Monday 29 June 2015

ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ? ( ‘ನೆಹರೂ ಪರದೆ ಸರಿಯಿತು’ ಪುಸ್ತಕದಿಂದ ಆಯ್ದ ಭಾಗ)

( ‘ನೆಹರೂ ಪರದೆ ಸರಿಯಿತು’ ಪುಸ್ತಕದಿಂದ ಆಯ್ದ ಭಾಗ)

ಥೂ! ಗಾಂಧೀಜಿ ಹೇಳ್ತಾರಲ್ಲ , ಗ್ರಾಮ ಸ್ವರಾಜ್ಯ-ಸ್ವದೇಶೀ … ಇವೆಲ್ಲ  ಯೋಚಿಸಲಿಕ್ಕೂ  ಅನರ್ಹವಾದವು’ ಹೀಗೆನ್ನುತ್ತಿದ್ದವರು ಯಾರಿರಬಹುದು ಹೇಳಿ? ಸಾವರ್ಕರಾ? ಅಂಬೇಡ್ಕರಾ? ಜಿನ್ನಾನಾ? ಪಟೇಲರಾ? ಖಂಡಿತಾ ಅಲ್ಲ, ಹಾಗೆನ್ನುತ್ತಿದ್ದವರು, ಸ್ವತಃ ಗಾಂಧೀಜಿಯವರ ಅನುಯಾಯಿ ನೆಹರೂ!
ಯಾರನ್ನು  ಗಾಂಧೀಜಿ ‘ನನ್ನ  ನಂತರ ನನ್ನ  ಮಾತನಾಡುವವ’ ಎಂದು ಕರೆಯುತ್ತಿದ್ದರೋ ಅದೇ ವ್ಯಕ್ತಿ. ಯಾರನ್ನು  ಇಡಿಯ ದೇಶ ಗಾಂಧೀಜಿಯ ಚಿಂತನೆಗಳ ಶಾಶ್ವತ ರೂಪ ಎಂದು ಭಾವಿಸುತ್ತಿದ್ದರೋ ಆತ. ಹೌದು ಅದೇ ನೆಹರೂ ಸ್ವದೇಶಿ ಚಿಂತನೆ ನಡೆಸಿದರೆ ದೇಶ ಹಾಳಾಗಿ ಹೋಗುತ್ತದೆ, ದೇಶವನ್ನು ಕಟ್ಟಬೇಕೆಂದರೆ ದೊಡ್ಡ ದೊಡ್ಡ  ಯಂತ್ರಗಳ ಮೇಲೆ ಕಟ್ಟಬೇಕು, ಅದರಿಂದಲೇ ಆರ್ಥಿಕ ಸ್ಥಿತಿ ಬಲಗೊಳ್ಳುವುದು ಸಾಧ್ಯ ಎನ್ನುತ್ತಿದ್ದರು.
ದೇಶ ಅನಾಚೂನವಾಗಿ ಬೆಳೆದು ಬಂದದ್ದೇ ಗ್ರಾಮ ಸ್ವರಾಜ್ಯದ ಆಧಾರದ ಮೇಲೆ. ಲಕ್ಷಾಂತರ ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ ಎಂದು  ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದರು. ಆದರೆ ನೆಹರೂ ಅವೆಲ್ಲವನ್ನೂ ತಿರಸ್ಕರಿಸಿದರು. ದೊಡ್ಡ ದೊಡ್ಡ ಯಂತ್ರಗಳು ಗೃಹಕೈಗಾರಿಕೆಗಳನ್ನು  ಮೀರಿ ಬೆಳೆಯಬೇಕು. ಆಗ ದೇಶದಲ್ಲಿ  ಹಣ ಸಂಗ್ರಹವಾಗುತ್ತದೆ. ಆ ಹಣ ಬಡವರಿಗೂ  ಸೇರುತ್ತದೆ ಎಂಬುದು ಅವರ ಲೆಕ್ಕಾಚಾರ. ದೇಶ ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದ ಮಾರ್ಗವನ್ನೇ  ಈಗ ನೆಹರೂ ಬದಲಿಸ ಹೊರಟಿದ್ದರು. ಪಾಪ! ಗಾಂಧೀಜಿಯಂತಹ ಮಹಾನ್ ವ್ಯಕ್ತಿಯೊಂದಿಗೆ  ಒಡನಾಡಿಯೂ ತಮ್ಮ  ಆ ತನಕದ ಆಡಂಬರತನವನ್ನು  ಬದಲಿಸಿಕೊಂಡು ಸರಳವಾಗಲಾರದ ವ್ಯಕ್ತಿ, ಸರಳವಾಗಿದ್ದ  ದೇಶವನ್ನು ದಿಢೀರ್ ಸಿರಿವಂತಿಕೆಯತ್ತ ಎಳೆದು ತರುವ ಯೋಚನೆಗೆ ಶುರುವಿಟ್ಟರು.
ನೆಹರೂ ಸ್ವತಃ ಆರ್ಥಿಕ ತಜ್ಞರಲ್ಲ , ಯಂತ್ರಗಳ ಬಗ್ಗೆ  ಮಾತನಾಡಬಲ್ಲ  ಇಂಜಿನಿಯರೂ ಆಗಿರಲಿಲ್ಲ.  ಅವರು ಬರಿ ಕನಸುಗಾರರಾಗಿದ್ದರು. ತಾವು ಕಂಡ ಕನಸನ್ನು ನನಸುಗೊಳಿಸಬೇಕು. ಆ ಮಾರ್ಗದಲ್ಲಿರುವ ತೊಡಕುಗಳು ಏನೇ ಇರಲಿ, ಅದರಿಂದ ದೇಶ ನಿರ್ನಾಮವಾಗಿಯೇ ಹೋಗಲಿ ಚಿಂತೆ ಇಲ್ಲ. ಕನಸು ಮಾತ್ರ ಸಾಕಾರವಾಗಬೇಕು ಎಂಬ ಹುಚ್ಚು  ಅವರಲ್ಲಿತ್ತು! ಅದಕ್ಕೆ ಮೆಹಲೋನವೀಸ್ ಎಂಬುವವನ ಜೊತೆ ಪಡೆದರು.
ಆತ ಮತ್ತೊಬ್ಬ  ನೆಹರೂ. ಇತ್ತ ಇಂಜಿನಿಯರ್ ಅಲ್ಲ, ಅತ್ತ  ಆರ್ಥಿಕತಜ್ಞನೂ ಅಲ್ಲ. ಬೇರೆಡೆಯ ಯೋಜನೆಗಳನ್ನು  ಕದ್ದು  ತನ್ನದೇ  ಯೋಜನೆ ಇದು ಎಂದು ನಂಬಿಸಬಲ್ಲ  ಮೋಸಗಾರ ಅಷ್ಟೇ. ಆತ ಅಂಕಿ-ಅಂಶಗಳನ್ನು  ಕೊಟ್ಟು ಯಂತ್ರಗಳಿಂದಲೇ ದೇಶದ ಅಭಿವೃದ್ಧಿ  ಎಂದು ಸಾಸಿ ತೋರುತ್ತಿದ್ದ. ಅದನ್ನು  ಸಾಕಾರಗೊಳಿಸಲೆಂದೇ ರಷ್ಯಾದ ಮಾದರಿಯ ಪಂಚವಾರ್ಷಿಕ ಯೋಜನೆಗಳನ್ನು  ಜಾರಿಗೆ ತರಲು ಒತ್ತಡ ಹೇರಿದ.
ವಾಸ್ತವವಾಗಿ ಆಗತಾನೆ ಸ್ವಾತಂತ್ರ್ಯ ಪಡೆದ ದೇಶ ತನ್ನ  ಆಂತರಿಕ ಶಕ್ತಿ ಯಾವುದೆಂದು ಗುರುತಿಸಿಕೊಂಡು ಅದನ್ನು  ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಬೆಳೆಯಬೇಕು. ಅದನ್ನು  ಬಿಟ್ಟು, ಅವರು ಹಾಗೆ  ಬೆಳೆದಿದ್ದಾರೆ; ಇವರು ಹೀಗೆ  ಬೆಳೆದಿದ್ದಾರೆ ಎನ್ನುತ್ತಾ  ಕುಳಿತರೆ, ಅವರನ್ನು  ಅನುಸರಿಸುವ ಪ್ರಯತ್ನ  ಮಾಡಿದರೆ ಖಂಡಿತ ಬೆಳವಣಿಗೆ ಅಸಾಧ್ಯ.ಭಾರತದ ಮಟ್ಟಿಗೆ ಹೇಳುವುದಾದರೆ, ಗ್ರಾಮಶಕ್ತಿ  ಇಲ್ಲಿನ ಆಂತರಿಕ ಶಕ್ತಿ. ಅಲ್ಲಿ  ಕಳೆದು ಹೋಗುತ್ತಿರುವ ನಮ್ಮವರ ಕಲೆ-ಕುಸುರಿ ಕೆಲಸಗಳನ್ನು ಬಳಸಿಕೊಳ್ಳಬೇಕಿತ್ತು. ಕೃಷಿ ಕಾರ್ಯದಲ್ಲಿ  ಕ್ಷಮತೆಯನ್ನು  ಹೆಚ್ಚಿಸುವ  ಯತ್ನ  ಮಾಡಬೇಕಿತ್ತು. ಆದರೆ  ನೆಹರೂ ಅವೆಲ್ಲವನ್ನು  ಬದಿಗಿಟ್ಟು  ಕೈಗಾರಿಕೀಕರಣ ಮಾಡುವ ಪ್ರಯತ್ನ  ಶುರುವಿಟ್ಟರು. ಅದಕ್ಕೆ ಹಣ ಎಲ್ಲಿಂದ ತರಬೇಕು? ಸಾಲ ತಂದರು. ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಸಾಲ ಎತ್ತುವ ಚಾಳಿ ಶುರುವಿಟ್ಟಿತು.  ಆ ಹಣವನ್ನು  ನೆಹರೂ ಎಲ್ಲೆಲ್ಲಿ  ಹೂಡಿಕೆ ಮಾಡಿದರೋ ಅಲ್ಲಿಂದ ಹೇಳುವಷ್ಟು  ಹಣ ಹುಟ್ಟಲಿಲ್ಲ. ಮತ್ತೆ  ಸಾಲ-ಮತ್ತೆ ನಷ್ಟ. ಈ ಚಕ್ರ ಎಲ್ಲಿಯವರೆಗೂ ಮುಂದುವರೆಯಿತೆಂದರೆ, ಇಂದು ಸಾಲದ ಮೇಲೆಯೇ ಬದುಕುವ ಚಟವನ್ನು  ನಮ್ಮ  ನಾಯಕರು ಹಚ್ಚಿಸಿಕೊಂಡಿದ್ದಾರೆ. ದೇಶ ಅಕ್ಷರಶಃ ಸಾಲದ ಉರುಳಲ್ಲಿ  ಸಿಕ್ಕು  ಒದ್ದಾಡುತ್ತಿದೆ. ನೆಹರೂ ಹುಟ್ಟಿಸಿದ ಆ ಆರ್ಥಿಕ ಕೂಸು ನೆಹರೂ ಕಾಲದಲ್ಲಿಯೇ ಸತ್ತುಹೋಯಿತು. ಈ ದೇಶದ ಜನ ಅಪಾರ ತೆರಿಗೆ ಕಟ್ಟುವ ಮೂಲಕ ಆ ಕೂಸಿಗೆ ಕೃತಕ ಉಸಿರಾಟ ಮಾಡುತ್ತಿದ್ದಾರೆಯೇ ಹೊರತು ಮತ್ತೇನಲ್ಲ!
