Saturday 25 April 2015

ಶ್ರೀ ಶಂಕರಾಚಾರ್ಯ ಜೀವನ ಸಂದೇಶ../ Shri Shankaracharya Jeevana Sandesha..


ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು.

ಜೀವನ

ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.

ಕೆಲ ಕಾಲಾ ನಂತರದಲ್ಲಿ ಶಂಕರನಿಗೆ ಮೂರು ವರ್ಷಗಳಿರಲು ಅವನ ತಂದೆ ಶಿವಗುರುವು ತಾನು ಇಹದ ಯಾತ್ರೆಯನ್ನು ಪೂರೈಸಿದನು. ಮುಂದೆ ಶಂಕರನು ಪೂರ್ಣವಾಗಿ ತಾಯಿಯ ಆರೈಕೆಯಲ್ಲಿಯೇ ಬೆಳೆಯುವಂತಾಯಿತು. ಹುಟ್ಟು ಜ್ಞಾನಿಯಾಗಿದ್ದ ಶಂಕರನಿಗೆ ವಿದ್ಯಾಭ್ಯಾಸದ ಹಂಗಿರಲಿಲ್ಲ. ಆದರೂ ತಾನು ಕೆಲ ಕಾಲ ವೇದ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿದ್ದನು. ಹೀಗೆ ತಾನು ವಿದ್ಯಾಭ್ಯಾಸಕ್ಕೆಂದು ಹೋಗುವ ದಾರಿಯಲ್ಲಿ ಇದ್ದ ಒಬ್ಬ ಹಳೆಯ ಮುದುಕಿಯ ಮನೆಯಿತ್ತು. ಆ ಮುದುಕಿ ಬಾಲಕ ಶಂಕರ ಬಂದಾಗ ತಿನ್ನಬಹುದಾದ ವಸ್ತು ತನ್ನಲ್ಲೇನಿರುತ್ತಿತ್ತೋ ಅದರಲ್ಲೊಂದು ಭಾಗವನ್ನು ಅವನಿಗೆ ತಪ್ಪದೇ ನೀಡುತ್ತಿದ್ದಳು. ಅದೊಂದು ದಿನ ಶಂಕರ ಬಂದ ಸಮಯದಲ್ಲಿ ಮುದುಕಿಗೆ ಅವನಿಗಾಗಿ ನೀಡಲು ಏನೇನೂ ಇರಲಿಲ್ಲ. ಅದನ್ನು ಆಕೆಯು ತಾನು ವಿನಮ್ರಳಾಗಿ ಶಂಕರನಿಗೆ ತಿಳಿಸಲು ಶಂಕರನು ತಾನು ಅದೇ ಸ್ಥಳದಲ್ಲಿ ‘ಶ್ರೀ ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದನು.
ಸುಮಾರು ಇದೇ ಸಮಯದಲ್ಲಿ ಬಾಲಕ ಶಂಕರನ ಜ್ಞಾನ ಮಹತ್ತಿನ ಅರಿವುಂಟುಮಾಡುವ ಘಟನೆಯೊಂದು ಜರುಗಿತು. ಆ ಸಮಯದಲ್ಲಿ ಕೇರಳವನ್ನಾಳುತ್ತಿದ್ದ ರಾಜಾ ರಾಜಶೇಖರನು ತಾನೊಮ್ಮೆ ಶಂಕರನನ್ನು ಆಸ್ಥಾನಕ್ಕೆ ಕರೆತರಲು ಆದೇಶಿಸಿದಮು. ಮತ್ತು ಆ ಬಾಲಕನ ಅಗಾಧವಾದ ಪಾಂಡಿತ್ಯವನ್ನು ಪರೀಕ್ಷಿಸಲು ಬಯಸಿದನು. ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಆಮಂತ್ರಣವನ್ನು ನೋಡಿದ ಬಾಲಕ ಶಂಕರನು “ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು”, ಎನ್ನುವ ಮೂಲಕ ಆಮಂತ್ರಣವನ್ನು ನಿರಾಕರಿಸಿದನು.
ಇದಾದ ನಂತರ ರಾಜನು ತಾನೇ ಸ್ವತಃ ಶಂಕರನನ್ನು ಭಾಟಿಯಾಗಲು ನಿರ್ಧರಿಸಿ ಹೊರಟನು. ಹಾಗೆ ಆದಂತಹಾ ಭಾಟಿ ಮತ್ತು ಆ ವೇಳೆಯಲ್ಲಿ ನಡೆಸಿದ ಧಾರ್ಮಿಕ ಚರ್ಚೆಗಳಿಂದ ಮಹಾರಾಜನಲ್ಲಿ ವಿಶೇಷವಾದ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ತನ್ನ ಭಾಟಿಯ ಅಂತ್ಯದಲ್ಲಿ ರತ್ನದ ಮುದ್ರೆಗಳನ್ನು ಶಂಕರನಿಗೆ ಕೊಡುಗೆ ನೀದಲು ಮುಂದಾದಾಗ ಬಾಲಕನು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾ- “ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ” ಎಂದುತ್ತರಿಸಿದನು.  ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು “ನಿಮ್ಮ ದರ್ಶನದಿಂದ ನಾನು ಧನ್ಯನಾದೆ”, ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ “ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ”, ಎಂದನು. ಮುಗುಳ್ನಗುತ್ತಾ ಶಂಕರರು “ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ”, ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಇದಾಗಿ ಶಂಕರನು ತಾನು ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸುತ್ತಲೂ ತಾನು ಸನ್ಯಾಸ ಸ್ವೀಕರಿಸುವುದಾಗಿ ತಾಯುಯಲ್ಲಿ ಅಪ್ಪಣೆ ಬೇಡಿದರು. ಆದರೆ ತಾಯಿಗೆ ಮಗನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ‘ಇದ್ದ ಒಬ್ಬನೇ ಮಗನು ಸನ್ಯಾಸಿಯಾದರೆ ನಮ್ಮ್ ಅವಂಶಗ ಗತಿಯೇನು, ನಾನು ಒಮ್ಮೆ ತೀರಿಹೋದಲ್ಲಿ ನನಗೆ ಮೋಕ್ಷ ಕೊಡಿಸುವವರಾರು?’ ಎಂಬ ಚಿಂತೆ ಅವಳ ಮನವನ್ನು ಕೊರೆಯುತ್ತಿರಲು ತಾಯಿಯು ಮಗನ ಸನ್ಯಾಸ ದೀಕ್ಷೆಯ ಅಭಿಲಾಷೆಯನ್ನು ಮುಂದೂಡುತ್ತಾ ಬಂದಳು.
