Thursday, 4 June 2015

ಯಶಸ್ಸು ಗಳಿಸುವುದು ಕಷ್ಟವಲ್ಲ, ಆದರೆ ಇಟ್ಟುಕೊಳ್ಳುವುದು!


ಅನೇಕ ಮಂದಿ ಜೀವನದಲ್ಲಿ ಎಡವುತ್ತಾರೆ, ಸೋಲುತ್ತಾರೆ. ಹಾಗೆಂದು ಇವರು ಸಾಮಾನ್ಯರಲ್ಲ. ಅವರವರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮೆರೆದವರೇ. ಯಶಸ್ಸಿನ ನೆತ್ತಿ ಮೇಲೆ ಗುದ್ದಿ ಗೆಲುವನ್ನು ಎದೆಗವಚಿಕೊಂಡವರೇ. ಇಂಥ ಯಶಸ್ವಿ ವ್ಯಕ್ತಿಗಳು ವೈಯಕ್ತಿಕ ಜೀವನದಲ್ಲಿ ಮುಗ್ಗರಿಸುತ್ತಾರೆ. ಬಾಳನ್ನು ಗಾಳುಮೇಳಾಗಿಸಿಕೊಂಡು ತೊಳಲಾಡುತ್ತಾರೆ. ಇಂಥವರ ಬಹಳ ದೊಡ್ಡ ದುರಂತವೇನೆಂದರೆ ಇವರಿಗೆ ತಮಗೆ ಒದಗಿ ಬಂದ ಯಶಸ್ಸನ್ನು ಹೇಗೆ ನಿಭಾಯಿಸಬೇಕೆಂಬುದು ಗೊತ್ತಿಲ್ಲದಿರುವುದು. ಯಶಸ್ಸೇ ಅವರಿಗೆ ಮುಳುವಾಗಿರುತ್ತದೆ. ಯಶಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಗೊತ್ತಿಲ್ಲದೇ, ತಲೆಯ ಕಿರೀಟವೇ ಭಾರವಾದಂತಾಗಿ ಇನ್ನಿಲ್ಲದ ಸಮಸ್ಯೆಗೆ ಈಡುಮಾಡಿಕೊಳ್ಳುತ್ತಾರೆ. ಹೀಗಾಗಿ ಯಶಸ್ಸು ಗಳಿಸಿ ಸೆಲಬ್ರೆಟಿಯಾದಷ್ಟೇ ಬೇಗ ನೇಪಥ್ಯಕ್ಕೆ ಸರಿದು ಬಿಡುತ್ತಾರೆ. ಯಶಸ್ಸು ಗಳಿಸುವುದು ಕಷ್ಟವಲ್ಲ. ಆದರೆ ಗಳಿಸಿದ ಯಶಸ್ಸನ್ನು ಇಟ್ಟುಕೊಳ್ಳುವುದಿದೆಯಲ್ಲ, ಅದು ಬಹಳ ಕಷ್ಟ. ಬೇಕಾದರೆ ನೋಡಿ, ಇದು ಸರಳ ಸಂಗತಿ ಎಂದೆನಿಸಬಹುದು. ಆದರೆ ಅನೇಕರ ಹೋರಾಟ ಇದರ ಬಗ್ಗೆಯೇ ನಡೆದಿರುತ್ತದೆ. ಯಶಸ್ಸು ಗಳಿಸಲು ಹಗಲಿರುಳು, ನಿದ್ದೆಗೆಟ್ಟು ದುಡಿಯುತ್ತಾರೆ. ಕೊನೆಗೆ ಅದನ್ನು ಇಟ್ಟುಕೊಳ್ಳಲು ಹಗಲಿರುಳು, ನಿದ್ದೆ ಬಿಟ್ಟು ದುಡಿಯುತ್ತಾರೆ. ಕೆಲವೇ ಕೆಲವು ಮಂದಿ ಎರಡರಲ್ಲೂ ಜಯಶಾಲಿಗಳಾಗುತ್ತಾರೆ. ಉಳಿದವರಿಗೇ ಯಶಸ್ಸೇ ಮುಳುವಾಗುತ್ತದೆ. ಹೀಗಾಗಿ ಯಶಸ್ಸಿನ ಭಾರಕ್ಕೆ ಕುಸಿಯುತ್ತಾರೆ.
 
ಇದರ ಬಗ್ಗೆಯೇ ಹೇಳಬೇಕು.
ಆ ಮನೆಯಲ್ಲಿದ್ದುದು ಅವರಿಬ್ಬರೇ-ಅಪ್ಪ ಮತ್ತು ಮಗಳು. ಅಪ್ಪನ ಹೆಸರು ಸ್ವಾಮಿನಾಥನ್, ಮಗಳ ಹೆಸರು ಸ್ವಾತಿ. ಅಮ್ಮನಿಲ್ಲದ ಕಾರಣಕ್ಕೆ ಆ ಹುಡುಗಿ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದಳು. ಒಂದಿಷ್ಟೂ ಸಂಕೋಚವಿಲ್ಲದೆ ಅಪ್ಪನೊಂದಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಯಾವ ತರಗತಿಗೆ ಚಕ್ಕರ್ ಹೊಡೆದೆ, ಯಾವ ಅಧ್ಯಾಪಕರನ್ನು ರೇಗಿಸಿದೆ, ಯಾವ ಹೋಟೆಲಿನಲ್ಲಿ ಮಸಾಲೆದೋಸೆ ತಿಂದೆ, ಸಿಟಿಬಸ್ ಕಂಡಕ್ಟರ್್ನನ್ನು ಹೇಗೆ ಯಾಮಾರಿಸಿ ದುಡ್ಡು ಉಳಿಸಿದೆ ಎಂಬುದನ್ನೆಲ್ಲ ತಂದೆಯೊಂದಿಗೆ ವರ್ಣಿಸಿ ಹೇಳುತ್ತಿದ್ದಳು.
ಮಗಳ ಇಂಥ ಸಾಹಸಗಳನ್ನೆಲ್ಲ ಸ್ವಾಮಿನಾಥನ್ ಹುಸಿನಗೆಯಿಂದಲೇ ಕೇಳುತ್ತಿದ್ದ. ಸುಳ್ಳು ಸುಳ್ಳೇ ಎಂದು ಗದರಿಸುತ್ತಿದ್ದ. ಅದು ಅಪ್ಪನ ಪ್ರೀತಿಯ ಇನ್ನೊಂದು ಮುಖ ಎಂದು ಸ್ವಾತಿಗೂ ಅರ್ಥವಾಗುತ್ತಿತ್ತು. ಹೀಗೆ, ಹರಟೆ ಹೊಡೆದುಕೊಂಡೇ ಸ್ವಾತಿ ಎಂಬಿಎ ಮುಗಿಸಿದ್ದಳು. ಒಂದು ಎಂಎನ್್ಸಿಯಲ್ಲಿ ದೊಡ್ಡ ಸಂಬಳದ ನೌಕರಿಯೂ ಸಿಕ್ಕಿತ್ತು. ಮೊದಲ ವರ್ಷ ಈ ಹುಡುಗಿ ತುಂಬ ಉತ್ಸಾಹದಿಂದ ಕೆಲಸ ಮಾಡಿದ್ದಳು. ತತ್ಫಲವಾಗಿ ‘ಬೆಸ್ಟ್ ಎಂಪ್ಲಾಯ್ ಆಫ್ ದ ಇಯರ್್’ ಪ್ರಶಸ್ತಿ ಅವಳಿಗೇ ಸಿಕ್ಕಿತ್ತು.
ಒಂದು ಶನಿವಾರದ ವೀಕೆಂಡ್ ಪಾರ್ಟಿಯಲ್ಲಿ ಪ್ರಶಸ್ತಿ ವಿತರಣೆಯೂ ಆಯಿತು. ಆ ಕಾರ್ಯಕ್ರಮಕ್ಕೆ ಮಗಳೊಂದಿಗೆ ಸ್ವಾಮಿನಾಥನ್ ಕೂಡ ಹೋಗಿಬಂದ. ಆತ ಗಮನಿಸಿದಂತೆ, ಸಹೋದ್ಯೋಗಿಗಳೊಂದಿಗೆ ಅವತ್ತು ಸ್ವಾತಿ ಸಂಭ್ರಮದಿಂದ ಬೆರೆಯಲಿಲ್ಲ. ಆಕೆಯ ಕಣ್ಣಲ್ಲಿ ಸಣ್ಣದೊಂದು ತಿರಸ್ಕಾರ ಕಾಣಿಸಿತು. ಮಾತಲ್ಲಿ ಉದಾಸೀನ ಭಾವವಿತ್ತು. ಇಂಥ ವರ್ತನೆಗೆ ಕಾರಣ ಏನಿರಬಹುದು ಎಂದು ಮತ್ತೆ ಮತ್ತೆ ಯೋಚಿಸಿದ ಸ್ವಾಮಿನಾಥನ್. ಅವನಿಗೆ ಏನೂ ಅರ್ಥವಾಗಲಿಲ್ಲ.
ಮರುದಿನ ಮುಂಜಾನೆ ಬಾಲ್ಕನಿಯಲ್ಲಿದ್ದ ಈಸಿಛೇರ್್ನಲ್ಲಿ ಕೂತು ಪೇಪರ್ ಕೈಗೆತ್ತಿಕೊಂಡ ಸ್ವಾಮಿನಾಥನ್. ಅದೇ ವೇಳೆಗೆ ಅಡುಗೆಮನೆಯಲ್ಲಿದ್ದ ಸ್ವಾತಿ, ತನ್ನ ಗೆಳತಿಗೆ ಪೋನ್್ನಲ್ಲಿ ಹೇಳುತ್ತಿದ್ದಳು- ‘ನಿನ್ನೆಯ ಕಾರ್ಯಕ್ರಮದಲ್ಲಿ ಮ್ಯಾನೇಜರ್್ಗಳ ಮಾತು ಕೇಳಿ ಮೈಯೆಲ್ಲ ಉರಿದುಹೋಯ್ತು. ಈಡಿಯಟ್್ಗಳು. ಏನಂತ ತಿಳ್ಕಂಡಿದಾರೆ ನನ್ನನ್ನ? ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಗೆ ತುಂಬಾ ಸ್ಪರ್ಧೆ ಇತ್ತು ಅಂದ್ರು. ಆ ಮಾತೇ ಡಬ್ಬಾ ನೀನೇ ಹೇಳು: ನಂಗೆ ಸರಿಸಮನಾಗಿ ದುಡಿಯೋ ಮತ್ತೊಬ್ಬ ಎಂಪ್ಲಾಯ್ ಕಂಪನೀಲಿ ಇದ್ದಾನಾ? ನಿಜ ಹೇಳಬೇಕು ಅಂದ್ರೆ ಈ ಮ್ಯಾನೇಜರ್್ಗಳಿಗಿಂತ ನನಗೇ ಜಾಸ್ತಿ ಗೊತ್ತಿದೆ. ಅವರೆಲ್ಲ ವಾರಕ್ಕೊಮ್ಮೆ ಮೀಟಿಂಗ್ ಮಾಡೋದು, ಕಂಪನಿ ದುಡ್ಡಲ್ಲಿ ಈಟಿಂಗ್ ಮಾಡೋದು… ಇದಕ್ಕೇ ಲಾಯಕ್ಕು ವೇಸ್ಟ್ ಬಾಡಿಗಳು…..’
ಮಗಳ ಮಾತು ಕೇಳಿ ಸ್ವಾಮಿನಾಥನ್್ಗೆ ಬೇಜಾರಾಯಿತು. ಏಕೆಂದರೆ ಆತ ಮಗಳ ವಿಷಯದಲ್ಲಿ ತುಂಬಾ ಆಸೆಗಳನ್ನು ಇಟ್ಟುಕೊಂಡಿದ್ದ. ಮಗಳು ಚೆನ್ನಾಗಿ ಓದದಿದ್ದರೂ ಪರವಾಗಿಲ್ಲ. ಆಕೆ ಸೌಜನ್ಯದ ನಡವಳಿಕೆ ಹೊಂದಿರಬೇಕು. ಹಿರಿಯರ ವಿಷಯವಾಗಿ ಭಕ್ತಿ, ಗೌರವ ಹೊಂದಿರಬೇಕು ಎಂದು ಆಸೆಪಟ್ಟಿದ್ದ. ಆದರೆ ಈಗಿನ ಮಾತುಗಳನ್ನು ಕೇಳಿದರೆ, ತನ್ನ ನಂಬಿಕೆಗೆ ವಿರುದ್ಧ ದಿಕ್ಕಿನಲ್ಲಿ ಮಗಳು ಬೆಳೆಯುತ್ತಿದ್ದಾಳೆ ಎಂಬೊಂದು ಭಾವ ಸ್ವಾಮಿನಾಥನ್್ಗೆ ಬಂತು. ಆತ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದು- ‘ಸ್ವಾತೀ, ಐದು ನಿಮಿಷ ಮಾತನಾಡಲಿಕ್ಕಿದೆ. ಇಲ್ಲಿ ಬರ್ತೀಯಾ?’ ಎಂದ.
