Thursday, 18 June 2015

ದುಡ್ಡಿದ್ದೋರೆಲ್ಲ ಜುಗ್ಗರಲ್ಲ, ಖರ್ಚು ಮಾಡುವವರೆಲ್ಲ ಶ್ರೀಮಂತರಲ್ಲ!

ಒಮ್ಮೆ ಧೀರೂಭಾಯಿ ಅಂಬಾನಿ ಪಂಚತಾರಾ ಹೋಟೆಲ್ ಗೆ ಹೋಗಿದ್ದರಂತೆ. ವೇಟರ್ ಮೆನು ಕಾರ್ಡ್ ತಂದಿಟ್ಟನಂತೆ. ಅಂಬಾನಿ ಎಲ್ಲ ಐಟಮ್್ಗಳ ರೇಟುಗಳನ್ನು ಗಮನಿಸಿದರಂತೆ. ಯಾವ ಆಹಾರ ಪದಾರ್ಥಗಳ ಬೆಲೆಯೂ ಐನೂರು ರುಪಾಯಿಗಳಿಗಿಂತ ಕಡಿಮೆ ಇರಲಿಲ್ಲ. ಒಂದು ಕಪ್ ಚಹದ ಬೆಲೆ ಆರು ನೂರು ರುಪಾಯಿ ಎಂದು ಬರೆದಿತ್ತು. ಒಂದು ಚಪಾತಿ ಮತ್ತು ರೊಟ್ಟಿಗೆ ತಲಾ ನೂರೈವತ್ತು ರುಪಾಯಿ!
ಹೊಟ್ಟೆ ಹಸಿದಿತ್ತು. ಹಾಗಂತ ಕಿಸೆಯಲ್ಲಿ ಹಣ ಇರಲಿಲ್ಲ ಅಂತ ಅಲ್ಲ. ಸಾವಿರಾರು ಕೋಟಿ ರುಪಾಯಿಗಳ ಶ್ರೀಮಂತ. ಆದರೆ, ಜತೆಯಲ್ಲಿ ಯಾರೂ ಇರಲಿಲ್ಲ. ಯಾವ ಪ್ರತಿಷ್ಠೆ ಮೆರೆಯಬೇಕೂಂತ ಅಷ್ಟೆಲ್ಲ ಹಣ ಕೊಡಬೇಕು. ಇಷ್ಟೇ ಹಣದಲ್ಲಿ ವರ್ಷವಿಡೀ ಉಣಬಹುದಲ್ಲ, ಒಂದು ಕಪ್ ಚಹಕ್ಕೆ ಐನೂರು ರುಪಾಯಿ ಕೊಡುವುದಂದರೇನು, ವರ್ಷವಿಡೀ ಚಹ ಕುಡಿಯಬಹುದಲ್ಲ….
ಹೀಗೆಲ್ಲ ಯೋಚಿಸಿದ ಅಂಬಾನಿ ಹಿಂದೆ ಮುಂದೆ ನೋಡದೇ, ಹೋಟೆಲ್ ವೇಟರ ಮತ್ತು ಸುತ್ತಲಿನವರ ಪ್ರತಿಕ್ರಿಯೆಗೂ ಕಾಯದೇ ಹೊರ ನಡೆದು, ರಸ್ತೆ ಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ, ಹತ್ತು ರುಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿದರಂತೆ.
ಈ ಘಟನೆ ಬಗ್ಗೆ ಅಂಬಾನಿ ಹೀಗೆ ಹೇಳಿದರಂತೆ- “ನಾನು ಸ್ಟಾರ್ ಹೋಟೆಲ್ ಗಳಿಗೆ ಹೋಗಿಲ್ಲ ಅಂತಲ್ಲ. ಸಾಕಷ್ಟು ಸಲ ಹೋಗಿದ್ದೇನೆ. ನಮ್ಮ ಕಂಪನಿಯ ಹಲವಾರು ಔತಣಕೂಟಗಳನ್ನು ಅಲ್ಲಿ ಆಯೋಜಿಸಿದ್ದೇನೆ. ಅವೆಲ್ಲ ಅನಿವಾರ್ಯ. ಆದರೆ ನಾನೊಬ್ಬನೇ ಎಂದೂ ಅಲ್ಲಿಗೆ ಹೋಗಿ ಊಟ ಮಾಡಿಲ್ಲ. ಅಗತ್ಯ ಮತ್ತು ಅವಶ್ಯಕತೆ ಇದ್ದರೆ ಖರ್ಚು ಮಾಡಬಹುದು. ಹತ್ತು ರುಪಾಯಿಗೆ ಐನೂರು ರುಪಾಯಿ ಕೊಡುವಷ್ಟು ನಾನು ಶ್ರೀಮಂತನಿದ್ದಿರಬಹುದು. ಆದರೆ, ಅಷ್ಟು ಮೂರ್ಖನಲ್ಲ. ನಾನು ಅಂದು ಆ ಹೋಟೆಲ್್ನಿಂದ ಎದ್ದು ಬಂದ ಪ್ರಸಂಗಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರಬಹುದು. ಅಂಬಾನಿ ಜುಗ್ಗ ಎನ್ನಬಹುದು, ನನಗೆ ಸ್ವಲ್ಪವೂ ವಿಷಾದವಿಲ್ಲ. ಇಂದಿಗೂ ಆ ನನ್ನ ನಿರ್ಧಾರದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಉಳಿಸಿದ ಹಣ ಗಳಿಸಿದ ಹಣಕ್ಕಿಂತ ಹೆಚ್ಚು ಎಂಬುದು ನನಗೆ ಚೆನ್ನಾಗಿ ಅರಿವಿಗೆ ಬಂದಿದೆ. ನಾನು ಸ್ಟಾರ್ ಹೋಟೆಲ್್ನಲ್ಲಿ ಊಟ ಮಾಡಿದ ಬಿಲ್ ಕೊಟ್ಟವರಿಗೆ ಮಾತ್ರ ನನ್ನ ಬಗ್ಗೆ ಮಾತಾಡಲು ನೈತಿಕ ಹಕ್ಕಿದೆ. ಸ್ಟಾರ್ ಹೋಟೆಲ್್ಗಳಲ್ಲಿ ಒಂದಕ್ಕೆ ನೂರು ತೆತ್ತು ಬರುವವರ ಬಗ್ಗೆ ನನಗೆ ವಿಷಾದವಿದೆ. ಈ ಕಾರಣಕ್ಕಾಗಿಯೇ ನಾನು ಅಂಥ ಹೋಟೆಲ್ ಗಳನ್ನು ಕಟ್ಟಲಿಲ್ಲ.’
ಇನ್ನೊಮ್ಮೆ ಅಂಬಾನಿ ತಮ್ಮ ಮಕ್ಕಳ ಒತ್ತಾಯಕ್ಕೆ ಸ್ಟಾರ್ ಹೋಟೆಲ್್ಗೆ ಹೋಗಿದ್ದರಂತೆ. ಊಟವಾದ ಬಳಿಕ ಅನಿಲ್ ಅಂಬಾನಿ ವೇಟರ್ ಗೆ ಎರಡು ನೂರು ರುಪಾಯಿ ಟಿಪ್ಸ್ ಇಟ್ಟರಂತೆ. ಇದನ್ನು ಗಮನಿಸಿದ ಧೀರೂಭಾಯಿ ಅಂಬಾನಿ “ಪರವಾಗಿಲ್ಲ, ನಿನ್ನ ಅಪ್ಪ ಶ್ರೀಮಂತ, ಹೀಗಾಗಿ ಅಷ್ಟು ಟಿಪ್ಸ್ ಇಟ್ಟಿದ್ದೀಯ. ಆದರೆ ನನ್ನ ಅಪ್ಪ ಅಂಥ ಶ್ರೀಮಂತನಲ್ಲ. ಹೀಗಾಗಿ ನಾನು ಅಷ್ಟು  ಟಿಪ್ಸ್ ಇಡುವುದಿಲ್ಲ’ ಎಂದರಂತೆ.
ದುಡ್ಡಿನ ಬಗ್ಗೆ ಜನರ ಅಭಿಪ್ರಾಯವೇನು ಎಂಬ ಬಗ್ಗೆ ಇತ್ತೀಚೆಗೆ ಪ್ರತಿಷ್ಠಿತ “ಫೋರ್ಬ್ಸ್್’ ಪತ್ರಿಕೆ ನಡೆಸಿದ ಸಂದರ್ಶನದ ವಿವರಗಳನ್ನು ಓದುತ್ತಿದ್ದೆ. ಹಣದ ಬಗ್ಗೆ ಒಬ್ಬೊಬ್ಬರ ಧೋರಣೆ ಒಂದೊಂದು ರೀತಿ. ಹಣ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗುಣ, ವ್ಯಕ್ತಿತ್ವವನ್ನು ತಂದುಕೊಟ್ಟಿದೆ. ಅತಿ ಶ್ರೀಮಂತನಾದವನಿಗೂ, ಬಡವನಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬ ತತ್ವಜ್ಞಾನಿಯ ಮಾತು ಈ ಸಮೀಕ್ಷೆಯನ್ನು ಓದಿದಾಗ ನೆನಪಿಗೆ ಬರದೇ ಇರದು.
ಜಗತ್ತಿನ ಅತ್ಯಂತ ಶ್ರೀಮಂತ ವಾರೆನ್ ಬಫೆಟ್ ಇದ್ದಾನಲ್ಲ, ಅವನಿಗೆ ಸ್ವಂತ ಮನೆಯೆಂಬುದೇ ಇಲ್ಲ. ಆತ ಒಂದು ಮೊಬೈಲ್ ಫೋನನ್ನೂ ಇಟ್ಟುಕೊಂಡಿಲ್ಲ. ತನ್ನ ಕಾರನ್ನು ತಾನೇ ಡ್ರೈವ್ ಮಾಡುತ್ತಾನೆ. ಅಂದರೆ ಡ್ರೈವರ್್ಗಳನ್ನು ಇಟ್ಟುಕೊಂಡಿಲ್ಲ. ತಾನೆ ಸ್ವತಃ ಮಾಲ್್ಗೆ ಹೋಗಿ ಮನೆಗೆ ಬೇಕಾಗುವ ಸಾಮಾನುಗಳನ್ನು ಶಾಪಿಂಗ್ ಮಾಡುತ್ತಾನೆ. ಮನೆ ತುಂಬಾ ಆಳು-ಕಾಳುಗಳನ್ನು ಇಟ್ಟುಕೊಂಡಿಲ್ಲ. ಬಾಡಿಗೆ ಮನೆಯಲ್ಲಿ ಆತ ಎಲ್ಲ ರೀತಿಯ ತುಂಬು ನೆಮ್ಮದಿಯ ಜೀವನವನ್ನು ಕಾಣುತ್ತಿದ್ದಾನೆ.
ಇಂಥ ವಾರೆನ್ ಬಫೆಟ್ ಒಂದು ದಿನ ತಾನು ದುಡಿದ ಹಣದ ಬಹುಪಾಲನ್ನು “ತಗೊಳ್ಳಿ ಚಾರಿಟಿಗೆ. ನಾನು ದುಡಿದಿದ್ದನ್ನೆಲ್ಲ ಇದೋ ದೇಣಿಗೆ ಕೊಡುತ್ತಿದ್ದೇನೆ’ ಎಂದುಬಿಟ್ಟ. ಮರುದಿನದಿಂದ ಮತ್ತಷ್ಟು ಆಸ್ಥೆಯಿಂದ ದುಡ್ಡು ಗಳಿಸಲು ಕುಳಿತ. ಹೆಚ್ಚು ಹಣ ಗಳಿಸುವ ಹೊಸ ಹೊಸ ಮಾರ್ಗಗಳ ಬಗ್ಗೆ ಚಿಂತಿಸಲಾರಂಭಿಸಿದ. ದೇಣಿಗೆ ಕೊಡುವುದನ್ನೇ ಹವ್ಯಾಸ ಮಾಡಿಕೊಂಡ. ಇದು ಅವನಿಗೆ ಹೆಚ್ಚು ದುಡಿಯುವುದು ಹೇಗೆ ಎಂಬುದನ್ನು ಕಲಿಸಲಾರಂಭಿಸಿತು. ಇನ್ನು ವಾರೆನ್ ಬಫೆಟ್್ನನ್ನು ನೋಡಿದವರು ಅವನೇಕೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಲಿಲ್ಲ, ಅವನೇಕೆ ಭವ್ಯ ಬಂಗಲೆ ಕಟ್ಟಿಸಲಿಲ್ಲ, ನಾವೇ ಆಳು-ಕಾಳುಗಳನ್ನು ಇಟ್ಟುಕೊಳ್ತೇವೆ ಅವನಿಗೇನು ಧಾಡಿ ಎಂದರೆ ಅವರಿಗೆ ಏನೆನ್ನೋಣ?
