IMPORTANT NOTICE

New official website is designed for Karada Community. Please visit www.karadavishwa.com for more details.

Tuesday, 11 August 2015

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು.

ramana01

“ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. ರಮಣರ ಮುಖದಲ್ಲಿ ಒಂದು ಗುಲಗಂಜಿಯಷ್ಟೂ ನೋವು ಕಾಣಿಸಲಿಲ್ಲ. ಎಲ್ಲ ಮುಗಿಯಿತೆಂದು ವೈದ್ಯರು ಹೇಳಿದ ಮೇಲೆ ರಮಣರು ನಕ್ಕು ನಮಸ್ಕರಿಸಿದರು, ಅಷ್ಟೆ.

ಮೊದಲೆಲ್ಲ ಇದು ಭಕ್ತರ ಕಪೋಲಕಲ್ಪಿತ ಕತೆ ಎಂದು ನಾನು ಭಾವಿಸಿದ್ದೆ. ನನಗೆ ಗೊತ್ತು, ನಿಮ್ಮಲ್ಲನೇಕರು ಈ ಕಥೆ ಓದುತ್ತ ಮೂಗು ಮುರಿದಿರುತ್ತೀರಿ. ಆದರೆ ಹಿಮಾಲಯದ ಪರ್ವತಗಳಲ್ಲಿ ಕೊರೆವ ಚಳಿಯಲ್ಲಿ ಮಂಜಿನ ರಾಶಿಯ ನಡುವೆ ನಗುನಗುತ್ತ ಕೌಪೀನದಲ್ಲಿ ಕುಳಿತಿರುವ ಸಾಧುಗಳನ್ನು ಕಂಡ ಮೇಲೆ ಈ ಪ್ರಕ್ರಿಯೆ ಸಾಧ್ಯವೆನ್ನಿಸಿತ್ತು. ನಾನು – ನೀವು ನಂಬುವುದನ್ನು ಬಿಡಿ. ಪಶ್ಚಿಮದ ಅನೇಕ ವಿಜ್ಞಾನಿಗಳು ಇಂದು ನಂಬಲು ಶುರು ಮಾಡಿದ್ದಾರೆ. ಮೆದುಳಿನ ಅಧ್ಯಯನದ ವಿಜ್ಞಾನ ಬೆಳೆದಂತೆಲ್ಲ ಭಾರತೀಯ ಚಿಂತನೆಗಳು ಜಗತ್ತನ್ನು ಆಳಲಾರಂಬಿಸಿವೆ.
ಹಾಗೆ ನೋಡಿದರೆ ಅಮೆರಿಕಾ – ಯುರೋಪಿನ ಬುದ್ಧಿವಂತ ವರ್ಗದ ಬುಡವನ್ನು ಮೊದಲ ಬಾರಿಗೆ ತೀವ್ರವಾಗಿ ಅಲುಗಾಡಿಸಿದವರು ಸ್ವಾಮಿ ವಿವೇಕಾನಂದರೇ. ನಿಕೊಲಸ್ ಟೆಸ್ಲಾರಂತಹ ವಿಜ್ಞಾನಿಗಳ ಮೇಲೆ ಅವರ ಪ್ರಭಾವ ಹೇಳತೀರದಷ್ಟು. ಇನ್ನು, ನಮ್ಮ ಕಾಲದಲ್ಲಿ ವೈಜ್ಞಾನಿಕ ಲೋಕದ ದೃಷ್ಟಿಕೋನ ಬದಲಾಯಿಸಿದವರು ದಲೈ ಲಾಮಾ.
