IMPORTANT NOTICE

New official website is designed for Karada Community. Please visit www.karadavishwa.com for more details.

Saturday, 15 August 2015

ನಮ್ಮ ಸುಖಕ್ಕಾಗಿ ತನ್ನ ಜೀವ ಕೊಡುವ ಯೋಧನ ಕಷ್ಟ ಕೇಳಿದ್ದೇವಾ?

ಒಂದು ಗಂಭೀರ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಕೇಳಲೇಬೇಕಾಗಿದೆ. ನಿಜಕ್ಕೂ ನಾವು ನಮ್ಮ ಸೈನಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವಾ? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯಾ? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರ ಕ್ಷೇಮಕ್ಕಾಗಿ ನಾವು ಮಾಡುತ್ತಿರುವುದೇನು? ದೇಶ ರಕ್ಷಣೆಯ ಮುಂದೆ ಎಲ್ಲವೂ ಗೌಣ ಎಂದು ಭಾವಿಸಿರುವ ಸೈನಿಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ದೇಶ ರಕ್ಷಣೆಗಾಗಿ ಸರ್ವಸ್ವವನ್ನೂ ಧಾರೆಯೆರೆಯುವ, ಅದನ್ನೇ ತನ್ನ ಜೀವನದ ಪರಮ ಪವಿತ್ರ ಕಾರ್ಯ ಎಂದು ಭಾವಿಸಿರುವ ಸೈನಿಕನಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವನ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆ? ಅವನ ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ?
ಈ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ.
ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಎಂದು ಕರೆಯಿಸಿಕೊಳ್ಳುವ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಮತ್ತೇನೂ ಹೇಳೋದು ಬೇಡ, ನಮಗೆ ‘ಅರ್ಧ’ ದಿನ ಅಲ್ಲಿರಲು ಸಾಧ್ಯವಿಲ್ಲ. ಮೂಳೆಯ ಮೂಲೆ ಮೂಲೆ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಕೆಲ ಕಾಲ ಬರಿ ಮೈಯನ್ನು ಗಾಳಿಗೆ ಬಿಟ್ಟರೆ ಮರಗೆಟ್ಟು ಹೋಗುವಂಥ ವಿಷಮ ವಾತಾವರಣ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶದಲ್ಲಿ ಯುದ್ಧ ಮಾಡುವ ಮಾತಿರಲಿ, ಅಲ್ಲಿ ಇರುವುದೇ ಒಂದು ದೊಡ್ಡ ಪವಾಡ. ಸಿಯಾಚಿನ್ ಪ್ರದೇಶವನ್ನು ‘ಕಿಲ್ಲಿಂಗ್ ಫೀಲ್ಡ್್’ ಎಂದು ಕರೆಯುವುದುಂಟು.
ಅಲ್ಲಿಗೆ ಭೇಟಿ ನೀಡಿದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹೇಳಿದ್ದರು – ‘ಸಾಮಾನ್ಯ ಮನುಷ್ಯನಾದವನು ಸಿಯಾಚಿನ್್ನಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ಒಂದು ವಿಸ್ಮಯ. ಯಾಕೆಂದರೆ ಕೆಲವರು ಇಲ್ಲಿ ಎರಡು-ಮೂರು ವರ್ಷಗಳಿಂದ ಇದ್ದಾರೆ. ಅವರ ಮನೋಸ್ಥೈರ್ಯಕ್ಕೆ ನಾನು ಮೂಕ ವಿಸ್ಮಿತನಾಗಿದ್ದೇನೆ. ನನಗೆ ಮನೆಯಲ್ಲಿ ಇರುವಾಗ ಸೈನಿಕರ ನೆನಪಾದರೆ ಏನೋ ಅಪರಾಧ ಭಾವ ಕಾಡುತ್ತಿತ್ತು. ನಾನು ಇಲ್ಲಿ ಇಷ್ಟೊಂದು ಆರಾಮಾಗಿದ್ದೇನೆ. ಆದರೆ ನಮ್ಮ ಸೈನಿಕರ ಪಾಡೇನು ಎಂಬುದನ್ನು ನೆನೆದಾಗ ಕುಬ್ಜನಾಗಿಬಿಡುತ್ತಿದ್ದೆ. ಹೀಗಾಗಿ ಆಗಾಗ ಕಾರ್ಗಿಲ್ ಮತ್ತು ಸಿಯಾಚಿನ್್ಗೆ ಹೋಗಿ ಬರುತ್ತಿದ್ದೆ’
ಸಿಯಾಚಿನ್ ಮೃತ್ಯು ಕಂದರವೇ. ಅಲ್ಲಿ ಸೈನಿಕರು ವೈರಿಗಳ ಜತೆ ಕಾದಾಡಿ ಮೃತಪಟ್ಟಿದ್ದಕ್ಕಿಂತ, ಭೀಕರ ಚಳಿ ಜತೆ ಹೋರಾಡಲಾಗದೇ ಸತ್ತಿದ್ದೇ ಹೆಚ್ಚು. ವೈರಿಗಳ ಜತೆ ಕಾದಾಡುವುದು ದೊಡ್ಡದಲ್ಲ. ಆದರೆ ‘ಅಗೋಚರ ಚಳಿ’ಯ ಜತೆ ಸೆಣಸುವುದೆಂತು?
