ಉದಯವಾಣಿಯ 'ನೆಲದ ನಾಡಿ' ಅಂಕಣ /16-2-2017
ಮನಗಳನ್ನು ಒಗ್ಗೂಡಿಸಿದ, ದಡಗಳನ್ನು ಸೇರಿಸಿದ ಕರಾವಳಿಯ ಹೆಮ್ಮೆಯ ಬಿ.ಗಿರೀಶ್ ಭಾರದ್ವಾಜರಿಗೆ ರಾಷ್ಟ್ರದ ಪರಮೋಚ್ಚ 'ಪದ್ಮಶ್ರೀ' ಗೌರವ. ಇದು ಗ್ರಾಮೀಣ ಭಾರತಕ್ಕೆ ಸಂದ ಮಾನ. ಹಳ್ಳಿ ಮನಸ್ಸುಗಳ ಖುಷಿಗೆ ಸಂದ ಸಂಮಾನ.
ಮನುಷ್ಯ ಮನುಷ್ಯರ ಹೃದಯಗಳನ್ನು, ಹಳ್ಳಿ-ಹಳ್ಳಿಗಳನ್ನು, ಪಕ್ಷ-ವಿಪಕ್ಷಗಳನ್ನು ಒಂದುಮಾಡಿದ 'ಸೇತುಬಂಧ' ನಿಜಾರ್ಥದ ಗ್ರಾಮಾಭಿವೃದ್ಧಿ. ಭಾರದ್ವಾಜರು ಮೂಲತಃ ಕೃಷಿಕರು. ದೇಶಾದ್ಯಂತ ಹಳ್ಳಿಗಳಲ್ಲಿ ಓಡಾಡಿದ್ದಾರೆ. ಜನರ ಮಧ್ಯೆ ಇದ್ದುಕೊಂಡು ಬದುಕನ್ನು ಓದಿದ್ದಾರೆ. ಇಪ್ಪತ್ತೆಂಟು ವರುಷದಲ್ಲಿ ನೂರ ಇಪ್ಪತ್ತೇಳು ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ.
ಹದಿನೈದು ವರುಷವಾಗಿರಬಹುದು. ಸ್ವಿಸ್ ಪ್ರಜೆ ಟೋನಿ ರುಟ್ಟಿಮಾನ್ ಗಿರೀಶರನ್ನು ಹುಡುಕಿ ಸುಳ್ಯಕ್ಕೆ ಬಂದ ಆ ದಿವಸಗಳು ಭಾರದ್ವಾಜರಿಗೆ ಸಿಹಿ ದಿನಗಳು. ಭಾರದ್ವಾಜರ ತೂಗುಸೇತುವೆಯ ಯಶೋಗಾಥೆಯು ಟೋನಿಯರನ್ನು ಕನ್ನಾಡಿಗೆ ಸೆಳೆದಿತ್ತು. ಟೋನಿಯದ್ದೂ 'ತೂಗುಸೇತುವೆ'ಯ ಕಾಯಕ. ಆದರದು ಯುದ್ಧಪೀಡಿತ ಪ್ರದೇಶಗಳಲ್ಲಿ ಕಮರಿದ ಬದುಕನ್ನು ಮತ್ತೆ ಎತ್ತರಿಸಲು ಸೇತುಬಂಧ. ಈ ಸಂದರ್ಭದಲ್ಲಿ ಟೋನಿಯವರ ಯಶೋಯಾನವನ್ನು ನೆನಪಿಸುವುದು ಕೂಡಾ ಗಿರೀಶರ ಸೇತುಯಾನಕ್ಕೆ ಗೌರವ.