ಹೌದು. ಸುಮಾರು 2 ದಶಕಗಳ ಹಿಂದಿನ ಮಾತು. ನರ ವಿಜ್ಞಾನಿ ರಿಚರ್ಡ್ ಡೇವಿಡ್ಸನ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಲೈ ಲಾಮಾರನ್ನು ಭೇಟಿಯಾಗಿದ್ದ. ಅದುವರೆಗೂ ಆತನಿಗೆ ಸಮಸ್ಯೆಗಳಿಗೆ ಮೆದುಳು ಪ್ರತಿಕ್ರಿಯಿಸುವ ರೀತಿಯ ಬಗ್ಗೆ ಬಲವಾಗಿ ಗೊಂದಲಗಳಿದ್ದವು. ದಲೈಲಾಮಾ ಮೊದಲ ಭೇಟಿಯಲ್ಲೇ ಅವನನ್ನು ಪ್ರಶ್ನಿಸಿದರು. “ಆಧುನಿಕ ನರವಿಜ್ಞಾನ ಬಳಸಿ ಮಾನವನ ದುಗುಡ, ದುಃಖ, ಕೋಪ, ಖಿನ್ನತೆಯನ್ನೆಲ್ಲ ಅಧ್ಯಯನ ಮಾಡುತ್ತಿದ್ದೀರಿ. ನೀವೇಕೆ ಕರುಣೆ, ದಯೆಗಳನ್ನೂ ಪರೀಕ್ಷೆಗೆ ಒಳಪಡಿಸಬಾರದು?” ಡೇವಿಡ್ಸನ್ ಗೊಂದಲಕ್ಕೀಡಾದ. ಕರುಣೆ – ದಯೆಗಳು ಪಶ್ಚಿಮಕ್ಕೆ ಗಮನಿಸಬೇಕಾದ ಅಂಶವೆನ್ನಿಸಿರಲಿಲ್ಲ. ಆದರೆ ಭಾರತ ಮೂಲದ ಚಿಂತನೆಯ ಪ್ರಕಾರ ಇತರರನ್ನು ಪ್ರೀತಿಯಿಂದ ಕಂಡರೆ ದುಗುಡ, ದುಃಖ, ಕೋಪಗಳೆಲ್ಲ ಮರೆಯಾಗುತ್ತವೆ. ಇದನ್ನೇ ಹೇಳುವ ಪ್ರಯತ್ನ ಮಾಡಿದ್ದರು ದಲೈ ಲಾಮಾ!
ಭಾರತದ ಬುದ್ಧಿಜೀವಿಗಳೋ, ಮಾಧ್ಯಮದವರೋ ಆಗಿದ್ದರೆ ದಲೈ ಲಾಮಾರನ್ನು ಆಡಿಕೊಂಡು ನಕ್ಕುಬಿಡುತ್ತಿದ್ದರೇನೋ. ಡೇವಿಡ್ಸನ್ ಹಾಗೆ ಮಾಡಲಿಲ್ಲ. ತನ್ನ ಪ್ರಯೋಗ ಶಾಲೆಗೆ ಧ್ಯಾನದಲ್ಲಿ ಸಾಕಷ್ಟು ಮುಂದುವರೆದ ಬುದ್ಧ ಸನ್ಯಾಸಿಗಳನ್ನು ಕರೆದೊಯ್ದು ಅಧ್ಯಯನ ಶುರು ಮಾಡಿದ. 34 ಸಾವಿರ ಗಂಟೆಗಳಷ್ಟು ಕಾಲ ಮನಸ್ಸನ್ನು ಕೇಂದ್ರೀಕರಿಸುವ ತರಬೇತಿ ಪಡೆದುಕೊಂಡ ಸಿದ್ಧರಿವರು. ಬೇಕಾದಾಗ ಮನಸ್ಸನ್ನು ಬೇಕಾದೆಡೆ ಕೇಂದ್ರೀಕರಿಸಿಕೊಳ್ಳುವುದಷ್ಟೇ ಅಲ್ಲ, ಚಿಟಿಕೆ ಹೊಡೆಯುವಷ್ಟರಲ್ಲಿ ಮನಸ್ಸು 17 ಬೇರೆ ಬೇರೆ ವಸ್ತುಗಳ ಮೇಲೆ ಕೇಂದ್ರೀಕರಿಸಬಲ್ಲ ಶಕ್ತಿ ಇವರಿಗಿತ್ತು.