ನೆಹರೂ, Public Sector Unitಗಳನ್ನು  ಸರ್ಕಾರದ ವಶಕ್ಕೆ ಪಡೆದರು. ಗೃಹಕೈಗಾರಿಕೆಗಳನ್ನು  ನಡೆಸುವುದು, ಅಲ್ಲಿನ ವಸ್ತುಗಳನ್ನು ಮಾರುಕಟ್ಟೆಗೊಯ್ಯುವುದು ಇವಲ್ಲಾ ಸಾಧ್ಯವಾದಷ್ಟೂ ಕಷ್ಟವಾಗುವಂತೆ ನೋಡಿಕೊಂಡರು. ಲೈಸೆನ್ಸು, ಪರ್ಮಿಟ್ಟು ಎಂದೆಲ್ಲ  ರಗಳೆಗಳು ಶುರುವಾಗಿದ್ದು ಇದೇ ಕಾಲಕ್ಕೆ. ಸಮಾಜವಾದದ ಹೆಸರಲ್ಲಿ, ಸರ್ವರಿಗೂ  ಸಮಪಾಲು ಎನ್ನುತ್ತಿದ್ದ  ನೆಹರೂ ಕೊನೆಗಾಲಕ್ಕೆ  ಈ ರೀತಿ ಬದಲಾದದ್ದು, ಬಡವರ ಶೋಷಣೆಗೆ ನಿಂತದ್ದು ಎಲ್ಲರಿಗೂ  ಅಚ್ಚರಿತಂದಿತ್ತು. ಬಡತನ ನಿರ್ಮೂಲನೆಗೆ ಎಂದು ಶುರುವಿಟ್ಟ ಆರ್ಥಿಕ ಯೋಜನೆಗಳು ಬಡವರ ನಿರ್ಮೂಲನೆ ಮಾಡಿದ್ದು ಖಂಡಿತ ಸುಳ್ಳಲ್ಲ.
ಗಾಂಧೀಜಿಯ ಗ್ರಾಮರಾಜ್ಯದ ಕಲ್ಪನೆಯನ್ನು  ಅಮೆರಿಕದಂತಹ ರಾಷ್ಟ್ರಗಳೇ ಮೆಚ್ಚಿ  ಸ್ವೀಕರಿಸಿದ್ದವು. ಅವರಲ್ಲಿ  ಗೃಹಕೈಗಾರಿಕೆಗಳ ಪರಿಕಲ್ಪನೆ ಇಲ್ಲದಿದ್ದರೂ, ಹೆಚ್ಚು -ಹೆಚ್ಚು  ಜನ ಸೇರಿ ಕೆಲಸ ಮಾಡುವಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು  ಸ್ಥಾಪಿಸಿದರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಲ್ಲ ಏಕೈಕ ಮಾರ್ಗ ಅದು. ಅಕ್ಷರಶಃ ಆ ನೀತಿಯನ್ನು  ಭಾರತ ಪಾಲಿಸಬೇಕಿತ್ತು. ಇಲ್ಲಿನ ಜನಸಂಖ್ಯೆಗೆ ತಕ್ಕಂತಹ ಉದ್ಯೋಗ ನೀಡಬೇಕಾದರೆ
Medium scale industries & Small scale industriesಗಳ ಜರೂರತ್ತಿತ್ತು. ಆದರೆ ಸ್ವಾತಂತ್ರ್ಯ ಬಂದ ೫೫ ವರ್ಷಗಳ ನಂತರ ಇಂದಿಗೂ ಆ ಎರಡು ಕ್ಷೇತ್ರಗಳಿಗೂ ವಿಶೇಷ ಬೆಲೆ ಬಂದಿಲ್ಲ. ಆ ವರ್ಗದವರೊಂದಿಗೆ ನೆಹರೂ ಕಾಲದ ಅಸ್ಪೃಶ್ಯತೆ ಇಂದಿಗೂ ಜಾರಿಯಲ್ಲಿದೆ!
ನೆಹರೂ ಎಂದಿಗೂ ಗಾಂಧೀಜಿ ಹೇಳಿದ ಮಾರ್ಗದಲ್ಲಿ  ನಡೆದವರೇ ಅಲ್ಲ. ಗಾಂಧೀಜಿ ಆಶ್ರಮದಲ್ಲಿದ್ದ  ನಿಷ್ಠಾವಂತ ಕಾರ್ಯಕರ್ತರು ನೆಹರೂ ಪಾಲಿಗೆ ನಿಯತ್ತಿನ ಸಿಪಾಯಿಗಳು. ಚುನಾವಣೆ ಬಂತೆಂದರೆ ಸಾಕು, ಅಲ್ಲಿ ನೆಹರೂ ಹಾಜರ್. ಅದೇ ಕಾರ್ಯಕರ್ತರನ್ನು  ಪುಸಲಾಯಿಸಿ, ಬಡಿದೆಬ್ಬಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು. ಆ ಕಾರ್ಯಕರ್ತರ ಪ್ರಾಬಲ್ಯವಿದ್ದ  ಕ್ಷೇತ್ರದಲ್ಲಿ  ಅವರದೇ ಅಭ್ಯರ್ಥಿಯನ್ನು ನಿಲ್ಲಿಸಲೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಆಮೇಲೆ..? ಆಮೇಲೇನು? ಅದೇ ಗಾಂಧೀಜಿ ಆಶ್ರಮದಿಂದ ಹೊರಸೂಸುತ್ತಿದ್ದ  ಜಗ ಬೆಳಗುವ ಚಿಂತನೆಯನ್ನು  ಮೂಲೆಗೊತ್ತುತ್ತಿದ್ದರು. ಗಾಂಧೀಜಿಯ ಕಟ್ಟಾ ಅನುಯಾಯಿಯೊಬ್ಬರು ಮೂರು ಬಾರಿ ಚುನಾವಣೆ ರ್ಸ್ಪಸಿ ಗೆದ್ದರು. ಸರಕಾರ ಕೊಟ್ಟ  ಸೌಲಭ್ಯಗಳನ್ನೆಲ್ಲಾ  ಹಿಂದಿರುಗಿಸಿ ಗಾಂಜಿ  ಹೇಳಿದ ಮಾರ್ಗದಲ್ಲಿ  ನಡೆದರು. ಆದರೆ ನೆಹರೂ ಅವರ ಮಾತಿಗೆ  ಎಂದೂ ಬೆಲೆಯನ್ನೇ  ಕೊಡಲಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯನ್ನು  ಮೂದಲಿಸಿ ದೊಡ್ಡ ಕಾರ್ಖಾನೆಗಳನ್ನು  ಬೆಂಬಲಿಸುವುದರಲ್ಲಿಯೇ ಕಾಲಕಳೆದರು. ಆ ಕಾರ್ಖಾನೆಗಳಿಗಾಗಿ ಸಾಲತಂದರು. ದೇಶವನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ  ಚಿರಋಣಿಗಳನ್ನಾಗಿಸಿ(?) ಹೊರಟರು.
