Sunday 14 June 2015

ಕತೆಗಳ ತೋರಣ ಕಟ್ಟಿಡಲು ಬೇಕೇ ಇಲ್ಲ ಕಾರಣ...

ಬಾಲ್ಯದಲ್ಲಿ ಅಜ್ಜಿ ಕತೆಗಳನ್ನು ಕೇಳಿಕೊಂಡು ಬೆಳೆದವರು ಆ ದಿನಗಳ ಮಧುರಾನುಭೂತಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾರೆ. ಕಾರಣ, ಆ ಕಥೆಗಳಲ್ಲಿ ಎಲ್ಲ ಪಾತ್ರಗಳೂ ಮಾತಾಡುತ್ತಿದ್ದವು! ಪ್ರತಿಯೊಂದು ಕತೆಯಲ್ಲೂ ನೀತಿಯಿರುತ್ತಿತ್ತು, ಪಾಠವಿರುತ್ತಿತ್ತು, ತಮಾಷೆ ಇರುತ್ತಿತ್ತು, ಸಸ್ಪೆನ್ಸ್ ಇರುತ್ತಿತ್ತು. ಒಂದೊಂದು ಸಂದರ್ಭದಲ್ಲಿ ಕತೆ-ಜೋಗುಳದಂತೆಯೂ ಕೇಳಿಸುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು- ಹೂಂ, ಆಮೇಲೆ ಎಂದು ಪ್ರಶ್ನಿಸದಿದ್ದರೆ ಅಜ್ಜಿ ಕತೆಯನ್ನು ಮುಂದುವರಿಸುತ್ತಲೇ ಇರಲಿಲ್ಲ. ಆಗ ಅಜ್ಜಿ-ಮೊಮ್ಮಗ ಸಣ್ಣಗೆ ದುಸುಮುಸುಮಾಡಿ ರಾಜಿಯಾಗುತ್ತಿದ್ದರು. ಕತೆ ಮುಂದುವರಿಯುತ್ತಿತ್ತು…
ಈಗ, ಕತೆ ಕೇಳುವ ಹಂಬಲ ಎಲ್ಲರಿಗೂ ಇದೆ. ಆದರೆ ಹೇಳಲು ಅಜ್ಜಿಯರೇ ಇಲ್ಲ. ಅದನ್ನೆಲ್ಲ ನೆನಪು ಮಾಡಿಕೊಂಡಾಗಲೇ ಮನದಲ್ಲಿ ಅರಳಿಕೊಂಡ ಕತೆಗಳಿವೆ. ಇನ್ನು ಮುಂದೆ ನೀವುಂಟು, ಈ ಕಥೆಗಳುಂಟು…
>>>>>>
ಒಂದು ಮನೆ ಬಹಳ ದಿನಗಳಿಂದ ಖಾಲಿ ಉಳಿದಿತ್ತು. ಕಡೆಗೂ ಅಲ್ಲಿಗೆ ಬಾಡಿಗೆದಾರರೊಬ್ಬರು ಬಂದರು. ಈ ಬಾಡಿಗೆ ಮನೆಯ ಎದುರಿನಲ್ಲಿದ್ದ ಮನೆಯಲ್ಲಿ ಒಂದು ಕುಟುಂಬ ವಾಸವಿತ್ತು. ಈ ಮನೆಯ ಹೆಂಗಸಿಗೆ ಸದಾ ಬೇರೆಯವರ ಹುಳುಕು ತೋರಿಸುವ ಅಭ್ಯಾಸವಿತ್ತು. ಯಾರು ಎಷ್ಟೇ ಶುಚಿಯಾಗಿದ್ದರೂ ಆಕೆ ಏನಾದರೂ ಒಂದು ತಪ್ಪು ತೋರಿಸಿ ಬಿಡುತ್ತಿದ್ದಳು.
ಅವತ್ತು, ಈ ಹೆಂಗಸು ಮನೆಯ ಹಾಲ್್ನಲ್ಲಿ ಕೂತು ಗಂಡನೊಂದಿಗೆ ತಿಂಡಿ ತಿನ್ನುತ್ತಿದ್ದಳು. ಆಗಲೇ ಹೊಸದಾಗಿ ಬಾಡಿಗೆಗೆ ಬಂದಿದ್ದಾಕೆ ತಂತಿಯ ಮೇಲೆ ಬಟ್ಟೆಗಳನ್ನು ಒಣಗಲು ಹಾಕಿದ್ದು ಕಾಣಿಸಿತು. ಅದನ್ನು ಗಮನಿಸಿದ ಈಕೆ ತಕ್ಷಣವೇ ಹೇಳಿದಳು: ‘ಅಲ್ಲಿ ನೋಡ್ರಿ, ಬಟ್ಟೆಗಳಲ್ಲಿ ಮಸಿ ಹಾಗೇ ಉಳ್ಕೊಂಡಿರೋದು ಚನ್ನಾಗಿ ಕಾಣಿಸ್ತಾ ಇದೆ. ಹಾಗಿದ್ರೂ ಆ ಹೆಂಗಸು ಒಣಗಲು ಹಾಕ್ತಾ ಇದಾಳೆ. ಬಹುಶಃ ಆಕೆಗೆ ಬಟ್ಟೆ ಒಗೆಯುವುದಕ್ಕೆ ಬರೋದಿಲ್ಲ ಅನಿಸುತ್ತೆ. ಅಥವಾ ಆಕೆ ಬಳಸ್ತಾ ಇರೋ ಸೋಪು ತುಂಬಾ ಕಳಪೆ ಗುಣಮಟ್ಟದ್ದು ಇರಬೇಕು ಕಣ್ರೀ…’
ಅವತ್ತಿನಿಂದ ನಂತರದ ಒಂದು ತಿಂಗಳ ಅವಧಿಯವರೆಗೂ ಈ ಮನೆಯ ದಂಪತಿ ತಿಂಡಿಗೆ ಕೂತ ಸಂದರ್ಭದಲ್ಲಿಯೇ ಆ ಮನೆಯ ಹೆಂಗಸು ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದಳು. ಪ್ರತಿದಿನವೂ ಈ ಮನೆಯ ಹೆಂಗಸು ಅದೇ ಹಳೆಯ ಡೈಲಾಗನ್ನು ರಿಪೀಟ್ ಮಾಡುತ್ತಿದ್ದಳು. ‘ಆ ಹೆಂಗಸಿಗೆ ಏನಾಗಿದೆ? ಸರಿಯಾಗಿ ಕೊಳೆ ಹೋಗದಿದ್ರೂ ಒಗೆದು ಆಗಿದೆ ಅಂತ ಭಾವಿಸ್ತಾಳಲ್ಲ, ಚನ್ನಾಗಿರೋ ಸೋಪ್ ಬಳಸಿ ಬಟ್ಟೆ ಒಗೆಯಲಿಕ್ಕೆ ಅವಳಿಗೆ ಏನು ಧಾಡಿ?’
ಮರುದಿನ ಗಂಡನೊಂದಿಗೆ ತಿಂಡಿಗೆ ಕುಳಿತ ಈ ಮನೆಯ ಹೆಂಗಸು ತನ್ನ ಕಣ್ಣನ್ನೂ ತಾನೇ ನಂಬಲಿಲ್ಲ. ಕಾರಣ, ಎದುರು ಮನೆಯ ತಂತಿಯ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳು ಟಿ.ವಿ. ಜಾಹೀರಾತಿನಲ್ಲಿ ತೋರಿಸುವ ಬಟ್ಟೆಗಳಂತೆಯೇ ಫಳಫಳ ಹೊಳೆಯುತ್ತಿದ್ದವು. ಅದನ್ನು ಕಂಡು ಈಕೆ ಗಂಡನ ಕಿವಿಯಲ್ಲಿ ಪಿಸುಗುಟ್ಟಿದಳು: ‘ನೋಡಿದ್ರಾ, ಕಡೆಗೂ ಆ ಮನೆಯ ಹೆಂಗಸು ಚನ್ನಾಗಿ ಬಟ್ಟೆ ಒಗೆಯಲು ಕಲಿತು ಬಿಟ್ಟಳು. ಇದನ್ನು ಅವಳಿಗೆ ಯಾರು ಹೇಳಿಕೊಟ್ರು ಅಂತ ಗೊತ್ತಾಗಲಿಲ್ಲ…
ಈಕೆಯ ಪತಿರಾಯ ತಣ್ಣಗೆ ಹೇಳಿದ: ‘ಇವತ್ತು ಬೆಳಗ್ಗೆ ನಾನು ಎಲ್ಲರಿಗಿಂತ ಮುಂಚೆ ಎದ್ದು ನಮ್ಮ ಮನೆಯ ಕಿಟಕಿಗಳನ್ನು ಮೂರು ಬಾರಿ ಚೆನ್ನಾಗಿ ಉಜ್ಜಿ ತೊಳೆದೆ. ಎರಡು ತಿಂಗಳಿಂದ ಕಿಟಕಿಗೆ ಅಂಟಿಕೊಂಡಿದ್ದ ಧೂಳು, ಕಸವನ್ನು ನಾವು ಕ್ಲೀನ್ ಮಾಡಿಯೇ ಇರಲಿಲ್ಲ…’
>>>>>>>
ಒಂದು ಹಡಗಿನಲ್ಲಿ ಒಬ್ಬ ಯಕ್ಷಿಣಿಗಾರನಿದ್ದ. ಈ ಹಡಗು ವಾರಕ್ಕೊಂದು ಪ್ರದೇಶಕ್ಕೆ ಹೋಗಿ ಬರುತ್ತಿತ್ತು. ಹಡಗಿನಲ್ಲಿರುವ ಪ್ರಯಾಣಿಕರ ಮುಂದೆ ಯಕ್ಷಿಣಿ ಪ್ರದರ್ಶಿಸಿ ಅವರನ್ನು ಖುಷಿಪಡಿಸುವುದು ಯಕ್ಷಿಣಿಗಾರನ ಕೆಲಸವಾಗಿತ್ತು. ಪ್ರತಿ ವಾರವೂ ನಾನಾ ದೇಶದ, ನಾನಾ ಸಂಸ್ಕೃತಿಯ ಜನ ಬರುತ್ತಿದ್ದರು. ಹಾಗಾಗಿ ಪ್ರದರ್ಶನದಲ್ಲಿ ಏಕತಾನ ಕಾಣದಂತೆ ಈ ಮ್ಯಾಜಿಶಿಯನ್ ಎಚ್ಚರ ವಹಿಸಬೇಕಿತ್ತು.
ಈ ಹಡಗಿನ ಕ್ಯಾಪ್ಟನ್ ಒಂದು ಗಿಣಿಯನ್ನು ಸಾಕಿಕೊಂಡಿದ್ದ. ಅದು ಪ್ರಚಂಡ ಬುದ್ಧಿಯ ಮಾತನಾಡುವ ಗಿಣಿ. ಈ ಯಕ್ಷಿಣಿಗಾರನ ಪ್ರದರ್ಶನದ ಹಿಂದಿರುವ ಗುಟ್ಟುಗಳನ್ನು ಅದು ಕದ್ದು ನೋಡುತ್ತಿತ್ತು. ಈತ ಪ್ರದರ್ಶನ ಆರಂಭಿಸಿದ ಕೆಲವೇ ನಿಮಿಷದಲ್ಲಿ ಮೆಲ್ಲಗೆ ಬಂದು ಪ್ರಯಾಣಿಕರ ಮಧ್ಯೆ ಕೂತು ಬಿಡುತ್ತಿತ್ತು. ಹೇಳಿ ಕೇಳಿ ಅದು ಕ್ಯಾಪ್ಟನ್್ನ ಮುದ್ದಿನ ಗಿಣಿ ಆಗಿದ್ದುದರಿಂದ ಅದನ್ನು ಹೊಡೆಯುವುದಾಗಲಿ, ಗದರಿಸುವುದಾಗಲಿ, ಓಡಿಸುವುದಾಗಲಿ ಸಾಧ್ಯವೇ ಇರಲಿಲ್ಲ. ಪ್ರದರ್ಶನ ಆರಂಭಿಸುವ ಮೊದಲೇ, ಅದರ ಹಿಂದಿರುವ ಗುಟ್ಟು ಏನೆಂಬುದನ್ನು ಈ ಮಾತನಾಡುವ ಗಿಣಿ ಹೇಳಿ ಬಿಡುತ್ತಿತ್ತು. ಪರಿಣಾಮ, ಮ್ಯಾಜಿಕ್ ಶೋ ನೋಡಲು ಯಾರೊಬ್ಬರೂ ಆಸಕ್ತಿ ತೋರುತ್ತಿರಲಿಲ್ಲ. ಒಂದೆರಡು ಬಾರಿ ಪ್ರೇಕ್ಷಕರ ನಿರಾಸಕ್ತಿ ಗಮನಿಸಿದ ಕ್ಯಾಪ್ಟನ್, ಏನೂ ಕೆಲಸವಿಲ್ಲದವರಿಗೆ ಸುಮ್ಮನೇ ಸಂಬಳ ಕೊಡುವುದಾದರೂ ಏಕೆ ಎಂದು ನಿಷ್ಠುರವಾಗಿ ಹೇಳಿಬಿಟ್ಟ.
