Sunday, 31 May 2015

ಇದು ಯಾರು ಬರೆದ ‘ವಿಧಿ’ಯೋ?



ಈ ದೇಶದಲ್ಲಿ ಕೆಲವು ವಿಷಯಗಳ ಬಗ್ಗೆ ಮಾತಾಡಲೇಬಾರದು, ಪ್ರಶ್ನಿಸಕೂಡದು. ಅಂಥ ವಿಷಯವನ್ನು ಪ್ರಸ್ತಾಪಿಸಿದರೆ ಸಾಕು; ಎಲ್ಲರೂ ನಿಮ್ಮ ಮೇಲೆ ಎಗರಿ ಬಂದು ಮುಗಿಬೀಳುತ್ತಾರೆ. ಅಲ್ಲಿಗೆ ಬಾಯಿ ಮುಚ್ಚಬೇಕು. ಅಷ್ಟಾಗಿಯೂ ನೀವು ಸುಮ್ಮನಾಗದಿದ್ದರೆ ಬಾಯಿ ಮುಚ್ಚಿಸುವ ಇತರ ತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. ಇಲ್ಲಸಲ್ಲದ ಹಣೆಪಟ್ಟಿಯನ್ನು ಅಂಟಿಸಲಾಗುತ್ತದೆ.
ಮೊನ್ನೆ ಜಮ್ಮುದಲ್ಲಿ ನಡೆದ ರ್ಯಾಲಿಯಲ್ಲಿ ಭಾರತೀಯ ಜನತಾಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಸ್ತಾಪಿಸಿದ್ದೇ ತಡ, ಎಲ್ಲ ಪಕ್ಷಗಳ ನಾಯಕರು ಮುರಕೊಂಡು ಬಿದ್ದವರಂತೆ ವರ್ತಿಸಿದರು. ಅಷ್ಟಕ್ಕೂ ಅಂದು ಮೋದಿ ಹೇಳಿದ್ದೇನು?
‘ಸಂವಿಧಾನದ 370ನೇ ವಿಧಿ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯವಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದರಿಂದ ಪ್ರಯೋಜನವಾಗಿದೆಯೇ, ರಾಜ್ಯಕ್ಕೆ ಅದರಿಂದ ಲಾಭವಾಗಿದೆಯೇ ಎಂಬುದನ್ನು ಚರ್ಚಿಸುವ ಅಗತ್ಯವಿದೆ. ಒಂದು ವೇಳೆ ಇದರಿಂದ ಏನೂ ಪ್ರಯೋಜನ ಆಗಿಲ್ಲವೆಂಬುದು ಮನವರಿಕೆಯಾದರೆ, ಈ ವಿಧಿಯನ್ನು ಮುಂದುವರಿಸಬೇಕೆಂಬ ಆಗ್ರಹವನ್ನು ಕೈ ಬಿಡಬೇಕು’ ಎಂದು ಮೋದಿ ಅಂದು ಹೇಳಿದರು.
ಅದೇ ರ್ಯಾಲಿಯಲ್ಲಿ ಮೋದಿ ಹೇಳಿದ ಇನ್ನೊಂದು ಸಂಗತಿಯೇನೆಂದರೆ-’ಜಮ್ಮು-ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರದ ಹೊರಗಿನ ಯುವತಿಯನ್ನು ಮದುವೆಯಾದರೆ, ರಾಜ್ಯದ ನಾಗರಿಕನಾಗುವ ಹಕ್ಕನ್ನು ಅವರು ಹಾಗೆಯೇ ಉಳಿಸಿಕೊಳ್ಳುತ್ತಾರೆ. ಆದರೆ ಒಮರ್ ಸಹೋದರಿ ಸಾರಾ ಕಾಶ್ಮೀರಿಯಲ್ಲದವರನ್ನು ಮದುವೆಯಾದರೆ ಅವರು ಆ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡುತ್ತಿರುವ ತಾರತಮ್ಯ.’
ಮೋದಿ ಇಷ್ಟು ಹೇಳಿದ್ದೇ ತಡ, ರಾಜಕೀಯ ಪಕ್ಷಗಳ ನಾಯಕರೆಲ್ಲ ಬೊಬ್ಬೆ ಹೊಡೆಯಲಾರಂಭಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್, ‘ಸಂವಿಧಾನದ 370ನೇ ವಿಧಿ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿರುವ ಮೋದಿ ಈ ವಿಷಯವನ್ನು ಮೊದಲು ಸಂಘ ಪರಿವಾರ ಹಾಗೂ ಬಿಜೆಪಿ ವೇದಿಕೆಗಳಲ್ಲಿ ಚರ್ಚಿಸಲಿ’ ಎನ್ನುವ ಮೂಲಕ ಅದನ್ನು ಮುಕ್ತವಾಗಿ ಚರ್ಚಿಸುವ ಅಗತ್ಯವೇ ಇಲ್ಲ ಎಂಬ ಅಪ್ಪಣೆ ಕೊಟ್ಟುಬಿಟ್ಟರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ. ಫಾರೂಕ್ ಅಬ್ದುಲ್ಲಾ, ‘ಮೋದಿಯೇ ಪ್ರಧಾನಿಯಾಗಿ ಹತ್ತು ಸಲ ಆಯ್ಕೆಯಾಗಿ ಬಂದರೂ 370ನೇ ವಿಧಿಯನ್ನು ರದ್ದುಪಡಿಸುವುದಿರಲಿ, ಅವರಿಂದ ಅದನ್ನು ಮುಟ್ಟಲು ಸಹ ಆಗದು’ ಎಂದು ಸವಾಲೆಸೆದರು.


ಕಾಶ್ಮೀರದ ಪಿಡಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್, ‘ಬಿಜೆಪಿ ಯ ಪ್ರಧಾನಿ ಅಭ್ಯರ್ಥಿಗೆ ಸಂವಿಧಾನದ ಬಗ್ಗೆ ತಿಳಿವಳಿಕೆಯೇ ಇಲ್ಲ. ಅವರ ಹೇಳಿಕೆಯಿಂದ ಸಮಾಜದಲ್ಲಿ ಬಿರುಕು ಮೂಡುತ್ತದೆ. ಜನರ ಮನಸ್ಸು ಛಿದ್ರವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 370ನೇ ವಿಧಿಯಿಂದ ಯಾರಿಗೆ ಲಾಭವಾಗಿದೆ ಎಂಬ ಮೋದಿ ಮಾತಿನ ಬಗ್ಗೆ ಮುಗುಮ್ಮಾದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ಅಂಶವನ್ನೇ ಪ್ರಸ್ತಾಪಿಸಿ, ಮೋದಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಅಥವಾ ಅವರೇ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
370ನೇ ವಿಧಿ ಬಗ್ಗೆ ಮೋದಿಯವರ ಅನಿಸಿಕೆ ಪುನಃ ವಿವಾದ ಸೃಷ್ಟಿಸಿದೆ. ಇದು ಮೊದಲಲ್ಲ. ಈ ವಿಧಿಯ ಬಗ್ಗೆ ಪ್ರಸ್ತಾಪಿಸಿದರೆ ಸಾಕು, ಇದರ ಬಗ್ಗೆ ಚರ್ಚೆಯಾಗಬೇಕು ಅಂದರೆ ಸಾಕು, ಏನೋ ದೊಡ್ಡ ಅನಾಹುತವಾಗುತ್ತದೆಂದು ಕಾಂಗ್ರೆಸ್ ಹಾಗೂ ಜಮ್ಮು-ಕಾಶ್ಮೀರ ನಾಯಕರು ಬೊಬ್ಬೆ ಹಾಕುತ್ತಾರೆ. ಆಕಾಶ ಕಳಚಿ ಬೀಳುತ್ತದೆ ಎಂದು ಗಂಟಲು ಹರಿದುಕೊಳ್ಳುತ್ತಾರೆ.
ಅಂದರೆ ಅದರ ಬಗ್ಗೆ ಯಾರೂ ಮಾತಾಡಲೇಬಾರದೇನು? ಚರ್ಚಿಸಬಾರದೇನು? ಕೇವಲ ಅಲ್ಪ ಅವಧಿಗೆಂದು ಜಾರಿಗೊಳಿಸಿದ ಸಂವಿಧಾನದ 370ನೇ ವಿಧಿ ಆಚರಣೆಗೆ ಬಂದು ಆರೂವರೆ ದಶಕಗಳಾಗಿವೆ. ಈ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅಗತ್ಯವಿಲ್ಲವೇ? ಚರ್ಚೆಯೇ ಬೇಡ, ಸುಮ್ಮನಿರಿ ಅಂದ್ರೆ ಅದರ ಮರ್ಮವೇನು? ಅದರ ಬಗ್ಗೆ ಪ್ರಸ್ತಾಪಿಸಿದರೆ ಸಮಾಜದಲ್ಲಿ ಒಡಕು ಉಂಟಾಗುತ್ತದೆ ಅಂದ್ರೆ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆ ಶಾಸನ ಇಷ್ಟು ವರ್ಷ ಸಾಧಿಸಿದ್ದಾದರೂ ಏನು? ಅದರಿಂದ ಆ ರಾಜ್ಯದ ಜನರಿಗೆ ಲಾಭವಾಗಿಲ್ಲ ಅಂದ್ರೆ ಅದನ್ನು ಮುಂದುವರಿಸುವ ಬಗ್ಗೆ ಪರಾಮರ್ಶೆ ನಡೆಯಲಿ ಅಂದ್ರೆ ತಪ್ಪೇನು? ಅದರ ಬಗ್ಗೆ ಮಾತೇ ಆಡಬೇಡಿ ಅಂದ್ರೆ ಅದನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಈಗ ಮೋದಿಯವರು ಹೇಳಿದ್ದಾದರೂ ಏನು? 370ನೇ ವಿಧಿ ಬಗ್ಗೆ ಚರ್ಚೆಯಾಗಲಿ ಅಂತ ಹೇಳಿದ ಮಾತ್ರಕ್ಕೆ ಸಂಘ ಪರಿವಾರದಲ್ಲಿ ಅಥವಾ ಬಿಜೆಪಿ ವೇದಿಕೆಯಲ್ಲಿ ಚರ್ಚೆ ಮಾಡಿಕೊಳ್ಳಿ ಅಂತಾರಲ್ಲ ಅದನ್ನು ಏನೆಂದು ಭಾವಿಸಬೇಕು?
ಇಡೀ ಭಾರತಕ್ಕೆ ಒಂದು ಕಾನೂನಿದ್ದರೆ, ದೇಶದ ಒಂದು ಭಾಗವೇ ಆಗಿರುವ ಜಮ್ಮು-ಕಾಶ್ಮೀರಕ್ಕೆ ಮತ್ತೊಂದು ಕಾನೂನು. ಇಡೀ ಭಾರತಕ್ಕೆ ಒಂದು ಸಂವಿಧಾನವಿದ್ದರೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ. ಭಾರತದ ಯಾವ ಕಾನೂನುಗಳೂ ಅಲ್ಲಿ ಲಾಗೂ ಆಗುವುದಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವ ಪರಿ ಎಂಥ ಪರಾಕಾಷ್ಠೆಯನ್ನು ತಲುಪಿದೆಯೆಂದರೆ, ನಮ್ಮ ದೇಶದೊಳಗೆ ಕಾಶ್ಮೀರವನ್ನು ಸೇರಿಸಿಕೊಳ್ಳುವ ಬದಲು ಅದಕ್ಕೆ ವಿಶೇಷ ಸ್ಥಾನಮಾನ ಹಾಗೂ ಪರಮಾಧಿಕಾರ ನೀಡಿ ಪ್ರತ್ಯೇಕತೆಯನ್ನು ಶಾಶ್ವತವಾಗಿ ಸ್ಥಾಪಿಸಿ ಬಿಟ್ಟಿದ್ದೇವೆ. ಯಾರೇ ಬರಲಿ, ಕಾಶ್ಮೀರಕ್ಕೆ ನೀಡಿದ ಆ ಸ್ಥಾನಮಾನವನ್ನು ಹಿಂದಕ್ಕೆ ಪಡೆಯದಂಥ ವಾತಾವರಣ ಸೃಷ್ಟಿಸಿ ಬಿಟ್ಟಿದ್ದೇವೆ. ಈ ಧಾರ್ಷ್ಟ್ಯವೇ ಡಾ. ಫಾರೂಕ್ ಅಬ್ದುಲ್ಲಾ ಬಾಯಿಂದ ಆ ಸೊಕ್ಕಿನ ಮಾತನ್ನು (ಮೋದಿಯೇ ಹತ್ತು ಸಲ ಪ್ರಧಾನಿಯಾದರೂ, 370ನೇ ವಿಧಿಯನ್ನು ಮುಟ್ಟಲು ಸಾಧ್ಯವಿಲ್ಲ) ಹೇಳಿಸಿದೆ. ಜಮ್ಮು-ಕಾಶ್ಮೀರ ಭಾರತದ ಅಂಗವಾಗಿರಬಹುದು, ಆದರೆ ಈ ನೆಲದ ಕಾನೂನುಗಳು ಅಲ್ಲಿಗೆ ಅನ್ವಯವಾಗುವುದಿಲ್ಲ. ಇದಕ್ಕಿಂತ ಹೆಚ್ಚಿನ ದುರ್ದೈವದ, ನಾಚಿಕೆಗೇಡಿನ ಸಂಗತಿ ಇನ್ನೊಂದಿದೆಯಾ? ಹಾಗೆಂದು ಉಳಿದೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಸ್ಥಾನಮಾನ, ಸವಲತ್ತು ಜಮ್ಮು-ಕಾಶ್ಮೀರಕ್ಕೆ. ಕೇಂದ್ರ ಸರ್ಕಾರ ನೀಡುವ ಎಲ್ಲ ಸವಲತ್ತು-ಸೌಲಭ್ಯಗಳನ್ನು ನಿರಂತರ ಪಡೆಯುತ್ತಾ, ಅದರ ಕಾನೂನಿಗೆ ಒಳಪಡದೇ ಇರುವ ಪರಮ ಅಧಿಕಾರ, ಜವಾಬ್ದಾರಿಯಿಲ್ಲದ ಸುಖವನ್ನು ಅದು ಅನುಭವಿಸುತ್ತಾ ಬಂದಿದೆ. ಇಂಥ ಕಾನೂನು ಜಗತ್ತಿನ ಯಾವ ದೇಶದಲ್ಲೂ ಇರಲ್ಲಿಕ್ಕಿಲ್ಲ. ಚೀನಾ ತನ್ನ ಅಕ್ಕಪಕ್ಕ ಚಾಚಿಕೊಂಡ ಮಕಾನ್, ಹಾಂಗ್ಕಾಂಗ್, ಅರುಣಾಚಲಪ್ರದೇಶದ ಕೆಲ ಪ್ರದೇಶಗಳೆಲ್ಲ ತನ್ನದೇ ಎಂದು ಬಾಚಿಕೊಳ್ಳುತ್ತಿದೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವೇ ಆಗಿರುವ ಜಮ್ಮು-ಕಾಶ್ಮೀರದ ಮೇಲೆ ನಮಗೆ ಯಾವುದೇ ಹಿಡಿತವೇ ಇಲ್ಲ. ಇದೊಂಥರ ‘ಅವಳು ಮಗನ ಹೆಂಡತಿ ಹೌದು. ಆದರೆ ಸೊಸೆ ಅಲ್ಲ’ ಎಂದು ಹೇಳಿದಂತಿದೆ. ಇಂಥ ಕ್ರೂರ ಅಣಕವನ್ನು ಕಳೆದ ಆರೂವರೆ ದಶಕಗಳಿಂದ ನೋಡುತ್ತಿದ್ದೇವೆ. ಇವೆಲ್ಲ ಚರ್ಚೆಗೆ ಬಂದು ಬಿಡಬಹುದೆಂಬ ಕಾರಣಕ್ಕೆ ಈ ವಿಷಯದ ಪ್ರಸ್ತಾಪವೇ ಬೇಡ ಎಂದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಬೊಬ್ಬಿಟ್ಟಿರುವುದು.
ಸಂವಿಧಾನದ 370ನೇ ವಿಧಿಯ ಹಕೀಕತ್ತು ಏನು, ಅದು ಜಾರಿಯಾಗಿದ್ದರ ಹಿನ್ನೆಲೆ ಏನು? ಆ ವಿಧಿಯ ಉದ್ದೇಶ ಏನಿತ್ತು. ಅಷ್ಟಕ್ಕೂ ಆ ವಿಧಿಯಲ್ಲಿ ಏನಿವೆ ಎಂಬುದನ್ನು ತಿಳಿದರೆ ಅದರ ಕರಾಳ ಮುಖದ ಅನಾವರಣವಾಗುತ್ತದೆ.


