IMPORTANT NOTICE

New official website is designed for Karada Community. Please visit www.karadavishwa.com for more details.

Friday, 28 February 2025

ನಾವ್ಯಾಕೆ ಶಂಕರ ಮತಾನುಯಾಯಿಗಳು ?

ಸನಾತನ ಧರ್ಮದ ನೆಲೆವೀಡಾದ ಭಾರತ ದೇಶಕ್ಕೆ ವಿಶ್ವದಲ್ಲಿ ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿಕೊಟ್ಟಂತಹ ಧರ್ಮಾಚರಣೆಯ ಮೂಲ ಸ್ಥಾನವೇ ನಮ್ಮ ಸನಾತನ ಭಾರತ ದೇಶ. ನಾವೀಗ ಹಿಂದೂ, ಹಿಂದೂಸ್ಥಾನ್ ಎಂದೆಲ್ಲಾ ಹೊಸ ಹೊಸ ಹೆಸರುಗಳಿಂದ ವ್ಯವಹರಿಸಿದರೂ ನಿಜವಾಗಿಯೂ ನಾವು ಸನಾತನ ಧರ್ಮಾನುಯಾಯಿಗಳೇ ಹೊರತು ಇತರ ಮತಾನುಸಾರಿಗಳಲ್ಲ. ಇಂತಹ ಸನಾತನವಾದ ಧರ್ಮವು ವೇದವೆಂಬ ಜ್ಞಾನರಾಶಿಯ ಅಡಿಗಲ್ಲಿನಲ್ಲಿ ಭದ್ರವಾಗಿ ಸ್ಥಾಪಿಸಲ್ಪಟ್ಟಿದೆ. ಆದುದರಿಂದಲೇ ಹಲವು ಬಾರಿ ಅಥವಾ ಇತರ ಧರ್ಮೀಯರಿಂದ ನಿರಂತರವಾಗಿ ಆಕ್ರಮಿಸಲ್ಪಟ್ಟರೂ ನಮ್ಮ ಸನಾತನ ಧರ್ಮವು ಇನ್ನೂ ಸ್ಥಿರವಾಗಿ ನೆಲೆನಿಂತಿರುವುದು ಮಾತ್ರವಲ್ಲದೆ, ಇತರರೂ ನಮ್ಮನ್ನು ಅನುಸರಿಸುವಂತೆಯೂ, ನಾವು ಇತರರಿಗೆ ಮಾರ್ಗದರ್ಶನವನ್ನೀಯುವಂತೆಯೂ ಮಾಡುತ್ತದೆ.

ಅಂತಹ ಸನಾತನ ಧರ್ಮದ ರಕ್ಷಣೆಗೋಸ್ಕರವಾಗಿ ಭಗವಂತನು ಬೇರೆ ಬೇರೆ ರೂಪದಲ್ಲಿ ವಿವಿಧಾವತಾರಗಳನ್ನೆತ್ತಿ ಧರ್ಮವನ್ನು ಸಂರಕ್ಷಣೆ ಮಾಡಿರುವ ಬಗ್ಗೆ ನಮ್ಮಲ್ಲಿ ಅನೇಕ ಪುರಾಣ ಕಥೆಗಳಿವೆ. ಮಾತ್ರವಲ್ಲದೆ, ಸಾಕ್ಷಾತ್ ಅರ್ಜುನನನ್ನು ನಿಮಿತ್ತೀಕೃತ್ಯ ಉಪದೇಶಿಸಿದಂತಹ ಭಗವದ್ಗೀತೆಯೂ ನಮ್ಮ ಕಣ್ಣ ಮುಂದಿದೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ।।