ಟೀ ಕಪ್ ಜೊತೆಗೇ ಬಂದಳು ಸ್ವಾತಿ. ‘ಥ್ಯಾಂಕ್ ಯೂ’ ಎನ್ನುತ್ತಾ ಟೀ ಗುಟುಕರಿಸಿದ ಸ್ವಾಮಿನಾಥನ್ ಹೇಳಿದ- ಹೌದಲ್ವೇನಮ್ಮಾ, ನಿನ್ನೆಯ ಸಂಭ್ರಮ ಈಗಲೂ ನಿನ್ನ ಕಂಗಳಲ್ಲಿದೆ. ಬೆಸ್ಟ್ ಎಂಪ್ಲಾಯ್ ಅನ್ನಿಸಿಕೊಂಡ ಖುಷಿಗೆ ನಿನ್ನ ಮನಸ್ಸು ಜಿಂಕೆಯಾಗಿ ಕುಣೀತಿದೆ. ಎದೆಯೊಳಗೆ ಹೊಸ ಹಾಡು ಹುಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಎಷ್ಟು ಸಂಬಳ ಹೆಚ್ಚಾಗಬಹುದು? ಯಾವತ್ತು ಪ್ರೊಮೋಷನ್ ಸಿಗಬಹುದು ಎಂದೂ ಈಗಲೇ ನೀನು ಯೋಚಿಸಿರುವಂತೆ ಕಾಣುತ್ತಿದೆ. ಅದೆಲ್ಲಾ ಓ.ಕೆ.
ಆದರೆ ಮಗಳೇ, ಈಗ ಕೆಲವೇ ನಿಮಿಷಗಳ ಹಿಂದೆ ನೀನು ಫೋನ್್ನಲ್ಲಿ ಮಾತಾಡಿದ ಧಾಟಿ ಹಾಗೂ ಅದರ ಅರ್ಥವಿತ್ತಲ್ಲ; ಅದು ಅಹಂಕಾರದ ಲಕ್ಷಣ. ನೀನು ಏನೇನಂದೆ ಗೊತ್ತಾ? ಮ್ಯಾನೇಜರ್್ಗಳನ್ನು ಈಡಿಯಟ್ಸ್ ಅಂದೆ. ಸಹೋದ್ಯೋಗಿಗಳನ್ನೆಲ್ಲ ವೇಸ್ಟ್ ಬಾಡಿಗಳು ಅಂದೆ. ಕಂಪನೀಲಿ ನಂಗೆ ಪ್ರತಿಸ್ಪರ್ಧಿಗಳೇ ಇಲ್ಲ ಅಂದೆ. ಇನ್ನೂ ಮುಂದುವರಿದು- ಮ್ಯಾನೇಜರ್್ಗಳಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ ಅಂದೆ! ಕೇವಲ ಬೆಸ್ಟ್ ಎಂಪ್ಲಾಯ್ ಎಂಬ ಒಂದೇ ಒಂದು ಪ್ರಶಸ್ತಿ ಬಂದಿದ್ದಕ್ಕೆ ನೀನು ಹೀಗೆಲ್ಲಾ ಹಗುರವಾಗಿ ಮಾತಾಡಿಬಿಟ್ಟೆ ಅಲ್ವಾ? ಒಂದು ಸತ್ಯ ತಿಳ್ಕೊ. ನಿಮ್ಮ ಕಂಪನೀಲಿ ಮ್ಯಾನೇಜರ್್ಗಳು ಅಂತ ಇದ್ದಾರಲ್ಲ, ಅವರೆಲ್ಲ ಈ ಹಿಂದೆ ನಿನ್ನಂತೆಯೇ ನೌಕರರಾಗಿ ಸೇರಿದವರು. ಕಾಲಾಂತರದಲ್ಲಿ ಅವರೆಲ್ಲ ತುಂಬ ಶ್ರಮಪಟ್ಟು ಕಂಪನೀನ ಬೆಳೆಸಿದ್ದಾರೆ. ತಾವೂ ಬೆಳೆದಿದ್ದಾರೆ. ಅಂಥವರನ್ನು ನೀನು ಅಯೋಗ್ಯರು, ತಿಂಡಿಪೋತರು ಎಂದೆಲ್ಲಾ ಜರಿದೆಯಲ್ಲ ಸರೀನಾ…?’
ಅಪ್ಪನ ದನಿಯಲ್ಲಿ ಸಿಡಿಮಿಡಿಯಿಲ್ಲ. ಮಾತಿನಲ್ಲಿ ಸಿಟ್ಟಿಲ್ಲ. ಅದು ಟೀಕೆಯೂ ಅಲ್ಲ. ಅವನ ಮಾತಿನ ಹಿಂದಿರುವುದು ಮಗಳ ಮೇಲಿನ ಮಮತೆ ಎಂಬುದು ಸ್ವಾತಿಗೆ ತಕ್ಷಣ ಅರ್ಥವಾಯಿತು. ಆಕೆ ತಕ್ಷಣವೇ-ಸಾರಿ ಕಣಪ್ಪಾ, ಬಾಯಿಗೆ ಬಂದಂತೆ ಮಾತಾಡಿ ತಪ್ಪು ಮಾಡಿಬಿಟ್ಟೆ. ನನ್ನ ಮಾತು ಹಾಗೂ ವರ್ತನೆ ಹೇಗಿರಬೇಕು ಎಂಬುದನ್ನು ವಿವರಿಸಿ ಹೇಳಪ್ಪಾ’ ಅಂದಳು. ಸ್ವಾಮಿನಾಥನ್ ಮುಂದುವರಿಸಿದ.
ಗೆಲುವು ಅಥವಾ ಯಶಸ್ಸು ಎಂಬುದೇ ಹಾಗೆ. ಅದು ಎಂಥವರನ್ನೂ ಯಾಮಾರಿಸುತ್ತದೆ. ಅಹಂಕಾರ ತಲೆಗೇರುವಂತೆ, ನನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವಂತೆ ಮಾಡಿಬಿಡುತ್ತದೆ. ಗೆಲುವು ಜೊತೆಯಾದ ನಂತರ ಎಷ್ಟೋ ಜನರ ತಲೆ ಹೆಗಲ ಮೇಲೇ ಇರುವುದಿಲ್ಲ. ಈ ಮಾತು ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಿಗಳಿಗೂ ಅನ್ವಯಿಸುತ್ತದೆ. ಗೆಲುವಿನಲ್ಲಿ ಮೈಮರೆತವರು ನಾನು, ನನ್ನಿಷ್ಟ ಎಂಬಂತೆ ವರ್ತಿಸುತ್ತಾರೆ. ಕಿವಿಮಾತುಗಳನ್ನೂ, ಎಚ್ಚರಿಕೆಗಳನ್ನೂ ನಿರ್ಲಕ್ಷಿಸುತ್ತಾರೆ. ಒಂದೇ ಬಾರಿಗೆ ಆರು ಮೆಟ್ಟಿಲು ಹತ್ತಲು ಹೋಗುತ್ತಾರೆ. ಸಾಧ್ಯವಾಗದೆ ಜಾರಿ ಬೀಳುತ್ತಾರೆ. ಆ ಕ್ಷಣದವರೆಗೂ ಅವರೊಂದಿಗೇ ಇದ್ದ ಗೆಲುವು, ಒಂದೇ ನಿಮಿಷದಲ್ಲಿ ಬೇರೊಂದು ಕಡೆಗೆ ಹಾರಿಹೋಗುತ್ತದೆ. ಯಶಸ್ಸು ಕೈತಪ್ಪಿ ಹೋಯ್ತು ಎಂಬುದು ಗೊತ್ತಾದ ನಂತರ, ಬಿದ್ದವರ ಪಾಲಿಗೆ ಸಂಕಟವೇ ಸಂಗಾತಿಯಾಗುತ್ತದೆ. ಈ ಕ್ಷಣದಲ್ಲಿ ಗೆಲುವು ನಿನ್ನದಾಗಿದೆ ನಿಜ. ಹಾಗಂತ ಮೈಮರೆಯಬೇಡ. ಉಡಾಫೆಯಿಂದ ಮಾತಾಡಿ ಹತ್ತು ಮಂದಿಯ ಮಧ್ಯೆ ಗೌರವ ಕಳೆದುಕೊಳ್ಳಬೇಡ…’
ಅಪ್ಪನ ಕಾಳಜಿ ಕಂಡು ಸ್ವಾತಿಗೆ ಮನಸ್ಸು ಭಾರವಾಯಿತು. ಆಕೆ ಕಣ್ತುಂಬಿಕೊಂಡು ಹೇಳಿದಳು: ಅಪ್ಪಾ, ನನ್ನ ವರ್ತನೆಯಿಂದ ನಿಮಗೆ ತುಂಬಾ ಬೇಜಾರಾಯ್ತಾ?’
ಸ್ವಾಮಿನಾಥನ್ ಚಹಾದ ಕಡೆಯ ಗುಟುಕು ಚಪ್ಪರಿಸಿ ಹೇಳಿದ- ಕೆಲಸದ ವಿಷಯವಾಗಿ, ನಡವಳಿಕೆಯ ವಿಷಯವಾಗಿ  ‘ಛೆ ಛೆ, ಹಾಗೇನೂ ಇಲ್ಲ. ಒಂದು ಟೀಕೆ ಕೇಳಿಬಂದರೆ- ನೀನು ದೊಡ್ಡ ತಪ್ಪು ಮಾಡಿದೆ ಎಂದು ಅರ್ಥವಲ್ಲ. ತಪ್ಪು ಮಾಡೋದು ಎಲ್ಲರಲ್ಲೂ ಸಹಜ. ಅದನ್ನು ತಕ್ಷಣವೇ ತಿದ್ದಿಕೊಳ್ಳುವುದು ಜಾಣರ ಲಕ್ಷಣ. ಅಂಥ ಜಾಣೆಯ ಸಾಲಿಗೆ ನೀನು ಸೇರ್ಕೋಬೇಕು. ಕೆಲವರು ಮೊದಲು ಮುಗ್ಗರಿಸುತ್ತಾರೆ. ನಂತರ ಎದ್ದು ನಿಲ್ತಾರೆ. ಹಲವರು ಮೊದಲು ಸರಿಯಾಗಿ ನಿಂತಿದ್ದು, ನಂತರ ಮುಗ್ಗರಿಸಿಬಿಡ್ತಾರೆ! ಯಶಸ್ಸು ಎಂಬುದು ಮಾಯಾಜಿಂಕೆ. ಅದು ಹಗ್ಗದ ಮೇಲಿನ ನಡಿಗೆ. ಯಶಸ್ಸೆಂಬುದು ನಮ್ಮ ನಿರೀಕ್ಷೆಗಳನ್ನೆಲ್ಲ ನಿಜ ಮಾಡುವುದಿಲ್ಲ. ಆದರೆ ಜವಾಬ್ದಾರಿಯನ್ನು ಖಂಡಿತ ಹೆಚ್ಚಿಸುತ್ತೆ. ಭಾರತ ಕ್ರಿಕೆಟ್ ತಂಡದ ನಾಯಕನಾಗೋದು ಅಂದ್ರೆ ಕೇವಲ ಒಂದು ತಂಡವನ್ನು ಮುನ್ನಡೆಸುವುದು ಮಾತ್ರವಲ್ಲ, ಗೆಲ್ಲಲೇ ಬೇಕು ಎಂಬ ಈ ದೇಶದ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯನ್ನು ನಿಜ ಮಾಡುವ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಪ್ರಧಾನಮಂತ್ರಿ ಅನ್ನಿಸಿಕೊಂಡವನ ಬೆನ್ನ ಮೇಲೆ ಇಡೀ ದೇಶದ ಭವಿಷ್ಯ ನಿಂತಿರುತ್ತದೆ. ರಾಷ್ಟ್ರಪತಿ ಅನ್ನಿಸಿಕೊಂಡವರು ಎಲ್ಲ ರಾಜ್ಯಗಳ ಜನಪ್ರತಿನಿಧಿಗಳೂ ಒಪ್ಪುವಂತೆ ಆಡಳಿತ ನಿರ್ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದು ಅಗತ್ಯವಾಗಿರುತ್ತದೆ.
