IMPORTANT NOTICE

New official website is launched for Karada Community. Please visit www.karadavishwa.com for more details.

Saturday, 12 July 2025

ಕರಾಡ ಬ್ರಾಹ್ಮಣರ ಶ್ರೀ ಗುರುದರ್ಶನ ದಿನ - ಶೃಂಗೇರಿ ಶ್ರೀ ಮಠದಲ್ಲಿ : 21 JUL 25

 


link : https://www.karadavishwa.com/pages/0dpenj-d5x62v-ixn9ju

ವೇದ ಆಸಕ್ತರಿಗೆ online ಮತ್ತು offline ತರಗತಿಗಳು

ವೇದಾಭಿಮಾನಿಗಳಿಗೆ ನಮಸ್ಕಾರ 🙏

ನಮ್ಮ ಶಶಿಯಣ್ಣ ಪಾತನಡ್ಕ ಇವರು ಶ್ರುತಿರಥ ಎನ್ನುವ ಹೆಸರಿನಲ್ಲಿ ವೇದ ಅಧ್ಯಯನ/ ವೇದ ಪಾಠ ತರಗತಿಗಳನ್ನು ಸುಮಾರು ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ವೇದ ಆಸಕ್ತರಿಗೆ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆಯುತ್ತಿವೆ. ಈ ವರ್ಷ ನಾವು ಕೆಲವು ಯುವ ಕರಾಡದ ಸದಸ್ಯರು ಅವರೊಂದಿಗೆ ಚರ್ಚಿಸಿ, ಬನಶಂಕರಿ ಆರನೇ ಹಂತದಲ್ಲಿರುವ (ಬ್ರಿಗೇಡ್ ಒಮೆಗಾ ವಸತಿ ಸಮುಚ್ಚಯದ ಬಳಿ) "ಸುರಭಿ ಮಾಣಿಮೂಲೆ" ಮನೆಯಲ್ಲಿ ವೇದ ಪಾಠ ತರಗತಿಗಳ ಹೊಸಬ್ಯಾಚನ್ನು ಮುಂದಿನ ತಿಂಗಳ ಉಪಾಕರ್ಮದ ದಿನದಿಂದಲೇ ಪ್ರಾರಂಭಿಸುವ ಯೋಜನೆ ಸಿದ್ಧವಾಗಿದೆ. ಈಗಾಗಲೇ ಶಶಿಯಣ್ಣ ಫಾರ್ಮನ್ನು ಕಳುಹಿಸಿಕೊಟ್ಟಿದ್ದಾರೆ. ಆಸಕ್ತರು ಕೆಳಗೆ ಕಳುಹಿಸಿರುವ ಲಿಂಕಿನಲ್ಲಿ ಇರುವ ಅರ್ಜಿಯನ್ನು ಭರ್ತಿ ಮಾಡಿ ಶಶಿಯಣ್ಣ ಅವರಿಗೆ ಕಳುಹಿಸಿ. ವಾರದಲ್ಲಿ ಒಂದು ಆಫ್ ಲೈನ್ ತರಗತಿ ಮತ್ತು ಇನ್ನೊಂದು ಆನ್ಲೈನ್ ತರಗತಿ.