ಎಂಬುದಾಗಿ ಗೀತೆಯಲ್ಲಿ ಭಗವಂತನು ತನ್ನ ಅವತಾರದ ಸತ್ಯತೆಯನ್ನು ತಿಳಿಸಿರುತ್ತಾನೆ. ಅದೊಂದು ಯುಗ, ಹಿಂದಿನ ಎಲ್ಲಾ ಯುಗಗಳಲ್ಲಿಯೂ ಒಂದೊಂದು ರೀತಿಯಾಗಿ ಅಧರ್ಮಗಳು ಪರಾಕಾಷ್ಠೆಯನ್ನು ತಲುಪಿದಾಗಲೂ ಅಧರ್ಮಾಚರಣೆಯೇ ಧರ್ಮವೆಂದು ವ್ಯವಹರಿಸಿದಾಗಲೂ ಪುನಃ ಜನರನ್ನು ಧರ್ಮದ ದಾರಿಯಲ್ಲಿ ತರಿಸಿ, ಹಳಿತಪ್ಪಿದ ವಾಹನವನ್ನು ಪುನಃ ಹಳಿಗೆ ತಂದಂತೆಯೇ ಭಗವಂತನು ಅವತರಿಸಿ ಜನರನ್ನು ಸನ್ಮಾರ್ಗದಲ್ಲಿ ನಡೆಸಿರುವುದೂ ನಿತ್ಯ ಸತ್ಯ. ಕಲಿಯುಗವೂ ಅದಕ್ಕೆ ಹೊರತಾಗಿಲ್ಲ. ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಸೇರಿ ಎಷ್ಟು ಅಧರ್ಮಗಳು ನಮ್ಮಲ್ಲಿ ಇದ್ದವೋ ಅವುಗಳ ದ್ವಿಗುಣಿತವಾದ ಗುಣಗಳು ದುರ್ಗುಣಗಳು ಒಂದೇ ಮನುಷ್ಯನಲ್ಲಿರುತ್ತವೆ.

ಉದಾಹರಣೆಗಾಗಿ ಹೇಳುವುದಾದರೆ, ಹಿಂದೊಂದು ಯುಗದಲ್ಲಿ ದೇವತೆಗಳು ಸುರಲೋಕದಲ್ಲೂ, ಅಸುರರು ಪಾತಾಳಾದಿ ಲೋಕದಲ್ಲಿ ವಾಸಿಸುತ್ತಿದ್ದರೂ, ಅಸುರರು ತಮ್ಮ ಅತಿಯಾದ ಸಾಮರ್ಥ್ಯದಿಂದ ದೇವತೆಗಳ ಮೇಲೆ ಯುದ್ಧ ಮಾಡಿರುವುದೂ, ಕೊನೆಗೆ ಅಸುರರ ಪರಾಜಯವೂ ಲೋಕವಿದಿತ. ಅನಂತರದ ತ್ರೇತಾ ಯುಗದಲ್ಲಿ ಒಂದೇ ಭೂಮಿಯ ಎರಡು ಭಾಗಗಳಾದ ಭಾರತ - ಶ್ರೀಲಂಕಾದಲ್ಲಿ ರಾಮ-ರಾವಣರ ಜನನ. ಇವರೀರ್ವರ ಯುದ್ಧದಲ್ಲಿ ಕೊನೆಗೆ ರಾವಣನ ಪರಾಜಯವಾದುದು ಅಸತ್ಯದ ಮಾತಲ್ಲ. ದ್ವಾಪರ ಯುಗದಲ್ಲಂತೂ ಒಂದೇ ಕುಟುಂಬದ ಕುರು-ಪಾಂಡವರ ಮಧ್ಯೆ ಧರ್ಮದ್ವೇಷ, ಧರ್ಮ ಸಂರಕ್ಷಣೆಗಾಗಿ ಕೃಷ್ಣನ ಅವತಾರ ಎಂಬುದೂ ಸತ್ಯಕ್ಕೆ ದೂರವಲ್ಲ. ಕೊನೆಯ ಕಲಿಯುಗದಲ್ಲಿ ಇನ್ನೂ ಸಂಕುಚಿತವಾಗಿ ಒಬ್ಬ ವ್ಯಕ್ತಿಯಲ್ಲಿ ದೇವಾಸುರ ಶಕ್ತಿಗಳಿವೆ. ದಿನನಿತ್ಯವೂ ಈ ಎರಡು ಶಕ್ತಿಗಳ ಮಧ್ಯೆ ಹೊರಾಟ, ಸದ್ಯಕ್ಕಂತು ಅಧರ್ಮವೇ ಮೇಲುಗೈಯಾಗಿ ಕಂಡರೂ, ಇಂತಹ ಸನ್ನಿವೇಶ ಶ್ರೀ ಶಂಕರರ ಅವತಾರದ ಸಮಯದಲ್ಲೂ ಇದ್ದುದರಿಂದ ಶ್ರೀ ಶಂಕರರು ವ್ಯಕ್ತಿಯಲ್ಲಿರುವ ಅಸುರೀ ಶಕ್ತಿಯನ್ನು ನಾಶಮಾಡಲು ಕಾಲಟಿಯಲ್ಲಿ ಜನ್ಮವೆತ್ತಿರುವುದೂ, ಜನರನ್ನು ಸನಾತನ ಧರ್ಮದತ್ತ ತಮ್ಮ ವಿದ್ವತ್ಪೂರ್ಣ ಕೃತಿಗಳ ಮೂಲಕ ತಲುಪಿಸಿರುವುದೂ ಸರ್ವವಿದಿತ. ಹಿಂದೆಲ್ಲಾ ಯುಗಗಳಲ್ಲಿ, ವಿಭಿನ್ನ ಶರೀರಗಳಲ್ಲಿ ದೇವಾಸುರ ಶಕ್ತಿಗಳು ನೆಲೆಸಿದ್ದವು. ಪ್ರಕೃತ ಕಲಿಯುಗದಲ್ಲಿಯಾದರೋ ಒಂದೇ ಶರೀರದಲ್ಲಿ ಎರಡು ಶಕ್ತಿಗಳಿರುವುದರಿಂದಲೂ ಶರೀರವನ್ನು ನಾಶ ಮಾಡದೆಯೇ ಅಸುರಿ ಶಕ್ತಿಯನ್ನು ನಿರ್ನಾಮ ಮಾಡಬೇಕಾಗಿದೆ. ಶರೀರವು ನಶಿಸಿದರೆ ಅದರಲ್ಲಿರುವ ಅಲ್ಪವಾದ ದೇವಶಕ್ತಿಯು ನಾಶವಾಗಬಹುದು. ಆದುದರಿಂದಲೇ ಅಜ್ಞಾನದಿಂದಿರುವ ಅಸುರಿ ಶಕ್ತಿಯನ್ನು ನಿವಾರಿಸಲು ಶ್ರೀ ಶಂಕರರ ಅವತಾರವು ಅರ್ಹವೆನಿಸಿತು. ಮಾತ್ರವಲ್ಲದೆ ರಕ್ತಸಿಕ್ತವಲ್ಲದಂತಹ ಸಂಗ್ರಾಮದಲ್ಲಿ ನಮ್ಮಲ್ಲಿಯೇ ಸುಪ್ತವಾದ ಅಸುರಿ ಶಕ್ತಿಯನ್ನು ನಾಶಮಾಡಲೂ ಅವರ ಅವತಾರವು ಸಾರ್ಥಕವಾಯಿತು.