ಶಿಕ್ಷಣದ ನಿಮಿತ್ತ, ನೌಕರಿಯ ನಿಮಿತ್ತ ಅಥವಾ ವಾಸ್ತವ್ಯದ ನಿಮಿತ್ತ ಒಂದು ಸ್ಥಳದಲ್ಲಿ ಉಳಿಬೇಕು ಅಂದರೆ, ಅಲ್ಲಿ ಬಾಂಧವ್ಯದ ಹೊಸ ಕೊಂಡಿಯೊಂದು ಅರಳಿಕೊಂಡಿತು ಎಂದೇ ಅರ್ಥ. ಈ ಸಂದರ್ಭದಲ್ಲಿ ಯಾರ್ಯಾರೋ ಪರಿಚಯವಾಗುತ್ತಾರೆ. ಅವರಿಂದ ಕಲಿಯುವುದು, ಕಲಿಯದಿರುವುದು ಎರಡೂ ಇರುತ್ತದೆ. ಈ ಸಂಬಂಧ ಎಂಬುದು ಒಂದು ರೀತಿಯಲ್ಲಿ ಬ್ಯಾಂಕ್ ಅಕೌಂಟ್ ಇದ್ದ ಹಾಗೆ. ಖಾತೆ ತೆರೆಯುವುದು ಸುಲಭ. ಆದರೆ ಅಕೌಂಟ್ ಕ್ಲೋಸ್ ಮಾಡುವುದು (ಸಂಬಂಧವನ್ನು ಕಡಿದುಕೊಳ್ಳುವುದು) ಕಷ್ಟ. ಕೆಲವೊಂದು ಸಂದರ್ಭದಲ್ಲಿ ನಾವೆಲ್ಲ ಅಂದಿರುತ್ತೇವೆ- ‘ನನಗೆ ಯಾರ ಸಹಾಯವೂ ಬೇಕಿಲ್ಲ. ನನ್ನ ಬದುಕನ್ನು ನಾನೊಬ್ಬನೇ ರೂಪಿಸಿಕೊಳ್ಳಬಲ್ಲೆ..’
ಆದರೆ ಕಣ್ಣೆದುರಿಗಿರುವ ವಾಸ್ತವವೇ ಬೇರೆ. ಏನೆಂದರೆ- ಬಹಳಷ್ಟು ಸಂದರ್ಭದಲ್ಲಿ ಎಲ್ಲರ ಬದುಕೂ ಇನ್ನೊಬ್ಬರ ಮೇಲೆ ಅವಲಂಬಿಸಿರುತ್ತದೆ. ಎಂಥ ಪ್ರಚಂಡ ವೈದ್ಯನಿಗೂ ನರ್ಸ್ ಸಹಾಯ ಬೇಕಾಗುತ್ತದೆ. ಕೋಟ್ಯಧಿಪತಿಗೆ ಅಕೌಂಟೆಂಟ್್ನ ನೆನಪಾಗುತ್ತದೆ. ಕಚೇರಿಯ ಒಳಗಿರುವಾತ ಜಿಲ್ಲಾಧಿಕಾರಿಯೇ ಆಗಿದ್ದರೂ, ಅದೇ ಕಚೇರಿಯ ಬೀಗ ತೆಗೆಯಲು ಅಟೆಂಡರ್್ನ ನೆರವು ಅಗತ್ಯವಿರುತ್ತದೆ. ನಾನು ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎಂಬ ಮಾತಿಗೆ ಈಗಾಗಲೇ ಕತೆಯಾಗಿ ಹೋದವರ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಲ್ಲಿ ಗೆದ್ದವರೂ ಇದ್ದಾರೆ, ಬಿದ್ದವರೂ ಇದ್ದಾರೆ. ಇಬ್ಬರಿಂದಲೂ ಪಾಠ ಕಲಿಯಬಹುದಾಗಿದೆ…
ಹಾಗಂತ, ಖಂಡಿತ ನಾನು ನಿನ್ನನ್ನು ದೂರುತ್ತಿಲ್ಲ ಮಗಳೇ. ಇವತ್ತಿನ ಯಶಸ್ಸು ಖಂಡಿತ ನಿನ್ನದು ನಿಜ. ಆದರೆ ಆನಂತರ ನೀನು ವರ್ತಿಸಿದ ರೀತಿಯಿತ್ತಲ್ಲ; ಅದನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ. ಒಂದು ಮಾತು ಅರ್ಥ ಮಾಡಿಕೊ. ಒಬ್ಬ ಪ್ರಚಂಡ ಕುಶಲಕರ್ಮಿಯ ಪರಿಶ್ರಮದಿಂದ ಮಾತ್ರ ಬಿದಿರು ಎಂಬ ಮರದ ತುಂಡು ಮಧುರ ನಾದ ಹೊರಡಿಸುವ ‘ಕೊಳಲು’ ಆಗುತ್ತದೆ. ನೀನು ಈಗ ‘ಬಿದಿರಿ’ನ ಲೆವಲ್್ನಲ್ಲಿದ್ದೀ. ಮುಂದೆ ಒಂದೊಂದೇ ಅನುಭವೀ ಮನಸ್ಸಿನ ಕೆಳಗೆ ನೀನು ಪಳಗಬೇಕು. ಯಶಸ್ಸಿನ ಗುಣ, ಅವಗುಣ, ಒಂದು ಗೆಲುವು ಜತೆಯಾದ ಸಂದರ್ಭದಲ್ಲೇ ಹೆಗಲೇರುವ ಜವಾಬ್ದಾರಿ…. ಇದೆಲ್ಲವನ್ನೂ ಅರ್ಥೈಸಿಕೊಳ್ಳಬೇಕು. ಹಿಮಾಲಯದೆತ್ತರ ಬೆಳೆದು ನಿಂತರೂ, ತಲೆ ಭುಜದ ಮೇಲೇ ಇರುವಂತೆ ನೋಡಿಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಯಶಸ್ಸು ಎಂಬುದು ಸುದೀರ್ಘ ಕಾಲದವರೆಗೂ ನಮ್ಮ ಜತೆಗಿರುತ್ತದೆ. ಈ ಸೂಕ್ಷ್ಮ ನಿನಗೆ ಅರ್ಥವಾಗಬೇಕು. ಸ್ವಾಮಿನಾಥನ್ ಮಾತು ನಿಲ್ಲಿಸಿದ.
ಯಶಸ್ಸು ಬಂದಾಗ ಬೀಗಬಾರದು. ಹತ್ತಿದ ಏಣಿಯನ್ನು ಒದೆಯಬಾರದು. ಸಹೋದ್ಯೋಗಿಗಳನ್ನು ಜರಿಯಬಾರದು. ಅಹಂಕಾರದ ಕೈಗೆ ಬುದ್ಧಿ ಕೊಡಬಾರದು. ಸೌಜನ್ಯವನ್ನು ಎಂದೂ ಮರೆಯಬಾರದು ಎಂಬುದನ್ನು ತುಂಬ ಸರಳವಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಪ್ಪಾ. ಈಗಿನಿಂದಲೇ ನನ್ನ ನಡವಳಿಕೇನ ತಿದ್ದಿಕೊಳ್ತೇನೆ ಎಂದಳು ಸ್ವಾತಿ. ಇದುವರೆಗೂ ಎದುರಿನ ಮಾವಿನಮರದಲ್ಲಿ ಮೌನವಾಗಿ ಕುಳಿತಿದ್ದ ಎರಡು ಗಿಳಿಗಳು, ಇವರ ಮಾತು ಮುಗಿದ ತಕ್ಷಣ ತಾವೂ ಕಿಚಪಿಚ ಎನ್ನಲು ಶುರುಮಾಡಿದವು. ಪಕ್ಷಿಗಳ ಸಡಗರ, ಈ ಅಪ್ಪ-ಮಗಳ ಕಂಗಳಲ್ಲೂ ಪ್ರತಿಫಲಿಸಿತ್ತು…
ಜೀವನದಲ್ಲಿ ಯಶಸ್ಸನ್ನು ಇಟ್ಟುಕೊಳ್ಳುವುದು ಹೇಗೆ. ಅದನ್ನು ಸದಾ ನಿಮ್ಮ ಪರವಾಗಿಟ್ಟುಕೊಳ್ಳುವುದು ಹೇಗೆ, ಗಳಿಸಿದ ಯಶಸ್ಸನ್ನು ನಿಮಗೆ ವೈರಿಯಾಗದಂತೆ ಕಾಪಿಡುವುದು ಹೇಗೆ ಎಂಬುದನ್ನು ಇಷ್ಟು ಸರಳವಾಗಿ, ಪರಿಣಾಮಕಾರಿಯಾಗಿ ಹೇಳಲು ಯಶಸ್ವಿಯಾದ, ನನಗೆ ಬಹುಬೇಗ ಪ್ರಿಯರಾದ ಟಿ.ಟಿ. ರಂಗರಾಜನ್ ಅವರಿಗೆ ಒಂದು ಥ್ಯಾಂಕ್ಸನ್ನಾದರೂ ಹೇಳದಿದ್ದರೆ ಹೇಗೆ?
ಮುಂದಿನ ಸಲ ನಿಮಗೆ ಯಶಸ್ಸು ಬಂದಾಗ ಈ ಎಲ್ಲ ಮಾತುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಯಶಸ್ಸು ನಿಮ್ಮಲ್ಲೇ ಬೆಚ್ಚಗೆ ಭದ್ರವಾಗಿರುತ್ತದೆ.

Tuesday, 2 June 2015

ಗೆಲುವು ಆಕಸ್ಮಿಕವಾಗುವ ಬದಲು ಚಟವಾಗಲಿ!

ನೀವು ಯಾವುದೇ ಹೊಸ ಸಾಹಸಕ್ಕೆ ಅಣಿಯಾಗಿ, ನಿಮ್ಮ ಸ್ನೇಹಿತರ ಮುಂದೋ, ಸಂಬಂಧಿಕರ ಮುಂದೋ ನಿಮ್ಮ ಕನಸಿನ ಯೋಜನೆಯನ್ನು ಹಂಚಿಕೊಳ್ಳಿ. ಯಾರೂ ಅದನ್ನು ಪ್ರೋತ್ಸಾಹಿಸುವುದಿಲ್ಲ.  ‘ಎಲ್ಲಾ ಬಿಟ್ಟ ಬಂಗಿ ನೆಟ್ಟ ಅನ್ನೋ ಹಾಗೆ ಆಯ್ತಲ್ಲಾ? ನಿನ್ನ ಪಾಡಿಗೆ ನೀನು ಸುಮ್ಮನಿರಬಾರದಾ? ಅಂಥ ಸಾಹಸ ಮಾಡಿ ಯಾರೂ ಉದ್ಧಾರ ಆಗಿಲ್ಲ.’ ಅಂತಾನೇ ಎಲ್ಲರೂ ಹೇಳೋದು. ‘ಇದು ಗ್ರೇಟ್ ಐಡಿಯಾ, ಮುನ್ನುಗ್ಗು’ ಅಂತ ಯಾರೂ ಹೇಳುವುದಿಲ್ಲ.
