Tuesday 14 April 2015

ಇಳಿದು ಬಾ ತಾಯೆ ಇಳಿದು ಬಾ.. / ilidu baa taaye ilidu baa

ಇಳಿದು ಬಾ ತಾಯಿ ಇಳಿದು ಬಾ...
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
 ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
 ಇಳಿದು ಬಾ ತಾಯಿ ಇಳಿದು ಬಾ...
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
 ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ
 ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
 ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
 ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
 ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
 ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
 ಇಳಿದು ಬಾ ತಾಯಿ ಇಳಿದು ಬಾ
 ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
 ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
 ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
 ಇಳಿದು ಬಾ ತಾಯಿ ಇಳಿದು ಬಾ
 ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
 ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
 ಇಳಿದು ಬಾ ತಾಯಿ ಇಳಿದು ಬಾ
 ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
 ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
 ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
 ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
 ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
 ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
 ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೆ
 ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
 ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
 ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ
 ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
 ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
 ಇಳಿದು ಬಾ ತಾಯಿ ಇಳಿದು ಬಾ

                                                                                         - ಅಂಬಿಕಾತನಯದತ್ತ 

 * ಅಂಬಿಕಾತನಯದತ್ತರ ಗಂಗಾವತರಣ ಸಂಕಲನದ ಖ್ಯಾತ ಕವನ. ಅರಿಶಿನ-ಕುಂಕುಮ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ರ ಕಂಠದಲ್ಲಿ ಮತ್ತು ಭಾವಗೀತೆಯಾಗಿ ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾಯರ ಸ್ವರದಲ್ಲರಳಿದೆ. ಇದು ಮೂಲ ಕವನದ ಪೂರ್ಣಪಾಠ. ಗೀತೆಯಲ್ಲಿ ಕೆಲವೊಂದು ಚರಣಗಳನ್ನು ಮಾತ್ರ ಬಳಸಲಾಗಿದೆ. ಹಾ, ಇದೆ ಹೆಸರಿನ ಮತ್ತೊಂದು ಭಾವಗೀತೆಯೂ ಕನ್ನಡದಲ್ಲಿದೆ.

No comments:

Post a Comment