1989. ಟೀವಿಯಲ್ಲಿ ಇಕ್ವೆಡಾರ್ನ ಭೂಕಂಪದ ದೃಶ್ಯ ಪ್ರಸಾರವಾಗುತ್ತಿತ್ತು. ಅದು ಒಬ್ಬ ಸ್ವಿಸ್ ಹುಡುಗನ ನಿದ್ದೆಗೆಡಿಸಿತು. ಆತನೇ ಟೋನಿ ರುಟ್ಟಿಮಾನ್, ಕಾಲೇಜು ವಿದ್ಯಾರ್ಥಿ 'ನಾನೇನಾದರೂ ಮಾಡಬೇಕು' ಎಂಬ ಸಂಕಲ್ಪ. ಅಲ್ಲಿನ ಹಳ್ಳಿಯೊಂದರ ಜನರ ನರಕಸದೃಶ ಬದುಕು ಟೋನಿಯ ಮನ ಕಲಕಿತು. ತುತ್ತು ಅನ್ನಕ್ಕೆ ತತ್ವಾರ. ಅನಾರೋಗ್ಯದಿಂದ ಒದ್ದಾಡಿ, ಆಸ್ಪತ್ರೆಗೆ ಒಯ್ಯಲಾಗದೆ ಸಾಯುತ್ತಿದ್ದ ಜನ. ನದಿ ದಾಟುವುದೇ ಸಮಸ್ಯೆ. ಸಂಚಾರ ಸರಿಹೋದರೆ ಮೂಲಭೂತ ಸಮಸ್ಯೆಗಳೂ ಕರಗುತ್ತವೆ ಅನಿಸಿತು. ಅಂದಿನಿಂದ ಟೋನಿಯ ಲಕ್ಷ್ಯ ಒಂದೇ, ಸೇತುವೆ ರಚನೆ.
ಸೇತುವೆ ಕಟ್ಟಲು ಇವರಲ್ಲಿ ಏನಿತ್ತು? ಪರಿಚಯವಿಲ್ಲ. ಸಹಾಯಕರಿಲ್ಲ, ಪರಿಕರಗಳಿಲ್ಲ. ತಂತ್ರಜ್ಞಾನ, ಅನುಭವ ಮೊದಲೇ ಇಲ್ಲ! ಇದ್ದದ್ದು ಸಾಧಿಸುವ ಆತ್ಮವಿಶ್ವಾಸ ಒಂದೇ! ಅವರಲ್ಲಿದ್ದದ್ದೂ, ಸ್ನೇಹಿತರಿಂದ ಪಡೆದದ್ದೂ ಸೇರಿದಾಗ ಎರಡು ಲಕ್ಷ ರೂಪಾಯಿ ಮಾತ್ರ. ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಶುರು. ಮೊದಲಿಗೆ ಜನ ನಂಬಲಿಲ್ಲ. ಬೆರಳೆಣಿಕೆಯ ಯುವಕರು ಜತೆಯಾದರು. ಡಚ್ ಇಂಜಿನಿಯರೊಬ್ಬರು ತಾಂತ್ರಿಕ ಮಾರ್ಗದರ್ಶನ ಕೊಡಲೊಪ್ಪಿದರು. ಒಂದು ಎಣ್ಣೆ ಕಂಪೆನಿಯಿಂದ ರೋಪ್, ಪೈಪ್, ಕೇಬಲ್ಗಳು ಕೊಟ್ಟಿತು. ಇವರ ಕಿಸೆಯ ಮೊತ್ತ ಸಿಮೆಂಟ್, ಜಲ್ಲಿಗಳಿಗೆ. ಜನರು ಕಾಮಗಾರಿಗೆ ಮುಂದಾದರು. ಐವತ್ತೈದು ಮೀಟರ್ ಉದ್ದದ ತೂಗುಸೇತುವೆ ಸಿದ್ಧವಾಯಿತು.
