IMPORTANT NOTICE

New official website is designed for Karada Community. Please visit www.karadavishwa.com for more details.

Thursday, 4 June 2015

ಯಶಸ್ಸು ಗಳಿಸುವುದು ಕಷ್ಟವಲ್ಲ, ಆದರೆ ಇಟ್ಟುಕೊಳ್ಳುವುದು!


ಅನೇಕ ಮಂದಿ ಜೀವನದಲ್ಲಿ ಎಡವುತ್ತಾರೆ, ಸೋಲುತ್ತಾರೆ. ಹಾಗೆಂದು ಇವರು ಸಾಮಾನ್ಯರಲ್ಲ. ಅವರವರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮೆರೆದವರೇ. ಯಶಸ್ಸಿನ ನೆತ್ತಿ ಮೇಲೆ ಗುದ್ದಿ ಗೆಲುವನ್ನು ಎದೆಗವಚಿಕೊಂಡವರೇ. ಇಂಥ ಯಶಸ್ವಿ ವ್ಯಕ್ತಿಗಳು ವೈಯಕ್ತಿಕ ಜೀವನದಲ್ಲಿ ಮುಗ್ಗರಿಸುತ್ತಾರೆ. ಬಾಳನ್ನು ಗಾಳುಮೇಳಾಗಿಸಿಕೊಂಡು ತೊಳಲಾಡುತ್ತಾರೆ. ಇಂಥವರ ಬಹಳ ದೊಡ್ಡ ದುರಂತವೇನೆಂದರೆ ಇವರಿಗೆ ತಮಗೆ ಒದಗಿ ಬಂದ ಯಶಸ್ಸನ್ನು ಹೇಗೆ ನಿಭಾಯಿಸಬೇಕೆಂಬುದು ಗೊತ್ತಿಲ್ಲದಿರುವುದು. ಯಶಸ್ಸೇ ಅವರಿಗೆ ಮುಳುವಾಗಿರುತ್ತದೆ. ಯಶಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಗೊತ್ತಿಲ್ಲದೇ, ತಲೆಯ ಕಿರೀಟವೇ ಭಾರವಾದಂತಾಗಿ ಇನ್ನಿಲ್ಲದ ಸಮಸ್ಯೆಗೆ ಈಡುಮಾಡಿಕೊಳ್ಳುತ್ತಾರೆ. ಹೀಗಾಗಿ ಯಶಸ್ಸು ಗಳಿಸಿ ಸೆಲಬ್ರೆಟಿಯಾದಷ್ಟೇ ಬೇಗ ನೇಪಥ್ಯಕ್ಕೆ ಸರಿದು ಬಿಡುತ್ತಾರೆ. ಯಶಸ್ಸು ಗಳಿಸುವುದು ಕಷ್ಟವಲ್ಲ. ಆದರೆ ಗಳಿಸಿದ ಯಶಸ್ಸನ್ನು ಇಟ್ಟುಕೊಳ್ಳುವುದಿದೆಯಲ್ಲ, ಅದು ಬಹಳ ಕಷ್ಟ. ಬೇಕಾದರೆ ನೋಡಿ, ಇದು ಸರಳ ಸಂಗತಿ ಎಂದೆನಿಸಬಹುದು. ಆದರೆ ಅನೇಕರ ಹೋರಾಟ ಇದರ ಬಗ್ಗೆಯೇ ನಡೆದಿರುತ್ತದೆ. ಯಶಸ್ಸು ಗಳಿಸಲು ಹಗಲಿರುಳು, ನಿದ್ದೆಗೆಟ್ಟು ದುಡಿಯುತ್ತಾರೆ. ಕೊನೆಗೆ ಅದನ್ನು ಇಟ್ಟುಕೊಳ್ಳಲು ಹಗಲಿರುಳು, ನಿದ್ದೆ ಬಿಟ್ಟು ದುಡಿಯುತ್ತಾರೆ. ಕೆಲವೇ ಕೆಲವು ಮಂದಿ ಎರಡರಲ್ಲೂ ಜಯಶಾಲಿಗಳಾಗುತ್ತಾರೆ. ಉಳಿದವರಿಗೇ ಯಶಸ್ಸೇ ಮುಳುವಾಗುತ್ತದೆ. ಹೀಗಾಗಿ ಯಶಸ್ಸಿನ ಭಾರಕ್ಕೆ ಕುಸಿಯುತ್ತಾರೆ.