ಸಿಯಾಚಿನ್್ನಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧರು ಜಗತ್ತಿನ ಎಂಥ ವಾತಾವರಣದಲ್ಲಾದರೂ ಬದುಕುತ್ತಾರೆ. ತಾಸಿಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆಗೆ ಎದೆಯೊಡ್ಡುವುದಿದೆಯಲ್ಲ, ಅದಕ್ಕೆ ಅಗಾಧ ಛಾತಿಯೇ ಬೇಕು. ಕಳೆದ ಹತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಸೈನಿಕರು ಫ್ರಾಸ್ಟ್್ಬೈಟ್, ಚಳಿ ಹೊಡೆತಕ್ಕೆ ಅಸು ನೀಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸಿಯಾಚಿನ್ ಡ್ಯೂಟಿಗೆ ಸೈನಿಕನೊಬ್ಬನಿಗೆ ಬುಲಾವ್ ಬಂತೆಂದರೆ ಮೃತ್ಯುಲೋಕಕ್ಕೆ ಸೆಣೆಸಲು ಕರೆ ಬಂದಂತೆ. ಆದರೆ ನಮ್ಮ ಸೈನಿಕರು ಅದೆಂಥ ಕಠಿಣತಮ ಮಾನಸಿಕ ಸ್ಥಿತಿ, ಛಲ, ಪ್ರೇರಣೆ, ಹೋರಾಟ, ತ್ಯಾಗ, ಬಲಿದಾನ, ದೇಶಪ್ರೇಮಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆಂದರೆ, ಯಾರೂ ಸಹ ಒಲ್ಲೆ ಎನ್ನುವುದಿಲ್ಲ. ಬೆಂಗಳೂರಿನ ವಿಧಾನಸೌಧದಲ್ಲೋ, ಎಂಎಸ್ ಬಿಲ್ಡಿಂಗ್್ನಲ್ಲೋ ಕೆಲಸ ಮಾಡುವ ಸರ್ಕಾರಿ ನೌಕರ ಅಥವಾ ಪತ್ರಿಕಾಲಯದಲ್ಲಿ ಕೆಲಸ ಮಾಡುವ ವರದಿಗಾರರನ್ನು ಬೀದರಕ್ಕೋ, ಗುಲ್ಬರ್ಗಕ್ಕೋ ವರ್ಗ ಮಾಡಿ, ವಿಲಿವಿಲಿ ಅಂತ ಒದ್ದಾಡಿ ಬಿಡುತ್ತಾರೆ. ನೌಕರಿಯನ್ನಾದರೂ ಬಿಟ್ಟೇವು ಆದರೆ ಬೆಂಗಳೂರು ಬಿಡಲೊಲ್ಲೆವು ಅಂತಾರೆ. ಸರ್ಕಾರಿ ವೈದ್ಯರನ್ನು ಪಕ್ಕದ ಹಳ್ಳಿಗೆ ಕಳಿಸಿಬಿಡಿ ನೋಡೋಣ.
