Saturday, 27 June 2015

ಯೋಜನೆಯ ಪಾಠವನ್ನು ನಾವೇ ಕಲಿಸಬೇಕು!

`ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ರಸ್ತೆ ಚೆನ್ನಾಗಿದೆ. ಆದರೆ ಅಲ್ಲಲ್ಲಿ ರಸ್ತೆ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ’. ಹಾಗಂತ ಕಳೆದ ಏಳೆಂಟು ವರ್ಷಗಳಿಂದ ಹೆಳ್ತಿರೋದನ್ನು ಕೇಳಿದ್ದೇವೆ.ಬೆಂಗಳೂರು ಮೆಟ್ರೋ ಅಂತೂ ಮುಗಿಯುತ್ತಲೇಇಲ್ಲ.ಗುಲ್ಬರ್ಗಾದ ಅನೇಕ ರಸ್ತೆಗಳು ಜಲ್ಲಿಗಳ ಗುಡ್ಡೆಗಳಿಂದ ತುಂಬಿವೆಯೇ ಹೊರತು ರಸ್ತೆಯಾಗಿ ಮಾರ್ಪಟ್ಟಿಯೇ ಇಲ್ಲ. ಹೀಗೇಕೆ?
ಫ್ರಾನ್ಸಿಗೆ ಹೋಗಿ ಬಂದ ಅಂಕಣಕಾರ ಅಶೋಕ್ ದೇಸಾಯಿ ಅಲ್ಲಿನ ಕಂಪೆನಿಯೊಂದರ ಕೆಲಸ ಮಾಡುವ ರೀತಿನೀತಿಗಳನ್ನು ನೀಟಾಗಿ ವಿವರಿಸಿ ಬರೆದಿದ್ದಾರೆ. ಅಲ್ಲಿನ ಯಾವುದೇ ಕೆಲಸದ ಶುರು ಮಾಡುವ ಮುಂಚೆ ಮೊದಲ ಆದ್ಯತೆ ಪರಿಸ್ಠಿತಿ ಅಧ್ಯಯನಕ್ಕೆ ಎನ್ನುವುದನ್ನು ನಿರೂಪಿಸಿದ್ದಾರೆ. ಯಾವುದೇ ಕಾರ್ಯವನ್ನು ವಹಿಸಿಕೊಳ್ಳುವ ಕಂಪೆನಿ, ಅದರ ಅಧ್ಯಯನ ನಡೆಸಿ ಶ್ರೇಣಿ ನೀಡಿಕೊಳ್ಳುತ್ತದೆ. ಯೋಜನೆಯ ವ್ಯಾಪ್ತಿ, ತಾಂತ್ರಿಕ ಸಂಕೀರ್ಣತೆ, ಸಂಗ್ರಹ ಸೌಲಭ್ಯ ಮತ್ತು ಸ್ಥಳೀಯ ಅಗತ್ಯಗಳೆಂಬ ಆಧಾರದ ಮೇಲೆ ಒಂದರಿಂದ ಐದರವರೆಗೆ ಅಂಕ ನೀಡಿ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತದೆ.
ಉದಾಹರಣೆಗೆ, ನೀರು ಮತ್ತು ವಿದ್ಯುತ್ ಸರಬರಾಜಿಗೆ ಮೂಲಸೌಕರ್ಯ ಭಾರಿಯಾಗಿಯೇ ಬೇಕಾಗುತ್ತದೆ. ಹೀಗಾಗಿ ಇದರ ವ್ಯಾಪ್ತಿ ಬಲು ದೊಡ್ಡದು. ದೂರಸಂಪರ್ಕ ಮತ್ತು ಆರೋಗ್ಯ ಉಸ್ತುವಾರಿಗೆ ಸಂಬಂಧಪಟ್ಟ ಯೋಜನೆಯಾದರೆ,ಅಲ್ಲಿ ತಂತ್ರಿಕತೆಗೆ ಮಹತ್ವ ಹೆಚ್ಚು. ಜಿಲ್ಲಾಡಳಿತ ಕಟ್ಟಡಗಳಿಗೆ,ಆರಕ್ಷಕ ಠಾಣೆಗಳಿಗೆ ಜನರಿಂದ ಹಣ ಸಂಗ್ರಹಿಸಲಾಗುವುದಿಲ್ಲ. ರಸ್ತೆಗಳಿಗಾದರೆ ಸಂಗ್ರಹಿಸಬಹುದು. ಹಾಗೆಯೇ ಸೈನ್ಯಕ್ಕೆ ಸಂಬಂಧಪಟ್ಟ ಯೋಜನೆಗಳು ರಾಷ್ಟ್ರೀಯ ಹೊಣೆಯಾದರೆ, ಬೀದಿ ದೀಪ ಪೂರೈಕೆ ಪಕ್ಕಾ ಪ್ರಾದೇಶಿಕವಾದದ್ದು. ಇಂತಹ ಲೆಕ್ಕಾಚಾರ ಮಾಡಿ, ಬೇಕಾದ್ದು- ಬೇಡವಾದ್ದನ್ನೆಲ್ಲ ವಿಂಗಡಿಸಿಯೇ ಮುಂದಿನ ಹೆಜ್ಜೆ. ಆಯಾ ವಿಂಗಡಣೆಯ ಶ್ರೇಣಿಗೆ ತಕ್ಕಂತೆ, ಆಯಾ ಯೋಗ್ಯತೆ ಹೊಂದಿರುವ ಕಂಪೆನಿಗಳಿಗೆ ಕೆಲಸ ವಹಿಸಿಕೊಡಲಾಗುತ್ತದೆ. ಹೀಗಾಗಿ ಫ್ರಾನ್ಸಿನಕಂಪೆನಿಗಳು ಜಗತ್ತಿನ ಎಲ್ಲೆಡೆ ಸೇವೆ ಸಲ್ಲಿಸುವ ಮಟ್ಟಕ್ಕೆ ಬೆಳೆದಿವೆ. ನಾವಾದರೋ ಯಾವುದೋ ಕೆಲಸವನ್ನು ಯಾರದೋ ಕೈಗೆ ಕೊಟ್ಟು ಫಲಿತಾಂಶಕ್ಕೆ ಕಾಯುತ್ತ ಕೂರುತ್ತೇವೆ.
ಈ ನಿಟ್ಟಿನಲ್ಲಿ ಗುಜರಾತ್ ಸರ್ಕಾರದ ಕೆಲಸ ಅಪರೂಪದ್ದು. ಯೋಜನೆಗಳಿಗೆ ಟೆಂಡರ್ ಕರೆದು, ಪಡಕೊಂಡವರಿಗೆ ನಿಯಮ ಹಾಕಲಾಗುತ್ತದೆ, ‘ಗುಣಮಟ್ಟ ಕಾಯ್ದುಕೊಂಡು, ನಿಗದಿತ ಸಮಯದಲ್ಲಿ ಪೂರೈಸದಿದ್ದರೆ ದಿನಕ್ಕೆ ಇಷ್ಟು ಭಾಗದಷ್ಟು ದಂಡ ತೆರಬೇಕು. ಯೋಜನೆಯನ್ನು ಬೇಗ ಪೂರೈಸಿದರೆ,ದಿನಕ್ಕೆ ಇಂತಿಷ್ಟು ಬಹುಮಾನ ನೀಡಲಾಗುವುದು’ ಎಂದು! ಹೀಗಾಗಿಯೇ ಅಲ್ಲಿ ಯಾವ ಯೋಜನೆಯೂ ಆಮೆ ಗತಿಯಲ್ಲಿ ನಡೆಯುವುದಿಲ್ಲ. ನಿಯಮ ವ್ಯಾಪಕವಾಗಿಬಿಟ್ಟಿರುವುದರಿಂದ ಟೇಬಲ್ ಕೆಳಗಿನ ವ್ಯವಹಾರಕ್ಕೂ ಆಸ್ಪದವಿರುವುದಿಲ್ಲ. ವ್ಯಕ್ತಿಯೊಬ್ಬ ಸಮರ್ಥನಾದರೆ ವ್ಯವಸ್ಥೆಗಳೂ ನೆಟ್ಟಗಾಗಿಬಿಡುತ್ತವೆ ಎನ್ನುವುದಕ್ಕೆ ಮೋದಿ ಉತ್ತಮ ಉದಾಹರಣೆ.
ವರ್ಷಗಟ್ಟಲೆ ನಡೆಯುವ ರಸ್ತೆ ಕಾಮಗಾರಿಗಳು,ಅಭಿವೃದ್ಧಿ ಯೋಜನೆಗಳು ಜನ ಸಾಮಾನ್ಯರ ಸಾಮಾನ್ಯ ಬದುಕಿಗೂ ಹೊಡೆತವೇ. ಏನಾದರೂ ಮಾಡಿ, ಯೋಜನಾಬದ್ಧವಾಗಿ ಮಾಡಿ ಎಂಬುದನ್ನು ನಾವೀಗ ಗಟ್ಟಿದನಿಯಿಂದ ಸಂಬಂಧಿತರ ಕಿವಿ ಮುಟ್ಟಿಸಬೇಕಿದೆ.