 
ಇದರ ಬಗ್ಗೆಯೇ ಹೇಳಬೇಕು.
ಆ ಮನೆಯಲ್ಲಿದ್ದುದು ಅವರಿಬ್ಬರೇ-ಅಪ್ಪ ಮತ್ತು ಮಗಳು. ಅಪ್ಪನ ಹೆಸರು ಸ್ವಾಮಿನಾಥನ್, ಮಗಳ ಹೆಸರು ಸ್ವಾತಿ. ಅಮ್ಮನಿಲ್ಲದ ಕಾರಣಕ್ಕೆ ಆ ಹುಡುಗಿ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದಳು. ಒಂದಿಷ್ಟೂ ಸಂಕೋಚವಿಲ್ಲದೆ ಅಪ್ಪನೊಂದಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಯಾವ ತರಗತಿಗೆ ಚಕ್ಕರ್ ಹೊಡೆದೆ, ಯಾವ ಅಧ್ಯಾಪಕರನ್ನು ರೇಗಿಸಿದೆ, ಯಾವ ಹೋಟೆಲಿನಲ್ಲಿ ಮಸಾಲೆದೋಸೆ ತಿಂದೆ, ಸಿಟಿಬಸ್ ಕಂಡಕ್ಟರ್್ನನ್ನು ಹೇಗೆ ಯಾಮಾರಿಸಿ ದುಡ್ಡು ಉಳಿಸಿದೆ ಎಂಬುದನ್ನೆಲ್ಲ ತಂದೆಯೊಂದಿಗೆ ವರ್ಣಿಸಿ ಹೇಳುತ್ತಿದ್ದಳು.
ಮಗಳ ಇಂಥ ಸಾಹಸಗಳನ್ನೆಲ್ಲ ಸ್ವಾಮಿನಾಥನ್ ಹುಸಿನಗೆಯಿಂದಲೇ ಕೇಳುತ್ತಿದ್ದ. ಸುಳ್ಳು ಸುಳ್ಳೇ ಎಂದು ಗದರಿಸುತ್ತಿದ್ದ. ಅದು ಅಪ್ಪನ ಪ್ರೀತಿಯ ಇನ್ನೊಂದು ಮುಖ ಎಂದು ಸ್ವಾತಿಗೂ ಅರ್ಥವಾಗುತ್ತಿತ್ತು. ಹೀಗೆ, ಹರಟೆ ಹೊಡೆದುಕೊಂಡೇ ಸ್ವಾತಿ ಎಂಬಿಎ ಮುಗಿಸಿದ್ದಳು. ಒಂದು ಎಂಎನ್್ಸಿಯಲ್ಲಿ ದೊಡ್ಡ ಸಂಬಳದ ನೌಕರಿಯೂ ಸಿಕ್ಕಿತ್ತು. ಮೊದಲ ವರ್ಷ ಈ ಹುಡುಗಿ ತುಂಬ ಉತ್ಸಾಹದಿಂದ ಕೆಲಸ ಮಾಡಿದ್ದಳು. ತತ್ಫಲವಾಗಿ ‘ಬೆಸ್ಟ್ ಎಂಪ್ಲಾಯ್ ಆಫ್ ದ ಇಯರ್್’ ಪ್ರಶಸ್ತಿ ಅವಳಿಗೇ ಸಿಕ್ಕಿತ್ತು.
ಒಂದು ಶನಿವಾರದ ವೀಕೆಂಡ್ ಪಾರ್ಟಿಯಲ್ಲಿ ಪ್ರಶಸ್ತಿ ವಿತರಣೆಯೂ ಆಯಿತು. ಆ ಕಾರ್ಯಕ್ರಮಕ್ಕೆ ಮಗಳೊಂದಿಗೆ ಸ್ವಾಮಿನಾಥನ್ ಕೂಡ ಹೋಗಿಬಂದ. ಆತ ಗಮನಿಸಿದಂತೆ, ಸಹೋದ್ಯೋಗಿಗಳೊಂದಿಗೆ ಅವತ್ತು ಸ್ವಾತಿ ಸಂಭ್ರಮದಿಂದ ಬೆರೆಯಲಿಲ್ಲ. ಆಕೆಯ ಕಣ್ಣಲ್ಲಿ ಸಣ್ಣದೊಂದು ತಿರಸ್ಕಾರ ಕಾಣಿಸಿತು. ಮಾತಲ್ಲಿ ಉದಾಸೀನ ಭಾವವಿತ್ತು. ಇಂಥ ವರ್ತನೆಗೆ ಕಾರಣ ಏನಿರಬಹುದು ಎಂದು ಮತ್ತೆ ಮತ್ತೆ ಯೋಚಿಸಿದ ಸ್ವಾಮಿನಾಥನ್. ಅವನಿಗೆ ಏನೂ ಅರ್ಥವಾಗಲಿಲ್ಲ.
