‘ತಮಸೋ ಮಾ ಜ್ಯೋರ್ತಿಗಮಯ’ – ‘ಕತ್ತಲೆಯಿಂದ, ಅಜ್ಞಾನದಿಂದ ನನ್ನನ್ನು ಬೆಳಕಿನೆಡೆಗೆ, ಜ್ಞಾನದೆಡೆಗೆ ಕರೆದುಕೊಂಡು ಹೋಗು’ ಎಂದು ಸಾವಿರಾರು ವರ್ಷಗಳ ಹಿಂದೆ ಭಗವಂತನನ್ನು ಋಷಿ-ಮುನಿಗಳು ಪ್ರಾರ್ಥಿಸಿದ್ದಾರೆ. ನಮ್ಮ ಹಿರಿಯರು ಮಾಡಿರುವ ಹಬ್ಬಗಳ ಹಿಂದೆ ಆಳವಾದ ತಾತ್ವಿಕ ರಹಸ್ಯಗಳಿವೆ. ಅದನ್ನು ನಾವು ತಿಳಿಯಬೇಕಷ್ಟೇ. ಪೌರಾಣಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನಲೆಗಳನ್ನು ನಮ್ಮ ಹಬ್ಬಗಳು ಒಳ ಗೊಂಡಿವೆ. ಅಲ್ಲದೆ ಹಬ್ಬಗಳಲ್ಲಿನ ಆಚಾರ-ವಿಚಾರಗಳು ಋತುಧರ್ಮಕ್ಕೆ ಅನುಗುಣವಾಗಿದೆ. ದೇಹದ ಆರೋಗ್ಯಕ್ಕೆ ಹೊಂದುವಂತಹವು. ನಮ್ಮ ಹಬ್ಬಗಳಲ್ಲಿ ವೈವಿಧ್ಯತೆಯಿದೆ.
ಆಚರಣೆಗಳಿಗೆ ಅನುಗುಣವಾಗಿ ದೀಪಾವಳಿ ಹಬ್ಬವನ್ನು ಸುಖರಾತ್ರಿ, ಯಕ್ಷರಾತ್ರಿ, ಸುಖಸುಪ್ತಿಕಾ, ಕೌಮುದೀ ಮಹೋತ್ಸವ, ಭಗಿನೀದ್ವಿತೀಯಾ, ಸೋದ ರಬಿದಿಗೆ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.
ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಮ್ |
ರಾಮಾಯಣಮಿವ ಸುಭಗಂ ದೀಪದಿನಂ ಹರತು ಮೇ ದುರಿತಮ್ ||
‘ರಾಮಾಯಣದಲ್ಲಿ ಮೇಘನಾದನು (ಇಂದ್ರಜಿತ್) ಶಾಂತನಾಗುವಂತೆ ಈ ದೀಪಾವಳಿ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗುತ್ತದೆ. ರಾಮಾಯಣದಲ್ಲಿ ದಶಮುಖ ರಾವಣನನ್ನು ಸುಡಲ್ಪ ಡುವಂತೆ (ನಾಶ), ಇದರಲ್ಲಿ ದಶೆ (ಬತ್ತಿ)ಗಳು ಮುಖವು (ಹಣತೆಗಳ ಮೂಲಕ) ಉರಿಸಲ್ಪಡುತ್ತವೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವವು ದಿನವೂ ನಮ್ಮ ನಿಮ್ಮೆಲ್ಲರ ಪಾಪಗಳನ್ನು ಹೋಗಲಾಡಿಸಲಿ.’
ಅಂದರೆ ನಮ್ಮಲ್ಲಿರುವ ಅಜ್ಞಾನ, ಅರಿಷಡ್ವರ್ಗಗಳು ನಾಶವಾಗಿ, ಸಾತ್ವಿಕರು, ಜ್ಞಾನಿಗಳು ಆಗುವಂತೆ ದೀಪಾವಳಿ ಹಬ್ಬವು ನಮಗೆ ನೆರವನ್ನು ನೀಡಲಿ ಎಂದು ಈ ಹಬ್ಬದ ಆಶಯ.
ನರಕಚರ್ತುದಶಿ
ನರಕಾಸುರನು ಅನೇಕ ರಾಜರನ್ನು, ದೇವತೆಗಳನ್ನು ಗೆದ್ದು ಹದಿನಾರು ಸಾವಿರ ಸ್ತ್ರೀಯರನ್ನು ಸೆರೆಮನೆಯಲ್ಲಿ ಹಾಕಿದ್ದ. ಶ್ರೀಕೃಷ್ಣನು ನರಕಾಸುರನನ್ನು ಕೊಂದು ಅವರೆಲ್ಲರನ್ನು ಬಿಡುಗಡೆ ಮಾಡಿದನು. ಸ್ತ್ರೀಯರು ಮುಕ್ತರಾದ ಕಾರಣ ಶ್ರೀಕೃಷ್ಣನನ್ನು ಅರ್ಚಿಸಿ ದೀಪ ಬೆಳಗಿದರು ಎಂಬುದು ಪ್ರತೀತಿ. ಆ ದಿನದ ಸವಿನೆನಪಿಗಾಗಿ ನಾವು ನರಕಚತುರ್ದಶಿಯನ್ನು ಆಚರಿಸುತ್ತೇವೆ.