Sunday, 21 June 2015

ಮುಜಫ್ಫರ್‌ನಗರದಲ್ಲಿ ಮಿಡಿಯುವ ಮನ, ಕಾಶ್ಮೀರಿ ಪಂಡಿತರನ್ನೇಕೆ ಕರುಣೆಯಿಂದ ನೋಡುವುದಿಲ್ಲ?

 

ಹೆಸರು: ಸರ್ವಾನಂದ ಕೌಲ್
ಸ್ಥಳ: ಶಾಲಿ, ಅನಂತ್‌ನಾಗ್ ಜಿಲ್ಲೆಯ ಒಂದು ಗ್ರಾಮ
ವೃತ್ತಿ: ನಿವೃತ್ತ ಶಿಕ್ಷಕ ಹಾಗೂ ಕಾಶ್ಮೀರಿ ಕವಿ
ಸರ್ವಾನಂದ್ ಕೌಲ್ ಅವರು "ಪ್ರೇಮಿ"ಯೆಂದೇ ಪ್ರಚಲಿತರಾಗಿದ್ದರು. ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದ ಅವರದ್ದು ಕಾಶ್ಮೀರಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕವಯತ್ರಿ ರೂಪಾ ಭವಾನಿಯವರ ಜೀವನಗಾಥೆ ಬರೆದಿದ್ದರು, ಸಂತ ಮಿರ್ಜಾ ಕಕ್ರ ಅವರ ಜೀವನಚರಿತ್ರೆ ರಚಿಸಿದ್ದರು. ಶ್ರೀಮದ್ ಭಗವದ್‌ಗೀತೆಯನ್ನು ಕಾಶ್ಮೀರಿಗೆ ಹಾಗೂ ಉರ್ದುಗೆ ಭಾಷಾಂತರ ಮಾಡಿದ ಹೆಗ್ಗಳಿಕೆ ಹೊಂದಿದ್ದರು. 1924ರಲ್ಲಿ ಜನಿಸಿದ್ದ ಅವರು ಮಹಾತ್ಮ ಗಾಂಧಿಯಿಂದ ಪ್ರಭಾವಿತರಾಗಿದ್ದರು ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾದರೂ ಜಾತ್ಯತೀತತೆಯಲ್ಲಿ ಅಚಲ ನಂಬಿಕೆ ಹೊಂದಿದ್ದರು. ಅದಕ್ಕೆ ಉದಾಹರಣೆಯೆಂಬಂತೆ 1953ರಲ್ಲಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದಾಗ, 1963ರಲ್ಲಿ ಹಜರತ್ ಬಾಲ್ ಮಸೀದಿಯಿಂದ ಪ್ರವಾದಿ ಮೊಹಮ್ಮದರ ಪವಿತ್ರ ಕುರುಹು ಕಣ್ಮರೆಯಾದಾಗ, 1965ರಲ್ಲಿ ಪಾಕ್ ಆಕ್ರಮಣ ಮಾಡಿದಾಗ, 1967ರ ಪಂಡಿತರ ಪ್ರತಿಭಟನೆ ಸಂದರ್ಭದಲ್ಲಿ, 1968ರ ಅನಂತ್‌ನಾಗ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಪ್ರೇಮಿ ಲೇಖನಿಯನ್ನು ಖಡ್ಗದಂತೆ ಝಳಪಿಸಿ ಪ್ರತಿಭಟಿಸಿದ್ದರು.
ಇತ್ತ 1965 ಹಾಗೂ 1971 ಸೋಲಿನ ನಂತರ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಮುಂದಾಯಿತು. ಸ್ವಾತಂತ್ರ್ಯಾನಂತರ ಇಸ್ಲಾಮಿಕ್ ಮೂಲಭೂತವಾದದ ಮೊದಲ ಪ್ರಯೋಗ ಕಾಶ್ಮೀರದಲ್ಲಿ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿನ ಹಿಂದುಗಳನ್ನು ಹೆಕ್ಕಿ ಕೊಲ್ಲಲು ಆರಂಭಿಸಿದರು. ಇಡೀ ಕಾಶ್ಮೀರದಾದ್ಯಂತ ಹಿಂದುಗಳು ಭಯಭೀತರಾದರು. ಬದುಕುಳಿಯಬೇಕೆಂದರೆ ಕಣಿವೆಯಿಂದ ಖಾಲಿ ಮಾಡಬೇಕು ಎಂಬಂತಾಯಿತು. 1990, ಜನವರಿ 19ರಂದು ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಯ ಮೈಕುಗಳಿಂದ ಮೊಳಗಿತು. ಆದರೂ ಪ್ರೇಮಿಯವರ ಜಾತ್ಯತೀತ ಮನಸ್ಸು ನೆರೆಹೊರೆಯ ಮುಸ್ಲಿಮರು ತಮ್ಮನ್ನು ರಕ್ಷಿಸುತ್ತಾರೆಂಬ ಭದ್ರತಾ ಭಾವನೆಯ ಮೊರೆಹೋಯಿತು. ಅದು 1990, ಏಪ್ರಿಲ್ 29. ಮೂವರು ಮುಸುಕುಧಾರಿ ಭಯೋತ್ಪಾದಕರು ಪ್ರೇಮಿಯವರ ಮನೆಯ ಕದ ಒಡೆದು ಒಳಬಂದರು. ಮನೆ ಮಂದಿಯೆಲ್ಲ ಒಂದು ರೂಮಿನೊಳಗೆ ಸೇರಿ ಎಂದು ಸೂಚಿಸಿದರು. ಮನೆಯೊಳಗಿರುವ, ಮೈಮೇಲಿರುವ ಎಲ್ಲ ಅಮೂಲ್ಯ ವಸ್ತುಗಳನ್ನು, ಚಿನ್ನ, ಆಭರಣಗಳನ್ನು, ಹಣ, ಸೀರೆ, ಶಾಲುಗಳನ್ನು ಕಲೆಹಾಕಿ ಎಂದರು. ಮೈಮೇಲಿದ್ದ ಆಭರಣಗಳನ್ನೂ ಬಿಡಲಿಲ್ಲ. ಎಲ್ಲವನ್ನೂ ಸೂಟ್‌ಕೇಸ್‌ಗೆ ತುಂಬಿಸಿ, ಅದನ್ನು ಹೊತ್ತು ನಮ್ಮನ್ನು ಹಿಂಬಾಲಿಸು ಎಂದು ಪ್ರೇಮಿಗೆ ಸೂಚಿಸಿದರು. ಮನೆಯವರು ಆತಂಕಕ್ಕೊಳಗಾದರು. ಅವರನ್ನುದ್ದೇಶಿಸಿ, "ಆತನಿಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ, ಸದ್ಯದಲ್ಲೇ ವಾಪಸ್ ಕಳುಹಿಸುತ್ತೇವೆ" ಎಂದರು ಭಯೋತ್ಪಾದಕರು. ಅದನ್ನು ಕೇಳಿದ ಪ್ರೇಮಿಯವರ 27 ವರ್ಷದ ಮಗ ಪಂಡಿತ್ ವೀರೇಂದರ್ ಕೌಲ್ ತಾನೂ ಕೂಡ ಬರುವುದಾಗಿ ಹೊರಟ. ಎರಡು ದಿನ ಕಳೆದರೂ ಅಪ್ಪ ಮಗ ಇಬ್ಬರೂ ವಾಪಸ್ಸಾಗಲಿಲ್ಲ.
ಎರಡು ದಿನಗಳ ನಂತರ ಹೃದಯವಿದ್ರಾವಕ ಸ್ಥಿತಿಯಲ್ಲಿದ್ದ ಎರಡು ಶವಗಳು ಸಿಕ್ಕವು!
ಪ್ರೇಮಿ ಪ್ರತಿ ದಿನ ಬೆಳಗ್ಗೆ ಎದ್ದು ದೇವರಿಗೆ ವಂದಿಸುವಾಗ ಹಣೆಗೆ ಗಂಧ ಹಚ್ಚಿಕೊಳ್ಳುತ್ತಿದ್ದರು. ಭಯೋತ್ಪಾದಕರು ಆ ಜಾಗವನ್ನು ರಾಡಿನಿಂದ ಸೀಳಿದ್ದರು. ಇಡೀ ದೇಹದ ಭಾಗಗಳನ್ನೂ ಸಿಗರೇಟಿನಿಂದ ಸುಟ್ಟಿದ್ದರು. ಅಪ್ಪ ಮಗ ಇಬ್ಬರ ಕಣ್ಣುಗಳನ್ನೂ ಕಿತ್ತಿದ್ದರು. ಕೈಕಾಲುಗಳನ್ನು ಮುರಿದುಹಾಕಿದ್ದರು. ಈ ಮನುಕುಲ ಕಂಡ ಮಹಾನ್ ರಕ್ಕಸ ಹಿಟ್ಲರ್‌ನ ಪಡೆಗಳಿಗಿಂತಲೂ ಪೈಶಾಚಿಕವಾಗಿ ಪ್ರೇಮಿ ಹಾಗೂ ಅವರ ಪುತ್ರನನ್ನು ಕೊಲೆಗೈದಿದ್ದರು.