ಇದೇ ವೇಳೆಗೆ, ಭಾರತದ ನಂತರ ಸ್ವಾತಂತ್ರ್ಯ ಪಡೆದಿದ್ದ  ರಾಷ್ಟ್ರಗಳೆಲ್ಲ  ಮಿಂಚಿನಂತೆ ಬೆಳೆದವು. ರಾಷ್ಟ್ರದ ಅಂತಃಶಕ್ತಿಯನ್ನು ಗುರುತಿಸಿ, ನಿಸ್ವಾರ್ಥತೆಯಿಂದ ರಾಷ್ಟ್ರವನ್ನು  ಮುನ್ನಡೆಸಿದವರೆಲ್ಲ  ಜಗತ್ತಿನ ಭೂಪಟದಲ್ಲಿ  ಕಂಗೊಳಿಸುವಂತೆ ಬೆಳೆದರು. ಅಲ್ಲಿ ಬೆಳೆದದ್ದು  ವೈಯಕ್ತಿಕವಾಗಿ  ಆ ವ್ಯಕ್ತಿಗಳಲ್ಲ , ರಾಷ್ಟ್ರ!. ಆದರೆ ಭಾರತದಲ್ಲಿ  ನೆಹರೂ ಹಠಕ್ಕೆ  ಬಿದ್ದು,  ತಾವು ಬೆಳೆಯಬೇಕೆಂದರು. ಜಗತ್ತಿನ  ಎಲ್ಲ  ರಾಷ್ಟ್ರಗಳು  ತನ್ನ ಬಗ್ಗೆಯೇ ಮಾತಾಡಬೇಕೆಂದು ಆಶಿಸಿದರು. ಆ ಆಸೆಯ ಪೂರೈಕೆಗಾಗಿ ದೇಶದ ಹಿತಾಸಕ್ತಿಗಳನ್ನು  ಬಲಿಕೊಡಲಿಕ್ಕೂ  ಅವರು ಹಿಂದೆ-ಮುಂದೆ ನೋಡಲಿಲ್ಲ!!
ಭಾರತ ಸ್ವತಂತ್ರವಾಗಿ ಬಹುಕಾಲದ ನಂತರ ಅಕಾರ ಪಡೆದ ಸಿಂಗಾಪೂರದ  ಲೀ ಕ್ವಾನ್‌ಯೂರನ್ನು  ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ಸ್ಪಷ್ಟ  ಉದ್ದೇಶ, ಚಿಂತನೆಗಳೊಂದಿಗೆ ದೇಶವನ್ನು  ಎತ್ತರಕ್ಕೆ  ಬೆಳೆಸಬೇಕೆಂಬ ಹಠಕ್ಕೆ  ಬಿದ್ದ ಕ್ವಾನ್‌ಯೂ ಅಂತಾರಾಷ್ಟ್ರೀಯ ಮಟ್ಟದಿಂದ  ವ್ಯಾಪಾರಿಗಳನ್ನು  ಸಿಂಗಾಪೂರಕ್ಕೆ ಸೆಳೆದರು. ಅದೇ ವೇಳೆಗೆ ಸಿಂಗಾಪೂರದ ಕಲೆ ಜಗತ್ತು  ಮೆಚ್ಚುವಂತೆ ನೋಡಿಕೊಂಡರು. ಸಿಂಗಪೂರ್ ನೋಡುತ್ತ, ನೋಡುತ್ತ ಕಣ್ಣು ಕುಕ್ಕುವ ನಗರವಾಗಿಬಿಟ್ಟಿತು. ಕ್ವಾನ್‌ಯೂ ಒಮ್ಮೆ  ಮಾತನಾಡುತ್ತ, ‘ಹೊರಗಡೆಯಿಂದ ಬರುವ ತಂತ್ರಜ್ಞಾನ, ಬಂಡವಾಳವನ್ನು  ಸಿಂಗಾಪೂರ ಸ್ವಾಗತಿಸುತ್ತಿದೆ. ಆದರೆ ಆ ನೆಪದಲ್ಲಿ  ಅದು ತನ್ನತನವನ್ನು  ಕಳೆದುಕೊಳ್ಳಲು ಸಿದ್ಧವಿಲ್ಲ’ ಎಂದಿದ್ದರು. ‘ನಾಯಕರು, ಅಕಾರಿಗಳು, ನಿರ್ಣಯ ಮಾಡಬಲ್ಲ ಜನ ಇವರೆಲ್ಲ  ಮೊದಲು ಶಿಸ್ತನ್ನು  ಪಾಲಿಸಬೇಕು. ಶಿಸ್ತನ್ನು  ಇತರರ ಮೇಲೆ ಹೇರುವ ಮುನ್ನ  ಅದನ್ನು  ಅನುಸರಿಸಿ ತೋರಿಸಬೇಕು. ಅವರು ಮೊದಲು ಭ್ರಷ್ಟಾಚಾರರಹಿತರಾಗಿ ಜನರಿಗೆ ಉದಾಹರಣೆಯಾಗಬೇಕು’ ಎಂದೂ ಹೇಳಿದ್ದರು. ಅವೆಲ್ಲ  ನೆಹರೂ ಕಿವಿಗೆ  ಬೀಳುವುದು  ಸಾಧ್ಯವೇ ಇರಲಿಲ್ಲ. ಬಿದ್ದರೂ  ಕ್ವಾನ್‌ಯೂ ಹೇಳಿದ ಯಾವುದನ್ನೂ  ಅವರಿಗೆ  ಮಾಡಿ ತೋರಿಸುವುದು ಸಾಧ್ಯವಿರಲಿಲ್ಲ.  ಶಿಸ್ತು, ಚಿಂತನೆಗಳಲ್ಲಿನ  ಸ್ಪಷ್ಟತೆ, ಇವು ನೆಹರೂ  ಪಾಲಿಗೆ ದೂರ-ಬಹುದೂರ! ಚೆಂದದ ಬಟ್ಟೆ, ಭಾಷಣ, ಹೊಗಳುಭಟರ ಸಹವಾಸ ಅವರಿಗೆ ಹೇಳಿ ಮಾಡಿಸಿದಂಥವಾಗಿದ್ದವು!
‘ನಿಮ್ಮ  ದೇಶದಲ್ಲಿ  ಪ್ರತಿಭೆಗಳಿಗೆ ಸೂಕ್ತ ಅವಕಾಶಕೊಡುತ್ತಿಲ್ಲ. ಅವರಿಗೆ ತಮ್ಮ  ಸಾಧನೆ ತೋರ್ಪಡಿಸಲು ಅನುಕೂಲವಾಗುವಂತಹ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸರದ ನಿರ್ಮಾಣ ಮಾಡಿಕೊಡುತ್ತಿಲ್ಲ. ಇದೇ ಭಾರತೀಯರು ಸಿಂಗಾಪೂರಕ್ಕೆ ಬಂದರೆ ಅದ್ಭುತ ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ  ಅವರಿಂದ ಸಾಧ್ಯವಿಲ್ಲ’ ಮುಂತಾದ ವಿಚಾರಗಳನ್ನು  ಮನಸ್ಸಿಗೆ ನಾಟುವಂತೆ ಹೇಳಿ ‘ಭಾರತ ಬೆಳೆದರೆ ನಮಗೆ ಲಾಭವಿದೆ. ಅದಕ್ಕೆ ಸ್ವಾರ್ಥದಿಂದ  ಭಾರತ ಬೆಳೆಯಲಿ ಎಂದು ಆಶಿಸುತ್ತಿದ್ದೇನೆ’ ಎಂದು ಕ್ವಾನ್‌ಯೂ ಹೇಳಿದ್ದರು.
ಏಷ್ಯಾದ ಬಹುತೇಕ ರಾಷ್ಟ್ರಗಳು ಹೀಗೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗುವುದನ್ನು  ಕಾಯುತ್ತ  ಕುಳಿತಿದ್ದವು. ದಶಕಗಳಷ್ಟು ದೀರ್ಘಕಾಲ ಕಾದವು. ಭಾರತ ಪ್ರಬಲವಾಗುವ ಬದಲು, ಆರ್ಥಿಕವಾಗಿ ದುರ್ಬಲವಾಗುತ್ತ ಸಾಗಿದಂತೆಲ್ಲ ಹತಪ್ರಭವಾದವು. ಜಪಾನ್-ಚೀನಾಗಳ ಮೊರೆಹೊಕ್ಕು ಸುಮ್ಮನಾದವು. ನೆಹರೂ ಯೋಜನೆಗಳ ಮೇಲೆ ಯೋಜನೆಗಳನ್ನು  ರೂಪಿಸಿದರು. ಪ್ರತಿಯೊಂದೂ ಬಡ ಭಾರತದಲ್ಲಿ  ಸಂಪತ್ತನ್ನು  ಸೃಷ್ಟಿಸುವ (ನೆನಪಿಡಿ! ಸಂಪತ್ತನ್ನು  ಗಳಿಸುವುದಲ್ಲ ) ಯೋಜನೆಗಳೇ ಆದವು. ಅದಕ್ಕೆ ಸಾಲ ತರಲಾಯಿತು. ತಂದ ಸಾಲದಲ್ಲಿ  ಬಹುಪಾಲು ನೆಹರೂ ಮತ್ತವರ ತಂಡಕ್ಕೇ ಖರ್ಚಾಯಿತು. ಮಂತ್ರಿಗಳು -ರಾಜಕಾರಣಿಗಳು-ಅಕಾರಿವರ್ಗ ಇವರೆಲ್ಲರ ಖರ್ಚುವೆಚ್ಚ  ಅಷ್ಟು  ಅಪಾರವಾಗಿತ್ತು!