ಬ್ರಾಹ್ಮಣರಾದ ನಾವು ಏನು ಮಾಡಬೇಕು ಅದನ್ನು ಮಾಡಲೇಬೇಕು. ನಮ್ಮ ಬದಲಾದ ಜೀವನ ಕ್ರಮದಲ್ಲಿ ನಮ್ಮ ನಿತ್ಯ ಅನುಷ್ಠಾನಗಳು ಮತ್ತು ವೈದಿಕ ಕಾರ್ಯಗಳ ಬಗ್ಗೆ ತಿಳುವಳಿಕೆಗಳು ಮರೆಯಾಗುತ್ತಿದೆ. ಇದರ ಬಗ್ಗೆ ಸರಿಯಾದ ಜ್ಞಾನವನ್ನು ಪಡೆಯುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ರವಾನಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ. ಹಾಗಾಗಿ ನಮ್ಮ ವ್ಯಾವಹಾರಿಕ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ವಾರದಲ್ಲಿ ಎರಡರಿಂದ ಮೂರು ಗಂಟೆ ಸಮಯವನ್ನು ಇದಕ್ಕೆ ಮೀಸಲಿಡುವ ನಿರ್ಧಾರ ಮಾಡೋಣ ಹಾಗೂ ನಿತ್ಯ ಅಭ್ಯಾಸ ಮಾಡುವ ಪ್ರಯತ್ನ ಮಾಡೋಣ. ಈ ಪರಿಸರದಲ್ಲಿ ಇರುವ ಎಲ್ಲರೂ ಸಂಕೋಚ ಬಿಟ್ಟು ಈ ದೃಷ್ಟಿಯಿಂದ ಯೋಚಿಸಿದರೆ ನಮ್ಮ ಸಮಾಜವನ್ನು ಸಾತ್ವಿಕವಾಗಿ ಮುನ್ನಡೆಸುವ ಜವಾಬ್ದಾರಿಗೆ ಹೆಗಲು ಕೊಟ್ಟಂತಾಗುತ್ತದೆ. ನಮ್ಮ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಅನುಷ್ಠಾನಗಳನ್ನು ಮುಂದುವರಿಸುವುದು ಇಂದಿನ ಅಗತ್ಯತೆಯಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಆಸಕ್ತಿಯನ್ನು ತೋರಿಸುವ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮದೊಂದು ಸಣ್ಣ ಪ್ರಯತ್ನ.

ಹೇಗೆ ನಮ್ಮ ಕರಾಡ ಭಜನಾ ಸಂಜೆಯಲ್ಲಿ, ಭವಂತಡಿಯಲ್ಲಿ ನಾವು ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆಯೋ ಅದೇ ಆಸಕ್ತಿ ಉತ್ಸಾಹದಿಂದ ವೇದಪಾಠ ತರಗತಿಗೆ ಬಂದು ಸೇರಿ ಸಂಪೂರ್ಣಗೊಳಿಸಿ ಹೊಸ ಭವಿಷ್ಯ ಬರೆಯುವ ಪ್ರಯತ್ನ ಮಾಡೋಣ.

ಈ ವರುಷ ಪ್ರಾರಂಭವಾಗಲಿರುವ ಈ ವೇದ ಪಾಠ ನಿರಂತರತೆಯನ್ನು ಕಾಣಲಿ. ಸಂಧ್ಯಾವಂದನೆ ದೇವಪೂಜೆ, ಗಣಪತಿ ಹೋಮ, ದುರ್ಗಾ ಪೂಜೆ, ರುದ್ರ ಪಾರಾಯಣ ಸೂಕ್ತಗಳು, ಪಂಚಾಂಗ ನೋಡುವುದು ಇನ್ನೂ ಕೆಲವು ಅಗತ್ಯ ತಿಳಿದರಬೇಕಾದಂತಹ ವಿಷಯಗಳನ್ನು ತಿಳಿಯುವ ಪ್ರಯತ್ನ ಮಾಡೋಣ. ಮುಂದಿನ ಪೀಳಿಗೆಗೆ ಆದಷ್ಟು ಗುಣಾತ್ಮಕ ಸಂದೇಶಗಳನ್ನು, ಕರ್ಮಾನುಷ್ಠಾನದ ಅವಶ್ಯಕತೆಯನ್ನು ತಿಳಿಸುವ ಪ್ರಯತ್ನದಲ್ಲಿ ಕೈಜೋಡಿಸೋಣ.

