Sunday 18 August 2024

ಉಪಾಕರ್ಮ : ಬೆಂಗಳೂರು

ದಿನಾಂಕ : 19,ಆಗಸ್ಟ್ 2024 ಸೋಮವಾರ, ಮುಂಜಾನೆ 5.00 ರಿಂದ 7.30

ಸ್ಥಳ : ಉಪ್ಪಂಗಳ, 369,7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ, ಹೆಬ್ಬಾಳ, ಬೆಂಗಳೂರು 

ಕಾರ್ಯಕ್ರಮ : ಬೆಳಗ್ಗೆ 5 ಕ್ಕೆ ಪ್ರಾರಂಭ.   ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ, ಋಷಿ ಪೂಜೆ,  ಉಪಾಕರ್ಮ, ವೇದಾರಂಭ.

ಭಾಗವಹಿಸುವ ನೀವು ತರಬೇಕಾದ ಸಾಮಗ್ರಿ 

ಪಂಚಪಾತ್ರೆ ಉದ್ಧರಣೆ, ನೀರಿಗೆ ತಂಬಿಗೆ , ಹರಿವಾಣ, ಜನಿವಾರ ದಾನಕ್ಕೆ ಮತ್ತು ಧಾರಣೆಗೆ,  ದಾನಕ್ಕೆ ದಕ್ಷಿಣೆ.

7.30 ರಿಂದ ಉಪಾಹಾರ 

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿವುದಾದರೆ ತಮ್ಮ ಹೆಸರನ್ನು : ನಾಗರಾಜ ಉಪ್ಪಂಗಳ -9535000365, ಇವರಿಗೆ ಮುಂಚಿತವಾಗಿ ಕೊಡಿ ( ವ್ಯವಸ್ಥೆ ದೃಷ್ಟಿಯಲ್ಲಿ )

ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಶ್ರಯದಲ್ಲಿ ನಡೆಯುವ ಉಪಾಕರ್ಮವು ಪದ್ಮನಾಭ ನಗರದ ಲಕ್ಷ್ಮೀಕಾಂತ ದೇವಸ್ಥಾನದ ಆವರಣದಲ್ಲಿನ ಮಂಟಪದಲ್ಲಿ ಜರುಗಲಿದೆ

19-08-2024 ಸೋಮವಾರ  ಬೆಳಗ್ಗೆ 6.00ರಿಂದ 9.00ರ ವರೆಗೆ ನಡೆಯಲಿದೆ.

ತಮ್ಮ ಅನುಕೂಲ ನೋಡಿಕೊಂಡು ಭಾಗವಹಿಸಿ

Friday 9 August 2024

ನಾಗರ ಪಂಚಮಿ ನಾಡಿಗೆ ದೊಡ್ಡದು - ರವೀ ಸಜಂಗದ್ದೆ

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಭಯ, ಭಕ್ತಿ, ಶ್ರದ್ಧೆಯಿಂದ ಆಚರಿಸಲ್ಪಡುವ ನಾಗರ ಪಂಚಮಿ, ಯುಗಾದಿಯಂದು ಹೊಸ ವರ್ಷ ಶುರುವಾದ ನಂತರದ ಪ್ರತಿ ಋತುವಿನಲ್ಲಿ ಬರುವ ಮೊದಲ ಹಿಂದೂ ಹಬ್ಬವಿದು.

ಜನಮೇಜಯ ಹೆಸರಿನ ರಾಜ ತನ್ನ ತಂದೆಯ ಸಾವಿಗೆ ಸರ್ಪವೊಂದು ಕಾರಣ ಎಂದು ತಿಳಿದು ಭೂಲೋಕದ ಸರ್ಪ ಸಂಕುಲವನ್ನು ನಿರ್ನಾಮ ಗೊಳಿಸಲು ಸರ್ಪಯಜ್ಞ ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಸಂಬಂಧಿ ಆಸ್ತಿಕ ಋಷಿ ಸರ್ಪಯಜ್ಞ ಮಾಡುತ್ತಿರುವ ಜನಮೇಜಯ ನನ್ನು ಪ್ರಸನ್ನಗೊಳಿಸುತ್ತಾನೆ. ರಾಜನು ನಿನಗೆ ಬೇಕಾದ ವರ ಕೇಳು ಎಂದಾಗ, 'ಪ್ರಾಣಿಹಿಂಸೆ ಮಹಾಪಾಪ, ನಿನ್ನ ಸರ್ಪಯಜ್ಞ ಸರ್ಪಗಳ ನಾಶಕ್ಕೆ ಕಾರಣವಾಗುತ್ತದೆ. ಪ್ರಯತ್ನ ಬಿಟ್ಟುಬಿಡು ಎನ್ನುವ ವರ  ಕೇಳುತ್ತಾನೆ. ಜನಮೇಜಯ ರಾಜ ಆಸ್ತಿಕ ಋಷಿಯ ಮಾತಿಗೆ ಬೆಲೆ ಕೊಟ್ಟು ಸರ್ಪಯಜ್ಞ ನಿಲ್ಲಿಸಿದ ದಿನ ಇದೇ ಪಂಚಮಿ, ನಾಗರ ಪಂಚಮಿ, ಪುರಾಣದ ಇನ್ನೊಂದು ಕತೆಯ ಪ್ರಕಾರ, ಹಾವು ಕಚ್ಚಿ ಮಡಿದ  ಸಹೋದರನನ್ನು ಸಹೋದರಿಯೊಬ್ಬಳು ಅದೇ ಹಾವನ್ನು ಭಕ್ತಿಭಾವದಿಂದ ಪೂಜಿಸಿ, ಪ್ರಾರ್ಥಿಸಿ ಬದುಕಿಸಿಕೊಂಡ ದಿನವು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು.