ಭಾರತದಲ್ಲಿ ಹುಟ್ಟುತ್ತಿರುವ -ಇನ್ನೂ  ಹುಟ್ಟದಿರುವ  ಮಗುವೂ ಕೂಡ ಸಾಲದ ಹೊರೆ ಹೊರಲೇಬೇಕಾಯಿತು. ಮತ್ತು  ಪರಿಸ್ಥಿತಿಗಳನ್ನು  ಅವಲೋಕಿಸಿದ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದರು ದ್ವಿತೀಯ ಪಂಚವಾರ್ಷಿಕ ಯೋಜನೆ (೨ನೇ ಜೂನ್ ೧೯೫೭)ಯ ಮುನ್ನ ನೆಹರೂಗೆ ಪತ್ರ ಬರೆದರು,
‘ನಾವು ಯೋಜನೆಗಳಲ್ಲಿ  ತೊಡಗಿಸುತ್ತಿರುವ ಹಣ ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು  ಗಮನಿಸಲಿಕ್ಕೆ  ಸೂಕ್ತ ವ್ಯವಸ್ಥೆ  ಮಾಡಲಾಗಿದೆ ಎಂದು  ಭಾವಿಸಿದ್ದೇನೆ…. ಹಾಗೇನಾದರೂ ಆಗದಿದ್ದಲ್ಲಿ, ಜನರ ಬೆವರಿನ ಹಣ, ತ್ಯಾಗದ ಹಣ ವಿಪತ್ತಿಗಾಗಿ ಖರ್ಚಾದಂತಾಗುತ್ತದೆ. ನಾವು ಎರಡನೇ ಪಂಚವಾರ್ಷಿಕ ಯೋಜನೆಗಳಿಗೆಂದೇ ಜನರ ಮೇಲೆ ತೆರಿಗೆಯ ಭಾರ ಹೇರಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ  ಹೊಸ ಆರ್ಥಿಕ ನೀತಿಯನ್ನು  ಜಾರಿಗೆ ತರಲು, ಆಡಳಿತಕ್ಕೆಂದು  ಮಾಡುತ್ತಿರುವ  ಖರ್ಚನ್ನು ಕಡಿತಗೊಳಿಸಲು  ಯಾವ-ಯಾವ ಕ್ರಮಗಳನ್ನು   ಕೈಗೊಂಡಿದ್ದೇವೆಂಬುದು ನನಗೆ ತಿಳಿಯುತ್ತಿಲ್ಲ. ಹನಿ ಹನಿ ಸೋರಿ ಅದು ಖಾಲಿಯೂ ಆಗಬಹುದು. ಅದಕ್ಕೆ ಪ್ರತಿಯೊಂದು ವಿಭಾಗಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು  ಕೈಗೊಳ್ಳುವ ಮುನ್ನ ಅದು ನಮ್ಮ  ಆರ್ಥಿಕ ಪರಿಸ್ಥಿತಿಗೆ ಸೂಕ್ತವಾಗಿ  ಹೊಂದಾಣಿಕೆಯಾಗುವಂತಿರಬೇಕು. ಕೊರತೆ ನಿರ್ಮಾಣವಾಗಿ ಜನರ ಮೇಲೆ ತೆರಿಗೆಯ ಭಾರ ಅಕವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ  ಇರಬೇಕು’ ಎಂದೆಲ್ಲ  ಬುದ್ಧಿಮಾತು ಹೇಳಿದ್ದರು.
ಕೇಳುವ ವ್ಯವಧಾನ ನೆಹರೂಗಿರಲಿಲ್ಲ. ಆ ಪತ್ರ ಅದ್ಯಾವ  ಬುಟ್ಟಿ ಸೇರಿತೋ ದೇವರೇ ಬಲ್ಲ.
ನೆಹರೂ ಪಾಲಿಗೆ ಸರ್ಕಾರ ನಡೆಸುವುದೆಂದರೆ ಐಷಾರಾಮಿ ಹೋಟೇಲು ನಡೆಸಿದಂತೆ. ಅಲ್ಲಿ ಎಲ್ಲವೂ ವೈಭವೋಪೇತವಾಗಿರಬೇಕು. ಅದಕ್ಕೆ  ಅಗತ್ಯವಿರುವಷ್ಟು  ಹಣ  ದೊರೆಯದಿದ್ದರೆ ಸಾಲವಾದರೂ ತರಬೇಕು. ಇದು  ಅವರ ಚಿಂತನೆ. ಅದಕ್ಕೆ  ತಕ್ಕಂತೆ  ಭಾರತ ಒಂದು  ವೈಭವೋಪೇತ ಹೋಟೆಲಿನಂತಾಯಿತೇ ಹೊರತು ರಾಷ್ಟ್ರವಾಗಲಿಲ್ಲ, ಶಕ್ತಿಯಾಗಲಿಲ್ಲ!
ಯೋಜನೆಗಳ ಹೆಸರಿನಲ್ಲಿ  ಖರ್ಚು ಮಾಡಿದ  ಒಂದೊಂದು ಹಣವೂ ಸೇರಬೇಕಾದ  ಸ್ಥಳ ಸೇರಲಿಲ್ಲ. ಕೆಲಸವೇನೋ ಬೇಕಾದಷ್ಟಾಯ್ತು. ಆದರೆ ಗುಣಮಟ್ಟ ಕಳಪೆಯಾಯಿತು. ೧೯೫೨-೫೩ರಲ್ಲಿ  ಒಂದು ಕೊಳವೆ ಬಾವಿ ೨೦೦ ಎಕರೆಗಳ ಭೂಮಿಗೆ ನೀರುಣಿಸಲು ಶಕ್ತವಾಗಿದ್ದರೆ, ಪಂಚವಾರ್ಷಿಕ ಯೋಜನೆಗಳ ಫಲವಾಗಿ  ಸಿಕ್ಕಸಿಕ್ಕಲ್ಲಿ ಕೊರೆದ ಕೊಳವೆ ಬಾವಿಗಳು ೧೯೫೫-೫೬ರ ವೇಳೆಗೆ ಸರಾಸರಿ ೬೦ ಎಕರೆ ಭೂಮಿಯನ್ನು  ಮಾತ್ರ ತಣಿಸಬಲ್ಲವಾಗಿದ್ದವು. ಹಣ ಸುರಿದದ್ದು ವ್ಯರ್ಥವಾಗಿತ್ತು. ಸರ್ಕಾರ ಜನ ಮಾಡುತ್ತಿದ್ದ  ಕೆಲಸಗಳನ್ನು  ತಾನೇ ಮಾಡಲು  ಮುಂದಾದ್ದರಿಂದ ಜನರೂ  ಆಲಸಿಗಳಾದರು. ಕೆರೆ ಹೂಳೆತ್ತಬೇಕಿದ್ದರೂ  ಸರ್ಕಾರದ ಮರ್ಜಿಗೆ ಕಾಯಲು ಶುರುವಿಟ್ಟರು. ಇಡಿಯ ದೇಶ ನೈತಿಕ ತಳಹದಿಯನ್ನು  ಕಳೆದುಕೊಳ್ಳಲು ಶುರುವಿಟ್ಟಿತು.
ಅವುಗಳ  ಎಲ್ಲ  ಶ್ರೇಯ ನೆಹರೂವಿಗೇ ಸಲ್ಲಬೇಕು!

Saturday 27 June 2015

ಯೋಜನೆಯ ಪಾಠವನ್ನು ನಾವೇ ಕಲಿಸಬೇಕು!

`ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ರಸ್ತೆ ಚೆನ್ನಾಗಿದೆ. ಆದರೆ ಅಲ್ಲಲ್ಲಿ ರಸ್ತೆ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ’. ಹಾಗಂತ ಕಳೆದ ಏಳೆಂಟು ವರ್ಷಗಳಿಂದ ಹೆಳ್ತಿರೋದನ್ನು ಕೇಳಿದ್ದೇವೆ.ಬೆಂಗಳೂರು ಮೆಟ್ರೋ ಅಂತೂ ಮುಗಿಯುತ್ತಲೇಇಲ್ಲ.ಗುಲ್ಬರ್ಗಾದ ಅನೇಕ ರಸ್ತೆಗಳು ಜಲ್ಲಿಗಳ ಗುಡ್ಡೆಗಳಿಂದ ತುಂಬಿವೆಯೇ ಹೊರತು ರಸ್ತೆಯಾಗಿ ಮಾರ್ಪಟ್ಟಿಯೇ ಇಲ್ಲ. ಹೀಗೇಕೆ?
ಫ್ರಾನ್ಸಿಗೆ ಹೋಗಿ ಬಂದ ಅಂಕಣಕಾರ ಅಶೋಕ್ ದೇಸಾಯಿ ಅಲ್ಲಿನ ಕಂಪೆನಿಯೊಂದರ ಕೆಲಸ ಮಾಡುವ ರೀತಿನೀತಿಗಳನ್ನು ನೀಟಾಗಿ ವಿವರಿಸಿ ಬರೆದಿದ್ದಾರೆ. ಅಲ್ಲಿನ ಯಾವುದೇ ಕೆಲಸದ ಶುರು ಮಾಡುವ ಮುಂಚೆ ಮೊದಲ ಆದ್ಯತೆ ಪರಿಸ್ಠಿತಿ ಅಧ್ಯಯನಕ್ಕೆ ಎನ್ನುವುದನ್ನು ನಿರೂಪಿಸಿದ್ದಾರೆ. ಯಾವುದೇ ಕಾರ್ಯವನ್ನು ವಹಿಸಿಕೊಳ್ಳುವ ಕಂಪೆನಿ, ಅದರ ಅಧ್ಯಯನ ನಡೆಸಿ ಶ್ರೇಣಿ ನೀಡಿಕೊಳ್ಳುತ್ತದೆ. ಯೋಜನೆಯ ವ್ಯಾಪ್ತಿ, ತಾಂತ್ರಿಕ ಸಂಕೀರ್ಣತೆ, ಸಂಗ್ರಹ ಸೌಲಭ್ಯ ಮತ್ತು ಸ್ಥಳೀಯ ಅಗತ್ಯಗಳೆಂಬ ಆಧಾರದ ಮೇಲೆ ಒಂದರಿಂದ ಐದರವರೆಗೆ ಅಂಕ ನೀಡಿ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತದೆ.
