IMPORTANT NOTICE

New official website is launched for Karada Community. Please visit www.karadavishwa.com for more details.

Saturday, 26 July 2025

ಕರಾಡ ಮಹಿಳಾ ಸಮಾವೇಶ 2025

 


ದಿನಾಂಕ : 03-08-2025, ಆದಿತ್ಯವಾರ ಸ್ಥಳ : ಪೆರ್ಲ "ಶ್ರೀ ಭಾರತೀ ಸದನ"

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿಯ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಜರಗುವ  "ಕರಾಡ ಮಹಿಳಾ ಸಮಾವೇಶ -2025" ಕ್ಕೆ ಸಮಾಜದ ಎಲ್ಲಾ ವಯೋಮಾನದ ಸ್ತ್ರೀಯರಿಗೂ ಆದರದ ಸ್ವಾಗತ.

https://www.karadavishwa.com/pages/c19wyn-8ouwog-1z9kg8

Thursday, 24 July 2025

ಲಘು ಮನುಷ್ಯನನ್ನು ಗಟ್ಟಿಗೊಳಿಸುವ ಗುರುಗಳು!

ನಾವು ಜೀವನವನ್ನು ಸುಂದರವಾಗಿ ಬಾಳುವಂತೆ ಜ್ಞಾನದ ಅರಿವನ್ನು ಗುರುಗಳು ಕೊಡುತ್ತಾರೆ. ಮನಸ್ಸು ಮತ್ತು ಬದುಕಿನಲ್ಲಿನ ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸುವವರೂ ಗುರುಗಳು. ಜ್ಞಾನ, ಮೌಲ್ಯ, ಶಿಕ್ಷಣ, ಸಂಸ್ಕಾರ ಮತ್ತು ಕೌಶಲ್ಯದ ಪ್ರಮುಖ ಜೀವನ ಪಾಠಗಳನ್ನು ಕಲಿಸುವವರು ಗುರುಗಳು. ಪ್ರಪಂಚದ ಅತಿ ಉತ್ಕೃಷ್ಟ ಪರಂಪರೆಯಾಗಿರುವ ಗುರುಗಳನ್ನು ನೆನೆದು, ಗೌರವಿಸುವ ವಿಶಿಷ್ಟ ದಿನವೇ ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಗುರು ಪೂರ್ಣಿಮಾ. ಶ್ರೀಯುತ ವೇದವ್ಯಾಸರು ಆಷಾಢ ಮಾಸದ ಇದೇ ಹುಣ್ಣಿಮೆಯಂದು ಜನಿಸಿದರು. ಹಾಗಿರುವಾಗ, ನಮ್ಮ ಸನಾತನ ಸಂಸ್ಕೃತಿಗೆ ಗುರುಸ್ವರೂಪದಲ್ಲಿರುವ ಗುರು ಪೂರ್ಣಿಮೆಯನ್ನು ವೇದವ್ಯಾಸರ ಪೂಜೆ ಮಾಡಿ, 'ವ್ಯಾಸ ಪೂರ್ಣಿಮೆ'ಯಾಗಿ ಆಚರಿಸುವುದೂ ತುಂಬಾ ಔಚಿತ್ಯಪೂರ್ಣ ವಿಚಾರ.