ಶಂಕರರು ತಾವು ಸನ್ಯಾಸಿಯಾಗುವುದಾಗಿ ನಿರ್ಧರಿಸಿಯಾಗಿತ್ತು. ಅದಕ್ಕಾಗಿ ತಾಯಿಯ ಮನವೊಲಿಸಲು ಪರಿಪರಿಯಾಗಿ ಪ್ರಯತ್ನಿಸಿದರೂ ಸಾಧ್ಯವಾಗದಿರಲು ಅದೊಂದು ದಿನ ತಾವು ನದಿಯಲ್ಲಿ ಸ್ನಾನಕ್ಕಾಗಿ ಇಳಿದಿರಲು ಅಲ್ಲಿದ್ದ ಒಂದು ಮೊಸಳೆಯು ಶಂಕರರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಅದಾಗ ರಕ್ಷಣೆಗಾಗಿ ಎಂಬಂತೆ ತಾಯಿಯನ್ನು ಕೂಗಿದ ಶಂಕರರು ತಾಯಿಗೆ- “ಅಮ್ಮಾ ಈ ಮೊಸಳೆಯು ನನ್ನನ್ನು ನುಂಗಿ ಹಾಕುವುದರಲ್ಲಿದೆ, ನೀನೇನಾದರೂ ನಾನು ಸನ್ಯಾಸಿಯಾಗುವುದಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಮಾತ್ರವೇ ನಾನು ಈ ಮೊಸಳೆಯ ಹಿಡಿತದಿಂದ ಪಾರಾಗಬಲ್ಲೆ, ಇಲ್ಲವಾದಲ್ಲಿ ನಿನ್ನ ಮಗ ಇದೇ ಕ್ಷಣ ಮೊಸಳೆಯ ಪಾಲಾಗುತ್ತಾನೆ”, ಎಂದಾಗ ಮಾತೆ ಆರ್ಯಾಂಬಾ ತಾನು ವಿಧಿಯಿಲ್ಲದೆ ಮಗನ ಸನ್ಯಾಸಕ್ಕೆ ಅಪ್ಪಣೆ ಕೊಡಬೇಕಾಯಿತು. ತಕ್ಷಣವೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು. ಶಂಕರರು ತಾಯಿಯ ಆಶೀರ್ವಾದವನ್ನು ಪಡೆದು ಸನ್ಯಾಸಿಯಾಗಿ ದೇಶಪರ್ಯಟನೆಗೆ ಹೊರಟರು. ಹಾಗೆ ಹೊರಡುವ ಮುನ್ನ ತಾಯಿಗೆ- “ನಾನೆಲ್ಲೇ ಇದ್ದರೂ ನಿನ್ನ ಅಂತಿಮ ಕ್ಷಣಗಳಲ್ಲಿ ನಿನ್ನೊಂದಿಗಿರುತ್ತೇನೆ” ಎನ್ನುವ ವಚನವನ್ನಿತ್ತರು. ಮತ್ತು ಮುಂದೊಂದು ದಿನ ಮಾತೆ ಆರ್ಯಾಂಬಾರವರು ಸಾವಿನ ನಿರೀಕ್ಷೆಯಲ್ಲಿದ್ದಾಗ ಅಲ್ಲಿಗಾಗಮಿಸಿದ ಶಂಕರರು ತಾವು ತಾಯಿಯವರ ಅಂತಿಮ ಕ್ಶಣಗಳಲ್ಲಿ ಅವರೊಡನಿದ್ದುದಲ್ಲದೆ ಅವರ ಅಂತಿಮ ವಿದ್ಜಿಗಳನ್ನೂ ಸಹ ನೆರವೇರಿಸಿ ಅವರ ಶಾಶ್ವತ ಮೋಕ್ಷಕ್ಕೆ ಕಾರಣರಾದರು.
