Wednesday, 27 June 2018

________ವಿರಹಿಣಿ....._______



ಅಲ್ಲಿ ಗುಡುಗಿದೆಯಂತೆ...ಎಲ್ಲೋ...
ಮಳೆ ನಿಂತ ಹೊತ್ತು.......
ಕಾಯುತ್ತಿರುತ್ತೇನೆ ಸಂಜೆಯ ಮಬ್ಬಿಗೆ ಆಗೀಗ ಬೆಳಗುವ
ಕೋಲ್ಮಿಂಚಿನಲ್ಲಿ ನಿನ್ನ ಮೊಗದ ಮಂದಹಾಸ ನಿರುಕಿಸುತ್ತಾ..........

ಎದೆಯ ಬಾಗಿಲ ತೆರೆದು ಮಧುರ ಗಾನವ ಹೊಸೆದು.....ಆಸೆ ಕಣ್ಣಲ್ಲಿ
ಕಾಯುತ್ತಿದ್ದೇನೆ...
ನೀ ಬಂದು ಸೇರುವೆಯೇನು ಒಲವ ತಂಗಾಳಿ.....

ಒಣಗಿ ಹೋಗಿದೆ ಮರುಭೂಮಿ ಇನ್ನಷ್ಟು ಕಡುವಿರಹಬೇಗೆಯಲಿ ...ಮನಕೆ ತಂಪೆರಚು ಝರಿಯಾಗಿ ಹರಿದು ಬಾ....
ಕರಟಿಹೋಗಿದೆ ಗರಿಕೆ ತುದಿ....
ಹೂ ಬನ ಬಾಡಿದೆ...ಕಮರುವ ಮುನ್ನ
ಹಸಿರನೆರಚು........
ಕರಣಿಕನಿಗೆ ಗೊತ್ತಿರುವ ಬಳಲಿಕೆಯ ಲೆಕ್ಕಾಚಾರ....
ಬರುವೆಯೋ ಬಾರೆಯೋ...
ಅಂಜಿಕೆಗೂ ಅಂಜಿಕೆ...ಒಂದು ಹುಲ್ಲಕಡ್ಡಿಯ ಭರವಸೆ...
ಮಿಂಚಿನ ತುದಿಹಿಡಿದು ಬಾಗಿಲಾಚೆ ಆಗೀಗ ಜಗ್ಗಿ ನೋಡುತ್ತೇನೆ.....
ನಿನ್ನ ಬರವು ಖಂಡಿತ... ಗವ್ವೆನ್ನುವ ಕಾರ್ಗತ್ತಲಲೂ ಪಿಸುನುಡಿ ಕೇಳಿ ಬಂದೀತು ಜಿರ್ರೆನ್ನುವ ಜೀರುಂಡೆಗಳ ಸದ್ದನಡಗಿಸಿ......
ಆ ಮೂಲೆ ಕೋಣೆಯೊಳಗಿನ
ಮೂರು ಕಾಲಿನ ಮಂಚ ಲೆಕ್ಕವಿಟ್ಟಿದೆ ನಮ್ಮ ಬೆವರಹನಿಗಳದು....
ಸುಣ್ಣ ಕಾಣದ ಗೋಡೆಗಳ ಮಾತುಗಳು
ಬರಿ ನಿನ್ನವೇ.....
ಸರಸದ ನೆನಪು ಹೊರಹೋಗದಂತೆ...
ಹನ್ನೆರಡು ಇಂಚಿನ ಹದಿಮೂರು ಮೊಳೆಗಳ ಜಡೆದ ಕರಿಕಿಟಕಿ....
...
ಕಾಯ ತಂಪಾಗುವ ಮುನ್ನ ಮತ್ತೊಮ್ಮೆ...
ಬರುವೆಯಲ್ಲ.... ಬಂದುಬಿಡು...
ಬಾರದಿರೆ.... ನಾ ಮತ್ತೆ..... ಫ್ರೇಮಿನೊಳಗಿನ     ಬರಿಯ ನೆನಪು.....


    ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು


ಸಂಜೆ ನಡಿಗೆ



ನಡೆಯುವುದು ಸಾಮಾನ್ಯ ನಾನೂ ಹಾಗೇನೇ 
ಸಂಜೆ ಮಬ್ಬಿಗೆ...  ಒಮ್ಮೊಮ್ಮೆ  ಕಡಲತಡಿಯ ಮರಳಿನ ಹಾದಿ ಹಿಡಿದು....
ಸಹಜವಾಗಿಯೇ ನಿಮಗೆ ಅಚ್ಚರಿಯಾದೀತು....
ನಿಮ್ಮ
ಅನುಭವಕ್ಕೆ ನಿಲುಕದ ಎಷ್ಟೋ ಯೋಚನೆಗಳ ಕಟ್ಟುವ ಕೆಲಸ.....ಹಾದಿಯುದ್ದಕ್ಕೂ....
ಆ ಕ್ಷಣ
ಕಡಲಾಳ ಒಡಲಾಳ ಎರಡೂ ಒಂದೇ ತೆರ....
ಈಜುವ ಛಲ ಎರಡರೊಳಗಿಳಿದು....
ಮೌನವಾಗಿ ನಗುತ್ತೇನೆ ....
ಅಲ್ಲೇ ಅಲೆಯ ಮೇಲೆ ತೇಲಿ ಬಂದೊಂದು
ನಕ್ಷತ್ರ ಮೀನಿಗೂ ನನ್ನ ನಗು ಇಷ್ಟವಾಗಿರಬೇಕು...
ಪುಟಪುಟನೆ ಖುಷಿಯಿಂದ ಎಗರುವುದ ನೋಡುತ್ತಾ ಕಳೆದು ಹೋಗುತ್ತೇನೆ...
ಕಡಲ ತೀರದ ತುಂಬಾ
ನಿನ್ನೆ ನಡೆದ ಹಾದಿಯ ಹೆಜ್ಜೆ ಗುರುತುಗಳು ಹಾಗೇ ಇವೆ....
ಹತ್ತಾರು ಮರಳಕಣಗಳು ಸವೆದು ಹೋಗಿರಬಹುದು ಅಷ್ಟೆ....
ಭಾವುಕನಾಗುತ್ತೇನೆ......
ಇಂದಿನತನಕ ಯಾವ ಅಲೆಗಳಿಗೂ ನನ್ನ ಹೆಜ್ಜೆಗಳ ಗುರುತು ಅಳಿಸುವ ಶಕ್ತಿ ಇದ್ದಿರಲಿಲ್ಲ......ಮುಂದೊಂದು ದಿನ ಬರಬಹುದೇನೋ....
ಬರಲೇಬೇಕು...
ಅದೇ ಕಡಲು ಅದೇ ಹಾದಿ...
ಅದೇ ಭೋರ್ಗರೆತ.... ಅವೇ ಅಲೆಗಳ ಅಬ್ಬರ.....
ಇಷ್ಟಾಗಿಯೂ  ಅಂದುಕೊಳ್ಳುತ್ತೇನೆ .....
ನನ್ನ ಹೆಜ್ಜೆಗಳನ್ನು ಅನುಸರಿಸಿ ಬದುಕುವ ಮಂದಿ ಬಂದಾರು......
ಕುಳಿತು ಕಾಯುತ್ತಿರುತ್ತೇನೆ...
ವಿಶ್ರಾಂತಿ ಎಲ್ಲಿಂದ ಸಿಗಬೇಕು.....
ಯೋಚನೆಗಳ ಸರಪಣಿಯೊಳಗೆ
ಬಂಧಗಳು ಬಂಧಿಯಾಗಿವೆ....
ಮೌನ ಉಳಿಯುತ್ತದೆ ಕವಿತೆಯಲ್ಲಿ .....
ಮತ್ತೆ ಎಚ್ಚೆತ್ತು... ನಡೆಯುತ್ತೇನೆ...
ಅದೇ ಉಸುಕಿನ ಜೊತೆ ಮುಸುಕಿನ...
ಗುದ್ದಾಟ....
. ಮತ್ತೊಮ್ಮೆ
ಅದೇ ಮಬ್ಬಿನೊಳಗೆ.... ಸೇರಿ ....
ಹಾಗೆ ಮೌನವಾಗಿ ಮತ್ತೆ ನಗುತ್ತೇನೆ....
              ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು

ಸಂಭಾಷಣೆ
ಗೆಳತಿ....
ಹೊತ್ತಲ್ಲದ ಹೊತ್ತಲ್ಲಿ ಹತ್ತಿರ ಬಂದು
ಗೊತ್ತಿಲ್ಲದ ಗುಟ್ಟು ಗೊತ್ತಾಗದಂತೆ ಕಿವಿಯಲ್ಲಿ ಪಿಸು ನುಡಿದದ್ದು ನೆನಪಿದೆ....    ಮಸ್ತಕದೊಳಗೆ ಹೊಕ್ಕಂತಿತ್ತು...
ಗುಟ್ಟು ಗೊತ್ತಾಗಲಿಲ್ಲ.....

ಗೆಳೆಯ....
ಏಕಾಂತದಲ್ಲಿ ಕೊಂಚ ದೂರ ಸರಿದು...
ನಿನ್ನ ಮನದೊಳಗೂ ಪ್ರತಿಧ್ವನಿಸುವಂತೆ.....
ಕೂಗಿ ಹೇಳಿದ್ದೆ ಆ ಗುಟ್ಟು...
ಆ ಕ್ಷಣ ಸರಿಯಾಗಿಯೇ ಇತ್ತು....
ನನ್ನ ಗುಟ್ಟಿನ ಗುಟ್ಟು ತಿಳಿಯಲಿಲ್ಲವೇನೋ.....
ನಾನಷ್ಟು ಕೂಗಿದರೂ ಅರ್ಥವಾಗದ ಭಾವ ....
ಭಾಸವಾಗುತ್ತಿತ್ತು... ನಿನ್ನ ಮುಖ ನೋಡಿ  ...
ನಾ ಸುಮ್ಮನಾಗಿದ್ದೆ....

ಹೌದು ಗೆಳತೀ...
ಅಂದು ಆ ಕ್ಷಣದಲ್ಲಿ ನಿನ್ನ ಗುಟ್ಟಿನ
ಜೊತೆ  ಹುಟ್ಟಿದ್ದ ಆಲೋಚನೆಯನ್ನು ಅಂದೇ ವಿಚಾರ ಮಾಡಬೇಕಿತ್ತು.....
ಮತ್ತೆ ಮುತ್ತಿನ ಮತ್ತಲ್ಲಿ ಮರೆತುಬಿಟ್ಟೆ...
ಕಡೆಗೂ ಆ ರೂಪ ಚೌಕಟ್ಟು ಗುಟ್ಟು ರಟ್ಟಾಗಲಿಲ್ಲ.....

ಗೆಳೆಯಾ....
ಅದು ಬರಿಯ ಕನಸಾಯಿತು....
ಎಲ್ಲಿಯ ಮುತ್ತು?.... ಯಾವ ಮತ್ತು?....
ಕಿವುಡು ಕಿವಿಗಳಿಗೆ... ಕಲ್ಪನೆಯ ಮಾತುಗಳು ಕೇಳಿಸವು....
ಗುಟ್ಟು ರಟ್ಟಾಗದು ..... ನನ್ನ ಚೌಕಟ್ಟಿನೊಳಗೆ......

