Wednesday, 15 April 2015

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು / Athitha nodadiru

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ

ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
ಮಲಗು ತೊಟ್ಟಿಲ ಸಿರಿಯೆ, ದೇವರಂತೆ;
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ .

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು.

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ
ಜೋ ಜೋಜೋ ಜೋ ಜೋ ಜೋಜೋ ಜೋ

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಸುಲೋಚನ

Download video:- www.youtube.com/watch?v=3Qm0ULr3FmE

No comments:

Post a Comment