಮ, ವಿನಾಯತಿಗಳನ್ನು ಕೊಡಲಾಗಿದೆ. 1. ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು. 2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ (ಕಮ್ಯುನಿಕೇಶನ್) ಈ ನಾಲ್ಕು ವಿಷಯಗಳಲ್ಲಿ ಮಾತ್ರ ಭಾರತದ ಕಾನೂನು, ಸಂವಿಧಾನ ಲಾಗೂ ಆಗುತ್ತದೆ. 3. ಸಂವಿಧಾನದ ಎಲ್ಲ ವಿಧಿ-ವಿಧಾನಗಳನ್ನು ಅನುಷ್ಠಾನ ಮಾಡಬೇಕೆಂದರೆ ಜಮ್ಮು-ಕಾಶ್ಮೀರ ಸರ್ಕಾರದ ಅನುಮತಿ ಪಡೆಯಬೇಕು. 4. ಜಮ್ಮು-ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು. 5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂತಾಯಿತು. 6. ರಾಷ್ಟ್ರಪತಿಯವರೇನಾದರೂ ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರ್ಕಾರದ ಶಿಫಾರಸು ಅತ್ಯಗತ್ಯ.
‘ಮೋದಿ ಪ್ರಧಾನಿಯಾಗಿ ಹತ್ತು ಸಲ ಆಯ್ಕೆಯಾದರೂ ಅವರಿಗೆ 370ನೇ ವಿಧಿಯನ್ನು ಮುಟ್ಟಲು ಆಗುವುದಿಲ್ಲ’ ಎಂದು ಷೇಕ್ ಅಬ್ದುಲ್ಲಾ ಅವರ ಮಗ ಫಾರೂಕ್ ಅಬ್ದುಲ್ಲಾ ಹೇಳಿದ್ದು ಸುಮ್ಮನೇನಾ? ಯಾರೇ ಬಂದರೂ ತಿಪ್ಪರಲಾಗ ಹಾಕಿದರೂ 370ನೇ ವಿಧಿ ಬಗ್ಗೆ ಏನೂ ಮಾಡಲಾಗುವುದಿಲ್ಲ.
ಈ ವಿಧಿಯನ್ವಯ ರಾಜ್ಯದ ಆಡಳಿತ ನಡೆಸುವ ಮುಖ್ಯಸ್ಥರಿಗೆ ವಿಶೇಷ ಅಧಿಕಾರ ನೀಡಿರುವುದರಿಂದ, ಇಲ್ಲಿವರೆಗೆ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು ಪ್ರತ್ಯೇಕ ಅಸ್ತಿತ್ವವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ತಮಗೆ ದಕ್ಕಿದ ಈ ವಿಶೇಷ ‘ಕಿರೀಟ’ವನ್ನು ತೆಗೆದಿರಿಸಲು ಅವರಿಗೆ ಮಂಡೆ ಕೆಟ್ಟಿದೆಯಾ?


ತಮಾಷೆ ಇಲ್ಲಿಗೇ ನಿಂತಿಲ್ಲ. 1954ರಲ್ಲಿ ಜಮ್ಮು-ಕಾಶ್ಮೀರ ಶಾಸನ ಸಭೆ ರಾಜ್ಯವನ್ನು ಭಾರತದೊಡನೆ ವಿಲೀನಗೊಳಿಸುವ ಪ್ರಸ್ತಾವನೆಗೆ ತನ್ನ ಅಂಗೀಕಾರ ನೀಡಿತು. ಆನಂತರ 1956ರಲ್ಲಿ ಜಮ್ಮು-ಕಾಶ್ಮೀರದ ಸಂವಿಧಾನಕ್ಕೆ ಒಂದು ಗೊತ್ತುವಳಿಯನ್ನು ಸೇರಿಸಲಾಯಿತು. ಸೆಕ್ಷನ್ 3 ಎಂದು ಕರೆಯಲಾಗುವ ಈ ಗೊತ್ತುವಳಿಯಲ್ಲಿ ‘ಜಮ್ಮು-ಕಾಶ್ಮೀರ ರಾಜ್ಯ ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ, ತಿದ್ದುಪಡಿ ತರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 1956ರಲ್ಲಿ ಭಾರತ ಸಂವಿಧಾನಕ್ಕೆ ತರಲಾದ ಏಳನೇ ತಿದ್ದುಪಡಿಯ ಒಂದನೇ ಪರಿಚ್ಛೇದದ ಅನ್ವಯ ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯಗಳಲ್ಲಿ ಒಂದಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲ ಆದ ನಂತರ ಸಂವಿಧಾನದ 370ನೇ ವಿಧಿಯನ್ನು ಉಳಿಸಿಕೊಳ್ಳುವ ಅಗತ್ಯವೇ ಇಲ್ಲ. 1956ರಲ್ಲಿಯೇ ಈ ವಿಧಿಯನ್ನು ನ್ಯಾಯಯುತವಾಗಿ ರದ್ದುಗೊಳಿಸಬೇಕಿತ್ತು. ಕಾಂಗ್ರೆಸ್ ಪಕ್ಷದೊಳಗೆ ಸಹ ಈ ವಿಧಿಯ ಬಗ್ಗೆ ವಿರೋಧ ವ್ಯಕ್ತವಾಯಿತು. ಆದರೆ ಈ ಕ್ರಮದಿಂದ ಮುಸ್ಲಿಮರಿಗೆ ಬೇಸರವಾಗಬಹುದು ಹಾಗೂ ತಮ್ಮ ಆಪ್ತಮಿತ್ರ, ಒಂದು ಕಾಲದ ಕಕ್ಷಿದಾರ ಷೇಕ್ ಅಬ್ದುಲ್ಲಾ ಮನಸ್ಸು ನೊಂದೀತು ಎಂದು ಅದನ್ನು ರದ್ದುಗೊಳಿಸುವ ಆಗ್ರಹವನ್ನು ಜವಾಹರಲಾರ ನೆಹರು ತಿರಸ್ಕರಿಸಿದರು.
ಈ ವಿಧಿಯನ್ನು ಯಾರು ಬರೆದರೋ ಏನೋ. ಇದು ಹೆಜ್ಜೆ ಹೆಜ್ಜೆಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ. ಕುಳಿತರೆ, ನಿಂತರೆ, ಪಕ್ಕಕ್ಕೆ ಕದಲಿದರೆ, ಏನೂ ಮಾಡದೆ ಸುಮ್ಮನಿದ್ದರೆ ಈ ಮುಳ್ಳು ಅಂದಿನಿಂದಲೂ ಚುಚ್ಚುತ್ತಲೇ ಇದೆ. ಇಡೀ ದೇಶ ವಿಧಿಯಿಲ್ಲದೇ, ಚುಚ್ಚಿಸಿಕೊಳ್ಳುತ್ತಿದೆ. ಇದೆಂಥ ಅಸಹಾಯಕತೆ, ದೈನೇಸಿ ಪರಿಸ್ಥಿತಿ?
ಭಾರತ ಸಂವಿಧಾನದ 19 (1) (ಇ) ಮತ್ತು (ಜಿ) ವಿಧಿಯನುಸಾರ, ಒಬ್ಬ ಪ್ರಜೆ ದೇಶದ ಯಾವುದೇ ಪ್ರದೇಶದಲ್ಲಿ ವಾಸಿಸಲು, ಶಾಶ್ವತವಾಗಿ ನೆಲೆಸಲು ಅಧಿಕಾರ ಹೊಂದಿದ್ದಾನೆ(ಳೆ). ಹೀಗೆ ವಾಸಿಸುವ, ನೆಲೆಸುವ ವ್ಯಕ್ತಿ ತನಗೆ ಸರಿ ತೋರಿದ ವೃತ್ತಿ, ಉದ್ಯೋಗ, ವ್ಯಾಪಾರ ವಹಿವಾಟು ನಡೆಸಲು ಸ್ವತಂತ್ರ. ಆದರೆ 370ನೇ ವಿಧಿಯನ್ವಯ ಭಾರತದ ಇತರ ರಾಜ್ಯಗಳ ಪ್ರಜೆಗಳು ಜಮ್ಮು-ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ. ಇದ್ಯಾವ ಸೀಮೆ ನ್ಯಾಯ? ಇದು ಪ್ರತ್ಯೇಕತೆಯ ಪರಮೋಚ್ಛವಲ್ಲವೇ? ಅಂದರೆ ಜಮ್ಮು-ಕಾಶ್ಮೀರ ನಮ್ಮ ದೇಶದ ಅಂಗರಾಜ್ಯವಾದರೂ ನಮ್ಮ ಸಂವಿಧಾನಕ್ಕೆ ಬಿಡಿಗಾಸಿನ ಬೆಲೆ ಇಲ್ಲ. ಅಂದರೆ ಇದೆಂಥ ಕರಾಳ ಶಾಸನವಿದ್ದಿರಬಹುದೋ ಯೋಚಿಸಿ.