ಮತ್ತೆ ಸ್ವದೇಶಕ್ಕೆ. ಸಿವಿಲ್ ಇಂಜಿನಿಯರಿಂಗ್ ಕಲಿಕೆ ಸುರು. ಈ ನಡುವೆಯೂ ಇಕ್ವೆಡಾರ್ ಭೂಕಂಪ ಪೀಡಿತರ ನರಳಿಕೆಯ ಚಿತ್ರ ಕಾಡಿಸುತ್ತಲೇ ಇತ್ತು. ಅಧ್ಯಯನ ಅರ್ಧದಲ್ಲೇ ಕೈಬಿಟ್ಟು ಮತ್ತೆ ಇಕ್ವೆಡಾರ್ಗೆ. ಹೊಳೆ ದಾಟಲಾಗದ ಜನಸಮುದಾಯದ ಕಣ್ಣೀರು ಒರೆಸುವುದೇ ಬದುಕಿನ ಗುರಿ ಆಯಿತು. ಹದಿನಾಲ್ಕು ವರುಷ ಹಣೆಯ ಬೆವರೊರೆಸಲಿಲ್ಲ! ಒಂದು ನೂರ ಐವತ್ತೈದು ಸೇತುವೆಯಾದಾಗಲೇ ವಿಶ್ರಾಂತಿ! ಮೊದಮೊದಲ ಯಶಸ್ಸಿನಿಂದ ಮತ್ತಷ್ಟು ಸೇತುವೆಗಳಿಗೆ ಚಾಲನೆ. ಯಶಸ್ಸಿನ ಸುದ್ದಿ ಪ್ರತಿಷ್ಠಿತ ಕಂಪೆನಿಗಳ ಕಿವಿಯರಳಿಸಿತು!
ಕೇಬಲ್ಕಾರ್ ಕಂಪೆನಿಗಳಿಗೆ ಭೇಟಿ. ಉದ್ದೇಶವರಿತ ಕಂಪೆನಿಗಳು ಕೇಬಲ್ ಕೊಡಲು ಮುಂದಾದುವು. ಬೇರೆಬೇರೆ ಕಂಪೆನಿಗಳಿಂದ ರೋಪ್, ಪೈಪ್, ಚಕ್ಕರ್ಡ್ ಪ್ಲೇಟ್ ಹೀಗೆ ಒಮ್ಮೆ ಬಳಸಿದ ಕಚ್ಚಾವಸ್ತುಗಳುಗಳು ಸಿಗತೊಡಗಿದುವು. ಜಲ್ಲಿ, ಸಿಮೆಂಟ್ಗಳನ್ನೂ. ಕೈಗೂಡಿಸಲು ಅಲ್ಲಲ್ಲಿನ ಜನರು. ಟೋನಿ ನಿರ್ದೇಶನ. ಸಂಶಯ ಬಂದಾಗಲೆಲ್ಲಾ ಅದೇ ಡಚ್ ಇಂಜಿನಿಯರ ಸಂಪರ್ಕ. ಟೋನಿಯ ಮನಸ್ಸರಿತ ವೆಲ್ಡರ್ ವಾಲ್ಟರ್ ಯೆನೆಜ್ ಕೈಜೋಡಿಸಿದರು. ಮುಂದಿನೆಲ್ಲಾ ಯೋಜನೆಗಳಿಗೆ ಇಬ್ಬರ ಹೆಗಲೆಣೆ. ಸೇತುವೆ ರಚನೆಯಾದಂತೆಲ್ಲಾ, ಅನುಭವ ವಿಸ್ತಾರವಾಯಿತು. ಇಂಜಿನಿಯರಿಂಗ್ ಪದವೀಧರರಿಗಿಂತಲೂ ಒಂದು ಹೆಜ್ಜೆ ಮುಂದೆ!