ಹೀಗಿರುವಾಗಲೇ ಅದೊಂದು ದಿನ ಅನಾಹುತಕ್ಕೆ ಸಿಕ್ಕಿ ಹಡಗು ಮುಳುಗಿ ಹೋಯಿತು. ಕಡೆಯ ಕ್ಷಣದಲ್ಲಿ ಒಂದು ಮರದ ಹಲಗೆಯ ಆಶ್ರಯ ಸಿಕ್ಕಿದ್ದರಿಂದ ಮ್ಯಾಜಿಶಿಯನ್ ಹೇಗೋ ಬದುಕಿಕೊಂಡ. ಸ್ವಾರಸ್ಯವೆಂದರೆ ಅವನು ಆಶ್ರಯ ಪಡೆದಿದ್ದ ಮರದ ಹಲಗೆಯ ಮತ್ತೊಂದು ತುದಿಯಡಿ ಮಾತನಾಡುವ ಗಿಣಿಯೂ ಇತ್ತು.
ಹಡಗಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಿಣಿ ನೀಡಿದ್ದ ಕಿರಿಕಿರಿಯೆಲ್ಲ ನೆನಪಿಗೆ ಬಂದಿದ್ದರಿಂದ ಈ ಯಕ್ಷಿಣಿಗಾರ ಅದನ್ನೇ ಕೆಕ್ಕರಿಸಿಕೊಂಡು ನೋಡಿದ. ಸೇರಿಗೆ ಸವ್ವಾಸೇರು ಎಂಬಂತೆ ಆ ಪಕ್ಷಿಯೂ ಹಾಗೇ ಮಾಡಿತು. ಹೀಗೇ ಎರಡು ದಿನ ಕಳೆದು ಹೋದವು. ಕಡೆಗೆ ಗಿಣಿ ಹೀಗೆಂದಿತು: ‘ಆಯ್ತು, ಈ ಬಾರಿ ನಾನೇ ಸೋಲ್ತೇನೆ. ಬೇಗ ಹೇಳು. ಇಲ್ಲಿಂದ ಪಾರಾಗಲು ದೋಣಿ ಎಲ್ಲಿದೆ ಎಂಬುದಕ್ಕೆ ನಿನಗೆ ಉತ್ತರ ಗೊತ್ತಿದೆಯಾ?’
>>>>>>>
ಅಜ್ಜನಿಗೆ ಕತೆ ಹೇಳುವ ಹುಮ್ಮಸ್ಸಿತ್ತು. ಮೊಮ್ಮಗನಿಗೆ ತಾತನ ಮುಂದೆ ಕೂತು ಕಥೆ ಕೇಳುವ ಹುಚ್ಚು ಹಿಡಿದುಕೊಂಡಿತ್ತು. ಅವತ್ತು ಅಜ್ಜನ ಮುಂದೆ ಕೂತ ಹುಡುಗ ಆದೇಶ ಜಾರಿ ಮಾಡಿದ: ತಾತಾ, ಕತೆ ಶುರು ಮಾಡು…
ಆ ಅಜ್ಜ ಹೇಳಿದರು: ‘ಅರ್ಥ ಮಾಡ್ಕೋ ಮಗಾ, ನಮ್ಮ ಮನಸ್ಸೊಳಗೆ ಎರಡು ಥರದ ತೋಳಗಳು ಇರ್ತವೆ. ಅವೆರಡಕ್ಕೂ ಯಾವಾಗ್ಲೂ ಫೈಟಿಂಗ್ ನಡೀತಾನೇ ಇರುತ್ತೆ. ಈ ಎರಡರ ಪೈಕಿ ಒಂದು ತೋಳ ಕೇಡಿ ನನ್ಮಗಂದು. ಅದಕ್ಕೆ ಎಲ್ಲರ ಮೇಲೂ ಸಿಟ್ಟು. ಅಸೂಯೆ, ದ್ವೇಷ, ವಿಪರೀತ ಅಹಂಕಾರ. ಇನ್ನೊಂದಿದೆಯಲ್ಲ, ಅದು ತುಂಬಾ ಒಳ್ಳೆಯದು. ಅದಕ್ಕೆ ಬೇರೆಯವರನ್ನು ಕಂಡ್ರೆ ಪ್ರೀತಿ, ಗೌರವ, ಅನುಕಂಪ. ಸುತ್ತಲಿನವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡಬೇಕು ಎಂಬುದು ಅದರ ಉದ್ದೇಶ. ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಅದರ ಅನುದಿನದ ಪ್ರಾರ್ಥನೆ. ಮನಸ್ಸಿನ ಒಳಗಿರುವ ಒಂದು ಮೂಲೇಲಿ ನಿಂತ್ಕೊಂಡು ಈ ಒಳ್ಳೆಯ ಮತ್ತು ಕೆಟ್ಟ ತೋಳಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಫೈಟಿಂಗ್ ಮಾಡ್ತಾನೇ ಇರ್ತವೆ…’
‘ತಾತ, ತಾತ, ಈ ಫೈಟಿಂಗ್್ನಲ್ಲಿ ಕೊನೆಗೆ ಯಾವ ತೋಳ ಗೆಲ್ಲುತ್ತೆ?’ ಮೊಮ್ಮಗ ಆಸೆಯಿಂದ ಕೇಳಿದ.
‘ನೀನು ಯಾವುದನ್ನು ಹೆಚ್ಚು ಸಪೋರ್ಟ್ ಮಾಡ್ತಿಯೋ ಅದೇ ಗೆಲ್ಲುತ್ತೆ’ ಎಂದು ಅಜ್ಜ ಕತೆ ಮುಗಿಸಿದ.
>>>>>>>>
ಬಾರ್್ನಲ್ಲಿ ಆತ ಏಕಾಂಗಿಯಾಗಿದ್ದ. ಒಂಟಿಯಾಗಿದ್ದೇನೆ ಎಂಬ ಭಾವವೇ ಅವನಿಗೆ ಇರಲಿಲ್ಲ. ಒಂದರ ಹಿಂದೊಂದು ಪೆಗ್ ವಿಸ್ಕಿಗೆ ಆರ್ಡರ್ ಮಾಡಿ ಪರಮಾತ್ಮನನ್ನು ಏರಿಸುತ್ತಲೇ ಇದ್ದ. ಪ್ರತಿ ಬಾರಿ ತುಟಿಯ ಬಳಿಗೆ ಗ್ಲಾಸ್ ಒಯ್ಯುವ ಮೊದಲು ಜೇಬಿನಿಂದ ಅದೇನನ್ನೋ ತೆಗೆದು ಒಮ್ಮೆ ಕುತೂಹಲದಿಂದ ಮಿಕಿಮಿಕಿ ನೋಡುತ್ತಿದ್ದ. ನಂತರ ಗಟಗಟನೆ ಕುಡಿದು ಬೇರೊಂದು ಪೆಗ್್ಗೆ ಆರ್ಡರ್ ಮಾಡುತ್ತಿದ್ದ.
ಹೀಗೇ ಎರಡು ಗಂಟೆಗಳ ಕಾಲ ನಡೆಯಿತು. ಈ ಕುಡುಕನನ್ನೇ ಅಷ್ಟೂ ಹೊತ್ತಿನಿಂದ ಗಮನಿಸುತ್ತಿದ್ದ ಹೋಟೆಲ್ ಮ್ಯಾನೇಜರ್ ಕಡೆಗೊಮ್ಮೆ ಆತನ ಮುಂದೆ ನಿಂತು ವಿನಯದಿಂದ ಹೀಗೆಂದ: ‘ಸರ್, ತುಂಬಾ ಹೊತ್ತಿನಿಂದ ಗಮನಿಸ್ತಾ ಇದೀನಿ. ನೀವು ಜೇಬಿನಿಂದ ಅದೇನನ್ನೋ ತೆಗೆದು ನೋಡ್ತೀರಿ. ನಂತರ ಗಟಗಟನೆ ಕುಡೀತೀರಿ. ಏನಾದ್ರೂ ಅನಾಹುತ ಸಂಭವಿಸಿದೆಯಾ ಸರ್? ನಾನು ನಿಮಗೆ ಏನಾದ್ರೂ ಸಹಾಯ ಮಾಡಬಹುದಾ? ಜೇಬಿನಿಂದ ಹಾಗೆ ಪದೇ ಪದೆ ನೋಡ್ತೀರಲ್ಲ, ಏನ್ಸಾರ್ ಅದು?’
ಈ ಕುಡುಕ ಕೆಳಗಿಟ್ಟು ಹೇಳಿದ: ‘ಜೇಬಲ್ಲಿ ಇರೋದು ನನ್ನ ಹೆಂಡ್ತಿ ಫೋಟೋ. ತುಂಬಾ ಹೊತ್ತಿಂದ ನೋಡ್ತಾನೇ ಇದೀನಿ. ಅವಳು ಅಪ್ಸರೆಯ ಥರ ಕಾಣಿಸ್ತಾನೇ ಇಲ್ಲ. ಅವಳು ರಂಬೆಯ ಥರ, ಊರ್ವಶಿಯ ಥರಾ ಕಾಣಿಸಿದ ತಕ್ಷಣ ಕುಡಿಯೋದು ನಿಲ್ಲಿಸಿ ಮನೆಯ ದಾರಿ ಹಿಡೀತೀನಿ…
>>>>>>>>
ಒಂದು ಊರು. ಅಲ್ಲಿಗೊಬ್ಬ ರಾಜ. ಅವನಿಗೆ ವಿಚಿತ್ರ ಎಂಬಂಥ ಹವ್ಯಾಸವೊಂದಿತ್ತು. ಆತ ವಾರದ ಕೊನೆಯಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಪ್ರಜೆಗಳ ಸಭೆ ಕರೆಯುತ್ತಿದ್ದ. ಅವತ್ತು ರಾಜ್ಯದ ಯಾರಾದರೂ ಒಬ್ಬನನ್ನು ತನ್ನೊಂದಿಗೆ ಊಟಕ್ಕೆ ಆಹ್ವಾನಿಸುತ್ತಿದ್ದ. ರಾಜನ ಆಹ್ವಾನವನ್ನು ಯಾರೂ ತಿರಸ್ಕರಿಸುವಂತಿರಲಿಲ್ಲ. ಊಟ ಮುಗಿಸಿದ ವ್ಯಕ್ತಿ ನಂತರ ಹೊಸ ಹೊಸ ಪದಗಳಿಂದ ರಾಜನನ್ನು ಸಾರ್ವಜನಿಕರ ಮುಂದೆ ಹೊಗಳಿ ಭಾಷಣ ಮಾಡಬೇಕಿತ್ತು. ಹಾಗೆ ಮಾಡದಿದ್ದರೆ ಸಿಂಹದ ಬಾಯಿಗೆ ಕೊಡುವ ಕ್ರೂರ ಶಿಕ್ಷೆಯೂ ಅಲ್ಲಿ ಜಾರಿಯಲ್ಲಿತ್ತು? ಸುಖಾಸುಮ್ಮನೆ, ಅದೂ ಹೊಸ ಹೊಸ ಪದಗಳಿಂದ ರಾಜನನ್ನು ಹೊಗಳುವುದು ಸುಲಭದ ಕೆಲಸವಲ್ಲ ತಾನೆ? ಇದು ಗೊತ್ತಿದ್ದುದರಿಂದಲೇ ರಾಜನಿಂದ ಸಹಭೋಜನಕ್ಕೆ ಆಹ್ವಾನ ಬರದೇ ಇರಲಿ ಎಂದೇ ಎಲ್ಲರೂ ಪ್ರಾರ್ಥಿಸುತ್ತಿದ್ದರು.