ನಮ್ಮ ಸಂಸತ್ತಿನಲ್ಲಿ ಅನುಮೋದನೆಯನ್ನೇ ಪಡೆಯದೇ ದೇಶದ ಸಂವಿಧಾನದ ಮರ್ಯಾದೆ ಕಾಪಾಡಲು 370ನೇ ವಿಧಿಗೆ ನಾಲ್ಕು ಸಲ ತಿದ್ದುಪಡಿ ತರಲಾಗಿದೆ. ಇದರ ಫಲವಾಗಿ ನಮ್ಮ ಸಂವಿಧಾನದ ಸುಮಾರು 878 ವಿಧಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವಂತಾಗಿದೆ. ಅವುಗಳನ್ನೂ ಜಮ್ಮು-ಕಾಶ್ಮೀರ ಸರ್ಕಾರ ಪಾಲಿಸುವುದಿಲ್ಲ. ಸಂವಿಧಾನದ 300ನೇ ವಿಧಿಯನ್ವಯ ಕೇಂದ್ರ ಸರ್ಕಾರ ರಾಜ್ಯದಲ್ಲಿ ಆರ್ಥಿಕ ತುರ್ತುಸ್ಥಿತಿಯನ್ನು ಘೋಷಿಸಬಹುದು. ಆದರೆ ಜಮ್ಮು-ಕಾಶ್ಮೀರದಲ್ಲಿ ಈ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತಿಲ್ಲ. ಆಂತರಿಕ ಕ್ಷೋಭೆ, ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ತುರ್ತುಸ್ಥಿತಿ ಘೋಷಿಸಿ ಅದನ್ನು ಜಮ್ಮು-ಕಾಶ್ಮೀರದಲ್ಲೂ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರ ಬಯಸಿದರೆ, ರಾಜ್ಯ (ಜಮ್ಮು-ಕಾಶ್ಮೀರ) ಸರ್ಕಾರದ ಅನುಮತಿ ಪಡೆಯಬೇಕು. ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಅಂದ್ರೆ ಇದು!
370ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ಸರ್ಕಾರ ಕೇಂದ್ರಕ್ಕೆ ದಮಡಿ ಕಿಮ್ಮತ್ತು ಕೊಡುತ್ತಿಲ್ಲ. ಸಂವಿಧಾನದ 356ನೇ ವಿಧಿಯ ಪ್ರಕಾರ, ರಾಷ್ಟ್ರಪತಿಯವರೇನಾದರೂ ತಮ್ಮ ಪರಮಾಧಿಕಾರ ಬಳಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ನಿರ್ಧರಿಸಿದರೆನ್ನಿ, ಅಂಥ ಸಂದರ್ಭದಲ್ಲಿ ರಾಷ್ಟ್ರಪತಿಯವರು ಜಮ್ಮು-ಕಾಶ್ಮೀರದ ರಾಜ್ಯಪಾಲರ ಅನುಮತಿ ಪಡೆಯಬೇಕು! ರಾಷ್ಟ್ರಪತಿಯಿಂದ ನೇಮಕವಾಗುವ ರಾಜ್ಯಪಾಲ ಈ ಸಂದರ್ಭದಲ್ಲಿ ದೊಣ್ಣೆ ನಾಯಕನಂತೆ ವರ್ತಿಸುವುದಾದರೆ, ರಾಷ್ಟ್ರಪತಿಯವರ ಮರ್ಯಾದೆ ಎಲ್ಲಿಗೆ ಬಂತು? ರಾಷ್ಟ್ರಪತಿ ಆಳ್ವಿಕೆ ಹೇರುವ ಸಂದರ್ಭದಲ್ಲಿ ರಾಷ್ಟ್ರಪತಿ ಕಳಿಸುವ ಪ್ರಸ್ತಾವವನ್ನು ರಾಜ್ಯಪಾಲ ತಿರಸ್ಕರಿಸಬಹುದು! ಹೇಗಿದೆ ಸ್ವಾಮಿ 370ನೇ ವಿಧಿ ಬರಹ?
