Thursday, 30 April 2015

ರೆಕ್ಕೆ ಇದ್ದರೆ ಸಾಕೆ... / Rekke iddare sake..

ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು 
ಬಯಲಲಿ ತೇಲುತ ತಾನು  ಮ್ಯಾಲೆ ಹಾರೋಕೆ।।
ಕಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು 
ಗಾಳಿಯ ಮೇಲೆ ತಾನು  ಜಿಗಿದು ಓಡೋಕೆ 

ಹೂ ಒಂದಿದ್ದರೆ ಸಾಕೆ, ಬ್ಯಾಡವೆ ಗಾಳಿ?
ನೀವೆ ಹೇಳಿ ಕಂಪ ಬೀರೋಕೆ 
ಮುಖ ಒಂದಿದ್ದರೆ ಸಾಕೆ, ದುಂಬಿಯ ತಾವ 
ಬ್ಯಾಡವೆ ಹೂವ? ಜೇನ ಹೀರೋಕೆ 

ನೀರೊಂದಿದ್ದರೆ ಸಾಕೆ, ಬ್ಯಾಡವೆ ಹಳ್ಳ 
ಬಲ್ಲವ ಬಲ್ಲ ತೊರೆಯು ಹರಿಯೋಕೆ 
ಮೋಡ ಇದ್ದರೆ  ಸಾಕೆ, ಬ್ಯಾಡವೆ ಭೂಮಿ?
ಹೇಳಿ ಸ್ವಾಮಿ ಮಳೆಯು ಸುರಿಯೋಕೆ 

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ?
ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು?
ಎಲ್ಲರ ಜೋಡಿ ಕೂಡಿ ಹಾಡೋಕೆ 


- ಎಚ್. ಎಸ್. ವೆಂಕಟೇಶಮೂರ್ತಿ 

 

Wednesday, 29 April 2015

ಎದೆ ತುಂಬಿ ಹಾಡಿದೆನು.../ Ede tumbi hadidenu..

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು||

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ 

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

- ಜಿ. ಎಸ್. ಶಿವರುದ್ರಪ್ಪ

Video link:
http://www.youtube.com/watch?v=utvDlz7lhIM

Tuesday, 28 April 2015

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... / Nee sigade balondu baale krishna

ಕೃಷ್ಣ ..... ಕೃಷ್ಣ .... ಕೃಷ್ಣ .... ಕೃಷ್ಣ ..........
ಕೃಷ್ಣಾ .......

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ...

ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರ ಇಲ್ಲದಾ ರಾತ್ರಿ ಬೀಳು (೨)
ನೀ ಸಿಗದೇ ಉರಿ ಉರಿ ಕಳೆದೆ ಇರುಳ... (೨)
ಮಾತೆಲ್ಲ ಬಿಗಿದಿದೆ ದುಃಖ ಕೊರಳ.....
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)

ಅನ್ನ ಸೇರದು ನಿದ್ದೆ ಬಂದುದೆಂದು 
ಕುದಿವೆ ಒಂದೇ ಸಮ ಕೃಷ್ಣ ಎಂದು... (೨)
ಯಾರು ಅರಿವರು ಹೇಳು ನನ್ನ ನೋವ ...(೨)
ತಲ್ಲಣಿಸಿ ಕೂಗುತಿದೆ ದಾಸಿ ಜೀವ 

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ.. (೨)

ಒಳಗಿರುವ ಗಿರಿಧರನೇ ಹೊರಗೆ ಬಾರೋ 
ಕಣ್ಣೆದುರು ನಿಂತು ಆ ರೂಪ ತೋರೋ (೨)
ಜನುಮ ಜನುಮದಾ ರಾಗ ನನ್ನ ಪ್ರೀತಿ .. ಕೃಷ್ಣ .. ಕೃಷ್ಣ ... ಕೃಷ್ಣಾ ...
ಕೃಷ್ಣ ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ... ಕೃಷ್ಣ .. ಕೃಷ್ಣ .. ಕೃಷ್ಣಾ ..
 
ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