ಉದಾಹರಣೆಗೆ, ನೀರು ಮತ್ತು ವಿದ್ಯುತ್ ಸರಬರಾಜಿಗೆ ಮೂಲಸೌಕರ್ಯ ಭಾರಿಯಾಗಿಯೇ ಬೇಕಾಗುತ್ತದೆ. ಹೀಗಾಗಿ ಇದರ ವ್ಯಾಪ್ತಿ ಬಲು ದೊಡ್ಡದು. ದೂರಸಂಪರ್ಕ ಮತ್ತು ಆರೋಗ್ಯ ಉಸ್ತುವಾರಿಗೆ ಸಂಬಂಧಪಟ್ಟ ಯೋಜನೆಯಾದರೆ,ಅಲ್ಲಿ ತಂತ್ರಿಕತೆಗೆ ಮಹತ್ವ ಹೆಚ್ಚು. ಜಿಲ್ಲಾಡಳಿತ ಕಟ್ಟಡಗಳಿಗೆ,ಆರಕ್ಷಕ ಠಾಣೆಗಳಿಗೆ ಜನರಿಂದ ಹಣ ಸಂಗ್ರಹಿಸಲಾಗುವುದಿಲ್ಲ. ರಸ್ತೆಗಳಿಗಾದರೆ ಸಂಗ್ರಹಿಸಬಹುದು. ಹಾಗೆಯೇ ಸೈನ್ಯಕ್ಕೆ ಸಂಬಂಧಪಟ್ಟ ಯೋಜನೆಗಳು ರಾಷ್ಟ್ರೀಯ ಹೊಣೆಯಾದರೆ, ಬೀದಿ ದೀಪ ಪೂರೈಕೆ ಪಕ್ಕಾ ಪ್ರಾದೇಶಿಕವಾದದ್ದು. ಇಂತಹ ಲೆಕ್ಕಾಚಾರ ಮಾಡಿ, ಬೇಕಾದ್ದು- ಬೇಡವಾದ್ದನ್ನೆಲ್ಲ ವಿಂಗಡಿಸಿಯೇ ಮುಂದಿನ ಹೆಜ್ಜೆ. ಆಯಾ ವಿಂಗಡಣೆಯ ಶ್ರೇಣಿಗೆ ತಕ್ಕಂತೆ, ಆಯಾ ಯೋಗ್ಯತೆ ಹೊಂದಿರುವ ಕಂಪೆನಿಗಳಿಗೆ ಕೆಲಸ ವಹಿಸಿಕೊಡಲಾಗುತ್ತದೆ. ಹೀಗಾಗಿ ಫ್ರಾನ್ಸಿನಕಂಪೆನಿಗಳು ಜಗತ್ತಿನ ಎಲ್ಲೆಡೆ ಸೇವೆ ಸಲ್ಲಿಸುವ ಮಟ್ಟಕ್ಕೆ ಬೆಳೆದಿವೆ. ನಾವಾದರೋ ಯಾವುದೋ ಕೆಲಸವನ್ನು ಯಾರದೋ ಕೈಗೆ ಕೊಟ್ಟು ಫಲಿತಾಂಶಕ್ಕೆ ಕಾಯುತ್ತ ಕೂರುತ್ತೇವೆ.
ಈ ನಿಟ್ಟಿನಲ್ಲಿ ಗುಜರಾತ್ ಸರ್ಕಾರದ ಕೆಲಸ ಅಪರೂಪದ್ದು. ಯೋಜನೆಗಳಿಗೆ ಟೆಂಡರ್ ಕರೆದು, ಪಡಕೊಂಡವರಿಗೆ ನಿಯಮ ಹಾಕಲಾಗುತ್ತದೆ, ‘ಗುಣಮಟ್ಟ ಕಾಯ್ದುಕೊಂಡು, ನಿಗದಿತ ಸಮಯದಲ್ಲಿ ಪೂರೈಸದಿದ್ದರೆ ದಿನಕ್ಕೆ ಇಷ್ಟು ಭಾಗದಷ್ಟು ದಂಡ ತೆರಬೇಕು. ಯೋಜನೆಯನ್ನು ಬೇಗ ಪೂರೈಸಿದರೆ,ದಿನಕ್ಕೆ ಇಂತಿಷ್ಟು ಬಹುಮಾನ ನೀಡಲಾಗುವುದು’ ಎಂದು! ಹೀಗಾಗಿಯೇ ಅಲ್ಲಿ ಯಾವ ಯೋಜನೆಯೂ ಆಮೆ ಗತಿಯಲ್ಲಿ ನಡೆಯುವುದಿಲ್ಲ. ನಿಯಮ ವ್ಯಾಪಕವಾಗಿಬಿಟ್ಟಿರುವುದರಿಂದ ಟೇಬಲ್ ಕೆಳಗಿನ ವ್ಯವಹಾರಕ್ಕೂ ಆಸ್ಪದವಿರುವುದಿಲ್ಲ. ವ್ಯಕ್ತಿಯೊಬ್ಬ ಸಮರ್ಥನಾದರೆ ವ್ಯವಸ್ಥೆಗಳೂ ನೆಟ್ಟಗಾಗಿಬಿಡುತ್ತವೆ ಎನ್ನುವುದಕ್ಕೆ ಮೋದಿ ಉತ್ತಮ ಉದಾಹರಣೆ.
ವರ್ಷಗಟ್ಟಲೆ ನಡೆಯುವ ರಸ್ತೆ ಕಾಮಗಾರಿಗಳು,ಅಭಿವೃದ್ಧಿ ಯೋಜನೆಗಳು ಜನ ಸಾಮಾನ್ಯರ ಸಾಮಾನ್ಯ ಬದುಕಿಗೂ ಹೊಡೆತವೇ. ಏನಾದರೂ ಮಾಡಿ, ಯೋಜನಾಬದ್ಧವಾಗಿ ಮಾಡಿ ಎಂಬುದನ್ನು ನಾವೀಗ ಗಟ್ಟಿದನಿಯಿಂದ ಸಂಬಂಧಿತರ ಕಿವಿ ಮುಟ್ಟಿಸಬೇಕಿದೆ.

Sunday 21 June 2015

ಮುಜಫ್ಫರ್‌ನಗರದಲ್ಲಿ ಮಿಡಿಯುವ ಮನ, ಕಾಶ್ಮೀರಿ ಪಂಡಿತರನ್ನೇಕೆ ಕರುಣೆಯಿಂದ ನೋಡುವುದಿಲ್ಲ?

 

ಹೆಸರು: ಸರ್ವಾನಂದ ಕೌಲ್
ಸ್ಥಳ: ಶಾಲಿ, ಅನಂತ್‌ನಾಗ್ ಜಿಲ್ಲೆಯ ಒಂದು ಗ್ರಾಮ
ವೃತ್ತಿ: ನಿವೃತ್ತ ಶಿಕ್ಷಕ ಹಾಗೂ ಕಾಶ್ಮೀರಿ ಕವಿ
ಸರ್ವಾನಂದ್ ಕೌಲ್ ಅವರು "ಪ್ರೇಮಿ"ಯೆಂದೇ ಪ್ರಚಲಿತರಾಗಿದ್ದರು. ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದ ಅವರದ್ದು ಕಾಶ್ಮೀರಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕವಯತ್ರಿ ರೂಪಾ ಭವಾನಿಯವರ ಜೀವನಗಾಥೆ ಬರೆದಿದ್ದರು, ಸಂತ ಮಿರ್ಜಾ ಕಕ್ರ ಅವರ ಜೀವನಚರಿತ್ರೆ ರಚಿಸಿದ್ದರು. ಶ್ರೀಮದ್ ಭಗವದ್‌ಗೀತೆಯನ್ನು ಕಾಶ್ಮೀರಿಗೆ ಹಾಗೂ ಉರ್ದುಗೆ ಭಾಷಾಂತರ ಮಾಡಿದ ಹೆಗ್ಗಳಿಕೆ ಹೊಂದಿದ್ದರು. 1924ರಲ್ಲಿ ಜನಿಸಿದ್ದ ಅವರು ಮಹಾತ್ಮ ಗಾಂಧಿಯಿಂದ ಪ್ರಭಾವಿತರಾಗಿದ್ದರು ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾದರೂ ಜಾತ್ಯತೀತತೆಯಲ್ಲಿ ಅಚಲ ನಂಬಿಕೆ ಹೊಂದಿದ್ದರು. ಅದಕ್ಕೆ ಉದಾಹರಣೆಯೆಂಬಂತೆ 1953ರಲ್ಲಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದಾಗ, 1963ರಲ್ಲಿ ಹಜರತ್ ಬಾಲ್ ಮಸೀದಿಯಿಂದ ಪ್ರವಾದಿ ಮೊಹಮ್ಮದರ ಪವಿತ್ರ ಕುರುಹು ಕಣ್ಮರೆಯಾದಾಗ, 1965ರಲ್ಲಿ ಪಾಕ್ ಆಕ್ರಮಣ ಮಾಡಿದಾಗ, 1967ರ ಪಂಡಿತರ ಪ್ರತಿಭಟನೆ ಸಂದರ್ಭದಲ್ಲಿ, 1968ರ ಅನಂತ್‌ನಾಗ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಪ್ರೇಮಿ ಲೇಖನಿಯನ್ನು ಖಡ್ಗದಂತೆ ಝಳಪಿಸಿ ಪ್ರತಿಭಟಿಸಿದ್ದರು.