ಭಾರತದ ಪ್ರಜೆಗಳಿಗೆ ಒಂದೇ ನಾಗರಿಕತ್ವ. ಜಮ್ಮು-ಕಾಶ್ಮೀರದವರಿಗೆ ಒಂದು ಪುಕ್ಕ ಜಾಸ್ತಿ. ಅವರಿಗೆ ಎರಡೆರಡು ನಾಗರಿಕತ್ವ. ಜಮ್ಮು-ಕಾಶ್ಮೀರದ ಪ್ರಜೆಯಾದರೆ ನೀವು ಭಾರತ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಪಕ್ಷಾಂತರ ವಿರೋಧಿ ಕಾನೂನು, ನಗರ ಭೂಮಿ ಕಾಯ್ದೆ ಯಾವುದೂ ಅಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ‘ಇಲ್ಲಿ ತನಕ ಎಷ್ಟು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ? ಎಷ್ಟು ಮಂದಿ ಕಾಶ್ಮೀರಿ ಪಂಡಿತರನ್ನು ಓಡಿಸಿದ್ದೀರಿ? ಸಾಯಿಸಿದ್ದೀರಿ? ಈಗ ಎಷ್ಟು ಮಂದಿ ಅಲ್ಲಿ ಉಳಿದಿದ್ದಾರೆ?’ ಎಂಬ ಮಾಹಿತಿ ಕೋರಿ ಅಲ್ಲಿನ ಸರ್ಕಾರಕ್ಕೆ ಅರ್ಜಿ ಹಾಕಿ ಕೇಳಿದರೆನ್ನಿ. ನಿಮ್ಮ ಅರ್ಜಿ ಕಸದ ಬುಟ್ಟಿಗೆ ಸೇರುತ್ತದೆ. ಕಾರಣ ಅಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನ್ವಯವೇ ಆಗುವುದಿಲ್ಲ.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಕೊಡುವ ಕಾನೂನು ಅಂದ್ರೆ ಏನು ಅಂತ ಜಮ್ಮು-ಕಾಶ್ಮೀರ ಸರ್ಕಾರ ಕೇಳಿದರೆ ಅಚ್ಚರಿಯಿಲ್ಲ. ಮಾನವಹಕ್ಕು, ಮಹಿಳಾಹಕ್ಕು ಆಯೋಗಗಳು ಹೆಸರಿಗೂ ಇಲ್ಲ. ಶಿಕ್ಷಣಹಕ್ಕು, ಸಮಾನತೆ ಹಕ್ಕು ಇಲ್ಲೆಲ್ಲ ಅನ್ವಯವಾಗುವುದಿಲ್ಲ. ಪರಿಶಿಷ್ಟರ ಗಣತಿ ಸಹ ನಡೆಯುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಮಂತ್ರಿಗಳು ಪ್ರಮಾಣ ವಚನದ ಒಕ್ಕಣಿಕೆಯೇ ಬೇರೆ. ಎಲ್ಲ ರಾಜ್ಯಗಳಲ್ಲಿ ವಿಧಾನಸಭೆಯ ಅವಧಿ ಐದು ವರ್ಷಗಳಿದ್ದರೆ ಇಲ್ಲಿ ಆರು ವರ್ಷ. ಜಮ್ಮು-ಕಾಶ್ಮೀರದ ಸಂವಿಧಾನದಲ್ಲಿ ಸೆಕ್ಯುಲರಿಸಂ ಹಾಗೂ ಸೋಷೀಯಲಿಸಂ ಪ್ರಸ್ತಾಪವೇ ಇಲ್ಲ.


ಜಮ್ಮು-ಕಾಶ್ಮೀರದ ಪರಿಧಿಯಲ್ಲಿ ಸಿಬಿಐ ಯಾವುದೇ ತನಿಖೆಯನ್ನು ಕೈಗೆತ್ತಿಕೊಳ್ಳುವಂತಿಲ್ಲ. ಒಂದು ವೇಳೆ ತನಿಖೆ ಅನಿವಾರ್ಯವಾದರೆ ರಾಜ್ಯ ಸರ್ಕಾರ ಅಥವಾ ಹೈಕೋರ್ಟಿನ ಅನುಮತಿ ಪಡೆಯಬೇಕು. ಸುಪ್ರಿಂಕೋರ್ಟಿಗೆ ಇಲ್ಲಿ ಕೇವಲ appelant jurisdictiion ಇದೆ. ಅಂದರೆ ಅಪೀಲು ಮಾಡಿದ ಪ್ರಕರಣಗಳನ್ನಷ್ಟೇ ಕೈಗೆತ್ತಿಕೊಳ್ಳಬಹುದು.
