Wednesday, 3 February 2016

ಮದುವೆಯ ಜಗತ್ತು ಸುಂದರ

ಮದುವೆಯಂಥ ಬಂಧ, ಸಂಬಂಧ, ಅನುಬಂಧ ಮತ್ತೊಂದಿಲ್ಲ. ಅದನ್ನು ಒಂದು inst‌i​t‌ut‌i‌on ಅಂತ ಕರೆಯುವುದುಂಟು. ಹಾಗೆ ಕರೆಯುವುದಿದ್ದರೆ un‌ive‌r​s‌i​ty(ಅದೂ ಒಂದು inst‌i​t‌ut‌i‌on ಬಿಡಿ) ಎಂದು ಕರೆಯಬಹುದಲ್ಲ ಎಂಬುದು ಒಂದು ವಾದ. ಮದುವೆಯಾಗದವರು ಜೀವನದಲ್ಲಿ ಅಪೂರ್ಣರಂತೆ.
ಮದುವೆಯಾದವರು f‌in‌is‌hed (ಕಥೆ ಮುಗಿಯಿತು ಅಂತಾನೂ ಅರ್ಥ, ಪರಿಪೂರ್ಣರು ಎಂದೂ ಅರ್ಥ) ಅಂತೆ. ಸಂತಸವಾಗಿರುವುದೊಂದೇ ಜೀವನದ ಉದ್ದೇಶ ಅಲ್ಲವಂತೆ. ಅದಕ್ಕಾಗಿ ಮದುವೆಯಾಗಬೇಕು ಎಂದು ಹೇಳುವವರೂ ಇದ್ದಾರೆ. ಕೆಲವರು ಎಲ್ಲ ಅನಿಷ್ಟಗಳಿಗೂ ಸರ್ಕಾರವನ್ನೇ ದೂರುತ್ತಾ ಇರುತ್ತಾರೆ. ಅಂಥವರು ಮದುವೆಯಾಗಬೇಕು ಎಂಬ ವಕ್ರತುಂಡೋಕ್ತಿಯೂ ಹಳೆಯದೇ.
ಮದುವೆಯಲ್ಲಿ ಸುಖವಿಲ್ಲ ಎಂಬುದು ಎಲ್ಲ ವಿವಾಹಿತರ ಒಕ್ಕೊರಲ ಅಭಿಪ್ರಾಯ. ಈ ಮಾತನ್ನು ಅವಿವಾಹಿತನ ಮುಂದೆ ಹೇಳಿನೋಡಿ. ಜಪ್ಪಯ್ಯ ಅಂದರೂ ಆತ ಕೇಳುವುದಿಲ್ಲ. ಕೇಳಿದರೂ ನಿಜ ಎಂದು ನಂಬುವುದಿಲ್ಲ. ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ ನಂತರವೇ ಈ ಮಾತಿನ ಮರ್ಮ, ಮಹತ್ವ, ಮಜಕೂರು ಅರ್ಥವಾಗೋದು. ಆದರೆ, ಅಷ್ಟೊತ್ತಿಗೆ ಸಮಯ ಮೀರಿರುತ್ತದೆ. ಎಲ್ಲ ವಿವಾಹಿತರಿಗೂ ಜೀವನದಲ್ಲಿ c‌o‌r‌re‌ct‌i‌on (ತಪ್ಪನ್ನು ತಿದ್ದಿಕೊಳ್ಳಲು) ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಅವರು ಮಾಡಿದ ತಪ್ಪನ್ನೇ ಮಾಡುತ್ತಾರೆ.
ನಟಿ ಎಲಿಜಬೆತ್ ಟೇಲರ್ ಎಷ್ಟು ಸಲ ಮದುವೆಯಾದಳೆಂದು ಅವಳಿಗೇ ಮರೆತುಹೋಗಿತ್ತು. ಆಕೆಯಿಂದ ವಿಚ್ಛೇದನ ಪಡೆದ ಗಂಡರಿಂದಾಗಿ ಗೊತ್ತಾಯಿತು. ಆದರೆ ಪ್ರತಿಸಲ ಮದುವೆಯಾಗುವಾಗಲೂ ಅವಳಲ್ಲಿ ಸಂಸಾರದ ಬಗ್ಗೆ ಉತ್ತಮ ಭಾವವೇ ಮೂಡುತ್ತಿತ್ತಂತೆ. ಇಲ್ಲದಿದ್ದರೆ ಯಾರೂ ಮದುವೆಯಾಗುತ್ತಿರಲಿಲ್ಲವೇನೋ? ಮದುವೆಯಲ್ಲಿ ಸಂತಸವಿದೆಯೋ, ವಿರಸವಿದೆಯೋ, ಸುಖವಿದೆಯೋ, ದುಃಖವಿದೆಯೋ ಎಂಬುದನ್ನು ತಿಳಿಯಲು ಯಾರನ್ನೂ ಕೇಳಬೇಕಿಲ್ಲ, ಓದಬೇಕಿಲ್ಲ. ಅವರವರ ತಂದೆ- ತಾಯಿಗಳು ಹಾಗೂ ನೆರೆಮನೆಯ ಗಂಡ- ಹೆಂಡತಿಯರನ್ನು ನೋಡಿದರೆ ಸಾಕು. ಆದರೆ ಯಾರೂ ಇದರಿಂದ ಪಾಠ ಕಲಿಯುವುದಿಲ್ಲ.
