IMPORTANT NOTICE

New official website is designed for Karada Community. Please visit www.karadavishwa.com for more details.

Sunday, 14 June 2015

ಕತೆಗಳ ತೋರಣ ಕಟ್ಟಿಡಲು ಬೇಕೇ ಇಲ್ಲ ಕಾರಣ...

ಬಾಲ್ಯದಲ್ಲಿ ಅಜ್ಜಿ ಕತೆಗಳನ್ನು ಕೇಳಿಕೊಂಡು ಬೆಳೆದವರು ಆ ದಿನಗಳ ಮಧುರಾನುಭೂತಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾರೆ. ಕಾರಣ, ಆ ಕಥೆಗಳಲ್ಲಿ ಎಲ್ಲ ಪಾತ್ರಗಳೂ ಮಾತಾಡುತ್ತಿದ್ದವು! ಪ್ರತಿಯೊಂದು ಕತೆಯಲ್ಲೂ ನೀತಿಯಿರುತ್ತಿತ್ತು, ಪಾಠವಿರುತ್ತಿತ್ತು, ತಮಾಷೆ ಇರುತ್ತಿತ್ತು, ಸಸ್ಪೆನ್ಸ್ ಇರುತ್ತಿತ್ತು. ಒಂದೊಂದು ಸಂದರ್ಭದಲ್ಲಿ ಕತೆ-ಜೋಗುಳದಂತೆಯೂ ಕೇಳಿಸುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು- ಹೂಂ, ಆಮೇಲೆ ಎಂದು ಪ್ರಶ್ನಿಸದಿದ್ದರೆ ಅಜ್ಜಿ ಕತೆಯನ್ನು ಮುಂದುವರಿಸುತ್ತಲೇ ಇರಲಿಲ್ಲ. ಆಗ ಅಜ್ಜಿ-ಮೊಮ್ಮಗ ಸಣ್ಣಗೆ ದುಸುಮುಸುಮಾಡಿ ರಾಜಿಯಾಗುತ್ತಿದ್ದರು. ಕತೆ ಮುಂದುವರಿಯುತ್ತಿತ್ತು…
ಈಗ, ಕತೆ ಕೇಳುವ ಹಂಬಲ ಎಲ್ಲರಿಗೂ ಇದೆ. ಆದರೆ ಹೇಳಲು ಅಜ್ಜಿಯರೇ ಇಲ್ಲ. ಅದನ್ನೆಲ್ಲ ನೆನಪು ಮಾಡಿಕೊಂಡಾಗಲೇ ಮನದಲ್ಲಿ ಅರಳಿಕೊಂಡ ಕತೆಗಳಿವೆ. ಇನ್ನು ಮುಂದೆ ನೀವುಂಟು, ಈ ಕಥೆಗಳುಂಟು…
>>>>>>
ಒಂದು ಮನೆ ಬಹಳ ದಿನಗಳಿಂದ ಖಾಲಿ ಉಳಿದಿತ್ತು. ಕಡೆಗೂ ಅಲ್ಲಿಗೆ ಬಾಡಿಗೆದಾರರೊಬ್ಬರು ಬಂದರು. ಈ ಬಾಡಿಗೆ ಮನೆಯ ಎದುರಿನಲ್ಲಿದ್ದ ಮನೆಯಲ್ಲಿ ಒಂದು ಕುಟುಂಬ ವಾಸವಿತ್ತು. ಈ ಮನೆಯ ಹೆಂಗಸಿಗೆ ಸದಾ ಬೇರೆಯವರ ಹುಳುಕು ತೋರಿಸುವ ಅಭ್ಯಾಸವಿತ್ತು. ಯಾರು ಎಷ್ಟೇ ಶುಚಿಯಾಗಿದ್ದರೂ ಆಕೆ ಏನಾದರೂ ಒಂದು ತಪ್ಪು ತೋರಿಸಿ ಬಿಡುತ್ತಿದ್ದಳು.