1947ರ ಆರಂಭದಲ್ಲಿ ಭಾರತದ ಸ್ವಾತಂತ್ರ್ಯ ಶಾಸನವನ್ನು ಬ್ರಿಟನ್ ಸಂಸತ್ತು ಅಂಗೀಕರಿಸಿತ್ತು. ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರ ಹಸ್ತಾಂತರಿಸಿದ ಬಳಿಕ ಉಭಯ ದೇಶಗಳಿಗೆ ಸೇರಿದ 560 ರಾಜಪ್ರಭುತ್ವಗಳಿಗೆ ಎರಡೂ ದೇಶಗಳ ಪೈಕಿ ತಮಗೆ ಸರಿ ತೋರಿದ ದೇಶದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಕಲ್ಪಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರು ದೇಶವನ್ನು ಭೌಗೋಳಿಕವಾಗಿ ಒಂದುಗೂಡಿಸಿದ ಸಂದರ್ಭದಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡು ಹೈದರಾಬಾದಿನ ನಿಜಾಮರು ಆಡಿದ ಆಟಗಳಿಗೆ ಕೊನೆ ಹೇಳಿದರು. ಇದರ ಪರಿಣಾಮ ಹೈದರಾಬಾದ್ ಬೇಷರತ್ ಆಗಿ ಭಾರತ ಒಕ್ಕೂಟ ರಾಜ್ಯದಲ್ಲಿ ವಿಲೀನಗೊಂಡಿತು. ಕಾಶ್ಮೀರದ ವಿಷಯದಲ್ಲಿ ಇದೇ ನೀತಿಯನ್ನು ಅನುಸರಿಸಿದ್ದರೆ, ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ನೆಹರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಜಮ್ಮು-ಕಾಶ್ಮೀರದ ಜವಾಬ್ದಾರಿಯನ್ನು ತಾವೇ ನಿಭಾಯಿಸುವುದಾಗಿ ಹೇಳಿ, ಪಟೇಲ್ರನ್ನು ಪಕ್ಕಕ್ಕೆ ಸರಿಸಿದರು. ಕಾಶ್ಮೀರದ ಮಹಾರಾಜ ಹರಿಸಿಂಗ್ನ ಆಳ್ವಿಕೆಯನ್ನು ಕೊನೆಗೊಳಿಸಲು ಹೊಂಚು ಹಾಕುತ್ತಿದ್ದ ಷೇಕ್ ಅಬ್ದುಲ್ಲಾ, ಲಾರ್ಡ್ ಮೌಂಟ್ಬ್ಯಾಟನ್ ಮೂಲಕ ನೆಹರು ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ. ಇದು ಸಮಸ್ಯೆಯು ಸುಲಭ ಇತ್ಯರ್ಥವಾಗುವುದಕ್ಕೆ ಅಡ್ಡಿಯಾಯಿತು. ರಾಜದ್ರೋಹದ ಆಪಾದನೆ ಮೇರೆಗೆ ಮಹಾರಾಜ ಹರಿಸಿಂಗ್ 1947ರಲ್ಲಿ ಷೇಕ್ ಅಬ್ದುಲ್ಲಾನನ್ನು ಬಂಧಿಸಿದಾಗ ನೆಹರು ಅವನ ಪರ ವಕಾಲತ್ತು ವಹಿಸಿದ್ದರು. ಷೇಕ್ ಅಬ್ದುಲ್ಲಾ ಜತೆಗೆ ಅವರ ಸಂಬಂಧ ಕುದುರಿತ್ತು. ಯಾವಾಗ ಲಾರ್ಡ್ ಮೌಂಟ್ಬ್ಯಾಟನ್ ಒತ್ತಡ ಹೇರಿದರೋ, ನೆಹರು ಸುಲಭವಾಗಿ ಅದಕ್ಕೆ ಮಣಿದರು. 1948ರ ಜನವರಿ 1ರಂದು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಒಪ್ಪಿಸಿಬಿಟ್ಟರು. ಇದು ಇಡೀ ಸಮಸ್ಯೆಯನ್ನು ಜಟಿಲಗೊಳಿಸಿತು. ಜಮ್ಮು-ಕಾಶ್ಮೀರವನ್ನು ಹರಿಸಿಂಗ್ ಅನುಮತಿಯೊಂದಿಗೆ ಸಂಪೂರ್ಣವಾಗಿ ಭಾರತದೊಳಗೆ ವಿಲೀನಗೊಳಿಸಿ ಸಮಸ್ಯೆಯನ್ನು ಕಾಯಂ ಆಗಿ ಕೊನೆಗೊಳಿಸಬಹುದಿತ್ತು. ಆದರೆ ಷೇಕ್ ಅಬ್ದುಲ್ಲಾನ ಬೆದರಿಕೆ ತಂತ್ರ, ಪುಸಲಾವಣೆ, ಬಣ್ಣದ ಮಾತುಗಳಿಗೆ ನೆಹರು ಮಣಿದರು. ತನ್ನನ್ನು ಸ್ವತಂತ್ರ ಕಾಶ್ಮೀರದ ಪ್ರಧಾನಿಯನ್ನಾಗಿ ಘೋಷಿಸದಿದ್ದರೆ ಒಂದು ಕೋಮಿನ ಮುನಿಸಿಗೆ ತುತ್ತಾಗುವ ಅಪಾಯವಿದೆಯೆಂದು ಬೆದರಿಸಿದರು. ಜಮ್ಮು-ಕಾಶ್ಮೀರದ ಮೂರನೆ ಒಂದು ಭಾಗವನ್ನು ಪಾಕ್ ಆಕ್ರಮಿಸಿಕೊಂಡಿರುವುದರಿಂದ ತಮ್ಮ ಮನವಿಯನ್ನು ಪುರಸ್ಕರಿಸುವುದು ಅನಿವಾರ್ಯ ಎಂದು ಷೇಕ್ ಅಬ್ದುಲ್ಲಾ ನೆಹರುಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಕಾಶ್ಮೀರವನ್ನು ಆಳುವ ಹುಮ್ಮಸ್ಸಿನಲ್ಲಿದ್ದ ಅಬ್ದುಲ್ಲಾ ತನ್ನ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ನೆಹರು ಮುಂದೆ ಹಠ ಹಿಡಿದರು.
ಆಗ ಹುಟ್ಟಿಕೊಂಡಿದ್ದೇ ಸಂವಿಧಾನದ 370ನೇ ವಿಧಿ.
ಭಾರತದೊಡನೆ ಕಾಶ್ಮೀರದ ವಿಲೀನವನ್ನು ಜಮ್ಮು-ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಕೆಲವು ಅವಕಾಶಗಳನ್ನು ಒಳಗೊಂಡ 370ನೇ ವಿಧಿಯನ್ನು ಸಂವಿಧಾನದಲ್ಲಿ ತಾತ್ಕಾಲಿಕ ಕ್ರಮವಾಗಿ ಸೇರಿಸಲಾಯಿತು. ಸಂವಿಧಾನದ 21ನೇ ಪರಿಚ್ಛೇದದಲ್ಲಿ ಈ ವಿಧಿಯ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ 370ನೇ ವಿಧಿ ಎಂಬುದು ತಾತ್ಕಾಲಿಕ, ಪರಿವರ್ತನೆಯ ಅಧಿಕಾರವೇ ಹೊರತು, ಅದು ಶಾಶ್ವತ ಅಧಿಕಾರ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ವಿಚಿತ್ರ ಅಂದರೆ ಇದು ಭಾರತದ ಉಳಿದ ಎಲ್ಲ ರಾಜ್ಯಗಳಿಗೆ ಅನ್ವಯವಾಗುತ್ತದೆ. ಆದರೆ ಜಮ್ಮು-ಕಾಶ್ಮೀರಕ್ಕೆ ಅಲ್ಲ. 370ನೇ ವಿಧಿಯನ್ನು ತಾತ್ಕಾಲಿಕ ಕ್ರಮ ಎಂದು ಹೇಳಿದ್ದಕ್ಕೂ ಷೇಕ್ ಅಬ್ದುಲ್ಲಾ ತಕರಾರು ತೆಗೆದಿದ್ದರು. ಅಲ್ಲದೇ ತಮ್ಮನ್ನು ಜಮ್ಮು-ಕಾಶ್ಮೀರದ ಪ್ರಧಾನಿ ಎಂದು ಘೋಷಿಸಿಕೊಂಡಿದ್ದರು. ಈ ದೇಶದಲ್ಲಿ ಎಂಥೆಂಥ ಅನಾಹುತಗಳಾಗಿವೆಯೆಂಬುದಕ್ಕೆ ಇದಕ್ಕಿಂತ ಹೆಚ್ಚಿನ ಹುಡುಗಾಟಿಕೆ ಬೇಕಾ? 1965ರವರೆಗೂ ಜಮ್ಮು-ಕಾಶ್ಮೀರದಲ್ಲಿ ಮುಖ್ಯಮಂತ್ರಿ ಬದಲಾಗಿ ಪ್ರಧಾನಮಂತ್ರಿ ಮತ್ತು ರಾಜ್ಯಪಾಲರ ಬದಲು ‘ಸದರ-ಇ- ರಿಯಾಸತ್’ ಎಂದು ಕರೆಯಲಾಗುತ್ತಿತ್ತು. ಲಾರ್ಡ್ ಮೌಂಟ್ಬ್ಯಾಟನ್ನರ ಪ್ರಭಾವಕ್ಕೆ ಸಿಲುಕಿ ನೆಹರು ಮಾಡಿದ ಇನ್ನೊಂದು ಘೋರ ತಪ್ಪೆಂದರೆ ಭಾರತಕ್ಕೆ ಸೇರ್ಪಡೆಯಾಗುವ ಅಂತಿಮ ನಿರ್ಧಾರವನ್ನು ಜಮ್ಮು-ಕಾಶ್ಮೀರದ ವಿಧಾನಸಭೆಗೆ ಬಿಟ್ಟಿದ್ದು. ಇಂಥ ಅವಕಾಶ ಭಾರತದ ಬೇರಾವುದೇ ರಾಜ್ಯಗಳಿಗೂ ಇಲ್ಲ. ಹಾಗೆ ಹೇಳುವುದಾದರೆ ಭಾರತಕ್ಕೊಂದೇ ಸಂವಿಧಾನ ತಾನೇ? ಯಾವ ರಾಜ್ಯಕ್ಕೂ ತನ್ನದೇ ಪ್ರತ್ಯೇಕ ಸಂವಿಧಾನ ಹೊಂದುವ ಅವಕಾಶವಿಲ್ಲ. ಆದರೆ ಜಮ್ಮು-ಕಾಶ್ಮೀರಕ್ಕೆ ಇಲ್ಲೂ ವಿನಾಯತಿ. ಊರಿಗೊಂದು ದಾರಿಯಾದರೆ ಪೋರನಿಗೆ ಇನ್ನೊಂದು ದಾರಿ!
ಸಂವಿಧಾನದ 370ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತು, ಉಪಕ್ರಮ, ವಿನಾಯತಿಗಳನ್ನು ಕೊಡಲಾಗಿದೆ. 1. ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು. 2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ (ಕಮ್ಯುನಿಕೇಶನ್) ಈ ನಾಲ್ಕು ವಿಷಯಗಳಲ್ಲಿ ಮಾತ್ರ ಭಾರತದ ಕಾನೂನು, ಸಂವಿಧಾನ ಲಾಗೂ ಆಗುತ್ತದೆ. 3. ಸಂವಿಧಾನದ ಎಲ್ಲ ವಿಧಿ-ವಿಧಾನಗಳನ್ನು ಅನುಷ್ಠಾನ ಮಾಡಬೇಕೆಂದರೆ ಜಮ್ಮು-ಕಾಶ್ಮೀರ ಸರ್ಕಾರದ ಅನುಮತಿ ಪಡೆಯಬೇಕು. 4. ಜಮ್ಮು-ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು. 5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂತಾಯಿತು. 6. ರಾಷ್ಟ್ರಪತಿಯವರೇನಾದರೂ ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರ್ಕಾರದ ಶಿಫಾರಸು ಅತ್ಯಗತ್ಯ.
‘ಮೋದಿ ಪ್ರಧಾನಿಯಾಗಿ ಹತ್ತು ಸಲ ಆಯ್ಕೆಯಾದರೂ ಅವರಿಗೆ 370ನೇ ವಿಧಿಯನ್ನು ಮುಟ್ಟಲು ಆಗುವುದಿಲ್ಲ’ ಎಂದು ಷೇಕ್ ಅಬ್ದುಲ್ಲಾ ಅವರ ಮಗ ಫಾರೂಕ್ ಅಬ್ದುಲ್ಲಾ ಹೇಳಿದ್ದು ಸುಮ್ಮನೇನಾ? ಯಾರೇ ಬಂದರೂ ತಿಪ್ಪರಲಾಗ ಹಾಕಿದರೂ 370ನೇ ವಿಧಿ ಬಗ್ಗೆ ಏನೂ ಮಾಡಲಾಗುವುದಿಲ್ಲ.
ಈ ವಿಧಿಯನ್ವಯ ರಾಜ್ಯದ ಆಡಳಿತ ನಡೆಸುವ ಮುಖ್ಯಸ್ಥರಿಗೆ ವಿಶೇಷ ಅಧಿಕಾರ ನೀಡಿರುವುದರಿಂದ, ಇಲ್ಲಿವರೆಗೆ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು ಪ್ರತ್ಯೇಕ ಅಸ್ತಿತ್ವವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ತಮಗೆ ದಕ್ಕಿದ ಈ ವಿಶೇಷ ‘ಕಿರೀಟ’ವನ್ನು ತೆಗೆದಿರಿಸಲು ಅವರಿಗೆ ಮಂಡೆ ಕೆಟ್ಟಿದೆಯಾ?


ತಮಾಷೆ ಇಲ್ಲಿಗೇ ನಿಂತಿಲ್ಲ. 1954ರಲ್ಲಿ ಜಮ್ಮು-ಕಾಶ್ಮೀರ ಶಾಸನ ಸಭೆ ರಾಜ್ಯವನ್ನು ಭಾರತದೊಡನೆ ವಿಲೀನಗೊಳಿಸುವ ಪ್ರಸ್ತಾವನೆಗೆ ತನ್ನ ಅಂಗೀಕಾರ ನೀಡಿತು. ಆನಂತರ 1956ರಲ್ಲಿ ಜಮ್ಮು-ಕಾಶ್ಮೀರದ ಸಂವಿಧಾನಕ್ಕೆ ಒಂದು ಗೊತ್ತುವಳಿಯನ್ನು ಸೇರಿಸಲಾಯಿತು. ಸೆಕ್ಷನ್ 3 ಎಂದು ಕರೆಯಲಾಗುವ ಈ ಗೊತ್ತುವಳಿಯಲ್ಲಿ ‘ಜಮ್ಮು-ಕಾಶ್ಮೀರ ರಾಜ್ಯ ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ, ತಿದ್ದುಪಡಿ ತರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 1956ರಲ್ಲಿ ಭಾರತ ಸಂವಿಧಾನಕ್ಕೆ ತರಲಾದ ಏಳನೇ ತಿದ್ದುಪಡಿಯ ಒಂದನೇ ಪರಿಚ್ಛೇದದ ಅನ್ವಯ ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯಗಳಲ್ಲಿ ಒಂದಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲ ಆದ ನಂತರ ಸಂವಿಧಾನದ 370ನೇ ವಿಧಿಯನ್ನು ಉಳಿಸಿಕೊಳ್ಳುವ ಅಗತ್ಯವೇ ಇಲ್ಲ. 1956ರಲ್ಲಿಯೇ ಈ ವಿಧಿಯನ್ನು ನ್ಯಾಯಯುತವಾಗಿ ರದ್ದುಗೊಳಿಸಬೇಕಿತ್ತು. ಕಾಂಗ್ರೆಸ್ ಪಕ್ಷದೊಳಗೆ ಸಹ ಈ ವಿಧಿಯ ಬಗ್ಗೆ ವಿರೋಧ ವ್ಯಕ್ತವಾಯಿತು. ಆದರೆ ಈ ಕ್ರಮದಿಂದ ಮುಸ್ಲಿಮರಿಗೆ ಬೇಸರವಾಗಬಹುದು ಹಾಗೂ ತಮ್ಮ ಆಪ್ತಮಿತ್ರ, ಒಂದು ಕಾಲದ ಕಕ್ಷಿದಾರ ಷೇಕ್ ಅಬ್ದುಲ್ಲಾ ಮನಸ್ಸು ನೊಂದೀತು ಎಂದು ಅದನ್ನು ರದ್ದುಗೊಳಿಸುವ ಆಗ್ರಹವನ್ನು ಜವಾಹರಲಾರ ನೆಹರು ತಿರಸ್ಕರಿಸಿದರು.
ಈ ವಿಧಿಯನ್ನು ಯಾರು ಬರೆದರೋ ಏನೋ. ಇದು ಹೆಜ್ಜೆ ಹೆಜ್ಜೆಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ. ಕುಳಿತರೆ, ನಿಂತರೆ, ಪಕ್ಕಕ್ಕೆ ಕದಲಿದರೆ, ಏನೂ ಮಾಡದೆ ಸುಮ್ಮನಿದ್ದರೆ ಈ ಮುಳ್ಳು ಅಂದಿನಿಂದಲೂ ಚುಚ್ಚುತ್ತಲೇ ಇದೆ. ಇಡೀ ದೇಶ ವಿಧಿಯಿಲ್ಲದೇ, ಚುಚ್ಚಿಸಿಕೊಳ್ಳುತ್ತಿದೆ. ಇದೆಂಥ ಅಸಹಾಯಕತೆ, ದೈನೇಸಿ ಪರಿಸ್ಥಿತಿ?
ಭಾರತ ಸಂವಿಧಾನದ 19 (1) (ಇ) ಮತ್ತು (ಜಿ) ವಿಧಿಯನುಸಾರ, ಒಬ್ಬ ಪ್ರಜೆ ದೇಶದ ಯಾವುದೇ ಪ್ರದೇಶದಲ್ಲಿ ವಾಸಿಸಲು, ಶಾಶ್ವತವಾಗಿ ನೆಲೆಸಲು ಅಧಿಕಾರ ಹೊಂದಿದ್ದಾನೆ(ಳೆ). ಹೀಗೆ ವಾಸಿಸುವ, ನೆಲೆಸುವ ವ್ಯಕ್ತಿ ತನಗೆ ಸರಿ ತೋರಿದ ವೃತ್ತಿ, ಉದ್ಯೋಗ, ವ್ಯಾಪಾರ ವಹಿವಾಟು ನಡೆಸಲು ಸ್ವತಂತ್ರ. ಆದರೆ 370ನೇ ವಿಧಿಯನ್ವಯ ಭಾರತದ ಇತರ ರಾಜ್ಯಗಳ ಪ್ರಜೆಗಳು ಜಮ್ಮು-ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ. ಇದ್ಯಾವ ಸೀಮೆ ನ್ಯಾಯ? ಇದು ಪ್ರತ್ಯೇಕತೆಯ ಪರಮೋಚ್ಛವಲ್ಲವೇ? ಅಂದರೆ ಜಮ್ಮು-ಕಾಶ್ಮೀರ ನಮ್ಮ ದೇಶದ ಅಂಗರಾಜ್ಯವಾದರೂ ನಮ್ಮ ಸಂವಿಧಾನಕ್ಕೆ ಬಿಡಿಗಾಸಿನ ಬೆಲೆ ಇಲ್ಲ. ಅಂದರೆ ಇದೆಂಥ ಕರಾಳ ಶಾಸನವಿದ್ದಿರಬಹುದೋ ಯೋಚಿಸಿ.
ನಮ್ಮ ಸಂಸತ್ತಿನಲ್ಲಿ ಅನುಮೋದನೆಯನ್ನೇ ಪಡೆಯದೇ ದೇಶದ ಸಂವಿಧಾನದ ಮರ್ಯಾದೆ ಕಾಪಾಡಲು 370ನೇ ವಿಧಿಗೆ ನಾಲ್ಕು ಸಲ ತಿದ್ದುಪಡಿ ತರಲಾಗಿದೆ. ಇದರ ಫಲವಾಗಿ ನಮ್ಮ ಸಂವಿಧಾನದ ಸುಮಾರು 878 ವಿಧಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವಂತಾಗಿದೆ. ಅವುಗಳನ್ನೂ ಜಮ್ಮು-ಕಾಶ್ಮೀರ ಸರ್ಕಾರ ಪಾಲಿಸುವುದಿಲ್ಲ. ಸಂವಿಧಾನದ 300ನೇ ವಿಧಿಯನ್ವಯ ಕೇಂದ್ರ ಸರ್ಕಾರ ರಾಜ್ಯದಲ್ಲಿ ಆರ್ಥಿಕ ತುರ್ತುಸ್ಥಿತಿಯನ್ನು ಘೋಷಿಸಬಹುದು. ಆದರೆ ಜಮ್ಮು-ಕಾಶ್ಮೀರದಲ್ಲಿ ಈ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತಿಲ್ಲ. ಆಂತರಿಕ ಕ್ಷೋಭೆ, ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ತುರ್ತುಸ್ಥಿತಿ ಘೋಷಿಸಿ ಅದನ್ನು ಜಮ್ಮು-ಕಾಶ್ಮೀರದಲ್ಲೂ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರ ಬಯಸಿದರೆ, ರಾಜ್ಯ (ಜಮ್ಮು-ಕಾಶ್ಮೀರ) ಸರ್ಕಾರದ ಅನುಮತಿ ಪಡೆಯಬೇಕು. ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಅಂದ್ರೆ ಇದು!
370ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ಸರ್ಕಾರ ಕೇಂದ್ರಕ್ಕೆ ದಮಡಿ ಕಿಮ್ಮತ್ತು ಕೊಡುತ್ತಿಲ್ಲ. ಸಂವಿಧಾನದ 356ನೇ ವಿಧಿಯ ಪ್ರಕಾರ, ರಾಷ್ಟ್ರಪತಿಯವರೇನಾದರೂ ತಮ್ಮ ಪರಮಾಧಿಕಾರ ಬಳಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ನಿರ್ಧರಿಸಿದರೆನ್ನಿ, ಅಂಥ ಸಂದರ್ಭದಲ್ಲಿ ರಾಷ್ಟ್ರಪತಿಯವರು ಜಮ್ಮು-ಕಾಶ್ಮೀರದ ರಾಜ್ಯಪಾಲರ ಅನುಮತಿ ಪಡೆಯಬೇಕು! ರಾಷ್ಟ್ರಪತಿಯಿಂದ ನೇಮಕವಾಗುವ ರಾಜ್ಯಪಾಲ ಈ ಸಂದರ್ಭದಲ್ಲಿ ದೊಣ್ಣೆ ನಾಯಕನಂತೆ ವರ್ತಿಸುವುದಾದರೆ, ರಾಷ್ಟ್ರಪತಿಯವರ ಮರ್ಯಾದೆ ಎಲ್ಲಿಗೆ ಬಂತು? ರಾಷ್ಟ್ರಪತಿ ಆಳ್ವಿಕೆ ಹೇರುವ ಸಂದರ್ಭದಲ್ಲಿ ರಾಷ್ಟ್ರಪತಿ ಕಳಿಸುವ ಪ್ರಸ್ತಾವವನ್ನು ರಾಜ್ಯಪಾಲ ತಿರಸ್ಕರಿಸಬಹುದು! ಹೇಗಿದೆ ಸ್ವಾಮಿ 370ನೇ ವಿಧಿ ಬರಹ?
ಭಾರತದ ಪ್ರಜೆಗಳಿಗೆ ಒಂದೇ ನಾಗರಿಕತ್ವ. ಜಮ್ಮು-ಕಾಶ್ಮೀರದವರಿಗೆ ಒಂದು ಪುಕ್ಕ ಜಾಸ್ತಿ. ಅವರಿಗೆ ಎರಡೆರಡು ನಾಗರಿಕತ್ವ. ಜಮ್ಮು-ಕಾಶ್ಮೀರದ ಪ್ರಜೆಯಾದರೆ ನೀವು ಭಾರತ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಪಕ್ಷಾಂತರ ವಿರೋಧಿ ಕಾನೂನು, ನಗರ ಭೂಮಿ ಕಾಯ್ದೆ ಯಾವುದೂ ಅಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ‘ಇಲ್ಲಿ ತನಕ ಎಷ್ಟು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ? ಎಷ್ಟು ಮಂದಿ ಕಾಶ್ಮೀರಿ ಪಂಡಿತರನ್ನು ಓಡಿಸಿದ್ದೀರಿ? ಸಾಯಿಸಿದ್ದೀರಿ? ಈಗ ಎಷ್ಟು ಮಂದಿ ಅಲ್ಲಿ ಉಳಿದಿದ್ದಾರೆ?’ ಎಂಬ ಮಾಹಿತಿ ಕೋರಿ ಅಲ್ಲಿನ ಸರ್ಕಾರಕ್ಕೆ ಅರ್ಜಿ ಹಾಕಿ ಕೇಳಿದರೆನ್ನಿ. ನಿಮ್ಮ ಅರ್ಜಿ ಕಸದ ಬುಟ್ಟಿಗೆ ಸೇರುತ್ತದೆ. ಕಾರಣ ಅಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನ್ವಯವೇ ಆಗುವುದಿಲ್ಲ.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಕೊಡುವ ಕಾನೂನು ಅಂದ್ರೆ ಏನು ಅಂತ ಜಮ್ಮು-ಕಾಶ್ಮೀರ ಸರ್ಕಾರ ಕೇಳಿದರೆ ಅಚ್ಚರಿಯಿಲ್ಲ. ಮಾನವಹಕ್ಕು, ಮಹಿಳಾಹಕ್ಕು ಆಯೋಗಗಳು ಹೆಸರಿಗೂ ಇಲ್ಲ. ಶಿಕ್ಷಣಹಕ್ಕು, ಸಮಾನತೆ ಹಕ್ಕು ಇಲ್ಲೆಲ್ಲ ಅನ್ವಯವಾಗುವುದಿಲ್ಲ. ಪರಿಶಿಷ್ಟರ ಗಣತಿ ಸಹ ನಡೆಯುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಮಂತ್ರಿಗಳು ಪ್ರಮಾಣ ವಚನದ ಒಕ್ಕಣಿಕೆಯೇ ಬೇರೆ. ಎಲ್ಲ ರಾಜ್ಯಗಳಲ್ಲಿ ವಿಧಾನಸಭೆಯ ಅವಧಿ ಐದು ವರ್ಷಗಳಿದ್ದರೆ ಇಲ್ಲಿ ಆರು ವರ್ಷ. ಜಮ್ಮು-ಕಾಶ್ಮೀರದ ಸಂವಿಧಾನದಲ್ಲಿ ಸೆಕ್ಯುಲರಿಸಂ ಹಾಗೂ ಸೋಷೀಯಲಿಸಂ ಪ್ರಸ್ತಾಪವೇ ಇಲ್ಲ.