ತೇಜ್ ಕೃಷ್ಣನ್ ರಾಜ್ದಾನ್
ಅಶೋಕ್ ಕುಮಾರ್ ಖಾಜಿ
ನವೀನ್ ಸಪ್ರೂ
ಪಿ.ಎನ್. ಕೌಲ್
ಬಿ.ಕೆ. ಗಂಜೂ
ದೀಪಕ್ ಗಂಜೂ
ಭೂಷಣ್ ಲಾಲ್ ರೈನಾ
ರಮೇಶ್ ಕುಮಾರ್ ರೈನಾ
ದೀನನಾಥ್ ಮುಜೂ
ಗಿರಿಜಾ ಟಿಕೂ
ಅಶೋಕ್ ಸೂರಿ
ಪ್ರೊ. ಕೆ.ಎಲ್. ಗಂಜೂ
ಚುನಿ ಲಾಲ್ ಶಲ್ಲಾ
ಇಂಥ ಒಬ್ಬೊಬ್ಬರ ಸಾವೂ ಒಂದೊಂದು ಕರುಣಾಜನಕ ಕಥೆಯನ್ನು ಹೇಳುತ್ತವೆ. ಬಾಲಿವುಡ್ ನಟ ಸಂಜಯ್ ಸೂರಿ ಗೊತ್ತಲ್ಲವೆ? ಆತ ಕೂಡಾ ಕಾಶ್ಮೀರಿಯೇ. ತನ್ನ ತಂದೆಯ ಹತ್ಯೆ ತನ್ನೆದುರೇ ನಡೆದಿದ್ದನ್ನು ಆತ ತೋಡಿಕೊಂಡ ಸಂದರ್ಶನವನ್ನು ಓದಿದರೇ ಮನಸ್ಸು ಭಾರವಾಗುತ್ತದೆ. ಕಾಶ್ಮೀರದಿಂದ ಬಲಾತ್ಕಾರವಾಗಿ ಹೊರದಬ್ಬಿಸಿಕೊಂಡವರ, ಹೆದರಿ ಕಾಲ್ಕಿತ್ತವರ ಸಂಖ್ಯೆ ಸರಿಸುಮಾರು 6 ಲಕ್ಷವಾದರೆ, ಕೊಲೆಯಾದವರ, ಅತ್ಯಾಚಾರಕ್ಕೊಳಗಾದವರ, ಹೆದರಿ ಮತಾಂತರಗೊಂಡವರ ಸಂಖ್ಯೆ ಅದೆಷ್ಟೋ! ಕಾಶ್ಮೀರದಲ್ಲಿ ಕೊಲೆಯಾದ ಪಂಡಿತರ ಸಂಖ್ಯೆ ಕೊಡಿ ಎಂದು ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನೇ ಜಮ್ಮು-ಕಾಶ್ಮೀರ ಸರ್ಕಾರ ತಿರಸ್ಕಾರ ಮಾಡಿಬಿಟ್ಟಿತು. ಇಂಥದ್ದೊಂದು ತಿರಸ್ಕಾರದ ಹಿಂದಿರುವ ಭಯ ಏನೆಂದುಕೊಂಡಿರಿ? ಲೆಕ್ಕ ಕೊಟ್ಟರೆ ಮುಸ್ಲಿಂ ಮೂಲಭೂತವಾದಕ್ಕೆ ಸಿಕ್ಕಿ ಸತ್ತ ಅಗಣಿತ ಹಿಂದುಗಳ ದುಸ್ಥಿತಿ ಜಗತ್ತಿಗೆ ಗೊತ್ತಾಗುತ್ತದೆ ಎಂಬ ಭಯವೇ ಅಲ್ಲವೆ? 790 ಮುಸಲ್ಮಾನರನ್ನು ಬಲಿತೆಗೆದುಕೊಂಡ ಗುಜರಾತ್ ಹಿಂಸಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ಕಲ್ಪನೆಗೂ ಮೀರಿದಷ್ಟು, ಲೆಕ್ಕಕ್ಕೂ ಬಾರದಷ್ಟು ಪಂಡಿತರ, ಹಿಂದುಗಳ ಜೀವವನ್ನು ಬಲಿತೆಗೆದುಕೊಂಡ ಕಾಶ್ಮೀರಿ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಎಷ್ಟು ಜನ ಮಾತನಾಡುತ್ತಾರೆ ಹೇಳಿ? ಗುಜರಾತ್ ಹಿಂಸಾಚಾರದ ಬಗ್ಗೆ ಜಗತ್ತಿನ ಗಮನ ಸೆಳೆಯುವ, ಹಿಂದುಗಳೆಂಥ ಕ್ರೂರಿಗಳೆಂದು ಚಿತ್ರಿಸುವ ಸಲುವಾಗಿಯೇ "ಫೈನಲ್ ಸಲ್ಯೂಷನ್‌", "ಫಿರಾಕ್‌", "ಪರ್ಝಾನಿಯಾ"ದಂಥ ಇಂಗ್ಲಿಷ್, ಹಿಂದಿ ಚಿತ್ರಗಳು, ಅವುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದವು. ಮಲೆಯಾಳದಲ್ಲಿ "ಕಥಾವಶೇಷನ್‌", "ವಿಲಪಾಂಗಳಕ್ಕಪುರಂ", "ಭೂಮಿಯುಡೆ ಅವಕಾಶಿಕುಲ್‌" ಮುಂತಾದ ಚಿತ್ರಗಳು ಬಂದವು. ಚೇತನ್ ಭಗತ್ ಅವರ "ತ್ರೀ ಸ್ಟೇಟ್ಸ್‌" ಆಧರಿಸಿ ಬಂದ ಹಿಂದಿ ಚಿತ್ರ "ಕಾಯ್ ಪೋ ಚೆ"ನಲ್ಲೂ ಅನಗತ್ಯವಾಗಿ ಗುಜರಾತ್ ಘಟನೆಯನ್ನು ಎಳೆದುತಂದರು. ಆದರೆ ಕಾಶ್ಮೀರಿ ಪಂಡಿತರ ಬಗ್ಗೆ ಹೊರಗಿನ ಯಾರು ಒಂದು ಚಿತ್ರ ತಯಾರಿಸಿದ್ದಾರೆ, ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ ಹೇಳಿ? ಅಷ್ಟೇಕೆ, ಕಾಶ್ಮೀರಿಯೇ ಆದ ಪತ್ರಕರ್ತ ರಾಹುಲ್ ಪಂಡಿತ ಕಳೆದ ವರ್ಷ ಬರೆದ "ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್‌" ಪುಸ್ತಕದ ಬಗ್ಗೆ ಒಂದು ಸಣ್ಣ ಟೀವಿ ಚರ್ಚೆಯೂ ನಡೆಯಲಿಲ್ಲ! ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಸುಮಾರು 600 ಜನರಿಗೆ ಶಿಕ್ಷೆಯಾಗಿದೆ. ಆದರೆ ಕಾಶ್ಮೀರಿ ಪಂಡಿತರ ರಕ್ತಹೀರಿದವರ ವಿರುದ್ಧ ಒಂದೇ ಒಂದು ಎಫ್‌ಐಆರ್ ಕೂಡಾ ದಾಖಲಾಗಿಲ್ಲ ಎಂದರೆ ನಂಬುತ್ತೀರಾ?! ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮೋದಿಗೆ ಅಮೆರಿಕ ವೀಸಾ ನಿರಾಕರಿಸುವಂತೆ ಮಾಡಿದರು. ಆದರೆ 6 ಲಕ್ಷ ಕಾಶ್ಮೀರಿ ಪಂಡಿತರು ತಾಯ್ನೆಲದಲ್ಲೇ ನಿರಾಶ್ರಿತರಾಗಲು ಅವಕಾಶ ಮಾಡಿಕೊಟ್ಟ, ಸಾವಿರಾರು ಕಾಶ್ಮೀರಿ ಪಂಡಿತ ಕೊಲೆ ನಡೆಯುವಾಗ ಕಣ್ಣುಮುಚ್ಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಗ್ಗೆ ಧ್ವನಿಯೆತ್ತಿದ ಒಬ್ಬ ನರನನ್ನು ತೋರಿಸಿ ನೋಡೋಣ? ಮೂರೂವರೆ ಸಾವಿರ ಸಿಖ್ಖರ ಹತ್ಯಾಕಾಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಹಾಗೂ ಕಾಶ್ಮೀರಿಗರ ದುಸ್ಥಿತಿಗೆ ಕಾರಣರಾದ ಆಗಿನ ಪ್ರಧಾನಿ ರಾಜೀವ್ ಗಾಂಧಿಯನ್ನು ಯಾರಾದರೂ ದೂರಿದ್ದನ್ನು ನೋಡಿದ್ದೀರಾ? ರಾಜೀವ್ ಗಾಂಧಿ ಮಾಡಿದ್ದೇನು ಸಾಮಾನ್ಯ ಅಪಚಾರವೇ?