ಗೆಳತೀ...
ಇದೊಂದು ಈ ಬಾರಿ....
ದಿನಚರಿಮುಗಿದ ಮೇಲೆ ಇನ್ನೊಮ್ಮೆ ಸಮಯ ಹೊಂದಿಸಿ....
ನಿನ್ನ ಹೊಟ್ಟೆಯೊಳಗಿಟ್ಟು ಮರೆತ ...
ಗುಟ್ಟು ನೆನಪಿಸು ಮತ್ತೆ....
ನನಗೂ ಅರ್ಥವಾಗುವಂತೆ...
ಹರೆಯದ ಹಯ ಸಮಯಕ್ಕೆ ಮರುಳಾಗಿ....
ಮರೆಯದಿರುವಂತೆ ಕಟ್ಟಿ ಬಿಡು ದಾರದೊಲವಿನಲ್ಲಿ.....ದೂರಾಗದಂತೆ...

ಗೆಳೆಯಾ...
ದಿನಚರಿಯಲ್ಲಿ ಸಮಯವೆಲ್ಲಿ..
 ನಿನಗೆ ಹೊಂದಿಸಿಕೊಳ್ಳಲು?
ಕರಗಿ ಹೋಗಿರಬಹುದು ಹೊಟ್ಟೆಯೊಳಗಿಟ್ಟ ಗುಟ್ಟು....
ನೆನಪಾಗದು.... ಹೊಸ ಪದ ಹೊಸ ಅರ್ಥ......
ಏತರ ಬಂಧನ ಎಲ್ಲಿದೆ ಗೆಲುವು?
ಸವಿನೆನಪುಗಳ ಪೋಣಿಸಿದ ದಾರ ಕಡಿದಿದೆಯಲ್ಲ.....
ಗುಟ್ಟು ರಟ್ಟು ನನ್ನೊಳಗೇ.... ನಿನಗೆ ತಿಳಿದಿಲ್ಲ....

ಗೆಳತೀ....
ಗೊಂದಲ ಬೇಕಿಲ್ಲ ... ಹಗಲು ಹಗಲಂತೆ ಇರಬಹುದು ನಿಮ್ಮ ಕಡೆ....
ನನ್ನೊಳಗಿನ ಮೌನ  ಮತ್ತು ಕತ್ತಲೆಗಳೆರಡೂ..
ತೆರೆದುಕೊಂಡಿದೆ ಈಗ ಬೆಳಕಿನೆಡೆಗೆ....
ಹೊರಡೋಣವೇ ಮತ್ತೆ ನಿರಂತರ... ಅನಂತದೆಡೆಗೆ???

ಗೆಳೆಯ...
ಸರಿ ಬಿಡು...
ಪ್ರಾಂಜಲ ಶುಭ್ರ ಮನಸ್ಸು ...
ಇತ್ತೀಚೆಗೆ ನನಗೂ....
ಹಗಲು ಹಗಲೇ ಇಲ್ಲಿ....
ಕತ್ತಲೆ ಕಳೆದು ಬೆಳಕು ಮೂಡುವ ಕಾಲ
ಬಂದಿರಬೇಕು ನಿಮ್ಮಲ್ಲಿ....
ಜೊತೆಗೆ ಬರುವೆ...
ನಿನದೇ ದಾರಿ ಬದುಕು ನಡೆದಂತೆ....
ಸೋಲದಿರಲಿ ....
ನಿನ್ನ ಛಲ....
ಗುಟ್ಟು ರಟ್ಟುಗಳ ಮುಚ್ಚಿಬಿಡು....
ಸಮಯಕ್ಕೆ ನೆನಪಿಸುವೆ.... ಸಾರಾಂಶವನು....
ಹಾಗೆ  ಮತ್ತೊಮ್ಮೆ
ಕಾಲುಗಳು  ಸೋತರೂ ನನ್ನ ಹೆಜ್ಜೆಗಳು
ಬರುವವು ನಿನ್ನೊಂದಿಗೆ....
ಹೊಸ ಗುರಿಯ.... ಹೊಸ ಹಾದಿಯೆಡೆಗೆ....

---ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು
Address:
Shrikrishna C N
H.No. 9-T-120/3 (1) "Shrinilaya"
Kuntalpady B/H Shasthavu Bhajana Mandir ,
Shakthinagar P.O 
Mangalore-  575016
Mob: +91-9739975363