ಈ ಎಂಟು ಜನರ ಮೆದುಳನ್ನು ಅಧ್ಯಯನ ಮಾಡಿದಾಗ ದೇಹ ಮತ್ತು ಮಿದುಳಿನ ನಡುವಿನ ಹೊಂದಾಣಿಕೆಗಳು ನಡೆಯುವ ಸ್ಥಳ ಜಾಗೃತವಾಗಿರುವುದು ಕಂಡುಬಂತು. ಅಷ್ಟೇ ಅಲ್ಲ, ಧ್ಯಾನಸಿದ್ಧರ ಮೆದುಳಿನ ಕೆಲವು ವಿಕಿರಣಗಳು ಅವರಿಗೆ ಎಲ್ಲ ಸಮಸ್ಯೆಗಳನ್ನು ಎದುರಿಸಬಲ್ಲ ಸ್ಥಿತಿಸ್ಥಾಪಕತ್ವ ಗುಣ ತಂದುಕೊಟ್ಟಿತು. ಅವರ ಅಚ್ಚರಿಗೆ ಕಾರಣವಾದ ಮತ್ತೊಂದು ಸಂಗತಿ ಎಂದರೆ, ಒಂದು ವಾರ ಕಾಲ ಧ್ಯಾನ ಅಭ್ಯಾಸ ಮಾಡಿದವರ ದೇಹದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗಿತ್ತು.
ಧ್ಯಾನವೆನ್ನೋದು ಎಲ್ಲರನ್ನೂ ಕರುಣೆಯಿಂದ ನೋಡುವ ಪ್ರಕ್ರಿಯೆ ಎಂದರಿತ ಡೇವಿಡ್ಸನ್ ಒಂದು ಹಂತದಲ್ಲಂತೂ ಕರುಣೆಯ ತರಬೇತಿ ಶಿಬಿರ ಆಯೋಜಿಸುವ ಚಿಂತನೆ ಮಾಡಿಬಿಟ್ಟಿದ್ದ!
ನಮ್ಮ ಪ್ರಾಚೀನ ಋಷಿಗಳ ಚಿಂತನೆಗಳು ಈಗ ಮತ್ತೆ ಜೀವಂತಗೊಂಡಿದ್ದವು. “ಭಗವಂತ ಪ್ರತಿಯೊಬ್ಬ ಜೀವಿಯಲ್ಲೂ ವಾಸಿಸಿದ್ದಾನೆ. ಹೀಗಾಗಿ ‘ಜೀವದಯೆ’ ಇಡಬೇಕು” ಎಂಬುದು ವೈಷ್ಣವ ಸಿದ್ಧಾಂತದ ಮೂಲ ಚಿಂತನೆ. ಅದನ್ನೂ ಬಿಡಿ. “ಸರ್ವೇ ಭವನ್ತು ಸುಖಿನಃ” ಪ್ರಾರ್ಥನೆ ನಮ್ಮ ಮೂಲ ಮಂತ್ರ. ಸಕಲ ಜೀವಜಂತುಗಳೂ ಸುಖವಾಗಿ , ಆರೋಗ್ಯವಾಗಿರುವಂತೆ ಪ್ರಾರ್ಥಿಸುವ ಪರಂಪರೆ ನಮ್ಮದು. ಹೀಗಾಗಿ ದಯೆ, ಕರುಣೆ ಈ ನಾಡಿನ ಪ್ರತಿಯೊಬ್ಬರ ನರನಾಡಿಯಲ್ಲಿಯೂ ಸಹಜವಾಗೇ ಹರಿಯುತ್ತಿದೆ. ಅದು ನಮ್ಮ ಪಾಲಿಗೆ ನಿತ್ಯಧ್ಯಾನ.