"ಆತ್ಮೀಯ ಶ್ರೀ ರಾಜೀವ್ ಗಾಂಧಿ,
ನಾನು ನಿಮಗೆ ನೆನಪಿಸಿಕೊಡಬೇಕಾ ಹೇಳಿ? ಕಾಶ್ಮೀರದಲ್ಲಿ ಬಿರುಗಾಳಿಯೊಂದು ಸೃಷ್ಟಿಯಾಗುತ್ತಿರುವುದರ ಬಗ್ಗೆ 1988ರ ಆರಂಭದಿಂದಲೇ ನಿಮಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಲಾರಂಭಿಸಿದ್ದೆ. ಆದರೆ ನಿಮಗಾಗಲಿ ಅಥವಾ ನಿಮ್ಮ ಸುತ್ತ ಅಧಿಕಾರವನ್ನು ಝಳಪಿಸುತ್ತಿರುವ ಭಟ್ಟಂಗಿಗಳಿಗಾಗಲಿ ಆ ಸಂದೇಶಗಳನ್ನು ನೋಡುವುದಕ್ಕೆ ಸಮಯವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದೆಂದರೆ ಐಸಿಹಾಸಿಕ ಪಾಪ ಮಾಡಿದಂತೆ ಎಂಬ ಸೂಚನೆ ಅಲ್ಲಿತ್ತು. ಭಯಾನಕ ಶಸ್ತ್ರಾಸ್ತ್ರಗಳು ಆಗಮಿಸಿವೆ ಹಾಗೂ ಹೆಚ್ಚಿನವು ಆಗಮಿಸುತ್ತಿವೆ ಎಂದು ತಿಳಿಸಿದ್ದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮತ್ತೆಂದೂ ಹಿಂದಿರುಗಲಾಗದ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು 1989 ಏಪ್ರಿಲ್‌ನಲ್ಲಿ ನಿಮಗೆ ಬರೆದಿದ್ದೆ. ಆದರೆ ನಿಮ್ಮ ನಿರಾಸಕ್ತಿ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತದೆ. ಆಶ್ಚರ್ಯವೆಂದರೆ ಇಂದು ಕಾಶ್ಮೀರದ ಸ್ಥಿತಿಗೆ ನಾನೇ ಕಾರಣವೆಂದು ನಿಮ್ಮ ಭಟ್ಟಂಗಿಗಳಾದ ಮಣಿಶಂಕರ್ ಅಯ್ಯರ್, ಎನ್ಕೆಪಿ ಸಾಳ್ವೆ, ಶಿವಶಂಕರ್ ತುತ್ತೂರಿ ಊದುತ್ತಿದ್ದಾರೆ. ನಿಮ್ಮ ಮತ್ತೊಬ್ಬ ಶಿಷ್ಯ ಫಾರೂಕ್ ಅಬ್ದುಲ್ಲಾ ಬಿಡುಗಡೆ ಮಾಡಿದ 70 ಕುಖ್ಯಾತ ಭಯೋತ್ಪದಕರೇ ಇಷ್ಟೆಲ್ಲಾ ಅವಾಂತರ ಸೃಷ್ಟಿಸುತ್ತಿದ್ದು ಅದಕ್ಕೂ ರಾಜ್ಯಪಾಲನಾದ ನಾನೇ ಕಾರಣ ಎನ್ನುತ್ತೀರಾ? 1990, ಜನವರಿ 19ರಂದು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೊದಲೇ ಮಾನಸಿಕವಾಗಿ ಭಾರತ ಶರಣಾಗಿತ್ತು. 1600 ಹಿಂಸಾಕೃತ್ಯಗಳು ನಡೆದಿದ್ದವು. 351 ಬಾಂಬ್ ಸ್ಫೋಟಗಳು ಸಂಭವಿಸಿದ್ದವು, 72 ದೊಂಬಿಗಳು ನಡೆದಿದ್ದವು. ಆದರೆ ನೀವು ಯಾವತ್ತೂ ತಲೆಕೆಡಿಸಿಕೊಳ್ಳಲೇ ಇಲ್ಲ.
ಜಗಮೋಹನ್
1990, ಏಪ್ರಿಲ್ 21"
ಎರಡು ಬಾರಿ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಆಗ ನಡೆದ ಘಟನೆಗಳು, ಸೃಷ್ಟಿಯಾಗಿದ್ದ ಪರಿಸ್ಥಿತಿಯನ್ನು ತಮ್ಮ "ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್‌"ನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇಷ್ಟಾಗಿಯೂ ಅಂದು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿಯನ್ನಾಗಲಿ, ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾರನ್ನಾಗಲಿ, ಕಾಶ್ಮೀರಿ ಪಂಡಿತರನ್ನು ಹೊರದಬ್ಬಿದ ಮೂಲಭೂತವಾಗಿ ಮನಸ್ಸುಗಳನ್ನಾಗಲಿ ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಇನ್ನೊಂದು ಗಮನಾರ್ಹ ಅಂಶ ನೋಡಿ: ಹಿಂದುಗಳು ಬಹುಸಂಖ್ಯಾತರಾಗಿರುವ ಜಮ್ಮು ಗಾತ್ರದಲ್ಲಿ ಕಾಶ್ಮೀರಕ್ಕಿಂತ ದೊಡ್ಡದು. ಆದರೆ ವಿಧಾನಸಭೆ ಕ್ಷೇತ್ರಗಳು ಹೆಚ್ಚಿರುವುದು ಕಾಶ್ಮೀರದಲ್ಲಿ. ಏಕೆ ವಿಷಯ ಎತ್ತಲಾಗುತ್ತಿದೆಯೆಂದರೆ, ಭಾರತ ಪ್ರಜಾತಾಂತ್ರಿಕ ರಾಷ್ಟ್ರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರಲ್ಲಾ ಕಾಶ್ಮೀರಕ್ಕೆ ಒಬ್ಬ ಹಿಂದುವನ್ನು ಮುಖ್ಯಮಂತ್ರಿಯಾಗಿ ಮಾಡಿ ನೋಡಿ?! ಮಹಾನ್ ರಾಷ್ಟ್ರವಾದಿ ಹಾಗೂ ಹಿಂದು ರಕ್ಷಕ ಶಿವಾಜಿ ಮಹಾರಾಜನ ಮಹಾರಾಷ್ಟ್ರಕ್ಕೆ ಅಬ್ದುರ್ ರೆಹಮಾನ್ ಅಂಟುಳೆ ಎಂಬ ಮುಸ್ಲಿಂ ಮುಖ್ಯಮಂತ್ರಿಯಾಗಬಲ್ಲ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕೇರಳದಲ್ಲಿ ಆ್ಯಂಟನಿ, ಚಾಂಡಿಗಳೆಂಬ ಕ್ರೈಸ್ತರು ಮುಖ್ಯಮಂತ್ರಿಯಾದರೆ ಯಾರೂ ಬೇಸರಿಸಿಕೊಳ್ಳುವುದಿಲ್ಲ, ಹಿಂದುಗಳಿಂದ ತುಂಬಿರುವ ಆಂಧ್ರಪ್ರದೇಶ ಕ್ರೈಸ್ತರಾದ ಯೇಸುಪದ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುತ್ತದೆ ಹಾಗೂ ಅವರ ಪುತ್ರ ಜಗನ್ಮೋಹನ್‌ನನ್ನು ಅತ್ಯಂತ ಜನಪ್ರಿಯ ನಾಯಕನನ್ನಾಗಿ ಮಾಡುತ್ತದೆ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಮುಸ್ಲಿಮರು ಶಾಸಕ, ಸಂಸದರಾಗಿ ಆಯ್ಕೆಯಾಗುತ್ತಾರೆ. ಆದರೆ ಕಾಶ್ಮೀರಕ್ಕೆ ಒಬ್ಬ ಹಿಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ! ಇಂತಹ ಮನಸ್ಥಿತಿಯೇ ನಮ್ಮ ಪಂಡಿತರು ಕಗ್ಗೊಲೆಯಾಗಲು, ಸ್ವಂತ ನಾಡಿನಲ್ಲೇ ನಿರಾಶ್ರಿತರಾಗಿ ಬದುಕಬೇಕಾದ ಸ್ಥಿತಿ ಬಂದಿದೆ. ಬಹಳ ಆಶ್ಚರ್ಯ ಹುಟ್ಟಿಸುವ ಸಂಗತಿಯೆಂದರೆ ಕಳೆದ 4 ತಿಂಗಳಿಂದ ಗ್ರಾಮ ಬಿಟ್ಟಿರುವ ಉತ್ತರ ಪ್ರದೇಶದ ಮುಜಫ್ಫರ್‌ನಗರದ ಆರು ಸಾವಿರ ನಿರಾಶ್ರಿತರ ಬಗ್ಗೆ ನಮ್ಮ ಟಿ.