ದಕ್ಷಿಣ ಭಾರತದಲ್ಲಿ ತುಲನಾತ್ಮಕವಾಗಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ 'ನಮ್ಮ ಬೆಂಗಳೂರು'. ಕಳೆದ 14 ವರ್ಷಗಳಿಂದ ಹಂತಹಂತವಾಗಿ ಅಭಿವೃದ್ಧಿ ಹೊಂದಿ, ಬೆಂಗಳೂರಿನ ಮಹತ್ವದ, ವಿಶ್ವಸನೀಯ, ಜನಾನುರಾಗಿ ಸಾರಿಗೆ ವ್ಯವಸ್ಥೆಯಾಗಿ 'ನಮ್ಮ ಮೆಟ್ರೋ' ಬೆಳೆದು ನಿಂತಿದೆ! 2011ರಲ್ಲಿ ಲೋಕಾರ್ಪಣೆಗೊಂಡು, ಬೆಂಗಳೂರು ನಗರವಾಸಿಗಳ ನೆಚ್ಚಿನ ಪ್ರಯಾಣದ ಆಯ್ಕೆಯಾಗಿ 'ನಮ್ಮ ಮೆಟ್ರೋ' ಕಾರ್ಯ ನಿರ್ವಹಿಸುತ್ತಿದೆ. ಬಹು ನಿರೀಕ್ಷಿತ, ನಗರದ ಅತ್ಯಂತ ಜನಸಂದಣಿ ಮತ್ತು ಸಾಂದ್ರತೆ ಇರುವ, ಬೆಂಗಳೂರಿನ ಐಟಿ ಸಂಸ್ಥೆಗಳ ಉಗಮಸ್ಥಾನ ಇಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ 3ನೆಯ ಹಂತದ 'ಹಳದಿ ಮಾರ್ಗ'ವು ಇದೇ ಆಗಸ್ಟ್ 10ರಂದು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ಮೆಟ್ರೋ ಸಾಗಿಬಂದ ಮಾರ್ಗ, ಭವಿಷ್ಯದ ಯೋಜನಾ ಹಂತಗಳ ಕುರಿತ ಮಾಹಿತಿ ಇಲ್ಲಿದೆ.
'ಮೆಟ್ರೋ ರೈಲು ಸಾರಿಗೆ ವ್ಯವಸ್ಥೆ'ಯ ಭಾಗವಾಗಿ 2003ರಲ್ಲಿ ಮೊದಲ ಹಂತದ ಯೋಜನಾ ವಿವರವನ್ನು ತಯಾರಿಸಲಾಯಿತು. ಮುಂದಿನ ದಿನಗಳಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (BMRCL) ಅಸ್ತಿತ್ವಕ್ಕೆ ಬಂತು. 2006 ಎಪ್ರಿಲ್ 25ರಂದು ಮೊದಲ ಹಂತದ ಕಾಮಗಾರಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿತು. 2007 ಎಪ್ರಿಲ್ 15ರಂದು ಕಾಮಗಾರಿ ಆರಂಭ. 2011ರ ಅಕ್ಟೋಬರ್ 20ರಂದು ನೇರಳೆ ಮಾರ್ಗದ, ಬೈಯ್ಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆಗೆ ಸಂಪರ್ಕ ಕಲ್ಪಿಸುವ ರೀಚ್-1 ಸಾರ್ವಜನಿಕ ಸೇವೆಗೆ ಮುಕ್ತವಾಯಿತು. ಅಂದು ಕೌತುಕದಿಂದ ಹಲವರು ಎರಡು ನಿಲ್ದಾಣಗಳ ನಡುವೆ ಸಂಚರಿಸಿ ಸಂಭ್ರಮಿಸಿದರು. ಮನೆಯಿಂದ ಕಚೇರಿಗೆ ಹೋಗುವ ಮಾರ್ಗ ಅಲ್ಲದಿದ್ದರೂ ನಾನೂ ಅಂದು ಬೈಕನ್ನು ಬೈಯಪ್ಪನಹಳ್ಳಿ ನಿಲ್ದಾಣದೆಡೆ ತಿರುಗಿಸಿ ಮೆಟ್ರೋದಲ್ಲಿ ಮಹಾತ್ಮ ಗಾಂಧಿ ನಿಲ್ದಾಣಕ್ಕೆ ಹೋಗಿ, ವಾಪಸಾಗಿ, ಮೆಟ್ರೋದಲ್ಲಿ ಮೊದಲ ದಿನವೇ ಸಂಚರಿಸಿ ಖುಷಿಪಟ್ಟ ನೆನೆಪು ಇನ್ನೂ ಹಸಿರಾಗಿದೆ!