ಆದರೆ ಇಲ್ಲೊಂದು ವಿಷಯವನ್ನು ನಾವು ತಿಳಿದಿರಬೇಕು. ಅಸುರೀ ಶಕ್ತಿಯನ್ನು ಹೊಂದಿದ ರಾವಣಾದಿಗಳು ಬಹುಕಾಲ ಜೀವಿಸಿ ಲೋಕಕಂಟಕರಾಗಿ ಕೊನೆಗೆ ಸಂಗ್ರಾಮದಲ್ಲಿ ಸೋತು ಸುಣ್ಣವಾಗಿ ಸ್ವಶರೀರನಾಶದ ಬಳಿಕ ಪುನಃ ಎದ್ದು ಬರಲಿಲ್ಲ. ಆದರೆ ನಮ್ಮಲ್ಲಿರುವ ಅಸುರಿ ಶಕ್ತಿಯು ಇಂದು ನಾಶವಾದರೆ ನಾಳೆ ಪುನಃ ಎದ್ದು ಬರುತ್ತದೆ. ದಿನ ನಿತ್ಯವೂ ಒಂದಲ್ಲ ಒಂದು ಕ್ಷಣ ನಮ್ಮಲ್ಲಿರುವ ಅಸುರಿ ಶಕ್ತಿಯು ತಾಂಡವವಾಡುತ್ತಿರುತ್ತದೆ. ದಿನನಿತ್ಯವೂ ಸುರ-ಅಸುರ ಶಕ್ತಿಗಳ ಸಂಗ್ರಾಮದ ಯುದ್ಧ ಭೂಮಿಯೇ ನಮ್ಮ ಒಳಗಿರುವ ಮನಸ್ಸಾಗಿದೆ. ಇಂತಹ ಸಂಗ್ರಾಮವು ನಡೆಯದಿರಬೇಕಾದರೆ, ಸ್ಮಾರ್ತ ಪುರಾಣದಲ್ಲಿ ಹೇಳಿರುವಂತಹ ಕರ್ಮಗಳನ್ನು ನಿತ್ಯವೂ ಅನುಷ್ಠಾನ ಮಾಡಿದಂತಹ ಪಕ್ಷದಲ್ಲಿ, ಆ ಕೆಟ್ಟ ಶಕ್ತಿಯು ನಮ್ಮ ಮನಸ್ಸಿನಲ್ಲಿ ಪ್ರವೇಶಿಸುವುದಿಲ್ಲ.