ನಾಗರ ಪಂಚಮಿ ಜತೆಗೆ ಈ ದಿನವನ್ನು ಭ್ರಾತೃತ್ವದ ಹಲವೆಡೆ ಆಚರಿಸಲಾಗುತ್ತದೆ. ಅದಲ್ಲದೆ ಸತ್ಯೇಶ್ವರಿ ಹೆಸರಿನ ದೇವತೆಯೊಬ್ಬಳು ನಾಗರ ಪಂಚಮಿಯ ಹಿಂದಿನ ದಿನ ಮೃತನಾದ ತನ್ನ ಸಹೋದರನನ್ನು ನನದು ನಾಗರ ಪಂಚಮಿ ದಿನ ಅನ್ನ-ನೀರು ತ್ಯಜಿಸಿ ಉಪವಾಸ ಮಾಡುತ್ತಾಳೆ. ಇಂದಿಗೂ ಹಬ್ಬದ ದಿನದಂದು ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.

ಜನರು ತಮ್ಮ ತಮ್ಮ ಪರಿಸರದ ನಾಗನಕಟ್ಟೆ, ನಾಗಬನ, ಸುಬ್ರಹ್ಮಣ್ಯ, ಶಾಸ್ತಾರ ದೇವಸ್ಥಾನಗಳಿಗೆ ತೆರಳಿ ನಾಗದೇವತೆಗೆ ಶ್ರದ್ಧಾಭಕ್ತಿಯಿಂದ ತನಿ ಎರೆದು, ಪಾಲು-ಸೀಯಾಳ, ಹಿಂಗಾರ-ಕೇದಗೆ ಹೂವು ಸಮರ್ಪಿಸಿ, ಪಂಚಾಮೃತ ಅಭಿಷೇಕ ನೆರವೇರಿಸಿ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ,  ಕಾಸರಗೋಡು ಭಾಗಗಳಲ್ಲಿ ಕುಟುಂಬ, ಭೌಗೋಳಿಕ ಪ್ರದೇಶಕ್ಕೆ ಒಂದರಂತೆ ನಾಗನ ಕಟ್ಟೆ ಅಥವಾ ನಾಗಬನ ಇದೆ. ಪರಿಸರದ ರಕ್ಷಣೆ ಮತ್ತು ಜನರ ಯೋಗಕ್ಷೇಮವನ್ನು ನಾಗರಾಜ ನೋಡಿಕೊಳ್ಳುತ್ತಾನೆ, ಎಲ್ಲ ದುಷ್ಟಶಕ್ತಿಗಳಿಂದ ಸರ್ಪವಂದ್ಯ ನಾಗರಾಜ ರಕ್ಷಿಸಿ ಸಲಹುತ್ತಾನೆ ಎನ್ನುವ ನಂಬಿಕೆಗೆ ತಲೆತಲಾಂತರದ ಭವ್ಯ ಇತಿಹಾಸವಿದೆ. ಅಂದು ನಾಗನನ್ನು ಪೂಜಿಸುವುದರಿ೦ದ ಜೀವನದಲ್ಲಿನ ಎಲ್ಲ ಸಂಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಸಿ ಅಪೇಕ್ಷಿತ ಫಲ ಸಿಗುತ್ತದೆ ಎನ್ನುವುದು ನಂಬಿಕೆ.