ನಮ್ಮ ಸಂಸ್ಕೃತಿ, ನಮ್ಮ ಸಮಾಜ ಮತ್ತು ನಮ್ಮ ಸಂಘಟನೆ ಎಂಬ ಸಂಕಲ್ಪ ದೊಂದಿಗೆ

ಯುವ ಕರಾಡ, ಬೆಂಗಳೂರು

Application form link : CLICK HERE

'ಆಕಾಶ ದೀಪ'ವು ನೀನು, ನಿನ್ನ ಕಂಡಾಗ ಸಂತೋಷವೇನು... : ರವೀ ಸಜಂಗದ್ದೆ

 ಅದು ಇಂಗ್ಲೆಂಡಿನ ಎಡ್ಜ್'ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣ. ಭಾರತ-ಇಂಗ್ಲೆಂಡ್ ಎರಡನೆಯ ಟೆಸ್ಟ್ ಪಂದ್ಯದ ಕೊನೆಯ ದಿನ. ಭಾರತ ಗೆಲ್ಲುವ ಹುಮ್ಮಸ್ಸಿನಿಂದ ಅಂಗಣಕ್ಕಿಳಿಯಿತು. ಆ ದಿನದ ಕೊನೆಯ ಸೆಶ್ಶನ್. ಭಾರತ ಗೆಲುವಿನ ದಡದಲ್ಲಿತ್ತು. ಇಂಗ್ಲೆಂಡಿನ ಆಕಾಶದಲ್ಲಿ ಸೂರ್ಯ ಮುಳುಗಲು ಒಂದೆರಡು ಗಂಟೆಗಳು ಬಾಕಿ ಇದ್ದರೆ ಭಾರತೀಯ ಕಾಲಮಾನ ರಾತ್ರಿ 9.40. ಇಲ್ಲಿ ಸೂರ್ಯ ಮುಳುಗಿ ರಾತ್ರಿಯು ತನ್ನ ಎರಡನೆಯ ಪಾಳಿಯೆಡೆಗೆ ನಿಧಾನವಾಗಿ ಹೊರಳುತ್ತಿತ್ತು. ಬೌಲರ್ ಎಸೆದ‌ ಎಸೆತವನ್ನು ಜೋರಾಗಿ ಹೊಡೆಯಲು ಬ್ಯಾಟ್ಸ್ಮನ್ ಯತ್ನಿಸಿದಾಗ ಚೆಂಡು ಆಕಾಶದೆತ್ತರಕ್ಕೆ ಚಿಮ್ಮಿತು. ಅದನ್ನು ಹಿಡಿದು ಪಂದ್ಯ ಗೆಲ್ಲಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದವನು ಮೊದಲ ಇನ್ನಿಂಗ್ಸಿನಲ್ಲಿ ದ್ವಿಶತಕ, ಎರಡನೆಯ ಇನ್ನಿಂಗ್ಸಿನಲ್ಲಿ ಶತಕ ಗಳಿಸಿದ ಯುವ ಕಪ್ತಾನ ಶುಭ್ಮನ್ ಗಿಲ್. ಕ್ಯಾಚ್ ಹಿಡಿದು ಥೇಟ್ ಸಿಂಹದಂತೆ ಘರ್ಜಿಸಿ ಸಂಭ್ರಮಿಸಿದನು. ಪಂದ್ಯ ಗೆದ್ದು ಭಾರತದ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದಲ್ಲಿ ಹತ್ತನೆಯ ವಿಕೆಟ್ ಪಡೆದ ಆ ಪೋರನೇ ಆಕಾಶ್ ದೀಪ್! ಜೀವನದ ಏರಿಳಿತಗ ನಡುವೆ, ತನ್ನ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದ ಅಂದಿನ ಕ್ಷಣದಲ್ಲಿ ಕಟ್ಟೆಯೊಡೆದ ಕಣ್ಣೀರನ್ನು ನಿಯಂತ್ರಿಸಿ ಗೆಲುವಿನ ರೂವಾರಿ ಎನಿಸಿ ನಗೆ ಬೀರಿ, ಆದಿತ್ಯವಾರದ ರಾತ್ರಿಯಲ್ಲಿ ಭಾರತದ ಪಾಲಿನ ಕ್ರಿಕೆಟ್ 'ಆಕಾಶದೀಪ'ವಾಗಿ ಪ್ರಜ್ವಲಿಸಿ ಹೊಸ ಇತಿಹಾಸ ರಚಿಸಿಯೇ ಬಿಟ್ಟನಲ್ಲ!