ಈ ಮಧ್ಯೆ ವಿಯೆಟ್ನಾಂ ಯುದ್ಧ. ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ಗಳಲ್ಲಿ ಇಕ್ವೆಡಾರ್ನ ಮರುಕಳಿಕೆ. ಅಲ್ಲಿ ಭೂಕಂಪ, ಇಲ್ಲಿ ಯುದ್ಧ. ಇಕ್ವೆಡಾರ್ನ ಸೂತ್ರ್ರ ಇಲ್ಲೂ ಯಶಸ್ವಿ. ಜನಸಹಭಾಗಿತ್ವದಿಂದಲೇ ನಿರ್ಮಾಣ. ನಾಲ್ಕುನೂರಕ್ಕೂ ಮಿಕ್ಕಿ ಸೇತುವೆಗಳು! ಹಾರ, ತುರಾಯಿಯಿಂದ ಟೋನಿ ದೂರ. 'ಜನರದೇ ಸೇತುವೆ, ನನ್ನ ಪಾತ್ರ ಏನಿಲ್ಲ' ಎನ್ನುವ ನಿಲುವು. ಕಚ್ಚಾವಸ್ತು ಕೊಟ್ಟ ಕಂಪೆನಿಗಳಿಗೆ ಅವು ಯಾವ ಸೇತುವೆಗೆ ಬಳಕೆಯಾಗಿವೆ, ವೆಚ್ಚ, ಉಳಿತಾಯ ಇತ್ಯಾದಿಗಳ ಸವಿವರ ಲೆಕ್ಕ.
ಈ ಸೇತುವೆಗಾಥೆ ಕೇಳಿ 2002ರಲ್ಲಿ ಕಾಂಬೋಡಿಯಾ ಅಧ್ಯಕ್ಷರಿಂದ ಬುಲಾವ್. ಸಹಕಾರದ ಭರವಸೆ. ಕಡತಗಳು ಮಂತ್ರಿಯ ಬಳಿಗೆ. 'ಸಹಾಯ ಕೊಡಬಹುದು. ಆದರೆ ಉದ್ಘಾಟನೆಗೆ ಕರೆಯಬೇಕು, ಸೇತುವೆಯಲ್ಲಿ ಪಕ್ಷದ ಚಿಹ್ನೆ ಕೊರೆಯಬೇಕು.' ಟೋನಿಗೆ ಕಿರಿಕಿರಿ. 'ಇದು ಜನಸೇತುವೆ. ಹಾಗಾಗಿ ಅವರೇ ಉದ್ಘಾಟಕರು' ಎನ್ನುತ್ತಾ ಈ ಕೊಡುಗೆ ತಿರಸ್ಕರಿಯೇಬಿಟ್ಟರು. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಅಧ್ಯಕ್ಷರಿಗೂ ತಲಪಿತು. ಕೊನೆಗೆ ಅವರೇ ಪರಿಸ್ಥಿತಿ ತಿಳಿಯಾಗಿಸಿದ್ದರು!
ಸೇತುವೆ ನಿರ್ಮಾಣಕ್ಕಾಗಿ ಟೋನಿ ಸ್ಥಳಕ್ಕೆ ಭೇಟಿ ಕೊಡುವುದು ಮೂರೇ ಬಾರಿ. ಸ್ಥಳವೀಕ್ಷಣೆ, ಆವಶ್ಯಕತೆ, ಜನರೊಂದಿಗೆ ಮಾತುಕತೆ, ಅಂದಾಜು ವೆಚ್ಚ, ಸಹಭಾಗಿತ್ವದ ವಿಧಾನ, ಬೇಕಾಗುವ ಸರಕುಗಳ ನಿರ್ಧಾರ ಮೊದಲ ಭೇಟಿಯಲ್ಲಿ. ಎರಡನೇ ಭೇಟಿ ಅಡಿಪಾಯಕ್ಕೆ. ಕೊನೆಯದ್ದು ಟವರ್, ಕೇಬಲ್ ಜೋಡಣೆ. ಎಲ್ಲಾ ಸರಿಹೋದರೆ ಐದೇ ವಾರದಲ್ಲಿ ಸೇತುವೆ ರೆಡಿ. ಕೈಜೋಡಿಸಲು ಒಪ್ಪಿದ ಜನ ಕೈಕೊಟ್ಟರೆ ಅಲ್ಲಿಗೇ ಪ್ಯೆಲ್ ಕ್ಲೋಸ್. 'ಲ್ಯಾಪ್ಟಾಪ್' ಮೂಲಕ ಸಕಲ ನಿಯಂತ್ರಣ.