ಜನಪ್ರತಿನಿಧಿ ಕಾಯ್ದೆಯೂ ಇಲ್ಲಿ ಬುರ್ನಾಸು. 2002ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಇಡೀ ದೇಶದಲ್ಲಿ ಜಾರಿಗೆ ಬಂದರೆ, ಇಲ್ಲಿ ಜಾರಿಯಾಗಲೇ ಇಲ್ಲ. ದಲಿತರಿಗೆ, ಹಿಂದುಳಿದವರಿಗೆ ಇಲ್ಲಿ ಮೀಸಲಾತಿಯ ಪ್ರಯೋಜನವೇ ಸಿಕ್ಕಿಲ್ಲ. ಆದರೂ ಲಾಲೂ, ಮಾಯಾವತಿ, ಮುಲಾಯಂ ಈ ಬಗ್ಗೆ ಚಕಾರವೆತ್ತಿಲ್ಲ.
ಜಮ್ಮು-ಕಾಶ್ಮೀರದ ಮಹಿಳೆಯೊಬ್ಬಳು ಬೇರೆ ರಾಜ್ಯದ ವ್ಯಕ್ತಿಯನ್ನು ವಿವಾಹವಾದರೆ ಆಕೆಗೆ ಆಸ್ತಿ ಹಕ್ಕು ಇಲ್ಲವಾಗುತ್ತದೆ. ಪಿತ್ರಾರ್ಜಿತ ಆಸ್ತಿಯ ಹಕ್ಕಿನಿಂದಲೂ ಆಕೆ ವಂಚಿತಳಾಗುತ್ತಾಳೆ. ಆದರೆ 2004ರಲ್ಲಿ ಅಲ್ಲಿನ ಹೈಕೋರ್ಟ್ ಜಮ್ಮು-ಕಾಶ್ಮೀರ ವರ್ಸಸ್ ಶೀಲಾ ಸಾವನೆ ಪ್ರಕರಣದಲ್ಲಿ ಈ ನಿಯಮಕ್ಕೆ ಯಾವುದೇ ಕಾನೂನಿನ ಆಧಾರವಿಲ್ಲ ಎಂದು ಹೇಳಿತ್ತು. ಅಲ್ಲಿಗೆ ಬೇರೆ ರಾಜ್ಯಗಳ ಗಂಡಸರನ್ನು ವಿವಾಹವಾಗುವ ಕಾಶ್ಮೀರದ ಮಹಿಳೆಗೆ ನ್ಯಾಯ ಸಿಗಬೇಕಿತ್ತು. ಆದರೆ ಅಂದು ಅಧಿಕಾರದಲ್ಲಿದ್ದ (ಆಕೆಯೂ ಹೆಂಗಸು) ಪ್ರೊಗ್ರೆಸಿವ್ ಡೆಮಾಕ್ರೆಟಿಕ್ ಪಾರ್ಟಿಯ (ಪಿಡಿಪಿ) ಮೆಹಬೂಬಾ ಮುಫ್ತಿ. ಹೈಕೋರ್ಟ್ ತೀರ್ಪನ್ನು ಬುಡಮೇಲು ಮಾಡಲು ‘ಖಾಯಂ ನಿವಾಸಿಗಳ (ಅನರ್ಹ) ಮಸೂದೆ’ಯನ್ನು ಮಂಡಿಸಿದರು. ಈ ಮಸೂದೆಯ ಆಶಯವೇನು ಗೊತ್ತಾ? ಕಾಶ್ಮೀರದ ಮಹಿಳೆ ರಾಜ್ಯದ ಹೊರಗಿನವರನ್ನು ಮದುವೆಯಾದರೆ, ತನ್ನ ಖಾಯಂ ನಿವಾಸಿ ಸ್ಥಾನದಿಂದ ಅನರ್ಹಗೊಳಿಸುವುದು.
ದುರ್ದೈವವೆಂದರೆ ಈ ಮಸೂದೆಗೆ ರಾಜಕೀಯ ವಿರೋಧ ಮರೆತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿದರು. ಆದರೆ ತಾಂತ್ರಿಕ ಕಾರಣಗಳಿಂದ ಅದು ಅಂಗೀಕಾರವಾಗಲಿಲ್ಲ. 2010ರಲ್ಲಿ ಪುನಃ ಇಂಥದೇ ಮಸೂದೆಗೆ ಚಾಲನೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ.