ಆದರೆ ವಿಷಯ ಅದಲ್ಲ. ಡೇವಿಡ್ಸನ್ನನ ಪ್ರಯೋಗಗಳ ನಂತರ ವಿಜ್ಞಾನ ಲೋಕ ಅಚ್ಚರಿಗೆ ಬಿತ್ತು. ಮೆದುಳಿನ ಸಂದೇಶವಾಹಕವಾದ ಅತ್ಯಂತ ಸೂಕ್ಷ್ಮ ಘಟಕ ನ್ಯೂರಾನುಗಳ ಕುರಿತಂತೆ ವಿಸ್ತøತ ಅಧ್ಯಯನ ಶುರುವಾಯ್ತು. ಒಂದೇ ಆಲೋಚನೆಗೆ ಕಾರಣವಾಗುವ ನ್ಯೂರಾನುಗಳು ಒಂದಕ್ಕೊಂದು ಬೆಸೆದುಕೊಳ್ಳುವ, ಗಟ್ಟಿಯಾಗುವ, ಆಗಾಗ ಪ್ರಭಾವಿಯಾಗುವ ಪ್ರಕ್ರಿಯೆಯೂ ಬೆಳಕಿಗೆ ಬಂತು. ವೈದ್ಯಲೋಕ ಅದನ್ನು ನ್ಯೂರಾನ್ಸ್ ಫೈರ್ ಟುಗೆದರ್ ವೈರ್ ಟುಗೆದರ್ ಅನ್ನುತ್ತದೆ. ಅರ್ಥವಾಗುವಂತೆ ಹೇಳಬೇಕೆಂದರೆ, ನಿಮಗೆ ಆರೋಗ್ಯ ಸರಿಯಿಲ್ಲ ಎಂದುಕೊಳ್ಳಿ. ಮಿತ್ರರೊಬ್ಬರು ಬಂದು ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು ಅನ್ನುತ್ತಾರೆ. ನೀವು ಅದನ್ನು ತೀವ್ರವಾಗಿ ನಂಬದಿದ್ದರೂ ಧಿಕ್ಕರಿಸುವುದೂ ಇಲ್ಲ. ಒಂದಷ್ಟು ನ್ಯೂರಾನುಗಳು ಈಗ ಒಟ್ಟಾದವು. ಕೆಲವು ದಿನಗಳ ನಂತರ ಅಂಗಡಿಯಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ ಆಯಿತು ಅಂದುಕೊಳ್ಳಿ. ಮಂತ್ರ ಮಾಡಿಸಿರಬಹುದು ಅನ್ನುವ ಭಾವನೆಯ ನ್ಯೂರಾನುಗಳು ಮತ್ತಷ್ಟು ಬಲವಾದವು. ಈಗ ನೀವು ಸಆಗುತ್ತಿರುವ ವಾಹನ ಅವಘಡಕ್ಕೆ ತುತ್ತಾಗಿಬಿಟ್ಟರಂತೂ ಮುಗಿದೇಹೋಯ್ತು. ಮಂತ್ರ ಮಾಡಿಸಿದ್ದಾರೆಂಬ ಯೋಚನೆಯ ನ್ಯೂರಾನುಗಳು ಹಗ್ಗದಂತೆ ಹೊಸೆದುಕೊಂಡುಬಿಡುತ್ತವೆ. ಅಲ್ಲಿಂದಾಚೆಗೆ ಕಂಡವರನ್ನೆಲ್ಲ ಅನುಮಾನದಿಂದ ನೋಡುವ ಪ್ರವೃತ್ತಿ ಶುರುವಾಗುತ್ತದೆ. ಮನಸ್ಸು ಖಿನ್ನತೆಗೆ ಒಳಗಾಗಿಬಿಡುತ್ತದೆ. ಈ ಸ್ಥಿತಿಯಿಂದ ಮರಳಿ ತರುವ ಮಾರ್ಗ ಯಾವುದು? ಯಾವ ಮಾತ್ರೆಗಳೂ ಹಗ್ಗವಾಗಿರುವ ನ್ಯೂರಾನುಗಳನ್ನು ಸಡಿಲಿಸಲಾರವು. ಇರುವುದು ಒಂದೇ ಮಾರ್ಗ. ಯಾವ ಮಾರ್ಗದಲ್ಲಿ ನ್ಯೂರಾನುಗಳು ಬೆಸೆದಿವೆಯೋ ಅದಕ್ಕೆ ಪರ್ಯಾಯವಾದ ಮತ್ತೊಂದು ಧನಾತ್ಮಕ ಮಾರ್ಗ ಹುಡುಕುವ ಚಿಂತನೆ ಮಾತ್ರ! ನ್ಯೂರೋ ಪ್ಲಾಸ್ಟಿಸಿಟಿಯೇ ಮೊದಲಾದ ಹೊಸ ಪದಗಳು ವಿಜ್ಞಾನಿಗಳ ಬಾಯಲ್ಲಿ ಹರಿದಾಡಿದವು. ಅಧ್ಯಯನ ಮುಂದುವರೆದಂತೆಲ್ಲ ಭಾರತೀಯ ಚಿಂತನೆಗಳು ಬಲವಾಗಿ ಬೇರುಬಿಡುತ್ತ ನಡೆದವು. ಈ ಹಿಂದೆ ಬೌದ್ಧ ಭಿಕ್ಷುಗಳು ಚೀನಾದ ದಬ್ಬಾಳಿಕೆಯ ವಿರುದ್ಧದ ಕದನದ ಕಾವನ್ನು ಉಳಿಸಲು ತಾವೇ ಬೆಂಕಿ ಇಟ್ಟುಕೊಂಡು ಉರಿದು