IMPORTANT NOTICE

New official website is designed for Karada Community. Please visit www.karadavishwa.com for more details.

Wednesday, 27 June 2018

________ವಿರಹಿಣಿ....._______



ಅಲ್ಲಿ ಗುಡುಗಿದೆಯಂತೆ...ಎಲ್ಲೋ...
ಮಳೆ ನಿಂತ ಹೊತ್ತು.......
ಕಾಯುತ್ತಿರುತ್ತೇನೆ ಸಂಜೆಯ ಮಬ್ಬಿಗೆ ಆಗೀಗ ಬೆಳಗುವ
ಕೋಲ್ಮಿಂಚಿನಲ್ಲಿ ನಿನ್ನ ಮೊಗದ ಮಂದಹಾಸ ನಿರುಕಿಸುತ್ತಾ..........

ಎದೆಯ ಬಾಗಿಲ ತೆರೆದು ಮಧುರ ಗಾನವ ಹೊಸೆದು.....ಆಸೆ ಕಣ್ಣಲ್ಲಿ
ಕಾಯುತ್ತಿದ್ದೇನೆ...
ನೀ ಬಂದು ಸೇರುವೆಯೇನು ಒಲವ ತಂಗಾಳಿ.....

ಒಣಗಿ ಹೋಗಿದೆ ಮರುಭೂಮಿ ಇನ್ನಷ್ಟು ಕಡುವಿರಹಬೇಗೆಯಲಿ ...ಮನಕೆ ತಂಪೆರಚು ಝರಿಯಾಗಿ ಹರಿದು ಬಾ....
ಕರಟಿಹೋಗಿದೆ ಗರಿಕೆ ತುದಿ....
ಹೂ ಬನ ಬಾಡಿದೆ...ಕಮರುವ ಮುನ್ನ
ಹಸಿರನೆರಚು........
ಕರಣಿಕನಿಗೆ ಗೊತ್ತಿರುವ ಬಳಲಿಕೆಯ ಲೆಕ್ಕಾಚಾರ....
ಬರುವೆಯೋ ಬಾರೆಯೋ...
ಅಂಜಿಕೆಗೂ ಅಂಜಿಕೆ...ಒಂದು ಹುಲ್ಲಕಡ್ಡಿಯ ಭರವಸೆ...
ಮಿಂಚಿನ ತುದಿಹಿಡಿದು ಬಾಗಿಲಾಚೆ ಆಗೀಗ ಜಗ್ಗಿ ನೋಡುತ್ತೇನೆ.....
ನಿನ್ನ ಬರವು ಖಂಡಿತ... ಗವ್ವೆನ್ನುವ ಕಾರ್ಗತ್ತಲಲೂ ಪಿಸುನುಡಿ ಕೇಳಿ ಬಂದೀತು ಜಿರ್ರೆನ್ನುವ ಜೀರುಂಡೆಗಳ ಸದ್ದನಡಗಿಸಿ......
ಆ ಮೂಲೆ ಕೋಣೆಯೊಳಗಿನ
ಮೂರು ಕಾಲಿನ ಮಂಚ ಲೆಕ್ಕವಿಟ್ಟಿದೆ ನಮ್ಮ ಬೆವರಹನಿಗಳದು....
ಸುಣ್ಣ ಕಾಣದ ಗೋಡೆಗಳ ಮಾತುಗಳು
ಬರಿ ನಿನ್ನವೇ.....
ಸರಸದ ನೆನಪು ಹೊರಹೋಗದಂತೆ...
ಹನ್ನೆರಡು ಇಂಚಿನ ಹದಿಮೂರು ಮೊಳೆಗಳ ಜಡೆದ ಕರಿಕಿಟಕಿ....
...
ಕಾಯ ತಂಪಾಗುವ ಮುನ್ನ ಮತ್ತೊಮ್ಮೆ...
ಬರುವೆಯಲ್ಲ.... ಬಂದುಬಿಡು...
ಬಾರದಿರೆ.... ನಾ ಮತ್ತೆ..... ಫ್ರೇಮಿನೊಳಗಿನ     ಬರಿಯ ನೆನಪು.....


    ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು

No comments:

Post a Comment