ಮರುದಿನ ಮುಂಜಾನೆ ಬಾಲ್ಕನಿಯಲ್ಲಿದ್ದ ಈಸಿಛೇರ್್ನಲ್ಲಿ ಕೂತು ಪೇಪರ್ ಕೈಗೆತ್ತಿಕೊಂಡ ಸ್ವಾಮಿನಾಥನ್. ಅದೇ ವೇಳೆಗೆ ಅಡುಗೆಮನೆಯಲ್ಲಿದ್ದ ಸ್ವಾತಿ, ತನ್ನ ಗೆಳತಿಗೆ ಪೋನ್್ನಲ್ಲಿ ಹೇಳುತ್ತಿದ್ದಳು- ‘ನಿನ್ನೆಯ ಕಾರ್ಯಕ್ರಮದಲ್ಲಿ ಮ್ಯಾನೇಜರ್್ಗಳ ಮಾತು ಕೇಳಿ ಮೈಯೆಲ್ಲ ಉರಿದುಹೋಯ್ತು. ಈಡಿಯಟ್್ಗಳು. ಏನಂತ ತಿಳ್ಕಂಡಿದಾರೆ ನನ್ನನ್ನ? ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಗೆ ತುಂಬಾ ಸ್ಪರ್ಧೆ ಇತ್ತು ಅಂದ್ರು. ಆ ಮಾತೇ ಡಬ್ಬಾ ನೀನೇ ಹೇಳು: ನಂಗೆ ಸರಿಸಮನಾಗಿ ದುಡಿಯೋ ಮತ್ತೊಬ್ಬ ಎಂಪ್ಲಾಯ್ ಕಂಪನೀಲಿ ಇದ್ದಾನಾ? ನಿಜ ಹೇಳಬೇಕು ಅಂದ್ರೆ ಈ ಮ್ಯಾನೇಜರ್್ಗಳಿಗಿಂತ ನನಗೇ ಜಾಸ್ತಿ ಗೊತ್ತಿದೆ. ಅವರೆಲ್ಲ ವಾರಕ್ಕೊಮ್ಮೆ ಮೀಟಿಂಗ್ ಮಾಡೋದು, ಕಂಪನಿ ದುಡ್ಡಲ್ಲಿ ಈಟಿಂಗ್ ಮಾಡೋದು… ಇದಕ್ಕೇ ಲಾಯಕ್ಕು ವೇಸ್ಟ್ ಬಾಡಿಗಳು…..’
ಮಗಳ ಮಾತು ಕೇಳಿ ಸ್ವಾಮಿನಾಥನ್್ಗೆ ಬೇಜಾರಾಯಿತು. ಏಕೆಂದರೆ ಆತ ಮಗಳ ವಿಷಯದಲ್ಲಿ ತುಂಬಾ ಆಸೆಗಳನ್ನು ಇಟ್ಟುಕೊಂಡಿದ್ದ. ಮಗಳು ಚೆನ್ನಾಗಿ ಓದದಿದ್ದರೂ ಪರವಾಗಿಲ್ಲ. ಆಕೆ ಸೌಜನ್ಯದ ನಡವಳಿಕೆ ಹೊಂದಿರಬೇಕು. ಹಿರಿಯರ ವಿಷಯವಾಗಿ ಭಕ್ತಿ, ಗೌರವ ಹೊಂದಿರಬೇಕು ಎಂದು ಆಸೆಪಟ್ಟಿದ್ದ. ಆದರೆ ಈಗಿನ ಮಾತುಗಳನ್ನು ಕೇಳಿದರೆ, ತನ್ನ ನಂಬಿಕೆಗೆ ವಿರುದ್ಧ ದಿಕ್ಕಿನಲ್ಲಿ ಮಗಳು ಬೆಳೆಯುತ್ತಿದ್ದಾಳೆ ಎಂಬೊಂದು ಭಾವ ಸ್ವಾಮಿನಾಥನ್್ಗೆ ಬಂತು. ಆತ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದು- ‘ಸ್ವಾತೀ, ಐದು ನಿಮಿಷ ಮಾತನಾಡಲಿಕ್ಕಿದೆ. ಇಲ್ಲಿ ಬರ್ತೀಯಾ?’ ಎಂದ.