ಬೂದಿಯಾಗಿಬಿಡುವುದನ್ನು ಅವರು ಗಮನಿಸಿದ್ದರು. ದೇಹ ಉರಿದುಹೋಗುವಾಗಲೂ ಅವರ ಮುಖ ಮಾತ್ರ ಮಂದಸ್ಮಿತವಾಗಿಯೇ ಇರುತ್ತಿದ್ದುದು ಅವರ ಅಚ್ಚರಿಗೆ ಕಾರಣವಾಗಿತ್ತು. ಈಗ ಎಲ್ಲವೂ ನಿಚ್ಚಳವಾಯ್ತು. ಬೆಂಕಿಯ ಕಾವನ್ನು ಚರ್ಮ ಸುಡುತ್ತಿರುವ ಸಂವೇದನೆಯನ್ನೂ ಮೆದುಳಿಗೊಯ್ಯುವ ನರಗಳನ್ನು ಮಾನಸಿಕವಾಗಿ ನಿಸ್ತಂತುಗೊಳಿಸಿಕೊಂಡರಾಯ್ತು. ಕೇಳುವುದಕ್ಕೆ ಸುಲಭವೆನಿಸಬಹುದು, ಆಚರಣೆ ಕಷ್ಟಸಾಧ್ಯ. ನಿರಂತರ ಸಾಧನೆ ಬೇಕು. ಇದನ್ನೇ ಅಂದು ರಮಣರು ಮಾಡಿದ್ದು. ವಿಜ್ಞಾನ ಲೋಕ ಇದಕ್ಕೆ ಒಪ್ಪಿಗೆಯ ಮುದ್ರೆ ಹಾಕುವುದು ಅನಿವಾರ್ಯವಾಯ್ತು.

dalai-lama-climate-changeಧ್ಯಾನ ಮಾಡುವ ಸನ್ಯಾಸಿಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಲಾಯಿತು. ಮನಸ್ಸನ್ನು ಸತತವಾಗಿ ನಿಯಂತ್ರಣಕ್ಕೊಳಪಡಿಸಿ ಬೇಕಾದಂತೆ ದುಡಿಸಿಕೊಳ್ಳಬಹುದೆಂದು ವಿಜ್ಞಾನಿಗಳು ಈಗ ನಂಬಲಾರಂಭಿಸಿದರು. ಇದು ಪರಿಣಾಮಕಾರಿ ಔಷಧ ಎಂದು ಹೇಳಿ ಔಷಧದ ಅಂಶವೇ ಇಲ್ಲದ ಮಾತ್ರೆಗಳನ್ನು ರೋಗಿಗಳಿಗೆ ಕೊಟ್ಟು ಬೇಕಾದ ಫಲಿತಾಂಶವನ್ನೆ ಪಡೆಯಲಾಯಿತು. ಈ ಪ್ರಯೋಗ ಮೊಣಕಾಲಿನ ಚಿಪ್ಪಿನ ಶಸ್ತ್ರಚಿಕಿತ್ಸೆಯ ಮೇಲೂ ಯಶಸ್ವಿಯಾಗಿ ಆಯಿತೆಂದು ಅಮೆರಿಕಾದಿಂದ ಮರಳಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನರ ವಿಜ್ಞಾನಿ ಉಷಾ ವಸ್ತಾರೆ ಹೇಳಿದ್ದು ನನಗೆ ನೆನಪಿದೆ. ಅಂದಮೇಲೆ, ಮನಸ್ಸನ್ನು, ಆ ಮೂಲಕ ಮೆದುಳನ್ನು ನಿಯಂತ್ರಿಸಿ ಏನನ್ನು ಬೇಕಾದರೂ ಸಾಧಿಸಿಕೊಳ್ಳುವ ನಮ್ಮ ಚಿಂತನೆ ಸತ್ಯವಾಯಿತು. ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಯಮದ ಪಾಠ ಹೇಳಿಕೊಡುವುದು. “ಸ್ನಾನ ಮಾಡದೆ ತಿಂಡಿ ತಿನ್ನಲಾಗದು; ಹಬ್ಬದ ದಿನಗಳಲ್ಲಿ ಪೂಜೆ ಇಲ್ಲದೆ ಊಟವಿಲ್ಲ, ಭಗವಂತನಿಗೆ ನೈವೇದ್ಯವಿಲ್ಲದೆ ಸಿಹಿಯನ್ನು ಮುಟ್ಟುವಂತೆಯೂ ಇಲ್ಲ”. ಈ ಎಲ್ಲ ಚೌಕಟ್ಟು ಬೇಕಾದ ನ್ಯೂರಾನುಗಳನ್ನು ಹೊಸೆದು ಹಗ್ಗ ಮಾಡುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ಹೀಗೆ ಮಾಡುವಾಗ ಅದು ಒರಟಾದ ಪಾಠವಾಗಿ ಹಠಯೋಗವಾಗದೆ, ಪ್ರೇಮದ ನಿವೇದನೆಯಾಗಲೆಂದೇ ಭಗವಂತನನ್ನು ಎದುರಿಗಿಟ್ಟು ಭಕ್ತಿಯ ಆಚರಣೆ ಮಾಡಿಸೋದು.