ಶ್ರೀ ಶಂಕರರು ಸನ್ಯಾಸ ಸ್ವೀಕರಿಸುವುದರೊಡನೆ ಅವರ ಜೀವನವು ನೂತನ ತಿರುವನ್ನು ಪಡೆಯಿತು. ಅಷ್ತರ ಬಳಿಕ ಶಂಕರರು ದೇಶ ದೇಶಗಳನ್ನು ತಿರುಗುತ್ತಾ ನರ್ಮದಾ ನದಿ ತೀರಕ್ಕೆ ಬಂದರು. ಅಲ್ಲಿ ನೆಲೆಯಾಗಿದ್ದ ಶ್ರೀ ಗೋವಿಂದ ಭಗವತ್ಪಾದರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಶಂಕರರು ಅವರಲ್ಲಿ ಯೋಗ, ವೇದ, ಉಪನಿಷತ್, ವೇದಾಂತ ಶಾಸ್ತ್ರಗಳನ್ನು ಅಭ್ಯಾಸ ನಡೆಸಿದರು. ನರ್ಮದೆ ತಟದಲ್ಲಿನ ಗುಹೆಯೊಂದರಲ್ಲಿ ಧ್ಯಾನದಲ್ಲಿದ್ದಾಗಲೇ ಶಂಕರರು ತಮ್ಮ `ಅದ್ವೈತ’ ತತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ದೇಶದಾದ್ಯಂತ ಪ್ರಚುರಪಡಿಸಲಿಕ್ಕಾಗಿ ದೇಶಾತನೆಗೈಯ್ಯಲು ನಿರ್ಧರಿಸಿದರು. ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ತಮಿಳು ದೇಶದ  ಯುವ ಸಂನ್ಯಾಸಿ ಇವರ ಶ್ಯಿಷ್ಯನಾದನು. ಕಾಶಿಗೆ ತೆರಳಿದ ಶ್ರೀ ಶಂಕರರು ಅಲ್ಲಿ ಕೆಲ ಶಿಷ್ಯರನ್ನು ಸೇರಿಸಿಕೊಂಡು ಅವರಿಗೆ ವೇದ ಶಾಸ್ತ್ರಗಳ ಪಾಠವನ್ನು ಬೋಧಿಸಿದರು.
ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಘಟನೆ ಹೀಗಿದೆ-  ಒಬ್ಬ ಅಸ್ಪೃಷ್ಯ ವ್ಯಕ್ತಿಯು ನಾಲ್ಕೈದು ಕುರಿಗಳೊಡನೆ ಅಡ್ಡವಾಗುತ್ತಾನೆ. ಆಗ ಶಂಕರರು ಅವನನ್ನು ಕುರಿತು “ಪಕ್ಕಕ್ಕೆ ಸರಿದು ದಾರಿ ಮಾಡಿಕೊಡು, ನಾನು ದೇವರ ದರ್ಶನಕ್ಕೆ ಹೋಗಬೇಕಿದೆ” ಎನ್ನಲು ಆ ವ್ಯಕ್ತಿಯು ತಕ್ಷಣಕ್ಕೆ “ನೀವು ಹೇಳಿದ್ದು ಯಾರಿಗೆ, ನನ್ನ ದೇಹಕ್ಕೋ? ಆತ್ಮಕ್ಕೋ?” ಎಂದು ಪ್ರಶ್ನಿಸುತ್ತಾನೆ. ಇದರಿಂದ ಎಚ್ಚರಗೊಂಡ ಶಂಕರರು ತಾವೇ ಕಂಡುಕೊಂಡ ಅದ್ವೈತ ಸಿದ್ದಾಂತವನ್ನು ನಮ್ಮದೇ ಜೀವನದಲ್ಲಿ ಕಾರ್ಯಗತಗೊಳಿಸುವುದಕ್ಕಾಗಿ ಸಾಕ್ಷಾತ್ ಪರಮೇಶ್ವರನು ಈ ರೂಪದಲ್ಲಿ ಬಂದಿರುವನೆನ್ನುವುದನ್ನು ಅರಿತು ‘ಮನೀಷಿ ಪಂಚಕ’ ಎಂಬ ಸ್ತೋತ್ರದೊಡನೆ ಪರಮೇಶ್ವರನನ್ನು ಸ್ತುತಿಸುತ್ತಾರೆ.
ಶ್ರೀ ಶಂಕರಾಚಾರ್ಯರಿಗೆ ಹದಿನಾರರ ವಯಸ್ಸಿನಲ್ಲಿರುವಾಗ, ಅವರಿಗೆ ವೇದವ್ಯಾಸರ ಅನುಗ್ರಹವಾಯಿತು. ಅದೊಂದು ದಿನ ಒಬ್ಬ ಹಳೆಯ ವೃದ್ದರೋರ್ವರು ಶಂಕರರು ರಚಿಸಿದ್ದ ‘ಬ್ರಹ್ಮಸೂತ್ರ ಬಾಷ್ಯ’ದ ಕುರಿತಾಗಿ ವಿಮರ್ಶಾತ್ಮಕ ಚರ್ಚೆಗೆ ತೊಡಗಿದರು. ಶಂಕರ ಹಾಗೂ ಆ ವಯೋವೃದ್ದ್ರ ನಡುವಿನ ಚರ್ಚೆಯು ದಿನಗಳನ್ನು ಪೂರೈಸಿತು. ಹೀಗಿರಲು ಶಂಕರಾಚಾರ್ಯರಿಗೆ ಒಮ್ಮೆಲೇ ತಾನು ವಾದ ಹೂಡಿರುವುದು ಸ್ವತಃ ಬ್ರಹ್ಮಸೂತ್ರದ ಕತೃವಾದ ವೇದವ್ಯಾಸ ಮಹರ್ಷಿಗಳೊಡನೆ ಎನ್ನುವುದು ಅರಿವಿಗೆ ಬಂದಿತು. ತಕ್ಷಣವೇ ತನ್ನಿಂದಾದ ತಪ್ಪಿಗಾಗಿ ವ್ಯಾಸಮಹರ್ಷಿಗಳ ಚರಣಗಳಿಗೆರಗಿದ ಶಂಕರರು ಅವರಲ್ಲಿ ಕ್ಷಮೆಯನ್ನು ಯಾಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ವ್ಯಾಸರು ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ವರವಾಗಿ ನೀಡಿ “ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು. ಇದರಿಂದ ಒಳಿತಾಗುತ್ತದೆ. ನೀನು ರಚಿಸಿದ ಈ ಬ್ರಹ್ಮಸೂತ್ರ ಬಾಷ್ಯಕ್ಕೆ ನನ್ನ ಸಂಪೂರ್ಣ ಸಹಮತವಿದೆ” ಎನ್ನುವುದಾಗಿ ಅನುಗ್ರಹಿಸಿದರು.