ಹೀಗಿರುವಾಗ, ಅದೇ ರಾಜ್ಯದಲ್ಲಿ ಡ್ರಾಮಾ ಮಾಡಿಕೊಂಡು ಆರಾಮವಾಗಿದ್ದ ಯಶವಂತ ಸರದೇಶಪಾಂಡೆಗೆ ರಾಜನಿಂದ ಆಹ್ವಾನ ಬಂತು. ಯಶವಂತ ತುಂಬ ಖುಷಿಯಿಂದಲೇ ಅರಮನೆಗೆ ಹೋಗಿ ಗಡದ್ದಾಗಿ ಊಟ ಮುಗಿಸಿ, ಭಾಷಣ ಗೀಷಣ ಮಾಡೋದಿಲ್ರಿ, ಅದೇನ್ ಮಾಡ್ತಿರೋ ಮಾಡ್ಕೊಳ್ಳಿ ಎಂದು ಬಿಡುವುದೇ?
ಮಹಾರಾಜನಿಗೆ ಸಿಟ್ಟು ಬಂತು. ಆತ ಕಣ್ಣಲ್ಲೇ ಆಜ್ಞೆ ಜಾರಿ ಮಾಡಿದ. ತಕ್ಷಣವೇ ರಾಜಭಟರು ಯಶವಂತನನ್ನು ಎಳೆದೊಯ್ದು ಸಿಂಹದ ಪಂಜರಕ್ಕೆ ನೂಕಿ ಬಿಟ್ಟರು. ಅರ್ಧಗಂಟೆ ಕಳೆಯಿತು. ಏನಾಗಿದೆಯೋ ನೋಡೋಣ ಎಂದುಕೊಂಡು ಬಾಗಿಲು ತೆರೆದರೆ, ಯಶವಂತ ಗಲಗಲ ನಗುತ್ತಾ ಹೊರಗೆ ಬಂದ. ಅದನ್ನು ಕಂಡು ಎಲ್ಲರಿಗೂ ಬೆರಗಾಯಿತು. ರಾಜ ಧಡಧಡನೆ ಸಿಂಹಾಸನ ಇಳಿದು ಬಂದು ಹೇಳಿದ: ‘ಸರದೇಶಪಾಂಡೆಯವರೆ, ಕ್ಷಮಿಸಿ. ನೀವು ಸಿಂಹವನ್ನೇ ಗೆದ್ದ ಸಾಹಸಿ. ಆದರೆ ನಾಲ್ಕು ದಿನದಿಂದ ಊಟವಿಲ್ಲದೆ ಹಸಿದಿದ್ದ ಅದು ನಿಮ್ಮನ್ನು ಯಾಕೆ ತಿನ್ನಲಿಲ್ಲ. ಅದಕ್ಕೆ ನೀವು ಏನು ಮಾಡಿದ್ರಿ. ದಯವಿಟ್ಟು ಹೇಳಿ…’
ಆಗ ಯಶವಂತ ಹೇಳಿದ್ದು: ‘ನೋಡೂ, ಈಗೇನಾದ್ರೂ ನಿನ್ನನ್ನು ತಿಂದು ಹಾಕಿದ್ರೆ, ಸಂಜೆಗೆ ಮಹಾರಾಜರು ನಿನ್ನನ್ನೇ ಸಹಭೋಜನಕ್ಕೆ ಕರೀತಾರೆ. ಊಟ ಮುಗಿದ ತಕ್ಷಣ ರಾಜರನ್ನು ಹೊಗಳಿ ನೀನೂ ಅರ್ಧಗಂಟೆ ಭಾಷಣ ಮಾಡಬೇಕು. ಹಾಗೆ ಮಾಡಲಿಲ್ಲ ಅಂದ್ರೆ ಮಹಾರಾಜರು ಬಿಡೋದಿಲ್ಲ. ಅಂತ ಹೇಳ್ದೆ ನೋಡಿ, ಆ ಸಿಂಹ ಬಾಯಿ ಮುಚ್ಕೊಂಡು ಬಿದ್ಕೊಳ್ತು…
>>>>>>>>
ಪ್ರವಾಸಿಯೊಬ್ಬ ಮುಂಬಯಿಗೆ ಹೋಗಿದ್ದ. ಪ್ರವಾಸದ ನೆನಪಿಗೆ ಏನನ್ನಾದರೂ ಖರೀದಿಸಲು ಒಂದು ಅಂಗಡಿಗೆ ಹೋದ. ಅಲ್ಲಿ ಬೆಳ್ಳಿಯಿಂದ ತಯಾರಿಸಲಾದ ಇಲಿಯೊಂದರ ವಿಗ್ರಹವಿತ್ತು. ಅದರ ಜೊತೆಗೇ ಪ್ರಸಾದದಂತೆ ಕಾಣುವ ಒಂದು ಪ್ಯಾಕೆಟ್ ಹಾಗೂ ತಿಳಿದಿರಲೇಬೇಕಾದ ಗುಟ್ಟು ಎಂಬ ಶೀರ್ಷಿಕೆಯ ಪುಸ್ತಕವಿತ್ತು. ಇದಕ್ಕೆ ರೇಟ್ ಎಷ್ಟು ಎಂದು ಪ್ರವಾಸಿ ವಿಚಾರಿಸಿದ. ಇಲಿಯ ವಿಗ್ರಹಕ್ಕೆ 500 ರೂ. ಜೊತೆಗಿರುವ ಕತೆ ಪುಸ್ತಕಕ್ಕೆ 1000 ರೂ. ಎಂದ ಅಂಗಡಿಯವ.
‘ಕಥೆ ಪುಸ್ತಕ ಬೇಕಿಲ್ಲ. ಇಲಿಯ ವಿಗ್ರಹ ಮಾತ್ರ ಸಾಕು’ ಎಂದ ಪ್ರವಾಸಿ, ಅದನ್ನಷ್ಟೇ ಖರೀದಿಸಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ. ಐದು ನಿಮಿಷದ ನಂತರ ಹಿಂದಿನಿಂದ ಏನೋ ಸದ್ದಾಯಿತು. ತಿರುಗಿ ನೋಡಿದವನು ಬೆಚ್ಚಿ ಬಿದ್ದ. ಕಾರಣ, ಈತನ ಹಿಂದೆ ನೂರಾರು ಇಲಿಗಳು ನಡೆದು ಬರುತ್ತಿದ್ದವು.
ಪ್ರವಾಸಿಗೆ ಗಾಬರಿಯಾಯಿತು. ಆತ ಓಡಲು ಆರಂಭಿಸಿದ. ಇಲಿಗಳು ಸುಮ್ಮನಿರಲಿಲ್ಲ. ಅವೂ ಓಡಿದವು. ನಂತರದ ಇಪ್ಪತ್ತು ನಿಮಿಷದಲ್ಲಿ ಇಲಿಗಳ ಸಂಖ್ಯೆ ಸಾವಿರವಾಯಿತು. ಅವು ಪ್ರವಾಸಿಯ ಕೈಲಿದ್ದ ಬೆಳ್ಳಿ ಇಲಿಯನ್ನೇ ನೋಡುತ್ತಾ ಇವನ ಹಿಂದೆ ಬರುತ್ತಿದ್ದವು. ಈ ಆಕಸ್ಮಿಕ ಬೆಳವಣಿಗೆಯಿಂದ ಕಂಗಾಲಾದ ಈತ ಬೇರೇನೋ ತೋಚದೆ ಸಮುದ್ರ ತೀರಕ್ಕೆ ಬಂದ. ಇಲಿಗಳು ಅಲ್ಲಿಗೂ ಬಂದವು. ಈತ ಒಂದು ಎತ್ತರದ ಪ್ರದೇಶಕ್ಕೆ ಹೋಗಿ, ಅಲ್ಲಿಂದ ಬೆಳ್ಳಿ ವಿಗ್ರಹದ ಇಲಿಯನ್ನು ಸಮುದ್ರಕ್ಕೆ ಎಸೆದ. ಮರುಕ್ಷಣವೇ ಎಲ್ಲ ಇಲಿಗಳೂ ದುಢುಂ ಎಂದು ಸಮುದ್ರಕ್ಕೆ ಜಿಗಿದು ಮುಳುಗಿ ಹೋದವು.
ನಂತರ ಈ ಪ್ರವಾಸಿ ಸರಸರನೆ ಇಲಿಯ ವಿಗ್ರಹ ಖರೀದಿಸಿದ್ದ ಅಂಗಡಿಗೇ ಬಂದ. ಇವನನ್ನು ಕಂಡಾಕ್ಷಣ ಮುಖ ಅರಳಿಸಿದ ಮಾಲೀಕ-’ನೀವು ಬಂದೇ ಬರ್ತೀರ ಅಂತ ಗೊತ್ತಿತ್ತು. ಕಥೆ ಪುಸ್ತಕ ಬೇಕು ತಾನೆ?’ ಎಂದು ಕೇಳಿದ.
‘ಕಥೆ ಪುಸ್ತಕ ಬೇಡ ಮಾರಾಯ. ನಮ್ಮ ರಾಜಕಾರಣಿಗಳದ್ದು ಒಂದು ಬೆಳ್ಳಿ ವಿಗ್ರಹ ಇದ್ರೆ ಬೇಗ ಕೊಡು’ ಎಂದ ಪ್ರವಾಸಿ.

Saturday 6 June 2015

ಎಲ್ಲರ ಬದುಕಿನಲ್ಲೂ ದೇವರಂತೆ ಯಾರಾದರೂ ಬಂದೇ ಬರುತ್ತಾರೆ!

ತುಂಬ ಕಷ್ಟದ ಸಂದರ್ಭ ಎದುರಿಗಿದ್ದಾಗ, ತೀರಾ ಆಕಸ್ಮಿಕವಾಗಿ ಯಾರೋ ಒಬ್ಬರು ನೆರವಿಗೆ ಬರುತ್ತಾರೆ. ಅದನ್ನು ನೆನಪಿಸಿಕೊಂಡು ನಾವೆಲ್ಲ-’ದೇವರ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಬಿಟ್ಟಿರಿ’ ಎಂದು ಉದ್ಗರಿಸಿರುತ್ತೇವೆ. ವಾಸ್ತವ ಏನೆಂದರೆ, ಬೇರೊಬ್ಬರ ಪಾಲಿಗೆ ದೇವರ ರೂಪದಲ್ಲಿ ನೆರವಾಗುವಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ. ಈ ಮಾತಿಗೆ ಸಾಕ್ಷಿಯಾಗುವಂಥ ಹೃದ್ಯ ಪ್ರಸಂಗವೊಂದನ್ನು ಓದುಗ ನಿಮಗೆ ಹೇಳಲೇಬೇಕು ಎನಿಸುತ್ತಿದೆ. ಖಂಡಿತವಾಗಿಯೂ ಇದು ನಿಮಗೆ ಇಷ್ಟವಾಗುತ್ತದೆ.