370ನೇ ವಿಧಿ ಎಂಬ ಬ್ರಹ್ಮಾಸ್ತ್ರದ ಮುಂದೆ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್) ಗೆ ಕವಡೆ ಕಿಮ್ಮತ್ತಿಲ್ಲ. ಐಪಿಸಿಯ ಯಾವ ಸೆಕ್ಷನ್ ಆದ್ರೂ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಇದರ ಬದಲು ಜಮ್ಮು-ಕಾಶ್ಮೀರದಲ್ಲಿ ರಣವೀರ ದಂಡಸಂಹಿತೆ ಈಗ ಜಾರಿಯಲ್ಲಿದೆ.
ಜಮ್ಮು-ಕಾಶ್ಮೀರಕ್ಕೆ ಭಾರತದ ಸಂವಿಧಾನ ಬೇಡ. ಕಾನೂನು ಬೇಡ, ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ನಿಯಮ, ಶಾಸನಗಳು ಬೇಡ. ರೀತಿ-ರಿವಾಜುಗಳು ಬೇಡ. ಕೇಂದ್ರ ಸರ್ಕಾರ ಅಂದ್ರೆ ಯಾವ ಮರದ ತೊಪ್ಪಲು ಎಂಬ ಭಾವನೆ, ಹತ್ತೂ ಸಮಸ್ತರಿಗೆ ಲಾಗೂ ಆಗುವುದ್ಯಾವುದೂ ಬೇಡ. ಆದರೆ ಕೇಂದ್ರ ಸರ್ಕಾರದ ಸಹಾಯಧನ, ಹಣಕಾಸು ನೆರವು ಮಾತ್ರ ಬೇಕು. ತಾವು ತೆರಿಗೆ ಕಟ್ಟದಿದ್ದರೂ, ಬೇರೆ ರಾಜ್ಯಗಳ ಜನತೆ ಕಟ್ಟಿದ ತೆರಿಗೆಯಲ್ಲಿ ಪಾಲುಬೇಕು. 1990ರಲ್ಲಿ ಜಮ್ಮು-ಕಾಶ್ಮೀರ ಕೇಂದ್ರದಿಂದ 35.571 ಕೋಟಿ ನೆರವನ್ನು ಪಡೆದಿತ್ತು! ಕಾಶ್ಮೀರದ ಒಬ್ಬ ಪ್ರಜೆ ಪ್ರತಿ ವರ್ಷ ಕೇಂದ್ರದಿಂದ ಪಡೆಯುವ ಹಣಕಾಸು ನೆರವು ನಲವತ್ತು ಸಾವಿರಕ್ಕಿಂತ ಅಧಿಕ. ಬಿಹಾರಕ್ಕೆ ಹೋಲಿಸಿದರೆ ಇದು ಹನ್ನೆರಡು ಪಟ್ಟು ಜಾಸ್ತಿ. ಪಶ್ಚಿಮ ಬಂಗಾಲಕ್ಕೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು. ಆ ರಾಜ್ಯದ ಯೋಜನಾ ವೆಚ್ಚ 1200 ಕೋಟಿ ರೂ. ವೇತನವೂ ಸೇರಿದಂತೆ 2890 ಕೋಟಿ ರೂ. ಆದರೆ ವರಮಾನ ಬರೀ 1100 ಕೋಟಿ ರೂ. ಅಂದರೆ ಸಂಬಳವನ್ನು ಕೇಂದ್ರವೇ ಕೊಡಬೇಕು. ಪ್ರತಿವರ್ಷ ಕೇಂದ್ರದಿಂದ ಅಲ್ಲಿಗೆ ಹೋಗುವ ಹಣ ಹೆಚ್ಚುತ್ತಲೇ ಹೋಗುತ್ತಿದೆ. ಆದರೂ ಜಮ್ಮು-ಕಾಶ್ಮೀರದ ಹಂಗಿನಲ್ಲಿ ಕೇಂದ್ರ ಸರ್ಕಾರವಿದೆ!