ಆದರೆ ವೀರಯೋಧನನ್ನು ಲಡಾಕ್್ಗೋ, ಕಾರ್ಗಿಲ್್ಗೋ, ಸಿಯಾಚಿನ್್ಗೋ ಕಳಿಸಿ, ಮದುವೆಯಾದ ಮಾರನೇ ದಿನವೇ ಅಲ್ಲಿಗೆ ಹೊರಡಿ ಎನ್ನಿ, ‘ಇಲ್ಲ’ ಅಂದ್ರೇ ಕೇಳಿ. ಮರು ಮಾತಿಲ್ಲದೇ, ತುಟಿಪಿಟಿಕ್ಕೆನ್ನದೇ ಮಣಭಾರದ ಟ್ರಂಕ್ ಕಟ್ಟುತ್ತಾರೆ. ಜೀವದ ಹಂಗು ತೊರೆದು ಸೆಣೆಸಲು ಸಿದ್ಧರಾಗಿ ನಿಂತಿರುತ್ತಾರೆ. ನೌಕರಿ ಮಾಡಬೇಕಲ್ಲಪ್ಪಾ ಎಂಬ ಭಾವನೆಯಿಂದಲ್ಲ.
ದೇಶಪ್ರೇಮ, ದೇಶ ರಕ್ಷಣೆಗಾಗಿ! ಅದಕ್ಕಾಗಿ ಎಂಥ ಅಪಾಯ ಎದುರಿಸಲು ರೆಡಿ. ಇಂಥ ಸೈನಿಕರನ್ನ್ನುನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಕಾರ್ಗಿಲ್ ಯುದ್ಧದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಆ ಸಮಯಕ್ಕೆ ನಮ್ಮ ಮೈಯಲ್ಲಿ ಅದೆಂಥಾ ಉತ್ಕರ್ಷ ಭೋರ್ಗರೆದಿತ್ತು ಎಂಬುದೂ ನೆನಪಿಗೆ ಬರುತ್ತದೆ. ಆಗಷ್ಟೇ ಟಿವಿ ಪತ್ರಿಕೋದ್ಯಮವೂ ತಲೆ ಎತ್ತಿತ್ತು. ಹಿಂದೆಂದೂ ಇರದ ರೀತಿಯಲ್ಲಿ ಅದು ಯುದ್ಧವನ್ನು ಸೀದಾ ನಮ್ಮ ಮನೆಯ ಜಗುಲಿಗೇ ತಂದಿರಿಸಿತ್ತು. ಪ್ರತಿ ಭಾರತೀಯನ ಎದೆಯಲ್ಲೂ ದೇಶಪ್ರೇಮದ ಡಮರು ನಾದ. ಆದರೆ, ಸಮರ ಮುಗಿದು ವರ್ಷಗಳು ಕಳೆಯುತ್ತಲೇ ನಮ್ಮ ಸ್ಮೃತಿ ಖಜಾನೆ ನಿಧಾನಕ್ಕೆ ಮುಸುಕು ಎಳೆದುಕೊಳ್ಳತೊಡಗಿತು. ನಮಗೆ ಚರ್ಚಿಸುವುದಕ್ಕೆ ಕೂಗಾಡುವುದಕ್ಕೆ ಬೇರೆ ವಿಷಯಗಳು ಸಿಕ್ಕವು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಕೆಲದಿನಗಳವರೆಗೆ ನೆನಪಿಸಿಕೊಂಡೆವು. ಕೊನೆಗೆ ಆಗೀಗ ಅವರ ಹೆಸರು ಪ್ರಸ್ತಾಪವಾಗುವ ಹಂತಕ್ಕೆ ಹೋಗಿ ನಿಧಾನಕ್ಕೆ ಎಲ್ಲವೂ ಮಸುಕಾಯಿತು. ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ ಹೀಗೆ ಮಹಾಶೌರ್ಯ ಮೆರೆದವರನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇವೆ. ಅವರನ್ನು ಮರೆಯಬಾರದು ಕೂಡ. ಆದರೆ ಹೋರಾಡಿ ಗಾಯಗೊಂಡು, ಕೈ-ಕಾಲು ಕಳೆದುಕೊಂಡ ಯೋಧರ ಸಂಖ್ಯೆಯೂ ದೊಡ್ಡದು. ಅವರೆಲ್ಲ ನಮ್ಮ ಅಂದಾಜಿಗೆ ನಿಲುಕಲೇ ಇಲ್ಲ. ಇವತ್ತಿಗೆ ಅವರೆಲ್ಲರ ಸ್ಥಿತಿ ಏನೆಂಬ ಬಗ್ಗೆ ಯಾರಿಗೂ ದರಕಾರವಿಲ್ಲ.