ಜಮ್ಮು-ಕಾಶ್ಮೀರದ ಪರಿಧಿಯಲ್ಲಿ ಸಿಬಿಐ ಯಾವುದೇ ತನಿಖೆಯನ್ನು ಕೈಗೆತ್ತಿಕೊಳ್ಳುವಂತಿಲ್ಲ. ಒಂದು ವೇಳೆ ತನಿಖೆ ಅನಿವಾರ್ಯವಾದರೆ ರಾಜ್ಯ ಸರ್ಕಾರ ಅಥವಾ ಹೈಕೋರ್ಟಿನ ಅನುಮತಿ ಪಡೆಯಬೇಕು. ಸುಪ್ರಿಂಕೋರ್ಟಿಗೆ ಇಲ್ಲಿ ಕೇವಲ appelant jurisdictiion ಇದೆ. ಅಂದರೆ ಅಪೀಲು ಮಾಡಿದ ಪ್ರಕರಣಗಳನ್ನಷ್ಟೇ ಕೈಗೆತ್ತಿಕೊಳ್ಳಬಹುದು.
ಜನಪ್ರತಿನಿಧಿ ಕಾಯ್ದೆಯೂ ಇಲ್ಲಿ ಬುರ್ನಾಸು. 2002ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಇಡೀ ದೇಶದಲ್ಲಿ ಜಾರಿಗೆ ಬಂದರೆ, ಇಲ್ಲಿ ಜಾರಿಯಾಗಲೇ ಇಲ್ಲ. ದಲಿತರಿಗೆ, ಹಿಂದುಳಿದವರಿಗೆ ಇಲ್ಲಿ ಮೀಸಲಾತಿಯ ಪ್ರಯೋಜನವೇ ಸಿಕ್ಕಿಲ್ಲ. ಆದರೂ ಲಾಲೂ, ಮಾಯಾವತಿ, ಮುಲಾಯಂ ಈ ಬಗ್ಗೆ ಚಕಾರವೆತ್ತಿಲ್ಲ.
ಜಮ್ಮು-ಕಾಶ್ಮೀರದ ಮಹಿಳೆಯೊಬ್ಬಳು ಬೇರೆ ರಾಜ್ಯದ ವ್ಯಕ್ತಿಯನ್ನು ವಿವಾಹವಾದರೆ ಆಕೆಗೆ ಆಸ್ತಿ ಹಕ್ಕು ಇಲ್ಲವಾಗುತ್ತದೆ. ಪಿತ್ರಾರ್ಜಿತ ಆಸ್ತಿಯ ಹಕ್ಕಿನಿಂದಲೂ ಆಕೆ ವಂಚಿತಳಾಗುತ್ತಾಳೆ. ಆದರೆ 2004ರಲ್ಲಿ ಅಲ್ಲಿನ ಹೈಕೋರ್ಟ್ ಜಮ್ಮು-ಕಾಶ್ಮೀರ ವರ್ಸಸ್ ಶೀಲಾ ಸಾವನೆ ಪ್ರಕರಣದಲ್ಲಿ ಈ ನಿಯಮಕ್ಕೆ ಯಾವುದೇ ಕಾನೂನಿನ ಆಧಾರವಿಲ್ಲ ಎಂದು ಹೇಳಿತ್ತು. ಅಲ್ಲಿಗೆ ಬೇರೆ ರಾಜ್ಯಗಳ ಗಂಡಸರನ್ನು ವಿವಾಹವಾಗುವ ಕಾಶ್ಮೀರದ ಮಹಿಳೆಗೆ ನ್ಯಾಯ ಸಿಗಬೇಕಿತ್ತು. ಆದರೆ ಅಂದು ಅಧಿಕಾರದಲ್ಲಿದ್ದ (ಆಕೆಯೂ ಹೆಂಗಸು) ಪ್ರೊಗ್ರೆಸಿವ್ ಡೆಮಾಕ್ರೆಟಿಕ್ ಪಾರ್ಟಿಯ (ಪಿಡಿಪಿ) ಮೆಹಬೂಬಾ ಮುಫ್ತಿ. ಹೈಕೋರ್ಟ್ ತೀರ್ಪನ್ನು ಬುಡಮೇಲು ಮಾಡಲು ‘ಖಾಯಂ ನಿವಾಸಿಗಳ (ಅನರ್ಹ) ಮಸೂದೆ’ಯನ್ನು ಮಂಡಿಸಿದರು. ಈ ಮಸೂದೆಯ ಆಶಯವೇನು ಗೊತ್ತಾ? ಕಾಶ್ಮೀರದ ಮಹಿಳೆ ರಾಜ್ಯದ ಹೊರಗಿನವರನ್ನು ಮದುವೆಯಾದರೆ, ತನ್ನ ಖಾಯಂ ನಿವಾಸಿ ಸ್ಥಾನದಿಂದ ಅನರ್ಹಗೊಳಿಸುವುದು.
ದುರ್ದೈವವೆಂದರೆ ಈ ಮಸೂದೆಗೆ ರಾಜಕೀಯ ವಿರೋಧ ಮರೆತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿದರು. ಆದರೆ ತಾಂತ್ರಿಕ ಕಾರಣಗಳಿಂದ ಅದು ಅಂಗೀಕಾರವಾಗಲಿಲ್ಲ. 2010ರಲ್ಲಿ ಪುನಃ ಇಂಥದೇ ಮಸೂದೆಗೆ ಚಾಲನೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ.
370ನೇ ವಿಧಿ ಎಂಬ ಬ್ರಹ್ಮಾಸ್ತ್ರದ ಮುಂದೆ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್) ಗೆ ಕವಡೆ ಕಿಮ್ಮತ್ತಿಲ್ಲ. ಐಪಿಸಿಯ ಯಾವ ಸೆಕ್ಷನ್ ಆದ್ರೂ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಇದರ ಬದಲು ಜಮ್ಮು-ಕಾಶ್ಮೀರದಲ್ಲಿ ರಣವೀರ ದಂಡಸಂಹಿತೆ ಈಗ ಜಾರಿಯಲ್ಲಿದೆ.
ಜಮ್ಮು-ಕಾಶ್ಮೀರಕ್ಕೆ ಭಾರತದ ಸಂವಿಧಾನ ಬೇಡ. ಕಾನೂನು ಬೇಡ, ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ನಿಯಮ, ಶಾಸನಗಳು ಬೇಡ. ರೀತಿ-ರಿವಾಜುಗಳು ಬೇಡ. ಕೇಂದ್ರ ಸರ್ಕಾರ ಅಂದ್ರೆ ಯಾವ ಮರದ ತೊಪ್ಪಲು ಎಂಬ ಭಾವನೆ, ಹತ್ತೂ ಸಮಸ್ತರಿಗೆ ಲಾಗೂ ಆಗುವುದ್ಯಾವುದೂ ಬೇಡ. ಆದರೆ ಕೇಂದ್ರ ಸರ್ಕಾರದ ಸಹಾಯಧನ, ಹಣಕಾಸು ನೆರವು ಮಾತ್ರ ಬೇಕು. ತಾವು ತೆರಿಗೆ ಕಟ್ಟದಿದ್ದರೂ, ಬೇರೆ ರಾಜ್ಯಗಳ ಜನತೆ ಕಟ್ಟಿದ ತೆರಿಗೆಯಲ್ಲಿ ಪಾಲುಬೇಕು. 1990ರಲ್ಲಿ ಜಮ್ಮು-ಕಾಶ್ಮೀರ ಕೇಂದ್ರದಿಂದ 35.571 ಕೋಟಿ ನೆರವನ್ನು ಪಡೆದಿತ್ತು! ಕಾಶ್ಮೀರದ ಒಬ್ಬ ಪ್ರಜೆ ಪ್ರತಿ ವರ್ಷ ಕೇಂದ್ರದಿಂದ ಪಡೆಯುವ ಹಣಕಾಸು ನೆರವು ನಲವತ್ತು ಸಾವಿರಕ್ಕಿಂತ ಅಧಿಕ. ಬಿಹಾರಕ್ಕೆ ಹೋಲಿಸಿದರೆ ಇದು ಹನ್ನೆರಡು ಪಟ್ಟು ಜಾಸ್ತಿ. ಪಶ್ಚಿಮ ಬಂಗಾಲಕ್ಕೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು. ಆ ರಾಜ್ಯದ ಯೋಜನಾ ವೆಚ್ಚ 1200 ಕೋಟಿ ರೂ. ವೇತನವೂ ಸೇರಿದಂತೆ 2890 ಕೋಟಿ ರೂ. ಆದರೆ ವರಮಾನ ಬರೀ 1100 ಕೋಟಿ ರೂ. ಅಂದರೆ ಸಂಬಳವನ್ನು ಕೇಂದ್ರವೇ ಕೊಡಬೇಕು. ಪ್ರತಿವರ್ಷ ಕೇಂದ್ರದಿಂದ ಅಲ್ಲಿಗೆ ಹೋಗುವ ಹಣ ಹೆಚ್ಚುತ್ತಲೇ ಹೋಗುತ್ತಿದೆ. ಆದರೂ ಜಮ್ಮು-ಕಾಶ್ಮೀರದ ಹಂಗಿನಲ್ಲಿ ಕೇಂದ್ರ ಸರ್ಕಾರವಿದೆ!
2008ರಲ್ಲಿ ಪಾಕಿಸ್ತಾನ ಸರ್ಕಾರ ‘ಕುಶಾಲ ಕಾಶ್ಮೀರ’ ಕಾರ್ಯಕ್ರಮದಡಿ 30 ಕೋಟಿ ರೂ. ನೀಡಿತ್ತು. ಅದಕ್ಕೆ ಜಮ್ಮು-ಕಾಶ್ಮೀರ ವಿಧಾನ ಸಭೆ ಅಭಿನಂದನಾ ನಿರ್ಣಯ ಸ್ವೀಕರಿಸಿತು. ಅದೇ ವರ್ಷ ವಾಜಪೇಯಿ ಸರ್ಕಾರ 6165 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿತು. ಜಮ್ಮು-ಕಾಶ್ಮೀರದ ನಾಯಕರು ಬಾಯಿಬಿಡಲಿಲ್ಲ.
ಸಂವಿಧಾನದ 370ನೇ ವಿಧಿ ಬಗ್ಗೆ ನೆಹರು ಅವರಿಗೆ ಜ್ಞಾನೋದಯವಾಗಲಾರಂಭಿಸಿತ್ತು. ಅದು ಎಂಥ ಗಂಡಾಂತರಕಾರಿಯೆಂಬುದು ಅನುಭವಕ್ಕೆ ಬಂದಿತ್ತು. ತಾವೇ ಹಗ್ಗ ಕೊಟ್ಟು ಕಟ್ಟಿಸಿ ಹಾಕಿಸಿಕೊಳ್ಳುತ್ತಿದ್ದೇವೆಂಬುದು ಅವರ ಅರಿವಿಗೆ ಬಂದಿತ್ತು. 1962ರ ಚೀನಾ ಆಕ್ರಮಣದಿಂದ ನೆಹರು ಮೆತ್ತಗಾಗಿದ್ದರು. 1963ರ ನವೆಂಬರ್ 27ರಂದು ಅವರು ಲೋಕಸಭೆಯಲ್ಲಿ ಹೇಳಿದ ಮಾತುಗಳನ್ನು ಆಲಿಸಿ ಕೇಳಬೇಕು.
‘ಸಂವಿಧಾನದ 370ನೇ ವಿಧಿ ಒಂದು ತಾತ್ಕಾಲಿಕ ಕ್ರಮ. ನಾವು ಈಗ ಸಂಧಿ ಕಾಲದಲ್ಲಿದ್ದೇವೆ. ಇದು ಒಂದು ಸಂದರ್ಭಕ್ಕಾಗಿ ಮಾಡಿಕೊಂಡ ವ್ಯವಸ್ಥೆ. ಗೃಹಸಚಿವರು ಹೇಳಿದಂತೆ ಈ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ದೇಶದ ಇತರ ರಾಜ್ಯಗಳೊಡನೆ ಜಮ್ಮು-ಕಾಶ್ಮೀರ ಸಂಬಂಧವನ್ನು ಗಾಢವಾಗಿ ನಿಕಟಗೊಳಿಸಲಾಗಿದೆ. ಜಮ್ಮು-ಕಾಶ್ಮೀರವನ್ನು ದೇಶದ ಇತರ ಭಾಗದ ಜತೆ ಒಂದುಗೂಡಿಸಲಾಗಿದೆ. ಆದ್ದರಿಂದ 370ನೇವಿಧಿಯನ್ನು ದುರ್ಬಲಗೊಳಿಸುವ, ಶಿಥಿಲಗೊಳಿಸುವ ಕ್ರಮ ಮುಂದುವರಿಯಲಿ’.
ಸ್ವತಃ ಪ್ರಧಾನಿ ನೆಹರು 370ನೇ ವಿಧಿಯನ್ನು ರದ್ದುಗೊಳಿಸುವ ಅಗತ್ಯ ಕುರಿತು ಮಾತಾಡಿ ಸರಿಯಾಗಿ ಐವತ್ತು ವರ್ಷಗಳಾದವು. ಆದರೂ ಈ ಅನಿಷ್ಟದ, ಉಪದ್ರವಿ ವಿಧಿಯನ್ನು ನಾವು ಇನ್ನೂ ಪೋಷಿಸುತ್ತಿದ್ದೇವೆ.
ಅಷ್ಟಕ್ಕೂ ನರೇಂದ್ರ ಮೋದಿ ಹೇಳಿದ್ದರಲ್ಲಿ ಏನು ತಪ್ಪಿದೆ?
ಚರ್ಚೆಯಾಗಲಿ ಬಿಡಿ.