ಹಣದ ಬಗ್ಗೆ ಎಲ್ಲರ ಧೋರಣೆಯೂ ಒಂದೇ ರೀತಿ ಇರುವುದಿಲ್ಲ. ಭಾರತ ಪತ್ರಿಕೋದ್ಯಮದ ಧೀಮಂತ ರಾಮನಾಥ ಗೋಯೆಂಕಾ ಅವರ ಜೀವನದ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದಾದರೆ, ಒಮ್ಮೆ ಹಬ್ಬದ ನಿಮಿತ್ತ ಗೋಯೆಂಕಾ ಅವರಿಗೆ ಅವರ ಸೊಸೆ ಖಾದಿ ಜುಬ್ಬಾ, ಧೋತಿಯನ್ನು ಉಡುಗೊರೆಯಾಗಿ ಕೊಟ್ಟರಂತೆ. ಇದಕ್ಕೆ ಪ್ರತಿಯಾಗಿ ರಾಮನಾಥ ಗೋಯೆಂಕಾ ಅವರು ಸೊಸೆಗೆ ಪತ್ರ ಬರೆದರಂತೆ- “ಹಬ್ಬದ ನಿಮಿತ್ತ ನನಗೆ ಉಡುಗೊರೆಯಾಗಿ ಧೋತಿ, ಜುಬ್ಬವನ್ನು ಕೊಟ್ಟಿದ್ದಕ್ಕೆ ನನಗೆ ಬಹಳ ಸಂತಸವಾಗಿದೆ. ಆದರೆ ಇನ್ನು ಮುಂದೆ ನನಗೆ ಇಂಥ ವಸ್ತ್ರವನ್ನು ಖಾದಿ ಭಂಡಾರದಲ್ಲಿ ಶೇ.30ರಷ್ಟು ರಿಯಾಯತಿ ದರದಲ್ಲಿ ಮಾರಾಟವಿದ್ದ ಸಂದರ್ಭದಲ್ಲಿ ಖರೀದಿಸಿ ಕೊಡಬಹುದು.’
ಹಣದ ಬಗ್ಗೆ ಅಂಥ ಧೋರಣೆ ತಳೆದಿದ್ದರು ಗೋಯೆಂಕಾ. ಹಣದ ಮಹತ್ವ ಗೊತ್ತಿದ್ದವರು, ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಂಡವರು, ಜೀವನದಲ್ಲಿ ಪರಿಶ್ರಮದ ಅರಿವು ಇರುವವರು ಮಾತ್ರ ಇಂಥ ನಿಲುವು ತಾಳಲು ಸಾಧ್ಯ.
ಪತ್ರಕರ್ತೆ ಬಚಿ ಕರ್ಕಾರಿಯಾ “ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಹಾಗೂ ಸಂಸ್ಥೆಯ ಅಂತರಂಗ ಪರಿಚಯಿಸುವ ಪುಸ್ತಕವೊಂದನ್ನು ಬರೆದಿದ್ದಾರೆ. ಅದರ ಹೆಸರು Behind the Times ಅಂತ. ಈ ಕೃತಿಯಲ್ಲಿ ಆ ಪತ್ರಿಕೆಯ ಮಾಲೀಕ ಸಮೀರ್ ಜೈನ್ ಕುರಿತು ಸ್ವಾರಸ್ಯವಾಗಿ ಬರೆದಿದ್ದಾರೆ.
ಸಮೀರ್ ಜೈನ್ ಎಷ್ಟು ಧಾರಾಳಿಯೋ, ಅಷ್ಟೇ ದುಂದು ವೆಚ್ಚವನ್ನು ಕಂಡರೆ ಆಗದವರು. ಅನಗತ್ಯವಾಗಿ ಒಂದು ರುಪಾಯಿ ಹೆಚ್ಚು ಖರ್ಚಾಗುವುದನ್ನು ಸಹಿಸದವರು. ಒಮ್ಮೆ ಸಮೀರ್್ಜೈನ್ ಅವರು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಜಾಹೀರಾತು ವಿಭಾಗದ ಮುಖ್ಯಸ್ಥೆ ಇಂದಿರಾ ಡೆಯಿಸ್ ಹಾಗೂ ಇತರರೊಂದಿಗೆ ವಿದೇಶಕ್ಕೆ ಹೋಗಿದ್ದರು. ತಾವು ತಂಗಿದ್ದ ಹೋಟೆಲ್್ನಲ್ಲಿ ಇಂದಿರಾ ಅವರು ರಿಸೆಪ್್ಶನ್ ಕೌಂಟರ್ ಬಳಿ ಹೋಗಿ ಮರುದಿನ ಆರು ಗಂಟೆಗೆ ತಮ್ಮನ್ನು ಎಬ್ಬಿಸುವಂತೆಯೂ, ಅದಾದ ಐದು ನಿಮಿಷದ ಬಳಿಕ ಬೆಡ್ ಟೀ ತರುವಂತೆಯೂ ಹೇಳಿದರು. ಅಲ್ಲಿಯೇ ಸನಿಹದಲ್ಲಿದ್ದ ಸಮೀರ್ ಜೈನ್ ಈ ಸಂಭಾಷಣೆಯನ್ನು ಕೇಳಿಸಿಕೊಂಡರು, ಇಂದಿರಾ ಹತ್ತಿರ ಹೋಗಿ  ತಮ್ಮ ಕೋಟಿನ ಜೇಬಿನಿಂದ ಏನನ್ನೋ ತೆಗೆದು ಅವಳ ಕೈಗೆ ಕೊಟ್ಟರು.
ನೋಡಿದರೆ ಎರಡು ಟೀ ಬ್ಯಾಗ್!
‘ಬೆಡ್ ಟೀ ಬದಲು ಬರೀ ಬಿಸಿ ನೀರನ್ನಷ್ಟೇ ತರಲು ಹೇಳಿ, ಈ ಟೀ ಬ್ಯಾಗ್ ಅದ್ದಿಕೊಳ್ಳಿ. ಅದಕ್ಯಾಕೆ ಸುಮ್ಮನೆ ಮುನ್ನೂರು-ನಾನೂರು ರುಪಾಯಿ ಖರ್ಚು ಮಾಡುತ್ತೀರಿ? ನಾನು ಸದಾ ಪಂಚತಾರಾ ಹೋಟೆಲ್್ನಲ್ಲಿ ಉಳಿದುಕೊಳ್ಳುವಾಗ ಟೀ ಬ್ಯಾಗನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ’ ಎಂದರು ಸಮೀರ್ ಜೈನ್. ಭಾರತದ ನಂ.1 ಪತ್ರಿಕಾ ಸಂಸ್ಥೆಯ, ಶ್ರೀಮಂತ ಮಾಲೀಕರು ರೂಪಿಸಿಕೊಂಡ ರೂಢಿಯಿದು.
ಇನ್ನೊಂದು ಸಂದರ್ಭ. ಸಮೀರ್ ಜೈನ್ ಅವರು ಪತ್ರಿಕೆಯ 175ನೇ ವಾರ್ಷಿಕೋತ್ಸವದ ನಿಮಿತ್ತ ಪಂಚತಾರಾ ಹೋಟೆಲ್್ನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಅವರ ಸಹದ್ಯೋಗಿಯೊಬ್ಬರು ಊಟ ಮಾಡುವಾಗ ಎರಡು-ಮೂರು ಸಲ ಪ್ಲೇಟನ್ನು ಬದಲಾಯಿಸಿದರು. ಇದನ್ನು ಗಮನಿಸಿದ ಸಮೀರ್ ಜೈನ್, “ನೋಡಿ, ಪಂಚತಾರಾ ಹೋಟೆಲ್್ನಲ್ಲಿ ಇಂಥ ಪಾರ್ಟಿಯಲ್ಲಿ ಎಷ್ಟು ಜನ ಊಟ ಮಾಡಿದ್ದಾರೆಂಬುದನ್ನು ಪ್ಲೇಟ್್ಗಳಿಂದ ಲೆಕ್ಕ ಹಾಕುತ್ತಾರೆ. ನೀವು ಊಟ ಮಾಡುವಾಗ ಪ್ರತಿಸಲ ಬೇರೆ ಬೇರೆ ಐಟೆಮ್್ಗಳನ್ನು ಹಾಕಿಕೊಳ್ಳುವಾಗ ಪ್ಲೇಟನ್ನು ಬದಲಿಸಿದರೆ, ಹೆಚ್ಚು ಜನ ಊಟ ಮಾಡಿದ್ದಾರೆಂದು ಹೆಚ್ಚು ಬಿಲ್ ಮಾಡುತ್ತಾರೆ. ಆದ್ದರಿಂದ ಒಂದೇ ಪ್ಲೇಟಿನಿಂದ ಊಟ ಮಾಡಿ’ ಎಂದು ಹೇಳಿದರು.
ಸಮೀರ್್ಜೈನ್ ಹಣ ಉಳಿಸುವ ಸಂಗತಿ ಬಂದಾಗ ಅವು ಎಷ್ಟೇ ಸಣ್ಣಪುಟ್ಟ ಅಂಶಗಳಾಗಿರಲಿ, ಅದನ್ನು ತಮ್ಮ ಸಹೋದ್ಯೋಗಿಗಳಿಗೆ ತಿಳಿಸದೇ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅದನ್ನು ಭಾರತದಲ್ಲಿರುವ ತಮ್ಮ ಎಲ್ಲ ಆವೃತ್ತಿಗಳಲ್ಲೂ ಜಾರಿಗೆ ತರುತ್ತಾರೆ. ಒಮ್ಮೆ ಬಳಸಿದ ಕಾಗದ, ಲಕೋಟೆಗಳನ್ನು ಪುನಃ ಬಳಸುವಂತೆ ಸೂಚಿಸುತ್ತಾರೆ. ಒಂದೇ ಮಗ್ಗುಲಿಗೆ ಬಳಸಿದ ಕಾಗದವನ್ನು ಕಸದ ಬುಟ್ಟಿಗೆ ಎಸೆದಿದ್ದನ್ನು ಕಂಡರೆ ಸುಮ್ಮನೆ ಬಿಡುವುದಿಲ್ಲ. ಖಾಲಿಯಿರುವ ಮಗ್ಗುಲನ್ನು ಬಳಸಿ ಎಂದು ಸೂಚಿಸುತ್ತಾರೆ.
ಲೆಟರ್್ ಹೆಡ್ ನಲ್ಲಿ ಬರೆದಿದ್ದನ್ನು ನೇರವಾಗಿ ಫ್ಯಾಕ್ಸ್ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಹಾಗೆ ಮಾಡುವ ಬದಲು ಆ ಲೆಟರ್್ ಹೆಡ್ ಫೋಟೋಕಾಪಿ (ಜೆರಾಕ್ಸ್) ತೆಗೆದು ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು. ಕಾರಣ ಇಷ್ಟೆ. ಲೆಟರ್್ಹೆಡ್ ಬಳಸಿದ ಕಾಗದವನ್ನು ಫ್ಯಾಕ್ಸ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ, ಇದರಿಂದ ಫೋನ್್ಬಿಲ್ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲು ಲೆಟರ್್ಹೆಡ್್ನ್ನು ಜೆರಾಕ್ಸ್ ಮಾಡಿ ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು.
‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸಂಪಾದಕೀಯ ಮಂಡಳಿಯಲ್ಲಿ ಹಿರಿಯರಲ್ಲೊಬ್ಬರಾಗಿರುವ ಜಗ್ ಸುರಯ್ಯ ಇತ್ತೀಚೆಗೆ ತಾವು ಬರೆದ “JS and The Times of My Life’ ಪುಸ್ತಕದಲ್ಲೂ ಸಮೀರ್ ಜೈನ್ ಕುರಿತು ಪ್ರಸ್ತಾಪಿಸಿದ್ದಾರೆ. ಒಮ್ಮೆ ಜಗ್ ಸುರಯ್ಯ ಅವರು ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಗುಂಡು ಪಾರ್ಟಿ ಮಾಡುತ್ತಿದ್ದರಂತೆ. ಆಗ ಅಲ್ಲಿಗೆ ಬರುವುದಾಗಿ ಸಮೀರ್ ಜೈನ್ ಅವರಿಂದ ಫೋನ್ ಬಂತಂತೆ. ಕೆಲಕ್ಷಣಗಳಲ್ಲಿ ತಮ್ಮ ಪತ್ನಿಯೊಂದಿಗೆ ಆಗಮಿಸಿದರಂತೆ. ಏಳೆಂಟು ಜನರಿದ್ದ ಆ ಪಾರ್ಟಿಯಲ್ಲಿ ಸಮೀರ್ ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಹರಟೆಯನ್ನು ಕುತೂಹಲದಿಂದ ಆಲಿಸುತ್ತಿದ್ದರಂತೆ. ದಿಲ್ಲಿಯಲ್ಲಿ ಗುಂಡು ಹಾಕಲು ಪ್ರಶಸ್ತವಾದ ಹೊಸ ತಾಣಗಳ ಬಗ್ಗೆ ಚರ್ಚೆ ನಡೆಯುತ್ತಿತ್ತಂತೆ. ಆಗ ತಾನೆ ಆರಂಭವಾದ ಸ್ಪಾನಿಶ್ ರೆಸ್ಟೋರೆಂಟ್ ಬಹಳ ಚೆನ್ನಾಗಿದೆ. ಆದರೆ ಬಹಳ ದುಬಾರಿ’ ಎಂದು ಯಾರೋ ಹೇಳಿದಾಗ, “ವಿಶೇಷ ಸಂದರ್ಭದಲ್ಲಿ ಮಾತ್ರ ಹೋಗಬಹುದು’ ಎಂದು ಇನ್ಯಾರೋ ಹೇಳಿದರಂತೆ. ಆಗ ಸಮೀರ್ ಜೈನ್ ಮಧ್ಯಪ್ರವೇಶಿಸಿದಾಗ ಎಲ್ಲರೂ ಮೌನರಾಗಿ ಅವರ ಮಾತಿನೆಡೆ ಲಕ್ಷ್ಯವಿಟ್ಟರಂತೆ. “ಏನು ಹೇಳ್ತಾ ಇದ್ದೀರಾ ನೀವು? ನಿಮಗೆ ಹೆಚ್ಚು ಹಣ ತೆತ್ತು ದುಬಾರಿ ಹೋಟೆಲ್್ಗೆ ಹೋಗೊದಂದ್ರೆ ಇಷ್ಟಾನಾ?’ ಇದರಿಂದ ನಿಮಗೆ ಸಂತಸವಾಗುತ್ತದಾ?’ ಎಂದು ಕೇಳಿದರಂತೆ.
ಅದಕ್ಕೆ ಜಗ್ ಸುರಯ್ಯ “ಹೌದು. ನಮಗೆ ಹಣ ಖರ್ಚು ಮಾಡುವುದೆಂದರೆ ಬಹಳ ಇಷ್ಟ, ಅದೂ ವಿಶೇಷ ಸಂದರ್ಭದಲ್ಲಿ. ನಾವೇನು ಅಲ್ಲಿಗೆ ದಿನಾ ಹೋಗುವುದಿಲ್ಲವಲ್ಲ? ನಮಗೆ ಅಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯವಿರುವಾಗ ಆಗೊಮ್ಮೆ ಈಗೊಮ್ಮೆ ಹೋಗುತ್ತೇವೆ. ಅದಕ್ಕಾಗಿಯೇ ನಮಗೆ ಅಂಥ ಸಂದರ್ಭಗಳು ವಿಶೇಷವೆನಿಸುತ್ತವೆ’ ಎಂದರಂತೆ.
ಅವರ ಮಾತಿಗೆ ತಲೆಯಾಡಿಸಿದ ಸಮೀರ್ ಜೈನ್ “ಓಹೋ ಹೌದಾ? ನಿಮಗೆ ಹಣ ಖರ್ಚು ಮಾಡುವುದೆಂದರೆ ಇಷ್ಟವಾ? ಇಂಟರೆಸ್ಟಿಂಗ್!’ ಎಂದು ಗಂಭೀರವಾಗಿ ಉದ್ಗಾರ ತೆಗೆದರಂತೆ.
ಸಮೀರ್ ಜೈನ್ ಯಾಕೆ ಯಶಸ್ವಿ ಪತ್ರಿಕಾ ಮಾಲೀಕರು ಎಂಬುದು ಈಗ ಅರ್ಥವಾಗಿರಲಿಕ್ಕೆ ಸಾಕು.
ನೀವು ಹೊಂದಿರುವ ಹಣದಿಂದ ನೀವು ಶ್ರೀಮಂತರಾಗುವುದಿಲ್ಲ. ನೀವು ಹಣಕ್ಕೆ ಕೊಡುವ ಮರ್ಯಾದೆಯಿಂದ ಮಾತ್ರ ಶ್ರೀಮಂತರಾಗುತ್ತೀರಿ. ಶ್ರೀಮಂತರಾಗುವವರಿಗೆ ಈ ಅರ್ಹತೆ ಬೇಕು.

Tuesday, 16 June 2015

ಜಗತ್ತನ್ನೇ ಜಯಿಸಿದವ ಅವನ ಮುಂದೆ ಸಣ್ಣವನಾಗಿದ್ದ!


ಕಳೆದ ಕೆಲ ದಿನಗಳಿಂದ ಈ ಪ್ರಸಂಗ ಬಿಟ್ಟೂ ಬಿಡದೇ ನೆನಪಾಗುತ್ತಿದೆ. ಅಲೆಕ್ಸಾಂಡರ್್ನ ಜೀವನದಲ್ಲಿ ನಡೆದ ಘಟನೆಯಿದು. ಅದ್ಯಾಕೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ?
ಅಲೆಕ್ಸಾಂಡರ್ ನಿಧನನಾಗಿದ್ದ. ಆತನ ಪಾರ್ಥಿವ ಶರೀರವನ್ನು ಶವದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇಡೀ ಜಗತನ್ನು ಜಯಿಸುವೆ ಎಂದು ಬೀಗುತ್ತಿದ್ದ ಮತ್ತು ಆ ದಿಸೆಯಲ್ಲಿ ತುಸು ಯಶಸ್ವಿಯೂ ಆದ ಪರಮ ಪರಾಕ್ರಮಿಯ ತಣ್ಣನೆಯ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲೆಕ್ಸಾಂಡರ್ ಅಂದ್ರೆ ಭೌತಿಕ ಉಪಭೋಗದ ಸಂಕೇತ. ಅತ್ಯುತ್ತಮವಾದುದು ಏನೇ ಕಾಣಲಿ, ಅದು ತನಗಿರಲಿ ಎಂದು ಹಪಹಪಿಸುವ ಮನಸ್ಸು ಅವನದು. ಅವನ ಆ ದಾಹಕ್ಕೆ ಅಂತ್ಯವೇ ಇರಲಿಲ್ಲ. ಪ್ರದೇಶ, ದೇಶ, ಉಪಖಂಡ, ಖಂಡಗಳನ್ನು ಒಂದಾದ ನಂತರ ಒಂದರಂತೆ ಗೆಲ್ಲುತ್ತಾ ಹೋದರೂ ಅವನ ಈ ಗೆಲ್ಲುವ, ಸಮರ ಸಾರುವ, ದೇಶವನ್ನು ಕೊಳ್ಳೆ ಹೊಡೆಯುವ ಹುಚ್ಚು ಕೋಡಿ ಮಾತ್ರ ಭೋರ್ಗರೆಯುತ್ತ ಹರಿಯುತ್ತಲೇ ಇತ್ತು. ಜಗತ್ತನ್ನೇ ಜಯಿಸಲು ಹೊರಟವನಿಗೆ ದೇಶ, ಖಂಡಗಳೆಲ್ಲ ಯಾವ ಲೆಕ್ಕ?
ಅಲೆಕ್ಸಾಂಡರ್್ನ ಶವ ತಣ್ಣಗೆ ಮಲಗಿತ್ತು…!
ಬಹಳ ವರ್ಷಗಳ ಕಾಲ ಅವನ ಸಹಾಯಕನಾಗಿದ್ದವ ಪಾರ್ಥೀವ ಶರೀರದ ಹತ್ತಿರ ಬಂದವನೇ ಶವದ ಪೆಟ್ಟಿಗೆಯನ್ನು ತಬ್ಬಿಕೊಂಡು ರೋಧಿಸಲಾರಂಭಿಸಿದ. ಅವನ ಸುತ್ತಲಿದ್ದವರು ಸಹ ಆ ಕರುಣಾಜನಕ ದೃಶ್ಯಕ್ಕೆ ಮೂಕಸಾಕ್ಷಿಗಳಾಗುತ್ತಾ ಕಣ್ಣೀರು ಸುರಿಸಿದರು. ಇನ್ನೇನು ಪಾರ್ಥೀವ ಶರೀರವನ್ನಿಟ್ಟ ಪೆಟ್ಟಿಗೆಯನ್ನು ಮೇಲೆತ್ತಿಕೊಂಡು ಅಂತ್ಯ ಸಂಸ್ಕಾರಕ್ಕೆ ಅಣಿಯಾಗಬೇಕೆಂದು ಎಲ್ಲರೂ ಸಿದ್ಧತೆ ಮಾಡುವಾಗ ಅಲೆಕ್ಸಾಂಡರ್್ನ ಸಹಾಯಕ ಪಕ್ಕದಲ್ಲಿದ್ದ ಜನರಲ್್ಗೆ ಹೇಳಿದ- “ದಯವಿಟ್ಟು ಅಲೆಕ್ಸಾಂಡರ್್ನ ಕೊನೆ ಆಸೆಯನ್ನು ಈಡೇರಿಸಬೇಕು. ಆತ ಸಾಯುವ ಕೆಲ ದಿನಗಳ ಮೊದಲು ಅದೇನು ಎಂಬುದನ್ನು ನನ್ನ ಮುಂದೆ ಅವರು ನಿವೇದಿಸಿಕೊಂಡಿದ್ದರು.”
“ಅದೇನು ಬೇಡಿಕೆ? ಹೇಳು, ಖಂಡಿತಾ ನೆರವೇರಿಸೋಣ” ಎಂದರು.
“ಅದೇನು ಅಂಥ ಮಹಾನ್ ಬೇಡಿಕೆಯೇನಲ್ಲ. ಈಗಲೇ ಈಡೇರಿಸುವಂಥದ್ದು” ಅಂದ.
ಅದಕ್ಕೆ ಜನರಲ್್ಗಳು “ಹೇಳು ಹೇಳು, ಪರವಾಗಿಲ್ಲ. ಜಗತ್ತನ್ನೇ ಗೆದ್ದವನ ಆಸೆಯನ್ನು ಈಡೇರಿಸದೇ ಇರುವುದುಂಟಾ?” ಎಂದರು.