ಟೀ ಕಪ್ ಜೊತೆಗೇ ಬಂದಳು ಸ್ವಾತಿ. ‘ಥ್ಯಾಂಕ್ ಯೂ’ ಎನ್ನುತ್ತಾ ಟೀ ಗುಟುಕರಿಸಿದ ಸ್ವಾಮಿನಾಥನ್ ಹೇಳಿದ- ಹೌದಲ್ವೇನಮ್ಮಾ, ನಿನ್ನೆಯ ಸಂಭ್ರಮ ಈಗಲೂ ನಿನ್ನ ಕಂಗಳಲ್ಲಿದೆ. ಬೆಸ್ಟ್ ಎಂಪ್ಲಾಯ್ ಅನ್ನಿಸಿಕೊಂಡ ಖುಷಿಗೆ ನಿನ್ನ ಮನಸ್ಸು ಜಿಂಕೆಯಾಗಿ ಕುಣೀತಿದೆ. ಎದೆಯೊಳಗೆ ಹೊಸ ಹಾಡು ಹುಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಎಷ್ಟು ಸಂಬಳ ಹೆಚ್ಚಾಗಬಹುದು? ಯಾವತ್ತು ಪ್ರೊಮೋಷನ್ ಸಿಗಬಹುದು ಎಂದೂ ಈಗಲೇ ನೀನು ಯೋಚಿಸಿರುವಂತೆ ಕಾಣುತ್ತಿದೆ. ಅದೆಲ್ಲಾ ಓ.ಕೆ.
ಆದರೆ ಮಗಳೇ, ಈಗ ಕೆಲವೇ ನಿಮಿಷಗಳ ಹಿಂದೆ ನೀನು ಫೋನ್್ನಲ್ಲಿ ಮಾತಾಡಿದ ಧಾಟಿ ಹಾಗೂ ಅದರ ಅರ್ಥವಿತ್ತಲ್ಲ; ಅದು ಅಹಂಕಾರದ ಲಕ್ಷಣ. ನೀನು ಏನೇನಂದೆ ಗೊತ್ತಾ? ಮ್ಯಾನೇಜರ್್ಗಳನ್ನು ಈಡಿಯಟ್ಸ್ ಅಂದೆ. ಸಹೋದ್ಯೋಗಿಗಳನ್ನೆಲ್ಲ ವೇಸ್ಟ್ ಬಾಡಿಗಳು ಅಂದೆ. ಕಂಪನೀಲಿ ನಂಗೆ ಪ್ರತಿಸ್ಪರ್ಧಿಗಳೇ ಇಲ್ಲ ಅಂದೆ. ಇನ್ನೂ ಮುಂದುವರಿದು- ಮ್ಯಾನೇಜರ್್ಗಳಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ ಅಂದೆ! ಕೇವಲ ಬೆಸ್ಟ್ ಎಂಪ್ಲಾಯ್ ಎಂಬ ಒಂದೇ ಒಂದು ಪ್ರಶಸ್ತಿ ಬಂದಿದ್ದಕ್ಕೆ ನೀನು ಹೀಗೆಲ್ಲಾ ಹಗುರವಾಗಿ ಮಾತಾಡಿಬಿಟ್ಟೆ ಅಲ್ವಾ? ಒಂದು ಸತ್ಯ ತಿಳ್ಕೊ. ನಿಮ್ಮ ಕಂಪನೀಲಿ ಮ್ಯಾನೇಜರ್್ಗಳು ಅಂತ ಇದ್ದಾರಲ್ಲ, ಅವರೆಲ್ಲ ಈ ಹಿಂದೆ ನಿನ್ನಂತೆಯೇ ನೌಕರರಾಗಿ ಸೇರಿದವರು. ಕಾಲಾಂತರದಲ್ಲಿ ಅವರೆಲ್ಲ ತುಂಬ ಶ್ರಮಪಟ್ಟು ಕಂಪನೀನ ಬೆಳೆಸಿದ್ದಾರೆ. ತಾವೂ ಬೆಳೆದಿದ್ದಾರೆ. ಅಂಥವರನ್ನು ನೀನು ಅಯೋಗ್ಯರು, ತಿಂಡಿಪೋತರು ಎಂದೆಲ್ಲಾ ಜರಿದೆಯಲ್ಲ ಸರೀನಾ…?’