ಮಗುವಿಗೆ ‘ಬೆಂಕಿಯನ್ನು ಮುಟ್ಟಬೇಡ’ ಅಂದ್ರೆ ಕೇಳುವುದಿಲ್ಲ. ಬೆಂಕಿಯನ್ನು ಮುಟ್ಟುತ್ತದೆ. ಕೈಸುಟ್ಟುಕೊಂಡಾಗಲೇ ಅದಕ್ಕೆ ಗೊತ್ತಾಗುತ್ತದೆ. ಈ ಮಾತನ್ನು ಮದುವೆಗೂ ಅನ್ವಯಿಸಬಹುದು. ಸಂಸಾರದ ತಾಪತ್ರಯಗಳ ಬಗ್ಗೆ ವರ್ಷಗಟ್ಟಲೆ ಹೇಳಿದರೂ ಯಾವ ಅವಿವಾಹಿತನಿಗೂ ಅರ್ಥವಾಗುವುದಿಲ್ಲ. ಸುಟ್ಟುಕೊಂಡಾಗಲೇ ಗೊತ್ತಾಗೋದು. ಅವಿವಾಹಿತರೆಲ್ಲ ಮದುವೆಯೆಂಬ inst‌i​t‌ut‌i‌on ಒಳಗೆ ಹೋಗಲು ಹವಣಿಸುತ್ತಿರುತ್ತಾರಂತೆ. ವಿವಾಹಿತರೆಲ್ಲ ಅಲ್ಲಿಂದ ಹೊರಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುತ್ತಾರಂತೆ. ತಮಾಷೆ ಅಂದ್ರೆ ಆ ‘ಸಂಸ್ಥೆ’ಯ ಒಳಗಿದ್ದವರು ಹಾಗೂ ಹೊರನಡೆದವರು ಭೇಟಿಯಾಗುವುದೇ ಇಲ್ಲ. ಭೇಟಿಯಾದರೂ ಒಬ್ಬರ ಅನುಭವವನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿದರೂ ಬಹುಬೇಗ ಮರೆತುಬಿಡುತ್ತಾರೆ.
ಇದನ್ನು ಗಂಭೀರ ಅಂದ್ರೆ ಗಂಭೀರವಾಗಿ ತೆಗೆದುಕೊಳ್ಳಬಹುದು. ತಮಾಷೆ ಅಂದ್ರೆ ತಮಾಷೆಯಾಗಿಯೂ ಪರಿಗಣಿಸಬಹುದು. ಕಾರಣ ಅವಿವಾಹಿತರಿಗೆ ಮದುವೆ ಬಗ್ಗೆ ಏನೇ ಹೇಳಿದರೂ ಪ್ರಯೋಜನವಿಲ್ಲ. ವಿವಾಹಿತರಿಗೆ ಹೇಳುವುದೇನು ಬಂತು? ಅವರೇ v‌i‌ct‌i​ms. ಈ ಕಾರಣಕ್ಕಾಗಿ ಎಲ್ಲರೂ ‘ಬೆಂಕಿ’ಯನ್ನು ಮುಟ್ಟಲೇಬೇಕು. ಮುಟ್ಟಿದರೆ ಸುಡುತ್ತದೆ ಎಂದು ಪ್ರವಚನ ಬಿಗಿದರೆ ಯಾರೂ ಕೇಳುವುದಿಲ್ಲ. ಈ ವಿಷಯದಲ್ಲಿ ಸುಟ್ಟುಕೊಳ್ಳಲು ಎಲ್ಲರೂ ಸ್ವತಂತ್ರರು.