ವಿ. ಚಾನೆಲ್‌ಗಳು ನಿತ್ಯವೂ ಬೊಬ್ಬೆ ಹಾಕುತ್ತಿವೆ. ಅಲ್ಲಿನ ಜನ ಹಾಗೂ ಮಕ್ಕಳು ಅನುಭವಿಸುತ್ತಿರುವ ಕರುಣಾಜನಕ ಸ್ಥಿತಿಯ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಖಂಡಿತ ತಪ್ಪಲ್ಲ. ಆದರೆ ಕಳೆದ 25 ವರ್ಷಗಳಿಂದ ದಿಲ್ಲಿ ಹಾಗೂ ಜಮ್ಮು ಬಳಿಯ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಬದುಕು ದೂಡುತ್ತಿರುವ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಪರಿಸ್ಥಿತಿ ನಮ್ಮ ಸಾಕ್ಷೀಪ್ರಜ್ಞೆಯನ್ನೇಕೆ ತಿವಿಯುವುದಿಲ್ಲ? ನಮ್ಮ ಮಾಧ್ಯಮಗಳ ಕರುಣಾಳು ಹೃದಯ ಕಾಶ್ಮೀರಿ ಪಂಡಿತರಿಗೇಕೆ ಮಿಡಿಯುವುದಿಲ್ಲ? ಈ ಮಧ್ಯೆ ಪ್ರಶಾಂತ್ ಭೂಷಣನೆಂಬ ಮಹಾಶಯ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು, ಅರ್ಥಾತ್ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ. ಅದನ್ನು ಒಬ್ಬ ರಾಷ್ಟ್ರವಾದಿಯಾದವನು ಖಂಡಿಸಬೇಕು. ಆದರೆ ನಮ್ಮ ಕೇಜ್ರೀವಾಲ್ ಸಾಹೇಬರು ಅದು ಆತನ ವೈಯಕ್ತಿಕ ಅಭಿಪ್ರಾಯ ಎಂದು ನುಣುಚಿಕೊಳ್ಳುವ ಕಿಲಾಡಿತನ ತೋರಿಸುತ್ತಿದ್ದಾರೆ. ಇನ್ನು ಆರು ವರ್ಷಗಳ ಆಡಳಿತದಲ್ಲಿ ಬಿಜೆಪಿಯ ಬೊಗಳೆ ನಾಯಕರು ಮಾಡಿದ್ದೂ ಅಷ್ಟರಲ್ಲೇ ಇದೆ. ಇಂಥವರು ನಮ್ಮನ್ನಾಳುತ್ತಿರುವಾಗ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಲು ಸಾಧ್ಯವೇ? ಜನಾಭಿಪ್ರಾಯವೆಂದರೆ ಆರು ಲಕ್ಷ ಕಾಶ್ಮೀರಿ ಪಂಡಿತರ ಅಭಿಪ್ರಾಯವನ್ನೂ ಪಡೆಯಬೇಕು ಎಂಬುದು ಪ್ರಶಾಂತ್ ಭೂಷಣ್‌ನಂಥವರಿಗೆ ಅರ್ಥವಾಗುತ್ತದೆಯೇ? ಭಾರತದ ಅತ್ಯಂತ ಪ್ರತಿಷ್ಠಿತ ಗೂಢಚರ ಸಂಸ್ಥೆ "ರಾ" ಸ್ಥಾಪಿಸಿದ್ದು ಆರ್.ಎನ್. ಕಾವೋ ಎಂಬ ಕಾಶ್ಮೀರಿ ಪಂಡಿತ. ಅವರು 2002ರಲ್ಲಿ ತೀರಿಕೊಳ್ಳುವವರೆಗೂ ಪಂಡಿತರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದರು. ಆದರೆ ಸಂವೇದನೆಯನ್ನೇ ಕಳೆದುಕೊಂಡ ನಾಯಕರೇ ನಮ್ಮನ್ನಾಳುತ್ತಿರುವಾಗ ಏನನ್ನು ಮಾಡಲು ತಾನೇ ಸಾಧ್ಯ?
ಏಕೆ ವಿಷಯವನ್ನೀಗ ಪ್ರಸ್ತಾಪಿಸಲಾಗುತ್ತಿದೆಯೆಂದರೆ ಹಿಂದುಗಳೇ ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಗಳ ಮೈಕಿನಿಂದ ಮೊಳಗಿದ್ದು 1990, ಜನವರಿ 19ರಂದು. ನಾಳೆ ಆ ಘಟನೆಗೆ 24 ವರ್ಷಗಳು ತುಂಬಿ 25ಕ್ಕೆ ಕಾಲಿಡಲಿದೆ. ಪ್ರತಿವರ್ಷ ಆ ದಿನವನ್ನು "ಕಾಶ್ಮೀರಿ ಗುಳೇ ದಿನ" ಅಥವಾ "ಸಾಮೂಹಿಕ ಹತ್ಯಾಕಾಂಡ" ದಿನವಾಗಿ ಆಚರಿಸಲಾಗುತ್ತದೆ. ಇಪ್ಪತ್ನಾಲ್ಕು ವರ್ಷ ಕಳೆದರೂ ಪಂಡಿತರಿಗೆ ನ್ಯಾಯ ಕೊಡಲಾಗಿಲ್ಲದಿರುವುದು, ಇಂಥದ್ದೊಂದು ದಿನವನ್ನು ಆಚರಿಸಲಾಗುತ್ತಿರುವುದು ಈ ದೇಶದ ದುರಂತ ಹಾಗೂ ಹಿಂದುಗಳ ಷಂಡತನದ ಸಂಕೇತವಲ್ಲದೆ ಮತ್ತೇನು ಹೇಳಿ?

Saturday, 20 June 2015

ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ, ಹೀಗೂ ಮಾಡಬಹುದು!

ಬಿಹಾರ, ಪಾಟ್ನಾ!
ಹೀಗೆಂದ ತಕ್ಷಣ ನಮ್ಮ ಕಣ್ಮುಂದೆ ಲಾಲೂ ಪ್ರಸಾದ್ ಯಾದವ್, ರಾಬ್ಡಿದೇವಿಯ ಚಿತ್ರಗಳು ಬಂದು ನಿಲ್ಲುತ್ತವೆ. ಅದರ ಹಿಂದೆಯೇ, ಬಿಹಾರದ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಕಳ್ಳರು, ಸುಳ್ಳರು, ಕೊಲೆಗಡುಕರು, ಕ್ರಿಮಿನಲ್‌ಗಳ ಮುಖಗಳೂ ಮೆರವಣಿಗೆ ಹೊರಡುತ್ತವೆ. ಇದೇ ಕಾರಣಕ್ಕೆ ಬಿಹಾರವನ್ನು ‘ಗೂಂಡಾರಾಜ್ಯ’ ಎಂದು ಕರೆಯುವ ಪರಿಪಾಠವೂ ಇದೆ. ಬಿಹಾರ ಅಂದ್ರೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಪರ್ಯಾಯ ಪದವೆನ್ನುವಂತಾಗಿದೆ. ಆದರೆ, ಈಗ ಅದೇ ಪಾಟ್ನಾದಿಂದ ದೇವರಂಥ ವ್ಯಕ್ತಿಯೊಬ್ಬ ಎದ್ದು ಬಂದಿದ್ದಾನೆ.
ಅವನ ಹೆಸರು ಆನಂದಕುಮಾರ್.
ಇವತ್ತು ಪಾಟ್ನಾದ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ನಿಂತು- ನಾಲ್ಕು ಮಂದಿಯ ಮುಂದೆ ಆನಂದಕುಮಾರ್ ಅಂದು ನೋಡಿ; ಜನ ಕಣ್ಣರಳಿಸುತ್ತಾರೆ. ನಿಂತಲ್ಲೇ ಕೈಮುಗಿಯುತ್ತಾರೆ. ‘ಓಹ್, ನಿಮ್ಗೆ ಮೇಷ್ಟ್ರು ಬೇಕಿತ್ತಾ’ ಎನ್ನುತ್ತಾರೆ. ಮರುಕ್ಷಣದಲ್ಲೇ ಈ ಆನಂದಕುಮಾರ್ ಅವರ ವಿಳಾಸವನ್ನು ಹೇಳುತ್ತಾರೆ. ಆನಂತರವೂ ಒಂದೆರಡು ನಿಮಿಷ ಅಲ್ಲಿಯೇ ನಿಂತರೆ- ಆನಂದಕುಮಾರ್ ಅವರನ್ನು ಹೊಗಳುತ್ತ ಹೊಗಳುತ್ತಾ ಮೈಮರೆಯುತ್ತಾರೆ.
ಸ್ವಾರಸ್ಯವೇನೆಂದರೆ- ಹೀಗೆ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಆನಂದಕುಮಾರ್ ರಾಜಕಾರಣಿಯಲ್ಲ. ಹಣವಂತನಲ್ಲ. ಯೋಗ ಗುರುವಲ್ಲ. ಚಿತ್ರನಟನಲ್ಲ. ರಾಬ್ಡಿದೇವಿಯ ಮಾವನಲ್ಲ. ಲಾಲೂ ಪ್ರಸಾದನಿಗೂ ಅವನಿಗೂ ಸಂಬಂಧವಿಲ್ಲ. ನಿತೀಶ್‌ಕುಮಾರನ ನೆಂಟನೂ ಅಲ್ಲ.  ಅಸಲಿಗೆ, ರಾಜಕೀಯದ ನೆರಳನ್ನು ಆತ ತನ್ನೆಡೆಗೆ ಬಿಟ್ಟುಕೊಂಡವನಲ್ಲ. ಆತ ಪೊಲೀಸ್ ಅಧಿಕಾರಿಯಲ್ಲ, ಕರಾಟೆ ಮಾಸ್ಟರ್ ಕೂಡ ಅಲ್ಲ. ಜ್ಯೋತಿಷಿಯೂ ಅಲ್ಲ. ಬದಲಿಗೆ, ಒಬ್ಬ ಟ್ಯೂಶನ್ ಮಾಸ್ಟರ್!