ಅಪ್ಪನ ದನಿಯಲ್ಲಿ ಸಿಡಿಮಿಡಿಯಿಲ್ಲ. ಮಾತಿನಲ್ಲಿ ಸಿಟ್ಟಿಲ್ಲ. ಅದು ಟೀಕೆಯೂ ಅಲ್ಲ. ಅವನ ಮಾತಿನ ಹಿಂದಿರುವುದು ಮಗಳ ಮೇಲಿನ ಮಮತೆ ಎಂಬುದು ಸ್ವಾತಿಗೆ ತಕ್ಷಣ ಅರ್ಥವಾಯಿತು. ಆಕೆ ತಕ್ಷಣವೇ-ಸಾರಿ ಕಣಪ್ಪಾ, ಬಾಯಿಗೆ ಬಂದಂತೆ ಮಾತಾಡಿ ತಪ್ಪು ಮಾಡಿಬಿಟ್ಟೆ. ನನ್ನ ಮಾತು ಹಾಗೂ ವರ್ತನೆ ಹೇಗಿರಬೇಕು ಎಂಬುದನ್ನು ವಿವರಿಸಿ ಹೇಳಪ್ಪಾ’ ಅಂದಳು. ಸ್ವಾಮಿನಾಥನ್ ಮುಂದುವರಿಸಿದ.
ಗೆಲುವು ಅಥವಾ ಯಶಸ್ಸು ಎಂಬುದೇ ಹಾಗೆ. ಅದು ಎಂಥವರನ್ನೂ ಯಾಮಾರಿಸುತ್ತದೆ. ಅಹಂಕಾರ ತಲೆಗೇರುವಂತೆ, ನನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವಂತೆ ಮಾಡಿಬಿಡುತ್ತದೆ. ಗೆಲುವು ಜೊತೆಯಾದ ನಂತರ ಎಷ್ಟೋ ಜನರ ತಲೆ ಹೆಗಲ ಮೇಲೇ ಇರುವುದಿಲ್ಲ. ಈ ಮಾತು ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಿಗಳಿಗೂ ಅನ್ವಯಿಸುತ್ತದೆ. ಗೆಲುವಿನಲ್ಲಿ ಮೈಮರೆತವರು ನಾನು, ನನ್ನಿಷ್ಟ ಎಂಬಂತೆ ವರ್ತಿಸುತ್ತಾರೆ. ಕಿವಿಮಾತುಗಳನ್ನೂ, ಎಚ್ಚರಿಕೆಗಳನ್ನೂ ನಿರ್ಲಕ್ಷಿಸುತ್ತಾರೆ. ಒಂದೇ ಬಾರಿಗೆ ಆರು ಮೆಟ್ಟಿಲು ಹತ್ತಲು ಹೋಗುತ್ತಾರೆ. ಸಾಧ್ಯವಾಗದೆ ಜಾರಿ ಬೀಳುತ್ತಾರೆ. ಆ ಕ್ಷಣದವರೆಗೂ ಅವರೊಂದಿಗೇ ಇದ್ದ ಗೆಲುವು, ಒಂದೇ ನಿಮಿಷದಲ್ಲಿ ಬೇರೊಂದು ಕಡೆಗೆ ಹಾರಿಹೋಗುತ್ತದೆ. ಯಶಸ್ಸು ಕೈತಪ್ಪಿ ಹೋಯ್ತು ಎಂಬುದು ಗೊತ್ತಾದ ನಂತರ, ಬಿದ್ದವರ ಪಾಲಿಗೆ ಸಂಕಟವೇ ಸಂಗಾತಿಯಾಗುತ್ತದೆ. ಈ ಕ್ಷಣದಲ್ಲಿ ಗೆಲುವು ನಿನ್ನದಾಗಿದೆ ನಿಜ. ಹಾಗಂತ ಮೈಮರೆಯಬೇಡ. ಉಡಾಫೆಯಿಂದ ಮಾತಾಡಿ ಹತ್ತು ಮಂದಿಯ ಮಧ್ಯೆ ಗೌರವ ಕಳೆದುಕೊಳ್ಳಬೇಡ…’
ಅಪ್ಪನ ಕಾಳಜಿ ಕಂಡು ಸ್ವಾತಿಗೆ ಮನಸ್ಸು ಭಾರವಾಯಿತು. ಆಕೆ ಕಣ್ತುಂಬಿಕೊಂಡು ಹೇಳಿದಳು: ಅಪ್ಪಾ, ನನ್ನ ವರ್ತನೆಯಿಂದ ನಿಮಗೆ ತುಂಬಾ ಬೇಜಾರಾಯ್ತಾ?’