ಮಹಾರಾಷ್ಟ್ರದ ಸತಾರಾ ಪ್ರದೇಶದ ಸಮೀಪದಲ್ಲಿರುವ ಕರ್ಹಾಡವೆಂಬ ಕುಗ್ರಾಮದಿಂದ ಬಂದು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವವರು ನಾವು. ಅಲ್ಲಿಂದ ಬಂದು ನಾಲ್ಕೈದು ಶತಮಾನಗಳಾದರೂ ಕಳೆದಿರಬಹುದು. ಮಹಾರಾಷ್ಟ್ರದಲ್ಲಿ ಈಗಲೂ ಅಧಿಕಾಂಶ ಕಾಣುತ್ತಿರುವುದು ಸ್ಮಾರ್ತ ಸಂಪ್ರದಾಯ. ನಮ್ಮ ದಿನನಿತ್ಯದ ಪೂಜಾನುಷ್ಠಾನಗಳು ಶ್ರುತಿ ಸ್ಮೃತಿ ಧರ್ಮ ಶಾಸ್ತ್ರಗಳು ಉಪದೇಶಿಸಿದಂತೆಯೇ ಹೊರತಾಗಿ ನಮ್ಮ ಕಪೋಲ ಕಲ್ಪಿತಗಳಲ್ಲ. ನಾವು ಯಾವುದೇ ಊರಿಗೆ ಹೋದರೂ, ನೂತನವಾಗಿ ಹೊರದೇಶಕ್ಕೆ ಹೋದರೂ ಮೊದಲು ನಾವು ಅನ್ವೇಷಿಸುವುದು ನಮ್ಮ ಸಂಪ್ರಾದಾಯದವರು ಯಾರಿದ್ದಾರೆ ? ಎಲ್ಲಿದ್ದಾರೆ ? ಎಂಬುದಾಗಿ.

ಅಂತೆಯೇ ಹಲವು ಕಾರಣಗಳಿಂದಲೋ ನಮ್ಮ ಹಿರಿಯರು ಮಹಾರಾಷ್ಟ್ರವನ್ನು ಬಿಟ್ಟು ಕರ್ನಾಟಕಕ್ಕೆ ಬಂದು ನೆಲೆಸಿದಾಗ ನಮ್ಮ ಧರ್ಮಾನುಷ್ಠಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಲು ನಾವು ಆಶ್ರಯಿಸಿದ ಸಮೀಪದ ಮಠ ಶ್ರೀ ಶೃಂಗೇರಿ ಮಠ, ಆದಿ ಶಂಕರರು ಧರ್ಮಸಂಸ್ಥಾಪನೆಗಾಗಿ ಸ್ಥಾಪಿಸಿದಂತಹುದು. ಸ್ಮಾರ್ತರಾದ ನಾವು, ಶಿವ, ವಿಷ್ಣು, ಅಂಬಿಕೆ, ಸೂರ್ಯ, ವಿನಾಯಕರನ್ನು ಸಮವಾಗಿ ಪೂಜಿಸಿ ಪಂಚಾಯತನ ಪೂಜಾ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತೇವೆ.