“ಅಲೆಕ್ಸಾಂಡರ್ ಸಾಯುವುದಕ್ಕೆ ಕೆಲ ದಿನಗಳ ಮೊದಲು ಹೀಗೆ ಹೇಳಿದಾಗ ನನಗೂ ನಂಬಲಾಗಲಿಲ್ಲ. ಇದೆಂಥ ಬೇಡಿಕೆ ಎಂದು ನಾನೂ ಉದ್ಗಾರ ತೆಗೆದೆ. ಆದರೆ ಅದಕ್ಕೆ ಅಲೆಕ್ಸಾಂಡರ್ ಕೇಳಲಿಲ್ಲ. ಈಡೇರಿಸಲೇಬೇಕು ಅಂದ.” ಇಷ್ಟು ಹೇಳಿ ಸಹಾಯಕ ಅಲೆಕ್ಸಾಂಡರ್್ನ ಪಾರ್ಥೀವ ಶರೀರವನ್ನೇ ದಿಟ್ಟಿಸಿದ. ಆಗ ಯಾರೂ ಮಾತಾಡಲಿಲ್ಲ.
ತುಸು ಸಾವರಿಸಿಕೊಂಡ ಸಹಾಯಕ ಕೇಳಿದ- “ನಾನು ಸತ್ತಾಗ ನನ್ನ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿಟ್ಟು ಹೋಗುತ್ತೀರಲ್ಲಾ, ಆಗ ನನ್ನ ಎರಡೂ ಕೈಗಳು ಶವಪೆಟ್ಟಿಗೆ ಹೊರಗೆ ಚಾಚಿರಲಿ. ಯಾವುದೇ ಕಾರಣಕ್ಕೂ ಇಲ್ಲ ಎನ್ನಬೇಡಿ ಎಂದು ಅಲೆಕ್ಸಾಂಡರ್ ಹೇಳಿದ್ದಾನೆ. ದಯವಿಟ್ಟು ಇದನ್ನು ನೆರವೇರಿಸಬೇಕು.”
ಜನರಲ್್ಗಳು ಕಕ್ಕಾಬಿಕ್ಕಿಯಾದರು. ಇದೆಂಥ ಬೇಡಿಕೆ? ಶವ ಪೆಟ್ಟಿಗೆ ಹೊರಗೆ ಎರಡೂ ಕೈಗಳು ಚಾಚಬೇಕಂತೆ? ಇದನ್ನು ಈಡೇರಿಸುವುದಾದರೂ ಹೇಗೆ? ಎಂಬ ಪೀಕಲಾಟಕ್ಕೆ ಬಿದ್ದ ಜನರಲ್್ಗಳು ಧರ್ಮಗುರುಗಳನ್ನು ಸಂಪರ್ಕಿಸಿದರು. “ಇದು ಸಾಧ್ಯವೇ ಇಲ್ಲ, ಇದು ಸಂಪ್ರದಾಯ ವಿರೋಧಿ, ಧರ್ಮ ವಿರೋಧಿ. ಅದಕ್ಕಿಂತ ಹೆಚ್ಚಾಗಿ ಶವಕ್ಕೆ ಅವಮರ್ಯಾದೆ ಮಾಡಿದ ಹಾಗೆ. ಹಾಗೆ ಮಾಡಲು ಸಾಧ್ಯವಿಲ್ಲ” ಎಂದಾಗ ನಿಜಕ್ಕೂ ಧರ್ಮಸಂಕಟ ಎದುರಾಯಿತು.
ಅಲೆಕ್ಸಾಂಡರ್ ನ ಶವದ ಮುಂದೆ ಪಂಚಾಯತಿ!
ಆಗ ಅಲೆಕ್ಸಾಂಡರ್ ನ ಸಹಾಯಕ ಹೇಳಿದ- “ಈ ಎಲ್ಲ ಪ್ರಶ್ನೆಗಳು ಎದುರಾಗಬಹುದು ಎಂದು ಅಲೆಕ್ಸಾಂಡರ್ ಗೂ ಗೊತ್ತಿತ್ತು. ಅದಕ್ಕೆ ಅವನೇ ಸಮಜಾಯಿಷಿಯನ್ನೂ ಕೊಟ್ಟಿದ್ದಾನೆ. ಆದ್ದರಿಂದ ಅವನ ಬೇಡಿಕೆಯಂತೆ ಕೈಗಳನ್ನು ಹೊರಗಿಡುವುದು ಪಾರ್ಥೀವ ಶರೀರಕ್ಕೆ ಮಾಡುವ ಅವಮಾನವಲ್ಲ. ಅವನ ದೃಷ್ಟಿಯಿಂದಲೂ ಯೋಚಿಸಿ. ಈ ಅಲೆಕ್ಸಾಂಡರ್ ಇದ್ದಾನಲ್ಲ ಆತ ಕೊನೆಗೆ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲ ಎಂಬುದನ್ನು ಜನ ಕಣ್ಣಾರೆ ನೋಡಲಿ. ನಾನು ಬರುವಾಗ ಖಾಲಿ ಕೈಯಲ್ಲಿ ಬಂದೆ. ಹೋಗುವಾಗಲೂ ಹಾಗೇ ಹೋಗಲು ಬಯಸುತ್ತೇನೆ. ನಾನು ಬಂದಿದ್ದನ್ನು ಜನ ನೋಡಲಿಲ್ಲ. ಖಾಲಿ ಕೈಯಲ್ಲಿ ಹೋಗಿದ್ದನ್ನಾದರೂ ನೋಡಲಿ ಎಂಬುದು ಅವನ ಆಶಯವಾಗಿತ್ತು.
ಅನಂತರ ಅಲೆಕ್ಸಾಂಡರ್ ನ ಕೋರಿಕೆಯಂತೆ ಅವನ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗಿಟ್ಟೇ ಅಂತ್ಯಸಂಸ್ಕಾರ ಮಾಡಲಾಯಿತು!
ಅಲೆಕ್ಸಾಂಡರನಿಗೆ ಅಂಥ ಜರೂರೇನಿತ್ತು?
ಜಗತ್ತನ್ನೇ ಜಯಿಸ ಹೊರಟವನಿಗೆ ಎಲ್ಲವೂ ನಶ್ವರವಾಗಿತ್ತು, ಖಾಲಿಖಾಲಿಯಾಗಿತ್ತು. ತಾನು ಗಳಿಸಿದ್ದೆಲ್ಲ ನಿರರ್ಥಕ, ನಿಷ್ಪ್ರಯೋಜಕ ಎಂಬ ತೀರ್ಮಾನಕ್ಕೆ ಆತ ಬಂದಿದ್ದ. ಆತನಿಗೆ ಅದೆಂಥ ಅಪರಾಧ (Guilt) ಭಾವ ಕಾಡುತ್ತಿದ್ದೀರಬಹುದು? ಆತನಿಗೆ ತಾನು ಜೀವನವಿಡೀ ಸಾಧಿಸಿದ್ದಕ್ಕಿಂತ, ಪಡೆದುದಕ್ಕಿಂತ ಖಾಲಿಯಾಗಿರುವುದರಲ್ಲಿಯೇ ಅಂತಿಮ ಆನಂದ ಕಂಡಿದ್ದ. ತಾನು ಗಳಿಸಿದ್ದೆಲ್ಲವೂ ಶೂನ್ಯ ಎಂದು ಅವನಿಗೆ ಅನಿಸಿತ್ತು. ಶೂನ್ಯವೇ ಹಿತವೆನಿಸಿತ್ತು. ಅದನ್ನು ಇಡೀ ಜಗತ್ತಿನ ಜನ ನೋಡಲಿ ಎಂಬುದು ಆವನ ಆಶಯವಾಗಿತ್ತು.
ಸಾಯುವುದಕ್ಕಿಂತ ಕೆಲ ದಿನಗಳ ಮೊದಲು ತನ್ನ ಪರಮಾಪ್ತ ಜನರಲ್್ನನ್ನು ಕರೆದ ಅಲೆಕ್ಸಾಂಡರ್, “ನಾನು ದೇಶಗಳನ್ನು ಗೆಲ್ಲುವ ಭರದಲ್ಲಿ ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅದೇ ಮಹಾನ್ ಸಾಧನೆ ಎಂದುಕೊಂಡು ಬಿಟ್ಟೆ. ಈಗ ಅನಿಸುತ್ತಿದೆ ನಾನು ನನ್ನ ಇಡೀ ಬದುಕನ್ನೇ ವೃಥಾ ವ್ಯರ್ಥಗೊಳಿಸಿಕೊಂಡು ಬಿಟ್ಟೆ. ದೇಶದೇಶಗಳನ್ನು ಜಯಿಸಿ ನಾನಾದರೂ ಈಗ ಏನು ಮಾಡಲಿ? ನನ್ನ ಅಹಂಕಾರಕ್ಕೆ ನಾನೇ ಬಲಿಯಾಗಿ ಬಿಟ್ಟೆನಾ ಎಂಬ ಭಯಂಕರ ಭಯ ನನ್ನನ್ನು ಕಾಡುತ್ತಿದೆ. ನನ್ನ ಬದುಕನ್ನು ಈ ಭಯ ಸುಡುತ್ತಿದೆ. ನಾನು ಸಾವರಿಸಿಕೊಳ್ಳಲಾಗದಷ್ಟು ಜರ್ಝರಿತನಾಗಿ ಬಿಟ್ಟಿದ್ದೇನೆ” ಎಂದು ತನ್ನ ಮನದಾಳದಲ್ಲಿ ಹೊತ್ತಿ ಉರಿಯುತ್ತಿದ್ದ ಭುಗಿಲನ್ನು ತೋಡಿಕೊಂಡಿದ್ದ.
ಅಲೆಕ್ಸಾಂಡರ್ ಕೊನೆ ಕೊನೆಗೆ ತನ್ನ ಸಾಧನೆಯನ್ನು ನೆನೆನೆನೆದು ಸಣ್ಣವನಾಗುತ್ತಿದ್ದ. ತನ್ನ ಆಪ್ತರ ಮುಂದೆ ಈ ನೋವನ್ನು ಹಂಚಿಕೊಳ್ಳುತ್ತಿದ್ದ. ಇದರಿಂದ ಹೊರಬರುವ ಮಾರ್ಗಗಳ ಬಗ್ಗೆ ಗಾಢವಾಗಿ ಚಿಂತಿಸುತ್ತಿದ್ದ.      ಎಂಥ ವಿಚಿತ್ರ ಅಂದ್ರೆ ಅಲೆಕ್ಸಾಂಡರನಿಗೆ ಸಮಯ ಸಿಕ್ಕಾಗಲೆಲ್ಲ ಡಿಯೋಜಿನಸ್ ಎಂಬ ಭಿಕ್ಷುಕನ ಜತೆ ಕಾಲ ಕಳೆಯಲು ಬಯಸುತ್ತಿದ್ದ. ಡಿಯೋಜಿನಸ್ ಅಲೆಕ್ಸಾಂಡರ್ ನ ವಾರಿಗೆಯವ. ಆತನಿಗೆ ಅವನದ್ದು ಎಂಬುದು ಏನೂ ಇರಲಿಲ್ಲ. ಆತ ಎಲ್ಲವನ್ನೂ ಬಿಟ್ಟಿದ್ದ. ಅವನ ಬಳಿ ಭಿಕ್ಷೆ ಬೇಡಲು ಒಂದು ಭಿಕ್ಷಾ ಪಾತ್ರೆಯಿತ್ತು. ಕೈಗಳಿರುವಾಗ ಆ ಪಾತ್ರೆಯೇಕೆ ಎಂದು ಅದನ್ನು ಬಿಸಾಡಿಬಿಟ್ಟ. ನೀರು ಕುಡಿಯಲು ಅವನ ಬಳಿ ಒಂದು ಪುಟ್ಟ ಲೋಟ ಇತ್ತು. ಒಂದು ದಿನ ಡಿಯೋಜಿನಸ್ ನದಿಯಲ್ಲಿ ನಾಯಿಯೊಂದು ನೀರು ಕುಡಿಯುವುದನ್ನು ನೋಡಿದ. ನಾಯಿಗೆ ನೀರು ಕುಡಿಯಲು ಲೋಟವಾಗಲಿ, ಪಾತ್ರೆಯಾಗಲಿ ಬೇಡ ಎಂತಾದರೆ ನನಗೇಕೆ ಬೇಕು ಎಂದು ತನ್ನ ಕೈಯಲ್ಲಿದ್ದ ಲೋಟವನ್ನು ಸಹ ಬಿಸಾಡಿ ಬಿಟ್ಟ. ಆಗ ಅವನ ಬಳಿ ಏನೇನೂ ಇರಲಿಲ್ಲ. ಅದು ತನ್ನ ಅತ್ಯಂತ ಸಂಭ್ರಮದ ಕ್ಷಣ ಅಂತ ಆತ ಹೇಳಿಕೊಂಡಿದ್ದ.