ಸ್ವಾಮಿನಾಥನ್ ಚಹಾದ ಕಡೆಯ ಗುಟುಕು ಚಪ್ಪರಿಸಿ ಹೇಳಿದ- ಕೆಲಸದ ವಿಷಯವಾಗಿ, ನಡವಳಿಕೆಯ ವಿಷಯವಾಗಿ  ‘ಛೆ ಛೆ, ಹಾಗೇನೂ ಇಲ್ಲ. ಒಂದು ಟೀಕೆ ಕೇಳಿಬಂದರೆ- ನೀನು ದೊಡ್ಡ ತಪ್ಪು ಮಾಡಿದೆ ಎಂದು ಅರ್ಥವಲ್ಲ. ತಪ್ಪು ಮಾಡೋದು ಎಲ್ಲರಲ್ಲೂ ಸಹಜ. ಅದನ್ನು ತಕ್ಷಣವೇ ತಿದ್ದಿಕೊಳ್ಳುವುದು ಜಾಣರ ಲಕ್ಷಣ. ಅಂಥ ಜಾಣೆಯ ಸಾಲಿಗೆ ನೀನು ಸೇರ್ಕೋಬೇಕು. ಕೆಲವರು ಮೊದಲು ಮುಗ್ಗರಿಸುತ್ತಾರೆ. ನಂತರ ಎದ್ದು ನಿಲ್ತಾರೆ. ಹಲವರು ಮೊದಲು ಸರಿಯಾಗಿ ನಿಂತಿದ್ದು, ನಂತರ ಮುಗ್ಗರಿಸಿಬಿಡ್ತಾರೆ! ಯಶಸ್ಸು ಎಂಬುದು ಮಾಯಾಜಿಂಕೆ. ಅದು ಹಗ್ಗದ ಮೇಲಿನ ನಡಿಗೆ. ಯಶಸ್ಸೆಂಬುದು ನಮ್ಮ ನಿರೀಕ್ಷೆಗಳನ್ನೆಲ್ಲ ನಿಜ ಮಾಡುವುದಿಲ್ಲ. ಆದರೆ ಜವಾಬ್ದಾರಿಯನ್ನು ಖಂಡಿತ ಹೆಚ್ಚಿಸುತ್ತೆ. ಭಾರತ ಕ್ರಿಕೆಟ್ ತಂಡದ ನಾಯಕನಾಗೋದು ಅಂದ್ರೆ ಕೇವಲ ಒಂದು ತಂಡವನ್ನು ಮುನ್ನಡೆಸುವುದು ಮಾತ್ರವಲ್ಲ, ಗೆಲ್ಲಲೇ ಬೇಕು ಎಂಬ ಈ ದೇಶದ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯನ್ನು ನಿಜ ಮಾಡುವ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಪ್ರಧಾನಮಂತ್ರಿ ಅನ್ನಿಸಿಕೊಂಡವನ ಬೆನ್ನ ಮೇಲೆ ಇಡೀ ದೇಶದ ಭವಿಷ್ಯ ನಿಂತಿರುತ್ತದೆ. ರಾಷ್ಟ್ರಪತಿ ಅನ್ನಿಸಿಕೊಂಡವರು ಎಲ್ಲ ರಾಜ್ಯಗಳ ಜನಪ್ರತಿನಿಧಿಗಳೂ ಒಪ್ಪುವಂತೆ ಆಡಳಿತ ನಿರ್ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದು ಅಗತ್ಯವಾಗಿರುತ್ತದೆ.