ಅವತ್ತು, ಈ ಹೆಂಗಸು ಮನೆಯ ಹಾಲ್್ನಲ್ಲಿ ಕೂತು ಗಂಡನೊಂದಿಗೆ ತಿಂಡಿ ತಿನ್ನುತ್ತಿದ್ದಳು. ಆಗಲೇ ಹೊಸದಾಗಿ ಬಾಡಿಗೆಗೆ ಬಂದಿದ್ದಾಕೆ ತಂತಿಯ ಮೇಲೆ ಬಟ್ಟೆಗಳನ್ನು ಒಣಗಲು ಹಾಕಿದ್ದು ಕಾಣಿಸಿತು. ಅದನ್ನು ಗಮನಿಸಿದ ಈಕೆ ತಕ್ಷಣವೇ ಹೇಳಿದಳು: ‘ಅಲ್ಲಿ ನೋಡ್ರಿ, ಬಟ್ಟೆಗಳಲ್ಲಿ ಮಸಿ ಹಾಗೇ ಉಳ್ಕೊಂಡಿರೋದು ಚನ್ನಾಗಿ ಕಾಣಿಸ್ತಾ ಇದೆ. ಹಾಗಿದ್ರೂ ಆ ಹೆಂಗಸು ಒಣಗಲು ಹಾಕ್ತಾ ಇದಾಳೆ. ಬಹುಶಃ ಆಕೆಗೆ ಬಟ್ಟೆ ಒಗೆಯುವುದಕ್ಕೆ ಬರೋದಿಲ್ಲ ಅನಿಸುತ್ತೆ. ಅಥವಾ ಆಕೆ ಬಳಸ್ತಾ ಇರೋ ಸೋಪು ತುಂಬಾ ಕಳಪೆ ಗುಣಮಟ್ಟದ್ದು ಇರಬೇಕು ಕಣ್ರೀ…’
ಅವತ್ತಿನಿಂದ ನಂತರದ ಒಂದು ತಿಂಗಳ ಅವಧಿಯವರೆಗೂ ಈ ಮನೆಯ ದಂಪತಿ ತಿಂಡಿಗೆ ಕೂತ ಸಂದರ್ಭದಲ್ಲಿಯೇ ಆ ಮನೆಯ ಹೆಂಗಸು ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದಳು. ಪ್ರತಿದಿನವೂ ಈ ಮನೆಯ ಹೆಂಗಸು ಅದೇ ಹಳೆಯ ಡೈಲಾಗನ್ನು ರಿಪೀಟ್ ಮಾಡುತ್ತಿದ್ದಳು. ‘ಆ ಹೆಂಗಸಿಗೆ ಏನಾಗಿದೆ? ಸರಿಯಾಗಿ ಕೊಳೆ ಹೋಗದಿದ್ರೂ ಒಗೆದು ಆಗಿದೆ ಅಂತ ಭಾವಿಸ್ತಾಳಲ್ಲ, ಚನ್ನಾಗಿರೋ ಸೋಪ್ ಬಳಸಿ ಬಟ್ಟೆ ಒಗೆಯಲಿಕ್ಕೆ ಅವಳಿಗೆ ಏನು ಧಾಡಿ?’
ಮರುದಿನ ಗಂಡನೊಂದಿಗೆ ತಿಂಡಿಗೆ ಕುಳಿತ ಈ ಮನೆಯ ಹೆಂಗಸು ತನ್ನ ಕಣ್ಣನ್ನೂ ತಾನೇ ನಂಬಲಿಲ್ಲ. ಕಾರಣ, ಎದುರು ಮನೆಯ ತಂತಿಯ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳು ಟಿ.ವಿ. ಜಾಹೀರಾತಿನಲ್ಲಿ ತೋರಿಸುವ ಬಟ್ಟೆಗಳಂತೆಯೇ ಫಳಫಳ ಹೊಳೆಯುತ್ತಿದ್ದವು. ಅದನ್ನು ಕಂಡು ಈಕೆ ಗಂಡನ ಕಿವಿಯಲ್ಲಿ ಪಿಸುಗುಟ್ಟಿದಳು: ‘ನೋಡಿದ್ರಾ, ಕಡೆಗೂ ಆ ಮನೆಯ ಹೆಂಗಸು ಚನ್ನಾಗಿ ಬಟ್ಟೆ ಒಗೆಯಲು ಕಲಿತು ಬಿಟ್ಟಳು. ಇದನ್ನು ಅವಳಿಗೆ ಯಾರು ಹೇಳಿಕೊಟ್ರು ಅಂತ ಗೊತ್ತಾಗಲಿಲ್ಲ…