ಡಿಯೋಜಿನಸ್ ಬಗ್ಗೆ ಅಲೆಕ್ಸಾಂಡರ್ ಕಾಲಕಾಲಕ್ಕೆ ಸುದ್ದಿ ಬರುತ್ತಿದ್ದವು. ಅವನ ಬಗ್ಗೆ ತರೇಹವಾರಿ ಕತೆಗಳನ್ನು ಜನ ಹೇಳುತ್ತಿದ್ದರು. ಡಿಯೋಜಿನಸ್್ನನ್ನು ಒಮ್ಮೆ ಭೇಟಿಯಾಗಲೇಬೇಕು ಎಂದು ಅಲೆಕ್ಸಾಂಡರ್್ಗೆ ಅನಿಸಿತು. ಆದರೆ ಡಿಯೋಜಿನಸ್ ಅಲೆಗ್ಸಾಂಡರ್ ನನ್ನು ಭೇಟಿಯಾಗಲು ಅಂಥ ಆಸಕ್ತಿ ತೋರಲಿಲ್ಲ. ಇದರಿಂದ ಅಲೆಕ್ಸಾಂಡರ್ ಗೆ ಆತನಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿತು. ಇಡೀ ಜಗತ್ತನ್ನೇ ಜಯಿಸಿದವನು ತನ್ನನ್ನು ಕಾಣಲು ಮುಂದೆ ಬಂದರೆ, ನಿರ್ಲಕ್ಷಿಸುತ್ತಿದ್ದಾನಲ್ಲ ಎಂದು ಅವನಲ್ಲಿ ಬೆರಗು ಹುಟ್ಟಿತು. ಬಿಡಲಿಲ್ಲ ಕೊನೆಗೆ ಅಲೆಕ್ಸಾಂಡರ್ ಡಿಯೋಜಿನಸ್್ನನ್ನು ಭೇಟಿಯಾದ.
ಡಿಯೋಜಿನಸ್ ನನ್ನು ಭೇಟಿಯಾದಾಗ ಅವನ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ. ಅವನದೆಂಬುದು ಏನೂ ಇರಲಿಲ್ಲ. ಆದರೆ ಅವನ ಮುಖದಲ್ಲಿ ಅದ್ಭುತ ಕಾಂತಿ, ಸಮಾಧಾನದ ಮುದ್ರೆ ನೆಲೆಸಿತ್ತು. ನೆಮ್ಮದಿ ಅವನ ಮನಸ್ಸಿನಲ್ಲಿ ಜೋಕಾಲಿಯಾಡುತ್ತಿದೆಯೆಂದು ಯಾರು ಬೇಕಾದರೂ ಹೇಳಬಹುದಿತ್ತು.
ಡಿಯೋಜಿನಸ್್ನನ್ನು ಭೇಟಿಯಾದ ಮರುಗಳಿಗೆಯಲ್ಲೇ ಅಲೆಕ್ಸಾಂಡರ್ ಗೆ ಅನಿಸಿತು, ನನ್ನಲ್ಲಿ ಯಾವುದು ಇಲ್ಲವೋ ಅವೆಲ್ಲವೂ ಇವನಲ್ಲಿದೆ. ಯಾಕೆಂದರೆ ನನ್ನಲ್ಲಿ ಇರುವ ಯಾವ ಸಂಗತಿಯೂ ಇವನಲ್ಲಿ ಇಲ್ಲ. ಹೀಗಾಗಿ ಈತ ಇಷ್ಟೊಂದು ನಿಶ್ಚಿಂತೆಯಿಂದ ಇದ್ದಾನೆ. ಅಲೆಕ್ಸಾಂಡರ್ ಬಂದ ಕೂಡಲೇ ಡಿಯೋಜಿನಸ್್ನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಕಾರಣ ಅವನಿಗೆ ಅಲೆಕ್ಸಾಂಡರ್್ನಿಂದ ಆಗುವುದೇನೂ ಇರಲಿಲ್ಲ. ಹೀಗಾಗಿ ಆತ ಬರುತ್ತಿದ್ದಂತೆ ಡಿಯೋಜಿನಸ್ ತನ್ನ ಪಾಡಿಗೆ ನೆಲದ ಮೇಲೆ ಮಲಗಿಬಿಟ್ಟ. ತುಸು ಹೊತ್ತು ನಿದ್ದೆ ಹೋದ. ಅಲೆಕ್ಸಾಂಡರ್ ಅವನ ಪಕ್ಕದಲ್ಲಿಯೇ ಸುಮ್ಮನೆ ಕುಳಿತಿದ್ದ. ಅದಾದ ನಂತರ ಡಿಯೋಜಿನಸ್ ಪಕ್ಕದ ನದಿಗೆ ಹೋಗಿ ಬೊಗಸೆ ತುಂಬಾ ನೀರು ಕುಡಿದ. ಅಲ್ಲಿಯೇ ಸ್ನಾನ ಮಾಡಿದ. ಆನಂತರ ಅದೇ ನದಿ ತಟದ ಮರಳು ಹಾಸಿನ ಮೇಲೇ ಮಲಗಿ ಸೂರ್ಯನ ಶಾಖಕ್ಕೆ ಮೈಯೊಡ್ಡಿದ. ಆತನ ಮುಖದಲ್ಲಿ ಸಂತೃಪ್ತಿಯ ಭಾವ ಹಾಸಿತ್ತು.
ಇದನ್ನು ಕಂಡ ಅಲೆಕ್ಸಾಂಡರ್,”ಡಿಯೋಜಿನಸ್, ನಾನು ಅಲೆಕ್ಸಾಂಡರ್. ನಿನ್ನನ್ನು ನೋಡಲೆಂದೇ ಬಂದಿದ್ದೇನೆ. ಹೆಚ್ಚು ಕಮ್ಮಿ ಇಡೀ ಜಗತ್ತನ್ನೇ ಜಯಿಸಿದವನು ನಾನು. ನಿನಗೆ ನನ್ನಿಂದ ಏನಾಗಬೇಕು ಹೇಳು, ಈಗಲೇ ನಿನಗೆ ಎಲ್ಲವನ್ನೂ ಕರುಣಿಸುತ್ತೇನೆ’ ಎಂದ. ಅದಕ್ಕೆ ಡಿಯೋಜಿನಸ್ ಶಾಂತವಾಗಿ ಹೇಳಿದ-”ನಾನು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದೇನೆ. ದಯವಿಟ್ಟು ನನ್ನ ಹಾಗೂ ಸೂರ್ಯನ ಮಧ್ಯೆ ನಿಲ್ಲದಿದ್ದರೆ ಅದೇ ನನಗೆ ನೀನು ಮಾಡುವ ಮಹದುಪಕಾರ’ ಎಂದವನೇ ಮಗ್ಗಲು ಬದಲಿಸಿ ಆ ಉಸುಕು ಹಾಸಿನ ಮೇಲೆ ಮಲಗಿಬಿಟ್ಟ.
ಆ ದಿನವಿಡೀ ಅಲೆಕ್ಸಾಂಡರ್ ಡಿಯೋಜಿನಸ್ ಪಕ್ಕದಲ್ಲೇ ಕುಳಿತು ಅವನ ಚಲನವಲನಗಳನ್ನೆಲ್ಲ ದಿಟ್ಟಿಸುತ್ತಿದ್ದ. ಒಂದು ಇರುವೆ, ಹುಳ ಹೋದರೆ ಹೇಗೆ ಗೊತ್ತಾಗುವುದಿಲ್ಲವೋ, ಅಲೆಕ್ಸಾಂಡರ್ ಸುತ್ತಮುತ್ತ ಸುಳಿದಾಡುತ್ತಿದ್ದುದು ಕೂಡ ಡಿಯೋಜಿನಸ್ ಗೆ ಗೊತ್ತಾಗಲಿಲ್ಲ. ಆತ ಒಮ್ಮೆಯೂ ಅಲೆಕ್ಸಾಂಡರ್ ನ ಕಡೆಗೆ ಗಮನವನ್ನು ಹರಿಸಲಿಲ್ಲ.
ಅಲೆಕ್ಸಾಂಡರ್ ಗೆ ಆ ಫಕೀರನ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿತು. ಅವನ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿ, ಕೊನೆಗೆ ಇನ್ನು ಪರೀಕ್ಷಿಸಿ ಫಲವಿಲ್ಲವೆಂದು ಭಾವಿಸಿದ. ಡಿಯೋಜಿನಸ್ ನ ಸಾಚಾತನ ಅವನಲ್ಲಿ ಅಸಾಧಾರಣ ಪರಿವರ್ತನೆಯನ್ನು ತಂದಿತು. ಜಗತ್ತಿನಲ್ಲಿ ಹೀಗೂ ಸಮಾಧಾನ, ಸಾರ್ಥಕ್ಯವಾಗಲು ಸಾಧ್ಯವಾ ಎಂದೆನಿಸಿತು.
ಡಿಯೋಜಿನಸ್್ನ ಮುಂದೆ ತಲೆಬಾಗಿ,”ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ, ದೇವರೇ, ನನ್ನನ್ನು ಪುನಃ ಅಲೆಗ್ಸಾಂಡರ್ ನನ್ನಾಗಿ ಹುಟ್ಟಿಸಬೇಡ. ಡಿಯೋಜಿನಸ್್ನಾಗಿ ಹುಟ್ಟಿಸು ಎಂದು ಪ್ರಾರ್ಥಿಸುತ್ತೇನೆ’ ಎಂದು ವಿನಮ್ರನಾಗಿ ನುಡಿದ.
ಆಗ ಡಿಯೋಜಿನಸ್ ಜೋರಾಗಿ ನಕ್ಕು ಬಿಟ್ಟ.”ಅಲೆಕ್ಸಾಂಡರ್, ನಿನ್ನ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಿನ ಜನ್ಮದವರೆಗೆ ಕಾಯಬೇಕಿಲ್ಲ. ಈಗಲೇ, ನಿಂತಲ್ಲೇ ಡಿಯೋಜಿನಸ್ ಆಗಬಹುದು. ಅಲೆಕ್ಸಾಂಡರ್ ಆಗುವುದು ಕಷ್ಟ. ಡಿಯೋಜಿನಸ್ ಆಗುವುದು ಭಲೇ ಸುಲಭ. ನೀನ್ಯಾಕೆ ಈ ಪಾಟಿ ಸಂಘರ್ಷಕ್ಕೆ ಬಿದ್ದಿದ್ದೀಯಾ?  ಈ ಹೋರಾಟ ಯಾರಿಗಾಗಿ ಎಂದು ಕೇಳಿದ. ಅದಕ್ಕೆ ಅಲೆಕ್ಸಾಂಡರ್ ಹೇಳಿದ- ಮೊದಲು ನಾನು ಮಧ್ಯ ಏಷ್ಯಾವನ್ನು ಗೆದ್ದೆ. ಆನಂತರ ಭಾರತವನ್ನು ಗೆದ್ದೆ. ಬಳಿಕ ಪೂರ್ವ ದೇಶಗಳು….’
‘ಅದಾದ ಬಳಿಕ ಮುಂದೇನು ಮಾಡ್ತೀಯಾ?’ ಎಂದು ಡಿಯೋಜಿನಸ್ ಕೇಳಿದ್ದಕ್ಕೆ ಅಲೆಕ್ಸಾಂಡರ್”ಇಡೀ ಜಗತ್ತನ್ನು ಗೆದ್ದು ವಿರಮಿಸಬೇಕೆಂದಿದ್ದೇನೆ’ ಎಂದ. ಅವನ ಮಾತಿಗೆ ಜೋರಾಗಿ ನಕ್ಕ ಡಿಯೋಜಿನಸ್”ಮುಠ್ಠಾಳ, ನನ್ನನ್ನು ನೋಡು, ನಾನು ಜಗತ್ತನ್ನು ಗೆಲ್ಲದೇ ಸುಖವಾಗಿ ವಿರಮಿಸುತ್ತಿದ್ದೇನೆ. ಬಾ, ನನ್ನ ಪಕ್ಕದಲ್ಲಿ ಬಂದು ಮಲಗು. ನದಿ ತಟ ಬಹಳ ವಿಶಾಲವಾಗಿದೆ. ಇಲ್ಲಿ ಯಾರೂ ಯಾರಿಗೆ ಉಪದ್ರವ ಕೊಡುವುದಿಲ್ಲ. ಇಲ್ಲಿ ಮಲಗಿ ನೋಡು. ನಿನಗೆ ಜಗತ್ತನ್ನೇ ಗೆಲ್ಲಬೇಕೆಂದು ಅನಿಸುವುದಿಲ್ಲ. ಮೈ ಚೆಲ್ಲಿದರೆ ಸುಖ ನಿದ್ದೆ ಆವರಿಸುತ್ತದೆ’ ಎಂದವನೇ ಎರಡೂ ಕೈಗಳನ್ನು ತಲೆದಿಂಬಾಗಿಸಿಕೊಂಡು ಮಲಗಿ ಬಿಟ್ಟ!
 
ಅಲೆಕ್ಸಾಂಡರ್ ಆತನೆದುರು ಸಣ್ಣವನಾಗಿಬಿಟ್ಟ.
ಅಲ್ಲಿಂದ ಹೊರಡುವ ಮುನ್ನ ಅಲೆಕ್ಸಾಂಡರ್ ಹೇಳಿದ-”ನೀನು ಹೇಳೋದು ಸತ್ಯ. ನಾನು ಮುಠ್ಠಾಳನೇ. ಆದರೆ ನಾನು ಜಗತ್ತನ್ನು ಗೆಲ್ಲಬೇಕು. ಗೆದ್ದು ಬಂದು ನಿನ್ನ ಪಕ್ಕ ಮಲಗುತ್ತೇನೆ.’
ಅದಕ್ಕೆ ಡಿಯೋಜಿನಸ್ ಹೇಳಿದ-”ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ವಾಪಸ್ ಬರಲಾರೆ. ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ಇಲ್ಲಿಂದ ಕದಲುತ್ತಿರಲಿಲ್ಲ. ನೀನಂತೂ ಇಲ್ಲಿಗೆ ಪುನಃ ಬರುವುದಿಲ್ಲವೆಂಬುದು ನನಗೆ ಖಾತ್ರಿಯಾಗಿದೆ.’
ಅಲೆಕ್ಸಾಂಡರ್ ವಾಪಸ್ ಬರಲಿಲ್ಲ. ಮನೆ ತಲುಪುವ ಮೊದಲೇ ನಿಧನನಾದ.

Monday, 15 June 2015

ಮಕ್ಕಳ ಮೋಹದ ಮುಂದೆ ಯಾವ ಆಸ್ತಿಯೂ ದೊಡ್ಡದಲ್ಲ…!


ಮಕ್ಕಳ ಮೇಲೆ ತಾಯ್ತಂದೆಯರು ಹೊಂದಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ, ಮಕ್ಕಳ ಹೊರತಾಗಿ ಪೋಷಕರಿಗೆ ಬೇರೊಂದು ಜಗತ್ತೇ ಇರುವುದಿಲ್ಲ. ಒಬ್ಬ ವ್ಯಕ್ತಿ ದಿನಕ್ಕೆ ಕೋಟಿ ಕೋಟಿ ದುಡಿಯುವವನಾಗಿರಬಹುದು. ಅಥವಾ ಭಿಕ್ಷೆ ಯಾಚಿಸುತ್ತಾ ಹೊಟ್ಟೆ ಹೊರೆಯುವವನೇ ಆಗಿರಬಹುದು. ಈ ಎರಡೂ ವರ್ಗಕ್ಕೆ ಸೇರಿದ ಜನರಿಗೆ ಅಷ್ಟೈಶ್ವರ್ಯ ಕಂಡಾಗ ಆಗುತ್ತದಲ್ಲ, ಅದಕ್ಕಿಂತ ಹೆಚ್ಚಿನ ಖುಷಿ ಮಕ್ಕಳನ್ನು ಕಂಡಾಗ ಆಗುತ್ತದೆ. ಪ್ರತಿಯೊಬ್ಬ ಪೋಷಕರ ಕನಸು ಹಾಗೂ ಭವಿಷ್ಯದ ಲೆಕ್ಕಾಚಾರದಲ್ಲಿ ಮಕ್ಕಳೇ ಇರುತ್ತಾರೆ. ಮಕ್ಕಳು ತಮ್ಮ ಕೊನೆಗಾಲದಲ್ಲಿ ಹೇಗೆಲ್ಲಾ ಆಸರೆಯಾಗಬಹುದು ಎಂದು ಕನಸು ಕಾಣದ ಪೋಷಕರೇ ಇಲ್ಲ ಎನ್ನಬಹುದು. ಆದರೆ ಕಂಡ ಕನಸುಗಳೆಲ್ಲ ನನಸಾಗುವುದಿಲ್ಲ. ಒಂದೊಂದು ಸಂದರ್ಭದಲ್ಲಿ ಪೋಷಕರನ್ನು ಅವರ ಕಡೆಗಾಲದಲ್ಲಿ ಪ್ರೀತಿಯಿಂದ ಜೋಪಾನ ಮಾಡಬೇಕು ಎಂದು ಮಕ್ಕಳೂ ಆಸೆಪಟ್ಟಿರುತ್ತಾರೆ. ಆದರೆ ಅದಕ್ಕೆ ವಿಧಿ ಎಂಬುದು ಅವಕಾಶ ಮಾಡಿಕೊಡುವುದಿಲ್ಲ. ಇಂಥ ಸಂದರ್ಭದಲ್ಲಿ ಪೋಷಕರಿಗೆ ಉಂಟಾಗುವ ಆಘಾತ ಹಾಗೂ ಮಕ್ಕಳ ವಿಷಯದಲ್ಲಿ ಅವರು ಹೊಂದಿದ ಆದಮ್ಯ ಪ್ರೀತಿಗೆ ಸಾಕ್ಷಿ ಹೇಳುವ ಕಥೆಯೊಂದು ಇಲ್ಲಿದೆ:
>>>>>>>
ಅವನ ಪೂರ್ತಿ ಹೆಸರು ಗಣಾಚಾರಿ. ಜನ ಅವನನ್ನು ‘ಆಚಾರ್ರೇ’ ಎಂದು ಕರೆಯುತ್ತಿದ್ದರು. ಈ ಗಣಾಚಾರಿ, ಶಿಲ್ಪ ಕಲಾವಿದ. ಬಗೆಬಗೆಯ ಮೂರ್ತಿಗಳನ್ನು ಕೆತ್ತುವುದು, ಹಳೆಯ ವಿಗ್ರಹಗಳನ್ನು ಸಂಗ್ರಹಿಸಿ ಮಾರುವುದು ಅವನ ಕಸುಬಾಗಿತ್ತು. ಇದರಲ್ಲಿ ಒಳ್ಳೆಯ ಲಾಭವೂ ಇತ್ತು. ಜೀವನದಲ್ಲಿ ಸೆಟಲ್ ಆಗುವ ವೇಳೆಗೆ ಗಣಾಚಾರಿಗೂ ನಲವತ್ತು ದಾಟಿತ್ತು. ಹೀಗಿರುವಾಗಲೇ ಆಗಬಾರದ್ದು ಆಗಿಹೋಯ್ತು. ಮದುವೆಯ ಹತ್ತನೇ ವಾರ್ಷಿಕೋತ್ಸವ ನಡೆದ ಕೆಲವೇ ದಿನಗಳಲ್ಲಿ ಗಣಾಚಾರಿಯ ಪತ್ನಿ ಕಾಯಿಲೆಯ ಕಾರಣದಿಂದ ತೀರಿಹೋದಳು. ಈ ವೇಳೆಗೆ ಗಣಾಚಾರಿಗೆ ಒಬ್ಬ ಮಗನಿದ್ದ.
ಮುದ್ದಿನ ಮಗನಿಗೆ ಮಲತಾಯಿಯ ಕಾಟ ಶುರುವಾಗಬಹುದು ಎಂಬ ಚಿಂತೆಯಿಂದ ಗಣಾಚಾರಿ ಎರಡನೇ ಮದುವೆಯಾಗಲಿಲ್ಲ. ತನಗೆ ಗೊತ್ತಿದ್ದ ಎಲ್ಲವನ್ನೂ ಮಗನಿಗೆ ಹೇಳಿಕೊಟ್ಟ. ಚೆನ್ನಾಗಿ ಓದಿಸಿದ. ಡಿಗ್ರಿ ಮುಗಿಸಿದ ಮಗ ಮಿಲಿಟರಿಗೆ ಸೇರುವೆನೆಂದಾಗ ಒಲ್ಲದ ಮನಸ್ಸಿಂದ ಒಪ್ಪಿಗೆ ಕೊಟ್ಟ. ವರ್ಷದ ಕೊನೆಯಲ್ಲಿ ರಜೆಗೆಂದು ಬಂದಾಗ, ಅಪ್ಪನೊಂದಿಗೆ ಮಗನೂ ಶಿಲ್ಪಗಳ ತಯಾರಿಗೆ ಮುಂದಾಗುತ್ತಿದ್ದ. ವ್ಯಾಪಾರ ವ್ಯವಹಾರದಲ್ಲಿ ಮುಳುಗಿ ಹೋಗುತ್ತಿದ್ದ. ಪರಿಣಾಮವಾಗಿ ಅವನ ಮನೆ ಎಂಬುದು ಮಿನಿ ಸಂಗ್ರಹಾಲಯವೇ ಆಗಿಹೋಯಿತು. ದೇಶ ವಿದೇಶಗಳ ಹೆಸರಾಂತ ಚಿತ್ರಕಲಾವಿದರ ಕಲಾಕೃತಿಗಳು ಈ ಅಪ್ಪ-ಮಗನ ಸಂಗ್ರಹದಲ್ಲಿದ್ದವು.
ಹೀಗೇ, ಇಪ್ಪತ್ತು ವರ್ಷಗಳು ಕಳೆದು ಹೋದವು. ಅದೊಮ್ಮೆ ಅಲ್ಪಾವಧಿ ರಜೆ ಹಾಕಿ ಮನೆಗೆ ಬಂದ ಮಗ ತಂದೆಗೆ ಹೇಳಿದ. ‘ಇನ್ನು ನಾಲ್ಕು ತಿಂಗಳು ಕೆಲಸ ಮಾಡಿದರೆ ನಂತರ ನಿವೃತ್ತಿ ಸಿಗುತ್ತದೆ. ಮುಂದೆ ಶಾಶ್ವತವಾಗಿ ನಿನ್ನೊಂದಿಗೇ ಇದ್ದು ಬಿಡುತ್ತೇನೆ.’ ಹೀಗೆ ಹೇಳಿದ್ದು ಮಾತ್ರವಲ್ಲ, ಮನೆಯಲ್ಲಿದ್ದ ಎಲ್ಲ ಕಲಾಕೃತಿಗಳನ್ನು ಒಪ್ಪವಾಗಿ ಜೋಡಿಸಿಟ್ಟು ಹೋದ ಮಗನನ್ನು ಕಂಡು ಗಣಾಚಾರಿಗೆ ತುಂಬ ಖುಷಿಯಾಯಿತು. ನಾಲ್ಕು ತಿಂಗಳ ನಂತರ ಮಗನ ಆರೈಕೆಯ ಮಧ್ಯೆ ತಾನು ಹೇಗೆಲ್ಲಾ ಸಂಭ್ರಮಿಸಬಹುದು ಎಂದು ಊಹಿಸಿಕೊಳ್ಳುತ್ತಾ ಗಣಾಚಾರಿ ಮೇಲಿಂದ ಮೇಲೆ ಖುಷಿಪಡುತ್ತಿದ್ದ.