Saturday, 30 May 2015

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ/ Elli hoguviri nilli modagale

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
 ನಾಲ್ಕು ಹನಿಯ ಚೆಲ್ಲಿ
 ದಿನದಿನವು ಕಾದು ಬಾಯಾರಿ ಬೆಂದೆ
 ಬೆಂಗದಿರ ತಾಪದಲ್ಲಿ .
               ನನ್ನೆದೆಯ ಹಸಿರ ಉಸಿರು ಕುಗ್ಗಿದರು
              ಬರಲಿಲ್ಲ ನಿಮಗೆ ಕರುಣ
              ನನ್ನ ಹೃದಯದಲಿ ನೋವು ಮಿಡಿಯುತಿದೆ
              ನಾನು ನಿಮಗೆ ಶರಣ.
ಬಡವಾಗದ ನನ್ನ ಒಡಲುರಿಯ ಬೇಗೆ 
ನಿಮಗರಿವು ಆಗಲಹುದೇ?
ನೀಲಗಗನದಲಿ ತೇಲಿ ಹೋಗುತಿಹ
 ನಿಮ್ಮನೆಳೆಯಬಹುದೇ?
               ಬಾಯುಂಟು ನನಗೆ, ಕೂಗಬಲ್ಲೇನಾ
              ನಿಮ್ಮೆದೆಯ ಪ್ರೇಮವನ್ನು.
               ನೀವು ಕರುಣಿಸಲು ನನ್ನ ಹಸಿರೆದೆಯು
              ಉಸಿರುವುದು ತೋಷವನ್ನು.
ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ
 ನನ್ನೆದೆಗೆ ತಂಪತನ್ನಿ,
ನೊಂದ ಜೀವರಿಗೆ ತಂಪನೀಯುವುದೇ
 ಪರಮ ಪೂಜೆಯೆನ್ನಿ.
                                                                
- ಡಾ. ಜಿ. ಎಸ್. ಶಿವರುದ್ರಪ್ಪ

Friday, 29 May 2015

ಏಕತೆಗಾಗಿ ನಡೆಯಲಿದೆ ಓಟ, ಅವರಿಲ್ಲದಿದ್ದರೆ ತುಂಡು ತುಂಡಾಗಿರುತ್ತಿತ್ತು ಭಾರತದ ಭೂಪಟ!

ಇಸ್ ದೇಶ್ ಕೋ ಹಮೇಶಾ ಏಕ್ ಗಿಲಾಶಿಕ್ಷಾ ರಹೇಗಾ. ಹರ್ ಹಿಂದುಸ್ಥಾನಿ ಕೆ ದಿಲ್ ಮೇ ಏಕ್ ದರ್ದ್ ರಹೇಗಾ. ಕಾಶ್ ಸರ್ದಾರ್ ಸಾಬ್, ಹಮಾರೆ ಪೆಹ್ಲೆ ಪ್ರಧಾನ್ ಮಂತ್ರಿ ಹೋತೇ ತೋ ಆಜ್ ದೇಶ್ ಕಿ ತಕ್ದಿರ್ ಭೀ ಅಲಗ್ ಹೋತಿ, ದೇಶ್ ಕಿ ತಸ್ವೀರ್ ಭೀ ಅಲಗ್ ಹೋತಿ! ಅಂದರೆ ಈ ದೇಶಕ್ಕೆ ಶಾಶ್ವತವಾಗಿ ಒಂದು ವಿಷಾದವಿರಲಿದೆ. ಪ್ರತಿ ಭಾರತೀಯನಿಗೂ ಅವನ ಹೃದಯದಲ್ಲಿ ಒಂದು ನೋವು ಇರಲಿದೆ. ಒಂದು ವೇಳೆ, ಸರ್ದಾರ್ ಪಟೇಲ್‌ರು ಮೊದಲ ಪ್ರಧಾನಿಯಾಗಿರುತ್ತಿದ್ದರೆ ಈ ದೇಶದ ಚಹರೆಯೂ ಬದಲಾಗಿರುತಿತ್ತು, ಹಣೆಬರಹವೂ ಭಿನ್ನವಾಗಿರುತ್ತಿತ್ತು!
ಹಾಗಂತ ಕಳೆದ ಅಕ್ಟೋಬರ್ 29ರಂದು “ಕಾಂಗ್ರೆಸ್‌” ಪ್ರಧಾನಿ ಮನಮೋಹನ್ ಸಮ್ಮುಖದಲ್ಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಬಿಟ್ಟರು!
ಪ್ರಧಾನಿ ಸಿಡಿಮಿಡಿಗೊಂಡರು. “ಸರ್ದಾರ್ ಪಟೇಲ್ ಒಬ್ಬ ಜಾತ್ಯತೀತ ನಾಯಕ” ಎನ್ನುವ ಮೂಲಕ ಕೋಮುವಾದಿ ಬಿಜೆಪಿಗೆ ಸರ್ದಾರ್ ಪಟೇಲ್ ಹೆಸರೆತ್ತುವ ಅರ್ಹತೆ ಇಲ್ಲ ಎಂದು ಪರೋಕ್ಷವಾಗಿ ಚುಚ್ಚಿದರು. ಸರ್ದಾರ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಇಡೀ ದೇಶದ ನಾಯಕರೇ ಹೊರತು, ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದವರಲ್ಲ. ಇದೇನೇ ಇರಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕೋಮುವಾದಿ ಸೂತ್ರವನ್ನಿಟ್ಟುಕೊಂಡು ಚುಚ್ಚಲು ಸಾಧ್ಯವಾಯಿತೇ ಹೊರತು, ನರೇಂದ್ರ ಮೋದಿ ಹೇಳಿದ್ದನ್ನು ಅಲ್ಲಗಳೆಯಲು ಸಾಧ್ಯವಾಗಲಿಲ್ಲ.
ಹಾಗಾದರೆ ಸರ್ದಾರ್ ಪಟೇಲ್ ನಿಜಕ್ಕೂ ದೇಶದ ಮೊದಲ ಪ್ರಧಾನಿಯಾಗಬೇಕಿತ್ತೆ?
ಅವರು ಪ್ರಧಾನಿಯಾಗಿದ್ದರೆ ನಮ್ಮ ದೇಶದ ರೂಪ, ಭವಿಷ್ಯಗಳೆರಡೂ ಬದಲಾಗುತ್ತಿದ್ದವೆ? ಆ ಕಾಲದಲ್ಲಿ ದೇಶ ಕೂಡ ಸರ್ದಾರ್ ಪಟೇಲರ ನೇತೃತ್ವವನ್ನು ಬಯಸಿತ್ತೆ? ಅದನ್ನು ತಿಳಿದುಕೊಳ್ಳುವ ಮೊದಲು ಉಪಪ್ರಧಾನಿಯಾಗಿ ಸರ್ದಾರ್ ಪಟೇಲ್ ಮಾಡಿದ್ದೇನು, ಅವರ ಸಾಧನೆಯೇನು ಎಂಬುದನ್ನು ಕೇಳಿ. ಭಾರತವನ್ನು ಬಿಟ್ಟು ತೊಲಗುವಾಗಲೂ ಬ್ರಿಟಿಷರು ತಮ್ಮ ಕಿಡಿಗೇಡಿ ಬುದ್ಧಿಯನ್ನು ಬಿಡಲಿಲ್ಲ. ತಮ್ಮ ನಿಯಂತ್ರಣದಲ್ಲಿದ್ದ ಪ್ರದೇಶಗಳು ಮಾತ್ರವಲ್ಲ, ತಮ್ಮ ಅಧೀನದಲ್ಲಿದ್ದ, ಡಚ್ಚರು, ಪೋರ್ಚುಗೀಸರ ಕೈಯಲಿದ್ದ ರಾಜ್ಯಗಳೂ “ಇನ್ನು ಸ್ವತಂತ್ರ” ಎಂದು ಹೊರಟುಹೋದರು. ಅಂದರೆ ಅವಿಭಜಿತ ಭಾರತ 625 ಸಣ್ಣ, ದೊಡ್ಡ ರಾಜ್ಯಗಳಾಗಿ ಹೋಯಿತು. ಅವುಗಳಲ್ಲಿ 554 ಪ್ರಾಂತ್ಯಗಳು ಪಾಕ್‌ನಿಂದ ಪ್ರತ್ಯೇಕಗೊಂಡ ಭಾರತದಲ್ಲಿದ್ದವು! ಇವುಗಳನ್ನೆಲ್ಲ ಭಾರತದ ಒಕ್ಕೂಟದೊಳಗೆ ಸೇರ್ಪಡೆ ಮಾಡುವುದು, ಒಬ್ಬೊಬ್ಬ ರಾಜನನ್ನೇ ಮನವೊಲಿಸುವುದು ಸಾಮಾನ್ಯ ಕೆಲಸವೇ? ಒಂದು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು 17 ವರ್ಷ ದೇಶವಾಳಿದ ನೆಹರುಗೆ ಆಗಲಿಲ್ಲ. ಆನಂತರ 49 ವರ್ಷ ದೇಶವಾಳಿದ ಇನ್ನುಳಿದವರಿಗೂ ಆಗಿಲ್ಲ, ಹಾಗಿರುವಾಗ ಕೇವಲ ಮೂರು ವರ್ಷ ಉಪಪ್ರಧಾನಿಯಾಗಿದ್ದ ಒಬ್ಬ ವ್ಯಕ್ತಿ 554 ರಾಜ್ಯ, ರಾಜರುಗಳನ್ನು ಹೇಗೆ ಮನವೊಲಿಸಿರಬೇಕು, ಬೆದರಿಸಿ ಬಗ್ಗಿಸಿರಬೇಕು, ಇಲ್ಲವೆ ಬಗ್ಗುಬಡಿದು ದಾರಿಗೆ ತಂದಿರಬೇಕು ಯೋಚಿಸಿ?! ಅವತ್ತಿದ್ದ ಪರಿಸ್ಥಿತಿಯನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾ? ಒರಿಸ್ಸಾ ಒಂದೇ ರಾಜ್ಯದಲ್ಲಿ 26 ಸಣ್ಣ ರಾಜ್ಯಗಳಿದ್ದವು. ಈಗಿನ ಛತ್ತೀಸ್‌ಗಢದಲ್ಲಿ 15, ಸೌರಾಷ್ಟ್ರದಲ್ಲಿ 14 ಜನ ಆಳುತ್ತಿದ್ದರು. ಈ ಪುಡಿ ಪಾಳೇಗಾರರ ಮಾತು ಹಾಗಿರಲಿ, 500 ಪ್ರಿನ್ಸ್ಲಿ ಸ್ಟೇಟ್(ಅಧೀನ ಸಂಸ್ಥಾನ)ಗಳಿದ್ದವು. ಅವೆಲ್ಲವುಗಳಿಗಿಂತಲೂ ಮಹತ್ತರವಾದುದು ಹೈದರಾಬಾದ್ ನಿಜಾಮನನ್ನು ಬಗ್ಗುಬಡಿಯಲು ಪಟೇಲ್ ರೂಪಿಸಿದ “ಆಪರೇಷನ್ ಪೋಲೋ”!
ಆ ಸಂದರ್ಭದಲ್ಲಿ ಹೈದರಾಬಾದಿನ ನಿಜಾಮನಿಗಿಂತ ಮೊದಲು ಪ್ರಧಾನಿ ನೆಹರು ಅವರನ್ನು ಮಟ್ಟಹಾಕಬೇಕಾದ ದುರ್ಗತಿ ಈ ದೇಶ ಹಾಗೂ ಸರ್ದಾರ್ ಪಟೇಲ್‌ಗೆ ಎದುರಾಗಿತ್ತು ಎಂದರೆ ನಂಬುತ್ತೀರಾ!?
“ಬ್ರಿಟಿಷರು ಸದ್ಯದಲ್ಲೇ ಭಾರತವನ್ನು ತೊರೆಯುವುದರ ಅರ್ಥವೇನೆಂದರೆ ನಾನು ಸ್ವತಂತ್ರ ಸಾರ್ವಭೌಮ ರಾಜ್ಯವನ್ನು ಘೋಷಣೆ ಮಾಡಿಕೊಳ್ಳುವ ಹಕ್ಕುಹೊಂದಿದ್ದೇನೆಂದು”. ಹಾಗಂತ 1947, ಜೂನ್ 12ರಂದೇ, ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ಹೈದರಾಬಾದ್ ನಿಜಾಮ ಹೇಳಿಕೆ ನೀಡಿದ. ಆ ಮೂಲಕ ಹೈದರಾಬಾದಿನಲ್ಲಿ ಸ್ವಂತ ಸಾಮ್ರಾಜ್ಯ ಕಟ್ಟುವ, ಭಾರತದ ಒಕ್ಕೂಟಕ್ಕೆ ಸೇರದೇ ಇರುವ ಸಂಕೇತ ನೀಡಿದ. ಅಷ್ಟೇ ಅಲ್ಲ, ತನ್ನ ರಾಜ್ಯದ ಭವಿಷ್ಯದ ಬಳಕೆಗಾಗಿ ಗೋವಾದ ಬಂದರೊಂದನ್ನು ಪಡೆದುಕೊಳ್ಳಲು ಆಗ ಗೋವಾವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಪೋರ್ಚುಗೀಸರ ಜತೆ ಸಂಧಾನ ಆರಂಭಿಸಿದ! 1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ಮಾತ್ರ ಪ್ರತ್ಯೇಕವಾಗಿಯೇ ಇತ್ತು. ಎಷ್ಟೇ ಸಂಧಾನ ಮಾತುಕತೆ ನಡೆಸಿದರೂ ನಿಜಾಮ ಬಗ್ಗಲಿಲ್ಲ. ಒಂದೆಡೆ ಭಾರತ ಸರ್ಕಾರದ ಪ್ರತಿನಿಧಿಯಾಗಿ ಕೆ.ಎಂ. ಮುನ್ಷಿ ನಿಜಾಮನ ಪ್ರಧಾನಿಯಾಗಿದ್ದ ಲೈಕ್ ಅಲಿ ಜತೆ ಮಾತುಕತೆ ನಡೆಸುತ್ತಿದ್ದರಾದರೂ ಗೃಹ ಸಚಿವ ಸರ್ದಾರ್ ಪಟೇಲ್ ಹಾಗೂ ರಾಜ್ಯ ಕಾರ್ಯದರ್ಶಿ ವಿ.ಪಿ. ಮೆನನ್ ಮತ್ತೊಂದು ಮಾರ್ಗದಲ್ಲಿ ನಿಜಾಮನನ್ನು ಬಗ್ಗಿಸಲು ಪ್ರಯತ್ನಿಸುತ್ತಿದ್ದರು. ನಿಜಾಮನ ಮೊಂಡುತನದಿಂದ ಕುಪಿತಗೊಂಡ ಪಟೇಲ್, “ಭಾರತದ ಸಹನೆ ವೇಗವಾಗಿ ಕರಗುತ್ತಿದೆ” ಎಂಬ ಸಂದೇಶವನ್ನು ಮೆನನ್ ಮೂಲಕ ಮುಟ್ಟಿಸಿದರು. ಈ ವಿಷಯ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾಗೆ ಮಸ್ಕಾ ಹಾಕುತ್ತಿದ್ದ ಹಾಗೂ ಹೈದರಾಬಾದ್ ನಿಜಾಮನ ವಿಷಯದಲ್ಲೂ ಅದೇ ಧೋರಣೆ ತಳೆಯಬೇಕಿಂದಿದ್ದ ಪ್ರಧಾನಿ ನೆಹರು ಕಿವಿಗೆ ಬಿದ್ದು ಕೆಂಡಾಮಂಡಲವಾದರು. ಪಟೇಲ್ ಹಾಗೂ ಮೆನನ್ ಅವರನ್ನೇ ಬದಲಾಯಿಸುವ ಮಟ್ಟಕ್ಕೆ ಹೋದರು. ಆದರೆ ಪಟೇಲ್ ಮಾತ್ರ ಹೈದರಾಬಾದನ್ನು ವಶಪಡಿಸಿಕೊಳ್ಳುವ “ಆಪರೇಷನ್ ಪೋಲೋ”ಗೆ ಸಕಲ ಸಿದ್ಧತೆ ಮಾಡಿಕೊಂಡರು. ಕಾರ್ಯಾಚರಣೆಗೆ ಒಂದು ದಿನ ಮೊದಲು ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್‌ನ ಭದ್ರತಾ ಸಮಿತಿ, ಮೂರು ಸೇನಾ ಪಡೆಗಳ ಮುಖ್ಯಸ್ಥರು ಹಾಗೂ ಗೃಹ ಸಚಿವ ಪಟೇಲ್, ರಾಜ್ಯ ಕಾರ್ಯದರ್ಶಿ ಮೆನನ್ ಹಾಗೂ ಮೌಲಾನಾ ಆಝಾದ್ ಒಳಗೊಂಡ ಸಭೆ ನಡೆಯಿತು. ಅದು ಸಭೆಯಾಗಲಿಲ್ಲ, ಬದಲಿಗೆ ಸರ್ದಾರ್ ಪಟೇಲ್ ಮೇಲಿನ ತಮ್ಮ ದ್ವೇಷ, ಮತ್ಸರ, ಹತಾಶೆ ಕಾರುವ ವೇದಿಕೆಯನ್ನಾಗಿ ಪರಿವರ್ತಿಸಿದರು ನೆಹರು. ಹೀಗೆ ಅವರು ಎಲ್ಲವನ್ನೂ ಕಕ್ಕಿದ ನಂತರ ಪಟೇಲ್ ಮರು ಮಾತನಾಡದೇ ಎದ್ದುಹೋದರು. ನೆಹರು ತೊಡೆ ನಡುಗಿತು. ಬಾಯಿ ಮುಚ್ಚಿಕೊಂಡರು.
1948, ಸೆಪ್ಟೆಂಬರ್ 13ರಂದು ಆಪರೇಷನ್ ಪೋಲೋ ಆರಂಭವಾಯಿತು.
ದಕ್ಷಿಣದ ದಖನ್ ಪ್ರಸ್ಥಭೂಮಿಯಲ್ಲಿ ಗೋವು, ಗೋಟ್‌ಗಳ ಪುಷ್ಕಳ ಭೋಜನ ಮಾಡಿಕೊಂಡಿದ್ದ ಹೈದರಾಬಾದ್‌ನ ನವಾಬ್ ಮೀರ್ ಉಸ್ಮಾನ್ ಅಲಿಖಾನ್ ಹಾಗೂ ಆತನ ಬೆಂಗಾವಲಿಗೆ ನಿಂತಿದ್ದ ಕಾಸಿಂ ರಿಝ್ವಿ ನೇತೃತ್ವದ ರಝಾಕರ್‌ಗಳು ಕಾಲುಕೆರೆದುಕೊಂಡು ಸಂಘರ್ಷಕ್ಕೆ ಬಂದರು. ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಮುಸ್ಲಿಂ ಅಧಿಪತ್ಯಕ್ಕೊಳಗಾಗಿದ್ದ ರಾಜ್ಯ ಹೈದರಾಬಾದಾಗಿತ್ತು. ಅರಬ್, ರೋಹಿಲ್ಲಾ, ಉತ್ತರ ಪ್ರದೇಶದ ಮುಸ್ಲಿಮರು ಹಾಗೂ ಪಠಾಣರನ್ನು ಸೇರಿಸಿಕೊಂಡು 22 ಸಾವಿರ ಸಂಖ್ಯೆಯ ಬಂದೂಕುಧಾರಿ ಸೇನೆ ಯುದ್ಧಕ್ಕೆ ನಿಂತಿತ್ತು. ಇನ್ನು ಸುಮಾರು ಒಂದೂವರೆ ಲಕ್ಷ ಮುಸಲ್ಮಾನರು ಕತ್ತಿ, ಖಡ್ಗ ಹಿಡಿದುಕೊಂಡು ಸಿದ್ಧರಾಗಿದ್ದರು. ಆಗ ಮೇಜರ್ ಜನರಲ್ ಚೌಧರಿಯವರ ನೇತೃತ್ವದಲ್ಲಿ ಸೇನಾ ತುಕಡಿಯನ್ನು ಕಳುಹಿಸಿದ ಪಟೇಲರು, ನಿಜಾಮ ಹಾಗೂ ಅವನ ಬೆಂಬಲಿಗರನ್ನು ಮಟ್ಟಹಾಕಿ, ಹೈದರಾಬಾದನ್ನು ಭಾರತದೊಂದಿಗೆ ವಿಲೀನ ಮಾಡಿದರು. ಅದೂ ಕೇವಲ ನಾಲ್ಕೇ ದಿನಗಳಲ್ಲಿ!  ಪಟೇಲ್ ಸಾಧನೆ ಇಷ್ಟು ಮಾತ್ರವಲ್ಲ, 1947ರ ಸೆಪ್ಟೆಂಬರ್ 25ರಂದು ಕಾಶ್ಮೀರದ ರಾಜ ಹರಿಸಿಂಗ್ ಬಳಿಗೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಜತೆ ವಿ.ಪಿ. ಮೆನನ್‌ರನ್ನು ಕಳುಹಿಸಿ ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿದ ಪತ್ರವನ್ನು ತರಿಸಿಕೊಂಡು ಕಾಶ್ಮೀರ ಪಾಕಿಸ್ತಾನದ ಪಾಲಾಗದಂತೆ ತಡೆದವರೂ ಪಟೇಲರೇ. ಇಂತಹ ಸಾಧನೆ, ಪ್ರಯತ್ನ, ಎದೆಗಾರಿಕೆಯನ್ನು ಕಂಡ ಡಾ. ರಾಜೇಂದ್ರ ಪ್ರಸಾದ್ ಪಟೇಲರನ್ನು ಶ್ಲಾಘಿಸುತ್ತಾ – “ಇಂಥದ್ದೊಂದು ಉದಾಹರಣೆ ನಮ್ಮ ದೇಶದ ಇತಿಹಾಸದಲ್ಲೇ ಇಲ್ಲ, ಅಷ್ಟೇಕೆ ಮಗದೊಂದು ದೇಶದಲ್ಲೂ ಇಂತಹ ಉದಾಹರಣೆಯನ್ನು ಕಾಣಲು ಸಾಧ್ಯವಿಲ್ಲ” ಎಂದಿದ್ದರು! ಸಾಯುವ ಮೊದಲೂ ಅಂದರೆ 1950, ನವೆಂಬರ್ 7ರಂದು ಪ್ರಧಾನಿ ನೆಹರುಗೆ ಪತ್ರ ಬರೆದು ಚೀನಾದ ಅಪಾಯದ ಬಗ್ಗೆ ಎಚ್ಚರಿಸಿದ್ದರು. ಭಾರತ ಎಂತಹ ಪರಿಸ್ಥಿತಿಗೂ ಸಿದ್ಧವಾಗಿರಬೇಕು ಎಂದು ಸಲಹೆ ನೀಡಿದ್ದರು.
ಇಂತಹ ವ್ಯಕ್ತಿಯೇ ದೇಶದ ಮೊದಲ ಪ್ರಧಾನಿ ಆಗಬೇಕೆಂದು ಆಗಿನ ಕಾಂಗ್ರೆಸ್ ಕೂಡ ಸರ್ವಾನುಮತದಿಂದ ಒಪ್ಪಿದ್ದನ್ನು ಈಗ ತಳ್ಳಿಹಾಕಲು ಸಾಧ್ಯವೇ?
ಅದು 1946. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಾಡಾಗಿತ್ತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವುದೂ ಖಾತ್ರಿಯಾಗಿತ್ತು. ಹಾಗಾಗಿ ಯಾರು ಆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಅವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುತ್ತಾರೆ ಎಂದಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 16ರಲ್ಲಿ 13 ರಾಜ್ಯಗಳು ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ಸೂಚಿಸಿದವು. ಇನ್ನೇನು ಪಟೇಲ್ ಅಧ್ಯಕ್ಷರಾಗುತ್ತಾರೆ, ಮೊದಲ ಪ್ರಧಾನಿಯೂ ಅವರೇ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ ಪಟೇಲರನ್ನು ಕರೆಸಿಕೊಂಡ “ಮಹಾತ್ಮ” ಗಾಂಧೀಜಿ, “ಚುನಾವಣೆಗೆ ನಿಲ್ಲಬೇಡ, ಬದಲಿಗೆ ಜವಾಹರಲಾಲ ನೆಹರು ಉಮೇದುವಾರಿಕೆಗೆ ಬೆಂಬಲ ನೀಡು” ಎಂದು ಮನವಿ ಮಾಡಿಕೊಂಡರು. ಅಂದು ಗಾಂಧೀಜಿಯವರ ಸಣ್ಣತನಕ್ಕೆ ಪ್ರತಿಯಾಗಿ ಪಟೇಲ್ ಅದೇ ತೆರನಾದ ಸಣ್ಣತನ ತೋರಲಿಲ್ಲ, ಮರುಮಾತನಾಡದೇ, ಮರುಯೋಚನೆ ಮಾಡದೆ ನಿಜವಾದ ಮಹಾತ್ಮನಂತೆ ಗಾಂಧೀಜಿ ಮನವಿಗೆ ಓಗೊಟ್ಟರು. ಹಾಗಂತ ಸರ್ದಾರ್ ಪಟೇಲ್ ನೆಹರು ಅವರಂತೆ ಸ್ವಾರ್ಥಿ, ಅಧಿಕಾರ ಲಾಲಸಿಯಾಗಿರಲಿಲ್ಲ, ಗಾಂಧೀಜಿಯವರಂತೆ ನಾನು, ನಾನು ಹೇಳಿದ್ದೇ ನಡೆಯಬೇಕು ಎಂಬ ಹಠವಾದಿಯೂ ಆಗಿರಲಿಲ್ಲ. ಅವರಿಗೆ ಮುಖ್ಯವಾಗಿದ್ದಿದ್ದು ದೇಶದ ಹಿತ ಮಾತ್ರ. ಅದಕ್ಕೆ ಯಾರೇ ವಿರುದ್ಧವಾಗಿದ್ದರೂ ಸಹಿಸುತ್ತಿರಲಿಲ್ಲ. 1942ರಲ್ಲಿ ಕ್ವಿಟ್ ಇಂಡಿಯಾ ಅಥವಾ ಚಲೇ ಜಾವ್ ಅಥವಾ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದಾಗ ಬ್ರಿಟಿಷರು ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರನ್ನೂ ಬಂಧಿಸಿ ಜೈಲಿಗೆ ತಳ್ಳಿದರು. ಅವರು ಮತ್ತೆ ಬಿಡುಗಡೆಯಾಗಿದ್ದು 3 ವರ್ಷಗಳ ನಂತರ. ಹಾಗೆ ಹೊರಬರುವ ಮುನ್ನ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿ ಮುಸ್ಲಿಂ ಲೀಗ್‌ನ ನಾಯಕರು ಭಾರತ ಸ್ವತಂತ್ರಗೊಳ್ಳುವುದಕ್ಕೇ ಅಡ್ಡಿಯಾದರು. ಆಗ ಮುಸಲ್ಮಾನರ ವಿರುದ್ಧ, We shall fight all those who came in the way of India’s freedom, ಭಾರತ ಸ್ವತಂತ್ರಗೊಳ್ಳುವುದಕ್ಕೆ ಯಾರೇ ಅಡ್ಡಿಯಾದರೂ ಅವರನ್ನು ಮೆಟ್ಟಿ ಗುರಿ ಮುಟ್ಟುತ್ತೇವೆ ಎಂದು ಗುಡುಗಿದ ಏಕಮಾತ್ರ ಕಾಂಗ್ರೆಸಿಗ ಪಟೇಲ್!
ಇಂತಹ ಸರ್ದಾರ್ ಪಟೇಲ್, ಮೊದಲ ಪ್ರಧಾನಿಯಾಗಿದ್ದರೆ ನಮ್ಮ ದೇಶದ ಭವಿಷ್ಯವೇ ಬದಲಾಗುತ್ತಿತ್ತು ಎಂದು ಹೇಳಿದರೆ ಅತಿಶಯೋಕ್ತಿಯೆನಿಸುತ್ತದೆಯೇ ಹೇಳಿ? ನಾಡಿದ್ದು ಭಾನುವಾರ ಸರ್ದಾರ್ ಪಟೇಲ್ ಸ್ವರ್ಗಸ್ಥರಾಗಿ 63 ವರ್ಷಗಳಾಗುತ್ತವೆ. ವಿಶ್ವದಲ್ಲೆಯೇ ಅತಿ ಎತ್ತರದ ಪಟೇಲ್ ಪ್ರತಿಮೆ ನಿರ್ಧಾರಕ್ಕೆ ನರೇಂದ್ರ ಮೋದಿ ಮುಂದಾಗಿದ್ದು, ಅದಕ್ಕಾಗಿ ಭಾನುವಾರ “ಏಕತೆಗಾಗಿ ಓಟ” ಎಂಬ ಮ್ಯಾರಾಥಾನ್ ನಡೆಯಲಿದೆ. ಇದೊಂದು ಆಂದೋಲನವಾಗಿದ್ದು 2014, ಜನವರಿ 26ರಂದು ಪೂರ್ಣಗೊಳ್ಳಲಿದೆ. ಒಟ್ಟು 700 ಕಡೆ ನಡೆಯುವ ಈ ಮ್ಯಾರಾಥಾನ್‌ನಲ್ಲಿ ಪಾಲ್ಗೊಳ್ಳುವುದು ನಾವು ಅವರಿಗೆ ತೋರುವ ಗೌರವವೆಂದರೆ ತಪ್ಪಾಗದು. ಭಾನುವಾರ ಗುಜರಾತ್‌ನ ವಡೋದರಾದಲ್ಲಿ ಉದ್ಘಾಟನೆಯಾಗುವ ಈ ಮ್ಯಾರಾಥಾನ್‌ಗೆ ಈವರೆಗೂ 1.85 ಲಕ್ಷ ಜನರ ಹೆಸರು ನೊಂದಾಯಿಸಿಕೊಂಡಿದ್ದಾರೆಂದರೆ ಈ ದೇಶವಾಸಿಗಳ ಹೃದಯದಲ್ಲಿ ಸರ್ದಾರ್ ಪಟೇಲ್‌ಗೆ ಎಂಥ ಸ್ಥಾನವಿದೆ ಎಂಬುದನ್ನು ಸೂಚಿಸುವುದಿಲ್ಲವೆ?!