ನಂಬಿ ಮಹಾರಾಯರೆ, ಈ ಟ್ಯೂಶನ್ ಮಾಸ್ಟರ್, ಇವತ್ತು ಬಿಹಾರದಲ್ಲಿ ದೊಡ್ಡದೊಂದು ಕ್ರಾಂತಿ ಉಂಟುಮಾಡಿದ್ದಾನೆ. ವಿದ್ಯಾರ್ಥಿಗಳ ಪಾಲಿಗೆ ರೋಲ್‌ಮಾಡೆಲ್ ಆಗಿದ್ದಾನೆ. ತೀರಾ ಕಡಿಮೆ ಹಣ ಪಡೆದು ಎಲ್ಲರಿಗೂ ಟ್ಯೂಶನ್ ಮಾಡುತ್ತ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸೂಪರ್-೩೦ ಎಂಬ ಖಾಸಗಿ ಟ್ಯೂಶನ್ ಕೇಂದ್ರವನ್ನೂ ಆರಂಭಿಸಿದ್ದಾನೆ. ಆ ಕೇಂದ್ರದ ಮುಂದೆ ಆನೆಗಾತ್ರದ ಅಕ್ಷರದಲ್ಲಿ- ’ಇಲ್ಲಿ ಬಡವರ ಮಕ್ಕ ಳಿಗೆ ಉಚಿತವಾಗಿ ಪಾಠ ಹೇಳಲಾಗುವುದು’ ಎಂದು ಬೋರ್ಡ್ ಹಾಕಿದ್ದಾನೆ. ಅಷ್ಟೇ ಅಲ್ಲ, ನುಡಿದಂತೆಯೇ ನಡೆದುಕೊಂಡಿದ್ದಾನೆ.
ಈತನ ಬಳಿ ಟ್ಯೂಶನ್ ಹೇಳಿಸಿಕೊಂಡ ಹುಡುಗರು- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ನಡೆಸುವ ಐಐಟಿ-ಜೆಇಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದಿದ್ದಾರೆ. ಕೆಲವರು ಐಎಎಸ್‌ನಲ್ಲೂ ಪಾಸಾಗಿದ್ದಾರೆ. ಒಂದಷ್ಟು ಮಂದಿ ಬ್ಯಾಂಕ್ ಪರೀಕ್ಷೆ ಬರೆದು ಮ್ಯಾನೇಜರ್‌ಗಳಾಗಿದ್ದಾರೆ. ಹೀಗೆ, ದೊಡ್ಡ ದೊಡ್ಡ ಸ್ಥಾನ ತಲುಪಿಕೊಂಡವರೆಲ್ಲ ಕ್ಷಣಕ್ಷಣಕ್ಕೂ ತಮ್ಮ ಗುರು ಆನಂದಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಗುರುಗಳಿಗೆ ಜೈ ಹೋ ಎಂದು ಸಂತೋಷದಿಂದ ಹೇಳಿದ್ದಾರೆ.
ಅಲ್ಲ, ಮೊನ್ನೆಮೊನ್ನೆಯವರೆಗೂ ರಕ್ತಸಿಕ್ತ ರಾಜಕಾರಣವನ್ನೇ ಉಸಿರಾಡುತ್ತಿದ್ದ ನಾಡು ಬಿಹಾರ. ಅಂಥ ಊರಿನಲ್ಲಿ ಆನಂದಕುಮಾರ್ ಥರದ ಜನ ಎದ್ದುನಿಲ್ಲಲು ಕಾರಣವಾದದ್ದು ಏನು? ಇಷ್ಟಕ್ಕೂ ಈ ಹುಡುಗ ಯಾರು? ಅವನ ಹಿನ್ನೆಲೆ ಏನು? ಅವನು ಟ್ಯೂಶನ್ ತರಗತಿ ಆರಂಭಿಸಲು ಕಾರಣವಾದರೂ ಏನು? ತೀರಾ ಬಡವರ ಮಕ್ಕಳಿಗೇ ಪಾಠ ಹೇಳುತ್ತೇನೆ ಎಂಬ ಆದರ್ಶದ ಹಂಬಲವಾದರೂ ಆ ಹುಡುಗನ ತಲೆಗೇರಿದ್ದೇಕೆ?
ಇಂಥ ಎಲ್ಲ ಕುತೂಹಲಗಳಿಗೂ ಇಲ್ಲಿ ಸ್ವಾರಸ್ಯಕರ ಉತ್ತರವಿದೆ.
ಈ ಆನಂದಕುಮಾರ್, ಬಿಹಾರದ ಒಂದು ಸಾಮಾನ್ಯ ಕುಟುಂಬದಿಂದ ಬಂದವನು. ಅವನ ತಂದೆ ಅಂಚೆ ಕಚೇರಿಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದ. ಬರುತ್ತಿದ್ದ ಸಂಬಳ ಹೊಟ್ಟೆ- ಬಟ್ಟೆಗೇ ಆಗಿಹೋಗುತ್ತಿತ್ತು. ಹಾಗಾಗಿ ಮಕ್ಕಳನ್ನು ಟ್ಯೂಶನ್‌ಗೆ ಕಳುಹಿಸುವ ಯೋಚನೆಯನ್ನೇ ಆನಂದ್‌ಕುಮಾರನ ತಂದೆ ಮಾಡಲಿಲ್ಲ. ಈ ಹುಡುಗ ಆನಂದ್, ಹಿಂದಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ. ಮನೆಯಲ್ಲಿ ಕಡುಬಡತನವಿತ್ತು ನಿಜ. ಆದರೆ, ಅದು ಈ ಹುಡುಗನ eನದಾಹಕ್ಕೆ ಅಡ್ಡಿಯಾಗಲಿಲ್ಲ. ಚಿಕ್ಕಂದಿನಲ್ಲಿಯೇ ಗಣಿತದತ್ತ ಆಕರ್ಷಿತನಾದ ಆನಂದಕುಮಾರ್, ಹೈಸ್ಕೂಲಿಗೆ ಬರುವ ವೇಳೆಗೆ ಕಾಲೇಜು ತರಗತಿಗಳ ಸಮಸ್ಯೆಗಳನ್ನೆಲ್ಲ ಬಿಡಿಸುವಷ್ಟು ಪ್ರಾವೀಣ್ಯ ಪಡೆದ. ಅಷ್ಟಕ್ಕೆ ಸುಮ್ಮನಾಗದೆ, ಗಣಿತ ಲೋಕದ ಪ್ರೊಫೆಸರ್‌ಗಳಿಗೇ ಸವಾಲು ಹಾಕುವಂತಿದ್ದ ಅವೆಷ್ಟೋ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿದ. ಅವುಗಳನ್ನು ಇಂಗ್ಲೆಂಡಿನ ಮ್ಯಾಥಮೆಟಿಕಲ್ ಸ್ಪೆಕ್ಟ್ರಂ ಮತ್ತು ದಿ ಮ್ಯಾಥಮೆಟಿಕಲ್ ಗೆಜೆಟ್ ಪತ್ರಿಕೆಗಳಿಗೆ ಕಳಿಸಿಕೊಟ್ಟ.
ದಶಕಗಳ ಕಾಲದಿಂದಲೂ ಗಣಿತದ ಪ್ರೊಫೆಸರ್‌ಗಳಿಗೆ ಅರ್ಥವೇ ಆಗದಿದ್ದ ಸಮಸ್ಯೆಗಳನ್ನು, ಇನ್ನೂ ಮೀಸೆ ಚಿಗುರದ ಭಾರತದ ಹೈದನೊಬ್ಬ ಪರಿಹಾರ ಹುಡುಕಿದ್ದು ಕಂಡು ಅಮೆರಿಕ, ಇಂಗ್ಲೆಂಡಿನ ಪಂಡಿತರೆಲ್ಲ ಖುಷಿಯಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ಹುಡುಗನಿಗೆ ಪ್ರವೇಶ ನೀಡಲೂ ಮುಂದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ನಾನೂ ಒಬ್ಬ ಗಣಿತದ ಪ್ರೊಫೆಸರ್ ಆಗುತ್ತೇನೆ ಎಂಬ ಖುಷಿಯಲ್ಲಿ ಈ ಆನಂದಕುಮಾರ್ ಪಾಸ್‌ಪೋರ್ಟ್, ವೀಸಾ ಮಾಡಿಸಿಕೊಳ್ಳಲು ಓಡಾಡತೊಡಗಿದ.
ಅಷ್ಟರಲ್ಲಿ ಆಗಬಾರದ ಅನಾಹುತವೊಂದು ಆಗಿಹೋಯಿತು. ಅದೊಂದು ದಿನ, ಕಚೇರಿಯಿಂದ ಮನೆಗೆ ಬಂದ ಆನಂದ್‌ಕುಮಾರನ ತಂದೆ, ಯಾಕೋ ಎದೆನೋವು ಎಂದು ಕುಸಿದು ಕೂತವರು ಮತ್ತೆ ಮೇಲೇಳಲಿಲ್ಲ!