ಇತ್ತ 1965 ಹಾಗೂ 1971 ಸೋಲಿನ ನಂತರ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಮುಂದಾಯಿತು. ಸ್ವಾತಂತ್ರ್ಯಾನಂತರ ಇಸ್ಲಾಮಿಕ್ ಮೂಲಭೂತವಾದದ ಮೊದಲ ಪ್ರಯೋಗ ಕಾಶ್ಮೀರದಲ್ಲಿ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿನ ಹಿಂದುಗಳನ್ನು ಹೆಕ್ಕಿ ಕೊಲ್ಲಲು ಆರಂಭಿಸಿದರು. ಇಡೀ ಕಾಶ್ಮೀರದಾದ್ಯಂತ ಹಿಂದುಗಳು ಭಯಭೀತರಾದರು. ಬದುಕುಳಿಯಬೇಕೆಂದರೆ ಕಣಿವೆಯಿಂದ ಖಾಲಿ ಮಾಡಬೇಕು ಎಂಬಂತಾಯಿತು. 1990, ಜನವರಿ 19ರಂದು ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಯ ಮೈಕುಗಳಿಂದ ಮೊಳಗಿತು. ಆದರೂ ಪ್ರೇಮಿಯವರ ಜಾತ್ಯತೀತ ಮನಸ್ಸು ನೆರೆಹೊರೆಯ ಮುಸ್ಲಿಮರು ತಮ್ಮನ್ನು ರಕ್ಷಿಸುತ್ತಾರೆಂಬ ಭದ್ರತಾ ಭಾವನೆಯ ಮೊರೆಹೋಯಿತು. ಅದು 1990, ಏಪ್ರಿಲ್ 29. ಮೂವರು ಮುಸುಕುಧಾರಿ ಭಯೋತ್ಪಾದಕರು ಪ್ರೇಮಿಯವರ ಮನೆಯ ಕದ ಒಡೆದು ಒಳಬಂದರು. ಮನೆ ಮಂದಿಯೆಲ್ಲ ಒಂದು ರೂಮಿನೊಳಗೆ ಸೇರಿ ಎಂದು ಸೂಚಿಸಿದರು. ಮನೆಯೊಳಗಿರುವ, ಮೈಮೇಲಿರುವ ಎಲ್ಲ ಅಮೂಲ್ಯ ವಸ್ತುಗಳನ್ನು, ಚಿನ್ನ, ಆಭರಣಗಳನ್ನು, ಹಣ, ಸೀರೆ, ಶಾಲುಗಳನ್ನು ಕಲೆಹಾಕಿ ಎಂದರು. ಮೈಮೇಲಿದ್ದ ಆಭರಣಗಳನ್ನೂ ಬಿಡಲಿಲ್ಲ. ಎಲ್ಲವನ್ನೂ ಸೂಟ್‌ಕೇಸ್‌ಗೆ ತುಂಬಿಸಿ, ಅದನ್ನು ಹೊತ್ತು ನಮ್ಮನ್ನು ಹಿಂಬಾಲಿಸು ಎಂದು ಪ್ರೇಮಿಗೆ ಸೂಚಿಸಿದರು. ಮನೆಯವರು ಆತಂಕಕ್ಕೊಳಗಾದರು. ಅವರನ್ನುದ್ದೇಶಿಸಿ, "ಆತನಿಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ, ಸದ್ಯದಲ್ಲೇ ವಾಪಸ್ ಕಳುಹಿಸುತ್ತೇವೆ" ಎಂದರು ಭಯೋತ್ಪಾದಕರು. ಅದನ್ನು ಕೇಳಿದ ಪ್ರೇಮಿಯವರ 27 ವರ್ಷದ ಮಗ ಪಂಡಿತ್ ವೀರೇಂದರ್ ಕೌಲ್ ತಾನೂ ಕೂಡ ಬರುವುದಾಗಿ ಹೊರಟ. ಎರಡು ದಿನ ಕಳೆದರೂ ಅಪ್ಪ ಮಗ ಇಬ್ಬರೂ ವಾಪಸ್ಸಾಗಲಿಲ್ಲ.
ಎರಡು ದಿನಗಳ ನಂತರ ಹೃದಯವಿದ್ರಾವಕ ಸ್ಥಿತಿಯಲ್ಲಿದ್ದ ಎರಡು ಶವಗಳು ಸಿಕ್ಕವು!
ಪ್ರೇಮಿ ಪ್ರತಿ ದಿನ ಬೆಳಗ್ಗೆ ಎದ್ದು ದೇವರಿಗೆ ವಂದಿಸುವಾಗ ಹಣೆಗೆ ಗಂಧ ಹಚ್ಚಿಕೊಳ್ಳುತ್ತಿದ್ದರು. ಭಯೋತ್ಪಾದಕರು ಆ ಜಾಗವನ್ನು ರಾಡಿನಿಂದ ಸೀಳಿದ್ದರು. ಇಡೀ ದೇಹದ ಭಾಗಗಳನ್ನೂ ಸಿಗರೇಟಿನಿಂದ ಸುಟ್ಟಿದ್ದರು. ಅಪ್ಪ ಮಗ ಇಬ್ಬರ ಕಣ್ಣುಗಳನ್ನೂ ಕಿತ್ತಿದ್ದರು. ಕೈಕಾಲುಗಳನ್ನು ಮುರಿದುಹಾಕಿದ್ದರು. ಈ ಮನುಕುಲ ಕಂಡ ಮಹಾನ್ ರಕ್ಕಸ ಹಿಟ್ಲರ್‌ನ ಪಡೆಗಳಿಗಿಂತಲೂ ಪೈಶಾಚಿಕವಾಗಿ ಪ್ರೇಮಿ ಹಾಗೂ ಅವರ ಪುತ್ರನನ್ನು ಕೊಲೆಗೈದಿದ್ದರು.
ತೇಜ್ ಕೃಷ್ಣನ್ ರಾಜ್ದಾನ್
ಅಶೋಕ್ ಕುಮಾರ್ ಖಾಜಿ
ನವೀನ್ ಸಪ್ರೂ
ಪಿ.ಎನ್. ಕೌಲ್
ಬಿ.ಕೆ. ಗಂಜೂ
ದೀಪಕ್ ಗಂಜೂ
ಭೂಷಣ್ ಲಾಲ್ ರೈನಾ
ರಮೇಶ್ ಕುಮಾರ್ ರೈನಾ
ದೀನನಾಥ್ ಮುಜೂ
ಗಿರಿಜಾ ಟಿಕೂ
ಅಶೋಕ್ ಸೂರಿ
ಪ್ರೊ. ಕೆ.ಎಲ್. ಗಂಜೂ
ಚುನಿ ಲಾಲ್ ಶಲ್ಲಾ
ಇಂಥ ಒಬ್ಬೊಬ್ಬರ ಸಾವೂ ಒಂದೊಂದು ಕರುಣಾಜನಕ ಕಥೆಯನ್ನು ಹೇಳುತ್ತವೆ. ಬಾಲಿವುಡ್ ನಟ ಸಂಜಯ್ ಸೂರಿ ಗೊತ್ತಲ್ಲವೆ? ಆತ ಕೂಡಾ ಕಾಶ್ಮೀರಿಯೇ. ತನ್ನ ತಂದೆಯ ಹತ್ಯೆ ತನ್ನೆದುರೇ ನಡೆದಿದ್ದನ್ನು ಆತ ತೋಡಿಕೊಂಡ ಸಂದರ್ಶನವನ್ನು ಓದಿದರೇ ಮನಸ್ಸು ಭಾರವಾಗುತ್ತದೆ. ಕಾಶ್ಮೀರದಿಂದ ಬಲಾತ್ಕಾರವಾಗಿ ಹೊರದಬ್ಬಿಸಿಕೊಂಡವರ, ಹೆದರಿ ಕಾಲ್ಕಿತ್ತವರ ಸಂಖ್ಯೆ ಸರಿಸುಮಾರು 6 ಲಕ್ಷವಾದರೆ, ಕೊಲೆಯಾದವರ, ಅತ್ಯಾಚಾರಕ್ಕೊಳಗಾದವರ, ಹೆದರಿ ಮತಾಂತರಗೊಂಡವರ ಸಂಖ್ಯೆ ಅದೆಷ್ಟೋ! ಕಾಶ್ಮೀರದಲ್ಲಿ ಕೊಲೆಯಾದ ಪಂಡಿತರ ಸಂಖ್ಯೆ ಕೊಡಿ ಎಂದು ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನೇ ಜಮ್ಮು-ಕಾಶ್ಮೀರ ಸರ್ಕಾರ ತಿರಸ್ಕಾರ ಮಾಡಿಬಿಟ್ಟಿತು. ಇಂಥದ್ದೊಂದು ತಿರಸ್ಕಾರದ ಹಿಂದಿರುವ ಭಯ ಏನೆಂದುಕೊಂಡಿರಿ? ಲೆಕ್ಕ ಕೊಟ್ಟರೆ ಮುಸ್ಲಿಂ ಮೂಲಭೂತವಾದಕ್ಕೆ ಸಿಕ್ಕಿ ಸತ್ತ ಅಗಣಿತ ಹಿಂದುಗಳ ದುಸ್ಥಿತಿ ಜಗತ್ತಿಗೆ ಗೊತ್ತಾಗುತ್ತದೆ ಎಂಬ ಭಯವೇ ಅಲ್ಲವೆ? 