Thursday, 28 May 2015

ಬಂದೇ ಬರತಾವ ಕಾಲ... / Bande barataava kaala

ಬಂದೇ ಬರತಾವ ಕಾಲ
 ಮಂದಾರ ಕನಸನು
 ಕಂಡಂಥ ಮನಸನು
 ಒಂದು ಮಾಡುವ ಸ್ನೇಹಜಾಲ
                              - ಬಂದೇ ಬರತಾವ ಕಾಲ
 ಮಾಗಿಯ ಎದೆ ತೂರಿ
 ಕೂಗಿತೊ ಕೋಗಿಲ,
ರಾಗದ ಚಂದಕೆ
 ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
 ಸಾಗದು ಬಾಳು ಏಕಾಕಿ ಎನುತಾವ
                             - ಬಂದೇ ಬರತಾವ ಕಾಲ
 ಹುಣ್ಣಿಮೆ ಬಾನಿಂದ
 ತಣ್ಣನೆ ಸವಿಹಾಲು
 ಚೆಲ್ಲಿದೆ ಮೆಲ್ಲನೆ
 ತೊಯಿಸಿದೆ ಬುವಿಯನು
 ಮುಸುಕಿದೆ ಮಾಯೆ ಜಗವನು
 ಬುವಿ ಬಾನು ಸೇರಿ ಹರಸ್ಯಾವ ಬಾಳನು
                            - ಬಂದೇ ಬರತಾವ ಕಾಲ
                                                          
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Monday, 25 May 2015

ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!


ಖ್ಯಾತ ವಿಜ್ಞಾನಿ ಸಿಎನ್‌ಆರ್ ರಾವ್ ಹಾಗೂ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಈ ದೇಶದ ಮೇರು ಪುರಸ್ಕಾರವಾದ ಭಾರತ ರತ್ನವನ್ನು ಅತ್ಯಂತ ಧನ್ಯತೆಯಿಂದ ಸ್ವೀಕರಿಸಿದರು. 2013 ನವೆಂಬರ್ 16ರಂದು ಈ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗಲೂ ರಾವ್ ಹಾಗೂ ಸಚಿನ್ ಸರ್ಕಾರಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ.

