Tuesday 14 April 2015

ಇಳಿದು ಬಾ ತಾಯೆ ಇಳಿದು ಬಾ. / ilidu baa taaye ilidu baa...

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ.
 
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ.
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ.
                                                                              -  ಕುವೆಂಪು

No comments:

Post a Comment