ಭಾರತದ ರಾಯಭಾರ ಕಚೇರಿಯಲ್ಲಿ ಟೋನಿಯ ಪರಿಚಯದ ಸ್ವಿಸ್ ಮಹಿಳೆಯೊಬ್ಬರಿದ್ದರು. ಇವರು ಮಾಧ್ಯಮದಿಂದ ಗಿರೀಶರ ಸೇತುವೆಗಾಥೆಯನ್ನು ತಿಳಿದಿದ್ದರು. 'ನೀನೊಬ್ಬನೇ ಅಲ್ಲ, ಇನ್ನೊಬ್ಬರು ಭಾರತದಲ್ಲಿದ್ದಾರೆ' ಎಂದು ಟೋನಿಯನ್ನು ಚುಚ್ಚಿದರು. ತಗೊಳ್ಳಿ, ಟೋನಿ ನೇರ ಸುಳ್ಯಕ್ಕೆ! ಕಿಸೆಯಲ್ಲಿದ್ದ ವಿಳಾಸ - ಗಿರೀಶ್ ಭಾರಧ್ವಾಜ್, ಸುಳ್ಯ, ಕರ್ನಾಟಕ, ಇಂಡಿಯಾ. ಆಗ ಭಾರದ್ವಾಜ್ ವಾರಂಗಲ್ಲಿನಲ್ಲಿ ಸೇತುವೆಯ ಕೆಲಸದಲ್ಲಿದ್ದರು! ಟೋನಿ ಕಾದರು. ವಾರದ ಬಳಿಕ ಬಂದ ಗಿರೀಶ್ರೊಂದಿಗೆ ಹತ್ತು ದಿನ ಕಳೆದರು.
ಟೋನಿಯ ಆಸ್ತಿ ಎರಡು ಬ್ಯಾಗ್ ಮಾತ್ರ. ಒಂದರಲ್ಲಿ ಉಡುಪು, ಮತ್ತೊಂದರಲ್ಲಿ ಲ್ಯಾಪ್ಟಾಪ್ ಇತ್ಯಾದಿ. 'ಟೋನಿ ಒಂದೇ ಹಾಸಿಗೆಯಲ್ಲಿ ಮೂರು ದಿನ ನಿದ್ರಿಸಿದ್ದರೆ ಅದು ಸುಳ್ಯದಲ್ಲಿ ಮಾತ್ರ'! ಭಾರತದ, ನಮ್ಮ ಸುಳ್ಯದ ಗಿರೀಶ್ ಭಾರದ್ವಾಜ್, ಸ್ವಿಜರ್ಲ್ಯಾಂಡ್ನ ಟೋನಿ - ಇವರಿಬ್ಬರ ಮಧ್ಯೆ ಸ್ನೇಹಸೇತುವಿಗೆ ಕಾರಣ -
ತೂಗುಸೇತುವೆ. ಈಗಲೂ ಮಿಂಚಂಚೆಯಲ್ಲಿ ಟೋನಿ ಮತ್ತು ಭಾರದ್ವಾಜ್ ಮಾತನಾಡುತ್ತಿರುತ್ತಾರೆ.