790 ಮುಸಲ್ಮಾನರನ್ನು ಬಲಿತೆಗೆದುಕೊಂಡ ಗುಜರಾತ್ ಹಿಂಸಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ಕಲ್ಪನೆಗೂ ಮೀರಿದಷ್ಟು, ಲೆಕ್ಕಕ್ಕೂ ಬಾರದಷ್ಟು ಪಂಡಿತರ, ಹಿಂದುಗಳ ಜೀವವನ್ನು ಬಲಿತೆಗೆದುಕೊಂಡ ಕಾಶ್ಮೀರಿ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಎಷ್ಟು ಜನ ಮಾತನಾಡುತ್ತಾರೆ ಹೇಳಿ? ಗುಜರಾತ್ ಹಿಂಸಾಚಾರದ ಬಗ್ಗೆ ಜಗತ್ತಿನ ಗಮನ ಸೆಳೆಯುವ, ಹಿಂದುಗಳೆಂಥ ಕ್ರೂರಿಗಳೆಂದು ಚಿತ್ರಿಸುವ ಸಲುವಾಗಿಯೇ "ಫೈನಲ್ ಸಲ್ಯೂಷನ್‌", "ಫಿರಾಕ್‌", "ಪರ್ಝಾನಿಯಾ"ದಂಥ ಇಂಗ್ಲಿಷ್, ಹಿಂದಿ ಚಿತ್ರಗಳು, ಅವುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದವು. ಮಲೆಯಾಳದಲ್ಲಿ "ಕಥಾವಶೇಷನ್‌", "ವಿಲಪಾಂಗಳಕ್ಕಪುರಂ", "ಭೂಮಿಯುಡೆ ಅವಕಾಶಿಕುಲ್‌" ಮುಂತಾದ ಚಿತ್ರಗಳು ಬಂದವು. ಚೇತನ್ ಭಗತ್ ಅವರ "ತ್ರೀ ಸ್ಟೇಟ್ಸ್‌" ಆಧರಿಸಿ ಬಂದ ಹಿಂದಿ ಚಿತ್ರ "ಕಾಯ್ ಪೋ ಚೆ"ನಲ್ಲೂ ಅನಗತ್ಯವಾಗಿ ಗುಜರಾತ್ ಘಟನೆಯನ್ನು ಎಳೆದುತಂದರು. ಆದರೆ ಕಾಶ್ಮೀರಿ ಪಂಡಿತರ ಬಗ್ಗೆ ಹೊರಗಿನ ಯಾರು ಒಂದು ಚಿತ್ರ ತಯಾರಿಸಿದ್ದಾರೆ, ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ ಹೇಳಿ? ಅಷ್ಟೇಕೆ, ಕಾಶ್ಮೀರಿಯೇ ಆದ ಪತ್ರಕರ್ತ ರಾಹುಲ್ ಪಂಡಿತ ಕಳೆದ ವರ್ಷ ಬರೆದ "ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್‌" ಪುಸ್ತಕದ ಬಗ್ಗೆ ಒಂದು ಸಣ್ಣ ಟೀವಿ ಚರ್ಚೆಯೂ ನಡೆಯಲಿಲ್ಲ! ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಸುಮಾರು 600 ಜನರಿಗೆ ಶಿಕ್ಷೆಯಾಗಿದೆ. ಆದರೆ ಕಾಶ್ಮೀರಿ ಪಂಡಿತರ ರಕ್ತಹೀರಿದವರ ವಿರುದ್ಧ ಒಂದೇ ಒಂದು ಎಫ್‌ಐಆರ್ ಕೂಡಾ ದಾಖಲಾಗಿಲ್ಲ ಎಂದರೆ ನಂಬುತ್ತೀರಾ?! ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮೋದಿಗೆ ಅಮೆರಿಕ ವೀಸಾ ನಿರಾಕರಿಸುವಂತೆ ಮಾಡಿದರು. ಆದರೆ 6 ಲಕ್ಷ ಕಾಶ್ಮೀರಿ ಪಂಡಿತರು ತಾಯ್ನೆಲದಲ್ಲೇ ನಿರಾಶ್ರಿತರಾಗಲು ಅವಕಾಶ ಮಾಡಿಕೊಟ್ಟ, ಸಾವಿರಾರು ಕಾಶ್ಮೀರಿ ಪಂಡಿತ ಕೊಲೆ ನಡೆಯುವಾಗ ಕಣ್ಣುಮುಚ್ಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಗ್ಗೆ ಧ್ವನಿಯೆತ್ತಿದ ಒಬ್ಬ ನರನನ್ನು ತೋರಿಸಿ ನೋಡೋಣ? ಮೂರೂವರೆ ಸಾವಿರ ಸಿಖ್ಖರ ಹತ್ಯಾಕಾಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಹಾಗೂ ಕಾಶ್ಮೀರಿಗರ ದುಸ್ಥಿತಿಗೆ ಕಾರಣರಾದ ಆಗಿನ ಪ್ರಧಾನಿ ರಾಜೀವ್ ಗಾಂಧಿಯನ್ನು ಯಾರಾದರೂ ದೂರಿದ್ದನ್ನು ನೋಡಿದ್ದೀರಾ? ರಾಜೀವ್ ಗಾಂಧಿ ಮಾಡಿದ್ದೇನು ಸಾಮಾನ್ಯ ಅಪಚಾರವೇ?
"ಆತ್ಮೀಯ ಶ್ರೀ ರಾಜೀವ್ ಗಾಂಧಿ,
ನಾನು ನಿಮಗೆ ನೆನಪಿಸಿಕೊಡಬೇಕಾ ಹೇಳಿ? ಕಾಶ್ಮೀರದಲ್ಲಿ ಬಿರುಗಾಳಿಯೊಂದು ಸೃಷ್ಟಿಯಾಗುತ್ತಿರುವುದರ ಬಗ್ಗೆ 1988ರ ಆರಂಭದಿಂದಲೇ ನಿಮಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಲಾರಂಭಿಸಿದ್ದೆ. ಆದರೆ ನಿಮಗಾಗಲಿ ಅಥವಾ ನಿಮ್ಮ ಸುತ್ತ ಅಧಿಕಾರವನ್ನು ಝಳಪಿಸುತ್ತಿರುವ ಭಟ್ಟಂಗಿಗಳಿಗಾಗಲಿ ಆ ಸಂದೇಶಗಳನ್ನು ನೋಡುವುದಕ್ಕೆ ಸಮಯವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದೆಂದರೆ ಐಸಿಹಾಸಿಕ ಪಾಪ ಮಾಡಿದಂತೆ ಎಂಬ ಸೂಚನೆ ಅಲ್ಲಿತ್ತು. ಭಯಾನಕ ಶಸ್ತ್ರಾಸ್ತ್ರಗಳು ಆಗಮಿಸಿವೆ ಹಾಗೂ ಹೆಚ್ಚಿನವು ಆಗಮಿಸುತ್ತಿವೆ ಎಂದು ತಿಳಿಸಿದ್ದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮತ್ತೆಂದೂ ಹಿಂದಿರುಗಲಾಗದ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು 1989 ಏಪ್ರಿಲ್‌ನಲ್ಲಿ ನಿಮಗೆ ಬರೆದಿದ್ದೆ. ಆದರೆ ನಿಮ್ಮ ನಿರಾಸಕ್ತಿ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತದೆ. ಆಶ್ಚರ್ಯವೆಂದರೆ ಇಂದು ಕಾಶ್ಮೀರದ ಸ್ಥಿತಿಗೆ ನಾನೇ ಕಾರಣವೆಂದು ನಿಮ್ಮ ಭಟ್ಟಂಗಿಗಳಾದ ಮಣಿಶಂಕರ್ ಅಯ್ಯರ್, ಎನ್ಕೆಪಿ ಸಾಳ್ವೆ, ಶಿವಶಂಕರ್ ತುತ್ತೂರಿ ಊದುತ್ತಿದ್ದಾರೆ. ನಿಮ್ಮ ಮತ್ತೊಬ್ಬ ಶಿಷ್ಯ ಫಾರೂಕ್ ಅಬ್ದುಲ್ಲಾ ಬಿಡುಗಡೆ ಮಾಡಿದ 70 ಕುಖ್ಯಾತ ಭಯೋತ್ಪದಕರೇ ಇಷ್ಟೆಲ್ಲಾ ಅವಾಂತರ ಸೃಷ್ಟಿಸುತ್ತಿದ್ದು ಅದಕ್ಕೂ ರಾಜ್ಯಪಾಲನಾದ ನಾನೇ ಕಾರಣ ಎನ್ನುತ್ತೀರಾ? 1990, ಜನವರಿ 19ರಂದು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೊದಲೇ ಮಾನಸಿಕವಾಗಿ ಭಾರತ ಶರಣಾಗಿತ್ತು. 1600 ಹಿಂಸಾಕೃತ್ಯಗಳು ನಡೆದಿದ್ದವು. 351 ಬಾಂಬ್ ಸ್ಫೋಟಗಳು ಸಂಭವಿಸಿದ್ದವು, 72 ದೊಂಬಿಗಳು ನಡೆದಿದ್ದವು. ಆದರೆ ನೀವು ಯಾವತ್ತೂ ತಲೆಕೆಡಿಸಿಕೊಳ್ಳಲೇ ಇಲ್ಲ.