ಕಳೆದ ಹತ್ತಾರು ಸಾವಿರ ವರ್ಷಗಳಲ್ಲಿ ಋಷಿ ಮುನಿಗಳು, ಸಂತರೆಲ್ಲ ಸೇರಿ ಸಾಮಾನ್ಯ ಮನುಷ್ಯರೂ ಆಚರಿಸಿ ಫಲಿತಾಂಶ ಪಡೆಯಬಹುದಾದ ವ್ಯವಸ್ಥೆ ರೂಪಿಸಿಕೊಟ್ಟರಲ್ಲ, ಅದಕ್ಕೇ ಇಲ್ಲಿ ಮಾನಸಿಕ ಖಿನ್ನತೆಗೊಳಗಾದವರು ಕಡಿಮೆ ಕಾಣುತ್ತಿದ್ದುದು. ನೈತಿಕ ಪ್ರಜ್ಞೆ ಅತ್ಯುಚ್ಚ ಮಟ್ಟದಲ್ಲಿ ಇದ್ದುದರಿಂದ ವ್ಯಕ್ತಿ ಸ್ವಲ್ಪ ಜಾರಿದರೂ ಅವನನ್ನು ಪರಿಹಾರ ಮಾರ್ಗಗಳ ಮೂಲಕ ಮೇಲೆತ್ತಿ ಮನಸ್ಸಿನ ಸ್ತಿಮಿತ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು. ವಿಜ್ಞಾನ ನ್ಯೂರಾನುಗಳ ಬಗ್ಗೆ ಮಣಗಟ್ಟಲೆ ಹೇಳಬಹುದು; ಆದರೆ ಸೂಕ್ತ ನ್ಯೂರಾನುಗಳನ್ನು ಒಂದಕ್ಕೊಂದು ಜೋಡಿಸಲು ಧರ್ಮ ಮಾರ್ಗವೇ ಬೇಕು!
ಅದು ಬಿಡಿ. ನರವಿಜ್ಞಾನಿಗಳ ಸಂಶೋಧನೆ ಮುಂದುವರೆಯುತ್ತ ಹೋದಂತೆ ಭಾವಸಮಾಧಿಯ ಕಲ್ಪನೆಗಳೂ ನಿಚ್ಚಳಗೊಂಡವು. ರಾಮಕೃಷ್ಣ ಪರಮಹಂಸರಂತಹ ಮಹಾಮಹಿಮರು ಯಾವ ಮಟ್ಟಕ್ಕೇರುತ್ತಿದ್ದರು ಅಂರೆ, ಎದುರಿಗಿನ ವ್ಯಕ್ತಿ ತಾನೇ ಆಗಿ, ಅವರ ರೋಗ ರುಜಿನಗಳನ್ನೂ ಸ್ವೀಕರಿಸಬಲ್ಲವರಾಗಿಬಿಡುತ್ತಿದ್ದರು. ಕೆಲವೊಮ್ಮೆ ಅವರು ತದೇಕಚಿತ್ತರಾಗಿ ಹುಲ್ಲನ್ನು ನೋಡುತ್ತ ನಿಂತರೆ ತಾನೇ ಹುಲ್ಲಿನ ಹಾಸಾಗಿಬಿಡುತ್ತಿದ್ದರು. ಯಾರಾದರೂ ಹುಲ್ಲಿನ ಮೇಲೆ ನಡೆದುಕೊಂಡು ಹೋದರೆ ತಮ್ಮ ಎದೆಯ ಮೇಲೆ ಕಾಲಿಟ್ಟಷ್ಟು ವೇದನೆ ಅವರಿಗಾಗುತ್ತಿತ್ತು. ಭಾರತೀಯರು ನಾವಿಂದು ಇದನ್ನು ಭಕ್ತಿ – ಶ್ರದ್ಧೆ ಎಂದು ತೇಲಿಸಿಬಿಡುತ್ತೇವೇನೋ? ಆದರೆ ಪಶ್ಚಿಮದ ವಿಜ್ಞಾನಿಗಳು ಇದನ್ನು ಮಿರರ್ ನ್ಯೂರಾನ್ ಅಂತಾರೆ.