ಆ ಸೇನಾ ತುಕಡಿಯಲ್ಲಿ ಹದಿನೈದು ಮಂದಿ ಯೋಧರಿದ್ದರು. ಅವರಿಗೆ ನಾಯಕನಾಗಿ ಒಬ್ಬ ಮೇಜರ್ ಇದ್ದ. ಆತ ಎರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಎರಡು ಬಾರಿಯೂ ಗೆಲುವಿನ ಸವಿ ಕಂಡಿದ್ದ ಅನುಭವಿ. ಅವನ ಮುಂದಾಳತ್ವದ ತಂಡವನ್ನು ಹಿಮಾಲಯದ ತಪ್ಪಲಿನಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಮೂರು ತಿಂಗಳ ಸುದೀರ್ಘ ಅವಧಿಯವರೆಗೂ ಆ ಗಡಿ ಪ್ರದೇಶದಲ್ಲಿ ತುಂಬ ಎಚ್ಚರದಿಂದ ಪಹರೆ ಕಾಯುವ ಕೆಲಸ ಈ ಸೇನಾ ತುಕಡಿಯ ಯೋಧರದ್ದಾಗಿತ್ತು. ಪಹರೆ ಕಾಯಬೇಕಿದ್ದ ಜಾಗಕ್ಕೆ ವಾಹನ ಸೌಲಭ್ಯವಿರಲಿಲ್ಲ. ಸೇನೆಯ ವಾಹನ ಇಳಿದ ನಂತರ 18 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಬೇಕಿತ್ತು. ಈ ಹೊಸದೊಂದು ತುಕಡಿ ಕರ್ತವ್ಯ ನಿರ್ವಹಿಸಲು ಬರುತ್ತಿದೆ ಎಂಬ ಸುದ್ದಿ ತಿಳಿದು ಈಗಾಗಲೇ ಹಿಮಾಲಯದ ತಪ್ಪಲಿನಲ್ಲಿ ಕಾವಲಿಗೆ ನಿಂತಿದ್ದ ಯೋಧರು ಖುಷಿಯಾಗಿದ್ದರು. ಹೊಸ ತಂಡ ಅಲ್ಲಿಗೆ ತಲುಪಿದ ಮರುದಿನದಿಂದಲೇ ಈಗಾಗಲೇ ಕಾವಲಿಗೆ ನಿಂತಿದ್ದ ತುಕಡಿಯ ಯೋಧರಿಗೆ ರಜೆ ಮಂಜೂರಾಗುತ್ತಿತ್ತು. ರಜೆಯ ನೆಪದಲ್ಲಿ ಹುಟ್ಟಿದೂರಿಗೆ ತೆರಳುವ, ಹೆಂಡತಿ-ಮಕ್ಕಳೊಂದಿಗೆ ನಲಿದಾಡುವ, ಪೋಷಕರೊಂದಿಗೆ ಬೆರೆಯುವ ಸವಿಗನಸುಗಳೊಂದಿಗೆ ಹಳೆಯ ಯೋಧರ ತಂಡ ಉಳಿದಿತ್ತು.
ತನ್ನನ್ನು ಹಿಂಬಾಲಿಸುತ್ತಿದ್ದ ಸೈನಿಕರಿಗೆ ಮೇಜರ್, ಒಂದೊಂದೇ ಹಳೆಯ ಸಾಹಸವನ್ನು ನೆನಪಿಸಿಕೊಂಡು ಹೇಳುತ್ತಿದ್ದ. ಅವರು ಸಾಗುತ್ತಿದ್ದ ಹಾದಿ ಹಿಮಾಲಯದ ಕೊರಕಲುಗಳಿಂದ ಕೂಡಿತ್ತು. ಮಿಗಿಲಾಗಿ ಗಡಿ ಪ್ರದೇಶ ಬೇರೆ. ಹಾಗಾಗಿ, ಅವರು ತುಂಬ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದರು. ಉಗ್ರರು, ಶತ್ರುಗಳು ಎದುರಾಗುವ ಆತಂಕ ಎಲ್ಲರಿಗೂ ಇದ್ದೇ ಇತ್ತು. ಹಾಗಾಗಿ ಎಷ್ಟೇ ಬಿರುಸಾಗಿ ನಡೆದರೂ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಸ್ಥಳವನ್ನು ತಲುಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕತ್ತಲು ಆವರಿಸತೊಡಗಿದಂತೆ ಎಲ್ಲ ಯೋಧರನ್ನೂ ಒಂದೆಡೆ ಕೂರಿಸಿದ ಮೇಜರ್-’ಈಗ ಊಟ ಮುಗಿಸಿ ಬಿಡಿ. ಕತ್ತಲಾದ ನಂತರ ಏನೂ ಕಾಣಿಸದೆ ತೊಂದರೆಯಾಗಬಹುದು’ ಎಂದರು. ನಂತರದ ಅರ್ಧಗಂಟೆಯಲ್ಲಿ ಎಲ್ಲರೂ ಊಟ ಮುಗಿಸಿದರು. ಹೇಗಿದ್ದರೂ ಬೆಳದಿಂಗಳಿದೆ. ರಾತ್ರಿ 12 ಗಂಟೆಯವರೆಗೂ ನಡೆದು ಬಿಡೋಣ. ಆನಂತರ ಸೂಕ್ತ ಜಾಗದಲ್ಲಿ ನಿದ್ರಿಸಿ ಬೆಳಗ್ಗೆ ಪ್ರಯಾಣ ಮುಂದುವರಿಸೋಣ ಎಂದರು ಮೇಜರ್. ಎಲ್ಲ ಯೋಧರೂ ಈ ಮಾತಿಗೆ ಒಪ್ಪಿಕೊಂಡರು.
ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಅವರೆಲ್ಲ ಒಂದು ಸಮತಟ್ಟಾದ ಪ್ರದೇಶಕ್ಕೆ ಬಂದರು. ಅಲ್ಲಿ ತುಂಬ ಹಳೆಯದೆಂದು ತಕ್ಷಣಕ್ಕೆ ಗೊತ್ತಾಗುವಂತಿದ್ದ ಹಳೆಯ ಪೆಟ್ಟಿಗೆ ಅಂಗಡಿಯೊಂದಿತ್ತು. ಅದಕ್ಕೆ ಬೀಗ ಹಾಕಲಾಗಿತ್ತು. ಆ ನಡುರಾತ್ರಿಯಲ್ಲಿ (ಅದೂ ಹಿಮಾಲಯದ ಪ್ರದೇಶ ಬೇರೆ) ಗಢಗಢ ನಡುಗಿಸುವಂಥ ಛಳಿಯಿತ್ತು. ಇಂಥ ಸಂದರ್ಭದಲ್ಲಿ ಹೇಗಾದರೂ ಅರ್ಧ ಕಪ್ ಟೀ ಸಕ್ಕರೆ ಸಾಕು ಎಂದು ಎಲ್ಲ ಸೈನಿಕರೂ ಅಂದುಕೊಂಡರು. ಆದರೆ, ಯಾರೂ ಬಾಯಿ ಬಿಟ್ಟು ಹೇಳಲಿಲ್ಲ. ನಡೆದೂ ನಡೆದೂ ಆಯಾಸವಾಗಿದ್ದ ಕಾರಣದಿಂದ ಮೇಜರ್‌ಗೂ ಈ ಸಂದರ್ಭದಲ್ಲಿ ಅರ್ಧ ಕಪ್ ಚಹಾ ಕುಡಿದಿದ್ದರೆ ರಿಲೀಫ್ ಸಿಗುತ್ತಿತ್ತು ಅನ್ನಿಸಿತು. ಆತ ಮನದ ಮಾತನ್ನು ಯೋಧರೊಂದಿಗೆ ಹೇಳಿಕೊಂಡ.
ಆದರೆ ಅವರ ಬಳಿ ಟೀ ಮಾಡಲು ಅಗತ್ಯವಿರುವ ಪಾತ್ರೆ, ಹಾಲು, ನೀರು, ಸಕ್ಕರೆ, ಟೀ ಪುಡಿ, ಸ್ಟವ್… ಈ ಯಾವುದೂ ಇರಲಿಲ್ಲ.
ಇದನ್ನು ಎಲ್ಲರಿಗಿಂತ ಮೊದಲೇ ಅರ್ಥ ಮಾಡಿಕೊಂಡ ಮೇಜರ್ ಹೇಳಿದ: ‘ಮೈ ಬಾಯ್ಸ್! ಇವತ್ತು ನಿಮ್ಮ ಪಾಲಿಗೆ ದುರಾದೃಷ್ಟ ಅಂದುಕೊಳ್ಳಿ. ಈಗಾಗಲೇ ನಡುರಾತ್ರಿಯಾಗಿದೆ. ಸಮೀಪದಲ್ಲಿ ಯಾವುದಾದರೂ ಹಳ್ಳಿ ಇರಬಹುದೇನೋ. ಆದರೆ ಅಪರಾತ್ರಿಯಲ್ಲಿ ಹೋಗಿ ಬಾಗಿಲು ಬಡಿಯುವುದರಿಂದ ಜನ ಹೆದರಬಹುದು. ನಡುರಾತ್ರಿಯಲ್ಲಿ ಊರುಗಳಿಗೆ ಹೋಗುವುದು ಸೇನಾ ನೀತಿಯಲ್ಲ.
ಹಾಗಾಗಿ ನಾವ್ಯಾರೂ ಇಲ್ಲಿಂದ ಕದಲುವುದು ಬೇಡ. ಈ ರಾತ್ರಿಯನ್ನು ಹೇಗಾದರೂ ಕಳೆಯೋಣ. ನಾಳೆ ಬೆಳಗ್ಗೆ ಬೇಗ ಪ್ರಯಾಣ ಆರಂಭಿಸೋಣ ಎಂದರು.
ಆಗ ಯೋಧರೆಲ್ಲ ಒಟ್ಟಾಗಿ ಹೇಳಿದರು: ‘ಮೇಜರ್ ಸಾಬ್, ಒಂದು ಟೀ ಕುಡಿಯಲೇಬೇಕು ಎಂಬ ಆಸೆ ಎಲ್ಲರಿಗೂ ಇದೆ. ಎದುರಿಗೆ ಹೇಗಿದ್ದರೂ ಪೆಟ್ಟಿಗೆ ಅಂಗಡಿ ಇದೆ ತಾನೆ? ಅದರ ಬೀಗ ಒಡೆದು ನೋಡೋಣ. ಅಲ್ಲಿ ಟೀ ಮಾಡಲು ಅನುಕೂಲವಾಗುವಂಥ ವಸ್ತುಗಳಿದ್ದರೆ ಸರಿ. ಇಲ್ಲವಾದರೆ ಏನನ್ನೂ ಮುಟ್ಟದೆ ಬಾಗಿಲು ಹಾಕಿಬಿಡೋಣ. ದೇಶಕ್ಕಾಗಿ ಹೋರಾಡುವವರು ನಾವು. ತೀರಾ ಅನಿವಾರ್ಯ ಅನಿಸಿದ್ದರಿಂದ ಮಾತ್ರ ಇಂಥದೊಂದು ತಪ್ಪು ಮಾಡುತ್ತಿದ್ದೇವೆ. ಇದು ಖಂಡಿತ ಮಹಾಪರಾಧ ಆಗುವುದಿಲ್ಲ…’
ಯೋಧರ ಬೇಡಿಕೆಗೆ ಮೇಜರ್, ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಿದರು. ಯೋಧರೆಲ್ಲರ ಅದೃಷ್ಟ ಚೆನ್ನಾಗಿತ್ತು. ಕಾರಣ, ಆ ಪೆಟ್ಟಿಗೆ ಅಂಗಡಿಯಲ್ಲಿ ಹಾಲು, ಟೀ ಪುಡಿ, ಟೀ ತಯಾರಿಸಲು ಪಾತ್ರೆ, ಸಕ್ಕರೆ, ಕುಡಿಯಲು ಬಳಸುವ ಕಪ್‌ಗಳು, ಸ್ಟವ್… ಹೀಗೆ ಎಲ್ಲವೂ ಇತ್ತು. ಬಿಸ್ಕತ್‌ಗಳಿದ್ದವು. ಎಂಟು ಪ್ಯಾಕ್ ಸಿಗರೇಟ್‌ಗಳೂ ಇದ್ದವು. ಯೋಧರ ಖುಷಿಗೆ ಪಾರವೇ ಇಲ್ಲ. ಅವರೆಲ್ಲ ತುಂಬ ಸಡಗರದಿಂದ ಟೀ ತಯಾರಿಸಿದರು. ಸಿಗರೇಟುಗಳನ್ನು ಹಂಚಿಕೊಂಡರು. ಆ ನಡುರಾತ್ರಿಯಲ್ಲಿ ಚಪ್ಪರಿಸುತ್ತಾ, ಟೀ ಕುಡಿದು ತಮ್ಮ ಇಷ್ಟದ ಹಾಡು ಹೇಳಿ ಖುಷಿಪಟ್ಟರು. ನಂತರ ಎಲ್ಲರೂ ಒಂದೆರಡು ಗಂಟೆ ಕಾಲ ನಿದ್ರೆ ತೆಗೆದರು. ಬೆಳಕು ಹರಿಯುವ ಮುನ್ನವೇ ಎಲ್ಲರೂ ಎದ್ದು, ಹತ್ತು ನಿಮಿಷದ ವ್ಯಾಯಾಮ ಮಾಡಿ, ತಲುಪಬೇಕಿರುವ ಗಮ್ಯದತ್ತ ಹೊರಡಲು ಎದ್ದು ನಿಂತರು.