ಇನ್ನು ಕೆಲವರು ಹೊಸ ಸಾಹಸಕ್ಕೇನೋ ಅಣಿಯಾಗುತ್ತಾರೆ. ಆದರೆ ಬೇರೆಯವರು ನಡೆದ ಹಾದಿಯಲ್ಲೇ ನಡೆಯುತ್ತಾರೆ. ಹೊಸ ಮಾರ್ಗ ಅರಸಲು, ಎಲ್ಲರೂ ತುಳಿದ ಹಾದಿ ಬಿಟ್ಟು ತಮ್ಮದೇ ದಾರಿ ನಿರ್ಮಿಸಲು ಬಯಸುವುದಿಲ್ಲ. ಅಂದರೆ ಹೊಸತಾಗಿ ಏನನ್ನೂ ಯೋಚಿಸುವುದಿಲ್ಲ. ಎಲ್ಲರೂ ದರ್ಶಿನಿ ಆರಂಭಿಸಿದರೆ ಇವರೂ ದರ್ಶಿನಿಯನ್ನೇ ತೆರೆಯುತ್ತಾರೆ. ಎಲ್ಲರೂ ಮಾಲ್ ಅನ್ನು ಕಟ್ಟಿದರೆ ಇವರೂ ಅದನ್ನೇ ಕಟ್ಟುತ್ತಾರೆ. ಯಾರೋ ಒಂದು ರೀತಿಯ ಸಿನಿಮಾ ನಿರ್ಮಿಸಿದರೆ ಇವರೂ ಅಂಥದೇ ಸಿನಿಮಾ ನಿರ್ಮಿಸುತ್ತಾರೆ. ಈ ಮಾತನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಬಹುದು. ಹೊಸತಾಗಿ ಯೋಚಿಸುವವರು ಮಾತ್ರ ಅಚ್ಚರಿ, ಸೋಜಿಗವನ್ನುಂಟು ಮಾಡಲು ಸಾಧ್ಯ. ಹೊಸ ದಾರಿ ಅರಸುವವರು ಹೊಸ ನೋಟವನ್ನು, ಹೊಸ ಊರನ್ನು ಕಾಣಲು ಸಾಧ್ಯ.
ಇದನ್ನು ಮಾಡದವರು ಜೀವನದಲ್ಲಿ ನಕಲು ಮಾಡುತ್ತಾರೆ, ಕಾಪಿ-ಪೇಸ್ಟ್ ಮಾಡುತ್ತಾರೆ, ಬೇರೆಯವರು ಹೋದ ದಾರಿಯಲ್ಲಿಯೇ ನಡೆಯುತ್ತಾರೆ. ಇಂಥವರು ಇದ್ದದ್ದನ್ನು ಮುನ್ನಡೆಸಿಕೊಂಡು ಹೋಗಬಲ್ಲರು. ಆದರೆ ಹೊಸತೇನನ್ನೂ ಸೃಷ್ಟಿಸಲಾರರು.
ಇನ್ನೊಂದು ರೀತಿ ಯೋಚನೆ ಮಾಡುವ ಮಂದಿಯಿರುತ್ತಾರೆ, ಅವರು ಸ್ಥಾಪಿತ ಯೋಚನೆಯಾಚೆ ತಮ್ಮನ್ನು ವಿಸ್ತರಿಸಿಕೊಳ್ಳಲು ಬಯಸುವುದಿಲ್ಲ. ‘ಮನುಷ್ಯನಿಗೆ ವಿಶ್ರಾಂತಿ ಅಗತ್ಯ, ಆದರೆ ನಿದ್ದೆಯ ಅಗತ್ಯ ಇಲ್ಲ’ ಅಂತ ಹೇಳಿ ಅವರು ‘ಇಲ್ಲ, ಇಲ್ಲ, ಮನುಷ್ಯನಿಗೆ ಕನಿಷ್ಠ ಎಂಟು ಗಂಟೆ ನಿದ್ದೆ ಬೇಕೇ ಬೇಕು’ ಅಂತ ವಾದಿಸುತ್ತಾರೆ. ಈ ವಿಷಯದಲ್ಲಿ ಅವರ ನಿಲುವನ್ನು ಬದಲಿಸಲು ಸಾಧ್ಯವೇ ಇಲ್ಲ. ಇವರು ಮಾತ್ರ ತಮ್ಮ ಅಭಿಪ್ರಾಯವನ್ನು ಬದಲಿಸಲಾರರು.
ಆದರೆ ಈ ಜಗತ್ತಿನಲ್ಲಿ ಸ್ಥಾಪಿತ ಅಭಿಪ್ರಾಯಕ್ಕೆ ಸವಾಲನ್ನು ಎಸೆದವರೇ ಸಾಧನೆಯ ಶಿಖರಕ್ಕೇರಿದವರು. ಅದು ಅರಿಸ್ಟಾಟಲ್ ಇರಬಹುದು, ನ್ಯೂಟನ್ ಇರಬಹುದು, ಕೋಪರ್್ನಿಕಸ್ ಇರಬಹುದು ಅಥವಾ ಸ್ಟೀವ್ ಜಾಬ್ಸ್ ಇರಬಹುದು, ಎಲ್ಲರೂ ಈ ಸಾಲಿಗೆ ಸೇರಿದವರೇ. ಭಿನ್ನವಾಗಿ ಯೋಚಿಸಿದವರೇ. ಅಪ್ಪ ನೆಟ್ಟ ಆಲದಮರಕ್ಕೆ ಜೋತುಬಿದ್ದಿದ್ದರೆ ಇವರು ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ. ಇವರೆಲ್ಲ ಜೀವನದಲ್ಲಿ ರಿಸ್ಕ್ ತೆಗೆದುಕೊಂಡವರೇ. ಅಂಥ ರಿಸ್ಕ್ ತೆಗೆದುಕೊಳ್ಳದಿದ್ದರೆ ನಾವು ಇವರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ.
ವಿ.ಅರ್.ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರ ಬಗ್ಗೆ ಹೇಳಬೇಕು. ಕಾಲೇಜ್ ವಿದ್ಯಾಭ್ಯಾಸ ಮುಗಿದ ಬಳಿಕ ಅವರು ತಮ್ಮ ತಂದೆಯವರ ಪ್ರಿಂಟಿಂಗ್ ಪ್ರೆಸ್್ನಲ್ಲಿ ಪ್ರೂಫ್ ರೀಡರ್ ಆಗಿ ಸೇರಿಕೊಂಡರು. ಇವರ ತಂದೆಯವರಾದ ಬಸವೆಣ್ಣಪ್ಪ ಸಂಕೇಶ್ವರರು ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಪ್ರಕಾಶಿಸಿದ ಭಾರಧ್ವಜ್ ಡಿಕ್ಷನರಿ ಇಲ್ಲದ ಕನ್ನಡ ಮನೆಗಳಿರಲಿಕ್ಕಿಲ್ಲ. ಅಲ್ಲಿ ವಿಜಯ ಸಂಕೇಶ್ವರರು ತಂದೆಯವರಿಗೆ ಸಹಾಯಕರಾಗಿ ಮತ್ತು ಕರಡು ತಿದ್ದುವವರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಪ್ರಾಯಶಃ ಅವರು ತಂದೆಯವರ ವೃತ್ತಿಯಲ್ಲಿ ಮುಂದುವರಿದಿದ್ದರೆ ಹೆಚ್ಚೆಂದರೆ ಒಬ್ಬ ಪ್ರಕಾಶಕರಾಗುತ್ತಿದ್ದರೇನೋ.
ಒಂದು ದಿನ ಅವರಿಗೆ ಅನಿಸಿತು. ತಾನು ಸ್ವಂತವಾಗಿ ಏನಾದರೂ ಸಾಧಿಸಬೇಕು, ತಂದೆಯವರ ನೆರಳನ್ನು ಬಿಟ್ಟು ಭಿನ್ನವಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು. ಒಂದು ದಿನ ಏಕಾಏಕಿ ತಂದೆಯವರ ಪ್ರೆಸ್ಸನ್ನು ಬಿಟ್ಟು, ಸಾಲ ಮಾಡಿ ಒಂದು ಸೆಕೆಂಡ್ ಹ್ಯಾಂಡ್ ಟ್ರಕ್ಕನ್ನು ಖರೀದಿಸಿದರು. ಅದಕ್ಕೆ ಅವರೇ ಮಾಲೀಕರು ಮತ್ತು ಅವರೇ ಚಾಲಕರು! ‘ನಿನಗೆ ಟ್ರಕ್ ದಂಧೆಯಲ್ಲಿ ಏನು ಅನುಭವವಿದೆ? ಅದು ನಮ್ಮಂಥವರು ಮಾಡುವ ದಂಧೆಯಾ? ಇದೆಲ್ಲ ನಿನ್ನ ಕೈಹಿಡಿಯುವಂಥದ್ದಲ್ಲ. ಸುಮ್ಮನೆ ಕೈ ಸುಟ್ಟುಕೊಳ್ಳಬೇಡ.’ ಎಂದು ಅವರ ತಂದೆ ಪರಿಪರಿಯಾಗಿ ಹೇಳಿದರು. ಮನೆಯಲ್ಲಿದ್ದವರ್ಯಾರೂ ಅವರ ಈ ಹೊಸ ಮತ್ತು ಹುಚ್ಚು ಸಾಹಸವನ್ನು ಹುರಿದುಂಬಿಸಲಿಲ್ಲ.
ಆದರೆ ವಿಜಯ ಸಂಕೇಶ್ವರ ಅವರು ಕೇಳಲಿಲ್ಲ. ಕುಟುಂಬದಲ್ಲಿ ಯಾರೂ ಮಾಡದಿದ್ದರೇನಂತೆ, ನಾನು ಮಾಡುತ್ತೇನೆ ಎಂಬ ಛಲ ಮತ್ತು ಹಠದಿಂದ ಟ್ರಾನ್ಸ್್ಪೋರ್ಟ್ ದಂಧೆಯನ್ನು ಆರಂಭಿಸಿದರು. ಒಂದಿದ್ದ ಟ್ರಕ್ಕು ಎರಡಾಯಿತು, ಎರಡಿದ್ದಿದ್ದು ನಾಲ್ಕಾಯಿತು. ನಾಲ್ಕಿದ್ದದ್ದು ಹತ್ತಾಯಿತು. ಹತ್ತು ಇದ್ದಿದ್ದು ನೂರಾಯಿತು. ಇಂದು ಅವರು ಹತ್ತಿರ ಹತ್ತಿರ ನಾಲ್ಕು ಸಾವಿರ ಟ್ರಕ್ಕು ಮತ್ತು ಐನೂರಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದ್ದಾರೆ. ದೇಶದ ಹದಿನೆಂಟು ರಾಜ್ಯಗಳಲ್ಲಿ ತಮ್ಮ ವ್ಯಾಪಾರ-ವಹಿವಾಟು ಜಾಲವನ್ನು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಖಾಸಗಿ ವಲಯದಲ್ಲಿ ಅತಿ ಹೆಚ್ಚು ವಾಹನಗಳನ್ನು ಹೊಂದಿದವರಲ್ಲಿ ಅಗ್ರಗಣ್ಯರಾಗಿದ್ದಕ್ಕೆ ಲಿಮ್ಕಾ ದಾಖಲೆ ಪುಸ್ತಕ ಇವರ ಹೆಸರನ್ನು ದಾಖಲಿಸಿಕೊಂಡಿದೆ.
ಬಹುತೇಕ ಸಂದರ್ಭಗಳಲ್ಲಿ ನಾವು ನಮ್ಮ ಸುತ್ತ ಸುರಕ್ಷ ವಲಯ (Comfort Zone) ವನ್ನು ನಿರ್ಮಿಸಿಕೊಳ್ಳುತ್ತೇವೆ. ತಪ್ಪೇನಿಲ್ಲ. ಆದರೆ ಅದರಿಂದ ಹೊರಬರುವುದೇ ಇಲ್ಲ. ಆ ವಲಯದ ಐಷಾರಾಮಕ್ಕೆ ಒಗ್ಗಿಕೊಂಡುಬಿಡುತ್ತೇವೆ. ಹೀಗಾಗಿ ಹೊಸ ಸಾಹಸಕ್ಕೆ ಮುಂದಾಗುವುದಿಲ್ಲ.