ಉಳಿದ ಮಾಧ್ವ, ವೈಷ್ಣವ ಸಂಪ್ರದಾಯದಲ್ಲಿ ಈ ಪದ್ಧತಿ ಇರುವುದಿಲ್ಲ. ಹೊಸದಾಗಿ ಬಂದ ಪ್ರದೇಶದಲ್ಲಿ ಸಂಪ್ರದಾಯವನ್ನು ಸರಿಯಾಗಿ ಅನುಸರಿಸಲು ನಾವು ಕಂಡುಕೊಂಡಂತಹ ಜೀವನೋಪಾಯವು ಆ ಕಾಲದಲ್ಲಿ ಕೃಷಿ ಮತ್ತು ವೈದಿಕ. ವೈದಿಕ ಮಾರ್ಗವನ್ನು ಅನುಸರಿಸಬೇಕಾದರೆ ವೈದಿಕರಾದವರ ಮಾರ್ಗದರ್ಶಕರೇ ಬೇಕು. ಮಾತ್ರವಲ್ಲದೆ, ಅವರಿಗೆ ಅದರಲ್ಲಿ ಅಪರಿಮಿತವಾದ ಪಾಂಡಿತ್ಯವೂ ಇರಬೇಕು. ಜ್ಞಾನಕ್ಕೆ ತಲೆ ಬಾಗಿಸಲೇಬೇಕಲ್ಲವೇ? ತಾರತಮ್ಯ ಉಪಾಸನೆಯಿಂದ ಅಧೋಗತಿಯನ್ನು ಹೊಂದುತ್ತೇವೆಂದೂ, ಪಂಚಾಯತನ ಪೂಜಾ ಪದ್ಧತಿಯಿಂದ ಶ್ರೇಯಸ್ಸನ್ನು ಪಡೆಯುವುದೇ ಸೂಕ್ತ ಎಂದು ತಿಳಿದವರು ನಾವು.  ಮಧ್ವಾಚಾರ್ಯರು ಒಂದೇ ಕಡೆ ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು. ಎಂಟು ಜನರ ಅನುಯಾಯಿಗಳಾಗುವುದಕ್ಕಿಂತಲೂ ಒಂದೇ ಮಠಕ್ಕೆ ಅನುಯಾಯಿಯಾಗುವುದು ಒಳಿತೆಂದು ಭಾವಿಸಿದವರು ನಾವು. ಸ್ಮಾರ್ತರೆಂದು ನಮಗೆ ಹೆಸರು ಬಂದಿರುವುದು ಶ್ರುತಿಸ್ಮೃತಿಯಲ್ಲಿರುವ ಪೂಜಾನುಷ್ಠಾನಗಳನ್ನು ಅನುಸರಿಸಿರುವುದರಿಂದಲೇ.  ಕಾಲಕ್ರಮೇಣ ನಮ್ಮ ಹಿರಿಯರು ಉದ್ಯೋಗ ನಿಮಿತ್ತವಾಗಿ ದೂರದ ಊರಿಗೆ, ಪರವೂರಿಗೆ ಸೇರಿದಾಗ ನಮ್ಮ ಪಕ್ಕದಲ್ಲಿರುವ ತಮಿಳುನಾಡಿನ ಕಾಂಚೀ ಮಠವೂ ಇದೇ ಸಂಪ್ರದಾಯಕ್ಕೆ ಸಂಬಂಧಪಟ್ಟದ್ದೆಂದು ತಿಳಿದು, ಅಲ್ಲಿಗೆ ವಿದ್ಯಾರ್ಜನೆಗೋಸ್ಕರ ಕಾಂಚೀ ಮಠವನ್ನು ಆಶ್ರಯಿಸಿ ವೇದಾರ್ಜನೆಯನ್ನು ಮಾಡಿದ ನಮ್ಮ ಕರಾಡಸ್ಥರು ಶ್ರೌತ ಸಂಪ್ರದಾಯವನ್ನು ಅನುಸರಿಸುವ ಕಾಂಚೀ ಮಠವನ್ನಾಶ್ರಯಿಸಿದರೆ ತಪ್ಪೇನಿಲ್ಲವೆಂದು ಭಾವಿಸಿದವರು ನಾವು. ಅದರಂತೆ ಶ್ರೀ ಕಾಂಚೀ ಮಠದ ನಿಯಮಾವಳಿಯನ್ನು, ಧರ್ಮಾಚರಣೆಯನ್ನು, ಸೌಲಭ್ಯಗಳನ್ನೂ ನಾವು ಅನುಭವಿಸುತ್ತಿದ್ದೇವೆ.