ಈಕೆಯ ಪತಿರಾಯ ತಣ್ಣಗೆ ಹೇಳಿದ: ‘ಇವತ್ತು ಬೆಳಗ್ಗೆ ನಾನು ಎಲ್ಲರಿಗಿಂತ ಮುಂಚೆ ಎದ್ದು ನಮ್ಮ ಮನೆಯ ಕಿಟಕಿಗಳನ್ನು ಮೂರು ಬಾರಿ ಚೆನ್ನಾಗಿ ಉಜ್ಜಿ ತೊಳೆದೆ. ಎರಡು ತಿಂಗಳಿಂದ ಕಿಟಕಿಗೆ ಅಂಟಿಕೊಂಡಿದ್ದ ಧೂಳು, ಕಸವನ್ನು ನಾವು ಕ್ಲೀನ್ ಮಾಡಿಯೇ ಇರಲಿಲ್ಲ…’
>>>>>>>
ಒಂದು ಹಡಗಿನಲ್ಲಿ ಒಬ್ಬ ಯಕ್ಷಿಣಿಗಾರನಿದ್ದ. ಈ ಹಡಗು ವಾರಕ್ಕೊಂದು ಪ್ರದೇಶಕ್ಕೆ ಹೋಗಿ ಬರುತ್ತಿತ್ತು. ಹಡಗಿನಲ್ಲಿರುವ ಪ್ರಯಾಣಿಕರ ಮುಂದೆ ಯಕ್ಷಿಣಿ ಪ್ರದರ್ಶಿಸಿ ಅವರನ್ನು ಖುಷಿಪಡಿಸುವುದು ಯಕ್ಷಿಣಿಗಾರನ ಕೆಲಸವಾಗಿತ್ತು. ಪ್ರತಿ ವಾರವೂ ನಾನಾ ದೇಶದ, ನಾನಾ ಸಂಸ್ಕೃತಿಯ ಜನ ಬರುತ್ತಿದ್ದರು. ಹಾಗಾಗಿ ಪ್ರದರ್ಶನದಲ್ಲಿ ಏಕತಾನ ಕಾಣದಂತೆ ಈ ಮ್ಯಾಜಿಶಿಯನ್ ಎಚ್ಚರ ವಹಿಸಬೇಕಿತ್ತು.
ಈ ಹಡಗಿನ ಕ್ಯಾಪ್ಟನ್ ಒಂದು ಗಿಣಿಯನ್ನು ಸಾಕಿಕೊಂಡಿದ್ದ. ಅದು ಪ್ರಚಂಡ ಬುದ್ಧಿಯ ಮಾತನಾಡುವ ಗಿಣಿ. ಈ ಯಕ್ಷಿಣಿಗಾರನ ಪ್ರದರ್ಶನದ ಹಿಂದಿರುವ ಗುಟ್ಟುಗಳನ್ನು ಅದು ಕದ್ದು ನೋಡುತ್ತಿತ್ತು. ಈತ ಪ್ರದರ್ಶನ ಆರಂಭಿಸಿದ ಕೆಲವೇ ನಿಮಿಷದಲ್ಲಿ ಮೆಲ್ಲಗೆ ಬಂದು ಪ್ರಯಾಣಿಕರ ಮಧ್ಯೆ ಕೂತು ಬಿಡುತ್ತಿತ್ತು. ಹೇಳಿ ಕೇಳಿ ಅದು ಕ್ಯಾಪ್ಟನ್್ನ ಮುದ್ದಿನ ಗಿಣಿ ಆಗಿದ್ದುದರಿಂದ ಅದನ್ನು ಹೊಡೆಯುವುದಾಗಲಿ, ಗದರಿಸುವುದಾಗಲಿ, ಓಡಿಸುವುದಾಗಲಿ ಸಾಧ್ಯವೇ ಇರಲಿಲ್ಲ. ಪ್ರದರ್ಶನ ಆರಂಭಿಸುವ ಮೊದಲೇ, ಅದರ ಹಿಂದಿರುವ ಗುಟ್ಟು ಏನೆಂಬುದನ್ನು ಈ ಮಾತನಾಡುವ ಗಿಣಿ ಹೇಳಿ ಬಿಡುತ್ತಿತ್ತು. ಪರಿಣಾಮ, ಮ್ಯಾಜಿಕ್ ಶೋ ನೋಡಲು ಯಾರೊಬ್ಬರೂ ಆಸಕ್ತಿ ತೋರುತ್ತಿರಲಿಲ್ಲ. ಒಂದೆರಡು ಬಾರಿ ಪ್ರೇಕ್ಷಕರ ನಿರಾಸಕ್ತಿ ಗಮನಿಸಿದ ಕ್ಯಾಪ್ಟನ್, ಏನೂ ಕೆಲಸವಿಲ್ಲದವರಿಗೆ ಸುಮ್ಮನೇ ಸಂಬಳ ಕೊಡುವುದಾದರೂ ಏಕೆ ಎಂದು ನಿಷ್ಠುರವಾಗಿ ಹೇಳಿಬಿಟ್ಟ.
ಹೀಗಿರುವಾಗಲೇ ಅದೊಂದು ದಿನ ಅನಾಹುತಕ್ಕೆ ಸಿಕ್ಕಿ ಹಡಗು ಮುಳುಗಿ ಹೋಯಿತು. ಕಡೆಯ ಕ್ಷಣದಲ್ಲಿ ಒಂದು ಮರದ ಹಲಗೆಯ ಆಶ್ರಯ ಸಿಕ್ಕಿದ್ದರಿಂದ ಮ್ಯಾಜಿಶಿಯನ್ ಹೇಗೋ ಬದುಕಿಕೊಂಡ. ಸ್ವಾರಸ್ಯವೆಂದರೆ ಅವನು ಆಶ್ರಯ ಪಡೆದಿದ್ದ ಮರದ ಹಲಗೆಯ ಮತ್ತೊಂದು ತುದಿಯಡಿ ಮಾತನಾಡುವ ಗಿಣಿಯೂ ಇತ್ತು.
ಹಡಗಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಿಣಿ ನೀಡಿದ್ದ ಕಿರಿಕಿರಿಯೆಲ್ಲ ನೆನಪಿಗೆ ಬಂದಿದ್ದರಿಂದ ಈ ಯಕ್ಷಿಣಿಗಾರ ಅದನ್ನೇ ಕೆಕ್ಕರಿಸಿಕೊಂಡು ನೋಡಿದ. ಸೇರಿಗೆ ಸವ್ವಾಸೇರು ಎಂಬಂತೆ ಆ ಪಕ್ಷಿಯೂ ಹಾಗೇ ಮಾಡಿತು. ಹೀಗೇ ಎರಡು ದಿನ ಕಳೆದು ಹೋದವು. ಕಡೆಗೆ ಗಿಣಿ ಹೀಗೆಂದಿತು: ‘ಆಯ್ತು, ಈ ಬಾರಿ ನಾನೇ ಸೋಲ್ತೇನೆ. ಬೇಗ ಹೇಳು. ಇಲ್ಲಿಂದ ಪಾರಾಗಲು ದೋಣಿ ಎಲ್ಲಿದೆ ಎಂಬುದಕ್ಕೆ ನಿನಗೆ ಉತ್ತರ ಗೊತ್ತಿದೆಯಾ?’
>>>>>>>
ಅಜ್ಜನಿಗೆ ಕತೆ ಹೇಳುವ ಹುಮ್ಮಸ್ಸಿತ್ತು. ಮೊಮ್ಮಗನಿಗೆ ತಾತನ ಮುಂದೆ ಕೂತು ಕಥೆ ಕೇಳುವ ಹುಚ್ಚು ಹಿಡಿದುಕೊಂಡಿತ್ತು. ಅವತ್ತು ಅಜ್ಜನ ಮುಂದೆ ಕೂತ ಹುಡುಗ ಆದೇಶ ಜಾರಿ ಮಾಡಿದ: ತಾತಾ, ಕತೆ ಶುರು ಮಾಡು…
ಆ ಅಜ್ಜ ಹೇಳಿದರು: ‘ಅರ್ಥ ಮಾಡ್ಕೋ ಮಗಾ, ನಮ್ಮ ಮನಸ್ಸೊಳಗೆ ಎರಡು ಥರದ ತೋಳಗಳು ಇರ್ತವೆ. ಅವೆರಡಕ್ಕೂ ಯಾವಾಗ್ಲೂ ಫೈಟಿಂಗ್ ನಡೀತಾನೇ ಇರುತ್ತೆ. ಈ ಎರಡರ ಪೈಕಿ ಒಂದು ತೋಳ ಕೇಡಿ ನನ್ಮಗಂದು. ಅದಕ್ಕೆ ಎಲ್ಲರ ಮೇಲೂ ಸಿಟ್ಟು. ಅಸೂಯೆ, ದ್ವೇಷ, ವಿಪರೀತ ಅಹಂಕಾರ. ಇನ್ನೊಂದಿದೆಯಲ್ಲ, ಅದು ತುಂಬಾ ಒಳ್ಳೆಯದು. ಅದಕ್ಕೆ ಬೇರೆಯವರನ್ನು ಕಂಡ್ರೆ ಪ್ರೀತಿ, ಗೌರವ, ಅನುಕಂಪ. ಸುತ್ತಲಿನವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡಬೇಕು ಎಂಬುದು ಅದರ ಉದ್ದೇಶ. ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಅದರ ಅನುದಿನದ ಪ್ರಾರ್ಥನೆ. ಮನಸ್ಸಿನ ಒಳಗಿರುವ ಒಂದು ಮೂಲೇಲಿ ನಿಂತ್ಕೊಂಡು ಈ ಒಳ್ಳೆಯ ಮತ್ತು ಕೆಟ್ಟ ತೋಳಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಫೈಟಿಂಗ್ ಮಾಡ್ತಾನೇ ಇರ್ತವೆ…’
‘ತಾತ, ತಾತ, ಈ ಫೈಟಿಂಗ್್ನಲ್ಲಿ ಕೊನೆಗೆ ಯಾವ ತೋಳ ಗೆಲ್ಲುತ್ತೆ?’ ಮೊಮ್ಮಗ ಆಸೆಯಿಂದ ಕೇಳಿದ.
‘ನೀನು ಯಾವುದನ್ನು ಹೆಚ್ಚು ಸಪೋರ್ಟ್ ಮಾಡ್ತಿಯೋ ಅದೇ ಗೆಲ್ಲುತ್ತೆ’ ಎಂದು ಅಜ್ಜ ಕತೆ ಮುಗಿಸಿದ.
>>>>>>>>
ಬಾರ್್ನಲ್ಲಿ ಆತ ಏಕಾಂಗಿಯಾಗಿದ್ದ. ಒಂಟಿಯಾಗಿದ್ದೇನೆ ಎಂಬ ಭಾವವೇ ಅವನಿಗೆ ಇರಲಿಲ್ಲ. ಒಂದರ ಹಿಂದೊಂದು ಪೆಗ್ ವಿಸ್ಕಿಗೆ ಆರ್ಡರ್ ಮಾಡಿ ಪರಮಾತ್ಮನನ್ನು ಏರಿಸುತ್ತಲೇ ಇದ್ದ. ಪ್ರತಿ ಬಾರಿ ತುಟಿಯ ಬಳಿಗೆ ಗ್ಲಾಸ್ ಒಯ್ಯುವ ಮೊದಲು ಜೇಬಿನಿಂದ ಅದೇನನ್ನೋ ತೆಗೆದು ಒಮ್ಮೆ ಕುತೂಹಲದಿಂದ ಮಿಕಿಮಿಕಿ ನೋಡುತ್ತಿದ್ದ. ನಂತರ ಗಟಗಟನೆ ಕುಡಿದು ಬೇರೊಂದು ಪೆಗ್್ಗೆ ಆರ್ಡರ್ ಮಾಡುತ್ತಿದ್ದ.
ಹೀಗೇ ಎರಡು ಗಂಟೆಗಳ ಕಾಲ ನಡೆಯಿತು. ಈ ಕುಡುಕನನ್ನೇ ಅಷ್ಟೂ ಹೊತ್ತಿನಿಂದ ಗಮನಿಸುತ್ತಿದ್ದ ಹೋಟೆಲ್ ಮ್ಯಾನೇಜರ್ ಕಡೆಗೊಮ್ಮೆ ಆತನ ಮುಂದೆ ನಿಂತು ವಿನಯದಿಂದ ಹೀಗೆಂದ: ‘ಸರ್, ತುಂಬಾ ಹೊತ್ತಿನಿಂದ ಗಮನಿಸ್ತಾ ಇದೀನಿ. ನೀವು ಜೇಬಿನಿಂದ ಅದೇನನ್ನೋ ತೆಗೆದು ನೋಡ್ತೀರಿ. ನಂತರ ಗಟಗಟನೆ ಕುಡೀತೀರಿ. ಏನಾದ್ರೂ ಅನಾಹುತ ಸಂಭವಿಸಿದೆಯಾ ಸರ್? ನಾನು ನಿಮಗೆ ಏನಾದ್ರೂ ಸಹಾಯ ಮಾಡಬಹುದಾ? ಜೇಬಿನಿಂದ ಹಾಗೆ ಪದೇ ಪದೆ ನೋಡ್ತೀರಲ್ಲ, ಏನ್ಸಾರ್ ಅದು?’