ನಾನು ಇತ್ತೀಚೆಗೆ ಕ್ಲಿಫ್ ಯಂಗ್ ಎಂಬ ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯಗಾಥೆ ಕುರಿತು ಓದುತ್ತಿದ್ದೆ. ಈತ ಆಸ್ಟ್ರೇಲಿಯಾದ ಆಲೂಗಡ್ಡೆ ರೈತ. ತನ್ನ ಅರವತ್ತೊಂದನೆ ವಯಸ್ಸಿನಲ್ಲಿ ಅವನಿಗೆ ಅನಿಸಿತು. ತಾನು ಇಲ್ಲಿಯವರೆಗಿನ ಬದುಕನ್ನು ಬರೀ ಅಲೂಗಡ್ಡೆ ಬೆಳೆಯುತ್ತಾ, ಅದರಲ್ಲಿ ಸುಖ ಕಾಣುತ್ತಾ, ಅದಷ್ಟೇ ಜೀವನವೆಂದು ಭಾವಿಸಿ ತನ್ನ ಇಡೀ ಯೌವನವನ್ನು ವ್ಯರ್ಥವಾಗಿ ಕಳೆದುಬಿಟ್ಟೆನಾ ಎಂದು ಅನಿಸಲಾರಂಭಿಸಿತು. ಆತ ಆ ಕ್ಷಣವೇ ನಿರ್ಧರಿಸಿದ. ಮುಂದಿನ ದಿನಗಳನ್ನಾದರೂ ಅತ್ಯಂತ ರೋಚಕವಾಗಿ ಕಳೆಯಬೇಕೆಂದು. ಇನ್ನು ಮಾಡುವ ಸಾಧನೆಯಿಂದ ಜನ ತನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆ ರೀತಿ ನನ್ನ ಸಾಧನೆಯಿರಬೇಕು ಎಂದು ತೀರ್ಮಾನಿಸಿದ.
ಇದಕ್ಕೆ ಕ್ಲಿಫ್ ಯಂಗ್ ಆಯ್ದುಕೊಂಡಿದ್ದು ಮ್ಯಾರಥಾನ್ ಓಟದ ಸ್ಪರ್ಧೆಯನ್ನು. 1983ರಲ್ಲಿ ಆತ ತನ್ನ ಅರವತ್ತೊಂದನೆಯ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ತನಕ  875 ಕಿಮೀ ಉದ್ದದ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ! ಆ ಸ್ಪರ್ಧೆಯ ಸಂಘಟಕರು ಅವನನ್ನು ಕೇಳಿದರು – ‘ಈ ವಯಸ್ಸಿನಲ್ಲಿ ಇಂಥ ದುಸ್ಸಾಹಸವೇ? ಸಾಮಾನ್ಯವಾಗಿ ಇಪ್ಪತ್ತರಿಂದ-ಮೂವತ್ತು ವರ್ಷ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ನಿಮ್ಮ ವಯಸ್ಸನ್ನು ನೋಡಿದರೆ ನಮಗೆ ಆತಂಕವಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಏನಾದರೂ ಆದರೆ ಏನು ಗತಿ? ದಯವಿಟ್ಟು ಹಠ ಮಾಡಬೇಡಿ. ಈ ಸ್ಪರ್ಧೆ ನಿಮಗಲ್ಲ.’  ಅದಕ್ಕೆ ಕ್ಲಿಫ್ ಯಂಗ್ ಹೇಳಿದ – ‘ನಾನು ಒಬ್ಬ ಸಾಮಾನ್ಯ ರೈತ. ಜೀವನದಲ್ಲಿ ಹಿಂದೆಂದೂ ನಾನು ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಅನ್ನೋದು ನಿಜ. ಇತ್ತೀಚೆಗೆ ನನ್ನ ಕುರಿಗಳೆಲ್ಲ ಕಾಣೆಯಾಗಿದ್ದವು. ನಾನು ಮೂರು ದಿನಗಳ ಕಾಲ ನಿದ್ದೆಯನ್ನೂ ಮಾಡದೇ ಓಡುತ್ತಾ ಇದ್ದೆ. ಆಗ ನನಗೆ ಅನಿಸಿತು, ನಾನು ಈ ಓಟದಲ್ಲಿ ಭಾಗವಹಿಸಬಹುದು ಅಂತ. ಅದಕ್ಕಿಂತ ಹೆಚ್ಚಾಗಿ ನಾನು ನನ್ನ ಜೀವನವನ್ನು ವ್ಯರ್ಥವಾಗಿ ಕಳೆದಿದ್ದೇನೆಂದು ನನಗೆ ಈಗ ಅನಿಸುತ್ತಿದೆ. ಇನ್ನು ಮುಂದಿನ ಜೀವನವನ್ನು ರೋಚಕವಾಗಿ ಕಳೆಯಬೇಕೆಂಬುದು ನನ್ನ ಇರಾದೆ. ಅದಕ್ಕಾಗಿ ಈ ಹುಚ್ಚು ಸಾಹಸಕ್ಕೆ ಅಣಿಯಾಗಿದ್ದೇನೆ. ದಯವಿಟ್ಟು ಇಲ್ಲ ಅಂತ ಹೇಳಬೇಡಿ.’
ಮ್ಯಾರಥಾನ್್ನಲ್ಲಿ ಭಾಗವಹಿಸಿದವರು ಪ್ರತಿದಿನ ಹದಿನಾರು ತಾಸು ಓಡಿ, ಎಂಟು ತಾಸು ನಿದ್ದೆ ಮಾಡುತ್ತಾರೆ. ಇದೇ ಕ್ರಮವನ್ನು ಐದು ದಿನಗಳ ಕಾಲ ಅನುಸರಿಸುತ್ತಾರೆ. ಆದರೆ ಕ್ಲಿಫ್ ಯಂಗ್  ಒಂದು ಗಂಟೆ ಸಹ ಮಲಗಲೇ ಇಲ್ಲ. ಸತತ ಮೂರು ದಿನಗಳ ಕಾಲ ಓಡಿದ. ಎಲ್ಲರಿಗಿಂತ ಒಂದೂವರೆ ದಿನ ಮುಂಚೆಯೇ ಗುರಿ ತಲುಪಿದ. ಮೂವತ್ತೈದು ತಾಸುಗಳ ಅಂತರದಲ್ಲಿ ಹಿಂದಿನ ದಾಖಲೆಯನ್ನು ಮುರಿದ.
ಈತನ ಜತೆ ಓಡಿದವರೆಲ್ಲ ಕ್ಲಿಫ್ ಅನ್ನು ಲಘುವಾಗಿ ಪರಿಗಣಿಸಿದ್ದರು. ಈ ಮುದುಕ ಹೆಚ್ಚೆಂದರೆ ಎರಡು ತಾಸು ಓಡಿ ಕಾಲು ಊದಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬಹುದು ಎಂದು ಪ್ರತಿಸ್ಪರ್ಧಿಗಳು ಭಾವಿಸಿದ್ದರು. ನಿದ್ದೆಯಿಲ್ಲದೇ ಎರಡು-ಮೂರು ದಿನ ಓಡುವುದು ಸಾಧ್ಯವಿದೆ ಎಂದಾಗ ಯಾರೂ ನಂಬಿರಲಿಲ್ಲ. ಹದಿನಾರು ತಾಸು ಓಡಿದ ಬಳಿಕ ಎಂಟು ತಾಸು ಮಲಗಲೇಬೇಕು ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಕ್ಲಿಫ್ ಅವೆಲ್ಲ ನಂಬಿಕೆಗಳನ್ನು ಮುರಿದ. ಅರವತ್ತು ದಾಟಿದವರೂ ಮ್ಯಾರಥಾನ್್ನಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಿಕೊಟ್ಟ.
ಕ್ಲಿಫ್ ಬಗ್ಗೆ ಓದುವಾಗ ಆತ ಹೇಳಿದ ಒಂದು ಮಾತು – ‘ನಿಮಗೆ ಸಾಧನೆ ಮಾಡಬೇಕೆಂದೆನಿಸಿದಾಗ ಈಗ ಇರುವ ಸೂತ್ರಗಳ ಹಿಂದೆ ಹೋಗಬೇಡಿ. ನಿಮ್ಮ ಸೂತ್ರವೇನು ಎಂಬುದನ್ನು ನಿರ್ಧರಿಸಿ. ಅದೇನು ಎಂಬುದು ನಿಮಗೆ ಮಾತ್ರ ಗೊತ್ತಿರಲು ಸಾಧ್ಯ.’
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಜಾಕ್ ಕೇನ್್ಫೀಲ್ಡ್್ನ ಸಂದರ್ಶನ ಓದುತ್ತಿದ್ದೆ. ಇವನ ಹೆಸರನ್ನು ಕೇಳಿದರೆ ತಟ್ಟನೆ ಇವನ್ಯಾರೆಂದು ಗೊತ್ತಾಗಲಿಕ್ಕಿಲ್ಲ. ಆದರೆ ಈತ ಬರೆದ ಪುಸ್ತಕಗಳ ಹೆಸರನ್ನು ಹೇಳಿದರೆ, ಸಂಶಯವೇ ಇಲ್ಲ, ನಿಮಗೆ ಗೊತ್ತಾಗುತ್ತದೆ. ಅಂದ ಹಾಗೆ ಈತ ಬರೆದ ಪುಸ್ತಕದ ಹೆಸರು  chicken soup for the soul.ಇಲ್ಲಿ ತನಕ ಈ ಪುಸ್ತಕದ ಎಷ್ಟು ಪ್ರತಿಗಳು ಜಗತ್ತಿನಾದ್ಯಂತ ಎಷ್ಟು ಮಾರಾಟವಾಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಮಿಲಿಯನ್, ಬಿಲಿಯನ್ ಬಿಡಿ, ಗ್ಯಾಜಿಲಿಯನ್್ಗಳಲ್ಲಿ ಲೆಕ್ಕ ಹಾಕಬೇಕು. ಓದುಗರನ್ನು ತಟ್ಟನೆ ಆಕರ್ಷಿಸುವುದಕ್ಕೆ ಅದರ ಹೆಸರೂ ಒಂದು ಕಾರಣ. ಈ ಪುಸ್ತಕ ಬರೆದಾಗ ಅದಕ್ಕೆ ಹೆಸರೇನಿಡಬೇಕೆಂದು ಆತ ತಿಂಗಳುಗಟ್ಟಲೆ ತಲೆಕೆಡಿಸಿಕೊಂಡಿದ್ದನಂತೆ. ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಎಂಬ ಹೆಸರಿನಲ್ಲಿ ಬೇರೆ ಬೇರೆ ವಿಷಯಗಳಿಗೆ ಸೇರಿದ ಅನೇಕ ಕೃತಿಗಳು ಹೊರಬಂದಿವೆ.
ಮೊದಲ ಬಾರಿಗೆ ಈ ಪುಸ್ತಕವನ್ನು ಬರೆದಾಗ ಯಾವ ಪ್ರಕಾಶಕನೂ ಅದನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ಒಬ್ಬರು ಇಬ್ಬರಾಗಿದ್ದರೆ ಪರವಾಗಿರಲಿಲ್ಲ. ಜಾಕ್ ಸುಮಾರು 140 ಪ್ರಕಾಶಕರಿಗೆ ಹಸ್ತಪ್ರತಿಗಳನ್ನು ತೋರಿಸಿದ. ಅವರ್ಯಾರೂ ಈ ಪುಸ್ತಕದ ಬಗ್ಗೆ ಸ್ವಲ್ಪವೂ ಉತ್ಸಾಹ ತೋರಲಿಲ್ಲ. ಆದರೆ ಜಾಕ್ ಸುಮ್ಮನಾಗಲಿಲ್ಲ. ಬೇರೆಯವರಾಗಿದ್ದರೆ, ಪುಸ್ತಕದ ಹಸ್ತಪ್ರತಿಯನ್ನು ‘ತೂಕ’ಕ್ಕೆ ಹಾಕಿ ಕೈತೊಳೆದುಕೊಳ್ಳುತ್ತಿದ್ದರು. ಆದರೆ ಜಾಕ್್ಗೆ ತನ್ನ ಕೃತಿಯ ಬಗ್ಗೆ ವಿಶ್ವಾಸವಿತ್ತು. ಇಂಥದ್ದೊಂದು ಪ್ರಯತ್ನವನ್ನು ಯಾರೂ ಮಾಡಿಯೇ ಇಲ್ಲ ಎಂಬ ಬಗ್ಗೆ ಹೆಮ್ಮೆಯೂ ಇತ್ತು. ಹೀಗಾಗಿ ಆತ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ತನ್ನ ಯೋಚನೆ ಅರ್ಥವಾಗುವ ತನಕ ಈ ಸಮಸ್ಯೆ ಇದ್ದೇ ಇರುತ್ತದೆ, ಆನಂತರ ಎಲ್ಲ ಸರಿ ಹೋಗುತ್ತದೆ ಎಂದೇ ಆತ ಭಾವಿಸಿದ್ದ. ಹಾಗೇ ಆಯಿತು. ಆತನ ಎಣಿಕೆ ನಿಜವಾಗಿತ್ತು.