ಇನ್ನು ನಾವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ, ಇದರಲ್ಲಿ ಗಹನವಾದ ಒಳಾರ್ಥವೂ ಇದೆ. ನರಕಾಸುರನೆಂದರೆ ನರಕಕ್ಕೆ ನಮ್ಮನ್ನು ಎಳೆದೊಯ್ಯುವ ರಾಕ್ಷಸೀಪ್ರವೃತ್ತಿ ಎಂದು. ರತ್ನಾಕರವರ್ಣಿಯು ಭರತೇಶವೈಭವದಲ್ಲಿ ‘ಹೊನ್ನು ಹೆಣ್ಣು ಮಣ್ಣು ಪಿಡಿದಾತ್ಮರೆಲ್ಲರೂ | ಮಣ್ಣು ಹಿಡಿದ ಲೋಹದಂತೆ’ ಎಂದು ಹೇಳುತ್ತಾನೆ. ನಾವು ನೈಜವಾಗಿ ದಿವ್ಯಾತ್ಮರಾಗಿದ್ದರೂ, ಅಜ್ಞಾನದ ಫಲವಾಗಿ ಅನೇಕ ಕಲ್ಮಶಗಳನ್ನು ಹೊಂದಿದ್ದೇವೆ. ಅದರಿಂದ ದುಃಖವನ್ನು ಅನುಭವಿಸುತ್ತಿದ್ದೇವೆ. ಅದನ್ನೇ ನರಕ ಎಂದು ಕರೆಯುತ್ತಾರೆ. ಕಲ್ಮಶಗಳು ಹೆಚ್ಚಾದಾಗ, ಮನುಷ್ಯ ದೇಹವನ್ನು ಹೊಂದಿದ್ದರೂ ರಾಕ್ಷಸೀಪ್ರವೃತ್ತಿಯನ್ನು ತೋರಿಸುತ್ತೇವೆ. ಆದ್ದರಿಂದ ನಾವು ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ, ಮಾಡಬಾರದ ಕೆಲಸಗಳನ್ನು ಮಾಡಿ ನರಕಕ್ಕೆ ಹೋಗುವುದು ಅಥವಾ ನರಕಯಾತನೆಯನ್ನು ಅನುಭವಿಸುವುದು ನಿಶ್ಚಿತ.
ಚತುರ್ದಶಿ ಎಂದರೆ ‘ವಿದ್ಯೆ’ ಎಂಬ ಅರ್ಥವಿದೆ. ಶಿಕ್ಷಣದ ಮೂಲಕ ನಿಜವಾದ ವಿದ್ಯೆಯನ್ನು ಪಡೆದಾಗ ನಾವು ಸುಸಂಸ್ಕೃತರಾಗುತ್ತೇವೆ. ಸುಸಂಸ್ಕೃತರಾಗಬೇಕಾದರೆ ನಮ್ಮಲ್ಲಿರುವ ಕೀಳುಮಟ್ಟದ ಸ್ವಭಾವಗಳನ್ನು ಬಿಡಬೇಕಾಗುತ್ತದೆ. ತಮಸ್ಸು ಮತ್ತು ರಜಸ್ಸನ್ನು ಬಿಟ್ಟು, ಸಾತ್ವಿಕ ಪುರುಷರಾದಾಗ ಮಾತ್ರ ನಾವು ನಿಜವಾದ ವಿದ್ಯಾವಂತರಾಗಲು ಸಾಧ್ಯ. ನಮ್ಮಲ್ಲಿರುವ ಆಸುರೀ ಗುಣಗಳನ್ನು ನಿರ್ಮೂಲನೆ ಮಾಡುತ್ತಾ, ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂಬುದು ನರಕಚತುರ್ದಶಿಯ ಅಂತರ್ಗತ ಅರ್ಥವಾಗಿದೆ. ಹೊಸ ವಸ್ತ್ರಗಳನ್ನು ಧರಿಸಿ, ಹಣತೆಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸುವುದರಲ್ಲಿ ನಮ್ಮ ದೀಪಾವಳಿಯ ಆಚರಣೆಯು ಮುಗಿಯದೆ, ನಿಜವಾದ ಅರ್ಥದಲ್ಲಿ ನಾವು ವಿದ್ಯಾವಂತರಾಗೋಣ. ಆಗ ನಿಜವಾದ ದೀಪಾವಳಿ ಹಬ್ಬದ ಆಚರಣೆಯಾಗುತ್ತದೆ.
ಹಲವು ಪೂಜೆಗಳು
ದೀಪಾವಳಿ ಹೆಸರೇ ಸೂಚಿಸುವಂತೆ ಇದು ದೀಪಗಳ ಹಬ್ಬ. ‘ದೀಪ + ಆವಳಿ’ – ಅಂದರೆ ದೀಪಗಳ ಸಾಲು ಎಂದು. ಅಂತಹ ದೀಪಗಳ ಪರಂಪರೆಯನ್ನು ಹೊಂದಿರುವುದರಿಂದ ಈ ಹಬ್ಬಕ್ಕೆ ಈ ನಾಮಧೇಯ. ಈ ಹಬ್ಬ ಒಂದು ದಿನದ ಆಚರಣೆಗೆ ಸೀಮಿತವಾಗಿಲ್ಲ. ನರಕಚತುರ್ದಶಿ, ಬಲಿಪಾಡ್ಯ, ಲಕ್ಷ್ಮೀಪೂಜೆ, ಕಾಳೀಪೂಜೆ, ಕುಬೇರಪೂಜೆ, ಯಮಧರ್ಮರಾಜನ ಪೂಜೆ, ಯಮುನಾಪೂಜೆ, ಇತ್ಯಾದಿ ಅನೇಕ ಪೂಜೆಗಳನ್ನು ದೀಪಾವಳಿ ಒಳಗೊಂಡಿದೆ.
CONTENT COPY RIGHT: https://www.prajavani.net/community/religion/deepavali-naraka-chaturdashi-celebrations-traditional-pooja-779056.html