ಯಾರಾದರೂ ಅಪಘಾತದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದರೆ, ಒಂದು ಕ್ಷಣ ನಮ್ಮ ಕಾಲು ಮುರಿದುಕೊಂಡು ನೋಯುತ್ತಿದೆಯೇನೋ ಅನ್ನಿಸುತ್ತದೆಯಲ್ಲ, ಅದು ಇದೇ ಮಿರರ್ ನ್ಯೂರಾನುಗಳ ಕಾರಣದಿಂದ. ಮನುಷ್ಯ ಹೆಚ್ಚುಹೆಚ್ಚು ಕರುಣಾಮಯಿಯಾದಷ್ಟೂ ಅವನ ಮೆದುಳಿನಲ್ಲಿ ಈ ನ್ಯೂರಾನುಗಳ ಕನ್ನಡಿ ಹೆಚ್ಚು ಹೆಚ್ಚು ಸ್ಫುಟವಾಗಿರುತ್ತದೆ. ತಾಯಿಗೆ ಮಗನ ಮೇಲಿನ ಮಮತೆ ಅದೆಷ್ಟೆಂದರೆ, ಆತನ ಎಲ್ಲ ನೋವುಗಳನ್ನೂ ತಾನೇ ಅನುಭವಿಸುತ್ತಾಳೆ. ಅದಕ್ಕೇ ನಮ್ಮ ಪರಂಪರೆ ಆಕೆಗೆ ಉನ್ನತ ಸ್ಥಾನ ಕೊಟ್ಟಿರೋದು. ಇನ್ನು ಮೇಲೆ ಅಮ್ಮನೊಂದಿಗೆ ಕರುಳ ಸಂಬಂಧ ಅನ್ನೋದರ ಜೊತೆಗೆ ಮಿರರ್ ನ್ಯೂರಾನುಗಳ ಸಂಬಂಧವನ್ನೂ ಹೇಳಬಹುದು!
ದಲೈ ಲಾಮಾರ ಒಂದು ಸವಾಲು ವಿಜ್ಞಾನಿಗಳ ಆಲೋಚನೆಯ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. 2005ರಲ್ಲಿ ನರ ವಿಜ್ಞಾನಿಗಳ ಸಮಾವೇಶ ನಡೆದಾಗ ಅವರನ್ನು ಉಪನ್ಯಾಸಕ್ಕಾಗಿ ಆಹ್ವಾನಿಸಲಾಗಿತ್ತು. ಕೆಲವು ವಿಜ್ಞಾನಿಗಳು ಧಾರ್ಮಿಕ ಮುಖಂಡರನ್ನು ವಿಜ್ಞಾನದ ಅಧಿವೇಶನಕ್ಕೆ ಕರೆಯುವುದನ್ನು ವಿರೋಧಿಸಿದ್ದರು, ರಾದ್ಧಾಂತವೆಬ್ಬಿಸಿದ್ದರು. ಉಳಿದವರು ತಲೆ ಕೆಡಿಸಿಕೊಳ್ಳಲಿಲ್ಲ. ದಲೈ ಲಾಮಾ ತಮ್ಮ ಭಾಷಣದಿಂದ ರಂಗು ತುಂಬಿದ್ದಲ್ಲದೆ, ಪೂರ್ವದ ಚಿಂತನೆಯ ಮತ್ತೊಮ್ಮೆ ಜಗತ್ತನ್ನೆ ಆಳುವುದಕ್ಕೆ ವೇದಿಕೆ ರೂಪಿಸಿಕೊಟ್ಟರು.