ಉಪನಿಷತ್ತಿನಲ್ಲಿರುವ 'ಸಹನಾವವತು.....' ಇತ್ಯಾದಿ ಮಂತ್ರಗಳಿಂದ ಸ್ಫೂರ್ತಿ ಪಡೆದು, ಅದ್ಭುತ ಗುರುಪರಂಪರೆ, ಸರಳತನ, ಶಿಷ್ಯರೆಲ್ಲರೂ ತಮ್ಮ ಸಂಪತ್ತು, 'ಉದಾರಚರಿತಾನಾಂತು ವಸುಧೈವ ಕುಟುಂಬಕಮ್' ಎಂಬ ಸೂಕ್ತಿಯಂತೆ, ಸಮಾಜದ ಒಳಿತಿಗಾಗಿ, ನಿರಂತರವೂ ವೇದ ಮಾತೆಯ ಸಂರಕ್ಷಣೆಗಾಗಿ, ನಾಡಿನ ಏಳಿಗೆಗಾಗಿ ತನ್ನ ಜೀವನವನ್ನೇ ಮಾದರಿಯಾಗಿ, ಯಾವುದೇ ಐಹಿಕ ಭೋಗಗಳಿಗೆ ಆಸ್ಪದಕೊಡದಂತಹ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಜಯಿಸಿದ ಶತಾಯುಷಿ ದೇವರಾದ ಶ್ರೀ ಶಂಕರರ ಅವತಾರವೆಂದು, ನಡೆಯುವ ದೈವವೆಂದೂ, ದೇವತಾ ಸ್ವರೂಪವನ್ನು ಹಲವರಿಂದ ಅನುಭವಿಸಲ್ಪಟ್ಟ ಕಾಂಚೀ ಪರಮಾಚಾರ್ಯರಾದ ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳಿಂದ ಬೋಧಿಸಲ್ಪಟ್ಟ ಶ್ರುತಿಸ್ಮೃತಿ ಸಂಪ್ರದಾಯಗಳೂ ಸಹ ನಮ್ಮನ್ನು ಕಾಂಚೀ ಮಠದ ಶಿಷ್ಯರನ್ನಾಗಿಸಿತು. ಬೆಲ್ಲವನ್ನು ಅರಸಿ, ಸಕ್ಕರೆಯನ್ನು ಅರಸಿ ಹೋಗುವ ಇರುವೆಗಳಂತೆ ವೇದದ ಮಾಧುರ್ಯವನ್ನು ಅರಸಿ ಕರಾಡಸ್ಥ ಮಕ್ಕಳ ಸಾಲು ಸಾಲೇ ಮುಂದೆ ಕಾಂಚೀ ಮಠದ ಮಾಧುರ್ಯವನ್ನು ಸವಿದಿದೆ ಎಂಬುದು ಸತ್ಯಕ್ಕೆ ದೂರದ ಮಾತಲ್ಲ.