ಮುಂದೆ ಶ್ರೀ ಶಂಕರಾಚಾರ್ಯರು ದೇಶದ ನಾನಾ ಮೂಲೆಗಳಾನ್ನು ತಿರುಗಿ ವಿವಿಧ ಪಂಗಡಗಳಾ ಮುಖಂಡರ್ನ್ನೂ ವಿವಿಧ ಧಾರ್ಮಿಕ ವಿಚಾರವಾದಿಗಳನ್ನೂ ಸಂಧಿಸಿದ್ದಲ್ಲದೆ ಹಲವಾರು ಜನರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಶರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ, ತಾವು ಕಂಡುಕೊಂಡ ‘ಅದ್ವೈತ’ ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲೆ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರಿಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ. ಮುಂದೆ ಶ್ರೀ ಶಂಕರಾಚಾರ್ಯರು ತಾವು ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಬಾಷ್ಯಗಳನ್ನು ಬರೆದರು. ಇವರು ರಚಿಸಿದ ‘ಭಜಗೋವಿಂದಂ’, ‘ಸೌಂದರ್ಯ ಲಹರೀ’, ‘ಕನಕಧಾರಾ ಸ್ತೋತ್ರ’ ಗಳು ಬಹು ಪ್ರಸಿದ್ದವಾಗಿವೆ.
ಹೀಗೆ ಹಿಂದೂ ಧರ್ಮದ ಉದ್ದಾರಕರಾಗಿ, ಧರ್ಮ ಸಂಸ್ಥಾಪನೆಗಾಗಿ ಮಠಗಳ ಮೂಲಕ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ ದಿವ್ಯ ಚೇತನ ಶ್ರೀ ಶಂಕರಾಚಾರ್ಯರು ತಾವು ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು.

ಸಂದೇಶ

ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ”+”ದ್ವೈತ” ಅಂದರೆ “ಎರಡಲ್ಲದ್ದು” ಎಂದು ಅರ್ಥೈಸಬಹುದು. ಅದ್ವೈತ ಸಿದ್ದಾಂತದ ಸಾರವೇ ಇದು. ಆತ್ಮನಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮನಿಗೂ ಪರಮಾತ್ಮನಿಗೂ ಭೇಧವಿಲ್ಲ. “ಅಹಂ ಬ್ರಹ್ಮಾಸ್ಮಿ”(ನನ್ನೊಳಗೇ ಬ್ರಹ್ಮನಿದ್ದಾನೆ/ನಾನೇ ಬ್ರಹ್ಮನಾಗಿದ್ದೇನೆ) “ತತ್ ತ್ವಮ್ ಅಸೀ”(ನೀನು ಸಹ ಅದೇ ಆತ್ಮನ ಅಂಶದಿಂದ ಕೂಡಿದ್ದೀಯೆ)-ಇವು ‘ಅದ್ವೈತ’ಸಿದ್ದಾಂತದ ಮೂಲ ಸಾರವನ್ನು ತಿಳಿಸುವ ಉಕ್ತಿಗಳು. ಶ್ರೀ ಆದಿಶಂಕರಾಚಾರ್ಯರು ಹೇಳುವಂತೆ “ಸರ್ವಂ ಬ್ರಹ್ಮಮಯಂ ಜಗತ್”- ಜಗತ್ತೆಲ್ಲವೂ ಬ್ರಹ್ಮನಿಂದ ಆಗಲ್ಪಟ್ಟಿದೆ. ಆತ್ಮನೇ ಪರಮಾತ್ಮನೂ ಆಗಿದ್ದಾನೆ, ಅದು ಮಾತ್ರವೇ ಸತ್ಯವಾದುದು. ವಿಶ್ವದಲ್ಲಿನ ಮಿಕ್ಕೆಲ್ಲವೂ ಮಿಥ್ಯ.

ಅದ್ವೈತ ಸಿದ್ಧಾಂತದ ಎಂಟು ಮೂಲ ತತ್ವಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು-

1. ಬ್ರಹ್ಮ ಒಂದೇ ಸತ್ಯ ; ಈಜಗತ್ತು ಮಿಥ್ಯ ; ಜೀವನು ಬ್ರಹ್ಮನಿಂದ ಬೇರೆಯಲ್ಲ.
2.ಆತ್ಮವು ಸ್ವತಃ ಸಿದ್ಧವಾಗಿದೆ. ಅದು ಇದೆ ಎಂದು ಸಾಧಿಸಲು ಬೇರೆ ಪ್ರಮಾಣಗಳು ಬೇಕಾಗಿಲ್ಲ ; ಕಾರಣ ನಿರಾಕರಿಸುವವನೇ ಆತ್ಮ ಸ್ವರೂಪನಾಗಿದ್ದಾನೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. .
3.ಬ್ರಹ್ಮವು ಜ್ಞಾನಕ್ಕೆ ವಿಷಯವಾಗಲಾರದು
4 ಬ್ರಹ್ಮವು ಸತ್ ಚಿತ್ ಆನಂದ ಸ್ವರೂಪ ವಾಗಿದೆ ..