ಆಕಾಶ ದೀಪ್ ಮೂಲತಃ ಬಿಹಾರ ರಾಜ್ಯದ ವಾಯುವ್ಯದಲ್ಲಿರುವ ಸಾಸರಾಮ್ ಪ್ರದೇಶದ 'ಬಡ್ಡಿ' ಹೆಸರಿನ ಸಣ್ಣ ಹಳ್ಳಿಯ ಬಡ ಕುಟುಂಬದ ಹುಡುಗ. ಇತರ ತನ್ನ ವಯಸ್ಸಿನ ಹುಡುಗರಂತೆ ಇವನಿಗೂ ವಿಪರೀತ ಕ್ರಿಕೆಟ್ ಹುಚ್ಚು. ಮಹಮ್ಮದ್ ಶಮಿ ಮತ್ತು ಆಶಿಶ್ ನೆಹ್ರಾ ಬೌಲಿಂಗ್ ಶೈಲಿ ಈತನಿಗೆ ಅಚ್ಚುಮೆಚ್ಚು. ಕ್ರಿಕೆಟ್ ಎನ್ನುವ ಶಬ್ದ ಕೇಳಿದರೆ ಅಪ್ಪ ಕೆಂಡಾಮಂಡಲ! ಆಕಾಶನಿಗೆ ಅದುವೇ ಉಸಿರು. 'ಕ್ರಿಕೆಟ್ ಆಟ ನಮ್ಮಂಥ ಬಡವರಿಗೆ ಹೇಳಿದ್ದಲ್ಲಾ, ಅದೇನಿದ್ದರೂ ಶ್ರೀಮಂತರಿಗೆ. ಕ್ರಿಕೆಟ್ ಆಡಿ ಉದ್ಧಾರ ಆದವರು ತೀರಾ ಕಡಿಮೆ. ನೀನು ಕ್ರಿಕೆಟ್ ಆಡಿ ನಮ್ಮನ್ನು-ನಮ್ಮೂರನ್ನು ಉದ್ಧಾರ ಮಾಡಬೇಕಿಲ್ಲ. ಮೊದಲು ಒಂದಷ್ಟು ಕಲಿತು, ಅನಂತರ ಒಂದು ಕೆಲಸ ಹುಡುಕಿಕೊಂಡು ನಿನ್ನ ಜೀವನ ನೋಡಿಕೋ. ಕ್ರಿಕೆಟ್ ನಮಗೆ ಅನ್ನ ಹಾಕಲಾರದು' ಎಂದು ತಂದೆಯವರ ಖಡಕ್ ಆಜ್ಞೆ.

ಮನೆಯವರು ಮತ್ತು ತಂದೆಯ ಬುದ್ಧಿಮಾತಿಗೆ ಕ್ಯಾರೇ ಎನ್ನದೆ,‌ ಅವರ ವಿರೋಧದ ನಡುವೆ ಕ್ರಿಕೆಟಿನಲ್ಲಿಯೇ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸಿ ತನ್ನೂರು ಬಡ್ಡಿಯನ್ನು ತೊರೆದು ದೂರದ ಬಂಗಾಳದ ದುರ್ಗಾಪುರಕ್ಕೆ ರೈಲಿನಲ್ಲಿ ಬಂದಿಳಿದ. ಕಿಸೆ ಖಾಲಿಯಿದ್ದರೂ ತಲೆ ತುಂಬಾ ಕ್ರಿಕೆಟ್ ತುಂಬಿತ್ತು! ಅಲ್ಲಿ ಸಣ್ಣ ಕೆಲಸ ಹುಡುಕಿಕೊಂಡು, ಬಿಡುವು ಮಾಡಿಕೊಂಡು ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಾ ಜೀವನ ಸಾಗುತ್ತಿತ್ತು. ಕಂಗಳಲ್ಲಿ ದೇಶಕ್ಕಾಗಿ ಆಡಬೇಕೆನ್ನುವ ತವಕ ಜಾಸ್ತಿಯಾಗುತ್ತಿತ್ತು.