ಈ ಸಂದರ್ಭದಲ್ಲಿ ಮೇಜರ್ ಯೋಚಿಸಿದ. ನಮ್ಮ ಯೋಧರು ಈ ಅಂಗಡಿಯ ಬೀಗ ಮುರಿದು, ಟೀ ಮಾಡಿಕೊಂಡು ಕುಡಿದಿದ್ದಾರೆ. ಬಿಸ್ಕತ್ ತಿಂದಿದ್ದಾರೆ. ಸಿಗರೇಟು ಹಂಚಿಕೊಂಡಿದ್ದಾರೆ. ಹೀಗೆ ಮಾಡಿರುವುದರಿಂದ ಅಂಗಡಿಯ ಮಾಲೀಕನಿಗೆ ಖಂಡಿತ ಲಾಸ್ ಆಗಿದೆ. ಅದನ್ನು ತುಂಬಿಕೊಡಬೇಕಾದುದು ನನ್ನ ಧರ್ಮ. ಹೀಗೊಂದು ಯೋಚನೆ ಬರುತ್ತಿದ್ದಂತೆಯೇ ಪರ್ಸ್‌ನಿಂದ ಒಂದು ಸಾವಿರ ರು.ನ ನೋಟು ತೆಗೆದ ಮೇಜರ್, ಅದನ್ನು ಸಕ್ಕರೆ ಡಬ್ಬದ ಕೆಳಗಿಟ್ಟ. ನಂತರ ಅಂಗಡಿಯ ಬಾಗಿಲು ಮುಚ್ಚಿ, ಬೀಗ ಸಿಕ್ಕಿಸಿದ. (ಹದಿನೈದು ಜನ ಟೀ ಕುಡಿದು, ಬಿಸ್ಕತ್ ತಿಂದು, ಸಿಗರೇಟ್ ಸೇದಿದರೆ 1000ರು. ಆಗುವುದಿಲ್ಲ ನಿಜ. ಆದರೆ ಆ ಅಪರಾತ್ರಿಯಲ್ಲಿ ಟೀ ಸಿಕ್ಕಾಗ ದೊರೆತ ಖುಷಿಗೆ ಬೆಲೆ ಕಟ್ಟಲಾಗದು ಎಂದು ಮೇಜರ್ ಲೆಕ್ಕಹಾಕಿದ.) ಬೀಗ ಒಡೆದಿರುವುದನ್ನು ಕಂಡು ಗಾಬರಿಯಿಂದಲೇ ಬಾಗಿಲು ತೆರೆಯುವ ಮಾಲೀಕನಿಗೆ, ತುಂಬ ಬೇಗನೆ ಸಾವಿರ ರು.ಗಳ ನೋಟು ಕಾಣಿಸುತ್ತದೆ ಎಂಬುದು ಮೇಜರ್ ನಂಬಿಕೆಯಾಗಿತ್ತು. ಹೊರಟು ನಿಂತಿದ್ದ ಯೋಧರು ತಮ್ಮ ನಾಯಕನನ್ನು ಅಚ್ಚರಿ ಬೆರೆತ ಪ್ರೀತಿಯಿಂದ ನೋಡುತ್ತಿದ್ದರು.
ಅವರೊಂದಿಗೆ ಹೆಜ್ಜೆಯಿಡುತ್ತಾ ಮೇಜರ್ ಹೇಳಿದ: ಒಂದು ವೇಳೆ ಬೆಳಗ್ಗೆಯೋ, ಮಧ್ಯಾಹ್ನವೋ ನಾವೆಲ್ಲಾ ಅಲ್ಲಿಗೆ ಹೋಗಿದ್ದರೆ, ಅಂಗಡಿಯ ಮಾಲೀಕನಿಗೆ ಹಣ ನೀಡಿಯೇ ಟೀ ಕುಡಿಯುತ್ತಿದ್ದೆವು. ನಡುರಾತ್ರಿಯಲ್ಲಿ ಅಂಗಡಿಯ ಮಾಲೀಕ ಇದ್ದಿದ್ದರೆ ನೀವೇ ಮುಂದಾಗಿ ಹಣ ನೀಡುತ್ತಿದ್ದೀರಿ ಎಂಬುದನ್ನೂ ನಾನು ಬಲ್ಲೆ. ಆದರೆ, ಯಾರೂ ಇಲ್ಲದ ಕಾರಣದಿಂದ ನಾವು ಹಾಗೇ ಹೋಗಬಾರದು. ಹಣ ಪಾವತಿಸದೇ ಹೋದರೆ, ಬೀಗ ಒಡೆದವರು ಕಳ್ಳರು ಎಂಬ ಭಾವನೆ ಅಂಗಡಿಯ ಮಾಲೀಕನಿಗೆ ಬರುತ್ತದೆ. ಉಹುಂ, ನಾವ್ಯಾರೂ ಕಳ್ಳರಲ್ಲ. ನಾವು ಭಾರತಾಂಬೆಯ ಹೆಮ್ಮೆಯ ಪುತ್ರರು. ದೇಶಭಕ್ತರು, ಈ ಕಾರಣದಿಂದಲೇ ನಾನು ಹಣ ಇಟ್ಟು ಬಂದೆ…’
ಈ ಮಾತು ಕೇಳಿದ ಯೋಧರ ಕಂಗಳಲ್ಲಿ ಮೆಚ್ಚುಗೆಯಿತ್ತು.
ಅವತ್ತೇ ಈ ತುಕಡಿ ಗಡಿ ಕಾಯುವ ಕೆಲಸ ವಹಿಸಿಕೊಂಡಿತು. ಹೀಗೇ ವಾರಗಳು, ತಿಂಗಳುಗಳು ಕಳೆದವು. ಈ ತುಕಡಿಯವರಿಗೆ ರಜೆ ಘೋಷಣೆಯಾಯಿತು. ಈ ಯೋಧರಿದ್ದ ಪ್ರದೇಶಕ್ಕೆ ಹೊಸದೊಂದು ತುಕಡಿ ಬಂತು. ರಜೆ ಸಿಕ್ಕಿತೆಂಬ ಖುಷಿಯಲ್ಲಿ ಮೇಜರ್ ಮತ್ತು ಯೋಧರು ಮಿಲಿಟರಿ ಕ್ಯಾಂಪ್ ಕಡೆಗೆ ಹೆಜ್ಜೆ ಹಾಕಿದರು.
‘ಕಾಕತಾಳೀಯವೆಂಬಂತೆ ತಿಂಗಳುಗಳ ಹಿಂದೆ ನಡೆದು ಹೋದ ಹಾದಿಯಲ್ಲೇ ಅವರು ಹಿಂತಿರುಗಿದ್ದರು. ಅದೃಷ್ಟಕ್ಕೆ ಅವತ್ತು ಟೀ ಅಂಗಡಿಯಲ್ಲಿ ಮಾಲೀಕನಿದ್ದ. ಅವನಿಗೆ ತುಂಬಾ ವಯಸ್ಸಾಗಿತ್ತು. ಮೇಜರ್ ಮತ್ತು ಯೋಧರೆಲ್ಲ ಟೀ ಕುಡಿದರು. ಬಿಸ್ಕತ್ ತಿಂದರು. ನಂತರ ಮಾಲೀಕನೊಂದಿಗೆ ಮಾತಿಗಿಳಿದ ಮೇಜರ್, ಅವನ ಸುಖ-ದುಃಖ ವಿಚಾರಿಸಿದ. ಜನಸಂಚಾರ ವಿರಳವಾಗಿರುವ ಈ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡು ಬದುಕುವುದು ಕಷ್ಟವಲ್ಲವೆ ಎಂದು ಪ್ರಶ್ನೆ ಹಾಕಿದ. ನಂತರ -’ನೀವು ಏನೇ ಹೇಳಿ, ಈ ಜಗತ್ತಿನಲ್ಲಿ ದೇವರಿಲ್ಲ. ಆತ ನಿಜವಾಗ್ಲೂ ಇದ್ದಿದ್ರೆ ನಿಮಗೆ ಇಷ್ಟೊಂದು ಕಷ್ಟದ ಮಧ್ಯೆ ಬದುಕಬೇಕಾದ ಪರಿಸ್ಥಿತಿ ಬರ್ತಾ ಇರಲಿಲ್ಲ’ ಅಂದ.
‘ಇದಕ್ಕೆ ಮರುಕ್ಷಣವೇ ಪ್ರತಿಕ್ರಿಯಿಸಿದ ಆ ವೃದ್ಧ – ‘ಸಾಬ್, ದಯವಿಟ್ಟು ಹಾಗೆನ್ನಬೇಡಿ. ದೇವರು ಇದ್ದಾನೆ. ಆತ ಕರೆದಾಗ ನಮ್ಮ ನೆರವಿಗೆ ಯಾವ ರೂಪದಲ್ಲಾದ್ರೂ ಬಂದೇ ಬರ್ತಾನೆ. ಈ ಮಾತಿಗೆ ಕೆಲವೇ ತಿಂಗಳುಗಳ ಹಿಂದೆ, ಈ ಅಂಗಡಿಯಲ್ಲಿಯೇ ಸಾಕ್ಷಿ ಸಿಕ್ಕಿದೆ. ನನ್ನ ಅಂಗಡಿಗೆ ಆ ದಯಾಮಯಿ ಭಗವಂತ ಬಂದು ಹೋಗಿದ್ದಾನೆ’ ಎಂದುಬಿಟ್ಟ. ಈ ಮಾತು ಕೇಳುತ್ತಿದ್ದಂತೆಯೇ ಎಲ್ಲ ಯೋಧರ ಕಿವಿಗಳು ನೆಟ್ಟಗಾದವು. ಅವರೆಲ್ಲ -ಹೌದಾ? ಏನಾಯ್ತು ಎಂದರು. ಅದಕ್ಕೆ ಉತ್ತರವೆಂಬಂತೆ ವೃದ್ಧ ಹೀಗೆಂದ: ‘ತಿಂಗಳುಗಳ ಹಿಂದೆ ಉಗ್ರಗಾಮಿಗಳ ತಂಡವೊಂದು ಈ ಕಡೆಗೆ ಬಂತು. ಅವರು ನನ್ನ ಒಬ್ಬನೇ ಮಗನನ್ನು ಹಿಡಿದುಕೊಂಡು ಕೆಲವು ಸೂಕ್ಷ್ಮ ಮಾಹಿತಿ ನೀಡುವಂತೆ ಒತ್ತಾಯಿಸಿದರು. ನನ್ನ ಮಗ ಒಪ್ಪಲಿಲ್ಲ.