ಕಾರ್ಗಿಲ್ ವಿಜಯೋತ್ಸವ ಎಂಬುದು ನಮಗೆ ನವರಾತ್ರಿ- ದೀಪಾವಳಿಗಳಂತೆ ಒಂದು ಹಬ್ಬವಾಗಬೇಕಿತ್ತು. ಯುದ್ಧದ ಕಾವು ಎದ್ದಿದ್ದ ದಿನಗಳಲ್ಲಿ ಯೋಧರನ್ನು ಕೊಂಡಾಡಿದ್ದಷ್ಟೇ ದೇಶಪ್ರೇಮವಾಗುವುದಿಲ್ಲ. ನಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ದಿನದಂದೂ ಆತನ ಕಟೌಟ್ ಏರಿಸಿ ತೋರಿಸುತ್ತೇವೆ. ಕಾರ್ಗಿಲ್್ನ ಕದನಕ್ಕೆ, ಅದರಲ್ಲಿ ನಮ್ಮ ಯೋಧರ ವಿಜಯಕ್ಕೆ ದಶಕಗಳ ಪ್ರಾಯವೇ ಸಂದಿದ್ದರೂ ಪ್ರಾರಂಭಿಕ ಪ್ರಶಂಸೆಗಳನ್ನು ಮೀರಿದ ಕೃತಜ್ಞತಾಪೂರ್ವಕ ಆರಾಧನೆಯೊಂದು ನಮ್ಮಲ್ಲಿ ನೆಲೆಗೊಳ್ಳಲೇ ಇಲ್ಲ. ಸರ್ಕಾರದ ಮಟ್ಟದಲ್ಲಂತೂ ಈ ವಿಜಯದ ನೆನಪು ಅಪ್ರಸ್ತುತವಾಗುವುದು ಅವಶ್ಯವಿತ್ತು! ಏಕೆಂದರೆ ಎನ್್ಡಿಎ ಸರ್ಕಾರದ ಅವಧಿಯಲ್ಲಿ ಈ ಸಮರ ನಡೆದಿದ್ದರಿಂದ ಅದರ ಗೆಲುವನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆನಪಿಸಿಕೊಂಡಿದ್ದೇ ಆದರೆ ಅದರ ಶ್ರೇಯಸ್ಸನ್ನು ತಮ್ಮ ಪ್ರತಿಪಕ್ಷಗಳಿಗೆ ಸಲ್ಲಿಸಿದಂತಾಗುತ್ತಲ್ಲ ಎಂಬುದು ಕಳೆದೆರಡು ಅವಧಿಗಳಿಗೆ ದೇಶವನ್ನು ಆಳುತ್ತಿರುವ ಯುಪಿಎ ಕೂಟದ ಚಿಂತನೆ! ಇವರ ರಾಜಕೀಯ ವರಸೆಗಳು ಏನೇ ಇದ್ದಿರಲಿ, ನಾವು ಈ ವಿಜಯದ ಸಂಭ್ರಮವನ್ನು ಕಾಪಿಟ್ಟುಕೊಳ್ಳೋಣ ಎಂಬ ತೀವ್ರತೆ ಪ್ರಜೆಗಳಾದ ನಮ್ಮಲ್ಲೂ ಉಳಿಯಲಿಲ್ಲ ಎಂಬುದೇ ದುರಂತ.