ಬೆಂಗಳೂರಿನ ಯಾವ ಪ್ರದೇಶಕ್ಕೆ ಹೋದರೂ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡು ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದ್ದು ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹಳದಿ ಮಾರ್ಗ ಇದೇ ಆಗಸ್ಟ್ 10ರಿಂದ ಕಾರ್ಯಾರಂಭ ಮಾಡಲಿದೆ. ಬೆಂಗಳೂರು ದಕ್ಷಿಣ, ಇಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆಯ ಪ್ರದೇಶದ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಉಪಯೋಗ ಆಗಲಿದೆ.
ಲೋಕಾರ್ಪಣೆಗೊಳ್ಳಲಿರುವ ಹಳದಿ ಮಾರ್ಗವೂ ಸೇರಿ ನಮ್ಮ ಮೆಟ್ರೋದ ಉದ್ದ ಒಟ್ಟು 95.82 ಕಿಲೋಮೀಟರುಗಳು! ನೇರಳೆ ಮಾರ್ಗವು 43.49 ಕಿಮೀ ಉದ್ದವಿದ್ದು 37 ಮೆಟ್ರೋ ನಿಲ್ದಾಣಗಳಿವೆ. ಈ ಮಾರ್ಗ ಪೂರ್ವ-ಪಶ್ಚಿಮ ಕಾರಿಡಾರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪೂರ್ವದಲ್ಲಿ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಶುರುವಾಗಿ ಪಶ್ಚಿಮದಲ್ಲಿ ಚಲ್ಲಘಟ್ಟ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಹಸಿರು ಮಾರ್ಗವು 33.5 ಕಿಮೀ ಉದ್ದವಿದ್ದು 32 ಮೆಟ್ರೋ ನಿಲ್ದಾಣಗಳಿವೆ. ಈ ಮಾರ್ಗವು ಉತ್ತರ-ದಕ್ಷಿಣ ಕಾರಿಡಾರ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಉತ್ತರದಲ್ಲಿ ಮಾದಾವರ ನಿಲ್ದಾಣದಿಂದ ಶುರುವಾಗಿ ದಕ್ಷಿಣದಲ್ಲಿ ಕನಕಪುರ ರಸ್ತೆಯ ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣನಲ್ಲಿ ಕೊನೆಗೊಳ್ಳುತ್ತದೆ.ಆಗಸ್ಟ್ 10ರಂದು ಜನಸೇವೆಗೆ ತೆರೆದುಕೊಳ್ಳಲಿರುವ ಹಳದಿ ಮಾರ್ಗವು 19.15 ಕಿಮೀ ಉದ್ದವಿದ್ದು 16 ಮೆಟ್ರೋ ನಿಲ್ದಾಣಗಳಿವೆ. ಬೊಮ್ಮಸಂದ್ರ ನಿಲ್ದಾಣದಿಂದ ಶುರುವಾಗಿ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ನಮ್ಮ ಮೆಟ್ರೋದ ಸದ್ಯದ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.5ಯಿಂದ 8 ಲಕ್ಷ. ಹಳದಿ ಮಾರ್ಗದ ಕಾರ್ಯಾಚರಣೆಯ ನಂತರ, ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 10.5ರಿಂದ 11 ಲಕ್ಷಗಳಷ್ಟಾಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, 2030ರ ವೇಳೆಗೆ ನಮ್ಮ ಮೆಟ್ರೋದಲ್ಲಿ ವರ್ಷಕ್ಕೆ ಅಂದಾಜು 43 ಕೋಟಿ ಜನರು ಪ್ರಯಾಣಿಸಲಿದ್ದಾರೆ! ಹಸಿರು ಮಾರ್ಗದ ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ. ರಸ್ತೆ) ನಿಲ್ದಾಣದಿಂದ ಹೊಸದಾಗಿ ಶುರುವಾಗುವ ಹಳದಿ ಮಾರ್ಗಕ್ಕೆ ಸಂಪರ್ಕ ಲಭ್ಯವಿದೆ. ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿರುವುದು ಈ ಮಾರ್ಗದ ವೈಶಿಷ್ಟ್ಯ. ಭವಿಷ್ಯದಲ್ಲಿ ಚಾಲಕ ರಹಿತ ರೈಲುಗಳು ಹೆಚ್ಚುಹೆಚ್ಚು ಓಡಲಿವೆ. ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮುಂತಾದ ಸಂಸ್ಥೆಗಳು ದೇಣಿಗೆ ನೀಡಿ ತಮ್ಮ ಕಚೇರಿಯ ಬಳಿಯ ನಿಲ್ದಾಣಗಳ ನಿರ್ಮಾಣದಲ್ಲಿ ಸಹಕರಿಸಿವೆ ಮತ್ತು ಇವುಗಳಿಗೆ 'ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ನಿಲ್ದಾಣ', 'ಬಯೋಕಾನ್ ಹೆಬ್ಬಗೋಡಿ' ನಿಲ್ದಾಣ ಎಂದು ಆಯಾ ಸಂಸ್ಥೆಗಳ ಹೆಸರಿಡಲಾಗಿದೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.25 ಕಿ.ಮೀ. 'ಗುಲಾಬಿ ಮಾರ್ಗ', ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. 'ನೀಲಿ ಮಾರ್ಗ'ದ ಕಾಮಗಾರಿಯೂ ಪ್ರಗತಿಯಲ್ಲಿದೆ. ನಮ್ಮ ಮೆಟ್ರೋ ಮೂರನೇ ಹಂತದ ಕಾರಿಡಾರ್-1ರ ಯೋಜನೆಯ ಅಡಿಯಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ-ಕೆಂಪಾಪುರವರೆಗಿನ 32.5 ಕಿ.ಮೀ. ಮತ್ತು ಕಾರಿಡಾರ್-2ರ ಯೋಜನೆಯ ಭಾಗವಾಗಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.15 ಕಿ.ಮೀ. - ಒಟ್ಟು 44.65 ಕಿ.ಮೀ. ಉದ್ದದ ಕಾಮಗಾರಿ. ಇದಕ್ಕಾಗಿ 15,611 ಕೋಟಿ ರೂಪಾಯಿಗಳ ಯೋಜನಾ ವೆಚ್ಚಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಈ ಕಾಮಗಾರಿಯ ಅಧಿಕೃತ ಶಂಕುಸ್ಥಾಪನೆಯನ್ನು ಆಗಸ್ಟ್ 10ರಂದು ಪ್ರಧಾನಿ ನೆರವೇರಿಸಲಿದ್ದಾರೆ. 2030ರ ವೇಳೆಗೆ ಈ ಕಾಮಗಾರಿ ಪೂರ್ಣವಾಗುವ ಗುರಿಯಿದೆ. ನಮ್ಮ ಮೆಟ್ರೋದ 3 'ಎ' ಹಂತವು ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆಯ ವೆಚ್ಚ 15,000 ಕೋಟಿ ರೂಪಾಯಿಗಳು. 37 ಕಿ.ಮೀ. ಮಾರ್ಗದಲ್ಲಿ 28 ನಿಲ್ದಾಣಗಳು ಬರಲಿವೆ. ಈಗಾಗಲೇ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸರಕಾರಕ್ಕೆ ಅನುಮೋದನೆಗೆ ವರದಿ ನೀಡಿ ಕಾರ್ಯಯೋಜನೆ ಪ್ರಗತಿಯಲ್ಲಿದೆ.