2008ರಲ್ಲಿ ಪಾಕಿಸ್ತಾನ ಸರ್ಕಾರ ‘ಕುಶಾಲ ಕಾಶ್ಮೀರ’ ಕಾರ್ಯಕ್ರಮದಡಿ 30 ಕೋಟಿ ರೂ. ನೀಡಿತ್ತು. ಅದಕ್ಕೆ ಜಮ್ಮು-ಕಾಶ್ಮೀರ ವಿಧಾನ ಸಭೆ ಅಭಿನಂದನಾ ನಿರ್ಣಯ ಸ್ವೀಕರಿಸಿತು. ಅದೇ ವರ್ಷ ವಾಜಪೇಯಿ ಸರ್ಕಾರ 6165 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿತು. ಜಮ್ಮು-ಕಾಶ್ಮೀರದ ನಾಯಕರು ಬಾಯಿಬಿಡಲಿಲ್ಲ.
ಸಂವಿಧಾನದ 370ನೇ ವಿಧಿ ಬಗ್ಗೆ ನೆಹರು ಅವರಿಗೆ ಜ್ಞಾನೋದಯವಾಗಲಾರಂಭಿಸಿತ್ತು. ಅದು ಎಂಥ ಗಂಡಾಂತರಕಾರಿಯೆಂಬುದು ಅನುಭವಕ್ಕೆ ಬಂದಿತ್ತು. ತಾವೇ ಹಗ್ಗ ಕೊಟ್ಟು ಕಟ್ಟಿಸಿ ಹಾಕಿಸಿಕೊಳ್ಳುತ್ತಿದ್ದೇವೆಂಬುದು ಅವರ ಅರಿವಿಗೆ ಬಂದಿತ್ತು. 1962ರ ಚೀನಾ ಆಕ್ರಮಣದಿಂದ ನೆಹರು ಮೆತ್ತಗಾಗಿದ್ದರು. 1963ರ ನವೆಂಬರ್ 27ರಂದು ಅವರು ಲೋಕಸಭೆಯಲ್ಲಿ ಹೇಳಿದ ಮಾತುಗಳನ್ನು ಆಲಿಸಿ ಕೇಳಬೇಕು.
‘ಸಂವಿಧಾನದ 370ನೇ ವಿಧಿ ಒಂದು ತಾತ್ಕಾಲಿಕ ಕ್ರಮ. ನಾವು ಈಗ ಸಂಧಿ ಕಾಲದಲ್ಲಿದ್ದೇವೆ. ಇದು ಒಂದು ಸಂದರ್ಭಕ್ಕಾಗಿ ಮಾಡಿಕೊಂಡ ವ್ಯವಸ್ಥೆ. ಗೃಹಸಚಿವರು ಹೇಳಿದಂತೆ ಈ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ದೇಶದ ಇತರ ರಾಜ್ಯಗಳೊಡನೆ ಜಮ್ಮು-ಕಾಶ್ಮೀರ ಸಂಬಂಧವನ್ನು ಗಾಢವಾಗಿ ನಿಕಟಗೊಳಿಸಲಾಗಿದೆ. ಜಮ್ಮು-ಕಾಶ್ಮೀರವನ್ನು ದೇಶದ ಇತರ ಭಾಗದ ಜತೆ ಒಂದುಗೂಡಿಸಲಾಗಿದೆ. ಆದ್ದರಿಂದ 370ನೇವಿಧಿಯನ್ನು ದುರ್ಬಲಗೊಳಿಸುವ, ಶಿಥಿಲಗೊಳಿಸುವ ಕ್ರಮ ಮುಂದುವರಿಯಲಿ’.
ಸ್ವತಃ ಪ್ರಧಾನಿ ನೆಹರು 370ನೇ ವಿಧಿಯನ್ನು ರದ್ದುಗೊಳಿಸುವ ಅಗತ್ಯ ಕುರಿತು ಮಾತಾಡಿ ಸರಿಯಾಗಿ ಐವತ್ತು ವರ್ಷಗಳಾದವು. ಆದರೂ ಈ ಅನಿಷ್ಟದ, ಉಪದ್ರವಿ ವಿಧಿಯನ್ನು ನಾವು ಇನ್ನೂ ಪೋಷಿಸುತ್ತಿದ್ದೇವೆ.
ಅಷ್ಟಕ್ಕೂ ನರೇಂದ್ರ ಮೋದಿ ಹೇಳಿದ್ದರಲ್ಲಿ ಏನು ತಪ್ಪಿದೆ?
ಚರ್ಚೆಯಾಗಲಿ ಬಿಡಿ.

No comments:

Post a Comment