ಆದರೆ ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!
ಈ ಪುರಸ್ಕಾರ ಪ್ರಾರಂಭವಾಗಿದ್ದು 1954ರಲ್ಲಿ. ಮೊದಲನೇ ಸಲ ಸಿ. ರಾಜಗೋಪಾಲಚಾರಿ, ಸಿ.ವಿ. ರಾಮನ್ ಹಾಗೂ ರಾಧಾಕೃಷ್ಣನ್‌ಗೆ ಭಾರತ ರತ್ನವನ್ನು ಕೊಡಲಾಯಿತು. 1955ರ ಸಾಲಿನ ಪುರಸ್ಕಾರ ಘೋಷಣೆಯಾದಾಗ ನಮ್ಮ ಕನ್ನಡ ನಾಡಿನ ಸುಪುತ್ರ ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರಿತ್ತು. ಈ ದೇಶದ ಶ್ರೇಷ್ಠ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆಯಲ್ಲಾ ಎಂದು ಹಿರಿಹಿರಿ ಹಿಗ್ಗುವ ಬದಲು, "ಅತ್ಯಂತ ಶ್ರೇಷ್ಠ ನಾಗರಿಕ ಪುರಸ್ಕಾರವನ್ನು ನೀಡಿದ್ದಕ್ಕೆ ಪ್ರತಿಯಾಗಿ ನಾನು ನಿಮ್ಮ ಸರ್ಕಾರವನ್ನು ಹೊಗಳಬೇಕೆಂದು ನಿರೀಕ್ಷಿಸಬೇಡಿ. ನಾನು ಈಗಲೂ, ಮುಂದೆಯೂ ನಿಮ್ಮ ಟೀಕಾಕಾರನೇ" ಎಂದುಬಿಟ್ಟರು ವಿಶ್ವೇಶ್ವರಯ್ಯ. "ನಿಮ್ಮ ಬೌದ್ಧಿಕ ಸಮಗ್ರತೆ, ಸಾಮರ್ಥ್ಯ, ಸಾಧನೆ, ನಿಷ್ಪಕ್ಷಪಾತ ಧೋರಣೆಯನ್ನು ಗಣನೆಗೆ ತೆಗೆದುಕೊಂಡು ಭಾರತ ರತ್ನವನ್ನು ನಿಮಗೆ ನೀಡಲಾಗುತ್ತಿದೆ. ದಯವಿಟ್ಟು ಸ್ವೀಕರಿಸಿ" ಎಂದು ಪ್ರಧಾನಿ ನೆಹರು ಅರಿಕೆ ಮಾಡಿಕೊಳ್ಳಬೇಕಾಗಿ ಬಂತು.
ಒಮ್ಮೆ ಹೀಗೂ ಆಗಿತ್ತು. ಅದು 1947. ಆಖಿಲ ಭಾರತ ಉತ್ಪಾದಕರ ಸಂಘಟನೆಯ ವಾರ್ಷಿಕ ಸಭೆ ಆಯೋಜನೆಯಾಗಿತ್ತು ಹಾಗೂ ಅದನ್ನು ಪ್ರಧಾನಿ ಜವಾಹರಲಾಲ್ ನೆಹರು ಉದ್ಘಾಟನೆ ಮಾಡಿದರು. ಅದೇ ವೇದಿಕೆಯಲ್ಲಿದ್ದ ವಿಶ್ವೇಶ್ವರಯ್ಯನವರು ಮಾತಿಗೆ ನಿಂತರು. ಕೈಗಾರಿಕೆಗಳ ವಿಷಯದಲ್ಲಿ ಸರ್ಕಾರ ತೋರುತ್ತಿದ್ದ ಉದಾಸೀನ ಧೋರಣೆಯನ್ನು ಹಿಗ್ಗಾಮುಗ್ಗಾ ಟೀಕಿಸಲಾರಂಭಿಸಿದರು. ಇತ್ತ ಕೋಪೋದ್ರಿಕ್ತರಾಗಿ ನೆಹರು ತುಟಿಕಚ್ಚಿಕೊಳ್ಳುತ್ತಿರುವುದನ್ನು ನೆರೆದಿದ್ದವರೆಲ್ಲ ನೋಡಿದರು. ಮೊದಲೇ ಹಮ್ಮು-ಬಿಮ್ಮಿನ, ಸೊಕ್ಕಿನ ಮನುಷ್ಯನಾಗಿದ್ದ ನೆಹರು ಅವರು, ವಿಶ್ವೇಶ್ವರಯ್ಯನವರ ಭಾಷಣ ಮುಗಿಯುತ್ತಲೇ ಮೈಕ್‌ನತ್ತ ಧಾವಿಸಿದರು. ಅಷ್ಟೇ ಪರಿಣಾಮಕಾರಿಯಾಗಿ ಪ್ರತಿದಾಳಿ ಮಾಡಿದರು. ಹಾಗಂತ ವಿಶ್ವೇಶ್ವರಯ್ಯನವರು ದಿಗ್ಭ್ರಮೆಗೊಳಗಾಗಲಿಲ್ಲ, ನೆಹರು ಅವರನ್ನು ಮಧ್ಯದಲ್ಲೇ ತಡೆದು ಸೂಕ್ತ ಮಾರುತ್ತರ ಕೊಟ್ಟರು. ಇಡೀ ವಾತಾವರಣವೇ ಬಿಸಿಯಾಯಿತು. ಆದರೂ ವಿಶ್ವೇಶ್ವರಯ್ಯನವರು ಪ್ರಧಾನಿಗೆ ಸೂಕ್ತ ಉತ್ತರ ಕೊಡದೆ ಸುಮ್ಮನಾಗಲಿಲ್ಲ.
ಅಂಥ ವ್ಯಕ್ತಿತ್ವ ವಿಶ್ವೇಶ್ವರಯ್ಯನವರದ್ದು!
"ಈ ದೇಶದಲ್ಲಿ ಯೋಜನೆ ಅನ್ನೋ ಒಟ್ಟಾರೆ ಕಲ್ಪನೆ ಆರಂಭವಾಗಿದ್ದೇ ವಿಶ್ವೇಶ್ವರಯ್ಯನವರಿಂದ. ನಮ್ಮ ಕೈಗಾರಿಕಾ ಕ್ರಾಂತಿ ಅನ್ನುವುದು ಏನಿದೆ ಅದರ ಪ್ರಗತಿಯ ಮೂಲ ಪ್ರೇರಣೆ ವಿಶ್ವೇಶ್ವರಯ್ಯನವರ ಯೋಚನೆ, ಚಿಂತನೆಗಳಾಗಿವೆ" ಎಂದಿದ್ದರು ನಮ್ಮ ದೇಶದ ಜನಪ್ರಿಯ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್. ವಿಶ್ವೇಶ್ವರಯ್ಯನವರಿಗೆ ಗಾಂಧೀಜಿ ಬಗ್ಗೆ, ಗಾಂಧೀಜಿಗೆ ವಿಶ್ವೇಶ್ವರಯ್ಯನವರ ಬಗ್ಗೆ ಅಪಾರ ಗೌರವಾದರಗಳಿದ್ದವು. ಆದರೂ ವಿಶ್ವೇಶ್ವರಯ್ಯನವರು ಗಾಂಧೀಜಿಯವರ ಆರ್ಥಿಕ ಚಿಂತನೆಗಳ ಕಟ್ಟಾ ವಿರೋಧಿಯಾಗಿದ್ದರು. ಗಾಂಧಿಯವರ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ವಿಶ್ವೇಶ್ವರಯ್ಯನವರು ಸಾರಾಸಗಟಾಗಿ ತಿರಸ್ಕರಿಸಿ ದ್ದರು. ಅದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ, ಭಾರೀ ಪ್ರಮಾಣದ ಕೈಗಾರಿಕೀಕರಣದಿಂದಷ್ಟೇ ದೇಶ ಮುಂದುವರಿಯಲು ಸಾಧ್ಯ ಎಂದು ನಂಬಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ವಿಶ್ವೇಶ್ವರಯ್ಯನವರಿಗೆ ದಾದಾಭಾಯಿ ನವರೋಜಿ, ರಾನಡೆ, ಗೋಖಲೆಯವರ ಜತೆ ತಾಳಮೇಳ ಹೊಂದಿಕೆಯಾಗುತ್ತಿತ್ತೇ ಹೊರತು, ಗಾಂಧಿ, ತಿಲಕರಲ್ಲಲ್ಲ. ಗಾಂಧಿ, ತಿಲಕರು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದು ಪ್ರತಿಪಾದಿಸಿದರೆ, ರಾನಡೆ, ಗೋಖಲೆ, ವಿಶ್ವೇಶ್ವರಯ್ಯನವರು ಮೊದಲಿಗೆ "ಡೊಮಿನಿಯನ್ ಸ್ಟೇಟಸ್‌" ಅಷ್ಟೇ ಸಾಕು ಎನ್ನುತ್ತಿದ್ದರು. ಡೊಮಿನಿಯನ್ ಸ್ಟೇಟಸ್‌ಗೂ ಪೂರ್ಣ ಸ್ವರಾಜ್ಯಕ್ಕೂ ಬಹಳ ವ್ಯತ್ಯಾಸವಿರಲಿಲ್ಲ, ಆದರೆ ವಿಶ್ವೇಶ್ವರಯ್ಯನವರ ವಾದದ ಹಿಂದಿರುವ ಯೋಚನೆ ಗಾಂಧೀಜಿಯವರಂಥ ಭಾವುಕಜೀವಿಗಳಿಗೆ, ಮೊಂಡುವಾದಿಗಳಿಗೆ ಅರ್ಥವಾಗುತ್ತಿರಲಿಲ್ಲ. ಡೊಮಿನಿಯನ್ ಸ್ಟೇಟಸ್ ಎಂದರೆ ಬ್ರಿಟಿಷ್ ಸಾಮ್ರಾಜ್ಯದೊಳಗಿದ್ದುಕೊಂಡು ಸಂಪೂರ್ಣ ಸ್ವಾಯತ್ತೆ ಅನುಭವಿಸುವುದು. ಅಂದರೆ ಅದು ಆಂತರಿಕ ವಿಚಾರವಿರಬಹುದು, ವಿದೇಶಾಂಗ ವಿಷಯವಾಗಿರಬಹುದು ಪ್ರತಿ ರಾಜ್ಯಗಳಿಗೂ ಸಮಾನ ಹಕ್ಕು, ಅಧಿಕಾರವಿರುತ್ತದೆ. ಬ್ರಿಟನ್ ರಾಣಿಗೆ ಅಧೀನವಾಗಿದ್ದರೂ ಬ್ರಿಟಿಷ್ ಕಾಮನ್ವೆಲ್ತ್ ದೇಶಗಳೊಂದಿಗೆ ಮುಕ್ತವಾಗಿ ವ್ಯವಹರಿಸಬಹುದು ಹಾಗೂ ಸಂಬಂಧವಿಟ್ಟುಕೊಳ್ಳಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತಾಂತ್ರಿಕವಾಗಿ ಬ್ರಿಟನ್‌ಗೆ ನಿಷ್ಠೆ ಇಟ್ಟುಕೊಂಡು ಸ್ವತಂತ್ರ ಆಡಳಿತ ನಡೆಸಿಕೊಳ್ಳುವುದು. ಇಂಥ ಡೊಮಿನಿಯನ್ ಸ್ಟೇಟಸ್‌ಗೆ ಒತ್ತಾಯಿಸಿದ್ದರ ಹಿಂದೆ ಕೂಡ ಒಂದು ಒಳ್ಳೆಯ ಯೋಚನೆ ಇತ್ತು!
1. ಒಂದು ಚುನಾಯಿತ ಭಾರತೀಯ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡುವಂತೆ ಸುಲಭವಾಗಿ ಬ್ರಿಟಿಷರನ್ನು ಮನವೊಲಿಸಬಹುದು.
2. ಸೇನೆ, ಆಡಳಿತಶಾಹಿಯ ಭಾರತೀಕರಣದಂಥ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು, ಪ್ರಿನ್ಸ್ಲಿ ಸ್ಟೇಟ್ಸ್(ಅಧೀನ ಸಂಸ್ಥಾನ)ಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳುವಂತೆ ಮಾಡಲು, ಕೋಮು ವಿವಾದವನ್ನು(ಧರ್ಮದ ಆಧಾರದ ಮೇಲೆ ದೇಶ ವಿಭಜನೆ) ಬಗೆಹರಿಸಿಕೊಳ್ಳಲು ಭಾರತಕ್ಕೆ ಸಾಕಷ್ಟು ಸಮಯ ಸಿಗುತ್ತದೆ.
3. ಇವುಗಳನ್ನು ಸರಿಪಡಿಸಿಕೊಳ್ಳುವ ಜತೆಗೆ ಬಾಹ್ಯ ಆಕ್ರಮಣ, ಬೆದರಿಕೆಗಳಿಗೆ ಸೂಕ್ತ ರಕ್ಷಣೆಯನ್ನು ಸಿದ್ಧಪಡಿಸಿಕೊಳ್ಳಲೂ ಕಾಲಾವಕಾಶ ಸಿಗುತ್ತದೆ.
ನಮಗೆ ಪೂರ್ಣ ಸ್ವರಾಜ್ಯ (ಸ್ವಾತಂತ್ರ್ಯ) ಸಿಕ್ಕಿದ ಮರುಕ್ಷಣವೇ ಸೃಷ್ಟಿಯಾದ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಪೂರ್ಣ ಸ್ವರಾಜ್ಯ ಸಿಕ್ಕಿದ್ದೇ ಕಡೇ ಕ್ಷಣದಲ್ಲಿ ದೇಶ ವಿಭಜನೆಗೆ ಒಪ್ಪಿದ ಕಾರಣ. ಅದರ ಬೆನ್ನಲ್ಲೇ ರಕ್ತಪಾತವಾಯಿತು. ಪಾಕಿಸ್ತಾನದಿಂದ ಬಂದ ರೈಲುಗಳಲ್ಲಿ ಸಿಖ್ಖರ, ಹಿಂದುಗಳ ಹೆಣಗಳೇ ಹೆಚ್ಚು ತುಂಬಿರುತ್ತಿದ್ದವು. ಬ್ರಿಟನ್ ರಾಣಿಗೆ ನಿಷ್ಠನಾಗಿದ್ದ ಲಾರ್ಡ್ ಮೌಂಟ್ ಬ್ಯಾಟನ್‌ರನ್ನೇ ಭಾರತ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಬೇಡಬೇಕಾದ ದುಸ್ಥಿತಿ ಎದುರಾಯಿತು. ಅಧೀನ ಸಂಸ್ಥಾನಗಳು, ನಿಜಾಮ, ಪೋರ್ಚುಗೀಸರನ್ನು ಬಗ್ಗುಬಡಿದು ಭಾರತದ ಎಲ್ಲ ಭಾಗಗಳೂ ಸ್ವತಂತ್ರಗೊಳ್ಳುವಷ್ಟರಲ್ಲಿ 1962 ಬಂತು. ಅಷ್ಟರಲ್ಲಿ, ಪಾಕಿಸ್ತಾನ ಒಂದಷ್ಟು, ಚೀನಾ ಮತ್ತೊಂದಿಷ್ಟನ್ನು ಕಬಳಿಸಿದ್ದವು. ಇಂಥ ಅಪಾಯಗಳನ್ನು ಮುಂದಾಗಿ ಊಹಿಸಿದ್ದ ಮಹಾನುಭಾವ ವಿಶ್ವೇಶ್ವರಯ್ಯನವರು. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡದೇ ಇರಬಹುದು, ಆದರೆ ಸ್ವತಂತ್ರ ಭಾರತಕ್ಕೆ ಹೇಗೆ ಅಡಿಗಲ್ಲು ಇಡಬೇಕು, ಹೇಗೆ ನಿರ್ಮಾಣ ಮಾಡಬೇಕು ಎಂಬುದನ್ನು ಯೋಚಿಸಿದ್ದರು. ವಿಶ್ವೇಶ್ವರಯ್ಯನವರ ಪಾಲಿಗೆ ಡೊಮಿನಿಯನ್ ಸ್ಟೇಟ್ಸ್‌ಗಾಗಿನ ಒತ್ತಾಯ ಭಾರತವನ್ನು ಆರ್ಥಿಕವಾಗಿ ಪುನರ್ ನಿರ್ಮಾಣ ಮಾಡುವುದಾಗಿತ್ತು ಹಾಗೂ ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಡೊಮಿನಿಯನ್ ಸ್ಟೇಟ್ ಆಗಿದ್ದ ಕೆನಡಾ ಬ್ರಿಟಿಷರ ಅಧೀನದಲ್ಲಿದ್ದೇ ಹೇಗೆ ಉದ್ಧಾರವಾಯಿತು ಎಂಬುದು ನಮಗೆ ತಿಳಿದಿಲ್ಲವೆ?
ನಮ್ಮ ಮಿಲಿಟರಿ ಬಗ್ಗೆಯೂ ಅವರಿಗೆ ಮೂರು ಕನಸ್ಸುಗಳಿದ್ದವು!
1. ಬಾಹ್ಯ ಶಕ್ತಿಗಳ ಆಕ್ರಮಣದಿಂದ ರಕ್ಷಣೆ
2. ಹುಟ್ಟಾ ಸೋಮಾರಿಗಳಾಗಿದ್ದ ಭಾರತೀಯರಿಗೆ ಕಡ್ಡಾಯ ಮಿಲಿಟರಿ ತರಬೇತಿ ನೀಡಿ ಶಿಸ್ತುಬದ್ಧ ಜೀವನಕ್ಕೆ ತಯಾರಿ ಮಾಡುವುದು
3. ಮಿಲಿಟರಿ ಎಂದರೆ ಒಂದು ದೊಡ್ಡ ಮಾರುಕಟ್ಟೆ. ಬೃಹತ್ ಕೈಗಾರಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಮಿಲಿಟರಿ ಉಪಕರಣಗಳ ತಯಾರಿ ಭಾರೀ ಕೈಗಾರಿಕಾ ಉತ್ಪಾದನೆಗೆ, ಉಕ್ಕಿನ ಬೇಡಿಕೆಗೆ ದಾರಿ ಮಾಡಿಕೊಡುತ್ತದೆ. ಜತೆಗೆ ಅಪಾರ ಉದ್ಯೋಗ ಸೃಷ್ಟಿಯಾಗುತ್ತದೆ.
1920ರ ದಶಕದಲ್ಲೇ ವಿಶ್ವೇಶ್ವರಯ್ಯನವರು ಹೀಗೆಲ್ಲಾ ಯೋಚಿಸಿದ್ದರು! ಇತ್ತೀಚೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತೆರೆದಿಟ್ಟ "ರೈನ್‌ಬೋ" ನೀತಿ ಹಾಗೂ ಅವರು ಆಗಾಗ್ಗೆ ಮಾತನಾಡುವ ಡಿಫೆನ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕೂಡ ಇದೇ ಆಗಿದೆ. ಇನ್ನು ಮೋದಿ ಹೇಳುವ "ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್‌" (ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ) ಹಾಗೂ ಖಾಸಗಿ ಕ್ಷೇತ್ರಕ್ಕೆ ಉತ್ತೇಜನದ ವಿಷಯ ತೆಗೆದುಕೊಳ್ಳಿ ಅಥವಾ ಅಟಲ್ ಬಿಹಾರಿ ವಾಜಪೇಯಿಯವರು ಬಂಡವಾಳ ಹಿಂತೆಗೆತ ಖಾತೆ ವಿಷಯ ನೋಡಿ ಅಥವಾ ಬಿಳಿ ಆನೆಗಳಾಗಿರುವ ಇಂಡಿಯನ್ ಏರಲೈನ್ಸ್ ಮತ್ತು ಏರ್ ಇಂಡಿಯಾಗಳ ಖಾಸಗೀಕರಣಕ್ಕಾಗಿನ ಕೂಗು ತೆಗೆದುಕೊಳ್ಳಿ... ರಾಷ್ಟ್ರೀಕರಣ ಎಂಬ ಕಲ್ಪನೆಯನ್ನು, ಯದ್ವಾತದ್ವಾ ರಾಷ್ಟ್ರೀಕರಣ ಮಾಡುವುದನ್ನು ಮೊದಲು ವಿರೋಧಿಸಿದ್ದೇ ವಿಶ್ವೇಶ್ವರಯ್ಯ. ತಮ್ಮ ವಾದಕ್ಕೆ ಸರ್ದಾರ್ ಪಟೇಲರ ಬೆಂಬಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು. ಆದರೂ ಪ್ರಧಾನಿ ಜವಾಹರಲಾಲ್ ನೆಹರು 1953ರಲ್ಲಿ ಟಾಟಾ ಏರ್‌ಲೈನ್ಸನ್ನು ರಾಷ್ಟ್ರೀಕರಣ ಮಾಡಲು ಮುಂದಾದರು. ಆಗ ಭಾರತದಲ್ಲಿ ನಾಗರಿಕ ವಿಮಾನಯಾನವೆಂಬುದೇ ಇರಲಿಲ್ಲ. ಜೆ.ಆರ್.ಡಿ. ಟಾಟಾ ಅವರು ಮಿಲಿಟರಿ ಸಾಗಣೆ ವಿಮಾನಗಳನ್ನು ಖರೀದಿಸಿ, ಖರೀದಿಗಿಂತ ಹೆಚ್ಚು ಹಣ ವೆಚ್ಚ ಮಾಡಿ ಅವುಗಳನ್ನು ಜನಸಾಗಣೆ ವಿಮಾನಗಳನ್ನಾಗಿ ಮಾಡಿ ದೇಶದಲ್ಲಿ ಯಶಸ್ವಿ ನಾಗರಿಕ ವಿಮಾನಯಾನವನ್ನು ರೂಪಿಸಿದ್ದರು. ಅಂತಹ ಪರಿಶ್ರಮ ಹಾಗೂ ಉದ್ಯಮಶೀಲತೆಗೆ ಕಿಂಚಿತ್ತೂ ಬೆಲೆ ಕೊಡದೆ ನೆಹರು ರಾಷ್ಟ್ರೀಕರಣ ಮಾಡಿದರು, ಟಾಟಾ ತುಂಬಾ ನೊಂದುಕೊಂಡರು. ಇಂಥ ರಾಷ್ಟ್ರೀಕರಣವನ್ನು ಖಡಾಖಂಡಿತವಾಗಿ ವಿರೋಧಿಸಿದ ಗಟ್ಟಿಗ ವಿಶ್ವೇಶ್ವರಯ್ಯ. ಸರ್ಕಾರ ಎಲ್ಲ ವಿಷಯಗಳ ಮೇಲೂ ಸಂಪೂರ್ಣ ನಿಯಂತ್ರಣ ಹಾಗೂ ಅಧಿಕಾರ ಇಟ್ಟುಕೊಳ್ಳಬಾರದು ಎಂಬ ತಮ್ಮ ವಾದಕ್ಕೆ 1946ರಲ್ಲೇ ಪಟೇಲ್, ಗಾಂಧೀಜಿಯವರ ಸಹಮತಿಯನ್ನೂ ಪಡೆದುಕೊಂಡಿದ್ದರು.
ವಿಶ್ವೇಶ್ವರಯ್ಯ ಎಂದ ಕೂಡಲೇ ಕೇವಲ ಒಬ್ಬ ವಿಜ್ಞಾನಿ, ಒಳ್ಳೆಯ ದಿವಾನ, ಒಳ್ಳೆಯ ಆಡಳಿತಗಾರ ಎಂದಷ್ಟೇ ಭಾವಿಸಬೇಡಿ. 20ನೇ ಶತಮಾನದ ಭಾರತದ ಇತಿಹಾಸದಲ್ಲಿ ಅರ್ಥವ್ಯವಸ್ಥೆ ಹಾಗೂ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಅವರಷ್ಟು ದೂರದೃಷ್ಟಿ ಹೊಂದಿದ್ದ ಇನ್ನೊಬ್ಬ ವ್ಯಕ್ತಿ ಭಾರತದಲ್ಲಿ ಜನಿಸಲಿಲ್ಲ. ಗಾಂಧೀಜಿಯವರ ಗ್ರಾಮಸ್ವರಾಜ್ಯವೆಂಬ ಆರ್ಥಿಕ ಚಿಂತನೆಯನ್ನು ತಿರಸ್ಕರಿಸುತ್ತಾ, "ನಾವು ಅತ್ಯಂತ ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಕಳೆದ 300 ವರ್ಷಗಳಲ್ಲಿ ನಾವು ಕಂಡಿದ್ದಕ್ಕಿಂತ ವೇಗದ, ಅಭೂತಪೂರ್ವ ಬದಲಾವಣೆಯನ್ನು ಹಿಂದಿನ ಕೇವಲ 40 ವರ್ಷಗಳಲ್ಲಿ ಕಂಡಿದ್ದೇವೆ. ವೈಜ್ಞಾನಿಕ ಸಂಶೋಧನೆ ಹಾಗೂ ತಾಂತ್ರಿಕ ಶೋಧನೆ ಹೊಸ ಶಕೆಗೆ ಜನ್ಮ ನೀಡಿದೆ..." ಎಂದಿದ್ದರು.
1917ರಲ್ಲಿ ವೈಸರಾಯ್ ಲಾರ್ಡ್ ಚೆಮ್ಷ್‌ಫರ್ಡ್ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಬ್ರಿಟನ್‌ನಿಂದ ನಿಯುಕ್ತಿಯಾಗಿದ್ದ ಮಾಂಟೆಗು ಭಾರತದ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದ ವಿಶ್ವೇಶ್ವರಯ್ಯನವರು ಕೆಲವೊಂದು ಸಾಂವಿಧಾನಿಕ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ ಎಂದರು. ಅವುಗಳನ್ನು ಕೇಳಿ ಮಾಂಟೆಗು ಎಷ್ಟು ಮನಸೋತರೆಂದರೆ 1920ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದ ವಿಶ್ವೇಶ್ವರಯ್ಯವರಿಗೆ ಶಾಸನ ಸಭೆಯ ಸದಸ್ಯತ್ವವನ್ನು ನೀಡಲು ಮುಂದಾದರು. ಆದರೆ ಅದನ್ನು ತಿರಸ್ಕರಿಸಿದ ವಿಶ್ವೇಶ್ವರಯ್ಯನವರು ನನಗೆ ಶಾಸನಸಭೆಯಲ್ಲಿ ಕೂರುವುದಕ್ಕೆ ಬದಲು ರಚನಾತ್ಮಕ ಕೆಲಸ ಮಾಡುವುದು ಇಷ್ಟ ಎಂದರು. ವಿಶ್ವೇಶ್ವರಯ್ಯನವರು  ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆಯನ್ನು ನಿರ್ಮಾಣ ಮಾಡಿದಾಗ ಮೊದಲು ಅಚ್ಚುಹಾಕಿದ್ದು ಗಣೇಶನನ್ನು! ಗಣೇಶ ವಿಘ್ನನಿವಾರಕನಾದರೆ, ಮೈಸೂರು, ಮಂಡ್ಯ, ಚಾಮರಾಜನಗರಗಳನ್ನು ಹಸಿರಾಗಿಸಿದ, ಬೆಂಗಳೂರನ್ನು ಬೆಳಗಿದ ಹಾಗೂ ದಾಹವನ್ನೂ ನೀಗಿದ, ಹಿಂದುಸ್ಥಾನ್ ಏರ್‌ಕ್ರಾಫ್ಟ್‌ಫ್ಯಾಕ್ಟರಿ ಸ್ಥಾಪನೆ ಮಾಡುವಂತೆ ಮಾಡುವ ಮೂಲಕ ಬೆಂಗಳೂರಿಗೆ ವಿಮಾನ ತಂದ, ಪ್ರಿಮಿಯರ್ ಆಟೋಮೊಬೈಲ್ ಕಂಪನಿ ಭಾರತಕ್ಕೆ ಆಗಮಿಸುವಂತೆ ಮಾಡಿ ಕಾರು ಉತ್ಪಾದನೆಗೆ ದಾರಿ ಮಾಡಿಕೊಟ್ಟ ಈ ದೇಶದ ಸುಪುತ್ರ ವಿಶ್ವೇಶ್ವರಯ್ಯ. ಇಂಥ ವಿಶ್ವೇಶ್ವರಯ್ಯನವರ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಬಹಳ ಪ್ರಚಲಿತದಲ್ಲಿರುವುದು ಸ್ವತಃ ಅವರೇ ಬರೆದ ಹಾಗೂ ಗಜಾನನ ಶರ್ಮ ಅವರು ಕನ್ನಡಕ್ಕೆ ತಂದಿರುವ "ನನ್ನ ವೃತ್ತಿ ಜೀವನದ ನೆನಪುಗಳು" ಕೃತಿ. ಇತ್ತ ಉದ್ಯಮಿಯಾಗಿದ್ದರೂ ಓದಿನ ಗೀಳು ಇಟ್ಟುಕೊಂಡಿರುವ ಶ್ರೀನಾಥ್ ಎಚ್.ಎಸ್. ಅವರು ಬಹಳ ತಡಕಾಡಿ, ಸಂಶೋಧಿಸಿ "ಭಾರತ ರತ್ನ ವಿಶ್ವೇಶ್ವರಯ್ಯ: ಹಿಸ್ ಇಕನಾಮಿಕ್ ಕಾಂಟ್ರಿಬ್ಯೂಶನ್ ಆ್ಯಂಡ್ ಥಾಟ್‌" ಎಂಬ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಇದು ವಿಶ್ವೇಶ್ವರಯ್ಯನವರ ಆರ್ಥಿಕ ಕೊಡುಗೆ, ಚಿಂತನೆಗಳನ್ನು ಸವಿಸ್ತಾರವಾಗಿ ಕಟ್ಟಿಕೊಡುತ್ತದೆ. ಪುಸ್ತಕ ನಾಳೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಗೋಖಲೆ ಇನ್ಸ್‌ಟಿಟ್ಯೂಟಿನಲ್ಲಿ ಬೆಳಗ್ಗೆ 10.30 ಗಂಟೆಗೆ ಬಿಡುಗಡೆಯಾಗಲಿದೆ. ವಿಶ್ವೇಶ್ವರಯ್ಯನವರ ಬಗ್ಗೆ ಓದುವುದು, ತಿಳಿದುಕೊಳ್ಳುವುದೆಂದರೆ ಬದುಕಿಗೊಂದು ಪ್ರೇರಣೆ, ಉತ್ತೇಜನ ದೊರೆತಂತೆ. ಅದು ನಿಮ್ಮದಾಗಲಿ.