ಅವನನ್ನು ಸಾಯುವಂತೆ ಬಡಿದು ಹೋಗಿಬಿಟ್ಟರು. ವಿಷಯ ತಿಳಿದಾಕ್ಷಣ ಅಂಗಡಿಗೆ ಬೀಗ ಹಾಕಿ ಓಡಿಹೋದೆ. ಮಗನನ್ನು ಆಸ್ಪತ್ರೆಗೆ ಸೇರಿಸಿದೆ. ಅವತ್ತು ಕೆಲವು ಔಷಧಿಗಳ ಪಟ್ಟಿ ನೀಡಿದ ವೈದ್ಯರು, ಇದಿಷ್ಟನ್ನು ತಂದರೆ, ನಾಳೆ ಚಿಕಿತ್ಸೆ ಆರಂಭಿಸುತ್ತೇವೆ ಎಂದರು. ಅವತ್ತಿಗೆ ನನ್ನ ಬಳಿ ನಯಾ ಪೈಸೆ ಇರಲಿಲ್ಲ. ನೆರೆಹೊರೆಯವರ ಬಳಿ ಸಾಲ ಕೇಳಿದೆ. ಉಗ್ರಗಾಮಿಗಳ ಮೇಲಿನ ಭಯದಿಂದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಅವತ್ತು, ನನಗೆ ದಿಕ್ಕೇ ತೋಚಲಿಲ್ಲ. ರಾತ್ರಿ ಒಬ್ಬನೇ ಕೂತು ದೇವರನ್ನು ಪ್ರಾರ್ಥಿಸಿದೆ. ಭಗವಂತಾ, ಹೇಗಾದ್ರೂ ಸಹಾಯ ಮಾಡು ತಂದೇ ಎಂದು ಮತ್ತೆ ಮತ್ತೆ ಬೇಡಿಕೊಂಡೆ.
ಒಂದಿಷ್ಟು ವ್ಯಾಪಾರ ಮಾಡಿಕೊಂಡು ಆಸ್ಪತ್ರೆಗೆ ಹೋಗೋಣ ಎಂದುಕೊಂಡೇ ಬೆಳಗ್ಗೆ ಎದ್ದು ಅಂಗಡಿಗೆ ಬಂದೆ. ಅಂಗಡಿಯ ಬೀಗ ಮುರಿದು ಹೋಗಿತ್ತು. ಓಹ್, ಕಳ್ಳತನವಾಗಿದೆ. ನನ್ನ ಬದುಕು ಬೀದಿಗೆ ಬಿತ್ತು ಎಂದುಕೊಳ್ಳುತ್ತಲೇ ಒಳಗೆ ಬಂದರೆ ಆಶ್ಚರ್ಯ ಕಾದಿತ್ತು. ಸಕ್ಕರೆ ಡಬ್ಬಿಯ ಕೆಳಗೆ 1000 ರುಪಾಯಿನ ನೋಟಿತ್ತು. ಅವತ್ತು ನನ್ನ ಪಾಲಿಗೆ ಅದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಅನ್ನಿಸಿತು. ಆ ಹಣದಿಂದಲೇ ಮಗನಿಗೆ ಚಿಕಿತ್ಸೆ ಕೊಡಿಸಿದೆ. ಈಗ ಹೇಳಿ ಸಾಹೇಬ್, ಅವತ್ತು ನನ್ನ ಅಂಗಡಿಗೆ ದೇವರಲ್ಲದೆ ಬೇರೆ ಯಾರಾದರೂ ಬಂದಿರಲು ಸಾಧ್ಯವೇ?
ಒಂದಂತೂ ಸತ್ಯ. ನಾವು-ನೀವೆಲ್ಲ ಆಗಿಂದಾಗ್ಗೆ ದೇವರಿಲ್ಲ ಎಂದು ವಾದಿಸುತ್ತಲೇ ಇರುತ್ತೇವೆ. ಆದರೆ ಆತ ಯಾವುದೋ ರೂಪದಲ್ಲಿ ಕಾಣಿಸಿಕೊಂಡು ತನ್ನ ಲೀಲೆ ತೋರಿಸಿರುತ್ತಾನೆ. ತಿಂಗಳುಗಳ ಹಿಂದೆ ಈ ಟೀ ಶಾಪ್‌ಗೆ ಬಂದು ಹಣವಿಟ್ಟು ಹೋದನಲ್ಲ… ಹಾಗೆ… ದೇವರಲ್ಲದೆ ಬೇರೆ ಯಾರೂ ಹಾಗೆ ಮಾಡು ಸಾಧ್ಯವೇ ಇಲ್ಲ…’
ವೃದ್ಧ ಮಾತು ಮುಗಿಸಿದ ತಕ್ಷಣವೇ ಯೋಧನೊಬ್ಬ ಏನೋ ಹೇಳಲು ಮುಂದಾದ. ಅವನನ್ನು ಕಣ್ಸನ್ನೆಯಿಂದಲೇ ಎಚ್ಚರಿಸಿದ ಮೇಜರ್, ಏನೊಂದೂ ಮಾತನಾಡದಿರುವಂತೆ ಸೂಚಿಸಿದ. ಮಾತಾಡಲು ಬಿಟ್ಟರೆ, ಆ ಯೋಧ ಮೂರು ತಿಂಗಳ ಹಿಂದೆ ಈ ಅಂಗಡಿಯಲ್ಲಿ 1000 ರು.ನ ನೋಟು ಇಟ್ಟು ಹೋಗಿದ್ದು ಮೇಜರ್ ಸಾಹೇಬರೇ ಹೊರತು ದೇವರಲ್ಲ ಎಂದು ಬಿಡುತ್ತಾನೆ ಎಂಬುದು ಆ ಸೇನಾಧಿಕಾರಿಗೆ ಅರ್ಥವಾಗಿ ಹೋಗಿತ್ತು. ಆತ ಟೀ ಅಂಗಡಿಯ ಮಾಲೀಕನಾಗಿದ್ದ ವೃದ್ಧನ ಹೆಗಲು ತಟ್ಟುತ್ತಾ- ಹೌದು ಅಜ್ಜಾ, ನಿಮ್ಮ ಮಾತು ನಿಜ. ದೇವರು ಎಲ್ಲೆಲ್ಲೂ ಇದ್ದಾನೆ. ಅವನಿಗೆ ಬೇಕು ಅನ್ನಿಸಿದಾಗ ತನಗೆ ಇಷ್ಟವಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ’ ಎಂದ.
ಈ ಮಾತು ಹೇಳುವಾಗ ಮೇಜರ್‌ನ ಕಂಗಳಲ್ಲಿ ವಿಚಿತ್ರ ಕಾಂತಿಯಿತ್ತು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಹದಿನೈದು ಯೋಧರೂ ಭಾವಪರವಶರಾಗಿ, ಮಾತು ಹೊರಡದೆ ನಿಂತು ಬಿಟ್ಟಿದ್ದರು.

Friday 5 June 2015

ದೇವರ ಮೇಲೆ ನಂಬಿಕೆ ಇದ್ದರೆ ತರ್ಕವನ್ನು ಗೌರವಿಸಬಾರದಾ?


ಬಾಳಿಗೊಂದು ನಂಬಿಕೆ ಇರಬೇಕು ಖರೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆದರೆ ನಾವು ಭಾರತೀಯರ ಮೇಲೆ ಒಂದು ಆರೋಪವಿದೆ. ಅದೆಂದರೆ, ನಮಗೆ ವೈಜ್ಞಾನಿಕ ಮನೋಭಾವ ಇಲ್ಲ ಅನ್ನೋದು. ಅಂದರೆ ನಾವೇನೋ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಿಂದುಳಿದುಬಿಟ್ಟಿದ್ದೇವೆ, ತಂತ್ರಜ್ಞಾನದಲ್ಲಿ ನಾವು ಗ್ರೇಸ್್ಮಾರ್ಕ್ ಪಡೆಯುವುದಕ್ಕೂ ತಡಬಡಾಯಿಸುತ್ತಿದ್ದೇವೆ ಎಂಬ ಚಿಂತನೆಯ ಮುನ್ನುಡಿಯೇನೂ ಇದಲ್ಲ. ಬದಲಿಗೆ ನಮ್ಮ ನಿತ್ಯಜೀವನದಲ್ಲಿ ನಾವು ವರ್ತಿಸುತ್ತಿರುವ ರೀತಿ-ನೀತಿ ಎಂಥಾದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಕಮ್ಮಿ ಇದೆ ಎಂಬುದನ್ನು ಬಡಪೆಟ್ಟಿಗೆ ತಳ್ಳಿಹಾಕಲಿಕ್ಕಾಗುವುದಿಲ್ಲ.
ನಾವು ಕರಾರುವಾಕ್ಕಾಗಿ ಒಂದು ಯೋಚನಾ ಧಾಟಿಯನ್ನು ರೂಢಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದವರು. ಸಾವಿರಾರು ವರ್ಷಗಳಿಂದ ಯಾವುದನ್ನೋ ಮಾಡಿಕೊಂಡು ಬರಲಾಗುತ್ತಿದೆ ಎಂಬ ಕಾರಣಕ್ಕೆ ಅದನ್ನೇ ಮುಂದುವರಿಸಿಕೊಂಡು ಹೋಗುವ ನಮಗೆ ಅದರ ಕಾರಣವನ್ನು ಕೆದಕುವ, ಪ್ರಸ್ತುತತೆ ಇದೆಯಾ ಎಂದು ತರ್ಕಿಸುವ ಗುಣಗಳೇ ಇಲ್ಲ. ನಮ್ಮ ದೇಶ ವೈವಿಧ್ಯದ ಗೂಡು ಹಾಗೂ ಶ್ರೇಷ್ಠತೆಯ ನೆಲ. ತನ್ನಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹಿಡಿದಿಟ್ಟುಕೊಂಡಿರುವ ರಾಷ್ಟ್ರವಿದು. ಇದನ್ನು ನಾವು ಸರಿಯಾಗಿ ಬಳಸಿಕೊಂಡಿದ್ದೇ ಆದರೆ ನಮ್ಮ ಜೀವನದ ಗುಣಮಟ್ಟ ಹಾಗೂ ಬದುಕಿನ ಎಲ್ಲ ಆಯಾಮಗಳಲ್ಲಿ ಉತ್ಪಾದಕತೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆದರೆ ಇವೆಲ್ಲ ಸಾಕಾರವಾಗಬೇಕು ಎಂದಾದರೆ ಮೂಲಭೂತವಾಗಿ ನಮ್ಮಲ್ಲಿ ಬೇಕಾಗಿರುವುದು ವೈಜ್ಞಾನಿಕ ದೃಷ್ಟಿಕೋನ. ನಂಬಿಕೆ ಮತ್ತು ತರ್ಕಗಳ ಪ್ರಶ್ನೆ ಬಂದಾಗ ನಾವು ಯಾವತ್ತೂ ಇಡಿ ಇಡಿಯಾಗಿ ನಂಬಿಕೆಯ ದಡಕ್ಕೆ ಆತುಕೊಳ್ಳುತ್ತ ಬಂದವರು. ಅದು ಸರ್ವನಾಶಕ್ಕೆ ಕಾರಣವಾಗಹೊರಟಿದೆ ಎಂಬ ಸೂಚನೆ ಸಿಕ್ಕರೂ ಅದನ್ನು ನಾವು ಬಿಡಲೊಲ್ಲೆವು. ನಂಬಿಕೆ ಹಾಗೂ ತರ್ಕಗಳೆರಡರ ಹದ ಮಿಳಿತ ಬೇಕು ಬದುಕಿಗೆ. ಯಾವುದಕ್ಕೆ ಅತಿಯಾಗಿ ತಗುಲಿಕೊಂಡರೂ ಅಪಸವ್ಯಗಳೇ ಎದುರಾಗುತ್ತವೆ. ತರ್ಕ ಹಾಗೂ ನಂಬಿಕೆಗಳ ವಿಷಯದಲ್ಲಿ ಹೀಗೊಂದು ಸಮತೂಕ ಸಾಧಿಸಿದಾಗಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ.ಸಮುದ್ರ ಮಧ್ಯದಲ್ಲಿ ಹಡಗೊಂದು ಮುರಿದುಹೋಯಿತು. ಎಲ್ಲರೂ ಬಚಾವಾಗುವುದಕ್ಕೆ ತಮ್ಮ ಹಾದಿ ಹುಡುಕತೊಡಗಿದರು. ಆ ಹಡಗಿನಲ್ಲಿ ಆಸ್ತಿಕನೊಬ್ಬನಿದ್ದ. ಆತ ಯಾವ ಗಾಬರಿಗೂ ಒಳಗಾಗದೇ ‘ದೇವರೇ, ನನ್ನನ್ನು ಕಾಪಾಡು’ ಎಂದು ಪ್ರಾರ್ಥನೆಯಲ್ಲಿ ತೊಡಗಿಕೊಂಡ. ಅಷ್ಟರಲ್ಲಿ ಮತ್ತೊಂದು ದೊಡ್ಡ ಹಡಗು ಸಾಗಿ ಬಂತು. ಹಡಗಿನ ಕ್ಯಾಪ್ಟನ್ ಇವನನ್ನು ಗುರುತಿಸಿ ಇವನತ್ತ ರಕ್ಷಣೆಯ ಹಗ್ಗ ಎಸೆದು ಹೇಳಿದ- ‘ಈ ಹಡಗಿಗೆ ಹತ್ತಿಕೋ..’ ಅದಕ್ಕೆ ಈ ಕಟ್ಟರ್ ಆಸ್ತಿಕ ಉತ್ತರಿಸಿದ- ‘ಇಲ್ಲ, ಇಲ್ಲ ನೀವು ಹೊರಡಿ. ನನಗೆ ದೇವರಲ್ಲಿ ಅಸೀಮ ನಂಬಿಕೆ. ಆತನೇ ಕಾಪಾಡುತ್ತಾನೆ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.’ ಆ ಹಡಗು ಮುಂದೆ ಹೋಯಿತು.