ಶಿಕ್ಷಣದ ನಿಮಿತ್ತ, ನೌಕರಿಯ ನಿಮಿತ್ತ ಅಥವಾ ವಾಸ್ತವ್ಯದ ನಿಮಿತ್ತ ಒಂದು ಸ್ಥಳದಲ್ಲಿ ಉಳಿಬೇಕು ಅಂದರೆ, ಅಲ್ಲಿ ಬಾಂಧವ್ಯದ ಹೊಸ ಕೊಂಡಿಯೊಂದು ಅರಳಿಕೊಂಡಿತು ಎಂದೇ ಅರ್ಥ. ಈ ಸಂದರ್ಭದಲ್ಲಿ ಯಾರ್ಯಾರೋ ಪರಿಚಯವಾಗುತ್ತಾರೆ. ಅವರಿಂದ ಕಲಿಯುವುದು, ಕಲಿಯದಿರುವುದು ಎರಡೂ ಇರುತ್ತದೆ. ಈ ಸಂಬಂಧ ಎಂಬುದು ಒಂದು ರೀತಿಯಲ್ಲಿ ಬ್ಯಾಂಕ್ ಅಕೌಂಟ್ ಇದ್ದ ಹಾಗೆ. ಖಾತೆ ತೆರೆಯುವುದು ಸುಲಭ. ಆದರೆ ಅಕೌಂಟ್ ಕ್ಲೋಸ್ ಮಾಡುವುದು (ಸಂಬಂಧವನ್ನು ಕಡಿದುಕೊಳ್ಳುವುದು) ಕಷ್ಟ. ಕೆಲವೊಂದು ಸಂದರ್ಭದಲ್ಲಿ ನಾವೆಲ್ಲ ಅಂದಿರುತ್ತೇವೆ- ‘ನನಗೆ ಯಾರ ಸಹಾಯವೂ ಬೇಕಿಲ್ಲ. ನನ್ನ ಬದುಕನ್ನು ನಾನೊಬ್ಬನೇ ರೂಪಿಸಿಕೊಳ್ಳಬಲ್ಲೆ..’
ಆದರೆ ಕಣ್ಣೆದುರಿಗಿರುವ ವಾಸ್ತವವೇ ಬೇರೆ. ಏನೆಂದರೆ- ಬಹಳಷ್ಟು ಸಂದರ್ಭದಲ್ಲಿ ಎಲ್ಲರ ಬದುಕೂ ಇನ್ನೊಬ್ಬರ ಮೇಲೆ ಅವಲಂಬಿಸಿರುತ್ತದೆ. ಎಂಥ ಪ್ರಚಂಡ ವೈದ್ಯನಿಗೂ ನರ್ಸ್ ಸಹಾಯ ಬೇಕಾಗುತ್ತದೆ. ಕೋಟ್ಯಧಿಪತಿಗೆ ಅಕೌಂಟೆಂಟ್್ನ ನೆನಪಾಗುತ್ತದೆ. ಕಚೇರಿಯ ಒಳಗಿರುವಾತ ಜಿಲ್ಲಾಧಿಕಾರಿಯೇ ಆಗಿದ್ದರೂ, ಅದೇ ಕಚೇರಿಯ ಬೀಗ ತೆಗೆಯಲು ಅಟೆಂಡರ್್ನ ನೆರವು ಅಗತ್ಯವಿರುತ್ತದೆ. ನಾನು ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎಂಬ ಮಾತಿಗೆ ಈಗಾಗಲೇ ಕತೆಯಾಗಿ ಹೋದವರ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಲ್ಲಿ ಗೆದ್ದವರೂ ಇದ್ದಾರೆ, ಬಿದ್ದವರೂ ಇದ್ದಾರೆ. ಇಬ್ಬರಿಂದಲೂ ಪಾಠ ಕಲಿಯಬಹುದಾಗಿದೆ…
ಹಾಗಂತ, ಖಂಡಿತ ನಾನು ನಿನ್ನನ್ನು ದೂರುತ್ತಿಲ್ಲ ಮಗಳೇ. ಇವತ್ತಿನ ಯಶಸ್ಸು ಖಂಡಿತ ನಿನ್ನದು ನಿಜ. ಆದರೆ ಆನಂತರ ನೀನು ವರ್ತಿಸಿದ ರೀತಿಯಿತ್ತಲ್ಲ; ಅದನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ. ಒಂದು ಮಾತು ಅರ್ಥ ಮಾಡಿಕೊ. ಒಬ್ಬ ಪ್ರಚಂಡ ಕುಶಲಕರ್ಮಿಯ ಪರಿಶ್ರಮದಿಂದ ಮಾತ್ರ ಬಿದಿರು ಎಂಬ ಮರದ ತುಂಡು ಮಧುರ ನಾದ ಹೊರಡಿಸುವ ‘ಕೊಳಲು’ ಆಗುತ್ತದೆ. ನೀನು ಈಗ ‘ಬಿದಿರಿ’ನ ಲೆವಲ್್ನಲ್ಲಿದ್ದೀ. ಮುಂದೆ ಒಂದೊಂದೇ ಅನುಭವೀ ಮನಸ್ಸಿನ ಕೆಳಗೆ ನೀನು ಪಳಗಬೇಕು. ಯಶಸ್ಸಿನ ಗುಣ, ಅವಗುಣ, ಒಂದು ಗೆಲುವು ಜತೆಯಾದ ಸಂದರ್ಭದಲ್ಲೇ ಹೆಗಲೇರುವ ಜವಾಬ್ದಾರಿ…. ಇದೆಲ್ಲವನ್ನೂ ಅರ್ಥೈಸಿಕೊಳ್ಳಬೇಕು. ಹಿಮಾಲಯದೆತ್ತರ ಬೆಳೆದು ನಿಂತರೂ, ತಲೆ ಭುಜದ ಮೇಲೇ ಇರುವಂತೆ ನೋಡಿಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಯಶಸ್ಸು ಎಂಬುದು ಸುದೀರ್ಘ ಕಾಲದವರೆಗೂ ನಮ್ಮ ಜತೆಗಿರುತ್ತದೆ. ಈ ಸೂಕ್ಷ್ಮ ನಿನಗೆ ಅರ್ಥವಾಗಬೇಕು. ಸ್ವಾಮಿನಾಥನ್ ಮಾತು ನಿಲ್ಲಿಸಿದ.