5. ಬ್ರಹ್ಮವು ನಿರಾಕಾರ ನಿರ್ಗುಣ ; ಅದು ಇಂದ್ರಿಯ ಮನಸ್ಸುಗಳ ಆಚೆ ಇರುವಂತಹದು. ಇಂದ್ರಿಯ ಗೋಚರವಾದವು ಅನಿತ್ಯವಾಗಿದೆ.
6. ತ್ರಿವಿಧ ಸತ್ತೆಗಳು :
 1.ಪ್ರಾಪಂಚಿಕ ಸತ್ತೆ : ಅನುಭವಕ್ಕೆ ಬರುವುದು ಸತ್ಯವೇ ಆಗಿರುತ್ತದೆ. ಸ್ವಲ್ಪ ಕಾಲ ಇದ್ದು,ಆನಂತರ ಇಲ್ಲವಾಗುವುದು ಅನಿತ್ಯವಾದವುಗಳು;ಅದು ಈ ನಮ್ಮ ಅನುಭವಕ್ಕೆ ಬರುವ ಪ್ರಪಂಚಕ್ಕೆ ಅನ್ವಯಿಸುತ್ತದೆ. ಇದು ಪ್ರಾಪಂಚಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ. ಆದ್ದರಿಂದ ನಾವು ಕಾಣವ ಈ ಜಗತ್ತು ಮತ್ತು ಅದರ ಅನುಭವ ಪೂರ್ಣ ಬ್ರಮೆಯಲ್ಲ.ಪೂರ್ಣ ಸತ್ಯವೂ ಅಲ್ಲ.ಅವು ಅನಿತ್ಯವಾದುದರಿಂದ ಮಿಥ್ಯೆ.ಭೂ, ಭವಿಷ್ಯತ್,ವರ್ತಮಾನ ಈ ತ್ರಿಕಾಲದಲ್ಲೂ ಇರುವುದಲ್ಲ.ಮಿಥ್ಯೆ ಎಂದರೆ ಬಂಜೆಯ ಮಗನಂತೆ ಪೂರ್ಣ ಸುಳ್ಳಲ್ಲ
2.ಪ್ರಾತಿಭಾಸಿಕ ಸತ್ತೆ : ಇದು ತಿರಾ ಕೆಳಗಿನ ಹಂತದ ಸತ್ಯ. ನಂಬುಗೆ ಇರುವ ವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ ಹಗ್ಗವನ್ನು ಹಾವೆಂದು ತಿಳಿಯುವುದು. ಹಾವು ಅನುಭವಕ್ಕೆ ಬರುವುದರಿಂದ ಇಲ್ಲವೆನ್ನುವಂತಿಲ್ಲ; ಅನುಭವ ಇರುವವರೆಗೂ ಸತ್ಯವಾಗೇ ಇರುತ್ತದೆ.ಇದು ಪ್ರಾತಿಭಾಸಿಕ ಸತ್ಯ
3.ಪಾರಮಾರ್ಥಿಕ ಸತ್ತೆ : ಇದು ತ್ರಿಕಾಲಾಬಾಧಿತ ಸತ್ಯ. ಭೂತ ಭವಿಷ್ಯತ್ ವರ್ತಮಾನಗಳಲ್ಲೂ ಬಾಧಿತವಾಗದೆ ಇರುವುದು.ಎಚ್ಚರ,ಕನಸು,ನಿದ್ದೆ ಈ ಮೂರೂ ಅವಸ್ಥೆಗಳಲ್ಲೂ ಸಾಕ್ಷಿರೂಪದಲ್ಲಿ ಒಂದೇ ರೀತಿಯಾಗಿರುವುದು.ಮೂರೂ ಕಾಲಗಳಲ್ಲಿ ಮೂರೂ ಅವಸ್ಥೆಗಳಲ್ಲಿ ಬದಲಾವಣೆ ಆಗುವುದಿಲ್ಲ ;ಒಂದೇ ರೀತಿ ಇರುತ್ತದೆ.ಇದು ಪಾರಮಾರ್ಥಿಕ ಸತ್ಯ. ಈ ಗುಣವನ್ನು ಹೊಂದಿರುವುದು,ಈ ತತ್ವಕ್ಕೆ ಅರ್ಹವಾದುದು ಬ್ರಹ್ಮವೊಂದೇ. ಆದ್ದರಿಂದ ಬ್ರಹ್ಮ ವೊಂದೇ ಪಾರಮಾರ್ಥಿಕ ಸತ್ಯವಾಗಿದೆ.
7.ಮನ, ಬುದ್ಧಿ, ಅಹಂಕಾರ, ಚಿತ್ತ, ಈ ಅಂತಃಕರಣ ದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಮಾಯೆಯಿಂದ ಆವರಿಸಲ್ಪಟ್ಟ ಬ್ರಹ್ಮ ಮಾಯೆಯ ಉಪಾದಿಯಿಂದ ಈಶ್ವರನೆನಿಸಿ ಕೊಳ್ಳುತ್ತಾನೆ. ಅದೇ ಅಜ್ಜ್ಞಾನದ ಉಪಾದಿಯಿಂದ ಜೀವನೆನಿಸುತ್ತಾನೆ. ಜೀವನಿಗೆ ಈ ಉಪಾದಿಗಳಿಂದ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಮೂರು ಶರೀರಗಳು. ಜಗ್ರತ್, ಸ್ವಪ್ನ, ಸುಷುಪ್ತಿ ಗಳೆಂಬ ಮೂರು ಅವಸ್ಥೆಗಳು. ಅವಿದ್ಯೆಯಿಂದ ಅಥವಾ ಅಜ್ಞಾನದಿಂದ ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು- ಅಪರೋಕ್ಷಾನುಭೂತಿಯಾದಾಗ ತಾನೇ ಬ್ರಹ್ಮ ವೆಂಬ ಅನುಭವವಾಗುವುದು ; ತಾನು ಸಚ್ಚಿದಾನಂದ ರೂಪವೆಂಬ ಅನುಭವವಾಗುವುದು. ಇದು ಪಾರಮಾರ್ಥಿಕ ಸತ್ಯ.