ಆದರೆ, ಆನಂತರದಲ್ಲಿ ಯಾರೂ ಊಹಿಸದ ಘಟನೆಗಳು ನಡೆದು ಹೋದವು. ನೆರೆಯ ರಾಷ್ಟ್ರ ದಿಢೀರನೆ ಯುದ್ಧ ಸಾರಿತು. ಪತ್ರಿಕೆ ಹಾಗೂ ಟಿ.ವಿ.ಗಳಲ್ಲಿ ದಿನವೂ ಯುದ್ಧದ ಸುದ್ದಿಗಳೇ ಕೇಳಿ ಬರತೊಡಗಿದವು . ಗಣಾಚಾರಿ, ಜೀವವನ್ನು ಕೈಲಿ ಹಿಡಿದುಕೊಂಡು ದಿನಕ್ಕೆ ಹತ್ತು ಬಾರಿ ದೇವರ ಮುಂದೆ ಕೂತು ಪ್ರಾರ್ಥಿಸುತ್ತಿದ್ದ: ‘ದೇವರೇ, ನನ್ನ ಮಗನಿಗೆ ಯಾವುದೇ ತೊಂದರೆ ಬಾರದಿರಲಿ. ಅವನೊಂದಿಗೆ ಬದುಕಿನ ಕೊನೆಯ ದಿನಗಳನ್ನು ಕಳೆಯಬೇಕು ಅಂದುಕೊಂಡಿರುವ ನನ್ನ ಆಸೆ ಕನಸಾಗಿಯೇ ಉಳಿಯದಿರಲಿ…’
ಗಣಾಚಾರಿಯ ಪ್ರಾರ್ಥನೆ ದೇವರಿಗೆ ಕೇಳಲಿಲ್ಲವೋ ಅಥವಾ ಅವನ ಮಗನ ಅದೃಷ್ಟವೇ ಖೊಟ್ಟಿಯಿತ್ತೋ ಗೊತ್ತಿಲ್ಲ. ಅದೊಂದು ಮಧ್ಯಾಹ್ನ ಗಣಾಚಾರಿಗೆ ಒಂದು ಟೆಲಿಗ್ರಾಂ ಬಂತು. ಹೌದು. ಅವನ ಒಬ್ಬನೇ ಮಗ ಸತ್ತುಹೋಗಿದ್ದ. ಶತ್ರುಗಳ ಗುಂಡೇಟಿಗೆ ಬಲಿಯಾಗುವ ಮುನ್ನ ಹನ್ನೆರಡು ಮಂದಿ ಸೈನಿಕರ ಜೀವ ಉಳಿಸಿ ಆತ ಹುತಾತ್ಮನಾಗಿದ್ದ. ಎರಡು ದಿನಗಳ ನಂತರ ಮೃತ ಯೋಧನ ಶವವಿದ್ದ ಕಾಫಿನ್ ಬಂತು. ಆಗಲೂ ಸೇನೆಯ ಹಿರಿಯ ಅಧಿಕಾರಿಗಳು ಗಣಾಚಾರಿಯ ಮಗನ ಶೌರ್ಯವನ್ನು ಬಗೆಬಗೆಯಲ್ಲಿ ಬಣ್ಣಿಸಿದರು.
ಸಂಧ್ಯಾ ಕಾಲದಲ್ಲಿ ಆಸರೆಯಾಗುವನೆಂದು ಭಾವಿಸಿದ್ದ ಮಗನ ದಿಢೀರ್ ಅಗಲಿಕೆ ಗಣಾಚಾರಿಗೆ ಚೇತರಿಸಿಕೊಳ್ಳಲಾಗದಂಥ ಪೆಟ್ಟು ನೀಡಿತು. ಆತ ಮಗನ ಕನವರಿಕೆಯಲ್ಲಿ ಊಟ ಮರೆತ. ನಿದ್ರೆ ಮರೆತ. ಒಂದರ್ಥದಲ್ಲಿ ಅರಳುಮರಳಿಗೆ ಒಳಗಾದವನಂತೆ ಬದುಕಲು ಆರಂಭಿಸಿದ. ಪರಿಣಾಮವಾಗಿ, ಮನೆಯೊಳಗಿನ ಕಲಾಕೃತಿಗಳಿಗೆ ಧೂಳು ಮೆತ್ತಿಕೊಂಡಿತು. ನಂತರದ ಕೆಲವೇ ದಿನಗಳಲ್ಲಿ ಜೇಡವೂ ಅಲ್ಲಿ ಬಲೆ ಹೆಣೆಯಿತು. ಇಷ್ಟಾದರೂ ಗಣಾಚಾರಿ ಯಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಮುತ್ತಿನಂಥ ಮಗನೇ ಹೋದ ಮೇಲೆ ಈ ಆಸ್ತಿಯ ಮೋಹವೇಕೆ ಎಂದುಕೊಂಡು ಸುಮ್ಮನೆ ಉಳಿದು ಬಿಟ್ಟ. ಆತ ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ಆರಂಭದ ಒಂದೆರಡು ತಿಂಗಳು ಅಯ್ಯೋ ಪಾಪ ಎಂದು ಅನುಕಂಪ ತೋರಿಸಿದ ಜನ ನಂತರದ ದಿನಗಳಲ್ಲಿ ಅವನನ್ನು ಮರೆತವರಂತೆ ಉಳಿದುಬಿಟ್ಟರು.
ಈ ಮಧ್ಯೆಯೇ ಕಣ್ಮರೆಯಾಗಿದ್ದ ಮಗನ ಹುಟ್ಟುಹಬ್ಬದ ದಿನ ಬಂತು. ಅವತ್ತು ಗಣಾಚಾರಿ ತುಂಬ ಉತ್ಸಾಹದಿಂದ ಎದ್ದು ಕೂತ. ಮಗನ ಭಾವಚಿತ್ರವನ್ನು ಒರೆಸಿದ. ಅದಕ್ಕೆ ಹೂವಿನ ಹಾರ ಹಾಕಿದ. ಆ ಭಾವಚಿತ್ರದ ಮುಂದೆ ನಿಂತು ಮಾತಾಡಿದ. ಹಳೆಯದೆಲ್ಲಾ ನೆನಪಾಗಿ ಕಣ್ತುಂಬಿಕೊಂಡ. ಹೀಗಿರುವಾಗಲೇ ಯಾರೋ ಬಾಗಿಲು ಬಡಿದಂತಾಯಿತು. ಹಿಂದೆಯೇ -ಸ್ವಾಮೀ, ಬಾಗಿಲು ತೆಗೀತೀರಾ ಎಂಬ ದನಿಯೂ ಕೇಳಿಬಂತು. ಗಣಾಚಾರಿ, ಅನುಮಾನಿಸುತ್ತಲೇ ಬಂದು ಬಾಗಿಲು ತೆರೆದ. ಎದುರಿಗೆ ಅಪರಿಚಿತ ಯುವಕನನ್ನು ಕಂಡು, ನೀವು ಯಾರು, ನನ್ನಿಂದ ಏನಾಗಬೇಕಿತ್ತು ಎಂದು ಪ್ರಶ್ನಿಸಿದ.
‘ಯಜಮಾನರೇ ನಾನೊಬ್ಬ ಯೋಧ. ನಿಮ್ಮ ಮಗನಿಂದಾಗಿ ಜೀವ ಉಳಿಸಿಕೊಂಡವ ನಾನು. ನನ್ನಂಥ ಹನ್ನೆರಡು ಮಂದಿಯ ಜೀವ ಉಳಿಸಿದ ಧೀರ ನಿಮ್ಮ ಮಗ. ಅವನ ಅಗಲಿಕೆ ನಿಮಗೆ ಎಂಥ ನೋವು ಕೊಟ್ಟಿದೆ ಎಂದು ನಾನು ಅಂದಾಜು ಮಾಡಿಕೊಳ್ಳಬಲ್ಲೆ. ಇವತ್ತು ಅವನ ಹುಟ್ಟುಹಬ್ಬದ ದಿನ ಎಂಬುದನ್ನೂ ನಾನು ಬಲ್ಲೆ. ಮತ್ತೊಂದು ಮುಖ್ಯ ವಿಷಯ. ಏನೆಂದರೆ, ನಾನೂ ಒಬ್ಬ ಚಿತ್ರ ಕಲಾವಿದ. ಈ ಸಂಗತಿ ನಿಮ್ಮ ಮಗನಿಗೂ ಗೊತ್ತಿತ್ತು. ನನ್ನದೊಂದು ಚಿತ್ರ ಬರೆದಿಡು. ನನ್ನ ಹುಟ್ಟುಹಬ್ಬದ ದಿನ ನಿನ್ನನ್ನು ಊರಿಗೆ ಕರೆದೊಯ್ಯುತ್ತೇನೆ. ಹುಟ್ಟುಹಬ್ಬದ ನೆಪದಲ್ಲಿ ನನಗೆ ಈ ಕಾಣಿಕೆ ಕೊಡು. ಹಾಗೆ ಮಾಡಿದರೆ, ಹಳ್ಳಿಯಲ್ಲಿರುವ ನಮ್ಮ ತಂದೆಯ ಕಂಗಳಲ್ಲಿ ಸಾವಿರ ಮಿಂಚು ಕೊರೈಸಿದಾಗ ಕಾಣುವಂಥ ಸಂತೋಷ ಕಾಣಿಸುತ್ತದೆ. ನಮ್ಮ ತಂದೆ ಕೂಡ ಹೆಸರಾಂತ ಶಿಲ್ಪಿ. ನಮ್ಮ ಮನೆಯೆಂಬುದು ಕಲಾಕೃತಿಗಳ ಸಂಗ್ರಹಾಲಯದಂತಿದೆ’ ಎಂದೆಲ್ಲ ನಿಮ್ಮ ಮಗನೇ ಹೇಳಿದ್ದ. ಅವನ ಅಭಿಲಾಷೆಯಂತೆಯೇ ಚಿತ್ರ ಬರೆದು ತಂದಿದ್ದೇನೆ. ನೀವು ಕೃಪೆ ಮಾಡಿ ಸ್ವೀಕರಿಸಬೇಕು ಎಂದವನೇ ಆಳೆತ್ತರದ ಕಲಾಕೃತಿಯೊಂದನ್ನು ನೀಡಿದ.