ಈ ಹಿಂದಿನ ಸಮರಗಳ ಬಗ್ಗೆ ಹಿರಿಯರ ಬಾಯಲ್ಲಿ ಕೇಳಿ ತಿಳಿದ, ಪುಸ್ತಕಗಳಲ್ಲಿ, ವರದಿಗಳಲ್ಲಿ ಓದಿಕೊಂಡ ಅನುಭವಗಳಷ್ಟೇ ಇದ್ದವು. ಆದರೆ, ಕಾರ್ಗಿಲ್್ನ ಸಮರ ಮೊದಲೇ ಹೇಳಿದಂತೆ ನೇರವಾಗಿ ನಮ್ಮ ಮನೆಯ ಜಗುಲಿಯಲ್ಲೇ ಅನಾವರಣಗೊಂಡಿತ್ತು. ಈ ದೇಶದ ಯುವಕರನ್ನು ಅದು ನೇರವಾಗಿ ತಾಗಿತ್ತು. ಅಷ್ಟಾಗಿಯೂ ಇಂದು ಯಾವ ಹುಡುಗ-ಹುಡುಗಿಯ ಕೊಠಡಿಯಿಂದಲೂ ಶಾರುಖ್, ಸಲ್ಮಾನ್, ಐಶ್ವರ್ಯಾ, ಧೋನಿ, ಸಚಿನ್, ಯುವರಾಜ್, ಗಂಭೀರ್ ಇವರುಗಳು ನಿವೃತ್ತಿ ಪಡೆದಿಲ್ಲ. ಕಣ್ಣೆದುರು ಕಾರ್ಗಿಲ್ ಕದನ ತೆರೆದುಕೊಂಡಿತು ಎಂಬ ಅಚ್ಚರಿ ಆ ಕ್ಷಣಕ್ಕೆ ಸದ್ದು ಮಾಡಿತಾದರೂ ಯಾರ ಮನೆ ಗೋಡೆಯನ್ನೂ ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ, ಅಂಜು ನಯ್ಯರ್್ರಂಥ ವೀರರು ಆಕ್ರಮಿಸಿಕೊಳ್ಳಲಿಲ್ಲ. ಪರ್ವತ ಶ್ರೇಣಿಯೊಂದನ್ನು ಗೆದ್ದುಕೊಂಡ ಬೆನ್ನಲ್ಲೇ, ಇದು ಆರಂಭವಷ್ಟೇ ಇನ್ನೂ ಗೆಲ್ಲಬೇಕಿದೆ ಎಂಬ ಅರ್ಥದಲ್ಲಿ ‘ಯೇ ದಿಲ್ ಮಾಂಗೇ ಮೋರ್್’ ಎಂದು ಅವಾಜು ಹಾಕಿದ್ದ ವಿಕ್ರಂ ಬಾತ್ರಾ. ಮಾತಿನಂತೆ ನಡೆದು ಪ್ರಾಣವನ್ನೂ ಕೊಟ್ಟ. ನಾವು ಆ ಕ್ಷಣಕ್ಕೆ ಭಾವುಕರಾಗಿ ನಂತರ ತಮಾಷೆ ಮುಗಿಯಿತೆಂಬಂತೆ ಪೆಪ್ಸಿ ಹೀರಿಕೊಂಡು ‘ದಿಲ್ ಮಾಂಗೆ ಮೋರ್್’ ಎಂಬ ನಮ್ಮ ಬಣ್ಣದ ಲೋಕದಲ್ಲಿ ಕಳೆದು ಹೋದೆವು.
ಹಾಗಾದರೆ ನಮ್ಮ ದೇಶಪ್ರೇಮದ ಗ್ರಹಿಕೆಯಲ್ಲೇ ದೋಷವಿದೆಯಾ? ಕಾರ್ಗಿಲ್್ನ ವೀರೋತ್ಕರ್ಷ ಯುವಕರನ್ನು ಸೇನೆ ಸೇರುವುದಕ್ಕೆ ಇಡಿ ಇಡಿಯಾಗಿ ಪ್ರೇರೇಪಿಸಲೇ ಇಲ್ಲ. ಇದು ಸರ್ಕಾರ- ಸಮಾಜಗಳ ಒಟ್ಟಾರೆ ವೈಫಲ್ಯವೆಂದೇ ಹೇಳಬೇಕು. ಏಕೆಂದರೆ ದೇಶಸೇವೆ ಎಂಬುದು ನಮ್ಮಲ್ಲಿ ಆಕರ್ಷಣೆಯೇ ಅಲ್ಲ. ಸಾಫ್ಟ್್ವೇರ್ ಉದ್ಯೋಗಿಯಾಗಿದ್ದೇನೆ, ಬಿಸಿನೆಸ್ ಮಾಡುತ್ತಿದ್ದೇನೆ, ಟಿವಿಲೀ ಬರ್ತೇನೆ ಅಂತೆಲ್ಲ ಹೇಳಿಕೊಂಡಂತೆ ಯೋಧನಾಗಿದ್ದೇನೆ ಅನ್ನುವುದು, ಸೇನೆಯಲ್ಲಿ ಸೇವೆಯನ್ನು ಹೇಳಿಕೊಳ್ಳುವ ಕಾಯಕವನ್ನಾಗಿ ರೂಪಿಸುವುದಕ್ಕೆ ಸೋತಿದ್ದೇವೆ. ಇಲ್ಲಿ ಯೋಧರ ಕೈಗೆ ನೀಡುವ ಬಂದೂಕುಗಳು, ಅವರ ಸಾರಿಗೆಗೆ ಬಳಸುವ ವಾಹನಗಳು ಇಂಥ ಅಗತ್ಯಗಳ ಪೂರೈಕೆಯಲ್ಲೂ ಭ್ರಷ್ಟಾಚಾರ ನಡೆಯುತ್ತದೆ. ಸಾಲದ್ದಕ್ಕೆ ಯೋಧ ತನ್ನ ಪ್ರಾಣ ಒತ್ತೆ ಇಟ್ಟು ಗೆದ್ದುಕೊಂಡ ನೆಲವನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಂತಿ ಒಪ್ಪಂದ ಎಂಬ ನೆಪದಲ್ಲಿ ಬಿಟ್ಟುಕೊಡುತ್ತಾರೆ. ದೇಶಕ್ಕಾಗಿ ತ್ಯಾಗ ಮಾಡಿದವನನ್ನು ಆತನಿಗೆ ತಾನು ಮಾಡಿದ ತ್ಯಾಗ ಸಾರ್ಥಕ ಎಂಬಂತೆ ನಡೆಸಿಕೊಳ್ಳುವ ಜಾಯಮಾನವೇ ನಮ್ಮದಲ್ಲ. ಅವರ ಕುಟುಂಬದ ಬೇಕು- ಬೇಡಗಳನ್ನು ವಿಚಾರಿಸಿಕೊಳ್ಳುವ ಕೆಲಸ ಸರಿಯಾಗಿ ಆಗುವುದಿಲ್ಲ. ಗಾಯಗೊಂಡ ಯೋಧರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂಬ ಘೋಷಣೆಯೇನೋ ಆಗುತ್ತದೆ, ಅದಕ್ಕೆ ಚಪ್ಪಾಳೆಯೂ ಸಂದಾಯವಾಗುತ್ತದೆ. ಆದರೆ, ಆ ಯೋಧ ಘೋಷಣೆಯಾಗಿದ್ದನ್ನು ತನಗೆ ದಕ್ಕಿಸಿಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಬಸವಳಿದು ಹೋಗುತ್ತಾನೆ. ಐದು- ಹತ್ತು ವರ್ಷಗಳೇ ಸಂದರೂ ಅವನ ಉದ್ಯೋಗ ಭರವಸೆ ಈಡೇರುವುದಿಲ್ಲ. ಇನ್ನು, ಮೃತ ಯೋಧರ ಕುಟುಂಬಗಳಿಗೆ ನೀಡುವ ಭರವಸೆಗಳ ಕತೆಯೂ ಇದೇ.
ಇವೆಲ್ಲದರ ಪರಿಣಾಮ ಸಮಾಜದ ಸಂವೇದನೆಗೂ ತಾಗದೇ ಇರುವುದಿಲ್ಲ. ಅಷ್ಟೆಲ್ಲ ಹೋರಾಡಿ, ತಮ್ಮ ಸರ್ವಸ್ವವನ್ನೂ ದೇಶಕ್ಕೆ ಅಂತ ಎತ್ತಿಟ್ಟು ಕಾದಾಡುವ ಯೋಧನ ಗತಿ ಹೀಗೆ ಅನ್ನುವುದಾದರೆ ಯಾವ ಪುರುಷಾರ್ಥಕ್ಕಾಗಿ ಮಿಲಿಟರಿ ಸೇರಬೇಕು ಎಂದು ಯುವಕರು ಅಂದುಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ದೇಶ ಕಾಳಜಿಗೆ ಕೆಲಸ ಮಾಡುತ್ತೇನೆ ಅಂತ ಹೊರಡುವ ಎಲ್ಲರಿಗೂ ಸಾಮಾನ್ಯವಾಗಿ ಇದೇ ಗತಿ ಎಂಬ ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ಸುಳಿದಾಡುತ್ತವೆ. ಮೊನ್ನೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಹೊಂದಿದ ಸುರ್ಜೀತ್ ಸಿಂಗ್ ಕತೆಯನ್ನೇ ಗಮನಿಸಿ. ‘ತಾನು ಗೂಢಚಾರಿಕೆಗೆ ಎಂದೇ ಪಾಕಿಸ್ತಾನದ ಒಳಗೆ ನುಸುಳಿದ್ದು. ಆದರೆ ನನ್ನನ್ನು ಹಾಗೆ ಕಳುಹಿಸಿದ ಸರ್ಕಾರ ಮಾತ್ರ ನನ್ನ ಬಿಡುಗಡೆಗಾಗಲೀ, ನನ್ನ ಕುಟುಂಬದ ಹಿತ ಕಾಯುವುದಕ್ಕಾಗಲೀ ಏನೂ ಮಾಡಲಿಲ್ಲ’ ಎಂದುಬಿಟ್ಟ ಸುರ್ಜೀತ್. ನಿಜ, ಆತನ ಆ ಹೇಳಿಕೆ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಒಂದಿಷ್ಟು ಮುಜುಗರ ಉಂಟುಮಾಡಿದೆ. ಈಗಲೂ ಅಧಿಕೃತವಾಗಿ ನಾವು ಆತನನ್ನು ಗೂಢಚಾರ ಎಂದು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಆದರೆ ಆತನ ದನಿಯಲ್ಲಿ ವ್ಯಕ್ತವಾದ ಹತಾಶೆಯನ್ನು ಗಮನಿಸಿ. ಯುವಕನಾಗಿ ಪಾಕ್ ನೆಲದಲ್ಲಿ ಕಾಲಿಟ್ಟಿರುವ ಆತ ಮರಳಿ ಬರುತ್ತಿರುವುದು ಮುದುಕನಾಗಿ. ನಮ್ಮ ಮೇಲೆ ಧಾಳಿ ಮಾಡಿದ ಉಗ್ರರಿಗೇ ರಾಜಾತಿಥ್ಯ ನೀಡುವ ನಾವು, ಅಂಥ ಕಾಳಜಿಯ ಸ್ವಲ್ಪ ಭಾಗವನ್ನಾದರೂ ದೇಶದ ಹಿತಾಸಕ್ತಿ ಕಾಯುವುದಕ್ಕೆ ಹೋದ ಇಂಥವರ ಕುಟುಂಬಗಳನ್ನು ನೋಡಿಕೊಳ್ಳುವುದಕ್ಕೆ ನೀಡಿದ್ದೇ ಆದಲ್ಲಿ ಖಂಡಿತ ಸುರ್ಜೀತ್ ಬಾಯಿಂದ ಆ ಮಾತುಗಳು ಹೊರಡುತ್ತಿರಲಿಲ್ಲ.
ಪಾಕಿಸ್ತಾನಕ್ಕೆ ಯುದ್ಧ ಕೈದಿಯಾಗಿ ಸೆರೆಯಾದ ವಿಜಯ್ ತಂಬೆ ಬಿಡುಗಡೆ ಇನ್ನೂ ಸಾಧ್ಯವಾಗಿಲ್ಲ. ಅವರು ಪಾಕಿಸ್ತಾನದ ಯಾವ ಜೈಲಿನಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಕಳೆದ ನಲವತ್ತು ವರ್ಷಗಳಿಂದ ಪತ್ನಿ ದಮಯಂತಿ ತಂಬೆ ಗಂಡನ ಆಗಮನ ನೋಡುತ್ತಿದ್ದಾಳೆ. ಅವರಂತೆ ಎಷ್ಟೋ ಭಾರತೀಯರು ಕೈದಿಗಳಾಗಿ ಕೊಳೆಯುತ್ತಿದ್ದಾರೆ. ಬಾಂಗ್ಲಾದೇಶದ ಯುದ್ಧದಲ್ಲಿ ಭಾರತ ಸೇನೆಗೆ ಸೆರೆ ಸಿಕ್ಕಿದ್ದ 93 ಸಾವಿರ ಪಾಕ್ ಯೋಧರನ್ನು ಕದನ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಲಾಗಿತ್ತು. ಆ ಔದಾರ್ಯದ ಚೂರುಭಾಗವನ್ನೂ ಪಾಕಿಸ್ತಾನ ತೋರಿಸುತ್ತಿಲ್ಲ. ನಮಗೂ ಸಹ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮ್ಯಾಚ್ ಆಡುವುದರಲ್ಲಿ ಇರುವ ಆಸಕ್ತಿ ಇವರೆಲ್ಲರ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡುವುದರಲ್ಲಿಲ್ಲ.