Sunday, 24 May 2015

ಸುಡು ಬಯಲ ಗಾಳಿ ನಾನು / Sudu bayala gaali naadu

ಸುಡು ಬಯಲ ಗಾಳಿ ನಾನು
 ಸುಳಿಯೇ ಪರಿಮಳವೇ ನೀನು
 ಕೊರಗಿ ಮರುಗುತಲಿರುವ
 ಕರುಕು ಬಿರುಕಿನ ನೆಲಕೆ
 ಸುರಿಯೆ ಮಳೆಯಾಗಿ ನೀನು ||
ಯಾರು ನೆಟ್ಟರು ಇಲ್ಲಿ
 ಮುಳ್ಳು ಲೋಹದ ಬಳ್ಳಿ
 ಬೇರುಗಳು ಬರಲು ಬರಲು
 ದೂರ ಗಗನದ ನಾಡು
 ಖಾಲಿ ನೀಲಿಯ ಜಾಡು
 ತೋರೆ ಕಾರ್ಮುಗಿಲ ಕುರುಳು ||
ಸಾಕು ಯಾತನೆ ಚಿಂತೆ
 ಲೋಕಗಳು ನನ್ನಂತೆ
 ದೇಕುತಿವೆ ನಿನ್ನ ಕಡೆಗೆ
 ಕರೆಯೇ ಜೀವದ ಗೋವು
 ಮೆರೆಯೇ ಗೋಕುಲವನ್ನು
 ಬೇಕು ನಂದನ ಇಳೆಗೆ ||
                      
- ಹೆಚ್. ಎಸ್. ಶಿವಪ್ರಕಾಶ್           

Wednesday, 13 May 2015

yariguntu....yarigilla..


ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ ||
ಬಂದದ್ದೆಲ್ಲ ಈಸ ಬೇಕಯ್ಯ, ಗೆಣೆಯ
ಕಾಣದ್ದಕ್ಕೆ ಚಿಂತೆ ಯಾಕಯ್ಯ?
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ
ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗ ಬೇಕಯ್ಯ, ಓ! ಗೆಣೆಯ
ಕೈಯ ಚೆಲ್ಲಿ ಕೊರಗ ಬೇಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ
ಪ್ರೀತಿಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ? ಓ! ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ
Video link:
https://www.youtube.com/watch?v=JzGvlA6eymk


yArigunTu yArigilla bALella bEvu bella ||
bandaddella eesa bEkayya, geNeya
kANadakke chinte yAkayya?
gONu hAki kooDa byADa, gattinAge bALa nODa
ELu beeLu iruvudEne illi huTTi banda mEle
sukha duhkha kADOdEne uppu khara tinda mEle
kashTa meTTi sAga bEkayya, O! geNeya
kaiya chelli koraga bEDayya
gONu hAki kooDa byADa, gattinAge bALa nODa
preeti prema naDeda mEle tappOdilla rAsa leele
kaddu mucchi naDeyO vELe manasinalli tooguyyAle
oLage horage yAke bEkayya? O! geNeya
kaNNu teredu lOka nODayya
gONu hAki kooDa byADa, gattinAge bALa nODa

Sunday, 10 May 2015

ಆನಂದಮಯ ಈ ಜಗ ಹೃದಯ... / anandamaya ee jaga hrudaya


ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...
                                                                                 - ಕುವೆಂಪು

Friday, 8 May 2015

ನೇತಾಜಿ ನೆರಳು....ಚಲೋ ದಿಲ್ಲಿ ಎಂದು ಹೋದರೆಲ್ಲಿ?../ Netaji Neralu.... Chalo Dilli endu hodarelli??

ಚಲೋ ದಿಲ್ಲಿ ಎಂದು ಹೋದರೆಲ್ಲಿ?

ಇಂಥದೊಂದು ಆಘಾತಕಾರಿ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ 'ರೇಡಿಯೋ ಟೋಕಿಯೋ'. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು!

ಅಂದು ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಾರದರೂ ಏನು ಗೊತ್ತೆ?
'ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ 'ಆಜಾದ್ ಹಿಂದ್‌' ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದರು ಮಿ. ಬೋಸ್. ಆಗಸ್ಟ್ 16ನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರ್ಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ  ಚಿಕಿತ್ಸೆ ನೀಡಲಾಯಿತಾದರೂ ಅವರು ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರಬೋಸ್ ಅವರ ಸೇನೆಯ ಅಧಿಕಾರಿ ಮತ್ತು ಆಪ್ತ ಹಬೀಬರ್ ರೆಹಮಾನ್ ಮತ್ತು ಇತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.'
ಆದರೆ...
ಈ ಕುರಿತು ಜಪಾನ್ ಸರ್ಕಾರವಾಗಲಿ, ಅಲ್ಲಿನ ರಾಜಪ್ರಭುತ್ವಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ. ಒಂದು ಪ್ರಕಟಣೆಯನ್ನೂ ಹೊರಡಿಸಲಿಲ್ಲ. ಒಂದು ವೇಳೆ ರಾಜತಾಂತ್ರಿಕ ಕಾರಣಗಳಿಗಾಗಿ ಜಪಾನ್ ಈ ಸುದ್ದಿಯನ್ನು ಮುಚ್ಚಿಟ್ಟಿತೆಂದು ನಂಬೋಣವೆಂದುಕೊಂಡರೂ ಅದಷ್ಟು ಸುಲಭವಿರಲಿಲ್ಲ. ಏಕೆಂದರೆ ನೇತಾಜಿ ಜೊತೆಗೇ ಜಪಾನಿ ಸೈನ್ಯದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದರು ಅಂತ ರೇಡಿಯೋ ಟೋಕಿಯೋ ಪ್ರಕಟಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲ ಸಮಯದ ಹಿಂದಷ್ಟೆ ಕ್ವಾಂಟುಂಗ್ ಪ್ರಾಂತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸರ್ಕಾರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟದ್ದು ಸಂಶಯ ತರಿಸುತ್ತದೆ.

ಹಾಗಾದರೆ ನಿಜಕ್ಕೂ ನಡೆದಿದ್ದೇನು?
1945 ಆಗಸ್ಟ್ ಇಪ್ಪತ್ಮೂರನೇ ತಾರೀಕು 'ರೇಡಿಯೋ ಟೋಕಿಯೋ'ದ ಉದ್ಘೋಷಕ ಓದಿದ್ದ ಸುದ್ದಿಯನ್ನು ಎರಡು ದಿನದ ಹಿಂದೆಯೇ ಬರೆಯಲಾಗಿತ್ತು! ಅಂದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ರೆಡಿಯಾಗಿತ್ತು. ಆಶ್ಚರ್ಯವೆಂದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಅದರಲ್ಲೂ ತಮಿಳು ಬ್ರಾಹ್ಮಣ. ಹೆಸರು ಎಸ್.ವಿ. ಅಯ್ಯರ್. ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ 'ಇಂಡಿಯನ್ ನ್ಯಾಶನಲ್ ಆರ್ಮಿ'ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ 'ಆಜಾದ್ ಹಿಂದ್‌' ಪ್ರಾಂತೀಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತಂತ್ರ ಭಾರತದ ಕನಸು ಕಂಡಿದ್ದ ನೇತಾಜಿ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ್ದ 'ಆಜಾದ್ ಹಿಂದ್ ರಾಷ್ಟ್ರೀಯ ಬ್ಯಾಂಕ್‌'ನ ಮುಖ್ಯಸ್ಥನೂ ಆಗಿದ್ದ! ಹೀಗೆ ನೇತಾಜಿಯವರು ನಂಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದನೆಂಬುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ ಅಲ್ಲವೆ? ಆ ಸುದ್ದಿ ಬರೆಯೋದಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂದರೆ ಆಗಸ್ಟ್ ಹದಿನೇಳನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‌ಗೆ ಬಂದಿದ್ದ. ಆದರೆ ಅಲ್ಲಿಂದ ನೇತಾಜಿ ತೈಪೆಗೆ ಬಂದಾಗ ಅಯ್ಯರ್ ಜೊತೆಗಿರಲಿಲ್ಲ!