ನಂತರ ಮೀನುಗಾರರ ಸಣ್ಣ ದೋಣಿಯೊಂದು ಸಮೀಪ ಹೋಯಿತು. ಅಲ್ಲಿನವರೂ ಈ ವ್ಯಕ್ತಿಯನ್ನು ತಮ್ಮ ದೋಣೆಗೆ ದಾಟಿ ಬರುವಂತೆ ಹೇಳಿ ಸಹಾಯಕ್ಕೆ ಮುಂದಾದರು. ಇವನದು ಮತ್ತದೇ ಅಚಲ ಉತ್ತರ- ‘ದೇವರು ನನ್ನನ್ನು ಕಾಪಾಡುತ್ತಾನೆ.’ ಅವರೂ ಮುಂದೆ ಸಾಗಿದರು. ಹಡಗು ಮತ್ತಷ್ಟು ಮುಳುಗುತ್ತಾ ಬಂತು. ಆ ಸಮಯಕ್ಕೆ ಆಕಾಶದಲ್ಲಿ ಹೆಲಿಕಾಫ್ಟರ್ ಒಂದು ಗಿರ್ಕಿ ಹೊಡೆಯಿತು. ಅವರೂ ಮುಳುಗುತ್ತಿರುವ ಈತನಿಗೆ ಏಣಿ ಇಳಿಬಿಟ್ಟು ರಕ್ಷಿಸುವುದಕ್ಕೆ ಮುಂದಾದರು. ಈತನ ಉತ್ತರ – ‘ನೀವು ಹೊರಡಬಹುದು. ನನಗೆ ದೇವರಲ್ಲಿ ಅಚಲ ನಂಬಿಕೆ ಇದೆ. ಆತ ಕಾಪಾಡಿಯೇ ಕಾಪಾಡುತ್ತಾನೆ.’ ಬೇರೆ ದಾರಿಯಿಲ್ಲದೇ ಹೆಲಿಕಾಪ್ಟರ್ ಕೂಡ ದೂರವಾಯಿತು.
ಇತ್ತ ಹಡಗು ಮುಳುಗಿಹೋಗಿ ಈ ಆಸ್ತಿಕ ಸ್ವರ್ಗದಲ್ಲಿ ಕಣ್ಣು ತೆರೆದ. ಇವನೆದುರು ದೇವರು ಸಿಂಹಾಸನದಲ್ಲಿ ಪವಡಿಸಿದ್ದ. ಈತ ಕೇಳಿದ, ‘ದೇವರೇ, ನಾನು ಎಲ್ಲ ರೀತಿಯಲ್ಲೂ ನಿನ್ನ ಮೇಲೆ ನಂಬಿಕೆ ಇರಿಸಿದ್ದೆ. ಅದೇಕೆ ನೀನು ಕಾಪಾಡಲಿಲ್ಲ?’
ದೇವರು ಉತ್ತರಿಸಿದ- ‘ಅಲ್ಲಯ್ಯಾ, ನಿನ್ನನ್ನು ಕಾಪಾಡುವುದಕ್ಕೋಸ್ಕರ ನಾನು ಒಮ್ಮೆ ಹಡಗು, ಇನ್ನೊಮ್ಮೆ ಮೀನುಗಾರರ ದೋಣಿ, ಮತ್ತೊಮ್ಮೆ ಹೆಲಿಕಾಪ್ಟರ್ ಕಳುಹಿಸಿದೆ. ನನ್ನಿಂದ ಇನ್ನೂ ಏನು ನಿರೀಕ್ಷೆ ಮಾಡ್ತೀಯಾ?’
>>>
ಬಹುತೇಕ ನಾವೆಲ್ಲ ಈ ಕಟ್ಟರ್ ಆಸ್ತಿಕನಂತೆಯೇ ಬದುಕುತ್ತಿದ್ದೇವೆ. ದಿನನಿತ್ಯದ ಜೀವನದಲ್ಲಿ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ನಾವು ಭಾರಿ ದೈವಭೀರುಗಳು, ದೇವರಿಗೆ ಹೆದರುವವರು ಎಂದು ತೋರಿಸಿಕೊಳ್ಳುತ್ತೇವೆ. ಎಲ್ಲವನ್ನೂ ನಂಬಿಕೆಯ ಮೇಲೆ ಹೇರುತ್ತೇವೆ. ಆದರೆ ಕಾನೂನು- ನಿಯಮಗಳನ್ನು ಪಾಲಿಸುವ ವಿಷಯ ಬಂದಾಗ ನಮ್ಮದು ಘೋರ ಅಸಡ್ಡೆ. ನಮ್ಮನ್ನು ಸುರಕ್ಷಿತವಾಗಿ, ಕ್ಷೇಮವಾಗಿ ಇಡಪ್ಪಾ ಎಂದು ದೇವರನ್ನು ಅನುಕ್ಷಣವೂ ಬೇಡಿಕೊಳ್ಳುತ್ತೇವೆಯೇ ಸಿವಾಯ್, ಆ ನಿಯಮಗಳೂ ನಮ್ಮ ಸುರಕ್ಷತೆಗೆ ಇರುವುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.
ರಸ್ತೆ ಮೇಲೆ ಸುಮ್ಮನೇ ಕಣ್ಣು ಹಾಯಿಸಿ. ಬೈಕು ಒಂದು ಹೋಗುತ್ತಿರುತ್ತದೆ. ಅದನ್ನು ಚಲಾಯಿಸುತ್ತಿರುವ ಅಪ್ಪನ ತಲೆಯಲ್ಲಿ ಹೆಲ್ಮೆಟ್ ಇದೆ. ಏಕಿದೆ ಅಂದರೆ, ಹಾಗಂತ ನಿಯಮವಿದೆ; ಪೊಲೀಸರು ನೋಡಿ ದಂಡ ಹಾಕಬಾರದಲ್ಲಾ ಎಂಬ ಒಂದೇ ಕಾರಣಕ್ಕೆ. ಆದರೆ ಹಿಂದೆ ಮಗುವನ್ನು ಹಿಡಿದು ಕುಳಿತ ಅಮ್ಮನ ತಲೆಗೆ ಶಿರಸ್ತ್ರಾಣವಿಲ್ಲ. ಅದಕ್ಕೂ ಕಾರಣ ಬಹಳ ಸುಲಭದ್ದು. ಹಿಂದೆ ಕುಳಿತವರು ಹೆಲ್ಮೆಟ್ ಧರಿಸಿರಬೇಕು ಎಂಬುದು ಕಾನೂನಿನಲ್ಲಿ ಕಡ್ಡಾಯ ಮಾಡಿಲ್ಲವಲ್ಲ! ಅಲ್ಲೇ ಬೈಕ್್ನ ನಡುಭಾಗದಲ್ಲಿ ಪೋರನೊಬ್ಬ ತೂರಿಕೊಂಡು ಕುಳಿತಿದ್ದಾನೆ. ಇನ್ನೊಬ್ಬನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇವರಿಬ್ಬರಿಗೂ ಹೆಲ್ಮೆಟ್ ಇಲ್ಲ. ಅವರ ಸುರಕ್ಷತೆಯ ಕತೆಯೇನು? ಕ್ಷಮಿಸಿ, ಹಾಗೆಲ್ಲ ಕೇಳಲೇಬಾರದು. ಅವರಿಗೆಲ್ಲ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವಿಲ್ಲ.
ಕಾಯಿದೆಯ ಬಿಗಿ ಇಲ್ಲ ಎಂದಾದರೆ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡುವವರ ಸಂಖ್ಯೆ ಶೇ. 20ರಷ್ಟೂ ಇರುವುದಿಲ್ಲ. ಬಹುಶಃ ಜಗತ್ತಿನಲ್ಲಿ ಹೆಲ್ಮೆಟ್ ಬಗ್ಗೆ ಇಷ್ಟು ಉಡಾಫೆ ಇಟ್ಟುಕೊಂಡಿರುವ ಮಂದಿ ನಾವು ಮಾತ್ರ ಆಗಿದ್ದಿರಬಹುದು.
ಬೈಕ್ ಹಿಂದೆ ಕುಳಿತವರಿಗೂ ಹೆಲ್ಮಟ್ ಕಡ್ಡಾಯ ಎಂಬ ನಿಯಮ ತರುವುದಕ್ಕೆ ಮುಂದಾದಾಗಲೆಲ್ಲ, ನಾವು ಸರ್ಕಾರದ ಆ ನಡೆಯ ವಿರುದ್ಧ ಭಾರಿ ಒಗ್ಗಟ್ಟಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದೇವೆ! ನೋಡಿ, ನಮ್ಮ ಸ್ಥಳೀಯ ಆಡಳಿತ ಬಲವಂತವಾಗಿ ನಮ್ಮ ಮೇಲೆ ಹೆಲ್ಮೆಟ್ ಹೇರುತ್ತಿದೆ ಎಂದು ಆಕ್ಷೇಪಿಸುತ್ತ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡಿದ್ದೇವೆ. ಇಂಥ ಪ್ರತಿರೋಧಗಳಿಗೆ ಪೆಚ್ಚಾಗಿ ಕಾನೂನೇ ಹಿಂದೆ ಸರಿದಿದೆ. ಇದರ ಪರಿಣಾಮ ಆಗುತ್ತಿರುವುದೆಲ್ಲಿ? ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ತುರ್ತುಚಿಕಿತ್ಸೆಯ ಖರ್ಚುಗಳನ್ನು ಭರಿಸುವುದಕ್ಕೆ ಅಪಘಾತಕ್ಕೆ ಒಳಗಾದವನಿಗೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿ ಆಸ್ಪತ್ರೆಗಳು ಅಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಕ್ಕೇ ಹಿಂದೆ-ಮುಂದೆ ನೋಡುತ್ತಿವೆ. ಅಪಘಾತಕ್ಕೀಡಾದವನು ಅರ್ಜಿ ತುಂಬುವ ಸ್ಥಿತಿಯಲ್ಲಿದ್ದಿರುವುದಿಲ್ಲ. ಕೆಲವೇ ಸಂವೇದನಾಶೀಲ ಅಧಿಕಾರಿಗಳು ಮಾತ್ರವೇ ಈ ಕಾಯಿದೆ ಚೌಕಟ್ಟನ್ನು ಮಾನವೀಯ ನೆಲೆಯಲ್ಲಿ ಪಕ್ಕ ಸರಿಸಿ, ಅಗತ್ಯ ಕ್ರಮಕ್ಕೆ ದಾರಿ ಮಾಡಿಕೊಡುತ್ತಾರೆ.