ಇಂದು ಶತಾಧಿಕ ವಿದ್ಯಾರ್ಥಿಗಳು, ವೇದ ಘನಪಾಠಿಗಳು, ಶ್ರೀ ಮಠದ ಶಿಷ್ಯರಾಗಿರುತ್ತಾರೆ. ಹೊರರಾಜ್ಯದಲ್ಲಿರುವ ಹಲವರು ಕರಾಡಸ್ಥರು ಕಾಂಚೀಮಠದ ಶಿಷ್ಯರಾದ ತಮಿಳು ತಂಬಿಗಳಿಗೆ ಪುರೋಹಿತರಾಗಿರುತ್ತಾರೆ. 'ವಾಧ್ಯಾಕ್' ಎಂದೂ ಹೇಳಿಸಿಕೊಳ್ಳುತ್ತಾರೆ. ಉಪಾಸನೆಯಲ್ಲಿ ತಾರತಮ್ಯವಿರಬಹುದು, ಉಪಾಸಕರೂ ಭಿನ್ನರಾಗಿರಬಹುದು; ಗಮ್ಯವೆಂಬುದು ಒಂದೇ ತಾನೆ ? ಆದರ ಮಾರ್ಗವೇ ಶ್ರುತಿಸ್ಮೃತಿ  ಪುರಾಣಗಳು, ಶ್ರುತಿ ಎಂದರೆ ವೇದಗಳು, ವೇದವನ್ನಾಧರಿಸಿ ಸ್ಮೃತಿಗಳು ಧರ್ಮಗ್ರಂಥಗಳು. ಅವುಗಳಿಗೆ ಅವಿರುದ್ಧವಾದ ವಿಷಯಗಳನ್ನು ಜನಸಾಮಾನ್ಯರಿಗೆ ಉಪದೇಶಿಸುವ ಪುರಾಣಗಳು ನಮಗೆ ಧರ್ಮಾಚರಣೆಯಲ್ಲಿ ಮಾರ್ಗದರ್ಶಕಗಳು. ಆದುದರಿಂದಲೇ ಈ ಮೂರು ಪವಿತ್ರವಾದ ಜ್ಞಾನರಾಶಿಗಳಿಂದ ತಿಳಿದು ಅವುಗಳ ಮಾರ್ಗದರ್ಶಕನಿಂದ ಧರ್ಮಾಚರಣೆಯನ್ನು ಬೋಧಿಸುವ ಗುರುಪರಂಪರೆಯಾದ ಶ್ರೀ ಕಾಂಚೀ ಮತ್ತು ಶೃಂಗೇರಿ ಮಠದ ಶಿಷ್ಯರಾದವರು ನಾವು. ಮಾತ್ರವಲ್ಲದೆ ಧರ್ಮ ಸಂದೇಹ ಬಂದಾಗ ನಿವಾರಿಸಲು ಅರ್ಹ, ಯೋಗ್ಯ, ಪೂಜ್ಯ, ಬಲಿಷ್ಠವಾದ ಮಠಗಳಿರಬೇಕು; ಜನರು ತಪ್ಪುದಾರಿಯಲ್ಲಿ ಹೋದಾಗ ತಿದ್ದಲು, ಯೋಗ್ಯ ಧರ್ಮಾಧಿಷ್ಠಾನಗಳು ಇರಬೇಕು; ಅವು ಸನಾತನ ಧರ್ಮವನ್ನೇ ಬೋಧಿಸಲು ಅರ್ಹವಾಗಿರಬೇಕು; ಧರ್ಮವನ್ನು ಚಾಚೂ ತಪ್ಪದೆ ತಾವೂ ಅನುಸರಿಸಿ ಇತರರಿಗೆ ಬೋಧಿಸಲೂ ಆರ್ಹತೆಯಿರಬೇಕು; ಅವೆರಡೂ ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿರುವುದು ಈ ಎರಡು ಮಠಗಳಲ್ಲಿಯೇ.

ಮಾತ್ರವಲ್ಲದೇ ನಾವು ಕರಾಡಸ್ಥರು ಋಗ್ವೇದಿಗಳು, ಆಶ್ವಲಾಯನ ಸೂತ್ರದವರು; ಪ್ರಕೃತ ಋಗ್ವೇದದ ಮಠ ಕಾಂಚೀಮಠ, ಶೃಂಗೇರಿ ಮಠದ ಪರಂಪರೆಯಲ್ಲಿ ಯಜುರ್ವೇದ ಅಧ್ಯಯನ ಮಾಡಿದವರಿಗೆ ಮಾತ್ರ ಸನ್ಯಾಸಕ್ಕೆ ಅಧಿಕಾರವಿದೆ. ಹಲವು ತಲೆಮಾರುಗಳಿಂದಲೂ ಅಲ್ಲಿ ತೆಲುಗಿನವರೇ ಮಠಾಧಿಪತಿಗಳಾಗಿರುವುದೂ ವಿಶೇಷ. ಋಗ್ವೇದ ಮಠವಾಗಿರುವುದರಿಂದಲೂ, ಋಗ್ವೇದಿಗಳ ವಿಷಯದಲ್ಲಿ ವಿಶೇಷ ಆದರವನ್ನು ಪ್ರದರ್ಶಿಸುವುದರಿಂದಲೂ, ವಿಶೇಷ ಗೌರಾವಾತಿಥ್ಯವನ್ನು ನೀಡುವುದರಿಂದಲೂ, ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ಪಡೆಯಲು ಯೋಗ್ಯ ಪೀಠವಾಗಿರುವುದರಿಂದಲೂ, ಸರಳ ಸ್ವಭಾವದಿಂದ ಜನರ ಮನಸ್ಸಿನಲ್ಲಿ ಸದಾ ನೆಲೆಸಿರುವುದರಿಂದಲೂ, ನಮ್ಮ ಹೆಚ್ಚಿನ ಕರಾಡ ಬಂಧುಗಳು ಕಾಂಚೀ ಮಠವನ್ನು ಈಗಲೂ ಆಶ್ರಯಿಸುತ್ತಿರುವುದು ಸತ್ಯದ ಮಾತು. ಮಾತ್ರವಲ್ಲದೆ, ಓದಿದ ವಿದ್ವಾಂಸರಿಗೆ ಸೂಕ್ತ ಪ್ರಾತಿನಿಧ್ಯವನ್ನು ನಮ್ಮ ಕಾಂಚೀ ಮಠವು ನೀಡುತ್ತಾ ಬಂದಿದೆ. ಇವೆಲ್ಲವೂ ಅತಿರಿಕ್ತ ಯೋಗ್ಯ ಕಾರಣಗಳು ನಾವು ಶ್ರೀ ಕಾಂಚೀ ಮಠದ ಶಿಷ್ಯರಾಗಲೂ ಎಂಬುದನ್ನು ನಾನು ಈ ಸಂದರ್ಭದಲ್ಲಿ ನಮ್ಮ ಬಂಧುಗಳಿಗೆ ತಿಳಿಸಲು ಇಚ್ಛಿಸುತ್ತೇನೆ. ನಮ್ಮ ಕರಾಡ ಬಂಧುಗಳಿಗೆ ಶ್ರೀ ಕಾಂಚೀ ಮಠದಿಂದ ಸಿಗದ ಸಹಾಯವಿಲ್ಲ, ಪಡೆಯದ ಉಪಕಾರವಿಲ್ಲ! ಇಂದೂ ಸಹ ನಮ್ಮ ಗುರು ಶಿಷ್ಯ ಪರಂಪರೆಯು ಕಾಂಚಿಯಲ್ಲಿ ದೀರ್ಘವಾಗಿ ನೆಲೆಯೂರಿದೆ. ಏನೇ ಇರಲಿ ಸನಾತನ ಧರ್ಮದ ನೆಲೆಯಾಗಿರುವ ಈ ಮಠಗಳ ಶಿಷ್ಯರಾಗಿರುವುದು ನಮ್ಮ ಕರಾಡ ಬಂಧುಗಳ ಭಾಗ್ಯವೇ ಸರಿ.

