ಇಂಥದೊಂದು ಆಘಾತಕಾರಿ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ 'ರೇಡಿಯೋ ಟೋಕಿಯೋ'. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು!
ಅಂದು ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಾರದರೂ ಏನು ಗೊತ್ತೆ?
'ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ 'ಆಜಾದ್ ಹಿಂದ್' ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದರು ಮಿ. ಬೋಸ್. ಆಗಸ್ಟ್ 16ನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರ್ಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರಬೋಸ್ ಅವರ ಸೇನೆಯ ಅಧಿಕಾರಿ ಮತ್ತು ಆಪ್ತ ಹಬೀಬರ್ ರೆಹಮಾನ್ ಮತ್ತು ಇತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.'
ಆದರೆ...
ಈ ಕುರಿತು ಜಪಾನ್ ಸರ್ಕಾರವಾಗಲಿ, ಅಲ್ಲಿನ ರಾಜಪ್ರಭುತ್ವಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ. ಒಂದು ಪ್ರಕಟಣೆಯನ್ನೂ ಹೊರಡಿಸಲಿಲ್ಲ. ಒಂದು ವೇಳೆ ರಾಜತಾಂತ್ರಿಕ ಕಾರಣಗಳಿಗಾಗಿ ಜಪಾನ್ ಈ ಸುದ್ದಿಯನ್ನು ಮುಚ್ಚಿಟ್ಟಿತೆಂದು ನಂಬೋಣವೆಂದುಕೊಂಡರೂ ಅದಷ್ಟು ಸುಲಭವಿರಲಿಲ್ಲ. ಏಕೆಂದರೆ ನೇತಾಜಿ ಜೊತೆಗೇ ಜಪಾನಿ ಸೈನ್ಯದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದರು ಅಂತ ರೇಡಿಯೋ ಟೋಕಿಯೋ ಪ್ರಕಟಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲ ಸಮಯದ ಹಿಂದಷ್ಟೆ ಕ್ವಾಂಟುಂಗ್ ಪ್ರಾಂತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸರ್ಕಾರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟದ್ದು ಸಂಶಯ ತರಿಸುತ್ತದೆ.
ಹಾಗಾದರೆ ನಿಜಕ್ಕೂ ನಡೆದಿದ್ದೇನು?
1945 ಆಗಸ್ಟ್ ಇಪ್ಪತ್ಮೂರನೇ ತಾರೀಕು 'ರೇಡಿಯೋ ಟೋಕಿಯೋ'ದ ಉದ್ಘೋಷಕ ಓದಿದ್ದ ಸುದ್ದಿಯನ್ನು ಎರಡು ದಿನದ ಹಿಂದೆಯೇ ಬರೆಯಲಾಗಿತ್ತು! ಅಂದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ರೆಡಿಯಾಗಿತ್ತು. ಆಶ್ಚರ್ಯವೆಂದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಅದರಲ್ಲೂ ತಮಿಳು ಬ್ರಾಹ್ಮಣ. ಹೆಸರು ಎಸ್.ವಿ. ಅಯ್ಯರ್. ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ 'ಇಂಡಿಯನ್ ನ್ಯಾಶನಲ್ ಆರ್ಮಿ'ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ 'ಆಜಾದ್ ಹಿಂದ್' ಪ್ರಾಂತೀಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತಂತ್ರ ಭಾರತದ ಕನಸು ಕಂಡಿದ್ದ ನೇತಾಜಿ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ್ದ 'ಆಜಾದ್ ಹಿಂದ್ ರಾಷ್ಟ್ರೀಯ ಬ್ಯಾಂಕ್'ನ ಮುಖ್ಯಸ್ಥನೂ ಆಗಿದ್ದ! ಹೀಗೆ ನೇತಾಜಿಯವರು ನಂಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದನೆಂಬುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ ಅಲ್ಲವೆ? ಆ ಸುದ್ದಿ ಬರೆಯೋದಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂದರೆ ಆಗಸ್ಟ್ ಹದಿನೇಳನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‌ಗೆ ಬಂದಿದ್ದ. ಆದರೆ ಅಲ್ಲಿಂದ ನೇತಾಜಿ ತೈಪೆಗೆ ಬಂದಾಗ ಅಯ್ಯರ್ ಜೊತೆಗಿರಲಿಲ್ಲ!
ನೈಮಿಷಾರಣ್ಯದಲ್ಲಿದ್ದ ಆ ಪರ್ದೇವಾಲಾ ಬಾಬಾ ಯಾರು?