8.ಈ ಸಂಸಾರವು ಅಥವಾ ಬೇರೆ ಬೇರೆ, ಅನೇಕ, ಎಂಬ ಭಾವವು ಅವಿದ್ಯೆ [ಅಜ್ಞಾನ]ಯಿಂದ ಉಂಟಾದುದು. ಜ್ಞಾನದಿಂದ ಮಾತ್ರ ತನ್ನ ನಿಜವಾದ ರೂಪವನ್ನು ಅರಿಯಬಹುದು. ಕರ್ಮಯೋಗ, ರಾಜಯೋಗ, ಭಕ್ತಿಯೊಗ ಇವು ಸಾಧಕನ ಮನಸ್ಸನ್ನು ಶುದ್ಧಿಗೋಳಿಸಲು ಪ್ರಯೋಜನ. ಅವಿದ್ಯೆ ಅಥವ ಅಜ್ಞಾನ ದೂರವಾದರೆ ತಾನೇ ಜ್ಞಾನವಾಗುವುದು.
“ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಂ”

ಅದ್ವೈತ ವೇದಾಂತದ ಸಾರವು ಈ ಉಕ್ತಿಯಲ್ಲಿದೆ.ಜಗತ್ತು ಅನುಭವಗಮ್ಯ.ಅನುಭವದ ಆಧಾರದಲ್ಲಿ ಜಗತ್ತಿನ ವ್ಯವಹಾರಗಳು ಪ್ರವಹಿಸುತ್ತದೆ. ಆತ್ಮನ ಸತ್ಯತ್ವವು ಅನುಭವದ  ಆಧಾರದ ಮೇಲೆ ಇರುತ್ತದೆ. ಜ್ಞಾತರೂಪದಲ್ಲಿ ಆತ್ಮನ ಉಪಲಬ್ಧಿಯನ್ನು ತೋರಿಸಲಿಕ್ಕಾಗುವುದಿಲ್ಲ. ವಿಷಯದ ರೂಪದಿಂದ ಇದನ್ನು ತಿಳಿಸಲಾಗುತ್ತದೆ, ಎನ್ನುತ್ತದೆ ಅದ್ವೈತ ಸಿದ್ದಾಂತ. ಆತ್ಮನ ಅಸ್ತಿತ್ವ ವಿಷಯದಲ್ಲಿ ಯಾರಿಗೂ ಸಂದೇಹವಿರುವುದಿಲ್ಲ. ಆತ್ಮನ ಅಸ್ತಿತ್ವವು ಪ್ರಸಿದ್ದವಿಲ್ಲದಿದ್ದಲ್ಲಿ ಸರ್ವರೂ ತಮ್ಮ ಅಸ್ತಿತ್ವದಲ್ಲಿ ನಂಬಿಕೆ ತಾಳುತ್ತಿರಲಿಲ್ಲ. ಆದರೆ ಲೋಕದಲ್ಲಿ ಹೀಗೆ ಆಗಲ್ಲಿಲ್ಲ ಆದ್ದರಿಂದ ಆತ್ಮನ ಅಸ್ತಿತ್ವವು ಸ್ಪಷ್ಟವಾಗಿ ಪ್ರಾಮಾಣಿಕವಾಗುತ್ತದೆ. ಈ ಆತ್ಮಾಸ್ತಿತ್ವದ ವಿಷಯದಲ್ಲಿ ಯಾರೂ ಸಂದೇಹಪಡಲು ಕಾರಣವಿಲ್ಲ. ಇದುವೇ ಉಪನಿಷತ್ತುಗಳು ಹೇಳಿದ ತತ್ವವಾಗಿದೆ. ಬ್ರಹ್ಮವು ಅಖಂಡವಾದುದು, ಅದನ್ನು ತುಂಡು ತುಂಡಾಗಿಸಲು ಬರುವುದಿಲ್ಲ. ಭೇದಗಳು ವ್ಯವಹಾರಕ್ಕಾಗಿ ಕಲ್ಪಿತವಾದವುಗಳು.
ಉಪನಿಷತ್ತು ಬ್ರಹ್ಮವನ್ನು ನಿರ್ಗುಣ ಮತ್ತು ಸಗುಣವೆಂದು ಎರಡು ರೂಪಗಳಲ್ಲಿ ವರ್ಣಿಸಿದೆ. ಬ್ರಹ್ಮವು ಜಗತ್ತಿಗೆ ಸಮಾನವಾಗಿ ಮಾಯಾವಿಶಿಷ್ಟವಾಗಿ ಮಾಯಿಕ ತತ್ವವನ್ನು ಧಾರಣೆ ಮಾಡುತ್ತದೆ. ಬ್ರಹ್ಮನು ಜಗತ್ತಿಗೆ ಕಾರಣನು ಮತ್ತು ಪದಾರ್ಥಾಂತರಗಳಿಂದ ಅವಿಭಕ್ತನಾಗಿದ್ದಾನೆ. ಸತ್, ಚಿತ್, ಆನಂದಸ್ವರೂಪಿಯಾಗಿದ್ದಾನೆ. ಇದೇ ಬ್ರಹ್ಮನ ಸ್ವರೂಪಲಕ್ಷಣ. ಆದರೆ ಮಾಯೆಯಿಂದ ಆವೃತನಾದರೆ ಸಗುಣಸ್ವರೂಪವನ್ನು ತಾಳುತ್ತಾನೆ. ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿ ಅಪರಬ್ರಹ್ಮ ಇಲ್ಲವೆ ಈಶ್ವರನೆಂದು ಕರೆಯಲ್ಪಡುತ್ತಾನೆ.