ಹಾಗೆ ನೋಡಿದರೆ, ದಲೈ ಲಾಮಾಗೆ ಹುಟ್ಟಿಕೊಂಡ ಪ್ರಶ್ನೆ ಹೊಚ್ಚ ಹೊಸತೇನಲ್ಲ. ಚಕ್ರವರ್ತಿಯಾಗುವ ಎಲ್ಲ ಭಾಗ್ಯವನ್ನು ಪಡಕೊಂಡು ಬಂದಿದ್ದ ಬುದ್ಧ ವೃದ್ಧ, ರೋಗಿ, ಶವಗಳನ್ನು ನೋಡಿದನಲ್ಲ; ಅಂದೇ ಇವೆಲ್ಲವುಗಳಿಂದಲೂ ಪಾರಾಗುವ ಮಾರ್ಗ ಹುಡುಕಿಕೊಂಡು ವೈಭೋಗದ ಅರಮನೆ ಬಿಟ್ಟು ನಡೆದಿದ್ದ. ಅತ್ಯಂತ ಕಠಿಣ ತಪಸ್ಸು ಮಾಡಿ ದೇಹ ದಂಡಿಸಿ ಮೂಳೆ ಚಕ್ಕಳವಾದ. ಕೊನೆಗೆ ಭೋಗದ ಮತ್ತು ಹಠಯೋಗದ ನಡುವಿನ ಯೋಗ ಮಾರ್ಗ ಅರಸಿದ. ಇದೂ ಹೊಸತಾದುದೇನೂ ಆಗಿರಲಿಲ್ಲ. ಸ್ವತಃ ಬುದ್ಧನೇ ಹೇಳಿದ, “ನನ್ನಂತಹ ಬುದ್ಧರು ಹಿಂದೆಯೂ ಇದ್ದರು, ಮುಂದೆಯೂ ಬರುವರು”.
ಪತಂಜಲಿಯ ಯೋಗಸೂತ್ರಗಳು ಚಿತ್ತನಿಗ್ರಹದ ಬಗ್ಗೆಯೇ ಹುಟ್ಟಿಕೊಂಡ ವಿಜ್ಞಾನ. ಹಾಗಂತ ಪತಂಜಲಿಯೇ ಯೋಗದ ಜನಕನೇನು? ಖಂಡಿತ ಅಲ್ಲ. ಮಹಾಭಾರತದಲ್ಲಿ ಕೆಲವೆಡೆ ಸನತ್ಕುಮಾರ ಋಷಿ, ಜೈಗೀಷವ್ಯ ಋಷಿಗಳ ಕುರಿತಂತೆಯೂ ಉಲ್ಲೇಖವಿದೆ. ಅಲ್ಲಿಗೂ ನಿಲ್ಲದೆ ಭಾರತೀಯ ಪರಂಪರೆ ಎಲ್ಲ ವಿದ್ಯೆಗಳೂ ಸಾಕ್ಷಾತ್ ಪರಬ್ರಹ್ಮ ಮುಖಿಯೆಂದೇ ಒಪ್ಪುತ್ತವೆ. ಹೀಗಾಗಿ ಪರಬ್ರಹ್ಮನಿಂದ ಶುರು ಮಾಡಿ ದಲೈ ಲಾಮಾವರೆಗೆ ನಿರಂತರವಾಗಿ ಹರಿದು ಬಂದ ಯೋಗಪ್ರವಾಹ ಇದು. ಈ ಕುರಿತ ಒಂದು ಜಿಜ್ಞಾಸೆಯೇ ಪಶ್ಚಿಮದ ವಿಜ್ಞಾನಿಗಳ ತಲೆ ಇಷ್ಟು ಕೆಡಿಸಿರಬಹುದಾದರೆ, ಇನ್ನು ಪೂರ್ಣ ಭಾರತದ ಯೋಗವಿಜ್ಞಾನ ಅದೆಂತಹ ಬದಲಾವಣೆ ತರಬಲ್ಲದು! ಅನೇಕ ಬಾರಿ ಯೋಚಿಸಿಯೇ ರೋಮಾಂಚಿತನಾಗಿಬಿಡುತ್ತೇನೆ!

No comments:

Post a Comment