ಊರು ಬಿಟ್ಟ‌ ಕೆಲ ತಿಂಗಳಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ಒಳಗಾದ ತಂದೆಯವರ ಆರೋಗ್ಯ ಕ್ಷೀಣಿಸಿ ಇಹಲೋಕ ತ್ಯಜಿಸಿದ ಸುದ್ದಿ ಬೌನ್ಸರಿನಂತೆ ಬಂತು. ಈ ದುಃಖದಲ್ಲಿದ್ದಾಗಲೇ ಮನೆಯ ಆಧಾರಸ್ತಂಭವಾಗಿದ್ದ ಅಣ್ಣನೂ ಹಠಾತ್ ತೀರಿಕೊಂಡ ಮತ್ತೊಂದು ಡೆಡ್ಲಿ ಬೌನ್ಸರ್! ಆಕಾಶನಿಗೆ ಆಕಾಶವೇ ತಲೆಯ ಮೇಲೆ ಬಿದ್ದ, ಭೂಮಿ ಬಾಯ್ತೆರೆದ ಅನುಭವ. ಬದುಕು ಯಾಕೋ ತುಂಬಾ ಕಷ್ಟ ಕೊಡುತ್ತಿದೆ, ಏನೇನನ್ನೋ ಕಲಿಸುತ್ತಿದೆ. ಇದರ ಜೊತೆಗೆ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನನ್ನೊಳಗೆ ತುಂಬುತ್ತಿದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡನು. ಅಪ್ಪ, ಅಣ್ಣ ತೀರಿಕೊಂಡ ಪರಿಣಾಮ ಮನೆಯಲ್ಲಿ ಒಂಟಿ ತಾಯಿ. ಅವಳಿಗೋಸ್ಕರ ಎಲ್ಲ ಬಿಟ್ಟು ಊರಿಗೆ ವಾಪಸಾದ. ಮೂರು ವರ್ಷ ಕ್ರಿಕೆಟ್ ಆಟವು ಅವನ ಬದುಕಿನಿಂದ 'ರಿಟೈರ್ಡ್ ಹರ್ಟ್' ಆಗಿತ್ತು!

ಹೊಂಡಗಳೇ ತುಂಬಿರುವ ರಸ್ತೆಯಲ್ಲಿ ಬ್ರೇಕಿಲ್ಲದ ವಾಹನದಂತಾಗಿದ್ದ ಬದುಕನ್ನು ಮತ್ತೆ ಹಳಿಗೆ ತರುವ ನಿರಂತರ ಪ್ರಯತ್ನ ನಡೆಯುತ್ತಿತ್ತು. ಜೀವನದ ಪ್ರಮುಖ ಗುರಿಯಾದ ಕ್ರಿಕೆಟಿನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಕನಸು ಆಗೀಗ ಕಣ್ಣಮುಂದೆ ಬಂದು ಹೋಗುತ್ತಿತ್ತು. ಅದನ್ನು ನನಸಾಗಿಸಲು ದೃಢ ನಿರ್ಧಾರ‌ ಮಾಡಿಯೇ ಬಿಟ್ಟ!