ಮೊದಲ ಕೃತಿಯ ಕೊನೆಯಲ್ಲಿ ಜಾಕ್ ಬರೆದಿದ್ದ- ‘ನಿಮ್ಮ ಬಳಿ ಬೇರೆಯವರೊಂದಿಗೆ ಹಂಚಿಕೊಳ್ಳುವ ಅದ್ಭುತವೆನಿಸುವ ಕತೆಗಳಿದ್ದರೆ, ಪ್ರಸಂಗಗಳಿದ್ದರೆ, ನೈಜ ಘಟನೆಗಳಿದ್ದರೆ ಅವುಗಳನ್ನೆಲ್ಲ ನಮಗೆ ಕಳಿಸಿಕೊಡಿ. ಅವನ್ನೆಲ್ಲ ಎರಡನೆ ಪುಸ್ತಕದಲ್ಲಿ ಸೇರಿಸುತ್ತೇನೆ.’
ಜಾಕ್ ಕನಸು -ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ದಿನಕ್ಕೆ 200ಕ್ಕೂ ಹೆಚ್ಚು ಕತೆಗಳು ಬರಲಾರಂಭಿಸಿದವು. ಅವುಗಳನ್ನೆಲ್ಲ ಸೇರಿಸಿ ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಹೆಸರಿನಡಿಯಲ್ಲಿ ಪ್ರಕಟಿಸಲಾರಂಭಿಸಿದ. ಇಲ್ಲಿ ತನಕ ಇದೇ ಶೀರ್ಷಿಕೆಯಡಿಯಲ್ಲಿ ಇನ್ನೂರಕ್ಕೂ ಹೆಚ್ಚು ವಿಷಯಗಳ ಕುರಿತ ಪುಸ್ತಕಗಳು ಪ್ರಕಟವಾಗಿವೆ. ಒಂದೊಂದು ಪುಸ್ತಕ ಐದು-ಹತ್ತು ಕೋಟಿ ಪ್ರತಿಗಳು ಮಾರಾಟವಾಗಿವೆ. ಇಂದು ‘ಚಿಕನ್ ಸೂಪ್…’ ಕೇಳದವರಿಲ್ಲ.
‘ಸಾಧನೆ, ಯಶಸ್ಸಿನ ಮಜಾ ಏನೆಂಬುದು ಅದರ ರುಚಿ ಹತ್ತಿಸಿಕೊಂಡವರಿಗೆ ಮಾತ್ರ ಗೊತ್ತು. ನೀವು ಏನನ್ನೂ ಸಾಧಿಸದಿದ್ದಾಗ ಸಾಲ ಕೊಡಲು ಯಾವ ಬ್ಯಾಂಕೂ ಮುಂದೆ ಬರುವುದಿಲ್ಲ. ಒಮ್ಮೆ ನೀವು ಗೆಲ್ಲುವ ಕುದುರೆ ಎಂಬುದು ಗೊತ್ತಾದರೆ, ಸಾವಿರಾರು ಮಂದಿ ಸಾಲ ಕೊಡಲು, ನಿಮ್ಮ ಮೇಲೆ ಹಣ ಹೂಡಲು ಮುಂದೆ ಬರುತ್ತಾರೆ. ಗೆಲುವು ಆಕಸ್ಮಿಕವಾಗಬಾರದು. ಅದೊಂದು ಚಟವಾಗಬೇಕು. ಅದರ ಆನಂದವೇನೆಂಬುದನ್ನು ಅನುಭವಿಸಿದವನೇ ಬಲ್ಲ’ ಅಂತಾನೆ ಜಾಕ್.
ಹೌದು, ಗೆಲುವಿನಂಥ ಚಟ ಇನ್ನೊಂದಿಲ್ಲ. ಈ ‘ದುರಭ್ಯಾಸ’ವನ್ನು ರೂಢಿಸಿಕೊಳ್ಳಬೇಕು!

Monday, 1 June 2015

ಎಲ್ಲ ಸಮಸ್ಯೆಗಳಿಗೂ ಪರಿಹಾರದ ಪಾಠ ಹೇಳುತ್ತದೆ ಪ್ರಕೃತಿ!

Go back to nature!
ಹಾಗಂತ ಹೇಳಿದವನು ಆಪಲ್ ಕಂಪ್ಯೂಟರ್ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್. ಸ್ಟೀವ್ ಜಾಬ್ಸ್‌ಗೆ ಬ್ಲಾಗರ್‌ನೊಬ್ಬ ‘ಜಗತ್ತಿನೆಲ್ಲೆಡೆ ನಿಮ್ಮ ಕಂಪನಿಯ ಕಂಪ್ಯೂಟರ್, ಐಫೋನ್, ಐಪಾಡ್, ಐಪಾಡ್ ಟಚ್ ಮುಂತಾದ ಉಪಕರಣಗಳೆಲ್ಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಇವೆಲ್ಲವುಗಳನ್ನು ತಯಾರಿಸುವುದರಿಂದ ಪ್ರಕೃತಿ ಮೇಲೆ ಎಂಥ ಪರಿಣಾಮವಾಗಬಹುದು? ಈ ಉಪಕರಣಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಎಷ್ಟು ಕರೆಂಟು ಬೇಕು? ಪರಿಸರದ ಮೇಲೆ ನೀವು ಎಂಥ ಆಕ್ರಮಣ ಮಾಡುತ್ತಿದ್ದೀರಿ ಎಂಬುದರ ಕಲ್ಪನೆ ನಿಮಗಿದೆಯಾ?’ ಎಂದು ಕೇಳಿದ್ದಕ್ಕೆ ಆತ ಸರಳವಾಗಿ, ನಿರುದ್ವಿಗ್ನನಾಗಿ ಹೇಳಿದ್ದು: Please go back to nature. And nature will find solutions”. ಪ್ರಾಯಶಃ ಇದಕ್ಕಿಂತ ಚುಟುಕಾದ, ಸಮರ್ಪಕ ಉತ್ತರ ಇದ್ದಿರಲಾರದು.
‘ನಮ್ಮ ಎಲ್ಲ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಉತ್ತರವಿದೆ’. ಹಾಗೆಂದು ಕಾಲಕಾಲಕ್ಕೆ ತತ್ತ್ವಜ್ಞಾನಿಗಳು, ದಾರ್ಶನಿಕರು, ಸಾಧು-ಸಂತರು, ಆರ್ಥಿಕ ತಜ್ಞರು, ತಂತ್ರಜ್ಞಾನಿಗಳು, ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಓಶೋ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ‘ನೀವು ಹೊಸದೇನನ್ನೂ ಆವಿಷ್ಕಾರ ಮಾಡಬೇಕಿಲ್ಲ. ಎಲ್ಲವೂ ಪ್ರಕೃತಿಯಲ್ಲಿಯೇ ಇದೆ. ನೀವೇನಾದರೂ ಮಾಡಬಹುದಾದ್ದು ಇದ್ದರೆ ಅದನ್ನು ನಕಲು ಮಾಡುವುದು ಅಷ್ಟೇ’ ಎಂದಿದ್ದು ಗೊತ್ತಿರಬಹುದು. ಟಾಟಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಆರ್. ಗೋಪಾಲಕೃಷ್ಣ ತಮ್ಮ The Case of the Bonsai Manager ಪುಸ್ತಕದಲ್ಲೂ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪ್ರಕೃತಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪ್ರಾಯಶಃ ಸ್ಟೀವ್ ಜಾಬ್ಸ್ ಹೇಳಿದ್ದು ಸಹ ಇದೇ ಅರ್ಥದಲ್ಲಿರಬೇಕು. ಪ್ರತಿಯೊಂದು ಸಮಸ್ಯೆಗೂ ಪ್ರಕೃತಿಯಲ್ಲಿ ಮದ್ದಿದೆ, ಉಪಾಯವಿದೆ. ನಮಗೆ ಜೀವನ ಅರ್ಥವಾಗಿಲ್ಲ ಅಂದ್ರೆ ಪ್ರಕೃತಿ ಅರ್ಥವಾಗಿಲ್ಲ, ಅರ್ಥ ಮಾಡಿಕೊಂಡಿಲ್ಲ ಎಂದರ್ಥ. ಅದೆಂಥ ಅಬ್ಬರ, ಉಬ್ಬರವೇ ಇರಬಹುದು, ಅದನ್ನು ಒಂದು ಹದಕ್ಕೆ, ಪಾತಳಿಗೆ ತರುವುದು ಹೇಗೆಂಬುದು ಪ್ರಕೃತಿಗೆ ಗೊತ್ತು. ಹೀಗಾಗಿ ಅದೆಂಥ ಸ್ಥಿತ್ಯಂತರಗಳಾಗಲಿ, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಪ್ರಕೃತಿ ಮುಸುಕೆಳೆದುಕೊಂಡು ತನ್ನ ಕೆಲಸ ಮಾಡುತ್ತಿರುತ್ತದೆ.
ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ‘ಪ್ರಕೃತಿ ಪಾಠ’ ಮಾಡುತ್ತಿರುವುದರ ಕುರಿತಾದ ಚಿತ್ರವದು. ಪಾಠ ಮಾಡುತ್ತಿದ್ದ ಮೇಷ್ಟ್ರು ಹೇಳುತ್ತಿದ್ದರು-’ನೀವು ಕೆಲಸ ಮಾಡುವ ಕಂಪನಿ ಅದೆಷ್ಟೇ ದೊಡ್ಡದಾಗಿರಬಹುದು, ಚಿಕ್ಕದಾಗಿರಬಹುದು, ಬಹುರಾಷ್ಟ್ರೀಯ ಕಂಪನಿಯೇ ಆಗಿರಬಹುದು. ಅದೆಂಥ ಬಿಕ್ಕಟ್ಟಿನ ಪ್ರಸಂಗವೇ ಎದುರಾಗಲೀ, ಪ್ರಕೃತಿ ಆ ಸ್ಥಿತಿಯಲ್ಲಿ ಇದ್ದರೆ ಹೇಗೆrespond ಮಾಡಬಹುದು ಎಂಬುದನ್ನು ಯೋಚಿಸಿ.
ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿ, ಜಲಚರ, ಕೋಟ್ಯಂತರ ಕ್ರಿಮಿ, ಕೀಟ, ಜಂತು ಹಾಗೂ ಸಸ್ಯರಾಶಿಗಳು ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮಷ್ಟಕ್ಕೆ ತಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತವೆ. ಅವುಗಳ ರಕ್ಷಣೆ, ಸಹಾಯಕ್ಕೆ ಯಾರೂ ಮುಂದಾಗುವುದಿಲ್ಲ. ಪ್ರಕೃತಿಯಲ್ಲಿಯೇ ಅವು ತಮ್ಮ ಸಮಸ್ಯೆಗಳಿಗೆ, ಅಂದರೆ ಮ್ಯಾನೇಜ್‌ಮೆಂಟ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪ್ರಾಣಿ-ಪಕ್ಷಿಗಳಿಂದ, ಸುತ್ತಲಿನ ಪರಿಸರದಿಂದ ಕಲಿಯುವಂಥದ್ದು ಬಹಳಷ್ಟಿರುತ್ತವೆ.’
ಬಹುರಾಷ್ಟ್ರೀಯ ಕಂಪನಿಯೊಂದು ನೌಕರರಿಗೆ ಎಲ್ಲ ರೀತಿಯ ಸೌಲಭ್ಯ-ಸುವಿಧಾಗಳನ್ನು ನೀಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅವರು ದುಡಿಯುತ್ತಿರಲಿಲ್ಲ. ಬಹುತೇಕ ಕೆಲಸಗಾರರಿಗೆ ಯಾರ ಹೆದರಿಕೆಯೂ ಇರದಿರುವುದೇ ಇದಕ್ಕೆ ಕಾರಣವೆಂದು ತಿಳಿಯಿತು. ಹೊಸದಾಗಿ ಬಂದ ಬಾಸ್ಗೆ ಈ ಸಮಸ್ಯೆ ಬಗೆಹರಿಸಲು ಪ್ರೇರಣೆ ನೀಡಿದ್ದು ಒಂದು ಮೀನಿನ ಪ್ರಸಂಗ.