ಈ ಕುಡುಕ ಕೆಳಗಿಟ್ಟು ಹೇಳಿದ: ‘ಜೇಬಲ್ಲಿ ಇರೋದು ನನ್ನ ಹೆಂಡ್ತಿ ಫೋಟೋ. ತುಂಬಾ ಹೊತ್ತಿಂದ ನೋಡ್ತಾನೇ ಇದೀನಿ. ಅವಳು ಅಪ್ಸರೆಯ ಥರ ಕಾಣಿಸ್ತಾನೇ ಇಲ್ಲ. ಅವಳು ರಂಬೆಯ ಥರ, ಊರ್ವಶಿಯ ಥರಾ ಕಾಣಿಸಿದ ತಕ್ಷಣ ಕುಡಿಯೋದು ನಿಲ್ಲಿಸಿ ಮನೆಯ ದಾರಿ ಹಿಡೀತೀನಿ…
>>>>>>>>
ಒಂದು ಊರು. ಅಲ್ಲಿಗೊಬ್ಬ ರಾಜ. ಅವನಿಗೆ ವಿಚಿತ್ರ ಎಂಬಂಥ ಹವ್ಯಾಸವೊಂದಿತ್ತು. ಆತ ವಾರದ ಕೊನೆಯಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಪ್ರಜೆಗಳ ಸಭೆ ಕರೆಯುತ್ತಿದ್ದ. ಅವತ್ತು ರಾಜ್ಯದ ಯಾರಾದರೂ ಒಬ್ಬನನ್ನು ತನ್ನೊಂದಿಗೆ ಊಟಕ್ಕೆ ಆಹ್ವಾನಿಸುತ್ತಿದ್ದ. ರಾಜನ ಆಹ್ವಾನವನ್ನು ಯಾರೂ ತಿರಸ್ಕರಿಸುವಂತಿರಲಿಲ್ಲ. ಊಟ ಮುಗಿಸಿದ ವ್ಯಕ್ತಿ ನಂತರ ಹೊಸ ಹೊಸ ಪದಗಳಿಂದ ರಾಜನನ್ನು ಸಾರ್ವಜನಿಕರ ಮುಂದೆ ಹೊಗಳಿ ಭಾಷಣ ಮಾಡಬೇಕಿತ್ತು. ಹಾಗೆ ಮಾಡದಿದ್ದರೆ ಸಿಂಹದ ಬಾಯಿಗೆ ಕೊಡುವ ಕ್ರೂರ ಶಿಕ್ಷೆಯೂ ಅಲ್ಲಿ ಜಾರಿಯಲ್ಲಿತ್ತು? ಸುಖಾಸುಮ್ಮನೆ, ಅದೂ ಹೊಸ ಹೊಸ ಪದಗಳಿಂದ ರಾಜನನ್ನು ಹೊಗಳುವುದು ಸುಲಭದ ಕೆಲಸವಲ್ಲ ತಾನೆ? ಇದು ಗೊತ್ತಿದ್ದುದರಿಂದಲೇ ರಾಜನಿಂದ ಸಹಭೋಜನಕ್ಕೆ ಆಹ್ವಾನ ಬರದೇ ಇರಲಿ ಎಂದೇ ಎಲ್ಲರೂ ಪ್ರಾರ್ಥಿಸುತ್ತಿದ್ದರು.
ಹೀಗಿರುವಾಗ, ಅದೇ ರಾಜ್ಯದಲ್ಲಿ ಡ್ರಾಮಾ ಮಾಡಿಕೊಂಡು ಆರಾಮವಾಗಿದ್ದ ಯಶವಂತ ಸರದೇಶಪಾಂಡೆಗೆ ರಾಜನಿಂದ ಆಹ್ವಾನ ಬಂತು. ಯಶವಂತ ತುಂಬ ಖುಷಿಯಿಂದಲೇ ಅರಮನೆಗೆ ಹೋಗಿ ಗಡದ್ದಾಗಿ ಊಟ ಮುಗಿಸಿ, ಭಾಷಣ ಗೀಷಣ ಮಾಡೋದಿಲ್ರಿ, ಅದೇನ್ ಮಾಡ್ತಿರೋ ಮಾಡ್ಕೊಳ್ಳಿ ಎಂದು ಬಿಡುವುದೇ?