'ವರುಷಗಳು ಕಳೆದು ಜೀವನ ಒಂದಷ್ಟು ಸುಧಾರಿಸಿದೆ, ಅಮ್ಮ ತನ್ನನ್ನು ತಾನು ನಿಭಾಯಿಸುವಷ್ಟು ಗಟ್ಟಿಯಾಗಿದ್ದಾಳೆ' ಎಂದೆನಿಸಿದಾಗ, ಒಂದು ಮುಂಜಾನೆ ಆಕೆಯ ಕಾಲಿಗೆರಗಿ 'ನನ್ನನ್ನು ನೀನು ಮುಂದೊಂದು ದಿನ ಟೀವಿಯಲ್ಲಿ ಕಾಣುವಿಯಂತೆ, ಆಗ ನಿನಗೊಂದು ಹೊಸತೊಂದು ಟೀವಿ ತಂದು ಕೊಡುವೆ. ಆಶೀರ್ವಾದ ಮಾಡು' ಎಂದು ಹೇಳಿ ಅಮ್ಮನ ಉತ್ತರಕ್ಕೂ ಕಾಯದೆ ಬಡ್ಡಿಯಿಂದ ದುರ್ಗಾಪುರ ನಗರಕ್ಕೆ ಬಂದನು. ತನ್ನ 'ರೋಲ್ ಮಾಡೆಲ್' ಮಹಮ್ಮದ್ ಶಮಿ ಉತ್ತರ ಪ್ರದೇಶದ ಅಮ್ರೋಹಾದಿಂದ ಕೋಲ್ಕತ್ತಾಗೆ ಬಂದಿದ್ದು ನೆನಪು ಮಾಡಿಕೊಳ್ಳುತ್ತಾ ತಾನೂ ಮಯೂರಾಕ್ಷಿ ಎಕ್ಸ್'ಪ್ರೆಸ್ ರೈಲನ್ನೇರಿ ದುರ್ಗಾಪುರದಿಂದ ಕೊಲ್ಕತ್ತಾದಲ್ಲಿ ಬಂದಿಳಿದಾಗ ಕೆಲವೇ ನೂರರ ನೋಟುಗಳು ಮತ್ತು ಕ್ರಿಕೆಟ್ ಆಟದ ಮಹತ್ವಾಕಾಂಕ್ಷೆ ಮಾತ್ರ ಆಕಾಶನಲ್ಲಿತ್ತು. ಅಲ್ಲಿ ಜೀವನದ ಅತಿ ಕಷ್ಟಗಳನ್ನು ಎದುರಿಸುತ್ತಾ, ಜೀವನ ತುಂಬಾ ಕ್ಲಿಷ್ಟಕರವಾಗಿ ಸಾಗುತ್ತಿತ್ತು. ಇದೆಲ್ಲ ಬಿಟ್ಟು ಊರಿಗೆ ವಾಪಸಾಗುವ‌ ಯೋಚನೆ ಬಂದಾಗೆಲ್ಲ 'ಅದು ಏನಾದರೂ ಆಗಲಿ. ವಾಪಸಾಗುವ ಮಾತೇ ಇಲ್ಲ, ಇಲ್ಲೇ ಬದುಕು ಮತ್ತು ಕ್ರಿಕೆಟ್ ಕನಸು ನನಸಾಗಿಸುವೆ' ಎಂದು ಪ್ರತಿದಿನ ತನಗೆ ತಾನೇ ಹೇಳಿಕೊಂಡು ಆತ್ಮವಿಶ್ವಾಸ ಗಟ್ಟಿ ಮಾಡುತ್ತಿದ್ದನು. ಅಲ್ಲೇ ಒಂದು ಸಣ್ಣ ರೂಮು ಬಾಡಿಗೆಗೆ ಪಡೆದು ಒಂದಷ್ಟು ಕೆಲಸ ಮಾಡಿಕೊಂಡು, ಟೆನಿಸ್ ಬಾಲ್ ಪಂದ್ಯಾವಳಿಗಳಲ್ಲಿ ಆಡಿ ಒಂದಷ್ಟು ದುಡ್ಡು ಸಂಪಾದಿಸಿ ಜೀವನ ಕುಂಟುತ್ತಾ ಸಾಗುತ್ತಿತ್ತು.‌ ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ದಿನವೂ ಬೌಲಿಂಗ್ ಪ್ರಾಕ್ಟೀಸ್ ಜಾರಿಯಲ್ಲಿಟ್ಟು ಹಗಲು ರಾತ್ರಿ ಶ್ರಮ ಪಡುತ್ತಿದ್ದನು.