ಜಪಾನಿಯರಿಗೆ ಮೀನು ಅಂದ್ರೆ ಪಂಚಪ್ರಾಣ. ಅದರಲ್ಲೂ ಅವರಿಗೆ ಮೀನು ಬಹಳ ಫ್ರೆಶ್ ಆಗಿರಬೇಕು. ಒಮ್ಮೆ ಎಂಥ ಸ್ಥಿತಿ ಬಂತೆಂದರೆ ಜಪಾನಿನ ಸುತ್ತಮುತ್ತ ಮೀನುಗಳೇ ಇಲ್ಲವಾದವು. ಸಮುದ್ರತೀರದಿಂದ 400-500 ಕಿಮೀ ದೂರ ಕ್ರಮಿಸಿದರೆ ಮಾತ್ರ ಮೀನುಗಳು ಬಲೆಗೆ ಬೀಳುತ್ತಿದ್ದವು. ಮೀನು ಹಿಡಿಯಲು ದೂರದೂರ ಸಾಗಿದಂತೆ, ಅದನ್ನು ತರಲು ಹೆಚ್ಚು ಸಮಯ ತಗುಲುತ್ತಿತ್ತು. ಇದರಿಂದ ಮೀನುಗಳು ಫ್ರೆಶ್ ಆಗಿ ಇರುತ್ತಿರಲಿಲ್ಲ. ಕೆಲವೊಮ್ಮೆ ಬೋಟ್, ಹಡಗು ವಾಪಸ್ ಬರಲು ನಾಲ್ಕೈದು ದಿನಗಳಾಗುತ್ತಿದ್ದವು. ಹೀಗೆ ಹಿಡಿದು ತಂದ ಮೀನುಗಳನ್ನು ಜಪಾನಿಯರು ಇಷ್ಟಪಡುತ್ತಿರಲಿಲ್ಲ.
ಈ ಸಮಸ್ಯೆಯನ್ನು ಬಗೆಹರಿಸಲು ಫಿಶಿಂಗ್ ಕಂಪನಿಗಳು ಬೋಟಿನಲ್ಲಿಯೇ ಬೃಹತ್ ಫ್ರೀಜರ್ (ಶೈತ್ಯಾಗಾರ) ಅಳವಡಿಸಲು ನಿರ್ಧರಿಸಿದವು. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿಡಲಾರಂಭಿಸಿದವು. ಜಪಾನಿಯರು ಅದೆಂಥ ಶಾಣ್ಯಾರೆಂದರೆ ಅವರಿಗೆ ಗೊತ್ತಾಗಿಬಿಡುತ್ತಿತ್ತು ಈ ಮೀನು ಫ್ರೆಶ್ ಅಲ್ಲವೆಂದು. ಫ್ರೆಶ್ ಫಿಶ್‌ಗೂ ಫ್ರೋಜನ್ ಫಿಶ್‌ಗೂ ನಡುವಿನ ವ್ಯತ್ಯಾಸವನ್ನು ತಕ್ಷಣ ಪತ್ತೆ ಮಾಡುತ್ತಿದ್ದರು. ಹೀಗಾಗಿ ಫ್ರೋಜನ್ ಫಿಶ್‌ಗೆ ಬೇಡಿಕೆ ಇಲ್ಲದಂತಾಯಿತು.
ಇದಕ್ಕೆ ಪರಿಹಾರ ಕಂಡುಕೊಳ್ಳಲು ಫಿಶಿಂಗ್ ಕಂಪನಿಗಳು ಹಡಗುಗಳಲ್ಲಿಯೇ ದೊಡ್ಡ ಫಿಶ್ ಟ್ಯಾಂಕ್‌ಗಳನ್ನು ನಿರ್ಮಿಸಲು ನಿರ್ಧರಿಸಿದವು. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ತಟ್ಟನೆ ಟ್ಯಾಂಕಿನಲ್ಲಿ ಹಾಕುತ್ತಿದ್ದವು. ಆ ಮೀನುಗಳನ್ನು ದಡಕ್ಕೆ ತಂದು, ಫ್ರೆಶ್ ಪಿಶ್ ಎಂದು ಮಾರಾಟ ಮಾಡಲು ಆರಂಭಿಸಿದವು.
ಇಲ್ಲಿಗೆ ಈ ಸಮಸ್ಯೆ ಮುಗಿಯಬೇಕಿತ್ತು ತಾನೆ. ಆದರೆ ಹಾಗೆ ಆಗಲಿಲ್ಲ. ಸಮುದ್ರದಲ್ಲಿ ಹಿಡಿದ ಮೀನುಗಳನ್ನು ಹಡಗಿನಲ್ಲಿನ ಟ್ಯಾಂಕಿನೊಳಗೆ ಹಾಕುತ್ತಿದ್ದಂತೆ, ಅವುಗಳಿಗೆ ಒಳ್ಳೆಯ ಆಹಾರ ಪೂರೈಸುತ್ತಿದ್ದಂತೆ, ಅವು ತಿಂದುಂಡು ಆಲಸಿಗಳಾದವು. ತಿರುಗಾಟ ಕಡಿಮೆ ಮಾಡಿದವು. ಇದ್ದಕ್ಕಿದ್ದಂತೆ ಡಲ್ ಆದವು. ಜೀವವಿದೆಯೆಂಬುದನ್ನು ಬಿಟ್ಟರೆ ಅವುಗಳಲ್ಲಿ ಯಾವುದೇ ಲವಲವಿಕೆ ಕಾಣುತ್ತಿರಲಿಲ್ಲ.
ವಿಚಿತ್ರವೆಂದರೆ ಜಪಾನಿಯರು ಈ ಹಡಗಿನ ಟ್ಯಾಂಕಿನಲ್ಲಿ ಹಿಡಿದು ತಂದ ಮೀನುಗಳಲ್ಲೂ ತುಸು ವ್ಯತ್ಯಾಸ ಕಾಣಲಾರಂಭಿಸಿದರು. ಅವರು ಫ್ರೆಶ್ ಫಿಶ್ ಅನ್ನು ಬಯಸಿದರೇ ಹೊರತು ಈ ಸೊರಗಿದ ಮೀನುಗಳಲ್ಲ! ಹಾಗೆಂದು ಈ ಸಮಸ್ಯೆಗೆ ಒಂದು ಉಪಾಯವನ್ನು ಹುಡುಕಲೇಬೇಕಿತ್ತು. ಕಾರಣ ಈ ಮತ್ಸ್ಯೋದ್ಯಮದಲ್ಲಿ ಸಾವಿರಾರು ಕೋಟಿ ರು. ವಹಿವಾಟಿತ್ತು. ಫಿಶ್ ಮಾರಾಟದಲ್ಲಿ ಭಾರಿ ಪೈಪೋಟಿಯಿತ್ತು.
ಹಡಗಿನ ಫಿಶ್ ಟ್ಯಾಂಕಿನಲ್ಲಿ ಒಂದು ಪುಟ್ಟ ಶಾರ್ಕ್ ಬಿಟ್ಟರೆ ಹೇಗೆ? ಯಾರಿಗೋ ಈ ಐಡಿಯಾ ಹೊಳೆಯಿತು. ಶಾರ್ಕ್ ಕೆಲವು ಮೀನುಗಳನ್ನು ತಿಂದುಹಾಕಬಹುದು. ಆದರೆ ಮೀನುಗಳಿಗೆ ಆಲಸಿಯಾಗಿ, ಜಡವಾಗಲು ಬಿಡುವುದಿಲ್ಲ. ಇದರಿಂದ ಟ್ಯಾಂಕಿನಲ್ಲಿರುವ ಮೀನುಗಳು ಕ್ರಿಯಾಶೀಲವಾದುವಲ್ಲದೇ, ಸಮುದ್ರದಲ್ಲಿರುವ ಮೀನುಗಳಿಗೂ ಇವುಗಳಿಗೂ ವ್ಯತ್ಯಾಸವಿಲ್ಲದಂತಾದವು. ಇದರಿಂದ ಜಪಾನಿಯರಿಗೆ ಎಂದಿನಂತೆ ಫ್ರೆಶ್ ಫಿಶ್‌ಗಳು ಸಿಗಲಾರಂಭಿಸಿದವು. ಪ್ರಕೃತಿಯಲ್ಲಿನ ಪರಿಹಾರವೇ ಸಮಸ್ಯೆಗೆ ಉತ್ತರವಾಗಿತ್ತು. ಯಾವುದೇ ಕಂಪನಿಯಲ್ಲಿ, ಸಂಸ್ಥೆಯಲ್ಲಿ ಮೇಲೊಬ್ಬರು ಬಡಿಗೆ, ಬೆತ್ತ ಹಿಡಿದು ಕೊಂಡವರು ಇಲ್ಲದಿದ್ದರೆ ಆಲಸ್ಯ ಮನೆಮಾಡುತ್ತದೆ.
2004 ಅಕ್ಟೋಬರ್ 25ರ ‘ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಥಾಯ್ಲೆಂಡ್‌ನಿಂದ ಚೀನಾಕ್ಕೆ ಮೊಸಳೆಗಳನ್ನು ಆಮದು ಮಾಡಿಕೊಂಡ ಕುರಿತ ವರದಿಯದು. ಚೀನಾದಲ್ಲಿ ಮೊಸಳೆ ಮಾಂಸಕ್ಕೆ ಅಪಾರ ಬೇಡಿಕೆ. ಆದರೆ ಅದು ಎಲ್ಲೆಡೆ ಸಿಗುತ್ತಿರಲಿಲ್ಲ. ಮೊಸಳೆ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಚೀನಾ ಸರಕಾರ ಸ್ವತಃ ತಾನೇ ಮೊಸಳೆಗಳನ್ನು ಸಾಕಲು ನಿರ್ಧರಿಸಿತು. 1997-98ರಲ್ಲಿ ಚೀನಾ ಸರಕಾರ ಸುಮಾರು 40 ಸಾವಿರ ಮೊಸಳೆಗಳನ್ನು ಥಾಯ್ಲೆಂಡ್‌ನಿಂದ ತರಿಸಿಕೊಂಡಿತು. ಗುವಾಂಗ್ಜುವಾ ಪ್ರದೇಶದಲ್ಲಿ ಕ್ರೋಕೊ ಪಾರ್ಕ್ (ಮೊಸಳೆ ಉದ್ಯಾನ) ಸ್ಥಾಪಿಸಿತು. ಐದು ಬೋಯಿಂಗ್ 747 ಕಾರ್ಗೋ ವಿಮಾನದಲ್ಲಿ ಮೊಸಳೆಗಳು ಚೀನಾಕ್ಕೆ ಬಂದವು. ಚೀನಾದ ದೃಷ್ಟಿಯಿಂದ ಇದೊಂದು ಲಾಭದಾಯಕ ಡೀಲ್ ಆಗಿತ್ತು.
ಚೀನಾದ ಈ ಕ್ರಮದಿಂದ ಮೊಸಳೆ ಉದ್ಯಮದಲ್ಲಿ ಕ್ರಾಂತಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಗುವಾಂಗ್ಜುವಾ ಪ್ರಾಂತದ ರಸ್ತೆ, ಸೇತುವೆ, ಕಟ್ಟಡಗಳು ಅಭಿವೃದ್ಧಿಗೊಂಡವು. ಮೂಲಸೌಕರ್ಯಗಳು ಸುಧಾರಿಸಿದವು. ಮೊಸಳೆ ಮಾಂಸ, ಚರ್ಮಕ್ಕೆ ಬೇಡಿಕೆ ಬರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಮೊಸಳೆಗಳ ಬಗ್ಗೆ ಎಲ್ಲಿಲ್ಲದ ಮೋಹ ತಾಳಿದ ಚೀನಾದವರು ಅವುಗಳಿಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ನೀಡಿ, ದಷ್ಟಪುಷ್ಟಗೊಳಿಸಿದರು.