ಯಶಸ್ಸು ಬಂದಾಗ ಬೀಗಬಾರದು. ಹತ್ತಿದ ಏಣಿಯನ್ನು ಒದೆಯಬಾರದು. ಸಹೋದ್ಯೋಗಿಗಳನ್ನು ಜರಿಯಬಾರದು. ಅಹಂಕಾರದ ಕೈಗೆ ಬುದ್ಧಿ ಕೊಡಬಾರದು. ಸೌಜನ್ಯವನ್ನು ಎಂದೂ ಮರೆಯಬಾರದು ಎಂಬುದನ್ನು ತುಂಬ ಸರಳವಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಪ್ಪಾ. ಈಗಿನಿಂದಲೇ ನನ್ನ ನಡವಳಿಕೇನ ತಿದ್ದಿಕೊಳ್ತೇನೆ ಎಂದಳು ಸ್ವಾತಿ. ಇದುವರೆಗೂ ಎದುರಿನ ಮಾವಿನಮರದಲ್ಲಿ ಮೌನವಾಗಿ ಕುಳಿತಿದ್ದ ಎರಡು ಗಿಳಿಗಳು, ಇವರ ಮಾತು ಮುಗಿದ ತಕ್ಷಣ ತಾವೂ ಕಿಚಪಿಚ ಎನ್ನಲು ಶುರುಮಾಡಿದವು. ಪಕ್ಷಿಗಳ ಸಡಗರ, ಈ ಅಪ್ಪ-ಮಗಳ ಕಂಗಳಲ್ಲೂ ಪ್ರತಿಫಲಿಸಿತ್ತು…
ಜೀವನದಲ್ಲಿ ಯಶಸ್ಸನ್ನು ಇಟ್ಟುಕೊಳ್ಳುವುದು ಹೇಗೆ. ಅದನ್ನು ಸದಾ ನಿಮ್ಮ ಪರವಾಗಿಟ್ಟುಕೊಳ್ಳುವುದು ಹೇಗೆ, ಗಳಿಸಿದ ಯಶಸ್ಸನ್ನು ನಿಮಗೆ ವೈರಿಯಾಗದಂತೆ ಕಾಪಿಡುವುದು ಹೇಗೆ ಎಂಬುದನ್ನು ಇಷ್ಟು ಸರಳವಾಗಿ, ಪರಿಣಾಮಕಾರಿಯಾಗಿ ಹೇಳಲು ಯಶಸ್ವಿಯಾದ, ನನಗೆ ಬಹುಬೇಗ ಪ್ರಿಯರಾದ ಟಿ.ಟಿ. ರಂಗರಾಜನ್ ಅವರಿಗೆ ಒಂದು ಥ್ಯಾಂಕ್ಸನ್ನಾದರೂ ಹೇಳದಿದ್ದರೆ ಹೇಗೆ?
ಮುಂದಿನ ಸಲ ನಿಮಗೆ ಯಶಸ್ಸು ಬಂದಾಗ ಈ ಎಲ್ಲ ಮಾತುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಯಶಸ್ಸು ನಿಮ್ಮಲ್ಲೇ ಬೆಚ್ಚಗೆ ಭದ್ರವಾಗಿರುತ್ತದೆ.

No comments:

Post a Comment