ನೈಮಿಷಾರಣ್ಯದಲ್ಲಿದ್ದ ಆ ಪರ್ದೇವಾಲಾ ಬಾಬಾ ಯಾರು?
ಈ ಗುಮ್‌ನಾಮಿ ಬಾಬಾನ ಕತೆಗೆ ಇನ್ನೊಂದು ಮುಖ್ಯವಾದ ಮಗ್ಗುಲಿದೆ. ಇದೂ ಅಷ್ಟೇ ನಿಗೂಢ ಮತ್ತು ಆಶ್ಚರ್ಯಕರ. ನೇತಾಜಿಯ ಹಳೆಯ ಸ್ನೇಹಿತ ಮತ್ತು ಪಶ್ಚಿಮ ಬಂಗಾಲದ ವಿಧಾನಸಭೆಯ ಸದಸ್ಯರಾದ ಅತುಲ್‌ಸೇನ್ ಒಮ್ಮೆ ಉತ್ತರಪ್ರದೇಶದ ಸೀತಾಪುರದ ಬಳಿಯಿರುವ ನೈಮಿಷಾರಣ್ಯಕ್ಕೆ ಹೋಗಿದ್ದರು. 1962ರ ಏಪ್ರಿಲ್‌ನಲ್ಲಿ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ, ನೈಮಿಷಾರಣ್ಯಕ್ಕೆ ಹೋಗಿದ್ದ ಅತುಲ್‌ಸೇನ್‌ಗೆ ತಾನು ಅಲ್ಲಿ 'ಪರ್ದೇವಾಲಾ ಬಾಬಾ' ಎಂಬ ವಿಚಿತ್ರ ಹೆಸರಿನ ಸಾಧುವೊಬ್ಬನನ್ನು ಭೇಟಿ ಮಾಡುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಅಲ್ಲಿನ ಒಂದು ಪಾಳುಬಿದ್ದ ಶಿವ ದೇವಾಲಯದಲ್ಲಿ ವಾಸವಾಗಿದ್ದ ಈ ಪರ್ದೇವಾಲಾ ಬಾಬಾನನ್ನು ಭೇಟಿಯಾದ ಅತುಲ್‌ಸೇನೆ ಆತನಲ್ಲಿ ಕೊಂಚ ಹೊತ್ತು ಮಾತಾಡಿದರು. ಮಾತುಕತೆಯ ವೇಳೆಯಲ್ಲೇ ಅತುಲ್  ಸೇನ್‌ಗೆ ಇದು ಖಂಡಿತವಾಗಿಯೇ ಇಂಥದ್ದೊಂದು ಭಾವನೆ ಮನಸಿನಲ್ಲಿ ಮೂಡುತ್ತಿದ್ದಂತೆಯೇ ಆತನಿಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾಗಲಿಲ್ಲ. ಉಕ್ಕಿಹರಿದ ಭಾವೋದ್ರೇಕದಿಂದಾಗಿ ಆತ ಬಾಬಾ ಮುಂದೆ ಇದನ್ನೇ ಹೇಳಿದರು. ಆದರೆ ಈ ಪರ್ದೇವಾಲಾ ಬಾಬಾ ತಾನು ನೇತಾಜಿ ಅಲ್ಲವೇ ಅಲ್ಲವೆಂದು ನಿರಾಕರಿಸಿದ್ದು ಮಾತ್ರವಲ್ಲದೆ, ಅತುಲ್ ಸೇನರಲ್ಲಿ ಅವರ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಂತೆ ಕೇಳಿಕೊಂಡರು. ಇದೇ ರೀತಿಯಲ್ಲಿ ಮತ್ತೆ ಭಾವೋದ್ರೇಕಕ್ಕೊಳಗಾಗಬೇಡ ಮತ್ತು ನೇತಾಜಿ ನಾನೇ ಎಂಬ ಕಲ್ಪನೆಯನ್ನು ಬಿಟ್ಟುಬಿಡು ಅಂತಲೂ ಬಾಬಾ ಹೇಳಿದ್ದರು.
ಈ ಕುರಿತು ಯಾರಲ್ಲೂ ಚರ್ಚಿಸಬೇಡ ಅಂತ ಬಾಬಾ ಹೇಳಿದರೂ ಅತುಲ್ ಸೇನ್ ತಮ್ಮ ಮನದಾಳದ ಭಾವನೆಗಳನ್ನು ಖ್ಯಾತ ಭಾರತೀಯ ಇತಿಹಾಸ ತಜ್ಞರಾದ ಡಾ. ಆರ್.ಸಿ. ಮಜುಂದಾರ್ ಮತ್ತು ತನ್ನ ಕೆಲವು ಹಳೆಯ ಕ್ರಾಂತಿಕಾರಿ ಗೆಳೆಯರ ಬಳಿ ಹೇಳಿಕೊಂಡರು. ಈ ಗೆಳೆಯರೆಲ್ಲಾ ಬಂಗಾಲದಲ್ಲಿ ತುಂಬಾ ಖ್ಯಾತಿ ಪಡೆದಿದ್ದ 'ಅನುಶಿಲೀನ್ ಸಮಿತಿ' ಎಂಬ ಹಳೆಯದಾದ ಕ್ರಾಂತಿಕಾರಿ ಸಂಸ್ಥೆಗೆ ಸೇರಿದವರಾಗಿದ್ದರು. ಸುಮ್ಮನಿರದ ಅತುಲ್‌ಸೇನ್ ಈ ಬಗ್ಗೆ ನೆಹರುರವರಿಗೂ ಒಂದು ಪತ್ರ ಬರೆದರು. ಈ ಪತ್ರಕ್ಕೆ ನೆಹರು ಉತ್ತರವನ್ನೂ ಬರೆದರು-'ಅತುಲ್‌ಸೇನ್ ಪ್ರತಿಕ್ರಿಯಿಸಿದ ರೀತಿಯಿಂದ ಆತ ಅನರ್ಹಗೊಂಡಿದ್ದು ಮುಂದೆಂದೂ ಆತ ಬಾಬಾನನ್ನು ಭೇಟಿಯಾಗಲು ಸಾಧ್ಯವೇ ಇಲ್ಲ' ಅಂತ ಪತ್ರದಲ್ಲಿ ಬರೆದಿತ್ತು ಅಂತ ಹೇಳಲಾಗುತ್ತಿದೆ.

ಪ್ರತಾಪ್‌ಸಿಂಹ

Thursday, 7 May 2015

ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು./ Namminda Desha... Deshadinda jagattu....


ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬..

ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ,
ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು,ಕುತ:= ಹೇಗೆ

ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಪ್ರಸನ್ನತೆ, ಧ್ಯಾನ, ಶಾ೦ತಿ ಮತ್ತು ಸುಖ ಇವೆಲ್ಲವುಗಳಿಗೂ ಮೂಲ ಮನಸ್ಸು. ಮನಸ್ಸು ಎಷ್ಟು ಪ್ರಶಾ೦ತವಾಗಿರುತ್ತದೋ ಅಲ್ಲಿ ಜ್ಞಾನವೂ, ಪ್ರಸನ್ನತೆಯೂ, ಸುಖ-ಸ೦ತೋಷವೂ ನೆಲೆಸುತ್ತದೆ ಎ೦ಬುದು ಈ ಶ್ಲೋಕದ ಸೂಚ್ಯ.ಮನುಷ್ಯ ತನ್ನ ಬಗ್ಗೆ ತಾನೇ ಸ್ವತ; ನಿರ್ಣಯಿಸಿಕೊಳ್ಳುವ ಪ್ರವೃತ್ತಿಯವನು. ರಾಗ-ದ್ವೇಷಗಳು ತಮೋ-ರಜೋಗುಣಗಳು ಹೆಚ್ಚಾದಷ್ಟೂ ಮನಸ್ಸಿನ ಶಾ೦ತಿ ಕೆಡುತ್ತದೆ. ಆತ್ಮಾನ೦ದವು ನಮ್ಮಿ೦ದ ದೂರ ಸಾಗುತ್ತದೆ. ಮತ್ತೊ೦ದು ಸೂಚ್ಯವೇನೆ೦ದರೆ ಎಲ್ಲವನ್ನೂ ಒ೦ದೇ ರೀತಿಯಲ್ಲಿ ಕಾಣುವವನು ಹಾಗೂ ಅನುಭವಿಸುವವನು ಸ್ಥಿತಪ್ರಜ್ಞನೆನಿಸಿಕೊಳ್ಳುತ್ತಾನೆ. ಆದರೆ ಆ ಹಾದಿಯಲ್ಲಿ ಸಾಗಬೇಕಾದಾಗ ಮನಸ್ಸಿನತನ್ಮೂಲಕ ಆತ್ಮನಿಯ೦ತ್ರಣ ಅತ್ಯಗತ್ಯ. ಇದಕ್ಕೊ೦ದು ದೃಷ್ಟಾ೦ತವನ್ನು ಇಲ್ಲಿ ಉಲ್ಲೇಖಿಸುವುದು ನನಗೆ ಸೂಕ್ತವೆನಿಸುತ್ತಿದೆ.

ಒಮ್ಮೆ ಬುಧ್ಧ ತನ್ನ ಶಿಷ್ಯರೊ೦ದಿಗೆ ಪ್ರಯಾಣಿಸುತ್ತಿದ್ದ. ಏರು ಬಿಸಿಲುಸಾಗುತ್ತಿದ್ದ ಹಾದಿಯ ಮಧ್ಯೆ ಒ೦ದು ಪ್ರಶಾ೦ತ ಕೊಳ. ಬುಧ್ಧನಿಗೆ ಮೊದಲೇ ತಡೆಯಲಾರದಷ್ಟು ದಾಹವಾಗುತ್ತಿತ್ತು. ಕೊಳವನ್ನು ಕ೦ಡು ಶಿಷ್ಯನನ್ನು ಸ್ವಲ್ಪ ಕುಡಿಯಲು ನೀರು ತರಲು ಹೇಳುತ್ತಾನೆ. ಶಿಷ್ಯ ನೀರನ್ನು ಮಡಿಕೆಯೊಳಗೆ ತು೦ಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಒ೦ದು ಎತ್ತಿನ ಗಾಡಿ ಅದೇ ದಾರಿಯಲ್ಲಿ ದಡ-ದಡನೆ೦ದು ಸಾಗಿದ ಬಿರುಸಿಗೆ ನೀರು ಕಲುಷಿತಗೊ೦ಡಿತು. ಶಿಷ್ಯ ಎಲ್ಲವನ್ನೂ ಹೇಳಿ ನೀರು ಕುಡಿಯಲು ಯೋಗ್ಯವಿಲ್ಲವೆ೦ದು ತಿಳಿಸಿದ. ಬುಧ್ಧ ಕುಳಿತಲ್ಲಿಯೇ ಮತ್ತಷ್ಟು ಹೊತ್ತು ಕುಳಿತ. ಕೆಲಹೊತ್ತು ಕಳೆದ ನ೦ತರ ಪುನ: ಅದೇ ಶಿಷ್ಯನಿಗೆ ಪುನ: ಕೊಳದಿ೦ದ ನೀರು ತರಲು ಹೇಳಿದ. ಶಿಷ್ಯ ಕೊಳದ ಬಳಿ ನಡೆದ. ನೀರು ಹಾಗೆಯೇ ಇದ್ದದ್ದನ್ನು ಕ೦ಡು ಪುನ: ಬುಧ್ಧನ ಬಳಿ ಬ೦ದು ನೀರು ಇನ್ನೂ ಶುಧ್ಧವಾಗಿಲ್ಲ. ಕುಡಿಯಲು ಯೋಗ್ಯವಾಗಿಲ್ಲಎ೦ದ. ಬುಧ್ಧ ಸುಮ್ಮನಾದ. ಪುನ: ಸ್ವಲ್ಪ ಹೊತ್ತಿನ ನ೦ತರ ಮತ್ತೊಮ್ಮೆ ಅದೇ ಶಿಷ್ಯನನ್ನು ಕೊಳದ ಬಳಿಗೆ ನೀರು ತರಲು ಕಳುಹಿಸಿದ. ಕೊಳದ ನೀರು ಈಗ ಶಾ೦ತವಾಗಿತ್ತು. ಮಡಿಕೆಯಲ್ಲಿ ತು೦ಬಿಸಿ ತ೦ದು ಕೊಟ್ಟ ನೀರನ್ನು ಕುಡಿಯುತ್ತಾ ಬುಧ್ಧ ಶಿಷ್ಯನನ್ನು ಕೇಳಿದ:
ನೀರು ತಿಳಿಯಾಗಲು ನೀನೇನು ಮಾಡಿದೆ?
ಶಿಷ್ಯನ ಉತ್ತರ : ನಾನೇನೂ ಮಾಡಲಿಲ್ಲ..
ಬುಧ್ಧ: ನೋಡಿದೆಯಾ, ನೀನೇನೂ ಮಾಡದಿದ್ದರೂ ಕಲುಷಿತಗೊ೦ಡಿದ್ದ ನೀರು ತಾನಾಗಿಯೇ ತಿಳಿಯಾಯಿತು.. ನೀರ ಮೇಲೆ ಕಾಣುತ್ತಿದ್ದ ಮಣ್ಣಿನ ಕಣಗಳೆಲ್ಲಾ ತಳ ಸೇರಿದವು. ನೀರಿನ ಮೇಲ್ಮೈ ತಿಳಿಯಾಯಿತು.. ಕುಡಿಯಲು ಯೋಗ್ಯವಾಯಿತು. ನಮ್ಮ ಮನಸ್ಸೂ ಹಾಗೆಯೇಉದ್ವೇಗಕ್ಕೊಳಗಾಗುತ್ತಿದ್ದ೦ತೆ ಮನಸ್ಸನ್ನು ಹರಿಯ ಬಿಡಬಾರದು. ಸ್ವಲ್ಪ ಸಮಯ ಅದನ್ನು ಅದರ ಪಾಡಿಗೆ ಬಿಟ್ಟು ಬಿಡು. ಸ್ವಲ್ಪ ಹೊತ್ತಿನ ನ೦ತರ ಮನಸ್ಸಿನೊಳಗಿನ ಉದ್ವೇಗದ ಕಣಗಳೆಲ್ಲಾ ತಾನಾಗಿಯೇ ಕಳೆದು ಹೋಗಿ ಶಾ೦ತವಾಗುತ್ತದೆ
ನೆಮ್ಮದಿಯನ್ನು ಕ೦ಡುಕೊಳ್ಳುವುದು ಎವರೆಸ್ಟ್ ಏರಿದಷ್ಟು ಕಷ್ಟದ ಕೆಲಸವೇನಲ್ಲ! ನೆಮ್ಮದಿಯನ್ನು ನಾವು ಹುಡುಕಿಕೊಳ್ಳಬೇಕು.. ಮನಸ್ಸಿನ ನೆಮ್ಮದಿ ಎಲ್ಲಿದೆ ಅ೦ದರೆ ಮನಸ್ಸಿನ ಶಾ೦ತತೆಯಲ್ಲಿದೆ! ಅಷ್ಟೇಆದರೆ ನಾವೀಗ ನಡೆಸುತ್ತಿರುವುದು ಧಾವ೦ತದ ಜೀವನ. ನಾವೆಲ್ಲರೂ ಒ೦ದೇ ಸಮನೆ ಗೊತ್ತು-ಗುರಿಯಿಲ್ಲದೆ ಏನನ್ನೋ ಹುಡುಕುತ್ತಾ ಒ೦ದೇ ಸಮನೆ ಓಡುತ್ತಿದ್ದೇವೆ. ಎಲ್ಲರೂ ಓಡುತ್ತಿದ್ದೇವೆ…. ನಮಗ್ಯಾರಿಗೂ ನಾವೇಕೆ ಓಡುತ್ತಿದ್ದೇವೆ ಎ೦ಬುದರ ಕಾರಣದ ಅರಿವೂ ಇಲ್ಲ. ಎಲ್ಲಿಗೆ ಓಟವನ್ನು ನಿಲ್ಲಿಸಬೇಕೆ೦ಬುದರ ಅರಿವೂ ಇಲ್ಲ.. ಅವನು ಓಡುತ್ತಿದ್ದಾನೆ೦ದು ನಾನುನಾನು ಓಡುತ್ತಿದ್ದೇನೆ೦ದು ಅವನು…. ಒಬ್ಬರಿಗೊಬ್ಬರು ಪರಸ್ಪರ ಮುಖವನ್ನು ನೋಡುತ್ತಾ ಬಿಡುತ್ತಿರುವ ಏದುಸಿರಿನಿ೦ದ ಎಲ್ಲರೂ ಓಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ..

ಬದುಕಿಗೊ೦ದು ಸೂಕ್ತ ಗುರಿ- ಆ ಗುರಿಯತ್ತ ದೃಢ ಚಿತ್ತತೆ- ಆ ದೃಢ ಚಿತ್ತತೆಯಿ೦ದ ಗುರಿಯತ್ತ ಕೇ೦ದ್ರೀಕರಿಸಿಕೊ೦ಡಾಗ, ಗುರಿಯತ್ತ ತಲುಪುವ ದಾರಿ ತಾನೇ ತಾನಾಗಿ ಗೋಚರಿಸಲ್ಪಡುತ್ತದೆ! ಆದ್ದರಿ೦ದ ಪ್ರಶಾ೦ತ ಚಿತ್ತತೆಯೇ ಆನ೦ದಕ್ಕೆ ದಾರಿ. ಅದು ಲೌಕಿಕವೋ ಅಲೌಕಿಕವೋಆದರೆ ಯಾವ ರೀತಿಯ ಪ್ರಸನ್ನತೆಯನ್ನು ಅನುಭವಿಸಬೇಕಾದರೂ ಮನಸ್ಸು ಶಾ೦ತಿಯಿ೦ದಿರಲೇ ಬೇಕು. ಧಾವ೦ತ ಬೇಡ. ನಿಧಾನವಾಗಿ ಕುಳಿತು ಧ್ಯಾನಿಸೋಣ.. ಆತ್ಮೋಧ್ಧಾರದಿ೦ದಲೂ ದೇಶೋಧ್ಧಾರ ಸಾಧ್ಯ! ಎಲ್ಲ ಕ್ಷೇತ್ರಗಳ ಸ್ವಾಸ್ಠ್ಯವನ್ನೂ ಕಾಪಾಡಿಕೊಳ್ಳಬೇಕಾದವರು ನಾವೇ .. ಏಕೆ೦ದರೆ ನಮ್ಮ ಬದುಕು ನಮ್ಮದು.. ಹಾಗೆಯೇ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

1st Milestone.


Got support from 'KARADAVANI' Chief Editor- Shri. Ma. Bha. Perla. Selected stories and poets will be updated soon.


- Admin.

Tuesday, 5 May 2015

ದೀಪವು ನಿನ್ನದೇ, ಗಾಳಿಯು ನಿನ್ನದೇ / Deepavu ninnade Galiyu ninnade

ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.
ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
                                              - ಕೆ. ಎಸ್. ನರಸಿಂಹ ಸ್ವಾಮಿ

Friday, 1 May 2015

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.../ Hendathiyobbalu maneyolagiddare...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನದದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ ||

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿಲ್ಲದ ಕೋಪ
ಕೈ ಹಿಡಿದವಳು ಕೈ ಬಿಡದವಳು ಮಾಡಿದ ಅಡಿಗೆಯೇ ಚಂದ
ನಾಗರ ಕುಚ್ಚಿನ ನಿಲು ಜಡೆಯವಳು ಈಕೆ ಬಂದುದೆಲ್ಲಿಂದ ?

ಕಬ್ಬಿಗನೂರಿನ ಅರಮನೆಯಿಂದ ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೇ ಸಿಗಬೇಕು
ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೋಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ ?
ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

- ಕೆ.ಎಸ್. ನರಸಿಂಹಸ್ವಾಮಿ

Video link:
http://www.youtube.com/watch?v=nJPQ86Xnaow