ಮಾತ್ರವಲ್ಲದೆ, ಎಲ್ಲಾ ಷೋಡಶ ಸಂಸ್ಕಾರಗಳೂ ವಿಧಿ ನಿಯಮದಂತೆ ಸಕಾಲದಲ್ಲಿ ನಡೆಯುತ್ತಿರುವುದೂ ಈ ಮಠದ ಬೋಧನೆಗಳ ಮೂಲಕವೇ. ಅವರು ನಮ್ಮನ್ನು ಸಕಾಲದಲ್ಲಿ ಎಲ್ಲಾ ಸಂಸ್ಕಾರಗಳನ್ನು ನಡೆಸುವಂತೆ ಪ್ರೇರಣೆ ನೀಡಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನವನ್ನಿತ್ತು, ಉಚಿತ ಸಲಹೆಗಳನ್ನು ಕೊಟ್ಟು ಅನುಗ್ರಹಿಸುತ್ತಿರುವುದರಿಂದಲೂ, ವಿಶೇಷವಾಗಿ ನಾವು ಈ ಮಠಗಳ ಶಿಷ್ಯರಾಗಿರುವುದು ನಮ್ಮ ಗುರು ಪರಂಪರೆಯ ಸಾಕ್ಷಿ.

ಲೇಖಕರು : ಡಾ. ಗಣಪತಿ ಭಟ್ ಕೆಮ್ಮಣಬಳ್ಳಿ (ಲೇಖಕರು ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿ ಇಲ್ಲಿನ ಅದೈತ ವೇದಾಂತ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ' ಋಗ್ವೇದ ವಿದ್ವಾನ್' ಮತ್ತು 'ನ್ಯಾಯ ಶಿರೋಮಣಿ'ಗಳಾದ ಇವರು 'ಪಟ್ಟಾಭಿರಾಮ ವ್ಯಾಖ್ಯಾನಮಾಲಾ'ದ ಸಂಘಟಕರು)
- ಕರಾಡ ಬ್ರಾಹ್ಮಣ ಸಮಾಜ (ರಿ ) ಬೆಂಗಳೂರು ನಡೆಸಿದ ಎರಡು ದಿನಗಳ ಸಮಾವೇಶ 'ಕರಾಡ ಸಂಭ್ರಮ'ದ ಸ್ಮರಣ ಸಂಚಿಕೆಯಿಂದ

No comments:

Post a Comment