ಈ ಗುಮ್‌ನಾಮಿ ಬಾಬಾನ ಕತೆಗೆ ಇನ್ನೊಂದು ಮುಖ್ಯವಾದ ಮಗ್ಗುಲಿದೆ. ಇದೂ ಅಷ್ಟೇ ನಿಗೂಢ ಮತ್ತು ಆಶ್ಚರ್ಯಕರ. ನೇತಾಜಿಯ ಹಳೆಯ ಸ್ನೇಹಿತ ಮತ್ತು ಪಶ್ಚಿಮ ಬಂಗಾಲದ ವಿಧಾನಸಭೆಯ ಸದಸ್ಯರಾದ ಅತುಲ್‌ಸೇನ್ ಒಮ್ಮೆ ಉತ್ತರಪ್ರದೇಶದ ಸೀತಾಪುರದ ಬಳಿಯಿರುವ ನೈಮಿಷಾರಣ್ಯಕ್ಕೆ ಹೋಗಿದ್ದರು. 1962ರ ಏಪ್ರಿಲ್‌ನಲ್ಲಿ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ, ನೈಮಿಷಾರಣ್ಯಕ್ಕೆ ಹೋಗಿದ್ದ ಅತುಲ್‌ಸೇನ್‌ಗೆ ತಾನು ಅಲ್ಲಿ 'ಪರ್ದೇವಾಲಾ ಬಾಬಾ' ಎಂಬ ವಿಚಿತ್ರ ಹೆಸರಿನ ಸಾಧುವೊಬ್ಬನನ್ನು ಭೇಟಿ ಮಾಡುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಅಲ್ಲಿನ ಒಂದು ಪಾಳುಬಿದ್ದ ಶಿವ ದೇವಾಲಯದಲ್ಲಿ ವಾಸವಾಗಿದ್ದ ಈ ಪರ್ದೇವಾಲಾ ಬಾಬಾನನ್ನು ಭೇಟಿಯಾದ ಅತುಲ್‌ಸೇನೆ ಆತನಲ್ಲಿ ಕೊಂಚ ಹೊತ್ತು ಮಾತಾಡಿದರು. ಮಾತುಕತೆಯ ವೇಳೆಯಲ್ಲೇ ಅತುಲ್ ಸೇನ್‌ಗೆ ಇದು ಖಂಡಿತವಾಗಿಯೇ ಇಂಥದ್ದೊಂದು ಭಾವನೆ ಮನಸಿನಲ್ಲಿ ಮೂಡುತ್ತಿದ್ದಂತೆಯೇ ಆತನಿಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾಗಲಿಲ್ಲ. ಉಕ್ಕಿಹರಿದ ಭಾವೋದ್ರೇಕದಿಂದಾಗಿ ಆತ ಬಾಬಾ ಮುಂದೆ ಇದನ್ನೇ ಹೇಳಿದರು. ಆದರೆ ಈ ಪರ್ದೇವಾಲಾ ಬಾಬಾ ತಾನು ನೇತಾಜಿ ಅಲ್ಲವೇ ಅಲ್ಲವೆಂದು ನಿರಾಕರಿಸಿದ್ದು ಮಾತ್ರವಲ್ಲದೆ, ಅತುಲ್ ಸೇನರಲ್ಲಿ ಅವರ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಂತೆ ಕೇಳಿಕೊಂಡರು. ಇದೇ ರೀತಿಯಲ್ಲಿ ಮತ್ತೆ ಭಾವೋದ್ರೇಕಕ್ಕೊಳಗಾಗಬೇಡ ಮತ್ತು ನೇತಾಜಿ ನಾನೇ ಎಂಬ ಕಲ್ಪನೆಯನ್ನು ಬಿಟ್ಟುಬಿಡು ಅಂತಲೂ ಬಾಬಾ ಹೇಳಿದ್ದರು.
ಈ ಕುರಿತು ಯಾರಲ್ಲೂ ಚರ್ಚಿಸಬೇಡ ಅಂತ ಬಾಬಾ ಹೇಳಿದರೂ ಅತುಲ್ ಸೇನ್ ತಮ್ಮ ಮನದಾಳದ ಭಾವನೆಗಳನ್ನು ಖ್ಯಾತ ಭಾರತೀಯ ಇತಿಹಾಸ ತಜ್ಞರಾದ ಡಾ. ಆರ್.ಸಿ. ಮಜುಂದಾರ್ ಮತ್ತು ತನ್ನ ಕೆಲವು ಹಳೆಯ ಕ್ರಾಂತಿಕಾರಿ ಗೆಳೆಯರ ಬಳಿ ಹೇಳಿಕೊಂಡರು. ಈ ಗೆಳೆಯರೆಲ್ಲಾ ಬಂಗಾಲದಲ್ಲಿ ತುಂಬಾ ಖ್ಯಾತಿ ಪಡೆದಿದ್ದ 'ಅನುಶಿಲೀನ್ ಸಮಿತಿ' ಎಂಬ ಹಳೆಯದಾದ ಕ್ರಾಂತಿಕಾರಿ ಸಂಸ್ಥೆಗೆ ಸೇರಿದವರಾಗಿದ್ದರು. ಸುಮ್ಮನಿರದ ಅತುಲ್‌ಸೇನ್ ಈ ಬಗ್ಗೆ ನೆಹರುರವರಿಗೂ ಒಂದು ಪತ್ರ ಬರೆದರು. ಈ ಪತ್ರಕ್ಕೆ ನೆಹರು ಉತ್ತರವನ್ನೂ ಬರೆದರು-'ಅತುಲ್‌ಸೇನ್ ಪ್ರತಿಕ್ರಿಯಿಸಿದ ರೀತಿಯಿಂದ ಆತ ಅನರ್ಹಗೊಂಡಿದ್ದು ಮುಂದೆಂದೂ ಆತ ಬಾಬಾನನ್ನು ಭೇಟಿಯಾಗಲು ಸಾಧ್ಯವೇ ಇಲ್ಲ' ಅಂತ ಪತ್ರದಲ್ಲಿ ಬರೆದಿತ್ತು ಅಂತ ಹೇಳಲಾಗುತ್ತಿದೆ.
- ಪ್ರತಾಪ್‌ಸಿಂಹ
No comments:
Post a Comment