ಜಗಮೋಹನ್
1990, ಏಪ್ರಿಲ್ 21"
ಎರಡು ಬಾರಿ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಆಗ ನಡೆದ ಘಟನೆಗಳು, ಸೃಷ್ಟಿಯಾಗಿದ್ದ ಪರಿಸ್ಥಿತಿಯನ್ನು ತಮ್ಮ "ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್‌"ನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇಷ್ಟಾಗಿಯೂ ಅಂದು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿಯನ್ನಾಗಲಿ, ಮುಖ್ಯಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾರನ್ನಾಗಲಿ, ಕಾಶ್ಮೀರಿ ಪಂಡಿತರನ್ನು ಹೊರದಬ್ಬಿದ ಮೂಲಭೂತವಾಗಿ ಮನಸ್ಸುಗಳನ್ನಾಗಲಿ ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಇನ್ನೊಂದು ಗಮನಾರ್ಹ ಅಂಶ ನೋಡಿ: ಹಿಂದುಗಳು ಬಹುಸಂಖ್ಯಾತರಾಗಿರುವ ಜಮ್ಮು ಗಾತ್ರದಲ್ಲಿ ಕಾಶ್ಮೀರಕ್ಕಿಂತ ದೊಡ್ಡದು. ಆದರೆ ವಿಧಾನಸಭೆ ಕ್ಷೇತ್ರಗಳು ಹೆಚ್ಚಿರುವುದು ಕಾಶ್ಮೀರದಲ್ಲಿ. ಏಕೆ ವಿಷಯ ಎತ್ತಲಾಗುತ್ತಿದೆಯೆಂದರೆ, ಭಾರತ ಪ್ರಜಾತಾಂತ್ರಿಕ ರಾಷ್ಟ್ರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರಲ್ಲಾ ಕಾಶ್ಮೀರಕ್ಕೆ ಒಬ್ಬ ಹಿಂದುವನ್ನು ಮುಖ್ಯಮಂತ್ರಿಯಾಗಿ ಮಾಡಿ ನೋಡಿ?! ಮಹಾನ್ ರಾಷ್ಟ್ರವಾದಿ ಹಾಗೂ ಹಿಂದು ರಕ್ಷಕ ಶಿವಾಜಿ ಮಹಾರಾಜನ ಮಹಾರಾಷ್ಟ್ರಕ್ಕೆ ಅಬ್ದುರ್ ರೆಹಮಾನ್ ಅಂಟುಳೆ ಎಂಬ ಮುಸ್ಲಿಂ ಮುಖ್ಯಮಂತ್ರಿಯಾಗಬಲ್ಲ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕೇರಳದಲ್ಲಿ ಆ್ಯಂಟನಿ, ಚಾಂಡಿಗಳೆಂಬ ಕ್ರೈಸ್ತರು ಮುಖ್ಯಮಂತ್ರಿಯಾದರೆ ಯಾರೂ ಬೇಸರಿಸಿಕೊಳ್ಳುವುದಿಲ್ಲ, ಹಿಂದುಗಳಿಂದ ತುಂಬಿರುವ ಆಂಧ್ರಪ್ರದೇಶ ಕ್ರೈಸ್ತರಾದ ಯೇಸುಪದ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುತ್ತದೆ ಹಾಗೂ ಅವರ ಪುತ್ರ ಜಗನ್ಮೋಹನ್‌ನನ್ನು ಅತ್ಯಂತ ಜನಪ್ರಿಯ ನಾಯಕನನ್ನಾಗಿ ಮಾಡುತ್ತದೆ, ಹಿಂದುಗಳೇ ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ಮುಸ್ಲಿಮರು ಶಾಸಕ, ಸಂಸದರಾಗಿ ಆಯ್ಕೆಯಾಗುತ್ತಾರೆ. ಆದರೆ ಕಾಶ್ಮೀರಕ್ಕೆ ಒಬ್ಬ ಹಿಂದು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ! ಇಂತಹ ಮನಸ್ಥಿತಿಯೇ ನಮ್ಮ ಪಂಡಿತರು ಕಗ್ಗೊಲೆಯಾಗಲು, ಸ್ವಂತ ನಾಡಿನಲ್ಲೇ ನಿರಾಶ್ರಿತರಾಗಿ ಬದುಕಬೇಕಾದ ಸ್ಥಿತಿ ಬಂದಿದೆ. ಬಹಳ ಆಶ್ಚರ್ಯ ಹುಟ್ಟಿಸುವ ಸಂಗತಿಯೆಂದರೆ ಕಳೆದ 4 ತಿಂಗಳಿಂದ ಗ್ರಾಮ ಬಿಟ್ಟಿರುವ ಉತ್ತರ ಪ್ರದೇಶದ ಮುಜಫ್ಫರ್‌ನಗರದ ಆರು ಸಾವಿರ ನಿರಾಶ್ರಿತರ ಬಗ್ಗೆ ನಮ್ಮ ಟಿ.ವಿ. ಚಾನೆಲ್‌ಗಳು ನಿತ್ಯವೂ ಬೊಬ್ಬೆ ಹಾಕುತ್ತಿವೆ. ಅಲ್ಲಿನ ಜನ ಹಾಗೂ ಮಕ್ಕಳು ಅನುಭವಿಸುತ್ತಿರುವ ಕರುಣಾಜನಕ ಸ್ಥಿತಿಯ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಖಂಡಿತ ತಪ್ಪಲ್ಲ. ಆದರೆ ಕಳೆದ 25 ವರ್ಷಗಳಿಂದ ದಿಲ್ಲಿ ಹಾಗೂ ಜಮ್ಮು ಬಳಿಯ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಬದುಕು ದೂಡುತ್ತಿರುವ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಪರಿಸ್ಥಿತಿ ನಮ್ಮ ಸಾಕ್ಷೀಪ್ರಜ್ಞೆಯನ್ನೇಕೆ ತಿವಿಯುವುದಿಲ್ಲ? ನಮ್ಮ ಮಾಧ್ಯಮಗಳ ಕರುಣಾಳು ಹೃದಯ ಕಾಶ್ಮೀರಿ ಪಂಡಿತರಿಗೇಕೆ ಮಿಡಿಯುವುದಿಲ್ಲ? ಈ ಮಧ್ಯೆ ಪ್ರಶಾಂತ್ ಭೂಷಣನೆಂಬ ಮಹಾಶಯ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು, ಅರ್ಥಾತ್ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ. ಅದನ್ನು ಒಬ್ಬ ರಾಷ್ಟ್ರವಾದಿಯಾದವನು ಖಂಡಿಸಬೇಕು. ಆದರೆ ನಮ್ಮ ಕೇಜ್ರೀವಾಲ್ ಸಾಹೇಬರು ಅದು ಆತನ ವೈಯಕ್ತಿಕ ಅಭಿಪ್ರಾಯ ಎಂದು ನುಣುಚಿಕೊಳ್ಳುವ ಕಿಲಾಡಿತನ ತೋರಿಸುತ್ತಿದ್ದಾರೆ. ಇನ್ನು ಆರು ವರ್ಷಗಳ ಆಡಳಿತದಲ್ಲಿ ಬಿಜೆಪಿಯ ಬೊಗಳೆ ನಾಯಕರು ಮಾಡಿದ್ದೂ ಅಷ್ಟರಲ್ಲೇ ಇದೆ. ಇಂಥವರು ನಮ್ಮನ್ನಾಳುತ್ತಿರುವಾಗ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಲು ಸಾಧ್ಯವೇ? ಜನಾಭಿಪ್ರಾಯವೆಂದರೆ ಆರು ಲಕ್ಷ ಕಾಶ್ಮೀರಿ ಪಂಡಿತರ ಅಭಿಪ್ರಾಯವನ್ನೂ ಪಡೆಯಬೇಕು ಎಂಬುದು ಪ್ರಶಾಂತ್ ಭೂಷಣ್‌ನಂಥವರಿಗೆ ಅರ್ಥವಾಗುತ್ತದೆಯೇ? ಭಾರತದ ಅತ್ಯಂತ ಪ್ರತಿಷ್ಠಿತ ಗೂಢಚರ ಸಂಸ್ಥೆ "ರಾ" ಸ್ಥಾಪಿಸಿದ್ದು ಆರ್.ಎನ್. ಕಾವೋ ಎಂಬ ಕಾಶ್ಮೀರಿ ಪಂಡಿತ. ಅವರು 2002ರಲ್ಲಿ ತೀರಿಕೊಳ್ಳುವವರೆಗೂ ಪಂಡಿತರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದರು. ಆದರೆ ಸಂವೇದನೆಯನ್ನೇ ಕಳೆದುಕೊಂಡ ನಾಯಕರೇ ನಮ್ಮನ್ನಾಳುತ್ತಿರುವಾಗ ಏನನ್ನು ಮಾಡಲು ತಾನೇ ಸಾಧ್ಯ?
ಏಕೆ ವಿಷಯವನ್ನೀಗ ಪ್ರಸ್ತಾಪಿಸಲಾಗುತ್ತಿದೆಯೆಂದರೆ ಹಿಂದುಗಳೇ ಕಾಶ್ಮೀರ ಬಿಟ್ಟು ತೊಲಗಿ ಎಂಬ ಧಮಕಿ ಮಸೀದಿಗಳ ಮೈಕಿನಿಂದ ಮೊಳಗಿದ್ದು 1990, ಜನವರಿ 19ರಂದು. ನಾಳೆ ಆ ಘಟನೆಗೆ 24 ವರ್ಷಗಳು ತುಂಬಿ 25ಕ್ಕೆ ಕಾಲಿಡಲಿದೆ. ಪ್ರತಿವರ್ಷ ಆ ದಿನವನ್ನು "ಕಾಶ್ಮೀರಿ ಗುಳೇ ದಿನ" ಅಥವಾ "ಸಾಮೂಹಿಕ ಹತ್ಯಾಕಾಂಡ" ದಿನವಾಗಿ ಆಚರಿಸಲಾಗುತ್ತದೆ. ಇಪ್ಪತ್ನಾಲ್ಕು ವರ್ಷ ಕಳೆದರೂ ಪಂಡಿತರಿಗೆ ನ್ಯಾಯ ಕೊಡಲಾಗಿಲ್ಲದಿರುವುದು, ಇಂಥದ್ದೊಂದು ದಿನವನ್ನು ಆಚರಿಸಲಾಗುತ್ತಿರುವುದು ಈ ದೇಶದ ದುರಂತ ಹಾಗೂ ಹಿಂದುಗಳ ಷಂಡತನದ ಸಂಕೇತವಲ್ಲದೆ ಮತ್ತೇನು ಹೇಳಿ?