ನಿಜಕ್ಕೂ ಆ ಚಿತ್ರ ಅದ್ಭುತವಾಗಿತ್ತು. ಅದನ್ನು ನೋಡಿ ಆನಂದಪರವಶನಾದ ಗಣಾಚಾರಿ, ಕಂದಾ, ಮಗೂ, ದೊರೇ ಎಂದು ಚೀರುತ್ತಾ, ಕಣ್ಣೀರಾಗಿ ಹೋದ. ನಂತರ ಚೇತರಿಸಿಕೊಂಡು ಮಗನ ಗೆಳೆಯನನ್ನು ಆದರಿಸಿದ. ಹೊಗಳಿದ. ಪ್ರೀತಿಯಿಂದ ಮಾತಾಡಿಸಿದ. ತನ್ನ ಸಂಗ್ರಹದಲ್ಲಿದ್ದ ಅಪರೂಪದ ಕಲಾಕೃತಿಯೊಂದನ್ನು ನೀಡಿ, ಇದು ನನ್ನ ಹಾಗೂ ಮಗನ ನೆನಪಾಗಿ ನಿಮ್ಮಲ್ಲಿರಲಿ ಎಂದು ಬೀಳ್ಕೊಟ್ಟ. ಈ ಸೈನಿಕ ಬರೆದುಕೊಂಡು ಬಂದಿದ್ದನಲ್ಲ, ಆ ಚಿತ್ರದಲ್ಲಿದ್ದ ಯೋಧ ಹೆಗಲ ಮೇಲೆ ಇಬ್ಬಿಬ್ಬರನ್ನು ಹೊತ್ತೊಯ್ಯುತ್ತಿದ್ದ. ಗುಂಡೇಟಿನ ಕಾರಣದಿಂದ ಅವನ ಮೈಯಿಂದ ರಕ್ತ ಹರಿಯುತ್ತಿತ್ತು. ಮುಖ ವಿಕಾರವಾಗಿತ್ತು. ಶತ್ರುಗಳಿಂದ ತಪ್ಪಿಸಿಕೊಂಡು ಬರುವ ಸಂದರ್ಭದಲ್ಲಿ ನಡೆದ ಹೊಡೆದಾಟದಲ್ಲಿ ಮುಂದಿನ ಹಲ್ಲುಗಳೇ ಉದುರಿ ಹೋಗಿದ್ದವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಕಲಾಕೃತಿಯಲ್ಲಿದ್ದ ಯೋಧ ಭಯ ಹುಟ್ಟಿಸುವಂತಿದ್ದ. ಊಹುಂ, ಒಂದೇ ಒಂದು ಕ್ಷಣಕ್ಕೂ ಗಣಾಚಾರಿಗೆ ಇಂಥ ಭಾವನೆ ಬರಲಿಲ್ಲ. ಆಕಸ್ಮಿಕವಾಗಿ ಆಗೊಮ್ಮೆ ಈಗೊಮ್ಮೆ ಮನೆಗೆ ಬಂದವರು ಆ ಚಿತ್ರವನ್ನು ಕಂಡು ಬೆಚ್ಚುತ್ತಿದ್ದರು. ಇದನ್ನು ನೋಡಿದ್ರೆ ಹೆದರಿಕೆ ಆಗುತ್ತೆ. ಅದನ್ನು ಎತ್ತಿ ಬೇರೊಂದು ಕಡೆಯಲ್ಲಿಡಿ ಎಂದು ಸಲಹೆ ಮಾಡಿದರು. ಗಣಾಚಾರಿ ಯಾರ ಮಾತೂ ತನಗೆ ಕೇಳಿಸಲೇ ಇಲ್ಲ ಎಂಬಂತೆ ಉಳಿದುಬಿಟ್ಟ. ಹೆಚ್ಚಿನ ಸಂದರ್ಭದಲ್ಲಿ ಮಗನ ಚಿತ್ರವನ್ನೇ ತದೇಕಚಿತ್ತದಿಂದ ನೋಡುತ್ತಾ ಕೂತು ಬಿಡುತ್ತಿದ್ದ. ಹೀಗೇ ಆರೇಳು ತಿಂಗಳು ಕಳೆದವು. ಅದೊಂದು ಸಂಜೆ, ಮಗನ ಕಲಾಕೃತಿಯ ಮುಂದೆ ಕುಳಿತೇ ಗಣಾಚಾರಿ ಸತ್ತುಹೋದ.
ಒಂದು ರೀತಿಯಲ್ಲಿ ಅನಾಥನಂತೆ ಸತ್ತು ಹೋದ ಈ ಪ್ರಖ್ಯಾತ ಕಲಾವಿದನ ಮನೆಗೆ, ಅಂತ್ಯಸಂಸ್ಕಾರದ ನೆಪದಲ್ಲಿ ಬಂದವರಿಗೆ ಅಚ್ಚರಿಯೊಂದು ಕಾದಿತ್ತು. ಸಾಯುವ ಮುನ್ನ ಗಣಾಚಾರಿ ಒಂದು ಪತ್ರ ಬರೆದಿಟ್ಟಿದ್ದ. ಅದರಲ್ಲಿ ತನ್ನ ಮನೆಯಲ್ಲಿರುವ ಎಲ್ಲ ಕಲಾಕೃತಿಗಳನ್ನೂ ಹರಾಜು ಹಾಕಬೇಕೆಂಬ ವಿನಂತಿಯಿತ್ತು. ಮತ್ತೊಂದು ವಿಶೇಷವೆಂದರೆ, ಹರಾಜು ಪ್ರಕ್ರಿಯೆ ಹೇಗೆ ನಡೆಯಬೇಕೆಂದೂ ಆತ ವಿಲ್ ಬರೆದು ಇಟ್ಟಿದ್ದ.
ರಾಜಾ ರವಿವರ್ಮರು ಬರೆದದ್ದೂ ಸೇರಿದಂತೆ, ದೇಶ ವಿದೇಶಗಳ ಖ್ಯಾತ ಕಲಾವಿದರ ಕಲಾಕೃತಿಗಳೇ ಅಲ್ಲಿದ್ದವು. ಗಣಾಚಾರಿಯ ಆಸೆಯಂತೆ ಅವುಗಳನ್ನು ಹರಾಜು ಹಾಕಲು ಪ್ರಕಟಣೆ ಹೊರಡಿಸಿದ್ದಾಯ್ತು. ಒಂದು ದಿನಾಂಕವನ್ನೂ ನಿಗದಿ ಮಾಡಿದ್ದಾಯ್ತು. ಅಪರೂಪದ ಕಲಾಕೃತಿಗಳನ್ನು ಖರೀದಿಸಲು ಶ್ರೀಮಂತರೆಲ್ಲ ನುಗ್ಗಿ ಬಂದರು. ಸರ್ಕಾರದ ಕಡೆಯಿಂದ ಹರಾಜು ಪ್ರಕ್ರಿಯೆ ನಡೆಸಲು ಬಂದಿದ್ದ ಅಧಿಕಾರಿ, ವಿಕಾರವಾಗಿ ಕಾಣುತ್ತಿದ್ದ. ಗಣಾಚಾರಿಯ ಮಗನ ಕಲಾಕೃತಿಯನ್ನು ಮುಂದಿಟ್ಟು ಹೇಳಿದ: ಈ ಚಿತ್ರಕ್ಕೆ 10 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ. ಇಷ್ಟವಿರುವವರು 10 ಲಕ್ಷದಿಂದ ಆರಂಭಿಸಿ ಬೆಲೆ ಕೂಗಬಹುದು ಅಂದ. ಶ್ರೀಮಂತರೆಲ್ಲ ಒಕ್ಕೊರಲಿನಿಂದ ಅದು ಭಯ ಹುಟ್ಟಿಸುವಂತಿದೆ. ನಮಗಂತೂ ಅದು ಬೇಕಿಲ್ಲ. ಇಲ್ಲಿ ನೂರಾರು ಕಲಾಕೃತಿಗಳಿವೆ. ಅವುಗಳನ್ನು ಹರಾಜು ಹಾಕಲು ಮುಂದಾಗು ಎಂದು ಒತ್ತಾಯಿಸಿದರು. ಈ ಅಧಿಕಾರಿ ಒಪ್ಪಲಿಲ್ಲ. ಈ ಕಲಾಕೃತಿಯ ಮಾರಾಟದ ನಂತರವೇ ಮುಂದಿನ ಮಾತು ಎಂದು ಪಟ್ಟುಹಿಡಿದ. ಆದರೆ, ವಿಕಾರ ಮುಖದ, ರಕ್ತ ಸುರಿಯುತ್ತಿದ್ದಂಥ ದೇಹದ, ಮುಂದಿನ ಹಲ್ಲುಗಳೇ ಇಲ್ಲದಿದ್ದ ಸೈನಿಕನ ಚಿತ್ರದ ಮೇಲೆ ಯಾರೂ ಆಸಕ್ತಿ ತೋರಲಿಲ್ಲ. ಕಡೆಗೂ ಒಬ್ಬ ಮುಂದೆ ಬಂದು 8.50 ಲಕ್ಷ ರೂ. ಎಂದ. ಇದಾಗಿ ಇಪ್ಪತ್ತು ನಿಮಿಷ ಕಳೆದರೂ ಯಾರೊಬ್ಬರೂ ಮಾತಾಡಲಿಲ್ಲ. ಹಾಗಾಗಿ, ಅದೇ ಬೆಲೆಗೆ ಮಾರಾಟ ಮಾಡಿದ್ದಾಯಿತು. ಎರಡು ನಿಮಿಷ ಸುಮ್ಮನಿದ್ದ ಅಧಿಕಾರಿ, ನಂತರ ಗಂಭೀರವಾಗಿ ಹೇಳಿದ: ‘ಹರಾಜು ಪ್ರಕ್ರಿಯೆ ಮುಗಿದಿದೆ. ಮೊದಲ ಕಲಾಕೃತಿಯನ್ನು ಕೊಂಡವರಿಗೇ ಉಳಿದೆಲ್ಲ ಕಲಾಕೃತಿಗಳೂ ಸೇರುತ್ತವೆ…’
ಈ ಮಾತು ಕೇಳಿ, ಬಂದಿದ್ದ ಶ್ರೀಮಂತರೆಲ್ಲ ಗಲಾಟೆ ಆರಂಭಿಸಿದರು. ಇದು ಮೋಸ ಎಂದು ವಾಗ್ವಾದಕ್ಕೆ ನಿಂತರು. ಆಗ, ಕಲಾವಿದ ಗಣಾಚಾರಿ ಬರೆದಿದ್ದ ವಿಲ್್ನ ಪ್ರತಿಯನ್ನು ಅಧಿಕಾರಿಗಳು ಎಲ್ಲರ ಎದುರಿಗಿಟ್ಟರು. ಅದರಲ್ಲಿ ಹೀಗಿತ್ತು: ‘ಬದುಕಲ್ಲಿ ನನಗೆ ಮಗನೇ ಸರ್ವಸ್ವವಾಗಿದ್ದ. ಅವನಲ್ಲದೆ ನನಗೆ ಬೇರೊಂದು ಜಗತ್ತೇ ಇರಲಿಲ್ಲ, ಆತ ಸತ್ತುಹೋದ ನಂತರವೂ ಈ ಭಾವಚಿತ್ರ ಹಲವರಿಗೆ ಭಯ ಹುಟ್ಟಿಸುವಂತಿರಬಹುದು. ಆದರೆ, ಇದರಲ್ಲಿ ನನಗೆ ಮಗ ಕಾಣಿಸುತ್ತಾನೆ. ಆತನ ಕಣ್ಣು ಮಾತಾಡುತ್ತವೆ. ಸುರಿಯುತ್ತಿರುವ ರಕ್ತ ಕತೆ ಹೇಳುತ್ತದೆ. ಯಾರಾದರೂ ಈ ಚಿತ್ರವನ್ನು ಜೋಪಾನವಾಗಿ ಇಡಲು ಮುಂದಾದರೆ ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ಚಿತ್ರವನ್ನು ಕೊಂಡವರಿಗೇ ಉಳಿದೆಲ್ಲ ಚಿತ್ರಗಳ ಹಕ್ಕನ್ನೂ ಬಿಟ್ಟು ಕೊಡುತ್ತೇನೆ. ಏಕೆಂದರೆ, ನನ್ನ ಪಾಲಿಗೆ ಮಗನ ಚಿತ್ರಕ್ಕಿರುವ ಬೆಲೆ ಇನ್ಯಾವ ಕಲಾಕೃತಿಗೂ ಇಲ್ಲ. ಹೌದಲ್ಲವಾ? ಮಕ್ಕಳ ಮಮತೆಯ ಮುಂದೆ, ಮಕ್ಕಳ ಸ್ಮರಣೆಯ ಮುಂದೆ ಬೇರಾವ ಆಸ್ತಿಗೂ ಬೆಲೆ ಇರುವುದಿಲ್ಲ…’
ಇದನ್ನು ಓದುತ್ತಿದ್ದಂತೆ ಅಲ್ಲಿದ್ದ ಶ್ರೀಮಂತರೆಲ್ಲ ಮಾತು ಹೊರಡದೆ ನಿಂತುಬಿಟ್ಟರು…