ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...
- ಕುವೆಂಪು
No comments:
Post a Comment