ಹೆಲ್ಮೆಟ್ ಧರಿಸುವುದರಿಂದ ಸುರಕ್ಷತೆ ಹೆಚ್ಚು ಎಂದು ನಿರೂಪಿಸುವ ಅಂಕಿ-ಅಂಶ, ಮಾಹಿತಿಗಳನ್ನೆಲ್ಲ ಎಷ್ಟೇ ಎದುರಿಗಿಟ್ಟರೂ ಆ ಮೂಲಕ ಜನರು ಹೆಲ್ಮೆಟ್ ಹಾಕಿಕೊಳ್ಳುವಂತೆ ಮಾಡಲಿಕ್ಕಾಗುವುದಿಲ್ಲ. ಕಾಯಿದೆ ಇರಲಿ, ಇಲ್ಲದಿರಲಿ ನೀವು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿರಲೇ ಬೇಕು ಎಂದು ಕೆಲವೇ ಸಂಸ್ಥೆಗಳಷ್ಟೇ ತಮ್ಮ ಉದ್ಯೋಗಿಗಳಿಗೆ ಷರತ್ತು ವಿಧಿಸಿವೆ. ಜಗತ್ತಿನಾದ್ಯಂತ, ನಾಗರಿಕವಾಗಿ ಮುಂದುವರಿದಿವೆ ಎಂಬ ರಾಷ್ಟ್ರಗಳಲ್ಲೆಲ್ಲ ಹೆಲ್ಮೆಟ್ ಧಾರಣೆ ಕಡ್ಡಾಯವಾಗಿದೆ. ಅಲ್ಲೆಲ್ಲ ರಸ್ತೆಗಳು ಉತ್ತಮವಾಗಿವೆ, ಸಂಚಾರ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ. ಹಾಗಿದ್ದೂ ಅವರು ಬೈಕ್್ಗಳಿಗಷ್ಟೇ ಅಲ್ಲ, ಬೈಸಿಕಲ್ ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ ಮಾಡಿಕೊಂಡಿದ್ದಾರೆ. ಕೇವಲ ಚಾಲಕನಿಗೆ ಮಾತ್ರವಲ್ಲದೇ ಸವಾರನಿಗೂ ಹೆಲ್ಮೆಟ್ ಧಾರಣೆ ಕಡ್ಡಾಯ. ಅದು ತಮ್ಮ ಲಾಭಕ್ಕಾಗಿಯೇ ಎಂದು ಅರ್ಥ ಮಾಡಿಕೊಂಡಿರುವ ಅಲ್ಲಿನ ಜನರೆಲ್ಲ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ನಿಯಮವನ್ನು ಪಾಲಿಸುತ್ತಾರೆ.
ಆದರೆ ನಮ್ಮಲ್ಲಿ? ರಸ್ತೆಯಲ್ಲಿ ಅಡ್ಡಡ್ಡ ಕಾರು ನಿಲ್ಲಿಸಿ ಕರ್ಕಶವಾಗಿ ಹಾರನ್ ಬಜಾಯಿಸುತ್ತಾರೆ. ಸಂಚಾರ ನಿಯಮಗಳು ಲೆಕ್ಕಕ್ಕೇ ಇಲ್ಲ. ಸಂಚಾರಸೂಚಿಯ ದೀಪಗಳಲ್ಲೂ ಅಸ್ತವ್ಯಸ್ತತೆ, ರಸ್ತೆಯಲ್ಲಿ ಯಮಪುರಿಯ ದಾರಿ ತೋರಿಸುವ ಹೊಂಡಗಳು, ಇವೆಲ್ಲದರ ನಡುವೆಯೇ ಹೆಲ್ಮೆಟ್್ರಹಿತ ಬೈಕ್ ಚಾಲನೆ. ಆಸ್ಟ್ರೇಲಿಯಾದಂಥ ರಾಷ್ಟ್ರ 1961ರಿಂದಲೇ ಹೆಲ್ಮೆಟ್ ಕಡ್ಡಾಯ ನೀತಿ ಅನುಸರಿಸಿಕೊಂಡು ಬಂದಿದೆ ಎಂಬುದು ಗೊತ್ತೇನು? ‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜನರಿಗೇ ಹೆಲ್ಮೆಟ್ ಬೇಡ ಎಂದಿರುವಾಗ ಅದನ್ನು ಹೇರುವುದಕ್ಕೆ ಯಾವ ಸರ್ಕಾರಕ್ಕೆ ಅಧಿಕಾರವಿದೆ?’ ಎಂದೇ ನಾವು ಅಬ್ಬರಿಸುತ್ತೇವೆ!?
ಹಾಗಾದರೆ ನಮಗೆ ನಮ್ಮ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲವೇಉಹುಂ. ಹಾಗೆ ಅಂದುಕೊಳ್ಳುವಂತೆಯೇ ಇಲ್ಲ! ಏಕೆಂದರೆ ವಾಹನ ಖರೀದಿಸುವಾಗಲೇ ನಮ್ಮ ಅದೃಷ್ಟ ಸಂಖ್ಯೆಯ ಲೆಕ್ಕಾಚಾರಗಳು ಶುರು. ಇದೇ ನಂಬರಿನಿಂದ ಶುರುವಾದರೆ, ಕೂಡಿಸಿ- ಕಳೆದರೆ ಇಂತಿಷ್ಟೇ ಸಂಖ್ಯೆ ಉತ್ತರವಾಗಿ ಬಂದರೆ ಆಯುಷ್ಯ ಪೂರ್ತಿ ಅದರಲ್ಲಿ ಆರಾಮ ಪ್ರಯಾಣ ಎಂದು ನಂಬುವವರು ನಾವು. ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಆದ ನಂತರವೇ ವಾಹನದ ಬಳಕೆ. ಯಾವತ್ತೂ ಅಪಘಾತಕ್ಕೆ ಈಡಾಗದಿರಲಿ ದೇವರೇ ಎಂಬ ಪ್ರಾರ್ಥನೆ. ಕಾರಿನ ಡ್ಯಾಶ್್ಬೋರ್ಡ್ ಮೇಲೆ ಗಣಪ. ಬೈಕ್್ನ ಮೂತಿಗೆ ಇಂಥಾ ದೇವರ ಆಶೀರ್ವಾದ ಎಂಬ ಒಕ್ಕಣೆ. ಎಲ್ಲವೂ ಸರಿ. ಆದರೆ ನಂತರ ಗಾಡಿಯ ಇನ್ಷೂರೆನ್ಸ್ ಕಂತನ್ನೇ ಕಟ್ಟುವುದಿಲ್ಲ. ನಿಯಮವಿದೆಯಲ್ಲಾ ಎಂಬ ಕಾರಣಕ್ಕೆ ವಿಮೆ ಮಾಡಿಸುವವರೇ ಅಧಿಕ. ಅವಘಡದ ಸಂದರ್ಭದಲ್ಲಿ ನಮಗೆ, ನಮ್ಮ ಕುಟುಂಬದವರಿಗೆ ರಕ್ಷಣೆಗೆ ಬರುವಂಥದ್ದು ಇದೇ ಎಂಬ ಸುರಕ್ಷತೆಯ ಅರಿವೇಕೆ ನಮ್ಮಲ್ಲಿ ಒಡಮೂಡುವುದಿಲ್ಲ? ನಮಗೆ ಸುರಕ್ಷತೆ ಬೇಕು. ಆದರೆ ನಾವು ಸುರಕ್ಷತೆಯ ಭಾರವನ್ನೆಲ್ಲಾ ದೇವರ ಮೇಲೆ ಹಾಕಿ ಹೆಲ್ಮೆಟ್ ಪಕ್ಕಕ್ಕೆ ಸರಿಸುತ್ತೇವೆ! ಹೆಲ್ಮೆಟ್ ಧರಿಸಿಯೂ ಅಪಘಾತದಲ್ಲಿ ಸತ್ತ ವ್ಯಕ್ತಿಯ ಯಾವುದಾದರೂ ಒಂದು ಉದಾಹರಣೆ ಇಟ್ಟುಕೊಂಡು, ‘ಹೆಲ್ಮೆಟ್ ಹಾಕಿದ ಮಾತ್ರಕ್ಕೆ ಬದುಕುಳಿಯುತ್ತೇವೆ ಅನ್ನೋದಕ್ಕೆ ಗ್ಯಾರಂಟಿ ಏನು? ಎಲ್ಲ ಆ ದೇವರಿಚ್ಛೆ’ ಎಂಬ ಅಸಡ್ಡಾಳ ವಾದ ನಮ್ಮದು.
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್್ಬೆಲ್ಟ್ ಕಟ್ಟಿಕೊಳ್ಳುವುದರ ಬಗ್ಗೆಯೂ ನಮ್ಮ ನಿರ್ಲಕ್ಷ್ಯ ಕಣ್ಣಿಗೆ ರಾಚುವಂಥದ್ದೇ. ಕ್ಯಾಬ್್ಡ್ರೈವರ್್ಗಳು ಸೀಟ್್ಬೆಲ್ಟ್ ಧರಿಸಿ ಚಾಲನೆ ಮಾಡುವ ದೃಶ್ಯ ಕಾಣಸಿಗುವುದೇ ಅಪರೂಪ. ‘ನಿಯಮದ ಪ್ರಕಾರ ಅದೇನೂ ಕಟ್ಟುನಿಟ್ಟು ಅಲ್ಲ ಬಿಡಿ. ಇಷ್ಟಕ್ಕೂ ಅದನ್ನೆಲ್ಲ ಯಾರು ಗಮನಿಸುತ್ತಾರೆ?’ ಎಂಬ ಸಮಜಾಯಿಷಿ ನಮ್ಮ ಬಳಿ ಯಾವತ್ತೂ ಸಿದ್ಧ. ಡ್ಯಾಶ್್ಬೋರ್ಡ್ ಮೇಲೆ ಗಣಪತಿ ಇದ್ದ ಮೇಲೆ ಸೀಟ್್ಬೆಲ್ಟ್್ನ ಹರಕತ್ತೇನು ಎಂಬ ಲಹರಿ ನಮ್ಮದು.
ಇಷ್ಟೆಲ್ಲ ನ್ಯೂನತೆಗಳಿದ್ದೂ ಅವನ್ನು ಯಾರಾದರೂ ತೋರಿಸಿ, ನಿಮ್ಮ ನಡತೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಒಗ್ಗುವಂಥದ್ದಲ್ಲ ಎಂದರೆ ಸಿಡಿಸಿಡಿಯಾಗುತ್ತೇವೆ. ಸುಳ್ಳೇ ನಮ್ಮಲ್ಲೊಂದು ಸ್ವಾಭಿಮಾನ ಹೆಡೆ ಎತ್ತಿ ಬುಸುಗುಡುತ್ತದೆ. ಈಗ ಹೇಳಿ, ಮುಳುಗುತ್ತಿರುವ ಹಡಗಿನಲ್ಲಿ ಎಲ್ಲರ ಸಹಾಯಹಸ್ತಗಳನ್ನು ದೂರತಳ್ಳಿ ಭಜನೆ ಮಾಡುತ್ತಾ ಕುಳಿತು ನೆಗೆದುಬಿದ್ದ ಆ ಅಸಾಮಿ ನಮ್ಮದೇ ಪ್ರತಿನಿಧಿಯಂತೆ ಭಾಸವಾಗುತ್ತಿಲ್ಲವೇ?