ಥಾಯ್ಲೆಂಡ್‌ನ ಮೊಸಳೆಗಳಿಗೆ ಚೀನಾದಲ್ಲಿ ತಿನ್ನುವುದನ್ನು ಬಿಟ್ಟರೆ ಬೇರೆ ಕೆಲಸಗಳೇ ಇರಲಿಲ್ಲ. ಈ ಮೊಸಳೆಗಳಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕೂ ಪುರುಸೊತ್ತು ಸಿಗದಷ್ಟು ಆಹಾರಗಳ ಪೂರೈಕೆಯಾಗುತ್ತಿತ್ತು. ಇದರ ಪರಿಣಾಮವಾಗಿ ಆ ಮೊಸಳೆಗಳು ವಿಚಿತ್ರವಾಗಿ ಕೊಬ್ಬಿ ಬೆಳೆದವು. ಲೈಂಗಿಕ ಆಸಕ್ತಿ ಕುಂದಲು ಇದೂ ಕಾರಣವಾಯಿತು. ಚೀನಾದ ಹವಾಮಾನ ಹೇಗಿತ್ತೆಂದರೆ ಎಷ್ಟು ತಿಂದರೂ ಬೇಕೆನಿಸುತ್ತಿತ್ತು. ಇದು ಥಾಯ್ಲೆಂಡ್‌ಗೆ ಹೋಲಿಸಿದರೆ ವ್ಯತಿರಿಕ್ತವಾಗಿತ್ತು. ಕೇವಲ ಏಳು ವರ್ಷಗಳಲ್ಲಿ ಮೊಸಳೆಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಯಿತು. ನಿರೀಕ್ಷಿಸಿದ ಮಟ್ಟಕ್ಕೆ ಸಂತಾನೋತ್ಪತ್ತಿ ಆಗಲಿಲ್ಲ. ಚೀನಾದ ಮೊಸಳೆ ಕನಸು ಈಡೇರಲೇ ಇಲ್ಲ. ಯಾವುದೇ ಕಂಪನಿಯಿರಬಹುದು ಅಲ್ಲಿನ ಸಿಬ್ಬಂದಿಯನ್ನು ಚೀನಾದ ಮೊಸಳೆ ಗಳಂತೆ ಠಛಟಠಜ್ಠ ಮಾಡಿದರೆ ಪರಿಣಾಮ ಹೀಗೇ ಆಗುತ್ತದೆ!
ಯಾವುದೇ ಸಂಸ್ಥೆಯಿರಬಹುದು, ಬಹುರಾಷ್ಟ್ರೀಯ ಕಂಪನಿಯಿರಬಹುದು, ಅಲ್ಲಿ ಕೆಲವೇ ಕೆಲವು ಜನರು ಐಡಿಯಾಕ್ಕೆ ಕಾವು ಕೊಡುತ್ತಾರೆ. ಹೊಸ ಯೋಜನೆ, ಯೋಚನೆಯನ್ನು ಹುಟ್ಟುಹಾಕುತ್ತಾರೆ. ಅದನ್ನು ತಮ್ಮ ಸಹೋದ್ಯೋಗಿಗಳ ಜತೆಗೆ ಹಂಚಿಕೊಳ್ಳುತ್ತಾರೆ ಹಾಗೂ ಅನಂತರ ಉಳಿದವರೆಲ್ಲರೂ ಅದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಾರೆ. ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕ ಹಾಗೆ ಸವಾಲುಗಳನ್ನು ಎದುರಿಸುತ್ತಾ ಮುನ್ನಡೆಯುತ್ತಾರೆ. ಇದು ಎಲ್ಲೆಡೆ ಇರುವ ಸಾಮಾನ್ಯ ನಿಯಮ ತಾನೆ. ಈ ಅಂಶವನ್ನು ಪ್ರಕೃತಿ ಯಲ್ಲಿರುವ ಪಕ್ಷಿಗಳು ಎಷ್ಟೊಂದು ಸೊಗಸಾಗಿ ಮೈಗೂಡಿಸಿಕೊಂಡಿವೆಯೆಂಬುದನ್ನು ಗಮನಿಸಬಹುದು. ಇಂಗ್ಲೆಂಡ್‌ನಲ್ಲಿರುವ ರಾಬಿನ್ ಹಾಗೂ ಬ್ಲೂ ಟಿಟ್ ಪಕ್ಷಿಗಳು ಸನ್ನಿವೇಶವೊಂದನ್ನು ಹೇಗೆ ನಿಭಾಯಿಸಿದವು ಎಂಬುದು ನಮಗೆ ಪಾಠವಾಗಬೇಕು.
1900ರ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಮನೆ ಬಾಗಿಲಿಗೆ ಹಾಲನ್ನು ಬಾಟಲಿಯಲ್ಲಿ ತುಂಬಿ ಸಣ್ಣ ಟ್ರಕ್‌ಗಳ ಮೂಲಕ ತಲುಪಿಸುವ ರೂಢಿಯಿತ್ತು. ಈ ಬಾಟಲಿಗಳಿಗೆ ಕ್ಯಾಪ್ ಇರುತ್ತಿರಲಿಲ್ಲ. ಹಾಲಿನ ಕೆನೆ (ಕ್ರೀಮ್)ಬಾಟಲಿಯ ತುದಿಯಲ್ಲಿ ಶೇಖರಗೊಳ್ಳುತ್ತಿತ್ತು. ಬೆಳಗ್ಗೆ ಬೆಳಗ್ಗೆ ರಾಬಿನ್ ಹಾಗೂ ಬ್ಲೂ ಟಿಟ್ ಮನೆಯ ಮುಂದೆ ಇಟ್ಟಿರುತ್ತಿದ್ದ ಈ ಹಾಲಿನ ಬಾಟಲಿಗಳಲ್ಲಿನ ಕೆನೆಯನ್ನು ಮಾಲೀಕ ಬರುವುದಕ್ಕಿಂತ ಮೊದಲೇ ತಮ್ಮ ಕೊಕ್ಕಿನಿಂದ ಹೀರಿ ಕುಡಿಯುತ್ತಿದ್ದವು. ಉಳಿದ ಆಹಾರಕ್ಕಿಂತ ಈ ಹಾಲಿನ ಕೆನೆ ಪೌಷ್ಟಿಕವಾಗಿರುತ್ತಿದ್ದುದರಿಂದ ಈ ಹಕ್ಕಿಗಳು ದಷ್ಟಪುಷ್ಟವಾಗಿ ಬೆಳೆಯಲಾರಂಭಿಸಿದವು.
1940 ಹೊತ್ತಿಗೆ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ಪರಿಣಾಮ ಈ ಹಾಲಿನ ಬಾಟಲಿಯ ಸ್ವರೂಪ ಬದಲಾಯಿತು. ಬಾಟಲಿ ಬಾಯಿಗೆ ಅಲ್ಯುಮಿನಿಯಮ್ ಸೀಲ್ ಬಿತ್ತು. ಇದರಿಂದ ಹಾಲಿನ ಕೆನೆ ಹೀರುವುದು ಈ ಪಕ್ಷಿಗಳಿಗೆ ಅಸಾಧ್ಯವಾಯಿತು. ಅವುಗಳ ಮೇಲೆ ಇದರ ಪರಿಣಾಮ ಭಿನ್ನವಾಗಿತ್ತು.
ಕೆಲವು ತಿಂಗಳುಗಳ ಅವಧಿಯಲ್ಲಿ ಬ್ಲೂ ಟಿಟ್ ಪಕ್ಷಿಯಿದೆಯಲ್ಲಾ, ಅದು ಅಲ್ಯುಮಿನಿಯಮ್ ಸೀಲನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ತೂತು ಮಾಡಿ ಕೆನೆ ಹೀರುವ ಕಲೆಯನ್ನು ಕರಗತ ಮಾಡಿಕೊಂಡಿತು. ಇದರಿಂದ ಬ್ಲೂ ಟಿಟ್, ರಾಬಿನ್ ಪಕ್ಷಿಗಿಂತ ದೈಹಿಕವಾಗಿ ದಷ್ಟಪುಷ್ಟವಾಯಿತಲ್ಲದೇ ಬದುಕುವ ದಾರಿಯನ್ನು ರೂಢಿಸಿಕೊಂಡಿತು. ಆದರೆ ಇದು ರಾಬಿನ್‌ಗೆ ಸಾಧ್ಯವಾಗದೇ ಸೊರಗಲಾರಂಭಿಸಿತು. ಆಗೊಮ್ಮೆ ಈಗೊಮ್ಮೆ ಒಂದೊಂದು ರಾಬಿನ್ ಸೀಲು ತೂತು ಮಾಡಿ ಕೆನೆ ಹೀರುತ್ತಿತ್ತು. ಆದರೆ ಈ ಗುಟ್ಟು ಎಲ್ಲ ರಾಬಿನ್‌ಗಳಿಗೂ ಗೊತ್ತಾಗಲೇ ಇಲ್ಲ.
ಆದರೆ ಈ ಟ್ರಿಕ್ ಎಲ್ಲ ಬ್ಲೂ ಟಿಟ್‌ಗಳಿಗೆ ಗೊತ್ತಾಯಿತು, ಅದೇ ಎಲ್ಲ ರಾಬಿನ್ಗಳಿಗೆ ಗೊತ್ತಾಗಲಿಲ್ಲ, ಹೇಗೆ? ಇದಕ್ಕೆ ಕಾರಣವೇನು?
ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಅಲನ್ ವಿಲ್ಸನ್ ಎಂಬಾತ ಅತ್ಯಂತ ಕುತೂಹಲ ಹುಟ್ಟಿಸುವ ಈ ಎರಡು ಪಕ್ಷಿಗಳ ವರ್ತನೆ ಬಗ್ಗೆ ಸಂಶೋಧನೆ ಮಾಡಿದ. ಅದರಿಂದ ತಿಳಿದು ಬಂದಿದ್ದೇನೆಂದರೆ-ವಸಂತ ಕಾಲದಲ್ಲಿ ಗಂಡು -ಹೆಣ್ಣು ಬ್ಲೂಟಿಟ್ ಜತೆಜತೆಯಾಗಿ ಇರುತ್ತವೆ. ಒಂದು ಹೆಣ್ಣು ಹಕ್ಕಿಯ ಸುತ್ತ ಹತ್ತಾರು ಗಂಡುಗಳು ರೌಂಡ್ ಹೊಡೆಯುತ್ತಿರುತ್ತವೆ. ಹೆಣ್ಣು ಹಕ್ಕಿ ಹಾರಿದರೆ ಅದರ ಹಿಂದೆ ಬುರ್ರ್ ಎಂದು ಹತ್ತಾರು ಗಂಡುಗಳು ಹಾರುತ್ತವೆ. ಅಂದರೆ ಬ್ಲೂಟಿಟ್ ಎಂದಿಗೂ ಏಕಾಂಗಿಯಲ್ಲ. ಮರಿ ಹಾಕಿದರೆ ಬ್ಲೂಟಿಟ್ ಜಗತ್ತಿಗೆಲ್ಲ ಸಂಭ್ರಮ. ಅಂದರೆ ಅವು ಸಂಘ ಜೀವಿ. ಸದಾ ಹಿಂಡಿನಲ್ಲೇ ಇರುತ್ತವೆ.
ಅದೇ ರಾಬಿನ್ ಹಾಗಲ್ಲ. ಬಹಳ reserved. ಒಂದು ಹೆಣ್ಣಿನ ಸುತ್ತ ಒಂದೇ ಗಂಡು. ಮತ್ತೊಂದು ಗಂಡು ಸುಳಿಯುವಂತಿಲ್ಲ. ಒಂದರ ಗಡಿಯೊಳಗೆ ಮತ್ತೊಂದು ಪ್ರವೇಶಿಸುವಂತಿಲ್ಲ. ಎರಡು ರಾಬಿನ್‌ಗಳ ಮಧ್ಯೆ ಎಂದಿಗೂ ದೀರ್ಘ ಸಂಬಂಧ ಅಸಾಧ್ಯ. ಹಾಲಿನ ಕೆನೆ ಕುಡಿಯುವುದನ್ನು ಒಂದೆರಡು ರಾಬಿನ್ ಕಲಿತರೂ ತನ್ನ ಇಡೀ ಸಮೂಹಕ್ಕೆ ಕಲಿಸಲು ಆಗಲೇ ಇಲ್ಲ. social propagation ಅವುಗಳಿಂದ ಸಾಧ್ಯ ವಾಗಲೇ ಇಲ್ಲ.
ನಾವು ಪ್ರಕೃತಿಯಿಂದ ಕಲಿಯುವುದು, ಪ್ರಕೃತಿಯನ್ನು ಅರ್ಥಮಾಡಿಕೊಕೊಳ್ಳುವುದು ಬೇಕಾದಷ್ಟಿದೆ ಎಂದು ಅನಿಸುವುದಿಲ್ಲವೇ?