ಹಳದಿ ಮಾರ್ಗದ ಕಾರ್ಯಾಚರಣೆ ಆರಂಭದ ನಂತರ ಟಿಕೆಟ್ ಮೂಲಕ ಬರಲಿರುವ ನಮ್ಮ ಮೆಟ್ರೋದ ಸರಾಸರಿ ಮಾಸಿಕ ಆದಾಯ 90 ಕೋಟಿಗಳು! ಜಾಹೀರಾತು, ಅಂಗಡಿಗಳು ಮತ್ತಿತರ ಮೂಲದಿಂದ ಸದ್ಯಕ್ಕೆ 3.5ರಿಂದ 4 ಕೋಟಿ ಮಾಸಿಕ ಆದಾಯವಿದ್ದು ಅದು 5.5 ಕೋಟಿ ತಲುಪುವ ನಿರೀಕ್ಷೆಯಿದೆ. ಅಲ್ಲಿಗೆ ಒಟ್ಟು ಮಾಸಿಕ ಆದಾಯ ಸುಮಾರು 95 ಕೋಟಿ ರೂಪಾಯಿಗಳು. ನಮ್ಮ ಮೆಟ್ರೋ ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಬಿಎಂಆರ್‌ಸಿಎಲ್‌ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು 56,218 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಿವೆ. ಮುಂದಿನ 5 ವರ್ಷಗಳಲ್ಲಿ ನಮ್ಮ ಮೆಟ್ರೋದ ಯೋಜನಾ ವೆಚ್ಚ 1 ಲಕ್ಷ ಕೋಟಿ ರೂಪಾಯಿಗಳನ್ನು ದಾಟಲಿದೆ! ಭೂ ಸ್ವಾಧೀನ ವಿಳಂಬ, ಯೋಜನಾ ವರದಿಯ ಒಪ್ಪಿಗೆಗೆ ವಿಳಂಬ, ಕಾಮಗಾರಿ ಶುರುವಾದ ಅನಂತರ ಕ್ಷೀಣ ಪ್ರಗತಿ ಇತ್ಯಾದಿ ವಿಚಾರಗಳು ನಮ್ಮ ಮೆಟ್ರೋದ ಒಟ್ಟು ಕಾರ್ಯ ಯೋಜನೆಯ ಅಭಿವೃದ್ಧಿಗೆ ಒಂದಷ್ಟು ಹೊಡೆತ ನೀಡಿ ನಿರೀಕ್ಷಿತ ಪ್ರಗತಿ ಸಾಧಿಸಲಾಗದೇ ಇರುವುದು ವಾಸ್ತವ.
ನಮ್ಮ ಮೆಟ್ರೋ ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವುದು ಅದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿಯೊಂದು ಮೆಟ್ರೋ ನಿಲ್ದಾಣವೂ ತಂತ್ರಜ್ಞಾನದ ಬಳಕೆಯಿಂದ ಆಧುನಿಕತೆಯ ಸ್ಪರ್ಶ ಹೊಂದಿದೆ. ವಿಕಲ ಚೇತನ ಸ್ನೇಹಿ, ಮಹಿಳಾ ಸ್ನೇಹಿ ಮತ್ತು ಜನಸ್ನೇಹಿ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸುಖ ಪ್ರಯಾಣಕ್ಕೆ ಎಲ್ಲಾ ವ್ಯವಸ್ಥೆ ಮತ್ತು ಅನುಕೂಲ ಕಲ್ಪಿಸಲಾಗಿದೆ. ಅಲ್ಲಲ್ಲಿ ಮಾಹಿತಿ ಫಲಕಗಳು, ದಿಕ್ಸೂಚಿ ಫಲಕಗಳು ಮತ್ತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಯಾಣ ಸಂಬಂಧಿತ ಪ್ರಕಟಣೆಗಳನ್ನು ನಿರಂತರವಾಗಿ ರೈಲಿನೊಳಗೆ ಮತ್ತು ನಿಲ್ದಾಣಗಳಲ್ಲಿ ಮಾಡಲಾಗುತ್ತದೆ. ನಗದು ಟಿಕೆಟ್, ಆನ್ಲೈನ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಮೂಲಕ ಮೆಟ್ರೋ ರೈಲುಗಳಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಪ್ರತಿ ರೈಲಿನಲ್ಲೂ ಮಹಿಳೆಯರಿಗೆ ಬೋಗಿಗಳನ್ನು ಕಾಯ್ದಿರಿಸಲಾಗಿದೆ. ಅಂಗವಿಕಲರಿಗೆ, ಬಾಣಂತಿಯರಿಗೆ, ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವವರಿಗೆ, ರೋಗಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರತಿ ಬೋಗಿಯಲ್ಲೂ ಆಸನಗಳನ್ನು ಮೀಸಲಿರಿಸಲಾಗಿದೆ. ಅಂಗಾಂಗ ರವಾನೆ ಮತ್ತಿತರ ವೈದ್ಯಕೀಯ ತುರ್ತು ಸೇವೆಗಳಿಗೂ ನಮ್ಮ ಮೆಟ್ರೋ ಬಳಕೆ ಶುರುವಾಗಿದೆ.