ಜಗತ್ತಿನಲ್ಲಿನ ಸಾಮಾನ್ಯ ಜೀವಿಗಳ ಉಪಾಸನೆಗಾಗಿ ನಿರ್ವಿಶೇಷ ಬ್ರಹ್ಮನು ಸವಿಶೇಷರೂಪವನ್ನು ಧರಿಸುತ್ತಾನೆ. ಎಲ್ಲಿ ನಿರ್ವಿಶೇಷ ಬ್ರಹ್ಮನನ್ನು ಆತ್ಮರೂಪವೆಂದು ಹೇಳಿದೆಯೋ ಅಲ್ಲಿ ಏಕತ್ವರೂಪವಾದ ಮೋಕ್ಷವೇ ಫಲವಾಗಿದೆ. ಆದರೆ ಎಲ್ಲಿ  ವಿಗ್ರಹಗಳ ಉಪಾಸನೆಯ ಪ್ರಸಂಗಬರುವುದೋ ಅಲ್ಲಿ ಸಂಸಾರಗೋಚರವಾದ ಫಲವು ಭಿನ್ನ ಭಿನ್ನವಾದ ಉಪಾಸ್ಯ ಉಪಾಸಕ ಭೇದದ ದೃಷ್ಟಿಯಿಂದ ಕಲ್ಪಿತಗಳಾಗಿವೆ. ಜೀವ ಮತ್ತು ಈಶ್ವರರೊಳಗೆ ಅಂಶ-ಅಂಶೀ ಕಲ್ಪನೆಯನ್ನು ಅದ್ವೈತ ಸಿದ್ದಾಂತವು ಪ್ರತಿಪಾದಿಸುತ್ತದೆ. ಇವುಗಳಲ್ಲಿ ಸಮಾನಧರ್ಮಗಳು ವಿದ್ಯಮಾನವಾಗಿದ್ದರೂ ಅವಿದ್ಯಾದಿವ್ಯವಧಾನದಿಂದ ತಿರೋಹಿತವಾಗಿದೆ. ಈಶ್ವರನನ್ನು ಧ್ಯಾನ ಮಾಡುವುದರಿಂದ ಸಾಧಕರಲ್ಲಿ ಅಲೌಕಿಕ ಶಕ್ತಿಗಳು ಪ್ರಾಪ್ತವಾಗುತ್ತವೆ. ಆದರಿಂದ ಅವರು ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾಗುತ್ತಾರೆ. ತಿರೋಹಿತವಾದ ಶಕ್ತಿಯು ಉದಯವಾಗುವುದೇ ಜಪ, ತಪ ಮತ್ತು ಯೋಗಗಳ ಫಲ. ಈಶ್ವರನ ಸ್ವರೂಪದ ಅಜ್ಞಾನದಿಂದ ಜೀವನಿಗೆ ಬಂಧನವಾಗುತ್ತದೆ. ಎನ್ನುವುದು ಆದಿಶಂಕರಾಚಾರ್ಯರ ಅಭಿಪ್ರಾಯ.
“ಮುಮುಕ್ಷೋ ಸತ್ತ್ವ ಶುದ್ದ್ಯರ್ಥಂ”
ಮೋಕ್ಷದಲ್ಲಿ ಕಾತುರವುಳ್ಲವನ ಮನಸನ್ನು ಕರ್ಮಗಳು ಶುದ್ದಗೊಳಿಸುತ್ತವೆ, ನಾವು ಸಾಮಾನ್ಯವಾಗಿ ಮಾಡುವ ಕೆಲಸಗಳಾಲ್ಲಿ ಅಹಂಕಾರವು ಜಾಗೃತವಾಗಿರುತ್ತದೆ- ಎಂದರೆ ಯಾವೊಂದು ಕೆಲಸವನ್ನಾಗಲೀ ಮಾಡಿ ಮುಗಿಸಿದಾಗ ಸಾಮಾನ್ಯ ವ್ಯಕ್ತಿಯೋರ್ವನಿಗೆ ‘ನಾನು ಈ ಕೆಲಸವನ್ನು ಮಾಡಿದೆ’ ಎನ್ನುವ ಭಾವನೆ ಮೂಡುತ್ತದೆ. ಆದರೆ ಯಾರು ಜ್ಞಾನಿಗಳಿರುತ್ತಾರೋ ಅವರಲ್ಲಿ ಅಂತಹಾ ಭ್ರಮೆಯು ಇರುವುದಕ್ಕೆ ಸಾಧ್ಯವಿಲ್ಲ. ಕರ್ಮವು ಜ್ಞಾನದ ಪ್ರಾಪ್ತಿಗಾಗಿರುವ ಸಾಧನವಾಗಿದೆ.