ಅದುವರೆಗೂ ಕುಟುಂಬ ನಿರ್ವಹಣೆಗೆ ಆಧಾರವಾಗಿದ್ದುದೇ ತಂದೆಯ ಸಂಬಳ. ಅದೇ ಇಲ್ಲವೆಂದಮೇಲೆ, ಬದುಕಲು ಏನಾ ದರೂ ಮಾಡಲೇಬೇಕಿತ್ತು. ಈ ಸಂದರ್ಭದಲ್ಲಿ ಆನಂದಕುಮಾರ್, ಅನಿವಾರ್ಯವಾಗಿ ತನ್ನ ಉನ್ನತ ವ್ಯಾಸಂಗದ ಕನಸನ್ನು ಕೈಬಿಟ್ಟ. ಆನಂದ್‌ನ ತಾಯಿ, ಜೀವನ ನಿರ್ವಹಣೆಗೆಂದು ಹಪ್ಪಳ ತಯಾರಿಕೆಗೆ ನಿಂತಳು. ಬೆಳಗಿನಿಂದಲೂ ಮನೆಯಲ್ಲಿದ್ದುಕೊಂಡೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ, ಹೊಸ ಹೊಸ ಥಿಯರಿಗಳನ್ನು ಸೃಷ್ಟಿಸುತ್ತ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಿದ್ದಂತೆಯೇ ಮನೆಮನೆಯ ಬಾಗಿಲು ತಟ್ಟಿ ಹಪ್ಪಳ ಮಾರುತ್ತಿದ್ದ. ಹೀಗಿದ್ದಾಗಲೇ, ಹೀಗೆ ಮನೆಮನೆಗೂ ಹೋಗಿ ಹಪ್ಪಳ ಮಾರುವ ಬದಲು ಖಾಸಗಿಯಾಗಿ ಯಾಕೆ ಟ್ಯೂಶನ್ ಹೇಳಬಾರದು? ಹೇಗಿದ್ರೂ ನಿಂಗೆ ಗಣಿತ ಚೆನ್ನಾಗಿ ಗೊತ್ತಿದೆಯಲ್ಲ? ಅದೇ ವಿಷಯವನ್ನು ಯಾಕೆ ಹೇಳಿಕೊಡಬಾರದು ಎಂದು ಹಿತೈಷಿಯೊಬ್ಬರು ಸಲಹೆ ಮಾಡಿದರು. ಆಗ ಈ ಆನಂದಕುಮಾರ್‌ನ ವಯಸ್ಸೆಷ್ಟು ಗೊತ್ತೆ? ಬರೀ ೨೨ ವರ್ಷ. ಅಂದಹಾಗೆ, ಇದು 1995ರ ಮಾತು!
ಒಂದೆರಡು ದಿನ ಬಿಟ್ಟು ಯೋಚಿಸಿದಾಗ- ಹೌದಲ್ವಾ? ನಾನು ಹಾಗೇಕೆ ಮಾಡಬಾರದು ಎಂದು ಆನಂದ್‌ಕುಮಾರನಿಗೂ ಅನಿಸಿತು. ತಕ್ಷಣವೇ ೫೦೦ ರೂ. ಬಾಡಿಗೆಗೆ ಒಂದು ಪುಟ್ಟ ರೂಮ್ ಪಡೆದು ಅಲ್ಲಿ ಟ್ಯೂಶನ್ ಆರಂಭಿಸಿಯೇ ಬಿಟ್ಟ. ಗಣಿತದ ಮೇಲಿನ ಪ್ರೀತಿಯಿಂದ ತನ್ನ ಟ್ಯೂಶನ್ ಕೇಂದ್ರಕ್ಕೆ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ- ‘ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್’ ಎಂದು ಹೆಸರಿಟ್ಟ.
ಮೊದಲ ವರ್ಷ ಟ್ಯೂಶನ್‌ಗೆಂದು ಬಂದವರು ಇಬ್ಬರೇ ಇಬ್ಬರು. ಆ ವರ್ಷ ಅವರಿಬ್ಬರೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದರು. ಮರುವರ್ಷ, ಟ್ಯೂಶನ್‌ಗೆ ಬಂದವರ ಸಂಖ್ಯೆ ೨೫ ದಾಟಿತು. ಹಾಗೆ ಪಾಠ ಹೇಳಿಸಿಕೊಂಡವರೆಲ್ಲ ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಅಂಕ ಪಡೆದರು. ಪರಿಣಾಮ, ಮೂರು ವರ್ಷ ತುಂಬು ವುದರೊಳಗೆ, ಆನಂದಕುಮಾರ್ ಬಳಿ ಟ್ಯೂಶನ್‌ಗೆ ಬಂದವರ ಸಂಖ್ಯೆ 500ನ್ನು ದಾಟಿತು.
ಒಂದು ವರ್ಷ ಟ್ಯೂಶನ್ ಹೇಳಿಸಿಕೊಳ್ಳಲು 1500 ರೂ. ಶುಲ್ಕ ಎಂದು ಈ ವೇಳೆಗೆ ಆನಂದಕುಮಾರ್ ಪ್ರಕಟಿಸಿದ್ದ. ಅಷ್ಟು ದುಡ್ಡು ಕೊಡಲು ವಿದ್ಯಾರ್ಥಿಗಳೂ ಸಿದ್ಧರಾಗಿದ್ದರು. ಹೀಗಿದ್ದಾಗಲೇ, ಅದೊಂದು ದಿನ ಆನಂದ್ ಬಳಿಗೆ ಬಂದ ಒಬ್ಬ ಹುಡುಗ- ‘ಸಾರ್, ನಾನು ತುಂಬಾ ಬಡವರ ಮನೆಯ ಹುಡುಗ. ನನಗೆ ಓದುವ ಆಸೆಯಿದೆ. ದೊಡ್ಡ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ಗಣಿತದಲ್ಲಿ ತುಂಬಾ ಆಸಕ್ತಿಯಿದೆ. ಆದರೆ, ಟ್ಯೂಶನ್‌ಗೆ ಕೊಡುವಷ್ಟು ಹಣವಿಲ್ಲ’ ಎಂದನಂತೆ.
‘ಆ ಹುಡುಗನ ಮಾತು ಕೇಳಿ ತುಂಬಾ ಬೇಸರವಾಯಿತು. ನನ್ನ ತಂದೆ ಆಕಸ್ಮಿಕವಾಗಿ ಸತ್ತುಹೋದಾಗ ನಾನು ಎದುರಿಸಿದ ಪರಿಸ್ಥಿತಿ ನೆನಪಾಯಿತು. ತುಂಬಾ ಬಡಕುಟುಂಬದಿಂದ ಬಂದ ಮೂವತ್ತು ಮಂದಿಗೆ ಉಚಿತವಾಗಿ ಊಟ, ವಸತಿ, ಟ್ಯೂಶನ್ ಹೇಳುವ ನಿರ್ಧಾರಕ್ಕೆ ನಾನು ಬಂದದ್ದೇ ಆಗ. ಈ ವಿಷಯವನ್ನು ಅಮ್ಮನಿಗೆ ಹೇಳಿದಾಗ- ‘ನಾನು ಆ ಮಕ್ಕಳಿಗೆ ಅಡುಗೆ ಮಾಡಿಕೊಡ್ತೇನೆ ಕಂದಾ’ ಎಂದಳು ಅಮ್ಮ. ಆ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯನ್ನು ನನಗೆ ಬಿಡು, ಆ ಜವಾಬ್ದಾರಿಯನ್ನು ನಾನು ತಗೋತೇನೆ ಎಂದು ವೃತ್ತಿಯಿಂದ ಸಂಗೀತಗಾರನಾಗಿರುವ ನಮ್ಮ ಅಣ್ಣ ಪ್ರಣವ್‌ಕುಮಾರ್ ಹೇಳಿದ. ಈ ಇಬ್ಬರ ಬೆಂಬಲದಿಂದ ನನ್ನ ಕೆಲಸ ಹಗುರಾಯಿತು. ಹೀಗೆ ಶುರುವಾದ ತರಗತಿಗೆ ಸೂಪರ್-30 ಎಂಬ ಹೆಸರು ಕೊಟ್ಟೆ ಎನ್ನುತ್ತಾನೆ ಆನಂದಕುಮಾರ್.