ನಮ್ಮ ವ್ಯವಸ್ಥೆಯಿಂದ ದೇಶಪ್ರೇಮ ಹೊರಹೊಮ್ಮುವುದಕ್ಕೆ ಅಡ್ಡಿಯಾಗುತ್ತಿರುವುದಾದರೂ ಏನು ಎಂಬುದನ್ನು ಕಾರ್ಗಿಲ್್ನ ಹುತಾತ್ಮ ಯೋಧ, ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪಡೆದ ಕ್ಯಾಪ್ಟನ್ ಅಂಜು ನಯ್ಯರ್ ಅವರ ತಂದೆಯ ಮಾತುಗಳನ್ನು ಕೇಳಿಸಿಕೊಂಡಾಗ ಸ್ಪಷ್ಟವಾಗುತ್ತದೆ. ಕಾರ್ಗಿಲ್ ಸಮರ ಅಂತ್ಯಗೊಂಡು ಪುತ್ರಶೋಕ ಹಾಗೂ ಮಗನ ತ್ಯಾಗದ ಹೆಮ್ಮೆಯನ್ನು ಅನುಭವಿಸುತ್ತಿರುವಾಗಲೇ ಅವರು ಹೇಳಿದ್ದರು- ‘ಆತ ‘ಯುದ್ಧರೀತಿ’ಯ ವಾತಾವರಣದಲ್ಲಿ ಸಾಯಬೇಕಿರಲಿಲ್ಲ. ಸಾವಿನಂಥ ಸ್ಥಿತಿ ಎಂಬುದಿಲ್ಲ. ಒಂದೋ ಸಾವು ಇಲ್ಲವೇ ಬದುಕು. ಹಾಗೆಯೇ ನಿರ್ಣಾಯಕ ಗಳಿಗೆಯಲ್ಲಿ ಯುದ್ಧ ಇಲ್ಲವೇ ಶಾಂತಿ ಎಂಬ ಸ್ಪಷ್ಟ ಧೋರಣೆ ಇರಬೇಕು. ನಮ್ಮ ದೇಶಕ್ಕೆ ಇಷ್ಟು ಸುಲಭವಾಗಿ ಒಳನುಗ್ಗುತ್ತಿರುವ ಉಗ್ರರನ್ನು ಹಿಡಿದು ಶಿಕ್ಷಿಸುವುದಕ್ಕೆ ಸರ್ಕಾರಕ್ಕೆ ಆಗುವುದಿಲ್ಲವೇ?’ ಇವರ ಮಾತನ್ನೇ ಮುಂದುವರಿಸುತ್ತ ಅವರ ಸಂಬಂಧಿಯೊಬ್ಬರು ಹೇಳಿದ್ದರು- ‘ಅಂಜು ನಯ್ಯರ್ ಬಲಿದಾನಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಯಕಶ್ಚಿತ್ ಒಳನುಸುಳುಕೋರರಿಂದ ಸಮರಸದೃಶ ಸ್ಥಿತಿ ಉಂಟಾಗಿ ಪ್ರಾಣ ತೆರಬೇಕಾಯ್ತಲ್ಲ ಎಂಬ ಕಟು ವಾಸ್ತವ ನಮ್ಮ ದುಃಖವನ್ನು ಹೆಚ್ಚಿಸಿದೆ’.
ಈ ಎಲ್ಲ ಗೋಜಲುಗಳು ಎದುರು ನಿಂತಾಗ ಸಾಂತ್ವನ ಹೇಳುವುದು ಇಸ್ರೇಲ್ ಮಾದರಿ. ಆ ದೇಶದಲ್ಲಿ ಪ್ರತಿಯೊಬ್ಬರೂ ನಿಯಮಿತ ಅವಧಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಅದನ್ನು ತಮ್ಮ ಆದ್ಯ ಕರ್ತವ್ಯವೆಂದೂ, ಹೆಮ್ಮೆಯೆಂದೂ ಭಾವಿಸುತ್ತಾರೆ. ಕಾರ್ಗಿಲ್ ವಿಜಯ ದಿನದ ಈ ಅಭಿಮಾನದ ಗಳಿಗೆಯಲ್ಲಾದರೂ ನಮ್ಮಲ್ಲಿ ಅಂಥದೊಂದು ದೇಶಾಭಿಮಾನದ ಒರತೆ ಹನಿಯಲಿ ಅಲ್ಲವೇ?

No comments:

Post a Comment