ಮಹಾರಾಜನಿಗೆ ಸಿಟ್ಟು ಬಂತು. ಆತ ಕಣ್ಣಲ್ಲೇ ಆಜ್ಞೆ ಜಾರಿ ಮಾಡಿದ. ತಕ್ಷಣವೇ ರಾಜಭಟರು ಯಶವಂತನನ್ನು ಎಳೆದೊಯ್ದು ಸಿಂಹದ ಪಂಜರಕ್ಕೆ ನೂಕಿ ಬಿಟ್ಟರು. ಅರ್ಧಗಂಟೆ ಕಳೆಯಿತು. ಏನಾಗಿದೆಯೋ ನೋಡೋಣ ಎಂದುಕೊಂಡು ಬಾಗಿಲು ತೆರೆದರೆ, ಯಶವಂತ ಗಲಗಲ ನಗುತ್ತಾ ಹೊರಗೆ ಬಂದ. ಅದನ್ನು ಕಂಡು ಎಲ್ಲರಿಗೂ ಬೆರಗಾಯಿತು. ರಾಜ ಧಡಧಡನೆ ಸಿಂಹಾಸನ ಇಳಿದು ಬಂದು ಹೇಳಿದ: ‘ಸರದೇಶಪಾಂಡೆಯವರೆ, ಕ್ಷಮಿಸಿ. ನೀವು ಸಿಂಹವನ್ನೇ ಗೆದ್ದ ಸಾಹಸಿ. ಆದರೆ ನಾಲ್ಕು ದಿನದಿಂದ ಊಟವಿಲ್ಲದೆ ಹಸಿದಿದ್ದ ಅದು ನಿಮ್ಮನ್ನು ಯಾಕೆ ತಿನ್ನಲಿಲ್ಲ. ಅದಕ್ಕೆ ನೀವು ಏನು ಮಾಡಿದ್ರಿ. ದಯವಿಟ್ಟು ಹೇಳಿ…’
ಆಗ ಯಶವಂತ ಹೇಳಿದ್ದು: ‘ನೋಡೂ, ಈಗೇನಾದ್ರೂ ನಿನ್ನನ್ನು ತಿಂದು ಹಾಕಿದ್ರೆ, ಸಂಜೆಗೆ ಮಹಾರಾಜರು ನಿನ್ನನ್ನೇ ಸಹಭೋಜನಕ್ಕೆ ಕರೀತಾರೆ. ಊಟ ಮುಗಿದ ತಕ್ಷಣ ರಾಜರನ್ನು ಹೊಗಳಿ ನೀನೂ ಅರ್ಧಗಂಟೆ ಭಾಷಣ ಮಾಡಬೇಕು. ಹಾಗೆ ಮಾಡಲಿಲ್ಲ ಅಂದ್ರೆ ಮಹಾರಾಜರು ಬಿಡೋದಿಲ್ಲ. ಅಂತ ಹೇಳ್ದೆ ನೋಡಿ, ಆ ಸಿಂಹ ಬಾಯಿ ಮುಚ್ಕೊಂಡು ಬಿದ್ಕೊಳ್ತು…
>>>>>>>>
ಪ್ರವಾಸಿಯೊಬ್ಬ ಮುಂಬಯಿಗೆ ಹೋಗಿದ್ದ. ಪ್ರವಾಸದ ನೆನಪಿಗೆ ಏನನ್ನಾದರೂ ಖರೀದಿಸಲು ಒಂದು ಅಂಗಡಿಗೆ ಹೋದ. ಅಲ್ಲಿ ಬೆಳ್ಳಿಯಿಂದ ತಯಾರಿಸಲಾದ ಇಲಿಯೊಂದರ ವಿಗ್ರಹವಿತ್ತು. ಅದರ ಜೊತೆಗೇ ಪ್ರಸಾದದಂತೆ ಕಾಣುವ ಒಂದು ಪ್ಯಾಕೆಟ್ ಹಾಗೂ ತಿಳಿದಿರಲೇಬೇಕಾದ ಗುಟ್ಟು ಎಂಬ ಶೀರ್ಷಿಕೆಯ ಪುಸ್ತಕವಿತ್ತು. ಇದಕ್ಕೆ ರೇಟ್ ಎಷ್ಟು ಎಂದು ಪ್ರವಾಸಿ ವಿಚಾರಿಸಿದ. ಇಲಿಯ ವಿಗ್ರಹಕ್ಕೆ 500 ರೂ. ಜೊತೆಗಿರುವ ಕತೆ ಪುಸ್ತಕಕ್ಕೆ 1000 ರೂ. ಎಂದ ಅಂಗಡಿಯವ.