ಗುರು ಪೂರ್ಣಿಮೆಯ ದಿನದಂದು ಉಳಿದೆಲ್ಲ ದಿನಗಳಿಗಿಂತ 'ಗುರು ಸೂತ್ರ'ದ ಪ್ರಭಾವ ಹಲವಾರು ಪಟ್ಟು ಹೆಚ್ಚು, ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂಬುದಾಗಿ ನಂಬಿಕೆ. ಸಂಸ್ಕೃತದಲ್ಲಿ 'ಗು' ಎಂದರೆ ಅಂಧಕಾರ ಅಥವಾ ಅಜ್ಞಾನ ಎಂದರ್ಥ. 'ರು' ಎಂದರೆ ಕಳೆಯುವ ಅಥವಾ ದೂರಮಾಡುವ ಎಂದರ್ಥ. ಹಾಗಾಗಿ 'ಗುರು' ಎಂದರೆ ಅಂಧಕಾರ ಅಥವಾ ಅಜ್ಞಾನವನ್ನು ಕಳೆಯುವ, ದೂರಮಾಡುವ ಮೇಧಾವಿ ಎನ್ನುವ ಸರಳ ಅರ್ಥ. ಮನುಷ್ಯ ಜನ್ಮದಲ್ಲಿ ಪ್ರಮುಖವಾಗಿ ತೀರಿಸಲಾಗದ ನಾಲ್ಕು ಋಣಗಳ ಉಲ್ಲೇಖವಿದೆ. ಅವೆಂದರೆ ತಾಯಿಯ ಋಣ, ತಂದೆಯ ಋಣ, ಗುರುವಿನ ಋಣ ಮತ್ತು ಈ ಮಣ್ಣಿನ/ನೆಲದ ಋಣ. ಈ ನಾಲ್ಕಕ್ಕೂ ಮನುಷ್ಯ ಸದಾ ಚಿರಋಣಿಯಾಗಿರಬೇಕು. ಗುರುಗಳು ಹೇಳಿದ ಸಾಧನೆಯನ್ನು ಅಂಗೀಕರಿಸಿ ಅವರು ಹೇಳಿದ ಮಾರ್ಗದಲ್ಲಿ ಮುನ್ನಡೆದು, ಸಾಧನೆಯ ಮೂಲಕ ಸ್ವತಃ ಗುರುತ್ವ ಪ್ರಾಪ್ತಿಸಿಕೊಂಡಾಗಲಷ್ಟೇ ಗುರುಋಣ ತೀರಿಸಲು ಸಾಧ್ಯ ಎನ್ನುವುದು ಶಾಸ್ತ್ರದಲ್ಲಿ ಉಲ್ಲೇಖಿತ ಸುವಿಚಾರ. ಈ ವಿಷಯದಲ್ಲಿ ಸಂತ ಕಬೀರದಾಸರು ಹೇಳಿದ ಒಂದು ಉಕ್ತಿಯ ಭಾವಾನುವಾದ ಹೀಗಿದೆ. ಗುರುಗಳು ಮತ್ತು ಭಗವಂತ ನಮ್ಮೆದುರು ಬಂದಾಗ ಮೊದಲು ಯಾರಿಗೆ ವಂದಿಸಬೇಕು ಎನ್ನುವ ಜಿಜ್ಞಾಸೆಗೆ 'ಮೊದಲು ನಾವು ಗುರುವಿನ ಪಾದಕ್ಕೆ ನಮಸ್ಕರಿಸಬೇಕು, ಯಾಕೆಂದರೆ ಗುರುವಿನ ಕೃಪೆ ಇಲ್ಲದೆ ನಮಗೆ ಭಗವಂತ ಸಿಗಲು ಸಾಧ್ಯವಿಲ್ಲ' ಎಂಬುದಾಗಿ ಉತ್ತರಿಸಿ ಗುರುವಿನ ಶ್ರೇಷ್ಠತೆಗೆ ಕನ್ನಡಿ ಹಿಡಿದಿದ್ದಾರೆ. ನಮಗೆ ಸುಜ್ಞಾನದ ಧಾರೆ ಎರೆಯುವ ಮೂಲಕ ಗುರುವು ನಮ್ಮನ್ನು ಜನ್ಮಮೃತ್ಯುಚಕ್ರದಿಂದ ಪಾರು ಮಾಡುತ್ತಾರೆ.