“ಯದಿ ಅನಾತ್ಮಜ್ಞಸತ್ತ್ವಂ ತದಾ ಆತ್ಮಶುದ್ದರ್ಥಂ ತತ್ತ್ವವಿತ್ ಚೇತ್ ಲೋಕಸಂಗ್ರಹಾರ್ಥಂ”
ಯಾವೊಬ್ಬ ವ್ಯಕ್ತಿಯು ಆತ್ಮಜ್ಞಾನವನ್ನು ಪಡೆದವನಲ್ಲವೋ ಆತನು ತನ್ನ ಚಿತ್ತ ಶುದ್ದಿಗಾಗಿ ಕರ್ಮಗಳನ್ನು ಮಾಡಬೇಕು, ಯಾರು ಆತ್ಮಜ್ಞಾನವನ್ನು ಹೊಂದಿರುತ್ತಾರೆಯೋ ಅಂತಹವರು ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡತಕ್ಕುದು, ಎಂದರೆ ಯಾರೊಬ್ಬರೂ ಕರ್ಮಗಳನ್ನು ನಿರಾಕರಿಸುವಂತಿಲ್ಲ. ಅವರವರಿಗೆ ಅವರವರ ಕರ್ಮಗಳು ವಿಧಿಸಲ್ಪಡುತ್ತವೆ, ಆ ಕರ್ಮಗಳ ಹಿಂದೆ ಅದರದೇ ಆದ ಉದ್ದೇಶಗಳೂ ಇರುತ್ತವೆ. ಆದುದರಿಂದ ಪ್ರತಿಯೊಬ್ಬರೂ ಕರ್ಮಗಳನ್ನು ಮಾಡಬೇಕು.
ಮಾಯೆ ಮತ್ತು ಅವಿದ್ಯೆಗಳು ಸಮಾನ ಅರ್ಥವನ್ನು ಕೊಡುವ ಶಬ್ದಗಳಾಗಿವೆ. ಅಗ್ನಿಯಿಂದ ಬೇರೆಯಾಗದ ದಾಹಶಕ್ತಿಗೆ ಅನುರೂಪವಾಗಿ ಮಾಯೆಯು ಬ್ರಹ್ಮನ ಅನ್ವರ್ಥಭೂತವಾದ ಶಕ್ತಿ. ತ್ರಿಗುಣಾತ್ಮಕವಾದ ಮಾಯೆಯು ಜ್ಞಾನವಿರೋಧಿಯಾದ ಭಾವರೂಪವಾಗಿದೆ. ಮಾಯೆಯು ಸದ್ ರೂಪ ಅಸದ್ ರೂಪವೆರಡನ್ನೂ ಮೀರಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲದುದರಿಂದ ಅನಿರ್ವಚನೀಯವೆನ್ನುತ್ತಾರೆ. ಮಾಯೆಯು ಪರಮಾತ್ಮನ ಅವ್ಯಕ್ತ ಶಕ್ತಿ. ಅದಕ್ಕೆ ಆದಿಯಿಲ್ಲ. ಗುಣತ್ರಯದಿಂದ ಅವಿದ್ಯೆ. ಅವರ ಕಾರ್ಯದಿಂದ ಅದು ತಿಳಿಯಲ್ಪಡುತ್ತದೆ. ಅದು ಜಗತ್ತನ್ನು ಸೃಷ್ಟಿಸುತ್ತದೆ. ಮಾಯೆಗೆ ಎರಡು ಶಕ್ತಿಗಳಿವೆ. ಆವರಣ ಮತ್ತು ವಿಕ್ಷೇಪ. ಇದರಿಂದ ಬ್ರಹ್ಮನ ಅಮೃತವಾದ ವಾಸ್ತವರೂಪವು ಅದರಲ್ಲಿ ಅವಸ್ಥಾರೂಪವಾದ ಜಗತ್ತಿನ ಪ್ರತೀತಿಯು ಉದಯವಾಗುತ್ತದೆ.
ಹೀಗೆ ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ತತ್ವವು ಮಾನವರಲ್ಲಿನ ಸಾವಿನ ಭಯವನ್ನು ದೂರಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಯಾರು ಈ ಮೂಲ ತತ್ವವನ್ನು ಅರ್ಥೈಸಿಕೊಳ್ಳುತ್ತಾರೋ ಅಂತಹವರು ಎಂದಿಗೂ ಯಾವುದಕ್ಕೂ ಅಳುಕುವುದಿಲ್ಲ. ಸೃಷ್ಟಿಯ ಪ್ರತಿಯೊಂದು ಅಣು ಅಣುವಿನಲ್ಲಿಯೂ ಪರಮಾತ್ಮ ಸ್ವರೂಪಿಯಾದ ಬ್ರಹ್ಮವು ತಾನು ಇರುವುದರಿಂದಲೂ, ಆತ್ಮನೂ ಬ್ರಹ್ಮನೂ ಏಕವಾದುದರಿಂದಲೂ ನನ್ನೊಳಗೇ ಪರಬ್ರಹ್ಮದ ಅಂಶವಿರುವುದರಿಂದಲೂ ಯಾವ ಜೀವಿಯೂ ತಾನು ಮೇಲು, ಕೀಳು ಎನ್ನುವ ಹಾಗಿಲ್ಲ. ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಅಲ್ಲ. ಜಗತ್ತೆಲ್ಲವೂ ಏಕಸ್ವರೂಪವಾಗಿದ್ದರೂ ಮಾಯೆಯಿಂದಾವೃತರಾದವರ ಕಣ್ಣುಗಳಿಗೆ ನಾನಾ ವಿಧಗಳಲ್ಲಿ ಕಾಣಿಸುತ್ತದೆ ಎನ್ನುವುದು ಅದ್ವೈತ ತತ್ವ. ಹೀಗಾಗಿ ಮಾನವರಾದಿಯಾಗಿ ಯಾರೂ ಸಾವಿಗೆ ಭಯಪಡಬೇಕಿಲ್ಲ. ಸಾವು ಅಂತ್ಯವಲ್ಲ, ಏಕೆಂದರೆ ಬ್ರಹ್ಮಕ್ಕೆ ಯಾವುದೇ ಅಂತ್ಯವಿಲ್ಲ. ಅದು ಅನಂತವಾದುದು

No comments:

Post a Comment