ಈ ನಡುವೆ ಈತನ ಪ್ರತಿಭೆ ನೋಡಿದ ಅದ್ಯಾರೋ ಮಹಾನುಭಾವರು, 23 ವರ್ಷಕ್ಕಿಂತ ಕಿರಿಯರ ಬಂಗಾಳ ತಂಡದಲ್ಲಿ ಆಡಲು ಅವಕಾಶ ಕೊಟ್ಟರು, ಭಾಗ್ಯದ ಮೊದಲ ಬಾಗಿಲು ನಿಧಾನವಾಗಿ ತೆರೆಯಿತು! ಅಂದೇ ಸಾಲ ಮಾಡಿ, ಗೆಳೆಯರಲ್ಲಿ ಹೇಳಿ ಸಣ್ಣದೊಂದು ಟೀವಿಯನ್ನು ಊರಿನ ಮನೆಯಲ್ಲಿ ಅಮ್ಮನಿಗಾಗಿ ಖರೀದಿ ಮಾಡಿದ. ಮಗನನ್ನು ಟೀವಿಯಲ್ಲಿ ನೋಡಿ ಅಮ್ಮನ ಕಣ್ಣು-ಹೃದಯ ತುಂಬಿ ಬಂತು! ಕಠಿಣ ಪರಿಶ್ರಮ ಮತ್ತು ಒಳ್ಳೆಯ ಪ್ರದರ್ಶನದ ಫಲವಾಗಿ ಬಂಗಾಳ ರಣಜಿ ತಂಡದಲ್ಲಿ ಸ್ಥಾನ ದೊರಕಿತು. ಒಂದೆರಡು ಸ್ಥಿರ ಪ್ರದರ್ಶನಗಳ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಆಟಗಾರನಾಗಿ ಭಡ್ತಿ ಸಿಕ್ಕಿತು. ಮನೆಯಲ್ಲೀಗ ದೊಡ್ಡ ಪರದೆಯ ಎಲ್ಇಡಿ ಟೀವಿ ಬಂತು! ದೇಶಕ್ಕೆ ಆಡುವ ತುಡಿತ ಮತ್ತೂ ಜಾಸ್ತಿಯಾಯಿತು.

ಆ ದಿನ ಅದೃಷ್ಟದ ಬಾಗಿಲು ತೆರೆದೇ ಬಿಟ್ಟಿತು ನೋಡಿ! 2024ರಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತದ ಕ್ಯಾಪ್ ಧರಿಸಿ ಆಕಾಶ್ ದೀಪ್ ಮೈದಾನಕ್ಕಿಳಿದ. ವಿಐಪಿ ಗ್ಯಾಲರಿಯಲ್ಲಿ ಕುಳಿತು ಜಗನ್ನಾಥನನ್ನು ಸ್ಮರಿಸುತ್ತಾ ಆತನ ತಾಯಿ ಮಗನ ಆಟ ನೋಡುತ್ತಾ ಆನಂದದಿಂದ ಕಣ್ಣೀರಾದರು. ಒಂದು ಪಕ್ವ ಅವಕಾಶಕ್ಕಾಗಿ ಕಾದು ಕುಳಿತಿದ್ದವನು ಅವಕಾಶ ಸಿಕ್ಕಾಕ್ಷಣ ಹಸಿದ ಹೆಬ್ಬುಲಿಯಂತಾಗಿ ಉತ್ತಮ ಪ್ರದರ್ಶನ ನೀಡತೊಡಗಿದನು. ಟೆನಿಸ್ ಬಾಲ್ ಆಡುತ್ತಿದ್ದ ಆಕಾಶ್ ದೀಪ್ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡನು. ಇದಲ್ಲವೇ ಸಾಧನೆ!?

ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಜಾಗ ಸಿಗದೇ ಬೆಂಚು ಬಿಸಿ ಮಾಡಿದನು. ಎರಡನೆಯ ಟೆಸ್ಟ್ ಪಂದ್ಯದಿಂದ ಭುಮ್ರಾ ಹೊರಗುಳಿದ ಹಿನ್ನೆಲೆಯಲ್ಲಿ ಛಾನ್ಸ್ ಸಿಕ್ಕಿತು. ಎದುರಾಳಿ ತಂಡದ ಬ್ಯಾಟಿಂಗ್ ಬುಡವನ್ನು ಎರಡೂ ಇನ್ನಿಂಗ್ಸ್ ಗಳಲ್ಲಿ ಅಲುಗಾಡಿಸಿ, ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಗಳಿಸಿ ಪಂದ್ಯದ ಗೆಲುವಿನ ರೂವಾರಿ ಬೌಲರ್ ಎನಿಸಿಕೊಂಡನು. 'ಎಡ್ಜ್'ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ ಗೆದ್ದ ಏಪ್ಯಾದ ಮೊದಲ ತಂಡ' ಎನ್ನುವ ಗರಿಮೆಗೆ ಭಾರತ ಪ್ರಾಪ್ತವಾಗುವುದರಲ್ಲಿ ಬಹುಪಾಲು ಕೊಡುಗೆ ನೀಡಿದವನು ಈ ಆಕಾಶ್ ದೀಪ್. ಪಂದ್ಯ ಗೆದ್ದ ಸ್ಮರಣಾರ್ಥವಾಗಿ ಒಂದು ವಿಕೆಟ್ ಮತ್ತು ಬಾಲನ್ನು ಕೈಯಲ್ಲಿ ಹಿಡಿದುಕೊಂಡು ಮೈದಾನದಿಂದ ಪೆವಿಲಿಯನ್'ನತ್ತ ಸಾಗುವಾಗ ಒಬ್ಬ ಶ್ರೇಷ್ಠ ಬೌಲರ್, ಹೋರಾಟಗಾರ ಕಾಣುತ್ತಿದ್ದ. What a journey!