ಜೀವನದಲ್ಲಿ ಒಂದು ಅಕ್ಷರವನ್ನು ಅಥವಾ ಯಾವುದೋ ಒಂದು ಶೈಕ್ಷಣಿಕ ಅಥವಾ ಜೀವನ ಪಾಠವನ್ನು ಕಲಿಸಿದವರೆಲ್ಲರೂ ಗುರು ಸಮಾನರು ಎಂಬುದು ಹಿಂದಿನಿಂದಲೂ ನಡೆದು ಬಂದ ಒಕ್ಕಣೆ. ನಾವು ಕಲಿಯುವ ವಿದ್ಯೆ ಮತ್ತು ಜ್ಞಾನದ ರೂವಾರಿಗಳು ಯಾರೇ ಆದರೂ ಅವರೆಲ್ಲರೂ ಗುರುಗಳು. ಜ್ಞಾನ ಕೇವಲ ನಮ್ಮ ಸುತ್ತಲಿನ ಮನುಷ್ಯರಿಂದ ಅಥವಾ ಕೇವಲ ನಮಗಿಂತ ಹಿರಿಯರಿಂದ ಅಥವಾ ಕೇವಲ ಶಾಲಾ ಕಾಲೇಜುಗಳಿಂದ ಮಾತ್ರ ಒದಗುವಂಥದ್ದಲ್ಲ. ನಾವಿರುವ ಪರಿಸರ, ಸಮಾಜ, ಪ್ರಕೃತಿ, ಪ್ರಾಣಿ ಸಂಕುಲ, ಪಕ್ಷಿ ವೃಂದ, ಗಾಳಿ, ಬೆಳಕು,‌ ನದಿ, ಗುಡ್ಡ, ಬೆಟ್ಟ, ನೀರು, ಆಹಾರ, ವಾತಾವರಣ ಋತುಮಾನ... ಹೀಗೆ ಎಲ್ಲವೂ-ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುರುವಾಗಿ ಒದಗಿ ಒಂದಷ್ಟು ಪಾಠ ಅನುಭವ ಸಿಗುವುದು. ಮನುಷ್ಯನ ಲೌಕಿಕ, ಅಲೌಕಿಕ ಮತ್ತು ಪಾರಮಾರ್ಥಿಕ ಸಿದ್ಧಿ ಮತ್ತು ಸಾಧನೆಗೆ ಕಾರಣರಾ(ವಾ)ಗುವ ಎಲ್ಲರಿಗೂ/ಎಲ್ಲದಕ್ಕೂ ಹೃದಯದಿಂದ, ದೈನ್ಯವಾಗಿ, ಭಕ್ತಿಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವ ಹಬ್ಬದ ದಿನವೇ ಗುರು ಪೂರ್ಣಿಮೆ! ಗುರು ಎನ್ನುವುದು ಸಾಗರಸತ್ವ ಮತ್ತು ಮಹಾತತ್ವ. ಮಾನವನ ಮೂಲಾಶಯ ಮತ್ತು ಧೀಶಕ್ತಿಯ ಸಂಕೇತವದು.

ಇಂದಿನ ಯತಿಗಳು ಮಾಡುತ್ತಿರುವ, ಪಾಲಿಸುತ್ತಿರುವ ಚಾತುರ್ಮಾಸ್ಯ ವ್ರತವು ವೇದವ್ಯಾಸರು ಹಾಕಿಕೊಟ್ಟ ವಿಶಿಷ್ಟ ಮತ್ತು ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ. ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ವರ್ಷದ ಎಂಟು ತಿಂಗಳುಗಳ ಕಾಲ ಕಾಲ್ನಡಿಗೆಯಲ್ಲಿ ಲೋಕ ಸಂಚಾರ ಮಾಡುತ್ತಿದ್ದ ಯತಿವರೇಣ್ಯರು ನಾಲ್ಕು ತಿಂಗಳುಗಳ ಕಾಲ ಒಂದೆಡೆ ಕುಳಿತು ಅಧ್ಯಯನ ಮಾಡಿ ಆ ವೃದ್ಧಿಯಾದ ಸುಜ್ಞಾನವನ್ನು ಮುಂದಿನ ಲೋಕಸಂಚಾರದಲ್ಲಿ ಜನರಿಗೆ ಜ್ಞಾನಾರ್ಜನೆ ನೀಡಲಿ ಎನ್ನುವ ಮಹತ್ವ ಹೊಂದಿರುವ ಆಧ್ಯಾತ್ಮಿಕ ಪ್ರಕಾರವಿದು. ಆ‌ ಚಾತುರ್ಮಾಸ್ಯ ಇದೇ ವ್ಯಾಸ ಪೂರ್ಣಿಮೆಯಂದು ಆರಂಭವಾಗುತ್ತದೆ.