‘ಕಥೆ ಪುಸ್ತಕ ಬೇಕಿಲ್ಲ. ಇಲಿಯ ವಿಗ್ರಹ ಮಾತ್ರ ಸಾಕು’ ಎಂದ ಪ್ರವಾಸಿ, ಅದನ್ನಷ್ಟೇ ಖರೀದಿಸಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ. ಐದು ನಿಮಿಷದ ನಂತರ ಹಿಂದಿನಿಂದ ಏನೋ ಸದ್ದಾಯಿತು. ತಿರುಗಿ ನೋಡಿದವನು ಬೆಚ್ಚಿ ಬಿದ್ದ. ಕಾರಣ, ಈತನ ಹಿಂದೆ ನೂರಾರು ಇಲಿಗಳು ನಡೆದು ಬರುತ್ತಿದ್ದವು.
ಪ್ರವಾಸಿಗೆ ಗಾಬರಿಯಾಯಿತು. ಆತ ಓಡಲು ಆರಂಭಿಸಿದ. ಇಲಿಗಳು ಸುಮ್ಮನಿರಲಿಲ್ಲ. ಅವೂ ಓಡಿದವು. ನಂತರದ ಇಪ್ಪತ್ತು ನಿಮಿಷದಲ್ಲಿ ಇಲಿಗಳ ಸಂಖ್ಯೆ ಸಾವಿರವಾಯಿತು. ಅವು ಪ್ರವಾಸಿಯ ಕೈಲಿದ್ದ ಬೆಳ್ಳಿ ಇಲಿಯನ್ನೇ ನೋಡುತ್ತಾ ಇವನ ಹಿಂದೆ ಬರುತ್ತಿದ್ದವು. ಈ ಆಕಸ್ಮಿಕ ಬೆಳವಣಿಗೆಯಿಂದ ಕಂಗಾಲಾದ ಈತ ಬೇರೇನೋ ತೋಚದೆ ಸಮುದ್ರ ತೀರಕ್ಕೆ ಬಂದ. ಇಲಿಗಳು ಅಲ್ಲಿಗೂ ಬಂದವು. ಈತ ಒಂದು ಎತ್ತರದ ಪ್ರದೇಶಕ್ಕೆ ಹೋಗಿ, ಅಲ್ಲಿಂದ ಬೆಳ್ಳಿ ವಿಗ್ರಹದ ಇಲಿಯನ್ನು ಸಮುದ್ರಕ್ಕೆ ಎಸೆದ. ಮರುಕ್ಷಣವೇ ಎಲ್ಲ ಇಲಿಗಳೂ ದುಢುಂ ಎಂದು ಸಮುದ್ರಕ್ಕೆ ಜಿಗಿದು ಮುಳುಗಿ ಹೋದವು.
ನಂತರ ಈ ಪ್ರವಾಸಿ ಸರಸರನೆ ಇಲಿಯ ವಿಗ್ರಹ ಖರೀದಿಸಿದ್ದ ಅಂಗಡಿಗೇ ಬಂದ. ಇವನನ್ನು ಕಂಡಾಕ್ಷಣ ಮುಖ ಅರಳಿಸಿದ ಮಾಲೀಕ-’ನೀವು ಬಂದೇ ಬರ್ತೀರ ಅಂತ ಗೊತ್ತಿತ್ತು. ಕಥೆ ಪುಸ್ತಕ ಬೇಕು ತಾನೆ?’ ಎಂದು ಕೇಳಿದ.
‘ಕಥೆ ಪುಸ್ತಕ ಬೇಡ ಮಾರಾಯ. ನಮ್ಮ ರಾಜಕಾರಣಿಗಳದ್ದು ಒಂದು ಬೆಳ್ಳಿ ವಿಗ್ರಹ ಇದ್ರೆ ಬೇಗ ಕೊಡು’ ಎಂದ ಪ್ರವಾಸಿ.

No comments:

Post a Comment