ತಾನು ಪಡೆದ ಹತ್ತು ವಿಕೆಟ್ ಗೊಂಚಲಿನ ಸಾಧನೆಯನ್ನು ಕ್ಯಾನ್ಸರಿನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಅರ್ಪಿಸುವುದರ ಮೂಲಕ ಮತ್ತೂ‌ ಹೆಚ್ಚಿನ ಗೌರವ, ಅಭಿಮಾನ ಸಂಪಾದಿಸಿಕೊಂಡನು. ಮಗನ ಈ ಸಾಧನೆ ನೋಡಿ, 'ಕ್ರಿಕೆಟ್ ಆಡಬೇಡ' ಎಂದು ಅಂದು ಸಿಟ್ಟಾಗಿದ್ದ ಅಪ್ಪ ಖಂಡಿತಾ ಅವರಿರುವಲ್ಲಿಂದಲೇ ಹರಸಿ ಸಂತಸ ಪಡುತ್ತಿರಬಹುದು. 'ಮಹಮ್ಮದ್ ಶಮಿ, ಭುಮ್ರಾ ನಂತರ ಭಾರತದ‌‌ ವಿಶ್ವಾಸಾರ್ಹ,‌ ಯಾವುದೇ ಸಂದರ್ಭದಲ್ಲೂ ವಿಕೆಟ್ ತೆಗೆಯುವ ಸಾಮರ್ಥ್ಯ ಇರುವ ವೇಗದ ಬೌಲರ್ ಯಾರು?' ಎನ್ನುವ ಪ್ರಶ್ನೆಗಳಿಗೆ ತನ್ನ ಸ್ಥಿರ ಪ್ರದರ್ಶನದ‌ ಮೂಲಕ ಉತ್ತರ ಕೊಟ್ಟಿದ್ದಾನೆ ಆಕಾಶ್ ದೀಪ್. ಈ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದು ಆತ ಉತ್ತಮ ಪ್ರದರ್ಶನ ನೀಡಿ ಭಾರತ ಟೆಸ್ಟ್ ಸರಣಿ ಗೆಲ್ಲಲಿ. ಮುಂದಿನ ಕನಿಷ್ಠ ಒಂದು ದಶಕ ಆಕಾಶ್ ದೀಪ್ ತನ್ನ ಸಾಮರ್ಥ್ಯ ಮತ್ತು ಶ್ರೇಷ್ಠ ಪ್ರದರ್ಶನದಿಂದ ಮತ್ತೂ ಉತ್ತುಂಗಕ್ಕೇರಲಿ. ಭಾರತದ ಟೆಸ್ಟ್ ಕ್ರಿಕೆಟಿನಲ್ಲಿ 'ಭರವಸೆಯ ನಾಳೆಗಳು ನಮದೆನಿಸಿವೆ'.

8-7-2025ರ ವಿಶ್ವವಾಣಿಯಲ್ಲಿ ರವೀ ಸಜಂಗದ್ದೆ ಅಂಕಣ ಬರಹ

https://epaper.vishwavani.news/share/a7e374cb-6fb5-427d-8f04-ccdc1c7f84fd