ಮನುಷ್ಯನು ವಾಯಸದಿಂದ ಮಾನಸಕ್ಕೆ ತೆರಳಬೇಕು ಎಂಬುದಾಗಿ ಭಾಗವತ ಪುರಾಣದಲ್ಲಿ ವ್ಯಾಸರು ಉಲ್ಲೇಖಿಸಿದ್ದಾರೆ. ವಾಯಸವೆಂದರೆ ಸಾಧನಾ ರಹಿತರಾಗಿ, ಕರ್ತವ್ಯಹೀನರಾಗಿ, ಭೂಮಿಗೆ ಭಾರವಾಗಿ ತಿಂದುಂಡು ತನ್ನಷ್ಟಕ್ಕೆ ಇರುವುದು. ಮಾನಸವೆಂದರೆ ಅದು ಶುಭ್ರ ನೀರಿನ ಸರೋವರ! ನಾವುಗಳು ಕಾಗೆ-ಹದ್ದುಗಳು ಕುಡಿಯುವ ಕೊಳಕು ನೀರಿನಂತಾಗದೆ ಹಂಸಗಳು ಕುಡಿಯುವ ಪರಿಶುದ್ಧ ಮಾನಸ ಸರೋವರವಾಗಬೇಕು ಎನ್ನುವುದು ಇದರ ಆಶಯ. ಒಂದು ವೃತ್ತವನ್ನು ತೆಗೆದುಕೊಂಡರೆ ಅದರಲ್ಲಿ ಕೇಂದ್ರ ಬಿಂದು, ತ್ರಿಜ್ಯ, ಪರಿಧಿ ಮತ್ತು ವ್ಯಾಸ ಎನ್ನುವ ನಾಲ್ಕು ಪ್ರಕಾರಗಳಿವೆ. ಈ ನಾಲ್ಕರಲ್ಲಿ ಕೇಂದ್ರದ ಮೂಲಕವೇ ಎರಡೂ ಪರಿಧಿಗಳನ್ನು ತಲುಪಬಲ್ಲದ್ದು 'ವ್ಯಾಸ' ಮಾತ್ರ! ಈ ವೃತ್ತವೇ ನಮ್ಮ ಪ್ರಪಂಚ ಮತ್ತು ಈ ಜಗತ್ತು! ಇಲ್ಲಿ ಧರ್ಮ ಮತ್ತು ನಂಬಿಕೆಗಳು ಕೇಂದ್ರ ಬಿಂದುವಾದರೆ ಶಿಕ್ಷಣ ಮತ್ತು ಆಧ್ಯಾತ್ಮ ಎರಡು ತುದಿಗಳು. ಇಹದ ಮತ್ತು ಪಾರಮಾರ್ಥಿಕ ಜೀವನಮಾರ್ಗದ ಎಳೆಗಳನ್ನು ಧರ್ಮ ಮತ್ತು ನಂಬಿಕೆಗಳೆಂಬ ವಿಶ್ವಸನೀಯ ಮೌಲ್ಯಗಳ ಮೂಲಕ ಗಟ್ಟಿಯಾಗಿ ಹಿಡಿದು ಇಟ್ಟುಕೊಳ್ಳುವುದು ಇದೇ‌ ವ್ಯಾಸ ಮತ್ತವರ ಪ್ರಬೋಧನೆಗಳು.

ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ತನ್ನ ಧರ್ಮೋಪದೇಶವನ್ನು ಇದೇ ದಿನ ನೀಡಿದ ಕಾರಣ ಬೌದ್ಧ ಧರ್ಮ ಅನುಯಾಯಿಗಳಿಗೆ ಗುರು ಪೂರ್ಣಿಮಾ ಅತ್ಯಂತ ಪವಿತ್ರವಾದ ದಿನ. ಜೈನ ಧರ್ಮದ 24ನೆಯ ತೀರ್ಥಂಕರ ಭಗವಾನ್ ಮಹಾವೀರರು ಕೈವಲ್ಯ ಪಡೆದ ನಂತರ ಇದೇ ದಿನ ಇಂದ್ರಭೂತಿ ಗೌತಮರನ್ನು ಶಿಷ್ಯನನ್ನಾಗಿ ಮಾಡಿಕೊಂಡು ಸುದಿನ ಈ ಗುರು ಪೂರ್ಣಿಮಾ. ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮಗೆ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕರೆಲ್ಲರನ್ನು ಸ್ಮರಿಸಿ ಅವರ ಶುಭಾಶೀರ್ವಾದ ಪಡೆಯುವ ಅತುಲ್ಯ ದಿನವೇ ಈ ಗುರು ಪೂರ್ಣಿಮಾ.

ನಮ್ಮ ಕೈಹಿಡಿದು ಸಲಹಿ ನಡೆಸಿರುವ, ಜಗದಲ್ಲಿರುವ ಹಲವು ಶ್ರೇಷ್ಠರ ರೂಪದಲ್ಲಿ ಅವತರಿಸಿ ಸನ್ಮಾರ್ಗದಿ ನಡೆಯಲು ಪ್ರೇರೇಪಿಸಿದ, ಜಗದ ಇತರ ಜೀವಚರಗಳಂತೆ  ಕ್ಷುದ್ರ ಜಂತು ಆಗಬಹುದಾಗಿದ್ದ ಮಾನವನಿಗೆ ಶ್ರೇಷ್ಠತೆಯನ್ನು ಅನುಭವಿಸುವ ಅವಕಾಶ ವಿದ್ಯಾರ್ಜನೆಯ ಮೂಲಕ ನೀಡಿದ ಇಡೀ ಗುರುಪರಂಪರೆಗೆ ವಂದನೆಗಳು. ನಾವೆಲ್ಲರೂ ನಮ್ಮ ಶ್ರೇಷ್ಠತೆಯನ್ನು ಅರಿತು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಸಂಕಲ್ಪ ತೊಡೋಣ. ಕೊನೆಯದಾಗಿ... ವಕೀಲರು/ನ್ಯಾಯಾಧೀಶರು ಇಲ್ಲದಿದ್ದರೆ ನ್ಯಾಯವಿಲ್ಲ, ಡಾಕ್ಟರ್-ನರ್ಸುಗಳು ಇಲ್ಲದಿದ್ದರೆ ಆರೋಗ್ಯವಿಲ್ಲ, ಪೋಲೀಸರು ಇಲ್ಲದಿದ್ದರೆ ಭದ್ರತೆ ಇಲ್ಲ, ಇಂಜಿನಿಯರುಗಳು ಇಲ್ಲದಿದ್ದರೆ ತಂತ್ರಜ್ಞಾನ ಇಲ್ಲ, ಆದರೆ ಶಿಕ್ಷಕರು/ಗುರುಗಳು ಇಲ್ಲದಿದ್ದರೆ ನಾವು ಮತ್ತು ಮೇಲಿನ ಯಾರೂ ಇರಲು ಸಾಧ್ಯವಿಲ್ಲ! ಪ್ರತಿಫಲಾಪೇಕ್ಷೆಯಿಲ್ಲದೆ ನಮಗೆಲ್ಲ ಚೆಂದದ ಬದುಕು ರೂಪಿಸಿದ ಸರ್ವ ಗುರುವೃಂದಕ್ಕೆ ಸಾಷ್ಟಾಂಗ ಪ್ರಣಾಮಗಳು. ಹುಲು ಮಾನವ, ಲಘು ಮನುಷ್ಯನನ್ನು ಎಲ್ಲಾ ರೀತಿಯಲ್ಲಿ ಗಟ್ಟಿಗೊಳಿಸುವವರು ಗುರುಗಳು ಎನ್ನುವುದು ಸದಾ ನೆನಪಿರಲಿ! ಓಂ ಶ್ರೀ ಗುರುಭ್ಯೋ ನಮಃ.

ರವೀ ಸಜಂಗದ್ದೆ

https://www.karadavishwa.com/pages/nhf3h3-jixl9z-9n1358