ನಿರೀಕ್ಷೆಯಂತೆ ಕಾಮಗಾರಿ ನಡೆದರೆ, ಮುಂದಿನ ಐದಾರು ವರ್ಷಗಳಲ್ಲಿ ಬೆಂಗಳೂರಿನ ಎಲ್ಲಾ ಭಾಗಗಳನ್ನು ನಮ್ಮ ಮೆಟ್ರೋ ತಲುಪಲಿದೆ. ಹಾಗಾದಾಗ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ದುಪ್ಪಟ್ಟಾಗಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ರಹಿತ, ಸರಿಯಾದ ಸಮಯಕ್ಕೆ ಉದ್ದೇಶಿತ ಜಾಗ ತಲುಪಲು ಬಳಸಬಹುದಾದ ಏಕೈಕ, ಹೆಚ್ಚು ಅವಲಂಬಿತ ಮತ್ತು ಅತ್ಯಂತ ವಿಶ್ವಾಸಾರ್ಹ ಸಾರಿಗೆಯಾಗಿ ನಮ್ಮ ಮೆಟ್ರೋ ಗರಿಮೆ ಪಡೆಯಲಿದೆ. ಸದ್ಯಕ್ಕೆ ಒಂದು ನಿಲ್ದಾಣದಲ್ಲಿ ಸರಾಸರಿ ಮೂವತ್ತು ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ಮೆಟ್ರೋದ ಒಟ್ಟು ಉದ್ಯೋಗಿಗಳ ಸಂಖ್ಯೆ ಅಂದಾಜು ಮೂರು ಸಾವಿರ. ಬೋಗಿಗಳನ್ನು ಕಾಲಕಾಲಕ್ಕೆ ಆಮದು ಮಾಡಿ ರೈಲುಗಳ ಸಂಖ್ಯೆ ನಿರಂತರ ಹೆಚ್ಚುವಂತೆ ನೋಡಿಕೊಳ್ಳಲಾಗಿದೆ.
ಬೆಂಗಳೂರಿನ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋದ ಉದ್ದೇಶಿತ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಂಡು ಜನರಿಗೆ ನಗರ ಸಂಪರ್ಕ ಮತ್ತಷ್ಟು ಸುಲಲಿತವಾಗಲಿ, ಇನ್ನಷ್ಟು ಸುಲಭವಾಗಲಿ. ಒಂದಷ್ಟು ವಿಳಂಬವಾಗಿಯಾದರೂ, ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ದೊರೆತು ಜನರ ಉಪಯೋಗಕ್ಕೆ ಲಭ್ಯವಾಗಿರುವುದು ಖುಷಿಯ ವಿಚಾರ. ದಕ್ಕಿರುವ ಬದುಕನ್ನು ಚೆಂದದಿಂದ ಬದುಕಲು ನಿರಂತರ ಓಟ ಬೇಡುವ ಮಾಯಾನಗರದ ದೈನಂದಿನ ಬದುಕಿನಲ್ಲಿ 'ನಮ್ಮ ಮೆಟ್ರೋ' ನಗರವಾಸಿಗಳ ನೆಚ್ಚಿನ ಪ್ರಯಾಣದ ಸಂಗಾತಿಯಾಗಲಿದೆ. ಅದು ಬೆಂಗಳೂರಿನ ಹೆಮ್ಮೆಯ ಜೀವಸತ್ವ, ಜನರ ಮೆಚ್ಚಿನ ಸಾರಿಗೆ ವ್ಯವಸ್ಥೆ ಮತ್ತು ನೆಚ್ಚಿನ ನಾಡಿಮಿಡಿತ ಎನ್ನುವುದು ನಿಸ್ಸಂಶಯ. ನಮ್ಮ ಮೆಟ್ರೋ ನಮ್ಮ ಹೆಮ್ಮೆ!
✒ ರವೀ ಸಜಂಗದ್ದೆ
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
(05/08) ವಿಶ್ವವಾಣಿಯಲ್ಲಿ ರವೀ ಸಜಂಗದ್ದೆ ಅಂಕಣ ಬರಹ
No comments:
Post a Comment