Indian_Marriage_Holding_Handsತಮಾಷೆ, ವಕ್ರತುಂಡೋಕ್ತಿಗಳೇನೇ ಇರಲಿ. ಈ ರೀತಿ ‘ಸುಟ್ಟು’ಕೊಳ್ಳುವುದರಲ್ಲಿ ಅದ್ಭುತ ಆನಂದವಿದೆ. ಇಲ್ಲದಿದ್ದರೆ ಯಾರೂ ‘ಆತ್ಮಾಹುತಿ’ಗೆ ಮುಂದಾಗುತ್ತಿರಲಿಲ್ಲ. ಗಂಡ- ಹೆಂಡತಿ ಥರದ ಜೋಡಿ ಇನ್ನೊಂದಿಲ್ಲ. ಒಬ್ಬ ವ್ಯಕ್ತಿ ಜತೆ ಮದುವೆಯ ನಂತರ ಜೀವನವಿಡೀ ಬಾಳುವುದು ಸಣ್ಣ ಮಾತಲ್ಲ. ಮದುವೆಯಲ್ಲಿ ಅದೆಂಥ ಸೆಳೆತ, ಆಕರ್ಷಣೆ, ಮೋಹ, ಚಮಕ್ ಇದೆಯೋ ಗೊತ್ತಿಲ್ಲ. ಬೇರೆ ಮನೆಯಲ್ಲಿ ಹುಟ್ಟಿದ, ಭಿನ್ನ ಅಭಿರುಚಿ, ಸಂಪ್ರದಾಯ, ಸಂಸ್ಕೃತಿ, ಪರಿಸರದಲ್ಲಿ ಬೆಳೆದ ವ್ಯಕ್ತಿಯೊಂದಿಗೆ ‘ಏಕ’ ಆಗಿ ಬದುಕುವುದು ರೋಚಕತೆಯೇ. ಇದಕ್ಕಿಂತ ಅದ್ಭುತವೇನಿದೆ? ನಲವತ್ತು- ಐವತ್ತು ವರ್ಷ ಗಂಡ- ಹೆಂಡತಿಯಾಗಿ ಬಾಳುವ ಅವಕಾಶ ಕಲ್ಪಿಸುವ ಈ ಮದುವೆಯ ಗರ್ಭದೊಳಗೆ ಅದೆಂಥ ವಿಸ್ಮಯ ಅಡಗಿರಬಹುದು?
ಅಕ್ರಮ- ಸಕ್ರಮ ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸುವವರು ರಾಜಕಾರಣಿಗಳಲ್ಲ. ಒಂದು ಗಂಡು- ಹೆಣ್ಣನ್ನು ಸೇರುವ ಮುನ್ನ ಕಲ್ಯಾಣಮಂಟಪದಲ್ಲೋ, ದೇವಸ್ಥಾನದಲ್ಲೋ ಸಂಧಿಸಿ ಹಾರ- ಅರಿಶಿನ ಕೊಂಬು ಬದಲಿಸಿಕೊಳ್ಳುತ್ತಾರಲ್ಲ ಅದೇ ಅಕ್ರಮ- ಸಕ್ರಮ!
ಮದುವೆ ಪೂರ್ವನಿಯೋಜಿತ. ದೇವ ನಿರ್ಧರಿತ. ಇಲ್ಲದಿದ್ದರೆ ಜಿಗಣಿಯ ಹುಡುಗ ಜಿಂಬಾಬ್ವೆ ಹುಡುಗಿಯನ್ನು ಮದುವೆಯಾಗುವುದುಂಟಾ? ಅಲಸ್ಕಾದ ಹುಡುಗಿ ಆಲ್ಮನೆ ಹುಡುಗನ ಕೈಹಿಡಿಯೋದು ತಮಾಷೆಯಾ? ಮುಖವನ್ನೇ ನೋಡದ, ಹಿನ್ನೆಲೆ ತಿಳಿಯದ, ಗೊತ್ತು ಗೋತ್ರ ಅರಿಯದ ಅಂಧರು ಸತಿ-ಪತಿಗಳಾಗೋದಕ್ಕೆ ಏನೆನ್ನಬೇಕು? ಇಂಟರ್‌ನೆಟ್‌ನಲ್ಲಿ ಭೇಟಿಯಾಗಿ ಕಂಪ್ಯೂಟರ್‌ನಲ್ಲಿ ಮದುವೆಯಾಗ್ತಾರಲ್ಲ, ಅದು ಎಂಥ ಭಾವಾತಿರೇಕ!?
ಹೀಗಾಗಿ, ಪ್ರತಿಯೊಬ್ಬರೂ ಮದುವೆಯಾಗಬೇಕು. ಮದುವೆಯಾಗದೆ ಅಲೆಮಾರಿಯಂತೆ ತಿರುಗಿ ಜಗತ್ತು ಸುಂದರ ಎನ್ನುವುದಕ್ಕಿಂತ, ನಮ್ಮಿಚ್ಛೆ ಅರಿಯುವವರನ್ನು ಕೈಹಿಡಿದು ಮದುವೆಯೆಂಬ ಜಗತ್ತು ಸುಂದರ ಎನ್ನುವುದೇ ಲೇಸು.

– ವಿಶ್ವೇಶ್ವರ ಭಟ್,  (ಅಂಕಣ: ಬ್ರೇಕಿಂಗ್ ನ್ಯೂಸ್)
Collected from : http://vbhat.in/breaking-news/marriage_03021

No comments:

Post a Comment