ಹಿಂದೊಮ್ಮೆ ಭಾರದ್ವಾಜರು ನಮ್ಮ ಆಡಳಿತ ವ್ಯವಸ್ಥೆಯ ಕಾಣದ ಮುಖದ ವಿಷಾದದ ಸುದ್ದಿಯನ್ನು ಹೇಳಿದ್ದರು. ಸೇತುವೆ ಕೆಲಸ ನಡೆಯುತ್ತಿದ್ದಾಗ ಕೇರಳದಲ್ಲಿ ಬೆಂಬಲ ಸಿಕ್ಕಿದಷ್ಟು ಕರ್ನಾಟಕದಲ್ಲಿ ಸಿಗುತ್ತಿಲ್ಲ. ಕೇರಳದಲ್ಲಿ ನಮ್ಮ ಸೇತುವೆ ಮುಗಿಯುವಷ್ಟರಲ್ಲಿ ಒಂದಷ್ಟು ಜನ ಸ್ನೇಹಿತರಾಗಿ ಬಿಡುತ್ತಾರೆ. ಆದರೆ ಕರ್ನಾಟಕದಲ್ಲಿ ಗುತ್ತಿಗೆ ಕೆಲಸ ಅಂದರೆ ಜನ ಹತ್ತಿರ ಬರುವುದಿಲ್ಲ. ಅಧಿಕಾರಿಗಳು ಬಿಕ್ಷುಕ ಹತ್ತಿರ ಬಂದಂತೆ ವರ್ತಿಸುತ್ತಾರೆ. ಇವರ ವರ್ತನೆ ನೋಡಿದಾಗ ಸೇತುವೆ ಸಹವಾಸವೇ ಬೇಡ ಅನ್ನಿಸುತ್ತದೆ. ಆದರೆ ಜನರ ಕಣ್ಣೀರನ್ನು ಕಂಡಾಗ ನೋವು ಮರೆಯಾಗುತ್ತದೆ.
ಒಂದೆಡೆ ಪದ್ಮಶ್ರೀ ಪ್ರಶಸ್ತಿಯ ಖುಷಿ. ಮತ್ತೊಂದೆಡೆ ಒಪ್ಪಿಕೊಂಡ ಕಾಯಕ ಪೂರೈಸುವ ಬದ್ಧತೆ. ಅವರ ಇಡೀ ತಂಡದ ಮಿಲಿಟರಿ ಶಿಸ್ತು ಭಾರದ್ವಾಜರ ಸೇತುಯಾನದ ಯಶ. ಪ್ರಶಸ್ತಿಗೆ ಅಭಿನಂದನೆ ಹೇಳಲು ಫೋನ್ ಮಾಡಿದಾಗ ಗಿರೀಶರು ಉತ್ತರ ಕನ್ನಡದ ಸೇತುವ ನಿರ್ಮಾಣದ ಭರದಲ್ಲಿದ್ದರು. "ಎರಡು ತೂಗುಸೇತುವೆಗಳು ರೆಡಿ ಆಗ್ತಿವೆ. ಒಂದು, ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಗೆ ಅಡ್ಡವಾಗಿ ಸೇತುವೆ. ಇದು ಬಿದರಳ್ಳಿ, ಡೋಂಗ್ರಿ ಮತ್ತು ಹೆಗ್ಗರಣೆ ಈ ಮೂರು ಹಳ್ಳಿಗಳಿಗೆ ಪ್ರಯೋಜನ. ಇನ್ನೊಂದು ಗುಂಡುಬಾಳ ಗ್ರಾಮದಲ್ಲಿ ಗುಂಡುಬಾಳ ನದಿಗೆ ಸೇತುವೆ," ಎನ್ನುವ ಮಾಹಿತಿ ನೀಡಿದರು.
ಭಾರದ್ವಾಜರು ಎನ್ಡಿಟಿವಿ ಪ್ರಶಸ್ತಿ, ಕನ್ನಡ ಪ್ರಭ ಸುವರ್ಣ ವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಸಿಎನ್ಎನ್-ಐಬಿಎನ್ ಪ್ರಶಸ್ತಿ.. ಹೀಗೆ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ. ಈಗ ಪದ್ಮಶ್ರೀ ಪ್ರಶಸ್ತಿ. ಮಣ್ಣಿನ ಮಗನಾಗಿ, ಮಣ್ಣನ್ನು ನಂಬಿರುವವರ ಬಾಳಿಗೆ ನಿಜಾರ್ಥದಲ್ಲಿ ಭಾರದ್ವಾಜರು ದೀವಿಗೆಯಾಗಿದ್ದಾರೆ. ಅಭಿನಂದನೆಗಳು.