ನೀವು ಪಾಠ ಹೇಳುವುದರಲ್ಲಿ ಅಂಥದೇನಿದೆ ವಿಶೇಷ? ನಿಮ್ಮಲ್ಲಿ ಕಲಿತವರೆಲ್ಲ ಗಣಿತದಲ್ಲಿ ಪಂಡಿತರೇ ಆಗಿಬಿಡ್ತಾರಲ್ಲ? ಈ ಪವಾಡ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದರೆ ಆನಂದಕುಮಾರ್ ಹೇಳುವು ದಿಷ್ಟು- ‘ಗಣಿತ ಎಂದರೆ, ಹೆಚ್ಚುಕಮ್ಮಿ ಎಲ್ಲ ವಿದ್ಯಾರ್ಥಿಗಳಿಗೂ ಭಯ. ಆ ಭಯವನ್ನು ನಾವು ಮೊದಲ ದಿನವೇ ಹೋಗಲಾಡಿ ಸುತ್ತೇವೆ. ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು ಇದಿಷ್ಟೇ ಗಣಿತ ಎಂದು ಒತ್ತಿ ಹೇಳುತ್ತೇವೆ. ಮುಖ್ಯವಾಗಿ, ಮೊದಲು ತುಂಬ ಸುಲಭವಾಗಿ ಅರ್ಥವಾಗುವ ಐವತ್ತರವತ್ತು ಸಮಸ್ಯೆಗಳನ್ನು ಬಿಡಿಸಿ, ನಂತರವಷ್ಟೇ ಕಷ್ಟದ ಸಮಸ್ಯೆಗಳಿಗೆ ಕೈಹಾಕುತ್ತೇವೆ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ತರಗತಿಯಲ್ಲೇ ಬಿಡಿಸುತ್ತೇವೆ. ಇದಿಷ್ಟೇ ನಮ್ಮ ಯಶಸ್ಸಿನ ಸೂತ್ರ…’
ಇವತ್ತು ಒಂದು ವಿಷಯಕ್ಕೆ ಭರ್ತಿ ಹತ್ತು ಸಾವಿರ ರೂ. ತಗೊಂಡು ಪಾಠ ಹೇಳುವ ಶಿಕ್ಷಕರಿದ್ದಾರೆ. ಟ್ಯೂಶನ್ ಮಾಫಿಯಾ ಕೂಡ ಎಲ್ಲ ನಗರಗಳಲ್ಲೂ ಇದೆ. ಹೀಗಿರುವಾಗ ಕಡಿಮೆ ಶುಲ್ಕ ಪಡೆಯುವುದರಿಂದ ನಿಮಗೆ ನಷ್ಟ ಆಗಿಲ್ಲವಾ? ಟ್ಯೂಶನ್ ಮಾಫಿ ಯಾದಿಂದ ಬೆದರಿಕೆ ಬಂದಿಲ್ಲವಾ ಎಂಬ ಪ್ರಶ್ನೆಗೆ ಆನಂದಕುಮಾರ್ ಹೇಳುತ್ತಾನೆ-
ಇವತ್ತು ಬಿಹಾರದಲ್ಲಿ ಟ್ಯೂಶನ್ ಕೇಂದ್ರಗಳನ್ನು ಹೆಸರಾಂತ ಕ್ರಿಮಿನಲ್‌ಗಳು ನಡೆಸುತ್ತಿದ್ದಾರೆ, ನಿಯಂತ್ರಿಸುತ್ತಿದ್ದಾರೆ. ನಾನು ತುಂಬಾ ಕಡಿಮೆ ಹಣಕ್ಕೆ ಟ್ಯೂಶನ್ ಮಾಡುತ್ತಿರುವುದರಿಂದ ಅವರ ವ್ಯಾಪಾರಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಈ ಕಾರಣದಿಂದಲೇ ನನ್ನ ಮೇಲೆ ಹಲವರಿಗೆ ಸಿಟ್ಟಿದೆ. ಈಗಲೂ ನನಗೆ ದಿನಕ್ಕೆ ಎರಡಾದರೂ ಜೀವಬೆದರಿಕೆಯ ಕರೆಗಳು ಬರುತ್ತವೆ. ನನ್ನ ಮೇಲೆ ಒಂದೆರಡು ಬಾರಿ ಹಲ್ಲೆಯಾಗಿದೆ. ಒಮ್ಮೆ ಬಾಂಬ್ ದಾಳಿ ಕೂಡ ನಡೆದಿದೆ. ನನ್ನ ಬಳಿ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ. ಇವೆಲ್ಲ ನನ್ನನ್ನು ಹೆದರಿಸುವ ತಂತ್ರಗಳೇ. ದೈವಕೃಪೆಯಿಂದ, ಎಲ್ಲ ಸಂದರ್ಭಗಳಲ್ಲೂ ನಾನು ಪ್ರಾಣಾಪಾಯ ದಿಂದ ಪಾರಾಗಿದ್ದೇನೆ. ಈಗ ಗನ್‌ಲೈಸೆನ್ಸ್ ಪಡೆದಿದ್ದೇನೆ. ಬೆಂಗಾವಲಿಗೆ ಅಂಗರಕ್ಷಕರನ್ನು ಇಟ್ಟುಕೊಂಡೇ ಓಡಾಡುತ್ತಿದ್ದೇನೆ. ಒಂದಂತೂ ನಿಜ, ದುಡ್ಡು ನನಗೆ ಮುಖ್ಯವಲ್ಲ. ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬೇಕು ಎಂಬುದು ನನ್ನ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದೇನೆ. ಮೊನ್ನೆ ಮೊನ್ನೆಯವರೆಗೂ ಕ್ರೈಂ ಸಿಟಿ ಎಂದು ಕರೆಸಿಕೊಂಡಿದ್ದ ಪಾಟ್ನಾವನ್ನು ಈಗ ‘ಎಜುಕೇಷನ್ ಸಿಟಿ’ಎಂದು ಕರೆಯುವಂತೆ ಮಾಡಿದ್ದೇನೆ. ಇಂಥದೊಂದು ಅಪರೂಪದ ಬದಲಾವಣೆ ತಂದ ಹೆಮ್ಮೆ ನನಗಿದೆ…
ಈಗ ಏನಾಗಿದೆ ಗೊತ್ತೆ? ಪಾಟ್ನಾದ ಆ ಹಳ್ಳಿಹೈದನ ಯಶೋಗಾಥೆ ದೇಶದ ಗಡಿದಾಟಿ ಅಮೆರಿಕ ತಲುಪಿ ಅಲ್ಲೂ ಸುದ್ದಿಯಾಗಿದೆ. ಜಗತ್ತಿನ ಅತ್ಯುತ್ತಮ ಕೋಚಿಂಗ್ ತರಗತಿಗಳ ಪೈಕಿ ಆನಂದಕುಮಾರ್‌ನ ಸೂಪರ್-30 ಶಾಲೆಯೂ ಸ್ಥಾನ ಪಡೆದು ಕೊಂಡಿದೆ. ಅದನ್ನು ಭಾರತದ ಅತ್ಯುತ್ತಮ ಕೋಚಿಂಗ್ ಕ್ಲಾಸ್ ಎಂದೇ ಬಣ್ಣಿಸಲಾಗಿದೆ. ಈ ಅಪರೂಪದ ಸಾಧನೆಗೆ ಅಮೆರಿಕ ಸರಕಾರ ಒಂದು ವಿಶೇಷ ಪ್ರಶಸ್ತಿಯನ್ನೂ ನೀಡಿದೆ. ಒಬಾಮಾ ಅವರ ವಿಶೇಷ ಕಾರ್ಯದರ್ಶಿ ರಶೀದ್ ಹುಸೇನ್, ಈ ಪ್ರಶಸ್ತಿಯನ್ನು ಆನಂದಕುಮಾರ್‌ಗೆ ತಲುಪಿಸಿ ಬೆನ್ನುತಟ್ಟಿದ್ದಾರೆ. ಕೈ ಮುಗಿದಿದ್ದಾರೆ.
ಆ ಮಹಾರಾಯ ಒಬಾಮಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗಣಿತದ ಹಲವು ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡುವಂತೆ ಅಮೆರಿಕದ ವಿಶ್ವವಿದ್ಯಾಲಯಗಳೂ ಆನಂದಕುಮಾರ್ ಅವರಿಗೆ ಆಹ್ವಾನ ನೀಡಿವೆ. ಅಮೆರಿಕದಲ್ಲಿ ಗಣಿತದ ಅಭ್ಯಾಸ ಮಾಡಬೇಕು ಎಂದುಕೊಂಡಿದ್ದ ಹುಡುಗ, ಇವತ್ತು ಅಲ್ಲಿನ ಅಧ್ಯಾಪಕರುಗಳಿಗೇ ಉಪನ್ಯಾಸ ನೀಡುವ ಮಟ್ಟ ತಲುಪಿಕೊಂಡಿದ್ದಾನೆ, ಕೇವಲ ಸ್ವಸಾಮರ್ಥ್ಯದಿಂದ!
ಇಂದು ಆನಂದನಿಂದಾಗಿ ಬಡಮಕ್ಕಳು ಉನ್ನತ ಹುದ್ದೆಗೇರು ವಂತಾಗಿದೆ. ಗಣಿತ ಸುಲಿದ ಬಾಳೆಹಣ್ಣಿನಂತಾಗಿದೆ. ಜನಸೇವೆ ಮಾಡಲು ರಾಜಕೀಯವೇ ಬೇಕಾಗಿಲ್ಲ. ದುರ್ದೈವವೆಂದರೆ ಜನ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಬರುವವರು ಟ್ಯೂಶನ್ ಹೇಳಿಸಿ ಕೊಂಡೂ ಎಲ್ಲಾ ವಿಷಯಗಳಲ್ಲೂ ಫೇಲಾದವರೇ. ಇರಲಿ ಬಿಡಿ.
ಆನಂದನಂಥವರು ಸ್ಫೂರ್ತಿಯ ಚಿಲುಮೆಯಾಗುತ್ತಾರೆ.