ಸಮೃದ್ಧ ಮಳೆಗಾಲದ ಸಮಯದಲ್ಲೇ ನಾಗರ ಪಂಚಮಿ ಹಬ್ಬ ಬರುತ್ತದೆ. ಇದರ ಹಿಂದಿನ ಕಾರಣ ಹುಡುಕುತ್ತಾ ಹೋದರೆ, ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶ ಎದ್ದು ಕಾಣುತ್ತದೆ. ಹಾವಿಗೆ ಹಾಲೆರೆದು ಪೂಜಿಸುವ ಮೂಲಕ 'ಯಾವುದೇ ರೀತಿಯಲ್ಲಿ ಮನುಕುಲ ಮತ್ತು ಸಾಕುಪ್ರಾಣಿಗಳಿಗೆ ಅಪಾಯ ಮಾಡದಿರು ತಾರದಿರು ನಾಗಣ್ಣಾ' ಎಂದು ಬೇಡಿಕೊಳ್ಳುವ ಸಾಧ್ಯತೆ ಇರುವುದು ದಿಟ. ದೈವಿಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯ ಮೇಲೆ  ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ವಿಶೇಷ. ನಾಗದೇವರು ಕರಾವಳಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಶ್ರೀಕೃಷ್ಣ ದಿನ ಕಾಳಿಂಗ ಸರ್ಪವನ್ನು ಕಾರಣಕ್ಕಾಗಿ ನಾಗಾರಾಧನೆಯನ್ನು  ಮಾಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬವು 'ರೊಟ್ಟಿ ಪಂಚಮಿ ಹೆಸರಿನ ಬಹುದೊಡ್ಡ ಹಬ್ಬ, ಮದುವೆಯಾಗಿ ಗಂಡನ ಮನೆಯಲ್ಲಿ ಇರುವ ಹೆಣ್ಣು ಮಗಳನ್ನು ನಾಗರ ಪಂಚಮಿ ಹಬ್ಬಕ್ಕೆ ತವರಿಗೆ ಕರೆದುಕೊಂಡು ಬರುವ ಪದತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.

ಮುಂಗಾರು ಬೆಳೆ ಬೆಳೆಯುವ ಸಂದರ್ಭದಲ್ಲಿ ಈ ಹಬ್ಬ ಬರುವುದರಿಂದ ರೈತರೂ ಸಂಭ್ರಮದಿಂದ ಹುತ್ತಕ್ಕೆ ಹಾಲೆರೆಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಹಾವುಗಳು ಕೃಷಿ ಸ್ನೇಹಿಗಳು, ಭೂಮಿಯ ಲಿರುವ ಹಲವಾರು ಕ್ರಿಮಿಕೀಟಗಳನ್ನು ಆಹಾರವಾಗಿ ತಿಂದು ಹಾವುಗಳು ರೈತನ ಬೆಳೆಗಳಿಗೆ ಪೂರಕವಾಗಿ ಸಹಕರಿಸುತ್ತವೆ. ಇದಕ್ಕೆ thanks giving ಎನ್ನುವಂತೆ ರೈತರು ನಾಗರ ಪಂಚಮಿಯ ದಿನ ಹಾವುಗಳಿಗೆ ಹಾಲೆರೆದು ಪೂಜಿಸುತ್ತಾರೆ. ಪಡೆದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವ ದ್ಯೋತಕ ಹೊಂದಿರುವ ವಿಶಿಷ್ಟ ಹಬ್ಬವಿದು. ನಾಗರಹಾವು ನಿಜವಾದ ನಾಗನಾದರೆ, ನಾಗನಕಲ್ಲು ನಿಜನಾಗನ ಸಂಕೇತ  ಎನ್ನಲಡ್ಡಿಯಿಲ್ಲವೇನೋ?

'ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ...' ಎನ್ನುವ ಬಸವಣ್ಣನವರ ವಚನ ಮಾನವನ ನಿಜಬಣ್ಣವನ್ನುಸ್ಪಷ್ಟವಾಗಿ ಹೇಳಿದೆ. ಗುಣಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸುವ ಮನುಷ್ಯನ ಆತ್ಮವಂಚನೆಯ ವರ್ತನೆಗೆ ಕನ್ನಡಿ ಹಿಡಿದಂತಿದೆ ವಚನ ಪ್ರಕೃತಿಯು ಸಮೃದ್ಧ ಫಲ-ಫಸಲನ್ನು ಕೊಡಲು ಮೊದಲ್ಗೊಂಡು, ಗರ್ಭಾಂಕುರವಾಗುವ  ಕಾಲಮಾನ ಶ್ರಾವಣದ ತಿಂಗಳು. ಉತ್ತಮ ಮಳೆಯಾಗಿ, ಸಸ್ಯ ಶ್ಯಾಮಲೆ ಪ್ರಕೃತಿಮಾತೆ ಹಸಿರಿನಿಂದ ಮೈದುಂಬಿ ಕೊಂಡು ಕಂಗೊಳಿಸುವ ಕಾಲವಿದು. ಶ್ರಾವಣ ಮಾಸದ ಶುಕ್ಲಪಕ್ಷದ ನಾಗರ ಪಂಚಮಿಯಿಂದ ತೊಡಗಿ ಮುಂದೆ ಹಬ್ಬ ಹರಿದಿನಗಳು ಸಾಲುಗಟ್ಟಿ ಬರುತ್ತವೆ. ಇಂದು ನಾಗರ ಪಂಚಮಿ, ನಂತರ ವರಮಹಾಲಕ್ಷ್ಮಿ ಹಬ್ಬ. ಮತ್ತೆ ಕೃಷ್ಣ ಜನ್ಮಾಷ್ಟಮಿ. ತದನಂತರ ಗಣೇಶ ಚತುರ್ಥಿ, ಹಾಗೇ ಮುಂದು ವರಿದು ನವರಾತ್ರಿ, ದಸರಾ, ದೀಪಾವಳಿ, ಮುಂದಿನ ಮೂರು ತಿಂಗಳು ಸಾಲು ಸಾಲು ಹಬ್ಬಗಳ ಹಬ್ಬ ಕಣ್ಣುಗಳ ಮೂಲಕವೇ ಕಿವಿಯ ಕೆಲಸವನ್ನೂ ಮಾಡುವುದು ಸರ್ಪಗಳ ಜಾಣೆ, ಅದರಂತೆ ಚಕ್ಷು ಮತ್ತು ಶ್ರವಣ ಹೀಗೆ ಎರಡೂ ಇ೦ದ್ರಿಯಗಳನ್ನು ಸರಿಯಾಗಿ ಮತ್ತು ಸಮರ್ಥವಾಗಿ ನಿರ್ವಹಿಸಿ ವಿನಿಯೋಗಿಸುವ ಜಾಡು ಮತ್ತು ಜಾಣ್ನೆ ನಮ್ಮದಾಗಬೇಕಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ರಭಸದಿಂದ ಹರಿಯುವ ಹಾವಿನ ಸ್ವಭಾವ ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಿ ಕ್ರಿ ಯಾ ಶೀಲರಾಗಲು ಪ್ರೇರಕವಾಗಿದೆ. ಒಂದೇ ಹುತ್ತದಲ್ಲಿ ಹಲವು ಸರ್ಪಗಳು ನೆಲೆಸಿ ಸಾರುವ ಅನ್ನೋನ್ಯತೆ, ಒಗ್ಗಟ್ಟು, ಸಹೋದರ ಭಾವ ಮಾನವ ಬದುಕಿಗೆ ಆದರ್ಶ, ಮೂಳೆಗಳಿಲ್ಲದಿದ್ದರೂ ನರಗಳ ಸಹಾಯದಿಂದ ಎಲ್ಲೆಡೆ ಹರಿದಾಡುವ ಉರಗಗಳು ನಮ್ಮೆಲ್ಲರ ನರನಾಡಿಗಳನ್ನು ಚೆನ್ನಾಗಿಡಲಿ.

'ಸಹಸ್ರಶೀರ್ಷಂ ಜಗದೇಕ ಕು೦ಡಲಿ ಪೀತಾಂಬರಂ ಧಮ್ರಸಹಸ್ರಲೋಚನಂ। ಉದಾರವೀರ್ಯ ವಿಷದಂಷ್ಟ್ರಕಾನನಂ ನಮಾಮ್ಯನಂತಂ ಜಗದೇಕನಾಥಂ।।'- ಸಾವಿರ ಹೆಡೆಗಳುಳ್ಳ ಜಗದೇಕ ಕುಂಡಲನಾಗಿರುವ, ಪೀತಾಂಬರಧಾರಿಯಾಗಿರುವ ಹೊಗೆ ಕಾರುವ ಕಣ್ಣುಗಳಿರುವ, ಅಪರಿಮಿತ ಪರಾ ಕ್ರಮಿಯಾದ, ವಿಷಪೂರಿತ ಕೋರೆ ಹಲ್ಲುಗಳಿರುವ, ಜಗದೊಡೆಯ ಅನಂತ ಮೂರ್ತರೂಪನಿಗೆ ಪ್ರಣಾಮಗಳು. ನಾಗರ ಪಂಚಮಿ ಸರ್ವರಿಗೂ ಶುಭ ತರಲಿ, ಮಳೆ-ಬೆಳೆ ಸಾಕಷ್ಟು ಆಗಿ ಜಗಕೆ ಸಮೃದ್ಧಿ ಉಂಟಾಗಲಿ. ನಾಗರಾಜ ನಾಡಿನೆಲ್ಲಡೆ ಒಳಿತು ಮಾಡಲಿ. ಆತನ ಶ್ರೀರಕ್ಷೆ ಮನುಕುಲ ಮತ್ತು ಜಗತ್ತಿನೆಲ್ಲೆಡೆ  ಸದಾ ಇರಲಿ, ಓಂ ಸರ್ಪರಾಜಾಯ ತೇ ನಮಃ

 

ರವೀ ಸಜಂಗದ್ದೆ 

(ಲೇಖಕರು ಸಾಫ್ಟ್ವೇರ್ ಉದ್ಯೋಗಿ)